ಕೇರಳದಲ್ಲಿ ಒಡೆದ ಮನೆಯಾಗಿರುವ ಎಡರಂಗ - ಕಾಂಗ್ರೆಸ್ಗೆ ವೀಳ್ಯ


ಕೇರಳ - ದೇಶದ ದಕ್ಷಿಣ ತುದಿಯ ಸುರಸುಂದರ ಕಡಲತಡಿಯ ದೇವರ ನಾಡು. ಇಲ್ಲಿನ ರಾಜಕೀಯ ವೈಶಿಷ್ಠ್ಯವೆಂದರೆ 1957ರಲ್ಲಿ ಭಾರತದ ಮೊದಲ ಕಾಂಗ್ರೆಸೇತರ ಸರ್ಕಾರ ರಚನೆಯಾಗಿದ್ದು ಇಲ್ಲೇ. ಇ.ಎಮ್.ಎಸ್.ನಂಬೂದಿರಿಪಾಡ್ರವರ ನೇತೃತ್ವದಲ್ಲಿ ಅಂದು ಕಮ್ಯೂನಿಸ್ಟರು ಸರ್ಕಾರ ರಚಿಸಿದರು. ಇದು ವಿಶ್ವದಲ್ಲೇ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಕಮ್ಯೂನಿಸ್ಟ್ ಸರ್ಕಾರವೆಂಬ ಹೆಗ್ಗಳಿಕೆಗೂ ಪಾತ್ರ. ಅಂದಿನಿಂದ ರಾಜ್ಯದಲ್ಲಿ ಕಮ್ಯೂನಿಸ್ಟರ ಪ್ರಾಬಲ್ಯ ಬೆಳೆದು ಬಂದಿದೆ. ಈಗ ಕೇರಳದಲ್ಲಿ ವಿ.ಎಸ್.ಅಚ್ಯುತಾನಂದನ್ ನೇತೃತ್ವದ ಎಲ್.ಡಿ.ಎಫ್ ಕೂಟ ಅಧಿಕಾರದ ಚುಕ್ಕಾಣಿ ಹಿಡಿದಿದೆ. ರಾಜ್ಯದ ರಾಜಕೀಯ ಬಹುವರ್ಷಗಳಿಂದ ದ್ವಿಕೇಂದ್ರಿತವಾಗಿದೆ. ಸಿ.ಪಿ.ಐ.(ಎಂ) ನೇತೃತ್ವದ ಎಡರಂಗ ಒಂದು ಕಡೆಯಾದರೆ ಮತ್ತೊಂದು ಕಡೆ ಅಷ್ಟೇ ಶಕ್ತಿಶಾಲಿಯಾದ ಕಾಂಗ್ರೆಸ್ ನೇತೃತ್ವದ ಯು.ಡಿ.ಎಫ್. ಮೈತ್ರಿಕೂಟ ಮತ್ತೊಂದೆಡೆ. ಇಲ್ಲಿ ಇಬ್ಬರೂ ಸಮಬಲರು. ಒಂದು ಬಾರಿ ಇವರು ಮತ್ತೊಂದು ಬಾರಿ ಅವರೂ ಅಧಿಕಾರ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಇದೇ ಟ್ರೆಂಡ್ ಅನ್ನು ಅನುಸರಿಸುವುದಾದರೆ ಈ ಬಾರಿಯ ಅವಕಾಶ ಯುಡಿಎಫ್ಗೆ. ಚುನಾವಣೆ ಘೋಷನೆಯಾದಾಗ ಬಹುತೇಕರು ಹಾಗೆಯೇ ಭಾವಿಸಿದ್ದರು. ಇಂದೂ ಸಹ ಬಹುತೇಕ ಮಾಧ್ಯಮ ಸರ್ವೇಗಳು ಯುಡಿಎಫ್ಗೆ ದಿಗ್ವಿಜಯವನ್ನೇ ಸಾರುತ್ತಿವೆ. 140 ಸದಸ್ಯ ಬಲದ ವಿಧಾನಸಭೆಯಲ್ಲಿ ಒಬ್ಬರು 77-90 ಸ್ಥಾನ ನೀಡಿದರೆ, ಮತ್ತೊಬ್ಬರು ಏಕದಂ 100 ಸ್ಥಾನಗಳು ಯುಡಿಎಫ್ಗೆ ಎಂದು ಉದ್ಗಾರ ತೆಗೆಯುತ್ತಿದ್ದಾರೆ. 2006ರಲ್ಲಿ ಯುಡಿಎಫ್ ಅಧಿಕಾರದಲ್ಲಿತ್ತು. ಆಗ ಅಚ್ಯುತಾನಂದನ್ ಅವರ ನೇತೃತ್ವದ ಎಲ್ಡಿಎಫ್ ಕಾಂಗ್ರೆಸ್ಸನ್ನು ಅಧಿಕಾರದಿಂದ ಕೆಳಗಿಳಿಸಿ ಅಧಿಕಾರದ ಗದ್ದುಗೆಯನ್ನು ಕೈವಶ ಮಾಡಿಕೊಂಡಿತ್ತು. ಆಗ ಎಲ್ಡಿಎಫ್ಗೆ 99 ಸ್ತಾನಗಳು ಮತ್ತು ಯುಡಿಎಫ್ಗೆ ಕೇವಲ 40 ಸ್ಥಾನಗಳು ಬಂದಿದ್ದವು. 

ಕಳೆದೊಂದೂವರೆ ದಶಕದಿಂದೀಚೆಗೆ ಕೇರಳ ರಾಜಕೀಯದಾಗಸದಲ್ಲಿ ಅಚ್ಯುತಾನಂದನ್ರ ಉದಯವಾಗಿದೆ. ಭ್ರಷ್ಟಾಚಾರದ ವಿರುದ್ಧ ಸತತ ಹೋರಾಟದ ಮೂಲಕ ಅಚ್ಯುತಾನಂದನ್ ಮನೆ ಮಾತು. ಇದೇ ಅವರನ್ನು ಮುಖ್ಯಮಂತ್ರಿ ಗಾದಿಗೆ ತಂದು ಕೂರಿಸಿದ್ದು. ನಂತರದ ಈ ಸರ್ಕಾರ ತಾನಿತ್ತ ಅನೇಕ ಭರವಸೆಗಳನ್ನು ಪೂರೈಸಿದೆ. ಸರ್ಕಾರದ ಆಡಳಿತದ ಬಗ್ಗೆ ಒಳ್ಳೆಯ ಮಾತುಗಳೂ ಕೇಳಿ ಬಂದಿದೆ. ಆದರೆ ಭ್ರಷ್ಟಾಚಾರದ ಬಗ್ಗೆ ಅಚ್ಯುತಾನಂದನ್ ಸಾರಿದ್ದ ಸಮರ ಅಷ್ಟು ಯಶಸ್ವಿಯಾಗಿಲ್ಲ. ಮರಳು, ಶಿಕ್ಷಣ, ಸಾರಾಯಿ, ರಿಯಲ್ ಎಸ್ಠೇಟ್ ಮಾಫಿಯಾಗಳ ವಿರುದ್ಧದ ಇವರ ಸಮರದ ಹೊರತಾಗಿಯೂ ಜನ ಇನ್ನೂ ಪೀಡಿತರು. ಹಾಗಾಗಿ ಒಂದು ರೀತಿಯ ಭ್ರಮನಿರಸನ ಬಂದಿದೆ. ಇನ್ನು ಸಹಜವಾಗಿಯೇ ಒಂದು ಪ್ರಬಲ ಆಡಳಿತ ವಿರೋಧಿ ಅಲೆ ಇದೆ. ಇನ್ನು ಆಡಳಿತ ಪಕ್ಷವೂ ಒಂದೇ ತಾಟಿನ ಮೇಲೆ ನಿಂತಿಲ್ಲ. ಸಿ.ಪಿ.ಐ.(ಎಂ) ಪಕ್ಷದ ಕೇರಳ ಘಟಕ ಕಳೆದ ದಶಕದಿಂದೀಚೆಗೆ ಅಚ್ಯುತಾನಂದನ್ ಮತ್ತು ಪಿನರಯಿ ವಿಜಯನ್ರ ಶೀತಲ ಸಮರದಿಂದ ನಲುಗಿದೆ. 2006ರಲ್ಲಾದಂತೆ ಈ ಬಾರಿಯೂ ಮೊದಲಿಗೆ ಮುಖ್ಯಮಂತ್ರಿ ವಿಎಸ್. ಅಚ್ಯುತಾನಂದನ್ ಅವರಿಗೆ ಪಕ್ಷ ಟಿಕೆಟ್ ಅನ್ನೇ ನೀಡಲಿಲ್ಲ. ಕೇರಳದ ರಸ್ತೆಗಳಲ್ಲಿ ಧರಣಿಗಳಾದವು. ಹೋದ ಬಾರಿಯಂತೆಯೇ ಈ ಒತ್ತಡಕ್ಕೆ ಮಣಿದ ಕಮ್ಯೂನಿಸ್ಟ್ ಹಿರಿಯರು ಎಲ್ಡಿಎಫ್ನ ನೇತೃತ್ವವನ್ನು ಮತ್ತೆ ಅಚ್ಯುತಾನಂದನ್ ಅವರಿಗೆ ನೀಡಿದೆ. ಸಂಘಟನಾ ಶಿಸ್ತಿಗೆ ಹೆಸರಾದ ಕಮ್ಯೂನಿಸ್ಟ್ ಪಕ್ಷದಲ್ಲಿ ಅಚ್ಯುತಾನಂದನ್ ಮೊದಲಿಂದಲೂ ಒಬ್ಬ ರೆಬೆಲ್. ಅವರದು ವ್ಯಕ್ತಿ ಕೇಂದ್ರಿತ ಕಾರ್ಯಕ್ರಮಗಳು. ಆದ್ದರಿಂದಲೆ ಅವರನ್ನು ಪಕ್ಷದ ಪಾಲಿಟ್ ಬ್ಯೂರೋ ಸಹ ತುಳಿಯಲೇ ಯತ್ನಿಸುತ್ತದೆ. ಆದರೆ ಅವರಿಗಿರುವ ಅಖಂಡ ಜನ ಬೆಂಬಲದ ಮುಂದೆ ಮೂಕ ಮೂಕ. ಅಸಲಿಗೆ ಈ ಬಾರಿಯೂ ಕೂಡ ಯುಡಿಎಫ್ನ ಗೆಲುವು ನಿಶ್ಚಿತವೇ ಆಗಿತ್ತು. ಅದನ್ನು ಎಲ್ಲೋ ಒಂದು ಕಡೆ ಕಮ್ಯೂನಿಸ್ಟರು ಒಪ್ಪಿದ್ದರೋ ಏನೋ? ಆದರೆ ಎಲ್ಡಿಎಫ್ಗೆ ಅಚ್ಯುತಾನಂದನ್ ನಾಯಕತ್ವ ಸಿಕ್ಕಿದ ಮೇಲೆ ಎಲ್ಲವೂ ತಲೆಕೆಳಗು. ಅವರ ಸುಡುಗಾಳಿಯಂತಹ ಪ್ರಚಾರದಬ್ಬರದಲ್ಲಿ ಯುಡಿಎಫ್ನ ಕೋಟೆ ಬಿರುಕು ಬಿಡುತ್ತಿದೆ. ಅವರಿಗಿರುವ ಜನ ಬೆಂಬಲವನ್ನು ಎಲ್ಡಿಎಫ್ಗೆ ಮತಗಳಾಗಿ ಅವರು ಪರಿವರ್ತಿಸಬಹುದ? ಅದಕ್ಕೆ ಕಮ್ಯೂನಿಸ್ಟ್ ಪಕ್ಷ ಅವಕಾಶ ಮಾಡಿಕೊಡುತ್ತದಾ? ಅದೇ ಸದ್ಯದ ಕುತೂಹಲ.

ಇನ್ನು ಈ ಚುನಾವಣೆಯಲ್ಲಿ ಒಂದು ಪ್ರಮುಖ ಇಶ್ಯೂ ಭ್ರಷ್ಟಾಚಾರ. ಕಮ್ಯೂನಿಸ್ಟ್ ನಾಯಕ ಪಿನರಯಿ ವಿಜಯನ್ ಎಸ್.ಎನ್.ಸಿ. ಲವ್ಲೀನ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಸಿ.ಬಿ.ಐ. ವಿಚಾರಣೆ. ಈ ಕೇಸು ರಾಜಕಾರಣದ ಟಾಕಿಂಗ್ ಪಾಯಿಂಟ್ ಆಗಿ ಕೂತಿದೆ. ಅಚ್ಯುತಾನಂದನ್ ಈ ವಿಷಯದಲ್ಲಿ ನೈತಿಕವಾದುದೊಂದು ನಿಲುವು ತೆಗೆದುಕೊಂಡು ಪಿನರಯಿ ವಿಜಯನ್ರ ಕೇಸಿನ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲವೆಂದು ಹೇಳಿ ಕೂತು ಬಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಪ್ರಾಮಾಣಿಕತೆಗೆ ಹೆಸರಾದ ಭಾರತೀಯ ಕಮ್ಯೂನಿಸ್ಟ್ ಪಕ್ಷಗಳ ಹಿರಿಯನೊಬ್ಬನ ಮೇಲೆ ಭ್ರಷ್ಟಾಚಾರದ ಆರೋಪದ ಮೇಲೆ ಸಿ.ಬಿ.ಐ. ತನಿಖೆ ನಡೆಯುತ್ತಿದೆ. ಇದು ಕಮ್ಯೂನಿಸ್ಟರ ಕ್ರೆಡಿಬಲಿಟಿಗೆ ದೊಡ್ಡ ಹೊಡೆತವೇ ಸರಿ. ಆದರೆ ಅತ್ತ ಕೂಡ ಕಾಂಗ್ರೆಸ್ನ ಆರ್. ಬಾಲಕೃಷ್ಣ ಪಿಳ್ಳೈ ಅವರ ವಿರುದ್ಧದ ದಶಕಗಳ ಭ್ರಷ್ಟಾಚಾರದ ಕೇಸಿನ ತೀರ್ಪು ಬಂದು ಅವರು ಜೈಲು ಸೇರಿದ್ದಾರೆ. ಅತ್ತ ಪಾಮೋಲೀನ್ ರಫ್ತು ಹಗರಣದಲ್ಲಿ ವಿರೋಧ ಪಕ್ಷದ ನಾಯಕ ಉಮ್ಮನ್ ಚಾಂಡಿಯ ಹೆಸರೂ ಕೇಳಿ ಬರುತ್ತಿದೆ. ಅಚ್ಯುತಾನಂದನ್ ಇದೆಲ್ಲದರ ವಿರುದ್ಧ ನಿಂತಿದ್ದಾರೆ. ಹಾಗಾಗಿ ಅವರ ಮೇಲೂ ಕೆಸರು ಚೆಲ್ಲುವ ಪ್ರಯತ್ನಗಳು ನಡೆದೇ ಇವೆ. ಅವರನ್ನು ಹಣಿಯಲಾರದವರು ಅವರ ಮಗನ ವಿರುದ್ಧ ಅನೇಕ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದ್ದಾರೆ.

ಎಡರಂಗದ ಸ್ಥಿತಿ ಹೀಗಿರುವಾಗ ವಿರೋಧ ಪಕ್ಷವಾದ ಕಾಂಗ್ರೆಸ್ನ ಸ್ಥಿತಿಯನ್ನೊಮ್ಮೆ ಅವಲೋಕಿಸಿದರೆ ಅಲ್ಲಿ ಆಶ್ಚರ್ಯ ಕಾದಿದೆ. ಯಾವಾಗಲೂ ಅಂತರ್ಜಗಳಗಳಿಂದ ಪೀಡಿತವಾದ ಕಾಂಗ್ರೆಸ್ನ ಮನೆ ಸದ್ಯಕ್ಕೆ ಸುಧಾರಿಸಿರುವಂತೆ ಕಾಣುತ್ತಿದೆ. ಸದ್ಯ ಕೇರಳ ಕಾಂಗ್ರೆಸ್ನ ನಾಯಕ ಒಮೆನ್ ಚಾಂಡಿಗೆ ರಾಜ್ಯಾದ್ಯಂತ ಮಾಸ್ ಲೀಡರ್ ಎಂಬ ಹೆಸರಿದೆ. ಮತ ಸೆಳೆಯುವ ತಾಕತ್ತಿದೆ, ಜನಪ್ರಿಯತೆಯಿದೆ. ಇನ್ನು ರಮೇಶ್ ಚೆನ್ನಿತಾಲಾನಂತಹ ರಾಜಕೀಯ ಚಾಣಕ್ಯನ ಸೇವೆ ಕಾಂಗ್ರೆಸ್ಗೆ ಲಭ್ಯವಿದೆ. ಮೇಲಾಗಿ ಇಲ್ಲಿ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಮಾತಾಡಲು ವಿಷಯಗಳಿವೆ - ಕಮ್ಯೂನಿಸ್ಟರ ಭ್ರಷ್ಟಾಚಾರ, ಒಳಜಗಳ, ಕೇಂದ್ರದ ಯು.ಪಿ.ಎ. ಸಕರ್ಾರದ ಸಾಧನೆ, ಅಣು ಒಪ್ಪಂದದ ಸಂದರ್ಭದಲ್ಲಿ ಕಮ್ಯೂನಿಸ್ಟರ ನಡವಳಿಕೆ ಹೀಗೆ ಹಲವಾರಿವೆ. ಆದ್ದರಿಂದ ಕಾಂಗ್ರೆಸ್ನಲ್ಲಿ ಅಮಿತ ಉತ್ಸಾಹವೂ ಆತ್ಮವಿಶ್ವಾಸವೂ ಎದ್ದು ಕಾಣುತ್ತಿದೆ. ಇನ್ನು ಕೇರಳದ ರಾಜಕಾರಣ ಮೊದಲಿಂದಲೂ ದ್ವಿಕೇಂದ್ರೀಯ. ಇಲ್ಲಿ ಗೆಲುವು ಸೋಲಿನ ನಡುವಿನ ಅಂತರ ಕೇವಲ ಶೇ. 2-4 ರಷ್ಟು ಮತ ಪ್ರಮಾಣ ಅಷ್ಟೆ! ಈ ವಿಷಯದಲ್ಲಿ ಕೇರಳದ್ದು ಎಂದಿಗೂ ಫೋಟೋ ಫಿನಿಷ್. ಆದರೆ ಈ ಅಲ್ಪ ಪ್ರಮಾಣದ ಏರುಪೇರು ಸ್ಥಾನಗಳ ಲೆಕ್ಕಾಚಾರದಲ್ಲಿ ಅತಿ ಹೆಚ್ಚು ದೃಗ್ಗೋಚರವಾಗುತ್ತದೆ. ಇನ್ನು 2006ರ ನಂತರದ ಚುನಾವಣೆಗಳನ್ನು ನಾವು ಗಮನಿಸುವುದೇ ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ಇರುವ 20 ಸ್ಥಾನಗಳಲ್ಲಿ 16 ಸ್ಥಾನಗಳನ್ನು ಯುಡಿಎಫ್ ತನ್ನ ಮುಡಿಗೇರಿಸಿಕೊಂಡಿದೆ. ನಂತರ 2010ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಯುಡಿಎಫ್ ತನ್ನ ಪ್ರಬಲ್ಯ ಮೆರೆದಿದೆ. ಹಾಗಾಗಿ ಟ್ರೆಂಡ್ ಯುಡಿಎಫ್ನ ಪರ ಇದೆ ಎಂಬುದು ಸುಸ್ಪಷ್ಟ.

Proudly powered by Blogger
Theme: Esquire by Matthew Buchanan.
Converted by LiteThemes.com.