ದುರಾಸೆ ಮತ್ತು ಷಾಮೀಲು

ಯಡಿಯೂರಪ್ಪನವರ ಸರ್ಕಾರ ಮತ್ತೆ ಬೆತ್ತಲಾಗಿದೆ. ಸಾರ್ವಜನಿಕ ಭೂಮಿಯ ಸಂರಕ್ಷಣೆ ಮತ್ತು ಹಿಂಪಡೆಯುವ ಸಲುವಾಗಿ ರಚಿಸಿದ ಕಾರ್ಯಪಡೆ ತನ್ನ ವರದಿ ಸಲ್ಲಿಸಿದರೆ, ಕಂದಾಯ ಮಂತ್ರಿ ಕರುಣಾಕರ ರೆಡ್ಡಿ ಅಸಲು ಅದನ್ನು ಗುರುತಿಸುತ್ತಲೂ ಇಲ್ಲ. ಮುಖ್ಯಕಾರ್ಯದರ್ಶಿಗಳಿಗೆ ವರದಿ ಸಲ್ಲಿಸಲಾಗಿದ್ದರೂ ಸರ್ಕಾರಕ್ಕೆ ಯಾವುದೇ ವರದಿ ಬಂದಿಲ್ಲ ಎಂದು ಭಂಡತನ ಪ್ರದರ್ಶಿಸುತ್ತಿರುವ ಸಚಿವರ ನಡೆ-ನುಡಿ ಅತ್ಯಂತ ಖಂಡನೀಯ. ಆದರೆ ಇದೇನೂ ಹೊಸದಲ್ಲ. ಇದು ಈ ಸರ್ಕಾರದ ಅತ್ಯಂತ ಮಾಮೂಲು ನಡೆ. ತಮಗೆ ಅನಾನುಕೂಲವಾದದ್ದರ ಅಸ್ತಿತ್ವವನ್ನೇ ಅಲ್ಲಗಳೆದುಬಿಡುವುದು. ಗಾಂಧೀಜಿಯ ಮೂರು ಮಂಗಗಳಂತೆ ಇದೂನೂ. ಅವರು ತಮ್ಮ ವಿಮರ್ಶೆಯನ್ನು ನೋಡುವುದೂ ಇಲ್ಲ, ಕೇಳುವುದೂ ಇಲ್ಲ., ಇನ್ನು ಮಾತನಾಡುವುದಂತೂ  ಸಾಧ್ಯವೇ ಇಲ್ಲ. ಪ್ರತಿಪಕ್ಷಗಳ ಯಾವುದೇ ಹೇಳಿಕೆ ಆರೋಪಗಳಿಗೆ ನಾನು ಉತ್ತರಿಸುವುದಿಲ್ಲ ಎನ್ನುವ ಮುಖ್ಯಮಂತ್ರಿಯ ಸರ್ಕಾರವಲ್ಲವೆ ಇದು? ಸಾರ್ವಜನಿಕ ಸ್ವಾಯತ್ತ ಸಂಸ್ಥೆಗಳಾದ ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗ, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಂಥ ಸ್ವಾಯತ್ತ ಸಂಸ್ಥೆಗಳೊಂದಿಗಿನ ಈ ಸರ್ಕಾರದ ಸಂಬಂಧ ಅದರ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಪ್ರಜಾಪ್ರಭುತ್ವದಲ್ಲಿ ಆಡಳಿತ ವರ್ಗ ವಿಮರ್ಶೆ ಮತ್ತು ಪ್ರತಿರೋಧವನ್ನು ಗೌರವಪೂರ್ವಕವಾಗಿ ಸ್ವೀಕರಿಸಬೇಕು. ಆದರೆ ಈ ಸತ್ಸಾಂಪ್ರದಾಯ ನಮ್ಮ ಸಾರ್ವಜನಿಕ ಜೀವನದಿಂದ ಮರೆಯಾಗುತ್ತಿರುವುದು ಖೇದಕರ.

ಇನ್ನು ವರದಿಯ ವಿಷಯಕ್ಕೆ ಬರುವುದಾದರೆ ಅದು ಸ್ಫೋಠಕವಾಗಿಯೇ ಇದೆ. ಪಕ್ಷಬೇಧದ ಹೊರತಾಗಿ ಎಲ್ಲರೂ ಸಾರ್ವಜನಿಕ ಭೂಮಿಯನ್ನು ನುಂಗಿದವರೆ. ಚಿಕ್ಕಮಗಳೂರಿನಲ್ಲಿ ಕಾಫಿ ಪ್ಲಾಂಟರುಗಳು ಒತ್ತುವರಿ ಮಾಡಿಕೊಂಡಿದ್ದ ನೂರಾರು ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಲು ಮುಂದಾದರೆ ಮುಖ್ಯಮಂತ್ರಿ ಅದಕ್ಕೆ ತಡೆ ಹಾಕಿ ಪತ್ರ ಬರೆಯುತ್ತಾರೆ! ಇದು ನಮ್ಮ ವ್ಯವಸ್ಥೆ. ಈ ಕಾರ್ಯಪಡೆಯು ರಾಜ್ಯಾದ್ಯಂತ ಒಟ್ಟು 12 ಲಕ್ಷ ಎಕರೆ ಸಾರ್ವಜನಿಕ ಭೂಮಿಯ ಒತ್ತುವರಿಯನ್ನು ಗುರುತಿಸಿದ್ದಾರೆ. ಆದರೆ ಇದರಲ್ಲಿ ಬರಿಯ 47 ಸಾವಿರ ಎಕರೆಗಲಷ್ಟನ್ನ ಮಾತ್ರ ಹಿಂಪಡೆಯುವಲ್ಲಿ ಸಫಲವಾಗಿದೆ. ಈ ವರದಿಯನ್ನು ಮುಚ್ಚಿಹಾಕಲು ಸರ್ಕಾರ ಕಟಿಬದ್ಧವಾಗಿರುವುದನ್ನು ಕಂಡು ತಮ್ಮ ಎರಡು ವರ್ಷದ ಕೆಲಸವನ್ನು ಇವರು ಅಷ್ಟು ಸುಲಭವಾಗಿ ನಿರಾಕರಿಸಿಬಿಟ್ಟರೆ? ನಾಡಿನ ಸಮಸ್ತ ಜನತೆಗೆ ಸಂಬಂಧಿಸಿದ ವಿಷಯವಾದ್ದರಿಂದ ಕಾರ್ಯಪಡೆಯ ಮುಖ್ಯಸ್ಥರಾದ ವಿ.ಬಾಲಸುಬ್ರಮಣ್ಯಂ ಅವರು ವರದಿಯನ್ನು ಬಹಿರಂಗಪಡಿಸಿದ್ದಾರೆ. ಈಗ ಇದು ಬಹುಚರ್ಚಿತ ವಿಷಯ. ಸರ್ಕಾರವನ್ನು ಬೆತ್ತಲುಗೊಳಿಸಿದ ಈ ವರದಿಯ ವಿಸ್ತೃತ ರೂಪ ಆದಿಲೋಕದಲ್ಲಿ ಸರಣಿ ರೂಪದಲ್ಲಿ ಮೂಡಿ ಬರಲಿದೆ. ಇಂದು ಕಾರ್ಯಪಡೆಯ ಮುಖ್ಯಸ್ಥರಾದ ವಿ. ಬಾಲಸುಬ್ರಮಣ್ಯಂ ಅವರೊಂದಿಗೆ ವಿಶೇಷ ಸಂದರ್ಶನ.

ಭ್ರಷ್ಟಾಚಾರದ ಬಗೆಗೆ ನಾಗರೀಕ ಸಮಾಜ ಸಿಡಿದೆದ್ದಿರುವ ಈ ಸಂದರ್ಭದಲ್ಲಿ ನಿಮ್ಮ ವರದಿ, ಮತ್ತು ನಂತರ ನಡೆದ ಅನೇಕ ಬೆಳವಣಿಗೆಗಳಿಂದ ನೀವೂ ಸಹ ಒಬ್ಬ ಸೆಲಿಬ್ರಿಟಿ ಕ್ರುಸೇಡರ್ ಆಗುವತ್ತ ನಡೆದಿದ್ದೀರಿ. ಸಮಾಜ ನಿಮ್ಮತ್ತ ನೋಡುತ್ತಿದೆ...
- ನಾನು ನನ್ನ ಕರ್ತವ್ಯವನ್ನಷ್ಟೇ ನಿರ್ವಹಿಸಿದ್ದೇನೆ. ನಮಗಿರುವುದು ಸಾರ್ವಜನಿಕ ಆಸ್ತಿ ಈ ಲೂಟಿಕೋರರ ಕೈಗೆ ಹೋಗಬಾರದೆಂಬ ಕಾಳಜಿ. ಅದಕ್ಕಾಗಿ ಕಳದೆರಡು ವರ್ಷಗಳಿಂದ ದುಡಿದಿದ್ದೇವೆ. ನಮ್ಮ ಎರಡು ವರ್ಷದ ಕೆಲಸವನ್ನು ಇವರು ಅಷ್ಟು ಸುಲಭವಾಗಿ ನಿರಾಕರಿಸಿಬಿಟ್ಟರೆ? ಇದು ನಾಡಿನ ಸಮಸ್ತ ಜನತೆಗೆ ಸಂಬಂಧಿಸಿದ ವಿಷಯ. ಅವರೆಲ್ಲರಿಗೂ ಈ ಕುರಿತು ಅರಿವಿರಬೇಕಾದ ಅವಶ್ಯಕತೆಯಿದೆ. ಇವರು ಇಡಿಯ ವರದಿಯನ್ನೇ ಮುಚ್ಚಿ ಹಾಕಲು ನೋಡಿದರು. ಹಾಗಾಗಿಯೇ ಅನಿವಾರ್ಯವಾಗಿ ನಾನು ಮಾಧ್ಯಮಕ್ಕೆ ಹೋಗಬೇಕಾಯಿತು. ನಾನು ಇದು ಇಷ್ಟು ದೊಡ್ಡ ಸುದ್ದಿಯಾಗುತ್ತೆ ಎಂದೆಲ್ಲ ಎಣಿಸಿರಲೇ ಇಲ್ಲ. ಇದರಿಂದ ಸಾರ್ವಜನಿಕ ಓಳಿತಾಗುವುದಾದರೆ ಆಗಲಿ.

ನೀವು ಮಾಧ್ಯಮಕ್ಕೆ ಹೋಗುವ ಮೂಲಕ ಈ ವರದಿಯನ್ನು ನಿರಾಕರಿಸಲು ಕಂದಾಯ ಸಚಿವರಿಗೆ ಒಂದು ಅವಕಾಶ ಮಾಡಿಕೊಟ್ಟಿರಿ ಎಂದೆನಿಸುವುದಿಲ್ಲವೆ?
- ನಾನು ಸರ್ಕಾರಕ್ಕೆ ವರದಿ ಸಲ್ಲಿಸುವ ಮುಂಚೆಯೇ ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದೇನೆ ಎನ್ನುವುದು ಶುದ್ಧ ಸುಳ್ಳು. ಕಾರ್ಯಪಡೆಯ ಅವಧಿ ಕೊನೆಗೊಳ್ಳಲಿದ್ದ ಜುಲೈ 4ಕ್ಕೂ 15 ದಿನಗಳ ಮುಂಚೆಯೇ ವರದಿ ಸಿದ್ಧವಾಗಿತ್ತು. ಅಧಿಕೃತವಾಗಿ ಈ ವರದಿಯನ್ನು ನಾವು ಕಂಧಾಯ ಇಲಾಖೆಯ ಕಾರ್ಯದರ್ಶಿ, ಮೂವರೂ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೂ ಸಲ್ಲಿಸಿದೆವು. ನಾನು ಕೈಯಾರೆ ಕಂದಾಯ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಸಲ್ಲಿಸಿಲ್ಲ ಎನ್ನುವುದು ಬಿಟ್ಟರೆ ಸರ್ಕಾರಕ್ಕೆ ವರದಿಯನ್ನೇ ಸಲ್ಲಿಸಿಲ್ಲ ಎನ್ನುವುದು ಶುದ್ಧ ಸುಳ್ಳು. ನಾವು ಕಾರ್ಯನಿರ್ವಹಿಸುತ್ತಿದ್ದು ಕರ್ನಾಟಕ ಸಾರ್ವಜನಿಕ ಭೂ ಸಮಿತಿಯ ಕಛೇರಿಯಿಂದ. ಹಾಗಾಗಿ ಕಾರ್ಯಪಡೆಯ ವರದಿಯನ್ನು ಮುದ್ರಿಸಲು ಅವರಲ್ಲಿ ವಿನಂತಿಸಿದಾಗ ಅವರು ಅನವಶ್ಯಕವಾಗಿ ಮುಂದೂಡುತ್ತಲೇ ಬಂದರು. ಜುಲೈ 4ರವರೆಗೂ ಕಾಯಲು ಹೇಳಿದರು. ನಂತರ ಅದನ್ನು ಮುಚ್ಚಿಹಾಕುವುದು ತುಂಬಾ ಸುಲಭವಿತ್ತು. ನಾನೇನೂ ಮಾಧ್ಯಮದ ಹಿಂದೆ ಬಿದ್ದಿಲ್ಲ. ಅಸಲಿಗೆ ನೀವು ಈ ಕಾರ್ಯಪಡೆ ಅಸ್ತಿತ್ವದಲ್ಲಿದ್ದ ಕಳೆದ 20 ತಿಂಗಳ ಅವಧಿಯನ್ನು ಗಮನಿಸಿದರೆ ನಾವು ನಿರ್ವಹಿಸಿರುವುದೇ ಎರಡು ಮಾಧ್ಯಮಘೋಷ್ಠಿ. ಮೊದಲನೆಯದು ಸೆಪ್ಟೆಂಬರ್ 2009ರಲ್ಲಿ. ಕಾರ್ಯಪಡೆ ರಚನೆಯಾದಾಗ. ನಂತರದ್ದು ಜುಲೈ4ರಂದೇ. ಕಾರ್ಯಪಡೆ ಈ ಅವಧಿಯಲ್ಲಿ ಏನು ಮಾಡಿತು ಎಂಬುದು ಸಾರ್ವಜನಿಕರಿಗೆ ತಿಳಿಯಬೇಡವೆ? ಅದು ನಮ್ಮ ಜವಾಬ್ದಾರಿಯಲ್ಲವೆ? ಹಾಗಾಗಿ ಅಂದು ಮಾಧ್ಯಮಘೋಷ್ಠಿ ನಿರ್ವಹಿಸಿದೆ. ಇವರು ನಮ್ಮ ವರದಿಯನ್ನು ಮುದ್ರಿಸಲು ಕೂಡ ನಿರಾಕರಿಸಿದ್ದರು. ಹಾಗಾಗಿ ಇದರ ಭವಿಷ್ಯತ್ತೇನೆಂಬುದು ಚೆನ್ನಾಗಿ ಅರಿವಿತ್ತು. ಹಾಗಾಗಿ ನನ್ನ ಸ್ವಂತ ಖರ್ಚಿನಲ್ಲಿ ವರದಿಯ ಒಂದಷ್ಟು ಪ್ರತಿಗಳನ್ನು ಅಚ್ಚಾಕಿಸಿ ಮಾಧ್ಯಮದವರಿಗೆ ಹಂಚಿದೆ. ಹಾಗಾಗಿಯೇ ಇಂದು ಇದು ಚರ್ಚೆಯಾಗುತ್ತಿದೆ.

ಆದರೆ ಅತ್ತ ಕಂದಾಯ ಮಂತ್ರಿಗಳು ಈಗ ಈ ವರದಿ ಅಧಿಕೃತವೇ ಅಲ್ಲ. ಸರ್ಕಾರಕ್ಕೆ ಯಾವುದೇ ವರದಿ ಸಲ್ಲಿಕೆಯಾಗಿಲ್ಲ ಎನ್ನುತ್ತಿದ್ದಾರೆ...
- ಈ ಸರ್ಕಾರಕ್ಕೆ ಒಂದು ನಿಲುವೆಂಬುದೇ ಇಲ್ಲ. ಅವರೇ ಗೊಂದಲದಲ್ಲಿದ್ದಾರೆ. ಇತ್ತ ಕಂದಾಯ ಸಚಿವರು ಅಸಲು ವರದಿ ಅಸ್ತಿತ್ವದಲ್ಲೇ ಇಲ್ಲ ಎಂದೆನ್ನುತ್ತಿದ್ದರೆ, ಅತ್ತ ನಿನ್ನೆ ಮೈಸೂರಿನಲ್ಲಿ ಮುಖ್ಯಮಂತ್ರಿಗಳನ್ನು ಮಾಧ್ಯಮದವರು ಈ ಕುರಿತು ಪ್ರಶ್ನಿಸಿದಾಗ, ವರದಿ ಸಲ್ಲಿಸಿದ್ದಾರೆ ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ!

ನಿಮ್ಮ ಮುಂದಿನ ನಡೆ...

- ನನ್ನ ಕೆಲಸ ನಾನು ಮಾಡಿದ್ದೇನೆ. ವರದಿಯನ್ನು ಸಾರ್ವಜನಿಕವೂ ಮಾಡಿದ್ದೇನೆ. ಇನ್ನು ಆಸಕ್ತರು ಇದನ್ನು ಮುಂದುವರೆಸಬೇಕು.

ನಿಮ್ಮ ವರದಿ ರಾಜಕೀಕರಣಗೊಳ್ಳುತ್ತಿದೆ. ತಾವು ಇದನ್ನು ಹೇಗೆ ನೋಡುತ್ತೀರಿ?

- ಈ ವರದಿಯನ್ನು ಸರಿಯಾಗಿ ಓದಿದರೆ ತಿಳಿಯುತ್ತದೆ. ಇದರಲ್ಲಿ ಯಾವುದೇ ಭೇದಭಾವ ಇಲ್ಲ. ಎಲ್ಲ ಪಕ್ಷಗಳೂ ಸಮಾನ ಪುರಸ್ಕೃತರು. ಬಿಜೆಪಿಯದಷ್ಟೇ ಏಕೆ? ಕಾಂಗ್ರೆಸ್ಸಿನ ಅನೇಕ ನಾಯಕರ ಪ್ರಕರಣಗಳು ಇಲ್ಲಿವೆ. ಹೊಳೆನರಸೀಪುರದ ಪ್ರಕರಣವೂ ಇದೆ. ನನ್ನ ಪ್ರಕಾರ ಇಂತಹ ವಿಷಯಗಳಲ್ಲಿ ಇಂದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಂಬ ಬೇಧವೇ ಇಲ್ಲ. ಅವರೆಲ್ಲರೂ ಒಂದೇ ವರ್ಗ. ಇಂದಿನ ರಾಜಕಾರಣ ಪಕ್ಷ ರಾಜಕಾರಣವನ್ನು ಮೀರಿ `ಆಂತರಿಕ ಭಿನ್ನಮತ, ಬಾಹ್ಯ ಬೆಂಬಲ' ಎಂಬಲ್ಲಿಗೆ ಬಂದು ಮುಟ್ಟಿದೆ. ಶ್ರೀನಿವಾಸಪುರದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ 60 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರ ಸರ್ವೇ ನಡೆಸಲು ಹೋದ ಅರಣ್ಯ ಅಧಿಕಾರಿಗಳಿಗೆ ಅಸಲು ಒಳಗೆ ಪ್ರವೇಶವನ್ನೇ ನೀಡಿಲ್ಲ, ಧಮಕಿ ಹಾಕಿ ಕಳಿಸಿದ್ದಾರೆ. ಅಧಿಕಾರಿಗಳು ತಮ್ಮ ಅಸಹಾಯಕತೆ ತೋಡಿಕೊಂಡಾಗ ನಾನು ಮತ್ತು ಇತರ ಸದಸ್ಯರೇ ಹೋಗಿ ಸರ್ವೇ ನಡೆಸಲು ಮುಂದಾದೆವು. ಕೂಡಲೇ ಅನೇಕ ಕಡೆಗಳಿಂದ ಇದನ್ನು ಕೈಬಿಡುವಂತೆ ನಮ್ಮ ಮೇಲೆ ಒತ್ತಡ ಬರಲಾರಂಭಿಸಿತು. ಮುಖ್ಯಮಂತ್ರಿಗಳ ಕಛೇರಿಯಿಂದ ಅಂದು ಅವರ ಕಾನೂನು ಸಲಹೆಗಾರರಾಗಿದ್ದ ದಿವಾಕರ್ ಅವರು ಕೂಡ ನನ್ನ ಮೇಲೆ ಒತ್ತಡ ತಂದರು. ನೋಡಿದರೆ ರಮೇಶ್ ಕುಮಾರ್ ಕಾಂಗ್ರೆಸ್ ನಾಯಕರು! ಅಸಲು ಇವರದೆಲ್ಲ ಯಾವ ಪಕ್ಷ?

ಇನ್ನು ಅಸಲು ಕಾರ್ಯಪಡೆಯ ಕಾರ್ಯನಿರ್ವಹಣೆಯ ಬಗೆಗೆ ಕೊಂಚ ಮಾತನಾಡಬಹುದು...
- 2005ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಬೆಂಗಳೂರು ನಗರ ಜಿಲ್ಲೆಯಲ್ಲಿ ನಡೆದಿರುವ ಸರಕಾರೀ ಭೂಮಿಯ ಒತ್ತುವರಿಯನ್ನು ಗುರುತಿಸಲು ಎ.ಟಿ.ರಾಮಸ್ವಾಮಿಯವರ ನೇತೃತ್ವದ ಒಂದು ಜಂಟಿ ಸದನ ಸಮತಿಯನ್ನು ನೇಮಿಸಲಾಯಿತು. ಆ ಸಮಿತಿಗೆ ನಾನು ಸಲಹೆಗಾರನಾಗಿದ್ದೆ. ಎರಡು ವರದಿ ಸಲ್ಲಿಸಿದ್ದ ಆ ಸಮಿತಿ ಇನ್ನೂ ಅಸ್ತಿತ್ವದಲ್ಲಿರುವಾಗಲೇ ವಿಧಾನಸಭೆಯೇ ವಿಸರ್ಜನೆಯಾಗಿ ಹೋಯಿತು. ನಂತರ ಈ ಸರ್ಕಾರ ಚುನಾಯಿತವಾಯಿತು. 2009ರಲ್ಲಿ ಎ.ಟಿ.ರಾಮಸ್ವಾಮಿಯವರ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ಸದನದಲ್ಲಿ ಗದ್ದಲವೆದ್ದಾಗ, ಮುಖ್ಯಮಂತ್ರಿಗಳು ಅದಕ್ಕುತ್ತರವಾಗಿ ಈ ಕಾರ್ಯಪಡೆಯನ್ನು ರಚಿಸಿದರು. ಇದು ಬೆಂಗಳೂರು ನಗರವಲಯಕ್ಕಷ್ಟೇ ಸೀಮಿತವಾಗದೆ ಇಡಿಯ ರಾಜ್ಯಕ್ಕೆ ವಿಸ್ತರಿಸಬೇಕೆಂಬ ಆಗ್ರಹದ ಹಿನ್ನೆಲೆಯಲ್ಲಿ ಇದರ ಕಾರ್ಯವ್ಯಾಪ್ತಿಯನ್ನು ಇಡಿಯ ರಾಜ್ಯವೆಂದು ನಿಗದಿಗೊಳಿಸಿದರು. ಈ ಕಾರ್ಯಪಡೆಗೆ ನನ್ನನ್ನು ಅಧ್ಯಕ್ಷನಾಗಿಸಿದರು. ಅಂದೇ ನಾನು ಹೇಳಿದ್ದೆ - ಸರ್ಕಾರ ಈ ಕುರಿತು ಗಂಭೀರವಾಗಿದ್ದರೆ ಮಾತ್ರ ತಾನು ಇದನ್ನು ಒಪ್ಪುವುದಾಗಿ. ಆಗ ಎಲ್ಲದಕ್ಕೂ ಹೂಂಗುಟ್ಟಿದ್ದ ಸರ್ಕಾರ ನಂತರ ಮಾಡಿದ್ದೆಲ್ಲವೂ ತದ್ವಿರುದ್ಧವೇ.

ನಾವು ಪತ್ರಿಕೆಗಳಲ್ಲಿ ಎರಡು ಬಾರಿ ಜಾಹೀರಾತು ನೀಡಿ, ಹೀಗೆ ಸಾರ್ವಜನಿಕ ಭೂಮಿ ಒತ್ತುವರಿಯಾಗಿರುವುದು ಕಂಡುಬಂದಲ್ಲಿ ಕೆಳಕಂಡಲ್ಲಿ ದೂರು ನೀಡಿ ಎಂದು ವಿನಂತಿಸಿದ್ದೆವು. ದೂರು ನೀಡಿದವರ ಐಡೆಂಟಿಟಯನ್ನು ಗೌಪ್ಯವಾಗಿಡಲಾಗಿದೆ. ರಾಜ್ಯಾದ್ಯಂತ ನಮಗೆ 1600 ದುರುಗಳು ಬಂದವು. ಇದಲ್ಲದೆ ನಾವು ಕಂದಾಯ, ಅರಣ್ಯ, ಶಿಕ್ಷಣ, ವಕ್ಫ್, ಹೀಗೆ ಎಲ್ಲಾ ಇಲಾಖೆಗಳು ಮತ್ತು ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದು ತಮ್ಮ ಅವಗಾಹನೆಗೆ ಬಂದ ಒತ್ತುವರಿ ಪ್ರಕರಣಗಳನ್ನು ತಿಳಿಸುವಂತೆ ಕೋರಿದೆವು. ಕಂದಾಯ ಇಲಾಖೆಯೊಂದೇ ಅಂದಾಜು 11 ಲಕ್ಷ ಎಕರೆಗಳನ್ನು ಮತ್ತು ಅರಣ್ಯ ಇಲಾಖೆ 1.65 ಲಕ್ಷ ಎಕರೆಗಳನ್ನು ವರದಿ ಮಾಡಿತು. ಇದೆಲ್ಲದರ ವಿಚಾರಣೆ ನಡೆಸಿದೆವು. ಒಟ್ಟು 12 ಲಕ್ಷ ಎಕರೆಗಳಷ್ಟು ಸರಕಾರೀ ಭೂಮಿಯ ಒತ್ತುವರಿಯನ್ನು ಕಾರ್ಯಪಡೆ ಗುರುತಿಸಿದೆ. ಬೆಳಗಾಂ ವಿಭಾಗದಿಂದ ನಮಗೆ ಅಷ್ಟು ಸಹಕಾರ ದೊರೆಯಲೇ ಇಲ್ಲ. ಅಲ್ಲಿ ಒತ್ತುವರಿ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆ. ನನ್ನ ಅಂದಾಜು ಇದು 15 ಲಕ್ಷ ಎಕರೆಗಳಿಗೇರಬಹುದು. ಒಟ್ಟು ನಾವು 14 ಜಿಲ್ಲೆಗಳಿಗೆ ಭೇಟಿ ನೀಡಿದ್ದೇವೆ.

12 ಲಕ್ಷ ಎಕರೆ ಗುರುತಿಸಿದ್ದೀರಿ ನಿಜ. ಆದರೆ ಇದರ ಶೇ.4ರಷ್ಟು ಮಾತ್ರ ಅತಿಕ್ರಮ ತೆರವು ನಡೆದಿರುವುದು..
ಹೌದು. 12 ಲಕ್ಷ ಎಕರೆಯಲ್ಲಿ ಬರಿಯ 47 ಸಾವಿರ ಎಕರೆಯಷ್ಟೇ ನಾವು ಪುನಃ ಪಡೆಯಲು ಶಕ್ಯವಾಗಿದ್ದು. ಅದು ಒಟ್ಟು ಗುರುತಿಸಿದ ಒತ್ತುವರಿ ಶೇ.4ಕ್ಕಿಂತಲೂ ಕಡಿಮೆ! ನನ್ನ ಇಡೀ ವರದಿಯ ತಿರುಳೇ ಅದು. ಅದರ ಹೆಸರೇ ಗ್ರೀಡ್ ಅಂಡ್ ಕನೈವೆನ್ಸ್. ಈ ಕಾರ್ಯಪಡೆಗೆ ಯಾವುದೇ ಕಾನೂನಿನ ಬಲವಿಲ್ಲ. ಅರಣ್ಯಾಧಿಕಾರಿಗಳು, ಕಂದಾಯಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಅನೇಕ ಕಾನೂನುಗಳಡಿ ಈ ಅತಿಕ್ರಮ ಒತ್ತುವರಿಯನ್ನು ತೆರವುಗೊಳಿಸಲು ಅವಕಾಶವಿದೆ. ನಾವು ಗುರುತಿಸಿದ ಒತ್ತುವರಿಯ ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳುವಂತೆ ಇದೇ ಅಧಿಕಾರಿಗಳ ಮೇಲೆ ಒತ್ತಡ ಹೇರುವುದಕ್ಕಷ್ಟೇ ನಮಗೆ ಸಾಧ್ಯವಿದ್ದದ್ದು. ಅನೇಕ ಅಧಿಕಾರಿಗಳೇ ಈ ಲೂಟಿಯಲ್ಲಿ ಶಾಮೀಲಾಗಿದ್ದಾರೆ. ಅವರೇಕೆ ಕ್ರಮ ಜರುಗಿಸುತ್ತಾರೆ? ಇನ್ನು ಕೆಲ ಅಧಿಕಾರಿಗಳು ಪ್ರಾಮಾಣಿಕವಾಗಿದ್ದು ಕ್ರಮ ಜರುಗಿಸಲು ಮುಂದಾದರೆ ಸರ್ಕಾರದ ಮಟ್ಟದಲ್ಲಿ ಇವರ ವಿರುದ್ಧ ಲಾಬಿ ನಡೆಸಲಾಗುತ್ತಿತ್ತು. ಅದರ ಹೊರತಾಗಿಯೂ ಅವರು ಮುಂದುವರೆದರೆ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಲಾಗುತ್ತಿತ್ತು. ಇನ್ನು ಚಿಕ್ಕಮಗಳೂರಿನ ಒಂದು ಪ್ರಕರಣದಲ್ಲಿ ಕಾಫಿ ಪ್ಲಾಂಟರು ಒತ್ತುವರಿ ಮಾಡಿಕೊಂಡಿದ್ದ ಭೂಮಿಯನ್ನು ಪುನಃ ವಶಪಡಿಸಿಕೊಳ್ಳಲು ಮುಂದಾದಾಗ, ಮುಖ್ಯಮಂತ್ರಿಗಳು, ತಾನು ಈ ಕುರಿತು ನಿರ್ಧಾರ  ತೆಗೆದುಕೊಳ್ಳುವವರೆಗೂ ಯಾವುಧೇ ಮುಂದಿನ ಕ್ರಮ ತೆಗೆದುಕೊಳ್ಳಬಾರದೆಂದು ಪತ್ರ ಬರೆಯುತ್ತಾರೆ! ಒತ್ತುವರಿಯಾದ ಸಾರ್ವಜನಿಕ ಭೂಮಿಯನ್ನು ಹಿಂಪಡೆಯಬೇಕೆಂಬ ನಿರ್ಧಾರದೊಂದಿಗೆ ಈ ಕಾರ್ಯಪಡೆಯನ್ನು ರಚಿಸಿದ ನಂತರ ಈಗೇನು ಅವರು ನಿರ್ಧಾರ ತೆಗೆದುಕೊಳ್ಳುವುದು? ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ನಿಮಗೆ ಕಾನೂನಿನ ಬಲ ನೀಡಿದ್ದರೆ, ಇನ್ನೂ ಹೆಚ್ಚು ಕೆಲಸ ಮಾಡಬಹುದಿತ್ತೆಂದು ನಿಮಗನ್ನಿಸುತ್ತದೆಯೇ?
- ಹೌದು. ಆದರೆ ಅದು ಪ್ರಾಯೋಗಿಕವಾಗಿ ಕಷ್ಟಸಾಧ್ಯ. ಅದಕ್ಕೆ ಅನೇಕ ಕಾನೂನುಗಳಿಗೆ ತಿದ್ದುಪಡಿ ತರಬೇಕು.

ತಾವು ರಾಜ್ಯಾದ್ಯಂತ ಸಂಚರಿಸಿದ್ದೀರಿ. ಸಾರ್ವಜನಿಕ ಭೂಮಿಯ ಒತ್ತುವರಿಯ ಅನೇಕ ಪ್ರಕರಣಗಳನ್ನು ವಿಚಾರಣೆ ನಡೆಸಿದ್ದೀರಿ. ತಾವು ಕಂಡದ್ದೇನು?
- ಯಾವುದೇ ಬಗೆಯ ಜಮೀನನ್ನೂ ಬಿಟ್ಟಿಲ್ಲ ಈ ಜನ. ಗೋಮಾಳ, ಗುಂಡುತೋಪು, ಕೆರೆಯಂಗಳ, ಉದ್ಯಾನವನ, ಸ್ಮಶಾನ, ಅರಣ್ಯ ಭೂಮಿ...ಯಾವುದನ್ನೂ ಬಿಟ್ಟಿಲ್ಲ. ಬೆಂಗಳೂರಿನಲ್ಲಂತೂ ಈ ಒತ್ತುವರಿ ತನ್ನ ಉಚ್ಛ ತುದಿಯನ್ನು ಮುಟ್ಟಿಬಿಟ್ಟಿದೆ. ವಿಶೇಷವಾಗಿ ನಗರದ ಹೊರವಲಯಗಳಲ್ಲಿ. ಐಟಿ ಬಿಟಿ ಪಾರ್ಕುಗಳ ಹೆಸರಿನಲ್ಲಿ ಬೃಹತ್ ಪ್ರಮಾಣದ ಸರಕಾರೀ ಭೂಮಿಗಳನ್ನು ಮಂಜೂರು ಮಾಡಿಸಿಕೊಂಡು ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ. ಇದನ್ನು ಹೀಗೇ ಬಿಟ್ಟುಬಿಟ್ಟರೆ ನಗರ ಬೆಳೆಯುತ್ಥಾ ಹೋಗುತ್ತಿರುವಂತೆ ನಂತರ ಈ ಪ್ರದೇಶಗಳಲ್ಲಿ ಸಾರ್ವಜನಿಕ ಭೂಮಿಗಳೇ ಇರುವುದಿಲ್ಲ. ಇನ್ನು ಕರ್ನಾಟಕದ ಒಳಭಾಗಗಳಲ್ಲಿ ನೋಡುವುದಾದರೆ ಈ ಮಲೆನಾಡ ಭಾಗಗಳಲ್ಲಿ ಶ್ರೀಮಂತ ಕಾಫಿ ಪ್ಲಾಂಟರುಗಳು ತಮ್ಮ ಎಸ್ಟೇಟಿನ ಬೇಲಿಯನ್ನು ದೊಡ್ಡದು ಮಾಡುತ್ತಲೇ ಬಂದಿದ್ದಾರೆ. ಇವರಿಗೆ ರಾಜಕೀಯ ರಕ್ಷಣೆಯಿದೆ. ಯಾರೂ ಮುಟ್ಟಲಾಗುವುದಿಲ್ಲ. ಇನ್ನು ಇತರೆಡೆ ಗೋಮಾಳಗಳು, ಸ್ಥಳೀಯ ಸಂಸ್ಥೆಗಳ ಜಮೀನುಗಳು, ಅರಣ್ಯ ಭೂಮಿ ಒತ್ತುವರಿಗೊಳಗಾಗಿದೆ. ಎಲ್ಲೋ ಕೆಲ ಕಡೆ ಮಾತ್ರ ಈ ಭೂಮಿಗಳಲ್ಲಿ ಬಡವರು ವ್ಯವಸಾಯ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳಿಗಾಗಿಯೇ ಒಂದು ಸಕ್ರಮ ಸಮಿತಿಯಿರುತ್ತದೆ. ಅದಕ್ಕೆ ಸ್ಥಳೀಯ ಶಾಸಕನೇ ಮುಖ್ಯಸ್ಥನಾಗಿರುತ್ತಾನೆ. ಇದು ಈ ಎಲ್ಲ ಅಕ್ರಮದ ಮೂಲ. ಯಾರದೋ ಹೆಸರಿನಲ್ಲಿ ಅತಿಕ್ರಮ ಒತ್ತುವರಿಯನ್ನು ಸಕ್ರಮಗೊಳಿಸಲಾಗುತ್ತದೆ, ಕೂಡಲೇ ಕೈಬದಲಾಗಿಬಿಡುತ್ತದೆ. ಇಲ್ಲಿ ನಡೆದಿರುವಷ್ಟು ಅಕ್ರಮ ಎಲ್ಲೂ ನಡೆದಿಲ್ಲ.

ಇಂದು ಈ ಸಮಸ್ಯೆಯೇ ಒಂದು ವ್ಯವಸ್ಥೆ. ಅದನ್ನು ಒಡೆಯುವುದಾದರೂ ಹೇಗೆ?
- ನನ್ನ ವರದಿಯಲ್ಲಿ ಒಂದೆರಡು ಸಲಹೆಗಳನ್ನು ನೀಡಿದ್ದೀನಿ. ಒಂದು ಸಾರ್ವಜನಿಕ ಲೆಕ್ಕ ಸಮಿತಿಯಂತೆ ಒಂದು ಸಾಂಸ್ಥಿಕ ಸಾರ್ವಜನಿಕ ಭೂ ಸದನ ಸಮಿತಿಯನ್ನು ರಚಿಸಬೇಕು. ಆಗಲೇ ಈ ಭೂಪರಭಾರೆಯನ್ನು ಸರಿಯಾಗಿ ಮಾನಿಟರ್ ಮಾಡಲಾಗುತ್ತದೆ. ಒಂದು ಮೇಲ್ವಿಚಾರಣೆಯಿರುತ್ತದೆ. ಎರಡು, ಬೃಹತ್ ಪ್ರಮಾಣದ ಭೂಹಿಡುವಳಿ ಹೊಂದಿರುವ ಕಂದಾಯ, ಅರಣ್ಯ, ಮುಜರಾಯಿ ಮತ್ತು ವಕ್ಫ್ ಇಲಾಖೆಗಳಲ್ಲಿ ಇದರ ನಿರ್ವಹಣೆಗಾಗಿಯೇ ವಿಶೇಷ ಕಾನೂನು ವಿಭಾಗಗಳನ್ನು ತೆರೆಯುವುದು ಮತ್ತು 2007ರಿಂದ ರಾಷ್ಟ್ರಪತಿಗಳ ಅಂಕಿತಕ್ಕೆ ಬಾಕಿ ಇರುವ ಕರ್ನಾಟಕ ಭೂ ಕಬಳಿಕೆ (ನಿಷೇಧ) ಅಧಿನಿಯಮವನ್ನು ಈ ಕೂಡಲೇ ಜಾರಿಗೆ ತರಲು ಪ್ರಯತ್ನಿಸುವುದು. ಈ ಕಾನೂನು ಜಾರಿಗೆ ಬಂದರೆ, ಈ ಅತಿಕ್ರಮ ಪ್ರಕರಣಗಳಿಗಾಗಿಯೇ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬಹುದಾಗಿದೆ. ಇದರಿಂದ ಪ್ರಯೋಜನವಾಗಬಹುದು. ಇದೆಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಬೆಳೆಯಬೇಕು, ಬೆಳೆಸಬೇಕು. ಆದರೆ ಇಂದಿನ ವ್ಯವಸ್ಥೆಯನ್ನು ನಡೆಸುತ್ತಿರುವುದು ದುರಾಸೆ.
 

Proudly powered by Blogger
Theme: Esquire by Matthew Buchanan.
Converted by LiteThemes.com.