ಸ್ವಾತಂತ್ರಕ್ಕೆ ಹಪಹಪಿಸುವ ಒಬ್ಬ ನಾಯಕ ವೇಷ ಮರೆಸಿ ದೇಶಾಂತರ ಹೊರಟ!


   Quest for Freedom, Story of an escape   – Surjit Singh Barnala 
ರಾಜಾಜಿನಗರದ ಬಾಷ್ಯಂ ವೃತ್ತದಲ್ಲಿರುವ ನನ್ನ ನೆಚ್ಚಿನ ಹಳೇ ಪುಸ್ತಕಗಳ ಅಂಗಡಿಯಲ್ಲಿ ಹುಡುಕುತ್ತಿದ್ದಾಗ ಸಿಕ್ಕ ಪುಸ್ತಕ ಇದು. Quest for Freedom, Story of an escape – Surjit Singh Barnala . ಪುಸ್ತಕದ ಹೆಸರು ಮತ್ತು ಬರಹಗಾರರ ಹೆಸರು ರಿಂಗಣಿಸಿತು. ಕೊಂಡು ತಂದಿಟ್ಟೆ. ಓದಿದ್ದು ಮಾತ್ರ ತೀರಾ ಇತ್ತೀಚೆಗೆ. ಸುರ್ಜಿತ್ ಸಿಂಗ್ ಬರ್ನಾಲ ಸದ್ಯ ತಮಿಳುನಾಡಿನ ರಾಜ್ಯಪಾಲರು, ಪಂಜಾಬದ ಮಾಜಿ ಮುಖ್ಯಮಂತ್ರಿಗಳು ಅಕಾಲಿದಳದ ಅತಿ ಹಿರಿಯ ರಾಜಕಾರಣಿಗಳು. ಇವರು ತಮ್ಮ ಅನುಭವವೊಂದನ್ನು ದಾಖಲಿಸುತ್ತಾ ಹೋಗುತ್ತಾರೆ. ಅದೇ Quest for Freedom, Story of an escape.

80ರ ದಶಕದಲ್ಲಿ ಪಂಜಾಬ ಸಿಖ್ ಉಗ್ರವಾದದಿಂದ ನರಳುತ್ತಿದ್ದ ಕಾಲದಲ್ಲಿ ಬರ್ನಾಲ ಸಾಬ್ ತಮ್ಮ ರಾಜಕೀಯ ಕೆರಿಯರ್ನ ಉಚ್ಛ್ರಾಯದಲ್ಲಿದ್ದರು. 1984ರ ಆಪರೇಷನ್ ಬ್ಲೂ ಸ್ಟಾರ್ನ ನಂತರ ಅಕಾಲಿದಳದ ಸೌಮ್ಯವಾದಿ ಬಣ ಸಂತ ಲೋಂಗೋವಾಲ್ ನೇತೃತ್ವದ ಶಿರೋಮಣಿ ಅಕಾಲಿದಳ (ಲೋಂಗೋವಾಲ್) ಅಧ್ಯಕ್ಷರಾಗಿದ್ದರು. ಲೋಂಗೋವಾಲ್ ಅವರು ದೆಹಲಿಯೊಂದಿಗೆ ಸಂಘರ್ಷಕ್ಕಿಳಿಯದೆ ಶಾಂತಿ ಮಾತುಕತೆಗೆ ಮುಂದಾದರು. ರಾಜೀವ್ ಗಾಂಧಿ ಮತ್ತು ಲೋಂಗೋವಾಲ್ ನಡುವೆ ಶಾಂತಿ ಮಾತುಕತೆಗಳು ಫಲಕಾರಿಯಾದುದಲ್ಲದೆ ಲೋಂಗೋವಾಲ್ ಅಕಾರ್ಡ್ ಎಂಬ ಒಂದು ಒಪ್ಪಂದವೂ ಆಯಿತು. ಇದು ಪಂಜಾಬದಲ್ಲಿ ನೆಲೆಸಿದ್ದ ಒಂದು stalemateಗೆ ಇತಿಶ್ರೀ ಹಾಡಿತ್ತು. ಇದು ಪಂಜಾಬದ ಉಗ್ರಗಾಮಿ ಕಟ್ಟರ್ ಸಿಖ್ಖರಿಗೆ ಇಷ್ಟವೇ ಆಗಲಿಲ್ಲ. ಆ ಒಪ್ಪಂದ ಜಾರಿಯಾಗುವಷ್ಟರಲ್ಲಿ ಉಗ್ರಗಾಮಿಗಳು ಲೋಂಗೋವಾಲ್ ಅವರನ್ನು ಹೊಡೆದುರುಳಿಸಿದ್ದರು. ಪಕ್ಷ ಅಧಿಕಾರಕ್ಕೆ ಬಂದಿತ್ತು, ಲೋಂಗೋವಾಲ್ ಅವರ ಅನುಪಸ್ಥಿತಿಯಲ್ಲಿ ಅನಾಯಾಸವಾಗಿ ಸುರ್ಜೀತ್  ಸಿಂಗ್ ಬರ್ನಾಲ 1985ರಲ್ಲಿ ಪಂಜಾಬದ ಮುಖ್ಯಮಂತ್ರಿಯಾದರು. 1987ರವರೆಗೂ ಇವರ ಸರಕಾರವಿತ್ತು. ನಂತರ ಪಂಜಾಬದಲ್ಲಿ ಟೆರರಿಸಂಗೆ ಅಂಕುಶವಿಲ್ಲದೆ ಆಗಿದೆಯೆಂಬ ಕಾರಣ ಮುಂದೊಡ್ಡಿ ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ಕೇಂದ್ರದ ಜೊತೆ ಅಧಿಕಾರಕ್ಕಾಗಿ ಇವರು ರಾಜಿಯಾಗಿದ್ದಾರೆ, ಇವರು ಸಿಖ್ ಪಂಥದ ದ್ರೋಹಿಗಳು ಎಂಬುದು ಸಿಖ್ ಉಗ್ರಗಾಮಿಗಳ ಆರೋಪವಾಗಿತ್ತು. ಎಲ್ಲ ಸಿಖ್ ಉಗ್ರಗಾಮಿ ಸಂಘಟನೆಗಳ ಹಿಟ್ ಲಿಸ್ಟ್ನಲ್ಲಿದ್ದ ಮೊದಲ ಹೆಸರೇ ಸುರ್ಜೀತ್ ಸಿಂಗ್ ಬರ್ನಾಲ! ನಾಲ್ಕಾರು ಬಾರಿ ಅವರ ಮೇಲೆ ಹತ್ಯಾ ಯತ್ನಗಳೂ ನಡೆದಿದ್ದವಾದರೂ ಕೊಂಚದರಲ್ಲೇ ಅವೆಲ್ಲವನ್ನೂ ಜಯಿಸಿ ಉಳಿದಿದ್ದರು ಬರ್ನಾಲ. ಹಾಗಾಗಿ ಬರ್ನಾಲ ಅವರಿಗೆ ದಿನದ 24 ಘಂಟೆಯೂ ಜೆಡ್ ಸೆಕ್ಯೂರಿಟಿಯನ್ನು ನೀಡಲಾಗಿತ್ತು. ಇದು ಅವರು ಮುಖ್ಯಮಂತ್ರಿಯಾಗಿ ಇಳಿದು ಹತ್ತಿರತ್ತಿರ ದಶಕವಾದರೂ ಮುಂದುವರೆದಿತ್ತು. ಅವರಿಗೆ ಆ ಮಟ್ಟದ ಥ್ರೆಟ್ ಇತ್ತು. ಇದು ಈ ಪುಸ್ತಕದೊಳಗೆ ಹೋಗುವ ಮುನ್ನ ಇದು ಒಂದು ಸಣ್ಣ background info.

ನಮಗೆ ರಾಜಕಾರಣಿಗಳು ಅಂದ ಕೂಡಲೇ ದೇವೇಗೌಡರು, ಯಡಿಯೂರಪ್ಪ, ಲಲ್ಲೂ ಪ್ರಸಾದ್ ಯಾದವ್ರಂಥ 24 ಗಂಟೆಗಳ ರಾಜಕಾರಣಿಗಳ ಚಿತ್ರವೇ ಕಣ್ಣ ಮುಂದೆ ಬರುತ್ತದೆ. ಯಾವುದೇ ಸೂಕ್ಷ್ಮ ಸಂವೇದನೆಗಳನ್ನು ನಾವು ಇವರಿಗೆ ಆರೋಪಿಸುವ ತಪ್ಪು ಮಾಡಲು ಹೋಗುವುದಿಲ್ಲ. ರಾಜಕಾರಣಿಗಳ ಚಿತ್ರ ಕೂಡ ನಮ್ಮಲ್ಲಿ ಒಂದು stereotype ಆಗಿಬಿಟ್ಟಿದೆ. ಇದರ ಹೊರತಾಗಿ ಅವರನ್ನು ನಾವು ಚಿತ್ರಿಸಿಕೊಳ್ಳುವುದೇ ಇಲ್ಲ. ಆದರೆ ಬನರ್ಾಲಾ ಸಾಬ್ ಅವರು ಇದಾವುದೇ ಅಚ್ಚಿಗೆ ಹೊಂದುವುದೇ ಇಲ್ಲ. 1987ರಲ್ಲಿ ಮುಖ್ಯಮಂತ್ರಿ ಗದ್ದುಗೆಯಿಂದ ಇಳಿದ ಮೇಲೆ ಅವರು ರಾಜಕೀಯವಾಗಿ ಸಕ್ರಿಯವಾಗೇ ಇದ್ದರು, ಬರಬರುತ್ತಾ ನೇಪಥ್ಯಕ್ಕೆ ಸರಿಯುತ್ತಿದ್ದ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ ಮಾಡಲಾಯಿತು. ಅದು 1990. ಆದರೆ 1991ರಲ್ಲಿ ಕರುಣಾನಿಧಿ ಸರ್ಕಾರವನ್ನು ಕಿತ್ತೊಗೆಯಲು ಅವರು ಒಪ್ಪಿಗೆ ಸೂಚಿಸಿದಿದ್ದರಿಂದ ಅವರನ್ನು ಬಿಹಾರದ ರಾಜ್ಯಪಾಲರಾಗಿ ವರ್ಗ ಮಾಡಲಾಯಿತು. ಇದನ್ನು ಪ್ರತಿಭಟಿಸಿ ಅವರು ರಾಜೀನಾಮೆಯಿತ್ತು ಪಂಜಾಬಕ್ಕೆ ಮರಳಿದರು. ಅಷ್ಟರಲ್ಲಿ ಅಕಾಲಿದಳವನ್ನು ಸುಖ್ಬೀರ್ ಸಿಂಗ್ ಬಾದಳ್ ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು.

ಬರ್ನಾಲ ತಮ್ಮ ನಿವೃತ್ತ ಜೀವನವನ್ನು ಕಳೆಯಲಾರಂಭಿಸಿದರು. ಆದರೆ ಅವರಿಗೆ ಅವರು ಬಯಸಿದ ಸ್ವಾತಂತ್ರ್ಯವಿರಲಿಲ್ಲ. ಸದಾಕಾಲ ಅವರ ಹಿಂದೆ ಹತ್ತಾರು ಶಸ್ತ್ರಸಜ್ಜಿತ ರಕ್ಷಣಾ ಪಡೆ. ಸ್ವಂತ ಊರಿಗೆ ಹೋದರೂ ಜನರೊಂದಿಗೆ ಬೆರೆಯುವಂತಿಲ್ಲ. ನಿಧಾನವಾಗಿ ಬರಬರುತ್ತಾ ಬರ್ನಾಲ ಅವರಿಗೆ ಪಂಜರದೊಳಗಿನ ಗಿಳಿಯ ಅನುಭವವಾಯಿತು. He craved for freedom, the one that he missed most from his life. ಅವರ ಸೆಕ್ಯೂರಿಟಿಯನ್ನು ಕಡಿತಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಆದರೆ ಅವರು ಇನ್ನೂ ಉಗ್ರಗಾಮಿಗಳ ಹಿಟ್ಲಿಸ್ಟ್ನಲ್ಲಿದ್ದುದರಿಂದ ಇದನ್ನು ಬರಿಸಲೇಬೇಕೆಂದು ಸರ್ಕಾರ ಕಡ್ಡಿ ತುಂಡು ಮಾಡಿತು. ಶುರುವಾಯಿತು ಅವರ Quest for Freedom. ಅದು 1994. ಏನೋ ನಿರ್ಧರಿಸಿದವರಂತೆ ರಾತ್ರಿ ಎಲ್ಲರೂ ಮಲಗಿದ ಮೇಲೆ ಟಾಯ್ಲೆಟ್ಗೆ ಹೋದವರೇ ಅವರ trademark ಬಿಳಿ ರೇಷ್ಮೇ ನೂಲಿನಂಥ ಗಡ್ಡಕ್ಕೆ ಕಪ್ಪು ಡೈ ಮಾಡಿಕೊಂಡರು. ತಮ್ಮ ಗಡ್ಡವನ್ನು ಮಡಚಿ ಕೆನ್ನೆಯ ಕೆಳಗೆ ಥತಾ ಎಂಬ ವಸ್ತ್ರದೊಂದಿಗೆ ಕಟ್ಟಿಕೊಂಡರು. ತಮ್ಮ ಟರ್ಬನ್ ಅನ್ನು ಟ್ರಕ್ ಡ್ರೈವರ್ಗಳು ಕಟ್ಟುವಂತೆ ಒಂದು ಬದಿಯಲ್ಲಿ ವಸ್ತ್ರ ಇಳಿಬಿಡುವಂತೆ ಕಟ್ಟಿದರು. ಅವರಿಗೇ ಆಶ್ಚರ್ಯ ಅವರನ್ನು ಅವರೇ ಗುರುತು ಹಿಡಿಯದಾದರು. ತಾನು ವಾರದೊಪ್ಪತ್ತು ಹೊರಗೆ ಹೋಗುತ್ತಿರುವುದಾಗಿಯೂ, ಗಾಬರಿ ಬೀಳುವ ಅವಶ್ಯಕತೆಯಿಲ್ಲ. ಹುಡುಕಿಸುವ ಪ್ರಯತ್ನವನ್ನೂ ಮಾಡಬೇಡಿ. ಹೊರಜಗತ್ತಿಗೆ ತಾನು ಸ್ನೇಹಿತನೊಬ್ಬನನ್ನು ನೋಡಲು ವಾರದೊಪ್ಪತ್ತು ಅರ್ಜೆನ್ಟೀನಗೆ ಹೋಗಿರುವುದಾಗಿ ಹೇಳು ಎಂದು ಹೆಂಡತಿಗೊಂದು ಪತ್ರ ಬರೆದಿಟ್ಟು, ಮನೆಯ ಹಿಂಬಾಗಿಲಿನಿಂದ ಹೊರನಡೆದುಬಿಟ್ಟರು. ಸೆಕ್ಯೂರಿಟಯವರು ಗಾಢ ನಿದ್ರೆಯಲ್ಲಿದ್ದರು. ಆಗ ಅವರಿಗೆ 69 ವರ್ಷ ವಯಸ್ಸು!

ಇಡೀ ಪುಸ್ತಕ ಅವರ ವಾರದೊಪ್ಪತ್ತಿನ ಈ ಸ್ವಾತಂತ್ರ್ಯದ ಅನುಭವ ಕಥಾನಕ. ಪುಸ್ತಕ ಮತ್ತು ಅದು ಹುಟ್ಟಿದ ಈ ಸಂದರ್ಭದಲ್ಲೇ ಒಂದು ಹಕ್ಕಿಯ ಮನಸ್ಸಿದೆ, ಕಾವ್ಯವಿದೆ. ಮನೆಯಿಂದ ಹೊರಬಿದ್ದ ಬರ್ನಾಲ ಅವರ ಅನುಭವ ಕಥಾನಕದ ನಡುವೆ ಅವರ ಸ್ಮೃತಿ ಪಟಲದಿಂದ ಅವರ ಇಡೀ ಜೀವನದ ಹೈಲೈಟ್ಗಳನ್ನು ನಮಗೆ ಕಟ್ಟಿಕೊಡುತ್ತಾರೆ. ಇತ್ತೀಚೆಗೆ ನಾನು ಓದಿದ ಅತ್ಯುತ್ತಮ ಪುಸ್ತಕಗಳಲ್ಲಿ ಇದೂ ಒಂದು. ಬರ್ನಾಲ  ಅವರ ಭಾಷೆ ಸರಳ. ಇಲ್ಲಿ ಭಾಷೆಗಿಂತಲೂ ಅವರ ಅನುಭವಾಮೃತವೇ ಮುಖ್ಯ. ಮನೆಯಿಂದ ಹೊರಬಿದ್ದ ಬರ್ನಾಲ ಅವರು ಟ್ರಕ್ ಡ್ರೈವರ್ ಒಬ್ಬನೊಡಗೂಡಿ ಇಂಡೋರ್ ಕಡೆ ಪ್ರಯಾಣ ಬೆಳೆಸುತ್ತಾರೆ. ಆ ಟ್ರಕ್ ಡ್ರೈವರ್ ಅವರ ಹೆಸರು ಕೇಳಿದಾಗಲೇ ಅವರಿಗೆ ಅದೊಂದಿದೆ ಎನ್ನುವುದು ಹೊಳೆಯುವುದು! ಸಮಯಕ್ಕೊಂದು ಸುಳ್ಳು - ಕರ್ತಾರ್ ಸಿಂಗ್! ಅವರಿಗೆ ಒಬ್ಬ ಸಾಮಾನ್ಯನಂತೆ ದೇಶ ಸುತ್ತಬೇಕಿತ್ತು. ರಸ್ತೆಯ ಮೇಲಿನ ಜನರೊಂದಿಗೆ ಪುನಃ ಸಂಪರ್ಕ ಸಾಧಿಸಬೇಕಿತ್ತು. ಇದೇ ಕೋವಿನಲ್ಲಿ ಅವರ ಪ್ರಯಾಣದುದ್ದಕ್ಕೂ ಅವರು ಪುನಃ ಅನುಭವಿಸುವ ಸಣ್ಣ ಸಣ್ಣ ಸಂತೋಷಗಳನ್ನು ಒಂದು ಮಗುವಿನಂತೆ ಸಂಭ್ರಮಿಸಿ ದಾಖಲಿಸುತ್ತಾ ಹೋಗುತ್ತಾರೆ. ಉದಾ: ರಸ್ತೆ ಬದಿಯ ಢಾಭಾದಲ್ಲಿ ತಿಂದ ಬಗ್ಗೆ `Roadside dhabas serve better food than most five-star hotels and at one-fiftieth the price. The service is normally superlative' ಎಂದು ಬರೆಯುತ್ತಾರೆ. ಇಂಡೋರ್ ಇಂದ ಅಜಂತ ಎಲ್ಲೋರಾ, ಅಲ್ಲಿಂದ ಲಕ್ನೌ. ಹಫೀಜ್ ಎಂಬಾತನ ಟ್ರಕ್ನ ಟಾಪ್ ಮೇಲೆ ಕೂತು ಹೋಗುತ್ತಾರೆ ಲಕ್ನೌಗೆ. ಈ ಅನುಭವವನ್ನು ಅವರು `It was like being on the first floor of a moving house' ಎಂದು ಬಣ್ಣಿಸುತ್ತಾರೆ. ಅವರ ಈ ಅನುಭವ ಕಥಾನಕದ ನಡುವೆಯೇ ತಲೆ ಹಾಕುವುದು ಅವರ ಅಟೋಬಯೋಗ್ರಫಿ. ಅವರ ಬಾಲ್ಯ, ಅವರ ರಾಜಕಾರಣದ ಮೊದಲ ದಿನಗಳು, ಎಮರ್ಜೆನ್ಸಿಯ ದಿನಗಳು, ಸೆರೆಮನೆಯಲ್ಲಿ ಅವರು ಚಿತ್ರಕಲೆಗೆ ಒಗ್ಗಿಕೊಂಡದ್ದು, 77ರಲ್ಲಿ ಮುರಾರ್ಜಿ  ದೇಸಾಯಿಯವರ ಸರ್ಕಾರದಲ್ಲಿ ಕೃಷಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು, ಆಪರೇಷನ್ ಬ್ಲೂ ಸ್ಟಾರ್, ಅವರನ್ನು ಸಿಖ್ ಪಂಥದಿಂದ ಹೊರಹಾಕಿದ್ದು, ಪಂಜಾಬದ ಮುಖ್ಯಮಂತ್ರಿಯಾದದ್ದು, ಚಂದ್ರಶೇಖರ ಸರ್ಕಾರ ಪತನವಾದಾಗ ಎಲ್ಲ ಪಕ್ಷಗಳೂ ಕೂಡಿದ ನ್ಯಾಷನಲ್ ಸರ್ಕಾರವೊಂದರ ರಚನೆಯ ಕಸರತ್ತು, ಪ್ರಧಾನಿ ಪಟ್ಟಕ್ಕೆ ಸರ್ವಸಮ್ಮತವಾದ ಅಭ್ಯರ್ಥಿಯಾಗಿ ಇವರ ಹೆಸರು ಚಾಲನೆಗೆ ಬಂದದ್ದು ಎಲ್ಲವನ್ನೂ ದಾಖಲಿಸುತ್ತಾ ಹೋಗುತ್ತಾರೆ.

ಸ್ವಾತಂತ್ರಕ್ಕೆ ಹಪಹಪಿಸುವ ಒಬ್ಬ ನಾಯಕ ವೇಷ ಮರೆಸಿ ದೇಶಾಂತರ ಹೊರಡುವುದು ನಮ್ಮ ಇವತ್ತಿನ ಕಾಲಮಾನದಲ್ಲಿ ಕಾವ್ಯ! ನಮ್ಮ ನಡುವೆ ಇಂತಹ ಸೂಕ್ಷ್ಮ ಸಂವೇದನೆಯುಳ್ಳ ರಾಜಕಾರಣಿಗಳೂ ಇದ್ದಾರೆ ಎಂಬುದೇ ಹಲವರಿಗೆ ಆಶ್ಚರ್ಯವಾಗಬಹುದು. ಪುಸ್ತಕದಲ್ಲೇನಿದೆ ಎನ್ನುವುದನ್ನು ನಾನು ನಿಮಗೆ ಹೇಳಬಹುದೇ ವಿನಃ ಆ ಅನುಭವವನ್ನು ನಿಮ್ಮದಾಗಿಸಲಾಗುವುದಿಲ್ಲ. ಸಾಧ್ಯವಾದರೆ ಈ ಪುಸ್ತವನ್ನು ಓದಿ. i strongly recommend it. it is a very good read.

One thoughts on “ಸ್ವಾತಂತ್ರಕ್ಕೆ ಹಪಹಪಿಸುವ ಒಬ್ಬ ನಾಯಕ ವೇಷ ಮರೆಸಿ ದೇಶಾಂತರ ಹೊರಟ!

suhas said...

Very informative. Hope I could find this book somewhere.

Proudly powered by Blogger
Theme: Esquire by Matthew Buchanan.
Converted by LiteThemes.com.