ಕಳೆದೊಂದೂವರೆ ವರ್ಷದಿಂದ ನನ್ನ ಬ್ಲಾಗು ಆದಿಲೋಕವನ್ನು ಪೊರೆಯುತ್ತಾ ಬಂದಿದ್ದೀರಿ. ನನ್ನಷ್ಟು irregular blogger ಇನ್ನೊಬ್ಬನಿಲ್ಲ ಅಂದುಕೊಳ್ಳುತ್ತೇನೆ. ಇದ್ದಕ್ಕಿದ್ದ ಹಾಗೆ ನಿಮ್ಮೆಲ್ಲರ ಜೊತೆ ಮಾತಿಗಿಳಿಯುವ ಹುಕಿ ಬಂದುಬಿಡುತ್ತದೆ. ಆಗ ಕೊಂಚ ಶಿಸ್ತು ತಂದುಕೊಂಡು ನಿಮಗೆಲ್ಲಾ ಹೀಗೆ ಒಂದು ಪತ್ರ ಬರೆದು ನನ್ನ ಬ್ಲಾಗನ್ನು 3 ಬಾರಿ ರೀಲಾಂಚ್ ಮಾಡಿದೀನಿ. ಮತ್ತೆ ನಾಯಿ ಬಾಲ ಡೊಂಕು ಅನ್ನುವ ರೀತಿಯಲ್ಲಿ ನಾಪತ್ತೆಯಾಗಿದ್ದೀನಿ. ಕ್ಷಮಿಸಿ ಕ್ಷಮಿಸಿ ಮತ್ತು ಕ್ಷಮಿಸಿ. ಈ ಬಾರಿ ಮೊದಲು ನೆಟ್ಟಗೆ ಕೊಂಚ ದಿನ ಶಿಸ್ತಿನಿಂದ ಬ್ಲಾಗನ್ನು ನಡೆಸಿ ಆ ನಂತರ ನಿಮಗೆ ಪತ್ರ ಬರೆಯಬೇಕೆಂದು ತೀರ್ಮಾನಿಸಿದೆ. ಕಳೆದೆರಡು ತಿಂಗಳಿಂದ ಆ ಶಿಸ್ತನ್ನು ನನ್ನಲ್ಲಿ ಕಂಡು ನನಗೆ ಆಶ್ಚರ್ಯವೂ ಸಂತೋಷವೂ ಆಗಿದೆ. ನೀವೂ ಗಮನಿಸಿದ್ದರೆ ಇನ್ನೂ ಸಂತೋಷ. ಈಗ ಮತ್ತೆ ನಿಮಗೆ ಪತ್ರ ಬರೆಯುತ್ತಿದ್ದೇನೆ. ಈವತ್ತಿನಿಂದ ಆದಿಲೋಕ ಮತ್ತೆ ಗರಿಗೆದರಿ ನಿಂತಿದೆ.
ಈ ಬಾರಿ ಒಂದಷ್ಟು ನೂತನ ಅಂಕಣಗಳನ್ನು ರೂಪಿಸಿದ್ದೇನೆ. ಬರೆಯುವದಕ್ಕಿಂತಲೂ ಓದುವುದೇ ಚೆನ್ನ. ನಾನೋದಿದ ಉತ್ತಮ ಲೇಖನಗಳನ್ನು ದಿನದ ಓದು ಅನ್ನುವ ಅಂಕಣದಲ್ಲಿ ಕಟ್ಟಿಕೊಡುತ್ತೇನೆ. ಏನಿರದಿದ್ದರೂ ಒಂದಷ್ಟು ಒಳ್ಳೆಯ ಓದಾದರೂ ಕಟ್ಟಿಕೊಡುವ ಭರವಸೆ. ಇದು ನನ್ನ ಸೋಂಬೇರಿತನವನ್ನು ಮುಚ್ಚಲೂ ಸಹಕಾರಿ. ಹ್ಹ..ಹ್ಹ..ಪುಸ್ತಕಗಳ ಬಗ್ಗೆ ಚರ್ಚಿಸಲು ಪುಸ್ತಕದ ಹುಳು, ಜೊತೆಗೆ ಸಿನೆಮಾ-ಸಂಗೀತ-ರಂಗ. ಇನ್ನು ನನ್ನ ಮೆಚ್ಚಿನ ಪ್ರಚಲಿತ-ರಾಜಕೀಯ-ಒಳನೋಟಗಳು. ಬನ್ನಿ ಒಂದು ಕಪ್ ಕಾಫಿ ಜೊತೆಗೆ ಒಂದು ಆಪ್ತ ಸಂವಾದ, ಬಿಸಿ ಬಿಸಿ ಚರ್ಚೆ, ಆರೋಗ್ಯಪೂರ್ಣ ಜಗಳ, ಒಂದು ದಿವ್ಯ ಹರಟೆ ಎಲ್ಲವೂ ಹಿಡಿದುನಾನು ಕಾಯುತ್ತಿರುತ್ತೇನೆ. ಬರ್ತೀರಲ್ಲ...
ಇದು ಎಷ್ಟನೆಯ ಪತ್ರವೋ ಇವನದು ಅಂತ ಬಯ್ಯುವ ಮೊದಲು ಇನ್ನೊಂದೆರಡು ತಿಂಗಳು ನೋಡಿ ಸ್ವಾಮಿ..
Post a Comment