ಪಲ್ಸ್ ರೇಟ್!


ಏನು ಸ್ವಾಮಿ ನಿಮ್ಮ ಮನೆಗೆ ತಿಂಗಳ ದಿನಸಿ ತಂದಾಯಿತಾ? ಬೇಳೆಗಳ ಬೆಲೆ ಕೇಳಿ ನಿಮ್ಮ ಪಲ್ಸ್ ರೇಟ್ (ಎದೆಬಡಿತ) ಜಾಸ್ತಿಯಾಯಿತೆ? ಇದೇನು ನಿಮ್ಮೊಬ್ಬರ ಅನುಭವವಲ್ಲ ಬಿಡಿ. ಕಳೆದೊಂದು
ತಿಂಗಳಿಂದ ಬೀದಿಯಲ್ಲಿ ಸಿಕ್ಕ ಇಬ್ಬರ ನಡುವೆ ಕೂಡ ಇದೇ ಮಾತು. ಏನೇ ಆದರೂ ತೊಗರಿ ಏನು ಸ್ವಾಮಿ ಕೇಜಿಗೆ 84 ರೂ.! ಮುಂಬೈನಲ್ಲಿ
ಈಗಾಗಲೇ ಕೇಜಿ ತೊಗರಿಯ ಬೆಲೆ 95 ರೂ. ಅಂತೆ.! ಇದು ಇಷ್ಟರಲ್ಲೇ 100-150ರೂ. ಗಳಿಗೇರುವ ನಿರೀಕ್ಷೆಯಿದೆಯಂತೆ! ಹೀಗಾದರೆ ಮಧ್ಯಮ ವರ್ಗದವರು ಜೀವನ ನಡೆಸುವುದಾದರೂ ಹೇಗೆ ಸ್ವಾಮಿ? ಹಾಳಾಗಿ ಹೋಗಲಿ ಇದು ಬರಿಯ ತೊಗರಿಯ ಮಾತಾ ಅಂದರೆ, ಅದೂ ಇಲ್ಲ. ಕೇಜಿ ಉದ್ದಿನ ಬೆಲೆ 68 ರೂ. , ಕಡ್ಲೆಬೇಳೆ - 35-40 ರೂ., ಹೆಸರು ಬೇಳೆ - 65 ರೂ., ಬೇಳೆಗಳಲ್ಲದೆ ಕಾಳುಗಳ ಬೆಲೆಗಳೂ ಗಗನಕ್ಕೇರಿ ಕೂತಿವೆ.

ಸಾಧಾರಣವಾಗಿ ಬೇಳೆ ಮತ್ತು ಕಾಳುಗಳ ಬೆಲೆಗಳು ಒಂದಕ್ಕೊಂದು ಬೆಸೆದುಕೊಂಡಿರುವಂತಹವು. ಆದ್ದರಿಂದ ಅದು ನಿರೀಕ್ಷಿತವೇ. ಕಮಾಡಿಟಿ ಮಾರುಕಟ್ಟೆಯಲ್ಲಿ ಈ ದಿನಸಿಗಳ ಮೇಲೆ ಟ್ರೇಡ್ ನಡೆದರೆ, ಹೀಗೆ ಇವುಗಳ ಬೆಲೆ ಏರುಪೇರಾಗುತ್ತದೆಂದು ಒಂದೂವರೆ ವರ್ಷದ ಹಿಂದೆಯೇ ಕಮಾಡಿಟಿ ಟ್ರೇಡ್ ಮಾರುಕಟ್ಟೆಯಿಂದ ತೊಗರಿ ಮತ್ತು ಇತರ ಬೇಳೆಗಳನ್ನು ತೆಗೆದುಹಾಕಲಾಗಿದೆ. ಆದರೂ ಯಾಕೆ ಹೀಗೆ ಇದ್ದಕ್ಕಿದ್ದಂತೆ ಬೇಳೆಗಳ ಬೆಲೆ ಹೀಗೆ ಗಗನಮುಖಿಯಾಗಿದೆ ಅಂತ ಸ್ವಲ್ಪ ಮಾಹಿತಿ ಹೆಕ್ಕುತ್ತಾ ಹೋದರೆ, ನಮಗೆ ಗೊತ್ತಾಗುವುದು ಸಾಧಾರಣವಾಗಿ ಬೇಳೆಗಳ ಬೆಳೆಯ ಇಳುವರಿಯಲ್ಲಿ ಈ ಬಾರಿ ಶೇ. 60ರಷ್ಟು ಕುಸಿತ ಕಂಡಿರುವುದು. ಇದಲ್ಲದೇ ವಿಶ್ವದ ಪ್ರಮುಖ ಬೇಳೆ ಬೆಳೆಯುವ ದೇಶಗಳಾದ ಬರ್ಮಾ, ತಾನ್ಜಾನಿಯಾ, ಥೈಲ್ಯಾಂಡ್, ಆಸ್ಟ್ರೇಲಿಯಾ, ಕೆನೆಡಾಗಲಲ್ಲೂ ಈ ಬಾರಿ ಬೇಳೆಗಳ ಇಳುವರಿ ಕಡಿಮೆಯಾಗಿರುವುದರಿಂದ ಅಲ್ಲಿಂದ ಆಮದಾಗುತ್ತಿರುವ ಬೇಳೆಗಳ ಮೂಲ ಬೆಲೆಯೇ ಶೇ. 15-20ರಷ್ಟು ಹೆಚ್ಚಿದೆ. ಸರ್ಕಾರವೂ ಸುಮ್ಮನೇ ಕೂತಿಲ್ಲ ನಫೇಡ್, ಎಮ್ಎಮ್ಟಿಸಿ ಮತ್ತು ಎಸ್ಟಿಸಿಯಂತಹ ಸಂಸ್ಥೆಗಳಿಗೆ ಬೇಳೆಗಳ ಆಮದಿಗೆಂದೇ 200 ಕೋಟಿ ರೂ. ಗಳ ಸಬ್ಸಿಡಿಯನ್ನು ಘೋಷಿಸಿದೆ.

ಆದರೂ ಇದು ಸಾಲುತ್ತಿಲ್ಲ. ಕಾರಣ - ಹೋರ್ಡಿಂಗ್! ಹೌದು ಇಂದು ದಿನಸಿ ವ್ಯಾಪಾರದಲ್ಲಿ ತೊಡಗಿಸಕೊಂಡಿರುವ ಬಹುರಾಷ್ಟ್ರೀಯ ಕಂಪೆನಿಗಳ ಬಳಿ ಸುಮಾರು 50 ಸಾವಿರ ಚೀಲಗಳ ದಾಸ್ತಾನಿದೆಯೆಂದು ಹೇಳಲಾಗುತ್ತಿದೆ. ಆದರೂ ಅವರು ಈ ಸರಕನ್ನು ಮಾರುಕಟ್ಟೆಗೆ ಬಿಡದೆ, ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಎರ್ರಾಬಿರ್ರಿ ಬೆಲೆಯೇರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಈ ಕಂಪೆನಿಗಳ ಮೇಲೆ ಸರ್ಕಾರದ ಯಾವುದೇ ಅಂಕೆ-ಶಂಕೆ ಇದ್ದ ಹಾಗೆ ಕಾಣುವುದಿಲ್ಲ. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವಾಗಲೇ ಸರ್ಕಾರಗಳು ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರುಕಟ್ಟೆಯನ್ನು ಮುಕ್ತಗೊಳಿಸುವ ಕುರಿತು ಆಲೋಚಿಸುತ್ತಿವೆ. ಎಲ್ಲವೂ ಮುಕ್ತ ಮರುಕಟ್ಟೆಯ ಹೆಸರಿನಲ್ಲಿ....ಅದೇನಾದರೂ ಆಗಿಬಿಟ್ಟರೆ, ಇಂತಹ ಕೃತಕ ಅಭಾವಗಳು ರೆಗ್ಯುಲರ್ ಆಗುತ್ತವೆಯಷ್ಟೆ!


ಇನ್ನು ಅಕ್ಕಿ. ಅದಂತೂ ಘನಘೋರ - ಮೊದಲಿಗೆ 17-19ರೂ. ಗಳಿಂದ ಪ್ರಾರಂಭವಾಗುತ್ತಿದ್ದ ಕೇಜಿ ಅಕ್ಕಿಯ ಬೆಲೆ 26-28 ರೂ. ವರೆಗೂ ಇರುತ್ತಿತ್ತು. ಈಗ ಅದೇ 17 ರೂ. ಕ್ವಾಲಿಟಿಯ ಅಕ್ಕಿಯ ಬೆಲೆ 28 ರೂ. ಕೇಜಿ ಅಕ್ಕಿಯ ಬೆಲೆ 40 ರೂ.ಗಳನ್ನೂ ಮುಟ್ಟಿದ್ದಾಗಿದೆ. ಐವರ ಕುಟುಂಬವೊಂದಕ್ಕೆ ತಿಂಗಳಿಗೆ 25 ಕೆಜಿ ಅಕ್ಕಿ ಬೇಕಾಗುತ್ತದೆಂದು ಇಟ್ಟುಕೊಂಡರೆ, ತಿಂಗಳ ಅಕ್ಕಿ ಬೆಲೆ - 1000 ರೂ.ಗಳು! ಮಧ್ಯಮ ವರ್ಗ ಬದುಕುವುದಾದರೂ ಹೇಗೆ ಸ್ವಾಮಿ? ಮಧ್ಯಮ ವರ್ಗದವರಿಗೇ ಇಷ್ಟು ಕಷ್ಟವಾದರೆ ಇನ್ನು ಸಮಾಜದ ಬಡ ವರ್ಗ - ಆ ದೇವರೇ ಗತಿ. ಎರಡು ರೂ.ಗಳಿಗೆ ಕೇಜಿ ಅಕ್ಕಿ ಕೊಡುವ ಭಾಷೆಗಳೆಲ್ಲವೂ ಮರೆತು ಶಾನೆ ಕಾಲವಾಯಿತು ಬಿಡಿ. ಇಂತಹ ಕಾರ್ಯಕ್ರಗಳೆಲ್ಲಾ ಅಸ್ಸೆಟ್ಸ್ ಅನ್ನು ಕ್ರಿಯೇಟ್ ಮಾಡದ ವ್ಯರ್ಥ, ತಪ್ಪಿಸಬೇಕಾದ ಸೋಷಿಯಲ್ ಸ್ಪೆಂಡಿಂಗ್ - ಇದು ಬಹುಮಂದಿ ಎಕನಾಮಿಸ್ಟುಗಳ ವಾದ. ದುರ್ದೈವವೆಂದರೆ ಪ್ರತಿ ಸರ್ಕಾರವೂ ಈ ವಾದಕ್ಕೆ ಒಂದಿಲ್ಲೊಂದು ಸಾರಿ ತಲೆದೂಗುತ್ತದೆ.

ಸೋಜಿಗದ ವಿಷಯವೆಂದರೆ, ಆಹಾರೋತ್ಪನ್ನಗಳ ಬೆಲೆ ಹೀಗೆ ಗಗನಮುಖಿಯಾಗಿರುವಾಗ ನಮ್ಮ ದೇಶದ ಹಣದುಬ್ಬರ ಶೇ.2ರೊಳಗೇ ಇದೆ! ಅದನ್ನು ಏರಿಸಲು ಕೆಲವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಸಕರ್ಾರ! ಹಣದುಬ್ಬರವನ್ನು ಲೆಕ್ಕ ಹಾಕಲು ಆ ವಾರ ಕೆಲ ಅಗತ್ಯ ವಸ್ತುಗಳ ಹೋಲ್ಸೇಲ್ ದರಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಇದನ್ನು ಹೋಲ್ಸೇಲ್ ಪ್ರೈಸ್ ಇಂಡೆಕ್ಸ್ ಎನ್ನುತ್ತಾರೆ. ಇದರಲ್ಲಿ ಪೆಟ್ರೋಲ್ನಿಂದ ಹಿಡಿದು ಉಪ್ಪಿನವರೆಗೂ ಹಲವಾರು ವಸ್ತುಗಳು ಸೇರಿವೆ. ಆದರೆ ಆಶ್ಚರ್ಯ ಈ ಪಟ್ಟಿಯಲ್ಲಿ ಶ್ರೀಸಾಮಾನ್ಯನಿಗೆ ಅತ್ಯಗತ್ಯವಾದ ಆಹಾರೋತ್ಪನ್ನಗಳಾದ ಅಕ್ಕಿಯೂ ಇಲ್ಲ್ಲ, ತೊಗರಿಯೂ ಇಲ್ಲ! ಅದೂ ಈ ವ್ಯವಸ್ಥೆಯಲ್ಲಿ ಗಣನೆಗೆ ತೆಗೆದುಕೊಳ್ಳುವುದು ಹೋಲ್ಸೇಲ್ ದರಗಳನ್ನು. ಅದು ನಮ್ಮ ಕೈಗೆ ಬರುವಷ್ಟರಲ್ಲಿ ಅದರ ದರವೇನಾಗಿರುತ್ತದೆಯೆಂಬುದು ಹಣದುಬ್ಬರದ ಲೆಕ್ಕಾಚಾರದಲ್ಲಿ ಅನಗತ್ಯ. ಈ ವ್ಯವಸ್ಥೆಯೇ ದೋಷದಿಂದ ಕೂಡಿದೆ. ಹಣದುಬ್ಬರವನ್ನು ಲೆಕ್ಕ ಹಾಕಲು ಮತ್ತೊಂದು ವಿಧವಿದೆ - ಅದು ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್. ಇದನ್ನು ರೀಟೇಲ್ ದರಗಳನ್ನಾಧರಿಸಿ ಲೆಕ್ಕ ಹಾಕಲಾಗುತ್ತದೆ. ಇದರಂತೆ ಇಂದಿಗೂ ಭಾರತದಲ್ಲಿ ಹಣದುಬ್ಬರ ಶೇ. 8-9ರ ಮೇಲೆಯೇ ಇದೆ. ಜಾಗತಿಕ ಆರ್ಥಿಕ ಹಿಂಜರಿತದಿಂದ ಈಗಾಗಲೇ ವಿವಿಧ ರೀತಿಯಲ್ಲಿ ಬಳಲುತ್ತಿರುವ ಶ್ರೀಸಾಮಾನ್ಯನಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಆಹಾರೋತ್ಪನ್ನಗಳ ಬೆಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ತಕ್ಷಣವೇ ಕಾರ್ಯಪ್ರವೃತ್ತವಾಗಬೇಕಿದೆ. ಬಹುರಾಷ್ಟ್ರೀಯ ಕಂಪೆನಿಗಳು ಹೋರ್ಡಿಂಗ್ ಮಾಡುವುದನ್ನು ನಿಲ್ಲಿಸುವಂತೆ ಮಾಡುವುದಲ್ಲದೇ ಅದು ನಿಜವಾದಲ್ಲಿ ಅಂತಹ ಕಂಪೆನಿಗಳ ಮೇಲೆ ಕ್ರಮ ತೆಗೆದುಕೋಳ್ಳಬೇಕಿದೆ ಸರ್ಕಾರ. ಅವರನ್ನು ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕೆ ಇರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಏನೇ ಆಗಲಿ ಜೀವನ ಕಷ್ಟ!
(ವಿಕ್ರಾಂತ ಕರ್ನಾಟಕದಲ್ಲಿ ಪ್ರಕಟಿತ)

Proudly powered by Blogger
Theme: Esquire by Matthew Buchanan.
Converted by LiteThemes.com.