ಕನ್ನಡಾಸಕ್ತಿಯ ತೆರೆದ ಹೃದಯ ಶಸ್ತ್ರ ಚಿಕಿತ್ಸೆ!


ರಾಜಶೇಖರ ಮೂರ್ತಿಗಳ ಸಾವಿನೊಂದಿಗೆ ತೆರವಾದ ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ನಡೆಯುತ್ತಲಿದ್ದು, ರಾಜ್ಯಸಭಾ ರಾಜಕಾರಣ ಮತ್ತೆ ಸುದ್ದಿಯಲ್ಲಿದೆ. ಸದ್ಯ ಸದನದಲ್ಲಿ ಬಿಜೆಪಿಗೆ 105ರ ಸಂಖ್ಯಾಬಲವಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿರುವ ಬಲ ಬರಿಯ 98. ಹಾಗಾಗಿ ಈಗಿರುವ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಹೇಳುವುದಾದರೆ ಇರುವ ಒಂದು ಸ್ಥಾನವನ್ನು ಸ್ವಾಭಾವಿಕವಾಗಿ ಬಿಜೆಪಿ ಸುಲಭವಾಗಿ ತನ್ನ ಕೈವಶ ಮಾಡಿಕೊಳ್ಳಲಿದೆ. ಹಾಗಾಗಿ ಬಿಜೆಪಿಯಲ್ಲಿ ರಾಜಕೀಯ ಗರಿಗೆದರಿತ್ತು. ರಾಜ್ಯಸಭಾ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ವಾಮನಾಚಾರ್ಯರಿಂದ ಹಿಡಿದು ಧನಂಜಯ ಕುಮಾರ್ ಅವರವರೆಗೆ. ಇದರಲ್ಲಿ ತಮ್ಮ ಬೋಪರಾಕುದಾರ ಧನಂಜಯ್ ಕುಮಾರ್ ಅವರನ್ನು ಹಿಂದೊಮ್ಮೆಯೂ ಕೂಡ ರಾಜ್ಯಸಭೆಗೆ ಕಳಿಸಲು ಶತಪ್ರಯತ್ನ ನಡೆಸಿ ವಿಫಲವಾಗಿದ್ದ ಮುಖ್ಯಮಂತ್ರಿಗಳು ಈ ಬಾರಿ ಶತಾಯಗತಾಯ ಅವರನ್ನೇ ಚುನಾಯಿಸಬೇಕೆಂದು ದೆಹಲೀ ಯಾತ್ರೆಗಳನ್ನೇನೋ ಕೈಗೊಂಡರು. ಆದರೆ ಹೈಕಮಾಂಡ್ನ ಮಟ್ಟದಲ್ಲಿ ಇವತ್ತು ಯಡಿಯೂರಪ್ಪ ಬಿಜೆಪಿಗೆ ದೊಡ್ಡ ಎಂಬರಾಸ್ಮೆಂಟು  ಎಂದು ನೋಡುವವರೇ ಹೆಚ್ಚಾಗಿದ್ದಾರೆ. ಅವರ ಮಾತಿಗೆ ಬೆಲೆ ಇಲ್ಲ.

ಅದಕ್ಕೆ ಸರಿಯಾಗಿ ಇವರು ಹಿಡಿದು ಹೋಗಿರುವುದು ಧನಂಜಯ ಕುಮಾರ್ ಅವರ ಹೆಸರನ್ನು. ಅವರಿಗೊಂದು ಇತಿಹಾಸವೇ ಇದೆ. ಸದರಿ ಧನಂಜಯ ಕುಮಾರ್ ವಾಜಪೇಯಿ ಅವರ ಸರ್ಕಾರದಲ್ಲಿ ವಿತ್ತ ಸಚಿವಾಲಯದ ರಾಜ್ಯ ಸಚಿವರಾಗಿದ್ದರು. ಆಗ ಪ್ರಮುಖ ನಟಿಯೊಬ್ಬಳ ಮನೆಯ ಮೇಲೆ ನಡೆದ ಐಟಿ ದಾಳಿಯಿಂದ ರಕ್ಷಿಸಲು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದರೆಂಬ ಆರೋಪದ ಮೇಲೆ ಅವರನ್ನು ಆ ಕೂಡಲೆ ಸಂಪುಟದಿಂದ ವಜಾ ಮಾಡಲಾಗಿತ್ತು. ನಂತರ ಧನಂಜಯ ಕುಮಾರ್ ಮೇಲೇಳಲಾಗಲೇ ಇಲ್ಲ. ಇಂತಿಪ್ಪ ಧನಂಜಯ ಕುಮಾರ್ ಯಡಿಯೂರಪ್ಪನವರ ಅತ್ಯಾಪ್ತ. ಇವರ ಹೆಸರು ಹಿಡಿದು ಹೋದ ಯಡಿಯೂರಪ್ಪನವರ ಮಾನಹಾನಿಯಾಯಿತು ಅಷ್ಟೆ. ಇದೇ ಸಂದರ್ಭವನ್ನು ಕಾಯುತ್ತಿದ್ದ ಅನಂತ್ ಕುಮಾರ್ ಶರವೇಗದಲ್ಲಿ ತಮ್ಮ ಅಸ್ತ್ರ ಪ್ರಯೋಗಿಸಿದ್ದಾರೆ. ರಾಜ್ಯದಿಂದ ಖಾಲಿಯಿರುವ ಒಂದು ರಾಜ್ಯಸಭಾ ಸ್ಥಾನಕ್ಕೆ ಭಾರತದ ಪ್ರಸಿದ್ಧ ನಟಿ dream girl ಎಂದೇ ಖ್ಯಾತರಾದ ಹೇಮಾಮಾಲಿನಿಯವರ ಹೆಸರನ್ನು ಸೂಚಿಸಿ ವರಿಷ್ಠರ ಆದೇಶ ಹೊರಡಿಸಿಯೇ ಬಿಟ್ಟಿದ್ದಾರೆ. ಮೊನ್ನೆ ಹೇಮಾಮಾಲಿನಿಯವರ ನಾಮಪತ್ರಕ್ಕೆ ಯಡಿಯೂರಪ್ಪನವರೇ ಸಾಕ್ಷಿ ಸಹಿ ಹಾಕಿದರು. ಅಲ್ಲಿಗೆ ಯಡಿಯೂರಪ್ಪನವರಿಗೆ ಮತ್ತೊಂದು ಹಿನ್ನೆಡೆಯಾಗಿರುವುದಂತೂ ದಿಟ.

ಯಡಿಯೂರಪ್ಪ ಅನಂತರ ಈ ಮೇಲಾಟಗಳಲ್ಲಿ ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಮತ್ತೊಬ್ಬರು ಕನ್ನಡೇತರರು ಪರರಾಜ್ಯದವರು ಕಾಲಿಡುವಂತಾಗಿರುವುದು ದುರ್ದೈವ. ಇದಕ್ಕೆ ನಾಡಿನ ಎಲ್ಲಾ ವಲಯಗಳಿಂದಲೂ ವ್ಯಾಪಕ ಟೀಕೆ ವಿರೋಧಗಳೂ ವ್ಯಕ್ತವಾಗಿವೆ. ಇದನ್ನು ಈಶ್ವರಪ್ಪನವರಂಥವರು ಹೇಮಾಮಾಲಿನಿಯೇನೂ ಭಾರತೀಯರಲ್ವೇನ್ರಿ? ಅವರು ಯಾಕ್ರೀ ರಾಜ್ಯಸಭೆಗೆ ಹೋಗಬಾರದು? ಎಂಬ ಪರಮ ಅಪ್ರಬುದ್ಧ ಅಸಂಬದ್ಧ ಸಮರ್ಥನೆಗಳನ್ನು ಕೊಡುತ್ತಿದ್ದಾರೆ. ಸ್ವಾಮಿ ಈಶ್ವರಪ್ಪನವರೇ ಯಾರು ಹೇಳಿದವರು ಹೇಮಾಮಾಲಿನಿಯವರು ರಾಜ್ಯಸಭೆಗೆ ಹೋಗಬಾರದು ಅಂತ, ನಾವು ಹೇಳುತ್ತಿರುವುದು ಅವರು ನಮ್ಮ ರಾಜ್ಯದವರಲ್ಲ ಹಾಗಾಗಿ ನಮ್ಮ ರಾಜ್ಯವನ್ನು ಅವರು ಪ್ರತಿನಿಧಿಸುವುದು ಬೇಡ ಬದಲಿಗೆ ನಿಮ್ಮ ಪಕ್ಷದವರೆ ಆದ ನಾಡಿನ ಒಬ್ಬ ಉತ್ತಮ ಚಿಂತಕನನ್ನೋ ಇಲ್ಲ ರಾಜಕಾರಣಿಯನ್ನಾದರೂ ಸೈ ಆರಿಸಿ ಕಳಿಸಿ ಎಂದಷ್ಟೇ. ಇರಲಿ. ಈಗಾಗಲೇ ಕಳೆದ 3 ಅವಧಿಗಳಿಂದಲೂ ವೆಂಕಯ್ಯ ನಾಯ್ಡು ನಮ್ಮ ರಾಜ್ಯದಿಂದಲೇ ಆರಿಸಿ ಹೋಗುತ್ತಿದ್ದಾರೆ. ಅವರ ರಾಜ್ಯಪರ ಕಾಳಜಿಯನ್ನು ಎಲ್ಲರೂ ಬಲ್ಲರು. ಈಗ ಮತ್ತೊಬ್ಬರು ಅದೂ ಒಬ್ಬ ನಟಿ. ವೆಂಕಯ್ಯರಿಗೆ ಆಂಧ್ರದ ಬಗ್ಗೆಯಾದರೂ ಕಾಳಜಿಯಿದೆ. ಈ ಕುರಿತು ಮಾತನಾಡಿದರೆ ಸಂಕುಚಿತ ಮನೋಭಾವದವರಾಗಬೇಡಿ, ಕನ್ನಡಿಗರು ವಿಶಾಲ ಹೃದಯಿಗಳು, ನಾವು ಫೆನಟಿಕ್ ಆಗುವುದು ಬೇಡ, ಎಲ್ಲವನ್ನೂ ಕನ್ನಡ ಒಳಗೊಳ್ಳಬೇಕು ಎಂಬ ಉಪದೇಶ ಬೇರೆ. ಹೌದು ಕನ್ನಡ ಎಲ್ಲವನ್ನೂ ತೆರೆದ ಹೃದಯದಿಂದಲೇ ಸ್ವೀಕರಿಸಬೇಕು. ಆದರೆ ಅದು ಅತಿಯಾದಾಗ ಆಗುವುದು ಕನ್ನಡದ ಆಸಕ್ತಿಗಳ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ. ಈಗ ಆಗುತ್ತಿರುವುದೂ ಅದೇ. 

ಅಸಲಿಗೆ ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಹೊರರಾಜ್ಯದವರೊಬ್ಬರು ಹೋದರೆ ಅದರಲ್ಲಿ ಅಂಥ ಅನಾಹುತವೇನಿದೆ? ಅದು ಇಡೀ ರಾಜ್ಯಸಭೆಯ ಮೂಲ ಕಲ್ಪನೆಗೇ ಅಭಾಸವಾಗುತ್ತದೆ. ಅಲ್ಲಿಗೆ ರಾಜ್ಯಸಭೆ ಅರ್ಥ ಕಳೆದುಕೊಳ್ಳುತ್ತದೆ. ಈ ಪ್ರಕ್ರಿಯೆಯು ಈಗಾಗಲೇ ಸಾಕಷ್ಟು ಚಾಲ್ತಿಯಲ್ಲಿದ್ದು ಇದು ಮತ್ತೊಂದು ಮೆಟ್ಟಿಲು ಅಷ್ಟೇ. ರಾಜ್ಯಸಭೆಯ ಕಲ್ಪನೆಯ ಜಾಡನ್ನು ನಾವು ಬ್ರಿಟಿಷರ ಕಾಲಕ್ಕೊಯ್ಯಬಹುದು. 1919ರ Government of India Act ಅನುಸಾರ 1921ರಲ್ಲಿ ಇರುವ ಸದನದ ಜೊತೆ ಒಂದು Council of States ಅನ್ನು ರಚಿಸಲಾಯಿತು. ಇದಕ್ಕೆ ಒಂದು ನಿಗದಿತ ಫ್ರಾಂಚೈಸಿಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಸ್ವಾತಂತ್ರ್ಯ ಬಂದಾಗಿದ್ದ ಕಾಂಸ್ಟಿಟುಯೆಂಟ್ ಅಸೆಂಬ್ಲಿ ಇದೆ. ಮೊದಲ ಐದು ವರ್ಷಗಳ ಅವಧಿಯವರೆಗೆ ನಮ್ಮ ಸಂಸತ್ತು Unicameral  (ಸದನದಲ್ಲಿ ಒಂದೇ ಮನೆ) ಆಗಿತ್ತು. ಆದರೆ 1952ರಲ್ಲಿ ಬಹುಚರ್ಚೆಯ ನಂತರ ಸ್ವತಂತ್ರ್ಯ ಭಾರತದ ಎಲ್ಲ ಸವಾಲುಗಳನ್ನೆದುರಿಸಲು Popular Mandate ಅನ್ನು ಪಡೆದ ಜನನಾಯಕರಷ್ಟೇ ಅಲ್ಲದೆ ಚಿಂತಕರ ಅಗತ್ಯವನ್ನೂ ಪರಿಗಣಿಸಿ ಸಂಸತ್ತಿನಲ್ಲಿ ಮತ್ತೊಂದು ಮನೆಗೆ ಅನುವು ಮಾಡಿಕೊಡಲಾಯಿತು. ನಮ್ಮ ಭಾರತ ದೇಶ ಸಶಕ್ತ ಕೇಂದ್ರ ಸರ್ಕಾರ ಹೊಂದಿರುವ ರಾಜ್ಯಗಳ ಒಂದು ಒಕ್ಕೂಟ. ನಮ್ಮದು ಭಾಗಶಃ ಒಂದು ಒಕ್ಕೂಟ ವ್ಯವಸ್ಥೆ. ಈ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಲೂ ಕೂಡ ಒಂದು ವ್ಯವಸ್ಥೆ ಬೇಕಿತ್ತು. ಅದಕ್ಕಾಗಿಯೇ ಸಂಸತ್ತಿನ ಈ ಎರಡನೇ ಮನೆಯನ್ನು ಈ ಒಕ್ಕೂಟದ ರಾಜ್ಯಗಳ ಪ್ರಾತಿನಿಧಿಕ ಸಂಸ್ಥೆಯನ್ನಾಗಿಸಲಾಯಿತು. ಇದನ್ನು Council of States ಎಂದು ಕರೆಯಲಾಯಿತು. ಅದಕ್ಕೆ ಅನ್ವರ್ಥವಾಗುವಂತೆ ರಾಜ್ಯಸಭೆ ಎಮದು ಚೆಂದನೆಯ ಹೆಸರನ್ನಿಡಲಾಯಿತು. 

ಇಂತಿಪ್ಪ ರಾಜ್ಯಸಭೆಯಲ್ಲಿ ಒಟ್ಟು 245 ಸದಸ್ಯರಿದ್ದು ಅದರಲ್ಲಿ 233 ಸದಸ್ಯರು ರಾಜ್ಯಗಳಿಂದ ಪರೋಕ್ಷವಾಗಿ ಆಯ್ಕೆಯಾದ ಸದಸ್ಯರಾದರೆ ಇನ್ನಿತರೆ 12 ಮಂದಿ ನಾಮಾಂಕಿತ ಸದಸ್ಯರು. ರಾಜ್ಯಸಭೆಯಲ್ಲಿ ಎಲ್ಲ ರಾಜ್ಯಗಳಿಗೂ ಸಮಾನ ಪ್ರಾತಿನಿಧ್ಯವಿಲ್ಲ. ಬದಲಿಗೆ ಆಯಾ ರಾಜ್ಯದ ಜನಸಂಖ್ಯೆಯ ಆಧಾರದ ಮೇಲೆ ರಾಜ್ಯಸಭೆಯ ಪ್ರಾತಿನಿಧ್ಯವನ್ನು ನಿಗದಿಪಡಿಸಲಾಗಿದೆ. ಈಗ ತಮಿಳು ನಾಡು ಆಂದ್ರಕ್ಕೆ ತಲಾ 18, ಉತ್ತರಪ್ರದೇಶಕ್ಕೆ ಅತಿ ಹೆಚ್ಚು 31, ನಾಗಾಲ್ಯಾಂಡ್ಗೆ ಅತಿ ಕಡಿಮೆ 1 ಸದಸ್ಯರ ಬಲವಿದೆ. ಕನರ್ಾಟಕಕ್ಕೆ ಒಟ್ಟು 12 ಸದಸ್ಯರ ಪ್ರಾತಿನಿಧ್ಯವಿದೆ. ಈ ವಿವರಗಳು ನಮ್ಮ ಸಂವಿಧಾನದ 4ನೇ ಶೆಡ್ಯೂಲ್ನಲ್ಲಿ ಅತ್ಯಂತ ಸ್ಪಷ್ಟವಾಗಿ ಸೂಚಿಸಲಾಗಿದೆ. ಇನ್ನು ಸಂವಿಧಾನದ ಆರ್ಟಿಕಲ್ 80 ರಾಜ್ಯಸಭೆಯ ಕುರಿತು ಮಾತನಾಡುತ್ತದೆ. ಇದರಲ್ಲಿ ರಾಜ್ಯಸಭೆಯೆಂಬ ಪದಬಳಕೆಯಿಲ್ಲ. ಇಲ್ಲಿ ಇದನ್ನು Council of States ಎಂದೇ ಕರೆಯಲಾಗಿದೆ. ಇದರಲ್ಲೂ ಸ್ಪಷ್ಟವಾಗಿ ಆಯಾ ರಾಜ್ಯದ ಪ್ರತಿನಿಧಿಗಳು ಎಂದೇ ಹೇಳಲಾಗಿದೆ. ಆದರೆ ಹೊರರಾಜ್ಯದವರು ಆ ರಾಜ್ಯದ ಪ್ರತಿನಿಧಿಗಳೆನಿಸಿಕೊಳ್ಳುವರೆ? ಅಂಬೇಡ್ಕರ್ ಅವರಿಗೆ ನಮ್ಮ ರಾಜಕೀಯ ವ್ಯವಸ್ಥೆ ತಲುಪಬಹುದಾದ ಶಿಥಿಲಾವಸ್ಥೆಯ ಊಹೆಯಿರಲಿಲ್ಲ ಎಂದು ಕಾಣುತ್ತದೆ. ಹಾಗಾಗಿ ಇದರ ಪ್ರಸ್ತಾಪವಿಲ್ಲ. 

ರಾಜ್ಯಗಳು ತಮ್ಮ ಉತ್ತಮ ಚಿಂತಕರನ್ನು ಕಳಿಸಿ ರಾಜ್ಯದ ಸಮಸ್ಯೆಗಳನ್ನು ಚರ್ಚಿಸಲು, ಅದರ ಆಸಕ್ತಿಗಳನ್ನು ಕಾಪಾಡಿಕೊಳ್ಳಲು ಲೋಕಸಭೆಗೆ ಇರುವ ಒಂದು ಕುಟಿಲ ರಾಜಕೀಯೇತರ ಪರ್ಯಾಯ ವೇದಿಕೆ ರಾಜ್ಯಸಭೆ. ಇದು ರಾಜ್ಯಸಭೆಯ ಕಲ್ಪನೆಯ ಹಿಂದಿನ ನಿಜ ಭಾವ. ಆದರೆ ಇಂದು ಇದು ಆಗಿರುವುದಾದರೂ ಏನು? ಪಕ್ಷಾತೀತವಾಗಿ ಎಲ್ಲರೂ ಈ ಮೂಲ ಕಲ್ಪನೆಗೆ ಕೊಡಲಿ ಪೆಟ್ಟು ನೀಡಿದ್ದಾರೆ. ರಾಜ್ಯಸಭೆಯೆಂಬುದು ಇಂದು ಚುನಾವಣೆಯಲ್ಲಿ ಸೋತ, ನಿಂತು ಸೆಣಸಲಾರದ ರಾಜಕೀಯ ನಿರಾಶ್ರಿತರ ಗಂಜಿ ಕೇಂದ್ರವಾಗಿದೆ ಅಷ್ಟೆ. ಅಲ್ಲೂ ಇಂದು ಇರುವುದು ಕುಟಿಲ ಪಕ್ಷ ರಾಜಕಾರಣದ ವಿಜೃಂಭಣೆ ಅಷ್ಟೆ. ಅದರ ಜೊತೆಗೆ ಹೊರರಾಜ್ಯದವರು ನಮ್ಮನ್ನು ಪ್ರತಿನಿಧಿಸುವಂತೆಯೂ ಆಗಿಬಿಟ್ಟರೆ? ಈಗ ಹೇಮಾಮಾಲಿನಿ ಬೇರೆ ನೂರು ವಿಷಯಗಳಲ್ಲಿ ಸಮರ್ಥೆಯಿರಬಹುದು, ಆದರೆ ಕರ್ನಾಟಕದ ಸಮಸ್ಯೆಗಳ ಬಗ್ಗೆ ಆಕೆಗೆಷ್ಟು ತಿಳುವಳಿಕೆಯಿದೆ? ಕನ್ನಡ-ಕನ್ನಡಿಗ-ಕರ್ನಾಟಕದ  ಸಮಸ್ಯೆಗಳ ಕುರಿತು ಆಕೆ ಎಷ್ಟರ ಮಟ್ಟಿಗೆ ಚರ್ಚಿಸಬಲ್ಲಳು? ಅಸಲಿಗೆ ನಮ್ಮ ಭಾಷೆಯೇ ಬರದ ಆಕೆಗೆ ಕರ್ನಾಟಕ ಅಂದರೆ ಶೋಲೆ ಶೂಟಿಂಗ್ ನಡೆದ ರಾಜ್ಯ ಎಂದಾದಾಗ ನಮ್ಮ ನಾಡು-ನುಡಿಯ ಮೇಲಿನ ಅಭಿಮಾನವೂ ಪ್ರಶ್ನಾರ್ಹವೇ ಅಲ್ಲವೆ? ರಾಜ್ಯಸಭೆಯಲ್ಲಿ ನಮಗಿರುವ ಪ್ರಾತಿನಿಧ್ಯ 12. ಅದರಲ್ಲಿ ಈಗಾಗಲೇ ವೆಂಕಯ್ಯ ನಾಯ್ಡು ಪ್ರತಿಷ್ಠಾಪಿತರಾಗಿದ್ದಾರೆ. ಇನ್ನು ಹೇಮಾಮಾಲಿನಿಯೂ ಸೇರಿದರೆ ರಾಜ್ಯಸಭೆಯಲ್ಲಿ ಕನ್ನಡಿಗರ ನ್ಯಾಯಯುತ ಹಕ್ಕಾದ ಕನ್ನಡದ ಧ್ವಿನಿಗಳಲ್ಲಿ ಮತ್ತೊಂದು ಉಡುಗಿದಂತಾಯಿತಲ್ಲವೇ? ಇದು ನಿಜಕ್ಕೂ ಕನ್ನಡಾಸಕ್ತಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯೇ ಸರಿ. 

ಇದೇನೂ ಹೊಸ ಬೆಳವಣಿಗೆಯಲ್ಲ. ಈ ಹಿಂದೆ ಕೂಡ ಹೊರರಾಜ್ಯದವರು ರಾಜ್ಯವನ್ನು ಪ್ರತಿನಿಧಿಸಿರುವ ಉದಾಹರಣೆಗಳಿವೆ. ಕೇಂದ್ರ ರಾಜ್ಯ ಸಂಬಂಧದ ಅದರಲ್ಲಿ ರಾಜ್ಯಗಳ ಸ್ವಾಯತ್ತತೆಯನ್ನು ಎತ್ತಿ ಹಿಡಿಯುತ್ತಿದ್ದ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದಾಗ ಅವರು ರಾಮಜೇಠ್ಮಲಾನಿಯವರನ್ನು ರಾಜ್ಯದಿಂದ ರಾಜ್ಯಸಭೆಗೆ ಕಳಿಸಿದ್ದರು. ಇನ್ನು ನಮ್ಮ ದೇವೇಗೌಡರು ಮದ್ರಾಸಿನ ಶಾರಾಯಿ ವ್ಯಾಪಾರಿ ರಾಮಸ್ವಾಮಿಯವರನ್ನು ರಾಜ್ಯಸಭೆಗೆ ಕಳಿಸಿ ಕೃತಾರ್ಥರಾಗಿದ್ದರು. ಇನ್ನು ವೆಂಕಯ್ಯ ನಾಯ್ಡು, ಈಗ ಹೇಮಾ ಮಾಲಿನಿ. ಹಾಗೆ ನೋಡಿದರೆ ಹೈಕಮಾಂಡ್ ಹೇರುವಿಕೆಗಳಿಗೇ ಹೆಸರಾದ ಕಾಂಗ್ರೆಸ್ ಪಕ್ಷ ಇದುವರೆಗೂ ಹೊರರಾಜ್ಯದವರನ್ನು ನಮ್ಮ ಮೇಲೆ ಹೇರಿಲ್ಲ. 1989ರಲ್ಲಿ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ, ಗುಲಾಂ ನಭಿ ಆಜಾದ್ ಇಲ್ಲ ಮೊಹಸೀನಾ ಕಿದ್ವಾಯಿ ಅವರನ್ನು ರಾಜ್ಯದಿಂದ ರಾಜ್ಯಸಭೆಗೆ ಚುನಾಯಿಸುವ ಸಿದ್ದತೆಗಳು ನಡೆದವಾದರೂ ಹೊರರಾಜ್ಯದವರು ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುವುದನ್ನು ನಮ್ಮ ಜನ ಹಾಗೂ ಶಾಸಕರು ಒಪ್ಪುವುದಿಲ್ಲ ಎಂಬ ಧೃಢ ನಿಲುವು ತಾಳಿದ ಪಾಟೀಲರಿಂದ ಇದು ತಪ್ಪಿತು. ಆ ನಂತರ ಅಂತಹ ಪ್ರಯತ್ನಗಳೂ ನಡೆದಿಲ್ಲ. ಆದರೆ ಆ ನಂತರ ಕಾಂಗ್ರೆಸ್ ವತಿಯಿಂದ ರಾಜ್ಯಸಭೆಗಾಯ್ಕೆಯಾದವರು ಆಸ್ಕರ್, ರೆಹಮಾನ್ ಖಾನ್, ಎಂ.ವಿ.ರಾಜಶೇಖರನ್ ಅವರಂತಹ ರಾಜಕೀಯ ನಿರಾಶ್ರಿತರೆ. ಈಗ ಹೇಮಾಮಾಲಿನಿ.

ಕಾಂಗ್ರೆಸ್ ಮತ್ತು ಜೆಡಿಎಸ್ ಈ ನಿಲುವನ್ನು ವಿರೋಧಿಸಿ ಒಂದು ಸಿಂಬಾಲಿಕ್ ಆದ ಸೈದ್ಧಾಂತಿಕ ಹೋರಾಟಕ್ಕೆ ಅಣಿಯಾಗಿದ್ದಾರೆ. ಕನ್ನಡದ ಪ್ರಖ್ಯಾತ ಸಾಹಿತಿಗಳು ಪ್ರಗತಿಪರರಾದ ಡಾ. ಕೆ. ಮರಳುಸಿದ್ಧಪ್ಪನವರನ್ನು ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಅವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ತಮ್ಮ ಬೆಂಬಲವನ್ನು ಪ್ರಕಟಿಸಿವೆ. ಇದು ಒಂದು ಸಿಂಬಾಲಿಕ್ ಆದ ಗೆಸ್ಚರ್ ಅಷ್ಟೆ ಆಗಬಾರದು. ಆಗಿಲ್ಲ ಕೂಡ. ಇದರ ಹಿಂದೆ ಒಂದು ರಾಜಕೀಯ ಲೆಕ್ಕಾಚಾರವೂ ಇದೆ. 11 ಬಿಜೆಪಿ ಶಾಸಕರ ಅನರ್ಹತೆಯ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದ್ದು ವಿಚಾರಣೆ ಅಂತಿಮ ಹಂತದಲ್ಲಿದೆ. ರಾಜ್ಯಸಭಾ ಚುನಾವಣೆ ನಿಗದಿಯಾಗಿರುವುದು ಮಾರ್ಚಿ 3ಕ್ಕೆ. ಅಷ್ಟರೊಳಗೆ ಸುಪ್ರೀಂ ತೀರ್ಪು ಬರುವ ಸಾಧ್ಯತೆಯಿದ್ದು ಅದು ಒಂದೊಮ್ಮೆ ಅನರ್ಹಗೊಂಡ ಶಾಸಕರ ಪರ ಬಂದರೆ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಲಿದ್ದು, ಆಗ ಕಾಂಗ್ರೆಸ್ ಜೆಡಿಎಸ್ ಮತ್ತು ಅನರ್ಹರೂ ಸೇರಿ 109 ಶಾಸಕರಾಗುತ್ತಾರೆ. ಮರಳುಸಿದ್ಧಪ್ಪನವರು ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಅಕಸ್ಮಾತ್ ಚುನಾವಣೆಯೊಳಗೆ ತೀರ್ಪು  ಹೊರಬಿದ್ದು ಅದು ಶಾಸಕರ ಪರವಾಗಿದ್ದರೆ ಸಂಖ್ಯಾಬಲ ಹೊಂದಿದ್ದರೂ ಅಭ್ಯರ್ಥಿಯಿಲ್ಲದ ಕಾರಣ ಹೇಮಾಮಾಲಿನಿ ಅವಿರೋಧವಾಗಿ ಆಯ್ಕೆಯಾಗಿಬಿಡುತ್ತಿದ್ದರು. ಹಾಗಾಗಿ ಇದೊಂದು ಮುಂಜಾಗ್ರತಾ ಕ್ರಮವೂ ಹೌದು.

ಜೊತೆಗೆ ಇದೊಂದು ಸೈದ್ಧಾಂತಿಕ ಹೋರಾಟವೂ ಹೌದು. ಈ ಹಿಂದೆಯೂ ಅನಂತಮೂರ್ತಿಗಳು ಇಂಥದೇ ಒಂದು ಹೋರಾಟಕ್ಕೆ ನಿಂತು ಸೋಲುಂಡರು. ಇಂಥದೊಂದು ಹೋರಾಟದ ಪ್ರಾಮುಖ್ಯತೆಯನ್ನರಿಯದವರು ಅವರನ್ನು ನಗೆಪಾಟಲುಗೊಳಿಸಿದರು. ಈಗ ಮರಳುಸಿದ್ಧಪ್ಪನವರ ಸರದಿಯಾಗಬಾರದು. ಮರಳುಸಿದ್ಧಪ್ಪನವರು ಈ ನಾಡಿನ ಒಬ್ಬ ಉತ್ತಮ ಚಿಂತಕರು, ಪ್ರಗತಿಪರರು. ಅಸಲು ರಾಜ್ಯಸಭೆಯಲ್ಲಿರಬೇಕಾದವರೆ ನಮ್ಮ ಅನಂತಮೂರ್ತಿ ಮರಳುಸಿದ್ಧಪ್ಪನಂಥ ಚಿಂತಕರಲ್ಲವೇ? ಮರಳುಸಿದ್ಧಪ್ಪನವರು ಇದು ಬರಿಯ symbolic ಆದ ಹೋರಾಟವಲ್ಲ, ಗೆಲ್ಲುವ ಲೆಕ್ಕಾಚಾರದೊಂದಿಗೇ ತಾವು ನಿಂತಿರುವುದಾಗಿ, ಎಲ್ಲ ಶಾಸಕರೂ ಪಕ್ಷಬೇಧ ಮರೆತು ತಮ್ಮ ಮನಸ್ಸಾಕ್ಷಿಯ ಮತ ನೀಡಿ ರಾಜ್ಯಸಭೆಗೆ ಕನ್ನಡೇತರರನ್ನು ಕಳಿಸುವುದನ್ನು ವಿರೋಧಿಸಿ ಕನ್ನಡದ ದನಿಯೊಂದನ್ನು ರಾಜ್ಯಸಭೆಗೆ ಕಳಿಸಬೇಕು. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಎಂದು ಗುಡುಗಿದ್ದಾರೆ. ನಿಜ ಬಿಜೆಪಿಯ ಉದ್ಧಟತನವನ್ನು ಇಂದು ಕನ್ನಡಿಗರು ಪ್ರತಿಭಟಿಸಬೇಕಿದೆ. ನಮ್ಮ ಪ್ರತಿಭಟನೆ ದಾಖಲಾಗಬೇಕಿದೆ. ಮರಳುಸಿದ್ಧಪ್ಪನವರ ನಾಮಪತ್ರ ಚುನಾವಣೆಯನ್ನು ಅನಿವಾರ್ಯವಾಗಿಸುವ ಮೂಲಕ ಕನ್ನಡಿಗರ ಸೈದ್ಧಾಂತಿಕ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಇದು ಕನ್ನಡತನದ ಮೂಲಭೂತವಾದಿ ದನಿಯಲ್ಲ, ಬದಲಿಗೆ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಹಿತ ಕಾಪಾಡುವ ತನ್ಮೂಲಕ ರಾಜ್ಯಸಭೆಯ ಅರ್ಥವನ್ನು ಉಳಿಸುವ ಹೋರಾಟವಿದು. ಆದರೆ ಈ ಹೋರಾಟದಲ್ಲಿ ಜಯ ನಮ್ಮದಾಗಬೇಕಾದರೆ ರಾಜ್ಯದ ಮೇಲೆ ಹೇರಲ್ಪಟ್ಟಿರುವ ಹೇಮಾಮಾಲಿನಿಯನ್ನು ನಮ್ಮ ಮರಳುಸಿದ್ಧಪ್ಪನವರು ಸೋಲಿಸಿ ಗೆಲುವಿನ ನಗೆಯೊಂದಿಗೆ ರಾಜ್ಯಸಭೆ ಪ್ರವೇಶಿಸಬೇಕಿದೆ. ಆದರೆ ಇಂದಿನ ಪಕ್ಷ ರಾಜಕಾರಣದ ಸ್ವಹಿತದ ಗುಲಾಮಗಿರಿಯಲ್ಲಿ ಇದು ಸಾಧ್ಯವೇ? ಎಲ್ಲರ ಕಣ್ಣು ಈಗ ಸುಪ್ರೀಂ ಕೋರ್ಟ್ಕೋನತ್ತ. 

One thoughts on “ಕನ್ನಡಾಸಕ್ತಿಯ ತೆರೆದ ಹೃದಯ ಶಸ್ತ್ರ ಚಿಕಿತ್ಸೆ!

ವಸಂತ said...

ತುಂಬಾ ಸೂಕ್ತವಾಗಿ ಬರೆದಿದ್ದೀರಿ..
ಇದೇ ವಿಷಯದಲ್ಲಿ ನಾನು ಕೂಡ ನನ್ನ ಅಭಿಪ್ರಾಯ ಬರೆದಿದ್ದೆ. ಒಮ್ಮೆ ಕಣ್ಣು ಹಾಯಿಸಿ
http://vasantabanda.blogspot.com/

Proudly powered by Blogger
Theme: Esquire by Matthew Buchanan.
Converted by LiteThemes.com.