ಫೋರ್ಜರಿ ಉಪಕುಲಪತಿ - ಸಂಕಷ್ಟದಲ್ಲಿ ಕುಲಪತಿ


ಸಮಯ ಸಿಕ್ಕಾಗೆಲ್ಲಾ ಯಡಿಯೂರಪ್ಪ ಮತ್ತವರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹರಿಹಾಯ್ದು ಸರ್ಕಾರದ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದನ್ನು ಪದೇ ಪದೇ ಎತ್ತಿ ತೋರಿಸುವ ಮಾನ್ಯ ರಾಜ್ಯಪಾಲರ ತಟ್ಟೆಯಲ್ಲೂ ಹುಳ ಹುಪ್ಪಟೆಗಳು ಬಿದ್ದಿವೆ. ರಾಜ್ಯಪಾಲರು ಕಾಂಗ್ರೆಸ್ನ ಏಜೆಂಟರು ಎನ್ನುವ ರಾಜಕೀಯ ಆರೋಪವನ್ನು ಪಕ್ಕಕ್ಕಿಟ್ಟೇ ರಾಜ್ಯಪಾಲರನ್ನು ವಿಮರ್ಶಿಸೋಣ. ಯಡಿಯೂರಪ್ಪ ಮತ್ತವರ ಸರ್ಕಾರದ ಭ್ರಷ್ಟಾಚಾರದ ಬಗ್ಗೆ Holier than thou ಭಾವನೆಯಲ್ಲಿ ನೈತಿಕ ಉನ್ನತ ಪೀಠವನ್ನಾಕ್ರಮಿಸಿಕೊಂಡು ಮಾತನಾಡುವ ರಾಜ್ಯಪಾಲರ ನಡೆ ನುಡಿಗಳು ಅದನ್ನು ಪುಷ್ಠೀಕರಿಸಬೇಕಾಗುತ್ತದೆ. ಆದರೆ ದುರದೃಷ್ಟವಶಾತ್ ಅವರ ರಾಜ್ಯಪಾಲರ ಅರ್ಹತೆಯಲ್ಲಿ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳೂ ಆಗಿರುವ ಭಾರಧ್ವಾಜ್ ಅವರು ಈ ವಿಷಯವಾಗಿ ಕೆಲವು ಎಡವಟ್ಟುಗಳನ್ನೂ ಅವರ ನೈತಿಕತೆಯನ್ನು ಪ್ರಶ್ನಾರ್ಹಗೊಳಿಸುವ ಕೆಲವು ನಿರ್ಣಯಗಳನ್ನು ತೆಗೆದುಕೊಂಡಿರುವುದು ದಿಟ. 

ಮೊದಲಿಗೆ ಮೈಸೂರು ವಿಶ್ವವಿದ್ಯಾಲಯ. ಈ ಹಿಂದೆ ಮೈಸೂರು ವಿವಿಯ ಉಪಕುಲಪತಿಗಳಾಗಿದ್ದ ದೇಜಗೌ ಅವರ ಕುಲಪುತ್ರ ಶಶಿಧರ ಪ್ರಸಾದ್ ಅವರು ವಿವಿಯಲ್ಲಿ ನಡೆಸಿದರೆನ್ನಲಾದ ಅಪಾರ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನೂತನ ನೇಮಕಗಳಲ್ಲಿ ರೂಸ್ಟರ್ ಪದ್ಧತಿಯನ್ನು ಗಾಳಿಗೆ ತೂರಿ ಪರಿಶಿಷ್ಠ ಜಾತಿ ವರ್ಗಗಲ ಸ್ಥಾನಗಳಲ್ಲಿ ತಮ್ಮ ಕುಲಭಾಂಧವರನ್ನು ಕೂರಿಸಿ ಇಡಿಯ ಪ್ರಕ್ರಿಯೆಯನ್ನು ಭ್ರಷ್ಟಗೊಳಿಸಿಬಿಟ್ಟಿದ್ದರಲ್ಲದೆ, ಇನ್ನೂ ಅನೇಕ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರದ ಆರೋಪಗಳು ಅವರ ಮೇಲಿದ್ದವು. ಈ ಕುರಿತು ತನಿಖೆ ನಡೆಸಲು ರಚಿತವಾದ ರಂಗವಿಠಲಾಚಾರ್ ಅವರ ಏಕಸದಸ್ಯ ನ್ಯಾಯಾಂಗ ಆಯೋಗ ವರದಿ ನೀಡಿದ್ದು ಮೇಲ್ಕಂಡ ಬಹುತೇಕ ಆರೋಪಗಳನ್ನು ನಿಜವೆಂದೂ, ಶಶಿಧರ ಪ್ರಸಾದ್ ಅವರ ವಿರುದ್ಧ ವಿವಿ ಕ್ರಮಿನಲ್ ಕೇಸ್ ಹೂಡಬೇಕೆಂದೂ ಹೇಳಿತ್ತು. ಆದರೆ ದೇಜಗೌ ಅವರ ಎಸ್ಸೆಂಕೆ-ಸಾಯಿಬಾಬಾ ಲಾಬಿಯಿಂದ ಪ್ರಭಾವಿತರಾಗಿ ನ್ಯಾಯದಾನದ ಈ ಪ್ರಕ್ರಿಯೆಯಲ್ಲಿ ಮೂಗು ತೂರಿಸಿದ ಭಾರಧ್ವಾಜ್ ಶಶಿಧರ ಪ್ರಸಾದ್ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗದಂತೆ ನೋಡಿಕೊಂಡರು. ಮೈಸೂರು ವಿವಿಗೆ ಹೋದಾಗೊಮ್ಮೆ ಉಪಕುಲಪತಿ ವಿ.ಜಿ.ತಳವಾರ್ ಅವರನ್ನು ಒಬ್ಬ ಚಪರಾಸಿಯಂತೆ ಬಾಗಿಲಲ್ಲಿ ನಿಲ್ಲಿಸಿಕೊಂಡು ಬೈದಾಡಿದರು. ಅಲ್ಲಿಗೆ ರಾಜ್ಯಪಾಲರ ನೈತಿಕತೆ, ಪ್ರಾಮಾಣಿಕತೆಗಳ ಸೋಗುಗಳೆಲ್ಲವೂ ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತಾಯಿತು.

ವಿಶ್ವವಿದ್ಯಾಲಯಗಳ ವಿಚಾರದಲ್ಲಿ ರಾಜ್ಯಪಾಲ ಭಾರಧ್ವಾಜ್ ಮತ್ತೆ ಅಂಥದೊಂದು ಸಂಧಿಗ್ಧಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ. ಈ ಬಾರಿಯದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ. ಹೋದ ಬಾರಿ ಮಾಜಿ ಉಪಕುಲಪತಿಗಳಾದರೆ ಈ ಬಾರಿ ಹಾಲಿ ಉಪಕುಲಪತಿಗಳ ರಗಳೆ. ಈ ಹಿಂದೆ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಕೆ. ಎಚ್. ಹಿಂಚಾ ಅವರ ಅವಧಿ ಕಳೆದ ಜುಲೈ ಮೊದಲ ವಾರಕ್ಕೆ ಮುಗಿದ ಕಾರಣ ರಾಜ್ಯಪಾಲರು ಪ್ರೊ. ಎಸ್. ರಾಮೇಗೌಡ ಅವರ ನೇತೃತ್ವದಲ್ಲಿ ಒಂದು ಸರ್ಚ್ ಕಮಿಟಿಯನ್ನು ನೇಮಿಸಿದರು. ಇವರು ಈ ಹಿಂದೆ ಎಐಸಿಟಿಇನ ಅಧ್ಯಕ್ಷರಾಗಿದ್ದವರು. ಈ ಸರ್ಚ ಕಮಿಟಿಗೆ ಬಂದ ಹಲವಾರು ಅರ್ಜಿಗಳಲ್ಲಿ ಅವರು ವ್ಯಕ್ತಿಯ ಅನುಭವ, ಅರ್ಹತೆ, ಚಾರಿತ್ರ್ಯ ಮುಂತಾದವುಗಳನ್ನು ಪರಿಗಣನೆಗೆ ತೆಗೆದುಕೊಂಡು. ಮೂರು ಹೆಸರುಗಳನ್ನು ಅಕಾರಾದಿಯಾದಿಯಾಗಿ ರಾಜ್ಯಪಾಲರಿಗೆ ಕೊಟ್ಟರು. ಈ ಮೂವರಲ್ಲಿ ರಾಜ್ಯಪಾಲ ಹನ್ಸರಾಜ್ ಭಾರಧ್ವಾಜ್ ಅವರು ಪ್ರೊ. ಎಚ್. ಮಹೇಶಪ್ಪ ಅವರನ್ನು ಆಯ್ಕೆ ಮಾಡಿ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನೇಮಿಸಿದರು. ಇಲ್ಲಿಯವರೆಗೂ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಪಾಪ ಯಾರೋ ಅತೃಪ್ತರು ಇಲ್ಲ ಮಹೇಶಪ್ಪನವರ ಒಳ ಹೊರಗನ್ನು ಬಲ್ಲವರು ಅವರ ಅಕಾಡೆಮಿಕ್ ದಾಖಲೆಗಳನ್ನು ಕೇಳಿ ಮಾಹಿತಿ ಹಕ್ಕು ಕಾಯ್ದೆಯಡಿ ಒಂದು ಅರ್ಜಿ ಸಲ್ಲಿಸಿದರು. ಆಗ ಒಂದೊಂದಾಗಿ ಹೊರಬಂದಿತು ನೋಡಿ, ಮಹೇಶಪ್ಪನವರ ನಿಜಬಣ್ಣಗಳು.

ರಾಜ್ಯಪಾಲರ ಕಛೇರಿ ಮತ್ತು ತನ್ಮೂಲಕ ಸರ್ಚ ಕಮಿಟಿಗೆ ಇವರು ಸಲ್ಲಿಸಿದ್ದ ಇವರ ಬಯೋಡಾಟಾವಿನಲ್ಲಿ ಇವರು ತಮ್ಮ ಮೈಸೂರು ವಿವಿಯಡಿಯಲ್ಲಿ ಬರುವ ದಾವಣಗೆರೆಯ ಬಿಡಿಟಿ ಕಾಲೇಜಿನಲ್ಲಿ ಮೊದಲ ಶ್ರೇಣಿಯಲ್ಲಿ ತಮ್ಮ ಬಿಇ ಪದವಿಯನ್ನು ಪೂರೈಸಿದ್ದಾರೆಂದು ಬರೆದುಕೊಂಡಿದ್ದಾರೆ. ಆದರೆ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿರುವ ದಾಖಲೆಗಳ ಪ್ರಕಾರ ಇವರು ಬಿಇ ಪದವಿ ಪಡೆದಿರುವುದು ದ್ವಿತೀಯ ಶ್ರೇಣಿಯಲ್ಲಿ. ಅಷ್ಟೇ ಅಲ್ಲದೆ ಇವರು ಮೊದಲನೆ ಪ್ರಯತ್ನದಲ್ಲಿಯೇ ತಮ್ಮ ಪದವಿಯನ್ನು ಪೂರ್ಣಗೊಳಿಸದೆ 4 ವರ್ಷದ ಬಿಇ ಪದವಿಯನ್ನು 5 ವರ್ಷ ಓದಿದ್ದಾರೆ! ಆ ನಂತರ ಇವರು ಇದುವರೆಗೂ ತಮ್ಮ ಪದವಿಯ certificate ಅನ್ನು ಪಡೆಯಲು ಮೈಸೂರು ವಿವಿಯಲ್ಲಿ ಅರ್ಜಿಯನ್ನೇ ಸಲ್ಲಿಸಿಲ್ಲ! ಅಂದರೆ ಇವರ ಬಳಿ ಇವತ್ತಿಗೂ ಇವರ ಡಿಗ್ರಿ certificate ಇಲ್ಲ! ಇದಕ್ಕೆ ಸನ್ಮಾನ್ಯ ಮಹೇಶಪ್ಪನವರ ಡಿಫೆನ್ಸ್ - ಇಂಜಿನಿಯರಿಂಗ್ ಕಾಲೇಜಿನ ಶಿಕ್ಷಕನಾಗಲಿಕ್ಕೆ ಬಿಇ ಪ್ರಥಮ ದರ್ಜೆಯಲ್ಲಿಯೇ ಪಾಸಾಗಬೇಕೆಂಬ ನಿಯಮ ಇರುವುದು ನಿಜ. ಆದರೆ ಉಪಕುಲಪತಿಗಳ ನೇಮಕಕ್ಕೆ ಈ ನಿಯಮ ವರ್ತಿಸುವುದಿಲ್ಲ! 

 ಸ್ವಾಮಿ ಒಬ್ಬ ಸಾಮಾನ್ಯ ಶಿಕ್ಷಕನಾಗಲಿಕ್ಕೇ ಈ ಅರ್ಹತೆಯನ್ನು ನಿಗದಿಗೊಳಿಸುವುದಾದರೆ ಒಬ್ಬ ಉಪಕುಲಪತಿಯಾಗಲಿಕ್ಕೆ ಈ ಮಾತ್ರದ ಅರ್ಹತೆ ಬೇಡವೇ? ಶಿಕ್ಷಕರಿಗೂ ಹೆಚ್ಚಿನ ಅರ್ಹತೆ ಬೇಡ, ಕನಿಷ್ಠ ಸಮಾನ ಅರ್ಹತೆಯಾದರೂ ಬೇಡವೇ? ಬುದ್ಧಿಗೇಡಿ ಮಹೇಶಪ್ಪನವರು ಈ ತಮ್ಮ ಸಮರ್ಥನೆಯಲ್ಲಿ ತಮ್ಮ ಉಪಕುಲಪತಿಗಳ ಆಯ್ಕೆಯನ್ನಷ್ಟೇ ಅಲ್ಲದೆ ತಮ್ಮ ಇಡಿಯ ವೃತ್ತಿ ಜೀವನವನ್ನೇ ಪಣಕ್ಕಿಡುತ್ತಿದ್ದಾರೆ. ಮಹೇಶಪ್ಪ ಕಳೆದ 27 ವರ್ಷಗಳಿಂದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶಿಕ್ಷಕರೂ, ವಿಭಾಗದ ಮುಖ್ಯಸ್ಥರೂ, ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಾಗಾದರೆ ಇದ್ಯಾವುದಕ್ಕೂ ಮಹೇಶಪ್ಪನವರಿಗೆ ಕಾನೂನಿನಡಿ ಅರ್ಹತೆಯಿಲ್ಲ. ಹಾಗಾದರೆ ಅವರ ಇಡಿಯ ವೃತ್ತಿ ಜೀವನದುದ್ದಕ್ಕೂ ಅವರು ಸುಳ್ಳು ದಾಖಲೆಗಳನ್ನೇ ನೀಡುತ್ತಾ ಬಂದಿದ್ದಾರಾ? ಈ ಕುರಿತು ಈ ಕೂಡಲೇ ತನಿಖೆಯಾಗಬೇಕು. ಅದೊಮ್ಮೆ ನಿಜವಾದರೆ ಅವರ ಇಡಿಯ ವೃತ್ತಿ ಜೀವನವೇ ಪ್ರಶ್ನಾರ್ಹವಾಗುತ್ತದೆ. ಈ ಹಿಂದೆ ಇಂತಹುದೇ ಒಂದು ಪ್ರಕರಣದಲ್ಲಿ ಕರ್ನಾಟಕ ಆಡಳಿತ ಆಯೋಗವು ಸುಳ್ಳು ಮಾಹಿತಿ ಮತ್ತು ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ ವ್ಯಕ್ತಿಯನ್ನು ಆ ಕೂಡಲೇ ಸೇವೆಯಿಂದ ವಜಾಗೊಳಿಸಿದ್ದಲ್ಲದೆ, ಅದುವರೆಗೂ ಆತ ಪಡೆದುಕೊಂಡಿದ್ದ ಭತ್ಯೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂಬ ತೀರ್ಪೊಂದನ್ನು ನೀಡಿದ ನೆನಪು. ಮಹೇಶಪ್ಪನವರಿಗೂ ಅದೇ ಸಿದ್ಧಾಂತ ಅನ್ವಯವಾಗಬೇಕಲ್ಲವೆ?

ಇಷ್ಟೇ ಅಲ್ಲ ಮಹೇಶಪ್ಪನವರು ತಮ್ಮ ಸಂಶೋಧನೆಯ ಬಗ್ಗೆಯೂ ಸುಳ್ಳು ಮಾಹಿತಿ ಮತ್ತು ದಾಖಲೆಗಳನ್ನು ನೀಡಿದ್ದಾರೆ. ರಾಜಭವನಕ್ಕೆ ಸಲ್ಲಿಸಿರುವ ಮಾಹಿತಿಯ ಪ್ರಕಾರ ಅವರು ಪ್ರತಿಷ್ಠಿತ ಡಿಆರ್ಡಿಒದ ಅಂಗ ಸಂಸ್ಥೆಯಾದ ಏರೋನಾಟಿಕ್ಸ್ ರಿಸರ್ಚ್  ಅಂಡ್ ಡೆವೆಲಪ್ಮೆಂಟ್ ಬೋರ್ಡ್ನಲಿ 8 ಸಂಶೋಧನಾ ಯೋಜನೆಗಳನ್ನು ಕೈಗೊಂಡಿದ್ದಾರೆ. ಈ ಮಾಹಿತಿಯೂ ಸುಳ್ಳು ಎಂಬ ಬಲವಾದ ಆರೋಪಗಳ ಹಿನ್ನೆಲೆಯಲ್ಲಿ ಈ ಕುರಿತು ಸೂಕ್ತ ಮಾಹಿತಿ ನೀಡುವಂತೆ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಯವರು ಏರೋನಾಟಿಕ್ಸ್ ರಿಸರ್ಚ್ರ ಅಂಡ್ ಡೆವೆಲಪ್ಮೆಂಟ್ ಬೋರ್ಡ್ನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ಅವರು ಮಹೇಶಪ್ಪನವರು ಹೇಳಿಕೊಂಡ 8 ಸಂಶೋಧನೆಗಳಲ್ಲಿ ಒಂದು ಮಾತ್ರ ವಿಟಯುಗೆ ಸಂಬಂಧ ಪಟ್ಟಿದ್ದಾಗಿದ್ದು ಇನ್ನು ಮಿಕ್ಕ 7 ಸಂಶೋಧನೆಗಳು ಇತರೆ ರಾಜ್ಯಗಳಿಗೆ ಸಂಬಂಧಪಟ್ಟಿದ್ದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ತಾನಿದವರೆಗೂ 4 ವಿದ್ಯಾರ್ಥಿಗಳ ಪಿಎಚ್ಡಿಗೆ ಗೈಡ್ ಮಾಡಿದ್ದೇನೆಂದು ಹೇಳಿಕೊಂಡಿದ್ದಾರೆ. ಆದರೆ ವಿಟಿಯುನ ಯಾವ ವಿದ್ಯಾರ್ಥಿಗಳಿಗೂ ಇವರು ಗೈಡ್ ಆಗಿಲ್ಲ. ಇನ್ನು ಇತರೆ ವಿವಿಗಳ ವಿದ್ಯಾರ್ಥಿಗಳಿಗೆ ಗೈಡ್ ಆಗಬೇಕೆಂದರೆ ವಿವಿಯಿಂದ ಪಡೆಯಬೇಕಾದ ಅನುಮತಿಯನ್ನೂ ಇವರು ಪಡದೇ ಇಲ್ಲ ಇದುವರೆಗೂ. ಅಲ್ಲಿಗೆ ಅದೂ ಸುಳ್ಳು. ಹೀಗೆ ಮಹೇಶಪ್ಪನವರ ಅಕಾಡೆಮಿಕ್ ದಾಖಲೆಗಳೆಲ್ಲವೂ ಉತ್ಪ್ರೇಕ್ಷಿತ ಸುಳ್ಳಿನ ಕಂತೆಗಳು. ಈತನ ನಿಜ ಅಕಾಡೆಮಿಕ್ ರೆಕಾರ್ಡ್ ಅನ್ನು ಗಣನೆಗೆ ತೆಗೆದುಕೊಂಡರೆ ಯಾವುದೇ ರೀತಿಯಲ್ಲೂ ಈತ ಉಪಕುಲಪತಿಯಾಗಲಿಕ್ಕೆ ಅನರ್ಹ ಮತ್ತು ಅಯೋಗ್ಯ. ಇಂತಹ ಒಬ್ಬ ಬೋಗಸ್ ಆಸಾಮಿಯನ್ನು ನಮ್ಮ ರಾಜ್ಯಪಾಲರು ವಿಟಿಯುದಂತಹ ಪ್ರತಿಷ್ಠಿತ ವಿವಿಗೆ ಉಪಕುಲಪತಿಗಳಾಗಿ ನೇಮಿಸಿದ್ದಾರೆ.

ಮಹೇಶಪ್ಪನವರ ಹೆಸರನ್ನು ಸೂಚಿಸಿದ ಸರ್ಚ ಕಮಿಟಿಯವರನ್ನು ಈ ಕುರಿತು ಪ್ರಶ್ನಿಸಲಾಗಿ ಅವರು ನಮಗೆ ರಾಜ್ಯಪಾಲರ ಕಛೇರಿಯಿಂದ ಬಂದ ಬಯೋಡಾಟಾಗಳನ್ನೇ ನಾವು ನಮ್ಮ ಆಯ್ಕೆಗೆ ಮೂಲವಾಗಿಟ್ಟುಕೊಂಡೆವು. ಅದರ ಆಧಾರದ ಮೇಲೆಯೇ ನಾವು ಮೂವರ ಹೆಸರನ್ನು ಅಕಾರಾದಿಯಾಗಿ ರಾಜ್ಯಪಾಲರಿಗೆ ಸುಚಿಸಿದೆವು ಎಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾರೆ. ಹಾಗಾದರೆ ರಾಜ್ಯಪಾಲರ ಕಛೇರಿಯು ಬಂದ ಅರ್ಜಿಗಳ ಸತ್ಯಾಸತ್ಯತೆಗಳನ್ನು ಪರಾಂಬರಿಸದೆ ಸರ್ಚ್ರ್ ಕಮಿಟಿಗೆ ಗುಜರಾಯಿಸಿಬಿಟ್ಟಿತೆ? ಹೌದು ಇಲ್ಲಿ ನಡೆದಿರುವ ಅಚಾತುರ್ಯವೇ ಅದು. ಹೋಗಲಿ ನಂತರ ಅಕಾರಾದಿಯಾಗಿ ಮೂರು ಹೆಸರುಗಳು ಸೂಚಿಸಲ್ಪಟ್ಟವಲ್ಲ, ಆಗ ಆ ಮೂರು ಹೆಸರುಗಳಲ್ಲಿ ಮಹೇಶಪ್ಪನವರನ್ನೇ ರಾಜ್ಯಪಾಲರು ಏಕೆ ಆರಿಸಿದರು? ಆಗಲಾದರೂ ಅವರ ಹಿನ್ನೆಲೆಯನ್ನು ಕೂಲಂಕುಷವಾಗಿ ವಿಚಾರಿಸಬಹುದಿತ್ತಲ್ಲವೇ? ಇಲ್ಲಿ ಮಹೇಶಪ್ಪನವರು ತಮ್ಮ ನೇಮಕಕ್ಕೆ ರಾಜ್ಯಪಾಲರ ಬಳಿ ಲಾಬಿ ನಡೆಸಿದ್ದರೆ? ಅಂತಹುದೊಂದು ಲಾಬಿಗೆ ಭಾರಧ್ವಾಜ್ ಮಣಿದರೆ?

ಈಗ ರಾಜ್ಯಪಾಲ ಹನ್ಸರಾಜ್ ಭಾರಧ್ವಾಜ್ ಅವರಿಗೆ ಅತ್ತ ದರಿ ಇತ್ತ ಪುಲಿ ಎಂಬಂತಹ ಸ್ಥಿತಿ. ಅತ್ತ ಮಹೇಶಪ್ಪನವರ ತಪ್ಪುಗಳು ದಾಖಲೆ ಸಮೇತ ಸಾಬೀತಾಗುತ್ತಿದೆ, ಈಗ ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ಉಪಕುಲಪತಿಗಳ ಹುದ್ದೆಯಿಂದ ವಜಾಗೊಳಿಸಿದರೆ ಅವರ ನೇಮಕವೇ ತಪ್ಪು ಎಂಬುದನ್ನು ಒಪ್ಪಿಕೊಂಡಂತಾಗುತ್ತದೆ. ಒಂದು ಗೌರವಾನ್ವಿತ ವಿವಿಗೆ ಇಂತಹ ಒಬ್ಬ ಫ್ರಾಡ್ ಅನ್ನು ಉಪಕುಲಪತಿಗಳಾಗಿ ನೇಮಿಸಿದ ಆರೋಪವನ್ನು ಹೊರಬೇಕಾಗುತ್ತದೆ. ಇಲ್ಲ ಈ ಆರೋಪಗಳೆಲ್ಲವೂ ಸುಳ್ಳು ಎಂದೋ ಅಥವಾ ವಾಸ್ತವಾಂಶವನ್ನು ನೋಡಿದರೂ ನೋಡದೆ ಇದ್ದು ಪರೋಕ್ಷವಾಗಿ ಅವರನ್ನು ಸಮರ್ಥಿಸಿದರೆ ಅದು ಅವರ ನೈತಿಕ ಭಾಷಣಗಳಿಗೆ ತೀರದ ಕಳಂಕ. ರಾಜ್ಯಪಾಲರ ಮುಂದಿನ ನಡೆಯಾದರೂ ಯಾವುದು? ಇದು ಸದ್ಯ ಅಕಾಡೆಮಿಕ್ ವಲಯಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಪ್ರಶ್ನೆ. ರಾಜ್ಯಪಾಲರು ಆಗಿರುವ ಪ್ರಮಾದವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಮಹೇಶಪ್ಪನವರನ್ನು ಉಪಕುಲಪತಿಗಳ ಹುದ್ದೆಯಿಂದ ವಜಾಗೊಳಿಸಿ ನೂತನ ಸಮರ್ಥ ಉಪಕುಲಪತಿಗಳನ್ನು ನೇಮಿಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮರ್ಯಾದೆಯನ್ನು ಪುನಃ ದಕ್ಕಿಸಿಕೊಡಬೇಕೆಂಬುದು ಪ್ರಜ್ಞಾವಂತರೆಲ್ಲರ ಆಗ್ರಹ.

Proudly powered by Blogger
Theme: Esquire by Matthew Buchanan.
Converted by LiteThemes.com.