ಮಾಯಾ ಮೆಗಲೋಮೇನಿಯಾ......!

ಮಾಯಾವತಿ - ಈ ಹೆಸರೇ ಹಲವಾರು ಚಚರ್ೆಗೆ, ಪರ-ವಿರೋಧದ ಅಭಿಪ್ರಾಯಗಳಿಗೆ ಆಸ್ಪದವೀಯುತ್ತದೆ. ಅದು ಆಕೆಯ ಶಕ್ತಿಯೂ ಹೌದು, ದವರ್ಬಲ್ಯವೂ ಹೌದು. ಈ ಬಾರಿ ಪ್ರಧಾನಿಯಾಗಿಯೇ ತೀರುತ್ತೇನೆಂದು ಮೆರೆದಾಡಿ, ಮಣ್ಣುಮುಕ್ಕಿದವರ ಪಟ್ಟಿಯಲ್ಲಿ ಅದ್ವಾನಿಯವರ ನಂತರದ ಸ್ಥಾನ ಮಾಯಾವತಿಗೇ ಸಲ್ಲಬೇಕು. ಇಂತಿಪ್ಪ ಮಾಯಾವತಿ ಮತ್ತೆ ಸುದ್ದಿಯಲ್ಲಿದ್ದಾರೆ, ಚರ್ಚೆಗೆ ಆಸ್ಪದವಾಗಿದ್ದಾರೆ. 2007ರಲ್ಲಿ ಮುಲಾಯಮ್ ಸರ್ಕಾರವನ್ನು ಕಿತ್ತೊಗೆದ ಅಲ್ಲಿನ ಜನ ಮಾಯಾವತಿಗೆ ದೊಡ್ಡ ಬಹುಮತವನ್ನೇ ನೀಡಿ ಮುಖ್ಯಮಂತ್ರಿಯಾಗಿಸಿದರು. ಅಂದಿನಿಂದ ಇವರು ಹಲವಾರು ದೃಷ್ಟಾಂತಗಳಲ್ಲಿ ತಮ್ಮ ತಿಕ್ಕಲುತನ ಮತ್ತು ದುರಹಂಕಾರಿ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ. ಅವರು ಮುಖ್ಯಮಂತ್ರಿಯಾದಾಗಿನಿಂದ ಉತ್ತರ ಪ್ರದೇಶದಲ್ಲೊಂದು ವೈಪರೀತ್ಯ ನಡೆಯುತ್ತಿದೆ. ಮಾಯಾವತಿ ರಾಜ್ಯದ ವಿವಿಧೆಡೆ ಅವರ ಹಲವಾರು ಪ್ರತಿಮೆಗಳನ್ನು ನಿರ್ಮಿಸಿ ಸ್ವಹಸ್ತಗಳಿಂದಲೇ ಆವಿಷ್ಕರಿಸುತ್ತಿದ್ದಾರೆ! ಇದೆಲ್ಲವೂ ನಡೆಯುತ್ತಿರುವುದು ರಾಜ್ಯದ ಖಜಾನೆಯ ದುಡ್ಡಿನಿಂದ! ಇದಕ್ಕೆ ಆಕೆ ಸರ್ಕಾರಿ ಖಜಾನೆಯಿಂದ ವ್ಯಿಯಿಸಿದ ಮೊತ್ತವೆಷ್ಟು ಗೊತ್ತೆ? ಉಸಿರು ಬಿಗಿ ಹಿಡಿದಿಟ್ಟುಕೊಳ್ಳಿ - 1258 ಕೋಟಿ ರೂ.ಗಳು! ಎಲ್ಲಿಗೆ ಬಂತು ಭವ್ಯ ಭಾರತ?!
ಹೀಗೆ ರಾಜ್ಯದ ವಿವಿಧೆಡೆ ಆಕೆಯ ಕಂಚು, ಅಮೃತಶಿಲೆ ಮತ್ತು ಗ್ರಾನೈಟ್ ಪ್ರತಿಮೆಗಳನ್ನು ಸ್ಥಾಪಿಸುತ್ತಿರುವುದಲ್ಲದೇ ರಾಜ್ಯದ ರಾಜಧಾನಿ ಲಖನೌದಲ್ಲಿ ಸರಿಸುಮಾರು 418 ಎಕರೆಗಳ ಜಾಗದಲ್ಲಿ ಬೃಹತ್ತಾದೊಂದು ಸ್ಮಾರಕವನ್ನು ನಿಮರ್ಿಸುತ್ತಿದ್ದಾರೆ. ಬರಿಯ ಈ ಸ್ಮಾರಕಕ್ಕೇ ಬಹುಶತ ಕೋಟಿಗಳನ್ನು ವ್ಯಯಿಸಿದ್ದಾರೆ. ನಾಲ್ಕು ಸುಂದರ ಹಳೆಯ ಸರ್ಕಾರಿ ಕಟ್ಟಡಗಳು, ಒಂದು ಉದ್ಯಾನವನವನ್ನು ಆಕ್ರಮಿಸಿಕೊಂಡು ಆ ಜಾಗದಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗುತ್ತಿದೆ. ಕೆಲಸ ಆಗಲೇ ಮುಕ್ಕಾಲು ಭಾಗ ಮುಗಿದಿದೆ. ಈ ಎಲ್ಲಾ ವೆಚ್ಚಗಳನ್ನು ಮಾಡುತ್ತಿರುವುದು ಸಂಸ್ಕೃತಿ ಇಲಾಖೆ! ಇದಕ್ಕಾಗಿಯೇ ಈ ಇಲಾಖೆಗೆ ಸುಮಾರು 2000 ಕೋಟಿಗಳನ್ನು ಮಂಜೂರು ಮಾಡಲಾಗಿದೆ. ಇತರ ಇಲಾಖೆಗಳ ನಿಧಿಗಳನ್ನು ಈ ಕೆಲಸಕ್ಕಾಗಿ ಸಂಸ್ಕೃತಿ ಇಲಾಖೆಗೆ ವರ್ಗಾಯಿಸಲಾಗಿದೆಯೆಂಬ ಆರೋಪವೂ ಇದೆ.

ಈ ವಿಷಯವಾಗಿ ಒಂದಿಬ್ಬರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಹೂಡಿ ಹೋರಾಡುತ್ತಿದ್ದಾರಾದರೂ ಅದೇನೂ ಮಾಯಾವತಿಯವರನ್ನು ಅಲುಗಿಸಿಲ್ಲ. ಎಲ್ಲಿ ನ್ಯಾಯಾಲಯ ವಿಗ್ರಹಾವಿಷ್ಕರಣಕ್ಕೆ ತಡೆ ನೀಡಿಬೀಡುತ್ತದೋ ಎಂದು ನ್ಯಾಯಾಲಯದಲ್ಲಿ ಆ ಅರ್ಜಿ ವಿಚಾರಣೆಗೆ ಬರುವುದಕ್ಕೂ ಮಂಚೆಯೇ ವಿಗ್ರಹಾವಿಷ್ಕರಣಗಾವಿಸಿದ್ದಾರೆ ಮಾಯಾ!
ಸದ್ಯ ಲೋಕದಲ್ಲಿ ತನ್ನ ಪ್ರತಿಮೆಯನ್ನು ತಾನೆಅನಾವರಣಗೊಳಿಸಿಕೊಳ್ಳುತ್ತಿರುವವನು ಉತ್ತರ ಕೊರಿಯಾದ ನಿರಂಕುಶ ಸರ್ವಾಧಿಕಾರಿಯೊಬ್ಬನೆ. ಈ ಹಿಂದೆ ಸದ್ದಾಂ ಆ ಕೆಲಸ ಮಾಡಿದ್ದ. ಆದರೆ ಅಮೆರಿಕಾ ಇರಾಕ್ ಅನ್ನು ಆಕ್ರಮಿಸಿಕೊಂಡ ಮರುಕ್ಷಣವೇ ಜನ ಅದನ್ನು ಬುಲ್ಡೋಜರ್ನಿಂದ ನೆಲಕ್ಕೆ ಕೆಡವಿದ್ದರು. ಅದು ಇರಾಕ್ ಯುದ್ಧದ ಒಂದು defining image. (ಇಲ್ಲೂ ಅಷ್ಟೆ ಮುಲಾಯಮ್ ಸಿಂಗ್ ತಾವು ಅಧಿಕಾರಕ್ಕೆ ಬಂದ ಮರುಕ್ಷಣವೇ ಈ ಪ್ರತಿಮೆಗಳನ್ನು ನೆಲಸಮಗೊಳಿಸುವುದಾಗಿ ಘೋಷಿಸಿದ್ಧಾರೆ. ಇವರಿಬ್ಬರ ರಾಜಕೀಯ ಕಿತ್ತಾಟ, ಕೆಸರೆರಚಾಟದಲ್ಲಿ ರಾಜ್ಯ ಬಡವಾಗುತ್ತದೆ.) ಹೀಗೆ ತಮ್ಮನ್ನು ತಾವೇ ಕೊಂಡಾಡಿಕೊಳ್ಳುವುದು, ಗೌರವಿಸಿಕೊಳ್ಳುವುದು ಮತ್ತು ತಮ್ಮ ಸಾವಿನ ನಂತರವೂ ತಮ್ಮ ಹೆಸರು ಶಾಶ್ವತವಾಗಿರಬೇಕೆಂದು ಬದುಕಿರುವಾಗಲೇ ಚಡಪಡಿಸಿ ಇಂತಹ ತಿಕ್ಕಲು ಕೆಲಸಗಳಿಗೆ ಕೈಹಾಕುವುದಕ್ಕೂ ಮನಃಶಾಸ್ತ್ರದಲ್ಲಿ ಒಂದು ಹೆಸರಿದೆ - ಮೆಗಲೋಮೇನಿಯಾ! ಮಾಯಾವತಿ ಖಂಡಿತವಾಗಿಯೂ ಮೆಗಲೋಮೇನಿಯಾದಿಂದ ಬಳಲುತ್ತಿದ್ದಾರೆ. ಇಂತಿಪ್ಪ ಮೆಗಲೋಮೇನಿಯಾ ಎಂಬ ಕಾಂಪ್ಲೆಕ್ಸ್ ಯಾರನ್ನು ಕಾಡುತ್ತದೆ? ತಮ್ಮನ್ನು ತಾವು ತೀರ ಸೀರಿಯಸ್ ಆಗಿ ತೆಗೆದುಕೊಂಡವರು, ಅಹಂಕಾರಿಗಳು, ತಾವೇನೋ ಮಹತ್ತರವಾದದ್ದನ್ನು ಸಾಧಿಸಿಬಿಟ್ಟಿದ್ದೇವೆಂದೂ, ತಮ್ಮನ್ನು ಬಿಟ್ಟರಿಲ್ಲವೆಂದು ನಂಬಿಕೊಂಡವರು ಮತ್ತು ನಾಯಕರ ವಿಷಯದಲ್ಲಿ ಸರ್ವಾಧಿಕಾರಿಗಳು ಇಂಥದೊಂದು ಕಾಂಪ್ಲೆಕ್ಸ್ನಿಂದ ನರಳುತ್ತಾರೆ. ಮಾಯಾವತಿಯವರ ಹೇಳಿಕೆಗಳನ್ನೂ ನಡವಳಿಕೆಗಳನ್ನೂ ಸೂಕ್ಷ್ಮವಾಗಿ ಗಮನಿಸಿದರೆ ನಾವಿದನ್ನು ಸುಲಭವಾಗಿ ಗುರುತಿಸಬಹುದು.

ತಮ್ಮ ವಿಗ್ರಹ ಸ್ಥಾಪನೆಯ ಮತ್ತು ಅದಕ್ಕಾಗಿ ಸರ್ಕಾರ ವೆಚ್ಚ ಮಾಡುತ್ತಿರುವ ಅಪಾರ ಮೊತ್ತದ ಹಣದ ಸಾಧುತ್ವವನ್ನು ಮಾಯಾ ಅವರಲ್ಲಿ ಪ್ರಶ್ನಿಸಿ ನೋಡಿ, ಸಿದ್ಧ ಸಿಡಿಗುಂಡಿನಂಥ ಉತ್ತರ ಸಿಗುತ್ತದೆ ನಿಮಗೆ - `ನಾನು ಈ ದಲಿತ ಸ್ಮಾರಕಕ್ಕೆ ಖಚರ್ು ಮಾಡುತ್ತಿರುವ ವೆಚ್ಚ ರಾಜಘಾಟ್ನ ನೆಲದ ಮೌಲ್ಯದಲ್ಲಿ ಅರ್ಧದಷ್ಟಲ್ಲ. ಹಿಂದೆ ಬಂದು ಹೋದ ಯಾವುದೇ ಸಕರ್ಾರ ದಲಿತ ಸಾಧಕರನ್ನು ಗೌರವಿಸಿಲ್ಲವಾದ್ದರಿಂದ ನಾನೊಬ್ಬ ದಲಿತ ಮಹಿಳೆಯಾಗಿ ಆ ಕೆಲಸ ಮಾಡುತ್ತಿದ್ದೇನೆ. ಇದನ್ನು ವಿರೋಧಿಸುವವರು ಮೇಲ್ಜಾತಿಯ ಜಾತ್ಯಹಂಕಾರದಿಂದ ಬಳಲುತ್ತಿದ್ದು ದಲಿತರ ಏಳಿಗೆಯನ್ನು ಸಹಿಸಲಾರದವರು.' ಇಂದು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಅತ್ಯಂತ ಹಿಂದುಳಿದಿರುವ ರಾಜ್ಯ ಉತ್ತರ ಪ್ರದೇಶ. ಅಂತಹ ಸಮಸ್ಯೆಗಳ ಆಗರದಂತಿರುವ ರಾಜ್ಯದಲ್ಲಿ ಇಂತಹ ಅನವಸರ ಖರ್ಚುಗಳು ತಕ್ಕುದೇ? ಅದೂ ಏನು? 1200 ಕೋಟಿಗಳು! ಅದರಲ್ಲಿ ಎಷ್ಟು ಶಾಲೆಗಳು, ಆಸ್ಪತ್ರೆಗಳು, ದಲಿತೋದ್ಧಾರ ಮಾಡಬಹುದಿತ್ತು? ಆಕೆ ಇದಕ್ಕೆ ಏನೆಂದು ಉತ್ತರಿಸುತ್ತಾರೆ? ಸುಲಭ ಅದೇ ಗಿಳಿ ಪಾಠ - ದಲಿತ ಪ್ರಜ್ಞೆ ಮತ್ತು ದಲಿತ ಆತ್ಮಾಭಿಮಾನದ ಸಂಕೇತಗಳಿವು. ಇವುಗಳಿಂದ ದಲಿತರಿಗೊಂದು ಆತ್ಮಗೌರವ ನೀಡಿದವಳಾಗುತ್ತೇನೆ. ಇಷ್ಟಕ್ಕೇ ನಿಲ್ಲುವುದಿಲ್ಲ ಮಾಯಾವತಿಯ ತಿಕ್ಕಲುತನಗಳು - ಆಕೆಯ ರಾಜಕೀಯ ಗುರು ಕಾನ್ಷಿರಾಂ ಪ್ರತಿಮೆಗಿಂತ ತನ್ನದು ಕೆಳಮಟ್ಟದಲ್ಲಿದೆಯೆಂದು ಕುಪಿತಗೊಂಡು ಅದನ್ನು ಕೆಡವಿ ಮರು ನಿಮರ್ಿಸಿದ್ದಾರೆ! ಈಗ ಲಖನೌದಲ್ಲಿ ತಲೆಯೆತ್ತುತ್ತಿರುವ ದಲಿತ (ಮಾಯಾ) ಸ್ಮಾರಕವನ್ನು ರಾಜ್ಯದ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಸಲಾಗುವುದಂತೆ. ಇದು ದಲಿತರಿಗೆ ತೀರ್ಥಕ್ಷೇತ್ರವಾಗಲಿದೆಯಂತೆ! ಆಕೆಯ ಸ್ವಯಂ ರಟಠಡಿಜಿಛಿಚಿಣಠಟಿ ಅನ್ನು ಮಹಾತ್ಮನ ಪುಣ್ಯಭೂಮಿಯ ರಿಯಲ್ ಎಸ್ಟೆಟ್ ಬೆಲೆಗೆ ತುಲನೆ ಮಾಡುವವರಿಗೆ ಏನು ಹೇಳಲಾದೀತು ಹೇಳಿ?


ಮಾಯಾವತಿ ನಿಜಕ್ಕೂ ಅಂತಹ ಮಹಾನ್ ವ್ಯಕ್ತಿಯೇ? 80ರ ದಶಕದಲ್ಲಿ ದಲಿತ ನಾಯಕ ಕಾನ್ಷಿರಾಂರವರ ಕಣ್ಣಿಗೆ ಬಿದ್ದ ಈಕೆ, ಆಗ ಪ್ರೈಮರಿ
ಶಾಲೆಯ ಟೀಚರ್ ಆಗಿದ್ದರು. ಬಡ ದಲಿತ ಕುಟುಂಬದಿಂದ ಅವರು ಬಹು ಕಷ್ಟ ಕಾರ್ಪಣ್ಯಗಳನ್ನೆದುರಿಸಿ ಮೇಲೆ ಬಂದಿದ್ದರು. ಅವರ ತಂದೆ ಒಬ್ಬ ಪೋಸ್ಟ್ ಮಾಸ್ಟರ್. ದಲಿತ ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಮಾಯಾವತಿಯವರನ್ನು ಕಾನ್ಷಿರಾಂ ರಾಜಕೀಯಕ್ಕೆ ತಂದರು. ತಮ್ಮ ಬಹುಜನ ಸಮಾಜ ಪಕ್ಷದ ನಾಯಕಿಯನ್ನಾಗಿಸಿದರು. ಹಲವಾರು ಏಳು ಬೀಳುಗಳನ್ನು ಕಂಡ ಮಾಯಾವತಿ 1995ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಆಗಿನಿಂದಲೂ ಮಾಯಾವತಿಯವರಿಗೆ ಈ ವಿಗ್ರಹಗಳ ಹುಚ್ಚು ಇದ್ದೇ ಇದೆ. ಆಗವರು ಅಂಬೇಡ್ಕರ್ ವಿಗ್ರಹಗಳನ್ನು ಸ್ಥಾಪಿಸುತ್ತಿದ್ದರು. ನಂತರದ ಕಾಲಾವಧಿಯಲ್ಲಿ ಇದುವರೆಗೂ 3 ಬಾರಿ ಮುಖ್ಯಂತ್ರಿಯಾಗಿದ್ದಾರೆ. ದುರ್ದೈವವೆಂದರೆ ಅವರೆಂದೂ ಉತ್ತಮ ಆಡಳಿತಗಾರರೆಂದು ತೋರಿಸಲೇ ಇಲ್ಲ. ಅವರದೇನಿದ್ದರೂ ದಲಿತ ರಾಜಕಾರಣ, ಅದೂ ನೈಜ ದಲಿತೋದ್ಧಾರದ ಮಾರ್ಗವಲ್ಲ, ಬದಲಿಗೆ ವಿಗ್ರಹಾವಿಷ್ಕರಣದ ಟೊಕೆನಿಸಮ್ನ ದಾರಿ. ಇಂದು ದಲಿತರೂ ಕೂಡ ಪ್ರಗತಿಗೆ ಎದುರು ನೋಡುತ್ತಿದ್ದಾರೆಯೇ ಹೊರತು ಇಂತಹ ಚಿಲ್ಲರೆ ಗಿಮಿಕ್ಕುಗಳಿಗಲ್ಲ. ಇದಲ್ಲದೇ ಅವರು ಹಲವಾರು ಭ್ರಷ್ಟಾಚಾರದ ಹಗರಣಗಳಲ್ಲಿ ಆರೋಪಿತರು. ತಾಜ್ ಕಾರಿಡಾರ್ ಹಗರಣ, ಆದಾಯ ಮೀರಿದ ಅಕ್ರಮ ಆಸ್ತಿ ಗಳಿಕೆ ಪ್ರಕರಣ, ಹೀಗೆ ಇನ್ನೂ ಹಲವು. ಈಕೆ 2008ರಲ್ಲಿ ಘೋಷಿಸಿದ ಆಸ್ತಿಯ ಮೌಲ್ಯ - 52 ಕೋಟಿಗಳು! ನಿಸ್ಸಾಹಯಕ ಬಡ ದಲಿತ ಹೆಣ್ಣುಮಗಳೆಂದು ತನ್ನನ್ನು ತಾನು ಬಣ್ಣಿಸಿಕೊಳ್ಳುವ ಆಕೆಯ ಬಳಿ ಇಷ್ಟು ಹಣ-ಆಸ್ತಿ ಎಲ್ಲಿಯದೆಂದು ಕೇಳಿ ನೋಡಿ - ತಮಾಷೆಯ ಉತ್ತರವೊಂದು ಸಿದ್ಧವಾಗಿರುತ್ತದೆ - ಪಕ್ಷಕ್ಕೆ ಡೊನೇಟ್ ಮಾಡುವ ಶ್ರೇಯೋಭಿಲಾಷಿಗಳು ತನಗೂ ಹಾಗೆಯೇ ಡೊನೇಟ್ ಮಾಡಿದ್ದಾರೆ! ಇದೆನ್ನೆಲ್ಲಾ ಕೆದಕುವ ಹಾಗೆಯೇ ಇಲ್ಲ ಮಾಯಾವತಿ ಸಿಡಿಗುಂಡಾಗುತ್ತಾರೆ - ಇದೆಲ್ಲೆವೂ ಮೇಲ್ಜಾತಿಯವರ ಜಾತ್ಯಹಂಕಾರ......ಇವರನ್ನು ವಿರೋಧಿಸುವವರೆಲ್ಲರೂ ಜಾತ್ಯಹಂಕಾರದ್ದೋ ಅಥವಾ ಮೇಲ್ ಚೊವಿನಿಸಮ್ನ ಆರೋಪವನ್ನು ಹೊರಲೇಬೇಕು. ಯಾಕೆಂದರೆ ಮಾಯಾ ಬೆಹನ್ ಬಳಿ ಎಲ್ಲಾ ಟೀಕೆಗಳಿಗೂ ಇರುವುದು ಅದೊಂದೇ ಉತ್ತರ!

ಆದರೂ ಬಿಡದೇ ಕೆದಕಿದರೆ ಮತ್ತೊಂದು ಸಿಡಗುಂಡಿನಂತಹ ಉತ್ತರ - ಜನ ತನ್ನನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ತನಗೆ ಜನರ ಮ್ಯಾಂಡೇಟ್ ಇದೆ. ಹೌದು ಇದೆ, ಅದಕ್ಕೆ? ಅವರ ಭಾವವಿಷ್ಟೆ - ನನ್ನ ಬಳಿ ಜನರ ಮ್ಯಾಂಡೇಟ್ ಇದೆ. ಜನ ನನ್ನನ್ನು ಒಪ್ಪಿದ್ದಾರೆ. ಆದ್ದರಿಂದ ನಾನು ಏನು ಬೇಕಾದರೂ ಮಾಡಬಹುದು. ಅದನ್ನು ಪ್ರಶ್ನಿಸಿದರೆ ಜನರನ್ನೇ ಅವಮಾನಿಸಿದಂತೆ! ಇದೇನೂ ಬರಿಯ ಮಾಯಾವತಿಯವರ ಡಿಫೆನ್ಸ್ ಅಲ್ಲ. ಮೋದಿ ಗೋಧ್ರಾದ ಕುರಿತು ಮಾತೆತ್ತಿದರೆ ಹೇಳುವುದೂ ಇದೇ. ಜನ ನನ್ನನ್ನು ಪುನಃಪುನಃ ಗೆಲ್ಲಿಸಿ ಕಳಿಸಿಕೊಡುತ್ತಿರುವಾಗ ನಿಮ್ಮದೇನು? ಎಂಬ ಭಾವ. ಇತ್ತೀಚೆಗೆ ನಮ್ಮ ಮುಖ್ಯಮಂತ್ರಿಗಳ ಕೆಲವು ಹೇಳಿಕೆಗಳೂ ನಡವಳಿಕೆಗಳೂ ಇದನ್ನೇ ಪ್ರತಿಧ್ವನಿಸುತ್ತಿರುವುದು ದುರಾದೃಷ್ಟಕರ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಬಿಜೆಪಿ ಮಡಿಲಿಗೆ ಬಿದ್ದ ಮಾತ್ರಕ್ಕೆ ಜನ ರೈತರ ಗೋಲೀಬಾರ್ ಅನ್ನು ಒಪ್ಪಿದ ಹಾಗಲ್ಲವಲ್ಲ! ಪ್ರಜಾಪ್ರಭುತ್ವದಲ್ಲಿ ಇದು ಅತ್ಯಂತ ಅಪಾಯಕಾರಿ ಮನೋಧರ್ಮ. ಇದನ್ನು ಮೊಗ್ಗಿನಲ್ಲೇ ಚಿವುಟಿ ಹಾಕಬೇಕಿದೆ.
ನೀವೇನಾದರೂ ಹೇಳಿ, ತನ್ನದೇ ಪ್ರತಿಮೆಯನ್ನು ಸ್ವಹಸ್ತಗಳಿಂದಲೇ ಆವಿಷ್ಕರಿಸುವುದು ತಮಾಷೆಯೆನಿಸುವುದಿಲ್ಲವೇ? ಸಾಧಾರಣವಾಗಿ ಸತ್ತವರಿಗಷ್ಟೆ.....
(ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟಿತ)


Proudly powered by Blogger
Theme: Esquire by Matthew Buchanan.
Converted by LiteThemes.com.