ಅರುಣಾ ಶಾನುಭಾಗ ಎಂಬ ಪ್ರಶ್ನಾರ್ಥಕ ಚಿಹ್ನೆಗೆ ಉತ್ತರವಾಗಿ ನಮ್ಮ ಸಮಾಜ ಇಟ್ಟ ದಾಪುಗಾಲು



ಅರುಣಾ ಶಾನುಭಾಗ ಒಂದು ಪ್ರಶ್ನಾರ್ಥಕ ಚಿಹ್ನೆ. ನಮ್ಮ ಸಮಾಜಕ್ಕೆ, ಅದರಲ್ಲಿನ ಕ್ರೌರ್ಯಕ್ಕೆ, ಸೋಹನಲಾಲಲನ ವಿಕೃತಿಗೆ, ಆತನಿಗೆ ಸರಿಯಾದ ಶಿಕ್ಷೆಯನ್ನೂ ವಿಧಿಸಲಾಗದ ನಮ್ಮ ವ್ಯವಸ್ಥೆಗೆ, ಆಕೆಯನ್ನು ಗುಣಪಡಿಸಲಾಗದ ಅತ್ಯಾಧುನಿಕ ವೈದ್ಯಕೀಯ ಶಾಸ್ತ್ರಕ್ಕೆ, ಆ ದೇವರ ಅಸ್ತಿತ್ವಕ್ಕೆ, ಇದ್ದರೆ ಆತನ ನ್ಯಾಯಾನ್ಯಾಯ ವಿವೇಚನೆಗೆ, ಕರ್ಮ ಸಿದ್ಧಾಂತಕ್ಕೆ, ಜೀವನದ ಉದ್ದೇಶ ಮತ್ತು ಅರ್ಥಕ್ಕೆ, ಬದುಕು ಸಾವುಗಳ ನಮ್ಮ ಪರಿಕಲ್ಪನೆಗಳಿಗೆ, ನಮ್ಮ ಆತ್ಮಸಾಕ್ಷಿಗೆ..ಎಲ್ಲದಕ್ಕೂ ಆಕೆ ಪ್ರಶ್ನಾರ್ಥಕ ಚಿಹ್ನೆ. 38 ವರ್ಷಗಳ ಹಿಂದೆ ಮಾನಭಂಗಕ್ಕೊಳಗಾಗಿ ಜೀವಚ್ಛವವಾದ ಅರುಣಾ ಶಾನುಭಾಗಳಿಗೆ ದಯಾಮರಣ ನೀಡಬೇಕೆಂದು ಲೋಕಕ್ಕೆ ಅರುಣಳ ಕಥೆ ಹೇಳಿದ ಲೇಖಕಿ ಪಿಂಕಿ ವಿರಾನಿ ಉಚ್ಛನ್ಯಾಯಾಲಯದ ಮೆಟ್ಟಿಲು ಹತ್ತುವುದರೊಂದಿಗೆ ದಯಾಮರಣದ ಚರ್ಚೆ ಮತ್ತೆ ಶುರುವಾಗಿದೆ. 

ಸಾವು ಕಾಲದ ನಿಯಮ. ಅದು ಸದಾ ದಿಗ್ವಿಜಯಿ. ಅದರ ಮುಂದೆ ಎಲ್ಲರೂ ಸೋಲೊಪ್ಪುವವರೇ. ಸಹಜವಾಗಿ ಸಾವು ಬಂದು ಬದುಕನ್ನು ಸೋಲಿಸಿದರೆ, ಕೆಲವೊಮ್ಮೆ ಸಾವಿನ ಸೋಲಿನಲ್ಲಿ ಬದುಕಿನ ಸೋಲೂ ಅಡಗಿರುತ್ತದೆ.
ಮರತೇ ಹೇಂ ಆರ್ಜೂ ಮೈನ್ ಕೀ, 
ಮೌತ್ ಆತೀ ಹೈ ಪರ್ ನಹೀಂ ಆತೀ 
(i die everyday with a desire to die, but it takes its own time!). 
ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅರುಣಾ ಶಾನುಭಾಗ್ ಕುರಿತ ತಮ್ಮ ತೀರ್ಪನ್ನು ಮಿರ್ಜಾ ಘಾಲಿಬ್ನ ಈ ದ್ವಿಪದಿಯಿಂದ ಪ್ರಾರಂಭಿಸುತ್ತಾರೆ. ದಯಾಮರಣ ಎನ್ನುವುದನ್ನು ನಮ್ಮ ಸಮಾಜ ಒಪ್ಪುವುದು ಕಷ್ಟ. ಸಾಯುವವನಿಗೂ ನೀರುಣಿಸುವ ಸಂಸ್ಕೃತಿಯ ನಾಗರೀಕತೆಗೆ ದಯಾಮರಣ ಬೆಚ್ಚಿಬೀಳಿಸಬಹುದು. ಆದರೆ ದಯಾಮರಣ ನಾಗರೀಕತೆಯ ನಿಸ್ಸಾಹಯಕ ಹತಾಶೆಯ ಅಭಿವ್ಯಕ್ತಿ. ವಾಸ್ತವತೆಗಳ ನೆಲೆಗಟ್ಟಿನಲ್ಲಿ ನಾವು ಇಂದು ಇಚ್ಛಾಮರಣ ಮತ್ತು ದಯಾಮರಣಗಳನ್ನು ವಿಶ್ಲೇಶಿಸುವ ಅಗತ್ಯ ಎಷ್ಟಾದರೂ ಇದೆ. ಅದಕ್ಕೆ ಅರುಣಳ ತೀರ್ಪು ಸಮರ್ಥ ವೇದಿಕೆಯನ್ನೊದಗಿಸುತ್ತದೆ. 

ಈಗ ಬಿಂಬಿತವಾಗಿರುವಂತೆ ಉಚ್ಛನ್ಯಾಯಾಲಯ ದಯಾಮರಣವನ್ನು ಸಂಪೂರ್ಣ ತಳ್ಳಿಹಾಕಿಲ್ಲ. ಬದಲಿಗೆ ಮೊಟ್ಟಮೊದಲ ಬಾರಿಗೆ ವಾಸ್ತವತೆಯ ನೆಲೆಗಟ್ಟಿನಲ್ಲಿ ನಮ್ಮ ನ್ಯಾಯಾಲಯ ಪರೋಕ್ಷ ದಯಾಮರಣಕ್ಕೆ ತನ್ನ ತಾತ್ವಿಕ ಒಪ್ಪಿಗೆ ಸೂಚಿಸಿದೆಯಷ್ಟೇ ಅಲ್ಲದೆ ಅದರ ಅಮಲಿಗೆ ಒಂದು ವ್ಯವಸ್ಥೆಯನ್ನೂ ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಅರುಣಾ ಶಾನುಭಾಗ ಎಂಬ ಪ್ರಶ್ನಾರ್ಥಕ ಚಿಹ್ನೆಗೆ ಉತ್ತರವಾಗಿ ನಮ್ಮ ಸಮಾಜ ಇಟ್ಟ ದಾಪುಗಾಲಿದು. ಈ ತೀರ್ಪು ಪ್ರತ್ಯಕ್ಷ ಮತ್ತು ಪರೋಕ್ಷ ದಯಾಮರಣಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವನ್ನು ಗುರುತಿಸುತ್ತದೆ. ಪ್ರತ್ಯಕ್ಷ ದಯಾಮರಣ ಅಂದರೆ ರೋಗಿಯನ್ನು ಸಾಯಿಸುವ ಉದ್ದೇಶದಿಂದ ವೈದ್ಯರೇ ವಿಷಯುಕ್ತ ಚುಚ್ಚುಮದ್ದನ್ನು ನೀಡುವುದು. ಇದು ನೆಥೆರ್ಲ್ಯಾಂಡ್ಸ್, ಸ್ವಿಟ್ಜರ್ಲ್ಯಾಂಡ್ ಮತ್ತಿತರ ಅನೇಕ ದೇಶಗಳಲ್ಲಿ ಕಾನೂನಿನ ಪ್ರಕಾರ ಸಮ್ಮತ. ಆದರೆ ವಿಶ್ವದ ಬಹುತೇಕ ದೇಶಗಳಲ್ಲಿ ಇದು ಕೊಲೆ, ಭಾರತದಲ್ಲೂ ಕೂಡ. ಇದನ್ನು ಯಾರೂ ಒಪ್ಪಲಾರರು. ಉಚ್ಛನ್ಯಾಯಾಲಯ ಕೂಡ ಇದನ್ನು ಎತ್ತಿಹಿಡಿದಿದೆ. ಈ ರೀತಿಯ ಪ್ರತ್ಯಕ್ಷ ಕ್ರಮವೇ ದಯಾಮರಣದ ಏಕೈಕ ವಿಧಾನ ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಮನೆ ಮಾಡಿದೆ. ಆದರೆ ನ್ಯಾಯಾಲಯ ಮತ್ತೊಂದು ವಿಧಾನದ ದಯಾಮರಣವನ್ನು ಗುರುತಿಸುತ್ತದೆ. ಇದು ಪರೋಕ್ಷ. ರೋಗಿಯ ಸ್ಥಿತಿ ಉಲ್ಬಣಾವಸ್ಥೆಗೆ ಹೋದಾಗ ಚೇತರಿಸಿಕೊಳ್ಳುವ ಸಂಭವದ ನಂಬಿಕೆಯೇ ಇಲ್ಲದಾದಾಗ, ಜೀವ ಶವಗಳ ನಡುವಿನ ಆ ಹೋಯ್ದಾಟದ ನಡುವಿನ ಕ್ಷಣದಲ್ಲಿ life support systemಗಳ ಮುಖೇನ ಹೃದಯ, ಶ್ವಾಸಕೋಶ ಎಲ್ಲವನ್ನೂ ಯಂತ್ರಪ್ರತ್ಯಯಗೊಳಿಸಿ ಜೀವದ ಭ್ರಮೆಯನ್ನು ಮುಂದುವರೆಸುವ ನಮ್ಮ ಅತ್ಯಾಧುನಿಕ ವೈದ್ಯಕೀಯ ಶಾಸ್ತ್ರದ ಉಮೇದನ್ನು ತುಂಡರಿಸುವುದು. ಇದೂ ದಯಾಮರಣವೇ ಅಲ್ಲವೆ? ಪ್ರತ್ಯಕ್ಷವಲ್ಲ ಪರೋಕ್ಷ. ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಇದು ಮಾನ್ಯ ಎಂದು ತೀರ್ಪಿತ್ತಿದೆ ನಮ್ಮ ಉಚ್ಛ ನ್ಯಾಯಾಲಯ. 

ಇದೇ ಕೋವಿನಲ್ಲಿ ಅರುಣಾ ಶಾನುಭಾಗರ ಪರೋಕ್ಷ ದಯಾಮರಣಕ್ಕೂ ಉಚ್ಛ ನ್ಯಾಯಾಲಯ ತಾತ್ವಿಕವಾಗಿ ಒಪ್ಪಿದೆ. ಆದರೆ ಈ ಕುರಿತು ಅರ್ಜಿ ಸಲ್ಲಿಸಿರುವ ಪಿಂಕಿ ವಿರಾನಿ ಅರುಣರ ಪರ ನಿರ್ಧಾರ ಕೈಗೊಳ್ಳಲು ಅನರ್ಹಳೆಂದೂ ಕುಟುಂಬದ ಅನುಪಸ್ಥಿತಿಯಲ್ಲಿ ಆಕೆಯನ್ನು ತಮ್ಮ ಮನೆಯೊಳಗೊಬ್ಬಳೆಂಬಂತೆ ಸತತ 38 ವರ್ಷಗಳಿಂದ ಆರೈಕೆ ಮಾಡಿಕೊಂಡು ಬಂದಿರುವ ಕೆಇಎಂ ಆಸ್ಪತ್ರೆಗೆ ಮಾತ್ರ ಆ ಅಧಿಕಾರವಿದೆಯೆಂದು ಹೇಳಿದೆ. ಸದ್ಯ ಕೆಇಎಂ ಆಸ್ಪತ್ರೆ ಅರುಣಾ ಶಾನುಭಾಗರಿಗೆ ದಯಾಮರಣ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ವಜಾಗೊಳಿಸಿದೆ. ಮುಂದೆಂದಾದರೂ ಕೆಇಎಂ ಆಸ್ಪತ್ರೆಯವರು ಅರುಣಾ ಶಾನುಭಾಗರಿಗೆ ದಯಾಮರಣ ನೀಡುವ ಬಗ್ಗೆ ತಮ್ಮ ಮನಸ್ಸು ಬದಲಿಸಿಕೊಂಡರೆ ಅವರು ಮಹಾರಾಷ್ಟ್ರದ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಮುಂದುವರೆಯಬಹುದೆಂದೂ ಹೇಳಿದೆ.

ಇದೇನೂ ನಮಗೆ ನೂತನ ಕಲ್ಪನೆಯಲ್ಲ. ನೀವೇ ಯೋಚಿಸಿ. ಇಂದು ಸರ್ಕಾರಿಯೂ ಸೇರಿದಂತೆ ಮುಖ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ರೋಗದ ಉಲ್ಬಣಾವಸ್ಥೆ ಒಂದು ಹಂತ ಮೀರಿದಂತೆ, ಜೀವದ ಆಸೆ ಹೋಗುತ್ತಿದ್ದಂತೆಯೇ ವೈದ್ಯರೇ ಕೈಯೆತ್ತಿಬಿಡುತ್ತಾರೆ. ಇನ್ನು ಇಲ್ಲಿ ಮಾಡುವುದೇನೂ ಇಲ್ಲ. ಎಷ್ಟು ದಿನ ಇದ್ದರೆ ಅಷ್ಟು ದಿನ ಇರಲಿ. ಮನೆಯಲ್ಲಿಯೇ ಪ್ರಾಣ ಹೋಗಲಿ. ಕರೆದುಕೊಂಡು ಹೋಗಿ ಎಂದು ಸಾಗ ಹಾಕುವುದಿಲ್ಲವೆ? ಇದನ್ನು ಎಷ್ಟು ಜನ ಒಪ್ಪಿ ನಡೆದಿಲ್ಲ? ಇನ್ನು ಜೀವ ಶವದ ನಡುವಿನ ಹೊಯ್ದಾಟದ ಕ್ಷಣವನ್ನು ಸ್ಥಂಬೀಭೂತಗೊಳಿಸಿ ದೇಹವನ್ನು ಯಂತ್ರಪ್ರತ್ಯಯಗೊಳಿಸಿ ಸಾವನ್ನು ಮುಂದೂಡುವುದೂ, ಒಂದು ಹಂತದ ನಂತರ ಸೋಲೊಪ್ಪಿಕೊಂಡು ಸದ್ದಿಲ್ಲದೆ ಈ ಯಂತ್ರಗಳನ್ನು ಸ್ವಿಚ್ ಆಫ್ ಮಾಡಿಬಿಡುವುದೂ ನಡೆದಿಲ್ಲವೆ? ಯತ್ಥೇಚ್ಛವಾಗಿ ನಡೆದಿದೆ. ಇದೇ ಪರೋಕ್ಷ ದಯಾಮರಣ. ಕೆಲವೊಂದು ವಿಶಿಷ್ಟ ಸಂದರ್ಭಗಳಲ್ಲಿ ಇದನ್ನು ನ್ಯಾಯಾಲಯ ಮಾನ್ಯಗೊಳಿಸಿದೆ. ಇದರ ಅಮಲಿಗೆ ಒಂದು ವ್ಯವಸ್ಥೆಯನ್ನೂ ಸ್ಥಾಪಿಸಿದೆ. ಇನ್ನು ಮುಂದೆ ಈ ರೀತಿಯ ದಯಾಮರಣವೂ ಅನಿರ್ಭಂಧಿತವಲ್ಲ. ಹೀಗೆ ವೈದ್ಯಕೀಯವನ್ನು ಹಿಂಪಡೆಯುವ ಮೊದಲು ರೋಗಿ ಅಥವಾ ರೋಗಿಯ ಸಂಬಂಧಿಗಳು ಹೈಕೋರ್ಟ್ರ್ನಲ್ಲಿ ಅರ್ಜಿ ಸಲ್ಲಿಸಬೇಕು. ಒಬ್ಬ ತಜ್ಞ ವೈದ್ಯ, ಮನೋರೋಗತಜ್ಞ ಮತ್ತೊಬ್ಬ ನರರೋಗತಜ್ಞರನ್ನೊಳಗೊಂಡ ವೈದ್ಯಕೀಯ ತಂಡ ರೋಗಿಯನ್ನು ಕೂಲಂಕುಷವಾಗಿ ಪರೀಕ್ಷಿಸಿ ರೋಗಿ ಚೇತರಿಸಿಕೊಳ್ಳುವ ಯಾವುದೇ ಆಸೆಯಿಲ್ಲದೆ ಪರೋಕ್ಷ ದಯಾಮರಣಕ್ಕೆ ಶಿಫಾರಸ್ಸು ಮಾಡಿದರೆ, ಸಂಬಂಧಿತ ಎಲ್ಲ ವ್ಯಕ್ತಿಗಳ ಅಭಿಪ್ರಾಯ ಕೇಳಿ ಹೈಕೋರ್ಟ್ ತೀರ್ಪು ನೀಡುತ್ತದೆ. ಅದರನ್ವಯವೇ ನಡೆದುಕೊಳ್ಳತಕ್ಕದ್ದು. ದಯಾಮರಣವನ್ನು ಕಾನೂನಿನಂತೆ ಮಾನ್ಯ ಮಾಡಲು ಇರುವ ವಿರೋಧಕ್ಕೆ ಇರುವ ಮತ್ತೊಂದು ಪ್ರಮುಖ ಕಾರಣ ಇದರ ದುರ್ಬಳಕೆಯ ಭಯ. ರೋಗಿಯ ಆಸ್ತಿಗೋ, ಹಣವ್ಯಯವನ್ನು ನಿವಾರಿಸುವ ದುರದ್ದೇಶದಿಂದಲೋ ಇದನ್ನು ಪ್ರಯೋಗಿಸಬಹುದು ಎಂದು. ಈಗ ಪ್ರತಿ ಪ್ರಕರಣವೂ ನ್ಯಾಯಾಲಯದ ವಿಮರ್ಶೆಗೊಳಪಡುವುದರಿಂದ ಇದನ್ನೂ ತಪ್ಪಿಸಬಹುದಾಗಿದೆ. ಇದು ಒಂದು ನೂತನ ವ್ಯವಸ್ಥೆ. ಶುರುವಿನಲ್ಲಿ ದೋಷಪೂರಿತವಾಗಿರುವುದೂ ದಿಟ. ಕಾಲದೊಂದಿಗೆ ಸಂಸ್ಥೀಕರಣಗೊಂಡ ಹಾಗೇ ಅದೂ ಪಕ್ವಗೊಳ್ಳುತ್ತದೆ.

ಈ ತೀರ್ಪು ಇದುವರೆಗೂ ಸದ್ದಿಲ್ಲದೆ ಅನಿರ್ಭಂಧಿತವಾಗಿ ಪಾಲಿಸಲಾಗುತ್ತಿದ್ದ ಒಂದು ಪ್ರಕ್ರಿಯೆಯನ್ನು ಕಟ್ಟುನಿಟ್ಟಿನ ನಿಬಂಧನೆಗಳಿಗೊಳಪಡಿಸಿ  ಅದನ್ನು ಮಾನ್ಯ ಮಾಡಿದೆ. ಹುಸಿ ಭಾವುಕತೆಗಳನ್ನು ತೊಡೆದು ವಾಸ್ತವಿಕ ನೆಲೆಗಟ್ಟಿನಲ್ಲಿ ನಿಂತು ಇದನ್ನು ವಿಶ್ಲೇಷಿಸಿದಾಗ ಈ ಕ್ರಮ ಒಂದು ಸ್ವಾಗತಾರ್ಹ ದಾಪುಗಾಲು ಎಂದೇ ಎನಿಸುತ್ತದೆ. ನಾನು ಅತ್ಯಂತ ಪ್ರಜ್ಞಾಪೂರ್ವಕವಾಗಿಯೇ ಭಾವುಕತೆಯನ್ನು ಹುಸಿ ಎಂದು ಕರೆದಿದ್ದೇನೆ. ನಮ್ಮಲ್ಲಿ ಒಂದು ಸಾವು ಎಷ್ಟು ಭಾವುಕವೋ ಅಷ್ಟೇ ನಿರ್ಭಾವುಕ ವಾಸ್ತವವಾದಿಯೂ ಹೌದು. ಉಚ್ಛ ನ್ಯಾಯಾಲಯ ಇಂದು ಹಾಕಿಕೊಟ್ಟಿರುವ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಅಮಲು ಮಾಡಿದರೆ ನಮ್ಮಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ಎಷ್ಟೋ ಕೊಲೆ, ಸುಲಿಗೆಗಳನ್ನು ತಡೆಯಬಹುದು. ಇಂದಿನ ನಮ್ಮ ವೈದ್ಯಕೀಯ ಕ್ಷೇತ್ರ ಸೇವಾ ನಿರತ ಮಾತ್ರವಲ್ಲ. ಅದೊಂದು ಬೃಹತ್ ಉದ್ಯಮ. ರೋಗಿಗಳಲ್ಲೂ ವರ್ಗಬೇಧ ಮತ್ತು ಅದರಂತೆ ಬೇಧ ಎರಡೂ ಸಾಮಾನ್ಯ. ಇಂದು ಒಬ್ಬ ಶ್ರೀಮಂತನೊಬ್ಬ ಸಾವಿನ ದವಡೆಗೆ ಸಿಕ್ಕು ಖಾಸಗೀ ಆಸ್ಪತ್ರೆಗೆ ಸೇರಿದರೆ ಜೀವದ ಯಾವುದೇ ಆಸೆಗಳಿಲ್ಲದ್ದಾಗ್ಯೂ ಮನುಷ್ಯ ಪ್ರಯತ್ನದ ಸೋಗಿನಲ್ಲಿ ಆತನ ದೇಹವನ್ನು ಯಂತ್ರಪ್ರತ್ಯಯಗೊಳಿಸಿ ಜೀವದ ಭ್ರಮೆ ಹುಟ್ಟಿಸಿ ಅಂತಿಮ ಕ್ಷಣವನ್ನು ಆದಷ್ಟೂ ಮುಂದೂಡುವುದು ಸುಲಿಗೆಯ ಮಾತಾಯಿತು. ಇನ್ನು ಅತ್ಯಂತ ಅಮಾನವೀಯವೆಂದರೆ ಬಡ ಮತ್ತು ಮಧ್ಯಮ ವರ್ಗದ ಪಾಡು. ಇನ್ನು ನಾವು ಮಾಡುವುದೇನೂ ಇಲ್ಲ, ಮನೆಯಲ್ಲಿಯೇ ಪ್ರಾಣ ಹೋಗಲಿ ಎಂದು ಕಳಿಸಿಕೊಡುವಾಗ ಬಹುಬಾರಿ ಅಲ್ಲಿರುವುದು ಕಾಂಚಾಣದ ಲೆಕ್ಕಾಚಾರ. ಅದನ್ನು ಒಪ್ಪಿ ಮನೆಗೆ ಕರೆದುಕೊಂಡು ಹೋಗಿ ನೆಂಟರಿಷ್ಠರನ್ನೆಲ್ಲಾ ಕರೆದು ರೋಗಿಯ ಸುತ್ತಲೂ ಕೂತು ಆತನನ್ನು ಕಳಿಸಿಕೊಡುವುದರಲ್ಲಿರುವುದು ಬಡತನದ ಅಸಹಾಯಕತೆ ಇಲ್ಲ ಮತ್ತೆ ಕಾಂಚಾಣದ ಲೆಕ್ಕಾಚಾರ. ದುಬಾರಿ life support system ಗಳ ಸ್ವಿಚ್ ಅನ್ನು ಆರಿಸುವಾಗಲೂ ಮನದಲ್ಲಿ ನಡೆಯುವುದು ಇದೇ ಅಸಹಾಯಕತೆಯ ಲೆಕ್ಕಾಚಾರಗಳು ಇಲ್ಲ ಒಂದು ನಿರ್ಭಾವುಕ ಸ್ವಾರ್ಥ. ಎಷ್ಟೋ ಬಾರಿ ಅಸಲು ರೋಗಿಯ ಸ್ಥಿತಿ ಸಂಪೂರ್ಣ ನಿರಾಶದಾಯಕವಾಗಿರದ ಸಾಧ್ಯತೆಗಳೂ ಇಲ್ಲದಿಲ್ಲ. 

ಇಂಥ ಕೊಲೆಗಳನ್ನು ಈ ನೂತನ ವ್ಯವಸ್ಥೆ ತಕ್ಕ ಮಟ್ಟಿಗೆ ತಡೆಯುತ್ತದೆ. ಈ ಸಂಪದ್ಭರಿತ ದೇಶದಲ್ಲಿ ಯಾವುದೇ ವ್ಯಕ್ತಿ ಚಿಕಿತ್ಸೆಗೆ ಹಣವಿಲ್ಲದ ಏಕೈಕ ಕಾರಣಕ್ಕೆ ಸಾಯಬಾರದು. ಅದಕ್ಕೆ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಗಟ್ಟಿಗೊಳ್ಳಬೇಕು. ನಿಯೋಲಿಬೆರಲ್ ಪಾಠ ಹೇಳುವ ಇದೇ ಅಮೆರಿಕಾ ಮತ್ತು ಯೂರೋಪಿಯನ್ ದೇಶಗಳಲ್ಲಿ ಸಾಮಾಜಿಕ ಭರವಸೆ ಯೋಜನೆಗಳಡಿ ಆರೋಗ್ಯ ಶ್ರೀಸಾಮಾನ್ಯನಿಗೂ ತಲುಪಿದೆ. ಅದನ್ನು ನಾವೂ ಮಾಡಬೇಕಿದೆ. ಅದು ದೀರ್ಘಕಾಲಿಕ ಪರಿಹಾರ. ಹೀಗೆ ಪರೋಕ್ಷ ದಯಾಮರಣಕ್ಕೆ ಬರುವ ಎಷ್ಟೋ ಪ್ರಕರಣಗಳಲ್ಲಿ ಆರ್ಥಿಕ ಮುಗುಟ್ಟು ಪ್ರಮುಖ ಕಾರಣವಾಗಿರುತ್ತದೆ. ಆರ್ಥಿಕ  ಮುಗುಟ್ಟಿನ ಏಕೈಕ ಕಾರಣದಿಂದ ಯಾವುದೇ ವ್ಯಕ್ತಿ ಸಾಯಬಾರದು. ತಮ್ಮನ್ನು ತಾವು ನೋಡಿಕೊಳ್ಳಲಾಗದ ಅಶಕ್ತರಿಗೆ ಸರ್ಕಾರವೇ ತಂದೆ. ಸರ್ಕಾರ ಇವರ ಆರೈಕೆಯನ್ನು ಕೈಗೆತ್ತಿಕೊಳ್ಳಬೇಕು. ನ್ಯಾಯಾಲಯಗಳೂ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಆಗ ಮಾತ್ರವೇ ಈ ವ್ಯವಸ್ಥೆ ಸಾರ್ಥಕವಾಗುತ್ತದೆ.

ಮತ್ತೊಂದು ಸ್ತರದಲ್ಲಿ ಇದು ಪ್ರಕೃತಿಯ ಎದುರು ಮಾನವನ ಮತ್ತು ಆತನ ನಾಗರೀಕತೆಯ ಕುಬ್ಜತೆಯನ್ನು ವಿನಮ್ರವಾಗಿ ಒಪ್ಪಿರುವ ತೀರ್ಪು. ಜೀವ ಶವದ ನಡುವಿನ ಹೋಯ್ದಾಟದ ಕ್ಷಣವನ್ನು ಸ್ಥಂಭೀಭೂತಗೊಳಿಸಿ, ಜೀವಕ್ಕೆ ಯಂತ್ರಪ್ರತ್ಯಯವನ್ನು ಹುಡುಕುವ, ಸಾವೆಂಬ ಪ್ರಕೃತಿಯನ್ನು ಗೆಲ್ಲುವ ಆಧುನಿಕ ವೈದ್ಯಕೀಯ ಶಾಸ್ತ್ರದ ಗರ್ವ, ಭ್ರಮೆಗಳ ಅರ್ಥ ಹೀನತೆಯನ್ನು ಗ್ರಹಿಸಿರುವ ತೀರ್ಪು. ನಮ್ಮ ಇಂದಿನ ಆಧುನಿಕ ವೈದ್ಯಕೀಯ ಶಾಸ್ತ್ರ ಜೀವನದ ಭ್ರಮೆಯನ್ನು ಲಂಬಿಸುತ್ತಿದೆಯೇ ಹೊರತು ಜೀವನದ ಗುಣಮಟ್ಟವನ್ನಲ್ಲ. ಅರುಣಾ ಶಾನುಭಾಗರ ವಿಷಯದಲ್ಲಾಗಿರುವುದೂ ಇದೇ ಅಲ್ಲವೆ?

Proudly powered by Blogger
Theme: Esquire by Matthew Buchanan.
Converted by LiteThemes.com.