ಅರಸೊತ್ತಿಗೆಯ ಮದುವೆ ದಿಬ್ಬಣ: ಅಂದು ಜಗತ್ತಿನಲ್ಲಿ ಬೇರೇನೂ ನಡೆಯಲೇ ಇಲ್ಲ!


ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ, ಅವನಿಗೆ ಮೂವರು ಮಕ್ಕಳು...ಅಂತ ನಮ್ಮ ಅಜ್ಜಿಯರು ನಮಗೆ ಕತೆ ಹೆಳಿದ್ದು, ಈಗ ಮುಂದಿನ ತಲೆಮಾರಿಗೂ ಅದೇ ಕಥೆಗಳು ಹರಿದು ಬರುತ್ತಿರುವುದನ್ನು ನೋಡುತ್ತಿದ್ದೇವೆ. ನಮ್ಮಲ್ಲಿ ರಾಜರು ಅಂದರೆ, ಅವರು ಒಂದಾನೊಂದು ಕಾಲದಲ್ಲಿದ್ದವರೇ! ಆದರೆ ವೈಚಿತ್ರ ನೋಡಿ. ಇಂಗ್ಲೇಂಡಿನಲ್ಲಿ ಮೊನ್ನೆ ನಡೆದ ರಾಜವಂಶದ ಅದ್ಧೂರಿ ಮದುವೆ ದಿಬ್ಬಣ ಇಡಿಯ ಜಗತ್ತಿನ ಗಮನವನ್ನು ಸೂಜಿಗಲ್ಲಿನಂತೆ ಸೆಳೆಯಿತು. ಅವತ್ತು ವಿಶ್ವದಲ್ಲಿ ಬೇರೇನೂ ನಡೆಯಲಿಲ್ಲ! ಪ್ರಿನ್ಸ್ ಚಾರ್ಲ್ಸ್  ಮತ್ತು ಡಯಾನಾ ಅವರ ಪುತ್ರ ವಿಲಿಯಮ್ಸ್ ಮತ್ತು ಆತನ ಪ್ರೇಯಸಿ ಕೇಥರೀನ್ಳ ಮದುವೆ ಒಂದು ವಿಶ್ವವಿದ್ಯಮಾನವೇ ಆಗಿತ್ತು. ಆ ಅರಸೊತ್ತಿಗೆಯ ವೈಭವ, ವಿಜೃಂಭಣೆ ನೋಡಲು ಎರಡು ಕಣ್ಣು ಸಾಲದಾಗಿತ್ತು. ಈ ಮದುವೆಗೆ ಒಟ್ಟು 20 ಮಿಲಿಯನ್ ಪೌಂಡುಗಳು ಖರ್ಚಾಗಿದೆಯೆಂದು ಅಂದಾಜು! ಅಷ್ಟೂ ವೆಚ್ಚವನ್ನು ಬ್ರಿಟನ್ನ ಅರಮನೆಯೇ ಭರಿಸಿದೆ. ಇನ್ನು ನಮ್ಮ ಮಾಧ್ಯಮಗಳು ಹೋದಂತೆ ಅಲ್ಲಿ ಕಸ ಗುಡಿಸಲೆಷ್ಟು ಖರ್ಚಾಯಿತು, ಹೌದು ಮದುವಣಗಿತ್ತಿಯ ಬಟ್ಟೆ ಡಿಸೈನರ್ ಯಾರು? ಇಂಥ ಅನೇಕ ಪ್ರಶ್ನೆಗಳ ಅರಸಿ ಹೊರಡುವುದು ವ್ಯರ್ಥ ಪ್ರಲಾಪವೇ ಸರಿ. 

ಆದರೆ ಒಂದು: ಯಾಕೆ ನಮ್ಮ ಮಾಧ್ಯಮಗಳು ಈ ದಿಬ್ಬಣಕ್ಕೆ ಈ ಮಟ್ಟದ ಪ್ರಾಮುಖ್ಯತೆಯನ್ನು ನೀಡುತ್ತವೆ? ಮಾಧ್ಯಮದ ಪ್ರಶ್ನೆಯೆನ್ನು ಹಿಡಿದರೆ, ಮೊನ್ನೆಯ ಕವರೇಜು ಇಂದಿನ ಮಾಧ್ಯಮದ ಒಂದು ಪ್ರಮುಖ ನ್ಯೂನತೆಯನ್ನು ಎತ್ತಿ ತೋರಿಸುತ್ತದೆ. ಇದು ವಿದ್ಯುನ್ಮಾನ ಮಾಧ್ಯಮಗಳ ಯುಗ. ವಿದ್ಯುನ್ಮಾನ ಮಾಧ್ಯಮ ಈ ಕ್ಷಣದ ಲೈವ್ ಮಾಧ್ಯಮ. ಇದು ಇದರ ಪ್ರಮುಖ ಬಲವೂ ಹಾಗೆಯೇ ಬಲಹೀನತೆಯೂ ಹೌದು. ಡ್ರಾಮಾಗಾಗಿ ಅರಸುತ್ತಾ ಹೋಗುವ ಈ ಮಾಧ್ಯಮ ಅಯಾಚಿತವಾಗಿ ಘಟನಾಧಾರಿತ ಪತ್ರಿಕೋದ್ಯಮವಾಗಿ ಮಾರ್ಪಾಟಾಗಿಬಿಡುತ್ತದೆ. ಇವತ್ತು ಅಲ್ಲೊಂದು ಅರಸೊತ್ತಿಗೆಯ ವಿಜೃಂಭಣೆ. ಮಾಧ್ಯಮಗಳಿಗೆ ಸುಗ್ಗಿ. ಅಂದು ವಿಶ್ವದಲ್ಲಿ ಬೇರೇನೂ ನಡೆಯುವುದೇ ಇಲ್ಲ. ಇದರ ನಂತರ ಮತ್ತೊಂದು ನಾಟಕಕೆ ಮಾಧ್ಯಮ ನಡೆದುಬಿಡುತ್ತದೆ. ಇನ್ನು ಇವತ್ತಿನ ಯುಗದಲ್ಲಿ ವಿದ್ಯುನ್ಮಾನ ಮಾಧ್ಯಮವೇ ಮುದ್ರಣ ಮಾಧ್ಯಮದ ಅಜೆಂಡಾವನ್ನೂ ನಿರ್ಧರಿಸುತ್ತಿರುವುದರಿಂದ ಮುದ್ರಣವೂ ಅನಿವಾರ್ಯವಾಗಿ ದಾರಿ ತಪ್ಪುತ್ತಿದೆ.

ಅದು ಹೇಗೆ ಒಂದು ಅರಸೊತ್ತಿಗೆಯ ಮದುವೆ ವಿಶ್ವದಲ್ಲಿ ಸಂಭ್ರಮಾಚರಣೆಯನ್ನು ಬಿತ್ತುತ್ತದೆ? ಪ್ರಜಾಪ್ರಭುತ್ವದ ಸ್ಲೋಗನ್ನೊಂದಿಗೆ ಮುನ್ನಡೆಯುತ್ತಿರುವ ನಮ್ಮ ನವ ನಾಗರೀಕತೆಯ ಈ ಆಸಕ್ತಿ ಸೋಜಿಗವೇ ಸರಿ. ಈ ಬೆಳಕಿನಲ್ಲಿ ನಮ್ಮನ್ನು ನಾವು ಕನ್ನಡಿಯಲ್ಲಿ ನೋಡಿಕೊಂಡರೆ? :

ಕಳೆದ ಶತಮಾನದಲ್ಲಿ ಮನುಷ್ಯನ ಮೂಲ ಸೆಲೆ ನೆಲೆಗಳನ್ನು ಅರಸುವುದು ಒಂದು ಪ್ರಮುಖ ವಿಷಯವೇ ಆಗಿತ್ತು. ಹೀಗಿರಲು ಅನೇಕ ತತ್ವಗಳು ಹುಟ್ಟಿಕೊಂಡವು. ಮೀಮಾಂಸೆಗಳು ನಡೆದವು. ಈ ವಿಚಾರ ಕುಲುಮೆಯಿಂದ ಮನುಷ್ಯನ ಪ್ರತಿ ನಡವಳಿಕೆಯ ಹಿಂದಿನ ಪ್ರೇರಣೆ ಯಾವುದು ಎಂಬುದನ್ನು ವಿವರಿಸುವ ಮೂರು ಥಿಯರಿಗಳು ಹುಟ್ಟಿಕೊಂಡವು. ಈ ಮೂಲ ಸೆಲೆ ಮತ್ತು ನೆಲೆ ಯಾವುದು? ಕಾರ್ಲ್ ಮಾರ್ಕ್ಸ್ನ ಪ್ರಕಾರ ಅದು ಹಸಿವು. ಈ ಹಸಿವು ಮಾನವನಲ್ಲಿ ಒಂದು ನಿರಂತರ ಅನ್ವೇಷಣೆಯನ್ನು ಹುಟ್ಟುಹಾಕುತ್ತದೆ. ಅದೇ ಜೀವನ. ಸಿಗ್ಮಂಡ್ ಫ್ರಾಯ್ಡ್ ಇದನ್ನು ನೊಡಿದ ಬಗೆಯೇ ಬೇರೆ. ಆತ ಮನಶಾಸ್ತ್ರದ ಲೆನ್ಸ್ನಲ್ಲಿ ಇದನ್ನು ನೋಡಿದ. ಆತನ ಪ್ರಕಾರ ಮನುಷ್ಯನ ಮೂಲ ಪ್ರೇರಕ ಶಕ್ತಿ ಕಾಮ. ಒಂದು ಅನಿಮಲ್ ಇನ್ಸ್ಟಿಂಕ್ಟ್. ಇವರಿಬ್ಬರಿಗಿಂತಲೂ ಭಿನ್ನವಾಗಿ ಯೋಚಿಸಿದವನು ಬರ್ತೆಂಡ್  ರಸೆಲ್. ಆತನ ಪ್ರಕಾರ ಮಾನವನನ್ನು ಸದಾ ಕಾಲ ಮುನ್ನಡೆಸುವುದು ಅಧಿಕಾರ  ಮತ್ತು ಅಧಿಕಾರ ದಾಹ. ಇದು ಆತನನ್ನು ಸದಾ ಕ್ರಿಯಾಶೀಲವಾಗಿರುಸುತ್ತದೆ ಎನ್ನುತ್ತಾನಾತ. ಸಮಾಜದಲ್ಲಿ ಹೆಸರು, ಸ್ಥಾನಮಾನ, ಅಷ್ಟೇಕೆ ಹಣವಾದರೂ ಏಕೆ ಬೇಕು? `ಅಧಿಕಾರಕ್ಕೇ' ತಾನೆ? ಇದೇ ಮನುಷ್ಯನನ್ನು ಮುನ್ನಡೆಸುವುದು ಎಂಬುದು ರಸೆಲ್ ಪ್ರತಿಪಾದನೆ. ಹಾಗೆ ನೋಡಿದರೆ ಇಲ್ಲಿ ಮೂರೂ ನಿಜವೇ. ಅಧಿಕಾರದಾಹವೂ ಒಂದು ಹಸಿವೆಯೇ, ಕಾಮವೂ ಒಂದು ಬಗೆಯ ಅಧಿಕಾರವೇ. ಮನುಷ್ಯನ ಈ ಅಧಿಕಾರ ದಾಹವೇ ಆತನನ್ನು ಆಳದಲ್ಲಿ ಅದಿಕಾರದ ಆರಾಧಕನನ್ನಾಗಿಯೂ ಮಾಡಿರುತ್ತದೆ. ಇದು ಮಾನವನ ಮೂಲ ಗುಣಗಳಲ್ಲೊಂದು. ಹಾಗಾಗಿಯೇ ಆತ ಅಧಿಕಾರಕ್ಕೆ ಒಳಗಾಗುತ್ತಾನೆ, ಇದರಿಂದಲೇ ಸರ್ಕಾರ, ವ್ಯವಸ್ಥೆ ಎಲ್ಲವೂ. ಕಾಲಕಾಲಕ್ಕೆ ಸರ್ಕಾರದ ಮಾದರಿ ಬದಲಾಗಿರಬಹುದು - ರಾಜರಿಂದ ಪ್ರಜಾಪ್ರಭುತ್ವದವರೆಗೆ, ಆದರೆ ಆಳದಲ್ಲಿ ಆಳುವುದು ಮತ್ತು ಆಳಲ್ಪಡುವುದು ಎಂಬುದು ಮೂಲ. ಇದರಿಂದಲೇ ವ್ಯವಸ್ಥೆ. ಅರಸೊತ್ತಿಗೆಯ ಮದುವೆ ದಿಬ್ಬಣ ನಮ್ಮ ಆಸಕ್ತಿಯನ್ನು ಕೆರಳಿಸುವುದು ಇದೇ ಕಾರಣಕ್ಕೆ. ಅದು ಅಧಿಕಾರದ ಆರಾಧನೆ.

ಅಧಿಕಾರ ನಾನಾ ರೂಪಗಲಲ್ಲಿ ತನ್ನನ್ನು ತಾನು ಪ್ರಚುರ ಪಡಿಸಿಕೊಳ್ಳುತ್ತದೆ. ಮೊದಲಿಗೆ ಗುರುತಿಸಬಹುದಿದ್ದ ಅಧಿಕಾರ ಜ್ಞಾನದಿಮದ ಬಂದದ್ದು. . ಅದು ವ್ಯದ್ಯನಲ್ಲಿತ್ತು. ನಂತರ ಅದೇ ಪುರೋಹಿತಶಾಹಿಯಾಯಿತು. ನಂತರ ಬಂದದ್ದು ರಾಜಪ್ರಭುತ್ವ. ನಂತರ ಸವರ್ಾಧಿಕಾರ, ಪ್ರಜಾಪ್ರಭುತ್ವ. ಇಂದು ನಮ್ಮ ವಿಶ್ವದಲ್ಲಿ ಅನೇಕ ಕಡೆ ಇರುವುದು ಸವರ್ಾಧಿಕಾರ ಮತ್ತು ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವ ಸದ್ಯದ ಆದರ್ಶ. ಅರಸೊತ್ತಿಗೆ ಸಾಧಾರಣ ಇಲ್ಲ ಎಂತಲೇ ಹೇಳಬಹುದು. ಸೌದಿಯಲ್ಲಿ ಬಿಟ್ಟರೆ. ಅರಸೊತ್ತಿಗೆ ಇನ್ನೂ ಜೀವಂತ ಇರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಬ್ರಿಟನ್ ಪ್ರಮುಖ. ಇಲ್ಲಿಯೂ ಪ್ರಜಾಪ್ರಭುತ್ವವೇ ಇದೆಯಾದರೂ ಅರಸೊತ್ತಿಗೆಯನ್ನು ಸಂಪೂರ್ಣ ಬಿಟ್ಟು ಕೊಟ್ಟೂ ಇಲ್ಲ. ಇದೊಂದು ವಿಚಿತ್ರ. ಬ್ರಿಟನ್ನಲ್ಲಿ ವೆಸ್ಟ್ಮಿನಿಸ್ಟರ್ ಮಾದರಿಯ ಚುನಾಯಿತ ಸಕರ್ಾರ ಅಸ್ತಿತ್ವದಲ್ಲಿದ್ದು, ರಾಷ್ಟ್ರದ ಸಂಪೂರ್ಣ ಆಡಳಿತ ಜವಾಬ್ದಾರಿ ಮತ್ತು ಹಕ್ಕು ಈ ಚುನಾಯಿತ ಸಕರ್ಾರದ್ದೇ ಆಗಿದ್ದರೂ, ಅರಸೊತ್ತಿಗೆ ಇಂದಿಗೂ ಒಂದು ಅಧಿಕಾರ ಕೇಂದ್ರವೇ ಆಗಿದೆ. ಇದೇ ಮಾದರಿಯ ವ್ಯವಸ್ಥೆಯನ್ನು ನಮ್ಮ ಭಾರತದಲ್ಲೂ ಅಳವಡಿಸಿಕೊಳ್ಳಲಾಗಿದೆ. ಇಲ್ಲಿ ಅರಸೊತ್ತಿಗೆಯ ಸ್ಥಾನದಲ್ಲಿ ಚುನಾಯಿತ ರಾಷ್ಟ್ರಪತಿಗಳನ್ನು ಕೂರಿಸಲಾಗಿದೆಯಷ್ಟೆ. ನಮ್ಮಲ್ಲಿನ ರಾಷ್ಟ್ರಪತಿಗಳು ಮತ್ತು ಬ್ರಿಟನ್ನ ಅರಸೊತ್ತಿಗೆಯ ಅಧಿಕಾರ, ಜವಾಬ್ದಾರಿಗಳು ಬಹುಪಾಲು ಒಂಧೇ ತೆರನಾಗಿವೆ. ಇಲ್ಲಿ ಮತ್ತೊಂದು ವಿಶೇಷವನ್ನು ಗಮನಿಸಬೇಕು. ಬ್ರಿಟನ್ನಿನ ಅರಸೊತ್ತಿಗೆ ಜಗತ್ತಿನ ನಮ್ಮ ಭಾಗದಲ್ಲಿ ಅತ್ಯಂತ ಜನಪ್ರಿಯ. ಅಲ್ಲಿನ ಪ್ರತಿ ಕದಲಿಕೆಯನ್ನೂ ನಾವು ಉತ್ಸುಕತೆಯಿಂದ ತಿಳಿಯಲು ಬಯಸುತ್ತೇವೆ. ಅದೇ ಸೌದಿ ದೊರೆಗಳ ಬಗ್ಗೆ ನಮಗಷ್ಟು ಆಸಕ್ತಿಯಿರುವುದಿಲ್ಲ. ಸೂರ್ಯ ಮುಳುಗದ ಸಾಮ್ರಾಜ್ಯ ಕಟ್ಟಿದ್ದ ಬ್ರಿಟನ್ನ ಅಧಿಕಾರಕ್ಕೆ ಒಳಗಾಗಿದ್ದವರು ನಾವೂನೂ. ಸುಮಾರು 200 ವರ್ಷಗಳ ಕಾಲ ಇದೇ ಅರಸೊತ್ತಿಗೆಯಡಿ ಬದುಕಿದವರು. ಹಾಗಾಗಿ ನಮಗೀಗಲೂ ಬ್ರಿಟನ್ ಅರಸೊತ್ತಿಗೆಯ ಬಗೆಗೊಂದು ಆರಾಧನೆ. ಕಾಮನ್ವೆಲ್ತ್ ಕೂಟದ ಸುಮಾರು 53 ದೇಶಗಳಲ್ಲಿ ಈ ಆರಾಧನೆ ಇಂದಿಗೂ ಜೀವಂತ. ಇದರಲ್ಲಿ ಇಂದಿಗೂ ಕೆನಡಾ, ಆಸ್ಟರೇಲಿಯಾ, ನ್ಯೂಜೀಲ್ಯಾಂಡ್ ಸೇರಿದಂತೆ ಒಟ್ಟು 16 ದೇಶಗಳು ಬ್ರಿಟನ್ ಅರಸೊತ್ತಿಗೆಗೆ ಮಯರ್ಾದೆ ಕೊಟ್ಟು ಅದಕ್ಕೆ ನಡೆದುಕೊಳ್ಳುತ್ತಿದೆ. ಬ್ರಿಟನ್ನಿನ ರಾಜಮನೆತನವೂ ಅಷ್ಟೆ, ಗೊಡ್ಡಾಗಿ ಉಳಿಯದೆ, ಕಾಲಕ್ಕೆ ತಕ್ಕಂತೆ ಬದಲಾಗುತ್ತಾ, ಒಂದು ಫಂಕ್ಷನಲ್ ಪ್ರರಜಾಪ್ರಭುತ್ವಕ್ಕೆ ದಾರಿ ಮಾಡಿಕೊಟ್ಟು ತಾನು ನೇರ ಅಧಿಕಾರದಿಂದ ಹಿಂದೆ ಸರಿದಿದೆ. ಇದರಿಂದಲೇ ಈ ವಿಂಡ್ಸರ್ ರಾಜಮನೆತನ ಇಂದಿಗೂ ತನ್ನ ಪ್ರಸ್ತುತತೆ ಮತ್ತು ಅಸ್ತಿತ್ವವನ್ನು ಉಳಿಸಿಕೊಂಡಿದೆ.

ಈ ಮಂಥನ ಒತ್ತಟ್ಟಿಗಿರಲಿ. ಬ್ರಿಟನ್ನಿನ ಅರಮನೆಯ ಪಂಜರದೊಳಗೆ ಸಿಲುಕಲಾರದ ಹಕ್ಕಿ ಡಯಾನಾ ಮತ್ತು ಪ್ರಿನ್ಸ್ ಚಾರ್ಲ್ಸ್ ಮಗ ವಿಲಿಯಮ್ಸ್, ತಂದೆ ತಾಯಿ ಪ್ರೀತಿಯನರಿಯದೆ ಬೆಳೆದ ಕೂಸು. ಆತ ಚಿಕ್ಕ ವಯಸ್ಸಿನಲ್ಲೇ ಹಾದಿ ಬಿಟ್ಟಿದ್ದನೆಂಬ ಗುಸಗುಸು ಬಹುಹಿಂದಿನಿಂದಲೇ ಕೇಳಿಬರುತ್ತಿತ್ತು. ಆದರೆ ಕಳೆದ ಕೆಲ ವರ್ಷಗಳಲ್ಲಿ ಆತ ಬದಲಾದ. ಬ್ರಿಟನ್ನಿನ ವಾಯುದಳಕ್ಕೆ ಸೇರ್ಪಡೆಯಾದ. ಫೈಟರ್ ಪೈಲೆಟ್ ಆದ. ಅಪಘಾನಿಸ್ಥನದ ಯುದ್ಧಕ್ಕೂ ಹೋಗಿ ಬಂದ. ಇಂದು Royal AirForce ನ  ಪೈಲಟ್ ಆಗಿದ್ದಾನೆ. ಈತ ಸೇಂಟ್ ಆಂಡ್ರ್ಯೂಸ್ ವಿಶ್ವವಿದ್ಯಾಲಯದಲ್ಲಿ ಪದವಿ ವ್ಯಾಸಾಂಗ ಮಾಡುತ್ತಿರುವಾಗ ಈತನಿಗೆ ಪರಿಚಯವಾದಾಕೆ ಕ್ಯಾಥರೀನ್. ನಂತರ ಇದು ಪ್ರೇಮಕ್ಕೆ ತಿರುಗಿತು. ಇದು 9 ವರ್ಷಗಳ ಮಾತು. ಮಧ್ಯೆ ಕೆಲ ವರ್ಷ ದೂರಾಗಿದ್ದ ಇವರ ಪ್ರೇಮವೇ ಇವರನ್ನು ಮತ್ತೆ ಒಂದಾಗಿಸಿತು. ಈಗ 9 ವರ್ಷಗಳ ಪ್ರೇಮಾಯಣದ ನಂತರ ಇಬ್ಬರೂ ಮದುವೆಯಾಗಿದ್ದಾರೆ. ಅವರ ವೈವಾಹಿಕ ಜೀವನಕ್ಕೊಂದು ಶುಭಾಷಯ ಹೇಳುವುದಷ್ಟೆ ನಮ್ಮ ಕೆಲಸ. 

ಸ್ವತಂತ್ರ ಭಾರತದ ಅತಿ ದೊಡ್ಡ ಹಗರಣ - 60 ಸಾವಿರ ಕೋಟಿಗಳ spectrum scam

ಕಳೆದ ಮೂರು ತಿಂಗಳ ಹಿಂದೆ ಹಸ್ತಿನೆಯ ಅಧಿಕಾರದ ಗಲ್ಲಿಗಳಲ್ಲಿ ಹೊಸದೊಂದು ಸಂಚಲನ. ದೇಶದ ಟೆಲಿಕಾಂ ರಂಗದ ಮುಖ್ಯ ಕಛೇರಿ, ಕೇಂದ್ರ ಸರ್ಕಾರದ ಟೆಲಿಕಾಂ ಸಚಿವರ ಕಛೇರಿಯನ್ನೂ ಒಳಗೊಂಡ ಸಂಚಾರ ಭವನ್ ಮತ್ತು ದೇಶಾದ್ಯಂತ 19 BSNL ಕಛೇರಿಗಳ ಮೇಲೆ ಸಿಬಿಐ ದಾಳಿ! ಈ ಮೊಬೈಲ್ ಕಂಪೆನಿಗಳಿಗೆ ಸರ್ಕಾರ ಪರವಾನಗಿ ಮತ್ತು ಮೊಬೈಲ್ ಸೇವೆಗೆ ಬೇಕಾದ Spectrum ಅನ್ನು ಪೂರೈಸುತ್ತದೆ. 2008ರ ಜನವರಿಯಲ್ಲಿ ಟೆಲಿಕಾಂ ಇಲಾಖೆಯು, ಪರವಾನಗಿ ಮತ್ತು Spectrumನ್ನು ಹರಾಜು ಹಾಕುವ ತನ್ನ ಎಂದಿನ ವೈಖರಿಯನ್ನು ಅನುಸರಿಸದೆ, first come first serve, ಅಂದರೆ ಮೊದಲು ಬಂದವರಿಗೆ ಆದ್ಯತೆಯಂತೆ Spectrumನ್ನು ಕೊಟ್ಟುಕಳಿಸಿದೆ, ಅದೂ 2001ರ ಬೆಲೆಗಳಿಗೆ! ಒಂದು ಅಂದಾಜಿನಂತೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ-60 ಸಾವಿರ ಕೋಟಿಗಳು! ಬಹುಶಃ ಇದು ಭಾರತದ ಅತಿ ದೊಡ್ಡ ಹಗರಣ. ಆದರೆ ಡಿಎಂಕೆಯ, ಕೇಂದ್ರ ಟೆಲಿಕಾಂ ಸಚಿವ ಅಂದಿಮುತ್ತು ರಾಜಾ ಮತ್ತು ಯುಪಿಎ ಸರ್ಕಾರ ಇದನ್ನು ಅಸಲು ಹಗರಣವೆಂದೇ ಗುರುತಿಸುತ್ತಿಲ್ಲ. ಆದರೆ 2008ರ ಅಕ್ಟೋಬರ್ನಲ್ಲಿ ಕಮ್ಯೂನಿಸ್ಟ್ ಪಕ್ಷಗಳು ಈ ಹಗರಣವನ್ನು ಬಯಲುಗೊಳಿಸಿ ರಾಜಕೀಯವಾಗಿ ಹೋರಾಟಕ್ಕಿಳಿದವು. ಫಲವಾಗಿ ಸೆಂಟ್ರಲ್ ವಿಜಿಲೆನ್ಸ್ ಕಮೀಷನ್ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತು. ಈ ಕಮಿಟಿಯು ಟೆಲಿಕಾಂ ಇಲಾಖೆ ಪರವಾನಗಿ ಮತ್ತು Spectrum ಅನ್ನು ಮೊದಲು ಬಂದವರಿಗೆ ಆದ್ಯತೆಯಂತೆ 2001ರ ಬೆಲೆಗಲಿಗೆ ಬಿಕರಿ ಮಾಡಿರುವುದರಲ್ಲಿ ಹಗರಣದ ವಾಸನೆಯೊಡೆಯುತ್ತಿದ್ದು, ಈ ವಿಚಾರವಾಗಿ ಸಿಬಿಐ ಕೂಲಂಕುಷ ತನಿಖೆ ನಡೆಸಬೇಕೆಂದು ಶಿಫಾರಸು ಮಾಡಿತ್ತು. ಈ ಶಿಫಾರಸಿನನ್ವಯ ಸಿಬಿಐ ಟೆಲಿಕಾಂ ಇಲಾಖೆಯ  ಅಧಿಕಾರಿಗಳು ಮತ್ತು ಖಾಸಗೀ ಕಂಪೆನಿಗಳ ವಿರುದ್ಧ ಭ್ರಷ್ಟಾಚಾರ ನಿರ್ಮೂಲನಾ  ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿಕೊಂಡು, ಪೂರಕವಾಗಿ ಈ ದಾಳಿಗಳನ್ನು ನಡೆಸಿತ್ತು. 


ಈಗ ಆ ತನಿಖೆಯ ಒಂದೊಂದೇ ಸುದ್ದಿ ಹೊರಬರುತ್ತಿದ್ದಂತೆ ಪಾರ್ಲಿಮೆಂಟ್ ಎಂದಿನಂತೆ ಫಿಶ್ ಮಾರ್ಕೆಟ್ ಆಗತೊಡಗಿದೆ. ಇದರ ಕುರಿತು ಹೆಚ್ಚು ಮಾತನಾಡುತ್ತಿರುವುದೆಂದರೆ ಅದು ಎಡಪಕ್ಷಗಳೇ. ಅವರು ಈ ಹಗರಣದ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ. ಸೀತಾರಾಂ ಯೆಚೂರಿಯವರು, 18-11-2008ರಂದೇ ಪ್ರಧಾನಿಗಳನ್ನುದ್ದೇಶಿಸಿ ಬಹಿರಂಗ ಪತ್ರ ಬರೆದು ಈ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಬೇಕೆಂದು ಮತ್ತು ಈಗ ಕೊಡಮಾಡಿರುವ ಪರವಾನಗಿಗಳನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದರು. ಇನ್ನು ಈ ಕುರಿತು ಅತ್ಯಂತ ದೊಡ್ಡ ದನಿಯೆತ್ತುತ್ತಿರುವವರು, ಪ್ರಧಾನ ಪ್ರತಿಪಕ್ಷವಾದ ಬಿಜೆಪಿ. ತರೂರ್ ರಾಜೀನಾಮೆಯಿಂದ ಉತ್ತೇಜಿತಗೊಂಡಿದ್ದ ಬಿಜೆಪಿಯನ್ನು ಕಾಂಗ್ರೆಸ್ ರೆಡ್ಡಿಗಳ ಹೆಸರು ಹೇಳಿ ಅವರ ಉಬ್ಬಿದ ಬಲೂನಿಗೆ ಸೂಜಿ ಚುಚ್ಚಿತ್ತು. ಹೌದಾ ಹಾಗಾದರೆ ಇನ್ನೊಂದು ಸವಾಲ್ ಎಂದು ಈ ಬಾರಿಯ ಪಾರ್ಲಿಮೆಂಟ್ ಅಧಿವೇಶನದಲ್ಲಿ ಸಿಬಿಐ ಹೊರಗೆಡವಿದ ಸತ್ಯಗಳನ್ನಿಟ್ಟುಕೊಂಡು ಅಂದಿಮುತ್ತು ರಾಜಾನ ರಾಜೀನಾಮೆಗೆ ಆಗ್ರಹಿಸುತ್ತಿದೆ.


ಅಸಲಿಗೆ ಏನಿದು ಹಗರಣ? ಇದರಲ್ಲಿ ಯಾರ್ಯಾರ ಕೈವಾಡವಿದೆ? Spectrum ಅಂದರೇನು? ಹೀಗೆ ನಿಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳೇಳಬಹುದು. ಎಲ್ಲದಕ್ಕೂ ಉತ್ತರವಾಗಿ ಈ ಲೇಖನ. ಇಂದು ಭಾರತದ ಟೆಲಿಕಾಂ ರಂಗದಲ್ಲಿ ಖಾಸಗೀ ಕಂಪೆನಿಗಳ ಪಾಲು ಬಹುದೊಡ್ಡದು. ಸರ್ಕಾರವೇನಿದ್ದರೂ ಕಂಪೆನಿಗಳ ಮಧ್ಯೆ ಆರೊಗ್ಯಕರ ಸ್ಪರ್ಧೆಯನ್ನು ಕಾಪಾಡುವ ರೆಗ್ಯೂಲೇಟರ್ ಅಷ್ಟೇ. ಈ ಟೆಲಿಕಾಂ ಕಂಪೆನಿಗಳು ವ್ಯವಹರಿಸಲು ಬೇಕಾಗಿರುವ ಪರವಾನಗಿ ಮತ್ತು Spectrumನ ಪೂರೈಕೆ ಕೇಂದ್ರ ಸರ್ಕಾರದ ಜವಾಬ್ದಾರಿ. ಮೊಬೈಲೊಂದರ ಕೆಲಸಕ್ಕೆ ಗಾಳಿ ಮತ್ತು electromagnetic ತರಂಗಗಳೇ ಮಾಧ್ಯಮ. ಈ ತರಂಗಗಳು ಅವುಗಳ ಫ್ರೀಕ್ವೆನ್ಸಿಯಾಧಾರದಲ್ಲಿ ವ್ಯವಸ್ಥಿತವಾಗಿ ಜೋಡಣೆಯಾದಾಗ ಅದೇ Spectrum. ಇದು ದೇಶದ ಅತ್ಯಮೂಲ್ಯ ನೈಸರ್ಗಿಕ ಸಂಪತ್ತಾಗಿರುವುದರಿಂದ ಇದರ ಸಂಪೂರ್ಣ ಒಡೆತನ ಸರ್ಕಾರದ್ದು. ಸರ್ಕಾರವು ಕಂಪೆನಿಗಳಿಗೆ ಪರವಾನಗಿ ಮತ್ತು Spectrumನ್ನು ನೀಡುತ್ತದೆ. 1991 ರಿಂದ Spectrum ಅನ್ನು ಹರಾಜು ಹಾಕಲಾಗುತ್ತಿದೆ. ಆದರೆ ಈ ಬಾರಿ Spectrumನ್ನು ಹರಾಜು ಹಾಕದೆ, ಮೊದಲು ಬಂದವರಿಗೆ ಆದ್ಯತೆಯಂತೆ ವಿತರಿಸಲಾಯಿತು, ಅದೂ 2001ರ ಬೆಲೆಗಳಿಗೆ!! 2001ರಲ್ಲಿ 4  ಮಿಲಿಯನ್ ಗ್ರಾಹಕರಿದ್ದರೆ, 2008 ರಲ್ಲಿ 300 ಮಿಲಿಯನ್ ಗ್ರಾಹಕರಿದ್ದರು! ತಿಂಗಳಿಗೆ 8-9 ಮಿಲಿಯನ್ ನೂತನ ಗ್ರಾಹಕರನ್ನು ಸೇರಿಸಿಕೊಳ್ಳುತ್ತಿರುವ ಮಾರುಕಟ್ಟೆಯ ಪರವಾನಗಿಯನ್ನು 7 ವರ್ಷಗಳ ಹಿಂದಿನ ಬೆಲೆಗಳಿಗೆ ಬಿಕರಿ ಮಾಡಲಾಗಿದೆ!


2008ರ ಜನಿವರಿ 10ರಂದು ಸಂಚಾರ್ ಭವನವು ಬೃಹತ್ ನಾಟಕವೊಂದಕ್ಕೆ ವೇದಿಕೆಯಾಯಿತು. ಅಂದು ಮಧ್ಯಾಹ್ನ 2:45ಕ್ಕೆ ಇಲಾಖೆಯು ತನ್ನ ವೆಬ್ಸೈಟಿನಲ್ಲಿ 3:30ರಿಂದ 4:30ರೊಳಗೆ Spectrumನ್ನು ವಿತರಿಸಲಾಗುವುದೆಂದೂ, ಅಷ್ಟರೊಳಗಾಗಿ ಪರವಾನಗಿ ಪಡೆಯಲಿಚ್ಚಿಸುವವರು ಅಗತ್ಯ ಹಣ ಮತ್ತು ದಾಖಲೆಗಳನ್ನು ಪೂರೈಸಬೇಕೆಂದು ಮತ್ತು ಮೊದಲು ಪಾವತಿಸಿದವರಿಗೆ ಆದ್ಯತೆಯೆಂದು ಪ್ರಕಟಿಸಿತು. every second counts! ಆದ ನೂಕುನುಗ್ಗಲನ್ನು ತಡೆಯಲು ಅನೇಕರು ಬೌನ್ಸರ್ಗಳಿಂದ ಹೊರಗೆಸಯಲ್ಪಟ್ಟರು. ಸಾವಿರಾರು ಕೋಟಿಗಳ ವ್ಯವಹಾರದ Spectrum ಅನ್ನು ವಿತರಿಸಲು ಇದಾ ವಿಧಾನ? ಇದರಲ್ಲಿ ಪಾರದರ್ಶಕತೆಯಾದರೂ ಎಲ್ಲಿದೆ? ಮುಕ್ಕಾಲು ಘಂಟೆಯೊಳಗೆ ಒಂದೂವರೆ ಸಾವಿರ ಕೋಟಿಗಳ ಹಣವನ್ನು ಪಾವತಿಸಬೇಕೆಂಬುದು ಎಷ್ಟು ಸರಿ? ಆದರೂ ಕಂಪೆನಿಗಳು ಈ ಸಮಯದೊಳಗೇ ಇಷ್ಟೊಂದು ಹಣವನ್ನು ಕಟ್ಟಿದ್ದಾವೆಂದರೆ ಅವುಗಳಿಗೆ ಪೂರ್ವ ಮಾಹಿತಿಯಿಲ್ಲದೇ ಇತ್ತೇ? ಹೀಗೆ ಪರವಾನಗಿ ಪಡೆದ ಕಂಪೆನಿಗಳ ಸಂಖ್ಯೆ ಹದಿಮೂರು. 
1)Vodafone Essar cellular Ltd., 2)Idea Cellular Ltd., 3)Bharti Airtel Ltd., 4)Datacom Solutions Pvt. Ltd., 5)Reliance Communications Ltd., 6)S Tel Ltd., 7)Tata Teleservices Ltd., 8)Loop Telecom Private Limited.9)Unitech Wireless Pvt. Ltd., 10)Swan Telecom Pvt. Ltd., 11)Spice Communication Ltd., 12)Allianz Infratech (P) Ltd.,13) Azare Properties Ltd. 


ಈ ಕಂಪೆನಿಗಳ ಪಟ್ಟಿಯಲ್ಲಿ ಹಲವಾರು ರಿಯಲ್ ಎಸ್ಟೇಟ್ ಕಂಪೆನಿಗಳಿವೆ. ಇವುಗಳಿಗೆ ಟೆಲಿಕಾಂ ಕ್ಷೇತ್ರದಲ್ಲಿ ಯಾವುದೇ ಅನುಭವ ಇಲ್ಲ. ಈ ಕಂಪೆನಿಗಳಿಗೆ ತಮ್ಮ ಮೊಬೈಲ್ ಸೇವೆ ಪ್ರಾರಂಭಿಸಲು infrastructure ಇಲ್ಲ. ಉದಾ. ಯೂನಿಟೆಕ್ ವೈರ್ಲೆಸ್ ಲಿ., ಅಜಾರೇ ಪ್ರಾಪರ್ಟೀಸ್  ಲಿ.,ಸ್ವಾನ್ ಟೆಲಿಕಾಂ ಲಿ. .ಹಲವರ ಮೂಗಿಗೆ ಹೆಗ್ಗಣ ಸತ್ತ ವಾಸನೆ ಬಡಿಯಲಾರಂಭಿಸಿತ್ತು.


ಈ Spectrumನ ಮಾರುಕಟ್ಟೆ ಬೆಲೆಯ ಅಂದಾಜು ಸಿಗಲು ಅಕ್ಟೋಬರ್ವರೆಗೆ ಕಾಯಬೇಕಾಯಿತು. ಆಗ Spectrumನ್ನು ಪಡೆದಿದ್ದ ಎರಡು ಕಂಪೆನಿಗಳು ಅವುಗಳ ಹಿಡಿತವನ್ನು ವಿದೇಶೀ ಕಂಪೆನಿಗಳಿಗೆ ಮಾರಿದವು. ಯೂನಿಟೆಕ್ ವೈರ್ಲೆಸ್ಗೆ ದೊರೆತಿದ್ದುದು ಪ್ಯಾನ್ ಇಂಡಿಯಾದ ಪರವಾನಗಿ, 1,651 ಕೋಟಿಗಳಿಗೆ. ಈ ಕಂಪೆನಿಯು ನಾರ್ವೆಯ ಟಲೆನಾರ್ಗೆ ಶೇ. 60 ರಷ್ಟು ತನ್ನ ಹಿಡಿತವನ್ನು ಮಾರಿದ್ದು 6120 ಕೋಟಿಗಳಿಗೆ! ಈ ಲೆಕ್ಕದಂತೆ ಇದರ ಒಟ್ಟು ಬೆಲೆಯು 10,200 ಕೋಟಿಗಳಿಗೇರುತ್ತದೆ. ಅಂದರೆ ಈ ಕಂಪೆನಿಯ ನಿವ್ವಳ ಲಾಭ 8,549 ಕೊಟಿಗಳು. ಅಷ್ಟೂ ಬೊಕ್ಕಸಕ್ಕೆ ನಷ್ಟ. ಇದೇ ಇಂದು ಯೂನಿನಾರ್ ಆಗಿ ನಿಮ್ಮ ಮುಂದೆ ನಳನಳಿಸುತ್ತಿದೆ. ಇನ್ನು ಸ್ವಾನ್ ಟೆಲಿಕಾಂ. ಕಂಪೆನಿಯು 13 ಸರ್ಕಲ್ಗಳ ಪರವಾನಗಿಯನ್ನು 1,537 ಕೋಟಿಗಳಿಗೆ ಪಡೆದುಕೊಂಡಿತ್ತುಇದು ಯು.ಎ.ಇದ ಎಟಿಸಲಾಟ್ಗೆ ತನ್ನ ಶೇ.45 ರಷ್ಟು ಹಿಡಿತವನ್ನು ಮಾರಿದೆ- 4,500 ಕೋಟಿಗಳಿಗೆ. ಹಾಗಾದರೆ ಈ ಲೆಕ್ಕದ ಪ್ರಕಾರ Spectrumನ ಒಟ್ಟು ಬೆಲೆ - ಅಂದಾಜು 10,000 ಕೋಟಿಗಳು. ಹೀಗೆ ಲೆಕ್ಕ ಹಾಕಿದರೆ ಬರಿಯ ಯೂನಿಟೆಕ್ ಮತ್ತು ಸ್ವಾನ್ಗಳಿಂದ ಸರ್ಕಾರಕ್ಕಾದ ನಷ್ಟ ಸುಮಾರು 16 ಸಾವಿರ ಕೋಟಿಗಳು. ಇದೇ ಅಂದಾಜನ್ನು ನಾವು ಇತರೆ ಕಂಪೆನಿಗಳ ಪರವಾನಗಿಗಳಿಗೂ ವಿಸ್ತರಿಸಿದರೆ ನಮ್ಮ ಮುಂದೆ ಬಂದು ನಿಲ್ಲುವುದೇ 60 ಸಾವಿರ ಕೋಟಿಗಳ ನಷ್ಟ ಎಂಬ ಮೊತ್ತ. ಈ ಮೊತ್ತ ಅಂದಾಜು ಕರ್ನಾಟಕದ ಬಡ್ಜೆಟ್ನಷ್ಟು! ಈಗ ಅರ್ಥವಾಯಿತಲ್ಲ ಈ ಹಗರಣದ ಆಳ - ಅಗಲ. ಇದು ಖಂಡಿತವಾಗಿಯೂ ಭಾರತ ಇತಿಹಾಸದ ಅತಿ ದೊಡ್ಡ ಹಗರಣ. 


ಈ ಸ್ವಾನ್ ಟೆಲಿಕಾಂ ಕಂಪೆನಿಯದು ಹಗರಣದಲ್ಲೊಂದು ಉಪ ಹಗರಣ. ಈ ಕಂಪೆನಿಯ ಪರ ರಾಜಾ ವಿಶೇಷ ಕಾಳಜಿ ವಹಿಸಿದಂತಿದೆ. ಸ್ವಾನ್ ಟೆಲಿಕಾಂ ಕಂಪೆನಿಯನ್ನು ಮೊದಲು ಪ್ರಾರಂಭಿಸಿದವನು ಅನಿಲ್ ಅಂಬಾನಿ. ನಂತರ ಈ ಕಂಪೆನಿಯನ್ನು ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಡೈನಮಿಕ್ಸ್ ಬಿಲ್ವಾಸ್ ಗ್ರೂಪ್ನವರು ಟೇಕೋವರ್ ಮಾಡಿಕೊಂಡರು. ಇದಕ್ಕೂ ರಾಜಾರವರ ಆಶೀರ್ವಾದವಿತ್ತು ಅಂತ ಸುದ್ದಿ. 13 ಸರ್ಕಲ್ಗಳಲ್ಲಿ 1,537 ಕೋಟಿಗಳಿಗೆ ಪರವಾನಗಿ ಮತ್ತು Spectrumನ್ನು ಪಡೆದ ಸ್ವಾನ್ ಟೆಲಿಕಾಂ ಮತ್ತು ರಾಜಾ ಸಂಬಂಧ ಅಲ್ಲಿಗೇ ನಿಂತಂತೆ ಕಾಣುವುದಿಲ್ಲ. 2008ರ ಸೆಪ್ಟೆಂಬರ್ 13 ರಂದು, ಸ್ವಾನ್ ಟೆಲಿಕಾಂ ಎಟಿಸಲಾಟ್ಗೆ ತನ್ನ ಹಿಡಿತ ಮಾರುವುದಕ್ಕಿಂತಲೂ ಕೇವಲ ಹತ್ತು ದಿನಗಳ ಮೊದಲು, ಸ್ವಾನ್ನೊಂದಿಗೆ BSNL  ಇಂಟ್ರಾ ಸರ್ಕಲ್ ರೋಮಿಂಗ್ ಡೀಲ್ ಎಂಬ ಒಪ್ಪಂದವೊಂದಕ್ಕೆ ಸಹಿ ಹಾಕುತ್ತದೆ. ಇದರನ್ವಯ BSNL ತನ್ನ infrastructure ಮತ್ತು Spectrum ಅನ್ನು ಸ್ವಾನ್ ಟೆಲಿಕಾಂನೊಂದಿಗೆ ಹಂಚಿಕೊಳ್ಳಲಿದೆ. ಇದಕ್ಕಾಗಿ ಸ್ವಾನ್ ಟೆಲಿಕಾಂ ಪ್ರತಿ ಕರೆಗೆ 52 ಪೈಸೆ, ಕೊಡಬೇಕೆಂದು BSNLನ ಹಿರಿಯರು ತೀರ್ಮಾನಿಸಿದ್ದರು. ಆದರೆ ಆಶ್ಚರ್ಯದ ಸಂಗತಿಯೆಂದರೆ ಒಪ್ಪಂದದಲ್ಲಿ ಇದರ ಪ್ರಸ್ತಾಪವೇ ಇಲ್ಲ! BSNL ಸ್ವಾನ್ನೊಂದಿಗೆ ಈ ರೀತಿಯ ಒಪ್ಪಂದಕ್ಕೆ ಸಹಿ ಹಾಕಲು ರಾಜಾ ಕಾರಣವಾಗಿದ್ದರೆಂಬುದು ಗುಸುಗುಸು. ಈ ಒಪ್ಪಂದವಾದ ಹತ್ತೇ ದಿನಗಳಿಗೆ ಸ್ವಾನ್ ಟೆಲಿಕಾಂ ಎಟಿಸಲಾಟ್ಗೆ ತನ್ನ ಶೇ.45ರಷ್ಟು ಹಿಡಿತವನ್ನು 4500 ಕೋಟಿಗಳಿಗೆ ಮಾರಿತು. ಸ್ವಾನ್ಗೆ ಇಂತಹುದೊಂದು ಉತ್ತಮ ಮೊತ್ತ ಸಿಗುವಲ್ಲಿ BSNLನೊಂದಿಗಿನ ಒಪ್ಪಂದ ಪ್ರಮುಖ ಪಾತ್ರ ವಹಿಸಿತ್ತು. ಇದಕ್ಕೆ ಪ್ರತ್ಯುಪಕಾರವಾಗಿ ರಾಜಾ ಅವರಿಗೆ ತೀರ ಆಪ್ತರು ನಿರ್ದೇಶಕರಾಗಿರುವ ಷೆಲ್ ಕಂಪೆನಿಯೊಂದಕ್ಕೆ, ಸ್ವಾನ್ ಟೆಲಿಕಾಂ 380 ಕೋಟಿಗಳ ಬೆಲೆ ಬಾಳುವ ಷೇರ್ಗಳನ್ನು ನಿಯತಗೊಳಿಸಿದೆಯೆಂಬುದು ಅಲ್ಲಲ್ಲಿ ಕೇಳಿಬರುತ್ತಿರುವ ಸುದ್ದಿ. 


ಹೌದು ಈ ಎಲ್ಲಾ ಆರೋಪಗಳನ್ನು ರಾಜಾ ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ರಾಜಾ ಇದನ್ನು ನಾಲ್ಕು ರೀತಿಯಲ್ಲಿ ಸಮರ್ಥಿಸಿಕೊಳ್ಳ ಹೊರಡುತ್ತಾರೆ. ಮೊದಲಿಗೆ ಅವರು ಇದನ್ನು ಒಂದು ಹಗರಣವೆಂದೇ ಗುರುತಿಸುವುದಿಲ್ಲ. ಅವರ ಪ್ರಕಾರ Spectrum ಅನ್ನು ಹರಾಜು ಹಾಕದೆ ಮೊದಲು ಬಂದವರಿಗೆ ಆದ್ಯತೆಯಂತೆ ವಿತರಿಸಿರುವುದು ಆಮ್ ಆದ್ಮಿಯನ್ನು ದೃಷ್ಟಿಯಲ್ಲಿಟ್ಟುಕೊಂಡು! ಟೆಲಿಕಾಂ ಕಂಪೆನಿಗಳಿಗೆ Spectrum ದುಬಾರಿಯಾದರೆ ಅವರು ಅದನ್ನು ಗ್ರಾಹಕರ ಮೇಲೆ ಹೊರಿಸುತ್ತಾರೆ. ಗ್ರಾಹಕರ ಮೇಲಿನ ಈ ಹೊರೆಯನ್ನು ತಪ್ಪಿಸಲು ಈ ಕ್ರಮ! ರಾಜಾರವರು ತಮ್ಮ ಕ್ರಮಗಳ ಮೇಲೆ ಇಂಥದೊಂದು ಸದ್ದುದೇಶವನ್ನು ಆಪಾದಿಸಿಕೊಳ್ಳುತ್ತಾರಲ್ಲ ಅದು ಈಡೇರಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಪರವಾನಗಿ ಪಡೆದ ಯಾವ ಕಂಪೆನಿಗಳೂ ಸೇವೆಯನ್ನೇ ಆರಂಭಿಸದಿರುವಾಗ ಇನ್ನು ಗ್ರಾಹಕರಿಗೆ ಲಾಭವೆಲ್ಲಿಯದು? ಅವರು ಹೇಳುವ ಲಾಭವೆಲ್ಲಾ ಈ ಖಾಸಗೀ ಕಂಪೆನಿಗಳ ಬ್ಯಾಲೆನ್ಸ್ ಷೀಟ್ಗಳಲ್ಲಿ ರರಾಜಿಸ್ತಾ ಇದೆ. ಮತ್ತೊಂದು ರೀತಿಯಲ್ಲಿ ಅವರನ್ನವರು ಸಮರ್ಥಿಸಿಕೊಳ್ಳುತ್ತಾ, ಹೋರಾಟಗಾರನ ವೇಷ ತೊಡುತ್ತಾರೆ. ಭಾರತದ ಟೆಲಿಕಾಂ ರಂಗವನ್ನು ಕೆಲವೇ ಕಂಪೆನಿಗಳು ಆಳುತ್ತಿದ್ದು, ಇವು ಇಂದು ಒಂದು ಕಾರ್ಟೆಲ್ ಆಗಿ ರೂಪುಗೊಂಡಿವೆ. ಈ ರಂಗದಲ್ಲಿ ಸ್ಪರ್ಧಾತ್ಮಕತೆ ತರಲು ತಾನು ಮೊದಲು ಬಂದವರಿಗೆ ಆದ್ಯತೆಯಂತೆ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಇದನ್ನು ಸಹಿಸದ ಈ ಕಾರ್ಟೆಲ್ ಇದನ್ನೇನೋ ಹಗರಣವೆಂಬಂತೆ ಚಿತ್ರಿಸುತ್ತಿವೆ ಅಂತಾರೆ. ಸರಿ ಸ್ವಾಮಿ ನಿಮ್ಮ `ಲೇಪಿತ' ಉದ್ದೇಶವನ್ನು ಒಪ್ಪೋಣ. ಆದರೆ ಅದಕ್ಕಾಗಿ ಟೆಲಿಕಾಂ ಕ್ಷೇತ್ರದಲ್ಲಿ ಯಾವುದೇ ಅನುಭವವಿಲ್ಲದ, ಎಳ್ಳಷ್ಟೂ infrastructure ಇಲ್ಲದ ರಿಯಲ್ ಎಸ್ಟೇಟಿಗರಿಗೆ ಅತ್ಯಮೂಲ್ಯವಾದ Spectrum ಅನ್ನು 2001ರ ಬೆಲೆಗಲಿಗೆ ಬಿಕರಿ ಮಾಡಿಬಿಡುವುದೆ? ಹೋಗಲಿ ಈಗ ನಿಮ್ಮ ಉದ್ದೇಶ ಈಡೇರಿದೆಯೇ? ಅದೆಲ್ಲ ಇರಲಿ ಸ್ವಾಮಿ ನೀವು ಆಪಾದಿಸಿಕೊಳ್ಳುವ ಇದೇ ಸದುದ್ದೇಶಗಳಿಗಾಗಿ ನೀವ್ಯಾಕೆ 3G Spectrum ಅನ್ನು ಮೊದಲು ಬಂದವರಿಗೆ ಆದ್ಯತೆಯಂತೆ ವಿತರಿಸುತ್ತಿಲ್ಲ? ಯಾಕೆ ಹರಾಜಿಗೆ ಮನಸೋತಿದ್ದೀರಾ? 


ಇಂಥ ಯಾವುದೇ ಸಮರ್ಥನೆ ಕೈಗೂಡದಾದಾಗ ರಾಜಾ ಹೇಳುವುದು ಒಂದೇ ಮಾತು. ತಾನು ನಿಯಮಗಳ ಪ್ರಕಾರ ನಡೆದುಕೊಂಡಿರುವುದಾಗಿಯೂ, ಟೆಲಿಕಾಂ ರಂಗದ ವಾಚ್ ಡಾಗ್ ಟ್ರಾಯ್ನ ಶಿಫಾರಸುಗಳನ್ನು ಅಮಲು ಮಾಡಿರುವುದಾಗಿಯೂ ಹೇಳುತ್ತಾರೆ. ಇದೂ ಕೂಡ ದಾರಿ ತಪ್ಪಿಸುವ ಕಾರ್ಯಕ್ರಮವೇ. ಟ್ರಾಯ್ನ ಶಿಫಾರಸುಗಳಲ್ಲಿ ರಾಜಾ ತಮಗನುಕೂಲವೆನಿಸಿದ್ದನ್ನು ಚಿತ್ರಾನ್ನದಲ್ಲಿ ಕಡಲೆಬೀಜ ಆರಿಸಿದಂತೆ ಆರಿಸಿಕೊಂಡಿದ್ದಾರೆ. ಅಂದಿನ ಟ್ರಾಯ್ ಅಧ್ಯಕ್ಷ ನ್ರಿಪೇಂದ್ರ ಮಿಶ್ರಾ Spectrum ಅನ್ನು ಮೊದಲು ಬಂದವರಿಗೆ ಆದ್ಯಂತೆಯಂತೆ ವಿತರಿಸುರುವುದು ಮತ್ತು ಅದನ್ನು ಟ್ರಾಯ್ ಶಿಫಾರಸು ಎಂಬಂತೆ ಚಿತ್ರಿಸಿರುವುದನ್ನು ಪತ್ರ ಬರೆದು ಪ್ರತಿಭಟಿಸಿದ್ದಾರೆ. ಇದಕ್ಕಾಗಿ ಅವರನ್ನು ಕೆಲವೇ ದಿನಗಳಲ್ಲಿ ಅಲ್ಲಿಂದ ಎತ್ತಂಗಡಿ ಮಾಡಲಾಯಿತು. ಇನ್ನು ಮಾತೆತ್ತಿದರೆ ರಾಜಾ ಈ ವಿಚಾರ ಪ್ರಧಾನಿಯೂ ಸೇರಿದಂತೆ ಇಡೀ ಕ್ಯಾಬಿನೆಟ್ಗೇ ಗೊತ್ತಿತ್ತು, ನನ್ನನ್ನೇ ಏಕೆ ಟಾರ್ಗೆಟ್ ಮಾಡುತ್ತೀರಾ ಎಂದು ಮನಮೋಹನರನ್ನೂ ಜೊತೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಇದೂ ಕೂಡ ಶುದ್ಧ ಸುಳ್ಳು. ಪರವಾನಗಿಯ ನಿರ್ಧಾರ ತೆಗೆದುಕೊಂಡಿರುವುದು ಕ್ಯಾಬಿನೆಟ್ ಅಲ್ಲ, ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಟೆಲಿಕಾಂ ಇಲಾಖೆಯ ಹಿರಿಯ ಅಧಿಕಾರಿಗಳನ್ನೊಳಗೊಂಡ ಟೆಲಿಕಾಂ ಕಮೀಷನ್. ಇನ್ನು ವಿತ್ತ ಸಚಿವಾಲಯ ಹರಾಜಿನ ಬದಲಿಗೆ ಮೊದಲು ಬಂದವರಿಗೆ ಆದ್ಯತೆಯಂತೆ Spectrum ಅನ್ನು ಬಿಕರಿ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟವಾಗಿದೆಯೆಂದು, ವಿವರಣೆ ಕೋರಿ ಪತ್ರ ಬರೆದಿದೆ. ಇನ್ನು ಒಪ್ಪಿಗೆಯ ಮಾತೆಲ್ಲಿಂದ ಬಂತು? ಹೀಗೆ ನೋಡಿದರೆ ರಾಜಾ ತನ್ನನ್ನು ಸಮರ್ಥಿಸಿಕೊಳ್ಳಲು ಮುಂದಿಡುವ ಪ್ರತಿ ವಾದ ಸರಣಿಯೂ ಟೊಳ್ಳಾಗಿದ್ದು, ದಾರಿ ತಪ್ಪಿಸುವ ಉದ್ದೇಶದಿಂದಲೇ ಹೇಳಿದ ಅರ್ಧ ಸತ್ಯಗಳೆಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಹಾಗಾದರೆ ರಾಜಾರ ನಿಲುವು - ಕ್ರಮಗಳ ಹಿಂದಿನ ಉದ್ದೇಶವಾದರೂ ಏನು? ರಾಜಕಾರಣಿಗಳು ಏನು ಮಾಡಿದರೂ ಅದರ ಹಿಂದೆ ವೋಟು ಇಲ್ಲ ನೋಟಿರುತ್ತದೆ. ಇಲ್ಲಿ ವೋಟಿಗೆ ಆಸ್ಪದವಿಲ್ಲ. 


ದೆಹಲಿಯ ಡಾ ಅರವಿಂದ ಗುಪ್ತರವರು  ಈ ವಿಷಯವಾಗಿ ದೆಹಲಿ ಹೈಕೋರ್ಟ್ನಲ್ಲಿ, ಸಾರ್ವಜನಿಕ ಹಿತಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ (ಕೇಸ್ ನಂ. 7815/2008). 1993ರ ಕೇಸೊಂದರಲ್ಲಿ ನ್ಯಾಯಾಲಯವು first come first serve ಪದ್ದತಿಯು ಅವೈಜ್ಞಾನಿಕವಾಗಿದ್ದು, ಪಾರದರ್ಶಕತೆಯ ಕೊರತೆಯೂ ಇದೆಯೆಂದು ಹೇಳಿದೆ. ಈಗ ಹದಿನೈದು ವರ್ಷಗಳ ತರುವಾಯ ಅತ್ಯಮೂಲ್ಯವಾದ Spectrumನ್ನು ಇದೇ ಪದ್ಧತಿಯ ಆಧಾರದ ಮೇಲೆ ವಿತರಿಸಲಾಗಿರುವುದನ್ನು ಗಮನಿಸಿದ ಇವರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ವಿಷಯವಾಗಿ ಸರ್ಕಾರದ ವಿವರಣೆ ಕೋರಿದ ನ್ಯಾಯಾಲಯಕ್ಕೆ ಸರ್ಕಾರವು ಡಿಸೆಂಬರ್ 10 ರಂದು ಈ ರೀತಿ ವಿವರಣೆ ಸಲ್ಲಿಸಿದೆ: 
"ಈ Spectrum ಅನ್ನು ಹರಾಜಿನಲ್ಲಿ highest bidder ಗೆ ನೀಡಿದ್ದೇ ಆದರೆ, ಆ ಬೃಹತ್ ಮೊತ್ತವನ್ನು ಕಂಪೆನಿಯು ಗ್ರಾಹಕರಿಂದ ವಸೂಲು ಮಾಡುತ್ತದೆ. ಆಗ ಗ್ರಾಹಕರ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. ಇಲ್ಲ ಕಂಪೆನಿಗಳು ತಮ್ಮ ದರಗಳನ್ನು ಏರಿಸದೇ ಇದ್ದರೆ, ಕಂಪೆನಿಗಳು ದಿವಾಳಿಯಾಗುತ್ತವೆ. ಹೀಗೆ ಕಂಪೆನಿಗಳ ಖರ್ಚುಗಳು ಹೆಚ್ಚಾಗಿ ಪರವಾನಗಿಯನ್ನು ಅಪೇಕ್ಷಿಸುವವರ ಸಂಖ್ಯೆಯೇ ಕಡಿಮೆಯಾಗುತ್ತದೆ. ಮತ್ತು Spectrum fee ಎನ್ನುವುದು ಸರಕಾರೀ ಆಸ್ತಿಯ ಮಾರಾಟವಲ್ಲದಿರುವುದರಿಂದ ಹರಾಜಿನ ಅವಶ್ಯಕತೆಯೇ ಇಲ್ಲ" ಎಂದು ವಾದಿಸಿದೆ. ಈ ಕೇಸಿನಲ್ಲಿ ತೀರ್ಪು ಇನ್ನೂ ಹೊರಬೀಳದಿರುವುದರಿಂದ ಇದರ ತಾರ್ಕಿಕ ಅಂತ್ಯಕ್ಕೆ ನಾವಿನ್ನೂ ಬಂದಿಲ್ಲ. 


ಈ ಮಧ್ಯೆ ಹೊರಬಂದಿರುವ ಹೊಸ ಡೀಟೆಲ್ಸ್ ಎಂದರೆ, ನೀರಾ ರಾಡಿಯಾ ಎಂಬ ಪಿಆರ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿರುವ 4 ಕಂಪೆನಿಗಳಿಗೆ Spectrum ಆಲ್ಮೋಸ್ಟ್ ಉಚಿತವಾಗಿ ಸಿಕ್ಕುಬಿಟ್ಟಿದೆ. ಸಿಬಿಐ ತನಿಖೆಯಲ್ಲಿ ಹೊರಬಿದ್ದಿರುವ ಸತ್ಯವೆಂದರೆ ಈಕೆ ಟೆಲಿಕಾಂ ಸಚಿವ ಅಂದಿಮುತ್ತು ರಾಜಾ ಅವರಿಗೆ ಈತ್ತೀಚೆಗೆ ಹೆಚ್ಚು ಆಪ್ತರಾಗಿದ್ದು, ಅವರೊಂದಿಗೆ ಘಂಟೆಗಟ್ಟಲೆ ಫೋನಿನಲ್ಲಿ ಸಂಭಾಷಿಸಿದ್ದಾರೆ. ಪೂರ್ವನುಮತಿಯೊಂದಿಗೆ ಸಿಬಿಐ ಈ ಫೋನ್ ಕಾಲ್ಗಳನ್ನು ಟ್ಯಾಪ್ ಮಾಡಿದೆ. ಈಕೆ ಇನ್ನೂ ಹಲವರಿಗೆ ಟೆಲಿಕಾಂ ರಂಗದಲ್ಲಿ `ಕೆಲಸ ಮಾಡಿಸಿಕೊಡುವುದಾಗಿ' ಹೇಳಿಕೊಂಡು ತಿರುಗುತ್ತಿದ್ದಳು ಎಂಬ ಅಂಶ ಕೂಡ ಬಯಲಿಗೆ ಬಂದಿದೆ. ಕಳೆದ ಕೆಲವು ದಿನಗಳ ಆಗುಹೋಗುಗಳು ಹೊಸ ನಾಣ್ಣುಡಿಯೊಂದನ್ನು ಹುಟ್ಟುಹಾಕುವಂತಿವೆ. - behind every successful scam there is a lady love!! ಇನ್ನು ಮೀಡಿಯಾದವರಿಗೆ ಇನ್ವೆಸ್ಟಿಗೇಟಿವ್ ರಿಪೋರ್ಟ್ಗಳನ್ನು ಫೈಲ್ ಮಾಡುವುದಕ್ಕೆ ಸುಗ್ರಾಸ ಸುದ್ದಿ.


ಯುಪಿಎ-1ರಲ್ಲಿ ರಾಜಾ ಮೊದಲಿಗೆ ಪರಿಸರ ಮತ್ತು ಅರಣ್ಯ ಮಂತ್ರಿಯಾಗಿದ್ದರು. ಆದರೆ ದಯಾನಿಧಿ ಮಾರನ್ ಮತ್ತು ಕರುಣಾನಿಧಿಯವರ ನಡುವೆ ಭಿನ್ನಾಭಿಪ್ರಯಾಗಳು ತಲೆದೋರಿದಾಗ ಅವರ ಜಾಗಕ್ಕೆ ಅಂದಿಮುತ್ತು ರಾಜಾರನ್ನು ತಂದು ಟೆಲಿಕಾಂ ಸಚಿವನನ್ನಾಗಿ ಮಾಡಲಾಯಿತು. ಅವರು ಬಂದ ಮೊದಲ ದಿನದಿಂದ ಮಾಡಿದ್ದು ಇದೇ Spectrum ಗಲಾಟೆ. ಕಡೆಕಡೆಯಲ್ಲಿ ಅವರು ಸರ್ಕಾರಕ್ಕೆ ದೊಡ್ಡ ಮುಜುಗರವಾಗಿದ್ದರು. ಈ ವರ್ಷ ಯುಪಿಎ ಮತ್ತೆ ಅಧಿಕಾರಕ್ಕೆ ಬಂದು, ಕಾಂಗ್ರೆಸ್ ಮೇಲುಗೈ ಸಾಧಿಸಿದರೂ ಡಿಎಂಕೆ ಬೆಂಬಲ ಅನಿವಾರ್ಯವಾಗಿತ್ತು. ಆದರೂ ಕಳಂಕಿತರು ತನ್ನ ಸಚಿವ ಸಂಪುಟದಲ್ಲಿರಬಾರದೆಂದು ಪಟ್ಟು ಹಿಡಿದ ಮನಮೋಹನರು ಡಿಎಂಕೆಯ ಟಿ.ಆರ್.ಬಾಲು ಮತ್ತು ಅಂದಿಮುತ್ತು ರಾಜಾರವರನ್ನು ಹೊರಗಿಡಬೇಕೆಂದಿದ್ದರಾದರೂ ಕರುಣಾನಿಧಿ ಒಪ್ಪಲಿಲ್ಲ. ಮನಮೋಹನರು ಕಡೆಗೂ ಬಾಲುರನ್ನು ಹೊರಗಿಡುವಲ್ಲಿ ಯಶಸ್ವಿಯಾದರೇ ಹೊರತು, ರಾಜಾರನ್ನಲ್ಲ. ನಂತರ ರಾಜಾಗೆ ಟೆಲಿಕಾಂ ಖಾತೆಯನ್ನು ತಪ್ಪಿಸಲು ನೋಡಿದರಾದರೂ ಅದೂ ಸಾಧ್ಯವಾಗಲಿಲ್ಲ. ಆಗಲೇ ಈ ಸರ್ಕಾರಕ್ಕೆ ಇವತ್ತಲ್ಲ ನಾಳೆ ರಾಜಾ ಮುಜುಗರವಾಗುವುದು ಖಾತ್ರಿಯಾಗಿತ್ತು. ಸೆಂಟ್ರಲ್ ವಿಜಿಲೆನ್ಸ್ ಕಮಿಟಿ ವರದಿ ಬಂದು, ಅದರ ಶಿಫಾರಸಿನಂತೆ ಸಿಬಿಐ ತನಿಖೆ ಕೈಗೆತ್ತಿಕೊಂಡಿತು. ಈಗ ತನಿಖೆಯ ವಿವರಗಳು ಹೊರಬಂದು ಗದ್ದಲ ಮಾಡುತ್ತಿದೆ. ಇಲ್ಲಿ ಕರುಣಾನಿಧಿ ಧಿಗ್ಗನೆ ಎದ್ದು ಕೂತರು. ತಮ್ಮ ಮಗಳು ಕನಿಮೊಳಿಯ ಮೂಲಕ ಪ್ರಧಾನಿಯವರ ಬಳಿ ಪ್ರತಿಭಟಿಸಿದರು. ತಮ್ಮವರದೇನೂ ತಪ್ಪಿಲ್ಲವೆಂದ ಮೇಲೆ ಸಿಬಿಐ ತನಿಖೆಗೆ ಪ್ರತಿಭಟನೆಯೇಕೋ? ಈಗ ತನಿಖೆಯ ಲೀಕ್ಗಳು ಶುರುವಾಗಿವೆ. ಇನ್ನೂ ಕರುಣಾ ಈ ವಿಷಯವಾಗಿ ತುಟಿ ಎರಡು ಮಾಡಿಲ್ಲ. 


ಹಿಂದೆ ಒಂದು ರೈಲು ದುರಂತವಾದಾಗ, ಅದರ ನೈತಿಕ ಹೊಣೆ ಹೊತ್ತು ತಮ್ಮ ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆಯಿತ್ತವರು ಲಾಲ್ ಬಹದ್ದೂರ್ ಶಾಸ್ತ್ರಿ. ಈಗ ಒಬ್ಬ ಮಂತ್ರಿಯ ಕಛೇರಿಯ ಮೇಲೆ ಭ್ರಷ್ಟಾಚಾರದ ಆರೋಪದ ತನಿಖೆ ನಡೆಸಲು ಸಿಬಿಐ ದಾಳಿ ಮಾಡಿದರೂ, ಮೇಲ್ನೋಟಕ್ಕೆ ಆರೋಪ ಸಾಬೀತಾಗುವಂತಿದ್ದರೂ ತನಗೆ ಯಾವುದೇ ನೈತಿಕ ಹೊಣೆಯಿಲ್ಲ ಎನ್ನುವ ಭಂಡರು ರಾಜಕೀಯಕ್ಕೆ ಬಂದುಬಿಟ್ಟಿದ್ದಾರೆ. ಮನಮೋಹನ ಸಿಂಗರು ಇಂದಿನ ಮಾರುಕಟ್ಟೆ ಕೇಂದ್ರಿತ ಸಮಾಜದಲ್ಲಿಯೂ ಸಚ್ಚಾರಿತ್ರ್ಯದ ಮಹತ್ವವನ್ನು ಸಾರಿದವರು. ಇವರ ಮೂಗಿನಡಿಯಲ್ಲೇ ಇಂತಹುದೊಂದು ದೊಡ್ಡ ಹಗರಣ ನಡೆದಿರುವುದು, ಅವರು ಅದನ್ನು ರಾಜಕೀಯ ಒತ್ತಡಗಳಿಗಾಗಿ ಸಹಿಸುತ್ತಿರುವುದು ಅವರ ಕುರಿತು ಸದಭಿಪ್ರಾಯ ಮೂಡುಸುವುದಿಲ್ಲ. ಸಿಬಿಐನ ತನಿಖೆಗೆ ಅನುವು ಮಾಡಿಕೊಟ್ಟು ಈ ಕೂಡಲೇ ಅಂದಿಮುತ್ತು ರಾಜಾ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ಆ ಕುರ್ಚಿಯಲ್ಲಿ ಕೂರುವ ನೈತಿಕ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಆದರೆ ರಾಜಾ ರಾಜೀನಾಮೆಯ ಮಾತು ಅತ್ತ ಇರಲಿ, ಅಸಲು ಇದನ್ನೊಂದು ಹಗರಣವೆಂದೇ ಗುರುತಿಸುತ್ತಿಲ್ಲ. ಸರ್ಕಾರ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಗಳೇ ನಮ್ಮ ಸರ್ಕಾರದ ಗುರುತುಪತ್ರವೆಂದು ಬೀಗುವ ಪ್ರಧಾನಿಗಳು ರಾಜಕಾರಣದ ಒತ್ತಡಗಳಿಗೆ ಮಣಿಯದೆ ರಾಜಾರವರಿಂದ ರಾಜೀನಾಮೆ ಪಡೆಯಬೇಕು. ಆದರೆ ಪ್ರಧಾನಿಯವರ ಇತ್ತೀಚಿನ ಹೇಳಿಕೆಗಳು ಇದನ್ನು ಪುಷ್ಟೀಕರಿಸದಿರುವುದು ವಿಷಾದನೀಯ.


ಕಳೆದ ಒಂದೂವರೆ ದಶಕಗಳಿಂದ ಭಾರತದ ದೆಹಲೀ ರಾಜಕಾರಣವನ್ನು ಸಮ್ಮಿಶ್ರ ಸರ್ಕಾರಗಳಾಳುತ್ತಿದ್ದು, ಸರ್ಕಾರದ ಪ್ರಮುಖ ಪಕ್ಷಗಳಿಗೆಲ್ಲವಕ್ಕೂ ಟೆಲಿಕಾಂ ಸಚಿವಾಲಯವೇ ಬೇಕು. ಇದನ್ನು `ವೆಟ್ ಮಿನಿಸ್ಟ್ರಿ' ಎಂದು ಬಣ್ಣಿಸುತ್ತಾರೆ. ಅಂದರೆ ಒಳ್ಳೆ ದುಡ್ಡು ಓಡಾಡುವ ಜಾಗ ಅಂತ. ಅದಕ್ಕೇ ಅದಕ್ಕಷ್ಟು ಡಿಮ್ಯಾಂಡು! ಭಾರತ ಮಾಹಿತಿ ಯುಗವನ್ನು ಈಗಷ್ಟೇ ಪ್ರವೇಶಿಸುತ್ತಿದ್ದು, ಭಾರತದ ಸರ್ವತೋಮುಖ ಅಭಿವೃದ್ಧಿಯಲ್ಲಿ ಟೆಲಿಕಾಂ ಕ್ಷೇತ್ರ ಅತ್ಯಂತ ಮಹತ್ವದ ಪಾತ್ರ ವಹಿಸಿದೆ, ವಹಿಸಲಿದೆ. ಇಂತಿಪ್ಪ ಟೆಲಿಕಾಂ ರಂಗವನ್ನು ವೆಟ್ ಮಿನಿಸ್ಟ್ರಿ ಎಂದು ಗುರುತಿಸಿ ಅದರ ಸಾರ-ರಸವನ್ನೆಲ್ಲಾ ಹೀರಿ ಹಾಕಿದ್ದಾರೆ ಇವರು. 1997ರ ಸುಖರಾಮ್ ಹಗರಣ, ಪ್ರಮೋದ್ ಮಹಾಜನ್ರ ವಿಎಸ್ಎನ್ಎಲ್ ಹಗರಣ, ಈಗ ಈ ಹಗರಣ. ಈ ನವ ಭಾರತ ಖಂಡಿತವಾಗಿಯೂ ಇನ್ನೂ ಉತ್ತಮ, ದಕ್ಷ, ಪ್ರಾಮಾಣಿಕ, ಮುತ್ಸದ್ಧಿ ಟೆಲಿಕಾಂ ಸಚಿವನನ್ನು ಪಡೆಯಲು ಅರ್ಹವಾಗಿದೆ. ಇದು ಸದ್ಯದ ತುರ್ತು ಕೂಡ. 2G Spectrum ವಿತರಣೆಯಲ್ಲಿ 60 ಸಾವಿರ ಕೋಟಿಗಳ ಮೊತ್ತದ ಹಗರಣದ ಆರೋಪ ಹೊತ್ತ ಅದೇ ಅಂದಿಮುತ್ತು ರಾಜಾ, 3G Spectrumನ ಹರಾಜು ಮತ್ತು ವಿತರಣೆಯನ್ನು ಪರ್ಯಾವೆಕ್ಷಿಸುವುದು ಸರಿಯಲ್ಲ. 

ಭಾರತ ಮೈಮರೆತಾಗ - `62 ಮತ್ತು `99 - ನಾವು ಯುದ್ಧಗಳಿಂದ ಪಾಠ ಕಲಿಯಲಿಲ್ಲ

ಕಾರ್ಗಿಲ್ಗೆ ದಶಮಾನೋತ್ಸವಾದರೂ ಅದರ ರೋಮಾಂಚನವಿನ್ನೂ ಇಳಿದಿಲ್ಲ್ಲ. ಭಾರತದಲ್ಲಿ ಟಿವಿ ಕ್ರಾಂತಿಯ ನಂತರ ನಡೆದ ಮೊದಲ ಯುದ್ಧವಿದು. ಮೀಡಿಯಾ ಇದನ್ನು ದೇಶದ ನಡುಮನೆಗಳಿಗೆ ಕೊಂಡೊಯ್ಯಿತು. ದೇಶಕ್ಕೆ ದೇಶವೇ ಒಂದಾಯಿತು, ದೇಶ ಅಕ್ಷರಶಃ ದೇಶಪ್ರೇಮದ ಅಮಲಿನಲ್ಲಿ ಮುಳುಗಿತು. ಕಾರ್ಗಿಲ್ ದಿಗ್ವಿಜಯದ ನೆನಪು ಇನ್ನೂ ಮಾಸಿಲ್ಲ. ಅಂತಹದರಲ್ಲಿ ಕಾರ್ಗಿಲ್ಲನ್ನು ಹಿಮಾಲಯನ್ ಬ್ಲಂಡರ್ ಎಂದೇ ಪರಿಗಣಿಸಲ್ಪಡುವ 62ರ ಚೀನಾ ಯುದ್ಧದೊಂದಿಗೆ ಹೋಲಿಸುವುದೇ ಹಲವರನ್ನು ಕೆರಳಿಸಿರಬಹುದು. ಆದರೆ ಇತಿಹಾಸದ ಪುಟಗಳೆಡಗಿನ ಬೆರಗುಗಣ್ಣಿನ ನೋಟ ಇವೆರಡರ ನಡುವಿನ ಸಾಮ್ಯತೆಗಳನ್ನು ಗುರುತಿಸುತ್ತವೆ. ಈ ಸಾಮ್ಯತೆಗಳನ್ನು ಕಂಡು ಯಾರಾದರೂ ಅವಾಕ್ಕಾಗಿ ನಿಲ್ಲಬೇಕಾದದ್ದೇ!


62 ಮತ್ತು 99ರಲ್ಲಿ ಭಾರತ ಶಾಂತಿಯ ಭ್ರಮೆಯಲ್ಲಿತ್ತು, ರಾಜತಾಂತ್ರಿಕ ಶಾಂತಿಹೆಜ್ಜೆಯನ್ನು ಮಿಲಿಟರಿಗೂ ಪಸರಿಸಿ ಮೈಮರೆತಿತ್ತು. 62ರಲ್ಲಿ ಭಾರತ ನೆಹರೂರ ಹಿಂದೀ ಚೀನೀ ಭಾಯಿ ಭಾಯಿ ಘೋಷಣೆಯ ಮಾರ್ದನಿಯಲ್ಲಿ ಕಳೆದುಹೋಗಿತ್ತು. ಚೀನಾ ಎಂದಿಗೂ ಭಾರತದ ಮೇಲೆ ದಾಳಿ ಮಾಡುವುದಿಲ್ಲವೆಂಬ ನೆಹರೂರ ಭ್ರಮೆಯನ್ನು ವೃತ್ತಿಪರರೂ ಹಂಚಿಕೊಂಡಿದ್ದರು. ಭಾರತವೇ ಮೈಮರೆತಿತ್ತು. ಚೀನಾ ಬೆನ್ನ ಹಿಂದೆ ಚೂರಿ ಹಾಕಿತು. ಕಾರ್ಗಿಲ್ನ್ನು ಗಮನಿಸಿ. ಪೋಖ್ರಾನ್ನ ನಂತರ ವಾಜಪೇಯಿಯವರು ಲಾಹೋರ್ ಬಸ್ ಯಾತ್ರೆ ಕೈಗೊಂಡರು. ಶಾಂತಿಯಾಕಾಂಕ್ಷಿಯಾಗಿ ಪಾಕಿಸ್ತಾನ ನೀಡಿದ ಪೋಸನ್ನು ಎಲ್ಲರೂ ನಿಜವೆಂದೇ ನಂಬಿದರು. ಸೈನ್ಯವೂ ಸೇರಿ ಎಲ್ಲರೂ ಲಾಹೋರಿನ ಹೊಸ ನೀರಿನಲ್ಲಿ ಮುಳುಗಿದ್ದರು. ಪಾಕಿಸ್ತಾನದ ದೋಖಾದ ವಾಸನೆ ಯಾರ ಮೂಗಿಗೂ ಬಡಿಯಲೇ ಇಲ್ಲ. ರಾಷ್ಟ್ರೀಯ ಬಧ್ರತಾ ಸಲಹೆಗಾರರ ತಂಡವು ಶತ್ರು ರಾಷ್ಟ್ರಗಳಿಂದ ಎದುರಾಗಬಹುದಾದ ಸದ್ಯ, ಮಧ್ಯಮ ಮತ್ತು ದೀರ್ಘಕಾಲೀನ ಅಪಾಯಗಳನ್ನು ಅಳೆದು ಅವುಗಳನ್ನೆದುರಿಸಲು ಕಾರ್ಯವ್ಯೂಹವೊಂದನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. 62ರಲ್ಲಿ ಇಂಥದೊಂದು ವ್ಯವಸ್ಥೆಯೇ ಇರಲಿಲ್ಲ! 99ರಲ್ಲಿ ಇತ್ತಾದರೂ ಲಾಹೋರದ ಕಲರವದಲ್ಲಿ ಕಳೆದು ಹೋಗಿತ್ತು.

ಇನ್ನು 62 ಮತ್ತು 99ರ ಯುದ್ಧಗಳಲಿ ನಮ್ಮ ಕಣ್ಣಿಗೆ ರಾಚುವುದು, ಭಾರತದ ಗುಪ್ತಚರ ವಿಫಲತೆ, ಶತ್ರು ರಾಷ್ಟ್ರ ಯುದ್ಧ ಸನ್ನದ್ಧವಾಗುತ್ತಿರುವುದನ್ನು ಮನಗಾಣದ ದುಸ್ಥಿತಿ, ದಾಳಿಯ ಅನಿರೀಕ್ಷಿತತೆ. 62ರಲ್ಲಿ ಚೀನಾ ಗಡಿಯವರೆಗೂ ರೋಡು, ಬಂಕರುಗಳನ್ನು ನಿರ್ಮಿಸುತಿತ್ತು. ಚೀನಾ ಈ ಸಿದ್ಧತೆಗಳಿಗೆ ಕನಿಷ್ಠ ಎಂಟು ತಿಂಗಳು ತೆಗೆದುಕೊಂಡಿತ್ತು. ಇವ್ಯಾವೂ ಭಾರತದ ಅರಿವಿಗೆ ಬರಲೇ ಇಲ್ಲ. ಕಾರ್ಗಿಲ್ನಲ್ಲಿ? ಚಳಿಗಾಲದಲ್ಲಿ ಭಾರತದೊಳಕ್ಕೆ ನುಸುಳಿದ ಪಾಕ್ ಸೈನಿಕರು, ಬೆಟ್ಟ ಸಾಲಿನ ಪಾಕಿಸ್ತಾನ ಬದಿಯಲ್ಲಿ ಸಪ್ಲೈಲೈನ್ಗಳನ್ನು ನಿರ್ಮಿಸಿದರು, ಸ್ಕರ್ದುವಿನಲ್ಲಿ ಹೆಲಿಪ್ಯಾಡೊಂದನ್ನು ಕಟ್ಟಿಕೊಂಡರು. ಈ ಸಿದ್ಧತೆಗಳಿಗೆ ಪಾಕಿಸ್ತಾನ ತೆಗೆದುಕೊಂಡದ್ದು ಭರ್ಜರಿ ಏಳು ತಿಂಗಳುಗಳು. ಮತ್ತೊಂದು ಅವಮಾನವೆಂದರೆ ಹೀಗೆ ಆಕ್ರಮಿಸಿಕೊಂಡಿದ್ದ ಭಾರತೀಯ ನೆಲದ ಮೇಲೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಮುಷರಫ್ ಬಂದು ಹೋಗಿದ್ದರೆಂದು ಹೇಳಲಾಗಿದೆ! ಇದ್ಯಾವುದೂ ಭಾರತಕ್ಕೆ ತಿಳಿದಿರಲಿಲ್ಲ, ಹಾಗಿತ್ತು ನಮ್ಮ ಇಂಟೆಲಿಜೆನ್ಸ್! ಮೊದಲ ಬಾರಿಗೆ ಕಾರ್ಗಿಲ್ನಲ್ಲಿ ಪಾಕಿಗಳ ಇರುವಿಕೆಯನ್ನು ಗುರುತಿಸಿದ್ದು ಒಬ್ಬ ಕುರಿ ಕಾಯುವವನು!
62 ಮತ್ತು 99ರಲ್ಲಿ ಸತತ ನಿರ್ಲಕ್ಷ್ಯದಿಂದಾಗಿ ನಮ್ಮ ಸೈನ್ಯ ಯುದ್ಧ ಸನ್ನದ್ಧವಾಗಿರಲಿಲ್ಲ. ಯೋಧರಿಗೆ ಕನಿಷ್ಠ ಸವಲತ್ತುಗಳನೂ ನೀಡದೆ ಯುದ್ಧಭೂಮಿಗೆ ಕಳಿಸಲಾಗಿತ್ತು. ದೇಶ ಕಟ್ಟುವ ಉತ್ಸುಕತೆಯಲ್ಲಿದ್ದ ನೆಹರೂ ಸೈನಿಕ ವೆಚ್ಚವನ್ನು ಅನವಸರವೆಂದು ಭಾವಿಸಿದ್ದರು. 62ರಲ್ಲಿ ಭಾರತದ ಸೈನಿಕನಿಗೆ ಶೈತ್ಯ ಪ್ರದೇಶಗಳಲ್ಲಿ ಬೇಕಾದ ಹಿಮ-ಬೂಟುಗಳು, ಬೈನಾಕ್ಯುಲರ್ಗಳೂ ಇರಲಿಲ್ಲ. ಮಂಜಿನ ಕನ್ನಡಕವಿಲ್ಲದೇ ಯೋಧರು ಕುರುಡಾಗಿ ಹೋದರು, ಹಿಮ-ಬೂಟುಗಳಿಲ್ಲದೆ ಫ್ರಾಸ್ಟ್ಬೈಟ್ಗೆ ಕಾಲು ಕಳೆದುಕೊಂಡರು. ಚೈನಾ ಯುದ್ಧದ ನಂತರ ನೆಹರೂ ಭಾರತದ ಉಳಿವಿಗೆ ಸೈನ್ಯದ ಅವಶ್ಯಕತೆಯನ್ನು ಮನಗಂಡು, ಸೈನ್ಯವೆಚ್ಚವನ್ನು ಹಿಗ್ಗಿಸಿದರಾದರೂ 80ರ ದಶಕದ ಉತ್ತರಾರ್ಧದಲ್ಲಿ ಮತ್ತೆ ಸೈನ್ಯ ನಿರ್ಲಕ್ಷ್ಯಕ್ಕೊಳಗಾಯಿತು. ಸೈನ್ಯ ಕೌಂಟರ್ ಇನ್ಸರ್ಜೆನ್ಸಿ ಆಪರೇಷನ್ಗಳಲ್ಲೇ ಮುಳುಗಿಹೋಗಿತ್ತ್ತು. ಅಂದಿಗೆ ಪೂರ್ಣಮಟ್ಟದ ಯುದ್ದ ಮಾಡಿ 28 ವರ್ಷಗಳಾಗಿದ್ದವು. ಸೈನ್ಯ ಯುದ್ಧ ಸನ್ನದ್ಧವಾಗಿರಲಿಲ್ಲ. ಆಗ ಧುತ್ತನೆ ಎದುರಾದದ್ದು ಕಾರ್ಗಿಲ್. ಅಲ್ಲಿ ಶತ್ರು ಸೈನಿಕರು ಅಸಲಿಗೆ ನಮ್ಮವರಿಗೆ ಕಾಣಿಸುತ್ತಲೇ ಇರಲಿಲ್ಲ. ಶತ್ರುಗಳು ಬೆಟ್ಟವೇರಿ ಕೂತಿದ್ದರೆ, ನಮ್ಮವರು ಅವರಿಗೆ ಕಾಣಬಾರದೆಂದು ರಾತ್ರಿಗಳಲಿ ಮಾತ್ರ ಸಂಚರಿಸುತ್ತಿದ್ದರು! ಆದರೆ ನೈಟ್ ವಿಷನ್ ಬೈನಾಕ್ಯುಲರ್ಗಳಿರಲಿಲ್ಲ. ಕಾರ್ಯಾಚರಣೆ ನಡೆಸಬೇಕಾದ ಪ್ರಾಂತ್ಯಗಳ ನಕ್ಷೆಗಳು ಕೂಡ ಸರಿಯಿರಲಿಲ್ಲ, ಎಲ್ಲವೂ ಕೈಬರಹ ನಕ್ಷೆಗಳ ಜೆರಾಕ್ಸು! ಆ ಹಿಮಾಚ್ಛಾಧಿತ ಪರ್ವತಗಳಲ್ಲಿ ಬೇಕಾದ ಹಿಮ-ಬೂಟುಗಳ ಕೊರತೆಯಿತ್ತು, ಆಧುನಿಕ ಕಮ್ಯೂನಿಕೇಷನ್ ಸಾಧನಗಳ ಕೊರತೆಯಿತ್ತು. ಕಾರ್ಗಿಲ್ನಲ್ಲಿ ಭಾರತದ ಸೈನ್ಯದ ವಿಜಯಕ್ಕೆ ಬೋಫೋರ್ಸನದು ಪ್ರಮುಖ ಕೊಡುಗೆ.ಯುದ್ಧ ಮುಂದುವರೆಯುತ್ತಿದ್ದಂತೆ ಬೋಫೋರ್ಸ ಫಿರಂಗಿಗಳ ಕೊರತೆ ಕಾಡಿತು. ಬೋಫೋರ್ಸ ಹಗರಣದಿಂದ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತಾದರೂ, ಕೂಡಲೆ ಅದನ್ನು ಕೈಬಿಟ್ಟು ಕೊರತೆ ನೀಗಿಸಿಕೊಳ್ಳಲಾಯಿತು. ಪೂರ್ಣ ಪ್ರಮಾಣದ ಯುದ್ಧ ಅನಿವಾರ್ಯವೆನಿಸತೊಡಗಿದಾಗ ಸರ್ಕಾರ ವೆಪನ್ ಶಾಪಿಂಗ್ಗೆ ಹೊರಟಿತ್ತು!

62 ಮತ್ತು 99ರ ಯುದ್ಧಕ್ಕೂ ಇಷ್ಟೊಂದು ಸಾಮ್ಯತೆಗಳಿದ್ದಾಗ್ಯೂ, ಯುದ್ಧಕ್ಕೆ ಎಡೆ ಮಾಡಿಕೊಟ್ಟ ಪರಿಸ್ಥಿತಿಗಳು ಏಕರೂಪವಾಗಿದ್ದವಾದರೂ, ಮುಖ್ಯವಾದುದೊಂದು ವ್ಯತ್ಯಸವಿದೆ. ಅದು ಯುದ್ಧವನ್ನು ನಿರ್ವಹಿಸಿದ ರೀತಿ. ಇದು ಯುದ್ಧದ ರಿಜಲ್ಟುಗಳನ್ನೇ ಬದಲಾಯಿಸಿಬಿಟ್ಟಿತು. ಯುದ್ಧ ನಿರ್ವಹಣೆ ಹೇಗೆ ಮಾಡಬಾರದೆಂಬುದಕ್ಕೆ 62 ಅತ್ಯುತ್ತಮ ಉದಾಹರಣೆಯಾದರೆ, ಕಾರ್ಗಿಲ್ ಯುದ್ಧವೊಂದನ್ನು ಹೇಗೆ ನಿರ್ವಹಿಸಬೇಕೆನ್ನುವುದಕ್ಕೊಂದು ಉತ್ತಮ ಉದಾಹರಣೆ.

ಇತ್ತ ಯುದ್ಧ ನಡೆಯುತ್ತಿದ್ದರೆ ನೆಹರೂ, ಮುರಾರ್ಜಿ, ರಕ್ಷಣಾ ಸಚಿವ ಮೆನನ್ ಎಲ್ಲರೂ ವಿದೇಶ ಪ್ರಯಾಣದಲ್ಲಿದ್ದರು, ಬಿ.ಎಂ.ಕೌಲ್ ರಜೆಯ ಮೇಲಿದ್ದರು. ಚೀನೀಯರು ಪೂರ್ವೋತ್ತರ ಭಾರತದ ಮೇಲೆ ದಾಳಿ ಮಾಡುವ ಅನುಮಾನಗಳಿದ್ದಾಗ, ನೆಹರೂ ರೇಡಿಯೋದಲ್ಲಿ, ಅಸ್ಸಾಂನನ್ನು ಬಿಟ್ಟುಕೊಡಬೇಕಾಗಬಹುದೆಂಬರ್ಥದ ಭಾಷಣ ಮಾಡುತ್ತಾರೆ, ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆ. ಅರ್ಹತೆಗೂ ಮೀರಿ, ನೆಹರೂ ಸೈನ್ಯದ ಚೀಫ್ ಆಗಿ ನೇಮಿಸಿದ ಬಿ.ಎಂ.ಕೌಲ್ರ ತಿಕ್ಕಲು ಸ್ಟ್ರಾಟಜಿಗಳಿಂದಾಗಿ ಭಾರತ ಸಾಕಷ್ಟು ಅನುಭವಿಸಬೇಕಾಯಿತು. ದಾಳಿ ಮಾಡಿದ್ದು ಚೀನಾ, ಇದನ್ನು ಬಳಸಿ ಅಂತರಾಷ್ಟ್ರೀಯಒತ್ತಡ ತಂದು ಯುದ್ಧಕ್ಕೆ ಬ್ರೇಕ್ ಹಾಕಬಹುದಾದ ಕೆಲಸ ಆಗಲೇ ಇಲ್ಲ. ಚೈನಾ ವಶಪಡಿಸಿಕೊಂಡ ಭಾರತದ ನೆಲದ ಕುರಿತು ಪ್ರಶ್ನಿಸಿದಾಗ, ಅಲ್ಲಿ ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ, ಅದಕ್ಕೇಕೆ ಇಷ್ಟು ಗದ್ದಲ ಎಂಬರ್ಥದ ಮಾತುಗಳನ್ನಾಡಿದರು ನೆಹರೂ. ಅವರು ಭ್ರಮನಿರಸನಗೊಂಡಿದ್ದರು, ಭಾರತದ ಸತ್ಪ್ರಜೆಗಳೂ ಕೂಡ. ಎಲ್ಲರೂ ಅವರನ್ನು, ಪ್ರಶ್ನಿಸುವವರಾದರು, ನೆಹರೂ ಸಹಿಸದಾದರು. 64ರಲ್ಲಿ ನೆಹರೂ ದುರಂತ ನಾಯಕರಾಗಿ ಕಣ್ಣುಮುಚ್ಚಿದರು. ನೆಹರೂರನ್ನು ಇದೇ ಕಾರಣಕ್ಕಾಗಿ ವಿಲನ್ನಂತೆ ಚಿತ್ರಿಸುವರುಂಟು. ಆದರೆ ಬರಿಯ ಇದೊಂದರಿಂದ ನಾವು ನೆಹರೂರನ್ನು ಜಡ್ಜ್ ಮಾಡುವುದು ತಪ್ಪಾಗುತ್ತದೆ.

ಆದರೆ ಕಾರ್ಗಿಲ್ನಲ್ಲಿ, ಮೊದಲ ಕೆಲ ದಿನಗಳಲ್ಲಿ ಪರಿಸ್ಥಿತಿಯ ಅಗಾಧತೆಯ ಅರಿವಿಲ್ಲದೆ, ಕೆಲವು ಬಾಲಿಶ ನಡವಳಿಕೆಗಳು ಕಂಡುಬಂದವಾದರೂ, ಸ್ವಲ್ಪದರಲ್ಲೇ ಎಚ್ಚೆತ್ತ ಸರ್ಕಾರ ನಂತರ ಪ್ರದರ್ಶಿಸಿದ್ದು ಮುತ್ಸದ್ಧಿತನವನ್ನು. ಭಾರತದ ನೆಲದ ಮೇಲೆ ಕಟ್ಟಕಡೆಯ ಪಾಕಿ ಇರುವವರೆಗೂ ಸೈನಿಕ ಕಾರ್ಯಾಚರಣೆ ನಿಲ್ಲಿಸುವುದಿಲ್ಲವೆಂಬ ನಿಲುವು ತಾಳಿ, ಸೈನಿಕರ ಆತ್ಮಸ್ಥೈರ್ಯ ಕುಗ್ಗದಂತೆ ನೋಡಿ ಕೊಂಡ ಸರ್ಕಾರ ಇತ್ತ ರಾಜತಾಂತ್ರಿಕ ದಾಳಿಗೆ ಮುಂದಾಯಿತು. ವಿಶ್ವದ ಮುಂದೆ ಪಾಕಿಸ್ತಾನವನ್ನು ನಗ್ನಗೊಳಿಸಿತು. ಸೈನಿಕ ದೃಷ್ಟಿಯಿಂದ ಸರಿದೋರಿದ್ದ ಎಲ್ಓಸಿ ದಾಟುವುದನ್ನು ತಡೆಹಿಡಿದು ಭಾರತದ ವಾದವನ್ನು ಬಲಪಡಿಸಿತು. ಅಮೆರಿಕಾ, ರಷಿಯಾ, ಫ್ರಾನ್ಸ್, ಚೈನಾ, ಜಪಾನ್ ಹೀಗೆ ಎಲ್ಲರೂ ಭಾರತದ ಪರವಾಗಿ ನಿಂತರು. ಬಹುಶಃ ಅದು ಸ್ವತಂತ್ರ್ಯ ಭಾರತದ ಅತಿ ದೊಡ್ಡ ರಾಜತಾಂತ್ರಿಕ ಸಾಧನೆಯಾಗಿತ್ತು. ಇದು ಪಾಕಿಸ್ತಾನದ ಮೇಲೆ ಇನ್ನಿಲ್ಲದ ಒತ್ತಡ ಹೇರಿತು. ಆದರೆ ರಾಜಿಯೇನೂ ಆಗಲಿಲ್ಲ, ತನ್ನ ನೆಲದ ಮೇಲಿನ ಕಡೆಯ ಪಾಕಿಯನ್ನು ಓಡಿಸುವವರೆಗೂ ಸೈನಿಕ ಕಾರ್ಯಾಚರಣೆ ನಿಲ್ಲಿಸಲಿಲ್ಲ. ಕಾರ್ಗಿಲ್ ದಿಗ್ವಿಜಯವಾಯಿತು.

62ರ ಯುದ್ಧ ಇಂದಿಗೂ ನಮ್ಮನ್ನು ಚುಚ್ಚುತ್ತಿರುವ ಅವಮಾನವಾದರೆ, ಕಾರ್ಗಿಲ್ ಒಂದು ಹೆಮ್ಮೆಯ ದಿಗ್ವಿಜಯ. 62ರ ಯುದ್ಧವನ್ನು ಹಿಮಾಲಯನ್ ಬ್ಲಂಡರ್ ಆಗಿಯೂ ಕಾರ್ಗಿಲ್ಲನ್ನು ದಿಗ್ವಿಜಯವಾಗಿಯೂ ವರ್ಣಿಸುತ್ತದೆ ಇತಿಹಾಸ. ಇತಿಹಾಸ ಎಂದಿಗಾದರೂ ಗೆದ್ದೆತ್ತಿನ ಬಾಲವೇ. ಕಾರ್ಗಿಲ್ನ ವೀರಗಾಥೆಗಳ ಹರಿಕತೆ ನಡೆದಿದೆಯಾದರೂ ದೇಶಭಕ್ತಿಯ, ದಿಗ್ವಿಜಯದ ಆಡಂಬರದಲ್ಲಿ ಒಂದು ಮಾತು ಕೇಳದೆಯೇ ಉಳಿಯಿತು. ಅಸಲಿಗೆ ನೂರಾರು ಸೈನಿಕರ ಬಲಿ ತೆಗೆದುಕೊಂಡ ಕಾರ್ಗಿಲ್ಲನ್ನು ತಪ್ಪಿಸಬಹುದಿತ್ತಾ? ಸಂಶಯವೇ ಬೇಡ ಕಾರ್ಗಿಲ್ ದೇಶ ತಪ್ಪಿಸಬಹುದಿದ್ದ ಒಂದು ಎಂಬರಾಸ್ಮೆಂಟ್! ಕಾರ್ಗಿಲ್ನ ಪೋಸ್ಟ್ಮಾರ್ಟಮ್ ನಡೆಯಬೇಕಿತ್ತು, ಆದರೆ ಅಂತಹುದಕ್ಕೆ ಹುಸಿ ದೇಶಭಕ್ತಿಯ ಆಡಂಬರ ಅವಕಾಶ ಮಾಡಿಕೊಡಲಿಲ್ಲ. ಸರ್ಕಾರ ಸುಬ್ರಮಣ್ಯಮ್ ಕಮಿಟಿಯನ್ನು ನೇಮಿಸಿತಾದರೂ ಅದು ಹೆಕ್ಕಿದ್ದಕ್ಕಿಂತ ಮುಚ್ಚಿದ್ದೇ ಹೆಚ್ಚು. ಕಾರ್ಗಿಲ್ನ ವಿಷಯದಲ್ಲಿ ಕರ್ತವ್ಯಲೋಪವೆಸಗಿದವರಾರ ತಲೆಗಳೂ ಉರುಳಲಿಲ್ಲ. ಕಾರ್ಗಿಲ್ನ ಪ್ರಮುಖ ದೋಷ ಗುಪ್ತಚರ ವಿಫಲತೆ. ಆದರೆ ಅಂದಿನ ಗುಪ್ತಚರ ಮುಖ್ಯಸ್ಥನನ್ನು ಅರುಣಾಚಲದ ರಾಜ್ಯಪಾಲರನ್ನಾಗಿ ನೇಮಿಸಿ ಐದು ವರ್ಷಗಳ ರಕ್ಷಣೆಯನ್ನೊದಗಿಸಲಾಯಿತು. 62ರ ಗುಪ್ತಚರ ವಿಫಲತೆಯಿಂದ ಪಾಠ ಕಲಿತಿದ್ದರೆ, ಕಾಗರ್ಿಲ್ ಅನ್ನು ತಪ್ಪಿಸಬಹುದಿತ್ತು, ಕಾರ್ಗಿಲ್ನಲ್ಲಿ ಪಾಠ ಕಲಿತಿದ್ದರೆ 26/11ನನ್ನು ತಪ್ಪಿಸಬಹುದಿತ್ತು. ದುರ್ದೈವವೆಂದರೆ ಇಂತಹ ಸಂದರ್ಭಗಳಲ್ಲಿ ದೇಶಭಕ್ತಿಯ ಅಮಲು ಭಾವನಾತ್ಮಕವಲ್ಲದ ತುಲನೆಗೆ ಅವಕಾಶವನ್ನೇ ಮಾಡಿಕೊಡುವುದಿಲ್ಲ. ಆದರೆ ಇತಿಹಾಸದಿಂದ ಪಾಠ ಕಲಿಯದ ಹೊರತಾಗಿ ಇಂತಹ ಭೀಭತ್ಸ ಘಟನಾವಳಿಗಳು ಪುನರಾವರ್ತನೆಯಾಗುತ್ತಲೇ ಇರುತ್ತವೆ. ಕಾಲ ಮತ್ತು ಇತಿಹಾಸ ಮನುಷ್ಯನ ಅತ್ಯುತ್ತಮ ಗುರುಗಳು. ಅವುಗಳನ್ನು ನಿರ್ಲಕ್ಷಿಸಿ ಜೀವನವಿಲ್ಲ. 62ರ ಪೋಸ್ಟ್ಮಾರ್ಟಮ್ ಸರಿಯಾಗಿ ನಡೆಯದಿದ್ದರಿಂದಲೇ ಕಾರ್ಗಿಲ್ನಲ್ಲಿ ಅದು ಪುನರಾವರ್ತನೆಯಾಯ್ತು. ಕಾರ್ಗಿಲ್ನ ಪೋಸ್ಟ್ಮಾರ್ಟಮ್ ಆಗಲಿಲ್ಲವಾದ್ದರಿಂದಲೇ 26/11 ಮುಂಬೈ ನರಮೇಧವಾಯಿತು. ಈಗ 26/11....
(ತಾ-೨೭/೦೭/೨೦೦೯ ರಂದು ವಿಜಯ ಕರ್ನಾಟಕದಲ್ಲಿ ಪ್ರಕಟಿತ)

Proudly powered by Blogger
Theme: Esquire by Matthew Buchanan.
Converted by LiteThemes.com.