ಒಂಟಿ ಸಲಗ ಜಾರ್ಜ್ ಫರ್ನಾಂಡೀಸ್ ನಿಜಕ್ಕೂ ಒಂಟಿ  

Posted by bharadwaja in


ಜಾರ್ಜ್ ಫರ್ನಾಂಡೀಸ್! ಆ ಹೆಸರೇ ಒಂದು ಕಾಲಕ್ಕೆ ಮೈನವಿರೇಳಿಸುವ ರೋಮಾಂಚನ. ಆದರೆ ಇಂದು ಇದೇ ಜಾರ್ಜ್ ಹಿಂದಿನ ತನ್ನದೇ ಪೇಲವ ನೆರಳು ಅಷ್ಟೆ. ಜಾರ್ಜ್ ಫರ್ನಾಂಡೀಸ್ ಮತ್ತು ವಿವಾದ ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳು. ಇದು ಅವರ ಜೀವನ ಸಂಧ್ಯಾಕಾಲದಲ್ಲೂ ಮುಂದುವರೆದಿದೆ. ಇಂದು ಅವರ ಆರೋಗ್ಯ ಹದಗೆಟ್ಟು ಹೋಗಿದೆ. ಅದು ದೈಹಿಕಕ್ಕಿಂತಲೂ ಮಾನಸಿಕ. ಭಾರತ ಕಂಡ ಅತಿ ಎತ್ತರದ ದೈತ್ಯ ಕಾರ್ಮಿಕ ನಾಯಕ, ಸಮಾಜವಾದಿ ಜಾರ್ಜ್ ಫರ್ನಾಂಡೀಸ್ ಇಂದು parkinsons ಮತ್ತು alzheimers ಇಂದ ಬಳಲುತ್ತಿದ್ದಾರೆ. ಇದು ಸಾಧಾರಣವಾಗಿ ವಯೋವೃದ್ಧರಿಗೆ ಬರುವ ಖಾಯಿಲೆಗಳು. ಇದರಿಂದ ಬಳಲುತ್ತುರಿವ ಮನುಷ್ಯ ಮೊದಲು ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ, ಆತನ ಮಾತಿಗೂ ಚಟುವಟಿಕೆಗಳಿಗೂ ಸಂಬಂಧವಿರುವುದಿಲ್ಲ, ಆತ ಯಾರನ್ನೂ ಗುರುತಿಸಲಾರದವನಾಗುತ್ತಾನೆ. ಒಟ್ಟಿನಲ್ಲಿ ಆತನಿಗೆ ಹೊರಜಗತ್ತಿನೊಂದಿಗೆ ಸಂಬಂಧವೇ ಇಲ್ಲವೇನೋ ಎನ್ನುವಂತೆ ತನ್ನದೇ ಆದ ಜಗತ್ತಿನಲ್ಲಿ ಆತ ಮುಳುಗಿಹೋಗಿರುತ್ತಾನೆ. ಸದ್ಯ ಜಾರ್ಜ್ ಫರ್ನಾಂಡೀಸ್ ಇಂಥದೇ ದಾರುಣ ಸ್ಥಿತಿಯಲ್ಲಿದ್ದಾರೆ. ಜಾರ್ಜ್ ಫರ್ನಾಂಡೀಸ್ರ ದೀರ್ಘ ಕಾಲದ ಗೆಳೆಯ ಅಟಲ್ ಬಿಹಾರೀ ವಾಜಪೇಯಿಯವರು ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿರುವ ಸುದ್ದಿಗಳಿವೆಯಾದರೂ ಅದನ್ನು ಬಿಜೆಪಿ ವಲಯ ಗುಟ್ಟಾಗಿರಿಸಿದೆ. ಸದ್ಯ ಜಾರ್ಜ್ ಮತ್ತು ವಾಜಪೇಯಿ ಒಂದು ಮಗುವಿನಂತೆ. ಅವರನ್ನು ಅದೇ ಆಸ್ಥೆಯಿಂದ ನೋಡಿಕೊಳ್ಳಬೇಕಿದೆ. ಬ್ರಹ್ಮಚಾರಿಯಾದರೂ ವಾಜಪೇಯಿ ಈ ವಿಷಯದಲ್ಲಿ ಅದೃಷ್ಟವಂತರು, ಅವರ ಸಾಕು ಮಗಳು ಮತ್ತು ಕುಟುಂಬ ಅವರನ್ನು ಇದೇ ಆಸ್ಥೆಯಿಂದ ನೋಡಿಕೊಳ್ಳುತ್ತಿದೆ. ಆದರೆ ಜೀವನದಲ್ಲಿ ಇಬ್ಬರು ಸಂಗಾತಿಗಳನ್ನು ಕಂಡ ಜಾರ್ಜ್ ಇವರೀರ್ವರ ನಡುವಿನ ಮುಸುಕಿನ ಗುದ್ದಾಟಕ್ಕೆ ಇಂದು ಬಲಿಯಾಗಿದ್ದಾರೆ. ಎರಡು ಬೆಕ್ಕುಗಳ ನಡುವಿನ ಇಲಿಯಂತಾಗಿದ್ದಾರೆ!


ಹೌದು ಜಾರ್ಜ್ ಫರ್ನಾಂಡೀಸ್ ಸುತ್ತಲೂ ಒಂದು ಅನಾರೋಗ್ಯಕರ ಹೈಡ್ರಾಮಾ ಮತ್ತು ವಿವಾದ ಹುಟ್ಟಿಕೊಂಡಿದೆ. ಎಲ್ಲರೂ ಬಲ್ಲಂತೆ ಜಯಾ ಜೇಟ್ಲಿ, ಜಾರ್ಜ್ ಫರ್ನಾಂಡೀಸ್ರ ದೀರ್ಘ ಕಾಲದ ರಾಜಕೀಯ ಮತ್ತು ವೈಯಕ್ತಿಕ ಸಂಗಾತಿ. ಇದು ಸುಮಾರು 25-30 ವರ್ಷಗಳ ಗೆಳೆತನ. ಜಾರ್ಜ್ ಫರ್ನಾಂಡೀಸ್ರ ಆರೋಗ್ಯ ಕ್ಷೀಣಿಸುತ್ತಾ ಹೋದಂತೆಲ್ಲಾ ಅವರನ್ನು ಕಾಳಜಿಯಿಟ್ಟು ನೋಡಿಕೊಂಡಾಕೆ ಇದೇ ಜಯಾ ಜೇಟ್ಲಿ. ಅವರ ಡಯಾಪರ್ಗಳನ್ನು ಬದಲಾಯಿಸುವುದರಿಂದ ಹಿಡಿದು ಅವರ ಸಂಪೂರ್ಣ ಆರೈಕೆ ಮಾಡುತ್ತಿರುವುದೇ ಜಯಾ. ಆದರೆ ಜಯಾ ಜೇಟ್ಲಿ ಜಾರ್ಜ್ ಫರ್ನಾಂಡೀಸ್ರ ಅಧಿಕೃತ ಪತ್ನಿಯಲ್ಲ. ಆಕೆಯ ಹೆಸರು ಲೀಲಾ ಕಬೀರ್! ಜಾರ್ಜ್ ಫರ್ನಾಂಡೀಸ್ರ ಪತ್ನಿ. ದೆಹಲಿಯ ಹುಮಾಯುನ್ ಕಬೀರ್ ಎಂಬ ಗತಕಾಲದ ದೈತ್ಯ ರಾಜಕಾರಣಿಯ ಪುತ್ರಿ. ಆ ಕಾಲಕ್ಕೇ ಹಾರ್ವರ್ಡ್ ವಿವಿಯಲ್ಲಿ ಓದಿ, ಸಮಾಜವಾದದ ಗುಂಗಿ ಹುಳ ತಲೆಗತ್ತಿಸಿಕೊಂಡು, ಕೇವಲ 150ರೂ.ಗಳ ಸಂಬಳಕ್ಕೆ ದಾದಿಯಾಗಿ ಕೆಲಸ ಮಾಡುತ್ತಿದ್ದ ಲೀಲಾ ಕಬೀರ್! ಹೌದು ಈಕೆ ಜಾರ್ಜ್ ಫರ್ನಾಂಡೀಸ್ರ ಪತ್ನಿ. ಆದರೆ 1986ರಲ್ಲೇ ಈಕೆ 13 ವರ್ಷಗಳ ಸಹಜೀವನದ ನಂತರ ಜಾರ್ಜ್ರಿಂದ ಹೊರನಡೆದರು. ಇವರಿಬ್ಬರಿಗೆ ಒಬ್ಬ ಮಗನಿದ್ದಾನೆ. ಆತನೇ ಸೀನ್. ನಂತರದ ಈ 25 ವರ್ಷಗಳಲ್ಲಿ ಲೀಲಾ ಕಬೀರ್ ಎಂದಿಗೂ ಜಾರ್ಜ್ರ ಜೀವನದಲ್ಲಿ ಮತ್ತೆ ಕಾಣಿಸಿಕೊಂಡಿಲ್ಲ. ಒಂದು ದಿನಕ್ಕೂ ಬಂದು ಅವರ ಆರೋಗ್ಯ ವಿಚಾರಿಸಿದವರಲ್ಲ, ಅವರು ವಿವಾದಗಳಲ್ಲಿ ಸಿಲುಕಿಕೊಂಡಾಗ ಜೊತೆ ನಿಂತವರಲ್ಲ. ಆದರೆ ಇವರಿಬ್ಬರೂ ಕಾನೂನು ರೀತ್ಯಾ ವಿಚ್ಛೇದನ ಪಡೆದಿಲ್ಲ. ಆದ್ದರಿಂದ ಕಾನೂನಿನ ಪ್ರಕಾರ ಇಂದಿಗೂ ಲೀಲಾ ಕಬೀರ್ ಅವರೇ ಜಾರ್ಜ್ ಅವರ ಪತ್ನಿ, ಅವರೇ ಅವರ ಕುಟುಂಬ.

ಇಂತಿಪ್ಪ ಲೀಲಾ ಹುಮಾಯುನ್ ಕಬೀರ್ ಫರ್ನಾಂಡೀಸ್ ಜಾರ್ಜ್ರ ಜೀವನದಲ್ಲಿ ಮತ್ತೊಮ್ಮೆ ಎಂಟ್ರಿ ಪಡೆದುಕೊಂಡಿದ್ದಾರೆ! ಅದೇ ಈ ಎಲ್ಲ ವಿವಾದಕ್ಕೂ ಕೇಂದ್ರ ಬಿಂದು. ನ್ಯೂಯಾರ್ಕ್ನಲ್ಲಿ ಇನ್ವೆಸ್ಟ್ಮೆಂಟ್ ಬ್ಯಾಂಕರ್ ಆಗಿರುವ ಇವರ ಮಗ ಸೀನ್ ಮೊನ್ನೆ ಭಾರತಕ್ಕೆ ಬಂದು ದೆಹಲಿಯ ಪೋಲೀಸರಿಗೆ ಒಂದು ದೂರು ನೀಡಿದ್ದಾನೆ. ತಾನು ಮತ್ತು ತನ್ನ ತಾಯಿ ಬಯಸುವವರನ್ನು ಮಾತ್ರ ಜಾರ್ಜ್ರನ್ನು ಭೇಟಿಯಾಗಲು ಬಿಡಬೇಕೆಂದೂ, ಮಿಕ್ಕ್ಯಾರನ್ನು ಒಳಬಿಡಕೂಡದೆಂದೂ ವಿನಂತಿಸಿ ಸೆಕ್ಯೂರಿಟಿ ಪಡಕೊಂಡಿದ್ದಾನೆ. ಅವರ ಆಪಾದನೆ ಜಾರ್ಜ್ರ ಸುತ್ತಲೂ ಇದ್ದವರು ಅವರ ಅಳಿದುಳಿದ ಆಸ್ತಿಯನ್ನು ಲೂಟಿ ಮಾಡುತ್ತಿದ್ದಾರೆ. ಜಯಾ ಜೇಟ್ಲಿ ಜಾರ್ಜ್ ಕೈಯಲ್ಲಿ Power Of Attorney ಬರೆಸಿಕೊಂಡು, ಬೆಂಗಳೂರಿನ ನೆಲಮಂಗಲದಲ್ಲಿ ಜಾರ್ಜ್ ಹೆಸರಲ್ಲಿರುವ ಅನೇಕ ಕೋಟಿಗಳ ಆಸ್ತಿಯನ್ನು ಮಾರಿಬಿಟ್ಟಿದ್ದಾರೆ. ಈ ಭೂವ್ಯವಹಾರ ನಡೆದಿರುವುದು 13 ಕೋಟಿಗಳಿಗೆ ಎಂದು ಹೇಳಲಾಗುತ್ತಿದೆಯಾದರೂ ಇದರ ನಿಜವಾದ ಮೌಲ್ಯ 23ಕೋಟಿಗಳಿಗೂ ಹೆಚ್ಚು ಎಂದು ಹೇಳಲಾಗುತ್ತಿದೆ. ಜಯಾ ಜೇಟ್ಲಿ ಮತ್ತು ಜಾರ್ಜ್ ಫರ್ನಾಂಡೀಸ್ರ ಮುಂಬೈ ಸ್ನೇಹಿತ ಫ್ರೆಡ್ರಿಕ್ ಇಬ್ಬರ ಹೆಸರಿಗೂ ಜಾರ್ಜ್ ತಮ್ಮ ಮನೋಸ್ಥಿಮಿತ ಸರಿಯಿದ್ದಾಗಲೇ Power Of Attorney ಬರೆದುಕೊಟ್ಟದ್ದರು, ಅವರ ಋಜು ಅತ್ತಿತ್ತ ಹರಿದಾಡುತ್ತಿದ್ದರಿಂದ ಬ್ಯಾಂಕ್ನವರು ಚೆಕ್ಗಳನ್ನು ಹಾನರ್ ಮಾಡುತ್ತಿರಲಿಲ್ಲ. ಆದ್ದರಿಂದ ಈ ವ್ಯವಸ್ಥೆಯನ್ನು ಮಾಡಲಾಗಿತ್ತು. ಇನ್ನು ಬೆಂಗಳೂರಿನ ಆಸ್ತಿ ಮಾರಿರುವುದು ನಿಜವೇ. ಆದರೆ ಈ ಆಸ್ತಿಯನ್ನು ಮಾರಿ ಬಂದ ಹಣದಲ್ಲಿ 9 ಕೋಟಿಗಳನ್ನು ಜಾರ್ಜ್ ಫರ್ನಾಂಡೀಸ್ ಟ್ರಸ್ಟ್ ಅಂತ ಮಾಡಿ ಬಡಬಗ್ಗರಿಗೆ ಹಂಚಲಾಗುತ್ತಿದ್ದು, ಮಿಕ್ಕ 4 ಕೋಟಿಗಳನ್ನು ಜಾರ್ಜ್ರ medical expenesesಗೆಂದು ತೆಗದಿರಿಸುವ ನಿರ್ಣಯವಾಗಿತ್ತು. ಇದಕ್ಕೆ ಜಾರ್ಜ್ ಸಹೋದರರಾದ ಮೈಖೇಲ್, ಪಾಲ್, ರಿಚರ್ಡ್ ಅವರೂ ಒಪ್ಪಿದ್ದರು.

ಆದರೆ ಅಷ್ಟರಲ್ಲಿ ಧುತ್ತನೆ ಎದುರಾದವರು ಲೀಲಾ ಕಬೀರ್. ಈ 25 ವರ್ಷಗಳಲ್ಲಿ ಒಮ್ಮೆಯೂ ಬಂದು ನೋಡಿಕೊಂಡು ಹೋಗದವರು ಈಗೇಕೆ ಪ್ರತ್ಯಕ್ಷರಾಗಿದ್ದಾರೆ? ಅದು ಉತ್ತರವಿಲ್ಲದ ಪ್ರಶ್ನೆ. ಅವರು ಜಾರ್ಜ್ ಆಸ್ತಿ ಅರಸಿ ಬಂದಿದ್ದಾರೆ ಎಂದು ಜಯಾ ಮತ್ತು ಸೋದರರು ಆಪಾದಿಸಿದರೆ, ಇಲ್ಲ ಅವರು ಆಸ್ತಿಯನ್ನು ಲೂಟಿ ಹೊಡೆಯುತ್ತಿದ್ದರು, ಜಾರ್ಜ್ ಫರ್ನಾಂಡೀಸ್ರನ್ನು ಸರಿಯಾಗಿ ನೋಡಿಕೋಳ್ಳುತ್ತಿರಲಿಲ್ಲ, ಅದಕ್ಕಾಗಿ ಅನಿವಾರ್ಯವಾಗಿ ನಾನು ಮಧ್ಯ ಪ್ರವೇಶಿಸಬೇಕಾಯಿತು ಎನ್ನುತ್ತಾರೆ ಲೀಲಾ ಕಬೀರ್. ಲೀಲಾ ಕಬೀರ್ ಅತಿ ಶ್ರೀಮಂತರ ಮನೆಯ ಹೆಣ್ಣು ಮಗಳು, ಆಕೆಗೆ ಜಾರ್ಜ್ರ ಆಸ್ತಿಯ ಬೆನ್ನತ್ತಿ ಬರುವ ಅವಶ್ಯಕತೆಯಿಲ್ಲ, ಇನ್ನು ಮಗನೋ ನ್ಯೂಯಾರ್ಕ್ನಲ್ಲಿ ಇನ್ವೆಸ್ಟ್ಮೆಂಟ್ ಬ್ಯಾಂಕರ್, ಆತನೂ ಶ್ರೀಮಂತನೇ. ಆದರೆ ಲೀಲಾ ಕೂಡ ಅನುಮಾನಗಳೆಳಿಸುವಂತಹ ಕೆಲ ನಡವಳಿಕೆಗಳನ್ನು ತೋರಿದ್ದಾರೆ. ಮಧ್ಯರಾತ್ರಿ ಎರಡು ಘಂಟೆಯಲ್ಲಿ ಜಾರ್ಜ್ ಫರ್ನಾಂಡೀಸ್ರ ಮನೆಗೆ ನುಗ್ಗಿ, ಆಳು ಕಾಳುಗಳನ್ನೆಲ್ಲಾ ಹೊರಹಾಕಿ, Power Of Attorneyಯನ್ನು ರಿವೋಕ್ ಮಾಡುವ ಕಾಗದ ಪತ್ರಗಳಿಗೆ ಜಾರ್ಜ್ರ ಹೆಬ್ಬೆಟ್ಟೊತ್ತಿಸಿಕೊಳ್ಳುವ ಜರೂರತ್ತಾದರೂ ಏನಿತ್ತು? ಜಾರ್ಜ್ ಫರ್ನಾಂಡೀಸ್ ಎಷ್ಟೋ ದಿನಗಳವರೆಗೂ ನೀಲಿಯಾಗಿದ್ದ ಅದೇ ಹೆಬ್ಬೆಟ್ಟನ್ನು ದಿಟ್ಟಿಸುತ್ತಾ ಕೂತುಬಿಟ್ಟಿದ್ದರಂತೆ. ಯಾಕೆ ಹೀಗೆ?

ಒಂದು ಗುಸುಗುಸು ಸುದ್ದಿಯೇನಪ್ಪಾ ಎಂದರೆ, ಇದು ಜಾರ್ಜ್ ಫರ್ನಾಂಡೀಸ್ರ ಅಪಾರ ಆಸ್ತಿಯ ಒಂದು speck ಅಷ್ಟೆ. ಜಾರ್ಜ್ ಫರ್ನಾಂಡೀಸ್ರಿಗೆ ಬಹುಕೋಟಿ ರೂ.ಗಳ ಮೌಲ್ಯದ ಅಪಾರ ಆಸ್ತಿಯಿದ್ದು, ಅವರು ಬದುಕಿದ್ದಾಗಲೇ ಇದಕ್ಕಾಗಿ ಕಚ್ಚಾಟ ಆರಂಭವಾಗಿದೆ. there's more big money involved. ಈಗ ಜಾರ್ಜ್ರ ಸೋದರರನ್ನಾಗಲೀ, ಜಯಾ ಜೇಟ್ಲಿಯವರನ್ನಾಗಲೀ ಅವರನ್ನು ಭೇಟಿಯಾಗಲು ಲೀಲಾ ಮತ್ತವರ ಮಗ ಅನುಮತಿಸುತ್ತಿಲ್ಲ. ಅವರು ಆಸ್ಪತ್ರೆಗೆ ಸೇರಿದ್ದಾರಾದರೂ, ಅಲ್ಲೂ ಸಹ ಅವರನ್ನು ಇವರು ಹೋಗಿ ಕಾಣುವಂತಿಲ್ಲ, ವೈದ್ಯರು ಕೂಡ, ಲೀಲಾ ಅವರು ಏನನ್ನೂ ಹೇಳಬಾರದೆಂದು ತಾಕೀತು ಮಾಡಿರುವುದರಿಂದ ನಾವು ಅದನ್ನು ಗೌರವಿಸಿ, ಎನನ್ನೂ ಹೇಳಲಿಚ್ಛಿಸುವುದಿಲ್ಲ ಎನ್ನುತ್ತಿದ್ದಾರೆ.ಜಾರ್ಜ್ ಫರ್ನಾಂಡೀಸ್ ಈಗ ಒಂದು ಸಣ್ಣ ಮಗುವಿದ್ದಂತೆ. ಯಾವ ವೈದ್ಯರಾದರೂ ಹೇಳುತ್ತಾರೆ, ಈಗ ಅವರಿಗೆ ಪರಿಚಿತ ಮುಖಗಳು ಸುತ್ತಲಿರಬೇಕು, ಒಂದು ಆಪ್ಯಾಯಮಾನ ಪರಿಸರದಲ್ಲಿ ಅವರನ್ನು ನೋಡಿಕೊಳ್ಳಬೇಕೆಂದು. ಆದರೆ ಇಂದು ಜಾರ್ಜ್ ಅದರಿಂದ ವಂಚಿತರಾಗಿದ್ದಾರೆ. ಲೀಲಾ ಎಷ್ಟೇ ಪತ್ನಿಯಾಗಿದ್ದರೂ ಅವರಿಬ್ಬರ ಸಂಬಂಧ ಕಡಿದು ಹೋಗಿ 25 ವರ್ಷಗಳಾಗಿವೆ. ಇನ್ನು ಮಗ, ಸೊಸೆ, ಮೊಮ್ಮಗ ಎಲ್ಲರೂ ಅವರಿಗೆ ಅಪರಿಚಿತರು. ಆದರೆ ಇಷ್ಟು ದಿನ ಅವರನ್ನು ಮಗುವಿನಂತೆ ನೋಡಿಕೊಂಡ ಜಯಾ ಜೇಟ್ಲಿ ಮತ್ತವರ ಸೋದರರು ಈಗ ಹೊರಗಿನವರು ಎನ್ನುತ್ತದೆ ಕಾನೂನು.

ಜಾರ್ಜ್ ಫರ್ನಾಂಡೀಸ್ರಿಗೆ ಭಾರತದ ರಾಜಕಾರಣದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಮಂಗಳೂರಿನವರಾದ ಇವರು ಬಾಂಬೆಯ ಬೀದಿಗಳಲ್ಲಿ ದೇಶ ಕಂಡರಿಯದ ದೈತ್ಯ ಕಾರ್ಮಿಕ ನಾಯಕರಾಗಿ ಬೆಳೆದದ್ದು, ಜಯಂಟ್ ಕಿಲ್ಲರ್ ಎನಿಸಿ ಲೋಕಸಬೆ ಪ್ರವೇಶಿಸಿದ್ದು, ಎಮರ್ಜೆನ್ಸಿಯ ಕಾಲದಲ್ಲಿ ಡೈನಮೈಟ್ ಒಡನೆ ಸರಸವಾಡಿದ್ದು, ಐತಿಹಾಸಿಕ ರೈಲ್ ಸ್ಟ್ರೈಕ್ ಅನ್ನು ಸಂಘಟಿಸಿದ್ದು ಇದು ಜಾರ್ಜ್ ಫರ್ನಾಂಡೀಸ್ರ ರಾಜಕೀಯ ಬದುಕಿನ ಉತ್ತುಂಗ ಮತ್ತು ಒಂದು ಮುಖ ಅಷ್ಟೆ. ಜಾರ್ಜ್ ಲೋಹಿಯಾ, ಜೆಪಿ. ಲಿಮಯೆ ನಂತರ ಈ ದೇಶ ಕಂಡ ಅತ್ಯುನ್ನತ ಸಮಾಜವಾದಿ ನಾಯಕರು ಅನ್ನುವವರಿದ್ದಾರೆ. ಜಾರ್ಜ್ ಎಲ್ಲೂ ಸಹ ಹೆಸರು ಕೆಡಿಸಿಕೊಳ್ಳಲಿಲ್ಲ. ಇವತ್ತಿಗೂ ಅವರು ಒಂದು ರೂಪಾಯಿ ತಿಂದರು ಎಂದರೆ ನಂಬುವವರು ಬಹಳ ವಿರಳ. ಹಾಗಿದೆ ಅವರ ಇಮೇಜ್. ಆದರೆ ಎಮರ್ಜೆನ್ಸಿಯ ನಂತರ ಜಾರ್ಜ್ ಫರ್ನಾಂಡೀಸ್ ರಾಜಕೀಯವಾಗಿ ಅಧಿಕಾರವನ್ನು ಪಡೆದರಾದರೂ ಒಂದೊಂದೇ ಮೆಟ್ಟಿಲನ್ನು ಇಳಿಯುತ್ತಾ ಸಾಗಿದರು. ಮುರಾರ್ಜಿಯವರ ಕ್ಯಾಬಿನೆಟ್ನಲ್ಲಿ ಇಂಡಸ್ಟ್ರೀಸ್ ಮನಿಸ್ಟರಾದವರು ಕೋಕಾ ಕೋಲಾ ಮತ್ತು ಐಬಿಎಂ ಅನ್ನು ದೇಶದಿಂದ ಓಡಿಸಿದರು, ಮುರಾರ್ಜಿಯವರ ಸರ್ಕಾರ ಪತನದಂಚಿಗೆ ಬಂದಾಗ, ಲೋಕಸಭೆಯಲ್ಲಿ ಮುರಾರ್ಜಿಯವರ ಪರವಾಗಿ ಅಮೋಘವಾದ ಭಾಷಣ ಮಾಡಿ ಮರುದಿನವೇ ಚರಣ್ಸಿಂಗರ ಕ್ಯಾಂಪಿಗೆ ಹಾರಿಬಿಟ್ಟರು. ಇದು ಶಾಶ್ವತವಾಗಿ ಜಾರ್ಜ್ರನ್ನು ರಾಜಕೀಯ ವಲಯದಲ್ಲಿ ನಂಬಿಕೆಗರ್ಹವಲ್ಲದವರೆಂದು ಮುದ್ರೆ ಬೀಳುವಂತಾಯಿತು. ನಂತರ ವಿಪಿ ಸಿಂಗರ ಸರ್ಕಾರದಲ್ಲೂ ಮಂತ್ರಿಯಾದರು. ನಂತರ ಸಮಾಜವಾದಿ ಜಾರ್ಜ್ ಫರ್ನಾಂಡೀಸ್ ಬಿಜೆಪಿಯನ್ನು ಕೂಡಿಕೊಂಡರು! ಇದು ಅವರನ್ನು ಒಬ್ಬ ರಾಜಕೀಯ ಅವಕಾಶವಾದಿಯಾಗಿ ನಗ್ನಗೊಳಿಸಿತ್ತು. ನಂತರ ವಾಜಪೇಯಿ ಸರ್ಕಾರದಲ್ಲಿ ರಕ್ಷಣಾ ಸಚಿವರಾದರು. ಅಲ್ಲಿಯೂ ಅನೇಕ ವಿವಾದಗಳಿಗೆ ಗ್ರಾಸವಾದರು. ತೆಹೆಲ್ಕಾ ಹಗರಣ, ಕಾರ್ಗಿಲ್ ಶವಪೆಟ್ಟಿಗೆ ಹಗರಣ, ಬರಾಕ್ ಮಿಸೈಲ್ ಹಗರಣ ಹೀಗೆ ಸಾಲು ಸಾಲು ಹಗರಣಗಳಲ್ಲಿ ಇವರ ಹೆಸರು ಕೇಳಿ ಬಂತು. ಆದರೆ ಯಾವ ಆಪಾದನೆಗಳೂ ನಿಲ್ಲಲಿಲ್ಲ, ಹಾಕಲ್ಪಟ್ಟ ಪ್ರತಿ ಕಮಿಟಿಯೂ ಅವರನ್ನು ನಿರ್ದೋಷಿಯೆಂದು ಘೋಷಿಸಿತಾದರೂ, ಅವರು ಮೊದಲಿನ ಗತ್ತನ್ನು ಕಳೆದುಕೊಂಡಿದ್ದರು. 2009ರಲ್ಲಿ ಎಷ್ಟೇ ಬೇಡವೆಂದರೂ, ಯಾರ ಮಾತೂ ಕೇಳದೆ, ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತರು. ಆಗ ಅವರ ಸುತ್ತಲಿದ್ದವರು ಅವರನ್ನು ದುರಪಯೋಗ ಪಡಿಸಿಕೊಂಡದ್ದು ವಾಸ್ತವವೇ. ಆ ಚುನಾವಣೆಯಲ್ಲಿ ದಯನೀಯವಾಗಿ ಸೋತರು. ನಂತರ ಪಕ್ಷದೊಂದಿಗೆ ರಾಜಿಯಾಗಿ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಜಾರ್ಜ್ ಫರ್ನಾಂಡೀಸ್ ಭ್ರಷ್ಟರಾಗಿದ್ದರಾ? ಇಲ್ಲವೆನ್ನುವುದು ಬಹುತೇಕರ ಉತ್ತರ. ಹಾಗಿದ್ದರೆ ಅಷ್ಟು ಆಸ್ತಿ ಎಲ್ಲಿಂದ ಬಂತು? ಜಾರ್ಜ್ ಬೆಂಗಳೂರಿನ ಆಸ್ತಿ ಅವರ ತಾಯಿಯಿಂದ ಬಂದ ಕೌಟುಂಬಿಕ ಆಸ್ತಿ, ಇನ್ನು ದೆಹಲಿಯಲ್ಲಿರುವ ಅವರ ಎರಡು ಮನೆಗಳು ಅವರವಲ್ಲ, ಮುಂಬೈ ಟ್ರೇಡ್ ಯೂನಿಯನ್ಗಳು ತಮ್ಮ ನಾಯಕನಿಗೆ ಕೊಡಮಾಡಿದ ಉಡುಗೊರೆಗಳವು. ಇನ್ನು ಮಂಗಳುರಿನ ಮನೆ ಅವರ ತಂದೆಯದ್ದು. ಹಾಗಾದರೆ ಜಾರ್ಜ್ ಫರ್ನಾಂಡೀಸ್ ಬಿಂಬಿತವಾಗಿರುವಂತೆ ಬರಿಗೈಯ ಫಕೀರರಾ? ಹೌದು ಎನ್ನುವುದೇ ನಿಜವಾದರೆ ಅಪಾರ ಆಸ್ತಿಯ ಗುಮಾನಿ, ಈ ಕಚ್ಚಾಟ, ಇವೆಲ್ಲಕ್ಕೂ ಉತ್ತರ. ಬಹುಶಃ ಈ ಪ್ರಶ್ನೆಗಳಿಗೆ ಉತ್ತರಗಳು ಸಿಗಲಾರವು.
ಜಾರ್ಜ್ ಫರ್ನಾಂಡೀಸ್ ಹಣಕಾಸಿನ ವಿಷಯವಾಗಿ ಭ್ರಷ್ಟರಾಗದೇ ಇದ್ದಿರಬಹುದು, ಆಗಿರಬಹುದು. ಆದರೆ ಒಂದಂತೂ ನಿಜ ಅವರು ಬರಬರುತ್ತಾ ತಮ್ಮ past gloryಯ ಪ್ರಭಾವಳಿಯಲ್ಲಿ ಬದುಕುತ್ತಿದ್ದರು. ಸೈದ್ಧಾಂತಿಕವಾಗಿ ಅನೇಕ ರಾಜಿಗಳನ್ನು ಮಾಡಿಕೊಂಡಿದ್ದರು. ಅಡ್ವಾಣಿ ವಾಜಪೇಯಿಯವರ ದ್ವಿಸದಸ್ಯತ್ವವನ್ನು ಪ್ರಶ್ನಿಸಿದ ಅದೇ ಜಾರ್ಜ್ ಬಿಜೆಪಿಯಂಗಳದ troubleshooter ಆದರು. ಸಮಾಜವಾದಿಯಾಗಿ coco cola ಮತ್ತು IBMಗಳನ್ನು, ಭಾರತದಿಂದ ಓಡಿಸಿದ್ದ ಅದೇ ಜಾರ್ಜ್, ಎನ್ದಿಎ ಸರ್ಕಾರದ ಅತಿ ಉದಾರ ಆರ್ಥಿಕ ನೀತಿಯನ್ನು ಬೆಂಬಲಿಸಿದರು. nuclear disarmament ಬಗ್ಗೆ ಅರಚಾಡುತ್ತಿದ್ದ ಅದೇ ಜಾರ್ಜ್ ೧೯೯೮ರ ಪೋಖ್ರಾನ್ ಅಣು ಪರೀಕ್ಷೆಗೆ ಅಂದಿನ ರಕ್ಷಣಾ ಸಚಿವರಾಗಿ ನಾಯಕತ್ವ ವಹಿಸಿದ್ದರು. ಮಾತೆತ್ತಿದರೆ ೧೯೮೪ ಸಿಖ್ ನರಮೇಧವನ್ನು ಮುಂದುಮಾಡಿ ಕಾಂಗ್ರೆಸ್ ಅನ್ನು ಹೀಯಾಳಿಸುತ್ತಿದ್ದ ಅದೇ ಸಮಾಜವಾದಿ ಜಾರ್ಜ್ ಗೋಧ್ರ ನರಮೇಧವನ್ನು ಅದೇ ರೀತಿ ಸಂಸತ್ತಿನಲ್ಲಿ ತೀರ in-sensitive ಆಗಿ ಸಮರ್ಥಿಸಿದ್ದರು.ಒಬ್ಬ ಮನುಷ್ಯ ಮಾಗಿದಂತೆಲ್ಲ ವಿವೇಕ ಬೆಳೆಯುತ್ತದೆ. ಈ ವಿವೇಕ ಆತನ ಅನೇಕ ಅಭಿಪ್ರಾಯಗಳನ್ನು ಬದಲಿಸಬಹುದು. ಅದು ಒಳ್ಳೆಯ ಚಿಹ್ನೆಯೇ. ಆದರೆ ಜಾರ್ಜ್ ಫರ್ನಾಂಡೀಸ್ರ ವಿಷಯದಲ್ಲಿ ಎಲ್ಲೂ ಇದು ಅನುಭವ, ವಿವೇಕ ಆಗಿರಲಿಲ್ಲ, atleast ಹಾಗೆ ಕಾಣಲಿಲ್ಲ. ಬರಬರುತ್ತ ಅವರೊಬ್ಬ ಸಂಪೂರ್ಣ amoral ಅವಕಾಶವಾದಿ ರಾಜಕಾರಣಿಯಾಗಿದ್ದರು. ಎಲ್ಲದರ ವಿಚಾರದಲ್ಲೂ ಅವರು ರಾಜಿಯಾಗಿದ್ದರು. ನಂತರದ ಜಾರ್ಜ್ ಫರ್ನಾಂಡೀಸ್ ಅವರ ದೈತ್ಯಾಕಾರದ ಒಂದು ಪೇಲವ ನೆರಳಷ್ಟೆ.

ಜಾರ್ಜ್ರ ರಾಜಕೀಯ ಜೀವನ ನಮ್ಮ ದೇಶದ ಸಮಾಜವಾದಿ ಚಳುವಳಿಯ ಚರಮಗೀತೆಯಾಗಿದ್ದು, ಸ್ವಾತಂತ್ರೋತ್ತರ ರಾಜಕಾರಣದ ಅಧಃಪತನದ ದ್ಯೋತಕ. ಮೀಡಿಯಾ ಈಗಲಾದರೂ ಇವೆಲ್ಲವುಗಳ ಬಗ್ಗೆ ಒಂದು ನಿಸ್ಪಕ್ಷಪಾತ ಚರ್ಚೆ ನಡೆಸಬೇಕು. ಅದು ಅದರ ಕರ್ತವ್ಯ ಕೂಡ. ಆದರೆ ಇಂದಿನ ಮೀಡಿಯಾ ಅವರನ್ನು safe ಆಗಿ ಕಳಿಸಿಕೊಟ್ಟುಬಿಡುವ ಜರೂರಿನಲ್ಲಿದೆ. ಇದು ನಿಜಕ್ಕೂ ದುರ್ದೈವ.

ಡೀಮ್ಡ್ ವಿವಿಗಳು ಡೂಮ್ಡ್ ಆದಾಗ....  

Posted by bharadwaja in

ಒಟ್ಟು ದೇಶದಲ್ಲಿರುವ 130 ಡೀಮ್ಡ್ ವಿವಿಗಳ ಪೈಕಿ, ಮೂಲಭೂತ ಸೌಕರ್ಯವಿಲ್ಲದ 44 ವಿವಿಗಳ ಮಾನ್ಯತೆ ರದ್ದು - ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್

ಅಸಲಿಗೆ ದೇಶದಲ್ಲಿ ಡೀಮ್ಡ್ ವಿವಿಗಳ ಅಗತ್ಯವಾದರೂ ಏನು? ಈ ಒಂದು ವ್ಯವಸ್ಥೆಯನ್ನು ಕಿತ್ತೊಗೆಯಬೇಕು. - ಕಪಿಲ್ ಸಿಬಲ್, ಕೇಂದ್ರ ಮಾನವ ಸಂಪನ್ಮೂಲ ಸಚಿವ
ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸದ್ಯ ಇದು ಬಿಸಿಬಿಸಿಯ ಚರ್ಚೆಗೆ ಗ್ರಾಸವಾಗಿದೆ. ಈ ಅಫಿಡವಿಟ್ಟು ಮತ್ತು ಹೇಳಿಕೆಗೆ ಒಂದು ಸಣ್ಣ ಹಿನ್ನಲೆಯಿದೆ. ಈಗ್ಗೆ ಒಂದು ವರ್ಷದ ಕೆಳಗೆ ಟೈಮ್ಸ್ ನೌ ಎಂಬ ಇಂಗ್ಲೀಷ್ ಸುದ್ದಿ ವಾಹಿನಿಯೊಂದು ತಮಿಳುನಾಡಿನ ಬಾಲಾಜಿ ವೈದ್ಯಕೀಯ ಕಾಲೇಜು ಮತ್ತು ಶ್ರೀರಾಮಚಂದ್ರ ವಿವಿ ಎಂಬ ಎರಡು ಸ್ವಾಯತ್ತ ವಿವಿಗಳಿಗೆ ಭೇಟಿ ನೀಡಿ, ಸೀಟು ಕೇಳುವವರಂತೆ ನಟಿಸಿದ್ದರು. ಅಲ್ಲಿನ ಭ್ರಮಾಂಡ ಭ್ರಷ್ಟಾಚಾರವನ್ನು ಹಿಡನ್ ಕ್ಯಾಮೆರಾ ಬಳಸಿ ಹೊರಜಗತ್ತಿಗೆ ಸಾರಿದ್ದರು. ಅದು ಆಗ ದೊಡ್ಡ ಸುದ್ದಿಯಾಗಿ ಗಲಾಟೆಯಾಯಿತು. ಆ ಕೂಡಲೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಕುರಿತು ತನಿಖೆ ನಡೆಸಲು ಪಿ.ಬಿ.ಟಂಡನ್ ಅವರ ನೇತೃತ್ವದ ಸಮಿತಿ ರಚಿಸಿತು. ಯುಜಿಸಿ ಕೂಡ ಒಂದು ಸಮಿತಿ ರಚಿಸಿ ಸ್ವಾಯತ್ತತೆ ಪಡೆದ ಎಲ್ಲ ವಿವಿಗಳ ಮರುಮೌಲ್ಯಮಾಪನಕ್ಕೆ ತೊಡಗಿತು. ಈಗ ಈ ಎರಡೂ ವರದಿಗಳು ಹೊರಬಿದ್ದಿವೆ. ಯುಜಿಸಿ ಮರುಮೌಲ್ಯಮಾಪನ ನಡೆಸಿದಾಗ ಡೀಮ್ಡ್ ವಿವಿಗಳಾಗಿರಲಿಕ್ಕೆ ಅಯೋಗ್ಯವೆನಿಸಿದ 44 ವಿವಿಗಳನ್ನು ಗುರುತಿಸಿ ಅವುಗಳ ಮಾನ್ಯತೆ ರದ್ದತಿಗೆ ಶಿಫಾರಸು ಮಾಡಿದೆ. ಅದರನ್ವಯವೇ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವುದು.

ಇನ್ನು ಪಿ.ಬಿ.ಟಂಡನ್ ವರದಿ ಇಂತಹ ವಿವಿಗಳಲ್ಲಿ ನಡೆಯುತ್ತಿರುವ ಭ್ರಮಾಂಡ ಭ್ರಷ್ಟಾಚಾರ, ಶಿಕ್ಷಣದ ವ್ಯಾಪಾರೀಕರಣ ಮತ್ತು ಈ ಸಂಸ್ಥೆಗಳ ಮೇಲೆ ಸಕರ್ಾರಕ್ಕೆ ಯಾವುದೇ ಹಿಡಿತವಿಲ್ಲದಿರುವುದು ಈ ಎಲ್ಲದರ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದ್ದು, ಅವರು ಡೀಮ್ಡ್ ವಿವಿಗಳ ಪರಿಕಲ್ಪನೆಯನ್ನೇ ವಿರೋಧಿಸಿದ್ದಾರೆನ್ನಲಾಗಿದೆ. ಅದೇ ಕಪಿಲ್ ಸಿಬಲ್ ಬಾಯಲ್ಲಿ ಮುತ್ತಾಗಿ ಹೊರಹೊಮ್ಮಿರಿವುದು. ಅಸಲಿಗೆ ಡೀಮ್ಡ್ ವಿವಿಗಳೆಂದರೆ ಏನು? ಇದು ಏಕೆ, ಯಾವಾಗ ಶುರುವಾಯಿತು ಅಂತ ಕೆದಕುತ್ತಾ ಹೋದರೆ, ನಮಗೆ ಗೋಚರಿಸುವುದಿದು. ಸ್ವಾತಂತ್ರ್ಯಾ ನಂತರ ಭಾರತದ ಉನ್ನತ ಶಿಕ್ಷಣ ರಂಗದ
ಏಳ್ಗೆಗಾಗಿ 1958ರಲ್ಲಿ ಈ ಡೀಮ್ಡ್ ವಿವಿಗಳೆಂಬ ಪರಿಕಲ್ಪನೆಯನ್ನು ಪ್ರಾರಂಭಿಸಲಾಯಿತು. ಭಾರತದ ಮೊಟ್ಟಮೊದಲ ಸ್ವಾಯತ್ತ ವಿವಿ ನಮ್ಮ ಹೆಮ್ಮೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್. ನಂತರ ಹೀಗೆ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸೇವಾ ಮನೋಭಾವದ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸ್ವಾಯತ್ತತೆ ನೀಡಲಾಗುತ್ತಿತ್ತು. ಅಂದರೆ In only rare cases deemed university status was given – only to the institutes of excellence. ಆದರೆ ಈಗೇನಾಗಿದೆ? ಕಳೆದ ಯುಪಿಎ-1ರ ಅವಧಿಯೊಂದರಲ್ಲೇ ಅರ್ಜುನ ಸಿಂಗರು 85 ಸಂಸ್ಥೆಗಳಿಗೆ ಡೀಮ್ಡ್ ವಿವಿ ಪಟ್ಟ ಕಟ್ಟಿದ್ದಾರೆ. ಇದಕ್ಕೆ ಒಂದು ಮಾನದಂಡವಿದೆಯೇ? ಬಹುಶಃ ಅರ್ಜುನ ಸಿಂಗರಿಗೂ ತಿಳಿದಿಲ್ಲ ಅಂತ ಕಾಣುತ್ತೆ! ಈ ವಿಷಯವಾಗಿ ಭಾರೀ ಭ್ರಷ್ಟಾಚಾರ ನಡೆದಿರುವ ಆರೋಪವಿದೆ. ಅಷ್ಟೇ ಅಲ್ಲದೆ ರಾಜಕೀಯ ನಾಯಕರ ಅನೇಕ ಶಿಕ್ಷಣ ಸಂಸ್ಥೆಗಳು ಬೆಳಗಾಗುವುದರೊಳಗಾಗಿ ಡೀಮ್ಡ್ ವಿವಿಗಳಾಗಿಬಿಟ್ಟಿವೆ. ಸಮಸ್ಯೆ ಬಂದಿರುವುದೇ ಇಲ್ಲಿ.

ಒಂದು ಶಿಕ್ಷಣ ಸಂಸ್ಥೆಯನ್ನು ಡೀಮ್ಡ್ ವಿವಿ ಎಂದು ಗುರುತಿಸಿದರೆ, ಅದು ಇನ್ನು ಮುಂದೆ ತನ್ನದೇ ಕೋರ್ಸ್ಗಳನ್ನು ನಡೆಸಬಹುದು, ತನ್ನದೇ ಸಿಲಬಸ್ ರೂಪಿಸಿಕೊಳ್ಳಬಹುದು, ಮತ್ತು ತನ್ನದೇ ಡಿಗ್ರಿಗಳನ್ನೂ ಕೂಡ ನೀಡಬಹುದು. ಒಟ್ಟಾಗಿ ಒಂದು ವಿವಿಯಂತೆಯೇ ಇದೂ ಸಹ ಕಾರ್ಯ ನಿರ್ವಹಿಸುತ್ತದೆ. ಆದರೆ ಯುಜಿಸಿಯಿಂದ ಈ ಸಂಸ್ಥೆಗಳಿಗೆ ಯಾವುದೇ ಧನ ಸಹಾಯ ಬರುವುದಿಲ್ಲ. ಆದ್ದರಿಂದ ಇಲ್ಲಿ ಫೀಸ್ ವಿವಿಗಳಿಗಿಂತಲೂ ಎಷ್ಟೋ ಪಟ್ಟು ಹೆಚ್ಚಿರುತ್ತದೆ. ಆದ್ದರಿಂದ ಬಡ ಹುಡುಗರು ಇಲ್ಲಿ ಸೀಟು ಪಡೆಯುವುದು ಕನಸಿನ ಮಾತೇ ಸರಿ. ಸಮಸ್ಯೆಯೆಂದರೆ ಭಾರತದಲ್ಲಿ ಒಂದು ಉನ್ನತ ಉದ್ದೇಶಕ್ಕಾಗಿ ಶುರುವಾದ ಈ ಡೀಮ್ಡ್ ವಿವಿಗಳು ಇಂದು ಪುಡಿ ರಾಜಕಾರಣಿಗಳ ಮತ್ತು ಶಿಕ್ಷಣೋದ್ಯಮಿಗಳ ಕಿಸೆಯಲ್ಲಿವೆ. ಈ ವ್ಯವಸ್ಥೆಯ ಮೂಲ ಸಮಸ್ಯೆಯೆಂದರೆ ಒಂದು ಬಾರಿ ಡೀಮ್ಡ್ ವಿವಿ ಸ್ಥಾನಮಾನವನ್ನು ನೀಡಿದ ಮೇಲೆ ಈ ಸಂಸ್ಥೆಗಳ ಆಡಳಿತಾತ್ಮಕ ವಿಚಾರಗಳಲ್ಲಿ ಸರ್ಕಾರಕ್ಕೆ ನಯಾಪೈಸೆಯಷ್ಟೂ ಹಿಡಿತವಿಲ್ಲದಿರುವುದು. ಡೀಮ್ಡ್ ವಿವಿಗಳನ್ನೇ ಕಿತ್ತೊಗೆಯುವ ಬದಲಿಗೆ ವ್ಯವಸ್ಥೆಯಲ್ಲಿನ ಈ ಲೋಪ್ಹೋಲನ್ನು ಸರಿಪಡಿಸಿದರೂ ಸಾಕು. ಇಂತಹ ಡೀಮ್ಡ್ ವಿವಿಗಳ ಆಡಳಿತ ಮಂಡಳಿಗಳು ಫ್ಯಾಮಿಲಿ ಟ್ರಸ್ಟ್ಗಳಾಗದಂತೆ, ಜಾಗ್ರತೆ ವಹಿಸಬೇಕು. ಈ ಮಂಡಳಿಯಲ್ಲಿ ಶೇ.50ರಷ್ಟು ಮಂದಿ ಸರ್ಕಾರದ ಪ್ರತಿನಿಧಿಗಳಾಗಿರಬೇಕು. ಆಗ ಸರ್ಕಾರಕ್ಕೂ ಒಂದು ಲಂಗು-ಲಗಾಮು ದೊರೆಯುತ್ತದೆ. ಒಟ್ಟಿನಲ್ಲಿ ಡೀಮ್ಡ್ ವಿವಿಗಳ ಹೆಸರಿನಲ್ಲಿ ನಡೆಯುತ್ತಿರುವ ಶಿಕ್ಷಣದ ವ್ಯಾಪಾರೀಕರಣ ನಿಲ್ಲಬೇಕು.

ಇನ್ನು 44 ಡೀಮ್ಡ್ ವಿವಿಗಳ ಮಾನ್ಯತೆ ರದ್ದು. ಅದರಲ್ಲಿ ಜೈನ್ ಮತ್ತು ಕ್ರೈಸ್ಟ್ ಸಂಸ್ಥೆಗಳೂ ಸೇರಿದಂತೆ ನಮ್ಮ ರಾಜ್ಯದ 6 ಸಂಸ್ಥೆಗಳೂ ಸಹ ಇವೆ. ಈಗ ಇವುಗಳ ಮಾನ್ಯತೆ ರದ್ದಾದರೆ ಈ ಸಂಸ್ಥೆಗಳಲ್ಲಿ ಓದುತ್ತಿರುವ ಸುಮಾರು 2 ಲಕ್ಷ ವಿದ್ಯಾರ್ಥಿಗಳ ಗತಿಯೇನು? ಇದು ಮಿಲಿಯನ್ ಡಾಲರ್ ಪ್ರಶ್ನೆ. ಈ ಸಂಸ್ಥೆಗಳ ಡೀಮ್ಡ್ ವಿವಿ ಪಟ್ಟ ರದ್ದಾದ ಕೂಡಲೇ ಈ ಸಂಸ್ಥೆಗಳು ಸ್ಥಳೀಯ ವಿವಿಗಳಡಿಯಲ್ಲಿ ಬರುವುದರಿಂದ ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂಬುದು ಕೇಂದ್ರ ಸರ್ಕಾರದ ಸಮಜಾಯಿಷಿ. ಆದರೆ ಇದು ಅಷ್ಟು ಸುಲಭವೇ?

ಟೈಮ್ಸ್ ನೌ ಸುದ್ದಿ ವಾಹಿನಿಯವರ ಒಂದು ಸ್ಟಿಂಗ್ ಆಪರೇಷನ್ನಿಂದಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಒಂದು ಒಳ್ಳೆಯ ಚರ್ಚೆಗೆ ಮತ್ತು ಅತಿ ವಿರಳ ಎನ್ನಿಸುವಂತೆ ಕ್ರಮಕ್ಕೆ ನಾಂದಿ ಹಾಡಿದೆ. ಒಳ್ಳೆಯದೇ.

ವಿದ್ಯಾ ದೇಗುಲಗಳು ಹೊಲಸೆದ್ದು ಹೋದಾಗ.........  

Posted by bharadwaja in

ಮೊದಲಿಗೆ ಈ ಕಾರು ಕಂಪೆನಿಗಳವರು, ಕೈ ಸಾಲ ಮನೆ ಸಾಲ ಕೊಡುವವರು ಈ ಸಾಫ್ಟ್ವೇರ್ ಇಂಜಿನಿಯರ್ಗಳ ಹಿಂದೆ ಬೀಳುತ್ತಿದ್ದರು. ಆದರೆ 2008ರ ಜಾಗತಿಕ ಆರ್ಥಿಕ ಹಿಂಜರಿತದ ಏಟು ಯಾವ ಪಾಟಿ ಬಿದ್ದಿದೆಯೆಂದರೆ ಅವೇ ಬ್ಯಾಂಕುಗಳು ಈಗ ಸಾಲ ವಸೂಲಾತಿಗಾಗಿ ಅವರ ಬೆನ್ನು ಬಿದ್ದಿದ್ದು, ಅವರು ತಲೆ ತಪ್ಪಿಸಿಕೊಂಡು ತಿರುಗುತ್ತಿದ್ದಾರೆ. ಈಗ ಟ್ರೆಂಡ್ ಬದಲಾಗಿದೆ. ಈಗ ಈ ಕಾರ್ ಕಂಪೆನಿಗಳು, ಸಾಲ ನೀಡುವವರು ಯುಜಿಸಿ ಪ್ರೊಫೆಸರ್ಗಳ ಮನೆ ಅರಸಿ ಹೋಗಿ ದುಂಬಾಲು ಬೀಳತೊಡಗಿದ್ದಾರೆ! ಹಣವೆಲ್ಲಿ ಕೂಡುತ್ತಿದೆಯೋ ಅಲ್ಲೇ ಇವರು. ಹೌದು ಈಗಿನ ಪರಿಸ್ಥಿತಿಯಲ್ಲಿ ಅತಿಹೆಚ್ಚು ಸಂಬಳ ಪಡೆಯುತ್ತಿರುವವರು, ಅತ್ಯಂತ ಸುಖಿಗಳು ಅಂದರೆ ನಮ್ಮ ಯುಜಿಸಿ ಪ್ರೊಫೆಸರ್ಗಳೇ! ಮೊನ್ನೆ ಯುಜಿಸಿ ಶಿಫಾರಸನ್ನು ಶಿರಸಾ ವಹಿಸಿದ ರಾಜ್ಯ ಸರ್ಕಾರ ಯುಜಿಸಿ ಪ್ರೊಫೆಸರ್ಗಳಿಗೆ ಶೇ.37ರಷ್ಟು ತುಟ್ಟಿಭತ್ಯೆ ನೀಡಿದ್ದು, ಈಗ ಇವರ ಲೈಫ್ಸ್ಟೈಲ್ ನಿಜಕ್ಕೂ ಅಂಬರಕ್ಕಮಟಿ ಕೂತಿದೆ. ಈಗಿನ ಸ್ಕೇಲ್ನಂತೆ ಒಬ್ಬ ಹೊಸಬ ಯುಜಿಸಿ ಶಿಕ್ಷಕನಾದಾಗ ಆತನ ಓಪನಿಂಗ್ ಸಾಲರಿ ಎಷ್ಟು ಗೊತ್ತೆ? ಕೇವಲ 32,000 ರೂ.ಗಳು! ಇನ್ನು ಈಗಿರುವ ಹಿರಿ ತಲೆಗಳಿಗಂತೂ ಸುಮಾರು 75 ಸಾವಿರಗಳವರೆಗೂ ಇದೆ ಸಂಬಳ, ತಿಂಗಳಿಗೆ! ಇದಲ್ಲದೆ ಇವರಿಗೆ ಇದರೊಡನೆಯೇ ಮತ್ತೆರಡು ಸಿಹಿ ಸುದ್ದಿಗಳಿವೆ, ಒಂದು ಈ ತುಟ್ಟಿಭತ್ಯೆಯನ್ನು 2006 ಜನವರಿ 1ರಿಂದಲೇ ಪೂರ್ವಾನ್ವಯ ವಾಗುವಂತೆ ಜಾರಿಗೆ ತರಲಾಗುತ್ತಿದ್ದು, 51 ತಿಂಗಳ ಅರಿಯರ್ಸ್ ಇವರ ಕೈ ಸೇರಲಿದೆ. ಹಲವಾರು ಮಂದಿಗೆ ಇದು ಲಕ್ಷಗಳ ಮಾತೇ ಸರಿ. ಇನ್ನು ಈ ಶಿಕ್ಷಕರ ನಿವೃತ್ತಿ ವಯಸ್ಸನ್ನು 60ರಿಂದ ಏಕದಂ 62ಕ್ಕೆ ಹೆಚ್ಚಿಸಲಾಗಿದೆ. ಯುಜಿಸಿ ಶಿಕ್ಷಕರು, ಪ್ರೊಫೆಸರ್ಗಳಂತೂ ಫುಲ್ ಖುಷ್! ಸಾಧಾರಣವಾಗಿ ಖಾಸಗೀ ಕ್ಷೆತ್ರದಲ್ಲಿ ಸಂಬಳ ಹೆಚ್ಚುತ್ತಾ ಹೋದಂತೆ, ಅದಕ್ಕೆ ತಕ್ಕಂತೆ ಕೆಲಸವೂ ಮತ್ತು ಮುಖ್ಯವಾಗಿ ಜವಾಬ್ದಾರಿಯೂ ಹೆಚ್ಚುತ್ತಾ ಹೋಗುತ್ತದೆ. ಆದರೆ ಸರ್ಕಾರೀ ಕೆಲಸಗಳಲ್ಲಿ ಅದನ್ನು ನಿರೀಕ್ಷಿಸುವುದು ನಮ್ಮ ತಪ್ಪಾದೀತೇನೋ.


ಇಲ್ಲಿ ಪ್ರತಿ ಹಂತದಲ್ಲೂ ಹಲವಾರು ಸಮಸ್ಯೆಗಳಿವೆ, ತಳಮಟ್ಟದಿಂದ ಉಛ್ರಾಯದವರೆಗೆ. ಎಲ್ಲಿಂದ ಶುರುವಿಟ್ಟುಕೊಳ್ಳುವುದೆಂಬುದೇ ಗೊಂದಲ ಅಷ್ಟು ಸಮಸ್ಯೆಗಳು! ನಮ್ಮ ಪರೀಕ್ಷಕ ದೃಷ್ಟಿಯನ್ನು ಕರ್ನಾಟಕಕೆ ಸೀಮಿತಗೊಳಿಸಿಕೊಳ್ಳೋಣ. ಇಲ್ಲಿನ ವಿವಿಗಳಲ್ಲಿರುವ ಸಮಸ್ಯೆಗಳೇ ಸಾಕು ಬೇಕಾಗಿರುವಾಗ ಇತರೆ ರಾಜ್ಯಗಳ ವಿವಿಗಳಲ್ಲಿ ಸ್ಟೂಡೆಂಟ್ ಯೂನಿಯನ್ಗಳು, ರಾಜಕಾರಣ ಕೂಡ ಇಲ್ಲಿನ ಎಲ್ಲಾ ನೂರೆಂಟು ಸಮಸ್ಯೆಗಳೊಂದಿಗೆ ಸೇರಿಕೊಂಡು ಪರಿಸ್ಥಿತಿಯನ್ನು ಮತ್ತಷ್ಟು ಕಗ್ಗಂಟಾಗಿಸಿಬಿಟ್ಟಿದೆ. ವಿವಿಗಳಲ್ಲಿ ಮೊದಲ ಸಮಸ್ಯೆಯೇ ಶಿಕ್ಷಕರು ಮತ್ತು ಪ್ರೊಫೆಸರ್ಗಳದ್ದು, ಇಲ್ಲೂ ಅತ್ಯುತ್ತಮ ಎನ್ನುವಂತಹ ಕಮಿಟೆಡ್ ಪ್ರೊಫೆಸರ್ಗಳಿದ್ದಾರೆ ನಿಜ, ಆದರೆ ಅವರು ಇಂದು ಅಪುರೂಪದ ಅಪವಾದ ಅಷ್ಟೆ! ಇಂದು ಯೂನಿವಸರ್ಿಟಿ ಶಿಕ್ಷಣವೆಂದರೆ ಅತ್ಯಂತ ಯಾಂತ್ರಿಕವಾಗಿಬಿಟ್ಟಿದೆ. ಇರೋದು ಕಮ್ಮಿ ಹುಡುಗರಾದರೂ ಅವರಿಗೂ ಪ್ರೊಫೆಸರ್ಗಳಿಗೂ ನಡುವೆ ಒಂದು ಸೌಹಾರ್ದಯುತ ಸಂಬಂಧವೇ ಇಲ್ಲ. ಈ ವಿಷಯದಲ್ಲಿ ಪ್ರೈಮರಿ ಸ್ಕೂಲ್ ಮೇಷ್ಟ್ರುಗಳೇ ಎಷ್ಟೋ ವಾಸಿ! ಅಂಥದೊಂದು ಸಂಬಂಧವನ್ನು ಈಗ ಹುಡುಗರೂ ಬೆಳೆಸಿಕೊಳ್ಳುವುದಿಲ್ಲ, ಪ್ರೊಫೆಸರ್ಗಳೂ ಬಯಸುವುದಿಲ್ಲ. ನಮ್ಮಲ್ಲಿ ಲೋವರ್ ಎಜುಕೇಷನ್ ಮಟ್ಟದಿಂದಲೂ marksu, ಪರೀಕ್ಷೆ ಈ ದೃಷ್ಟಿಕೋನದಲ್ಲೇ ಹುಡುಗರನ್ನು ರೂಪಿಸುತ್ತಾ ಬಂದು ಬಿಟ್ಟದ್ದೇವಾದ್ದರಿಂದ ಉನ್ನತ ಶಿಕ್ಷಣದಲ್ಲೂ ಇಂದು ಈ ಪಿಡುಗು ಮುಂದುವರೆದಿದೆ. ಹಾಗಾಗಿ ವಿದ್ಯೆ ಎನ್ನುವುದು ಒಂದು ಸರಕಾಗಿ ಬಿಡುತ್ತದೆ. ವಿವಿಗಳು ಅಂಗಡಿಯಂತಾಗಿಬಿಡುತ್ತದೆ. ಇದರಿಂದಾಗಿ ನಮ್ಮಲ್ಲಿ ಒಂದು ಜ್ಞಾನದಾಹ ಕೇಂದ್ರಿತವಾದ ಶಿಕ್ಷಣ ವ್ಯವಸ್ಥೆಯಿಲ್ಲ. ಹಾಗಾಗಿ ಸಂಶೋಧನೆ, ಪೇಟೆಂಟು ಎನ್ನುವ ಪದಗಳೆಲ್ಲ ನಾವರಿಯದ ಭಾಷೆಯ ಫಾರಿನ್ ಪದಗಳಾಗಿವೆ.

ನಮ್ಮಲ್ಲಿ ಮತ್ತೊಂದು ಮುಖ್ಯ ಕೊರತೆಯೆಂದರೆ ಅಕಾಡಮಿಕ್ ಡಿಸಿಪ್ಲೀನ್ ಇಲ್ಲದಿರುವುದು. ನಮ್ಮಲ್ಲಿ ಬಹುಪಾಲು ಪ್ರೊಫೆಸರ್ಗಳು ತಿಂಗಳ ಕೊನೆಗೆ ಭರ್ಜರಿ ಸಂಬಳ ಎಣಿಸಿ ಕೊಳ್ಳುತ್ತಾರೆಯೇ ವಿನಃ ಪಾಠ ಮಾಡುವುದಿಲ್ಲ. ಮುಕ್ಕಾಲು ಭಾಗದ ಮಂದಿ ಬೆಳಗ್ಗೆಯೇ ಬಂದು ರಿಜಿಸ್ಟ್ರ್ನಲ್ಲಿ ಒಂದು ಸೈನ್ ಹಾಕಿ, ಒಂದೋ ಎರಡೋ ಕ್ಲಾಸ್ ತೆಗೆದುಕೊಂಡು ನೆಟ್ಟಗೆ ಹೊರನಡೆದು ಬಿಡುತ್ತಾರೆ. ನಂತರ ಅವರು ಯಾರ ಕೈಗೂ ಸಿಗುವುದಿಲ್ಲ. ಈಗ ಈ ತುಟ್ಟಿಭತ್ಯೆಯ ನಂತರ ಯುಜಿಸಿ ಏನೇನೋ ಹೊಸ ಹೊಸ ನಿಯಮಗಳನ್ನು ತಮದಿದೆ ಎನ್ನುವವರಿದ್ದಾರಾದರೂ ಜಡಗೊಮಡ ಈ ವ್ಯವಸ್ಥೆಯನ್ನು ಎಬ್ಬಿಸಬಲ್ಲದು ಎಂಬುದು ಅವರಿಗೇ ಅನುಮಾನ. ಈ ಪ್ರೊಫೆಸರ್ಗಳನ್ನು ಖಾಯಂ ಸರ್ಕಾರೀ ಉದ್ಯೋಗಿಗಳು ಅಂತ ಮಾಡಿರುವುದೇ ಈ ಸಮಸ್ಯೆಗೆ ಕಾರಣ. ಇದನ್ನು ತಪ್ಪಿಸಲು ಒಂದು ಉಪಾಯವಂತೂ ಇದೆ. ಈ ಪ್ರೊಫೆಸರ್ಗಳನ್ನು ಖಾಯಂ ಆಗಿರಸದೆ ಅವರ performance ಆಧಾರಿತವಾಗಿ 3-5 ವರ್ಷಗಳಿಗೆ ಅವರ ಸೇವೆಯನ್ನು ಗುತ್ತಿಗೆ ಪಡೆದಲ್ಲಿ, ಅದರ ನವೀಕರಣದ ಆಸೆಗೋ ಆಗುವುದಿಲ್ಲವೆಂಬ ಭಯಕ್ಕಾದರೂ ಇವರು ಮೈಬಗ್ಗಿಸಿ, ಕೆಲಸ ಮಾಡುವರೋ ನೋಡಬೇಕು. ಇನ್ನು ಮತ್ತೊಂದು ಸಮಸ್ಯೆಯೆಂದರೆ ವಿಭಾಗಗಳ ಮುಖ್ಯಸ್ಥರನ್ನು ರೊಟೇಷನ್ ಆಧಾರವಾಗಿ ಬದಲಾಯಿಸುತ್ತಿರುವುದು. ಇದರಿಂದ departmentಗಳಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಗೌರವವಿಲ್ಲ, ಅದೂ ಒಬ್ಬರ ಅವಧಿ 2 ವರ್ಷ ಮಾತ್ರವಾಗಿರುವುದರಿಂದ ಇವರು ಅದೇನು ವಿಭಾಗವನ್ನು ಉದ್ಧಾರ ಮಾಡಿಯಾರು? ಈ ವ್ಯವಸ್ಥೆ ಹೋಗುವವರೆಗೂ ವಿಭಾಗಗಳು ನೆಟ್ಟಗೆ ನಡೆಯುವುದು ಅನುಮಾನವೇ ಸರಿ!

ಇಂದಿನ ವಿವಿಗಳಲ್ಲಿ ಅಧಿಕೃತವಾಗಿ ರಾಜಕೀಯ ಪಕ್ಷಗಳಿಲ್ಲ ಅಷ್ಟೆ, ಆದರೆ ಭಾರತದ ಪ್ರತಿಯೊಂದು ವಿವಿಯಲ್ಲೂ ರಾಜಕೀಯ ಪಕ್ಷಗಳ ಹಸ್ತಕ್ಷೇಪವಿದೆ. ಅಲ್ಲಿನವರು ಪಕ್ಷನಿಷ್ಠೆಯಂತೆ ಹರಿದು ಹಂಚಿ ಹೋಗಿದ್ದಾರೆ. ಇಂದಿನ ನಮ್ಮ ವಿವಿಗಳನ್ನು ಪಕ್ಷ ರಾಜಕೀಯಕ್ಕಿಂತಲೂ ಕಾಡುತ್ತಿರುವುದು ಅತ್ಯಂತ ಕೆಟ್ಟ ಜಾತಿ ರಾಜಕಾರಣ. ಭವ್ಯ ಭಾರತದ ಎಲ್ಲಾ ವಿವಿಗಳಲ್ಲೂ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿ ಹೀಗೆ ಮೂರು ಹಂತಗಳಲ್ಲಿ ಜಾತೀವಾರು ಗುಂಪುಗಳಿವೆ, ಮತ್ತು ಸಾಧಾರಣವಾಗಿ ಘರ್ಷಣೆಗಳಿವೆ. ಇನ್ನು ವಿವಿಗಳ ಆಡಳಿತ ವರ್ಗ, ಯಾರು ತಮ್ಮ ಜೀವಮಾನದಲ್ಲೇ ನೆಟ್ಟಗೆ ಪಾಠ ಮಾಡಿಲ್ಲವೋ ಅವರೆಲ್ಲರೂ ಕಡೆಗೆ ವಿವಿ ಆಡಳಿತಗಾರರಾಗುತ್ತಿದ್ದಾರೆ! ಅವರಿಗೆ ರಾಜಕೀಯ ಮತ್ತು ಜಾತಿ ಬೆಂಬಲವಿರುತ್ತದೆಯೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನು ನಮ್ಮ ಯೂನಿವರ್ಸಿಟಿಗಳದ್ದು ಸರ್ಕಾರಿ ಸಂಸ್ಥೆಯೂ ಅಲ್ಲದ ಹಾಗಂತ ಸ್ವಾಯತ್ತತೆಯೂ ಇಲ್ಲದ ಪರಮ ಇಕ್ಕಟ್ಟು ಪರಿಸ್ಥಿತಿ. ಯೂನಿವರ್ಸಿಟಿಯ ಆಡಳಿತ ವ್ಯವಸ್ಥೆಯಲ್ಲಿನ ಪ್ರತಿಯೊಂದು ನೇಮಕವೂ ರಾಜಕೀಯ ನೇಮಕಾತಿಯೇ ಸರಿ. ಅದು ರಿಜಿಸ್ಟ್ರಾರ್ಗಳಿರಬಹುದು, ಉಪಕುಲಪತಿಗಳೇ ಇರಬಹುದು, ಎಲ್ಲರದೂ ರಾಜಕೀಯ ನೇಮಕಾತಿಯೇ, ಎಲ್ಲರೂ ಒಂದಿಲ್ಲೊಂದು ಜಾತಿ ಲಾಬಿಯನ್ನು ಬೆನ್ನಿಗಿಟ್ಟುಕೊಂಡಿರುವವರೇ. ಅತ್ಯುತ್ತಮ ಉದಾಹರಣೆಯೆಂದರೆ ಬೆಂಗಳೂರು ವಿವಿ. ಬೆಂ.ವಿವಿಯ ಕರ್ಮಕಾಂಡಗಳನ್ನು ಬಿಡಿಸಿ ಹೇಳುವ ಅಗತ್ಯವಿಲ್ಲವೆನಿಸುತ್ತದೆ. ಇನ್ನು ಸಿಂಡಿಕೇಟ್ ಎನ್ನುವುದು ಕಳ್ಳರ ಸಂತೆಯೇ ಆಗಿದೆ. ಪರಿಸ್ಥಿತಿ ಇಷ್ಟು ಹೊಲಸೆದ್ದು ಹೋಗಿರುವಾಗ ಬರುವ ಎಲ್ಲ ಸಮಸ್ಯೆಗಳೂ ನಮ್ಮಲ್ಲಿವೆ. ಮೊದಲಿಗೆ ಹೊಣೆಗೇಡಿತನ. ಮೊನ್ನೆ ಕುವೆಂಪು ವಿವಿಯಲ್ಲಿ ವರ್ಷವೆಲ್ಲಾ ಹುಡುಗರು ಕಷ್ಟ ಪಟ್ಟು ಓದಿ, ಪರೀಕ್ಷೆ ಬರೆದರೆ, ಆ ಉತ್ತರ ಪತ್ರಿಕೆಗಳು ಇವ್ಯಾಲ್ಯುಯೇಷನ್ಗೆ ಮುಂಚಿತವಾಗಿಯೇ `ಆಕಸ್ಮಿಕ'ವೊಂದರಲ್ಲಿ ಅಗ್ನಿಗೆ ಆಹುತಿಯಾಗಿದೆ! ಮತ್ತೂ ಆಶ್ಚರ್ಯವೆಂದರೆ ಇದರ ಜವಾಬ್ದಾರಿಯನ್ನು ಇದುವರೆಗೂ ಯಾರೂ ತೆಗೆದುಕೊಂಡಿಲ್ಲ ಮಾತ್ರವಲ್ಲ, ಕೆಳಮಟ್ಟದ ಅಧಿಕಾರಿಗಳ ವಿರುದ್ಧ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ! ಅದು ಸಾಧ್ಯವಿಲ್ಲ ಬಿಡಿ, ಕ್ರಮ ಕೈಗೊಂಡರೆ ಅವರೇ ಅಲ್ಲಿರುವುದಿಲ್ಲ, ಹಾಗಿರುತ್ತದೆ ಅಲ್ಲಿನ ಪರಿಸ್ಥಿತಿ!
ಇನ್ನು ವಿವಿಗಳ ಬಗ್ಗೆ ನಮ್ಮ ರಾಜಕೀಯ ನಾಯಕರು ಮತ್ತು ಸರ್ಕಾರಗಳ ಧೋರಣೆಯಿದೆಯಲ್ಲ, ಅದೂ ಸರ್ವಥಾ ಖಂಡನೀಯವಾದುದು. ನಮ್ಮ ರಾಜಕೀಯ ನೇತಾರರಿಗೆ ದೇವಸ್ಥಾನ ದರ್ಗಾಗಳನ್ನೂ ಅವುಗಳ ಪಾಡಿಗೆ ಅವುಗಳನ್ನು ಬಿಡುವ ಮನಸ್ಸಿಲ್ಲ, ಅವುಗಳನ್ನೂ ತಮ್ಮ ಪ್ಲೇಗ್ರೌಂಡುಗಳಾಗಿ ಮಾಡಿಕೊಂಡಿರುವಾಗ ಇನ್ನು ವಿವಿಗಳಂತಹ ಬೃಹತ್ ಪ್ರತಿಷ್ಠಿತ ಸಂಸ್ಥೆಗಳನ್ನು ಬಿಡುವ ಮಾತೆಲ್ಲಿಯದು? ಇಂದು ನಮ್ಮ ವಿವಿಗಳು ಈ ಹೊಲಸು ರಾಜಕೀಯದ ಅಡ್ಡೆಗಳಾಗಿ ಬಿಟ್ಟಿವೆ. ಇನ್ನು ಸತತ ಸರ್ಕಾರಗಳಿಗೆ ವಿವಿಗಳೆಂದರೆ ಬೆಲೆಯೇ ಇಲ್ಲ. ಒಂದು ವರ್ಷದ ಹಿಂದೆ ಯಡ್ಯೂರಪ್ಪನವರು ಆಪರೇಷನ್ ಕಮಲಿಗರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕಾಗಿ ಬಂದಾಗ ಅಂದಿನ ತೋಟಗಾರಿಕಾ ಸಚಿವರಾಗಿದ್ದ ಗುಲ್ಬರ್ಗಾದ ಎಸ್.ಕೆ.ಬೆಳ್ಳುಬ್ಬಿಯವರ ರಾಜೀನಾಮೆ ಪಡೆದುಕೊಂಡರು. ಆಗ ಅಲ್ಲಿನ ಜನ ಕೊಂಚ ಬೇಸರದಲ್ಲೇ ಉದ್ವಿಗ್ನರಾಗಿದ್ದರು. ಅವರನ್ನು ತಣಿಸಲು ಆ ಊರಿಗೆ ಏನೋ ಒಮದು ಭಕ್ಷೀಸು ಕೊಡುವುದು ಅನಿವಾರ್ಯವಿತ್ತು. ಕೂಡಲೇ ಯಡ್ಯೂರಪ್ಪನವರು ಘೋಷಿಸಿಬಿಟ್ಟರು, ಅವರು ತೋಟಗಾರಿಕಾ ಸಚುವರಲ್ಲವೇ ಆಗಿದ್ದಿದ್ದು, ಸರಿ ನಿಮ್ಮೂರಿಗೆ ಒಂದು ತೋಟಗಾರಿಕಾ ವಿವಿಯನ್ನು ಮಂಜೂರು ಮಾಡಲಾಗಿದೆ! ಇದು ವಿವಿಗಳಿಗೆ ನಮ್ಮ ಸರ್ಕಾರಗಳು ನೀಡುವ ಬೆಲೆ ಮತ್ತು ಗಾಂಭೀರ್ಯ! ಇನ್ನೂ ತುಮಕೂರು ವಿವಿಗೆ ಕಟ್ಟಡವೇ ಇಲ್ಲ, ಮಹಿಳಾ ವಿವಿ ಅಧೋಗತಿಯಾಗುವುದರಲ್ಲಿ ಇನ್ನು ಏನೂ ಅನುಮಾನ ಉಳಿದಿಲ್ಲ. ಹೀಗಿರುವಾಗ ಸಂಸ್ಕೃತ ವೇದ ವಿವಿ ಬೇರೆ ಕೇಡು! ವಿವಿ ಸ್ಥಾಪನೆ, ಲಾಲನೆ, ಪಾಲನೆ ಎಲ್ಲವೂ ಇಂದು ರಾಜಕೀಯವೇ ಆಗಿಬಿಟ್ಟಿರುವುದರಿಂದ ಈ ವಿಷಯವಾಗಿ ಒಂದು ಗಾಂಭೀರ್ಯವನ್ನು ನಿರೀಕ್ಷಿಸುವುದು ನಮ್ಮದೇ ತಪ್ಪೋ ಏನೋ?

ಒಂದು ದೇಶ ಕಟ್ಟುವ ಕೆಲಸಕ್ಕೆ ಅಡಿಪಾಯ ಬೀಳುವುದು ಅಲ್ಲಿನ ಹೈಯರ್ ಎಜುಕೇಶನ್ ಸೆಕ್ಟರ್ನಲ್ಲಿ, ಅಂದರೆ ಅದರ ಯೂನಿವರ್ಸಿಟಿಗಳಲ್ಲಿ. ಭಾರತ 2020ರೊಳಗೆ ಸೂಪರ್ ಪವರ್ ಆಗಬೇಕೆಂದು, ಆಗೇ ಬಿಡುತ್ತದೆಂದೂ ಬಡಾಯಿ ಕೊಚ್ಚಿಕೊಳ್ಳುವವರು ಮೊದಲು ಇಂದು ನಮ್ಮ ಯೂನಿವರ್ಸಿಟಿ ಶಿಕ್ಷಣದೆಡೆಗೆ ಒಮ್ಮೆಯಾದರೂ ಕಣ್ಣಾಡಿಸಲಿ. ವಿದ್ಯಾ ದೇಗುಲಗಳಾಗಬೇಕಾದವು ಹೇಗೆ ಹೊಲಸೆದ್ದು ನಾರುತ್ತಿವೆ ಎಂಬುದು ಅರ್ಥವಾದೀತು.
(ಈ ಭಾನುವಾರದದಲ್ಲಿ ಪ್ರಕಟಿತ)

2009ಕ್ಕೆ ಬೇರೆ ಜೊತೆಗಾರರು ಸಿಗಲಿಲ್ಲವೇ?  

Posted by bharadwaja in

2009 ಮಗುಚಿ ಬಿದ್ದಿದೆ. ಸರಿಯಾಗಿ ಒಂದು ವರ್ಷದ ಹಿಂದೆ 2008ರನ್ನು ಅತ್ಯಂತ ಉತ್ಸಾಹದಲ್ಲಿ ಕಳಿಸಿಕೊಟ್ಟಿದ್ದೆವು. ಎಂಥ ದರಿದ್ರದ ವರ್ಷ ಅದಾಗಿತ್ತು. ಭಾರತದ ಆರ್ಥಿಕ ನಾಗಾಲೋಟಕ್ಕೆ ಲಗಾಮು ಬಿದ್ದಿತ್ತು. ಜಾಗತಿಕ ಆರ್ಥಿಕ ಹಿಂಜರಿತ ಎಲ್ಲರನ್ನೂ ಹಿಪ್ಪಿ ಹಿಂಡು ಮಾಡಿ ಹಾಕಿತ್ತು. ವರ್ಷಾಂತ್ಯದಲ್ಲಿ ಮುಂಬೈ ನರಮೇಧ ನಡೆದು ಒಂದು ಆಕ್ರೋಶ, ಕೆಚ್ಚು, ಯುದ್ಧದ ಭೀತಿ, ಒಂದು ಸೂತಕದ ಛಾಯೆ ಆವರಿಸಿತ್ತು. ಸದ್ಯ ಈ ವರ್ಷ ಮುಗಿದರೆ ಸಾಕು ಎಂಬಂತಿತ್ತು ಎಲ್ಲರ ಮನಸ್ಥಿತಿ. ಆದರೆ 2009 ತಕ್ಕಮಟ್ಟಿಗೆ ಆಹ್ಲಾದಕರವಾಗೇ ಇತ್ತು, ಲೋಕಸಭೆ ಚುನಾವಣೆ ನಡೆದು ಯುಪಿಎ ಮತ್ತೆ ಅಧಿಕಾರ ಹಿಡಿಯಿತು, ಮನಮೋಹನರು ತಮ್ಮ ಸೇವೆ ಮುಂದುವರೆಸಿದರು, ಒಬ್ಬ ನೆರೆಯ ಆಂಧ್ರದ ದೊರೆ ವೈ.ಎಸ್.ಆರ್. ತೀರಿಕೊಂಡು ಬಿಟ್ಟರು. ಆಂಧ್ರ ರಾಜಕೀಯ ಅತಂತ್ರತೆ ಬಿದ್ದು ಬಿಟ್ಟಿತು, ಅದು ಬಿಟ್ಟರೆ ಎಲ್.ಕೆ.ಅದ್ವಾನಿಯವರ ಸುದೀರ್ಘ ರಾಜಕೀಯ ಜೀವನಕ್ಕೆ ಚರಮಗೀತೆ ಹಾಡಲಾಗಿತ್ತು. ಇವು ಬಿಟ್ಟರೆ ಅಂಥ ನಾಟಕೀಯ ಬೆಳವಣಿಗೆಗಳೇನೂ ನಡೆಯಲಿಲ್ಲ. ವರ್ಷದ ಕೊನೆಯಲ್ಲಿ ಎಲ್ಲ ಪತ್ರಕರ್ತರೂ 2009ರ ರಿವ್ಯೂಗೆ ಕೂತಿದ್ದರು ವಿಶೇಷಾಂಕಗಳನ್ನು ಹೊರತಂದರು, ಎಲ್ಲೂ ಸೂತಕ, ವಿಷಾದ ಇರಲಿಲ್ಲ. ಆದರೆ 2009ರ ಸೆರಗಿನಲ್ಲಿ ಇನ್ನು ಏನೋ ಇತ್ತು.
ಅವತ್ತು ಡಿಸೆಂಬರ್ 29. ಎಲ್ಲರೂ ಡಿಸೆಂಬರ್ 31ರ ಪಾರ್ಟಿಗೆ ಪ್ಲಾನು ಮಾಡುತ್ತಾ ಕೂತಿದ್ದರು. ಆಗ ಬರಸಿಡಿಲನಂತೆ ಬಂದೆರಗಿತ್ತು ಆ ಸುದ್ದಿ. ಸಿ.ಅಶ್ವತ್ಥ್ ಇನ್ನಿಲ್ಲ! ತಿಂಗಳ ಹಿಂದೆಯಷ್ಟೇ ದೊಡ್ಡದೊಂದು ಆರ್ಭಾಟದೊಂದಿಗೆ ಒಂದು ಅತ್ಯುತ್ತಮ ಕಾರ್ಯಕ್ರಮ ನೀಡಿ ಯಾಕೋ ಹೊಟ್ಟೆ ನೊವು ಅಂತ ಆಸ್ಪತ್ರೆ ಸೇರಿದವರು ಮತ್ತೆ ಮನೆಗೆ ಬರಲೇ ಇಲ್ಲ. ಅವರಿಗೆ ಲಿವರ್ ಸಿರೊಸಿಸ್ ಆಗಿತ್ತು, ಕಿಡ್ನಿ ಕೈಕೊಟ್ಟಿತ್ತು. ಅವರು ಆಸ್ಪತ್ರೆಯಲ್ಲಿದ್ದಷ್ಟೂ ದಿನ ಒಂದೊಂದು ರೀತಿಯ ಸುದ್ದಿ ಬರುತ್ತಿತ್ತು. ಇನ್ನು ಕಷ್ಟ, ಬರುವುದು ಅನುಮಾನ, ಏ ಇಲ್ಲ ಅಶ್ವತ್ಥ್ ಅದನ್ನೆಲ್ಲಾ ಸುಳ್ಳು ಮಾಡಿ ಅವರ 70 ವರ್ಷದ ಹುಟ್ಟಿದಹಬ್ಬದ ಕಾರ್ಯಕ್ರಮಕ್ಕೆ ಬಂದೇ ಬಿಡುತ್ತಾರೆ, ಏರು ಸ್ವರದಲ್ಲಿ ಹಾಡಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತಾರೆ. ಹೀಗೆ ಸಾಗಿತ್ತು ಮಾತು. ಆದರೆ ಅವರು ತಮ್ಮ 70 ವರ್ಷದ ಹುಟ್ಟಿದ ಹಬ್ಬದ ದಿನವೇ ಇಹಲೋಕದ ಘಡತ್ತಾದ ಭೋಜನ ಮುಗಿಸಿ ಕೈತೊಳೆದೆದ್ದು ಬಿಟ್ಟರು ಅಶ್ವತ್ಥ್! ಅವರ ಭೋಜನ ಪ್ರೀತಿ ಬಲ್ಲವರಿಗೆ ಈ ಉಪಮೆ ಅಶ್ವಥರಿಗೆ ಅನ್ವರ್ಥ ಅನಿಸದಿರದು. ಕನ್ನಡದ ಸಾರಸ್ವತ ಲೋಕ ಒಬ್ಬ ಪ್ರಯೋಗಕರ್ತನನ್ನು, ಒಬ್ಬ perfectionistನ್ನು, ಅಸಾಧ್ಯ ಗಾತ್ರದ ಮಹಾ ಗಾಯಕನನ್ನು ಕಳಕೊಂಡು ಬಡವಾಗಿಬಿಟ್ಟತು. ಸುಗಮ ಸಂಗೀತ ಕ್ಷೇತ್ರವಂತೂ ಒಬ್ಬ ಆದ್ಯ ಪ್ರವರ್ತಕನನ್ನು, ಹಿರಿಯಣ್ಣನನ್ನು ಕಳಕೊಂಡು ಅನಾಥವಾಗಿಬಿಟ್ಟಿತು. ಹೊಸ ವರ್ಷದಲ್ಲೊಂದು ಸೂತಕದ ಕಳೆ ನಿಂತು ಬಿಟ್ಟಿತು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ. ಕನ್ನಡ ಸಾರಸ್ವತ ಲೋಕಕ್ಕೆ ಇನ್ನೊಂದು ಮಹಾಸೂತಕ ಜೊತೆಯಾಗುವುದಿತ್ತು.



ಅಶ್ವತ್ಥ್ರಿಗೆ ವಿದಾಯ ಹೇಳಿ ಮಲಗಿದ್ದ ಕನ್ನಡ ಮನಸ್ಸು ಬೆಳಿಗಾಗೇಳುವಷ್ಟರಲ್ಲಿ ಮತ್ತೊಂದು ಸಾವಿನ ಸುದ್ದಿ ಕೇಳಬೇಕಾಯಿತು. ಬರ ಸಿಡಿಲನಂತೆ ಬಂದು ಎರಗಿತ್ತು ಸುದ್ದಿ. ಕನ್ನಡ ಚಿತ್ರರಂಗದ ಯಜಮಾನ ವಿಷ್ಣುವರ್ಧನ್ ಅಶ್ವತ್ಥರನ್ನು ಹಿಂಬಾಲಿಸಿಬಿಟ್ಟಿದ್ದರು! ವಿಷ್ಣು ಯಾರ್ಯಾರಿಗೂ ಸುಳಿವು ನೀಡದೆ ಕೇವಲ 59 ವರ್ಷಕ್ಕೆ ಇಹಲೋಕದ ಯಾತ್ರೆ ಮುಗಿಸಿದ್ದರು! ವಿಷ್ಣು ಅವರ ಸಾವಿನ ಸುದ್ದಿಯನ್ನು ಮೊದಲಿಗೆ ಯಾರ್ಯಾರೂ ನಂಬಲೇ ಇಲ್ಲ. ಛೇ, ಇದೆಂಥ ರೂಮರು, ಅನ್ನೋದೇ ಬಹುತೇಕರ ಪ್ರತಿಕ್ರಿಯೆಯಾಗಿತ್ತು. ಆದರೆ ಅದು ರೂಮರಾಗಿರಲಿಲ್ಲ ಎಂಬುದು ಕನ್ನಡ ನಾಡಿನ ದುರ್ದೈವವಾಗಿತ್ತು. ಹೌದು ಎಂದಿನ ರೂಢಿಯಂತೆ ಮೈಸೂರಿಗೆ heart ಚೆಕಪ್ಗೆಂದು ಹೋಗಿದ್ದ ವಿಷ್ಣು, ರಾತ್ರಿ 2:20ಕ್ಕೆ ಹೃದಯಘಾತವಾಗಿ ತಮ್ಮ ನೆಚ್ಚಿನ kings court ಹೋಟೆಲಿನಲ್ಲಿಯೇ ಉಸಿರು ಚೆಲ್ಲಿಬಿಟ್ಟರು. ಕನ್ನಡ ನಾಡು ವಿಷಾದಕ್ಕೂ ಮೊದಲು ಒಂದು ದಿಗ್ಭ್ರಮೆಯಲ್ಲಿ ಮುಳುಗಿ ಹೋಯಿತು. ಯಾರಿಗೂ ವಿಷ್ಣು ನಮ್ಮನ್ನಗಲಿದ್ದಾರೆಂಬುದು ಸರಿಯಾಗಿ ಮನಸ್ಸಿನಲ್ಲಿ ನಾಟುತ್ತಲೇ ಇರಲಿಲ್ಲ. ಇಂದಿಗೂ ಬಹುತೇಕರಿಗಿದು ನಿಜವೇ ಸರಿ. ಏನು ವಿಷ್ಣು ಹೋಗಿಬಿಟ್ಟರಾ? ಅದು ಹೇಗೆ ಸಾಧ್ಯ? ಆದರೆ ವಿಧಿಯಾಟದ ಮುಂದೆ ಇದೆಲ್ಲವೂ ಯಾವ ಲೆಕ್ಕ. ವಿಷ್ಣು ಪಂಚಭೂತಗಳಲ್ಲಿ ಲೀನವಾಗೇ ಹೋದರು. ರಾಜಕುಮಾರ್ರನ್ನು ಕಳೆದುಕೊಂಡದ್ದನ್ನು ಇನ್ನೂ ಅರಿಗಿಸಿಕೊಳ್ಳುತ್ತಿದ್ದ ಕನ್ನಡ ಚಿತ್ರರಂಗ ಯಜಮಾನನ್ನು ಕಳೆದುಕೊಂಡುಬಿಟ್ಟಿತು. ಇರುವ ಸಂಕಷ್ಟಗಳ ಸರಮಾಲೆಗೆ ಸೂತಕದ ಹಾರ.

ಎರಡೇ ದಿನಗಳ ಅಂತರದಲ್ಲಿ ಕನ್ನಡ ಕಲಾ ರಸಿಕರ ಹೃದಯ ಸಿಂಹಾಸನವೇರಿದ್ದ ಇಬ್ಬರು ಅಪ್ಪಟ ಕಲಾವಿದರನ್ನು ಕಳೆದುಕೊಂಡು ಕನ್ನಡ ಸಾರಸ್ವತ ಲೋಕ ನಿಸ್ತೇಜಗೊಂಡು ಬಿಟ್ಟದೆ. ನಾಡು ಬಡವಾಯಿತು, ಅವರು ಹಾಗಿದ್ದರು ಹೀಗಿದ್ದರು, ಎಂದು ತುತ್ತೂರಿಯೂದುವುದಕ್ಕಿಂತಲೂ ಅವರು ಹಾಕಿಕೊಟ್ಟ ದಾರಿಯಲ್ಲಿ ಮುಂದಿನ ಪೀಳಿಗೆಯವರು ನಡೆದು, ಅವರ ಪರಂಪರೆಯನ್ನು ಮುಂದುವರೆಸುವುದು ಅವರಿಗೆ ನಾವು ಸಲ್ಲಿಸುವ ಸಾರ್ಥಕ ನಿವಾಳಿಯಾಗುತ್ತದೆ.

2009 ಮಗುಚಿ ಬಿದ್ದಿದೆ. 2010ರ ಸೂರ್ಯನಿಗೂ ಸೂತಕದ ಛಾಯೆ. ಅಲ್ಲ 2009ಕ್ಕೆ ಬೇರೆ ಜೊತೆಗಾರರು ಸಿಗಲಿಲ್ಲವೆ?

ರಮೇಶ್ ಕುಮಾರ್ - ಒಂದು ಕಿರು ಪರಿಚಯ  

Posted by bharadwaja

ರಮೇಶ್ ಕುಮಾರ್ ಈ ನಾಡು ಕಂಡ ಅಪುರೂಪದ ಸಜ್ಜನ, ಬುದ್ಧಿಜೀವಿ ರಾಜಕಾರಣಿಗಳಲೊಬ್ಬರು. ಅವರಿಗೆ 40 ವರ್ಷಗಳ ರಾಜಕಾರಣದ ಸುಧೀರ್ಘ ಅನುಭವವಿದೆ. ರಾಜಕೀಯದಲ್ಲಿದ್ದೂ ಇನ್ನೂ ಮೌಲ್ಯ ಸಜ್ಜನಿಕೆಗಳನ್ನು ಉಳಿಸಿಕೊಂಡು ಬಂದ ತೀರ ಅಪುರೂಪರಲ್ಲಿ ಒಬ್ಬರು. ಸಜ್ಜನಿಕೆಗಳಿಗಿಂತಲೂ ಹೆಚ್ಚಾಗಿ ಅವರು ಅವರ ರಾಜಕೀಯ ಮುತ್ಸದ್ಧಿತನ ಮತ್ತು ಬುದ್ಧಿಮತ್ತೆಗೆ ಹೆಸರುವಾಸಿ. 1994ರಲ್ಲಿ ವಿಧಾನಸಭೆಯ ಸ್ಪೀಕರ್ ಆದ ನಂತರ ಇವರ ವ್ಯಕ್ತಿತ್ವಕ್ಕೇ ಒಂದು ಮೆರುಗು ಬಂತು. ಇವರನ್ನು ರಾಜ್ಯಾದ್ಯಂತ ಒಬ್ಬ ದಕ್ಷ ನಾಯಕನಾಗಿ ಗುರುತಿಸತೊಡಗಿದ್ದು ಆ ನಂತರವೇ. ಒಂದು ಸಂದರ್ಭದಲ್ಲಿ ನಾಡಿನ ಮುಖ್ಯಮಂತ್ರಿ ಪಟ್ಟಕ್ಕೂ ಇವರ ಹೆಸರು ಕೇಳಿ ಬಂದಿತ್ತಾದರೂ ಅದು ಕೈಗೂಡಲಿಲ್ಲ.


ಇವರು ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರದವರು. ವಿದ್ಯಾರ್ಥಿ ದಿಸೆಯಲ್ಲಿಯೇ ರಾಜಕೀಯದ ನಂಟು ಬೆಳೆಸಿಕೊಂಡ ಇವರು, ಗ್ಯಾಸ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವಾಗಲೇ ಯೂತ್ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರು, ವಿದ್ಯಾರ್ಥಿ ನಾಕರಾಗಿದ್ದರು. ಇವರ ಪ್ರತಿಬೆಯನ್ನು ಗುರುತಿಸಿ ಬೆಳೆ ಸಿವರು ಈ ನಾಡು ಕಂಡ ಮತ್ತೊಬ್ಬ ಅಪುರೂಪದ ರಾಜಕಾರಣಿ ದಿ.ದೇವರಾಜ ಅರಸು. 1969ರ ಐತಿಹಾಸಿಕ ಕಾಂಗ್ರೆಸ್ ಸ್ಪ್ಲಿಟ್ನ ಸಂದರ್ಭದಲ್ಲಿ ಅರಸರ ಜೊತೆ ಗುರುತಿಸಿಕೊಂಡು ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು. ಡಿ.ಬಿ.ಚಂದ್ರೇಗೌಡರು ಯೂತ್ ಕಾಂಗ್ರೆಸ್ ಅಧ್ಯಕ್ಷರಾದಾಗ ಇವರು ಕಾರ್ಯದರ್ಶಿಗಳಾದರು. ಮುಂದೆ ಇಂದಿರಾ ಗಾಂಧಿ ಮತ್ತು ಅರಸರ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಇವರು ಮತ್ತೆ ತಮ್ಮ ರಾಜಕೀಯ ಗುರು ಅರಸರ ಜೊತೆ ಗುರುತಿಸಿಕೊಂಡರು.

ಅರಸರ ಸರ್ಕಾರ ಪತನವಾಗಿ ಗುಂಡೂರಾಯರ ಸರ್ಕಾರ ಬಂದಾಗ, ಬಂಗಾರಪ್ಪನವರು ಅದರ ವಿರುದ್ಧ ಬಂಡಾಯವೆದ್ದು ಕ್ರಾಂತಿರಂಗ ಕಟ್ಟಿದರು. ರಮೇಶ್ ಕುಮಾರ್ ಅದರ ಮುಂಚೂಣಿ ನಾಯಕರೆನಿಸಿಕೊಂಡರು. ನಂತರ 1983ರಲ್ಲಿ ಶ್ರೀನಿವಾಸಪುರದಂತಹ ರೆಡ್ಡಿಗಳ ಪ್ರಾಬಲ್ಯವಿರುವ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬ ಮೈನಾರಿಟಿ ಬ್ರಾಹ್ಮಣನಾಗಿ ಗೆದ್ದು ಬಂದು ಇತಿಹಾಸ ಸೃಷ್ಟಿಸಿದರು. ಅಂದಿನಿಂದ ಅವರು ಹಿಂದುರಿಗಿ ನೋಡಿದ್ದೇ ಇಲ್ಲ. 1994ರಲ್ಲಿ ಮತ್ತೆ ಜನತಾದಳ ಸರ್ಕಾರ ಬಂದಾಗ ಇವರು ಸಭಾಪತಿಯಾದರು. ಈ ನಾಡು ಕಂಡ ಅತ್ಯಂತ ಪ್ರಾಮಾಣಿಕ ಕಾಳಜಿಯುಳ್ಳ, ಸ್ವತಃ ಅತ್ಯುತ್ತಮ ಸಂಸದೀಯ ಪಟುವಾಗಿದ್ದ ರಮೇಶ್ ಕುಮಾರ್ ದಕ್ಷರೆನಿಸಿಕೊಂಡು ಹೆಸರು ಮಾಡಿದರು. ದೇವೇಗೌಡರು ಪ್ರಧಾನಿಯಾದಾಗ ನಾಡಿನ ಮುಂದಿನ ಮುಖ್ಯಮಂತ್ರಿಯಾರು ಎಂಬ ಜಿಗ್ಞಾಸೆ ಶುರುವಾದಾಗ ಕೇಳಿ ಬಂದ ಹಲವರ ಹೆಸರಿನಲ್ಲಿ ರಮೇಶ್ ಕುಮಾರ್ ಅವರದೂ ಪ್ರಮುಖ ಹೆಸರು. ಆದರೆ ಆಗ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾದರು. ನಂತರ ದಳ ಇಬ್ಭಾಗವಾದಾಗ ಹೆಗಡೆಯವರ ಸಂಯುಕ್ತ ಜನತಾದಳದಲ್ಲಿ ಗುರುತಿಸಿಕೊಂಡರು. ನಂತರ ಅಲ್ಲೂ ಕೂಡ ನೆಲೆ ಕಂಡುಕೊಳ್ಳಲಾಗದೇ ಮರಳಿ ಅವರ ರಾಜಕೀಯ ತವರು ಮನೆ ಕಾಂಗ್ರೆಸ್ಗೆ ಮರಳಿದರು. 2004ರಲ್ಲಿ ಶಾಸಕರಾದರೂ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಲಿಲ್ಲ. 2008ರ ಚುನಾವಣೆಗಳಲ್ಲಿ ಸೋಲುಂಡರು. ಸದ್ಯ ಇವರು ಯಾವುದೇ ಸಾರ್ವಜನಿಕ ಪದವಿಗಳನ್ನು ಹೊಂದಿಲ್ಲವಾದರೂ, ಈ ನಾಡು ಕಂಡ ಸಜ್ಜನ ಬುದ್ಧಿಜೀವಿ ರಾಜಕಾರಣಿಗಳಲ್ಲಿ ಒಬ್ಬರಾಗಿ ಅವರ ಬೆಲೆ ಅವರಿಗುಂಟು.

ಈಗ ಕಳೆದು ಹೋಗಿರುವ 70ರ ದಶಕದ ರಾಜಕೀಯ ಗಾಂಭೀರ್ಯವನ್ನು ಇನ್ನೂ ಹಾಗೇ ಉಳಿಸಿಕೊಂಡು ಬಂದಿರುವ ಅಪುರೂಪದ ರಾಜಕಾರಣಿಯಿವರು. ರಾಜಕಾರಣಿಗಳಲ್ಲಿ ಹೆಚ್ಚು ಓದಿಕೊಂಡವರು ಬಹಳ ವಿರಳ, ಅಂತಹ ಓದಿಕೊಂಡ, ಸೈದ್ಧಾಂತಿಕ ಸ್ಪಷ್ಟತೆ ಮತ್ತು ವಾಸ್ತವತೆಯ ಪರಿಜ್ಞಾನವಿರುವ ಇವರ ಶ್ರೀನಿವಾಸಪುರ ಇವರ ವ್ಯಕ್ತಿತ್ವ, ಗುಣವಿಶೇಷಗಳಿಗೆ ತದ್ವಿರುದ್ಧವಾಗಿದೆ. ಶ್ರೀನಿವಾಸಪುರ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು. ಕರ್ನಾಟಕದ ರಾಜಕಾರಣದಲ್ಲಿ ವಿರಳಾತಿವಿರಳ. ಆಂಧ್ರದಲ್ಲಿದ್ದಂತೆ ಕರ್ನಾಟಕದಲ್ಲಿ ನಿಮಗೆ ಕಾಣಸಿಗುವುದು ಎರಡೇ ಕಡೆ. ಒಂದು ಬಳ್ಳಾರಿ, ಎರಡು ಶ್ರೀನಿವಾಸಪುರ. ಈ ಎರಡೂ ಪ್ರಾಂತ್ಯಗಳೂ ಆಂಧ್ರದ ಗಡಿ ಭಾಗದಲ್ಲಿದ್ದು, ಅದರ ಪ್ರಭಾವ ಢಾಳಾಗಿ ಕಾಣಿಸುತ್ತದೆ. ಇಲ್ಲಿ ಕಳೆದ ಸುಮಾರು 35 ವರ್ಷಗಳಿಂದ ಇಬ್ಬರೇ ರಾಜಕೀಯ ನಾಯಕರು, ಒಬ್ಬರು ರಮೇಶ್ ಕುಮಾರ್, ಮತ್ತೊಬ್ಬರು ವೆಂಕಟಶಿವಾ ರೆಡ್ಡಿ. ಪಕ್ಕದ ತಮಿಳುನಾಡಿನಲ್ಲಿದ್ದಂತೆ ಇಲ್ಲಿ ಒಮ್ಮೆ ರಮೇಶ್ ಕುಮಾರ್ ಶಾಸಕರಾದರೆ, ಮತ್ತೊಮ್ಮೆ ವೆಂಕಟಶಿವಾ ರೆಡ್ಡಿ ಶಾಸಕರಾಗುತ್ತಾರೆ. ಇಲ್ಲಿ ಪಕ್ಷಗಳು ನಗಣ್ಯ. ರಮೇಶ್ ಕುಮಾರ್ ಅವರನ್ನು ಇಲ್ಲಿ ಎಲ್ಲರೂ ಸ್ವಾಮಿ ಎಂದೇ ಗುರುತಿಸುತ್ತಾರೆ. ಇಲ್ಲಿ ರೆಡ್ಡಿ ಮತ್ತು ಸ್ವಾಮಿ ಬಣಗಳ ನಡುವಿನ ಕಾಳಗ ನಿತ್ಯ ನೂತನ. ರಮೇಶ್ ಕುಮಾರ್ ಇಂಥದೊಂದು ಡೈಕಾಟಮಿಯ ನಡುವೆಯೇ ಬೆಳೆದು ಬಂದಿರುವ ರಾಜಕಾರಣಿ.

ಅವರು ಇತರೆ ಅನೇಕರಂತೆ 24 ಘಂಟೆಗಳ ರಾಜಕಾರಣಿಯಲ್ಲ. ಅವರಿಗೆ ಸಾಹಿತ್ಯ ಕಲೆಯಲ್ಲಿ ಅಪಾರ ಆಸಕ್ತಿ. ಅವರು ಸೀರಿಯಲ್ಗಳಲ್ಲೂ ನಟಿಸುತ್ತಿದ್ದಾರೆ. ಏನಾದರಾಗಲೀ ಇವರು ಮುಂದಿನ ಚುನಾವಣೆಗಳಲ್ಲಿ ಗೆದ್ದು ಬರುವ ಭರವಸೆ ಅವರಿಗಿದೆ. ಪಾಳಿಯಂತೆ ಈಗ ವೆಂಕಟಶಿವಾ ರೆಡ್ಡಿಗಳು ಶಾಸಕರಾಗಿದ್ದು, ಮೂಂದಿನ ಪಾಳಿ ಇವರದೇ! ಇಂತಿಪ್ಪ ರಮೇಶ್ ಕುಮಾರ್ ಮೊನ್ನೆ ಮಾತಿಗೆ ಸಿಕ್ಕಿದ್ದರು. ಮಲ್ಲೇಶ್ವರದ ಅವರ ಮನೆಯಲ್ಲಿ ಲೋಕಾಭಿರಾಮವಾಗಿ ಮಾತಿಗೆ ಕುಳಿತಾಗ ಮಾತನಾಡಿದ್ದನ್ನು ಈ ಭಾನುವಾರ ಪತ್ರಿಕೆಗೆ ಸಂದರ್ಶನದ ರೂಪದಲ್ಲಿ ಬರೆದಿದ್ದೇನೆ. ತಮಗೆ ಇಷ್ಟವಾದೀತು.

ದುಡ್ಡಿದ್ದವರ ದವಲತ್ತು ನಡೆಯೋದಿಲ್ಲ ಯಾವತ್ತೂ..  

Posted by bharadwaja in

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಜಾತಂತ್ರ ಅನ್ನೋದು ಹಾಸ್ಯಾಸ್ಪವೆನಿಸಿಬಿಟ್ಟಿದೆ. ಇವತ್ತು ರಾಜಕೀಯಕ್ಕೆ ಇಲ್ಲ ದುಡ್ಡಿರಬೇಕು, ಇಲ್ಲ ಒಂದು ಕುಟುಂಬದ ಹೆಸರಿರಬೇಕು ಇಲ್ಲ ಕನಿಷ್ಠ ಜಾತಿ ಬೆಂಬಲವಾದರೂ ಇರಬೇಕು. ಹೀಗಾದರೆ ನೈಜ ತಳಮಟ್ಟದ ರಾಜಕೀಯ ನಶಿಸಿ ಹೋಗುವುದಿಲ್ಲವೇ?

- ಯಾವುದೋ ಕೆಲವು ಘಟನೆಗಳಿಂದ, ಚಳುವಳಿಗಳಿಂದ ಪ್ರಭಾವಿತರಾಗಿ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳಬೇಕೆಂದು ಬಂದರೆ ಅವರ ಆಲೋಚನೆಗಳು ಒಂದು ರೀತಿಯಿರುತ್ತದೆ, ಇಲ್ಲ ಇಲ್ಲಿ ಸಿಗುವ ಸವಲತ್ತು, ಶ್ರಮವಿಲ್ಲದೆ ಜೀವನ ರೂಪಿಸಿಕೊಳ್ಳಲು ಇರುವ ಸುಲಭ ಮಾರ್ಗೋಪಾಯಗಳನ್ನು ನೋಡಿ ಬರುವವರ ಆಲೋಚನೆ ನಡೆನುಡಿಗಳು ಒಂದು ತೆರನಾಗಿರುತ್ತವೆ. ಈ ನಡುವೆ ಸೇವಾ ಮನೋಭಾವವಲ್ಲದೆ ಇಂತಹ ವ್ಯಾಪಾರೀ ಮನೋಭಾವದಿಂದ ರಾಜಕೀಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೀಗನ್ನಿಸುತ್ತದೆ. ರಾಜಕೀಯದಲ್ಲಿ ಹೀಗೆ ಒಂದು ಘಟ್ಟ ಬರುತ್ತದೆ, ಬಂದಿದೆ. ಇದರ ಮೂಲ ಅರಸುತ್ತಾ ಹೋದರೆ ಯುಎಸ್ಎಸ್ಆರ್ ಪತನಗೊಂಡು ಜಗತ್ತಿನೆಲ್ಲೆಡೆ ಉದಾರವಾದದ ಹೆಸರಿನಲ್ಲಿ ಕಾಂಚಾಣ ತಾಂಡವವಾಡತೊಡಗಿದ್ದಲ್ಲಿಗೆ ಹೋಗುತ್ತೇವೆ. ಇದೂ ಒಂದು ಘಟ್ಟ ಅಷ್ಟೆ. ಚಕ್ರ ಮತ್ತೆ ಉರುಳೇ ಉರುಳುತ್ತದೆ.
ಕರ್ನಾಟಕ ಮೊದಲಿಂದಲೂ ಸಜ್ಜನ ಮೌಲ್ಯಯುತ ರಾಜಕಾರಣಕ್ಕೆ ಹೆಸರು. ಆದರೆ ಇತ್ತೀಚೆಗೆ ಕರ್ನಾಟಕದ ರಾಜಕಾರಣವನ್ನು `ಕರೋ ನಾಟಕ್' ಎಂದು ಲೇವಡಿ ಮಾಡುತ್ತಾರೆ. ರಾಜ್ಯ ರಾಜಕಾರಣ ಯಾಕೆ ಹೀಗೆ ಪನತವಾಗುತ್ತಾ ಬಂದಿದೆ?
- ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಕನಾಟಕದಲ್ಲೂ ಇದು ಇತ್ತೀಚಿನ ಬೆಳವಣಿಗೆಯೇನಲ್ಲ. 79-80ರಲ್ಲಿ ದೇವರಾಜ ಅರಸರ ಸರ್ಕಾರ ಪತನವಾದ ನಂತರ ಉದ್ಭವಸಿದ ಸರ್ಕಾರ ಜನಮತ ಪಡೆದ ಸರ್ಕಾರವಾಗಿರಲಿಲ್ಲ. ಆಗಲೇ ಕರ್ನಾಟಕದಲ್ಲಿ ಈ ಸ್ಟಾಪ್ ಗ್ಯಾಪ್ ವ್ಯವಸ್ಥೆಗಳು, ಇತರೆ ಲಾಬಿಗಳಿಂದ ಅಥವಾ ಕಾಣದ ಕೈಗಳಿಂದ ನಿರ್ದೇಶಿಸಲ್ಪಟ್ಟ ಸರ್ಕಾರಗಳೂ ಅಸ್ತಿತ್ವಕ್ಕೆ ಬರಲಾರಂಭಿಸಿದವು. ಆ ನಂತರ ಬಂದ ಯಾವುದೇ ಸರ್ಕಾರ ನೀತಿ ನಿರ್ದೇಶನದ ವಿಚಾರದಲ್ಲಾಗಲೀ, ಇಲ್ಲ ಜನರ ವಿಶ್ವಾಸ ಗಳಿಸಿ ಜನರ ಮನಸ್ಸಿನ ಕನ್ನಡಿಯಂತಿರುವುದರಲ್ಲಿ ವಿಫಲವಾಗಿವೆ. ಇದು ಒಬ್ಬ ಸಾಮಾನ್ಯ ಪ್ರಜೆಯಾಗಿ, ರಾಜಕೀಯ ಕಾರ್ಯಕರ್ತನಾಗಿ ನನ್ನ ಅಭಿಪ್ರಾಯ.

ಮೊದಲಿಗೆ ದುಡ್ಡಿದ್ದವರದು ಒಂದು ಲಾಬಿ ಅಂತ ಇತ್ತು ಅಷ್ಟೆ, ಆದರೆ ಈಗ ಅವರೇ ರಾಜಕೀಯ ನಾಯಕರಾಗುತ್ತಿದ್ದಾರೆ. ಮೇಲ್ಮನೆ ಚುನಾವಣೆಗಳಲ್ಲೂ ಈ ಪಾಟಿ ದುಡ್ಡು, resort ರಾಜಕಾರಣ ಕಂಡಿದ್ದು ಇದೇ ಮೊದಲಿರಬೇಕು...
- ಮೊದಲಿಗೆ ದುಡ್ಡಿದ್ದವರು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತಿದ್ದರು. ಇಬ್ಬರೂ ಲೆಕ್ಕ ಬರೆದಿಡುತ್ತಿದ್ರು, ಇಬ್ಬರಿಗೂ ಗೌರವಯುತವಾಗಿರುತ್ತಿತ್ತು. ಕಾಂಗ್ರೆಸ್ ಪಕ್ಷದ ಖಜಾಂಜಿ ಆಗೋಕ್ಕೆ, ಅತ್ಯಂತ ಸಜ್ಜನ, ಪ್ರಾಮಾಣಿನನ್ನು ಹುಡುಕುತ್ತಿದ್ದರು. ಆತ ಬಡವನಾದರೂ ಸರಿ. ಆದರೆ ಬರಬರುತ್ತಾ ಯಾರಿಗೆ ಹಣ ಸಂಗ್ರಹಿಸುವ ತಾಕುತ್ತಿದೆಯೋ ಅವರನ್ನು ಖಜಾಂಚಿಯಾಗಿ ನೇಮಿಸ ತೊಡಗಿದರು. ಲೆಕ್ಕ ಬರೆಯುವ ರೂಢಿಯೇ ತಪ್ಪಿ ಹೋಯಿತು. ಹಲವಾರು ಕನ್ಸಿಡರೇಷನ್ಗಳಿಗಾಗಿ ವ್ಯಾಪಾರವೇತ್ತರನ್ನು ವಿಧಾನ ಮಂಡಲಕ್ಕೋ, ರಾಜ್ಯಸಬೆಗೋ ನೇಮಿಸುವ ಕೆಲಸವಾದಾಗಲೂ ನಾವೆಲ್ಲಾ ಸುಮ್ಮನಿದ್ದೆವು. ಇಂಥ ಸಣ್ಣ ಸಣ್ಣ ತಪ್ಪುಗಳನ್ನು ನಾವು ಆಗ ಪ್ರತಿಭಟಿಸಲಿಲ್ಲ. ಇದು ಕ್ಯಾನ್ಸರ್ ಇದ್ದ ಹಾಗೆ. ಸಣ್ಣದಿದ್ದಾಗ ನಾವು ಗಮನಿಸಲಿಲ್ಲ, ನೀವೀಗ ಇದು ಉಲ್ಬಣಾವಸ್ಥೆ ತಲುಪಿರುವುದನ್ನು ನನಗೆ ತಿಳಿಸುತ್ತಿದ್ದೀರ. ಇಂದು ಇವರೇ ಪಕ್ಷಗಳನ್ನು ನಿಯಂತ್ರಿಸಿ ನಡೆಸುತ್ತಿದ್ದಾರೆ. ಇಂದು ಬಹುತೇಕ ಎಲ್ಲ ರಾಜಕೀಯ ಪಕ್ಷಗಳನ್ನೂ ನಾವು ಎಂಎನ್ಸಿಗಳಂತೆ ನಡೆಸುತ್ತಿದ್ದೇವೆ. ಜನನಾಯಕರ ಕಾಲ ಎಂದೋ ಮುಗಿದು ಹೋಯಿತು. ಅದು ಸ್ವಾತಂತ್ರ್ಯ ಸಂಗ್ರಾಮದ ಸಂತರಂತಹ ನಾಯಕರಿಗೇ ಕೊನೆಗೊಂಡಿತು. ನಂತರ ಬಂದವರಾರೂ ಜನನಾಯಕರಲ್ಲ, ನಾನೂ ಸೇರಿ ಜನಪ್ರತಿನಿಧಿಗಳು ಅಷ್ಟೆ. leaders today are gradually being replaced by gang-leaders. ಗ್ಯಾಂಗ್ನ ಅರ್ಥವನ್ನು ನಾನು ನಿಮಗೇ ಬಿಡುತ್ತೇನೆ.

ರೆಡ್ಡಿಗಳು ಕರ್ನಾಟಕಕ್ಕೆ ತಂದಿರುವ ರಾಜಕೀಯ ಸಂಸ್ಕೃತಿಯ ಬಗ್ಗೆ ನಿಮ್ಮ ಅಭಿಪ್ರಾಯ.
- ಹೆಸರು ಹಿಡಿದು ಆಪಾದನೆಗಳನ್ನು ಮಾಡುವುದು ಈವತ್ತು ಅಭ್ಯಾಸವಾಗಿಬಿಟ್ಟಿದೆ. ಹೀಗೆ ಹಣವಂತರು ರಾಜಕೀಯದಲ್ಲಿ ಮೆರೆಯುತ್ತಿರುವುದು ಇದೇ ಮೊದಲಲ್ಲ. ಹಿಂದೆ ಅನೇಕ ಸಕರ್ಾರಗಳಲ್ಲಿ ಕ್ಯಾಬಿನೆಟ್ ಮೀಟಿಂಗ್ನ ಅಜೆಂಡಾವನ್ನು ಹೀಗೆ ಹಿಂದೆ ನಿಂತು ನಯಂತ್ರಿಸುತ್ತಿದ್ದ ಹಣವಂತರು ನಿರ್ಣಯಿಸುತ್ತಿದ್ದದ್ದನ್ನೂ ನಾನು ಬಲ್ಲೆ. ಈಗ ಇವರನ್ನು ಟಿಕಿಸುತ್ತಿರುವವರೆಲ್ಲಾ ಅವರಿಗೇ ಪ್ರಶ್ನೆ ಹಾಕಿಕೊಳ್ಳಬೇಕು. ಅವರು ಅಧಿಕಾರದಲ್ಲಿದ್ದಾಗ ಇಂಥವರ ಪ್ರಮೇಯವೇ ಇರಲಿಲ್ಲವೇ? ಹಾಗಾದರೆ ಇಷ್ಟು ಖಾಸಗೀ ಕಾಲೇಜುಗಳು ಹೆಗೆ ಬಂದವು, ಈ ಗಣಿಗಳಿಗೆ ಪರವಾನಗಿ ಕೊಟ್ಟವರಾರು? ಈಗ ಇವರು ಚುನಾವಣೆಗಳಿಗೆ ನಿಲ್ಲುತ್ತಿದ್ದಾರೆ, ಪಕ್ಷವನ್ನು ಬಹಿರಂಗವಾಗೇ ನಿಯಂತ್ರಿಸುತ್ತಿದ್ದಾರೆ. ಇವರ ತೋರ್ಪಡಿಕೆ, ಉರವಣಿಗೆ ಜಾಸ್ತಿಯಾಗಿರುವುದರಿಂದ ಎಲ್ಲರಿಗೂ ಹಾಗೆ ಕಾಣಿಸುತ್ತಿದೆ ಅಷ್ಟೆ. I am in no way defending them.ಅವರು ನಡೆಸುತ್ತಿರುವ ವ್ಯಾಪಾರ, ಕೊಳ್ಳೆ ಹೊಡೆಯುತ್ತಿರುವುದು ಎಲ್ಲವೂ ಅನೈತಿಕವೇ ಸರಿ. ನಾನು ಅದನ್ನು ಸರ್ವಥಾ ಖಂಡಿಸುತ್ತೇನೆ. ಸೈದ್ಧಾಂತಿಕ ಅಸ್ಪಷ್ಟತೆಯಿರುವವರು ಮಡುವ ಬಾಲಿಶ ವರ್ತನೆಯಿದು. ನೀತಿ ನಿರೂಪಣೆಯಲ್ಲಿ ಬಿಗುವಿದ್ದರೆ ಇವರು ಹೇಗೆ ಈ ಮಟ್ಟಕ್ಕೆ ಬೆಲೆಯುತ್ತಿದ್ದರು? ಯಾವುದೇ ಪಕ್ಷವನ್ನು ಅಥವಾ ಸರ್ಕಾರವನ್ನು ಕಾಣದ ಕೈಗಳು ಹಿಂದಿನಿಂದ ನಿಯಂತ್ರಿಸುವುದು ಸರ್ವಥಾ ತಪ್ಪು. ಸಾರ್ವಜನಿಕ ಜೀವನದಲ್ಲಿರುವವರಿಗೆ ಜನತೆಯ ಭಯವಿರಬೇಕೇ ಹೊರತು ಮತ್ತೊಬ್ಬರ ಮರ್ಜಿ ಸಲ್ಲದು.

ಕಾಂಗ್ರೆಸ್ನಲ್ಲಿ ಆ ವಿರೋಧ ಪಕ್ಷದ ಕೆಚ್ಚಿಲ್ಲವೇಕೆ? ಕಾಂಗ್ರೆಸ್ ಯಾಕೆ ಹೋರಾಡಿ ಅಧಿಕಾರ ಗಳಿಸಲು ಪ್ರಯತ್ನಿಸುತ್ತಿಲ್ಲ? ಈಗಲೂ ಈ ಸರ್ಕಾರದ ಪಾಪದ ಕೊಡ ತುಂಬಲಿ, ಆಗ ಜನರಿಗೆ ಬೇರೆ ಆಯ್ಕೆಗಳೇ ಇರುವುದಿಲ್ಲ, ನಾವೇ ರಾಜರು ಅನ್ನುವ ರೀತಿಯಿದೆ ಕಾಂಗ್ರೆಸ್ ವರ್ತನೆ...
- ಅಧಿಕಾರ ಮನುಷ್ಯನಿಗೆ ಅರಿವಿಲ್ಲದೆಯೇ ಆತನನ್ನು ಭೋಗ ಜೀವಿಯನ್ನಾಗಿ ಮಾಡಿಬಿಡುತ್ತದೆ. ಸಿಕ್ಕ ಸವಲತ್ತು, ಹಣವನ್ನು ಯಾರೂ ಕಳೆದುಕೊಳ್ಳಲು ಸಿದ್ಧರಿರುವುದಿಲ್ಲ. 1978-79ರ ಹಿಂದೆ ವಿರೋಧ ಪಕ್ಷಗಳ ಗುಣಮಟ್ಟ ಅತ್ಯುತ್ತಮವಾಗಿತ್ತು. ಗೋಪಾಲಗೌಡರು, ಚೆನ್ನಬಸಪ್ಪನೋರು, ಸಿದ್ಧವೀರಪ್ಪನೋರು, ಅಜಿತ್ ಸೇಠರು, ದೇವೇಗೌಡರು ಎಲ್ಲ ಮಹಾನುಭಾವರೂ ಇದ್ದರು. ಆದರೆ ಅರಸು ಸರ್ಕಾರದ ಪತನದ ನಂತರ ಪಕ್ಷಗಳಲ್ಲಿ ಪಕ್ಷಾಂತರದ ಕಲಬೆರೆಕೆ ಪ್ರಾರಂಭವಾಯಿತು. ಜನತಾ ಪಕ್ಷ ಇನ್ನೇನು ತಾವು ಅಧಿಕಾರಕ್ಕೆ ಬಂದೇ ಬಿಟ್ಟಿವಿ ಅನ್ನೋ ರೀತಿ ವರ್ತಿಸಿತೇ ಹೊರತು, ವಿರೋಧ ಪಕ್ಷವಾಗಲ್ಲ. ವಿರೋಧ ಪಕ್ಷಗಳ ಗುಣಮಟ್ಟ ಕುಸಿಯಲು ಪ್ರಾರಂಭಿಸಿದ್ದು ಈ ದಿಸೆಯಲ್ಲಿ. ನಂತರದ ಕಾಲಘಟ್ಟದಲ್ಲಿ ಹೊಸ ರಾಜಕೀಯ ಪೀಳಿಗೆಯೊಮದು ಅಧಿಕಾರದ ರುಚಿ ನೋಡಿತು, ಅವರೂ ಭ್ರಷ್ಟರಾದರು. ಭ್ರಷ್ಟತೆ, ನೈತಿಕತೆ ಮತ್ತು ಹೋರಾಟಗಳು ಒಂದೆಡೆಯಿರುವುದು ದುಸ್ಸಾಧ್ಯ. ಹಾಗಾಗಿ ಈಗ ವಿರೋಧ ಪಕ್ಷಗಳಿಲ್ಲ. ಈಗೇನಿದ್ದರೂ ಇರುವುವು ಹಿಂದಿನ ಆಡಳಿತ ಪಕ್ಷ, ಇಂದಿನ ಆಡಳಿತ ಪಕ್ಷ ಮತ್ತು ಮುಂಬರುವ ಆಡಳಿತ ಪಕ್ಷ ಮಾತ್ರ. ಇನ್ನು ಹೋರಾಟದ ಮಾತೆಲ್ಲಿಂದ ಬರಬೇಕು?

ಇನ್ನು ಕಾಂಗ್ರೆಸ್ ಜೆಡಿಎಸ್ ಮೈತ್ರಿಯ ವಿಷಯ. ಕರ್ನಾಟಕ ಮೊದಲಿಂದಲೂ ಕಾಂಗ್ರೆಸ್ನ ಭಧ್ರ ಕೋಟೆ. ಅಂತಹದರಲ್ಲಿ ಇಲ್ಲಿ ಕಾಂಗ್ರೆಸ್ನ ಪುನರುತ್ಥಾನಕ್ಕೆ ಜೆಡಿಎಸ್ನ ಮೈತ್ರಿ ಅನಿವಾರ್ಯವೇ? ಕಾಂಗ್ರೆಸ್ ತನಗೆ ಸ್ವಂತವಾಗಿ ಅಷ್ಟು ಶಕ್ತಿಯಿಲ್ಲವೆಂದು ಒಪ್ಪಿಕೊಂಡಂತಲ್ಲವೇ?
- ಈ ಮೈತ್ರಿಯ ವಿಷಯ ಹೈಕಮಾಂಡ್ನ ನಿರ್ಧಾರ. ಅನಿವಾರ್ಯವಾ ಅಂತ ಕೇಳಿದರೆ, ಇಲ್ಲಿ ನನ್ನ ಅಭಿಪ್ರಾಯ ಮುಖ್ಯವಾಗುವುದಿಲ್ಲ. ಅನಿವಾರ್ಯ ಅಂತ ಹೈಕಮಾಂಡ್ ತೀರ್ಮಾನಿಸಿದೆ. ಭಧ್ರಕೋಟೆಯಲ್ಲಿ ಅಭಧ್ರತೆಯಿದೆ ಎಂದೇ ಅಲ್ಲವೇ ಮೈತ್ರಿಗೆ ಮುಂದಾಗಿರುವುದು. ಈ ಚುನಾವಣೆಗಳ ಫಲಿತಾಂಶಗಳ ನಂತರ ನಾವು ನಮ್ಮ ಅಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲಿ ವ್ಯಕ್ತಪಡಿಸುತ್ತೇವೆ. ಅಂದು ಹೇಳುವುದನ್ನು ಇಂದೇ ಹೇಳಲಿಕ್ಕೆ ಬರುವುದಿಲ್ಲ.

ಇಂದು ರಾಜ್ಯ ಕಾಂಗ್ರೆಸ್ನಲ್ಲಿ ಜನತಾ ಪರಿವಾರದ ಮಾಜಿ ನಾಯಕರೇ ತುಂಬಿ ತುಳುಕುತ್ತಿದ್ದಾರೆ. ಇವರು ಈ ಮೈತ್ರಿಯನ್ನು ಹೇಗೆ ಸ್ವೀಕರಿಸಬೇಕು? ಇವರಿಗೆ ಇರುಸುಮುರುಸಾಗಿ ಫಲಿತಾಂಶಗಳ ಮೇಲೆ ಇದು ಪ್ರಭಾವ ಬೀರುವುದಿಲ್ಲವೇ?
- ಕಾಂಗ್ರೆಸ್ನಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಇದು ಕಾಂಗ್ರೆಸ್ ಸಂಸ್ಕೃತಿ. ನೀವು ಕಾಂಗ್ರೆಸಿಗನಾಗಿದ್ದರೆ, ಆ ನಿರ್ಣಯಕ್ಕೆ ತಲೆಬಾಗಿ ಮುನ್ನಡೆಯಬೇಕು, ಇಲ್ಲವೇ ಕಾಂಗ್ರೆಸ್ನಿಂದ ಗಾಡಿ ಬಿಡಬೇಕು. ಏನೇ ಅಸಮಾಧಾನವಿದ್ದರೂ ಅದು ಪಕ್ಷದ ವೇದಿಕೆಗಳಲ್ಲೇ ಚರ್ಚೆಯಾಗಬೇಕೇ ಹೊರತು, ಪಬ್ಲಿಕ್ ಆಗಿ ಮೀಡಿಯಾಗೆ ಹತ್ತೋದು ಸಮಂಜಸವಲ್ಲ. ರಾಜಕಾರಣದಲ್ಲಿ ಎಂದೆಂದಿಗೂ ತಮಗೆ ಸರಿಹೊಂದುವಂತಹ, ತಮ್ಮ ಮನೋಭಿಷ್ಠೆಯ ನಿರ್ಣಯಗಳೇ ಆಗುತ್ತವೆ ಎಂದು ನಿರೀಕ್ಷಿಸುವುದು ತಪ್ಪು.

ದೇವೇಗೌಡರು ಇತ್ತೀಚೆಗೆ ಮತ್ತೆ ಜನತಾ ಪರಿವಾರವೆಲ್ಲಾ ಒಗ್ಗೂಡಬೇಕೆಂದು ಹೇಳುತ್ತಿದ್ದಾರೆ. ನಿಮ್ಮ ನಿಲುವೇನು? ಅದು ಕಾರ್ಯಸಾಧುವಾ?
- ದೇವೇಗೌಡರು ಹಿರಿಯ ರಾಜಕಾರಣಿಗಳಿದ್ದಾರೆ. ಜನತಾ ಪಕ್ಷವನ್ನು ಕಟ್ಟುವುದರಲ್ಲಿ ಮೊದಲಿಂದಲೂ ಅವರ ಪಾತ್ರ ಬಹಳ ಹಿರಿದು. ಅವರಿಗೆ ತಮ್ಮ ಪಕ್ಷದ ಚೆದುರಿಹೋದ ಅನೇಕ ನಾಯಕರನ್ನು ಒಗ್ಗೂಡಿಸಿ, ಪಕ್ಷವನ್ನು ಬಲವರ್ಧನೆಗೊಳಿಸುವ ಆಕಾಂಕ್ಷೆಯಿರಬಹುದು. ಅದರಲ್ಲಿ ತಪ್ಪೇನಿಲ್ಲ. ಅವರು ಯಾವ ಯಾವ ನಾಯಕರೊಂದಿಗೆ ಮಾತನಾಡಿದ್ದಾರೋ, ಏನು ಆಶ್ವಾಸನೆ ಪಡೆದಿದ್ದಾರೋ ನಾನರಿಯೆ. ನನ್ನಂತೂ ಅವರು ಸಂಪರ್ಕಿಸಿಲ್ಲ. ನನ್ನ ಮಟ್ಟಿಗೆ ಹೇಳುವುದಾದರೆ ನಾನು ಅಪ್ಪಟ ಕಾಂಗ್ರೆಸಿಗ, ನನಗೆ ರಾಜಖೀಯ ಪೂರ್ವಾಶ್ರಮಗಳಿಲ್ಲ.

ತಾವು ವಿಧಾನಸಭಾಧ್ಯಕ್ಷರಾಗಿದ್ದವರು, ಉತ್ತಮ ಸಂಸದೀಯ ಪಟುವೂ ಹೌದು. ಇತ್ತೀಚೆಗೆ ಕಲಾಪಗಳು ತೀರಾ ಸಪ್ಪೆಯಾಗುತ್ತಿದೆಯಲ್ಲಾ, ಅದರಲ್ಲೊಂದು ಗಾಂಭೀರ್ಯವೇ ಇರುವುದಿಲ್ಲ, ಯಾಕೆ ಹೀಗೆ ಕಲಾಪಗಳು ಅವಸಾನಗೊಳ್ಳುತ್ತಿದೆ?

- ನೀವು ಹೇಳಿದ ಹಾಗೆ ಮೊದಲು ಅದರಲ್ಲೊಂದು ಗಾಂಭೀರ್ಯ ಇತ್ತು. ವಿರೋಧ ಪಕ್ಷದ ನಾಯಕರನ್ನು ಸದನದಲ್ಲಿ ಎದುರಿಸುವುದು ತೀರ ಕಷ್ಟಕರವಾಗುತ್ತಿತ್ತು. ಆಗ ಅಂತಹ ನಾಯಕರಿದ್ದರು. ಹಾಗಾಗಿ ಅನನುಭವಿಗಳಿಗೆ ಮಂತ್ರಿಗಿರಿ ಕೊಡುತ್ತಿರಲಿಲ್ಲ. ಸಭೆಗೆ ಒಂದು ಬೆಲೆಯಿತ್ತು. ಎಲ್ಲರೂ ಓದಿಕೊಂಡು ಬರುತ್ತಿದ್ದರು, ಸದನದಲ್ಲಿ ಉತ್ಕೃಷ್ಟ ಮಟ್ಟದ ಚರ್ಚೆಯಾಗುತ್ತಿತ್ತು. ಆದರೆ ಈಗ ಮೊದಲ ಬಾರಿಗೆ ಶಾಸಕನಾದವನು ಕೂಡ ಮಂತ್ರಿಯಾಗುತ್ತಾನೆ. ಮೊದಲೇ ಹೇಳಿದ ಹಾಗೆ ಈಗ ವಿರೋಧ ಪಕ್ಷಗಳೇ ಇಲ್ಲ. ಎಲ್ಲವೂ ಕೂಡಾವಳಿ. ಆಗ ಎಲ್ಲದರಲ್ಲೂ ಒಂದು ಗಾಂಭೀರ್ಯವಿತ್ತು, ಅದು ಒಂದು ಕ್ರಿಕೆಟ್ ಪಂದ್ಯವಿರಬಹುದು, ಸಿನಿಮಾ ಇರಬಹುದು, ರಾಜಕೀಯವಿರಬಹುದು. ಈಗ ಎಲ್ಲೂ ಆ ಗಾಂಭೀರ್ಯವೇ ಇಲ್ಲ. ರಾಜಕಾರಣ ಎನ್ನುವುದು ಸಮಾಜದ ಪ್ರತಿಫಲನ. ಹಾಗಾಗಿ ಇಲ್ಲಿನದೂ ಅದೇ ಕಥೆ.

ತಾವು ನಾಡು ಕಂಡ ಅಪುರೂಪದ ಸಜ್ಜನ, ಬುದ್ಧಿಜೀವಿ ರಾಜಕಾರಣಿಗಳಲೊಬ್ಬರು. ನಿಮಗೆ 40 ವರ್ಷಗಳ ರಾಜಕಾರಣದ ಸುಧೀರ್ಘ ಅನುಭವವಿದೆ. ಈ ನಾಡಿನಲ್ಲಿ ಅರ್ಹರೂ ಹಾಗೆಯೇ ಎಷ್ಟೋ ಅನರ್ಹರೂ ಕೂಡ ಮಂತ್ರಿ, ಮತ್ತೊಂದೂ ಆಗಿದ್ದಾರೆ. ಆದರೆ ತಾವು ಇದುವರೆಗೂ ಕೂಡ ಒಮ್ಮೆಯೂ ಮಂತ್ರಿಯಾಗಿದ್ದಿಲ್ಲವಲ್ಲ ಏಕೆ? ತಮಗೆ ಈ ಕುರಿತು ಬೇಸರವಿಲ್ಲವೇ?

- ನಾನು ಯಾವತ್ತೂ ಮಂತ್ರಿಗಿರಿಗೆ ಅರ್ಜಿ ಹಾಕಿದವನಲ್ಲ. ನಾನು ಶಾಸಕನೋ ಮಂತ್ರಿಯೋ ಆಗಬೇಕೂಂತ ರಾಜಕೀಯಕ್ಕೆ ಬಂದವನಲ್ಲ. ಆ ಆಸೆ ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಅಷ್ಟೆ. ಸ್ವಾತಂತ್ರ್ಯ ಚಳುವಳಿಯ ಎಷ್ಟೋ ಮಹನೀಯರು ವಿದಾನಸೌಧದ ಮೆಟ್ಟಿಲನ್ನೇ ಹತ್ತಲಿಲ್ಲವಲ್ಲ, ಅವರೆಲ್ಲಾ ನಮ್ಮಂಥವರು ಶಾಸಕರಾಗಿದ್ದನ್ನು ನೊಡಿ ಏನಂದುಕೊಂಡಿರಬಹುದು. ಆದ್ದರಿಂದ ನಾನು ತೃಪ್ತ ಮಂತ್ರಿಯಾಗಲಿಲ್ಲವೆಮದು ಯಾವ ಬೆಸರವೂ ಇಲ್ಲ, ಇನ್ನು ಮುಂದೆಯೂ ಅದಕ್ಕಾಗಿ ಅಜರ್ಿ ಹಾಕುವುದಿಲ್ಲ.
(ಈ ಭಾನುವಾರದಲ್ಲಿ ಪ್ರಕಟಿತ )

ಅಂತೂ ಇಂತೂ ಹದಿನೇಳು ವರ್ಷಕ್ಕೆ ದಂಟು......!  

Posted by bharadwaja in


ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಎರಡು ಮಹಾ ದುರಂತಗಳು. ಒಂದು ಇಂದಿರಾ ಗಾಂಧಿ ಪ್ರಜಾಪ್ರಭುತ್ವವನ್ನು ಕಾಲಡಿಯಲ್ಲಿ ತುಳಿದು ಎಮರ್ಜೆನ್ಸಿ ಹೇರಿದ್ದು. ಮತ್ತೊಂದು ಬಾಬ್ರಿ ಮಸೀದಿ ಧ್ವಂಸ. ಇವೆರಡೂ ಮಹಾದುರಂತಗಳೇ ಆಧಾರವಾಗಿ ಅನೇಕ ನಾಯಕರು ಹುಟ್ಟಿಕೊಂಡರು, ಇಡೀ ದೇಶದ ರಾಜಕೀಯ ಧೃವೀಕರಣಕ್ಕೊಳಗಾಯಿತು. ಎಮರ್ಜೆನ್ಸಿ ದೇಶದಲ್ಲಿ ಕಾಂಗ್ರೆಸ್ ವಿರೋಧಿ ರಾಜಕಾರಣಕ್ಕೆ ನಾಂದಿ ಹಾಡಿ, ಜನತಾ ಉದಯಕ್ಕೆ ಕಾರಣವಾಯಿತು. ಬಾಬ್ರಿ ಮಸೀದಿಯ ಧ್ವಂಸ ಕೂಡ ಅಷ್ಟೆ. ಭಾರತದ ರಾಜಕೀಯದಲ್ಲಿ ಅಪಾರ ಪ್ರಮಾಣದ ಧೃವೀಕರಣಕ್ಕೆ ಕಾರಣವಾಯಿತು. ಕಾಂಗ್ರೆಸ್ ವಿರೋಧಿ ರಾಜಕೀಯ ವೇದಿಕೆಗಳು ಹೋಗಿ, ಬಿಜೆಪಿಯನ್ನು ಕೋಮುವಾದಿಯನ್ನಾಗಿ ಜರಿದು ಅದರ ವಿರುದ್ಧ ಜಾತ್ಯಾತೀತ ಶಕ್ತಿಗಳೆಲ್ಲಾ ಒಂದಾಗತೊಡಗಿದವು. ಜನತಾ ಪಕ್ಷದ ಅನೇಕ ಹೋಳುಗಳು ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳತೊಡಗಿದವು. ಇಂದಿಗೂ ನಮ್ಮ ದೇಶದ ರಾಜಕಾರಣದಲ್ಲಿ ಇದು ತಥ್ಯ. ಎಮರ್ಜೆನ್ಸಿ ಇಂದು ಒಂದು ಕರಾಳ ನೆನಪು ಮಾತ್ರ. ಅದರ aftereffects ಅನ್ನು ನಾವಿಂದು ಅನುಭವಿಸುತ್ತಿಲ್ಲ. ಶಾರದಾ ಪ್ರಸಾದರು ಹೇಳಿದಂತೆ ಇಂದಿರಾ ಹೇರಿದ ಎಮರ್ಜೆನ್ಸಿ, ಮತ್ಯಾರೂ ಅತ್ತ ಯೋಚಿಸದಂತೆ ಮಾಡಿಟ್ಟಿದೆ. ಆದರೆ ಬಾಬ್ರಿ ಮಸೀದಿ ಧ್ವಂಸ ಹಾಗಲ್ಲ. ಅದು ಭಾರತದ ಜಾತ್ಯಾತೀತ ಮನಸ್ಸಿನ ಮೇಲಾಗಿರುವ ಗಾಯ. ಅದು ಇನ್ನೂ ಮಾಗಿಲ್ಲ. ಭಾರತದ ಮನಸ್ಸು ಮೊದಲಿಂದಲೂ ಜಾತ್ಯಾತೀತ ಮತ್ತು ಪರಧರ್ಮ ಸಹಿಷ್ಣು. ದೇವರು ಒಬ್ಬನೆ, ಆತನ ನಾಮ ಹಲವು, ಆತನನ್ನು ತಲುಪುವ ಮಾರ್ಗಗಳೂ ಹಲವು ಎಂಬ ನಂಬಿಕೆಯ ಮೇಲೆ ನಿಂತಿರುವ ಸಮಾಜ ನಮ್ಮದು. ಬಾಬ್ರಿ ಮಸೀದಿ ಧ್ವಂಸ ನಮ್ಮ ಸಮಾಜದ ಈ ತಳಹದಿಯನ್ನೇ ಸಾರಾಸಗಟಾಗಿ ತಿರಸ್ಕರಿಸುತ್ತದೆ. ಇದು ಮಹಾ ದುರಂತ ಅನ್ನಿಸಿಕೊಳ್ಳುವುದೇ ಈ ಕಾರಣಕ್ಕೆ. ಭಾರತದ ಮನಸ್ಸಿಗೆ ಆಗಿರುವ ಈ ಹುಣ್ಣು ಇನ್ನೂ ಮಾಗಿಲ್ಲ ಅಷ್ಟೇ ಅಲ್ಲ, ಈ ಹುಣ್ಣಿನಿಂದ ಇನ್ನೂ ಕೀವು ಸೊರುತ್ತಲೇ ಇದೆ. ಭಾರತದಲ್ಲಿ ಇಸ್ಲಾಮಿಕ್ ಜಿಹಾದ್ನ ಭಯೋತ್ಪಾದನೆ ಕಾಶ್ಮೀರದ ಗಡಿ ದಾಟಿದ್ದೇ ಬಾಬ್ರಿ ಮಸೀದಿ ಧ್ವಂಸಕ್ಕೆ ಉತ್ತರವಾಗಿ. ಅವತ್ತು ದಾವೂದ್ ಇಬ್ರಾಹಿಂ ಪಾಕಿಸ್ತಾನದ ಐಎಸ್ಐನ ಸಹಾಯದೊಂದಿಗೆ 1993ರ ಮಾರ್ಚ್ನಲ್ಲಿ ಬಾಂಬೆಯಲ್ಲಿ ಸರಣಿ ಸ್ಫೋಟ ನಡೆಸುತ್ತಾನೆ. 257 ಮಂದಿ ಬಲಿಯಾಗುತ್ತಾರೆ. ಎಲ್ಲೋ ಕಾಶ್ಮೀರದ ಕೊಳ್ಳಗಳಲ್ಲಿ ನಡೆಯುತ್ತಿದ್ದ ಭಯೋತ್ಪಾದನೆ ನಮ್ಮ ಮನೆಬಾಗಿಲಿಗೆ ಬಂದು ನಿಂತಿದೆ. ಅಂದಿನಿಂದ ಇಂದಿನವರೆಗೂ ಭಾರತದಲ್ಲಿ ನಡೆದ ದಾಳಿಗಳದೆಷ್ಟೋ? ಸತ್ತವರೆಷ್ಟೋ? ಲೆಕ್ಕವಿಟ್ಟವರಿಲ್ಲ.


6 ಡಿಸೆಂಬರ್, 1992. ಅದು ಸ್ವತಂತ್ರ್ಯ ಭಾರತದ ಇತಿಹಾಸದಲ್ಲೇ ಒಂದು ಕರಾಳ ದಿನ. ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿಯತ್ತ ಧಾವಿಸಿ ಬಂದ ಸಾವಿರಾರು ಕಾರಸೇವಕರು, ನೋಡನೋಡುತ್ತಲೇ ಇಡಿಯ ಬಾಬ್ರಿ ಮಸೀದಿಯನ್ನು ನೆಲಕ್ಕೆ ಕೆಡವಿ ಬಿಟ್ಟರು. ಅದ್ವಾನಿಯವರ ರಾಮರಥಯಾತ್ರೆ ಹಾಗೆ ಪರ್ಯಾವಸಾನಗೊಂಡಿತ್ತು. ರಾಮಜನ್ಮಭೂಮಿ ಚಳುವಳಿಯ ನಾಯಕರು, ಪೋಲೀಸರು, ಉತ್ತರ ಪ್ರದೇಶದ ಸರ್ಕಾರ, ಕೇಂದ್ರ ಸರ್ಕಾರ ಎಲ್ಲರೂ ಬೆಪ್ಪರಂತೆ(?) ನೋಡುತ್ತಾ ನಿಂತು ಬಿಟ್ಟಿದ್ದರು. ಮೊದಲ ತಲೆದಂಡ ಇದೆಲ್ಲದಕ್ಕೂ ಸಾಥ್ ಕೊಟ್ಟಿದ್ದ, ನಡೆದ ನಂತರ ವೀರಾವೇಶದ ಭಾಷಣ ಮಾಡಿದ್ದ ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ರದು. ನಂತರ ರಾಮಜನ್ಮಭೂಮಿ ಚಳುವಳಿಯ ಅನೇಕ ನಾಯಕರನ್ನು ಜೈಲಿಗಟ್ಟಲಾಯಿತಾದರೂ, ಕೂಡಲೇ ಅವರೆಲ್ಲ ಹೊರಬಂದರು. ಅದನ್ನೊಂದು ದಿಗ್ವಿಜಯವೆಂದು ಬೀಗಿದರು, ಆಚರಿಸಿದರು. ಅಂದಿನ ಪ್ರಧಾನಿ ಕಾಂಗ್ರೆಸ್ನ ಪಿ.ವಿ.ನರಸಿಂಹಾರಾವ್. ಅವರು ಈ ದುರಂತ ಹತ್ತು ದಿನಗಳ ನಂತರ ಜಸ್ಟೀಸ್ ಲಿಬರ್ಹಾನ್ರ ನೇತೃತ್ವದಲ್ಲಿ ಒಂದು ನ್ಯಾಯಾಂಗ ತನಿಖಾ ಮಂಡಳಿಯನ್ನು ರಚಿಸಿದರು. ಇವರು ಎಲ್ಲದರ ಕುರಿತು ಕೂಲಂಕುಷವಾಗಿ ವಿಚಾರಣೆ ನಡೆಸಿ, ಬಾಬ್ರಿ ಮಸೀದಿ ಧ್ವಂಸಕ್ಕೆ ಯಾರ್ಯಾರು ಕಾರಣಕರ್ತರು? ಅಂತ ತೇಲಿಸಬೇಕಿತ್ತು. ಇದಕ್ಕೆ ಈ ಸಮಿತಿಗೆ ನೀಡಿದ್ದ ಗಡುವು ಮೂರು ತಿಂಗಳು. ಅಂದರೆ ಈ ಲಿಬರ್ಹಾನ್ ವರದಿ ಬರಬೇಕಿದ್ದುದು 1993 ಮಾರ್ಚ್-ಏಪ್ರಿಲ್ನಲ್ಲಿ! ಬಂದಿದ್ದು 2009ರ ಜೂನ್ 30ರಂದು! ಆರಾರು ತಿಂಗಳ 48 ವಿಸ್ತರಣೆಗಳು, 17 ವರ್ಷಗಳು! ಮೂರು ತಿಂಗಳುಗಳಲ್ಲಿ ವರದಿ ನೀಡಬೇಕಿದ್ದ ಈ ಸಮಿತಿ ಮೊದಲ ಸಭೆ ನಡೆಸಿದ್ದೇ 5 ತಿಂಗಳ ನಂತರ! ಹೀಗೆ ಈ ಲಿಬರ್ಹಾನ್ ಕಮೀಷನ್ ಬಗ್ಗೆ ಹೇಳುತ್ತಾ ಹೋದರೆ, ವಾಕ್ಯಕ್ಕೊಂದು ಆಶ್ಚರ್ಯಸೂಚಕ ಹಾಕದೆ ವಿಧಿಯಿಲ್ಲ.

ಹದಿನೇಳು ವರ್ಷಗಳ ಗಜಗರ್ಭದಿಂದ ಹೊರಬಂದಿರುವ ಲಿಬರ್ಹಾನ್ ವರದಿ ಬಾಬ್ರಿ ಮಸೀದಿಯ ಧ್ವಂಸದ ಕುರಿತು ಏನೇನು ಹೇಳಿದೆ? ಯಾರನ್ನು ಈ ದುರಂತಕ್ಕೆ ಜವಾಬ್ದಾರರನ್ನಾಗಿ ಮಡಿದೆ? ಯಾರ್ಯಾರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಿದೆ? ಎಂಬ ಕುತೂಹಲ ಇನ್ನೂ ಉಳಿದಿತ್ತು. ಆದರೆ ಇಲ್ಲೂ ಎಲ್ಲರಿಗೂ ನಿರಾಸೆಯೇ ಕಾದಿತ್ತು. ಬಾಬ್ರಿ ಮಸೀದಿಯ ಧ್ವಂಸ ಕಾರಸೇವಕರು ನಿಯಂತ್ರಣ ತಪ್ಪಿ ಆ ಘಳಿಗೆಯಲ್ಲಿ ಆದ ಅವಘಡವಲ್ಲವೆಂದೂ, ಇದೆಲ್ಲವೂ ಪೂರ್ವನಿಯೋಜಿತವಾಗಿದ್ದು, ಆರ್ಎಸ್ಎಸ್ ಇದರ ಲೇಖಕ ಎಂದು ಅವರನ್ನು ದೂಷಿಸಿದೆ. ಇನ್ನು ಉಮಾಭಾರತಿ, ವಿನಯ್ ಕಟಿಯಾರ್, ಗೋವಿಂದಾಚಾರ್ಯ ತರಹದ ಅಂದಿನ ಬಿಜೆಪಿಯ ಎರಡನೇ ಹಂತದ ನಾಯಕರು ಈ ವಿಧ್ವಂಸಕದಲ್ಲಿ ಸ್ವಯಂ ಪಾಲ್ಗೊಂಡಿದ್ದರೆಂದೂ, ರಾಮಜನ್ಮಭೂಮಿ ಚಳುವಳಿಯ ನಾಯಕಶ್ರೇಷ್ಠರಾದ ಅದ್ವಾನಿ, ವಾಜಪೇಯಿ ಮತ್ತು ಮುರಳಿ ಮನೋಹರ ಜೋಶಿಯವರು ಕೂಡ ಇದಕ್ಕೆ ಬಾಧ್ಯರೆಂದು ಹೇಳಿದೆ. ಅದ್ವಾನಿ, ಜೋಶಿಯವರ ಕುರಿತು ಮಾತನಾಡುತ್ತಾ, ಅವರು ಉದ್ವೇಗಭರಿತ ಭಾಷಣ ಮಾಡಿ ಕಾರಸೇವಕರನ್ನು ಪ್ರಚೋದಿಸಿದರೆಂದೂ, ನಂತರ ಬಾಬ್ರಿ ಮಸೀದಿಯ ಗುಮ್ಮಟಗಳು ನೆಲಕ್ಕುರುಳುತ್ತಿದ್ದಾಗಲೂ ದೂರ ನಿಂತು ದುಃಖ ವ್ಯಕ್ತಪಡಿಸಿದರೇ ಹೊರತು, ಅವರನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ನಂತರ ಕೂಡ ದೇಶವನ್ನು ಕೋಮು ದಳ್ಳುರಿಯ ಹಂತಕ್ಕೆ ತೆಗೆದುಕೊಂಡು ಹೋಗಿದ್ದಕ್ಕೂ ಇವರನ್ನು ಲಿಬರ್ಹಾನ್ ಕಮೀಷನ್ ಬಾಧ್ಯರನ್ನಾಗಿ ಮಾಡಿದೆ. ಇನ್ನು ವಾಜಪೇಯಿಯವರ ವಿಚಾರ. ವಾಜಪೇಯಿ ಅಂದು ಅಯೋಧ್ಯೆಯಲ್ಲಿರಲಿಲ್ಲವೆಂಬುದನ್ನು ಗುರತಿಸುತ್ತಲೇ, ಕೆಲ ನಾಯಕರು ಅವರ ಜಾತ್ಯಾತೀತ ಮುಖವಾಡವನ್ನುಳಿಸಿಕೊಳ್ಳಲು ಅಂದು ಅಯೋಧ್ಯೆಯಿಂದ ದೂರವಿದ್ದರು ಅಂತ ರಾಜಕೀಯ ಚೇಲಾಗಳ ಮಟ್ಟದ ಒಂದು ಕಾಮೆಂಟ್ ಮಾಡುತ್ತಾರೆ ಲಿಬರ್ಹಾನ್. ಅವರು ವಾಜಪೇಯಿಯವರನ್ನೂ ಈ ವಿಧ್ವಂಸಕಕ್ಕೆ ಮತ್ತು ದೇಶವನ್ನು ಕೋಮು ದಳ್ಳುರಿಗೆ ದೂಡಿದ್ದಕ್ಕೆ ಜವಾಬ್ದಾರರನ್ನಾಗಿ ಮಾಡುತ್ತಾರೆ. ಇದು ಸದ್ಯ ವಿವಾದಿತವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಯಾಕೆಂದರೆ ವಾಜಪೇಯಿಯವರನ್ನು ಲಿಬರ್ಹಾನ್ ಕಮೀಷನ್ ಸಮನ್ ಕೂಡ ಮಾಡಿಲ್ಲ! ಇನ್ನು ಇಡಿಯ ವರದಿ ಅತ್ಯಂತ ಕಟು ಶಬ್ಧಗಳಲ್ಲಿ ಟೀಕಿಸುವುದು ಕಲ್ಯಾಣ್ ಸಿಂಗರನ್ನು. ಅವರು ಎಲ್ಲವೂ ಗೊತ್ತಿದ್ದೂ ಕೂಡ, ಒಬ್ಬ ಮುಖ್ಯಮಂತ್ರಿಯಾಗಿ ಈ ವಿಧ್ವಂಸಕಕ್ಕೆ ಅವಕಾಶ ಮಾಡಿಕೊಟ್ಟರು ಎನ್ನುತ್ತದೆ ವರದಿ. ಅವರು ಅಧಿಕಾರಿಗಳ ಸಲಹೆಗೆ ವಿರುದ್ಧವಾಗಿ ಪ್ಯಾರಾಮಿಲಿಟರಿ ತುಕಡಿಗಳನ್ನು ಬಳಸಲು ಅನುಮತಿ ನಿರಾಕರಿಸಿದ್ದು, ನಂತರ ಸ್ಥಳಕ್ಕೆ ಧಾವಿಸಿ ವೀರಾವೇಶದ ಭಾಷಣ ಮಾಡಿದ್ದು, ಎಲ್ಲವನ್ನೂ ವರದಿ ಗುರುತಿಸಿದೆ. ಆದರೆ ಇದೇ ಕೋವಿನಲ್ಲಿ ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಮತ್ತು ಪ್ರಧಾನಿ ಪಿ.ವಿ.ನರಸಿಂಹಾರಾಯರನ್ನು ಟೀಕಿಸುವುದಿಲ್ಲ ಲಿಬರ್ಹಾನ್. ಅವರೊಂದಿಗೆ ಉತ್ತರ ಪ್ರದೇಶ ಸರ್ಕಾರ ಸಹಕರಿಸಲಿಲ್ಲ, ಬಿಜೆಪಿಗರು ಸುಳ್ಳು ಆಶ್ವಾಸನೆ ಕೊಟ್ಟರು, ರಾಜ್ಯಪಾಲರ ಸಲಹೆಗೆ ವಿರುದ್ಧವಾಗಿ ಅವರು ರಾಷ್ಟ್ರಪತಿ ಆಡಳಿತ ಹೇರುವ ಹಾಗಿರಲಿಲ್ಲ, ಪಾಪ ಅವರು ತಾನೇ ಇನ್ನೇನು ಮಾಡಲಿತ್ತು? ಹೀಗೆ ಸಾಗುತ್ತದೆ ಲಿಬರಹಾನ್ರ ರಾಯರ ಪ್ರವರ. ಇಲ್ಲಿ ಸಮಸ್ಯೆಯೆಂದರೆ ರಾಯರು ಅಯೋಧ್ಯೆಯ ಬಗ್ಗೆ ಬರೆದ ಪುಸ್ತಕವನ್ನು ಲಿಬರಹಾನ್ ಓದಿಬಿಟ್ಟಿದ್ದಾರೆ, ಅದರಲ್ಲಿ ರಾಯರು ತಮ್ಮನ್ನು ಡಿಫೆಂಡ್ ಮಾಡಿಕೊಳ್ಳಲು, ಮುಂದಿಡುವ ವಾದ ಸರಣಿಯನ್ನೇ ಲಿಬರಹಾನ್ ಇಲ್ಲೂ ಮಂಡಿಸುತ್ತಾರೆ. ಇದು ನಿವೃತ್ತಿಯ ನಂತರ ತನಗೆ ಹದಿನೇಳು ವರ್ಷಗಳ ಕಾಲ ಪುನರ್ವಸತಿ ಕಲ್ಪಿಸಿದ ರಾಯರ ಬಗೆಗಿನ ಕೃತಜ್ಞತೆಯಂತೆ ಭಾಸವಾಗುತ್ತದೆ.

ಈ ವರದಿ ಮೊನ್ನೆ ಸೋರಿಕೆಯಾಗಿ, ಅದು ಲೋಕಸಭೆಯಲ್ಲಿ ದೊಡ್ಡ ಗಲಾಟೆಯಾದ ನಂತರ ಸರ್ಕಾರ ಈ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದೆ, ಜೊತೆಗೆ action taken report ಅನ್ನೂ ಕೂಡ. ಇದರಲ್ಲಿ ಯಾರ ಮೇಲೂ ಕೂಡ, ಕ್ರಿಮಿನಲ್ ಕ್ರಮದ ಬಗ್ಗೆ ಚಕಾರವಿಲ್ಲ. ಬದಲಿಗೆ ಕೋಮು ಹಿಂಸೆಯನ್ನು ತಡೆಗಟ್ಟಲು ಹೊಸದೊಂದು ಕಾನೂನನ್ನು ಜಾರಿಗೆ ತರುವುದು, ಧಾರ್ಮಿಕ ಸಂಘಟನೆಗಳ ಸದಸ್ಯರಿಗೆ ರಾಜಕೀಯದಲ್ಲಿ ಸ್ಥಾನ ಕಲ್ಪಿಸದಿರುವುದು, ಹೀಗೆ ಎಲ್ಲ ಇಂತಹ ಜಾರಿಯೋಗ್ಯ ಆದರೆ ಆಗದ ಉಟೋಪಿಯನ್ ಶಿಫಾರಸುಗಳನ್ನು ಜಾರಿಗೆ ತರುವ ಮಾತನಾಡಿದೆ ಸರ್ಕಾರ. ಹದಿನೇಳು ವರ್ಷಗಳ ನಂತರ ಒಮದು ವಾರದ ರಾಜಕೀಯ ದೊಂಬರಾಟ ಅಷ್ಟೆ! ಈ ವಿಷಯದಲ್ಲಿ ಕಾಂಗ್ರೆಸ್ಸೂ ಕೂಡ ಸಾಚಾ ಅಲ್ಲ, ಪ್ರಾಮಾಣಿಕ ಅಲ್ಲ. ಈಗ ಬಿಜೆಪಿಯ ನಾಯಕರ ಮೇಲೆ ಈ ವಿಷಯವಾಗಿ ಏನೇ ಕ್ರಮ ಕೈಗೊಂಡರೂ ಅವರ, ಪಕ್ಷದ ಮರುಹುಟ್ಟಿಗೆ ಇದೇ ಚಿಮ್ಮುಹಲಗೆಯಾಗುವ ಸಂಭವವೇ ಹೆಚ್ಚು. ಆದ್ದರಿಂದಲೇ ಕಾಂಗ್ರೆಸ್ ಕೂಡ ಹಾಗೆ ಗಪ್ಚುಪ್ ಅಂತ ಕೂತಿರುವುದು. ಈ ವರದಿಯನ್ನಿಟ್ಟುಕೊಂಡು ಅದು ಉತ್ತರ ಪ್ರದೇಶದಲ್ಲಿ ಪುನಃ ತನ್ನ ನೆಲೆಯನ್ನು ಕಂಡುಕೊಳ್ಳುವ ಧಾವಂತದಲ್ಲಿದೆ. ಈಗ ಅಸಲಿ ಸಮಸ್ಯೆ ಬಂದಿರುವುದೇ ಬಿಜೆಪಿಗೆ. ಹಿಂದುತ್ವ ಅಥವಾ ಚುನಾವಣಾ ಸಂದರ್ಭದಲ್ಲಿ ವಾಜಪೇಯಿ ಅದ್ವಾನಿ ತೊಟ್ಟಿದ್ದ ಅಭಿವೃದ್ಧಿ, ದಕ್ಷ ಆಡಳಿತವನ್ನು ಪ್ರತಿಪಾದಿಸುವ ಅರ್ಬನ್ ಓರಿಯೆಂಟೆಡ್ ಬಣ್ಣದ ವೇಷ ಎರಡೂ ಕೂಡ ಕೆಲಸ ಮಾಡದೇ ಬಿಜೆಪಿ ಇಂದು ದೇಶದೆಲ್ಲೆಡೆ ಭೂಸ್ಥಾಪಿತವಾಗಿ ಬಿಟ್ಟಿದೆ. ಇಂದು ಅಲ್ಲಿ ಮುಂದಿನ ಹಾದಿಯ ಕುರಿತಾಗಿ ತರ್ಜನ-ಭರ್ಜನಗಳು ನಡೆಯುತ್ತಿವೆ. ಬಿಜೆಪಿ ಇಂದು ಕವಲು ದಾರಿಯಲ್ಲಿದ್ದು, ಅದು ಯಾವ ದಾರಿಯನ್ನು ಆರಿಸಿಕೊಳ್ಳಬೇಕೋ ಅರ್ಥವಾಗದೇ ಹೈರಾಣಾಗಿ ನಡೆಯುವುದನ್ನೇ ನಿಲ್ಲಿಸಿ ಕುಂತುಬಿಟ್ಟಿದೆ. ಒಬ್ಬೊಬ್ಬರು ಇದನ್ನು ಅವರಿಚ್ಛೆಗನುಗುಣವಾಗಿ ಒಂದೊಂದು ದಿಕ್ಕಿನಲ್ಲಿ ಎಳೆದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ರಾಮಜನ್ಮಭೂಮಿಯ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಇದು ಬಿಜೆಪಿಯನ್ನು ಎಲ್ಲಿಗೆ ಕೊಂಡೊಯ್ಯುತ್ತದೋ ಕಾದು ನೋಡಬೇಕಿದೆ.

ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಮತ್ತು ಲಿಬರಹಾನ್ ಕಮೀಷನ್ ಪ್ರಹಸನದಲ್ಲಿ ನಾವು ಎರಡನ್ನು ಗುರುತಿಸಬಹುದಾಗಿದೆ. ಒಂದು ನಮ್ಮ ದೇಶದಲ್ಲಿ ಏನೇ ಆದರೂ ಕೂಡಲೇ ರಚಿತವಾಗುವ ತನಿಖಾ ಮಂಡಳಿ, ನ್ಯಾಯಾಂಗ ತನಿಖೆಗಳು ತಲುಪಿರುವ ಹಾಸ್ಯಾಸ್ಪದ ಮಟ್ಟ. ಸಾರ್ವಜನಿಕವಾಗಿ ಎಲ್ಲರಿಗೂ ಸುಮಾರು ಹದಿನೇಳು ವರ್ಷಗಳ ಹಿಂದಿನಿಂದಲೇ ತಿಳಿದಿರುವ ವಿಚಾರವನ್ನು ಹೇಳಲು ಲಿಬರ್ಹಾನ್ ಹದಿನೇಳು ವರ್ಷ ತೆಗೆದುಕೊಂಡಿದ್ದಾರೆ. ಅನೇಕ ಪತ್ರಕರ್ತರು ಈ ವಿಷಯವಾಗಿ ಇನ್ನೂ ಹೆಚ್ಚು ವಿವರಗಳನ್ನೊಳಗೊಂಡ ಪುಸ್ತಕಗಳನ್ನೇ ರಚಿಸಿ ಬಿಸುಡಿದ್ದಾರೆ, ಅವು ಅಟ್ಟ ದಾಟಿ, ರದ್ದಿ ಅಂಗಡಿಗಳಲ್ಲಿ ಸಿಗಲು ಶುರುವಾಗಿ ದಶಕ ಸಂದಿದೆ. ಇಂಥದೊಂದು ವರದಿ ನೀಡಲಿಕ್ಕೆ ಹದಿನೇಳು ವರ್ಷ ಸರ್ಕಾರ 8 ಕೋಟಿ ಖರ್ಚು ಮಾಡಿ ಲಿಬರ್ಹಾನ್ರನ್ನು ಸಾಕಿದ್ದೇಕೆ? ಅನ್ನೋದು ಪ್ರಶ್ನೆ. ಮತ್ತೊಂದು ಸ್ವತಂತ್ರ್ಯ ಭಾರತದ ಮಹಾ ದುರಂತವೆನ್ನಿಸಿಕೊಂಡ ಬಾಬ್ರಿ ಮಸೀದಿ ಧ್ವಂಸ, ಮತ್ತು ನಂತರದ ಕೋಮು ದಳ್ಳುರಿಗೆ ಕಾರಣಕರ್ತರು ಎಂದು ಆರೋಪಿಸಲ್ಪಟ್ಟವರ ವಿರುದ್ಧ ಸರ್ಕರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೆಂದರೆ? ಇಲ್ಲಿ ನಾನು ಇದರ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ, 1984ರ ಸಿಖ್ ಗಲಭೆ, 2002ರ ಗೋಧ್ರಾ ಗಲಭೆ, ಇವೆಲ್ಲವಕ್ಕೂ ಮೂಲ ಕಾರಣ ರಾಜಕಾರಣ ಮತ್ತು ರಾಜಕಾರಣಿಗಳು ಅನ್ನೋದರಲ್ಲಿ ಎರಡನೇ ಮಾತಿಲ್ಲ. ಆದರೆ ಇವರೆಲ್ಲರೂ ಆರಾಮವಾಗಿ ಓಡಾಡಿಕೊಂಡಿದ್ದಾರೆ, ಬಹುಪಾಲು ಮಂದಿ ಅಧಿಕಾರದಲ್ಲಿದ್ದಾರೆ. ಒಂದು ಕೊಲೆ ಮಾಡಿದವನಿಗೆ ನೇಣು, ಸಾವಿರಾರು ಮಂದಿಯ ಸಾವಿಗೆ ಕಾರಣನಾದವನಿಗೆ ಅಧಿಕಾರ! ಅದಕ್ಕೆ ನಮ್ಮ ಭಾರತ ಹೀಗಿರುವುದು.