ರಿಪಬ್ಲಿಕ್ ಆಫ್ ಬಳ್ಳಾರಿಗೊಂದು ಸಂತಾಪ


ಬಳ್ಳಾರಿ: ರೆಡ್ಡಿ ಆಡಳಿತದಲ್ಲಿ ರಾಜ್ಯದೊಳಗಿದ್ದೂ ಅದೊಂದು ಪ್ರತ್ಯೇಕ ಗಣರಾಜ್ಯವೆನ್ನುವ ಮಟ್ಟಕ್ಕೆ ಅಲ್ಲಿ ಆತನ ಹಿಡಿತ, ಆಡಳಿತ ನಡೆದಿತ್ತು. ಕಾನೂನಿಗೆ ಬೆಲೆಯೇ ಇಲ್ಲ. ಅಲ್ಲಿ ಕುಟೀರದಿಂದ ಹೊರಬೀಳೂವ ಆತನ ಮಾತೇ ಅಂತಿಮ, ಅದೇ ಕಾನೂನು. ಹೀಗೆ ಒಂದು ಗಣರಾಜ್ಯಕ್ಕೆ ಮಹಾರಾಜನಾಗಿ ಮೆರೆದವನು ಗಾಲಿ ಜನಾರ್ಧನ ರೆಡ್ಡಿ. ಇಂಥದೊಂದು ಗಣರಾಜ್ಯವನ್ನು ತಮ್ಮದೇ ಸ್ವಾರ್ಥಗಳಿಗಾಗಿ ರಾಜಕೀಯ ಕೂಡ ಇದನ್ನು ಪೋಷಿಸಿತೇ ಹೊರತು, ಖಂಡಿಸಲಿಲ್ಲ. ಜನಾರ್ಧನ ರೆಡ್ಡಿ ತನಗಿನ್ನೆದುರೇ ಇಲ್ಲವೆಂಬಂತೆ ಮೆರೆದಾಡುತ್ತಲೇ ಇದ್ದ. ಆದರೆ ಕಾನೂನಿಗಿಂತಲೂ ಯಾರೂ ದೊಡ್ಡವರಲ್ಲ, ಎಂಬ ಮಾತು ಕ್ಲೀಷೆಯಾಗದೇ, ನಿಜವೆಂದು ನಿರೂಪಿತವಾಗಿದೆ.

ಸೆಪ್ಟೆಂಬರ್ 5ರ ಸವಿ ಮುಂಜಾನೆ ಬೆಳಿಗ್ಗೆ 4:30ಕ್ಕೆ ಡಿಐಜಿ ಲಕ್ಷ್ಮೀನಾರಾಯಣ ನೇತೃತ್ವದ ಆಂಧ್ರದ ಸಿಬಿಐ ತಂಡ ರೆಡ್ಡಿ ನಿವಾಸ ಕುಟೀರದ ಬಾಗಿಲು ಬಡಿದಿತ್ತು. ಒಳನಡೆದರೆ, ಜನಾರ್ಧನ ರೆಡ್ಡಿ ಇನ್ನೂ ಸವಿ ನಿದ್ದೆಯಲ್ಲಿದ್ದ. ಆತನನ್ನು ಎಬ್ಬಸಿದವರೆ, ಆತನ 16 ಮೊಬೈಲುಗಳನ್ನೂ ವಶಪಡಿಸಿಕೊಂಡು ಕೂರಿಸಿಬಿಟ್ಟರು. ಸತತ ಎರಡು ಘಂಟೆಗಳ ಕಾಲ ಕುಟೀರವನ್ನು ಶೋಧಿಸಿದ ಅಧಿಕಾರಿಗಳು ಅನೇಕ ದಾಖಲೆಗಳನ್ನು ವಶಪಡಿಸಿಕೊಂಡರು. ಕೂಡಲೇ ಜನಾರ್ಧನ ರೆಡ್ಡಿಯನ್ನು ಸಿಬಿಐ ತಂಡ ಬಂಧಿಸಿ ವಶಕ್ಕೆ ತೆಗೆದುಕೊಂಡಿತು. ಜನಾರ್ಧನ ರೆಡ್ಡಿ ಎಂಬೊಬ್ಬ ಪಾಳೇಗಾರ ಜೈಲು ಸೇರಲಿದ್ದ. ಹೊರಡುತ್ತಾ ತನ್ನ ಬೆನ್ಸ್ನಲ್ಲಿ ಬರುತ್ತೇನೆಂದಾಗಲೇ ಆತನಿಗೆ ತಿಳಿದದ್ದು ಅದನ್ನೂ ಸಿಬಿಐ ಸೀಜ್ ಮಾಡಿದೆಯೆಂದು. ಆತನನ್ನು ಸಿಬಿಐ ತಂಡದ ವಾಹನದಲ್ಲೇ ಕೂರಿಸಿಕೊಳ್ಳಲಾಯಿತು. ಅಲ್ಲಿಂದ ಅಲ್ಲೇ ಹತ್ತಿರದಲ್ಲಿದ್ದ ಒಎಂಸಿ ಕಿಂಪೆನಿಯ ವ್ಯವಸ್ಥಾಪಕ ನಿದರ್ೇಶಕ ಶ್ರೀನಿವಾಸ ರೆಡ್ಡಿಯ ಮನೆಗೂ ಹೋಗಿ ಆತನನ್ನೂ ಬಂಧಿಸಿ ಕೂರಿಸಿಕೊಂಡರು. ನಂತರ ನಡೆದದ್ದು ಅಕ್ಷರಶಃ ಮೆರವಣಿಗೆ. ಪ್ರೆಸ್ಸಿನವರು ಫೋಟೋ ತೆಗೆಯಲನುಕೂಲವಾಗಲೆಂಬಂತೆ ಕಾರಿನ ಕಿಟಕಿ ಗಾಜುಗಳನ್ನು ಇಳಿಸಿ ಇಡಿಯ ಊರೆಲ್ಲಾ ಓಡಾಡಿಬಿಟ್ಟಿತ್ತು ಕಾರು. 

ಇನ್ನೂ ಸಂಪೂರ್ಣ ಎಚ್ಚರಾಗದಿದ್ದ ಬಳ್ಳಾರಿಯ ಜನತೆ ಊರನ್ನು ಈ ಮಟ್ಟದ ಕುಖ್ಯಾತಿಗೆ ತೆಗೆದುಕೊಂಡು ಹೋದ ರಿಪಬ್ಲಿಕ್ ಆಫ್ ಬಳ್ಳಾರಿಯ ಶ್ರೀಮನ್ಮಹಾರಾಜ ಗಾಲಿ ಜನಾರ್ಧನ ರೆಡ್ಡಿ, ಬಂಧನದಲ್ಲಿರುವುದನ್ನು ನೋಡುವುದಾಯಿತು. ಅಲ್ಲಿಂದ ಹೈದರಾಬಾದ್ಗೆ ತೆಗೆದುಕೊಂಡು ಹೋದ ಸಿಬಿಐ ತಂಡ ಅವರನ್ನು ನಾಂಪಲ್ಲಿ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ, ಕೋರ್ಟ್  ಅವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿತು. ಅಲ್ಲಿಗೆ ಬಳ್ಳಾರಿ ರಿಪಬ್ಲಿಕ್ನ ಚರಮಗೀತೆಗೆ ಖೋರಸ್ ಜೊತೆಯಾಗಿತ್ತು. ಇತ್ತ ರೆಡ್ಡಿ ನಿವಾಸದ ಮೇಲೆ ಸಿಬಿಐ ದಾಳಿ ಮುಂದುವರೆಸಿ, 30 ಕೆಜಿ ಬಂಗಾರ, 3 ಕೋಟಿ ನಗದು, ಅನೇಕಾನೇಕ ದಾಖಲೆಗಳು, 3 ಲಕ್ಷುರಿ ಕಾರುಗಳು, ಒಂದು ಹೆಲಿಕಾಪ್ಟರ್, ಒಟ್ಟಾರೆ 294 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದೆ. ಜನಾರ್ಧನ ರೆಡ್ಡಿಯ ಪತ್ನಿ ಗಾಲಿ ಲಕ್ಷ್ಮೀ ಅರುಣರನ್ನೂ ಪ್ರಶ್ನಿಸಿದ ಸಿಬಿಐ, ಇಷ್ಟರಲ್ಲೇ ಅವರನ್ನೂ ಬಂಧಿಸುವ ಸಾಧ್ಯತೆಯಿದೆಯೆಂದು ಹೇಳಲಾಗುತ್ತಿದೆ. 

ಜನಾರ್ಧನ ರೆಡ್ಡಿಯ ಅಧಿಕೃತ ಗಣಿಗಾರಿಕೆಯಿರುವುದು ನೆರೆಯ ಆಂಧ್ರದ ಹಿರೇಹಾಳದ ಓಬಳಾಪುರಂನಲ್ಲಿ. ಈಗ ಸಿಬಿಐ ಬಂದಿರುವುದು ಆಂಧ್ರದ ಅಕ್ರಮದ ಬಗ್ಗೆ. ಕನರ್ಾಟಕದ ಅಕ್ರಮಗಳ ದಸ್ತಾವೇಜುಗಳು ಲೋಕಾಯುಕ್ತ ವರದಿಯಲ್ಲಿ ಅಡಕವಾಗಿದೆ. ಈ ಕೇಸಿನ ಹಿನ್ನೆಲೆ ತಿಳಿದುಕೊಳ್ಳುವುದಾದರೆ, ವೈ.ಎಸ್.ರಾಜಶೇಖರ ರೆಡ್ಡಿಯ ಆಳ್ವಿಕೆಯಲ್ಲಿ ಆತನ ಮಗ ಜಗನ್ಮೋಹನ ರೆಡ್ಡಿ ಮತ್ತು ಜನಾರ್ಧನ ರೆಡ್ಡಿ ಇಬ್ಬರೂ `ತೋಡುದೊಂಗಲು'. ಇವರು ಊಟಕ್ಕೆ ಕೂತುಬಿಟ್ಟಿದ್ದರು. ವೈ.ಎಸ್.ಆರ್. ಮೃತಿ ಇವರೆಲ್ಲರಿಗೂ ನುಂಗಲಾರದ ತುತ್ತಾಯಿತು. ನಂತರ ಬಂದ ರೋಶಯ್ಯ ಸರ್ಕಾರವನ್ನು ಜಗನ್ಮೋಹನ ರೆಡ್ಡಿ, ಬೆಂಬಿಡದೆ ಕಾಡತೊಡಗಿದ. ಆತನ ಹಿಂದೆ ನಿಂತು ಸ್ಟ್ರಾಟಜಿ ರೂಪಿಸುತ್ತಿದ್ದಾತನೇ ಗಾಲಿ ಜನಾರ್ಧನ ರೆಡ್ಡಿ. ಹಾಗಾಗಿ ಜಗನ್ನನ್ನು ಹೊಡೆಯಲು ಜನಾರ್ಧನ ರೆಡ್ಡಿಯ ಮೇಲಿದ್ದ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೊಪ್ಪಿಸಿಬಿಟ್ಟರು ರೋಶಯ್ಯ. ಕೂಡಲೇ ಇದರ ವಿರುದ್ಧ ಆಂಧ್ರ ಹೈ ಕೋರ್ಟ್ನಲ್ಲಿ ತಡೆಯಾಜ್ಞೆ ತಂದು ಬೀಗಿದರಾದರೂ, ಕಳೆದ ಡಿಸೆಂಬರ್ 2010ರಲ್ಲಿ ಈ ತಡೆಯಾಜ್ಞೆ ತೆರವುಗೊಂಡಿತ್ತು. ಈಗ ರೆಡ್ಡಿ ಕುತ್ತಿಗೆಗೆ ಕೈಹಚ್ಚಿದೆ ಸಿಬಿಐ.

ಮೊದಲಿಗೆ ಬಂದದ್ದು ಲೋಕಾಯುಕ್ತ ವರದಿ. ಬಳ್ಳಾರಿಯ ಕುರಿತೇ ಅನೇಕ ಅಧ್ಯಾಯಗಳನ್ನೊಳಗೊಂಡ ಈ ವರದಿ, ಸ್ಫೋಠಕವೇ ಸರಿ. ಲೋಕಾಯುಕ್ತ ವರದಿ ಬಂದ ಕೆಲವೇ ದಿನಗಳಲ್ಲಿ ಎಸ್.ಆರ್.ಹಿರೇಮಠ್ ಸುಪ್ರೀಂ ಮೆಟ್ಟಿಲು ಹತ್ತಿದ ಪರಿಣಾಮ, ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಅಪಾರ ಪ್ರಮಾಣದ ಪರಿಸರನಾಶವಾಗಿದ್ದು, ಅದು ಇತ್ಯರ್ಥವಾಗುವವರೆಗೆ ಎಲ್ಲ ಗಣಿಗಾರಿಕೆಯನ್ನೂ ಬಂದ್ ಮಾಡಿ ಆದೇಶ ಹೊರಡಿಸಿಬಿಟ್ಟಿತು. ಅಲ್ಲಿಗೆ ರಿಪಬ್ಲಿಕ್ ಆಫ್ ಬಳ್ಳಾರಿ ತಣ್ಣಗೆ ಮಲಗಿಬಿಟ್ಟಿತು.

ಅತ್ತ ಯಡಿಯೂರಪ್ಪನವರ ತಲೆದಂಡವಾಯಿತಾದರೂ ಮಾಧ್ಯಮದಲ್ಲಿ ರೆಡ್ಡಿ ಸಹೋದರರ ಮೇಲಿರುವ ಆಪಾದನೆಗಳ ವಿವರಗಳು ಅಷ್ಟಾಗಿ ಪ್ರಚಾರ ಪಡೆಯಲೇ ಇಲ್ಲ. ಇಷ್ಟೂ ದಿನ, ಕರ್ನಾಟಕದಲ್ಲಿ ನಾನು ಒಂದಿಂಚೂ ಗಣಿಗಾರಿಕೆ ನಡೆಸಿಯೇ ಇಲ್ಲ ಎಂದೇ ತನ್ನನ್ನು ತಾನು ಸಮಥರ್ಿಸಿಕೊಳ್ಳುತ್ತಿದ್ದ ರೆಡ್ಡಿಯ ಕರ್ನಾಟಕದ ಅಕ್ರಮ ಗಣಿಗಾರಿಕೆಯ ವಿವರಗಳು ಸಂಪೂರ್ಣ ಬಹಿರಂಗಗೊಂಡಿದ್ದವು. ಆತ ಇಲ್ಲಿನ 43 ಗಣಿಗಳ ಮಾಲೀಕರೊಂದಿಗೆ `ರೈಸಿಂಗ್ ಕಾಂಟ್ರಾಕ್ಟ್' ಮಾಡಿಕೊಂಡು ಗಣಿಗಾರಿಕೆ ನಡೆಸುತ್ತಿರುವುದು, ಆತನದೇ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ, ಆತ ಮಿಕ್ಕವರ ಹತ್ತಿರ ವಸೂಲಿ ಮಾಡುತ್ತಿದ್ದ ಶೇ40ರಷ್ಟು ಹಫ್ತಾ, ಎಲ್ಲವೂ ಡಾ.ಯು.ವಿ.ಸಿಂಗರ ವರದಿಯಲ್ಲಿ ಅಡಕವಾಗಿದೆ. ಆದಾಯ ತೆರಿಗೆಯವರು ರೆಡ್ಡಿಯ ಸಹಚರರಾದ ಖಾರಾಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್ ಅವರ ಮೇಲೆ ರೇಡು ಬಿದ್ದಾಗ ಸಿಕ್ಕ ದಾಖಲೆಗಳಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಲಂಚ ಕೊಡಲಾಗಿದೆಯೆಂಬ ಮಾಹಿತಿಯೂ ಸುಸ್ಪಷ್ಟ. ಈ ವರದಿಯಲ್ಲಿ ಅಂದಿನ ಮುಖ್ಯಮಂತ್ರಿಯ ಮೇಲೂ ಆಪಾದನೆಯಿತ್ತು. ಅವರ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯಪಾಲರಿಗೆ ಮಾತ್ರ ಇರುತ್ತದೆಯಾದ್ಧರಿಂದ ಸಂತೋಷ್ ಹೆಗಡೆ ಆ ವರದಿಯನ್ನು ರಾಜ್ಯಪಾಲರಿಗೂ ಸಲ್ಲಿಸಿದ್ದರು. ಅವರು ಮುಖ್ಯಮಂತ್ರಿಯ ಮೇಲೆ ಆರೋಪವಿರುವ ಭಾಗವನ್ನಷ್ಟೇ ಒಪ್ಪಿ ಮುಂದಿನ ಕ್ರಮಕ್ಕೆ ಆದೇಶಿಸಿದ್ದಾರೆ. ಯಡಿಯೂರಪ್ಪ ಕಟಕಟೆಯಲ್ಲಿ. ಆದರೆ ವರದಿಯ ಇನ್ನುಳಿದ ಭಾಗವನ್ನು ಪರಿಶೀಲಿಸಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ವರದಿ ನೀಡುವಂತೆ ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿಗೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಹಾಗಾಗಿ ಅದಿನ್ನೂ ಇವರ ಬೆನ್ನತ್ತಿಲ್ಲ. ರೆಡ್ಡಿ ಬಣವನ್ನು ರಾಜಕೀಯವಾಗಿ ಸದೆಬಡಿಯಲು ಇದಕ್ಕಿಂತಲೂ ಉತ್ತಮ ಸಮಯವಿಲ್ಲವೆಂದೂ, ಇದನ್ನೇ ಬಳಸಿಕೊಂಡು ಸದಾನಂದ ಗೌಡರು ಲೋಕಾಯುಕ್ತ ವರದಿಯನ್ನು ಈ ಕೂಡಲೇ ಒಪ್ಪಿ, ಕ್ರಮ ಜರುಗಿಸುವುದರೊಂದಿಗೆ ರೆಡ್ಡಿಯನ್ನು ಸಂಪೂರ್ಣವಾಗಿ ಸದೆಬಡಿಯುವ ಲಕ್ಷಣಗಳಿವೆ ಎನ್ನಲಾಗುತ್ತಿದೆ.

ಲೋಕಾಯುಕ್ತ ವರದಿಯ ಪರಿಣಾಮ ಇವರ ವಿರುದ್ಧ ಕಾನೂನು ಕ್ರಮ ಜರುಗಿಲ್ಲವಾದರೂ ರಾಜಕೀಯವಾಗಿ ಇವರು ಝರ್ಝರಿತರಾದರು. ಮೂವರೂ ಮಂತ್ರಿಗಳು ಮನೆಯಲ್ಲೇ ಕೂತರು. ಇದೆಲ್ಲವನ್ನೂ ನಿರೀಕ್ಷಿಸಿ `ನಿರೀಕ್ಷಣಾ ಜಾಮೀನು' ತೆಗೆದುಕೊಂಡಿದ್ದ ರೆಡ್ಡಿಗಳ ಗಾಡ್ಮದರ್ ಸುಷ್ಮಾಸ್ವರಾಜ್ ತನ್ನ ಮಾತಿಗೆ ತಪ್ಪಿ ಈ ವರ್ಷ ವರಮಹಾಲಕ್ಷ್ಮಿ ಪೂಜೆಗೆ ಬರಲೇ ಇಲ್ಲ. ರೆಡ್ಡಿಗಳು ಹರಸಾಹಸ ಮಾಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರನ್ನು ಕರೆತಂದು, ಅವರಿಗೆ 40 ಲಕ್ಷದ ಚಿನ್ನದ ಖಡ್ಗ, ಒಂದೂವರೆ ಕೋಟಿಯ ಕಾರು ಉಡುಗೊರೆಯಾಗಿ ನೀಡಿದರೆ, ಸ್ಟೇಜು ಹತ್ತಿ, ಮಂತ್ರಿ, ಶಾಸಕ, ಸಂಸದ ಎಲ್ಲರೂ ಮಾಜಿಯಾಗಬಹುದು, ಆದರೆ ಕಾರ್ಯಕರ್ತ ಮಾಜಿಯಾಗಲಾರ. ಕಾರ್ಯಕರ್ತರಾಗಿರಲು ಖುಷಿ ಪಡಿ ಎಂದು ಹಿತವಚನ ಹೇಳಿ ಹೊರಟರು. ಅಲ್ಲಿಗೆ ಇವರು ಇನ್ನು ಮಂತ್ರಿಯಾಗುವುದು ಗಗನಕುಸುಮವೆಂಬುದು ವಿದಿತವಾಗಿತ್ತು. ಆದರೂ ರೆಡ್ಡಿಗಳು ತಮ್ಮ ಪ್ರಯತ್ನ ಕೈಬಿಡಲಿಲ್ಲ. ಜಿಲ್ಲೆಯ ಶಾಸಕರನ್ನು ಒಟ್ಟುಗೂಡಿಸಿಕೊಂಡು ಇಂಡೋನೇಷ್ಯಾಗೆ ಹಾರಲೂ ತಯಾರಿ ನಡೆದಿತ್ತು. ರೆಡ್ಡಿ ದೆಹಲಿಗೆ ಹೋಗಿ ಹೈಕಮಾಂಡ್ ಜೊತೆ ಚಚರ್ೆಯಲ್ಲಿದ್ದರು. ಯಾವುದೂ ಕೈಗೂಡದಾದಾಗ, ರೆಡ್ಡಿ ತೊಡೆತಟ್ಟಿ ಸೆಟೆದು ನಿಲ್ಲಲು ನಿರ್ಧರಿಸಿದ್ದರು.

ಇದರ ಭಾಗವಾಗಿಯೇ ಸೆಪ್ಟೆಂಬರ್ 4ರಂದು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆಯೆಂದು ಶ್ರೀರಾಮುಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಂದೇ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುವವರಿದ್ದರಾದರೂ, ಕಡೆಯ ಘಳಿಗೆಯಲಲ್ಲಿ ಬಿಜೆಪಿಯ ರಿಯಾಕ್ಷನ್ ಅನ್ನು ನೊಡಲೆಂಬಂತೆ ಬರಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಹಿಂದೆ, ರೆಡ್ಡಿ ಬಣದ ರಾಜಕೀಯ ಭವಿಷ್ಯವೇ ನಿಂತಿತ್ತು. ರಾಜೀನಾಮೆ ನೀಡಿದ ಕೂಡಲೇ ಶ್ರೀರಾಮುಲು ರಾಜ್ಯಾದ್ಯಂತ ಸ್ವಾಭಿಮಾನಿ ಯಾತ್ರೆಯ ಹೆಸರಿನಲ್ಲಿ ಪ್ರವಾಸ ಕೈಗೊಂಡು ಜನರನ್ನು ಸಂಘಟಿಸುವುದು, ಅದನ್ನು ಬಳಸಿ ಬಿಎಸ್ಆರ್ ಕಾಂಗ್ರೆಸ್ - ಬಿ. ಶ್ರೀರಾಮುಲು ಕಾಂಗ್ರೆಸ್ ಎಂಬ ಹೆಸರಿನ ಪಕ್ಷವನ್ನು ಸ್ಥಾಪಿಸಿ, ಉತ್ತರ ಕನರ್ಾಟಕದ ಸೆಂಟಿಮೆಂಟನ್ನೇ ಹಿಡಿದು ಆರ್ಟಿಕಲ್ 371 ಗಾಗಿ ಧ್ವನಿಯೆತ್ತಿ, ಯತ್ನಾಳ್ ಥರಹದ ಲಿಂಗಾಯತ ನಾಯಕರನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವುದು. ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ, ಚಿತ್ರದುರ್ಗಗಳಲ್ಲಿ ಈಗಾಗಲೇ ರೆಡ್ಡಿ ಬಣಕ್ಕೆ ಎದುರಿಲ್ಲದಂತಹ ಪರಿಸ್ಥಿತಿ. ಇದನ್ನೇ ಬೇಸಾಗಿಟ್ಟುಕೊಂಡು ವಿಸ್ತರಿಸುವುದು. ಜೆಡಿಎಸ್ ಸೇರಿಬಿಡುವ ಕುರಿತೂ ಕುಮಾರಸ್ವಾಮಿಯೊಂದಿಗೆ ಅಂತಿಮ ಹಂತದ ಮಾತುಕತೆಗಳಾಗಿದ್ದವಾದರೂ ದೇವೇಗೌಡರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ, ಸದ್ಯ ಅದನ್ನು ಕೈಬಿಟ್ಟು, ನೂತನ ಪಕ್ಷ ಸ್ಥಾಪಿಸಿ, ಚುನಾವಣೆಗೆ ಹೋಗುವುದು. ಈ ನೂತನ ಪಕ್ಷಕ್ಕೆ ಜೆಡಿಎಸ್ ಸಾಥ್ ನೀಡುತ್ತದೆ. ಚುನಾವಣೆಯ ನಂತರ ಹೊಂದಾಣಿಕೆಯಲ್ಲಿ ಅಧಿಕಾರ ಹಿಡಯುವುದು. ಇದು ರೆಡ್ಡಿ ನೀಲನಕ್ಷೆಯಾಗಿತ್ತು. ಪಾಳೇಗಾರ ತಾನೇ ಸ್ವತಃ ಶ್ರೀಮನ್ಮಹಾರಾಜನಾಗಲು ಹವಣಿಸುತ್ತಿದ್ದ.

ಆದರೆ ಅದರ ಮರುದಿನವೇ ಸಿಬಿಐ ರೆಡ್ಡಿಗೆ ಕೃಷ್ಣ ಜನ್ಮಸ್ಥಾನದ ಆತಿಥ್ಯ ನೀಡಿತು. ಎಲ್ಲವೂ ತರಗೆಲೆಗಳಂತೆ ಧರೆಗುರುಳಿ ಹೋದವು. ರೆಡ್ಡಿ ಬಣಕ್ಕೆ ಇದರ ಯಾವ ಮುನ್ಸೂಚನೆಯೂ ಇರಲಿಲ್ಲ. ಅಲ್ಲಿ ಮುಂಜಾನೆ ಉಷಃ ಕಾಲದಲ್ಲೇ ದಾವಾನಿಲ ಕುದಿಯುತ್ತಿತ್ತು. ಈಗ ಅವರಿಗೆ ರಾಜಕೀಯ ಬಲವಿರಲಿಲ್ಲ. ಹಾಗಾಗಿ ಅಧಿಕಾರ ಶಾಹಿ ಇವರ ಜೊತೆಗಿಲ್ಲ. ಕಳೆದೊಂದೆರಡು ತಿಂಗಳಿನಿಂದ ಜಿಲ್ಲೆಯಲ್ಲಿ ರಾಜಕೀಯ ಆಡಳಿತವೇ ಇಲ್ಲ. ಜಿಲ್ಲ ಉಸ್ತುವಾರಿ ಮಂತ್ರಿ ಬಾಲಚಂದ್ರ ಜಾರಕಿಹೊಳಿ, ಇನ್ನೂ ಇತ್ತ ತಲೆ ಹಾಕಿಯೂ ಇಲ್ಲ. ಅಧಿಕಾರಶಾಹಿ ಆಡಳಿತ. ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಮತ್ತು ಪೋಲೀಸ್ ಎಸ್ಪಿ ಡಾ. ಚಂದ್ರಗುಪ್ತ ಒಂದು ಉತ್ತಮ ಟೀಂ. ಇಬ್ಬರೂ ಖಡಕ್ ಅಧಿಕಾರಿಗಳು. ಇಷ್ಟು ದಿನದ ದಬ್ಬಾಳಿಕೆಯಲ್ಲಿ ಅಧಿಕಾರಿಗಳನ್ನು ಮನೆಯ ನಾಯಿಗಳಂತೆ ನಡೆಸಿಕೊಂಡ ರೆಡ್ಡಿ ವರ್ಗಕ್ಕೆ ಅಧಿಕಾರದ ಚುರುಕು ಮುಟ್ಟಿಸುತ್ತಲೇ ಅತ್ಯಂತ ಸಮರ್ಥವಾಗಿ ಜಿಲ್ಲಾಡಳಿತವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಇವರ ಬಳಿ ಉಳಿದಿರುವುದು ಮನಿ ಪವರ್ ಮತ್ತು ಅದರಿಂದಲೇ ಲಭ್ಯ ಮಸಲ್ ಪವರ್ ಮಾತ್ರ. ಮಿಕ್ಕೆಲ್ಲವನ್ನೂ ಕಳೆದುಕೊಂಡಾಗ ರೆಡ್ಡಿಗಳು ಇಳಿದದ್ದೇ ಇದಕ್ಕೆ.

ಒಂದು ಕ್ರಿಮಿನಲ್ ಅಫೆನ್ಸ್ ಮಾಡಿದುದಕ್ಕಾಗಿ ಸಿಬಿಐ ಜನಾರ್ಧನ ರೆಡ್ಡಿಯೆಂಬ ಮನುಷ್ಯನನ್ನು ಬಂಧಿಸಿದರೆ, ಅದನ್ನು ಖಂಡಿಸಿ ಬಳ್ಳಾರಿ ಬಂದ್ ಮಾಡಿಸಿದರು. ಈ ಬಂದ್ ಕರೆಗೆ ಜಿಲ್ಲಾ ಬಿಜೆಪಿ ಘಟಕ ಬೆಂಬಲ ವ್ಯಕ್ತಪಡಿಸದೇ ಇದ್ದದ್ದು ರೆಡ್ಡಿಗಳ ಇವತ್ತಿನ ಸ್ಥಾನಮಾನವನ್ನು ಸೂಚಿಸುತ್ತದೆ. ಊರಿಗೇ ಅವಮಾನ ಎಂದು ಜನ ಗೊಣಗಿಕೊಂಡರಾದರೂ, ರೆಡ್ಡಿ ಬೆಂಬಲಿಗರ ದೌರ್ಜನ್ಯಕ್ಕೆ ಹೆದರಿ ಬಾಲ ಸುಟ್ಟ ಬೆಕ್ಕಿನಂತೆ ಬಾಗಿಲೆಳೆದು ಮನೆಯೊಳಗೆ ಕೂತರು. ಬಳ್ಳಾರಿಯಾದ್ಯಂತ ದೊಣ್ಣೆ ಹಿಡಿದು ತಿರುಗಾಡಿದ ರೆಡ್ಡಿ ಬೆಂಬಲಿಗರು, ದಾಂಧಲೆ ನಡೆಸಿಬಿಟ್ಟರು. ಡಿಸಿ ಕಛೇರಿಗೇ ನುಗ್ಗಿ ದಾಂಧಲೆ ನಡೆಸಿದರು. ಸ್ವತಃ ಜಿಲ್ಲಾಧಿಕಾರಿ ಬಿಸ್ವಾಸ್ ಲಾಠಿ ಹಿಡಿದು ಗುಂಪನ್ನು ಚೆದುರಿಸಬೇಕಾಯಿತು. ಈ ಸಂಬಂಧ ಮೊಟ್ಟಮೊದಲ ಬಾರಿಗೆ 11 ಜನ ರೆಡ್ಡಿ ಬೆಂಬಲಿಗರನ್ನು ಬಂಧಿಸಲಾಗಿದೆ. ಬಳ್ಳಾರಿ ಮನಸ್ಸಿಲ್ಲದ ಮನಸ್ಸಿನಿಂದಲೇ ಮಂಡಿಯೂರಿತು. ಆದರೆ ಇದು ಅವಸಾನದ ಆರಂಭ ಎನ್ನುವುದಂತೂ ಸುಸ್ಪಷ್ಟ. ಕೋಟೆ ಕಟ್ಟಿ ಮೆರೆದೋರೆಲ್ಲಾ ಏನಾದರೋ?

ಜನಾರ್ಧನ ರೆಡ್ಡಿಯೆಂಬ ಒಬ್ಬ ಬಂಧಿಸಲ್ಪಟ್ಟ. ಅದಕ್ಕೆ ನಮ್ಮ ಕಾನೂನಿಗೆ ಒಂದು ಸಲಾಮು. ಆದರೆ ಇನ್ನು ಮುಂದೆ ಇಂಥ ಜನಾರ್ಧನ ರೆಡ್ಡಿಗಳು ಹುಟ್ಟಲಾರರೆ? ಜನಾರ್ಧನ ರೆಡ್ಡಿಯನ್ನು ಹುಟ್ಟುಹಾಕಿದ ನಮ್ಮ ವ್ಯವಸ್ಥೆ ಬದಲಾಗಿದೆಯೇ? ಆರ್ಥಿಕ  ಉದಾರೀಕರಣದ ಹೆಸರಿನಲ್ಲಿ, ಅಸಲು ಗಣಿಗಾರಿಕೆಯ ಯಾವುದೇ ಅನುಭವ ಇಲ್ಲ ಜ್ಞಾನವಿಲ್ಲದ ರೆಡ್ಡಿ ಮತ್ತೂ ಅನೇಕರಿಗೆ ಗಣಿಗಾರಿಕೆ ನಡೆಸಿ ಅದನ್ನು ಅವರೇ ನೇರವಾಗಿ ರಫ್ತು ಮಾಡಲು ಅನುವು ಮಾಡಿಕೊಟ್ಟ ವ್ಯವಸ್ಥೆಯಾದರೂ ಎಂಥದು? 200-300 ಹೆಕ್ಟೇರುಗಳ ಗಣಿ ಲೀಸುಗಳನ್ನೊಳಗೊಂಡ ಬಳ್ಳಾರಿಯಲ್ಲಿಯೇ ಈ ಪಾಟಿ ಅಕ್ರಮ ನಡೆದಿರಬೇಕಜಾದರೆ, ಕೇಂದ್ರ ಸರ್ಕಾರ ಪ್ರಸ್ತಾಪಿಸುತ್ತಿರುವ ಹೊಸ ಗಣಿ ನೀತಿಯಲ್ಲಿ ಒಂದು ಗಣಿ ಲೀಸು 500 ಚದರ ಕಿಲೋಮೀಟರ್ವರೆಗೂ ವಿಸ್ತರಿಸಬಹುದು ಮತ್ತು ಇದನ್ನು ಎಸ್ಇಜೆಡ್ ಎಂದೂ ಘೋಷಿಸಬಹುದೆಂದು ಇದೆಯೇ? ಇಂಥ ನೀತಿ ನಿಯಮಗಳನ್ನನುಸರಿಸುತ್ತಲೇ ಒಂದು ಜನ ಲೋಕಪಾಲ ಮಸೂದೆ ಜಾರಿಗೆ ಬಂದು ಬಿಟ್ಟರೆ, ಭ್ರಷ್ಟಾಚಾರವೇ ಇರುವುದಿಲ್ಲವೆಂದು ಭ್ರಮಿಸುವುದು ಹುಚ್ಚಾದೀತು.

ಇನ್ನು ನಮ್ಮ ರಾಜಕೀಯ ಮತ್ತು ಪ್ರಜಾಪ್ರಭೂತ್ವ. ಇವತ್ತು ಹಣಬಲದೊಂದಿಗೆ ರಾಜಕೀಯಬಲ ಪಡೆಯುತ್ತಾರೆ, ಮತ್ತು ರಾಜಕೀಯ ಬಲದಿಂದ ಹಣಬಲ ಹೆಚ್ಚುತ್ತದೆ ಎಂಬಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಜನಾರ್ಧನ ರೆಡ್ಡಿಯ ವಿಷಯದಲ್ಲೂ ಆಗಿದ್ದು ಇದೇ ಅಲ್ಲವೆ? ಈ ಹಣಬಲ ರಾಜಕೀಯ ಬಲವನ್ನು ಜನರೂ ಆರಾಧಿಸುವ ಹಂತಕ್ಕೆ ಬಂದುಬಿಟ್ಟಿದ್ದೇವೆ. ಇವೆಲ್ಲವೂ ಸೇರಿಯೇ ರೆಡ್ಡಿಯನ್ನು ತಾನು ಶ್ರೀಕೃಷ್ಣದೇವರಾಯನ ಅಪರಾವತಾರ ಎಂದು ಭ್ರಮಿಸುವಷ್ಟರ ಮಟ್ಟಿಗೆ ಬೆಳೆಸಿತಲ್ಲವೆ? ಹೌದು ಆತ ಒಮ್ಮೆಯಾದರೂ ಶ್ರೀಕೃಷ್ಣದೇವರಾಯನ ಗೆಟಪ್ಪಿನಲ್ಲಿ ದರ್ಶನ ನೀಡಬೇಕೆಂದು ಚಿನ್ನದ ಕಿರೀಟ, ಸಿಂಹಾಸನ ಮಾಡಿಸಿಟ್ಟು ಕೊಂಡಿದ್ದನಂತೆ. ಅದೀಗ ಸಿಬಿಐ ವಶದಲ್ಲಿದೆ. ಅಷ್ಟೇ ಅಲ್ಲ. ಶ್ರೀಕೃಷ್ಣದೇವರಾಯ ತಿರುಪತಿ ದೇವಸ್ತಾನಕ್ಕೆ 42 ಕೋಟಿಗಳಷ್ಟು ಚಿನ್ನಾಭರಣ ದಾನ ಮಾಡಿದ್ದನಂತೆ. ಅದನ್ನು ಪುರಸ್ಕರಿಸಿಯೇ ರೆಡ್ಡಿ 43 ಕೋಟಿ ಮೌಲ್ಯದ ಚಿನ್ನದ ಕಿರೀಟವನ್ನು ದಾನ ಮಾಡಿದ್ದದು. ಇದು ಹುಚ್ಚು ನಿಜ. ಆದರೆ ಒಬ್ಬ ಪೋಲೀಸ್ ಪೇದೆಯ ಮಗನಿಗೆ ಈ ಭ್ರಮೆಯನ್ನಿಡಿಸಿದ ವ್ಯವಸ್ಥೆ? ಅದು ಬದಲಾಗಬೇಕಿದೆ. ಇಲ್ಲದಿದ್ದರೆ ಇನ್ನೂ ಹತ್ತು ಜನಾರ್ಧನ ರೆಡ್ಡಿಗಳು ಹುಟ್ಟಿಕೊಳ್ಳುತ್ತಾರೆ.

Proudly powered by Blogger
Theme: Esquire by Matthew Buchanan.
Converted by LiteThemes.com.