ಚಾಪೆ ರಂಗೋಲಿಗಳ ಕೆಳಗೆ.. ನೈತಿಕತೆ ಹಾಳು ಹಂಪೆಯ ಶಿಥಿಲ.

ಹೈಕೋರ್ಟ್ ಐತಿಹಾಸಿಕವೆನ್ನಬಹುದಾದ ತೀರ್ಪು ನೀಡಿದೆ. ಯಡಿಯೂರಪ್ಪನವರ ಸರ್ಕಾರಕ್ಕೆ ತಮ್ಮ ಬೆಂಬಲ ಹಿಂತೆಗೆದುಕೊಂಡ ಐವರು ಇಂಡಿಪೆಂಡೆಂಟ್ ಶಾಸಕರನ್ನು ಪಕ್ಷಂತರ ನಿಷೇಧ ಕಾಯ್ದೆಯನ್ವಯ ವಜಾ ಮಾಡಿರುವ ಸ್ಪೀಕರ್ ಕ್ರಮವನ್ನು ಎತ್ತಿ ಹಿಡಿದಿದೆ! ಇವರೊಂದಿಗೆ ಬಂಡಾಯವೆದ್ದ 11 ಮಂದಿ ಬಿಜೆಪಿ ಶಾಸಕರ ಅನರ್ಹತೆ ಕಟ್ಟಿಟ್ಟ ಬುತ್ತಿಯೆಂಬುದು ಅವರಿಗೂ ತಿಳಿದಿರುವ ವಿಚಾರವೇ, ಆದರೆ ಇಂಡಿಪೆಂಡೆಂಟುಗಳನ್ನು ಪಕ್ಷಾಂತರ ನಿಷೇಧ ಕಾಯ್ದೆಯಿಂದ ತಪ್ಪಿಸಬಹುದೆಂದೇ ಅನೇಕರು ಭಾವಿಸಿದ್ದರು, ಆದರೆ ಈ ಐವರು ಶಾಸಕರು ಬಿಜೆಪಿಯ 11 ಶಾಸಕಾಂಗ ಪಕ್ಷದ ಸಭೆಗಳಿಗೆ ಹಾಜರಾಗಿ ಸಹಿ ಮಾಡಿರುವುದು ಮತ್ತು 2 ಬಾರಿ ಪಕ್ಷದ ವಿಪ್ ಅನ್ನು ಸ್ವೀಕರಿಸಿರುವುದನ್ನು ನ್ಯಾಯಾಲಯವು ಇವರ ಪಕ್ಷ ಸೇರ್ಪಡೆ ಎಂದು ಪರಿಗಣಿಸಿದೆ. ಇದರಂತೆ ಇವರಿಗೂ ಕೂಡ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅನ್ವಿಯಿಸಿದೆ. ಇದು ಪಕ್ಷಾಂತರ ನಿಷೇಧ ಕಾಯ್ದೆಯ ಮರುವ್ಯಾಖ್ಯಾನವಾಗಿದ್ದು ಈ ತೀರ್ಪು ಮುಂಬರುವ ದಿನಗಳಲ್ಲಿ ಸರ್ಕಾರ ರಚನೆಯ ಕಸರತ್ತಿನಲ್ಲಿ ಪ್ರಮುಖ ಪಾತ್ರ ವಹಿಸಿ bench mark ಎನ್ನಿಸಿಕೊಳ್ಳಲಿರುವುದು ದಿಟ. ಈ ಕೂಡಲೇ ಈ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಛಾಲೆಂಜ್ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ನ ತೀರ್ಮಾನ ಮತ್ತು ವ್ಯಾಖ್ಯಾನಗಳನ್ನು ಎದುರು ನೋಡಲಾಗುತ್ತಿದೆ.

ಇದು ನ್ಯಾಯಾಲಯಗಳ ವಿಚಾರವಾಯಿತು. ಇನ್ನು ಈ ತೀರ್ಪು ರಾಜ್ಯ ರಾಜಕೀಯದಂಗಳಲದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ತಕ್ಷಣದ ಅವಧಿಯಲ್ಲಿ ಹೇಳುವುದಾದರೆ ಇದು ಯಡಿಯೂರಪ್ಪನವರ ಸರ್ಕಾರಕ್ಕೆ ಪರೋಕ್ಷವಾಗಿ ಸಂದ ಜಯ. ಜಯಕ್ಕಿಂತಲೂ ನೆಮ್ಮದಿ ಕೊಟ್ಟ ಘಳಿಗೆ. ಮೊನ್ನೆಯ ರಾಜಕೀಯ ವಿಪ್ಲವದ ಸಂದರ್ಭದಲ್ಲಿ ಬಂಡಾಯವೆದ್ದ 11 ಬಿಜೆಪಿ ಶಾಸಕರು ಮತ್ತು ಐವರು ಇಂಡಿಪೆಂಡೆಂಟುಗಳನ್ನು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ಹೊರಹಾಕಿ, ಸಭೆಯ ಉಳಿದ ಬಲಾಬಲದಲ್ಲಿ ವಿರೋಧ ಪಕ್ಷಗಳೊಂದಿಗೆ ಸಮಬಲವಾದ ಬಿಜೆಪಿ ಮತ್ತೊಬ್ಬ ಇಂಡಿಪೆಂಡೆಂಟ್ ಎಂಎಲ್ಲೆ ಕೋಲಾರದ ವರ್ತೂರು ಪ್ರಕಾಶ್ ಅವರ ದುಬಾರಿ ಬೆಂಬಲದೊಂದಿಗೆ ತನ್ನ ಬಲವನ್ನು 106ಕ್ಕೇರಿಸಿಕೊಂಡು ತನ್ನ ಅಸ್ತಿತ್ವ ಉಳಿಸಿಕೊಂಡಿತ್ತು. ಈಗ ಈ 16 ಮಂದಿ ಶಾಸಕರಲ್ಲಿ ಯಾರೇ ಒಳಗೆ ಬಂದರೂ ಸರ್ಕಾರದ ಈ ತಾಂತ್ರಿಕ ಬಹುಮತ ಏರುಪೇರಾಗಿ ಅಸ್ತಿತ್ವದ ಪ್ರಹಸನ ಮತ್ತೆ ಮೊದಲುಗೊಳ್ಳುತ್ತಿತ್ತು. ಆದರೆ ಈ ತೀರ್ಪು ಆ ಪ್ರಹಸನದ ಅಂಕದ ಪರದೆಯನ್ನಿಳಿಸಿಬಿಟ್ಟಿದೆ. ತಾಂತ್ರಿಕವಾಗಿ ಸರ್ಕಾರ ಸದ್ಯಕ್ಕೆ SAFE!

ಇನ್ನು ಮೊನ್ನೆ ಈ ಐವರೂ ಪಕ್ಷೇತರರನ್ನು ನೋಡಿದವರಿಗೆ ಅನ್ನಿಸಿದ್ದು ಒಂದೇ - ದಾರಿ ತಪ್ಪಿದ ಮಕ್ಕಳು ಇಲ್ಲ ಕುರಿಗಳು! ಈ ಕುರಿ ಮಂದೆಯಲ್ಲಿ ಕೆಲವು ಕುರಿಗಳು ಹಿಂದೆ ಉಳಿದುಬಿಡುತ್ತವೆ, ಮಿಕ್ಕವೆಲ್ಲಾ ಮುಂದೆ ಹೋಗಿಬಿಟ್ಟರೆ ಇವಕ್ಕೆ ದಾರಿ ತಪ್ಪಿ ಬಿಡುತ್ತೆ. ಅಂಥ ಕುರಿಗಳಂತೆ ಕಂಡರು ಈ ಐವರು. ಈ ಕ್ಷಣದಲ್ಲಿ ಅವರ ಐವರದೂ ಇನ್ನಿಲ್ಲದ ಒಗ್ಗಟ್ಟು. ಎಲ್ಲರೂ ದಿಕ್ಕೆಟ್ಟಿದ್ದಾರೆ. ನರೇಂದ್ರಸ್ವಾಮಿಯವರಂತೂ ಛಾನೆಲ್ ಒಂದರಲ್ಲಿ ಕೂತು ನಾಡಿನ ಸಮಸ್ತ ಜನರೆದುರು ಗಳಗಳನೆ ಅತ್ತುಬಿಟ್ಟರು. ಮೂರು ಪಕ್ಷಗಳ ವಿರುದ್ಧ ಸ್ವತಂತ್ರವಾಗಿ ಗೆಲ್ಲಬೇಕೆಂದರೆ ನಮ್ಮದು ಎಂಥಾ ಹೋರಾಟ, ಎಲ್ಲವನ್ನೂ ಮಣ್ಣುಗೂಡಿಸಿಬಿಟ್ಟರಲ್ಲ ಸಾರ್, ಅದೂ ನಾವೆಲ್ಲರೂ ದಲಿತರು..ಊ..ಊ..ಊ..ಇನ್ನು 11 ಬಿಜೆಪಿ ಶಾಸಕರ ಸ್ಥತಿಯೂ ಇದಕ್ಕಿಂತಲೂ ಏನೂ ಭಿನ್ನವಲ್ಲ.

ಕುಮಾರಸ್ವಾಮಿ ಯಡಿಯೂರಪ್ಪ ನಡುವಿನ ದ್ವೇಷ ರೋಷಗಳ ರಾಜಕೀಯ ಮೇಲಾಟಗಳಲ್ಲಿ, ಅಧಿಕಾರದ ಗದ್ದುಗೆಗಾಗಿ ನಡೆಯುತ್ತಿರುವ ಹೋಮ 16 ಶಾಸಕರ ಪೂರ್ಣಾಹುತಿ ತೆಗೆದುಕೊಂಡುಬಿಟ್ಟಿದೆ. ಹೌದು ಸುಮ್ಮನೆ ಈ ಎಲ್ಲ ಬೆಳವಣಿಗೆಗಳ ಮೂಲ ಅರಸಿ ನೋಡಿ ನಿಮಗೆ ಕಾಣಿಸುವುದು ಗೌಡರ ಮನೆಯ ಅಧಿಕಾರ ದಾಹ, ಯಡಿಯೂರಪ್ಪನವರ ಗದ್ದುಗೆಯ ಪ್ರೀತಿ ಮತ್ತು ಭಂಢತನ. ವರ್ತಮಾನದ ಎಲ್ಲ ಮುಖವಾಡಗಳನ್ನು ಕಳಚುತ್ತಾ ಹೋದರೆ ನಮಗೆ ಕಾಣಿಸುವುದು ಇದೇ ವಿಕಾರ ವಿಕೃತ ಮುಖ.

2004ರಲ್ಲಿ ಎಸ್ಸೆಂ ಕೃಷ್ಣರ ಸರ್ಕಾರ ಸೋತಾಗಿನಿಂದ ಶುರುವಾಯಿತು ನೋಡಿ ಸ್ವಾಮಿ ನಮ್ಮ ರಾಜ್ಯಕ್ಕೆ ಈ ಶನಿಕಾಟ. ಅಷ್ಟರವರೆಗೂ ಹೋರಾಟ ಅಂತ ಇದ್ದದ್ದೇ ಕಾಂಗ್ರೆಸ್ ಮತ್ತು ದಳದ ನಡುವೆ. ಎಸ್ಸೆಂ ಕೃಷ್ಣರ ಸರ್ಕಾರದಲ್ಲಿ ನಡೆದ ಹಗರಣಗಳನ್ನು ತನಿಖೆಗೊಳಪಡಿಸಿ ತಪ್ಪಿತಸ್ಥರನ್ನು ಜೈಲಿಗಟ್ಟುತ್ತೇನೆ, ಅದಕ್ಕಾಗೇ ಹೊಸದೊಂದು ಜೈಲು ಕಟ್ಟಬೇಕಿದೆ ಎಂದು ಅಬ್ಬರಿಸುತ್ತಿದ್ದ ಸಿದ್ಧರಾಮಯ್ಯ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾದರು. ಅವರು ಈಗ ಕಾಂಗ್ರೆಸ್ ನಾಯಕರು! ನಂತರ ನಡೆದದ್ದು ಗೌಡರ ಮನೆಯ ವ್ಯವಸ್ಥಿತ ಮೇಲಾಟ. ಕುಮಾರಣ್ಣ costume ತೊಟ್ಟು stage ನ ಮೇಲೆ ಬರಲು sidewing ನಲ್ಲಿ ಕಾಯುತ್ತಲೇ ಇದ್ದರು. ಸಿದ್ಧರಾಮಯ್ಯ ಮೂಲೆಗುಂಪಾದರು. ಅವರು ಅಹಿಂದದ ದಾರಿ ಹಿಡಿದು ಅದು ಕಾಂಗ್ರೆಸ್ ಎಂಬ ಸಾಗರದಲ್ಲಿ ಸೇರಿ ಕೃತಾರ್ಥವಾಯಿತು. ಗೌಡರ ಮನೆಗೆ ಬೇಕಿದ್ದದ್ದು ಗದ್ದುಗೆ. ಧರ್ಮಸಿಂಗರ ಸರ್ಕಾರ ಉರುಳಿ ಬಿತ್ತು. ಬಿಜೆಪಿಯ ಸಖ್ಯ ಬೆಳೆಯಿತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು, ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರು. ಅದು 20-20 ಮ್ಯಾಚು. ಮೊದಲು ಬ್ಯಾಟಿಂಗ್ ಮಾಡಿದ ಗೌಡರ ಮನೆ ಇಷ್ಟೊತ್ತೂ ಫೀಲ್ಡಿಂಗ್ ಮಾಡುತ್ತಿದ್ದ ಯಡಿಯೂರಪ್ಪನವರಿಗೆ ಇನ್ನಿಂಗ್ಸೇ ಕೊಡಲಿಲ್ಲ. ಇದು ಶುದ್ಧ ಅನೈತಿಕ ಹೆಜ್ಜೆಯೇ ಸರಿ. ಗೌಡರ ಮನೆಯ ಅಧಿಕಾರ ದಾಹ, ಅದಕ್ಕವರು ತುಳಿಯುತ್ತಿದ್ದ ಅನೈತಿಕ ಮಾರ್ಗಗಳು ಎಲ್ಲದರ ಬಗ್ಗೆ ಜನ ಬಂಡೆದ್ದಿದ್ದರು. ಯಡಿಯೂರಪ್ಪನವರು ಇದನ್ನು ಚೆನ್ನಾಗಿಯೇ ಬಳಸಿಕೊಂಡರು. ಬಿಜೆಪಿ ಸರ್ಕಾರ ಮೊದಲ ಬಾರಿಗೆ ಅಧಿಕಾರ ಹಿಡಿಯಿತು.

ಅಲ್ಲಿಂದ ಶುರುವಾದದ್ದು ಯಡಿಯೂರಪ್ಪನವರ ಅಧಿಕಾರ ದಾಹ, ಭಂಡತನ, ಇದಕ್ಕಾಗಿ ಹಿಡಿದ ಅನೈತಿಕ ಮಾರ್ಗಗಳು. ಕುಮಾರಣ್ಣನೇ ಕಲಿಸಿಕೊಟ್ಟ ಪಾಠ. ಗುರುವಿಗೇ ತಿರುಮಂತ್ರ. ಅವರು ಸುಮ್ಮನಿದ್ದಾರೆಯೇ? ಅವರೂ ಮತ್ತಷ್ಟು ಕುಟಿಲತೆಗಳಿಗಿಳಿದರು. ಕುಟಿಲತೆ ಅನೈತಿಕತೆಗಳಲ್ಲಿ ಇವರಿಬ್ಬರದೂ ಒಂದು ರೀತಿಯ ಸ್ಪರ್ಧೆ. ಒಬ್ಬರನ್ನು ಮೀರಿಸಿ ರಾಜಕೀಯವಾಗಿ ಸದೆ ಬಡಿಯಲು ಮತ್ತೊಬ್ಬರು ಮತ್ತಷ್ಟು ಕೆಳಮಟ್ಟಕ್ಕಿಳಿಯುತ್ತಲೇ ಇಡಿಯ ರಾಜ್ಯ ರಾಜಕೀಯವನ್ನು ಪ್ರಪಾತಕ್ಕಿಳಿಸಿಬಿಟ್ಟಿದ್ದಾರೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದದ್ದು ಯಾವತ್ತಿಗೂ ಗೌಡರ ಮನೆಗೆ ಸಹ್ಯವಾಗಲೇ ಇಲ್ಲ. ಆದ್ದರಿಂದ ಮೊದಲ ದಿನದಿಂದಲೇ ಅವರ ದಾಳಿ ಶುರುವಾಯಿತು. ಇದು ವೈಯಕ್ತಿಕ ದಾಳಿಯೇ ಆಗಿದ್ದರೂ ಅದು ವಿರೋಧ ಪಕ್ಷದ ಕರ್ತವ್ಯವೂ ಆಗಿರುವುದರಿಂದ ಒಪ್ಪಿತವೇ ಆಗಿದೆ. ಅತ್ತ ಇದರಿಂದ ಅಧೀರರಾದ ಯಡಿಯೂರಪ್ಪನವರು ಆಪರೇಷನ್ ಕಮಲ ಎಂಬ ಪ್ರಜಾಪ್ರಭುತ್ವದ ಅಣಕಕ್ಕೆ ಕೈಹಾಕಿ ನೈತಿಕತೆಯ ಕುರಿತು ಮಾತನಾಡುವ ಎಲ್ಲ ನೈತಿಕತೆಯನ್ನೂ ಕಳೆದುಕೊಂಡುಬಿಟ್ಟರು. ನಂತರ ನಾಯಕತ್ವಕ್ಕೆ ಪ್ರತಿದಿನವೂ ಸವಾಲು, ಬಂಡಾಯ. ಅದು ಈ ದಿನಕ್ಕೂ ಮುಂದುವರೆದಿದೆ. ಅದೆಲ್ಲವೂ ಗೌಡರ ಮನೆಯ ಕುತಂತ್ರದ ಫಲ ಎಂಬುದು ಯಡಿಯೂರಪ್ಪನವರ ಬಲವಾದ ನಂಬಿಕೆ. ಹಾಗಾಗಿ ಗೌಡರ ಮನೆಯನ್ನು, ಜೆಡಿಎಸ್ ಅನ್ನೂ ಬೇರು ಸಮೇತ ಸರ್ವನಾಶ ಮಾಡಿಬಿಡುವ  ಚಾಣಕ್ಯ ಶಪಥ ನಮ್ಮ ಮುಖ್ಯಮಂತ್ರಿಗಳದ್ದು. ಯಡಿಯೂರಪ್ಪನವರನ್ನು ಕೆಳಗಿಳಿಸಿ ಮತ್ತೆ ಆ ಗದ್ದುಗೆಯನ್ನು ಕಬ್ಜಾ ಮಾಡಿಬಿಡುವ one-point-agenda ಗೌಡರದು. ಇದು ಸ್ಪರ್ಧೆ. ಇದರ ಭಾಗವಾಗಿಯೇ ಕುಮಾರಸ್ವಾಮಿ ಕಳೆದೊಂದೆರಡು ತಿಂಗಳುಗಳಿಂದ ಯಡಿಯೂರಪ್ಪನವರು ಮತ್ತು ಅವರ ಕುಟುಂಬಸ್ಥರ ಹಗರಣಗಳನ್ನು ದಾಖಲೆ ಸಮೇತ ರಾಜ್ಯದ ಜನತೆಯ ಮುಂದೆ ಬಿಚ್ಚಿಟ್ಟು ನಡೆಸುತ್ತಿರುವ ಹೋರಾಟ ಅತ್ಯಂತ ಶ್ಲಾಘನೀಯ. ಒಂದು ಭ್ರಷ್ಟ ಸರ್ಕಾರದ ವಿರುದ್ಧ ಹೋರಾಡುವ ನೈತಿಕ ರೀತಿಯೇ ಇದು. ಈ ವಿಷಯದಲ್ಲಿ ಕುಮಾರಸ್ವಾಮಿ ಅಭಿನಂದನಾರ್ಹರು. ಆದರೆ ಈ ಹಿಂದಿನ ಎರಡು ವರ್ಷಗಳಲ್ಲಿ ಈ ಸರ್ಕಾರದ ವಿರುದ್ಧ ಅವರು ನಡೆಸಿರುವ ಹೋರಾಟಗಳಿವೆಯಲ್ಲ, ಅದನ್ನು ಹೋರಾಟವೆನ್ನುವುದು ಸೂಕ್ತವಲ್ಲವೇನೋ. ಅವು ಕುಟಿಲತೆಯಿಂದ ಅಧಿಕಾರವನ್ನು ಕಬಳಿಸುವ ಹುನ್ನಾರಗಳು ಅಷ್ಟೆ.

ಅಂಥದೊಂದು ಹುನ್ನಾರದ ಫಲವೇ ಇಂದು ಈ 16 ಶಾಸಕರು ಕೇರಾಫ್ ಫುಟ್ಪಾತ್ ಆಗಿರುವುದು. ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ಬಂಡೆದ್ದ ಈ ಶಾಸಕರು ಕೇಳಿದ್ದು ನಾಯಕತ್ವ ಬದಲಾವಣೆ. ಅದರಲ್ಲೂ ಇದ್ದದ್ದು ಯಡಿಯೂರಪ್ಪನವರ ಅನೈತಿಕತೆಯೇ. ಅಂದು ಸರ್ಕಾರದ  ಜನ್ಮದಾತರಾದ ಐವರು ಪಕ್ಷೇತರರನ್ನು ಸಂಪೂರ್ಣ ಅವಧಿಗೆ ತಮ್ಮವರೆಂದು ಆಶ್ವಾಸನೆ ಕೊಟ್ಟು ಯಡ್ಡಿ, ಆಪರೇಷನ್ ಕಮಲ ನಡೆಸಿ ಪಕ್ಷೇತರರ ಅನಿವಾರ್ಯತೆಯನ್ನು ತೊಲಗಿಸಿಕೊಂಡರು. ನಿಧಾನವಾಗಿ ಒಬ್ಬೊಬ್ಬರನ್ನಾಗಿ ಮೂಲೆಗುಂಪು ಮಾಡಿ ಹೊರಗಿಟ್ಟರು. ಇದರ ಜೊತೆಗೆ ಸೇರಿದ್ದು ಇತರೆ 11 ಅತೃಪ್ತ ಬಿಜೆಪಿ ಶಾಸಕರ ಪಡೆ. ಈ ಪಕ್ಷೇತರರನ್ನು ಕೈಬಿಟ್ಟದ್ದು ಕುಮಾರಣ್ಣ ತಮಗೆ ಅಧಿಕಾರ ಹಸ್ತಾಂತರ ಮಾಡದುದಷ್ಟೆ ಅನೈತಿಕವೆಂಬುದು ಅದೇಕೋ ಯಡ್ಡಿಗೆ ಹೊಳೆಯಲೇ ಇಲ್ಲ. ಬಂಡಾಯ ಭುಗಿಲೆದ್ದಿತು. ತನ್ನ ವೈರಿಯನ್ನು ಹಣಿಯಲು ಇಲ್ಲೊಂದು ಮಿಂಚು ಹುಳವನ್ನು ಕಂಡ ಕುಮಾರಸ್ವಾಮಿ ಕೂಡಲೇ ಗೋವೆಗೆ ಹೋಗಿ ಕಾಂಗ್ರೆಸ್ ಜೆಡಿಎಸ್ ಪರ್ಯಾಯ ಸರ್ಕಾರ ರಚನೆ, ಅದರಲ್ಲಿ ಸ್ಥಾನಮಾನ, ಮರುಚುನಾವಣೆಗೆ ಟಿಕೆಟ್ ಹೀಗೆ ಇನ್ನಿಲ್ಲದ ಆಸೆಗಳನ್ನು ತೋರಿಸಿ ಈ 16 ಶಾಸಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಹೋದದ್ದು ಸೀದಾ ರಾಜಭವನಕ್ಕೆ. ಅಲ್ಲಿ ಇವರೆಲ್ಲಾ ಯಡಿಯೂರಪ್ಪನವರ ನಾಯಕತ್ವಕ್ಕೆ ತಮ್ಮ ಬೆಂಬಲ ಹಿಂತೆಗೆದುಕೊಂಡರು. ಅಲ್ಲಿಗೆ their fate was sealed!

ಆಮೇಲೆ ಶುರುವಾದದ್ದು ಸರ್ಕಾರವನ್ನು ಖೆಡ್ಡಾಕ್ಕೆ ಕೆಡವುವ ಕಾರ್ಯಾಚರಣೆ ಮತ್ತು ಯಡಿಯೂರಪ್ಪನವರಿಂದ ಶತಾಯ ಗಥಾಯ ಸರ್ಕಾರವನ್ನು ಉಳಿಸಿಕೊಳ್ಳುವ ಕಾರ್ಯಾಚರಣೆ. ಈ ರಾಜಕೀಯ ಮೇಲಾಟದ ಕಾರ್ಯಾಚರಣೆಗಳಲ್ಲಿ ಮಡಿ ಮೈಲಿಗೆಯೆಂಬುದೇ ಇರಲಿಲ್ಲ. ವಿರೋಧ ಪಕ್ಷಗಳ ಪರವಾಗಿ ಅತ್ತ ರಾಜ್ಯಪಾಲರು ತಮ್ಮ ಶಕ್ತಿ ಮೀರಿ ದುಡಿದರೆ ಇತ್ತ ಅಧಿಕಾರಸ್ಥರ ಪರ ಸ್ಪೀಕರ್ ದುಡಿದರು. ಈ 16 ಜನ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯನ್ವಯ ವಜಾ ಮಾಡಿಬಿಟ್ಟರು ಸ್ಪೀಕರ್. 11 ಬಿಜೆಪಿ ಶಾಸಕರನ್ನು ವಜಾ ಮಾಡಿದುದರ ಬಗ್ಗೆ ಯಾರೂ ಇವತ್ತಿಗೂ ಚಕಾರವೆತ್ತುವುದಿಲ್ಲ, ನ್ಯಾಯವಾಗಿ ಅದು ಸರಿ. ಆದರೆ ವಿಧಾನಸಭೆಯಂಗಳಲದಲ್ಲಿ ಸಮಸ್ಯೆ ಶುರುವಾದದ್ದೇ ಈ ಐವರು ಸ್ವತಂತ್ರರದು. ಅವರು ವಿರೋಧ ಪಕ್ಷಗಳ ಕಡೆ ನಿಂತರೆ ಸರ್ಕಾರ ಉರುಳುತ್ತಿತ್ತು. ಆಗ ಸ್ಪೀಕರ್ ಪಕ್ಷೇತರರನ್ನೇ ಪಕ್ಷಾಂತರ ನಿಷೇಧ ಕಾಯ್ದೆಯಡಿ ವಜಾ ಮಾಡಿಬಿಟ್ಟರು! ಈ ಗದ್ದಲದಲ್ಲಿ ನಡೆದ ಸಭೆಯಲ್ಲಿ ಯಡಿಯೂರಪ್ಪನವರ ಪರ 106 ಧ್ವನಿಗಳು ಬೆಂಬಲಿಸಿದವೆಂದು ಶಬ್ಧವೇಧಿ ವಿದ್ಯೆಯನ್ನು ಬಲ್ಲಂತೆ ಸ್ಪೀಕರ್ ಹೇಳಿ ಒಳಹೊರಟದ್ದೇ ತಡ, ಇದು ಅನೈತಿಕ, ಪ್ರಜಾಪ್ರಭುತ್ವ ವಿರೋಧಿ ಎಂದು ಬೊಬ್ಬಿರಿಯತೊಡಗಿದರು ಎಲ್ಲ. ನಂತರ ನಡೆದ ವ್ಯವಸ್ಥಿತ ವಿಶ್ವಾಸಮತ ಅಧಿವೇಶನದಲ್ಲಿ ಯಡಿಯೂರಪ್ಪ 1 ಮತದ ಆಧಿಕ್ಯದಿಂದ ತಮ್ಮ ಸಕಾರವನ್ನು ಉಳಿಸಿಕೊಂಡರೆನ್ನಿ.

ಈ ಸ್ಪೀಕರ್ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಈಗ ಸ್ಪೀಕರ್ ತೀರ್ಮಾನವೇ ಸರಿ ಎಂಬ ತೀರ್ಪನ್ನು ನ್ಯಾಯಾಲಯ ನೀಡುರುವುದರೊಂದಿಗೆ ಅಂದಿನ ಅನೈತಿಕತೆಗೆ ಇಂದು ಕಾನೂನಿನ ಠಸ್ಸೆ ದೊರೆತಿದೆ. ಆದರೆ ಇನ್ನೂ ಇದು ಅಂತಿಮವೇನಲ್ಲ. ಮೇಲೊಂದು ಸುಪ್ರೀಂ ಕೋರ್ಟ್ ಇದೆ. ಆದರೆ ಯಡಿಯೂರಪ್ಪ ಬೀಗುತ್ತಿದ್ದಾರೆ. ಕುಮಾರಸ್ವಾಮಿ ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಹೋರಾಟದ ವೀರಗಾಸೆ ಕುಣಿತ ಮುಂದುವರೆಸಿದ್ದಾರೆ. ಅಧಿಕಾರ ಹಣದ ಆಮಿಶಗಳಿಗೊಳಗಾದ ಈ 16 ಶಸಕರು ಇವತ್ತು C/O footpath ಆಗಿದ್ದಾರೆ. ಈ ಪಕ್ಷೇತರರನ್ನು ಹೊರಗಿಟ್ಟಿರುವ ಕುರಿತು ಕೇಳಿದಾಗ ಯಡ್ಡಿ ಒಂದು ಕಥೆ ಹೇಳಿದರಂತೆ. ನೋಡ್ರೀ ಮನೆ ಕಟ್ಟೋವಾಗ ಮೌಲ್ಡಿಂಗ್ ಹಾಕ್ತಾರಲ್ಲ ಆವಾಗ ಅದು ನಿಲ್ಲಲೆಂದು ದಿಮ್ಮಿಗಳನ್ನಿಟ್ಟು ನಿಲ್ಲಿಸಿರ್ತಾರೆ, ಪಿಲ್ಲರ್ಗಳಂತೆ. ಮನೆ ನಿಲ್ಲಲು ಅದು ತುಂಬಾ ಮುಖ್ಯ. ಆದರೆ ಒಮ್ಮೆ ಮೌಲ್ಡಿಂಗ್ ಗಟ್ಟಿಯಾದ ಕೂಡಲೇ ತೆಗೆಯುವುದು ಯಾವುದನ್ನಾ?...ಇದು ಯಡ್ಡಿಯ ರಾಜಕೀಯ ಮಾತ್ರವಲ್ಲ ನಮ್ಮ ಇಂದಿನ ರಾಜಕೀಯದ ವಾಸ್ತವ ಚಿತ್ರಣ.

ಯಡಿಯೂರಪ್ಪ ಮತ್ತು ಕುಮಾರಸ್ವಾಮಿಯ ಈ ರಾಜಕೀಯ ವೈಯಕ್ತಿಕ ಹೋರಾಟದ ಕಡೆಯ ಅಂಕ ಇನ್ನೂ ಮುಗಿದಿಲ್ಲ. ಈ ಹೋರಾಟದಲ್ಲಿ ಯಾವುದೇ ನೈತಿಕತೆಗಳಿಲ್ಲ. ಯಡಿಯೂರಪ್ಪನವರ ಹಗರಣಗಳ ಕಟ್ಟನ್ನು ಹಿಡಿದು ಹೋರಾಟ ಮುಂದುವರೆಸಿರುವ ಗೌಡರ ಮನೆಯ ಹಗರಣಗಳು, ಅವರ ಆಸ್ತಿಯ ತನಿಖೆಗೆ ಮುಂದಾಗಿದ್ದಾರೆ ಯಡಿಯೂರಪ್ಪ. ಇದನ್ನು ತಕ್ಕಮಟ್ಟಿಗೆ ಒಪ್ಪಬಹುದು. ಪ್ರಜಾಪ್ರಭುತ್ವದಲ್ಲಿ ಇಂತಹ ಹೋರಾಟಗಳು ಒಪ್ಪಿತವೂ ಸ್ವಾಗತಾರ್ಹವೂ ಆಗಿದೆ. ಈ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಿ ಈ ಸರ್ಕಾರವನ್ನು ಕಿತ್ತೊಗೆದು ಚುನಾವಣೆಗಳನ್ನು ಎದುರಿಸಿ ಜನರ ಆಶೀರ್ವಾದ ಪಡೆದಲ್ಲಿ ಮತ್ತೆ ಗೌಡರ ಆಳ್ವಿಕೆಯೇ ಆಗಲಿ. ಆದರೆ ಹಿಂಬಾಗಿಲ ಕುಟಿಲತೆಗಳ ಮುಖಾಂತರ ಒಂದು ಚುನಾಯಿತ ಸರ್ಕಾರವನ್ನು ಕೆಡವಿ ವಿಧಾನಸೌಧದ ಮೂರನೇ ಮಹಡಿಯನ್ನು ತಲುಪುವುದು ಕಬ್ಜಾ ಆಗುತ್ತದೆಯೇ ಹೊರತು ನೈತಿಕವೆನ್ನಿಸಿಕೊಳ್ಳುವುದಿಲ್ಲ. ಒಂದೊಮ್ಮೆ ಅಂಥ ಸರ್ಕಾರ ಬಂದರೂ ಅದು ಈ ಸರಕಾರಕ್ಕಿಂತಲೂ ಉತ್ತಮ ಸರ್ಕಾರವೇನೂ  ಆಗಿರುವುದಿಲ್ಲ. ಸರ್ಕಾರಗಳು ನಿಲ್ಲುವುದು ಉಳಿಯುವುದು ಬಾಳುವುದು ತಾಂತ್ರಿಕ ಬಲಾಬಲಗಳ ಮೇಲಲ್ಲ, ಬದಲಿಗೆ ನಂಬಿಕೆ ನೈತಿಕತೆಯ ತಳಪಾಯದ ಮೇಲೆ. ಇದು ಸರ್ಕಾರ ನಡೆಸುವವರೂ ಬೀಳಿಸಲು ಹೊರಟಿರುವವರಿಬ್ಬರೂ ನೆನಪಿಟ್ಟುಕೊಂಡರೆ ಉತ್ತಮ. ಏಕೆಂದರೆ ಈಗ ಇಬ್ಬರೂ ಹೊರಟಿರುವುದು ತಾಂತ್ರಿಕ ಆಧಾರಗಳ ಮೇಲೆ. ಮತ್ತೆ ಎಲ್ಲಿ ತಾಂತ್ರಿಕ ಬಲಾಬಲದ ಪ್ರಶ್ನೆ ಎದುರಾಗುತ್ತದೋ ಎಂದು ಯಡಿಯೂರಪ್ಪನವರ ಸರ್ಕಾರ ಮತ್ತೊಂದು check dam ಅನ್ನು ನಿರ್ಮಿಸಿಕೊಂಡಿದೆ. ಸದನದಲ್ಲಿ ಗದ್ದಲವೆಬ್ಬಸಿದರು ಎಂಬ ನೆಪದಲ್ಲಿ 15 ಮಂದಿ ವಿರೋಧ ಪಕ್ಷದ ಶಾಸಕರನ್ನು ವರ್ಷದ ಮಟ್ಟಿಗೆ ಅಮಾನತು ಮಾಡಿದ್ದಾರೆ ಸ್ಪೀಕರ್. ಇದು ನಮ್ಮ ಇಂದಿನ ರಾಜಕೀಯ. ನೈತಿಕತೆಯ ಭ್ರಮೆಗಳೂ ಕೂಡ ಇಲ್ಲ. ಇಷ್ಟೇ ಅಲ್ಲ, ಇದು ಮಾಟ ಮಂತ್ರ ಜೀವ ಭಯದವರೆಗೂ ಹೋಗಿ ಕರ್ನಾಟಕದ ಜನ ನಗಬೇಕೋ ಅಳಬೇಕೋ ತಿಳಿಯದ ಸ್ಥಿತಿಯನ್ನು ತಲುಪಿದೆ.

ಒಬ್ಬರು ಚಾಪೆ ಕೆಳಗೆ ಮತ್ತೊಬ್ಬರು ರಂಗೋಲಿಯ ಕೆಳಗೆ..ಈ ಎರಡರ ಕೆಳಗೆ ಹೂತು ಹೋಗಿರುವುದು ರಾಜಕೀಯದ ನೈತಿಕತೆ. ಈಗ ಅದು ಹಾಳು ಹಂಪೆಯ ಶಿಥಿಲ.

One thoughts on “ಚಾಪೆ ರಂಗೋಲಿಗಳ ಕೆಳಗೆ.. ನೈತಿಕತೆ ಹಾಳು ಹಂಪೆಯ ಶಿಥಿಲ.

umesh desai said...

aaditya the article was good. spare a thought for all those who voted for these 16 people . what good happened except these mlas stay in resorts, chaos in assembly..shame on these 16

Proudly powered by Blogger
Theme: Esquire by Matthew Buchanan.
Converted by LiteThemes.com.