the last gentleman miner of bellary ಎಂ. ವೈ. ಘೋರ್ಪಡೆ ಸಾವು ತಂದ ನಿರ್ವಾತ


ಎಂ. ವೈ. ಘೋರ್ಪಡೆ ತೀರಿ ಹೋಗುವುದರೊಂದಿಗೆ ಬಳ್ಳಾರಿಯ ಒಂದು ಸಭ್ಯ ಯುಗದ ಕಡೆಯ ಕೊಂಡಿ ಕಳಚಿದೆ. ಒಂದು ವರ್ಷದ ಅಂತರದಲ್ಲಿ ಎಂ.ಪಿ.ಪ್ರಕಾಶ್ ಮತ್ತು ಎಂ.ವೈ.ಘೋರ್ಪಡೆಯವರನ್ನು ಕಳೆದುಕೊಂಡ ಜಿಲ್ಲೆಯ ಆತ್ಮ ಅನಾಥವಾಗಿದೆಯೆಂದರೆ ಅದು ಕ್ಲೀಷೆಯಾಗಲಾರದು. 

ಸಂಡೂರು ಬಳ್ಳಾರಿಯ ಒಂದು ತಾಲೂಕಷ್ಟೆ. ಆದರೆ ಸ್ವಾತಂತ್ರ್ಯಾ ಪೂರ್ವದಲ್ಲಿ ಇದು ಒಂದು ಸ್ವತಂತ್ರ್ಯ ಸಂಸ್ಥಾನ. ಬೆಂಗಾಡು ಬಳ್ಳಾರಿಯ ನಟ್ಟ ನಡುವೆ ಅರೆ ಮಲೆನಾಡಿನ ಪರಿಸರದ ಸಂಡೂರು ಗಿರಿ ಕಂದರಗಳ ನಡುವಿನ ಒಂದು ಕಣಿವೆ. ಈ ಸಂಸ್ಥಾನವನ್ನು 18ನೇ ಶತಮಾನದಿಂದಲೂ ಘೋರ್ಪಡೆ ವಂಶಸ್ಥರು ಆಳುತ್ತಿದ್ದರು. 1947ರಲ್ಲಿ ಸ್ವಂತಂತ್ರ್ಯ ಬಂದಾಗ ಎಂ.ವೈ. ಘೋರ್ಪಡೆಯವರ ತಾತ ಮುಮ್ಮುಡಿ ವೆಂಕಟರಾವ್ ಘೋರ್ಪಡೆಯವರು ಆಳುತ್ತಿದ್ದರು. ಅವತ್ತಿಗೆ ಆ ಸಂಸ್ಥಾನದ ಜನ ಸಂಖ್ಯೆ 15000 ಮತ್ತು ವಿಸ್ತೀರ್ಣ 433 ಚದರ ಕಿಮೀ.ಗಳು ಅಷ್ಟೆ. ಈ ಪುಟ್ಟ ಸಂಸ್ಥಾನವನ್ನು ಭಾರತದೊಳಕ್ಕೆ ವಿಲೀನ ಮಾಡಲೊಪ್ಪದ ಘೋರ್ಪಡೆಗಳು ಅಂದು ಈ ರೀತಿ ಮೊಂಡು ಹಿಡಿದು ಕೂತಿದ್ದ ಜುನಾಘಢ ಮತ್ತು ಹೈದರಾಬಾದಿನೊಡನೆ ಸೇರುತ್ತದೆ. ಆದರೆ ಪಟೇಲರ ಮಧ್ಯಸ್ತಿಕೆಯಿಂದಾಗಿ 1949 ಏಪ್ರಿಲ್ 1ರಂದು ಸಂಡೂರು ಭಾರತದಲ್ಲಿ ವಿಲೀನವಾಯಿತು. ನಂತರ ಘೋರ್ಪಡೆಗಳದ್ದು ಕಾಂಗ್ರೆಸ್ಸಿಗೆ ಅಚ್ಚಳಿಯದ ನಿಷ್ಠೆ. ಸದರಿ ಎಂ.ವೈ.ಘೋರ್ಪಡೆ ಕ್ಯಾಂಬ್ರಿಡ್ಜ್ನಲ್ಲಿ ಅರ್ಥಶಾಸ್ತ್ರವನ್ನು ಅಭ್ಯಸಿಸಿ ಬಂದವರು. ಕಾಂಗ್ರೆಸ್ಸಿನ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡರು. 70ರ ದಶಕದ ಕಡೆಯವರೆಗೂ ಬಳ್ಳಾರಿ ರಾಜಕಾರಣ ಸಂಪೂರ್ಣ ಘೋರ್ಪಡೆಗಳ ಬಿಗಿಮುಷ್ಠಿಯಲ್ಲಿತ್ತು. ಘೋರ್ಪಡೆಯವರ ವಿರುದ್ಧ ಸೆಣಸಿ ಗೆಲ್ಲುವನೆಂಬ ನಂಬಿಕೆ ಯಾರಿಗೂ ಇರಲಿಲ್ಲ.

ಆದರೆ ಮೆಲ್ಲಗೆ ಅಪಸ್ವರಗಳು ಹುಟ್ಟಿಕೊಂಡವು. ಅದಕ್ಕೆ ಎಂ.ವೈ. ಘೋರ್ಪಡೆಯವರ ಕಾರ್ಯವೈಖರಿ ಮತ್ತು ಬೀಸುತ್ತಿದ್ದ ಸಮಾಜವಾದದ ಗಾಳಿ ಕಾರಣವಾಗಿದ್ದವು. ಎಷ್ಟೇ ಜನಾನುರಾಗಿಯೆನಿಸಿದರೂ ಘೋರ್ಪಡೆಗಳು ದಂತದ ಗೋಪುರದ ವಾಸಿಯೇ. ರಾಜವಂಶದ ಠಾಕು ಠೀಕಿನ ಮನುಷ್ಯ. ಸಾಮಾನ್ಯ ಜನಕ್ಕೆ ಯಾವತ್ತಿಗೂ ಕೈಗೆಟುಕದವ ಮತ್ತು ಜಿಲ್ಲೆಯಲ್ಲಿ ತನ್ನ ನಂತರದ ಎರಡನೇ ಸಾಲಿನ ನಾಯಕತ್ವವನ್ನು ಅವರು ಬೆಳಸಲೇ ಇಲ್ಲ. ಈ ಎಲ್ಲ ಅಸಮಾಧಾನಗಳ ನಡುವೆ 70ರ ದಶಕದಲ್ಲಿ ಅರಸು ಮಂತ್ರಿ ಮಂಡಲದಲ್ಲಿ ಎಂ.ವೈ.ಘೋರ್ಪಡೆ ವಿತ್ತ ಸಚಿವರಾಗಿದ್ದರು ಮತ್ತು ದೇಶದೆಲ್ಲೆಡೆ ತುರ್ತು ಪರಿಸ್ಥಿತಿಯ ಕಾರಣವಾಗಿ ಕಾಂಗ್ರೆಸ್ ವಿರೋಧಿ ಅಲೆ ಮತ್ತು ಸಮಾಜವಾದದ ಗಾಳಿ ಪ್ರಬಲವಾಗಿ ಬೀಸುತ್ತಿತ್ತು. ಬಳ್ಳಾರಿಯಲ್ಲಿ ಯಜಮಾನ ಶಾಂತರುದ್ರಪ್ಪ ಮತ್ತು ಎಲೆಗಾರ ತಿಮ್ಮಪ್ಪರಂತಹ ಅನೇಕ ಹೋರಾಟಗಾರರು ತಮ್ಮ ಕಡೆಯ ಉಸಿರಿನವರೆಗೂ ಘೋರ್ಪಡೆಯವರ ಆಡಳೀತವನ್ನು ತಾತ್ವಿಕವಾಗಿ ವಿರೋಧಿಸುತ್ತಿದ್ದರು. ಅದನ್ನು ರಾಜಾಡಳಿತದ ಮುಂದುವರಿಕೆಯೆಂದೇ ಭಾವಿಸಿದ್ದರು. ಸಂಡೂರಿನಲ್ಲಿ 1973ರವರೆಗೂ ಕೂಡ ಸುಮಾರು 15 ಸಾವಿರ ಎಕರೆಯಷ್ಟು ಸಾರ್ವಜನಿಕ ಭೂಮಿಯನ್ನು ರಾಜವಂಶ ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ರೈತರು ಇಂತಿಷ್ಟೆಂದು ಗೇಣಿ ನೀಡಿ ಸಾಗುವಳಿ ಮಾಡುತ್ತಿದ್ದರು. 1974ರಲ್ಲಿ ಸೋಷಿಯಲಿಸ್ಟ್ ಪಕ್ಷದ ನಾಯತ್ವದಲ್ಲಿ 46 ದಿನಗಳ ಕಾಲ ಈ ಇನಾಮು ಭೂಮಿಗಾಗಿ ರೈತ ಹೋರಾಟ ಭುಗಿಲೆದ್ದಿತು. ಜಾರ್ಜ್ ಫಾರ್ನಾನ್ದೀಸ್ರಿಂದ ಹಿಡಿದು ಎಲ್ಲ ಸಮಾಜವಾದೀ ನಾಯಕರೂ ಹೋರಾಟದ ಮುಂಚೂಣಿಯಲ್ಲಿದ್ದರು. ಕಡೆಗೂ ಘೋರ್ಪಡೆ ಬಾಗಲೇ ಬೇಕಾಯಿತು. ಇದ್ದಕ್ಕಿದ್ದ ಹಾಗೇ Ghorpade was no longer invincible. ಇದರೊಂದಿಗೆ ಎಂ.ವೈ. ಘೋರ್ಪಡೆಗೆ ಒಂದು ತಾತ್ವಿಕ ವಿರೋಧ ಹುಟ್ಟಿಕೊಂಡಿತು. ರಾಜ್ಯ ರಾಜಕೀಯದಲ್ಲಿ ಎದ್ದ ಮತ್ತೊಂದು ಸುನಾಮಿಯಲ್ಲಿ ಎಂ.ವೈ. ಘೋರ್ಪಡೆ ಇಂದಿರಾ ಗಾಂಧಿ ವಿರುದ್ಧ ಬಂಡೆದ್ದ ದೇವರಾಜ ಅರಸು ಅವರ ಜೊತೆ ಉಳಿದುಕೊಂಡರು. ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಅರಸು ಕಾಂಗ್ರೆಸ್ನಿಂದ ಸ್ಪರ್ಧಿಸಿದಾಗ ಮೊದಲ ಬಾರಿಗೆ ಸೋಲುಣ್ಣುತ್ತಾರೆ, ಅವರ ತಮ್ಮ ರಣಧೀರ ಘೋರ್ಪಡೆಯ ವಿರುದ್ಧ! ಆತ ಕಾಂಗ್ರೆಸ್ (ಐ)ಹುರಿಯಾಳು. 

ಇದರಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕರ್ನಾಟಕದಲ್ಲಿ ಜನತಾ ಆಡಳಿತವಿರುತ್ತದೆ. ಬಳ್ಳಾರಿ ರಾಜಕಾರಣಕ್ಕೆ ಎಂ.ಪಿ.ಪ್ರಕಾಶ್ ಧೃವತಾರೆಯಾಗಿರುತ್ತಾರೆ. ನಂತರ ಕೂಡ ಅನೇಕ ಬಾರಿ ಎಂ.ಪಿ.ಪ್ರಕಾಶ್ ಮತ್ತು ಎಂ.ವೈ.ಘೋರ್ಪಡೆ ಒಬ್ಬರ ನಂತರ ಒಬ್ಬರು ಜಿಲ್ಲಾ ಮಂತ್ರಿಯಾಗಿ ಚುಕ್ಕಾಣಿ ಹಿಡಿದಿದ್ದಾರೆ. ಅಸಲಿಗೆ ಅದು ಬಳ್ಳಾರಿಗೊಂದು ಸುವರ್ಣಯುಗವೇ ಸರಿ. ಎಂ.ವೈ. ಘೋರ್ಪಡೆ ಮತ್ತು ಎಂ.ಪಿ.ಪ್ರಕಾಶ್ ಇಬ್ಬರೂ ಮಾಡಿದ ಮತ್ತೊಂದು ತಪ್ಪೆಂದರೆ, ಘೋರ್ಪಡೆಗಳು ಮಂತ್ರಿಗಳಾಗಿದ್ದಾಗ ಅವರು ಜಿಲ್ಲಾ ಕೇಂದ್ರ ಬಳ್ಳಾರಿಯನ್ನು ಬಿಟ್ಟು ಸಂಡೂರು ಹೊಸಪೇಟೆಗಳನ್ನೇ ಕೇಂದ್ರವಾಗಿಸಿಕೋಮಡರು. ಅವರು ಬಳ್ಳಾರಿಗೆ ಬರುತ್ತಿದ್ದದ್ದೇ ಝಂಡಾ ಹಾರಿಸಲು ಮಾತ್ರ. ಎಂ.ಪಿ.ಪ್ರಕಾಶ್ ಕೂಡ ಅಂತದೇ ತಪ್ಪನ್ನು ಮಾಡುತ್ತಿದ್ದರು. ಅವರು ಹಡಗಲಿ, ಹಗರಿಬೊಮ್ಮನಹಳ್ಳಿ ಸಿರುಗುಪ್ಪ ಸೇರಿದಂತೆ ಪಶ್ಚಿಮದ ತಾಲೂಕುಗಳ ರಾಜ. ಜಿಲ್ಲಾಕೇಂದ್ರ ಬಳ್ಳಾರಿ ಇಬ್ಬರಿಂದಲೂ ನಿರ್ಲಕ್ಷಿತ. ಆಗ ಇಲ್ಲಿ ಹುಟ್ಟಿದ ಬಸ್ಮಾಸುರರೇ ಸಾರಾಯಿ ಮಾಫಿಯಾ ಮತ್ತು ಶುದ್ಧ ರಾಯಲಸೀಮೆಯ ಧಣಿ ಮತ್ತು ಪೊಲಿಟಿಕಲ್ ವಯಲೆನ್ಸ್ ಅನ್ನು ಹೊತ್ತು ತಂದ ಮುಂಡ್ಲೂರು ಧಣಿಗಳು. ಮೊದಲ ಬಾರಿಗೆ ಬಳ್ಳಾರಿಯ ರಾಜಕಾರಣ ದುಡ್ಡು ಮತ್ತು ರಕ್ತ ಎರಡನ್ನೂ ನೋಡಿತು. ಅಲ್ಲಿಂದ ಕ್ರಮೇಣ ಘೋರ್ಪಡೆ ಮತ್ತು ಪ್ರಕಾಶ್ ಇಬ್ಬರ ಹಿಡಿತದಿಂದಲೂ ಬಳ್ಳಾರಿಯ ರಾಜಕಾರಣ ಬಿಡಿಸಿಕೊಳ್ಳತೊಡಗಿತು. ಮುಂಡ್ಲೂರು ಎಷ್ಟು ಪ್ರಬಲರಾಗಿ ಬೆಳೆದುಬಿಟ್ಟರೆಂದರೆ ಅವರನ್ನು ಎದುರಿಸಲು ಈ ಇಬ್ಬರು ಮುತ್ಸದ್ಧಿಗಳ ಕೈಲೂ ಸಾಧ್ಯವಾಗಲಿಲ್ಲ. ನಂತರದ್ದು ಸಂಡೂರು ಸಂಸ್ಥಾನವೇ. ಬಳ್ಳಾರಿ ಘೋರ್ಪಡೆಯವರ ಕೈಬಿಟ್ಟು ಹೋಯಿತು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ಇಡೀ ಜಿಲ್ಲೆ ಮುಂಡ್ಲೂರು ದರ್ಬಾರನ್ನು ಕೊನೆಗಾಣಿಸುವುದೊಂದೇ ಗುರಿ ಎಂದು ಪಣ ತೊಟ್ಟಿತೊಮ್ಮೆ, ಅನಿವಾರ್ಯವಾಗಿ ಹುಟ್ಟಿದ ಭಸ್ಮಾಸುರ ಜನಾರ್ಧನ ರೆಡ್ಡಿ ಶ್ರೀರಾಮುಲು ಜೋಡಿ. 

ಈಗ ಮತ್ತೆ ಚಕ್ರ ಉರುಳಿದೆ. ರೆಡ್ಡಿಯ ಅವಸಾನವಾಗಿದೆ. ಮುಂಡ್ಲೂರು ಮತ್ತು ರೆಡ್ಡಿಗಳಿಗೆ ಪರ್ಯಾಯ ರಾಜಕೀಯ ಆಯ್ಕೆಯ ಬಗ್ಗೆ ಜಿಲ್ಲೆಯ ಜನ ಯೋಚಿಸುವಂತಾಗಿರುವಾಗ ಒಂದೇ ವರ್ಷದ ಅವಧಿಯಲ್ಲಿ ಜಿಲ್ಲೆಯ ಈರ್ವರು ಮುತ್ಸದ್ಧಿಗಳಾದ ಎಂ.ಪಿ.ಪ್ರಕಾಶ್ ಮತ್ತು ಎಂ.ವೈ. ಘೋರ್ಪಡೆಯವರು ತೀರಿಹೋಗಿರುವುದು ಜಿಲ್ಲೆಯನ್ನು ನಿಜಕ್ಕೂ ಅನಾಥವಾಗಿಸಿದೆ. ಇಂದು ಅವರು ಬದುಕಿದ್ದಿದ್ದರೂ ಆರೋಗ್ಯದ ದೃಷ್ಟ್ಯಾ ಅವರು ಸಕ್ರಿಯರಾಗಿದ್ದಿರಲರರೆಂಬುದು ನಿಜವಾದರೂ ಒಂದು ತಾತ್ವಿಕ ಆಯ್ಕೆಯ ಪ್ರತೀಕಗಳಾಗಿ ಅವರಿಬ್ಬರೂ ಇದ್ದರು. ಈಗ ಆ ಪ್ರತೀಕಗಳೂ ಇಲ್ಲ. ರಾಜಕೀಯ ನಿರ್ವಾತವೊಂದು ಸೃಷ್ಟಿಯಾಗಿದೆ. ಇದನ್ನು ತುಂಬಲರ್ಹರೇ ಇಲ್ಲದ ಆಯ್ಕೆ ಪಟ್ಟಿ ಮತದಾರರ ಮುಂದಿದೆ.

ರಿಪಬ್ಲಿಕ್ ಆಫ್ ಬಳ್ಳಾರಿ ಮತ್ತು ಘೋರ್ಪಡೆ. 


ಎಂ.ವೈ. ಘೋರ್ಪಡೆಯವರನ್ನು the first and last gentleman miner of Bellary ಎಂದು ಕರೆಯಬಹುದೇನೋ. ಬಳ್ಳಾರಿಯ ಬೆಟ್ಟಗಳಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರಿದೆ ಎಂದು ಗುರುತಿಸಿ ಗಣಿಗಾರಿಕೆಯನ್ನು ನಡೆಸಿದವರೇ ಘೋರ್ಪಡೆಗಳು. ಎಂ. ವೈ. ಘೋರ್ಪಡೆಯವರ ತಾತ ಮುಮ್ಮುಡಿ ವೆಂಕಟರಾವ್ ಘೋರ್ಪಡೆ. 1838 ಮತ್ತು 1848ಗಲಲ್ಲೇ ನ್ಯೂಬೋಲ್ಡ್ ಎಂಬ ವಿದೇಶೀ ಗಣಿ ಶಾಸ್ತ್ರಜ್ಞನರು ಈ ಪ್ರದೇಶದ ಸವೇ ನಡೆಸಿದ್ದರು. ಈ ಶೋಧ ಕಾರ್ಯಗಳು ಎಡೆಬಿಡದೆ ಮುಂದುವರೆದಿದ್ದವು. 1890ರಲ್ಲಿ ಸರ್ವೇ ನಡೆಸಿದ ಬ್ರೂಸ್ಫೂಟ್ ಎಂಬ ಖಗೋಳ ವಿಜ್ಞಾನಿ ಭಾರತದಲ್ಲಷ್ಟೇ ಅಲ್ಲ ಇಡಿಯ ವಿಶ್ವದಲ್ಲೇ ಅತಿ ದೊಡ್ಡ ಕಬ್ಬಿಣ ಅದಿರಿನ ನಿಕ್ಷೇಪವಿರುವುದೇ ಬಳ್ಳಾರಿ-ಹೊಸಪೇಟೆ ಮತ್ತು ಮುಖ್ಯವಾಗಿ ಸಂಡೂರು ಭಾಗದ ಈ ಸಂಡೂರು ಶಿಸ್ಟ್ನಲ್ಲಿ ಎಂದು ಘೋಷಿಸಿಬಿಟ್ಟ. ಅಲ್ಲಿಂದ ಶುರುವಾಯಿತು ಗಣಿಗಾರಿಕೆ. 1907ರಲ್ಲಿ ಅಂದು ಸ್ವತಂತ್ರವಾಗಿ ರಾಜ್ಯವಾಳುತ್ತಿದ್ದ ಇಂದಿನ ಎಂ.ವೈ.ಘೋರ್ಪಡೆಯವರ ತಾತ ವೆಂಕಟರಾವ್ ಘೋರ್ಪಡೆಯವರ ಅನುಮತಿಯೊಂದಿಗೆ ಬೆಲ್ಜಿಯಂನ ಗಣಿ ಕಂಪೆನಿಯೊಂದು ಗಣಿಗಾರಿಕೆ ಪ್ರಾರಂಭಿಸಿತು. ಇದಕ್ಕೆ ಜನರಲ್ ಸಂಡೂರು ಮ್ಯಾಂಗನೀಸ್ ಎಂಬ ಹೆಸರಿತ್ತು. ಈ ಕಂಪೆನಿಯು 1954ರವರೆಗೂ ಗಣಿಗಾರಿಕೆ ನಡೆಸಿತ್ತು. ಅಷ್ಟರಲ್ಲಿ ಅನೇಕ ರಾಜಕೀಯ ಬದಲಾವಣೆಗಳಾಗಿದ್ದರಿಂದ ಅವರು ಈ ಗಣಿಗಳನ್ನು ಅಂದಿನ ಸಂಡೂರು ಒಡೆಯ ಯಶವಂತರಾವ್ ಘೋರ್ಪಡೆಯವರಿಗೆ ಒಪ್ಪಿಸಿ ನಡೆದು ಬಿಟ್ಟಿತು. ಇದೇ ಮುಂದೆ ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ (ಸ್ಮಯೋರ್) ಎಂಬ ಕಂಪೆನಿಯಾಗಿ ಉದ್ಭವಿಸಿತು. 

ಅಷ್ಟರಲ್ಲಿ ಎಂ.ವೈ. ಘೋರ್ಪಡೆಯವರ ತಂದೆ ಯಶವಂತರಾವ್ ಘೋರ್ಪಡೆ ಅವರ ಬಳಿ ಕೆಲಸ ಮಾಡುತ್ತಿದ್ದ ಅನೇಕರಿಗೆ ಒನ್ ಟೈಮ್ ಸೆಟ್ಲಮೆಂಟಾಗಿ ಅದಿರಿನ ಒಂದೊಂದು ಗುಟ್ಟಗಳನ್ನು ಬರೆದುಕೊಟ್ಟುಬಿಟ್ಟರು. ಅದರಲ್ಲೂ ಚಾಣಾಕ್ಷತೆ ಮೆರೆದ ರಾಜ, ಕೊಟ್ಟಿದ್ದೆಲ್ಲವೂ ಕಬ್ಬಿಣದ ಅದಿರಿನ ಬೆಟ್ಟಗಳು, ಮ್ಯಾಂಗನೀಸ್ ಅದಿರಿನ ಬೆಟ್ಟಗಳನ್ನೆಲ್ಲಾ ತನ್ನಲ್ಲೇ ಉಳಿಸಿಕೊಂಡರು. ಅವರಿಗೆ ತಾನೆ ಏನು ತಿಳಿದಿತ್ತು, ಮುಂದೊಂದು ದಿನ ಕಬ್ಬಿಣದ ಅದಿರು ಕೆಂಪು ಬಂಗಾರವಾಗಿ ಅಭಿವರ್ನಿಸಲ್ಪಡುತ್ತದೆಂದು ಬಳ್ಳಾರಿಯನ್ನು ಹೀಗೆ ಆಳುತ್ತದೆಂದು. 

ಅದೇನೋ ಮೊದಲಿಂದಲೂ ಘೋರ್ಪಡೆಗಳು ನಡೆಸಿದ್ದು ಶುದ್ಧ ಮ್ಯಾಂಗನೀಸ್ ಗಣಿಗಾರಿಕೆಯನ್ನು ಮಾತ್ರ. ಎಂ.ವೈ. ಘೋರ್ಪಡೆಯವರೂ ಇದನ್ನೇ ಮುಂದುವರೆಸಿದರು. ಒಂದು ಟನ್ ಕಬ್ಬಿಣದ ಅದಿರಿಗೆ ಚೈನಾ ಬೂಂ ಸಂದರ್ಭದಲ್ಲಿ ಘರಿಷ್ಠ 8 ಸಾವಿರ ತಲುಪಿತ್ತಾದರೂ ಒಂದು ಟನ್ ಮ್ಯಾಂಗನೀಸ್ ಅದಿರಿಗೆ 55 ಸಾವಿರವಿದೆ. ಆದರೆ ಒಂದು ಟನ್ ಕಬ್ಬಿಣದ ಅದಿರನ್ನು ತೆಗೆಯಲು ಘರಿಷ್ಠ 500 ಖರ್ಚಾದರೆ ಒಂದು ಟನ್ ಮ್ಯಾಂಗನೀಸ್ ಅದಿರನ್ನು ತೆಗೆಯಲು ಏನಿಲ್ಲವೆಂದರೂ 53-54 ಸಾವಿರ ಖರ್ಚಾಗುತ್ತದೆ. ಹಾಗಾಗಿಯೇ ಯಶವಂತರಾವ್ ಘೋರ್ಪಡೆಯವರಿಂದ ಒನ್ ಟೈಮ್ ಸೆಟ್ಲಮೆಂಟಾಗಿ ಒಂದು ಕಬ್ಬಿಣದ ಅದಿರಿನ ಬೆಟ್ಟವನ್ನು ಪಡೆದ ಹೀರೋಜಿ ಲಾಡರ ಮೊಮ್ಮಗ ಅನಿಲ್ ಲಾಡ್ ಮತ್ತು ಸಂತೋಷ ಲಾಡ್ 4 ಹೆಲಿಕಪ್ಟರುಗಳನ್ನು ಇಟ್ಟಿದ್ದರೆ ಎಂ.ವೈ. ಘೋರ್ಪಡೆ ಕಳೆದ ಶತಮಾನದ ಕೊನೆಯಲ್ಲಿ ಆರ್ಥಿಕವಾಗಿ ದಿವಾಳಿಯೆದ್ದು ಹೋದರು! ಹೌದು 2000ದಲ್ಲಿ ಎಸ್ಸೆಂ ಕೃಷ್ಣರ ಸರ್ಕಾರದಲ್ಲಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿಯಾಗಿದ್ದಾಗಲೇ ಅವರ ಸ್ಮಯೋರ್ ಕಂಪೆನಿ ಬಾಗಿಲು ಮುಚ್ಚುವಂತಹ ಸಂಧಿಗ್ಧಕ್ಕೆ ಬಂದುಬಿಟ್ಟಿತು. ವೈಯಕ್ತಿಕವಾಗಿ ಘೋರ್ಪಡೆಯವರ ಹೆಸರಿನಲ್ಲಿ ಅನೇಕ ಬ್ಯಾಂಕುಗಳಲ್ಲಿ 100 ಕೋಟಿಗಳಷ್ಟು ಸಾಲವಿತ್ತು. ರಿಜರ್ವ್ ಬ್ಯಾಂಕ್ ಅವರನ್ನು ಹಣ ಹಿಂತಿರುಗಿಸದ ಸಾಲಗಾರರು ಎಂದು ಘೋಷಿಸಿಬಿಟ್ಟಿತು. ಗಣಿ ಭೂಮಿಯನ್ನು ಬಿಟ್ಟು ಕಂಪೆನಿಯ ಮಿಕ್ಕೆಲ್ಲವನ್ನೂ ಮಾರಿ ಈ ಆರ್ಥಿಕ ಸಂಧಿಗ್ಧದಿಂದ ಹೊರಬಂದರಾದರೂ ಅವರ ಹಿಂದಿನ ಅಭಯ ಹಸ್ತ ಈ ಎಲ್ಲ ಸಾಲಗಳನ್ನೂ ಮಾಫ್ ಮಾಡಿತ್ತು. ಕೂಡಲೇ ಸ್ಮಯೋರ್ ಕಂಪೆನಿಯಲ್ಲಿ 100 ಕೋಟಿಗಳ ಒಂದು ಆಪತ್ಕಾಲ ಫಂಡನ್ನು ಸ್ಥಾಪಿಸಿ ಕಾರ್ಮಿಕರಿಗೆ ತಂದೆಯಂತೆಯೇ ನಡೆದುಕೊಂಡರು. ಅಮದಿನೀಂದಲೂ ಇವರದು ಹಿತ-ಮಿತ ಗಣಿಗಾರಿಕೆಯೇ. ಎಂದಿಗೂ ಅಬ್ಬರಿಸಿದವರಲ್ಲ, ದೋಚಿದವರಲ್ಲ. ಇವತ್ತಿಗೂ ಲೋಕಾಯುಕ್ತ ಸಿಇಸಿ ತನಿಖೆಗಳೆಷ್ಟೇ ನಡೆದರೂ ಒಬ್ಬೇಒಬ್ಬರೂ ಕೂಡ ಘೋರ್ಪಡೆಯವರ ಸ್ಮಯೋರ್ನತ್ತ ಬೆರಳೆತ್ತಿ ತೋರಿಸಿಲ್ಲ. ಜಿಲ್ಲೆಯಲ್ಲಿ ಗಣಿಗಾರಿಕೆ ಬಂದ್ ಆಗಿ 3 ತಿಂಗಳಾಯಿತು. ಇವತ್ತಿಗೂ ಒಬ್ಬ ಕಾರ್ಮಿಕನಿಗೂ ತೊಂದರೆಯಾಗದಂತೆ ಆ 100 ಕೋಟಿಗಳ ಆಪತ್ಕಾಲ ಧನದಲ್ಲಿ ನಿರ್ವಹಿಸಿಕೊಂಡು ಹೋಗುತ್ತಿದೆ ಸ್ಮಯೋರ್. ವೈಯಕ್ತಿಕವಾಗಿ ಕೃಷ್ಣರ ಸರ್ಕಾರ ಗಣಿಗಾರಿಕೆಯ ಯಾವುದೇ ಹಿನ್ನೆಲೆಯಿಲ್ಲದವರಿಗೆ ಇಂತಿಷ್ಟೆಂದು ಹಣ ಕಟ್ಟಿಸಿಕೊಂಡು ಮಕ್ಕಳಿಗೆ ಚಾಕೋಲೇಟ್ ಕೊಟ್ಟಂತೆ ಅತಿ ಸಣ್ಣ ಗಣಿ ಹಿಡುವಳಿಗಳನ್ನು ನೀಡಿದ್ದನ್ನು ಸರ್ವಥಾ ವಿರೋಧಿಸಿದ್ದರು. ಆದರೆ ಅದನ್ನು ತಡೆಯದಾದರು. ಇದೇ ರಿಪಬ್ಲಿಕ್ ಆಫ್ ಬಳ್ಳಾರಿಯ ಬುನಾದಿಯಾಯಿತು.

Proudly powered by Blogger
Theme: Esquire by Matthew Buchanan.
Converted by LiteThemes.com.