ಕಾರ್ಗಿಲ್ ಕದನದ ತಲ್ಲಣದ ಕ್ಷಣಗಳು


ಟೋಲೋಲಿಂಗ್ ಮತ್ತು ಟೈಗರ್ ಹಿಲ್

ಟೋಲೋಲಿಂಗ್! ಹೆಸರೇ ವಿಚಿತ್ರವಾಗಿದೆ. ಜಾಗ ಇನ್ನೂ ವಿಚಿತ್ರವಾಗಿದೆ. 16 ಸಾವಿರ ಅಡಿ ಎತ್ತರದ ಹುಲ್ಲು ಕಡ್ಡಿಯೂ ಬೆಳೆಯದ ಬರಡು ಹಿಮ ಶಿಖರ. ಅಲ್ಲಿ ಅದರ ನೆತ್ತಿಯ ಮೇಲೆ ಕೂತಿದ್ದರು ಪಾಕಿಗಳು. ಟೋಲೋಲಿಂಗ್ ಅನ್ನು ವಶಪಡಿಸಿಕೊಳ್ಳಲು ಮೇ 14ರಂದು ಹೋದ ಒಂದು ಕಂಪೆನಿ ತಿರುಗಿ ಬರಲೇ ಇಲ್ಲ. ಹಾಗೆ ಶುರುವಾದ ಯುದ್ಧ ಕಾರ್ಗಿಲ್ಲ್ನಲ್ಲಿ ಭಾರತದ ಸೈನ್ಯಕ್ಕೆದುರಾದ ಅತಿಪ್ರಮುಖ ಸವಾಲು. ಕಾರ್ಗಿಲ್ಲ್ನಲ್ಲಿ ಮರಣವನ್ನಪ್ಪಿದ ಅರ್ಧದಷ್ಟು ಭಾರತೀಯ ಯೋಧರು ಟೋಲೋಲಿಂಗ್ ಯುದ್ಧದಲ್ಲೇ ಪ್ರಾಣತೆತ್ತರು. ಅಷ್ಟಕ್ಕೂ ಟೋಲೋಲಿಂಗ್ ಯಾಕಿಷ್ಟು ಪ್ರಮುಖವಾಗಿತ್ತು. ಅದು ಲ್ಹೇದ ಎನ್ಎಚ್ 1 ಹೈವೇಯ ಶಿಖರದಲ್ಲಿತ್ತು. ಅದರ ಮೇಲೆ ಕೂತು 200 ಕಿಲೋಮೀಟರುಗಳುದ್ದಕ್ಕೂ ನರಮಾನವನೂ ಮಿಸುಕಾಡದಂತೆ ಡಾಮಿನೇಟ್ ಮಾಡಬಹುದಿತ್ತು. ಆ ದುರ್ಗಮ ಪ್ರದೇಶದಲ್ಲಿದದ್ದು ಅದೊಂದೇ ರಸ್ತೆ. ಆ ವೀಥೀಯಲ್ಲೊರಟ ಎಲ್ಲ ಸೈನಿಕರೂ ಶವವಾಗಿ ಮರಳಿದ್ದರು. ಹಾಗಾಗಿ ಸೈನ್ಯ ಮುಂದುವರಿಯುವುದಕ್ಕಿಂತಲೂ ಮೊದಲು ಈ ಟೋಲೋಲಿಂಗ್ ಅನ್ನು ವಶಪಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಕಡೆಗೂ ಟೋಲೋಲಿಂಗ್ ಭಾರತದ ಮಡಿಲಿಗೆ ಬೀಳುವಷ್ಟರಲ್ಲಿ ಜೂನ್ 12! ಅಂದು 2 ರಜಪುತಾನಾ ರೈಫಲ್ಸ್ನ ಕಮಾಂಡರ್ ರವೀಂದ್ರನಾಥ್ ಟೋಲೋಲಿಂಗ್ ಅನ್ನು ವಶಪಡಿಸಿಕೊಂಡು ಮೆಸೇಜು ಕಳಿಸಿದಾಗ, ಖುದ್ದು ಆರ್ಮಿ ಚೀಫ್ ವಿ.ಪಿ.ಮಲಿಕ್ ಅವರನ್ನು ಅಭಿನಂದಿಸಿದ್ದರು. ಆದರೆ ಆ ಭೀಕರ ಹೋರಾಟದಲ್ಲಿ ಮೊದಲಿಗೆ ಬೆಟ್ಟದ ಮೇಲೆ ಫಿರಂಗಿಗಳ ದಾಳಿ ನಡೆಸಿದ ಆರ್ಮಿ ಅದು ಫಲಿಸದಾದಾಗ ವಾಯುದಳವನ್ನೂ ಬಳಸಿತ್ತು. ಆದರೆ ಕಡೆಗೆ ಇಂಚಿಂಚೇ ತೆವಳುತ್ತಾ ಹೋದ ಭಾರತದ ಸೈನ್ಯ ಕಡೆಗೆ ಶಿಖರದ ನೆತ್ತಿಯನ್ನು ತಲುಪಿ ಅಳಿದುಳಿದ ಪಾಕಿಗಳನ್ನು `ಮಲ್ಲಯುದ್ಧದಲ್ಲಿ' ಮುಗಿಸಿಹಾಕಿತ್ತು. ಅಂದು ಭಾರತದವರ ಆಯುಧಗಳು ಕಿಸೆಯಲ್ಲಿದ್ದ ಡ್ಯಾಗರ್ ಮತ್ತು ಹಿಮಬಂಡೆಗಳು! ಟೋಲೋಲಿಂಗ್ ಭಾರತದ ಕೈವಶವಾದ ಕೇವಲ ಆರು ದಿನಗಳಿಗೆ ಭಾರತ ನಾಲ್ಕು ದಿಗ್ವಿಜಯಗಳನ್ನು ಸಾಧಿಸಿತ್ತು - ಪಾಯಿಂಟ್ 4590, 5140, ರಾಕಿ ನಾಬ್ ಮತ್ತು ಹಂಪ್, ಎಲ್ಲವೂ ಭಾರತದ ಕೈವಶವಾಗಿತ್ತು. ಇನ್ನುಳಿದದ್ದು ಅದೊಂದೇ ಡ್ರಾಸ್ ಸೆಕ್ಟರನ ಭಾರೀ ಪರ್ವತ ಟೈಗರ್ ಹಿಲ್! ಅದು ಟೋಲೋಲಿಂಗ್ನಷ್ಟೆ ಪ್ರಾಮುಖ್ಯತೆಯದ್ದಾಗಿತ್ತು. ಅದು ಯುದ್ಧವನ್ನು ಭಾಗಶಃ ಮುಗಿಸಲಿತ್ತು! ಟೋಲೋಲಿಂಗ್ ಅನ್ನು ವಶಪಡಿಸಿಕೊಂಡ 2 ರಜಪುತಾನಾ ರೈಫಲ್ಸ್ ಬಟಾಲಿಯನ್ಗೇ ಟೈಗರ್ ಹಿಲ್ ಅನ್ನು ವಶಪಡಿಸಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಉತ್ಸುಕವಾಗಿ ಮುನ್ನುಗ್ಗಿದ ಇಡೀ ತಂಡವನ್ನು ಮುಂದೆ ಪಾಕಿಸ್ತಾನದ ಫೌಜಿಗಳು ಹೊಡೆದುರುಳಿಸಿದ್ದರು, ಒಬ್ಬ ಯೋಗೇಂದರ್ ಸಿಂಗ್ರ ಹೊರತಾಗಿ. ಅವರ ಕಿಸೆಯಲ್ಲಿದ್ದ ಕಾಯಿನ್ ಗುಂಡಿಗೆ ಅಡ್ಡವಾಗಿ ನಿಂತು ಅವರನ್ನು ರಕ್ಷಿಸಿತ್ತು! ಮೊದಲ ಪ್ರಯತ್ನ ಕೈಕೊಟ್ಟ ನಂತರ ಎರಡನೇ ಬಾರಿ 18 ಗ್ರೆನೇಡ್ಸ್ ಬೆಟಾಲಿಯನ್ ಅಪಾರ ಕಷ್ಟದ ಬ
ಳಿಕ ಟೈಗರ್ ಹಿಲ್ನ ಮೇಲೆ ಭಾರತದ ಪತಾಕೆಯನ್ನು ಹಾರಿಸಿತು. ಅದು ಇಂದಿಗೂ ಕಾಗರ್ಿಲ್ ಯುದ್ಧದ ಆಜಜಿಟಿಟಿರ ಟಚಿರಜ. ಯುದ್ಧದ ಪರಿಸಮಾಪ್ತಿಯ ಸಿಂಬಲ್ ಅದಾಗಿತ್ತು. ಇಂದು ಟೋಲೋಲಿಂಗ್ ಮತ್ತು ಟೈಗರ್ ಹಿಲ್ಗಳು ಪಕ್ಷಿಗಳೂ ಹಾರಾಡಲಾಗದಂತಹ ಅಭೇಧ್ಯ ಕೋಟೆಯಾಗಿದೆ.

ಫುಡ್ಡು ಬದಲು ಬುಲೆಟ್ಟು

ಕಾರ್ಗಿಲ್ ಯುದ್ಧ ನಡೆಯಿತಲ್ಲ ಅದರಷ್ಟು ದುರ್ಗಮ ಪ್ರದೇಶ ಭಾರತದಲ್ಲೇ ಇಲ್ಲ ಅನ್ನಿಸುತ್ತೆ. ಆ ಡ್ರಾಸ್-ಬತಾಲಿಕ್ ಸೆಕ್ಟರುಗಳು, ಕಾರ್ಗಿಲ್, ಟೈಗರ್ ಹಿಲ್ ಎಲ್ಲವೂ ಅತ್ಯಂತ ದುರ್ಗಮ, ಹುಲ್ಲು ಕಡ್ಡಿಯೂ ಬೆಳೆಯದ ಬರಡು ಪ್ರದೇಶ. ಅಲ್ಲಿ ರಸ್ತೆಗಳೇ ಇರಲಿಲ್ಲ. ಇಡಿಯ ಪ್ರದೇಶ ಹಿಮಾಚ್ಛಾದಿತ ಗಿರಿಶೃಂಗಗಳ ತವರು. ಒಂದೊಂದು ಪರ್ವತವೂ 15-18 ಸಾವಿರ ಅಡಿ ಎತ್ತರ. ಈ ಎತ್ತರವನ್ನು ಯೋಧರು ಕಾಲ್ನಡಿಗೆಯಲ್ಲೇ ಹತ್ತಬೇಕಿತ್ತು.
ಅದು ಅಕ್ಷರಶಃ ಟ್ರೆಕ್ಕಿಂಗ್! ಟೈಗರ್ ಹಿಲ್ನ ತುದಿ ತಲುಪಲು ಒಬ್ಬ ಆರೋಗ್ಯವಂತ ಶಕ್ತ ಯೋಧನಿಗೆ ಕನಿಷ್ಟವೆಂದರೂ 11 ಘಂಟೆ ಹಿಡಿಯುತ್ತಿತ್ತು. ಅದೂ ಏನು ಖಾಲಿಕೈಯ ನಡಿಗೆಯಲ್ಲವದು ಹೆಣಭಾರದ ಬಂದೂಕು, ಇತರ ವೆಪನ್ನುಗಳು, ಅವರವರ ಆಹಾರವನ್ನೂ ಬೆನ್ನ ಮೇಲೆ ಹೊತ್ತು ಹೋಗಬೇಕಿತ್ತು. ಆಗ ಪ್ರತಿಯೊಂದು ಗ್ರಾಮು ಭಾರವೇ! ಬಟಾಲಿಯನ್ನ ಕಮಾಂಡರ್ ಒಬ್ಬರು ತಮ್ಮ ಯೋಧರು ಯುದ್ಧಕ್ಕೆ ಹೊರಡುವ ಮುಂಚೆ ತಮ್ಮ ಪಾಲಿನ ಆಹಾರ ಪದಾರ್ಥಗಳನ್ನು ತೆಗೆದಿಡುವುದು ಕಾಣಿಸಿತು. ಚಕಿತರಾದ ಅವರು ವಿಚಾರಿಸಲಾಗಿ ಯೋಧರ ಉತ್ತರ ಸಿದ್ಧವಿತ್ತು - ` ಸರ್ ಆಹಾರಕ್ಕಿಂತಲೂ ಬುಲ್ಲೆಟ್ಟುಗಳು ಮುಖ್ಯ. ಎರಡು ಕೇಜಿಯ ಆಹಾರದ ಬದಲಿಗೆ 100-150 ಬುಲ್ಲೆಟ್ಟುಗಳು ಗ್ರೆನೇಡುಗಳು ಹಿಡಿಸುತ್ತವೆ ಸಾರ್. ಅದಕ್ಕೇ....' ಕಮಾಂಡರ್ನ ಕಣ್ಣು ತೇವಗೊಂಡಿದ್ದವು. ನಂತರ ಇದು ಎಲ್ಲ ಬಟಾಲಿಯನ್ಗಳಿಗೂ ಹಬ್ಬಿ ಎಲ್ಲರೂ ಪಾಲಿಸಹತ್ತಿದರು. ಭಾರತೀಯ ಯೋಧನೆಂದರೆ ಅದು!
ಬೋಫೋರ್ಸ

ಭಾರತ ರಾಜಕೀಯ ಇತಿಹಾಸದಲ್ಲಿ ತಲ್ಲ
ಣಗಳನ್ನು ಸೃಷ್ಟಿಸಿದ ಬೋಫೋರ್ಸನ ಹೆಸರೇ - ಪ್ರಧಾನಿ ರಾಜೀವ್ ಗಾಂಧಿಯವರ ಮೇಲೆ ಭ್ರಷ್ಟಾಚಾರದ ಆರೋಪ, ವಿ.ಪಿ.ಸಿಂಗರ ದಿಟ್ಟತನ, ಘಾಸಿಗೊಂಡ ಸೈನ್ಯದ ಇಮೇಜು, ತಪ್ಪಿಸಿಕೊಂಡ ಕ್ವಟ್ರೋಚಿ- ಹೀಗೆ ಅನೇಕ ಕರಾಳ ನೆನಪುಗಳನ್ನು ಮರುಕಳಿಸುತ್ತದೆ. ಬೋಫೋರ್ಸ ಹಗರಣದಿಂದ ಅನ್ಯಾಯವಾಗಿದ್ದು ಮಾತ್ರ ನಮ್ಮ ಸೈನ್ಯಕ್ಕೆ. ರಾಜೀವ್ರ ತರುವಾಯ ಬಂದ ಎಲ್ಲ ಪ್ರಧಾನಿಗಳೂ ಸೈನ್ಯದ ವಿಷಯಗಳಿಲ್ಲಿ `ಜಾಗರೂಕವಾಗಿದ್ದರು', ಅಂದರೆ ಸೈನ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳದೆ ದೂರವೇ ಉಳಿದರು. ಇತ್ತ ಸೈನ್ಯ ಕೌಂಟರ್ ಇನ್ಸರ್ಜೆನ್ಸಿ ಆಪರೇಷನ್ಗಳಲ್ಲೇ ಮುಳುಗಿಹೋಗಿತ್ತು. ಅಂದಿಗೆ ಪೂರ್ಣಮಟ್ಟದ ಯುದ್ದ ಮಾಡಿ 28 ವರ್ಷಗಳಾಗಿದ್ದವು. ಸೈನ್ಯ ಯುದ್ಧ ಸನ್ನದ್ಧವಾಗಿರಲಿಲ್ಲ. ಆಗ ಸೈನ್ಯ ಅನಿರೀಕ್ಷಿತವಾಗಿ ಕಾರ್ಗಿಲ್ ಅನ್ನು ಎದುರಿಸಬೇಕಾಯಿತು. ಆಗ ಸೈನ್ಯದ ಬಳಿಯಿದ್ದ ಫಿರಂಗಿ ಅದೇ ಬೋಫೋರ್ಸ! ಕಾರ್ಗಿಲ್ಲ್ನಲ್ಲಿ ಭಾರತದ ಸೈನ್ಯದ ವಿಜಯಕ್ಕೆ ಬೋಫೋರ್ಸನದು ಪ್ರಮುಖ ಕೊಡುಗೆ. ಡೀಲು ಅರ್ಧ ಕುದಿರಿತ್ತಲ್ಲ, ಅದರ ಭಾಗವಾಗಿ ಪಡೆದ ಫಿರಂಗಿಗಳಲ್ಲೇ ಯುದ್ಧ ನಡೆಸಲಾಗುತ್ತಿತ್ತು. ಆದರೆ ಯುದ್ಧ ಮುಂದುವರೆಯುತ್ತಿದ್ದಂತೆ ಬೋಫೋರ್ಸ ಫಿರಂಗಿಗಳ ಕೊರತೆ ಕಾಡಿತು. ಬೋಫೋರ್ಸ ಹಗರಣದಿಂದ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು. ಇನ್ನು ಬೇರೆ ಗತ್ಯಂತರವಿಲ್ಲದೇ ಸರ್ಕಾರ ಆ ಕ್ಷಣದಲ್ಲಿ ಬೋಫೋರ್ಸ ಕಂಪೆನಿಯ ಹೆಸರನ್ನು ಕಪ್ಪು ಪಟ್ಟಿಯಿಂದ ಕೈಬಿಟ್ಟು ಕೊರತೆ ನೀಗಿಸಿಕೊಳ್ಳಲಾಯಿತು.

ಆ ಕುರಿ ಕಾಯುವವನು
ಆತನ ಹೆಸರು ತಶಿ ನಂಗ್ಯಾಲ್, ಕುರಿ ಕಾಯುವವನು. ಅಂದು ಮೇ 3, 1999. ಫರ್ಕೂನ್ ಹಳ್ಳಿಯ ಈತ ಕುರಿ ಮೇಯಿಸಲು ಗಿರಿಗಳನೇರಿ ಹೊರಟಾಗ ಆತ ಮೊದಲ ಬಾರಿಗೆ ಬೆಟ್ಟ ಶಿಖರದಲ್ಲಿ ಗಾಢ ಬಣ್ಣದ ಬಟ್ಟೆ ಧರಿಸಿವರನೇಕರನ್ನು ನೋಡುತ್ತಾನೆ. ಈತನಿಗೆ ಇವರು ಮೊದಲಿಗೆ ಭಾರತದ ಸೈನ್ಯದವರೇ ಇರಬೇಕೆನ್ನಿಸಿತಾದರೂ, ಅವರ ಬಟ್ಟೆಯ ರಂಗು ಈತನ ಗಮನ ಸೆಳೆಯಿತು. ಅದು ಭಾರತ ಸೈನ್ಯದ ಯೂನಿಫಾರ್ಮಲ್ಲ! ಕೂಡಲೇ ಈತ ಭಾರತ ಸೈನ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ. ಮೊದಲಿಗಿದು ಸಾಮಾನ್ಯ ಇನ್ಸಿಡೆಂಟಿದೆಂದು ಭಾವಿಸಿದ ಅಧಿಕಾರಿ, ಒಂದು ಕಂಪೆನಿಯನ್ನು ಕಳುಹಿಸಿದ. ಆದರೆ ಅವರಾರೂ ಜೀವಂತವಾಗಿ ಮರಳಲೇ ಇಲ್ಲ. ಆಗ ಪರಿಸ್ಥಿತಿಯ ಅಗಾಧತೆಯನ್ನರಿತ ಅಧಿಕಾರಿ ಸರ್ವೇ ನಡೆಸಿದಾಗ ತಿಳಿಯಿತು. ಇದು ಯುದ್ಧ! ಹೀಗೆ ಇಂಟೆಲಿಜೆನ್ಸ್ ಮಾಡಬೇಕಾದ ಕೆಲಸವನ್ನು ಒಬ್ಬ ಕುರಿ ಕಾಯುವವನು ಮಾಡಿದ್ದ. ಆತನಿಗೆ ಇಂದಿಗೂ ಈ ಪ್ರಾಂತ್ಯದ ಸೈನ್ಯ ಋಣಿಯಾಗಿದೆ. ಅಂದು 50 ಸಾವಿರ ರೂ. ನೀಡಿ ಈತನನ್ನು ಗೌರವಿಸಲಾಯಿತು. ನಂತರ ಕೂಡ ಈತನಿಗೆ ಸೈನ್ಯ ಹಣವೂ ಸೇರಿದಂತೆ ಎಲ್ಲ ರೀತಿಯ ನೆರವು ನೀಡಿದೆ. ಈತ ಈ ಭಾಗದಲ್ಲಿ ನಡೆಯುವ ಅನೇಕ ಸೈನಿಕ ಕಾರ್ಯಕ್ರಮಗಳಿಗೆ ಇಂದಿಗೂ ಗೆಸ್ಟ್ ಆಫ್ ಹಾನರ್!

ಪ್ರೈಸ್ ಕ್ಯಾಚ್!

ವಾಯುದಳದ ದಾಳಿ ಆರಂಭವಾದ ಮೊದಲ ದಿನವೇ ಭಾರತಕ್ಕೆ ಆಘಾತ ಕಾದಿತ್ತು. ಶತ್ರುವಿನ ಮೇಲೆ ದಾಳಿ ಮಾಡಲು ಹೊರಟ ಮೊದಲ ವಿಮಾನವೇ ಅಪಘಾತಕ್ಕೀಡಾಗಿ ವಿಮಾನದ ಪೈಲಟ್ ಪಾಕಿಗಳ ಕೈಗೆ ಜೀವಂತ ಸೆರೆಸಿಕ್ಕಿದ್ದ. ನಚಿಕೇತ, ಆತ ಹಾರಿಸುತ್ತಿದ್ದ ವಿಮಾನದಲ್ಲಿ ಅಪಘಾತವಾದಾಗ ಪ್ಯಾರಚೂಟ್ನಿಂದ ಕೆಳಗಿಳಿದ. ಶತ್ರು ಸೈನಿಕರ ನಡುವೆ ಲ್ಯಾಂಡ್ ಆದಾಗ ಬಂದೂಕಿನಿಂದ ಫೈರ್ ಮಾಡಿದನಾದರೂ ಸ್ವಲ್ಪ ಹೊತ್ತಿನಲ್ಲೇ ಬುಲ್ಲೆಟ್ಟುಗಳು ಮುಗಿದು ಹೋದವು! ಆತ ಜೀವಂತ ಸೆರೆ ಸಿಕ್ಕಿದ್ದ. ಸ್ಕರ್ದುವಿನ ಸೆರೆಮನೆಯಲ್ಲಿ ಈತನನ್ನು ಒಂದು ವಾರದ ಕಾಲ ಇರಿಸಲಾಯಿತು. ನಂತರ ಜೂನ್ 3 ರಂದು ಈತನನ್ನು ಬಿಡುಗಡೆ ಮಾಡಿತು. ಸದ್ಯ ನಚಿಕೇತ ವಾಯುದಳದ ಸಂಪರ್ಕ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾರ್ಗಿಲ್ನಲ್ಲಿರುವುದು ನಮ್ಮ ಸೈನ್ಯವೇ ಅಲ್ಲ ಅವರೆಲ್ಲ ಮುಜಾಹಿದ್ದೀನರು ಎಂದು ಬುಡಬುಡಿಕೆ ಆಡಿಸುತ್ತಿತ್ತು ಪಾಕಿಸ್ತಾನ. ಆಗಲೇ ನಮ್ಮ ಯೋಧರಿಗೆ ಹೊಸದೊಂದು ಡಿಮ್ಯಾಂಡ್ ಇಟ್ಟಿತು ನಮ್ಮ ಮಿಲಿಟರಿ ನಾಯಕತ್ವ. ಜೀವಂತ ಪಾಕಿಸ್ತಾನೀ ಸೈನಿಕನೊಬ್ಬನ ಸೆರೆ! ಜುಲೈ ಆರು, ಬತಾಲಿಕ್ ಸೆಕ್ಟರ್ನಲ್ಲಿ ನಮ್ಮವರು ಮೊಟ್ಟಮೊದಲ ಬಾರಿಗೆ ಶತ್ರು ಸೈನಿಕನೊಬ್ಬನನ್ನು ಜೀವಂತ ಸೆರೆ ಹಿಡಿದೇ ಬಿಟ್ಟರು. 12 ಜಾಕ್ ಇನ್ಫೆಂಟ್ರಿ ಈ ವಿಕ್ರಮವನ್ನು ಸಾಧಿಸಿತ್ತು. ಆತನ ಹೆಸರು ಇನಾಯತ್ ಅಲಿ, ಆತನ ಬಳಿಯಿದ್ದ ಗುರುತು ಪತ್ರಗಳು ಆತ ನಾರ್ಥನ್ ಲೈಟ್ ಇನ್ಫೆಂಟ್ರಿಯ ಯೋಧನೆಂಬುದನ್ನು ಖಚಿತ ಪಡಿಸಿತು. ಮಿಲಿಟರಿ ಇಂಟೆಲಿಜೆನ್ಸ್ನವರು ಆತನನ್ನು ಕೂಡಲೆ ಏರ್ಲಿಫ್ಟ್ ಮಾಡಿದರು. ಆತ ಘಟ್ಟ ತಲುಪುವ 6 ಘಂಟೆಗಳ ಕಾಲವೂ ಆ ವಿಮಾನದ ಪ್ರತಿ ಕದಲಿಕೆಯನ್ನೂ ಪರಿಶೀಲಿಸುತ್ತಿದ್ದರು. ಆತನನ್ನು ಸರಿಯಾಗಿಯೇ ಬಳಸಿಕೊಂಡ ಭಾರತ ಪಾಕಿಸ್ತಾನವನ್ನು ಜಗತ್ತಿನೆದುರು ನಗ್ನಗೊಳಿಸಿತು. ಇದು ಭಾರತದವರ ಎಲ್ಲ ವಾದಗಳಿಗೂ ಪುರಾವೆಯಾಗಿತ್ತು. ಮುಂದೆ ಆತನೂ ಸೇರಿ ಜೀವಂತ ಸೆರೆಸಿಕ್ಕ 8 ಪಾಕಿಸ್ತಾನಿ ಸೈನಿಕರನ್ನು ಶಾಂತಿ ಒಪ್ಪಂದದಂತೆ ಆಗಸ್ಟ್ 13ರಂದು ಬಿಟ್ಟುಬಿಡಲಾಯಿತು.

ಸಮಚಿತ್ತದ ಕಟ್ಟೆಯೊಡೆದಾಗ
ಕಾರ್ಗಿಲ್ನಲ್ಲಿ ಭಾರತದ ಸೈನಿಕರು ಪಾಕ್ ಒಪ್ಪಿಕೊಳ್ಳದ ಅವರದೇ ಸೈನಿಕರ ಮೃತದೇಹಗಳಿಗೆ ಗೌರವಯುತ ಅಂತ್ಯಸಂಸ್ಕಾರವೊದಗಿಸಿದ್ದನ್ನು ಎಲ್ಲರೂ ಓದಿರುತ್ತರೆ. ಆದರೆ ಅತ್ತ ಪಾಕ್ ಭಾರತೀಯ ಸೈನಿಕರ ಮೃತದೇಹಗಳನ್ನು ವಿಕೃತಗೊಳಿಸಿ ಗೋಣೀಚೀಲಗಳಲ್ಲಿ ಹಾಕಿ ಕಳಿಸುತ್ತಿತ್ತು. ಮೃತ ಸೈನಿಕನ ಕಳೆಬರವನ್ನು ಚೀಲದಿಂದ ತೆಗೆದಾಗ ಒಳಗಿರಿಸಿದ್ದ ಬಾಂಬು ಸಿಡಿದು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು (ಬೂಬಿ ಟ್ರಾಪ್). ಇದೆಲ್ಲವೂ ಭಾರತೀಯ ಸೈನಿಕನ ಮನಸ್ಸಿನ ಮೇಲೆ ಮಾಗದ ಗಾಯ ಮಾಡಹತ್ತಿತು. ಭಾರತೀಯ ಯೋಧ ವಯಲೆಂಟ್ ಆಗಿ ನಡೆದುಕೊಳ್ಳಲಾರಂಭಿಸಿದ. ಪಾಯಿಂಟ್ 4700 ಅನ್ನು ವಶಪಡಿಸಿಕೊಂಡ 18 ಘರವಾಲ್ ಬೆಟಾಲಿಯನ್ನ ಯೋಧರು ವಿಜಯದ ಬಳಿಕ ಕ್ರೂರವಾಗಿ ಪ್ರವರ್ತಿಸಿದರು. ಅವರ ಸಮಚಿತ್ತದ ಕಟ್ಟೆಯೊಡೆದಿತ್ತು. ಮೃತ ಪಾಕ್ ಸೈನಿಕನೊಬ್ಬನ ತಲೆಯನ್ನು ಒಂದೇ ಏಟಿಗೆ ಕತ್ತರಿಸಿ ಆ ತಲೆಯನ್ನು ಟ್ರೋಫಿಯಂತೆ ಹಿಡಿದೆತಿದರು. ಆ ತಲೆಯನ್ನು ಕೆಳಗೆ ಎಲ್ಲರಿಗೂ ಕಾಣಿಸುವಂತೆ ಮರವೊಂದಕ್ಕೆ ಚುಚ್ಚಲಾಗಿತ್ತು. ಪರಮ ವಿಕಾರವಾದ ದೃಶ್ಯವಾಗಿತ್ತದು. ಅದು ಭಾರತೀಯ ಯೋಧನ ಮನಸ್ಸಿನ ಮೇಲೆ ತೀವ್ರ ಪ್ರಭಾವ ಬೀರಿತ್ತು. ಶತ್ರು ಅಜೇಯನಲ್ಲನೆಂಬ ಭಾವನೆ ತಳವೂರಿ ಕೂರಲಾರಂಭಿಸಿತು. ಆ ತಲೆಯನ್ನು ಮೂರ್ನಾಲ್ಕು ದಿನಗಳ ನಂತರ ಅಲ್ಲಿಂದ ತೆಗೆದು ಹಾಕಲಾಯಿತು. ಅದು ಅಲ್ಲಿದ್ದವರೆಗೂ ಯೋಧರಿಗದೊಂದು ಪ್ರೇಕ್ಷಣೀಯ ಸ್ಥಳವಾಗಿತ್ತು. ಈಗ ನೆನೆಸಿಕೊಂಡರೆ, ಇದು ವಿಕೃತವೆನಿಸುತ್ತದಾದರೂ ಅಂದು ಅದು ಯುದ್ಧಭೂಮಿಯಾಗಿತ್ತು!


ಯೋಧನ ಶವಹೊತ್ತ ಕಾಫಿನ್ನಲ್ಲೂ ಹಗರಣ
ದೇಶಭಕ್ತಿಯ ಆಡಂಬರವೆಲ್ಲವೂ ಮುಗಿದು ಜನ ಕಾರ್ಗಿಲ್ಲನ್ನು ನಿಧಾನವಾಗಿ ಮರೆಯತೊಡಗಿದ್ದಾಗ ಬೆಳಕಿಗೆ ಬಂತು ಆ ಹಗರಣ. ಕಾರ್ಗಿಲ್ನಲ್ಲಿ ವೀರ ಮರಣವನ್ನಪ್ಪಿದ ಯೋಧರ ಮೃತದೇಹಗಳನ್ನು ಯುದ್ಧಭೂಮಿಯಿಂದ ಅವರ ಸ್ವಗೃಹಗಳಿಗೆ ತೆರಳಿಸಲು ಬಳಸಲಾದ ಕಾಫಿನ್ಗಳ ಕಾಂಟ್ರಾಕ್ಟಿನಲ್ಲಿ ದೊಡ್ಡ ಹಗರಣವೊಂದು ನಡೆದಿತ್ತು. ಈ ಪ್ರಕರಣ ಎಬ್ಬಿಸಿದ ಗಲಾಟೆ ಅಷ್ಟಿಷ್ಟಲ್ಲ. ಯೋಧನ ಶವ ಹೊತ್ತ ಕಾಫಿನ್ನಲ್ಲೂ ಹಗರಣ - ಇದು ಸೂಕ್ಷ್ಮಗ್ಞರೆಲ್ಲರ ಮನಸ್ಸನ್ನೂ ಘಾಸಿಗೊಳಿಸಿತು. ಭಾರತಾಂಬೆಯ ರಕ್ಷಣೆಗೆ ಪ್ರಾಣಾರ್ಪಣಗೈದ ಅಮರಜವಾನರ ಮೃತದೇಹವೂ ಭ್ರಷ್ಟ ರಾಜಕಾರಣ-ಅಧಿಕಾರಗಣಕ್ಕೆ ದುಡ್ಡು ಮಡುವ ದಂಧೆಯಾಗಿ ಕಂಡದ್ದು ಅವರು ತಲುಪಿರುವ ಹಂತದ ಪ್ರತೀಕ. ಕಾರ್ಗಿಲ್ ಸಮಯದಲ್ಲಿ ಯೋಧರ ಮೃತದೇಹಗಳನ್ನು ಹೊರಲು ಹೊರದೇಶಗಳಿಂದ ಕಾಫಿನ್ಗಳನ್ನು ತರಿಸಲಾಗಿತ್ತು. ಪಬ್ಲಿಕ್ ಅಕೌಂಟ್ಸ್ ಕಮಿಟಿ ವರದಿಯು ಇದರಲ್ಲಿ ಹಗರಣವನ್ನು ಎತ್ತಿ ತೋರಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಒಂದಕ್ಕೆ 172$ಗಳಿದ್ದ ಕಾಫಿನ್ ಅನ್ನು 2000$ಗಳು ಕೊಟ್ಟು ತರಿಸಲಾಗಿತ್ತು. ಇದರಲ್ಲಿ ದುಡ್ಡಿನ ವ್ಯವಹಾರ ನಡೆದಿಲ್ಲ ಎನ್ನುತ್ತೀರ? ಈ ಪ್ರಕರಣ ಜಾರ್ಜ್ ಫರನಂಡೀಸ್ ಅವರನ್ನು ತೀವ್ರ ಮುಜುಗರಕ್ಕೊಳಪಡಿಸಿತಾದರೂ ಪ್ರಕರಣದ ತನಿಖೆ ಅದೇನಾಯಿತೋ ಆ ದೇವರೇ ಬಲ್ಲ.
(ಈ ಭಾನುವಾರ ಪತ್ರಿಕೆಯಲ್ಲಿ ಪ್ರಕಟಿತ)

2 thoughts on “ಕಾರ್ಗಿಲ್ ಕದನದ ತಲ್ಲಣದ ಕ್ಷಣಗಳು

Anonymous said...

chennagide

shruts said...

we salute you soldiers

Proudly powered by Blogger
Theme: Esquire by Matthew Buchanan.
Converted by LiteThemes.com.