ಸತ್ಯ ಸಾಯಿಬಾಬಾರ ಸಾಮ್ರಾಜ್ಯದ ಸತ್ಯ ಬಯಲು!


ಭಾರತದ ಅತಿ ಸು(ಕು)ಪ್ರಸಿದ್ಧ ದೈವ ಮಾನವ ಸತ್ಯ ಸಾಯಿಬಾಬಾ ಬದುಕಿದ್ದಾಗಲೂ ಆತ ಒಂದು ನಿಗೂಢವೇ. ಅನೇಕ ಪವಾಡಗಳಂಥ ಟ್ರಿಕ್ಕುಗಳನ್ನು ಮಾಡಿ ತನ್ನ ಭಕ್ತ ಸಮೂಹವನ್ನು ಒಂದು ರೀತಿಯ ಸನ್ನಿಗೆ ಒಳಪಡಿಸುತ್ತಿದ್ದ ಸಾಯಿಬಾಬಾ ಆಗಿನಿಂದಲೂ ಪ್ರಶ್ನಾರ್ಹರೇ. ಅಬ್ರಹಾಂ ಕೊವೂರ್, ನಮ್ಮ ಹೆಚ್. ನರಸಿಂಹಯ್ಯ ಮತ್ತು ಬಸವ ಪ್ರೇಮಾನಂದರಂಥವರು ಅದನ್ನು ಮಾಡಿಕೊಂಡೇ ಬಂದಿದ್ದಾರೆ. ಬಾಬಾ ಒಬ್ಬ ಸಲಿಂಗ ಶಿಶುಕಾಮಿ ಎಂಬ ಆರೋಪಗಳೂ ಇವೆ. ಆತನ ಬೆಡ್ ರೂಮಿನಲ್ಲೇ ಈ ವಿಷಯವಾಗಿಯೇ ೬ ಕೊಲೆಗಳಾಗಿ ಹೋದವು. ಆದರೆ ಇದೆಲ್ಲವನ್ನೂ ಮೀರಿ ಆತ 90ರ ದಶಕದ ಅಂತ್ಯದಿಂದ ಸಮಾಜ ಸೇವೆಗೆ ಇಳಿದುಬಿಟ್ಟ ನಂತರ ಇದೆಲ್ಲವೂ ಮುಚ್ಚಿ ಹೋಯಿತು. ನಂತರ ಸಾಯಿಬಾಬಾ ದೈವಮಾನವ ಎಂದು ಗುರುತಿಸಿಕೊಂಡಿದ್ದಕ್ಕಿಂತಲೂ ಒಬ್ಬ ಕರುಣಾಮಯಿ ಸಮಾಜ ಸೇವಕನೆನಿಸಿಕೊಂಡರು. ಅನುಮಾನವೇ ಬೇಡ, ಅವರ ನೇತೃತ್ವದ ಸತ್ಯ ಸಾಯಿ ಟ್ರಸ್ಟ್ ಅತ್ಯದ್ಭುತವಾದ ಕೆಲಸಗಳನ್ನು ಮಾಡಿದೆ. ಅದು ಅನಂತಪುರದಂಥ ಬರದ ನಾಡಿಗೆ ಕುಡಿಯುವ ನೀರನ್ನು ಪೂರೈಸುವ ಯೋಜನೆಯಿರಬಹುದು, ಇಲ್ಲ ಸಾಯಿ ಆಸ್ಪತ್ರೆಯಿರಬಹುದು, ಅವರ ಅನೇಕ ಶಾಲೆಗಳಿರಬಹುದು ಎಲ್ಲವೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಾಯಿಬಾಬಾರಿಗೆ ವಿಶ್ವದಾದ್ಯಂತ ಭಕ್ತರು. ಅವರ ದೇಣಿಗೆಗಳೆಲ್ಲವನ್ನೂ ಸಾಯಿಬಾಬಾ ಈ ಸಮಾಜಸೇವೆಗೆ ಮರಳಿಸಿದ್ದರು. ಅದಕ್ಕೆ ನಾವು ಅವರಿಗೆ ಋಣಿಗಳು. ಆದರೂ ಇದೆಲ್ಲದರ ಹೊರತಾಗಿಯೂ ಬಾಬಾ ಒಬ್ಬ ವಿಕ್ಷಿಪ್ತ ನಿಗೂಢ ಮನುಷ್ಯರಾಗಿದ್ದರು ಎಂಬುದಂತೂ ಸತ್ಯ. ಈಗ ಅವರ ಸಾವಿನ ನಂತರ ಅವರ ವ್ಯಕ್ತಿತ್ವದ ಅನೇಕ ಮಜಲುಗಳು, ಕಂಡಿರದ ಮುಖಗಳು, ಅವರ ಪುಟ್ಟಪರ್ತಿಯ ಆಧ್ಯಾತ್ಮ ಸಾಮ್ರಾಜ್ಯದ ಒಳ ಹೊರಗು ಎಲ್ಲವೂ ಬಯಲಿಗೆ ಬರುತ್ತಿದ್ದಂತೆ ಬಾಬಾ ಬೇರೆ ರೀತಿಯೇ ಕಾಣಿಸತೊಡಗಿದ್ದಾರೆ. 

ಪುಟ್ಟಪರ್ತಿಯೆಂಬುದು ಸಹಸ್ರಾರು ಕೋಟಿಗಳ ಆಧ್ಯಾತ್ಮ ಸಾಮ್ರಾಜ್ಯ. ಅದರ ನಿರ್ವಹಣೆಗೆಂದು ಸಾಯಿಬಾಬಾ ಅವರು ಒಂದು ಟ್ರಸ್ಟ್ ಅನ್ನು ರೂಪಿಸಿದ್ದರು. ಇದರಲ್ಲಿ ಸದಸ್ಯರಾಗಿರುವವರೆಲ್ಲರೂ ಸಮಾಜದ ಅತಿ ಗಣ್ಯ ವ್ಯಕ್ತಿಗಳು. ಭಾರತದ ಮಾಜಿ ಮುಖ್ಯ ನ್ಯಾಯಾಧೀಶ ಪಿ.ಎನ್.ಭಗವತಿ ಅವರನ್ನೂ ಒಳಗೊಂಡ ಸಮಿತಿಯಿದು. ಸಾಯಿಬಾಬಾರವರು ಬದುಕಿದ್ದವರೆಗೂ ಎಲ್ಲವೂ ಸುಸೂತ್ರವಾಗಿಯೇ ನಡೆದುಕೊಂಡು ಹೋಗುತ್ತಿತ್ತು, ಇಲ್ಲ ಕನಿಷ್ಠ ಈ ತಗಾದೆಗಳು ಬೀದಿಗೆ ಬಂದಿರಲಿಲ್ಲ. ಈಗ ಬಾಬಾ ಎಂಬ binding force ಇಲ್ಲದಿರುವುದರಿಂದ ಈ ಸಹಸ್ರಾರು ಕೋಟಿಗಳ ಸಾಮ್ರಾಜ್ಯದ ಹಿಡಿತಕ್ಕಾಗಿ ಬಹಿರಂಗ ಯುದ್ಧವೇ ನಡೆಯುತ್ತಿದೆ. ಅಸಲು ತಮ್ಮ ನಂತರ ಈ ಸಾಮ್ರಾಜ್ಯವನ್ನು ಹೇಗೆ ನಿರ್ವಹಿಸಬೇಕೆಂದು ಬಾಬಾ ಯಾವುದೇ ಉಯಿಲಿನಂತಹುದನ್ನು ಬಿಟ್ಟು ಹೋಗಿಲ್ಲವೆ? ಈಗಿನ ಸುದ್ದಿಗಳಂತೆ ಒಂದು ವರ್ಗ ಬಾಬಾ ಅಂತಹ ಯಾವುದೇ ಉಯಿಲು ಬರೆದಿಟ್ಟಿಲ್ಲ ಎಂದು ವಾದಿಸುತ್ತಾರಾದರೂ ಮಿಕ್ಕ ಎರಡು ಮೂರು ಬಣಗಳು ಉಯಿಲು ಬಗ್ಗೆ ಪದೇ ಪದೇ ಪ್ರಸ್ತಾಪಿಸುತ್ತಲೇ ಇದ್ದಾರೆ. ಇವೆಲ್ಲವೂ ಬೇರೆ ಬೇರೆ ಉಯಿಲುಗಳು. ಆ ಪ್ರತಿ ಉಯಿಲಿನಲ್ಲಿ ಅದನ್ನು ಪ್ರತಿಪಾದಿಸುವ ಬಣಕ್ಕೆ ಬಾಬಾ ಆಶ್ರಮದ ನಿರ್ವಹಣೆಯ ಜವಾಬ್ದಾರಿ ನೀಡಿದ್ದಾರಂತೆ! ಈಗ ಮೊನ್ನೆ ಒಬ್ಬ ಹೊಸ ಉಯಿಲನ್ನು ಹಿಡಿದು ಬಂದಿದ್ದಾನೆ. ಆತನ ಹೆಸರು ಐಸಾಕ್ ಟಿಗ್ರೆಟ್. ಈತನೇನೂ ಸಾಮಾನ್ಯನಲ್ಲ. ವಿಶ್ವ ಪ್ರಸಿದ್ಧ ಹಾರ್ಡ್ ರಾಕ್ ಕೆಫೆ ಸರಣಿ ಹೋಟೆಲುಗಳ ಸ್ಥಾಪಕನಾದ ಈತ, ಸತ್ಯ ಸಾಯಿ ಬಾಬಾ ಅವರ ಪರಮ ಭಕ್ತ. ದಶಕದ ಹಿಂದೆ ಪುಟ್ಟಪರ್ತಿಗೆ ಬಂದವನು ತನ್ನ ಆಸ್ತಿಯನ್ನೆಲ್ಲಾ ಮಾರಿ ಹಾಕಿ ಆ ಎಲ್ಲ ದುಡ್ಡನ್ನೂ ತಂದು ಸಾಯಿಬಾಬಾರ ಚರಣಕಮಲಗಳಿಗರ್ಪಿಸಿಬಿಟ್ಟ . ಈ ದುಡ್ಡನ್ನು ಬಳಸಿಯೇ ಸತ್ಯ ಸಾಯಿ ಆಸ್ಪತ್ರೆ ತಲೆಯೆತ್ತಿದ್ದು. ಈಗ ಈತ ಮೊನ್ನೆ ಒಂದು ಪತ್ರಿಕಾ ಘೋಷ್ಟಿ ಕರೆದು ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಲೂಟಿ ಹೊಡೆಯುತ್ತಿದೆ. ಅಸಲಿಗೆ ಈ ಆಶ್ರಮವನ್ನು ಹೇಗೆ ನಡೆಸತಕ್ಕದ್ದು ಎಂದು ಸಾಯಿಬಾಬಾ ನನಗೆ ರಹಸ್ಯ ಸಂದೇಶ ನೀಡಿದ್ದಾರೆ. ನಾನೇ ಅವರ ಜೀವಂತ ಉಯಿಲು ಎಂದು ಘೋಷಿಸಿದ್ದಾನೆ. ಆದರೆ ಸಾಯಿ ಬಾಬಾರ ರಹಸ್ಯ ಸಂದೇಶವಾದರೂ ಏನು ಎಂದರೆ ಅದನ್ನು ನಾನು ಇಂದು ಹೇಳುವುದಿಲ್ಲ ಜುಲೈ7ರ ಗುರು ಪೂರ್ಣಿಮೆಯ ಪುಣ್ಯ ದಿನದಂದು ಬಹಿರಂಗ ಪಡಿಸುತ್ತೇನೆ ಎಂದು ನುಣುಚಿಕೊಂಡಿದ್ದಾನೆ. ಅಸಲಿಗೆ ಇದು ನಂಬಲರ್ಹವೇ? ನಿರೀಕ್ಷಿತವಾಗಿಯೇ ಸಾಯಿ ಟ್ರಸ್ಟ್ನವರು ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. 

ಸಾಯಿ ಬಾಬಾರವರು ಬದುಕಿದ್ದಾಗಲೇ ಸ್ಥಾಪಿತವಾಗಿರುವ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ ಅವರು ಸಹಜವಾಗಿಯೇ ತಮಗೊಂದು ಲೀಗಲ್ ಆದ ರೂಪ ಕೂಡ ಇರುವುದರಿಂದ ಪುಟ್ಟಪರ್ತಿಯ ಸಾಮ್ರಾಜ್ಯದ ನಿರ್ವಹಣೆ ಎಂದಿನಂತೆ ಅದೇ ಟ್ರಸ್ಟ್ನ ಹಿಡಿತದಲ್ಲಿಯೇ ಇರಬೇಕೆಂದು ವಾದಿಸುತ್ತಾರೆ. ಈಗ ಸದ್ಯ ನಡೆಯುತ್ತಿರುವುದೂ ಅದೇ. ಆದರೆ ಸಾಯಿಬಾಬಾರಿಗೆ ಬಹಳಷ್ಟು ಮಂದಿ ಸ್ವಯಂಘೋಷಿತ ಉತ್ತರಾಧಿಕಾರಿಗಳಿದ್ದಾರೆ. ಅದು ಬಾಬಾರ ಸಂಬಂಧಿ ರತ್ನಾಕರ್ ಇರಬಹುದು, ಅವರ ಪ್ರಿಯ ಅತ್ಯಾಪ್ತ ಭಕ್ತ ಸತ್ಯಜಿತ್ ಇರಬಹುದು ಈಗ ಐಸಾಕ್ ಇರಬಹುದು..ಎಲ್ಲರೂ ಸ್ವಯಂಘೋಷಿತರೇ. ಕಡೆಗಾಲದಲ್ಲಿ ಸಾಯಿ ಬಾಬಾರ ಅತ್ಯಾಪ್ತನಾಗಿದ್ದವನು ಮಂಗಳೂರು ಮೂಲದ ಸತ್ಯಜಿತ್. ಈತ ಸಾಯಿ ಬಾಬಾರ ಶಾಲೆಯಲ್ಲೇ ಓದಿದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ. ಈತ ಬಾಬಾರಿಗೆ ಎಲ್ಲವೂ ಆಗಿದ್ದ, ಅವರ ಖಾಸಗೀ ಬದುಕಿನ ಏಕೈಕ ಸಾಕ್ಷಿಯಾಗಿದ್ದ. ಈತ ಬಾಬಾರ ಸುತ್ತಲೂ ಒಂದು ಕೋಟೆಯನ್ನೇ ಕಟ್ಟಿ ಅವರನ್ನು ಏಕಾಂಗಿಯನ್ನಾಗಿಸಿಬಿಟ್ಟ, ಅದನ್ನು ಈತ ತನ್ನ ಸ್ವಲಾಭಕ್ಕೆ ಬಳಸಿಕೊಂಡ ಎನ್ನುವವರೂ ಇದ್ದಾರೆ. ಈಗ ಈತ ತಾನೇ ಬಾಬಾರ ಉತ್ತರಾಧಿಕಾರಿಯೆಂಬಂತೆ ವರ್ತಿಸುತ್ತಿದ್ದಾನೆ. ಇನ್ನು ರತ್ನಾಕರ್ ಬಾಬಾರ ರಕ್ತ ಸಂಬಂಧಿ. ಆತನಿಗೆ ಇದೇನೋ ತನ್ನ ಕುಟುಂಬದ ಆಸ್ತಿ ಹಾಗಾಗಿ ತನ್ನ ಹಕ್ಕು ಎಂಬ ಭಾವನೆ! ಈಗ ಈತ ಐಸಾಕ್ ಟಿಗ್ರೆಟ್. ಇನ್ನು ಟ್ರಸ್ಟ್ ತನ್ನ ಹಿಡಿತವನ್ನು ಸಡಿಸಲಿಚ್ಛಿಸುವುದೇ ಇಲ್ಲ. ಇಲ್ಲಿ ಯಾವ ಆಧ್ಯಾತ್ಮ ಭಕ್ತಿಯೂ ಕಾಣಿಸುತ್ತಿಲ್ಲ. ಇಲ್ಲಿ ನಡೆಯುತ್ತಿರುವುದು ಸ್ಪಷ್ಟ. ಇಲ್ಲಿರುವುದು ಸಹಸ್ರಾರು ಕೋಟಿಗಳ ಒಂದು ಬೃಹತ್ ಸಾಮ್ರಾಜ್ಯ. ದಿನಂಪ್ರತಿ ಆದಾಯವಿರುವ ಸಮೃದ್ಧ ಸಾಮ್ರಾಜ್ಯ. ಎಲ್ಲರಿಗೂ ಅವರವರ ಪಾಲು ಬೇಕು. ಸಾಧ್ಯವಾದರೆ ಸಂಪೂರ್ಣ ಹಿಡಿತವೂ ಬೇಕು. ಇದು ಅಕ್ಷರಶಃ ಲೂಟಿ.

ಅದೇನೂ ಕದ್ದು ಮುಚ್ಚಿ ಸಹ ನಡೆಯುತ್ತಿಲ್ಲ. ಮೊನ್ನೆ ಪುಟ್ಟಪರ್ತಿಯಿಂದ ಬೆಂಗಳೂರಿನತ್ತ ಬರುತ್ತಿದ್ದ ಒಂದು ಕಾರನ್ನು ಪೋಲೀಸರು ಆಂಧ್ರ ಗಡಿಯಲ್ಲಿ ತಡೆದರು. ಅದರಲ್ಲಿ 35 ಲಕ್ಷ ಕ್ಯಾಷ್ ಇತ್ತು! ಈ ಹಣದ ಮೂಲದ ಕುರಿತು ವಿಚಾರಣೆಗೊಳಪಡಿಸಿದರೆ ಅವರದು ನಿರುತ್ತರ. ಅವರು ಬೊಟ್ಟು ಮಾಡಿ ತೋರಿಸಿದ್ದು ಪುಟ್ಟಪರ್ತಿಯ ಕಡೆಗೆ. ಅಲ್ಲಿ ಇವರು ಹೇಳಿದ ವ್ಯಕ್ತಿಯನ್ನು ಹಿಡಿದು ಬೆಂಡೆತ್ತಿದ  ಪೋಲೀಸರಿಗೆ ಆಶ್ಚರ್ಯ! ಸಾರ್ ಇದು ಸಣ್ಣ ಅಮೌಂಟು ಸಾರ್. ಈಗ ತಾನೆ ಬಸ್ಸಿನಲ್ಲಿ 10 ಕೋಟಿ ಹೋಯಿತು! ಪೋಲೀಸರು ಸುಸ್ತು. ಆತ ಹೇಳಿದ್ದನ್ನು ಆಧರಿಸಿ ಆ ಬಸ್ಸನ್ನು ಛೇಸ್ ಮಾಡಿ ಹಿಡಿದರೆ ಅದರಲ್ಲಿ ಎರಡು ಗೋಣಿ ಚೀಲಗಳಲ್ಲಿ 10 ಕೋಟಿ ಹಣ ಬಿದ್ದಿತ್ತು. ಈಗ ಸತ್ಯ ಸಾಯಿ ಸೆಂಟ್ರಲ್ ಟ್ರಸ್ಟ್ನ ಒಬ್ಬ ಟ್ರಸ್ಟಿಯನ್ನು ಈ ಸಂಬಂಧ ವಿಚಾರಣೆಗೊಳಪಡಿಸಿ  ಆತನನ್ನು ನ್ಯಾಯಾಂಗ ಭಂಧನಕ್ಕೊಪ್ಪಿಸಲಾಗಿದೆ. ಇದು ಬಯಲಿಗೆ ಬಂದ ಒಂದು ಸಣ್ಣ ಉದಾಹರಣೆಯಷ್ಟೆ. ಬಾಬಾ ಮರಣಶಯ್ಯೆಯಲ್ಲಿ ಮಲಗಿದಾಗಿನಿಂದಲೂ ಇದು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಬಾಬಾ ಆಸ್ಪತ್ರೆಯಲ್ಲಿದ್ದಾಗಲೇ ಪುಟ್ಟಪರ್ತಿಯಿಂದ ಬೆಂಗಳೂರಿಗೆ 4 ಲಾರಿಗಳ ಲೋಡು ಚಿನ್ನಾಭರಣ ಬಂತು ಅಂತ ಸುದ್ದಿ ಹರಡಿತ್ತು. ಆದರೆ ಅದರ ಲೆಕ್ಕ ಏನಾಯಿತು ಎಲ್ಲಿಗೆ ಹೋಯಿತದು? ಉತ್ತರಿಸುವವರಿಲ್ಲ. ಇನ್ನು ಬಾಬಾರ ಮಲಗುವ ಕೋಣೆಯಿರುವ ಖಾಸಗೀ ಯಜುರ್ಮಂದಿರವನ್ನು ಬಾಬಾರ ಮರಣದ ನಂತರ ಮೊನ್ನೆಯಷ್ಟೆ ಪೋಲೀಸರು, ಬ್ಯಾಂಕ್ ಅಧಿಕಾರಿಗಳು ಮತ್ತು ಟ್ರಸ್ಟಿಗಳ ಸಮ್ಮುಖದಲ್ಲಿ ತೆಗೆಲಾಯಿತು. ತೆಗೆದು ಮಹಜರು ಮಾಡಲಾಯಿತು. ಈ ಕೋಣೆಗೆ ಅಸಲಿಗೆ ಸತ್ಯಜಿತ್ ಬಿಟ್ಟರೆ ಮತ್ಯಾರಿಗೂ ಪ್ರವೇಶವೇ ಇರಲಿಲ್ಲ. ಇಲ್ಲಿ ಏನೇನಿತ್ತು? ಒಬ್ಬೊಬ್ಬರದು ಒಂದೊಂದು ಅಂಕಿ ಸಂಖ್ಯೆಗಳು. ಅಧಿಕಾರಿಗಳು ಬಿಡುಗಡೆಗೊಳಿಸಿರುವ ಅಧಿಕೃತ ಅಂಕಿ ಸಂಖ್ಯೆಗಳ ಪ್ರಕಾರವೇ ಅಲ್ಲಿ 98 ಕೆಜಿ ಚಿನ್ನಾಭರಣ, 307 ಕೆಜಿ ಬೆಳ್ಳಿ, 11.5 ಕೋಟಿ ಕ್ಯಾಷು, ಒಂದು 750 ರೇಷ್ಮೆ ನಿಲುವಂಗಿ, ಚಿನ್ನದ ಸರಗಳ ಒಂದು ಕಪಾಟು, ಒಂದು 500 ಜೊತೆ ಪಾದರಕ್ಷೆ ಮತ್ತು ಷೂಗಳು, ಒಂದು ಬಂಗಾರದ ವಜ್ರಖಚಿತ ಪಾದರಕ್ಷೆಗಳು, ಒಂದು ಬೆಳ್ಳಿ ಕುರ್ಚಿ, 7 ವಜ್ರಖಚಿತ ಕಿರೀಟಗಳು, ಒಂದು ಕಪಾಟಿನ ತುಂಬ ಚಿಕ್ಕ ಚಿಕ್ಕ ಚೀಲಗಳು - ಅದರೊಳಗೆ ವಜ್ರ ವೈಢೂರ್ಯಗಳು! ಬಾಬಾ ಮಲಗುವ ಮಂಚವೂ ಬೆಳ್ಳಿಯದೇ. ಅದು ಶ್ರೀಮನ್ಮಹಾವಿಷ್ಣು ಮಲಗುತ್ತಾನೆನನ್ನುವ ಆದಿಶೇಷನ ಆಕಾರದಲ್ಲಿದೆ! ಇದು ಅಧಿಕೃತ ಅಂಕಿಸಂಖ್ಯೆಗಳು, ಇನ್ನು off the record ಇದು ಅರ್ಧ ಟನ್ ಚಿನ್ನ ಎಂಬಲ್ಲಿಯವರೆಗೂ ಹರಡಿದೆ. ಬರಿಯ ಯಜುರ್ಮಂದಿರವೇ ಸಹಸ್ರಾರು ಕೋಟಿಗಳ ಚಿನ್ನದ ಗಣಿ ಎಂಬ ಮಾತು ಪ್ರಚಲಿತದಲ್ಲಿದೆ. ಈ ಎಲ್ಲ ಹಣವೂ ಕಪ್ಪು ಹಣವೇ. ಇದರ ಮಹಜರು ಮಾಡಿದ ಅಧಿಕಾರಿಗಳು ಅದನ್ನು ಮುಟ್ಟುಗೋಲು ಹಾಕಿಕೊಳ್ಳದೆ ಲೆಕ್ಕ ಬರೆದಿಟ್ಟು ಟ್ರಸ್ಟಿನವರಿಗೊಪ್ಪಿಸಿ ಬಂದಿದ್ದಾರೆ! ನೆನಪಿರಲಿ ಈ ಅಧಿಕಾರಿಗಳ ತಂಡದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳೂ ಇದ್ದರು! 

ಇದ್ಯಾವ ಪರಿಯ ಆಧ್ಯಾತ್ಮ? ಕೋಣೆಯಲ್ಲಿ ಅರ್ಧ ಟನ್ ಚಿನ್ನವಿಟ್ಟುಕೊಂಡ ಬಾಬಾ ಮಾಡುವುದು ಆಧ್ಯಾತ್ಮ ಬೋಧನೆ. ಆದಿಶೇಷನಾಕೃತಿಯ ಬೆಳ್ಳಿಯ ಮಂಚ, ತೊಡುವ ಬಂಗಾರದ ಮೆಟ್ಟಿನಲ್ಲಿ ಅಷ್ಟಲಕ್ಷ್ಮಿಯರು ಮತ್ತು ನವಗ್ರಹಗಳು,..ಇದೆಲ್ಲವನ್ನೂ ಮೆಟ್ಟಿ ನಿಂತ ಬಾಬಾ! ಬಾಬಾ ಇತರೆ ದೈಮಾನವರಿಗಿಂತಲೂ ಕೊಂಚ ಭಿನ್ನವಾಗಿ ನಿಲ್ಲುತ್ತಾರೆ. ಮಿಕ್ಕವರು ದೈವ ಮಾನವರಾದರೆ, ಬಾಬಾ ತಾನೇ ದೇವರು ಎಂದು ಘೋಷಿಸಿಕೊಂಡವರು. ಇಷ್ಟೂ ದಿನ ಅದು ಅವರು ಜನಜಾತ್ರೆಯನ್ನು ಮರಳು ಮಾಡಲು ಮಾಡುವ ಒಂದು ತಂತ್ರ, ಇದನ್ನು ಪುಷ್ಠೀಕರಿಸಲು ಅವರ ಗಿಮಿಕ್ಕು ಮ್ಯಾಜಿಕ್ಕುಗಳು ಎಂದೇ ತಿಳಿದಿದ್ದೆವು. ಆದರೆ ಇಂದು ಬಾಬಾರ ಒಳಕೋಣೆಯನ್ನು ನೋಡಿದಾಗ ಎಲ್ಲೋ ಸ್ವತಃ ಬಾಬಾ ತಾವು ದೇವರೆಂಬುದಾಗಿ ನಂಬಿ ಬಿಟ್ಟಿದ್ದರೋ ಹ್ಯಾಗೆ ಎಂಬ ಅನುಮಾನಗಳು ಮೂಡುತ್ತವೆ. ಒಂದೊಮ್ಮೆ ಅದೇ ನಿಜವಾದರೆ ಬಾಬಾ ಮನೋವಿಜ್ಞಾನಿಗಳಿಗೆ ಅತ್ಯುತ್ತಮ ಅಧ್ಯಯನ ಸರಕು. ಇರಲಿ ಅವರ ದೈವತ್ವವೆಲ್ಲವೂ ಅವರ ಮರಣದಲ್ಲಿ ಮರಣವಾಗಿದೆ. ಪ್ರಕೃತಿಗಿಂತಲೂ ಅತೀತರ್ಯಾರೂ ಇಲ್ಲವೆಂಬುದನ್ನು ಪ್ರಕೃತಿ ಮತ್ತೆ ಸಾರಿದೆ. ಅನೇಕರ ಕಣ್ಕಟ್ಟುಗಳು ಕಳಚಿಬಿದ್ದಿವೆ.

ಇನ್ನು ಪುಟ್ಟಪರ್ತಿಯ ಅವರ ಈ ಬ್ರ್ಯಾಂಡಿನ ಆಧ್ಯಾತ್ಮದ ಸಾಮ್ರಾಜ್ಯವೇನಿದೆ, ಅದು ಯಾರಪ್ಪನ ಮನೆಯ ಆಸ್ತಿಯೂ ಅಲ್ಲ.  ಅದು ಟ್ರಸ್ಟಿನ ಹಕ್ಕೂ ಅಲ್ಲ, ರತ್ನಾಕರನ ಕುಟುಂಬದಾಸ್ತಿಯೂ ಅಲ್ಲ, ಸತ್ಯಜಿತನ ಹಕ್ಕೊತ್ತಾಯವೂ ಅಲ್ಲ. ಅಸಲಿಗೆ ಅದು ಬಾಬಾರದೇ ಅಲ್ಲ. ಆ ಸಾಮ್ರಾಜ್ಯದ ಅಡಿಗಲ್ಲುಗಳನ್ನು ಹಾಕಿರುವವರು ಬಾಬಾರಲ್ಲಿ ನಿಜ ನಂಬಿಕೆ ಭಕ್ತಿಯಿಟ್ಟು ಬಂದ ಸಹಸ್ರಾರು ಸಂಖ್ಯೆಯ ಅಮಾಯಕ ಭಕ್ತರು. ಜೀವನದ ಯಾವುದೋ ಒಂದು ಘಟ್ಟದಲ್ಲಿ ಮನುಷ್ಯ ಅತೀವ ಸಂಕಷ್ಟಕ್ಕೊಳಗಾದಾಗ ಆತ ಆಧ್ಯಾತ್ಮದ ಕಡೆ ತಿರುಗುತ್ತಾನೆ. ಆಗ ಬಹುತೇಕರಿಗೆ ಸಿಗುವುದೇ ಇಂಥ ಗುರುಗಳು. ಇವತ್ತು ಸುದ್ದಿಯಲ್ಲಿರುವ ಐಸಾಕ್ ಟಿಗ್ರಿಟ್ನ ಕಥೆಯನ್ನೇ ತೆಗೆದುಕೊಳ್ಳುವುದಾದರೆ, ಈತ ಲಂಡನ್ನ ಪ್ರಖ್ಯಾತ ಉದ್ಯಮಿ. ಹಾರ್ಡ್ ರಾಕ್ ಕೆಫೆ ಸರಣಿ ಹೋಟೇಲುಗಳನ್ನು ಸ್ಥಾಪಿಸಿ ಅಪಾರ ಯಶಸ್ಸು ಕಂಡ ಶ್ರೀಮಂತ ಉದ್ಯಮಿ. 89ರಲ್ಲಿ ಈತ ಪ್ರೀತಿಸಿ ಮದುವೆಯಾದ ಈತನ ಪತ್ನಿ 1994ರಲ್ಲಿ ರಕ್ತದ ಕ್ಯಾನ್ಸರಿಗೆ ಬಲಿಯಾಗುತ್ತಾಳೆ. ಇದರಿಂದ ಒಂದು ವೈರಾಗ್ಯವನ್ನು ಬೆಳೆಸಿಕೊಂಡ ಆತ ತಿರುಗಿದ್ದು ಆಧ್ಯಾತ್ಮದ ಕಡೆಗೆ, ಸಿಕ್ಕಿದ್ದು ಸತ್ಯ ಸಾಯಿ ಬಾಬಾ. ತನ್ನ ಉದ್ದಿಮೆಯನ್ನು ಸಂಪೂರ್ಣ ತನ್ನ ಪಾಲುದಾರನಿಗೆ ಮಾರಿದವ ಆ ಅಪಾರ ಪ್ರಮಾಣದ ಹಣವನ್ನು ತಂದು ಬಾಬಾರ ಚರಣಕಮಲಗಳಿಗರ್ಪಿಸಿಬಿಟ್ಟ. ಪುಟ್ಟಪರ್ತಿಯಲ್ಲೊಂದು ಸಣ್ಣ ಮನೆ ಮಾಡಿ, ಸ್ವಯಂಸೇವಕನಾಗಿ ದುಡಿಯುತ್ತಿದ್ದಾನೆ. ಅದೇ ಹಣದಲ್ಲಿಯೇ ಇಂದು ಅಲ್ಲೊಂದು ಭವ್ಯ ಆಸ್ಪತ್ರೆ ತಲೆಯೆತ್ತಿರುವುದು. ಟಿಗ್ರಿಟ್ ಒಂದು ಉದಾಹರಣೆ  ಮಾತ್ರ. ಇಂತಹ ಸಹಸ್ರಾರು ಕುಟುಂಬಗಳು ತಮ್ಮದೆಲ್ಲ ಆಸ್ತಿಯನ್ನೂ ಬಾಬಾ ಟ್ರಸ್ಟಿಗೆ ಬರೆದುಕೊಟ್ಟು ಪುಟ್ಟಪರ್ತಿಯಲ್ಲಿ ಸ್ವಯಂ ಸೇವಕರಾಗಿ ದುಡಿಯುತ್ತಿದ್ದಾರೆ. ಇನ್ನೂ ಅನೇಕ ಭಕ್ತರು ಇಂದಿಗೂ ಧೇಣಿಗೆ ನೀಡುತ್ತಲೇ ಇದ್ದಾರೆ. ಪುಟ್ಟಪರ್ತಿಯ ಸಾಮ್ರಾಜ್ಯದ ತಳಪಾಯ ಇಂತಹ ಜನಸಾಮಾನ್ಯರ ಬದುಕು ಮತ್ತವರ ಯಶಸ್ಸು. ಅದನ್ನು ಉತ್ತಮ ರೀತಿಯಲ್ಲಿ channelise ಮಾಡಿದ್ದಕ್ಕಾಗಿ ಬಾಬಾರಿಗೆ ಒಂದು ಹೃದಯಪೂರ್ವಕ ನಮಸ್ಕಾರ. ಆದರೆ ಇಂದು ಅದನ್ನೇನೋ ಮನೆಯ ಮಕ್ಕಳು ಆಸ್ತಿ ಪಾಲು ಮಾಡಲು ಕಿತ್ತಾಡುವಂತೆ ಅಸಲು ಯಾವುದೇ ವಿಧದ ಹಕ್ಕಿಲ್ಲದ ವ್ಯಕ್ತಿಗಳು ಆಡುತ್ತಿದ್ದಾರೆ. ಇದು ಜನಸಾಮಾನ್ಯರದು. ಹಾಗಾಗಿ ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಬೇಕು ಈವರೆಗೂ ಸತ್ಯ ಸಾಯಿ ಆಶ್ರಮದಲ್ಲಿ ನಡೆದಿರುವ ಎಲ್ಲ ಅಕ್ರಮಗಳನ್ನೂ ತನಿಖೆಗೊಳಪಡಿಸಬೇಕು. ಈ ಟ್ರಸ್ಟನ್ನು supercede ಮಾಡಿ ಪುಟ್ಟಪರ್ತಿಯ ಈ ಸಾಮ್ರಾಜ್ಯವನ್ನು ರಾಷ್ಟ್ರೀಕರಣಗೊಳಿಸಬೇಕು. ಸರ್ಕಾರಕ್ಕೆ ಬೆನ್ನೆಲುಬೆಂಬುದಿದೆಯಾ?  

One thoughts on “ಸತ್ಯ ಸಾಯಿಬಾಬಾರ ಸಾಮ್ರಾಜ್ಯದ ಸತ್ಯ ಬಯಲು!

umesh desai said...

yes sir, good article. in a free INDIA baba was running his own empire. his influence wa eveywhere from cricket players to business tycns. now he is no more, time for truth to come out. anybody caring?

Proudly powered by Blogger
Theme: Esquire by Matthew Buchanan.
Converted by LiteThemes.com.