ನಿಮಗೆ ನೆನಪಿರಬಹುದು. ಕಳೆದ ವರ್ಷ ಆಗಸ್ಟ್ ತಿಂಗಳು. ಇಲ್ಲೆ ಬೆಂಗಳೂರಿನ ಸೆರಗಿನಲ್ಲಿ ಸುಮನಹಳ್ಳಿಯ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಜನ ಇಲಿಗಳಂತೆ ಸತ್ತರು. ಅದೊಂದು ವಾರದಲ್ಲಿ 88 ಜನ ಸತ್ತು ಹೋದರು. ಒಂದು ವಾರದ ಹೊತ್ತು ನಾಡಿನ ಎಲ್ಲ ಮಾಧ್ಯಮವೂ ಅಲ್ಲೇ ಠಿಕಾಣಿ ಹೂಡಿತ್ತು. ಇಂದು ಯಾಕೆ ಯಾರೂ ಸತ್ತಿಲ್ಲವೆ? ಎಂಬ ಟಿವಿ ಆಂಕರ್ಗಳ ಪ್ರಶ್ನೆಗಳಿಗೆ ಪತ್ರಕರ್ತರು ಉತ್ತರವಾಗಿದ್ದರು. ಅಸಲಿಗೆ ಅಲ್ಲೊಂದು ನಿರಾಶ್ರಿತರ ಪುನರ್ವಸತಿ ಕೇಂದ್ರವೆಂಬುದೊಂದಿದೆ ಎಂಬುದು ಅಸಲು ಎಷ್ಟೋ ಜನಕ್ಕೆ ಗೊತ್ತಾಗಿದ್ದೇ ಆಗ. ಮಾಧ್ಯಮ ಮತ್ತು ಜನಸಾಮಾನ್ಯರು ಸರ್ಕಾರದ ಮೇಲೆ ಮುರಕೊಂಡು ಬಿದ್ದರು. ಅಂದಿನ ಸಮಾಜ ಕಲ್ಯಾಣ ಸಚಿವ ಡಿ.ಸುಧಾಕರ್ ಈ ಕುರಿತು ಉದ್ಧಟತನದ ಹೇಳಿಕೆ ನೀಡಿ ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದ್ದರು. ಈ ಎಪಿಸೋಡು ಇಡಿಯ ಸರ್ಕಾರಕ್ಕೆ ಒಂದು ಕಪ್ಪು ಮಚ್ಚೆಯಾಗಿ ಪರಿಣಮಿಸುತ್ತಿದ್ದ ಅಪಾಯವನ್ನರಿತ ಯಡಿಯೂರಪ್ಪನವರು ತಕ್ಷಣವೇ ಡ್ಯಾಮೇಜ್ ಕಂಟ್ರೋಲ್ ಮೋಡಿಗಿಳಿದರು. ತತ್ಕೂಡಲೇ ಸುಧಾಕರ್ ಅವರನ್ನು ಮುಜರಾಯಿ ಇಲಾಖೆಗೆ ವರ್ಗಾಯಿಸಿ, ತಮ್ಮ ಆಪ್ತ ಗೋವಿಂದ ಕಾರಜೋಳರಿಗೆ ಸಮಾಜ ಕಲ್ಯಾಣದ ಹೆಚ್ಚುವರಿ ಹೊರೆಯನ್ನು ಹೊರಿಸಿದ್ದರು. ಸುಮನಹಳ್ಳಿಯ ನಿರಾಶ್ರಿತ ಪುನರ್ವಸತಿ ಕೇಂದ್ರಕ್ಕೆ ಭೇಟಿಯಿತ್ತರು. ನಿರಾಶ್ರಿತರು ಜೀವಿಸುತ್ತಿದ್ದ ಸರಕಾರೀ ಕೇಂದ್ರಕ್ಕೆ ನಾಡಿನ ದೊರೆ ಮೂಗು ಬಾಯಿಗೆ ಬಟ್ಟೆ ಕಟ್ಟಿಕೊಂಡು ಹೋಗಿ ನೋಡಿ ಬಂದರು.
ಹೊರಬಂದ ಯಡಿಯೂರಪ್ಪ ಬಕಪಕ್ಷಿಗಳಂತೆ ಕಾಯುತ್ತಿದ್ದ ಮಾದ್ಯಮಗಳ ಬಳಿ ತೆರಳಿ ಮಾತಾಡಿದ್ದು - ಈ ಕೂಡಲೇ ನಿರಾಶ್ರಿತರನ್ನು ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಿ ಉತ್ತಮ ಸೌಲಭ್ಯಗಳೊಂದಿಗೆ ಪುನರ್ವಸತಿ ಕಲ್ಪಿಸಲಾಗುವುದು. ಈ ಜಾಗವನ್ನು ನಾನು ಮತ್ತೊಂದು ಲಾಲ್ಬಾಗ್ ಕಬ್ಬನ್ ಪಾರ್ಕ್ ಮಾಡುತ್ತೇನೆ! ಇಲ್ಲೊಂದು ಆಧುನಿಕ ಸೌಲಭ್ಯಗಳ ಆಸ್ಪತ್ರೆಯನ್ನು ಕಟ್ಟುತ್ತೇವೆ! - ಅಸಲಿಗಲ್ಲಿ ತಾವೇ ನಿರ್ಮಿಸಿದ್ದ ನಿತ್ಯ ನರಕ ಮತ್ತು ಸಮೂಹಿಕ ಗೋರಿಯಿಂದ ಹೊರಬಂದ ಒಂದು ವಿಷಾದ, ಒಂದು ಅಳುಕು ಸಹ ಇರಲಿಲ್ಲ. ನೂರಾರು ಜನ ನಿರ್ಗತಿಕರು ಇಲಿಗಳಂತೆ ಸತ್ತಾಗ, ಇನ್ನೂ ಅನೇಕರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಗ ಅವರನ್ನು ಪರಾಮರ್ಶಿಸಲು ಹೋದ ನಾಡಿನ ದೊರೆಯ ಕಣ್ಣಿಗೆ ಬಿದ್ದದ್ದು ಅವರ ಗೋಳಲ್ಲ, ಬದಲಿಗೆ ಅವರಿದ್ದ ಬಂಗಾರದ ಬೆಲೆಯ ಭೂಮಿ, ಅವರ ಮನದಲ್ಲಿ ಮೂಡಿದ್ದು ಒಂದು ಕನಿಕರ ಸಹ ಅಲ್ಲ, ಬದಲಿಗೆ ದುರಾಸೆ. ಇದು ನಮ್ಮ ನಾಡಿನ ದುರ್ದೈವ.
ಯಡಿಯೂರಪ್ಪನವರು ಸುಮನಹಳ್ಳಿಯ ನಿರ್ಗತಿಕರ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿದ್ದು ಅದೇ ಮೊದಲೇನಲ್ಲ. ಇದಾಗುವ ಕೇವಲ ಒಂದೆರಡು ತಿಂಗಳ ಹಿಂದೆಯಷ್ಟೆ ಸಿಎಂ ಇಲ್ಲಿಗೆ ಭೇಟಿಯಿತ್ತಿದ್ದರು! ಸೋಮಣ್ಣನವರ ಜೊತೆ. ಆಗ ಅವರು ಈ ಭೂಮಿಯನ್ನು ನೋಡಿಕೊಂಡು ಹೋಗಿದ್ದರು. ಆಗಲೂ ಅವರ ಬಾಯಿಂದ ಹೊರಟಿದ್ದು ಅದೇ ಲಾಲ್ ಬಾಗ್ ಉದ್ಗಾರ. ಅದಾದ ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಎನ್.ಬಾಟೆಯವರು ಈ ಒಟ್ಟು 159 ಎಕರೆ ಭೂಮಿಯಲ್ಲಿ 50 ಎಕರೆಯನ್ನು ನಿರ್ಗತಿಕರ ಪುನರ್ವಸತಿ ಕೇಂದ್ರಕ್ಕೆ ಮೀಸಲಿಟ್ಟು, ಮಿಕ್ಕ 109 ಎಕರೆಯಲ್ಲಿ ಒಂದು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಭವನ ಮತ್ತು ಉದ್ಯಾನವನವನ್ನು ನಿರ್ಮಿಸಲು ಬಿಡಿಎಗೆ ಪ್ರಸ್ತಾವನೆ ಸಲ್ಲಿಸಿತ್ತು! ಇದು ಕಾರ್ಯರೂಪಕ್ಕೆ ಬರುವಷ್ಟರಲ್ಲಿ ಅಲ್ಲಿ ಜನ ಇಲಿಗಳಂತೆ ಸತ್ತು ಅದು ದೇಶಾದ್ಯಂತ ಸುದ್ದಿಯಾಗಿ ಹೋಯಿತು. ಆಗ ಯಡಿಯೂರಪ್ಪನವರ ಕೈಬಲವಾಯಿತು. ನಿರ್ಗತಿಕರ ಪುನರ್ವಸತಿ ಕೇಂದ್ರದ ಸ್ಥಳಾಂತರದ ಬಗ್ಗೆ ಅವರು ಖಡಕ್ಕಾಗಿ ಮಾತನಾಡಲು ಸಾಧ್ಯವಾಯಿತು. ಯಡಿಯೂರಪ್ಪನವರ ಈ ಪ್ರಸ್ತಾವನೆಗೆ ಸಾರ್ವಜನಿಕ-ಸಂಘ-ಸಂಸ್ಥೆಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಯಿತು. ಆದರೆ ಇದಕ್ಕೆಲ್ಲ ಕಿವಿಗೊಡುವರೆ ಸನ್ಮಾನ್ಯ ಮುಖ್ಯಮಂತ್ರಿಗಳು? ಕಳೆದ ವರ್ಷ ಜೂನ್ ಹತ್ತರಂದು ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಸಾರ್ವಜನಿಕ ಆಸ್ಪತ್ರೆ, ಉದ್ಯಾನವನ ಮತ್ತಿತರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಗಾಳಿಗೆ ತೂರಿ, ತಾವೇ ಒಂದು ಆದೇಶ ಹೊರಡಿಸಿ, ಈ ಕೇಂದ್ರದ 159 ಎಕರೆ ಭೂಮಿಯಲ್ಲಿ 123.30 ಎಕರೆಗಳನ್ನು ಬಿಡಿಎಗೆ ಹಸ್ತಾಂತರಿಸಿಬಿಟ್ಟರು. ಈ ಆದೇಶದ ಪ್ಯಾರಾ 3ರಲ್ಲಿ "ಈ ಜಮೀನನ್ನು ಉಪಯೋಗಿಸುವ ಉದ್ದೇಶದಲ್ಲಿ ಏನೇ ಮಾರ್ಪಾತುಗಳಿದ್ದರೂ ವರ್ಗಾವಣೆಯ ನಂತರ ಬಿಡಿಎ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು" ಎಂದಿದೆ. ಅಲ್ಲಿಗೆ ಸಾರ್ವಜನಿಕ ಆಸ್ಪತ್ರೆ, ಲಾಲ್ ಬಾಗ್ ಎಲ್ಲವೂ ಕಾಗೆ ಎತ್ತಿಕೊಂಡು ಹೋಯಿತು!
ಕಳೆದ ಮೇ 31 ರಂದು ಬಿಡಿಎ ಖಾಸಗಿ ವ್ಯಕ್ತಿ ಮತ್ತು ಕಂಪೆನಿಗಳಿಂದ expression of interest ಅನ್ನು ಆಹ್ವಾನಿಸಿದೆ. ಅಲ್ಲಿನ ಯೋಜನೆಗಳೇನು ಗೊತ್ತ? 123.30 ಎಕರೆಗಳಲ್ಲಿ 10 ಎಕರೆಗಳಲ್ಲಿ ಸರಕಾರೀ ಖಾಸಗೀ ಸಹಭಾಗಿತ್ವದಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನೆನಪಿಡಿ ಇದು ಉದ್ದೇಶಿತ ಸಾರ್ವಜನಿಕ ಆಸ್ಪತ್ರೆಯಲ್ಲ. ಇನ್ನುಳಿದ 113.30 ಎಕರೆಗಳಲ್ಲಿ ಒಂದು ಸ್ಟಾರ್ ಹೋಟೆಲ್, ಒಂದು ಅಂತರಾಷ್ಟರೀಯ ಕಂನ್ವೆಂಷನ್ ಸೆಂಟರ್, ವಾಣಿಜ್ಯ ಸಮುಚ್ಚಯ ಮತ್ತು ಮನೋರಂಜನಾ ವಿಲಾಸದ ಐಷಾರಾಮಿ ಕ್ಲಬ್ಬು! ಎಲ್ಲವೂ ಖಾಸಗೀ ವ್ಯಕ್ತಿಗಳಿಗೆ ನೀಡುವ ಕಾಂಟ್ರಾಕ್ಟು! ಮತ್ತೊಂದು ವಿಷಯ. ಈಗ ಬಿಡಿಎಗೆ ಹಸ್ತಾಂತರಿಸಲ್ಪಟ್ಟಿರುವ 113.30 ಎಕರೆಯಲ್ಲಿ ನಿರ್ಗತಿಕರ ಪುನರ್ವಸತಿಗೆಂದು ಇತ್ತೀಚೆಗಷ್ಟೆ 3.50 ಕೋಟಿ ವೆಚ್ಚ ಮಾಡಿ ಕಟ್ಟಿಸರುವ ವಸತಿ ಸಮುಚ್ಚಯವೂ ಸೇರಿದೆ. ಈಗ ಅದನ್ನು ಬಿಡಿಎ ಉರುಳಿಸಲಿದೆ. ಬದಲಿಗೆ ಮತ್ತೊಂದು ಪ್ರಧೇಶದಲ್ಲಿ 40 ಕೋಟಿ ವ್ಯಯಿಸಿ ವಸತಿ ಸಮುಚ್ಚಯ ಕಟ್ಟಿಕೊಟ್ಟಲಿದೆಯಂತೆ! ಇದ್ಯಾವ ತುಘಲಕ್ ದರ್ಬಾರ್? ಇಂದಿನ ಮಾರುಕಟ್ಟೆಯಲ್ಲಿ ಬಂಗಾರದಬೆಲೆಯಿರುವ ಈ ನಿರ್ಗತಿಕರ ಭೂಮಿಯನ್ನು ಸರ್ಕಾರವೇ ಒಬ್ಬ ರಿಯಲ್ ಎಸ್ಟೇಟ್ ಡೆವಲೆಪರ್ನಂತೆ ನಿಂತು ಖಾಸಗೀ ವ್ಯಕ್ತಿಗಳಿಗೆ ಪರಭಾರೆ ಮಾಡುವುದು. ಈ ಎಲ್ಲ ವ್ಯವಹಾರದಲ್ಲೂ ಯಡಿಯೂರಪ್ಪ ಮತ್ತವರ ಕುಟುಂಬದ ಅತ್ಯುತ್ಸಾಹವನ್ನು ಗಮನಿಸಿದರೆ ಈಗ ಕರೆದಿರುವ ಟೆಂಡರ್ ಯಾರ ಪಾಲಾಗಲಿದೆ ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ. ಅದು ಯಡಿಯೂರಪ್ಪನವರ ಕುಟುಂಬದೊಳಗೇ ಉಳಿಯಲಿದೆಯಾ ಬೇನಾಮಿ ಹೆಸರಿನಲ್ಲಿ? ಇಲ್ಲದಿದ್ದರೂ ಈ ವ್ಯವಹಾರದಲ್ಲಿ ಕೋಟ್ಯಾಂತರ ರೂಗಳು ಕೈಬದಲಾಗುವುದು ಖಂಡಿತವೇ ಸರಿ. ನಿರ್ಗತಿಕರ ನಿರಾಶ್ರಿತ ಕೇಂದ್ರದ ಭೂಮಿಯನ್ನು ಕಿತ್ತುಕೊಂಡು ಖಾಸಗಿಯವರಿಗೆ ಕೊಟ್ಟು ಅಲ್ಲಿ ಸ್ಟಾರ್ ಹೋಟೆಲ್, ಮನೋರಂಜನಾ ವಿಲಾಸದ ಐಷಾರಾಮದ ಕ್ಲಬ್ಬುಗಳನ್ನು ಕಟ್ಟುವ ಸರ್ಕಾರವಾದರೂ ಎಂಥದು? ಅದರ ಮನೋಧರ್ಮವಾದರೂ ಎಂಥದು? ಬಿಡಿಎ ಎಂಬುದೊಂದು ಸಮೃದ್ಧ ಹುಲ್ಲುಗಾವಲು. ನಗರದ ಹಲವಡೆ ಇರುವ ಬಿಡಿಎ ವಾಣಿಜ್ಯ ಸಂಕೀರ್ಣಗಳ ಮೇಲೂ ಕಾಸಗಿಯವರ ಕಣ್ಣು ಬಿದ್ದಾಗಿದೆ. ಮೊದಲ ಕಂತಿನಲ್ಲಿ ಇಂಥ 5 ಬಿಡಿಎ ಸಂಕೀರ್ಣಗಳನ್ನು ಒಡೆದು ಅಲ್ಲಿ ಸರಕಾರೀ ಖಾಸಗೀ ಸಹಭಾಗಿತ್ವದಲ್ಲಿ ಮಾಲ್ಗಳನ್ನು ನಿರ್ಮಿಸುತ್ತದಂತೆ! ಇವತ್ತು ಸರ್ಕಾರ ಒಂದು ರಿಯಲ್ ಎಸ್ಟೇಟ್ ಡೆವಲೆಪರ್ ಆಗಿ ಕೂತುಬಿಟ್ಟಿದೆ. ಬೆಂಗಳೂರಿನ ಬಂಗಾರದ ಬೆಲೆಯ ಭೂಮಿಯನ್ನೆಲ್ಲಾ ತಮ್ಮ ಮಕ್ಕಳ ಅಳಿಯಂದಿರ ಹೆಸರಿಗೆ ಡೀನೋಟಿಫೈ ಮಾಡುತ್ತಾ ಕೂತಿರುವ ಯಡಿಯೂರಪ್ಪನವರು ಇದರ ದಂಡನಾಯಕರು! ಇವರಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ?
ಸುಮನಹಳ್ಳಿಯ ಈ ನಿರ್ಗತಿಕರ ಪನರ್ವಸತಿ ಕೇಂದ್ರ ಐತಿಹಾಸಿಕವೇ ಸರಿ. ಇಲ್ಲಿನ ಭೂಕಬಳಿಕೆಯೂ ಐತಿಹಾಸಕವೇ. 1944ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರು ನಿರ್ಗತಿಕರ ಪುನರ್ವಸತಿ ಮತ್ತು ಅವರ ಸ್ವಉದ್ಯೋಗ ತರಬೇತಿಗೆಂದು ಸಜ್ಜೆಪಾಳ್ಯ ಮತ್ತು ಶ್ರೀಗಂಧಕಾವಲ್ ಹಳ್ಳಗಳ 320 ಎಕರೆಗಳನ್ನು ಮೀಸಲಿಟ್ಟರು. 1977ರಲ್ಲೇ ಶುರುವಾಯಿತು ಈ ಭೂಮಿಯ `ಪರಭಾರೆ'. 77ರಲ್ಲಿ ಲೆಪ್ರೆಸಿ ಕೇಂದ್ರಕ್ಕೆಂದು 63.02 ಎಕರೆ, 86ರಲ್ಲಿ ಬೆಂಗಳೂರು ಜಲಮಂಡಳಿಗೆ 4.18 ಎಕರೆ, 89ರಲ್ಲಿ ಯುನಾನಿ ಆಸ್ಪತ್ರೆಗೆ 55.02 ಎಕರೆ, 96ರಲ್ಲಿ ಬಿಡಿಎಗೆ 15.08 ಎಕರೆ, 2005ರಲ್ಲಿ ಬಿಎಂಟಿಸಿಗೆ 4 ಎಕರೆ, ಅದೇ ವರ್ಷ ಬಿಬಿಎಂಪಿಗೆ 2 ಎಕರೆ, ಆರೋಗ್ಯ ಇಲಾಖೆಗೆ 10 ಎಕರೆ ಮತ್ತು ಈಗ ಬಿಡಿಎಗೆ 113.30 ಎಕರೆ! ಒಟ್ಟು 268.20 ಎಕರೆ. 2006ರವರೆಗೂ ಈ ಕೇಂದ್ರದ ಒಮದು ನಕ್ಷೆ ಸಹ ಇರಲಿಲ್ಲ. ಆಗ ಸರ್ವೇ ನಡೆಸಿ ಒಂದು ನಕ್ಷೆಯನ್ನು ತಯಾರಿಸಲಾಯಿತು. ಆಗ ತಿಳಿದದ್ದೆಂದರೆ ಕೇಂದ್ರದ 11 ಎಕರೆಯಷ್ಟು ಭೂಮಿ ಅಕ್ರಮವಾಗಿ ಒತ್ತುವರಿಯಾಗಿದೆ. ಸರ್ಕಾರ ಈ ಬಗ್ಗೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಈಗ ಈ ನಿರ್ಗತಿಕರ ಪನರ್ವಸತಿ ಕೇಂದ್ರಕ್ಕೆ ಉಳಿದಿರುವುದು 39 ಎಕರೆಗಳು ಮಾತ್ರ. ಬೆಂಗಳೂರಿನಲ್ಲಿ ಒಟ್ಟು ಎಷ್ಟು ಭಿಕ್ಷಕರಿದ್ದಾರೆ? ಸರ್ಕಾರದ ಬಳಿ ಯಾವುದೇ ಉತ್ತರವಿಲ್ಲ. ರಾಷ್ಟ್ರೋತ್ಥಾನ ಸಂಕಲ್ಪ ಎಂಬ ಸ್ವಯಂ ಸೇವಾ ಸಂಸ್ಥೆ ನಡೆಸಿರುವ ಸರ್ವೆಯಂತೆ ಒಟ್ಟು 10 ಸಾವಿರ ಭಿಕ್ಷುಕರಿದ್ದಾರೆ. ಈಗ ಉಳಿಯುವ 39 ಎಕರೆಯಲ್ಲಿ 750 ಮಂದಿ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಬಹುದಾಗಿದೆ. ಹಾಗಾದರೆ ಇನ್ನುಳಿದ 9 ಸಾವಿರಕ್ಕೂ ಮಿಗಿಲಾದ ಭಿಕ್ಷುಕರ ಗತಿಯೇನು? ಸರ್ಕಾರದ ಪ್ರಯಾರಿಟಿ ಯಾವುದು? ನಿರ್ಗತಿಕರ ಪುನರ್ವಸತಿಯೋ? ಇಲ್ಲ ಮನೋರಂಜನಾ ವಿಲಾಸ ಐಷಾರಾಮಿ ಕ್ಲಬ್ಬೋ? ಉತ್ತರ ಸ್ಪಷ್ಟವಿದೆ.
ಭಿಕ್ಷುಕರ ದಾರುಣ ಸ್ಥಿತಿ ಗತಿ ಮತ್ತು ಸರ್ಕಾರದ ನಿರ್ಲಕ್ಷ್ಯದ ಕುರಿತು ಸಮಗ್ರ ಅಧ್ಯಯನದ ನಂತರ prevention of beggary act ನಡಿ ಸರ್ಕಾರದ ಜವಾಬ್ದಾರಿಗಳೇನು? ಅದರಿಂದ ಸರರ್ಕಾರ ಹೇಗೆ ನುಣುಚಿಕೊಳ್ಳುತ್ತಿದೆ, ಈ ನಿಟ್ಟಿನಲ್ಲಿ ಅದರ ಜವಾಬ್ದಾರಿಯನ್ನರಿತು ನಡೆದುಕೊಳ್ಳಬೇಕೆಂದು ನ್ಯಾಯಾಲಯ ಸರ್ಕಾರ ನಿರ್ದೇಶನ ನೀಡಬೇಕೆಂದು ಹೈಕೋರ್ಟ್ನ ಮೊರೆ ಹೋಗಿರುವ ರಾಷ್ಟರೋತ್ಥಾನ ಸಂಕಲ್ಪ, ಅದೇ ಕೇಸಿನಡಿಯಲ್ಲಿ ಈ ನಿರ್ಗತಿಕರ ಪುನರ್ವಸತಿ ಕೇಂದ್ರದ ಭೂಮಿಯನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಕ್ರಮವನ್ನೂ ಪ್ರಶ್ನಿಸಿ ಈ ಸಂಬಂದ ಒಂದು ಮಧ್ಯಂತರ ಆದೇಶ ಹೊರಡಿಸುವಂತೆ ಕೋರಿಕೊಂಡಿದೆ. ಹೆಲ್ತ್ ಫೌಂಡೇಷನ್ ಎಂಬ ಮತ್ತೊಂದು ಸ್ವಯಂಸೇವಾ ಸಂಸ್ಥೆ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದೆ. ಜೂನ್ 6ರಮದು ಈ ಎರಡೂ ಅರ್ಜಿಗಳ ನಡೆಸಿದ ಹೈ ಕೋರ್ಟ್ ಸರ್ಕಾರಕ್ಕೆ ನೋಟೀಸ್ ನೀಡಿದೆ. ಉತ್ತರ ನೀಡಲು ಜುಲೈ 13ರವರೆಗೂ ಸಮಯಾವಕಾಶ ನೀಡಲಾಗಿದೆ. ಅಂದು ಮುಂದಿನ ವಿಚಾರಣೆ. ತಂದೆಯಾಗಬೇಕಿದ್ದ ಸರ್ಕಾರವೇ ಕುಡಿದು ಬಂದು ಹೆಂಡತಿಯನ್ನು ಬಡಿಯುವ ಗಂಡನಂತಾಗಿರುವ ಈ ಸಂಧಿಗ್ಧ ಸಮಯದಲ್ಲಿ ನ್ಯಾಯಾಲಯವಾದರೂ ತಂದೆಯ ಪಾತ್ರವನ್ನು ವಹಿಸಬೇಕಿದೆ.
Post a Comment