ಭಾರತ ಮೈಮರೆತಾಗ - `62 ಮತ್ತು `99 - ನಾವು ಯುದ್ಧಗಳಿಂದ ಪಾಠ ಕಲಿಯಲಿಲ್ಲ

ಕಾರ್ಗಿಲ್ಗೆ ದಶಮಾನೋತ್ಸವಾದರೂ ಅದರ ರೋಮಾಂಚನವಿನ್ನೂ ಇಳಿದಿಲ್ಲ್ಲ. ಭಾರತದಲ್ಲಿ ಟಿವಿ ಕ್ರಾಂತಿಯ ನಂತರ ನಡೆದ ಮೊದಲ ಯುದ್ಧವಿದು. ಮೀಡಿಯಾ ಇದನ್ನು ದೇಶದ ನಡುಮನೆಗಳಿಗೆ ಕೊಂಡೊಯ್ಯಿತು. ದೇಶಕ್ಕೆ ದೇಶವೇ ಒಂದಾಯಿತು, ದೇಶ ಅಕ್ಷರಶಃ ದೇಶಪ್ರೇಮದ ಅಮಲಿನಲ್ಲಿ ಮುಳುಗಿತು. ಕಾರ್ಗಿಲ್ ದಿಗ್ವಿಜಯದ ನೆನಪು ಇನ್ನೂ ಮಾಸಿಲ್ಲ. ಅಂತಹದರಲ್ಲಿ ಕಾರ್ಗಿಲ್ಲನ್ನು ಹಿಮಾಲಯನ್ ಬ್ಲಂಡರ್ ಎಂದೇ ಪರಿಗಣಿಸಲ್ಪಡುವ 62ರ ಚೀನಾ ಯುದ್ಧದೊಂದಿಗೆ ಹೋಲಿಸುವುದೇ ಹಲವರನ್ನು ಕೆರಳಿಸಿರಬಹುದು. ಆದರೆ ಇತಿಹಾಸದ ಪುಟಗಳೆಡಗಿನ ಬೆರಗುಗಣ್ಣಿನ ನೋಟ ಇವೆರಡರ ನಡುವಿನ ಸಾಮ್ಯತೆಗಳನ್ನು ಗುರುತಿಸುತ್ತವೆ. ಈ ಸಾಮ್ಯತೆಗಳನ್ನು ಕಂಡು ಯಾರಾದರೂ ಅವಾಕ್ಕಾಗಿ ನಿಲ್ಲಬೇಕಾದದ್ದೇ!


62 ಮತ್ತು 99ರಲ್ಲಿ ಭಾರತ ಶಾಂತಿಯ ಭ್ರಮೆಯಲ್ಲಿತ್ತು, ರಾಜತಾಂತ್ರಿಕ ಶಾಂತಿಹೆಜ್ಜೆಯನ್ನು ಮಿಲಿಟರಿಗೂ ಪಸರಿಸಿ ಮೈಮರೆತಿತ್ತು. 62ರಲ್ಲಿ ಭಾರತ ನೆಹರೂರ ಹಿಂದೀ ಚೀನೀ ಭಾಯಿ ಭಾಯಿ ಘೋಷಣೆಯ ಮಾರ್ದನಿಯಲ್ಲಿ ಕಳೆದುಹೋಗಿತ್ತು. ಚೀನಾ ಎಂದಿಗೂ ಭಾರತದ ಮೇಲೆ ದಾಳಿ ಮಾಡುವುದಿಲ್ಲವೆಂಬ ನೆಹರೂರ ಭ್ರಮೆಯನ್ನು ವೃತ್ತಿಪರರೂ ಹಂಚಿಕೊಂಡಿದ್ದರು. ಭಾರತವೇ ಮೈಮರೆತಿತ್ತು. ಚೀನಾ ಬೆನ್ನ ಹಿಂದೆ ಚೂರಿ ಹಾಕಿತು. ಕಾರ್ಗಿಲ್ನ್ನು ಗಮನಿಸಿ. ಪೋಖ್ರಾನ್ನ ನಂತರ ವಾಜಪೇಯಿಯವರು ಲಾಹೋರ್ ಬಸ್ ಯಾತ್ರೆ ಕೈಗೊಂಡರು. ಶಾಂತಿಯಾಕಾಂಕ್ಷಿಯಾಗಿ ಪಾಕಿಸ್ತಾನ ನೀಡಿದ ಪೋಸನ್ನು ಎಲ್ಲರೂ ನಿಜವೆಂದೇ ನಂಬಿದರು. ಸೈನ್ಯವೂ ಸೇರಿ ಎಲ್ಲರೂ ಲಾಹೋರಿನ ಹೊಸ ನೀರಿನಲ್ಲಿ ಮುಳುಗಿದ್ದರು. ಪಾಕಿಸ್ತಾನದ ದೋಖಾದ ವಾಸನೆ ಯಾರ ಮೂಗಿಗೂ ಬಡಿಯಲೇ ಇಲ್ಲ. ರಾಷ್ಟ್ರೀಯ ಬಧ್ರತಾ ಸಲಹೆಗಾರರ ತಂಡವು ಶತ್ರು ರಾಷ್ಟ್ರಗಳಿಂದ ಎದುರಾಗಬಹುದಾದ ಸದ್ಯ, ಮಧ್ಯಮ ಮತ್ತು ದೀರ್ಘಕಾಲೀನ ಅಪಾಯಗಳನ್ನು ಅಳೆದು ಅವುಗಳನ್ನೆದುರಿಸಲು ಕಾರ್ಯವ್ಯೂಹವೊಂದನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. 62ರಲ್ಲಿ ಇಂಥದೊಂದು ವ್ಯವಸ್ಥೆಯೇ ಇರಲಿಲ್ಲ! 99ರಲ್ಲಿ ಇತ್ತಾದರೂ ಲಾಹೋರದ ಕಲರವದಲ್ಲಿ ಕಳೆದು ಹೋಗಿತ್ತು.

ಇನ್ನು 62 ಮತ್ತು 99ರ ಯುದ್ಧಗಳಲಿ ನಮ್ಮ ಕಣ್ಣಿಗೆ ರಾಚುವುದು, ಭಾರತದ ಗುಪ್ತಚರ ವಿಫಲತೆ, ಶತ್ರು ರಾಷ್ಟ್ರ ಯುದ್ಧ ಸನ್ನದ್ಧವಾಗುತ್ತಿರುವುದನ್ನು ಮನಗಾಣದ ದುಸ್ಥಿತಿ, ದಾಳಿಯ ಅನಿರೀಕ್ಷಿತತೆ. 62ರಲ್ಲಿ ಚೀನಾ ಗಡಿಯವರೆಗೂ ರೋಡು, ಬಂಕರುಗಳನ್ನು ನಿರ್ಮಿಸುತಿತ್ತು. ಚೀನಾ ಈ ಸಿದ್ಧತೆಗಳಿಗೆ ಕನಿಷ್ಠ ಎಂಟು ತಿಂಗಳು ತೆಗೆದುಕೊಂಡಿತ್ತು. ಇವ್ಯಾವೂ ಭಾರತದ ಅರಿವಿಗೆ ಬರಲೇ ಇಲ್ಲ. ಕಾರ್ಗಿಲ್ನಲ್ಲಿ? ಚಳಿಗಾಲದಲ್ಲಿ ಭಾರತದೊಳಕ್ಕೆ ನುಸುಳಿದ ಪಾಕ್ ಸೈನಿಕರು, ಬೆಟ್ಟ ಸಾಲಿನ ಪಾಕಿಸ್ತಾನ ಬದಿಯಲ್ಲಿ ಸಪ್ಲೈಲೈನ್ಗಳನ್ನು ನಿರ್ಮಿಸಿದರು, ಸ್ಕರ್ದುವಿನಲ್ಲಿ ಹೆಲಿಪ್ಯಾಡೊಂದನ್ನು ಕಟ್ಟಿಕೊಂಡರು. ಈ ಸಿದ್ಧತೆಗಳಿಗೆ ಪಾಕಿಸ್ತಾನ ತೆಗೆದುಕೊಂಡದ್ದು ಭರ್ಜರಿ ಏಳು ತಿಂಗಳುಗಳು. ಮತ್ತೊಂದು ಅವಮಾನವೆಂದರೆ ಹೀಗೆ ಆಕ್ರಮಿಸಿಕೊಂಡಿದ್ದ ಭಾರತೀಯ ನೆಲದ ಮೇಲೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುಷರಫ್ ಬಂದು ಹೋಗಿದ್ದರೆಂದು ಹೇಳಲಾಗಿದೆ! ಇದ್ಯಾವುದೂ ಭಾರತಕ್ಕೆ ತಿಳಿದಿರಲಿಲ್ಲ, ಹಾಗಿತ್ತು ನಮ್ಮ ಇಂಟೆಲಿಜೆನ್ಸ್! ಮೊದಲ ಬಾರಿಗೆ ಕಾರ್ಗಿಲ್ನಲ್ಲಿ ಪಾಕಿಗಳ ಇರುವಿಕೆಯನ್ನು ಗುರುತಿಸಿದ್ದು ಒಬ್ಬ ಕುರಿ ಕಾಯುವವನು!
62 ಮತ್ತು 99ರಲ್ಲಿ ಸತತ ನಿರ್ಲಕ್ಷ್ಯದಿಂದಾಗಿ ನಮ್ಮ ಸೈನ್ಯ ಯುದ್ಧ ಸನ್ನದ್ಧವಾಗಿರಲಿಲ್ಲ. ಯೋಧರಿಗೆ ಕನಿಷ್ಠ ಸವಲತ್ತುಗಳನೂ ನೀಡದೆ ಯುದ್ಧಭೂಮಿಗೆ ಕಳಿಸಲಾಗಿತ್ತು. ದೇಶ ಕಟ್ಟುವ ಉತ್ಸುಕತೆಯಲ್ಲಿದ್ದ ನೆಹರೂ ಸೈನಿಕ ವೆಚ್ಚವನ್ನು ಅನವಸರವೆಂದು ಭಾವಿಸಿದ್ದರು. 62ರಲ್ಲಿ ಭಾರತದ ಸೈನಿಕನಿಗೆ ಶೈತ್ಯ ಪ್ರದೇಶಗಳಲ್ಲಿ ಬೇಕಾದ ಹಿಮ-ಬೂಟುಗಳು, ಬೈನಾಕ್ಯುಲರ್ಗಳೂ ಇರಲಿಲ್ಲ. ಮಂಜಿನ ಕನ್ನಡಕವಿಲ್ಲದೇ ಯೋಧರು ಕುರುಡಾಗಿ ಹೋದರು, ಹಿಮ-ಬೂಟುಗಳಿಲ್ಲದೆ ಫ್ರಾಸ್ಟ್ಬೈಟ್ಗೆ ಕಾಲು ಕಳೆದುಕೊಂಡರು. ಚೈನಾ ಯುದ್ಧದ ನಂತರ ನೆಹರೂ ಭಾರತದ ಉಳಿವಿಗೆ ಸೈನ್ಯದ ಅವಶ್ಯಕತೆಯನ್ನು ಮನಗಂಡು, ಸೈನ್ಯವೆಚ್ಚವನ್ನು ಹಿಗ್ಗಿಸಿದರಾದರೂ 80ರ ದಶಕದ ಉತ್ತರಾರ್ಧದಲ್ಲಿ ಮತ್ತೆ ಸೈನ್ಯ ನಿರ್ಲಕ್ಷ್ಯಕ್ಕೊಳಗಾಯಿತು. ಸೈನ್ಯ ಕೌಂಟರ್ ಇನ್ಸರ್ಜೆನ್ಸಿ ಆಪರೇಷನ್ಗಳಲ್ಲೇ ಮುಳುಗಿಹೋಗಿತ್ತ್ತು. ಅಂದಿಗೆ ಪೂರ್ಣಮಟ್ಟದ ಯುದ್ದ ಮಾಡಿ 28 ವರ್ಷಗಳಾಗಿದ್ದವು. ಸೈನ್ಯ ಯುದ್ಧ ಸನ್ನದ್ಧವಾಗಿರಲಿಲ್ಲ. ಆಗ ಧುತ್ತನೆ ಎದುರಾದದ್ದು ಕಾರ್ಗಿಲ್. ಅಲ್ಲಿ ಶತ್ರು ಸೈನಿಕರು ಅಸಲಿಗೆ ನಮ್ಮವರಿಗೆ ಕಾಣಿಸುತ್ತಲೇ ಇರಲಿಲ್ಲ. ಶತ್ರುಗಳು ಬೆಟ್ಟವೇರಿ ಕೂತಿದ್ದರೆ, ನಮ್ಮವರು ಅವರಿಗೆ ಕಾಣಬಾರದೆಂದು ರಾತ್ರಿಗಳಲಿ ಮಾತ್ರ ಸಂಚರಿಸುತ್ತಿದ್ದರು! ಆದರೆ ನೈಟ್ ವಿಷನ್ ಬೈನಾಕ್ಯುಲರ್ಗಳಿರಲಿಲ್ಲ. ಕಾರ್ಯಾಚರಣೆ ನಡೆಸಬೇಕಾದ ಪ್ರಾಂತ್ಯಗಳ ನಕ್ಷೆಗಳು ಕೂಡ ಸರಿಯಿರಲಿಲ್ಲ, ಎಲ್ಲವೂ ಕೈಬರಹ ನಕ್ಷೆಗಳ ಜೆರಾಕ್ಸು! ಆ ಹಿಮಾಚ್ಛಾಧಿತ ಪರ್ವತಗಳಲ್ಲಿ ಬೇಕಾದ ಹಿಮ-ಬೂಟುಗಳ ಕೊರತೆಯಿತ್ತು, ಆಧುನಿಕ ಕಮ್ಯೂನಿಕೇಷನ್ ಸಾಧನಗಳ ಕೊರತೆಯಿತ್ತು. ಕಾರ್ಗಿಲ್ನಲ್ಲಿ ಭಾರತದ ಸೈನ್ಯದ ವಿಜಯಕ್ಕೆ ಬೋಫೋರ್ಸನದು ಪ್ರಮುಖ ಕೊಡುಗೆ.ಯುದ್ಧ ಮುಂದುವರೆಯುತ್ತಿದ್ದಂತೆ ಬೋಫೋರ್ಸ ಫಿರಂಗಿಗಳ ಕೊರತೆ ಕಾಡಿತು. ಬೋಫೋರ್ಸ ಹಗರಣದಿಂದ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತಾದರೂ, ಕೂಡಲೆ ಅದನ್ನು ಕೈಬಿಟ್ಟು ಕೊರತೆ ನೀಗಿಸಿಕೊಳ್ಳಲಾಯಿತು. ಪೂರ್ಣ ಪ್ರಮಾಣದ ಯುದ್ಧ ಅನಿವಾರ್ಯವೆನಿಸತೊಡಗಿದಾಗ ಸರ್ಕಾರ ವೆಪನ್ ಶಾಪಿಂಗ್ಗೆ ಹೊರಟಿತ್ತು!

62 ಮತ್ತು 99ರ ಯುದ್ಧಕ್ಕೂ ಇಷ್ಟೊಂದು ಸಾಮ್ಯತೆಗಳಿದ್ದಾಗ್ಯೂ, ಯುದ್ಧಕ್ಕೆ ಎಡೆ ಮಾಡಿಕೊಟ್ಟ ಪರಿಸ್ಥಿತಿಗಳು ಏಕರೂಪವಾಗಿದ್ದವಾದರೂ, ಮುಖ್ಯವಾದುದೊಂದು ವ್ಯತ್ಯಸವಿದೆ. ಅದು ಯುದ್ಧವನ್ನು ನಿರ್ವಹಿಸಿದ ರೀತಿ. ಇದು ಯುದ್ಧದ ರಿಜಲ್ಟುಗಳನ್ನೇ ಬದಲಾಯಿಸಿಬಿಟ್ಟಿತು. ಯುದ್ಧ ನಿರ್ವಹಣೆ ಹೇಗೆ ಮಾಡಬಾರದೆಂಬುದಕ್ಕೆ 62 ಅತ್ಯುತ್ತಮ ಉದಾಹರಣೆಯಾದರೆ, ಕಾರ್ಗಿಲ್ ಯುದ್ಧವೊಂದನ್ನು ಹೇಗೆ ನಿರ್ವಹಿಸಬೇಕೆನ್ನುವುದಕ್ಕೊಂದು ಉತ್ತಮ ಉದಾಹರಣೆ.

ಇತ್ತ ಯುದ್ಧ ನಡೆಯುತ್ತಿದ್ದರೆ ನೆಹರೂ, ಮುರಾರ್ಜಿ, ರಕ್ಷಣಾ ಸಚಿವ ಮೆನನ್ ಎಲ್ಲರೂ ವಿದೇಶ ಪ್ರಯಾಣದಲ್ಲಿದ್ದರು, ಬಿ.ಎಂ.ಕೌಲ್ ರಜೆಯ ಮೇಲಿದ್ದರು. ಚೀನೀಯರು ಪೂರ್ವೋತ್ತರ ಭಾರತದ ಮೇಲೆ ದಾಳಿ ಮಾಡುವ ಅನುಮಾನಗಳಿದ್ದಾಗ, ನೆಹರೂ ರೇಡಿಯೋದಲ್ಲಿ, ಅಸ್ಸಾಂನನ್ನು ಬಿಟ್ಟುಕೊಡಬೇಕಾಗಬಹುದೆಂಬರ್ಥದ ಭಾಷಣ ಮಾಡುತ್ತಾರೆ, ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆ. ಅರ್ಹತೆಗೂ ಮೀರಿ, ನೆಹರೂ ಸೈನ್ಯದ ಚೀಫ್ ಆಗಿ ನೇಮಿಸಿದ ಬಿ.ಎಂ.ಕೌಲ್ರ ತಿಕ್ಕಲು ಸ್ಟ್ರಾಟಜಿಗಳಿಂದಾಗಿ ಭಾರತ ಸಾಕಷ್ಟು ಅನುಭವಿಸಬೇಕಾಯಿತು. ದಾಳಿ ಮಾಡಿದ್ದು ಚೀನಾ, ಇದನ್ನು ಬಳಸಿ ಅಂತರಾಷ್ಟ್ರೀಯಒತ್ತಡ ತಂದು ಯುದ್ಧಕ್ಕೆ ಬ್ರೇಕ್ ಹಾಕಬಹುದಾದ ಕೆಲಸ ಆಗಲೇ ಇಲ್ಲ. ಚೈನಾ ವಶಪಡಿಸಿಕೊಂಡ ಭಾರತದ ನೆಲದ ಕುರಿತು ಪ್ರಶ್ನಿಸಿದಾಗ, ಅಲ್ಲಿ ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ, ಅದಕ್ಕೇಕೆ ಇಷ್ಟು ಗದ್ದಲ ಎಂಬರ್ಥದ ಮಾತುಗಳನ್ನಾಡಿದರು ನೆಹರೂ. ಅವರು ಭ್ರಮನಿರಸನಗೊಂಡಿದ್ದರು, ಭಾರತದ ಸತ್ಪ್ರಜೆಗಳೂ ಕೂಡ. ಎಲ್ಲರೂ ಅವರನ್ನು, ಪ್ರಶ್ನಿಸುವವರಾದರು, ನೆಹರೂ ಸಹಿಸದಾದರು. 64ರಲ್ಲಿ ನೆಹರೂ ದುರಂತ ನಾಯಕರಾಗಿ ಕಣ್ಣುಮುಚ್ಚಿದರು. ನೆಹರೂರನ್ನು ಇದೇ ಕಾರಣಕ್ಕಾಗಿ ವಿಲನ್ನಂತೆ ಚಿತ್ರಿಸುವರುಂಟು. ಆದರೆ ಬರಿಯ ಇದೊಂದರಿಂದ ನಾವು ನೆಹರೂರನ್ನು ಜಡ್ಜ್ ಮಾಡುವುದು ತಪ್ಪಾಗುತ್ತದೆ.

ಆದರೆ ಕಾರ್ಗಿಲ್ನಲ್ಲಿ, ಮೊದಲ ಕೆಲ ದಿನಗಳಲ್ಲಿ ಪರಿಸ್ಥಿತಿಯ ಅಗಾಧತೆಯ ಅರಿವಿಲ್ಲದೆ, ಕೆಲವು ಬಾಲಿಶ ನಡವಳಿಕೆಗಳು ಕಂಡುಬಂದವಾದರೂ, ಸ್ವಲ್ಪದರಲ್ಲೇ ಎಚ್ಚೆತ್ತ ಸರ್ಕಾರ ನಂತರ ಪ್ರದರ್ಶಿಸಿದ್ದು ಮುತ್ಸದ್ಧಿತನವನ್ನು. ಭಾರತದ ನೆಲದ ಮೇಲೆ ಕಟ್ಟಕಡೆಯ ಪಾಕಿ ಇರುವವರೆಗೂ ಸೈನಿಕ ಕಾರ್ಯಾಚರಣೆ ನಿಲ್ಲಿಸುವುದಿಲ್ಲವೆಂಬ ನಿಲುವು ತಾಳಿ, ಸೈನಿಕರ ಆತ್ಮಸ್ಥೈರ್ಯ ಕುಗ್ಗದಂತೆ ನೋಡಿ ಕೊಂಡ ಸರ್ಕಾರ ಇತ್ತ ರಾಜತಾಂತ್ರಿಕ ದಾಳಿಗೆ ಮುಂದಾಯಿತು. ವಿಶ್ವದ ಮುಂದೆ ಪಾಕಿಸ್ತಾನವನ್ನು ನಗ್ನಗೊಳಿಸಿತು. ಸೈನಿಕ ದೃಷ್ಟಿಯಿಂದ ಸರಿದೋರಿದ್ದ ಎಲ್ಓಸಿ ದಾಟುವುದನ್ನು ತಡೆಹಿಡಿದು ಭಾರತದ ವಾದವನ್ನು ಬಲಪಡಿಸಿತು. ಅಮೆರಿಕಾ, ರಷಿಯಾ, ಫ್ರಾನ್ಸ್, ಚೈನಾ, ಜಪಾನ್ ಹೀಗೆ ಎಲ್ಲರೂ ಭಾರತದ ಪರವಾಗಿ ನಿಂತರು. ಬಹುಶಃ ಅದು ಸ್ವತಂತ್ರ್ಯ ಭಾರತದ ಅತಿ ದೊಡ್ಡ ರಾಜತಾಂತ್ರಿಕ ಸಾಧನೆಯಾಗಿತ್ತು. ಇದು ಪಾಕಿಸ್ತಾನದ ಮೇಲೆ ಇನ್ನಿಲ್ಲದ ಒತ್ತಡ ಹೇರಿತು. ಆದರೆ ರಾಜಿಯೇನೂ ಆಗಲಿಲ್ಲ, ತನ್ನ ನೆಲದ ಮೇಲಿನ ಕಡೆಯ ಪಾಕಿಯನ್ನು ಓಡಿಸುವವರೆಗೂ ಸೈನಿಕ ಕಾರ್ಯಾಚರಣೆ ನಿಲ್ಲಿಸಲಿಲ್ಲ. ಕಾರ್ಗಿಲ್ ದಿಗ್ವಿಜಯವಾಯಿತು.

62ರ ಯುದ್ಧ ಇಂದಿಗೂ ನಮ್ಮನ್ನು ಚುಚ್ಚುತ್ತಿರುವ ಅವಮಾನವಾದರೆ, ಕಾರ್ಗಿಲ್ ಒಂದು ಹೆಮ್ಮೆಯ ದಿಗ್ವಿಜಯ. 62ರ ಯುದ್ಧವನ್ನು ಹಿಮಾಲಯನ್ ಬ್ಲಂಡರ್ ಆಗಿಯೂ ಕಾರ್ಗಿಲ್ಲನ್ನು ದಿಗ್ವಿಜಯವಾಗಿಯೂ ವರ್ಣಿಸುತ್ತದೆ ಇತಿಹಾಸ. ಇತಿಹಾಸ ಎಂದಿಗಾದರೂ ಗೆದ್ದೆತ್ತಿನ ಬಾಲವೇ. ಕಾರ್ಗಿಲ್ನ ವೀರಗಾಥೆಗಳ ಹರಿಕತೆ ನಡೆದಿದೆಯಾದರೂ ದೇಶಭಕ್ತಿಯ, ದಿಗ್ವಿಜಯದ ಆಡಂಬರದಲ್ಲಿ ಒಂದು ಮಾತು ಕೇಳದೆಯೇ ಉಳಿಯಿತು. ಅಸಲಿಗೆ ನೂರಾರು ಸೈನಿಕರ ಬಲಿ ತೆಗೆದುಕೊಂಡ ಕಾರ್ಗಿಲ್ಲನ್ನು ತಪ್ಪಿಸಬಹುದಿತ್ತಾ? ಸಂಶಯವೇ ಬೇಡ ಕಾರ್ಗಿಲ್ ದೇಶ ತಪ್ಪಿಸಬಹುದಿದ್ದ ಒಂದು ಎಂಬರಾಸ್ಮೆಂಟ್! ಕಾರ್ಗಿಲ್ನ ಪೋಸ್ಟ್ಮಾರ್ಟಮ್ ನಡೆಯಬೇಕಿತ್ತು, ಆದರೆ ಅಂತಹುದಕ್ಕೆ ಹುಸಿ ದೇಶಭಕ್ತಿಯ ಆಡಂಬರ ಅವಕಾಶ ಮಾಡಿಕೊಡಲಿಲ್ಲ. ಸರ್ಕಾರ ಸುಬ್ರಮಣ್ಯಮ್ ಕಮಿಟಿಯನ್ನು ನೇಮಿಸಿತಾದರೂ ಅದು ಹೆಕ್ಕಿದ್ದಕ್ಕಿಂತ ಮುಚ್ಚಿದ್ದೇ ಹೆಚ್ಚು. ಕಾರ್ಗಿಲ್ನ ವಿಷಯದಲ್ಲಿ ಕರ್ತವ್ಯಲೋಪವೆಸಗಿದವರಾರ ತಲೆಗಳೂ ಉರುಳಲಿಲ್ಲ. ಕಾರ್ಗಿಲ್ನ ಪ್ರಮುಖ ದೋಷ ಗುಪ್ತಚರ ವಿಫಲತೆ. ಆದರೆ ಅಂದಿನ ಗುಪ್ತಚರ ಮುಖ್ಯಸ್ಥನನ್ನು ಅರುಣಾಚಲದ ರಾಜ್ಯಪಾಲರನ್ನಾಗಿ ನೇಮಿಸಿ ಐದು ವರ್ಷಗಳ ರಕ್ಷಣೆಯನ್ನೊದಗಿಸಲಾಯಿತು. 62ರ ಗುಪ್ತಚರ ವಿಫಲತೆಯಿಂದ ಪಾಠ ಕಲಿತಿದ್ದರೆ, ಕಾಗರ್ಿಲ್ ಅನ್ನು ತಪ್ಪಿಸಬಹುದಿತ್ತು, ಕಾರ್ಗಿಲ್ನಲ್ಲಿ ಪಾಠ ಕಲಿತಿದ್ದರೆ 26/11ನನ್ನು ತಪ್ಪಿಸಬಹುದಿತ್ತು. ದುರ್ದೈವವೆಂದರೆ ಇಂತಹ ಸಂದರ್ಭಗಳಲ್ಲಿ ದೇಶಭಕ್ತಿಯ ಅಮಲು ಭಾವನಾತ್ಮಕವಲ್ಲದ ತುಲನೆಗೆ ಅವಕಾಶವನ್ನೇ ಮಾಡಿಕೊಡುವುದಿಲ್ಲ. ಆದರೆ ಇತಿಹಾಸದಿಂದ ಪಾಠ ಕಲಿಯದ ಹೊರತಾಗಿ ಇಂತಹ ಭೀಭತ್ಸ ಘಟನಾವಳಿಗಳು ಪುನರಾವರ್ತನೆಯಾಗುತ್ತಲೇ ಇರುತ್ತವೆ. ಕಾಲ ಮತ್ತು ಇತಿಹಾಸ ಮನುಷ್ಯನ ಅತ್ಯುತ್ತಮ ಗುರುಗಳು. ಅವುಗಳನ್ನು ನಿರ್ಲಕ್ಷಿಸಿ ಜೀವನವಿಲ್ಲ. 62ರ ಪೋಸ್ಟ್ಮಾರ್ಟಮ್ ಸರಿಯಾಗಿ ನಡೆಯದಿದ್ದರಿಂದಲೇ ಕಾರ್ಗಿಲ್ನಲ್ಲಿ ಅದು ಪುನರಾವರ್ತನೆಯಾಯ್ತು. ಕಾರ್ಗಿಲ್ನ ಪೋಸ್ಟ್ಮಾರ್ಟಮ್ ಆಗಲಿಲ್ಲವಾದ್ದರಿಂದಲೇ 26/11 ಮುಂಬೈ ನರಮೇಧವಾಯಿತು. ಈಗ 26/11....
(ತಾ-೨೭/೦೭/೨೦೦೯ ರಂದು ವಿಜಯ ಕರ್ನಾಟಕದಲ್ಲಿ ಪ್ರಕಟಿತ)

Proudly powered by Blogger
Theme: Esquire by Matthew Buchanan.
Converted by LiteThemes.com.