ಸರ್ಕಾರ ಮತ್ತು ಮಠಗಳು

ಇದು ಈ ವಾರದ ತಮ್ಮ ಅಂಕಣದಲ್ಲಿ ಸುಗತ ಶ್ರೀನಿವಾಸರಾಜು ಬರೆದ ಲೇಖನ. ಈ ಭಾನುವಾರ ಪತ್ರಿಕೆಗೆ ನಾನು ಅನುವಾದಿಸಿದ್ದೀನಿ. ಸರ್ಕಾರ ಮತ್ತು ಮಠಗಳ ಕುರಿತ ಈ ಲೇಖನ ಅತ್ಯಂತ ವಸ್ತುನಿಷ್ಠವಾಗಿದ್ದು ನನಗೆ ಬಹು ಮೆಚ್ಚುಗೆಯಾಯಿತು. 
ಸರ್ಕಾರ ಮತ್ತು ಮಠಗಳು 


ಯಡಿಯೂರಪ್ಪನವರ ಸಕಾರ ಇದನ್ನು ಯಾವುದೇ ಎಗ್ಗು ವಿನಾಯಿತಿಗಳಿಲ್ಲದೆ ಮಾಡುತ್ತಿದೆ. ಇದಕ್ಕೆ ಯಾವ ಶಾಸಕ ಸಂಸದರ ಅಥವಾ ಬುದ್ದಿಜೀವಿಗಳ ಅಡೆತಡೆಗಳೂ ಇದ್ದಂತಿಲ್ಲ. 2011-12ರ ರಾಜ್ಯ ಬಡ್ಜೆಟ್ನಲ್ಲಿ ಜಾತಿಯಾಧಾರಿತ ಮಠ ಮಾನ್ಯಗಳಿಗೆ, ದೇವಾಲಯಗಳಿಗೆ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಯತ್ಥೇಚ್ಛವಾದ ಅನುದಾನಗಳನ್ನು ಘೋಷಿಸಲಾಗಿದೆ. ಆದಿಚುಂಚನಗಿರಿಯ ಸಂಸ್ಕೃತ ವೇದ ಕೇಂದ್ರ, ರೇಣುಕಾ ಯಲ್ಲಮ್ಮ ದೇವಸ್ಥಾಣ ಮತ್ತು ದತ್ತಪೀಠಗಳಿಗೆ ತಲಾ 5 ಕೋಟಿ. ಉಡುಪಿ ಮಧ್ವಾಚಾರ್ಯ ಪದಕ ಕೇಂದ್ರ ಮತ್ತು ದಿಗಂಬರ ಜೈನ ಕೇಂದ್ರಗಳಿಗೆ ತಲಾ 2 ಕೋಟಿ. 

ಯಡಿಯೂರಪ್ಪ ಕುಮಾರಸ್ವಾಮಿ ಸರ್ಕಾರದಲ್ಲಿ ಉಪಮುಖ್ಯಮಮತ್ರಿ ಮತ್ತು ಹಣಕಾಸು ಸಚಿವರಾದಾಗಿನಿಂದಲೂ ಜಾತಿ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಹೀಗೆ ಅನುದಾನ ನೀಡುತ್ತಲೇ ಬಂದಿದ್ದಾರೆ. ಮೊದಲಿಗೆ ತಮ್ಮ ಸ್ವಜಾತಿ ಮಠ ಮಾನ್ಯಗಳನ್ನು ಸಂಪ್ರೀತಗೊಳಿಸಿದ ಅವರು ಬರಬರುತ್ತಾ ಸ್ವಜನಪಕ್ಷಪಾತದ ಆರೋಪ ಮಾಡದ ಹಾಗೆ ಬಾಯಿ ಮುಚ್ಚಿಸಲು ಇತರೆ ಜಾತಿಗಳ ಮಠ ಮಾನ್ಯಗಳಿಗೂ ಈ ಅನುದಾನವನ್ನು ವಿಸ್ತರಿಸಿದರು. ಬಡ್ಜೆಟರಿ ಅನುದಾನ ಕೇವಲ ಒಂದು ಭಾಗ. ಇನ್ನು ಭೂದಾನಗಳು ಮತ್ತು ಇವರ ಶೈಕ್ಷಣಿಕ ಸಂಸ್ಥೆಗಳಿಗೆ ಪಡೆದುಕೊಂಡಿರುವ ಸವಲತ್ತುಗಳು ಎಲ್ಲವನ್ನೂ ಲೆಕ್ಕಿಸಿದರೆ ಅದೊಂದು ಬೃಹತ್ ಮೊತ್ತವಾಗುವುದರಲ್ಲಿ ಅನುಮಾನವೇ ಇಲ್ಲ. ಬಹುಶಃ ಮಾಹಿತಿ ಹಕ್ಕು ಕಾಯ್ದೆಯಡಿ ಈ ಎಲ್ಲ ಮಾಹಿತಿಯನ್ನೂ ಪಡೆದರೆ ಸರ್ಕಾರ ಮತ್ತು ಧರ್ಮದ ನಡುವೆ ಕಿರಿದುಗೊಳ್ಳುತ್ತಿರುವ ಅಂತರ ಸ್ಪಷ್ಟವಾಗಿ ಗೋಚರಿಸುತ್ತದೆ. 

ಇದಲ್ಲದೆ ರಾಜ್ಯದ ಎರಡು ಪ್ರಮುಖ ಶ್ರೀಮಂತ ದೇವಾಲಯಗಳಾದ ಗೋಕರ್ಣ ಮತ್ತು ಉಡುಪಿ ಶ್ರೀಕೃಷ್ಣ ದೇವಸ್ಥಾನಗಳನ್ನು ಎರಡು ಮೇಲ್ಜಾತಿ ಮಠಗಳಿಗೆ ಒಪ್ಪಿಸಿರುವುದನ್ನೂ ಲೆಕ್ಕಿಸಬೇಕಿದೆ. ಇದು ಸಾಲದೆಂಬಂತೆ ಕಳೆದ ವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಸರಕಾರೀ ಆಸ್ಪತ್ರೆಗಳನ್ನೇಕೆ ಮಠಗಳಿಗೊಪ್ಪಿಸಬಾರದು, ಆಗ ಅವು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವುದಲ್ಲದೆ ಜನರ ಕಷ್ಟಗಳಿಗೆ ತಕ್ಷಣವೇ ಸ್ಪಂದಿಸುತ್ತದೆ ಎಂದುಲಿದರು. ಬಹುಶಃ ಮುಂದಿನ ಯೋಜನೆ ಇದೇ ಇದ್ದು, ರೂಪುರೇಖೆಗಳು ರೂಪುಗೊಳ್ಳುತ್ತಿರಬಹುದು. ಮುಖಖ್ಯಮಂತ್ರಿಗಳು ಕೊಳದಲ್ಲಿ ಕಲ್ಲೆಸೆದು ಆಳ ನೋಡುತ್ತಿರಬಹುದು. 

ಇದಲ್ಲದೆ ಬಿಜೆಪಿಯ ಗುಪ್ತ ಹಿತಾಸಕ್ತಿಗಳು ಸಂಪುಟ ಧಾರ್ಮಿಕ ಅಲ್ಪಸಂಖ್ಯಾತರಾದ ಜೈನ, ಬೌರ್ದಧ ಮತ್ತು ಸಿಖ್ ಧಾರ್ಮಿಕ  ಸಂಸ್ಥೆಗಳನ್ನು ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆಯಡಿ ತರುವ ನಿರ್ಧಾರ ಮಾಡಿದಾಗ ಬಹಿರಂಗಗೊಂಡವು. ಈ ನಿರ್ಣಯದಿಂದ ಈ ಧಾರ್ಮಿಕ ಸಂಸ್ಥೆಗಳ ವ್ಯವಹಾರಿಕ ವಿವರಗಳು ಸರ್ಕಾರದ ಮುಜರಾಯಿ ಇಲಾಖೆಯ ಮೇಲುಸ್ತುವಾರಿಗೊಳಪಡುತ್ತದೆ. ರಾಜ್ಯದ ಎಲ್ಲ ಧಾರ್ಮಿಕ ಸಂಸ್ಥೆಗಳಿಗೂ ಇದು ಅನ್ವಯವಾಗುವುದೇ ಆದರೆ ಅದರಲ್ಲಿ ಯಾವುದೇ ಸಮಸ್ಯೆಯಿರಲಿಲ್ಲ, ಆದರೆ ಸೋಜಿಗವೆಂದರೆ ಜಾತಿ ಮಠಗಳು ಮತ್ತು ದೇವಾಲಯಗಳನ್ನು ಇದರಿಂದ ಹೊರಗಿಡಲಾಗಿದೆ. ಇದು ಹಣಕಾಸು ವ್ಯವಹಾರವನ್ನು ಮೀರಿದ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಡೆಸಿದ ಕಾರ್ಯಾಚರಣೆ. ಜೈನ, ಬೌದ್ಧ ಮತ್ತು ಸಿಖ್ಖರು ಪ್ರತ್ಯೇಕತೆಯನ್ನು ಉಳಿಸಿಕೊಳ್ಳುತ್ತಾರಾದರೂ ಅವರೆಲ್ಲರೂ ವಿಸ್ತೃತ ಹಿಂದೂ ಪರಿವಾರದ ಸದಸ್ಯರೇ ಎಂಬ ಸಂದೇಶ ಅಲ್ಲಿತ್ತು. ಆದರೆ ಈ ಕ್ರಮಕ್ಕೆ ಕೇಳಿಬಂದ ವಿರೋಧದ ಹಿನ್ನೆಲೆಯಲ್ಲಿ ಇದನ್ನು ಹಿಂತೆಗೆದುಕೊಳ್ಳಲಾಯಿತು. ಕರ್ನಾಟಕದಲ್ಲಿ ಬಹು ದಲಿತರು ಬೌದ್ಧ ಮತಕ್ಕೆ ಮತಾಂತರ ಆಗಿರುವುದರಿಂದ ಚುನಾವಣೆಯ ಲೆಕ್ಕಾಚಾರಗಳು ಏರುಪೇರಾಗುವ ಭಯವಿದ್ದಿತು ಅಲ್ಲಿ. 

ಜಾತ್ಯಾತೀತ ಪಕ್ಷಗಳೆನಿಸಿಕೊಂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೇಕೆ ಏಕೆ ಇದನ್ನು ಪ್ರತಿಭಟಿಸುತ್ತಿಲ್ಲ? ಸಂಕುಚಿತ ಜಾತಿ ಆಸಕ್ತಿಗಳನ್ನು ಮುಖ್ಯವಾಹಿನಿಗೆ ತರುತ್ತಿರುವುದನ್ನು ಏಕೆ ತಡೆಯುತ್ತಿಲ್ಲ? ಸರ್ಕಾರ ಮತ್ತು ಮಠಮಾನ್ಯಗಳ ನಡುವಿನ ಆರೋಗ್ಯಕರ ಅಂತರವನ್ನು ಇಲ್ಲವಾಗಿಸುವ ಹುನ್ನಾರವನ್ನು ಅವರು ಏಕೆ ಸಹಿಸಿದ್ದಾರೆ? ಲಿಂಗಾಯತ ಮಠಾಧೀಶರ ಯಡಿಯೂರಪ್ಪನವರ ಪರಾಕನ್ನು ಅವರೇಕೆ ತಕ್ಕಷ್ಟು ವಿರೋಧಿಸಿಯೇ ಇಲ್ಲ? ಯಡಿಯೂರಪ್ಪನವರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಾಗ ಅವರ ಕುರ್ಚಿ ಉಳಿಸಲು ಇದೇ ಲಿಂಗಾಯತ ಮಠಾಧೀಶರು ತಮ್ಮ ಕಾವಿ ನಿಲುವಂಗಿಗಳೊಂದಿಗೆ ರಸ್ತೆಗಿಳಿದಿರಲಿಲ್ಲವೆ? ಮಠಮಾನ್ಯಗಳು ಸರ್ಕಾರದ ಅಂತಃಸಾಕ್ಷಿಯನ್ನು ಹಿಡಿದಿಡಬೇಕೋ ಇಲ್ಲ ಸರ್ಕಾರವನ್ನು ನಿಯಂತ್ರಿಸಬೇಕೋ? ಇಷ್ಟರಮಟ್ಟಿಗೆ ಕೃಪಾಪೋಷಿತರಾಗಿರುವ ಈ ಮಠಮಾನ್ಯಗಳು ಎಂದಿಗಾದರೂ ಸತ್ಯ ನುಡಿಯುತ್ತವಾ? 

ಸ್ವಯಂಘೋಷಿತ ಜಾತ್ಯಾತೀತ ಶಕ್ತಿಗಳು ಇದರ ವಿರುದ್ಧ ತಕ್ಕಮಟ್ಟಿನ ವಿರೋಧ ವ್ಯಕ್ತಪಡಿಸದುದಕ್ಕೆ ಕಾರಣ ಯಡಿಯೂರಪ್ಪನ ಬಗ್ಗೆ ಹುಟ್ಟೆಯುರಿ, ಆತನಿಗಿರುವಷ್ಟು ಮಠಮಾನ್ಯಗಳ ಬೆಂಬಲ ಆತನ ಬದಲಿಗೆ ತಮಗಿದ್ದರೆ? ಪ್ರಜಾಪ್ರಭುತ್ವ, ಸಂವಿಧಾನವೇ ಮೂಲ ತತ್ವವಾದ ಸರ್ಕಾರದಲ್ಲಿ ಈ ಪಕ್ಷಗಳ ನಂಬಿಕೆ ಮತ್ತು ಬದ್ಧತೆ ಪ್ರಶ್ನಾರ್ಹವೇ. ಅವರ ವಿವೇಕ ಮತ್ತು ಅನುಭವದಿಂದ ಅವರು ತಿಳಿದುಕೊಂಡಿರುವುದಿಷ್ಟು, ಈ ಮಠಮಾನ್ಯಗಳಿಗೆ ನಡೆದುಕೊಳ್ಳುವ ಸಹಸ್ರಾರು ಬೆಂಬಲಿಗರಿದ್ದಾರೆ, ಇವರ ವೋಟುಗಳು ಈ ಮಠಮಾನ್ಯಗಳನ್ನು ಸಂಪ್ರೀತಗೊಳಿಸಿದ ಪಕ್ಷಕ್ಕೆ ಸಂದಾಯವಾಗುತ್ತದೆ. ಇಂದಿನಿಂದ ಅವರ ಗುರಿ ಯಡಿಯೂರಪ್ಪನಿಗಿಂತಲೂ ವಿನೂತನ ಬಗೆಯಲ್ಲಿ ಈ ವೋಟ್ಬ್ಯಾಂಕ್ ಅನ್ನು ತಮ್ಮದಾಗಿಸಿಕೊಳ್ಳುವುದು. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿನೂತನ ಬಗೆಗಳನ್ನು ಯಡಿಯೂರಪ್ಪ ಅನಾವರಣ ಮಾಡಿದ್ದಾರೆ. ಮಿಕ್ಕ ಪಕ್ಷಗಳು ತಮ್ಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ, ಯಡಿಯೂರಪ್ಪನವರನ್ನು ಮೀರಿಸಲು. ಇನ್ನು ಮುಂದೆ ಯಾವ ಪಕ್ಷ ಅಧಿಕಾರ ಹಿಡಿದರೂ ಇದೊಂದು ವಿಷಚಕ್ರವಾಗಿ ಮುಂದುವರೆಯಬಹುದೆಂಬ ಯೋಚನೆಯೇ ಭಯಾನಕ. ಜಾತಿಯಾಧಾರಿತ ರಾಜಕೀಯ ಬೆಂಬಲದ ಈ ರಾಜಕಾರಣದ ಮೂಲಧಾತುವನ್ನೇ ಬದಲಿಸುವುದಾದರೂ ಹೇಗೆ? ಜಾತ್ಯಾತೀತ ಶಕ್ತಿಗಳು ಯೋಚಿಸುತ್ತಿಲ್ಲ. 

70ರ ದಶಕದಲ್ಲಿ ದೇವರಾಜ ಅರಸರ ಉಗಮದಿಂದ ಇಂದಿನವರೆಗೂ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತ ಕೋಮುಗಳ ವೀರಪ್ಪ ಮೊಯಿಲಿ, ಬಂಗಾರಪ್ಪ ಇಲ್ಲ ಧರ್ಮಸಿಂಗರಂಥವರು ಮುಖ್ಯಮಂತ್ರಿಗಳಾಗುವ ಅವಕಾಶವಿತ್ತು. ಆದರೆ ಈಗ ರಾಜಕೀಯ ಚರ್ಚೆ ದಮನಿತ ಕೋಮುಗಳ ಸಶಕ್ತೀಕರಣದ ಬಗೆಗಲ್ಲದೆ ಮೇಲ್ಜಾತಿಗಳಾದ ಲಿಂಗಾಯತ ಮತ್ತು ಒಕ್ಕಲಿಗರ ನಡುವಿನ ಅಧಿಕಾರ ಕಚ್ಚಾಟವೇ ಆಗಿದೆ. ಸಹಜವಾಗಿಯೇ ಇದಕ್ಕೆ ವೇದಿಕೆಯೊದಗಿಸುವುದು ಇವರ ಜಾತಿ ಮಠ ಸಂಸ್ಥೆಗಳು. ಇವರೀರ್ವರಲೊಬ್ಬರು ಅಧಿಕಾರ ಹಿಡಿಯುತ್ತಾರೆ. ಇದೊಂದು ಬೈನರಿ ಆಟ. ನಮ್ಮ ರಾಜಕೀಯಕ್ಕೆ ಮೂರನೇ ಆಯಾಮವೇ ಇಲ್ಲ, ಒಂದೊಮ್ಮೆ ಸಾಧ್ಯವಾದರೂ ಅದು ಇವರೀರ್ವರಲೊಬ್ಬರ ಕೀಲಿಗೊಂಬೆಯೇ. ಹಿಂದುಳಿದ ಕುರುಬ ಸಮುದಾಯಕ್ಕೆ ಸೇರಿದ ಕೆ.ಎಸ್.ಈಶ್ವರಪ್ಪ, ಯಡಿಯೂರಪ್ಪ ಬರೀ ಲಿಂಗಾಯತ ಸಮುದಾಯವನ್ನು ಓಲೈಸುತ್ತಿದ್ದಾರೆ ಎಂದು ಪಕ್ಷದ ಹೈಕಮಾಂಡ್ಗೆ ದೂರಿದ್ದಾರೆನ್ನಲಾಗಿದೆ. ಒಂದು ವಿಹ್ವಲತೆ ಇರುವುದು ದಿಟವೇ ಆದರೂ, ಅದು ಸರಿ ಹೋಗುವ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್ನ ಎಐಸಿಸಿ ಪುನಾರಚನೆಯನ್ನೇ ತೆಗೆದುಕೊಳ್ಳಿ, ರಾಜ್ಯದಿಂದ ಎಐಸಿಸಿಗೆ ಶಾಶ್ವತ ಆಹ್ವಾನಿತ 82 ವರ್ಷದ ಎಂ.ವಿ.ರಾಜಶೇಖರನ್. ಕಾರಣ: ಅವರು ಲಿಂಗಾಯತರು ಮತ್ತು ಕಾಂಗ್ರೆಸ್ ಈ ಸಮುದಾಯಕ್ಕೆ ವಿರೋಧಿಯಲ್ಲ ಎಂಬ ಸಂದೇಶ ರವಾನೆಯಾಗಬೇಕು. 

ಕಳೆದ ಮೂರು ದಶಕಗಳಲ್ಲಿ ಕರ್ನಾಟಕದಲ್ಲಿ ವಿಶಿಷ್ಟವಾದುದೊಂದು ಸಾಮಾಜಿಕ ಬದಲಾವಣೆ ನಡೆಯುತ್ತಿದೆ. ಅನಾದಿಕಾಲದಿಂದಲೂ ತಮ್ಮ ಮಠಗಳ ಮೂಲಕವೇ ಕಾರ್ಯನಿರ್ವಹಿಸುತ್ತಿದ್ದ ಬ್ರಾಹ್ಮಣ ಲಿಂಗಾಯತರಲ್ಲದೆ, 80ರ ದಶಕದಿಂದೀಚೆಗೆ ಹಿಂದುಳಿದ ವರ್ಗಗಳೂ ಕೂಡ ತಮ್ಮ ಜಾತಿ ಮಠಗಳನ್ನು ಸ್ಥಾಪಿಸುತ್ತಿವೆ. ವ್ಯವಸ್ಥಿತ ಸಾಂಸ್ಥಿಕ ಧರ್ಮದ ಪ್ರಯೋಜನಗಳನ್ನು ಅವರು ಬಿಡಲೊಲ್ಲರು. ಈ ಪ್ರಯೋಗ ಅನೂಹ್ಯ ಹಂತಗಳವರೆಗೆ ಎಳೆಯಲ್ಪಟ್ಟು ದಲಿತರೂ ಕೂಡ ತಮ್ಮದೇ ಮಠಗಳನ್ನು ಸ್ಥಾಪಿಸಿ ಮಠಾಧೀಶರನ್ನು ನೇಮಿಸಿದ್ದಾರೆ. ಆದರೆ ವ್ಯಂಗ್ಯವೆಂದರೆ ಈ ಮಠಗಳ ಮೂಲಕ ದಲಿತ ಜ್ಞಾನ ಆಯೋಗಗಳು ಮತ್ತು ಲೋಕದೃಷ್ಟಿಗಳೇನೂ ಮುಖ್ಯವಾಹಿನಿಗೆ ಬರುತ್ತಿಲ್ಲ, ಬದಲಿಗೆ ಈ ಮಠ ಮತ್ತು ಮಠಾಧೀಶರು ವೈದಿಕ ಇಲ್ಲ ಶರಣ ಸಂಪ್ರದಾಯಗಳ ತದ್ರೂಪುಗಳಾಗಿ ತಯಾರಾಗುತ್ತಿದ್ದಾರೆ. ನಿಧಾನವಾಗಿ ಇವರು ತಮ್ಮ ಪ್ರತ್ಯೇಕ ವ್ಯಕ್ತಿತ್ವವನ್ನು ಬಲಿಕೊಡುತ್ತಿದ್ದಾರೆ, ಯಾವುದೋ ಪುರುಷಾರ್ಥಕ್ಕಲ್ಲ, ಬದಲಿಗೆ ಹೊನ್ನು, ಮಣ್ಣು ಮತ್ತು ರಾಜಕೀಯ ಸಾಮೀಪ್ಯಕ್ಕಾಗಿ. ಈ ಏಕರೂಪೀಕರಣವೇ ತಕ್ಕಡಿಯನ್ನು ವಾಲಿಸಿರುವುದು. 

ಸರ್ಕಾರ ಮತ್ತು ಧರ್ಮದ ಕುರಿತು ವಿಸ್ತಾರವಾಗಿ ಬರೆದಿರುವ ನನ್ನ ನೆಚ್ಚಿನ ಥಾಮಸ್ ಪೇಯ್ನ್ನ ನುಡಿಗಳು ಅತಿ ಕಠಿಣ. ಹಾಗಾಗಿ ರಾಲ್ಫ್ ಎಮರ್ಸನ್ನ ಸೌಮ್ಯ ಮಾತುಗಳಿಂದ ಈ ಲೇಖನವನ್ನು ಮುಗಿಸುತ್ತೇನೆ - 'ಸುಧಾರಣೆ ಧರ್ಮಗಳೊಳಗಿಂದ ಬರದಿದ್ದರೆ ಅವು ಗೊಡ್ಡಾಗುತ್ತವೆ.'

Proudly powered by Blogger
Theme: Esquire by Matthew Buchanan.
Converted by LiteThemes.com.