ಯುವರಾಜನ ಪಟ್ಟಾಭಿಷೇಕಕ್ಕೆ ಬಹುಪರಾಕು

ಹಿಂದೆ ರಾಜನ ಆಳ್ವಿಕೆಯಲ್ಲಿ, ಮಹಾರಾಜನು ಬದುಕಿರುವಾಗಲೇ ಆತನ ಮಗನಿಗೆ ಅಥವಾ ಆತ ಬಯಸಿದವನಿಗೆ ಯುವರಾಜನಾಗಿ ಪಟ್ಟಾಭಿಷೇಕ ಮಾಡಲಾಗುತ್ತಿತ್ತು. ಮಹಾರಾಜ ಗದ್ದುಗೆಯಿಂದ ಇಳಿದ ನಂತರ ಸಹಜವಾಗಿಯೇ ಆತ, ಸಿಂಹಾಸನವನೇರುತ್ತಿದ್ದ. ನಮಗೆ ಸ್ವಾತಂತ್ರ್ಯ ಬಂದು ಪ್ರಜಾಪ್ರಭುತ್ವವನ್ನೇನೋ ಒಪ್ಪಿ ಅಪ್ಪಿದಿವಿ. ಆದರೆ ನಮ್ಮ ಹಳೆಯ ರೂಢಿಗಳು ಅಷ್ಟು ಸುಲಭವೇ ಹೋಗುವುದು? ನಮ್ಮದು ಕೌಟುಂಬಿಕ ಪ್ರಜಾಪ್ರಭುತ್ವ (ಡೈನಾಸ್ಟಿಕ್ ಡೆಮಾಕ್ರಸಿ). ಯುವರಾಜ, ಮಹಾರಾಜರು, ಅರಮನೆಯ ಅಂತಃಪುರದ ಒಳ ರಾಜಕೀಯಗಳು ಎಲ್ಲವೂ ಸಮೃದ್ಧವಾಗಿರುವ ದೇಶ ನಮ್ಮದು. ಕಾಂಗ್ರೆಸ್ಸಿನ ನೆಹ್ರೂ-ಗಾಂಧಿ ಕುಟುಂಬದ ಮೇಲ್ಪಂಕ್ತಿ ಇಂದು ಎಲ್ಲರಿಗೂ ಆದರ್ಶ. ಮತ್ತೆ ಕಾಂಗ್ರೆಸ್ಸಿನ ಯುವರಾಜ ರಾಹುಲ ಗಾಂಧಿಯ ಪಟ್ಟಾಭಿಷೇಕದ ಸುದ್ದಿ. ಸುತ್ತಲಿನವರ ಬಹುಪರಾಕು, ಉತ್ತರಿಸದೇ ತಪ್ಪಿಸಿಕೊಂಡ ಯುವರಾಜ. ಇದೂ ಕೂಡ ಈ ನಡುವೆ ಒಂದು ಸಿದ್ಧ ಮಾದರಿಯಾಗಿಬಿಟ್ಟಿದೆ. ಇದು ರಾಹುಲ ಗಾಂಧಿಯ ಬಗೆಗಷ್ಟೆ ಅಲ್ಲ. ಅವರ ಅಪ್ಪ ಚಿಕ್ಕಪ್ಪಂದರೂ ಯುವರಾಜರಾಗಿದ್ದವರೆ, ಅವರಿಗೂ ಇದೇ ಬಹುಪರಾಕು, ಇದೇ ನಿರೀಕ್ಷೆ. ಸಂಜಯ ಗಾಂಧಿಯ ಸುತ್ತಲೂ ನೆರೆದಿದ್ದ ಭನ್ಸಿಲಾಲ್, ಡಿ.ಕೆ.ಬರುವಾ..ಅಂದು ಭಾರತದ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಸಂಜಯ ಗಾಂಧಿ ಬಂದರೆ ವಿಮಾನ ನಿಲ್ಡಾಣಕ್ಕೆ ಹೋಗಿ ಕೈಕಟ್ಟಿ ನಿಲ್ಲುತ್ತಿದ್ದರು. ಆತನ ಅಕಾಲಿಕ ಮರಣದಿಂದ ರಾಜಕೀಯಕ್ಕಿಳಿದ ಆತನ ಅಣ್ಣ ರಾಜೀವ ಗಾಂಧಿ ಹೀಗೆ ಒಮ್ಮೆ ಆತ ಹೋದಾಗ ಆಂಧ್ರದ ಮುಖ್ಯಮಂತ್ರಿ ತೋರಿದ ರಾಜಮರ್ಯಾದೆಯಲ್ಲಿ ಲೋಪವಿದೆಯೆಂದೆನಿಸಿ ಒಬ್ಬ ಮುಖ್ಯಮಂತ್ರಿಯನ್ನು ಸಾರ್ವಜನಿಕವಾಗಿ ಗದರಿಕೊಂಡಿದ್ದ. ತೆಲುಗರ ಆತ್ಮಗೌರವವನ್ನು ಕೆಣಕಿದ ಈ ಪ್ರಸಂಗ ತೆಲುಗುದೇಶಂ ಪಕ್ಷದ ಉದಯಕ್ಕೆ ಕಾರಣವಾಗಿದ್ದು ಇತಿಹಾಸ. ಗಮನಿಸಿದರೆ ಈ ಯುವರಾಜರಾರೂ ಜನರ ನಡುವೆ ಕಾರ್ಯ ನಿರ್ವಹಿಸಲೇ ಇಲ್ಲ. ಅವರದೇನಿದ್ದರೂ ದರ್ಬಾರ್ ರಾಜಕಾರಣ. ಈಗ ಮತ್ತೊಬ್ಬ ಯುವರಾಜನ ಸರದಿ. ರಾಹುಲ ಗಾಂಧಿ.


ಈತ ಈ ಹಿಂದಿನ ಯುವರಾಜರಿಗಿಂತಲೂ ಕೊಂಚ ಭಿನ್ನವಾಗಿ ನಿಲ್ಲುತ್ತಾನೆ. ಈತನ ಸುತ್ತಲೂ ಒಂದು ಕೋಟೆಯಿದೆ. ಈತನಿಗೂ ಒಂದು ದರ್ಬಾರ್ ಇದೆ. ಆದರೆ ಈತ ಜನರ ನಡುವೆ ಬೆರೆಯುತ್ತಿದ್ದಾನೆ. ಡಿಸ್ಕವರ್ ಇಂಡಿಯಾ ಅಂತ ದೇಶ ನೋಡಿಕೊಂಡು ಬಂದಿದ್ದಾನೆ. ದಲಿತರ ಮನೆಗಳಲ್ಲಿ ಮಲಗೆದ್ದುಬಂದ. ಸದ್ಯಕ್ಕೆ ಈತನ ಲಕ್ಷ್ಯವೆಲ್ಲವೂ ಉತ್ತರಪ್ರದೇಶ. 2012ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಜಯಭೇರಿ ಈತನ ಹೆಗ್ಗುರಿ. ಅದೆರೆಡೆಗೆ ಹಗಲು ರಾತ್ರಿ ದುಡಿಯುತ್ತಿರುವುದಂತೂ ಸತ್ಯ. ಆದರೆ ಈತನ ರಾಜಕೀಯ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ? ಆಗಿದೆ? ಎರಡೂ ಪ್ರಶ್ನಾರ್ಹವೇ. ಏತನ್ಮಧ್ಯೆ ಯುವರಾಜರಿಗೆ 41 ವಸಂತಗಳು ತುಂಬಿದ ಶುಭಸಂದರ್ಭದಲ್ಲಿ ಅವರ ಮಹಾಮಂತ್ರಿ ತಿಮ್ಮರಸು, ದಿಗ್ವಿಜಯ ಸಿಂಗ್ ಅವರು ರಾಹುಲ ಗಾಂಧಿಗೆ ಪ್ರಧಾನಿಯ ಪಟ್ಟವನ್ನಲಂಕರಿಸಲು ಇದು ಸರಿಯಾದ ಸಮಯ ಎಂದು ಒಂದು ಬಾಂಬ್ ಸಿಡಿಸಿದ್ದಾರೆ. ಎಂದಿನಂತೆ ಕಾಂಗ್ರೆಸ್ ಇದನ್ನು ಅಲ್ಲಗಳೆದಿದೆ. ಸದ್ಯ ಶ್ರೀಮನ್ಮಾಹಾರಾಜರ ಪೀಠದಲ್ಲಿ ಆಸೀನರಾಗಿರುವ ರಾಜಮನೆತನದ ವಿಧೇಯ ಮನಮೋಹನ ಸಿಂಗರು ತಮ್ಮ ಅವಧಿಯನ್ನು ಮುಗಿಸುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಎಷ್ಟಾದರೂ ರಾಜಮನೆತನದ ವಿಧೇಯರಾದ ಮನಮೋಹನರನ್ನು ಮೊನ್ನೆ ಮಾಧ್ಯಮದವರು ಈ ಕುರಿತು ಕೇಳಿದಾಗ, ರಾಹುಲ ಗಾಂಧಿ ಪ್ರಧಾನಿಯಾಗಲಿಕ್ಕೆ ಎಲ್ಲ ಅರ್ಹತೆಗಳನ್ನೂ ಹೊಂದಿರುವವರು, ಅವರಿಗಾಗಿ ಎಂದಾದರೂ ಸೈ ನಾನು ಈ ಪದವಿಯನ್ನು ತೆರವು ಮಾಡಲು ಸಿದ್ಧ ಎಂದು ಘೋಷಿಸಿ ತಮ್ಮ ವಿಧೇಯತೆಯನ್ನು ಮೆರೆದಿದ್ದಾರೆ.

ಎಂದಿನದೇ ಸಂದರ್ಭವಾಗಿದ್ದರೆ ಇದೇನೂ ಅಷ್ಟು ಹುಬ್ಬೇರಿಸುತ್ತಿರಲಿಲ್ಲ, ಅಷ್ಟು ಸುದ್ದಿಯೂ ಆಗುತ್ತಿರಲಿಲ್ಲ. ಆದರೆ ಕಳೆದೆರಡು ವರ್ಷಗಳಿಂದ ಯುಪಿಎ-2 ಸತತ ಹಗರಣಗಳಿಂದ ಬಸವಳಿದಿದೆ. ಇದರ ಜೊತೆಗೆ ಭ್ರಷ್ಟಾಚಾರದ ವಿರದ್ಧದ ಜನ ಹೋರಾಟವಾಗಿ ಶುರುವಾದ ಅಣ್ಣಾ ಹಜಾರೆಯವರ ಹೋರಾಟ ಇಂದು ಈ ಸರ್ಕಾರದ ವಿರುದ್ಧದ ಹೋರಾಟವಾಗಿ ಪರಿವರ್ತಿತವಾಗಿಯಾಗಿದೆ. ಇವತ್ತು ಈ ಸರ್ಕಾರಕ್ಕೆ ಒಂದು ಇಮೇಜನ್ನುವುಧೇ ಇಲ್ಲ. ಮನಮೋಹನರು ಶುದ್ಧ ಹಸ್ತರು ಎನ್ನುವುದರಲ್ಲಿ ಎರಡನೆಯ ಮಾತೇ ಇಲ್ಲ. ಆದರೆ ಅವರ ನಾಯಕತ್ವಕ್ಕೆ ಗ್ರಹಣ ಹಿಡಿದಿದೆ. ಹಾಗಾಗಿ ಇಡಿಯ ಸರ್ಕಾರವೂ ಗ್ರಹಣಗ್ರಸ್ಥ. ಈ ಸಂದರ್ಭದಲ್ಲಿ ದಿಗ್ವಿಜಯ ಸಿಂಗರು ರಾಹುಲ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಿದ್ದು ಸಾಕಷ್ಟು ಹುಬ್ಬೇರಿಸಿದವಾದರೂ ಈಗಾಗಲೇ ವಿಷಯ ತಣ್ಣಗಾಗಿದೆ. ಇದೇ ವಾರದಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಒಂದು ಮೇಜರ್ ಸರ್ಜರಿ ಮಾಡುವ ಮೂಲಕ ಮನಮೋಹನರು ಒಂದು ವಿನೂತನ ಹೊರನೋಟವನ್ನು ಕೊಡಲು ಹೊರಟಿದ್ದಾರೆ. ಮೊನ್ನೆ 4 ತಿಂಗಳ ಬಳಿಕ ಮಾಧ್ಯಮ ಸಂಪಾದಕರ ಜೊತೆಗೆ ಮಾತನಾಡುವ ಮೂಲಕ ಎಲ್ಲವೂ ನನ್ನ ಹಿಡಿತದಲ್ಲಿಯೇ ಇದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ. ರಾಹುಲ ಗಾಂಧಿ ಉತ್ತರ ಪ್ರದೇಶದಲ್ಲಿ ನೆಲೆಸಿದ್ದಾರೆ. ಮಾಯಾವತಿ ಸರ್ಕಾರದ ವಿರುದ್ಧ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಸದ್ಯ ಅವರ ಹೆಗ್ಗುರಿ ಅದೇ. 2012ರ ಉತ್ತರಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ತರುವುದು. ಸದ್ಯದ ರಾಜಕೀಯ ಪರಿಸ್ಥತಿಯಲ್ಲಿ ಅದು ಸಾಧ್ಯವೇ? ಹೋರಾಟವಂತೂ ಮುಂದುವರೆದಿದೆ.

ರಾಹುಲ ಗಾಂಧಿಯ ರಾಜಕೀಯ ನಡೆಯನ್ನು ನಾವು ಗಮನಿಸುವುದಾದರೆ, ಆತ ಎಂದಿನಂತೆ ಎಂದೂ ಅಧಿಕಾರ ಸ್ಥಾನ ದೆಹಲಿಯಲ್ಲಿ ನೆಲೆಯೂರಿದವನೇ ಅಲ್ಲ. ಪ್ರಧಾನಿಯ ಪಟ್ಟವೇ ಹರಿವಾಣದಲ್ಲಿಟ್ಟು ಭಯ ಭಕ್ತಿಯಿಂದ ನೈವೇದ್ಯದಂತೆ ಸಮರ್ಪಿಸುತ್ತಿರುವಾಗ ಆತ ಬಯಸಿದ್ದರೆ ಕೇಂದ್ರದಲ್ಲಿ ಒಂದು ಉತ್ತಮ ಖಾತೆಯ ಮಂತ್ರಿಯಾಗಬಹುದಿತ್ತು. ಆದರೆ ಆತ ಅದನ್ನು ಮಾಡಲಿಲ್ಲ. ಬದಲಿಗೆ ಪಕ್ಷ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಯುವ ಕಾಂಗ್ರೆಸ್ಸಿನ ಜವಾಬ್ದಾರಿ ಪಡೆದು ಅದರ ಮೂಲಕ ಕಾಂಗ್ರೆಸ್ಸಿನ ಮುಖ್ಯ ಸಂಘಟನೆಯಲ್ಲೂ ತನ್ನ ಪಟಾಲಮ್ಮಿನ ಯುವಕರನ್ನೇ ತುಂಬಲು, ಅವರನ್ನು ಗೆಲ್ಲಿಸಲು, ತನ್ಮೂಲಕ ಕಾಂಗ್ರೆಸ್ಸಿನ ವ್ಯವಸ್ಥೆಯಲ್ಲಿ ಒಳಗಿಂದಲೇ ಹಿಡಿದಿರುವ ಗೆದ್ದಲನ್ನು ಬಿಡಿಸಿ ಹೊಸ ರಕ್ತ ಪ್ರವಹಿಸುವ ಕೈಂಕರ್ಯದಲ್ಲಿ ನಿರತನಾಗಿದ್ದಾನೆ. ಇದು ಎಷ್ಟರ ಮಟ್ಟಿಗೆ ಫಲಕಾರಿಯಾಗಿದೆ? ಮೊನ್ನೆಯ 5 ರಾಜ್ಯಗಳ ಚುನಾವಣೆಯಲ್ಲಿ ರಾಹುಲ ಗಾಂಧಿ ಪ್ರತಿ ಕಡೆಯೂ ತನ್ನದೊಂದಷ್ಟು ಯುವ ಕಾಂಗ್ರೆಸ್ ಪಡೆಯನ್ನು ನಿಲ್ಲಿಸಿದ್ದ. ತಮಿಳುನಾಡು ಮತ್ತು ಕೇರಳದಲ್ಲಿ ಈ ಪಡೆ ಹೇಳಹೆಸರಿಲ್ಲದಂತೆ ಮಾಯವಾಗಿದ್ದರೆ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಅದು ಅಭೂತಪೂರ್ವ ವಿಜಯವನ್ನು ಸಾಧಿಸಿದೆ. ಇದರ ಯಶಸ್ಸು ಸೋಲುಗಳೇನೇ ಇರಲಿ. ಕಾಂಗ್ರೆಸ್ ವ್ಯವಸ್ಥೆಯನ್ನು ಬದಲಿಸುತ್ತೇನೆ ಎಂದು ಹೊರಟ ರಾಜೀವ ಗಾಂಧಿ ಕಡೆಗೆ ಅದೇ ವ್ಯವಸ್ಥೆಯಲ್ಲಿ ಲೀನವಾಗಿ ಹೋದರು. ಅವರ ಕನಸು ಈಗ ಮಗ ರಾಹುಲ ಕೈಗೆತ್ತಿಕೊಂಡಿದ್ದಾನೆ. ಪಕ್ಷದಲ್ಲಿ ಆಂತರಿಕ ಪ್ರಜಾಫ್ರಭುತ್ವವನ್ನು ತರಬೇಕು. ಅದರ ಮೊದಲ ಮೆಟ್ಟಿಲಾಗಿ ಕಾಂಗ್ರೆಸ್ಸಿನ ಪದಾಧಿಕಾರಿಗಳು ನೇಮಿತರಾಗದೇ ಚುನಾಯಿತರಾಗಬೇಕೆಂದು ಪ್ರತಿಪಾದಿಸುತ್ತಿದ್ದಾನೆ. ಇದರ ಭಾಗವಾಗಿ ರಾಜಸ್ಥಾನ ಮತ್ತೆರಡು ರಾಜ್ಯಗಳ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯನ್ನು ಚುನಾವಣೆಯ ಮೂಲಕವೇ ನಡೆಸಲಾಗಿದೆ. ರಾಹುಲ ಗಾಂಧಿಯ ಪಕ್ಷ ಸಂಘಟನೆಯ ಈ ಕೈಂಕರ್ಯ ತತ್ತಕ್ಷಣದ ಫಲಿತಾಂಶಗಳನ್ನು ನೀಡದಿದ್ದರೂ ದೂರಗಾಮಿ ದೃಷ್ಟಿಯಲ್ಲಿ ಆತ ಈಗ ಹಾಕುತ್ತಿರುವುದು ಅಡಿಪಾಯ ಮತ್ತು ಇಂದಿನ ಅಧಿಕಾರ ರಾಜಕಾರಣದ ಗದ್ದಲದಲ್ಲಿ ಸ್ವಾಗತಾರ್ಹ ಕೂಡ.

ಇನ್ನು ಆತನ ರಾಜಕೀಯ. ಆತ ಕೈಗೆತ್ತಿಕೊಳ್ಳುತ್ತಿರುವ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ. ರೈತ ವಿಧವೆ ಕಮಲಾ, ದಲಿತರ ಕೇರಿ, ಭೂಮಿ ಕಳೆದುಕೊಳ್ಳುತ್ತಿರುವ ರೈತರು, ಪೋಸ್ಕೋ ವಿರುದ್ಧ ಹೋರಾಡುತ್ತಿರುವ ನಿಯಮಗಿರಿಯ ಆದಿವಾಸಿಗಳು. ಇಂದಿನ ದಂತಗೋಪುರದ ರಾಜಕಾರಣಿಗಳ ನಡುವೆ ರಾಹುಲ ಗಾಂಧಿ ಇಂಡಿಯಾ ಮತ್ತು ಭಾರತ ಎರಡನ್ನೂ ನೋಡಿದವನಾಗಿ ತನ್ನ ಆದ್ಯತೆಗಳನ್ನು ನಿರ್ಣಯಿಸಿಕೊಂಡಿದ್ದಾನೆ. ಅದು ಆತನ ವಿಷನ್ ಇರಬಹುದು ಇಲ್ಲ ಇದೊಂದು ರಾಜಕೀಯ ಲೆಕ್ಕಾಚಾರದ ವಿಷನ್ ಕೂಡ ಇರಬಹುದಾದರೂ ಸದ್ಯ ಆತನ ಎಲ್ಲ ಚರ್ಯೆಗಳಲ್ಲೂ ಒಂದು left of centre ಧೋರಣೆ ಕಂಡುಬರುತ್ತಿರುವುದು ದಿಟ. ಇನ್ನು ಆತನ ರಾಜಕೀಯದ ಎಡವಟ್ಟುಗಳು. ಅದಕ್ಕೂ ಏನೂ ಕೊರತೆಯಿಲ್ಲ. ಗಾಂಧಿ ಕುಟುಂಬಸ್ಥರು ಅಧಿಕಾರದಲ್ಲಿದ್ದಿದ್ದರೆ ಬಾಬ್ರಿ ಮಸೀದಿ ಬೀಳುತ್ತಿರಲಿಲ್ಲ ಎಂದದ್ದರಿಂದ ಹಿಡಿದು ಪಾಕಿಸ್ತಾನವನ್ನು ಒಡೆದು ಬಾಂಗ್ಲಾದೇಶದ ಉದಯಕ್ಕೆ ತನ್ನ ಅಜ್ಜಿಗೆ ಕ್ರೆಡಿಟ್ ಕೊಟ್ಟಿದ್ದು, ಮೊನ್ನೆ ಕೇರಳದ ಚುನಾವಣಾ ಪ್ರಚಾರದಲ್ಲಿ ವಿ.ಎಸ್.ಅಚ್ಯುತಾನಂದನ್ ಅವರ ವೃದ್ಧಾಪ್ಯವನ್ನು ಟೀಕಿಸಿ ಅವರಿಂದ ಅಮುಲ್ ಬೇಬಿ ಎಂದು ಕರೆಸಿಕೊಂಡದ್ದು, ಮತ್ತು ಉತ್ತರ ಪ್ರಧೇಶದ ಭಟ್ಟಾ ಪರ್ಸೋಲ್ನಲ್ಲಿ ಮಾಯಾವತಿ ಸರ್ಕಾರದಿಂದ ಸಾಮೂಹಿಕ ಅತ್ಯಾಚಾರ ಹತ್ಯೆಗಳಾಗಿವೆಯೆಂದು ಆರೋಪಿಸಿ ತಿಣುಕಾಡಿದ್ದು ಎಲ್ಲವೂ ಹೌದು. ಅದು ರಾಜಕೀಯ ಅಪ್ರಬುದ್ಧತೆಯಾ ಇಲ್ಲ ಅನುಭವದ ಕೊರತೆಯಾ?

ಅಂದು ಇಂದಿರಾ ಗಾಂಧಿ ಪ್ರಧಾನಿಯಾದದ್ದು ಲಾಲ್ ಬಹದ್ದೂರ್ ಶಾಸ್ತ್ರಿ ಸಾವನ್ನಪ್ಪಿದಾಗ. ಆಕೆ ಅವರ ಸಚಿವ ಸಂಪುಟದಲ್ಲಿ ವಾರ್ತಾ ಇಲಾಖೆಯ ಮಂತ್ರಿಯಾಗಿದ್ದಳು ಅಷ್ಟೆ. ದೇಶದ ಜನ ಆಕೆಯ ನಾಯಕತ್ವವನ್ನು ಒಪ್ಪಿ ಏನೂ ಕಾಂಗ್ರೆಸ್ಸಿಗೆ ಮತ ನೀಡಿರಲಿಲ್ಲ. ಆಕೆಯನ್ನು ಅಂದಿನ ಕಾಂಗ್ರೆಸ್ಸಿನ ಸಿಂಡಿಕೇಟ್ ಭಾರತದ ಮೇಲೆ ಹೇರಿತು. ನಂತರ ಆಕೆ ಎದುರಿಲ್ಲದ ನಾಯಕಿಯಾಗಿ ಬೆಳೆದದ್ದು, ಸತತ ಚುನಾವಣೆಗಳನ್ನು ಗೆಲ್ಲುತ್ತಾ ಗಟ್ಟಿಯಾದದ್ದು ಈಗ ಇತಿಹಾಸ. ಇನ್ನು ರಾಜೀವ ಗಾಂಧಿ ಪ್ರಧಾನಿಯಾದದ್ದೂ ಆತನ ತಾಯಿಯ ಹಠಾತ್ ಮರಣದಿಂದಲೇ. ಅಸಲಿಗೆ ಅದುವರೆಗೂ ರಾಜೀವ ಮಂತ್ರಿ ಸಹ ಆಗಿರಲಿಲ್ಲ. ಆತ ಒಬ್ಬ ಸಾಧಾರಣ ಸಂಸದ. ದಿನಬೆಳಗಾಗುವುದರೊಳಗೆ ಭವ್ಯ ಭಾರತದ ಪ್ರಧಾನಿ. ಆತನಿಗೂ ಜನರ ಮ್ಯಾಂಡೇಟಿರಲಿಲ್ಲ. ಅದೂ ಹೇರಿಕೆಯೇ. ಆದರೆ ಇದಾದ ಕೆಲವೇ ತಿಂಗಳಲ್ಲಿ ಚುನಾವಣೆಗೆ ಹೋದ ರಾಜೀವ ಭಾರತದ ಇತಿಹಾಸಲದಲ್ಲಿ ಇದುವರೆಗೂ ಯಾರೂ ಪಡೆಯದ ರಾಕ್ಷಸ ಬಹುಮತವನ್ನು ಪಡೆದು ಬಂದರು. ಅಂದು ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ಬಲ ನಾಲ್ಕನೇ ಐದರಷ್ಟು!  ನೆಹ್ರೂ-ಗಾಂಧಿ ಕುಟುಂಬಸ್ಥರು ರಾಜಕೀಯ ಶಕ್ತಿಯಲ್ಲಿ ಕಡಿಮೆಯೇನಲ್ಲ. ಅಖಂಡ ಜನಬೆಂಬಲದೊಂದಿಗೆ ಆಡಳಿತ ನಡೆಸಿದವರು. ಆದರೆ ಅವರು ಮೊದಲು ಅಧಿಕಾರ ಹಿಡಿದದ್ದು ಜನಾಭಿಪ್ರಾಯದ ಬಲದ ಮೇಲಲ್ಲ, ಬದಲಿಗೆ ಕಾಂಗ್ರೆಸ್ಸಿನೊಳಗಿನ sycophancy ಯ ಬೆನ್ನ ಮೇಲೆ. ನಾನು ಇಂದು ಈ ಸ್ಥಾನದಲ್ಲಿ ನಿಂತಿರುವದಕ್ಕೆ ಕಾರಣ ನಾನು ನೆಹ್ರೂ-ಗಾಂಧಿ ಕುಟುಂಬಕ್ಕೆ ಸೇರಿದವನೆನ್ನುವುದು ನನಗೆ ಗೊತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಎನ್ನುವುದೂ ನನಗೆ ಗೊತ್ತಿದೆ. ಆದರೆ ಇದು ಬದುಕಿನ ದ್ವಂದ್ವ. ಅದನ್ನು ಒಪ್ಪಿಯೇ ಸಿಕ್ಕ ಅವಕಾಶವನ್ನು ಬಳಸಿಕೊಂಡು ನನ್ನ ಕೈಲಾದ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತೇನೆ ಎಂದು ಮಾತನಾಡುವ ರಾಹುಲ್ ಗಾಂಧಿ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳ್ಳುವುದೊಳಿತು. ಯುಪಿಎ-2ರ ಅವಧಿಯ ನಡುವೆ ರಾಹುಲ ಗಾಂಧಿ ಪ್ರಧಾನಿಯ ಪಟ್ಟವೇರಿದರೆ ಅದು ಪ್ರಜಾಪ್ರಭುತ್ವ ವಿರೋಧಿಯೇ ಸರಿ. ಬದಲಿಗೆ 2014ರ ಚುನಾವಣೆಯನ್ನು ಕಾಂಗ್ರೆಸ್ ರಾಹುಲ ಗಾಂಧಿಯ ನಾಯಕತ್ವದಲ್ಲಿಯೇ ಎದುರಿಸಿ, ಕಾಂಗ್ರೆಸ್ಗೆ ಅಧಿಕಾರ ದಕ್ಕಿದರೆ ಆಗ ರಾಹುಲ ಗಾಂಧಿ ರಾಜಾರೋಷವಾಗಿ ಪ್ರಧಾನಿಯಾಗಬಹುದು. ಅದು ಪ್ರಜಾಪ್ರಭುತ್ವಕ್ಕೆ ನೀಡುವ ಗೌರವವೂ ಕೂಡ. ಇದೆಲ್ಲವೂ ಆದರ್ಶದ ಮಾತಾಯಿತು. ಆದರೆ ರಾಜಕೀಯ?

Proudly powered by Blogger
Theme: Esquire by Matthew Buchanan.
Converted by LiteThemes.com.