Election `ಪಂಚಾಂಗ' - 1 - ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡ ಕಲೈಜ್ಞರ್, ಅಮ್ಮನ ಗೆಲುವು ಬಹುತೇಕ ನಿಚ್ಚಳ.


ತಮಿಳುನಾಡಿನ ಚುನಾವಣಾ ಕಣ ರಂಗೇರಿದೆ. ರಾಜಕಾರಣ ಗರಿಗೆದರಿದೆ. ಏಪ್ರಿಲ್ 13ರಂದು ಒಂದೇ ಹಂತದಲ್ಲಿ ತಮಿಳುನಾಡಿನಲ್ಲಿ ಚುನಾವಣೆ ನಡೆಯಲಿದೆ. ಮೇ 13, ಚುನಾವಣಾ ಫಲಿತಾಂಶ. ಚೆನ್ನೈನ ಅಧಿಕಾರದ ಗದ್ದುಗೆಯನ್ನು ಈ ಬಾರಿ ಯಾರು ಹಿಡಿಯುವರು? ಕಲೈಜ್ಞರ್? ಪುರಚ್ಚಿ ತಲೈವಿ? ಇದು ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಸದ್ಯ ತಮಿಳುನಾಡಿನ ರಾಜಕಾರಣ ಮತಭಿಕ್ಷೆ ಬೇಡುತ್ತಾ ತಮಿಳರ ಮನೆಮನೆ ಅಲೆಯುತ್ತಿದೆ.

ಮತದಾರರನ್ನು ಮರಳು ಮಾಡಲೋ ಎಂಬಂತೆ ಎರಡೂ ಬಣಗಳು ತಮ್ಮ ಮ್ಯಾನಿಪೆಸ್ಟೋನಲ್ಲಿ ಚಂದ್ರಮಂಡಲವನ್ನೇ ತಂದು ಶ್ರೀಸಾಮಾನ್ಯನ ಕೈಲಿಟ್ಟಿದೆ. ತಮಿಳುನಾಡಿನ ರಾಜಕಾರಣ ಮೊದಲಿನಿಂದಲೂ ಜನಕಲ್ಯಾಣದ ಹೆಸರಿನಲ್ಲಿ ಇಂಥ ಅತಾರ್ಕಿಕ  ಉಡುಗೊರೆಗಳನ್ನು ನೀಡುವುದರಲ್ಲಿ ಎತ್ತಿದ ಕೈ. ಹೋದ ಬಾರಿ ಡಿಎಂಕೆ ಬಡತನ ರೇಖೆಗೀಂತಲೂ ಕೆಳಗಿರುವವರಿಗೆ ಉಚಿತವಾಗಿ ಓಂದು ಟಿವಿ ಕೊಟ್ಟಿತು. ಈ ಬಾರಿ ಅವರು ಲ್ಯಾಪ್ಟಾಪ್ಗೆ ಮೊರೆ ಹೋಗಿದ್ದಾರೆ! ಜೊತೆಗೆ ಅತ್ಯಂತ ಕಡಿಮೆ ದರದಲ್ಲಿ ಆಹಾರಧಾಣ್ಯಗಳು. ಎಐಎಡಿಎಂಕೆಯೇನೂ ಹಿಂದೆ ಬಿದ್ದಿಲ್ಲ ಅವರೂ ಲ್ಯಾಪ್ಟಾಪ್ ಕೊಡ್ತಾರಂತೆ, ಜೊತೆಗೆ ಇವರು ಕಡಿಮೆ ಬೆಲೆಗೆ ಕೊಟ್ಟರೆ ಅವರು 20 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡ್ತಾರಂತೆ! ಜೊತೆಗೆ ಇಬ್ಬರೂ ಫ್ಯಾನುಗಳು, ಮಿಕ್ಸಿ ಇಲ್ಲ ಗ್ರೈಂಡರ್ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ! ಇದು ತಮಿಳುನಾಡಿನ ಚುನಾವಣೆಯ ರಂಗು. 

ಹೀಗೆ 5 ವರ್ಷಕ್ಕೊಮ್ಮೆ ಇಂದ್ರನೇ ಆಗಿಬಿಡುವ ಶ್ರೀಶಾಮಾನ್ಯನನ್ನು ನಂತರದ 5 ವರ್ಷ ಕ್ಯಾರೆ ಅನ್ನುವವನಿರುವುದಿಲ್ಲವೆಂಬುದು ಆತನಿಗೂ ಗೊತ್ತು. ತಮಿಳುನಾಡಿನ ಮತದಾರ ತುಂಬಾನೆ ಚಾಣಾಕ್ಷ. ಕಳೆದು ಹಲವಾರು ದಶಕಗಳಿಂದ ಆತನ ಈ ರಾಜಕೀಯ ಪ್ರಜ್ಞಾವಂತಿಕೆ ಒಂದು ಬಣವನ್ನು ಸತತವಾಗಿ ಆಡಳಿತದ ಸನಿಹಕ್ಕೆ ಬಿಟ್ಟಿಲ್ಲ. ಆತನಿಗೆ ಗೊತ್ತು, ಒಂದು ಪಕ್ಷ ಎರಡು ಮೂರು ಅವಧಿಗೆ ಅಧಿಕಾರ ನಡೆಸಿದರೆ, ಭ್ರಷ್ಟಾಚಾರ ಮುಗಿಲುಮುಟ್ಟುತ್ತದೆ. ಹಾಗಾಗಿ ಇವತ್ತು ಕಲೈಜ್ಞರ್ ಆದರೆ ನಾಳೆ ಅಮ್ಮ. ಹಾಗೆ ನೋಡಿದರೆ ಈ ಬಾರಿ ಕರುಣಾನಿಧಿ ನಾಯಕತ್ವದ ಡಿಎಂಕೆ ಈ ಬಾರಿ ಸತತ ಎರಡು ಅವಧಿಗೆ ಅಧಿಕಾರ ನಡೆಸಿ, 2001-2006, 2006-2011, ಮೂರನೇ ಬಾರಿಗೆ ಜನಾದೇಶ ಪಡೆಯಲು ಮುಂದಾಗಿದೆ. ಕಳೆದ ಒಂದು ದಶಕದಿಂದ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿರುವ ಜಯಲಲಿತಾ ಅಧಿಕಾರದತ್ತ ದೃಷ್ಟಿ ನೆಟ್ಟಿದ್ದಾರೆ. ಯಾರು ಹಿತವರು ನಿನಗೆ ಈ ಈರ್ವರೊಳಗೆ? ಮತದಾರನ ಉತ್ತರಕ್ಕೆ ಎಲ್ಲರೂ ಕತರರಾಗಿ ಕಾಯುತ್ತಿದ್ದಾರೆ.

ಈಗಾಗಲೇ ಹೇಳಿರುವ ಹಾಗೆ ತಮಿಳುನಾಡಿನ ಮತದಾರ alternative ಆಗಿ ಡಿಎಂಕೆ ಮತ್ತು ಎಐಎಡಿಎಂಕೆ ಅನ್ನು ಅಧಿಕಾರಕ್ಕೆ ತರುತ್ತಾ ತನ್ನ ಆಟವನ್ನು ಆಡುತ್ತಲೇ ಇದ್ದಾನೆ. ಆದರೆ 2006ರಲ್ಲಿ ಇದು ತಲೆಕೆಳಗಾಯಿತು. 1996-2001ರ ಅವಧಿಗೆ ರಾಜ್ಯಭಾರ ನಡೆಸಿದ್ದ ಜಯಲಲಿತಾ, ಅವರ ಆಡಳಿತ ಕಡುಭ್ರಷ್ಟತೆಯಿಂದ ಕೂಡಿದ್ದು ಜನ ರೋಸಿ ಹೋಗಿದ್ದರು. 2001ರ ಚುನಾವಣೆಯಲ್ಲಿ ಡಿಎಂಕೆ ಅಧಿಕಾರ ಹಿಡಿಯಿತು. ಕರುನಾನಿಧಿ ಮುಖ್ಯಮಂತ್ರಿಯಾದರು. ಈ ಟ್ರೆಂಡ್ ಅನ್ನೇ ಅನುಸರಿಸುವುದಾದರೆ 2006ರಲ್ಲಿ ಜಯಲಲಿತಾರಿಗೆ ಅವಕಾಶ ಸಿಗಬೇಕಿತ್ತು. ಆದರೆ ಅದಾಗಲಿಲ್ಲ. 2006ರಲ್ಲಿ ಪುನಃ ಡಿಎಂಕೆ ಮೈತ್ರಿಕೂಟ ಅಧಿಕಾರಕ್ಕೆ ಬಂತು. 2000ದ ನಂತರ ತಮಿಳುನಾಡಿನ ರಾಜಕಾರಣ ಸಾಕಷ್ಟು ಬದಲಾಗಿದೆ, 2006ರ ಚುನಾವಣೆಯೇ ಅದಕ್ಕೆ ನಿದರ್ಶನ. ತಮಿಳುನಾಡನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದುಕೊಂಡಿದ್ದ ದ್ರಾವಿಡ ಪಕ್ಷಗಳ ಶಕ್ತಿ ಕುಂದುತ್ತಿದೆ. ಹತ್ತಾರು ಸಣ್ಣ ಸಣ್ಣ ಪಕ್ಷಗಳು ತಲೆಯೆತ್ತಿವೆ. ಕಾಂಗ್ರೆಸ್ ತನ್ನ ಹಿಂದಿನ ಚರಿಶ್ಮಾ ಅನ್ನು ಮರಳಿ ಪಡೆದುಕೊಳ್ಳುವ ಹಾದಿಯಲ್ಲಿ ನಡೆಯುತ್ತಿದೆ. ನಿಧಾನವಾಗಿ ತಮಿಳು ನಾಡಿನ ರಾಜಕಾರಣಕ್ಕೆ ಮೂರನೇ ಆಯಾಮವೊಂದು ಸೇರ್ಪಡೆಯಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಹಾಗಾಗಿಯೇ ಇವತ್ತು ಡಿಎಂಕೆ ಮತ್ತು ಎಯೆಡಿಎಂಕೆ ಪಕ್ಷಗಳಾಗಿ ಚುನಾವಣಾ ಕಣಕ್ಕಿಳಿಯುತ್ತಿಲ್ಲ, ಅವು ಮೈತ್ರಿಕೂಟಗಳು. ಯಾವ ಪಕ್ಷದ ಮೈತ್ರಿಕೂಟ ಹೆಚ್ಚು ಬಲವಾಗಿರುತ್ತದೋ ಅದು ಅಧಿಕಾರದ ಗದ್ದುಗೆಯೇರುತ್ತಿದೆ. 2006ರಲ್ಲಾದದ್ದೂ ಇದೆ. ಡಿಎಂಕೆಯೊಡನೆ ಕಾಂಗ್ರೆಸ್, ಪಿಎಂಕೆ, ಎಡರಂಗ ನಿಂತದ್ದರಿಂದ ಕರುಣಾನಿಧಿ 5ನೇ ಬಾರಿ ಮುಖ್ಯಮಂತ್ರಿಯಾದರು. 

ಸ್ವತಂತ್ರ್ಯಾ ನಂತರದ ಭಾರತ ರಾಜಕಾರಣದ ಮೇಲೆ ಕಾಂಗ್ರೆಸ್ಸಿನ ಹಿಡಿತ ಉಡದ ಪಟ್ಟೇ ಸರಿ. ತಮಿಳುನಾಡಿನ ದ್ರಾವಿಡ ಚಳುವಳಿ ಒಂದು ರಾಜಕೀಯ ಶಕ್ತಿಯಾಗಿ ರೂಪುತಳೆದಾಗ 1967ರಲ್ಲಿ ತಮಿಳುನಾಡು ಕಾಂಗ್ರೆಸ್ ಕೈತಪ್ಪಿತು. ದ್ರಾವಿಡ ಸರ್ಕಾರ ರಚನೆಯಾಯಿತು. ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ಮರಳಿ ಗದ್ದುಗೆಯ ಸನಿಹಕ್ಕೂ ಬರಲಾಗಿಲ್ಲ. ನಂತರ ಎಂಜಿಆರ್ ಮತ್ತು ಕರುಣಾನಿಧಿಯ ನಡುವೆ ಅಧಿಕಾರಕ್ಕಾಗಿ ಬಂದ ಭಿನ್ನಾಭಿಪ್ರಾಯದಲ್ಲಿ ಡಿಎಂಕೆ ಎರಡು ಹೋಳಾಗಿ ಎಐಎಡಿಎಂಕೆ ಹುಟ್ಟಿಕೊಂಡಿತು. ಅಂದಿನಿಂದ ತಮಿಳುನಾಡು ರಾಜಕಾರಣ ಈ ಎರಡು ಮದಗಜಗಳ ನಡುವಿನ ಹೋರಾಟ ಅಷ್ಟೆ. ಎಂಜಿಆರ್ ಸಾವಿನ ನಂತರ ಆತನ ಸ್ಥಾನವನ್ನು ಜಯಲಲಿತಾ ತುಂಬಿದರು ಅಷ್ಟೆ, ಬದಲೇನಿಲ್ಲ. ಎರಡೂ ದ್ರಾವಿಡ ಪಕ್ಷಗಳು, ಅವುಗಳ ಕಾರ್ಯಕ್ರಮದಲ್ಲೂ ಅಂಥ ವ್ಯತ್ಯಾಸವೇನೂ ಇಲ್ಲ. ಹಾಗಾಗಿ ರಾಜಕಾರಣ ವ್ಯಕ್ತಿ ಪ್ರತಿಷ್ಠೆಯ ಕುಸ್ತಿ ಕಣವಾಗಿ ಹೋಯಿತು. ತಮಿಳರ ವ್ಯಕ್ತಿ ಆರಾಧನಾ ಮನೋಭಾವವೂ ಇದಕ್ಕೆ ನೀರೆರೆಯುತ್ತಾ ಬಂತು.

ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ದ್ರಾವಿಡ ಚಳುವಳಿ ಅನೇಕ ತಳಸಮುದಾಯಗಳಿಗೆ ಧ್ವನಿಯೊದಗಿಸಿತು. ಇಂತಹ ಐಡೆಂಟಿಟಿ ರಾಜಕಾರಣ ಬರಬರುತ್ತಾ ನಿಧಾನವಾಗಿ ಜಾತಿ ರಾಜಕಾರಣವಾಗಿ ಪರಿವರ್ತಿತವಾಗಿದೆ. ಈ ಸಮುದಾಯಗಳ ಪ್ರತ್ಯೇಕತೆ, ಪ್ರಗತಿ ಮತ್ತು ನಾಯಕತ್ವದಾಕಾಂಕ್ಷೆಗಳಿಗೆ ಎರಡೂ ದ್ರವಿಡ ಪಕ್ಷಗಳಲ್ಲಿ ನಿರೀಕ್ಷಿತ ಅವಕಾಶಗಳು ದೊರೆಯದಿದ್ದಾಗ, ಅವು ಹಳ್ಳ ಅರಸಿ ಹೊರಟ ತೊರೆಗಳಾಂತಾಗಿವೆ. ಜೊತೆಗೆ ಈ ಎರಡೂ ದ್ರವಿಡ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ಎಂಬುದಕ್ಕೆ ಬೆಲೆಯೇ ಇಲ್ಲ. ಇಲ್ಲಿ ನಾಯಕನೇ ದೇವರು. ಇತರರಿಗೆ ಉಸಿರಿಲ್ಲ. ಹಾಗಾಗಿ ಮಹತ್ವಾಕಾಂಕ್ಷೆಯುಳ್ಳ ಅನೇಕ ನಾಯಕರು ಈ ಎರಡೂ ಪಕ್ಷಗಳಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳ ಬಯಸುತ್ತಿದ್ದಾರೆ. ಅವರದೇ ಪುಟ್ಟ ಪುಟ್ಟ ರಾಜ್ಯಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಇಂದು ತಮಿಳುನಾಡಿನ ರಾಜಕೀಯಾಗಸದಲ್ಲಿ ಅನೇಕ ಸಣ್ಣ ಸಣ್ಣ ಪಕ್ಷಗಳ ಉದಯವಾಗಿದೆ - ವಿಜಯಕಾಂತ್ರ ಡಿಎಂಡಿಕೆ, ವೈಕೋರ ಎಂಡಿಎಂಕೆ, ರಾಮದಾಸ್ರ ಪಿಎಂಕೆ, ಶರತ್ಕುಮಾರ್ ಅವರ ಸಮತುವಾ ಮಕ್ಕಳ್ ಕಚ್ಚಿ, ಪುದಿಯ ತಮಿಳಗಂ ಕಚ್ಚಿ, ದಲಿತ ಪಕ್ಷ ಎಂದೇ ಗುರುತಿಸಿಕೊಂಡಿರುವ ವಿರುಥಲೈ ಚಿರುತೈಗಳ್ ಕಚ್ಚಿ...ಹೀಗೆ ಇನ್ನೂ ಅನೇಕ. ಇದರಲ್ಲಿ ಪ್ರಮುಖವಾದವು ವಿಜಯಕಾಂತ್ರ ಡಿಎಂಡಿಕೆ, ರಾಮದಾಸ್ ಅವರ ಪಿಎಂಕೆ, ವೈಕೋರ ಎಂಡಿಎಂಕೆ ಮತ್ತು ಕಾಂಗ್ರೆಸ್. ಇದರಲ್ಲಿ ಯಾರು ಬಲಿಷ್ಠ ಮೈತ್ರಿಕೂಟವನ್ನು ರಚಿಸಿಕೊಳ್ಳುತ್ತಾರೋ ಅವರಿಗೆ ಗೆಲುವು ನಿಶ್ಚಿತ. ದ್ರಾವಿಡ ಪಕ್ಷಗಳೀರ್ವರ ಶಕ್ತಿಯೂ ಕುಗ್ಗಿರುವ ಈ ಸಂದರ್ಭದಲ್ಲಿ ಒಂದು ಸ್ವತಂತ್ರ್ಯ ಸರ್ಕಾರ ಸಾಧ್ಯವಿಲ್ಲ. ಈಗಿರುವ ಸರ್ಕಾರವೂ ಡಿಎಂಕೆ ಮತ್ತು ಕಾಂಗ್ರೆಸ್ನ ಮೈತ್ರಿಕೂಟ ಸರ್ಕಾರ.

ಇನ್ನು ಈ ಬಾರಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಜೋಕರ್ನಂತೆ ಜಿಗಿಯುತ್ತಾ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಕೇಂದ್ರದ ಡಿಎಂಕೆ ಬೆಂಬಲದಿಂದ ಕೈಕಟ್ಟಿಹಾಕಿದಂತಾಗಿ ಡಿಎಂಕೆಯ ಜೊತೆಯೇ ಮುಂದುವರೆದಿದೆ. 2ಜಿ ತರಂಗಾಂತರ ಹಗರಣದಿಂದ ಹಣ್ಣುಗಾಯಿ ನೀರುಗಾಯಿ ಆಗಿರುವ ಡಿಎಂಕೆ ಪಕ್ಷವನ್ನು ಕಾಂಗ್ರೆಸ್ ಮೊಳಕಾಲೂರುವಂತೆ ಮಾಡಿದೆ. ಕೇಂದ್ರ ಸರ್ಕಾರದಿಂದ ತನ್ನ ಬೆಂಬಲ ವಾಪಸ್ ಪಡೆದುಕೊಳ್ಳುವ ನಾಟಕವನ್ನಾಡಿದರೂ ಸಹ, ಡಿಎಂಕೆ ಕಾಂಗ್ರೆಸ್ಸಿಗೆ 63 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಕಾಂಗ್ರೆಸ್ಸಿನ ಶಕ್ತಿವಲಯ ನಾಡಿನಾದ್ಯಂತ ಹರಡಿದ್ದು ಒಟ್ಟು ಶೇ.8-10 ರಷ್ಟು ಮತಗಳ ಹಿಡಿತವಿದೆ. ಇನ್ನು ಡಿಎಂಕೆಯ ಜೊತೆಯಿರುವ ಮತ್ತೊಂದು ಪ್ರಮುಖ ಪಕ್ಷ ಪಿಎಂಕೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟದಿಂದ ಹೊರನಡೆದು ಚಿತ್ರಾನ್ನವಾಗಿದ್ದ ಈ ಪಕ್ಷ ಈ ಬಾರಿ ಮರಳಿ ಮೈತ್ರಿ ಮಾಡಿಕೊಂಡಿದ್ದು, 30 ಕ್ಷೇತ್ರಗಲನ್ನು ಪಡೆದುಕೊಂಡಿದೆ. ಅಂದಾಜು ಶೇ. 5-6ರಷ್ಟು ಮತಗಳಿಕೆಯ ಶಕ್ತಿ ಇದಕ್ಕಿದೆ. ಆದರೆ ಚುನಾವಣಾ ನಂತರ ಡಿಎಂಕೆ ಜೊತೆಯೇ ಇರಬೇಕೆಂದೇನೂ ಇಲ್ಲ ಎಮದು ಪಿಎಂಕೆ ಅಧಿನೇತ ಪಿ.ರಾಮದಾಸ್ ಹೇಳಿದ್ದು ತಾವು ಯಾವತ್ತಿದ್ದರೂ ಗೆದ್ದೆತ್ತಿನ ಬಾಲ, ಈ ಬಾರಿ ಗೆಲ್ಲುವ ಎತ್ತು ಡಿಎಂಕೆ ಅಲ್ಲದಿರಬಹುದು ಎಂಬ ಶಂಕೆಯನ್ನೂ ಅವರು ವ್ಯಕ್ತಪಡಿಸಿದಂತಾಗಿದೆ. ಇನ್ನು ಇತರೆ 5 ಸಣ್ಣ ಪಕ್ಷಗಳಿಗೆ ಒಟ್ಟು 22 ಸ್ಥಾನಗಳನ್ನು ಡಿಎಂಕೆ ಬಿಟ್ಟುಕೊಟ್ಟಿದ್ದು, ಸ್ವತಃ ತಾನು ಕೇವಲ 119 ಸ್ಥಾನಗಳಲ್ಲಿ ಮಾತ್ರವೇ ಸ್ಪರ್ಧಿಸುತ್ತಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಕನಿಷ್ಠ 118 ಸದಸ್ಯಬಲ ಅಗತ್ಯ. 119 ಸ್ಥಾನಗಳಲ್ಲಷ್ಟೇ ಸ್ಪರ್ಧಿಸುತ್ತಿರುವ ಡಿಎಂಕೆ ಅಲ್ಲಿಗೆ ಚುನಾವಣೆಗೆ ಮೊದಲೇ ತನ್ನ ಸೋಲನ್ನೊಪ್ಪಿಕೊಂಡಿದೆ.

ಇನ್ನು ಜಯಲಲಿತಾರ ನೇತೃತ್ವದ ಎಐಎಡಿಎಂಕೆ ಮೈತ್ರಿಕೂಟದಲ್ಲಿ ಎಐಎಡಿಎಂಕೆಯೂ ಸೇರಿದಂತೆ ಒಟ್ಟು 11 ಪಕ್ಷಗಳಿವೆ. ತಮಿಳುನಾಡಿನ ರಾಜಕೀಯಕ್ಕೆ ಮೂರನೇ ಆಯಾಮವನ್ನು ಸಾಧ್ಯವಾಗಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಜಕೀಯ ಅರಂಗ್ರೇಟಂ ಮಾಡಿರುವ ಖ್ಯಾತ ಸಿನೀತಾರೆ ಕರುಪ್ಪು ಎಂಜಿಆರ್ ಎಂದೇ ಖ್ಯಾತವಾಗಿರುವ ವಿಜಯಕಾಂತ್ ಅವರ ಡಿಎಂಡಿಕೆ ಜಯಲಲಿತರೊಂದಿಗೆ ನಿಂತಿರುವುದು ಈ ಮೈತ್ರಿಕೂಟವನ್ನು ಅತ್ಯಂತ ಶಕ್ತಿಯುತಗೊಳಿಸಿದೆಯೆಂಬುದು ಬಹುತೇಕರ ಅಂದಾಜು. ಕಳೆದ ಚುನಾವಣೆಯಲ್ಲಿ ಬರಿಯ ಒಂದು ಸ್ತಾನವನ್ನಷ್ಟೇ ಗೆಲ್ಲಲು ಸಾಧ್ಯವಾಗಿದ್ದರೂ ಡಿಎಂಡಿಕೆ ಮತಪ್ರಮಾಣ ಶೇ.8! ಅದು ಈ ಬಾರಿ ಶೇ. 10ನ್ನೂ ದಾಟುತ್ತದೆ ಎಂಬ ನಿರೀಕ್ಷೆಯಿದೆ. ಡಿಎಂಡಿಕೆಗೆ 41 ಸ್ಥಾನಗಳನ್ನು ನೀಡಲಾಗಿದೆ. ಇನ್ನು ಎಡರಂಗಕ್ಕೆ 22 ಸ್ಥಾನಗಳು, ಮತ್ತಿತರ ಸಣ್ಣ ಪಕ್ಷಗಳಿಗೆ ಒಟ್ಟು 11 ಸ್ಥಾನಗಳು. ಸ್ವತಃ ಎಐಎಡಿಎಂಕೆ 160 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ವೈಕೋ ನಾಯಕತ್ವದ ಎಂಡಿಎಂಕೆ ಈ ಮೈತ್ರಿಕೂಟಕ್ಕೆ ಸೇರಿತ್ತಾದರೂ ಸ್ಥಾನಹೊಂದಾಣಿಕೆಯಲ್ಲಿನ ಅಭಿಪ್ರಾಯಭೇಧದಿಂದಾಗಿ ಎಂಡಿಎಂಕೆ ಮೈತ್ರಿಕೂಟದಿಂದ ಹೊರನಡೆದು ಚುನಾವಣೆಯನ್ನು ಬಹಿಷ್ಕರಿಸಿದೆ. ಮೂಲತಃ ಡಿಎಂಕೆಯ ನಾಯಕನಾಗಿದ್ದ ವೈಕೋ ಪಡೆಯುತ್ತಿದ್ದ ಶೇ.5-6ರಷ್ಟು ಮತಗಳು ಇದರಿಂದ ಡಿಎಂಕೆ ಕಡೆಗೇ ವಾಲುವ ಲೆಕ್ಕಾಚಾರಗಳೂ ನಡೆಯುತ್ತಿವೆ.

ಇದೆಲ್ಲವೂ ಎಲೆಲಕ್ಷನ್ ಪಂಡಿತರ ಲೆಕ್ಕಾಚಾರಗಳಾಯಿತು. ಅಸಲು ಜನರ ನಡುವಿನ ಅಲೆ ಹೇಗಿದೆ? ಗಾಳಿ ಯಾರ ಪರ ಬೀಸುತ್ತಿದೆ? ಅಸಲು ಈ ಚುನಾವಣೆಯಲ್ಲಿನ ಇಶ್ಯೂಗಳಾದರೂ ಏನು? ಕಳೆದೊಂದು ದಶಕದಿಂದ ಆಡಳಿತ ನಡೆಸಿರುವ ಡಿಎಂಕೆಯ ವಿರುದ್ಧ ಅತ್ಯಂತ ಪ್ರಬಲ ಆಡಳಿತ ವಿರೋಧಿ ಅಲೆ ಬೀಸುತ್ತಿದೆ. ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ದುರಾಡಳಿತ, ಬೆಲೆಯೇರಿಕೆ, ವಿದ್ಯುತ್ ಅಭಾವ ಇವೆಲ್ಲವೂ ಒಂದು ತೂಕವಾದರೆ, ಮುಗಿಲು ಮುಟ್ಟಿರುವ ಕರುಣಾನಿಧಿ ಕುಟುಂಬ ರಾಜಕಾರಣ, ಅವರ ಭ್ರಷ್ಟಾಚಾರಗಳು - 2ಜಿ ತರಂಗಾಂತರ ಹಗರಣ - ಇದು ಇಂದಿನ ಚುನಾವಣೆಯ ಅತಿ ಪ್ರಮುಖ ವಿಷಯ. ಕರುಣಾನಿಧಿ ಕುಟುಂಬದ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಾ ಜನರ ಬಳಿ ಸುಡುಗಾಳಿಯಂತೆ ಸಂಚರಿಸುತ್ತಿದ್ದಾರೆ ಜಯಲಲಿತಾ. 2ಜಿ ತರಂಗಾಂತರ ಹಗರಣ ಮತ್ತು ಕರುಣಾನಿಧಿಯ ಕುಟುಂಬ ಇವೆರಡೇ ಜಯಲಲಿತಾರ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರಗಳು. 2ಜಿ ತರಂಗಾಂತರ ಹಗರಣದ ಆಳ ಅಗಲಗಳೇ ಗ್ರಾಮಾಂತರ ಮಂದಿಗೆ ಅರ್ಥವಾಗುವುದಿಲ್ಲ, ಅಸಲಿಗೆ ಅದೊಂದು ಇಶ್ಯೂನೇ ಅಲ್ಲ ಎಂದು ಡಿಎಂಕೆ ಎಷ್ಟೇ ವಾದಿಸಿದರೂ, ಡಿಎಂಕೆಯ ಭ್ರಷ್ಟಾಚಾರ ಪರ್ವ ಜನರ ಮನಸ್ಸಿನಲ್ಲಿ ನೆಲೆಯೂರಿದೆ. ಇನ್ನು ಜಯಲಲಿತಾ ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಬೊಬ್ಬಿರಿಯುತ್ತಿದ್ದಾರಾದರೂ, ಆಕೆ ಕಳೆದೊಂದು ದಶಕದಿಂದ ಅಧಿಕಾರದಿಂದ ದೂರವಿದ್ದಾಳೆ. ಆಕೆಯ ಹಗರಣಗಳು ಜನರ ಸ್ಮೃತಿಪಠಲದಿಂದ ಮಾಸಿವೆ.

ಇನ್ನು ಕರುಣಾನಿಧಿಯ ಕುಟುಂಬ ರಾಜಕಾರಣದ ಹೊಲಸು ತಮಿಳುನಾಡಿನ ಜನರಿಗೂ ಸಾಕೆನಿಸಿರುವುದು ದಿಟ. ನಿತ್ಯ ಇವರ ಕುಟುಂಬದೊಳಗಿನ ರಾಜಕೀಯ ಚದುರಂಗದ್ದೇ ಸುದ್ದಿ. ಸ್ಟಾಲಿನ್ನು ಚೆನ್ನೈ, ಅಳಗಿರಿ ಮಧುರೈ, ಕನಿಮೊಳಿ ದೆಹಲಿ! ರಾಜ್ಯವನ್ನು ಹೀಗೆ ಮಕ್ಕಳಿಗೆ ಭಾಗ ಮಾಡಿಕೊಟ್ಟಿರುವುದು ರಾಜ್ಯವೇನು ಇವರಪ್ಪನ ಮನೆ ಜಹಗೀರಾ ಎಂಬ ಪ್ರಶ್ನೆಯನ್ನು ಜನರಲ್ಲಿ ಸಹಜವಾಗಿಯೇ ಮೂಡಿಸಿದೆ. ಇನ್ನು ಭ್ರಷ್ಟಾಚಾರ ಕರುಣಾನಿಧಿಯ ಮನೆ ಬಾಗಿಲಿಗೆ ಬಂದಿದೆ. ಸಿಬಿಐ ಕನಿಮೊಳಿ ಮತ್ತು ಆಕೆಯ ತಾಯಿಯನ್ನು ಪ್ರಶ್ನಿಸಿದೆ. ಜನ ರೋಸಿ ಹೋಗಿದ್ದಾರೆ. ಕರುಣಾನಿಧಿಗೀಗಾಲೇ 87 ವರ್ಷ. ಗಾಲೀ ಕುರ್ಚಿಗೆ ಬಂಧಿ. ಇನ್ನು ಮುಂದಿನ ಚುನಾವಣೆಯ ವೇಳೆಗೆ ಹೇಗೋ ಏನೋ? ಈಗಲೇ ತಾನು ಮತ್ತೆ ಗೆದ್ದು, ಅಧಿಕಾರವನ್ನು ತನ್ನ ವಾರಸುದಾರರಿಗೆ ಹಂಚಬೇಕೆನ್ನುವುದು ಕರುಣಾನಿಧಿಯ ಹುನ್ನಾರ. ಇದಕ್ಕೆ ಅಧಿಕಾರ ಅನಿವಾರ್ಯ. ಇದು ಜನರಲ್ಲಿ ಮತ್ತಷ್ಟು ಹೇವರಿಕೆ ಹುಟ್ಟಿಸಿರುವುದಂತೂ ದಿಟ. ಇದನ್ನು ಜಯಲಲಿತಾ ಬಹುಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ.

ಇದನ್ನು ಚೆಕ್ಮೇಟ್ ಮಾಡಲು ಕರುಣಾನಿಧಿ ತಮಿಳರನ್ನು ಭಾವನಾತ್ಮಕವಾಗಿ ಕೆರಳಿಸುವ ಕೆಲಸ ಶುರುವಿಟ್ಟುಕೊಂಡಿದ್ದಾರೆ. ಕರುಣೆ ಗಳಿಸಲು ಇಲ್ಲದ ಸರ್ಕಸ್ಸುಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಜನ ಮರಳುಗುವುದು ನಿಲ್ಲಿಸಿ ಯಾವ ಕಾಲವಾಯಿತೋ. ಇದು ರಾಜಕೀಯವಾಯಿತು, ಇನ್ನು ಜನ ಸಾಮಾನ್ಯರತ್ತ ತಿರುಗಿದರೆ, ತಮಿಳುನಾಡಿನಲ್ಲಿ ತೀವ್ರ ವಿದ್ಯುತ್ ಕ್ಷಾಮ. ಸುಡುಬಿಸಿಲಿಗೆ ಫ್ಯಾನ್ ನೀಡುವ ಭರವಸೆ ಕೊಟ್ಟಿರುವ ಕರುಣಾನಿಧಿ ನೆಟ್ಟಗೆ ದಿನಕ್ಕೆ ನಾಲ್ಕು ಘಂಟೆ ವಿದ್ಯುತ್ ಕೊಟ್ಟಿಲ್ಲ. ಇನ್ನು ಬೆಲೆಯೇರಿಕೆ, ಭಾರತದಾದ್ಯಂತ ಶ್ರೀಸಾಮಾನ್ಯನನ್ನು ಹಣಿದು ಹಾಕಿದೆ. ಇದೂ ಸಹ ಆಡಳಿತದ ವಿರುದ್ಧ ಅಲೆಯೊಂದನ್ನು ಸೃಷ್ಟಿಸುತ್ತದೆ.


ತಮಿಳುನಾಡಿನಲ್ಲಿ ಮತದಾನಕ್ಕೆ ಇನ್ನೂ ಒಂದು ವಾರಿವಿದೆ. ಈ ವರಗೆ ಹೊರಬಿದ್ದಿರುವ ಎರಡು pre-poll survey ಗಳು ಜಯಲಲಿತಾರ ನೇತೃತ್ವದ ಮೈತ್ರಿಕೂಟಕ್ಕೆ ಅಧಿಕಾರ ಎಂದೇ ಹೇಳಿದೆ. 

Headlines-Today ವಾಹಿನಿ ನಡೆಸಿದ ಸರ್ವೆಯಂತೆ: 
ಎಐಎಡಿಎಂಕೆ+  - 164 (50%), 
ಡಿಎಂಕೆ+          - 68   (45%)
ಇತರರು           - 2     (5%)

ಇನ್ನು ಮದ್ರಾಸಿನ ಲೊಯೋಲ ಕಾಲೇಜಿನವರು ನಡೆಸಿರುವ ಸರ್ವೆಯಂತೆ: ಎಐಎಡಿಎಂಕೆ+   - 105 (48.6%)
ಡಿಎಂಕೆ+           - 70   (41.7%)
ಬೇಲಿಯ ಮೇಲೆ  - 59   (9.7%)
ಒಟ್ಟಾರೆ, ಆಡಳಿತ ಪಕ್ಷದಲ್ಲಿ ಆ ಒಂದು ಆತ್ಮವಿಶ್ವಾಸವೇ ಇಲ್ಲ. ಸರ್ಕಾರ ರಚನೆಗೆ 118 ಸದಸ್ಯಬಲದ ಅವಶ್ಯಕತೆಯಿರುವ ವಿಧಾನಸಬೆಯಲ್ಲಿ ಕೇವಲ 119 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ಚುನಾವಣೆಗೆ ಹೋಗುವ ಮೊದಲೇ ಡಿಎಂಕೆ ಸೋಲೊಪ್ಪಿಕೊಂಡಿದೆ. ಇನ್ನು ಆಡಳಿತ ವಿರೋಧಿ ಅಲೆಯ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಜಯಲಲಿತಾ ಮುನ್ನಡೆದಿದ್ದಾರೆ. ಅಮ್ಮನ ಗೆಲುವು ಬಹುತೇಕ ನಿಚ್ಚಳ. 

Proudly powered by Blogger
Theme: Esquire by Matthew Buchanan.
Converted by LiteThemes.com.