ಒಂದು `ಲೋಕಪ್ರಿಯ' ಸಮ್ಮೇಳನ



ಈಗ ಕರ್ನಾಟಕವು ಭಾರತದಲ್ಲಿಯೇ ಅತ್ಯಂತ ಭ್ರಷ್ಟ ರಾಜ್ಯ ಎಂಬ ಹೆಸರು ಸಂಪಾದಿಸಿಬಿಟ್ಟಿದೆ. ರಾಜಕೀಯ ಪಕ್ಷಗಳು ಅಧಿಕಾರ ದಾಹದಿಂದ ಕಚ್ಚಾಡುತ್ತಿವೆ. ಬಯ್ಗಳು ಅಸಮರ್ಥರ ಆಯುಧ. ಅದು ದುರ್ಬಲರು ಉಪಯೋಗಿಸುವ ಚುಚ್ಚುಗತ್ತಿ. ಅದನ್ನು ಉಪಯೋಗಿಸಬಾರದು. ಹಲವು ಶಾಸಕರ ಮಾತಿನಲ್ಲಿ ನಡೆಯಲ್ಲಿ ವ್ಯವಹಾರದಲ್ಲಿ ಯಾವುದರಲ್ಲಿಯೂ ಗಾಂಭೀರ್ಯವಾಗಲೀ ಸುಸಂಸ್ಕೃತಿಯಾಗಲೀ ಕಾಣಬರುತ್ತಿಲ್ಲ. ಪ್ರಜಾವರ್ಗದ ನೆಮ್ಮದಿ ಕೆಟ್ಟಿದೆ. ಗೊಂದಲದಿಂದ ಸಾಮಾಧಾನ ನಾಶವಾಗಿದೆ. ಪ್ರಜೆಗಳಲ್ಲಿ ನಾವೇಕೆ ಇಂತಹ ಅಸಮರ್ಥರನ್ನು ಆಯ್ಕೆ ಮಾಡಿದೆವು ಎಂದು ತಮ್ಮನ್ನೂ ಪಕ್ಷಗಳನ್ನೂ ನಿಂದಿಸುತ್ತಾ ಇದ್ದಾರೆ. ಪ್ರಜೆಗಳನ್ನು ಕಾಪಾಡುವವರೇ ಕಾದಾಡಿದರೆ ಎಂಥ ವಿಪರ್ಯಾಸ. ಈ ಕಾದಾಟ ಪಕ್ಷದ್ವೇಷ ಅಥವಾ ಅಧಿಕಾರ ದಾಹ ಎಂಬ ದುರಂತ ನಾಟಕವಾಗಿಬಿಟ್ಟಿದೆ. ದಿನಕ್ಕೊಂದು ದ್ರಷ್ಯ ವಾರಕ್ಕೊಂದು ಅಂಕ ಎಂಬಂತೆ ಇದು ಮುಂದುವರೆದಿದೆ. ನಮಗಿದು ದುರಂತ ನಾಟಕ, ಇತರರಿಗೆ ಪ್ರಹಸನ. ಹೀಗೆ ಇಮ್ಮುಖವಾದ ಈ ನಾಟಕವು ಕ್ಲೈಮಾಕ್ಸ್ ಎಂಬ ಶಿಖರ ತಲುಪಿಲ್ಲ. ಇಷ್ಟರಲ್ಲೇ ತಲುಪಬಹುದು. ಇನ್ನು ಡಿನೊಮೆಂಟ್ ಎಂಬ ಪರಿಣಾಮ ಏನಾಗುತ್ತದೋ ಬಲ್ಲವರಾರು. ಕಾದು ನೋಡೋಣ. ಕನ್ನಡ ತಾಯಿ ಭುವನೇಶ್ವರಿ ನಮ್ಮ ನಾಯಕಮಣಿಗಳಾದ ಈ ರಾಜಕೀಯ ವ್ಯಕ್ತಿಗಳಿಗೆ ಸನ್ಮತಿಯನ್ನು ನೀಡಲಿ ಎಂದು ಪ್ರಾರ್ಥಿಸಬೇಕಿದೆ. ರಾಜಕೀಯ ಪಕ್ಷಗಳಿಗೆ ಅಧಿಕಾರದ ಹುಚ್ಚು ದಾಹವನ್ನು ಬಿಟ್ಟು ನಾಡಿನ ಸೌಖ್ಯಕ್ಕೆ ದುಡಿಯುವ ಬುದ್ಧಿಯು ಬರಲಿ ಎಂದು ಹಾರೈಸೋಣ.

ಇದು ಬೆಂಗಳೂರಿನಲ್ಲಿ ನಡೆದ 77 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಶತಕದ ಹೊಸ್ತಿಲಲ್ಲಿರುವ ಕನ್ನಡ ನಾಡಿನ ಮನೆ ಹಿರಿಯಜ್ಜ ಪ್ರೊ.ಜಿ.ವೆಂಕಟಸುಬ್ಬಯ್ಯನವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಯಡಿಯೂರಪ್ಪನವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಹೇಳಿದ ಬುದ್ದಿಮಾತು! ಇದು ಅವರ ಸಾತ್ವಿಕ ಪ್ರತಿಭಟನೆಯಾದರೂ ಸೈ. ಇಡಿಯ ಸಮ್ಮೇಳನದ ಅತ್ಯಂತ ಅರ್ಥಪೂರ್ಣ ತಾರಾಸ್ಥಾಯಿಯಾಗಿತ್ತಿದು. ನಾಡಿನ ರಾಜಕಾರಣಿಗಳನ್ನು ಕಿವಿ ಹಿಂಡಿ ಸರಿ ದಾರಿಗೆ ತರುವ ಮನೆ ಹಿರಿಯನ ಕೆಲಸವನ್ನು ಅತ್ಯಂತ ಸಮರ್ಥವಾಗಿ ಮಾಡಿದರು ಜಿವಿ. ಆದರೆ  ಯಡಿಯೂರಪ್ಪನವರು ಗರಂ ಆಗಿದಾರೆ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಮಾರನೆಯ ದಿನ - ಈ ಭ್ರಷ್ಟಾಚಾರ ಸ್ಥತಿ 20 ವರ್ಷಗಳ ಪಾಪದ ಫಲ - ಎಂದು ತಿಪ್ಪೆ ಸಾರಿಸಿದರು ಜಿವಿ. ಆದರೂ ಅವರ ಸಾತ್ವಿಕ ನೈತಿಕ ಸಿಟ್ಟು ಮತ್ತು ಪ್ರತಿಭಟನೆಗೆ ನಮ್ಮ ಕೃತಜ್ಞತೆಗಳು ಸಲ್ಲಲೇಬೇಕು.

ಇನ್ನು ಮಿಕ್ಕಂತೆ ಸಮ್ಮೇಳನ ಹೇಗೆ ನಡೆಯಿತು? ಎಲ್ಲವೂ `ಲೋಕಪ್ರಿಯ'. 40 ವರ್ಷಗಳ ನಂತರ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಒಂದು ಸಾಹಿತ್ಯ ಸಮ್ಮೇಳನ ನಡೆದದ್ದು. ಇವತ್ತಿನ ಬೆಂಗಳೂರಿಗೆ ನಮ್ಮ ತಲೆಮಾರಿಗೆ ಅಸಲಿಗೆ ಸಾಹಿತ್ಯ ಸಮ್ಮೇಳನ ಎನ್ನುವದೇನು ಎಂಬುದೇ ಗೊತ್ತಿರಲಿಲ್ಲ. ವೀಕೆಂಡಿನಲ್ಲಿ ಆಯೋಜಿಸಿದ್ದ ನುಡಿಜಾತ್ರೆ ಅಕ್ಷರಶಃ ಜಾತ್ರೆಯೇ ಆಯಿತೆನ್ನಿ. ಏನು ಜನ ಸ್ವಾಮಿ? ನಿರೀಕ್ಷೆಗೂ ಮೀರಿ ಬಂದ ಲಕ್ಷಾಂತರ ಜನ - ನುಡಿ ಜಾತ್ರೆಯಲ್ಲಿ ಜನಜಾತ್ರೆ. ಅದೊಂದು ವಿಶಿಷ್ಟ ಅನುಭವ. ಆ ಅನುಭವವನ್ನು ನಮ್ಮ ಬೆಂಗಳೂರಿಗರು ತಮ್ಮದಾಗಿಸಿಕೊಂಡರು. ಎಂದಿನಂತೆ ನಾಡಿನ ನಾನಾ ಮೂಲೆಯಿಂದ ಕೂಡ ಜನ ಸೇರಿದ್ದರು. ಮೂರು ದಿನಗಳ ಕಾಲ ಕನ್ನಡವೇ ಧ್ಯಾನ. ನಂತರ ಎಲ್ಲರೂ ತಮ್ಮ ತಮ್ಮ ಯಾತ್ರಿಕ ಬದುಕುಗಳಿಗೆ ಮರುಳಿದರು.

ಸಮ್ಮೇಳನ ಘನ ಯಶಸ್ಸು ಸಾಧಿಸಿತು ಎಂಬುದು ಪರಿಷತ್ತಿನಿಂದ ಹಿಡಿದು ನಾಡಿನ ಪತ್ರಿಕೆಗಳವರೆಗೂ ಎಲ್ಲರ ವಾದ. ಸಮ್ಮೇಳನದ ಯಶಸ್ಸು ಎಂದರೆ ಏನು? ಜಾತ್ರೆಯ ಏರ್ಪಾಟುಗಳೇ? ಇಲ್ಲ ಸಮ್ಮೇಳನದಲ್ಲಿ ಮೂಡಿಬಂದ ರಚನಾತ್ಮಕ ಯೋಚನಾಕ್ರಮಗಳೇ? ಕನ್ನಡತ್ವದ ಸಂಭ್ರಮವೋ? ಯಾವ ದೃಷ್ಟಿಯಲ್ಲಿ ಸಮ್ಮೇಳನ ಯಶಸ್ವಿ? ಜನಜಾತ್ರೆ, ತೋರುಗನ್ನಡದ ವಿಜೃಂಭಣೆ ಮತ್ತು ತಾರಾಸ್ಥಾಯಿಯ ಸಂಭ್ರಮಾಚರಣೆಗೇನು ಕಡಿಮೆಯಿರಲಿಲ್ಲ. ಇನ್ನು ಅರ್ಥವತ್ತಾಗಿ ನಡೆದಂಥವೇನು? ಈ ಬಾರಿಯ ಘೋಷ್ಠಿಗಳಲ್ಲೂ ಅಂಥದೇನೂ ಹೊಸತಿರಲಿಲ್ಲ. ಎಲ್ಲ ಹಳೆಯ ಸವಕಲು ವಿಷಯಗಳೇ. ಭಾಷಣಕಾರರೂ ಹಳಬರೇ, ಅವರು ಭಾಷಣಗಳೂ ಹಳೆಯವೆ. ದರಲ್ಲಿ ರಚನಾತ್ಮಕವಾಗಿ ಮೂಡಿ ಬಂದದ್ದೇನು ಎಂಬುದು ನನಗಂತೂ ಮಿಲಿಯನ್ ಡಾಲರ್ ಪ್ರಶ್ನೆ. ಇರಲಿ ಈ ಬಾರಿಯ ಸಮ್ಮೇಳನ ಇನ್ನೂ ಅನೇಕ ವಿಶಿಷ್ಟತೆಗಳಿಂದ ಕೂಡಿತ್ತು. ಅವುಗಳಲ್ಲಿ ಕೆಲವು ಸ್ವಾಗತಾರ್ಹವೂ ಕೆಲವು ಖಂಡನಾರ್ಹವೂ ಆಗಿವೆ.

ಈ ಬಾರಿ ಸಮ್ಮೇಳನದ ವಿಶಿಷ್ಟತೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಿಂದಲೇ ಶುರು. ಈ ಬಾರಿಯ ಮೆರವಣಿಗೆಯನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಕಾರ್ಪೋರೇಶನ್ನಿಂದ ಸಮ್ಮೇಳನದ ಸಭಾಂಗಣದವರೆಗೂ ಸಮ್ಮೇಳನಾಧ್ಯಕ್ಷರನ್ನು ರಥದಲ್ಲಿ ಕೂರಿಸಿ ಆನೆ, ಒಂಟೆ, ಜಾನಪದ ಕಲಾತಂಡಗಳ ಮುಂದುಸ್ತುವಾರಿಯಲ್ಲಿ ಮೆರವಣಿಗೆ ಮಾಡಲಾಯಿತು. ಈ ಮೆರವಣಿಗೆಯು ನ ಭೂತೋ ನ ಭವಿಷತ್ ಎಂದೂ ಮೈಸೂರಿನ ಜಂಬೂ ಸವಾರಿಯನ್ನು ನೆನಪಿಸುವಂತಿತ್ತೆಂದೂ ಹೊಗಳಿಸಿಕೊಂಡಿತು. ಈ ಮೆರವಣಿಗೆಯನ್ನು ಆಯೋಜಿಸಿದ್ದವರು ಕರ್ನಾಟಕ ರಕ್ಷಣಾ ವೇದಿಕೆ! ನಾಡಿನ ಹಿರಿಯ ಜೀವವನ್ನು ಗುರು ಸಮಾನರಾದ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆ ಮಾಡುವುದು ನಮ್ಮ ಸಂಭ್ರಮವೇ. ಆದರೆ ಈ ಬಾರಿಯ ರಥವನ್ನು ಗೀತೋಪದೇಶದ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದದು ಅನೇಕರ ಕಣ್ಣು ಕೆಂಪಾಗಿಸಿದವು. ಇದು ಪರಿಷತ್ತಿನ ಕೇಸರೀಕರಣ ಎಂದು ಅನೇಕರು ಹುಯಿಲಿಟ್ಟರಾದರೂ ಮೆರವಣಿಗೆ ಸಾಂಗೋಪಾಂಗವಾಗಿ ನೆರವೇರಿತು. ಇಲ್ಲಿ ಒಂದು ಮಾತು. ಒಬ್ಬ ವ್ಯಕ್ತಿಯನ್ನು ಹೀಗೆ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡುವುದು ಅತ್ತ ಆಳ್ವಾಸ್ ನುಡಿಸಿರಿಯಲ್ಲಿ ಪಲ್ಲಕ್ಕಿಯಲ್ಲಿ ಕೂರಿಸಿ ಅವರನ್ನು ಹೊರುವುದು ಇವೆಲ್ಲವೂ ಮಧ್ಯಯುಗೀನ ಫ್ಯೂಡಲ್ ಸಂಸ್ಕೃತಿಯ ಪಳೆಯುಳಿಕೆಗಳೇ ಆಗಿವೆ. ಈ ರಥ ಪಲ್ಲಕ್ಕಿಗಳಲ್ಲಿ ಕೂರುವವರ ಮುಜುಗರ ಹೇಳತೀರದು. ಈ ಹಿಂದೆ ಜಿ.ಎಸ್.ಎಸ್. ಅವರು ಇದೇ ಕಾರಣಕ್ಕೆ ಮೆರವಣಿಗೆಯನ್ನು ನಿರಾಕರಿಸಿದ್ದರು. ಈ ರಥದಲ್ಲಿ ದಸರಾದ ಜಂಬೂ ಸವಾರಿಯಲ್ಲಿ ಮಾಡಿದಂತೆ ಕನ್ನಡ ತಾಯಿ ಭುವನೇಶ್ವರಿಯ ಪ್ರತಿಮೆಯನ್ನಿತ್ತು  ಸಮ್ಮೇಳನಾಧ್ಯಕ್ಷರ ಕೈಲಿ ಈ ತೇರನ್ನೆಳೆಸಬಹುದು ಇಲ್ಲ ಭುವನೇಶ್ವರಿಯ ಮೂರ್ತಿಯೂ ಬೇಡ ಕನ್ನಡದ ಶ್ರೇಷ್ಠ ಪುಸ್ತಕಗಳನ್ನಿಡಿ ಸಾಕು ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿಗಳು  ಸಲಹೆಯನ್ನಿತ್ತರು. ಅದನ್ನು ಜಿವಿಯವರು ಈ ಬಾರಿಯಿಂದಲೇ ಅಮಲುಗೊಳಿಸಲು ಬಯಸಿದ್ದರಾದರೂ ತೋರುಗನ್ನಡದ ತಾರಾಸ್ಥಾಯಿಯ ದನಿಗಳು ಅದನ್ನು ಆಗಗೊಡಿಸದೇ ಹೋದದ್ದು ವಿಪರ್ಯಾಸ.

ಈ ಬಾರಿಯ ಸಮ್ಮೇಳನದಲ್ಲಿ ಮತ್ತೊಂದು ಮುಖ್ಯ ಅಂಶವನ್ನು ನಾವು ಗಮನಿಸಬೇಕು. ಸಭಾಂಗಣದಲ್ಲೆಲ್ಲಿ ನೋಡದರೂ ಕನ್ನಡದ ನೆಕ್ ಪೀಸ್ ಧರಿಸಿದ ಸ್ವಯಂ ಸೇವಕರು. ಇವರ ನಾಯಕರಾದ ನಾರಾಯಣಗೌಡರು ವೇದಿಕೆಯ ಮೇಲೆ. ಹೌದು ಪ್ರಪ್ರಥಮ ಬಾರಿಗೆ ಕರ್ನಾಟಕ ರಕ್ಷಣಾ ವೇದಿಕೆ ಈ ನಾಡಿನ ಸಾಂಸಕೃತಿಕ ಸಂವಾದದಲ್ಲಿ ಇತರೆ ಸಾರಸ್ವತ ಲೋಕದೊಂದಿಗೆ ಸಮನಾಗಿ ಕುಂತು ಎದ್ದು ಬಂದಿದೆ. ತೋರುಗನ್ನಡದ ಫೆನೆಟಿಕ್ ಧ್ವನಿಯಾದ ಕರವೇ ವೇದಿಕೆಯೇರಿರುವುದು ಕನ್ನಡ ಚಳುವಳಿಯ ದಿಕ್ಸೂಚಿಯೋ, ಇಲ್ಲ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಸಂಘಟನಾ ಊರುಗೋಲಾಗಿ ಬೆಳೆಯುತ್ತಿರುವ ಸಂಕೇತವೋ? ಕನ್ನಡಕ್ಕೆ ಮತ್ತು ಕನ್ನಡದ ಸಾಂಸ್ಕೃತಿಕ ಸಂವಾದಕ್ಕೆ ಇದರ ಪರಿಣಾಮಗಳೇನು? ಕಾದು ನೋಡಬೇಕಿದೆ.

ಇನ್ನು ಮತ್ತೊಂದು ಸೂಕ್ಷ್ಮ ಅಂಶವನ್ನು ಇಲ್ಲಿ ನಾವು ಗಮನಿಸಬಹುದಿತ್ತು. ಸಮ್ಮೇಳನವು ಕನ್ನಡದ ಸಮ್ಮೇಳನವೇ ಆಗಿರಬೇಕು. ಕನ್ನಡದ ಎಲ್ಲ ಸಮುದಾಯಗಳ ಸಮ್ಮೇಳನವಾಗಿರಬೇಕು. ಆದರೆ ಈ ಬಾರಿ ಎಲ್ಲೋ ಕೆಲ ಬಾರಿ ಇದು ಹೌದೋ ಅಲ್ಲವೋ ಎಂಬ ಅನುಮಾನಗಳು ಮೂಡವಂತಾದವು. ಇದನ್ನು ಯಾರೂ ಹೊರಹಾಕಲಿಲ್ಲವಾದರೂ ಒಂದು ವರ್ಗದ ವಿಜೃಂಭಣೆ ಅನೇಕರಿಗೆ ಇರುಸುಮುರುಸಾಗಿದ್ದು ದಿಟ. ಎಲ್ಲಿ ನೋಡದರೂ ಕೆಂಪೇಗೌಡನೇ ರಾರಾಜಿಸಿದ್ದು - ಆತನಿಗೇ ಒಂದು ಪ್ರತ್ಯೇಕ ಘೋಷ್ಠಿ, ಆತನ ಜೊತೆ ಅಶೋಕ, ಬಾಲಗಂಗಾಧರ, ನಲ್ಲೂರು, ದೊಡ್ಡ ಗೌಡ್ರು, ನಾರಾಯಣ ಗೌಡ್ರು..ಇದು ಒಂದು ವರ್ಗದ ದಬ್ಬಾಳಿಕೆಯೋ ಅಲ್ಲವೋ ಒಳಗಿನ ಮರ್ಮಗಳು ನಮಗೆ ತಿಳಿಯದು. ಆದರೆ ಇದು ಅನೇಕರ ಕಣ್ಣು ಕುಕ್ಕುತಿದ್ದದ್ದಂತೂ ಸುಳ್ಳಲ್ಲ. ಕಡೆಯ ದಿನ ಸನ್ಮಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದವರು ಸನ್ಮಾನ್ಯ ದೇವೇಗೌಡರು. ನಾಡಿನ ಹಿರಿಯ ರಾಜಕಾರಣಿಯಾಗಿ ಅವರದು ಅರ್ಹ ಆಯ್ಕೆಯೇ. ತಕರಾರಿಲ್ಲ. ಆದರೆ ಆ ಸಂದರ್ಭದಲ್ಲಿ ಗೌಡರು ನಲ್ಲೂರರನ್ನು ಎತ್ತಿ ಹಾಡಿದ ರೀತಿ, ಒಂದು ವಾಕ್ಯದಲ್ಲಿ ಮೂರು ಬಾರಿ ನಲ್ಲೂರರ ಜಪ, ಕೂಪದಲ್ಲಿ ಇಳಿದು ಹೋಗಿದ್ದ ಕಸಾಪವನ್ನು ಮೇಲೆತ್ತಿದ ಧೀರ, ಗೌಡರ ಬಾಯಲ್ಲಿ ಇಂತಹ ವಿಶೇಷಣಗಳು, ನಂತರ ಮಾತಿಗೆ ನಿಂತ ನಲ್ಲೂರರದು ಒಂದೇ ಮಾತು ದೇವೇಗೌಡರು ಸರ್ವಕಾಲಕ್ಕೂ ಕನ್ನಡದ ಏಕಮೇವಾದ್ವಿತೀಯ ನಾಯಕ! ನಲ್ಲೂರರು ಗೌಡರ ಆಸ್ಥಾನ ಕವಿಗಳೆಂಬುದು ಅವರ ಮೇಲಿದ್ದ ಒಂದಾನೊಂದು ಆರೋಪ. ಅವರ ಅವಧಿಯ ಕಡೆಯ ಸಮ್ಮೇಳನದಲ್ಲಿ ಅವರು ಆ ವೇದಿಕೆಯನ್ನು ಗುರುಕಾಣಿಕೆಯಾಗಿ ಬಳಸಿಕೊಂಡು ಅದನ್ನು ಜಗಜ್ಜಾಹೀರುಗೊಳಿಸಿಬಿಟ್ಟರು.

ಇನ್ನು ಉದ್ಘಾಟನಾ ಭಾಷಣ ಮಾಡಿದ ಯಡಿಯೂರಪ್ಪ ಕನ್ನಡದ ಮುಖ್ಯಮಂತ್ರಿಯೆಂದು ಪರಾಕು ಹೇಳಿಸಿಕೊಂಡದ್ದಷ್ಟೇ ಬಂತು, ಅವರ ಭಾಷಣದಲ್ಲಿ ಸತ್ವವೂ ಇರಲಿಲ್ಲ, ಹಾಳಾಗಿ ಹೋಗಲಿ ಎಂದರೆ ಉಲ್ಲಾಸವೂ ಇರಲಿಲ್ಲ. ಸನ್ಮಾನ್ಯ ಕನ್ನಡದ ಮುಖ್ಯಮಂತ್ರಿಗಳು ಯಾರೋ ಬರೆದುಕೊಟ್ಟ ಭಾಷಣವನ್ನು ತಂದು ಜನರ ಮುಂದೆ ಹಿಡಿದು ಓದಿದರು. ಯಾರನ್ನಾ ಉತ್ತಮ ಲೇಖಕರ ಕೈಲನ್ನ ಬರೆಸಬಾರದೇ? ಅದೂ ಅವರ ಮಾತಿನಂತೆಯೇ ನಿಸ್ತೇಜ. ಒಂದು ಭಾಷಣ ಮಾಡಬೇಕಲ್ಲಾ ಎಂಬ ಕರ್ತವ್ಯದ ಭಾರದಲ್ಲಿ ಮಾಡಿದ ಭಾಷಣವಾಗಿತ್ತದು, ಮನಸ್ಸಿನೊಳಗಿಂದ ಬಂದದ್ದಲ್ಲ. ಇನ್ನು ಒಂದೆರಡು ಯೋಜನೆಗಳನ್ನು ಘೋಷಿಸುವುದೂ ಕೂಡ ಕರ್ತವ್ಯವೇ ಅಲ್ಲವೇ? ಸರಿ ಲಿಬರ್ಟಿ  ಪ್ರತಿಮೆಯಂತಹ ಕನ್ನಡಮ್ಮನ ಪ್ರತಿಮೆ ಸ್ಥಾಪನೆಗೆ 25 ಕೋಟಿ! ಸ್ವಾಮಿ ಇಂತಹ ತೋರುಗನ್ನಡದ ತೊರಿಕೆಯ ಅಪ್ರಬುದ್ಧ ಯೋಜನೆಗಳಿಂದ ಪ್ರಯೋಜನವಾದರೂ ಏನು? ಇದು ಕನ್ನಡದ ತಲ್ಲಣಗಳನ್ನು ಅರ್ಥಮಾಡಿಕೊಳ್ಳಲಾಗದ ಸರ್ಕಾರದ ಅಪ್ರಬುದ್ಧತೆಯೆಂದು ತಿಳಿಯಬೇಕೋ? ನನ್ನ ಪ್ರಕಾರ ಹೌದು. ಇದು ನಮ್ಮ ದುರ್ದೈವ.

ಇನ್ನು ಈ ಸಮ್ಮೇಳನದ ಮತ್ತೊಂದು ವಿಶೇಷತೆ ಚಿದಾನಂದ ಮೂರ್ತಿಗಳದು. ಬೆಂಗಳೂರು ವಿಶ್ವವಿದ್ಯಾಲಯ ಚಿ.ಮೂ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿದಾಗ ರಾಜ್ಯಪಾಲರು ಅವರ ಹೆಸರನ್ನು ತಡೆಹಿಡಿದು ಅತ್ಯಂತ ಉಗ್ರ ಟೀಕೆಗೆ ಗುರಿಯಾದರು. ಹಿರಿಯ ಸಂಶೋಧಕರಾದ ಚಿಮೂ ಅವರ ಇತ್ತೀಚಿನ ನಿಲುವುಗಳು ಹಿಂದುತ್ವವಾದಿಯಾಗಿರುವುದೂ ಅವರ ಹೇಳಿಕೆ ಯೋಚನೆಗಳಲ್ಲಿ ಜಾತಿಯ ಘಮಲು ಢಾಳಾಗಿ ಹೊಡೆಯುತ್ತಿರುವುದರಿಂದ ಅವರು ಕನ್ನಡ ಸಾರಸ್ವತ ಲೋಕದ ಅನೇಕರ ವಿರೋಧವನ್ನು ಕಟ್ಟಿಕೊಂಡಿದ್ದರು. ಆದರೆ ಅವರ ವಿದ್ವತ್ತು ಪ್ರಶ್ನಾತೀತ, ಅವರು ಕನ್ನಡಕ್ಕೆ ಮಾಡಿರುವ ಕೆಲಸ ತುಂಬ ಹಿರಿದಾದುದು. ಇತ್ತೀಚಿನ ಜಗಳಗಳ ನಡುವೆಯೂ ಅವರ ವಿದ್ವತ್ತು ಮತ್ತು ಕನ್ನಡ ನಾಡು ನುಡಿಯ ಸೇವೆಯ ಹಿನ್ನೆಲೆಯಲ್ಲಿ ಇಡಿಯ ಕನ್ನಡ ಸಾರಸ್ವತ ಲೋಕ ಭಾವನಾತ್ಮಕವಾಗಿ ಒಂದಾಯಿತು. ಇದಕ್ಕೆ ಮುನ್ನುಡಿ ಬರೆದವರು ಅನಂತಮೂರ್ತಿಯವರು. ಇದು ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳುವವರೆಗೂ ಹೋಯಿತು. ಸಾರಸ್ವತ ಲೋಕದೊಳಗೆ ಕೈಯಾಡಿಸಿದರೆ ಜೋಕೆ ಎಂಬ ಧಮಿಕಿಯಂತಹ ಸಂದೇಶವೊಂದು ರಾಜ್ಯಪಾಲರಿಗೆ ತಲುಪಿತು. ಪರಿಸ್ಥತಿಯನ್ನರಿತ ರಾಜ್ಯಪಾಲರು ಮರುದಿನವೇ ಚಿಮೂ ಅವರಲ್ಲಿ ಕ್ಷಮೆ ಕೋರಿ ತಮ್ಮ ತಪ್ಪನ್ನು ತಿದ್ದಿಕೊಂಡಿದ್ದಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಒಬ್ಬ ಹಿರಿಯ ವಿದ್ವಾಂಸ ನಿಜಕನ್ನಡದ ಕೆಲಸ ಮಾಡಿದ ಹಿರಿಯ ಚೇತನಕ್ಕೆ ಅವಮಾನವಾದಾಗ ಯಾವತ್ತೂ ಒಡೆದ ಮನೆಯೆಂಬ ಬಿರುದಾಂಕಿತ ಸಾರಸ್ವತ ಲೋಕ ಒಕ್ಕರಲಿನಲ್ಲಿ ಪ್ರತಿಭಟಿಸಿದ್ದು ಭಾವನಾತ್ಮಕವಾಗಿ ಒಂದೇ ವೇದಿಕೆಗೆ ಬಂದದ್ದು ಈ ಸಮ್ಮೇಳನದ ನಿಜವಾದ ಯಶಸ್ಸು ಎಂದು ಭಾವಿಸಬಹುದೇನೋ.

ಇನ್ನು ಸಮ್ಮೇಳನದ ವ್ಯವಸ್ಥೆಗೆ ಬರುವುದಾದರೆ ಎಂದಿನಂತೆ ಕೆಲವು ಲೋಪದೋಷಗಳಿದ್ದವು. ಇಲ್ಲ ಅಂತ ಅಲ್ಲ. ನಿರೀಕ್ಷೆಗೂ ಮೀರಿ ನೆರೆದಿತ್ತು ಜನಜಾತ್ರೆ. ಹಾಗಾಗಿ ಕಸಾಪದ ಅಂದಾಜಿಗಿಂತಲೂ ಕೈಮೀರಿ ಖರ್ಚಾಗಿ ಹೋಗಿದೆ. ಆದರೆ ಮತ್ತೊಂದೆಡೆ ನಿರೀಕ್ಷಿಸಿದಷ್ಟು ಹಣ ಸಂಗ್ರಹವಾಗಿಲ್ಲ. ಈಗಿನ ಅಂದಾಜಿನಂತೆ ಸುಮಾರು 6.5-7 ಕೋಟಿಗಳಷ್ಟು ಕೈಬಿಟ್ಟಿದೆ. ಆದರೆ ಸಂಗ್ರಹವಾಗಿರುವ ಮೊತ್ತ ಬರಿಯ 2 ಕೋಟಿ 70 ಲಕ್ಷ! ಇನ್ನು ಮಿಕ್ಕವರಿಗೆ ಸೋಡಾಚೀಟಿಯೇ? ಸರ್ಕಾರವೇ ಕೈಹಿಡಿಯಬೇಕು, ಇಲ್ಲದಿದ್ದರೆ ಅದೇ ಗತಿ. ಇತರೆ ಊರುಗಳಲ್ಲಾದರೆ ಅಲ್ಲಿನ ಉದ್ಯಮಿಗಳು, ಶ್ರೀಮಂತರು ಇದು ತಮ್ಮೂರ ಹಬ್ಬ ಎಂದೇ ಪರಿಗಣಿಸಿ ಕೈಹಿಡಿಯದೆ ದಾನ ಮಾಡುತ್ತಿದ್ದರು. ಆದರೆ ಸಮ್ಮೇಳನದ ಸಿದ್ಧತೆಗಳ ಕುರಿತು ಕರೆದಿದ್ದ ಉದ್ಯಮಪತಿಗಳ ಸಭೆಗೆ ನಮ್ಮ ಘನತೆವೆತ್ತ ಐಟಿ-ಬಿಟಿ ಉದ್ಯಮದ ಒಬ್ಬೇಒಬ್ಬ ಪ್ರತಿನಿಧಿ ಹಾಜರಾಗಲಿಲ್ಲ. ಈಗ ಆಯ-ವ್ಯಯದ ಲೆಕ್ಕ ತಪ್ಪಿದೆ. ಈ ಮಧ್ಯೆ 50 ಲಕ್ಷದಷ್ಟು ಮಟ್ಟಿಗೆ ಕಸಾಪದಲ್ಲಿ ಗೋಲ್ಮಾಲ್ ನಡೆದಿದೆಯೆಂದೂ ನಲ್ಲೂರರು ಲೆಕ್ಕ ಕೊಡುತ್ತಿಲ್ಲವೆಂದೂ ಇದೇ ಗಲಾಟೆಯಲ್ಲಿ ಅವರು ದಕ್ಷಣಾಮೂರ್ತಿಗಳನ್ನು ಹೊರಹಾಕಿದರೆಂದೂ ಸುದ್ದಿ. ಈ ಕುರಿತು ನಲ್ಲೂರರೇ ಸ್ಪಷ್ಟನೆ ನೀಡಿದರೆ ಒಳ್ಳೆಯದು, ಸ್ಪಷ್ಟನೆಯ ಜೊತೆಗೆ ಲೆಕ್ಕವನ್ನೂ ನೀಡಿದರೆ ಮತ್ತೂ ಒಳ್ಳೆಯದು.

ಒಟ್ಟಾರೆ ಅತ್ಯಂತ ಲೋಕಪ್ರಿಯವಾಗಿ ನಡೆದ ಸಮ್ಮೇಳನ ಅದೇ ಕಾರಣಕ್ಕೆ ಯಶಸ್ವಿಯೂ ಆಯಿತು. ಈ ಮೇಲೆ ನಡೆಸಿರುವ ಒಂದು ವಿಮರ್ಶೆ  ಕಾಮಾಲೆ ಕಣ್ಣಿನದಲ್ಲ. ಮುಂಬರುವ ಸಮ್ಮೇಳನಗಳನ್ನು ಲೋಕಪ್ರಿಯವಾಗಿಯಷ್ಟೇ ಅಲ್ಲದೆ ಅರ್ಥಪೂರ್ಣವೂ ರಚನಾತ್ಮಕವಾಗಿಯೂ ರೂಪಿಸಬೇಕದಲ್ಲಿ ಇಂದಿನ ಸಮ್ಮೇಳನದ ಗುನದೋಷಗಳ ಬಗೆಗೆ ಒಂದು ನಿಷ್ಠುರ ನಿಷ್ಕರ್ಷೆ ನಡೆಸಬೇಕಿರುವುದು ದಿಟ. ಆ ನಿಟ್ಟಿನಲ್ಲಿ ಇದು ಒಂದು ಸಣ್ಣ ಪ್ರಯತ್ನ.

ಇನ್ನು 97ರ ಹರೆಯದಲ್ಲೂ ಪ್ರೊ.ಜಿ.ವೆಂಕಟಸುಬ್ಬಯ್ಯನವರು ನೀಡಿದ ಮುಂದಾಳತ್ವ, ನಾಡು ನುಡಿಯ ಬಗೆಗೆ ಅವರ ಸ್ಪಷ್ಟ ಚಿಂತನೆ, ಭಾಷೆಯ ಬಗೆಗೆ ಅವರ ನೈಜ ಕಾಳಜಿ, ಮಾರ್ಗದರ್ಶನ ಎಲ್ಲವೂ ಮನೆಯ ಹಿರಿಯಜ್ಜ ಮನೆಯ ಮಕ್ಕಳನ್ನು ಕೂರಿಸಿಕೊಂಡು ತನ್ನ ಅನುಭವಾಮೃತದಿಂದ ಜನ್ಯವಾದ ವಿವೇಕವನ್ನು ದಾಟಿಸುತ್ತಿರುವಂತಿತ್ತು. ಅದಕ್ಕೆ ನಮ್ಮೆಲ್ಲರ ಪ್ರೀತಿಯ ಅಜ್ಜನಿಗೆ ನಮನಗಳು.

One thoughts on “ಒಂದು `ಲೋಕಪ್ರಿಯ' ಸಮ್ಮೇಳನ

Anonymous said...

ಮೊದಲು ನಿಮ್ಮ ಯೋಚನೆಗಳನ್ನು ಮಧ್ಯ ಮಧ್ಯ ಅನಗತ್ಯ ಇಂಗ್ಲೀಷ್ ಬಳಸದೇ ಕನ್ನಡದಲ್ಲಿ ಬರೆಯುವುದನ್ನು ಕಲಿಯಿರಿ. ಆಮೇಲೆ ಕ.ರ.ವೇ. ಬಗ್ಗೆ ಟೀಕೆ ಮಾಡಿ.

Proudly powered by Blogger
Theme: Esquire by Matthew Buchanan.
Converted by LiteThemes.com.