2ಜಿ - ಮನಮೋಹನರ ಬೌದ್ಧಿಕ ಭ್ರಷ್ಟಾಚಾರ?


ಯುಪಿಎ -2 ಅನೇಕ ಗೊಂದಲಗಳಿಂದ ಕೂಡಿದ, ಹಗರಣಗಳ ಗುಚ್ಛವಾಗಿದ್ದು ಅದು ನಿಜಕ್ಕೂ ಪ್ರಾಮಾಣಿಕರಾದ ಪ್ರಧಾನಿ ಮನಮೋಹನ ಸಿಂಗರ ಪ್ರಾಮಾಣಿಕತೆಯ ಬಗ್ಗೆಯೂ ಟೀಕೆ ಟಿಪ್ಪಣಿಗಳು ವ್ಯಕ್ತವಾಗುವವರೆಗೆ ಬಂದು ನಿಂತಿದೆ. ಮನಮೋಹನರ ಕಾಷ್ಠ ಮೌನ ಮತ್ತು ಜಂಟಿ ಸದನ ಸಮಿತಿಯೆದುರು ಹಾಜರಾಗಲೊಲ್ಲರು ಎಂಬ ಸುದ್ದಿಗಳು ಅವರು ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆಂಬ ಭಾವನೆ ಮೂಡಿಸುವಲ್ಲಿಗೆ ಮುಟ್ಟಿದೆ. ಇದನ್ನು ಸರಿಪಡಿಸಲೆಂಬಂತೆ ಮೊನ್ನೆ ದೇಶದ ಎಲ್ಲ ಪ್ರಮುಖ ವಿದ್ಯುನ್ಮಾನ ಸುದ್ದಿ ವಾಹಿನಿಗಳ ಸಂಪಾದಕರೊಂದಿಗೆ ಅವರು ಸಂವಾದಿಸಿದರು. ಈ ಸಂವಾದದಲ್ಲಿ ಬಹು ವಿಚಾರಗಳ ಕುರಿತು ಚಚರ್ಿಸಲಾಯಿತಾದರೂ ಇಡೀ ಘೋಷ್ಠಿಯ ಮೂಲ ಬಿಂದುವಾಗಿದ್ದದ್ದು ಭ್ರಷ್ಟಾಚಾರ, ಅದರಲ್ಲೂ ಮುಖ್ಯವಾಗಿ ಮನಮೋಹನರ ಮನೆ ಬಾಗಿಲಿಗೆ ಬಂದು ನಿಂತಿರುವ 2ಜಿ ತರಂಗ ಗುಚ್ಛ ಹಗರಣ. ಈ ವಿಷಯವಾಗಿ ಮನಮೋಹನರ ಪ್ರತಿ ಮಾತನ್ನೂ ಇಡೀ ದೇಶ ಉಸಿರು ಬಿಗಿ ಹಿಡಿದು ಕೇಳುತ್ತಿತ್ತು.

ಅಂದಿಮುತ್ತು ರಾಜಾ ಅವರೇ ಕಂಪೆನಿಗಳ ಪರವಾನಗಿ ಮತ್ತು ತರಂಗಾಂತರ ಗುಚ್ಚಗಳ ಬೇಡಿಕೆಗಳನ್ನು ಇತ್ಯರ್ಥಗೊಳಿಸಿದ್ದಾರೆಯೇ ಹೊರತು ಅದು ತನ್ನ ಅಥವಾ ಸಂಪುಟದ ಮುಂದೆ ತರಲಾಗಿಲ್ಲ. ಇನ್ನು ಸಚಿವ ಸ್ಥಾನಕ್ಕೆ ರಾಜಾ ಅವರ ಆಯ್ಕೆ ಡಿಎಂಕೆ ಪಕ್ಷದ್ದು, ಸಮ್ಮಿಶ್ರ ಸರ್ಕಾರವಾದ್ದರಿಂದ ಈ ಹೊಂದಾಣಿಕೆ ಅನಿವಾರ್ಯವಾಗಿತ್ತು ಎಂದು ತಮ್ಮ ಮೂಗಿನಡಿ ನಡೆದಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಲಾಗದೇ ಹೋದ ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. ಸಮ್ಮಿಶ್ರ ಸರ್ಕಾರಗಳು ಇಂದು ಅನಿವಾರ್ಯವಾಗಿ ಮಾರ್ಪಡುತ್ತಿರುವುದು ನಿಜವೇ. ಸಮ್ಮಿಶ್ರ ಸರ್ಕಾರವೆಂದ ಮೇಲೆ ಕೊಡು ಕೊಳ್ಳುವಿಕೆಗಳೂ ಕೂಡ ಸಹಜವೇ, ಹೊಂದಾಣಿಕೆ ಅಗತ್ಯವೂ ಹೌದು. ಆದರೆ ಈ ನೆಪದಲ್ಲಿ ಮನಮೋಹನರಂತಹವರು ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಳ್ಳಬೇಕೆ? ಮಾಡಿಕೊಂಡ ರಾಜಿಯನ್ನು ನಮ್ಮ ಯಡಿಯೂರಪ್ಪನವರಂತೆ ಭಂಡತನದಿಂದ ಸಮರ್ಥಿಸಿಕೊಳ್ಳಬೇಕೆ? ಇದು ಹೊಲಸೆದ್ದು ಹೋದ ವ್ಯವಸ್ಥೆಯಲ್ಲಿ ಪಳಗಿದ ನಂತರ ಮನಮೋಹನರೂ  ಸೂಕ್ಷ್ಮತೆಯನ್ನು ಕಳೆದುಕೊಂಡುದರ ಸಂಕೇತವೇ?

ಇಷ್ಟೇ ಆಗಿದ್ದರೆ ಅಂತಹ ತಕರಾರೇನಿರುತ್ತಿರಲಿಲ್ಲ. ಆದರೆ ಸುದ್ದಿಗೋಷ್ಠಿಯ ಕಡೆಯ ಭಾಗದಲ್ಲಿ 2ಜಿ ಹಗರಣದಿಂದ ಸರ್ಕಾರದ ಬೊಕ್ಕಸಕ್ಕಾದ ನಷ್ಟದ ಬಗ್ಗೆ ಹಲವಾರು ಅಂಕಿ ಸಂಖ್ಯೆಗಳಿದ್ದು, ರಾಷ್ಟ್ರದ ಮಹಾಲೇಖಪಾಲರು ಅದನ್ನು 1 ಲಕ್ಷ 76 ಸಾವಿರ ಕೋಟಿಗಳು ಎಂದು ಅಂದಾಜಿಸಿದರೆ, ರಾಜಾ ನಿರ್ಗಮನದ ನಂತರ ದೂರ ಸಂಪರ್ಕ ಸಚಿವರ ಹೊಣೆಗಾರಿಕೆಯನ್ನು ಹೆಚ್ಚುವರಿಯಾಗಿ ನಿರ್ವಹಸುತ್ತಿರುವ ಕಪಿಲ್ ಸಿಬಲ್ ಅವರು 2ಜಿ ತರಂಗಾಂತರ ಗುಚ್ಛ ವಿತರಣೆಯಿಂದ ಸರ್ಕಾರದ ಬೊಕ್ಕಸಕ್ಕೆ ನಯಾ ಪೈಸೆಯ ನಷ್ಟವೂ ಆಗಿಲ್ಲವೆಂದು ಹೇಳಿದ್ದಾರೆ, ಈ ಕುರಿತು ಅವರ ನಿಲುವು ಕೇಳಲಾಗಿ ಅವರು ಕೊಟ್ಟ ಉತ್ತರ -

"ನೋಡಿ ಮಹಾ ಲೇಖಪಾಲರೇ ಅವರ ನಷ್ಟದ ಅಂದಾಜನ್ನು ಊಹಾತ್ಮಕ ಅಂದಾಜು ಎಂದು ಕರೆದಿದ್ದಾರೆ. ಈ ನಷ್ಟದ ಲೆಕ್ಕಾಚಾರ ನಾವು ಯಾವುದನ್ನು ನಮ್ಮ ಲೆಕ್ಕದ ಅಡಿಪಾಯವಾಗಿಟ್ಟುಕೊಳ್ಳುತ್ತೇವೆ ಎಂಬುದನ್ನು ಅವಲಂಬಿಸಿರುತ್ತದೆ. ಈಗ ಪ್ರತಿ ವರ್ಷ ನಾವು 80 ಸಾವಿರ ಕೋಟಿಗಳಷ್ಟು ಹಣವನ್ನು ಆಹಾರ ಧನ್ಯಗಳ ಸಬ್ಸಿಡಿಗೆ ವ್ಯಯಿಸುತ್ತಿದ್ದೇವೆ, ಮತ್ತೊಂದು 60 ಸಾವಿರ ಕೋಟಿಗಳನ್ನು ರಸಗೊಬ್ಬರ ಸಬ್ಸಿಡಿಗಳಿಗೆ ವ್ಯಯಿಸುತ್ತಿದ್ದೇವೆ. ಅನೇಕರ ಅಭಿಪ್ರಾಯ ಆಹಾರ ಧಾನ್ಯಗಳು ಮತ್ತು ರಸಗೊಬ್ಬರದ ವಹಿವಾಟು ಮಾರುಕಟ್ಟೆ ಧರದಲ್ಲಿಯೇ ಆಗಬೇಕು. ಹಾಗಂತ ಈ ಸಬ್ಸಿಡಿಯನ್ನು ಸರ್ಕಾರದ ಬೊಕ್ಕಸಕ್ಕಾದ ನಷ್ಟ ಎಂದು ಪರಿಗಣಿಸಲಾದೀತೆ?"!!

ಇಲ್ಲಿ ಮನಮೋಹನರು ಹೇಳಿರುವುದಕ್ಕಿಂತಲೂ ಹೇಳದೇ ಉಳಿದ ವಿಚಾರವೇ ಹೆಚ್ಚು ಮುಖ್ಯವೆನಿಸುತ್ತದೆ. 2ಜಿ ತರಂಗಗುಚ್ಛವನ್ನು ಹರಾಜು ಹಾಕದೆ ಮೊದಲು ಬಂದವರಿಗೆ ಆದ್ಯತೆಯಂತೆ 2001ರ ಬೆಲೆಗೆ ವಿತರಿಸದ್ದನ್ನು ಇಲ್ಲಿ ಮನಮೋಹನರು ರೈತನಿಗೆ ಕೊಡಮಾಡುತ್ತಿರುವ ರಸಗೊಬ್ಬರ ಮತ್ತು ಬಡತನ ರೇಖೆಗಿಂತಲೂ ಕೆಳಗಿರುವ ಬಡಬಗ್ಗರಿಗೆ ಕೊಡುತ್ತಿರುವ ಆಹಾರಧಾನ್ಯದ ಸಬ್ಸಿಡಿಗೆ ಹೋಲಿಸಿದ್ದಾರೆ. ಅಲ್ಲಿಗೆ ಒಂದಂತೂ ಸ್ಪಷ್ಟ. ಸರ್ಕಾರದ ಮಟ್ಟಿಗೆ 2ಜಿ ತರಂಗಗುಚ್ಛ ವಿತರಣೆಯೂ ಸಬ್ಸಿಡಿಯೇ. ಅದು ಸರ್ಕಾರದ ನೀತಿ ನಿರ್ಣಯ. ಅಲ್ಲಿಗೆ ಅದು ಹಗರಣವಾದರೂ ಹೇಗಾದೀತು? ಇದು ಮನಮೋಹನರ ಹೇಳದೆ ಉಳಿದ ಮಾತು.

ಸಬ್ಸಿಡಿ ಯಾರಿಗೆ? ಈ ದೇಶದ ಶ್ರೀಮಂತ ಕಾರ್ಪೋರೆಟ್ ಸಂಸ್ಥೆಗಳಿಗೆ. ಸುಖಾಸುಮ್ಮನೆ ಸಬ್ಸಿಡಿಯನ್ನು ಯಾಕೆ ನೀಡುತ್ತಾರೆ? ಅದಕ್ಕೂ ಒಂದು ಸಮರ್ಥನೆ - ಈ ಹಿಂದೆ ಮೊದಲು ಬಂದವರಿಗೆ ಆದ್ಯತೆಯಂತೆ ತರಂಗಗುಚ್ಛವನ್ನು ವಿತರಿಸಿದ್ದನ್ನು ಪ್ರಶ್ನಿಸಿ ಅರವಿಂದ ಗುಪ್ತ ಎನ್ನುವವರು ದೆಹಲಿ ಉಚ್ಛನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರ  ಸಲ್ಲಿಸಿರುವ ಅಫಿಡವಿಟ್ನಲ್ಲಿ ಈ ರೀತಿ ಹೇಳಿಕೊಂಡಿದೆ -

 "2ಜಿ ತರಂಗಗುಚ್ಛವನ್ನು  ಹರಾಜಿನಲ್ಲಿ ಅತಿ ಹೆಚ್ಚು ಹಣ ಪಾವತಿಸಿದವರಿಗೆ ನೀಡಿದ್ದೇ ಆದಲ್ಲಿ, ಆ ಬೃಹತ್ ಮೊತ್ತವನ್ನು ಕಂಪೆನಿಯು ಗ್ರಾಹಕರಿಂದ ವಸೂಲು ಮಾಡುತ್ತದೆ. ಆಗ ಗ್ರಾಹಕರ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. ಇಲ್ಲ ಕಂಪೆನಿಗಳು ತಮ್ಮ ದರಗಳನ್ನು ಏರಿಸದೇ ಇದ್ದರೆ, ಕಂಪೆನಿಗಳು ದಿವಾಳಿಯಾಗುತ್ತವೆ. ಹೀಗೆ ಕಂಪೆನಿಗಳ ಖರ್ಚುಗಳು ಹೆಚ್ಚಾಗಿ ಪರವಾನಗಿಯನ್ನು ಅಪೇಕ್ಷಿಸುವವರ ಸಂಖ್ಯೆಯೇ ಕಡಿಮೆಯಾಗುತ್ತದೆ. ಮೇಲಾಗಿ ಈ ಕ್ರಮವು ಟೆಲಿಕಾಂ ರಂಗದಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಕಾಪಾಡಲು ಮತ್ತು ಹೊಸ ಕಂಪೆನಿಗಳಿಗೆ ಒಂದು ಸಮತಟ್ಟನ್ನೊದಗಿಸಲು ತೆಗೆದುಕೊಂಡ ನಿಲುವು." 

ಇದೇನೂ ಹೊಸ ವಾದವಲ್ಲ. 2ಜಿ ತರಂಗಾಂತರ ಗುಚ್ಛ ವಿತರಣೆಯ ಹಗರಣ ಬಯಲುಗೊಂಡ ಮೊದಲ ದಿನದಿಂದಲೂ ಅಂದಿಮುತ್ತು ರಾಜಾ ಮತ್ತು ಅವರ ಡಿಎಂಕೆ ಪಕ್ಷದ್ದು ಇದೇ ವಾದ. ಅವರು ಈ ವಾದವನ್ನು ಮತ್ತೂ ಮುಂದುವರೆಸಿ ಅಂದಿಮುತ್ತು ರಾಜಾ ಅವರನ್ನು ಶ್ರೀಸಾಮಾನ್ಯನ ಪರವಾಗಿ ಹೋರಾಡಿದ ಧೀಮಂತ ನಾಯಕನೆಂದೂ, ಅದಕ್ಕಾಗಿ ಕಾರ್ಪೋರೆಟ್ ಸಂಸ್ಥೆಗಳ ಕುತಂತ್ರಕ್ಕೆ ಬಲಿಯಾಗಿ ಜನರ ಪರ ಜೈಲು ಸೇರಿರುವುದಾಗಿಯೂ ಬಿಂಬಿಸುತ್ತವೆ. ಅದರಂತೆ ದೂರ ಸಂಪರ್ಕ ಕ್ಷೇತ್ರವು ಕೆಲವೇ ಕೆಲವು ಸಂಸ್ಥೆಗಳಿಂದ ಆಳಲ್ಪಟ್ಟಿದ್ದು ಅವು ಒಂದು ಕಾರ್ಟೆಲ್  ಆಗಿ ರೂಪುಗೊಂಡು ಲಾಭಾಂಶವನ್ನು ಜನರಿಗೆ ತಲುಪಲು ಬಿಡದೆ ಅಡ್ಡ ಹಾಕಿದ್ದವು. ರಾಜಾ ಹೊಸ ಕಂಪೆನಿಗಳಿಗೆ ಕಡಿಮೆ ದರದಲ್ಲಿ ತರಂಗಗುಚ್ಛವನ್ನು ವಿತರಿಸಿದ್ದರಿಂದ ಈ ಕಂಪೆನಿಗಳು ಅತಿ ಕಡಿಮೆ ದರಗಳಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿವೆ. ಈಗ ಮೊಬೈಲ್ ನಂಬರ್ ಪೋರ್ಟಬಿಲಿಟಿಯ ಸೌಲಭ್ಯವೂ ಬಂದಿರುವುದರಿಂದ ಈ ಮೊಬೈಲ್ ಕಂಪೆನಿಗಳು ಅನಿವಾರ್ಯವಾಗಿ ಸ್ಪರ್ಧೆ ಬೀಳಬೇಕಿದೆ. ಸಹಜವಾಗಿಯೇ ಮೊಬೈಲ್ ಸೇವೆಯ ದರಗಳು ಕುಸಿಯಲಾರಂಭಿಸುತ್ತವೆ. ಹಾಗಾಗಿ ಈ ನೀತಿ ನಿರ್ಣಯದ ಅಂತಿಮ ಲಾಭ ಶ್ರೀಶಾಮಾನ್ಯನಿಗೇ ಆಗುತ್ತದೆ. ಅವರು ಅತಿ ಸುಲಭವಾಗಿ ಕೊಡುವ ನಿದರ್ಶನ ಯೂನಿನಾರ್ ಮತ್ತು ಟಾಟಾ ಡೊಕೋಮೋಗಳದು.

ಯೂನಿನಾರ್ ಅನ್ನೇ ತೆಗೆದುಕೊಳ್ಳೋಣ. ಯೂನಿಟೆಕ್ ಎಂಬುದು ಪ್ರಸಿದ್ಧ ರಿಯಲ್ ಎಸ್ಟೇಟ್ ಕಂಪೆನಿ. ಈ ಕಂಪೆನಿಗೆ ದೂರ ಸಂಪರ್ಕ ಕ್ಷೇತ್ರದಲ್ಲಿ ಯಾವುದೇ ಅನುಭವವಿಲ್ಲ. ಆದರೂ ಈ ಕಂಪೆನಿಯು ಯೂನಿಟೆಕ್ ವೈರ್ಲೆಸ್ ಎಂಬ ಕಂಪೆನಿಯೊಂದನ್ನು ತೇಲಿಬಿಟ್ಟು ತನ್ಮೂಲಕ ನಿಗದಿತ 1651 ಕೋಟಿಗಳಿಗೆ ಪ್ಯಾನ್ ಇಂಡಿಯಾ ಪರವಾನಗಿಯನ್ನು ಪಡೆಯುತ್ತದೆ. ಇದಾದ ಕೇವಲ 6 ತಿಂಗಳಿಗೆ ಈ ಕಂಪೆನಿಯು ನಾರ್ವೆಯ ಟೆಲಿಕಾಂ ಕಂಪೆನಿ ಟೆಲಿನಾರ್ಗೆ ಶೇ.60 ರಷ್ಟು ಹಿಡಿತವನ್ನು ಮಾರಿದ್ದು 6120 ಕೋಟಿಗಳಿಗೆ. (ಈ ಲೆಕ್ಕದಂತೆ ಇದರ ಒಟ್ಟು ಬೆಲೆಯು 10200 ಕೋಟಿಗಳಿಗೇರುತ್ತದೆ. ಅಂದರೆ ಈ ಕಂಪೆನಿಯ ನಿವ್ವಳ ಲಾಭ 8549 ಕೊಟಿಗಳು. ಅಷ್ಟೂ ಸರ್ಕಾರದ ಬೊಕ್ಕಸಕ್ಕಾದ ನಷ್ಟವೇ ಅಲ್ಲವೆ? ಈ ಲೆಕ್ಕದ ಆಧಾರದ ಮೇಲೆಯೇ ಒಟ್ಟು 120 ಪರವಾನಗಿಗಳಿಂದ ಮಹಾಲೇಖಪಾಲರು ಬೊಕ್ಕಸಕ್ಕೆ 1 ಲಕ್ಷ 76 ಸಾವಿರ ಕೋಟಿಗಳಷ್ಟು ನಷ್ಟವಾಗಿದೆಯೆಂದು ಹೇಳಿರುವುದು. ಇದನ್ನು ಮನಮೋಹನರು ಮತ್ತು ಅವರ ಸರ್ಕಾರ ಊಹಾತ್ಮಕ ಎಂದು ತಳ್ಳಿ ಹಾಕಿದೆ.) ಹೀಗೆ ಯೂನಿಟೆಕ್ ಮತ್ತು ಟೆಲಿನಾರ್ ಸೇರಿ ಆದದ್ದು ಯೂನಿನಾರ್. ಈ ಕಂಪೆನಿಯು ಆಕರ್ಷಕ ರೀತಿಯ ಪ್ಯಾಕೇಜನ್ನು ನೀಡುತ್ತಿದೆಯಾದರೂ ನಿಜವಾಗಿ ಕರೆ ದರಗಳೇನೂ ಕಡಿಮೆಯಿಲ್ಲ. ಅದಕ್ಕೆ ಈ ಮಾರ್ಕೆಟಿಂಗ್ ತಂತ್ರಕ್ಕೆ ಬಲಿಯಾಗಿ ಯೂನಿನಾರ್ ಸಿಮ್ ಅನ್ನು ಕೊಂಡ ನಾನೇ ಉದಾಹರಣೆ. ಇನ್ನು ಟಾಟಾ ಡೊಕೋಮೋ. ಇದೂ ಕೂಡ ಟಾಟಾ ಮತ್ತು ಡೋಕೋಮೋ ಎಂಬ ಜಪಾನಿ ಕಂಪೆನಿಯ ಒಡಂಬಡಿಕೆಯ ಮಗು. ಸೆಕೆಂಡಿಗೆ 1 ಪೈಸೆ ಎಂಬ ಘೋಷವಾಕ್ಯದೊಂದಿಗೆ ಬಂದ ಇದರ ಆಂತರ್ಯ ತಡಕಿದರೆ ನಿಮಿಷಕ್ಕೆ 60 ಪೈಸೆ. ನಮ್ಮ ಬಿಎಸ್ಎನ್ಎಲ್ ನಿಮಿಷಕ್ಕೆ 49 ಪೈಸೆ!

ಹೀಗೆ ಸರ್ಕಾರ ಈ ಕಂಪೆನಿಗಳಿಗೆ ನೀಡಿದ `ರಿಯಾಯಿತಿ'ಗಳೆಲ್ಲವೂ ಈ ಖಾಸಗಿ ಕಂಪೆನಿಗಳ ಆಯವ್ಯಯ ಪತ್ರಗಳಲ್ಲಿ ರಾರಾಜಿಸುತ್ತಿವೆ. ಹೋಗಲಿ ಗ್ರಾಹಕರಿಗೆ ಹೊರೆ ತಗ್ಗಿಸಲು (?!) ಸರ್ಕಾರವು ಖಾಸಗಿ ಕಂಪೆನಿಗಳಿಗೆ `ರಿಯಾಯಿತಿ' ದರಗಳಲ್ಲಿ ತರಂಗಗುಚ್ಛವನ್ನೇನೋ ನೀಡಿತು, ಕನಿಷ್ಠ ಕಂಪೆನಿಗಳು ಅವುಗಳನ್ನು ಮಾರಿಕೊಳ್ಳದಂತೆ, ನಿರ್ಭಂಧ ವಿಧಿಸಬಹುದಿತ್ತಲ್ಲ? ಹಾಗಾಗಿ ಇವು ಅತ್ಯಂತ ಟೊಳ್ಳು ಸಮರ್ಥನೆಗಳಾಗುತ್ತವೆ. ಇದು ನಮ್ಮನ್ನು ದಾರಿ ತಪ್ಪಿಸಲುದ್ದೇಶಿಸಿರುವ ಒಂದು ಪ್ರಜ್ಞಾವಾದ. ಇಂಥದೊಂದು ವಾದ ಸರಣಿಯನ್ನು ಮಾಡುತ್ತಿರುವುದು ಈ ದೇಶ ಕಂಡ ಅತ್ಯಂತ ಸಜ್ಜನ ಪ್ರಾಮಾಣಿಕ ಪ್ರಧಾನಿಗಳೆಂದೇ ಖ್ಯಾತರಾದ ಮನಮೋಹನ ಸಿಂಗರು. ಇದು ಆದ ತಪ್ಪನ್ನು ಸಮರ್ಥಿಸಿಕೊಳ್ಳುವ ರಾಜಕೀಯದ ಭಂಡತನವೋ ಇಲ್ಲ ಪ್ರಜ್ಞಾಪೂರ್ವಕವಾಗಿ ತರಂಗಗುಚ್ಛ ವಿತರಣೆಯಲ್ಲೂ ಟ್ರಿಕಲ್ ಡೌನ್ ಥಿಯರಿಯಂಥದನ್ನು ಅನುಸರಿಸಿರುವ ದ್ಯೋತಕವೋ?

ಇದರಲ್ಲಿನ ಸೂಕ್ಷ್ಮ ರಾಜಕಾರಣವನ್ನು ಗಮನಿಸಿ. ಅತ್ತ ದೂರ ಸಂಪರ್ಕ ಸಚಿವನಾಗಿ ಅಂದಿಮುತ್ತು ರಾಜಾ ಕೆಲವು ಖಾಸಗಿ ಕಂಪೆನಿಗಳಿಗೆ ಒತ್ತಾಸೆಯಾಗಿ ನಿಂತು ತನ್ನ ಅಧಿಕಾರ ದುರ್ಬಳಕೆ ನಡೆಸಿ ತರಂಗಗುಚ್ಛ ಕೊಡಿಸಿರುವುದು ಮತ್ತು ಅದಕ್ಕಾಗಿ ಅನೇಕ ಬೇನಾಮಿ ಕಂಪೆನಿಗಳ ಮೂಲಕ ಆತನಿಗೆ ಅಪಾರ ಪ್ರಮಾಣದ ಹಣ ಸಂದಾಯವಾಗಿರುವುದು ಸಿಬಿಐ ತನಿಖೆಯಿಂದ ಹೊರಬರುತ್ತಿದೆ. 2ಜಿ ತರಂಗಗುಚ್ಛವನ್ನು ಮೊದಲು ಬಂದವರಿಗೆ ಆದ್ಯತೆಯಂತೆ ವಿತರಿಸಿರುವುದೇ ಮೂಲ ಹಗರಣ. ನ್ಯಾಯವಾಗಿ ತರಂಗಗುಚ್ಛವನ್ನು ಹರಾಜು ಹಾಕಬೇಕಿತ್ತು. ಮನಮೋಹನರು ಇದನ್ನು ತಿಳಿದದ್ದೂ ಅದನ್ನು ತಡೆಯದೇ ಹೋಗಿರುವುದು ತೀವ್ರ ಟೀಕೆಗೆ ಒಳಗಾಗಿದೆ. ಹಗರಣ ಮನಮೋಹನರು ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಆರೋಪಗಳಿಂದ ಸೋನಿಯಾ ಗಾಂಧಿಯವರ ಮನೆ ಬಾಗಿಲನ್ನೂ ತಟ್ಟಿದೆ. ಇದರಿಂದ ನುಣುಚಿಕೊಳ್ಳಲೆಂಬಂತೆ ಮನಮೋಹನರು ಪ್ರಜ್ಞಾವಾದವನ್ನು ಹೂಡಿದ್ದಾರೆ.

ಮೊದಲು ಬಂದವರಿಗೆ ಆದ್ಯತೆಯಂತೆ 2ಜಿ ತರಂಗಗುಚ್ಛವನ್ನು ಸಬ್ಸಿಡಿ ದರಗಳಲ್ಲಿ ವಿತರಿಸಿರುವುದು ಟ್ರಿಕಲ್ ಡೌನ್ ಥಿಯರಿಯನ್ವಯ ಶ್ರೀಶಾಮಾನ್ಯನಿಗೆ ಅದರ ಲಾಭವನ್ನೊದಗಿಸಲು. ಅದು ಸರ್ಕಾರದ ನೀತಿ ನಿರ್ಣಯ. ಆಹಾರಧಾನ್ಯ ರಸಗೊಬ್ಬರದ ಸಬ್ಸಿಡಿಯಂತೆ. ಅದೂ ನಮ್ಮ ಸರ್ಕಾರದ ನೂತನ ನಿರ್ಣಯವೇನಲ್ಲ, NDA ಕಾಲದಿಂದಲೂ ಇದನ್ನೇ ಪಾಲಿಸಿಕೊಂಡು ಬರಲಾಗಿದೆ ಎನ್ನುತ್ತಾರೆ. ಅದೇ ಉಸಿರಿನಲ್ಲಿ, ಆದರೆ ಇದನ್ನು ಅಮಲು ಮಾಡುವಾಗ ಅಂದಿಮುತ್ತು ರಾಜಾ ಕೆಲವು ಖಾಸಗಿ ಕಂಪೆನಿಗಳಿಗೆ ಪಕ್ಷಪಾತಿಯಾಗಿ ತರಂಗಗುಚ್ಛವನ್ನು ವಿತರಿಸಿ ಭ್ರಷ್ಟಾಚಾರ ಎಸಗಿದ್ದಾರೆ. ಅದು ಹಗರಣ. ಇದು ಮತ್ತೆ ತಮ್ಮನ್ನು ತಡಕದಿರಲೆಂದು, ಅದೇ ಉಸಿರಿನಲ್ಲಿ, ಕಂಪೆನಿಗಳ ಪರವಾನಗಿ ಮತ್ತು ತರಂಗಗುಚ್ಛಗಳ ಬೇಡಿಕೆಗಳನ್ನು ರಾಜಾ ಅವರೇ ಇತ್ಯರ್ಥಗೊಳಿಸಿದ್ದಾರೆಯೇ ಹೊರತು ಅದು ತನ್ನ ಅಥವಾ ಸಂಪುಟದ ಮುಂದೆ ತರಲಾಗಿಲ್ಲ ಎನ್ನುತ್ತಾರೆ. 2ಜಿ ಹಗರಣವನ್ನು ರಾಜಾ ಅವರಿಗೇ ಸೀಮಿತಗೊಳಿಸಿ ಸರ್ಕಾರದ ನೈತಿಕ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅದಕ್ಕಾಗಿ ಹಗರಣದ ವ್ಯಾಪ್ತಿ ವಿಸ್ತಾರಗಳನ್ನೇ ಸಂಕುಚಿತಗೊಳಿಸಿಬಿಡುವ ಹುನ್ನಾರವಿದು. 

90ರ ದಶಕದ ಆದಿಯಲ್ಲಿ ದೇಶ ಸಂಕಷ್ಟ ಸ್ಥಿತಿಯಲ್ಲಿದ್ದಾಗ ಮುಕ್ತ ಆರ್ಥಿಕ ನೀತಿಯನ್ನು ಜಾರಿಗೆ ತಂದು ಕಳೆದ ಕೆಲವು ದಶಕಗಳಲ್ಲಿ ಭಾರತದ ಜನಜೀವನದ ಮೇಲೆ ಇನ್ನಿಲ್ಲದ ಸಕಾರಾತ್ಮಕ ಪ್ರಭಾವ ಬೀರಿದವರು ಮನಮೋಹನ ಸಿಂಗ್. ಆದರೆ ಅವರ ಆರ್ಥಿಕ  ನೀತಿಯು ಬಡಜನಪರವಲ್ಲದೆ ಬೃಹತ್ ಕೈಗಾರಿಕೆಗಳ ಪರ ಎಂಬ ಟೀಕೆಗಳೂ ಇಲ್ಲದಿಲ್ಲ. ಈ ದೇಶದ ಸಂಪತ್ತು ಇಲ್ಲಿನ ಜನರದು. ಪ್ರಧಾನಿಗಳು ಅದರ ಧರ್ಮದರ್ಶಿಗಳು. ಹೀಗಿರುವಾಗ ಈ ವಿಷಯದಲ್ಲಿ ಅವರು ಜನಪರ ನಿಲುವುಗಳನ್ನು ತಾಳ ಬೇಕಿರುವುದು ಅವಶ್ಯ. ಆದರೆ ಅವರು ಹೀಗೆ ಕಾರ್ಪೋರೆಟ್ ಸಂಸ್ಥೆಗಳಿಗೆ ಸಬ್ಸಿಡಿ ನೀಡುತ್ತಾ ಹೋದರೆ? ಇಲ್ಲ ಆ ಹೆಸರಿನಲ್ಲಿ ತಮ್ಮವರ ಭ್ರಷ್ಟಾಚಾರವನ್ನು ಮುಚ್ಚಲು ಪ್ರಯತ್ನಿಸಿದರೆ? ನಿಜ ಮನಮೋಹನರು ಯಾವತ್ತೂ ಆರ್ಥಿಕ ಭ್ರಷ್ಟತೆಯಲ್ಲಿ ತೊಡಗಿದವರಲ್ಲ. ಆದರೆ ಇದು ಅದನ್ನು ಮೀರಿಸಿದ ಬೌದ್ಧಿಕ ಭ್ರಷ್ಟತೆಯಲ್ಲವೇ?

5 thoughts on “2ಜಿ - ಮನಮೋಹನರ ಬೌದ್ಧಿಕ ಭ್ರಷ್ಟಾಚಾರ?

suhas said...
This comment has been removed by the author.
suhas said...

I still feel the person behind these words is not Manmohan Singh but someone else who is trying to shield themselves with the clean image of Dr.Manmohan Singh.

ಕೈ. ವೆ. ಆದಿತ್ಯ ಭಾರದ್ವಾಜ said...

yes according to me if the scam is limited to raja auction would be the right way out. the scam is of huge proportions. but as a collective responsibility the scam is bound to corner manmohan and also likely to corner sonia gandhi, if a through investigation of all allegations are made. so manmohan wants to limit the scam to the procedural lapses that raja has committed and doesnt want the procedure to be questioned. this is definitely an intellectual corruption on the part of manmohan singh.

umesh desai said...

ಆದಿತ್ಯ ಅವರೆ ಒಳ್ಳೆಯ ಲೇಖನ. ಹಗರಣದ ಹೂರಣ ರುಚಿಯಾಗಿದೆ ಹೋಳಿಗೆ ತಿನ್ನುತ್ತ ತಿನಿಸುತ್ತ ಹಾಯಾಗಿದ್ದಾರೆ
ಮನಮೋಹನ್ .ಇರಲಿ ಬಿಡಿ ಭ್ರಮೆ ಕಳಚಿಬೀಳುವ ದಿನ ದೂರಇಲ್ಲ

N Bhaskar said...

ತನ್ನ ಹತೋಟಿಯಲ್ಲಿಲ್ಲದ ನಾವೆಯನ್ನು, ಮೊದಲು, ಮನಮೋಹನ ಸಿಂಘರು ನಡೆಸಲು ಒಪ್ಪಿಕೊಳ್ಳಲೇಬಾರದಿತ್ತು; ಒಪ್ಪಿಕೊಂಡಮೇಲೆ ತನ್ನಿಚ್ಛೆಯಂತೆ ಎಲ್ಲಿಯವರೆಗೆ ನಡೆವುದೊ ಅಲ್ಲಿಯವರೆಗೆ ನಡೆಸಿ ಕೈ ಬಿಡಬಹುದಿತ್ತು.
ಹಾಗಾಗದೆ, ಪ್ರಧಾನ ಮಂತ್ರಿಯ ಪಟ್ಟದ ಮೋಹಕ್ಕೆ ಒಳಗಾದವರಂತೆ ತಮ್ಮ ರೆಪ್ಪೆಯ ಕೆಳಗೇ ಮಸುಕು-ಮಸುಕಾಗಿ ನಡೆಯುತ್ತಿದ್ದ ಎಲ್ಲ ಅಕ್ರಮಗಳನ್ನು ಕಾಣದವರಂತೆ ಇದ್ದದ್ದು ಪಟ್ಟದ ವ್ಯಾಮೋಹದಿಂದಲೇ.

ಒಟ್ಟಿನಲ್ಲಿ ಮೋಹ ಯಾರನ್ನೂ ಬಿಡದು ಎಂಬ ಪ್ರಾಪಂಚಿಕ ಸತ್ಯ ಮತ್ತೊಮ್ಮೆ ಸಾಬೀತಾಗಿದೆ

Proudly powered by Blogger
Theme: Esquire by Matthew Buchanan.
Converted by LiteThemes.com.