ಗೂಗಲ್ ಮೈಕ್ರೋಸಾಫ್ಟ್ ಕದನ - ಗ್ರಾಹಕ ದಿಲ್ ಖುಷ್!


ಗೂಗಲ್! ಇದನ್ನು ಯಾರು ಕೇಳಿಲ್ಲ ಹೇಳಿ? ಅಂತರ್ಜಾಲವನ್ನು ಬಳಸಿದವರಿಗೆಲ್ಲರಿಗೂ
ಗೊತ್ತುಂಟು ಗೂಗಲ್. ಗೊತ್ತಿಲ್ಲದವರಿಗೆ ಹೇಳಬೇಕೆಂದರೆ ಇದೊಂದು ಸರ್ಚ್ ಇಂಜಿನ್. ಇದರಲ್ಲಿ ಅಂತರ್ಜಾಲದಲ್ಲಿ ನೀವು ಯಾವ ವಿಷಯದ ಕುರಿತು ಮಾಹಿತಿ ಹುಡುಕುತ್ತಿದ್ದೀರೆಂದು
ಟೈಪ್ ಮಾಡಿ ಸರ್ಚ್ ಕೊಟ್ಟಿರೆಂದರೆ ಸಾಕು ಅರ್ಧ ಸೆಕೆಂಡಿನಲ್ಲಿ ಅಂತರ್ಜಾಲದಲ್ಲಿರುವ ತತ್ಸಂಬಂಧಿ ಪುಟಗಳ ಲಿಂಕುಗಳನ್ನೇಲ್ಲವನ್ನೂ ನಿಮ್ಮ ಪರದೆಯ ಮೇಲೆ ತೋರಿಸುತ್ತದೆ! ಇದೊಂದು ಅದ್ಭುತವೇ ಸರಿ. ಇದನ್ನು ಶೂರು ಮಾಡಿದವರಾದರೂ ಯಾರು? - ಬ್ರಿನ್ ಮತ್ತು ಲ್ಯಾರಿ ಪೇಜ್. ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದ ಇವರು ತಮ್ಮ ಅಕಾಡಮಿಕ್ ಪ್ರಾಜೆಕ್ಟ್ಗೆಂದು ಈ ಇಂಜಿನ್ನ ಪ್ರೋಗ್ರಾಮ್ ಅನ್ನು ಬರೆದರು. ನಂತರ ಇದು ಅವರಷ್ಟೆ ಅಲ್ಲದೇ ಜಗತ್ತಿನ ಅನೇಕರ ಜೀವನವನ್ನೇ ಬದಲಾಯಿಸಿಬಿಟ್ಟಿತು. ಇಂದು ಸರ್ಚ್ ಇಂಜಿನ್ಗಳಲ್ಲಿ ಗೂಗಲ್ದೇ ಪಾರುಪತ್ಯ. ಅದನ್ನು ಪ್ರಶ್ನಿಸುವವರು ಇನ್ನೂ ಬಂದಿಲ್ಲ. ಇಂತಿಪ್ಪ ಗೂಗಲ್ ಹೊಸದೊಂದು ಸಾಹಸಕ್ಕೆ ಕೈಹಾಕಿದೆ. ಗೂಗಲ್ ಖ್ರೋಮ್ ಹೆಸರಿನಲ್ಲಿ 2010 ರಷ್ಟರಲ್ಲಿ ಹೊಸದೊಂದು ಆಪರೇಟಿಂಗ್ ಸಿಸ್ಟಮ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. ಇದು ಓಪನ್ ಸೋರ್ಸ್ ಅಂದರೆ ಲೀನಕ್ಸ್ ಆಧಾರದ ಆಪರೇಟಿಂಗ್ ಸಿಸ್ಟಮ್ ಆಗಿರುತ್ತದೆಂದೂ ತಿಳಿಸಿದೆ. ಗೂಗಲ್ ಖ್ರೋಮ್ನ ವಿಶೇಷತೆಯನ್ನು ತಿಳಿಸಿರುವ ಕಂಪೆನಿ ಈಗಿನ ಎಲ್ಲಾ ಆಪರೇಟಿಂಗ್ ಸಿಸ್ಟಮ್ಗಳೂ ಅಂತರ್ಜಾಲದ ಆವಿಷ್ಕಾರ ಮತ್ತು ವ್ಯಾಪಕ ಬಳಕೆಗೂ ಹಿಂದಿನ ಕಾಲಾವಧಿಯಲ್ಲಿ ಅಭಿವೃದ್ದಿಗೊಂಡಿರುವಂತಹುದಾದ್ದರಿಂದ ಇವು ಅಂತರ್ಜಾಲದ ವ್ಯಾಪಕ ಬಳಕೆಗೆ ಅಷ್ಟು ಸೂಕ್ತವಾಗಿಲ್ಲ. ನಮ್ಮ ಗೂಗಲ್ ಖ್ರೋಮ್ ಓಎಸ್ ಇದನ್ನು ಪೂರೈಸಲಿದೆಯೆಂದು ತಿಳಿಸಿದೆ. ಸದ್ಯ ವಿಶ್ವದ ಆಪರೇಟಿಂಗ್ ಸಿಸ್ಟಮ್ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿರುವುದು ಮೈಕ್ರೋಸಾಫ್ಟ್ನ
ವಿಂಡೋಸ್. ಇಂದು ಜಗತ್ತಿನ ಶೇ.90ರಷ್ಟು ಕಂಪ್ಯೂಟರುಗಳಲ್ಲಿ ಬಳಕೆಯಾಗುತ್ತಿರುವುದು ವಿಂಡೋಸ್! ಈಗ ಈ ಮೈಕ್ರೋಸಾಫ್ಟ್ ಜಯಂಟ್ ಅನ್ನು ಗೂಗಲ್ ಛಾಲೆಂಜ್ ಮಾಡಿದೆ. ಅಲ್ಲಿಗೆ ಕೆಲ ವರ್ಷಗಳಿಂದಲೂ ನಡೆಯುತ್ತಿರುವ ಮೈಕ್ರೋಸಾಫ್ಟ್ ಮತ್ತು ಗೂಗಲ್ನ ಮುಸುಕಿನ ಗುದ್ದಾಟ ಇದರೊಂದಿಗೆ ತಾರಕಕ್ಕೇರಲಿದೆ. ಮೈಕ್ರೋಸಾಫ್ಟ್ನ ಸ್ಥಾಪಿತ ಮೊನೊಪಲಿಯನ್ನು ಅತ್ಯಂತ ಇನೋವೇಟಿವ್ ಎನಿಸಿಕೊಂಡಿರುವ ಗೂಗಲ್ ಛಾಲೆಂಜ್ ಮಾಡಿರುವುದು, ನಿರೀಕ್ಷೆಗಳನ್ನು ಹೆಚ್ಚಿಸಿದೆ. ವಿಷಯ ಪ್ರಣೀತರು ಈ ಕಾರ್ಪೋರೀಟ ವಾರ್ನ ಎಲ್ಲ ಲಾಭಗಳೂ ಕಡೆಗೆ ಬಂದು ಗಿರಾಕಿಗೆ ತಲುಪುವುದರಿಂದ ಇದು ಒಳ್ಳೆಯದೇ ಎಂಬಂತೆ ಮಾತನಾಡುತ್ತಿದ್ದಾರೆ. ಈ ಮುಸುಕಿನ ಗುದ್ದಾಟದಿಂದ ಎರಡೂ ಕಂಪೆನಿಗಳೂ ಜಿದ್ದಿಗೆ ಬಿದ್ದವರಂತೆ ತಮ್ಮ ಓಎಸ್ ಅನ್ನು ಉತ್ತಮಗೊಳಿಸುತ್ತಾ ಹೋಗುತ್ತವೆಯಲ್ಲದೇ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ತಮ್ಮ ಪ್ರಾಡಕ್ಟ್ನ ಬೆಲೆಯನ್ನು ಇಳಿಸುತ್ತಾ ಬರುತ್ತವೆ. ಸದ್ಯ ಒಂದು ನೂತನ ಕಂಪ್ಯೂಟರ್ನ ಶೇ.15ರಷ್ಟಾಗುತ್ತದೆ ವಿಂಡೋಸ್ ಆಪರೇಟಿಂಗ್ ಸಿಸ್ಟಮ್. ಈ ಬೆಳವಣಿಗೆಗಳಿಂದ ಇದು ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿವೆ. ಹೀಗಾದರೆ ಒಳ್ಳೆಯದೇ ಅಲ್ಲವೇ? ಕಿತ್ತಾಡಲೀ ಬಿಡಿ ಅವರೂ.

ಇತ್ತ ಗೂಗಲ್ ಮೈಕ್ರೋಸಾಫ್ಟ್ನ ಮೊನಾಪಲಿಯಿರುವ ಆಪರೇಟಿಂಗ್ ಸಿಸ್ಟಮ್ನ ಮಾರುಕಟ್ಟೆಯಲ್ಲಿ ಪ್ರವೇಶಿಸಲು ಹವಣಿಸಿ, ಗುಟುರು ಹಾಕಿದ್ದರೆ, ಅತ್ತ ಮೈಕ್ರೋಸಾಫ್ಟ್ ಸ್ಪಂದಿಸಿದೆ. ಆಪರೇಟಿಂಗ್ ಸಿಸ್ಟಮ್ಗಳ ಮಾರುಕಟ್ಟೆಯಲ್ಲಿ ತನ್ನನ್ನೆದುರಿಸುವವರಿಲ್ಲ ಎಂದು ತಣ್ಣಗೆ ಹೇಳಿತಾದರೂ, ಗೂಗಲ್ನೊಡನೆಯ ಕಾರ್ಪೋರೇಟ್ ವಾರ್ಗೆ ಮತ್ತೊಂದು ರೀತಿಯಲ್ಲಿ ಅದು ಸಿದ್ಧವಾಗುತ್ತಿದೆ. ಹೇಗೆ ಗೂಗಲ್
ಮೈಕ್ರೋಸಾಫ್ಟ್ನ ಸಾರ್ವಭೌಮತ್ವವನ್ನು ಪ್ರಶ್ನಿಸ ಹೊರಟಿದೆಯೋ ಅದೇ ರೀತಿಯಲ್ಲಿ ಮೈಕ್ರೋಸಾಫ್ಟ್ ಗೂಗಲ್ನ ಇಂಟರ್ನೆಟ್ ಬಿಸಿನೆಸ್ನ ಸಾರ್ವಭೌಮತ್ವವನ್ನು ಪ್ರಶ್ನಿಸಲು ಪ್ರಯತ್ನಿಸುತ್ತಿದೆ. ಕಳೆದ ವಾರ ಮೈಕ್ರೋಸಾಫ್ಟ್ ಕಂಪೆನಿಯು ಇಂಟರ್ನೆಟ್ ಬಿಸಿನೆಸ್ನಲ್ಲಿ ಎರಡನೆಯವನೆನಿಸಿಕೊಂಡಿರುವ ಯಾಹೂ ಕಂಪೆನಿಯೊಡನೆ ಒಪ್ಪಂದ ಮಾಡಿಕೊಂಡಿದೆ. ಯಾಹೂಗೂ ಗೂಗಲ್ಲೇ ಪ್ರಧಾನ ಪ್ರತಿಸ್ಪರ್ಧಿ, ಹಿಂದೊಮ್ಮೆ ತಾನು ಆಕ್ರಮಿಸಿಕೊಂಡಿದ್ದ ಮಾರುಕಟ್ಟೆಯಿಂದ ತನ್ನನ್ನು ಹೊರಹಾಕಿ ಗೂಗಲ್ ಮೊನಾಪಲಿ ಸೃಷ್ಟಿಸಿಕೊಂಡಿದೆಯೆಂಬ ಕೋಪ ಅದಕ್ಕೆ. ಮೈಕ್ರೋಸಾಫ್ಟ್ಗೆ ಈಗ ಎಚ್ಚತ್ತುಕೊಳ್ಳದಿದ್ದರೆ ತನಗೂ ಯಾಹೂಗೆ ಬಂದ ಸ್ಥಿತಿ ಬಂದು ಬಿಡಬಹುದೆಂಬ ಭಯ! ಅಲ್ಲಿಗೆ ಶತ್ರುವಿನ ಶತ್ರು ಮಿತ್ರ ಎಂಬಂತೆ ಇವೆರಡೂ ಕಂಪೆನಿಗಳು ಗೂಗಲ್ ಅನ್ನು ಹಣಿಯಲಿಕ್ಕೆಂದೇ ಕೈಜೋಡಿಸಿವೆ. ಗೂಗಲ್ ಮೈಕ್ರೋಸಾಫ್ಟ್ ಅನ್ನು ಆಪರೇಟಿಂಗ್ ಸಿಸ್ಟಮ್ ಮಾರುಕಟ್ಟೆಲ್ಲಿ ಛಾಲೆಂಜ್ ಮಾಡಿದರೆ, ಮೈಕ್ರೋಸಾಫ್ಟ್ ಡಿಫೆನ್ಸಿವ್ ಆಗಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವುದೆಂದು ಎಲ್ಲರೂ ನೀರಿಕ್ಷಿಸಿದ್ದಾಗ, ಅದು ಗೂಗಲ್ ಅನ್ನು ಅದರ ಫೀಲ್ಡಿನಲ್ಲೇ ಛಾಲೆಂಜ್ ಮಾಡಿ ಅಗ್ರೆಸಿವ್ ಆಗಿ ಕಣಕ್ಕಿಳಿದಿದೆ. ಹೋದ ವರ್ಷ ಮೈಕ್ರೋಸಾಫ್ಟ್ ಯಾಹೂ ಅನ್ನು 47.5 ಬಿಲಿಯನ್ ಡಾಲರ್ಗಳಿಗೆ ಕೊಂಡುಕೊಳ್ಳಲು ನೋಡಿತಾದರೂ ಅದು ಅಂದು ಕೈಗೂಡದೇ ಹೋಯಿತು. ಆಗ ಅದರ ಮಸ್ತಿಷ್ಕದಲ್ಲಿದ್ದುದೂ ಗೂಗಲ್! ಇದು ಕೈಗೂಡದೇ ಹೋದಾಗ, ಗೂಗಲ್ನ ಗುಟುರುಗಳಿಂದ ಎಚ್ಚೆತ್ತ ಮೈಕ್ರೋಸಾಫ್ಟ್ ಯಾಹೂವಿನೊಂದಿಗೆ ಕೈಜೋಡಿಸಿದೆ. ಸದ್ಯ ಯಾಹೂ ಜೊತೆಯಲ್ಲಿ ಆಗಿರುವ ಒಪ್ಪಂದ ಸರ್ಚ್ ಇಂಜಿನ್ ಮತ್ತು ಆನ್ಲೈನ್ ಜಾಹೀರಾತಿಗೆ ಸಂಬಂಧಪಟ್ಟದ್ದು. 10 ವರ್ಷಗಳ ಈ ಒಪ್ಪಂದದಂತೆ ಯಾಹೂ ಪ್ರೇರಿತ ಅಂತರ್ಜಾಲ ತಾಣಗಳ ಸರ್ಚ್ ಸೌಲಭ್ಯಗಳನ್ನು ಮೈಕ್ರೋಸಾಫ್ಟ್ ನಿರ್ವಹಿಸುತ್ತದೆ. ಜಾಹೀರಾತು ಆದಾಯದಲ್ಲಿ ಮೊದಲ ಕೆಲ ವರ್ಷಗಳು ಶೇ.88ರಷ್ಟು ಯಾಹೂ ಪಾಲಾಗುತ್ತದೆ. ಇಂದು ಇಂಟರ್ನೆಟ್ ಸರ್ಚ್ ಮಾರುಕಟ್ಟೆಯಲ್ಲಿ ಗೂಗಲ್ ಮೂರರಲ್ಲಿ ಎರಡು ಭಾಗವನ್ನು ನಿಯಂತ್ರಿಸುತ್ತಿದ್ದರೆ, ಯಾಹೂ ಎರಡನೇ ಸ್ಥಾನದಲ್ಲಿದ್ದು, ಮೈಕ್ರೋಸಾಫ್ಟ್ನ ಬಿಂಗ್ ಸರ್ಚ್ ಮೂರನೇ ಸ್ಥಾನದಲ್ಲಿದೆ. ಈಗ ಯಾಹೂ ಮೈಕ್ರೋಸಾಫ್ಟ್ ಕೈಜೋಡಿಸಿದರೂ ಅವರು ಈ ಮಾರುಕಟ್ಟೆಯಲ್ಲಿ ನಿಯಂತ್ರಿಸುತ್ತಿರುವುದು ಶೇ. 28ರಷ್ಟು ಮಾತ್ರ! ಗೂಗಲ್ ಶೇ. 72ರಷ್ಟು! ಅಂತೂ ಪ್ರತಿಭಾನ್ವಿತ ದೈತ್ಯರಿಬ್ಬರು ಸ್ಪರ್ಧೆಗೆ ಬಿದ್ದಿದ್ದಾರೆ. ಈ ಮುಸುಕಿನ ಗುದ್ದಾಟದಿಂದ ಎರಡೂ ಕಂಪೆನಿಗಳೂ ಜಿದ್ದಿಗೆ ಬಿದ್ದವರಂತೆ ತಮ್ಮ ಸೇವೆಯನ್ನು ಉತ್ತಮಗೊಳಿಸುತ್ತಾ ಹೋಗುತ್ತವೆ. ಗ್ರಾಹಕನಿಗೆ ಸುಗ್ಗಿಯೆಂದರೆ ಇದೇ ಅಲ್ಲವೇ?

Proudly powered by Blogger
Theme: Esquire by Matthew Buchanan.
Converted by LiteThemes.com.