ವಿವಿಯಲ್ಲಿ ರಿಯಲ್ ಎಸ್ಟೇಟ್ ದಂಧೆ - ಸೆಂಟ್ರಲ್ ಕಾಲೇಜು ಮೈದಾನ ಇನ್ನು public parking lot!!


ಅತ್ತ ಅಸಲಿಗೆ ಇಲ್ಲದೇ ಇರುವ ಕ್ಷೇತ್ರದ ಮತದಾರರನ್ನು ತಣಿಸುವಂತೆ ಒಂದರ ಮೇಲೊಂದರಂತೆ ಪಾಪ್ಯುಲಿಸ್ಟ್ ಆದ ಯೋಜನೆಗಳನ್ನು ಘೋಷಿಸುತ್ತಾ, ಯಡಿಯೂರಪ್ಪ, ಉಮೇಶ ಕತ್ತಿ ಅವರ ಪ್ರತಿನಿಧಿಯಂತೆ ಕಾರ್ಯ ನಿರ್ವಹಿಸುತ್ತಾ ಶುದ್ಧ ರಾಜಕಾರಣಿಯಂತೆ ವರ್ತಿಸುತ್ತಿರುವ ಪ್ರಭುದೇವ ಮತ್ತೊಂದು ಮಜಲಿನಲ್ಲೂ ತಮ್ಮ ನಾಯಕರನ್ನು ಹಿಂಬಾಲಿಸುತ್ತಿದ್ದಾರೆ. ಅವರು ವಿವಿಯ ಭೂಮಿಗೆ ಕೈಹಚ್ಚಿ ಕೂತಿದ್ದಾರೆ.

ಇತ್ತೀಚೆಗೆ ಅವರು ಬೆಂಗಳೂರು ವಿವಿಗೆ development and revenue generation model ಒಂದನ್ನು ಅನಾವರಣಗೊಳಿಸಿದ್ದಾರೆ. ಇದರ ಭಾಗವಾಗಿ ಜ್ಞಾನ ಭಾರತಿ ಕ್ಯಾಂಪಸ್ಸಿನಲ್ಲಿ ಒಂದು ಬೃಹತ್ bio-park,  ಲಾಲ್ ಬಾಗ್ ಮಾದರಿಯಲ್ಲಿ 4 ಸಣ್ಣ botanical garden ಗಳು, ವೃಷಭಾವತಿ ವ್ಯಾಲಿಯಲ್ಲಿ ಒಂದು ಕೊಳಚೆ ಶುದ್ಧೀಕರಣ ಘಟಕ, ಮ್ಯೂಸಿಯಂ ಮತ್ತು ಒಂದು ಅಂತರಾಷ್ಟ್ರೀಯ ವಿದ್ಯಾರ್ಥಿ ನಿಲಯ ತಲೆ ಎತ್ತಲಿದೆ. ಇದಲ್ಲದೆ ಇದೇ ಪ್ರಪೋಸಲ್ಲಿನಲ್ಲಿ ಅಡಗಿರುವ ಮತ್ತೊಂದು ಆಘಾತಕಾರಿ ವಿಷಯವಿಲ್ಲಿದೆ ನೋಡಿ - ಗಾಂಧೀನಗರದಲ್ಲಿರುವ ಸೆಂಟ್ರಲ್ ಕಾಲೇಜು ಕ್ಯಾಂಪಸ್ಸಿನ ಹಿಂದಿರುವ ಅತ್ಯಂತ ಪ್ರಸಿದ್ಧ ಸೆಂಟ್ರಲ್ ಕಾಲೇಜು ಕ್ರೀಡಾಂಗಣವನ್ನು public parking lot ಮಾಡುವ ಪ್ರಪೋಸಲ್ಲು!

ಈ ಎಲ್ಲ ಯೋಜನೆಗಳಿಗೂ ವಿವಿ ಒಂದು ರೂಪಾಯಿ ಕೂಡ ಖರ್ಚು ಮಾಡುವುದಿಲ್ಲ. ವಿವಿ ಇದನ್ನು ಬಿಡಿಎ ಅವರೊಡಗೂಡಿ BOOT - Build, Own, Operate and Transfer ನ ಆಧಾರದ ಮೇಲೆ ಕೈಗೆತ್ತಿಕೊಳ್ಳಲು ಇಚ್ಛಿಸಿದೆ. ಅಂದರೆ ಈಗ ಬಿಡಿಎ ಈ ಎಲ್ಲದಕ್ಕೂ ಹಣ ಹೂಡುತ್ತದೆ. ನಿರ್ಮಿಸುತ್ತದೆ. ಅವರು ಹೂಡಿದ ಹಣ ಹಿಂತಿರುಗುವವರೆಗೆ ಅಂದರೆ ಒಂದು ಒಪ್ಪಂದದಂತೆ ಕೆಲವು ವರ್ಷಗಳ ಕಾಲ ಅದನ್ನು ಬಿಡಿಎ ನಿರ್ವಹಿಸುತ್ತದೆ. ನಂತರ ಅದನ್ನು ವಿವಿಗೆ ಹಸ್ತಾಂತರಿಸುತ್ತದೆ. ಇದೇನೂ ಹೊಸ ಮಾದರಿಯಲ್ಲ. ನೈಸ್ ರಸ್ತೆ ನಿರ್ಮಾಣಗೊಳ್ಳುತ್ತಿರುವುದೇ ಈ ಮಾದರಿಯಲ್ಲಿ. ಇದರ ಗೋಜಲುಗಳು ಅಪಾರ. ಕಡೆಗೆ ಇದರ ಪಯಣ ಭೂಮಿಯ ಪರಭಾರೆಯೇ ಆಗಿರುತ್ತದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದರ ಕುರಿತಾಗಿ ಒಂದು ಡ್ರಾಫ್ಟ್ ಒಪ್ಪಂದದವನ್ನು ಈಗಾಗಲೇ ಸಿಂಡಿಕೇಟ್ ಒಪ್ಪಿದ್ದು ಅದನ್ನು ಬಿಡಿಎಗೆ ಕಳಿಸಿಕೊಡಲಾಗಿದೆ.

ಸೆಂಟ್ರಲ್ ಕಾಲೇಜು ಕ್ರೀಂಡಾಂಗಣದಲ್ಲಿ ಅಸಲಿಗೆ ಇವರು ಮಾಡಬೇಕೆಂದಿರುವುದಾದರೂ ಏನು? ಬಹುಮಹಡಿ ಸಮುಚ್ಛಯ. ನೆಲಮಾಳಿಗೆಯಲ್ಲಿ ವಾಹನ ನಿಲುಗಡೆ ನಿಲ್ಡಾಣ, ಅದರ ಮೇಲೊಂದು ಅಂತರಾಷ್ಟ್ರೀಯ ಮಟ್ಟದ ಕನ್ವೆಂಷನ್ ಸೆಂಟರ್ ಇಲ್ಲ ಒಂದು ಒಳಾಂಗಣ ಕ್ರೀಡಾಂಗಣ. ಉಪಕುಲಪತಿ ಪ್ರಭುದೇವ ಅವರು ಒಮ್ಮೊಮ್ಮೆ ಒಂದೊಂದು ಮಾತಾಡುತ್ತಾರೆ. ಒಮ್ಮೆ ಒಳಾಂಗಣ ಕ್ರೀಡಾಂಗಣ ಅಂತಾರೆ, ಮಗದೊಮ್ಮೆ ಇಲ್ಲೊಂದು ಕಾಂಪ್ಲೆಕ್ಸ್ ಕಟ್ಟಿಬಿಡೋಣ ಅಂತಾರೆ. ಇಲ್ಲಿ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಬೇಕೆಂಬ ಪ್ರಪೋಸಲ್ಲು ತುಂಬಾ ಹಳೆಯದು. ಸುಮಾರು ಎರಡು ವರ್ಷಗಳಿಂದ ಅದು ಧೂಳು ಹಿಡಿಯುತ್ತಿದೆ. ಅದಕ್ಕೆ ತೀವ್ರ ವಿರೋಧವೂ ಇದೆ. ಈಗ ಈ ಜಾಗವನ್ನು ಏನಾರೂ ಮಾಡಿಯೇ ತಿರಬೇಕೆಂಬ ಉತ್ಕಟ ವಾಂಛೆಯಿಂದ ಹೊರಟಿರುವುದು, ಈ ವಿಷಯವನ್ನು ಎತ್ತುತ್ತಿರುವುದು ನಿರ್ವಿವಾದವಾಗಿ ಉಪಕುಲಪತಿಗಳಾದ ಪ್ರಭುದೇವ ಅವರೇ. ಅಸಲಿಗೆ ವಿವಿಯಲ್ಲಿ ಇಲ್ಲಿ ಏನು ಮಾಡಬೇಕೆಂಬುದು ಸ್ಪಷ್ಟವಿಲ್ಲ. ಸ್ಪಷ್ಟವಿರುವುದು ಈ ಜಾಗವನ್ನು ಬಳಸಿಕೊಳ್ಳಬೇಕು ಎಂಬುದೊಂದೇ ಆಗಿದೆ.

ಇನ್ನು ಇದಕ್ಕೆ ಪ್ರಭುದೇವ ಅವರು ನೀಡುವ ಸಮರ್ಥನೆಯಿದೆಯಲ್ಲ, ಅದು ನಮ್ಮ ಇಂದಿನ ವ್ಯವಸ್ಥೆಯ ಕಾಲಘಟ್ಟದ ಪ್ರತೀಕವೋ, ವ್ಯಂಗವೋ, ದೌರ್ಭಾಗ್ಯವೋ? ತಿಳಿಯದು. ಈ ಸೆಂಟ್ರಲ್ ಕಾಲೇಜು ಗ್ರೌಂಡ್ಸ್ ಅನ್ನು ನಾವು ಸರಿಯಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಇದನ್ನು ನಾವು ಹೊರಗಿನವರಿಗೆ ಬಾಡಿಗೆಗೆ ನೀಡಿದರೆ ದಿನವೊಂದಕ್ಕೆ ಬರುವುದು ಬರಿಯ 5 ಸಾವಿರ, ಇನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡಿದರೆ ಬರಿಯ 1 ಸಾವಿರ. its under utilised. ಹಾಗಾಗಿ ಈ ಜಾಗವನ್ನು ಸರಿಯಾದ ಕ್ರಮದಲ್ಲಿ ಬಳಸಿಕೊಂಡು ಅದರಿಂದ ಅತಿ ಹೆಚ್ಚು returns ಅನ್ನು ಪಡೆಯಲಾಗುವುದು!!! ಆಯಕಟ್ಟಿನ ಸ್ಥಳದಲ್ಲಿ 12 ಎಕರೆ ವಿಸ್ತೀರ್ಣದ ಭೂಮಿ `ಪಾಳು' ಬೀಳುತ್ತಿದೆ. ಇದು ಎಂತಹ dead capital. ಇದನ್ನು ಹೇಗೆಲ್ಲಾ encash ಮಾಡಿಕೊಳ್ಳಬಹುದು? ಇದು ನಮ್ಮ ಪ್ರತಿಷ್ಠಿತ ವಿಶ್ವವಿದ್ಯಾಲಯದ ಕುಲಪತಿಗಳು ಯೋಚಿಸುವ ವಿಧಾನ.  ಈ ವಾದಸರಣಿಯಲ್ಲಿನ ಕೆಲವು ಸೂಕ್ಷ್ಮಗಳನ್ನಿಲ್ಲಿ ಗಮನಿಸಿ. ಹುಡಗರ ಮನೋ-ದೈಹಿಕ ವಿಕಸನಕ್ಕೆಂದು ತೆಗೆದಿರಿಸಲಾಗಿರುವ ಕ್ರೀಡಾಂಗಣ ಇವರ ಕಣ್ಣಿಗೆ a dead capital under utilised which needs to be commercially exploited for revenue generation. ಇದು ನಮ್ಮ ಇಂದಿನ ವಿವಿಗಳ ಬೌದ್ಧಿಕತೆ. ನಮ್ಮ ವಿಶ್ವವಿದ್ಯಾಲಯಗಳು ಎತ್ತ ನಡೆದಿವೆ? ಜಾಗತೀಕರಣದ ಸುಳಿಗೆ ಸಿಕ್ಕ ಇವು ಅಂಗಡಿಗಳಾಗಿ ತಯಾರಾಗುತ್ತಿವೆಯಾ? ಇಲ್ಲ ನಮ್ಮ ವಿವಿಗಳೂ ಕೂಡ carporate ಸಂಸ್ಥೆಗಳೋ?

ಹೋಗಲಿ ಇವರಿಗೆ ಸೆಂಟ್ರಲ್ ಕಾಲೇಜು ಕ್ರೀಡಾಂಗಣದ ಸಾಂಸ್ಕೃತಿಕ ಮಹತ್ವದ ಅರಿವಾದರೂ ಇದೆಯೇ? ಇದು ಸುಮಾರು 150 ವರ್ಷಗಳ ಹಳೆಯ ಕ್ರೀಡಾಂಗಣ. ಕರ್ನಾಟಕ ಕ್ರಿಕೆಟ್ನ ತವರು ಮನೆ. ಅಸಲಿಗೆ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಜನಿಸಿದ್ದೇ ಇಲ್ಲಿ. 1972ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ನಿರ್ಮಾಣವಾಗುವವರೆಗೂ ಬೆಂಗಳೂರಿನ ಏಕೈಕ ಕ್ರಿಕೆಟ್ ಸ್ಟೇಡಿಯಂ ಸೆಂಟ್ರಲ್ ಕಾಲೇಜ್ ಗ್ರೌಂಡ್ಸ್! ಇಲ್ಲಿ ಅನೇಕಾನೇಕ ಅಂತರಾಷ್ಟ್ರೀಯ ಟೆಸ್ಟ್ ಮತ್ತು ಫಸ್ಟ್ ಕ್ಲಾಸ್ ಕ್ರಿಕೆಟ್ನ ಪಂದ್ಯಗಳಾಗಿವೆ. ಪ್ರಸನ್ನ, ವಿಶ್ವನಾಥ್, ಚಂದ್ರಶೇಖರ್ ಸೇರಿದಂತೆ ಹಲವಾರು ದೈತ್ಯ ಪ್ರತಿಬೆಗಳು ರೂಪುಗೊಂಡಿರುವುದೇ ಇಲ್ಲ. ಇದು ಅವರೆಲ್ಲರ ತವರು ಮನೆ. ಈ ಕ್ರೀಡಾಂಗಣ ಸ್ವಾತಂತ್ರ್ಯ ಚಳುವಳಿಗೆ ಸಾಕ್ಷಿಯಾಗಿದೆ. ಅಸಂಖ್ಯ ಸಮಾವೇಶಗಳಾಗಿವೆ ಇಲ್ಲಿ. ಹಳೆ ಬೆಂಗಳೂರಿನ ಹೆಗ್ಗುರತು ಇದು.

ಇನ್ನು ಬೆಂಗಳೂರಿನ ಇಂದಿನ ಕಾಂಕ್ರೀಟು ಕಗ್ಗಾಡಿನ ನಡುವೆ ಉಳಿದಿರುವ 12 ಎಕರೆಗಳ ಸ್ವಚ್ಛಂದ ಲಂಗ್ ಸ್ಪೇಸ್ ಇದು. ಅತ್ತ ರೇಸ್ ಕೋರ್ಸ್ನಲ್ಲಿ ಬಹುಮಹಡಿ ಸಮುಚ್ಛಯ, ಇತ್ತ ಜೈಲನ್ನು ನುಂಗುವ ಎಲ್ಲ ಪ್ರಯತ್ನಗಳು ಇತ್ತ ಅಳಿದುಳಿದಿರುವ ಸೆಂಟ್ರಲ್ ಕಾಲೇಜು ಕ್ರೀಡಾಂಗಣವನ್ನು ಕಬಳಿಸಿಬಿಡುವ ಹುನ್ನಾರ. ಇನ್ನು ವಿವಿ ದೃಷ್ಟಿಯಿಂದ ನೋಡಿದರೆ ಕೂಡ ಇದು ಸಮ್ಮತವಲ್ಲ. ಸೆಂಟ್ರಲ್ ಕಾಲೇಜು ಕ್ರೀಡಾಂಗಣ ವಿವಿ ಆಸ್ತಿ. ಅದನ್ನು ಬಿಡಿಎಗೆ ನೀಡುವುದು ನಂತರ ನಿಧಾನವಾಗಿ ಅದು ಸರ್ಕಾರದ ಕೈವಶವಾಗುವ ಎಲ್ಲ ಅಪಾಯಗಳಿವೆ. ಮತ್ತು ಸದ್ಯ ಕೂಡ ಅದು ವಿವಿ ಕ್ಯಾಂಪಸ್ಸಿನ ಅವಿಭಾಜ್ಯ ಭಾಗ. ಅಂತ ಜಾಗೆಯನ್ನು ಸಾರ್ವಜನಿಕರ ವಾಹನ ನಿಲುಗಡೆಗೆ ತೆರೆಯುವುದು ಸರ್ವಥಾ ಅಸಮರ್ಥನೀಯ. ಹೀಗೆ ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ ಕೂಡ ಇದು ಖಂಡನೀಯ.

ಇನ್ನು ವಿವಿಯ ಆರ್ಥಿಕ ಸಬಲೀಕರಣಕ್ಕೆ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸ ಹೊರಟಿರುವುದನ್ನು ಹೇಗೆ ಪರಿಭಾವಿಸಬೇಕು? ಹಿಂದೊಮ್ಮೆ ಬಾಂಬೆ ವಿವಿಯನ್ನು ಶೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲು ಹೊರಟಿದ್ದರು ಇಂಥದೇ ಜನ. ಅವ್ರು ಹೇಳಿದ್ದೂ ಇದನ್ನೇ ವಿವಿಯ ಆರ್ಥಿಕ ಸಬಲೀಕರಣ. ಅದು ಸರ್ಕಾರದ ಕರ್ತವ್ಯ. ವಿವಿಗಳು ಹಣ ಮಾಡುವ ಸಂಸ್ಥೆಗಳಲ್ಲ. ಆದಾಯ ವರಮಾನ ಇತ್ಯಾದಿ ಅರ್ಥಶಾಸ್ತ್ರದ ಪದಗಳಿಗೆ ಇಲ್ಲಿ ಅರ್ಥವಿಲ್ಲ. ಅಷ್ಟಕ್ಕೂ ಬೆಂಗಳೂರು ವಿವಿ ಮೊದಲಿನಿಂದಲೂ ಶ್ರೀಮಂತ ವಿವಿಯೆಂದೆ ಜನಜನಿತ. ಮಿಕ್ಕ ವಿವಿಗಳಲ್ಲಿ ೧೦೦-೨೦೦ ಕಾಲೇಜುಗಳಿದ್ದರೆ ಬೆಂಗಳೂರು ವಿವಿಯಡಿ ೭೦೦ ಕಾಲೇಜುಗಳಿವೆ. ಅದರ ಅಗಾಧತೆಯ ಕಾರಣವಾಗಿ ಅದರ ವರಮಾನವೂ ಹೆಚ್ಚೇ. ಬೆಂಗಳೂರು ವಿವಿ ಮೊದಲಿನಿಂದಲೂ ಆರ್ಥಿಕವಾಗಿ ಸಧೃಢವಾಗಿಯೇ ಇದೆ. ಅಲ್ಲಿರುವುದು ಕೊರತೆಯಲ್ಲ. ಬದಲಿಗೆ financial mismanagement. ತಿಮ್ಮಪ್ಪನವರ ಅವಧಿಯಲ್ಲಿ excess ಇದ್ದ ಹಣಕಾಸು ಈ 4 ವರ್ಷಗಳಲ್ಲಿ 12 ಕೋಟಿಗಳ ಡೆಫಿಸಿಟ್ ಆದುದಾದ್ರೂ ಹೇಗೆ? ವಿವಿಯಲ್ಲಿ ದುಡ್ಡಿಲ್ಲ ಎಂದು ಹಿಯಿಲೆಬ್ಬಿಸಿ revenue generation ಗೆ ಇಳಿದಿರುವ ಪ್ರಭುದೇವ ಅವರಿಗೆ ಅವರ ಹುಚ್ಚು populist scheme ಗಳನ್ನು ಅಮಲು ಮಾಡಲು ದುಡ್ಡಿದೆ. ಅಥವಾ ಸೆಂಟ್ರಲ್ ಕಾಲೇಜ್ ಮೈದಾನವನ್ನು ಅಡ ಇತ್ತು ಇದಕ್ಕೆ ದುಡ್ಡು ಹೊಂದಿಸುತ್ತಿದ್ದಾರೆಯೇ?

ವಿವಿ ಆಡಳಿತದ ಈ ನಡೆಗೆ ಒಳಗಿಂದಲೇ ಸಾಕಷ್ಟು ವಿರೋಧವಿದೆ. ಇನ್ನು ಈ ಕುರಿತು ವಾಟಾಳ್ ನಾಗರಾಜ್ ಹೋರಾಟ ಕೈಗೆತ್ತಿಕೊಂಡಿದ್ದಾರೆ. ನಾಡಿನ ಪ್ರಜ್ಞಾವಂತರೆಲ್ಲರೂ ಇತ್ತ ಗಮನ ಹರಿಸಬೇಕಾದ ಅಗತ್ಯವಿದೆ. ಆದರೆ ಮಿಸ್ಟರ್ ಪ್ರಭುದೇವ ಅವರು ಯಾರ ಮಾತನ್ನೂ ಕೇಳುವ ಮನಸ್ಥಿತಿಯಲ್ಲಿಲ್ಲ. ಇದೇ ತಿಂಗಳ 27 ರಂದು ಸಿಂಡಿಕೇಟ್ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವ ಎಲ್ಲ ಸಾಧ್ಯತೆಗಳಿವೆ. ಇವತ್ತಿನ ಬೆಂಗಳೂರು ವಿವಿ ಸಿಂಡಿಕೇಟ್ ತುಂಬಾ ತುಂಬಿರುವುದು ಸರ್ಕಾರ ನೇಮಿಸಿರುವ ಹೌದಪ್ಪಗಳು. ಪ್ರಭುದೇವ ಈ ಬಣದ ಸರ್ವೋಚ್ಚ ನಾಯಕರು. ಹಾಗಾಗಿ ಇದು ಸಿಂಡಿಕೇಟ್ನ ಅನುಮೋದನೆ ಪಡೆದುಬಿಡುವ ಅಪಾಯವಿದೆ. ಆಗ ಹೋರಾಟ ಅನಿವಾರ್ಯ. ಇದನ್ನು ವಿರೋಧಿಸುವದಷ್ಟೇ ಅಲ್ಲ ತಡೆಯುವುದೂ ಮುಖ್ಯ. ಅದಕ್ಕೆ ಧರಣಿ ಹೋರಾಟಗಳು ಅನಿವಾರ್ಯವಾದರೆ ಅದಕ್ಕೂ ನಾವು ಸಿದ್ಧರಿರಬೇಕಗುತ್ತದೆ.

One thoughts on “ವಿವಿಯಲ್ಲಿ ರಿಯಲ್ ಎಸ್ಟೇಟ್ ದಂಧೆ - ಸೆಂಟ್ರಲ್ ಕಾಲೇಜು ಮೈದಾನ ಇನ್ನು public parking lot!!

www.kumararaitha.com said...

ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ಜಾಗದ ಮೇಲೆ ಇವರ ಕಣ್ಣು ಬಿದ್ದಿದೆ. ಈಗ ಸೆಂಟ್ರಲ್ ಕಾಲೇಜು ಆವರಣ. ಸಂಸ್ಕೃತಿ ಅಂತೆಲ್ಲ ಮಾತನಾಡುವ ಈ ಬಿಜೆಪಿ ಸರಕಾರ ರಿಯಲ್ ಎಸ್ಟೇಟ್ ಏಜೆನ್ಸಿಯಾಗಿದೆ. ಹಳೆಯ ಮತ್ತು ಈಗಿನ ವಿದ್ಯಾರ್ಥಿಗಳು ಕೈ ಕಟ್ಟಿ ಕೂರದೇ ಪ್ರತಿಭಟನೆ ನಡೆಸಬೇಕು. ಈಗಾಗಲೇ ಪ್ರತಿಭಟನೆ ನಡೆಸುತ್ತಿರುವ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಅಭಿನಂದನೀಯರು

Proudly powered by Blogger
Theme: Esquire by Matthew Buchanan.
Converted by LiteThemes.com.