ತಿರಂಗಾ ರಾಜಕಾರಣ - ಅಪ್ರಬುದ್ಧತೆಯ ಪರಾಕಾಷ್ಟೆ


ಭಾರತ ಗಣರಾಜ್ಯದ ಷಷ್ಟಿಪೂರ್ತಿಯಲ್ಲಿ ಎಲ್ಲೋ ಅರವತ್ತಕ್ಕೆ ಅರಳೋ ಮರಳೋ ಎಂಬ ಅನುಮಾನಗಳು ಮೂಡುವಂತಾದದ್ದು ನಮ್ಮ ದೇಶದ ಇಂದಿನ ದುರಂತವೇ ಸರಿ. ಗಣರಾಜ್ಯೋತ್ಸವದಂತಹ ರಾಷ್ಟ್ರ ಹಬ್ಬದ ಸಂದರ್ಭದಲ್ಲಿ ಮೆರೆದಾಡಿದ್ದು ಶುದ್ಧ ತಿರಂಗಾ ರಾಜಕಾರಣ. ಅದೂ ಎರಡೂ ಕಡೆಯವರು ರಾಷ್ಟ್ರದ ಜನತೆಗೆ ತೋರಿಸಿದ್ದು ತಿರಂಗಾವನ್ನು ರಾಜಕಾರಣದ ವಸ್ತುವಾಗಿಸಿಕೊಳ್ಳಬಲ್ಲ ತಮ್ಮ ಕೀಳು ಅಭಿರುಚಿಯನ್ನು ಮತ್ತು ಭಾರತದ ರಾಜಕಾರಣದ ಇಂದಿನ ಅಪ್ರಬುದ್ಧತೆಯನ್ನು.

ಬಿಜೆಪಿಗರಿಗೆ ಇದೇನೂ ಹೊಸದಲ್ಲ. ಎಲ್ಲವೂ ಒಂದು ಸಿದ್ಧಸೂತ್ರದಂತೆ ನಡೆದುಹೋಗುತ್ತವೆ ಬಿಜೆಪಿಯ ಇಂತಹ ಕಾರ್ಯಕ್ರಮಗಳು. ಬಿಜೆಪಿಯ ಯುವ ಮೋರ್ಚಾ ಏಕತಾ ಯಾತ್ರಾ ಎಂಬ ಹೆಸರಿನಲ್ಲೊಂದು ಯಾತ್ರೆ ಕೈಗೊಳ್ಳುತ್ತದೆ. ಐದು ರಾಜ್ಯಗಳ ಮುಖಾಂತರ ಹಾಯ್ದು ಜನವರಿ 26ರಂದು ಕಾಶ್ಮೀರವನ್ನು ತಲುಪಿ ಶ್ರೀನಗರದ ಲಾಲ್ಚೌಕದಲ್ಲಿ ತಿರಂಗಾ ಹಾರಿಸುವುದು ಯಾತ್ರೆಯ ನೀಲಿ ನಕ್ಷೆ. ಕಾಶ್ಮೀರದ ಪ್ರಕ್ಷುಬ್ಧತೆ ಮತ್ತು ಭಧ್ರತಾ ಸೂಕ್ಷ್ಮತೆಯ ದೃಷ್ಟಿಯಿಂದ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ಯಾತ್ರೆಗೆ ಅನುಮತಿ ನಿರಾಕರಿಸುತ್ತದೆ. ಕೇಂದ್ರ ಸರ್ಕಾರವೂ  ಅದರ ಬೆನ್ನಿಗೆ ನಿಲ್ಲುತ್ತದೆ. ಅನುಮತಿ ನಿರಾಕರಣೆ ಮತ್ತು 144 ಸೆಕ್ಷನ್ನ ಹೊರತಾಗಿಯೂ ನಾವು ಲಾಲ್ಚೌಕದಲ್ಲಿ ತಿರಂಗವನ್ನು ಹಾರಿಸಿಯೇ ತೀರುತ್ತೇವೆ ಎಂದು ಬಿಜೆಪಿಗರು ಶಪಥಗೈಯುತ್ತಾರೆ. ದೇಶದೆಲ್ಲೆಡೆಯಿಂದ ಶ್ರೀನಗರದೆಡೆ ಹರಿದು ಬರುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಮಾರ್ಗಮಧ್ಯೆಯೇ ತಡೆಯಲಾಗುತ್ತದೆ. ಕರ್ನಾಟಕದಿಂದ ಹೊರಟ ಕಾರ್ಯಕರ್ತರ ಪಡೆಯನ್ನು ಮಹಾರಾಷ್ಟ್ರದ ಅಹ್ಮದ್ನಗರದ ಬಳಿ ತಡೆದು ಹಿಂದಿರುಗಿಸಿದ್ದಾರೆ. ಇನ್ನು ಜನವರಿ 24ರಂದು ಶ್ರೀನಗರದ ವಿಮಾನ ನಿಲ್ಡಾಣದಲ್ಲಿ ಬಂದಿಳಿದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ಅನಂತ ಕುಮಾರ್ ಅವರನ್ನು ನಗರ ಪ್ರವೇಶಿಸಿದಂತೆ ತಡೆದು ಬಂಧಿಸಲಾಗಿದೆ. ಅವರನ್ನು ಆ ಕೂಡಲೇ ಪಂಜಾಬಕ್ಕೆ ಕಳಿಸಿಕೊಡಲಾಗಿದೆ. ನಾನು ಲೋಕಸಬೆಯ ವಿರೋಧ ಪಕ್ಷದ ನಾಯಕಿ. ನನ್ನನ್ನೇ ಬಂಧಿಸುತ್ತಾರ? ಇದು ಎಮರ್ಜೆನ್ಸಿಗಿಂತಲೂ ಘೋರ ಎಂದು ಮೇಡಂ ಸುಷ್ಮಾ ಅವರು ಅವಲೊತ್ತುಕೊಳ್ಳುತ್ತಾರೆ. ಅಷ್ಟಕ್ಕೇ ಬಿಡದ ಬಿಜೆಪಿಗರು ಜನವರಿ 25ರಂದು ಪಂಜಾಬ ಗಡಿಯ ಮುಖಾಂತರ ಕಾಶ್ಮೀರದೊಳಕ್ಕೆ ಪ್ರವೇಶಿಸಲು ಹೊರಡುತ್ತಾರೆ ತಮ್ಮ ರಥವೇರಿ. ಕಾಶ್ಮೀರದ ಗಡಿಯಲ್ಲಿ ಇವರನ್ನು ಜಮ್ಮು ಮತ್ತು ಕಾಶ್ಮೀರದ ಪೋಲೀಸರು ತಡೆದು ಪುನಃ ಬಂಧಿಸಿದರು. ಅಲ್ಲೇ ಹತ್ತಿರದಲ್ಲಿನ ಖಥುವಾದಲ್ಲಿ ಬಿಜೆಪಿ ತಿರಂಗಾ ಹಾರಿಸಿ ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗದು ಎಂಬಂತೆ ಮೀಸೆ ತಿರುವಿದೆ. ಇನ್ನು ಲಾಲಚೌಕದಲ್ಲಿ ತಿರಂಗಾ ಹಾರಿಸಲು ಅನುಮತಿಸದಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಅದ್ವಾನಿ ಹೇಳಿದ್ದಾರೆ. ಒಟ್ಟಿನಲ್ಲಿ ಜನವರಿ 26ರಂದು ಕಾಶ್ಮೀರದ ಕೊಳ್ಳ ಶಾಂತವಾಗಿತ್ತು. ಬಿಜೆಪಿ ಇನ್ನೂ ತನ್ನ ಅರಚಾಟ ನಿಲ್ಲಿಸಿಲ್ಲ. ಕಾಶ್ಮೀರ ಭಾರತದ ಭಾಗವಲ್ಲವೆ? ಅಲ್ಲಿ ತಿರಂಗಾ ಹಾರಿಸುವುದನ್ನು ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅಡ್ಡಿಪಡಿಸುತ್ತಿರುವುದು ದುರದೃಷ್ಟಕರ ಎಂದು ಅಬ್ಬರಿಸಿ ಬೊಬ್ಬಿರಿಯುತ್ತಾರೆ ಬಿಜೆಪಿಗರು. ಬಿಜೆಪಿ ನಿರೀಕ್ಷಿಸಿದಷ್ಟು ಯೂಫೋರಿಯಾ ರಾಷ್ಟ್ರಾದ್ಯಂತ ನಿಮರ್ಾಣವಾಯಿತಾ? ಆಯಿತಾದರೂ ಬಿಜೆಪಿಯ ನಿರೀಕ್ಷೆಯ ಮಟ್ಟದಲ್ಲಿ ಅಲ್ಲ.

ಕೆಲವು ಕಹಿ ಸತ್ಯಗಳನ್ನು ನಾವು ಗುರುತಿಸದೆ, ಒಂದು ಭ್ರಮಾಲೋಕದಲ್ಲಿ ಇದನ್ನು ನಿಷ್ಠುರವಾಗಿ ಪರಾಮರ್ಶಿಸಲಾಗದು. 1947ರ ಸ್ವಾತಂತ್ರ್ಯಾ ನಂತರ ಕಾಶ್ಮೀರದ ಅನೆಕ್ಸೇಷನ್ನ ಸಂದರ್ಭದಲ್ಲಿ ನಡೆದ ಕೊಡು ಕೊಳ್ಳುವಿಕೆಯ ಭಾಗವಾಗಿ ಕೆಲವು ವಿಶೇಷ ಸವಲತ್ತುಗಳನ್ನು ನೀಡಲು ಒಪ್ಪಿತು ನೆಹ್ರೂ ಸರ್ಕಾರ. ಅದೇ ಆರ್ಟಿಕಲ್ 370. ಇದರನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ಅದರದೇ ಸಂವಿಧಾನವಿದೆ. ಲೋಕಸಭೆಯ ಅಧಿಕಾರವೂ ಕೂಡ ಇಲ್ಲಿ ಮೊಟಕು. ಆದರೂ ಕಾಶ್ಮೀರದಲ್ಲಿ ಪ್ರತ್ಯೇಕತೆಯ ಕೂಗು ಅತ್ಯಂತ ಪ್ರಬಲವಾಗಿರುವುದು ಎಲ್ಲರೂ ಬಲ್ಲ ವಿಚಾರವೇ. ಗಡಿಯ ಆಚೆ ಬದಿಯಿಂದ ಉತ್ತೇಜಿತರಾಗಿರುವ ಪ್ರತ್ಯೇಕತಾವಾದಿಗಳದು ಒಕ್ಕರಲ ಕೂಗು "ಆಜಾದಿ". 80ರ ದಶಕದ ಕಡೆಯ ವರ್ಷಗಳಲ್ಲಿ ಈ ಪ್ರತ್ಯೇಕತಾವಾದಿಗಳ ಧ್ವನಿ ಉತ್ತುಂಗಕ್ಕೇರುದುದೇ ಅಲ್ಲದೆ, ಅ ಧ್ವನಿಗೆ ಕಾಶ್ಮೀರ ಕೊಳ್ಳದ ಜನರ ಮನ್ನಣೆ ಮತ್ತು ಕೋರಸ್ ದೊರಕಿತು. ಕಾಶ್ಮೀರ ಕೊಳ್ಳ ಪ್ರಕ್ಷುಬ್ಧತೆಗೆ ದೂಡಲ್ಪಟ್ಟಿತು. ಕಾಶ್ಮೀರ ಪಂಡಿತರನ್ನು ಒಂದು ಎಥ್ನಿಕ್ ಕ್ಲೆಂಸಿಂಗ್ಗೆ ಒಳಪಡಿಸಲಾಯಿತು. ಪಂಡತರು ದೇಶಾದ್ಯಂತ ಚೆದುರಿ ಹೋದರು. ಹಿಂಸೆ ತಾಂಡವವಾಡಿತು. ಗಡಿಯಾಚೆಗಿನ ಬೆಂಬಲದಿಂದ ಅಕ್ಷರಶಃ ಒಂದು ಇನ್ಸರ್ಜೆನ್ಸಿ  ಶುರುವಿಟ್ಟುಕೊಂಡರು ಪ್ರತ್ಯೇಕತಾವಾದಿಗಳು. ಒಂದಿಡೀ ತಲೆಮಾರು ಉರಿದು ಹೋಯಿತು. ಕಾಶ್ಮೀರ ಅಕ್ಷರಶಃ ಭರತೀಯ ಸೈನ್ಯದಳಗಳ ಕೋಟೆಯಾಗಿ ಹೋಯಿತು. ವಾಜಪೇಯಿ ಸರ್ಕಾರ ಇದೇ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ಚಾಲೂ ಮಾಡಿತ್ತು. ಈ ಮಧ್ಯೆ ಕೆಲ ವರ್ಷಗಳ ಕಾಲ ಕೊಳ್ಳದಲ್ಲಿ ಶಾಂತಿ ನೆಲೆಸಿಯೂ ಇತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕಾಶ್ಮೀರ ಕೊಳ್ಳ ಮತ್ತೆ ಪ್ರಕ್ಷುಬ್ಧತೆಗೆ ದುಡಲ್ಪಟ್ಟಿದೆ. ಇದಕ್ಕೆ ಕಾರಣಗಳು ಹಲವು. ಈ ಬಾರಿ ಕಾಶ್ಮೀರದ ಶಾಂತಿ ಚೆದುರಲು ಫ್ಲಾಶ್ಪಾಯಿಂಟ್ ಆದದ್ದೇ ಅಮರನಾಥ ಯಾತ್ರೆ ಮತ್ತು ಅಂದಿನ ರಾಜ್ಯಪಾಲರಿಂದ ಪ್ರಚೋದಿತ ಹಿಂದೂ assertiveness ಮತ್ತು ಬಲಪಂಥೀಯ ಸಂಘಟನೆಗಳ ಅಬ್ಬರಗಳು. ನಂತರ ಸೋಫಿಯಾ ಎನ್ಕೌಂಟರ್, ನಂತರ ಕಲ್ಲು ತೂರಾಟ ಚಳುವಳಿ, ಕಳೆದ ಎರಡು ತಿಂಗಳುಗಳಿಂದ ಸಂಪೂರ್ಣ ಬಂದ್. ಒಂದೇ ಎರಡೇ ಕೊಳ್ಳ ಮತ್ತೆ ಪ್ರಕ್ಷುಬ್ಧ! ಒಟ್ಟಾರೆ ಎಂದಿಗೂ ಕೂಡ ಕಾಶ್ಮೀರ ಮನಸಾರೆ ಸಂಪೂರ್ಣವಾಗಿ ಭಾರತ ಗಣರಾಜ್ಯದ ಭಾಗವಾಗಿಯೇ ಇಲ್ಲ. ಇದನ್ನು ನಾವು ಒಪ್ಪಲೇ ಬೇಕಾಗುತ್ತದೆ.

ಈ ಎಲ್ಲ ಪ್ರಕ್ಷುಬ್ಧತೆ ಮತ್ತು ಪ್ರತ್ಯೇಕತಾವಾದವನ್ನು ಎದುರಿಸಬೇಕಿದೆ ಉಮರ್ ಅಬ್ದುಲ್ಲಾನ ಸರ್ಕಾರ. ಇದರಲ್ಲಿ ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆಯೆಂಬುದು ಪ್ರಶ್ನಾರ್ಹವೇ ಸರಿ. ಇಷ್ಟರ ನಡುವೆ ಶುರುವಿಟ್ಟುಕೊಂಡಿದೆ ಬಿಜೆಪಿ ತಿರಂಗಾ ಯಾತ್ರೆಯನ್ನು. ಈ ಘೋಷಣೆಗೆ ಪ್ರತಿಕ್ರಿಯೆಯಾಗಿ ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ ತಾನೊಂದು ಪ್ರತಿ ಯಾತ್ರೆಯನ್ನು ಘೋಷಿಸಿತು. ಇವರಿಬ್ಬರೂ ಎದುರಾದರೆ ಭಧ್ರತಾ ಸಮಸ್ಯೆ ತಲೆದೋರುವುದು ಖಚಿತ. ಇದು ಬೆಜಿಪಿಗೂ ಹೊಸತಲ್ಲ, ಕಾಶ್ಮೀರಕ್ಕೂ ಹೊಸತಲ್ಲ. 1992ರಲ್ಲಿ ಇದೇ ಲಾಲಚೌಕದಲ್ಲಿ ತಿರಂಗಾ ಹಾರಿಸುವ ಚಳುವಳಿ ಕೈಗೊಂಡಿತು ಬಿಜೆಪಿ. ಆಗ ಇದರ ನೇತೃತ್ವ ವಹಿಸಿದವರು ಮುರಳಿ ಮನೋಹರ ಜೋಷಿ. ಅವತ್ತೂ ಹೀಗೆಯೇ ದೊಡ್ಡ ಗಲಾಟೆ ನಡೆಯಿತಾದರೂ ಕಡೆಗೆ ಅವರನ್ನು ಲಾಲಚೌಕಕ್ಕೆ ಏರ್ಲಿಫ್ಟ್ ಮಾಡಿ ಅವರ ಕೈಲಿ ತಿರಂಗಾ ಹಾರಿಸಲಾಯಿತು. ಕನ್ಯಾಕುಮಾರಿಯಿಂದ ಇದಕ್ಕಾಗಿ ಯಾತ್ರೆ ಮಾಡಿದ್ದವರು, ಲಾಲಚೌಕದಲ್ಲಿ ಇದ್ದದ್ದು ಕೇವಲ 11 ನಿಮಿಷ. ಅಷ್ಟರಲ್ಲಿ ಎರಡು ಬಾಂಬ್ ದಾಳಿ ನಡೆದಿತ್ತು. ಕೂಡಲೇ ಅವರನ್ನು ಸುರಕ್ಷಿತವಾಗಿ ತೆರಳಿಸಲಾಯಿತಾದರೂ, ಆ ದಿನ 3 ಭಧ್ರತಾ ಸಿಬ್ಬಂದಿಯೂ ಸೇರಿದಂತೆ 20 ಮಂದಿ ಸಾವನ್ನಪ್ಪಿದರು. ಹಾಗಾಗಿ ಈ ಬಾರಿ ಎರಡೂ ಎರಡೂ ಯಾತ್ರೆಗಳಿಗೂ ಅನುಮತಿ ನಿರಾಕರಿಸಿತು ಸರ್ಕಾರ. ಅರರೆ ಅವರು ಹಾರಿಸುತ್ತಿರುವುದು ತಿರಂಗಾ. ಅದರಲ್ಲಿ ತಪ್ಪೇನು? ಕಾಶ್ಮೀರವೇನು ಭಾರತದ ಭಾಗವಲ್ಲವೆ? ಅಸಲಿಗೆ ಬಿಜಪಿಗೂ ಗೊತ್ತು ನಮ್ಮ ರಾಷ್ಟ್ರದ ಅನೇಕರಲ್ಲಿ ಈ ಪ್ರಶ್ನೆ ಮೂಡುತ್ತದೆ ಎಂದು, ಸಕರ್ಾರ ಬಿಜೆಪಿಯ ಈ ಅಜೆಂಡಾಕ್ಕೆ ವಿರೋಧಿಸುತ್ತದೆಂದು. ಪ್ರಶ್ನೆ ಮೂಡಿದೆ, ವಿರೋಧವೂ ವ್ಯಕ್ತವಾಗಿದೆ. ಬಿಜೆಪಿಗೆ ಬೇಕಾಗಿದ್ದೂ ಇದೆ. ಈಗ ದೇಶಕ್ಕೆ ಬೆಂಕಿ ಬಿದ್ದಿದೆ ಕಾಶ್ಮೀರ ನಮ್ಮದಲ್ಲವೆ, ಅಲ್ಲಿ ತಿರಂಗಾ ಹಾರಿಸುವವರಿಲ್ಲ. ಕಾಂಗ್ರೆಸ್ ಪ್ರತ್ಯೇಕತಾವಾದಿಗಳಿಗೆ ಹೆದರಿ ಕೂತಿದೆ. ಇದು ವೋಟ್ಬ್ಯಾಂಕ್ ರಾಜಕಾರಣ....ಇಂಥ ಅಪ್ರಬುದ್ಧ ರಾಜಕಾರಣದಿಂದ ದೇಶಕ್ಕೆ ನಿಜ ಬೆಂಕಿ ಬಿದ್ದಿದೆ.

ಬಿಜೆಪಿ nationalism ಅನ್ನು ತನ್ನ ಅಜೆಂಡಾ ಎಂದು ಸಾರುವ ಪಕ್ಷ. ಆದರೆ ಅದು ಸಾರುವುದು nationalism ಮಾತ್ರ ಅಲ್ಲ, ಅದ್ವಾನಿಯವರು ಅದಕ್ಕೊಂದು prefix ಅನ್ನು ಜೋಡಿಸಿದ್ದಾರೆ ಅದು cultural nationalism! ಏನದು cultural nationalism? ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದೇ ರಾಷ್ಟ್ರ ಭಕ್ತಿ. ಸರಿ ಹಾಗಾದರೆ ಯಾವುದು ಭಾರತೀಯ ಸಂಸ್ಕೃತಿ? ಅಸಲು ಸಮಸ್ಯೆ ಉದ್ಭವವಾಗುವುದೇ ಇಲ್ಲಿ. ಬಿಜೆಪಿಯ ಹಿಂದುತ್ವದ ನೆಲೆಗಟ್ಟಿನಲ್ಲಿ ಅವರು ಹಿಂದೂ ಸಂಸ್ಕೃತಿಯೇ ಭಾರತೀಯ ಸಂಸ್ಕೃತಿ ಎಂದು ಅರ್ಥೈಸುತ್ತಾರೆ. ಹಾಗಾದರೆ ಈ ದೇಶದ 36 ಕೋಟಿ ಮುಸಲ್ಮಾನರೇನು ಮಾಡಬೇಕು? ಇತರೆ ಅಲ್ಪಸಂಖ್ಯಾತರು? ಅಲೆಮಾರಿಗಳು? ಈ ದೇಶದ ಟ್ರೈಬಲ್ಗಳೇನು ಹಿಂದೂಗಳೇ? ಅವರದಾವ ಸಂಸ್ಕೃತಿ? ತಿಕ್ಕಾಟ ಶುರುವಾಗುವುದೇ ಇಲ್ಲಿ.

ಇನ್ನು ಬಿಜೆಪಿಯ ತಿರಂಗಾ ಯಾತ್ರೆಗಳಲ್ಲಿನ ಸೂಕ್ಷ್ಮ ರಾಜಕೀಯವನ್ನು ಗಮನಿಸಿ. ಇದು ಲಾಲಚೌಕಕ್ಕೆ ಸೀಮಿತವಲ್ಲ. ನಮ್ಮ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲೂ ನಡೆದದ್ದು ಇದೇ ಅಲ್ಲವೇ? ಅತಿ ಹೆಚ್ಚು ಮುಸ್ಲಿಮರ ದಟ್ಟಣೆಯಿರುವ ಪ್ರದೇಶಕ್ಕೆ ಹೋಗಿ ಅವರ ಪ್ರಾರ್ಥನಾ ಸ್ಥಳಗಳ ಮೇಲೋ, ಇಲ್ಲವೇ ಅವರ ಚೌಕಗಳಲ್ಲೋ ಹೋಗಿ ಇವರು ಹಿಂದುತ್ವವನ್ನು ಪ್ರತಿಷ್ಠಾಪಿಸಬೇಕು. ಅವರ ಮುಂದೆ ಎದೆ ಸೆಟೆಸಿ ನಿಲ್ಲಬೇಕು. ನೀವು ನಮ್ಮ ದೇಶದಲ್ಲಿ ಸೆಕೆಂಡ್ ಕ್ಲಾಸ್ ಎಂದು ಹೇಳಬೇಕು. ಒಂದು machismo fantasy. ಇವರು ಅಲ್ಲಿ ಹೋಗಿ ಭಗವಾಧ್ವಜವನ್ನು ಹಾರಿಸಿದರಾದರೂ ಅದನ್ನು ತಡೆದುಕೊಳ್ಳಬಹುದು. ಆದರೆ ಇವರು ತಿರಂಗಾವನ್ನು ಹಿಡಿದು ಹೋಗುತ್ತಾರೆ. ಇಲ್ಲಿ ಎರಡು ಸೂಕ್ಷ್ಮಗಳಿವೆ. ಒಂದು ಮುಸ್ಲಿಂ ಸಮೂಹ ಹೆಚ್ಚಗೆ ಇರುವ ಜಾಗದಲ್ಲಿ ಇವರು ತಿರಂಗಾ ಹಾರಿಸಿ ಸಾಧನಾ ಸಮಾವೇಶ ಮಾಡಿದರೆ, ಅದು ಮುಸ್ಲಿಮರೇನೋ ಶತೃ ರಾಷ್ಟ್ರದವರು, ಅವರ ನೆಲದಲ್ಲಿ ನಾವು ನಮ್ಮ ರಾಷ್ಟ್ರಧ್ವಜವನ್ನು ಹಾರಿಸಿ ಬಂದೆವು ಅನ್ನುವ ಭಾವ ಅಲ್ಲಿದೆ. ಸಹಜವಾಗಿಯೇ ಮುಸ್ಲಿಮರು ಇಂತಹ ಅವಮಾನಗಳಿಂದ ಕುದ್ದು ಹೋಗುತ್ತಾರೆ. ಇದನ್ನು ವಿರೋಧಿಸುತ್ತಾರೆ. ನೋಡಿದಿರಾ ಅವರ ಏರಿಯಾದಲ್ಲಿ ತಿರಂಗಾ ಹಾರಿಸಲೂ ಬಿಡೋದಿಲ್ಲ ಈ ತುರುಕರು. ಇವರು ಯಾವತ್ತಿದ್ದರೂ ಪಾಕಿಸ್ತಾನದವರೇ ಕಣ್ರೀ ಅಂತ ಹೇಳಿಕೊಂಡು ತಿರುಗುತ್ತಾರೆ ನಮ್ಮ ಬಿಜೆಪಿಗರು. ಇನ್ನು ಆರ್.ಎಸ್.ಎಸ್. ಬಿಜೆಪಿಗರ ಕೈಯಲ್ಲಿ ತಿರಂಗ ಒಂದು metaphor ಕೂಡ. ಅವರ cultural nationalism ಸಿದ್ಧಾಂತದ ಹಿನ್ನೆಲೆಯಲ್ಲಿ ಭಾರತ ರಾಷ್ಟ್ರ ಮತ್ತು ಅವರ ಕನಸಿನ ಹಿಂದೂ ರಾಷ್ಟ್ರವನ್ನು ಅವರು ಇಲ್ಲಿ ಏಕ ಮಾಡುತ್ತಿರುತ್ತಾರೆ. ಅದು ಇಂಥ ಸಂದರ್ಭಗಳಲ್ಲಿ ಭಗವಾಧ್ವಜಕ್ಕಿಂತಲೂ ಬೇರೆಯೇನೂ ಅಲ್ಲ. ಅದು ಹಿಂದೂ ಸಂಸ್ಕೃತಿಯೇ ಈ ರಾಷ್ಟ್ರದ ಮುಖ್ಯವಾಹಿನಿ, ಅದರ ಹೊರತಾದವರು ನೀವು. ಅದಕ್ಕಾಗಿಯೇ ನಿಮ್ಮನ್ನು ಗೆಲ್ಲಲು ಬರುತ್ತಿದ್ದೇವೆ ತಿರಂಗಾ ಹಾರಿಸುತ್ತೇವೆ ನಿಮ್ಮ ಏರಿಯಾದಲ್ಲಿ ಎಂಬುದನ್ನು ಧ್ವನಿಸುತ್ತದೆ. ಇದು ಭಾರತ ಗಣರಾಜ್ಯದ ಮೂಲ ಪರಿಕಲ್ಪನೆಗೆ ವಿರುದ್ಧವಾದುದು. ಮುಸ್ಲಿಮರಷ್ಟೇ ಅಲ್ಲ ಈ ನಾಡಿನ ಎಲ್ಲ ಪ್ರಜ್ಞಾವಂತರೂ ಇದನ್ನು ವಿರೋಧಿಸಬೇಕಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಆಗುತ್ತದೆ.

ಇನ್ನೊಂದು ಮಾತು. ಕಾಶ್ಮೀರ ಪ್ರತ್ಯೇಕತಾವಾದಕ್ಕೆ ಸರ್ಕಾರ ಸೋತಿದೆ. ನಾವಲ್ಲಿ ರಾಷ್ಟ್ರದ ಸ್ವಾಮ್ಯತೆಯನ್ನು ಪುನಃ ಪ್ರತಿಷ್ಠಾಪಿಸುತ್ತೇವೆ ಎಂದು ಬೊಬ್ಬಿರಿಯುವ ಬಿಜೆಪಿಗರು ದೇಶದ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಇವರು ಹೇಳುವುದು ಅಸಲಿಗೆ ಅಲ್ಲಿ ಗಣರಾಜ್ಯೋತ್ಸವದಂದು ಕೂಡ ಯಾರೂ ತಿರಂಗಾ ಹಾರಿಸುವುದೇ ಇಲ್ಲವೇನೋ ಎಂಬಂತಿದೆ. ಪ್ರತಿ ರಾಜ್ಯದಲ್ಲೂ ನಡೆಯುವಂತೆಯೇ ಜಮ್ಮು ಮತ್ತು ಕಾಶ್ಮೀರದಲ್ಲೂ ಕೂಡ ನಿನ್ನೆ ರಾಜಧಾನಿ ಶ್ರೀನಗರದ ಭಕ್ಷಿ ಸ್ಟೇಡಿಯಂನಲ್ಲಿ ಸರಕಾರೀ ಧ್ವಜಾರೋಹಣ ಮತ್ತು ವಂದನೆ ನಡೆಯಿತು. ರಾಜ್ಯಪಾಲರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದಲ್ಲದೆ ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರದ ವತಿಯಿಂದ ಉಸ್ತುವಾರಿ ಮಂತ್ರಿ ಇಲ್ಲ ಜಿಲ್ಲಾ ಕಲೆಕ್ಟರ್ ಧ್ವಜಾರೋಹಣವನ್ನು ನೆರವೇರಿಸುತ್ತಾರೆ. ನಿನ್ನೆಯೂ ನೆರವೇರಿಸಿದ್ದಾರೆ. ಕಳೆದ 61 ವರ್ಷಗಳಿಂದ ಇದು ನಡೆದುಕೊಂಡೇ ಬಂದಿದೆ. ಭಾರತ ಸರ್ಕಾರ ತನ್ಮೂಲಕ ಕಾಶ್ಮೀರ ಕೊಳ್ಳದ ಮೇಲೆ ತನ್ನ ಏಕಸ್ವಾಮ್ಯವನ್ನು ಸಾರಿದೆ. ಅದಕ್ಕೆ ಕೊಳ್ಳದಲ್ಲಿ ಯಾವುದೇ ವಿರೋಧವೂ ವ್ಯಕ್ತವಾಗಿಲ್ಲ. ವಿರೋಧ ವ್ಯಕ್ತವಾದದ್ದು ಬಿಜೆಪಿಯ ಯಾತ್ರೆಗೆ ಮಾತ್ರ.

ಅಸಲಿಗೆ ಬಿಜೆಪಿ ಇದನ್ನು ಯಾಕಾದರೂ ಕೈಗೆತ್ತಿಕೊಂಡಿತು? ಅದು ಶುದ್ಧ ರಾಜಕೀಯ. ಇಂದಿನ ಯುಪಿಎ ಸರ್ಕಾರ ಒಳಗಿಂದಲೇ ಶಿಥಿಲಗೊಳ್ಳುತ್ತಿರುವುದು ವಾಸ್ತವ. ರಾಜಕೀಯ ಅಸ್ಥಿರತೆ -  ಅತ್ತ ತೃಣಮೂಲ ಕಾಂಗ್ರೆಸ್ ಇತ್ತ ಡಿಎಂಕೆ ಇಬ್ಬರ ಜೊತೆಗೂ ಕಾಂಗ್ರೆಸ್ನ ಸಂಬಂಧಗಳು ಹಳಸಿರುವುದು, ಬೆಲೆಯೇರಿಕೆ, ಭ್ರಷ್ಟಾಚಾರ - 2ಜಿ, ಆದರ್ಶ್, ಸಿಡಬ್ಲ್ಯೂಜಿ....ಮನಮೋಹನರೇ ವಿವಾದಗಳ ಕೇಂದ್ರ ಬಿಂದುವಾಗಿರುವುದು, ಅವಕಾಶ ಸಿಕ್ಕರೆ ಜೆಪಿಸಿ ಇಲ್ಲ ಪಿಎಸಿ ಮುಖಾಂತರವೇ 2ಜಿ ಹಗರಣದಲ್ಲಿ ಮನಮೋಹನರನ್ನೇ ಹಣಿಯುವ ವಿರೋಧ ಪಕ್ಷಗಳ ತಂತ್ರ ಫಲಕಾರಿಯಾದರೆ ಪ್ರಧಾನಿಗಳ ರಾಜೀನಾಮೆಯ ಸಂದರ್ಭ ಬಂದರೂ ಬರಬಹುದು. ಇವೆಲ್ಲವೂ ಸೂಚಿಸುತ್ತಿರುವುದು ಲೋಕಸಭೆಗೆ ಮಧ್ಯಂತರ ಚುನಾವಣೆಯೆಡೆಗೆ. ಇತ್ತೀಚೆಗೆ ಅದ್ವಾನಿಯವರಿಂದ ಹಿಡಿದು ಯಡಿಯೂರಪ್ಪನವರವರೆಗೂ ಇದೇ ಮಾತು. ಚುನಾವಣೆಗೆ ಒಂದು ಇಶ್ಯೂ ಬೇಕಲ್ಲ, ಅದೂ ಮಧ್ಯಂತರ ಚುನಾವಣೆಯನ್ನು ಈ ದೇಶದ ಜನರ ಮೇಲೆ ಹೇರಿದಾಗ.

ಇತ್ತೀಚಿನ ಬಿಜೆಪಿಯ ಕಾರ್ಯಕ್ರಮಗಳನ್ನು ಗಮನಿಸಿದರೆ ಚುನಾವಣೆಗೆ ಇಶ್ಯೂಗಳನ್ನು ಹೊಸೆಯುತ್ತಿರುವುದು ದೃಗ್ಗೋಚರವಾಗುತ್ತದೆ. ಒಂದು ಕಡೆ ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಕಪ್ಪು ಹಣವನ್ನು ಪಡೆಯುವ ಬಗ್ಗೆ ಅದ್ವಾನಿ ಪದೇ ಪದೇ ಮಾತನಾಡುತ್ತಿದ್ದಾರೆ. ಸರ್ಕಾರದ ಅನಾಸಕ್ತಿಯನ್ನು ಟೀಕಿಸುತ್ತಿದ್ದಾರೆ. ಇನ್ನು ಯುಪಿಎ ಹಗರಣಗಳಿಗೇನು ಕೊರತೆಯೇ? 2ಜಿ, ಆದರ್ಶ್, ಸಿಡಬ್ಲ್ಯೂಜಿ,..ಮನಮೋಹನರನ್ನೇ ಈ ಬಲೆಯಲ್ಲಿ ಹೊಸೆದುಬಿಡುವ ಪ್ರಯತ್ನವೂ ನಡೆದಿದೆ. ಸದ್ಯ ಜನ ಕೂಡ ಈ ಭ್ರಷ್ಟಾಚಾರದಿಂದ ಜಿಗುಪ್ಸೆಗೊಂಡಿದ್ದಾರೆ. ಆದರೆ ಇದರಲ್ಲಿ ಬಿಜೆಪಿಗೆ ಒಂದು ಸಮಸ್ಯೆಯಿದೆ. ಕಾಂಗ್ರೆಸ್ನ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಮಾತನಾಡುತ್ತಿದ್ದಂತೆಯೇ ಕಾಂಗ್ರೆಸ್ ಎನ್ಡಿಎ ಕಾಲದ ಹಗರಣಗಳ ಫೈಲ್ ತೆರೆಯುತ್ತದೆ, ಯಡಿಯೂರಪ್ಪನವರನ್ನು ಹಿಡಿದು ಹೀಯಾಳಿಸುತ್ತದೆ.

ಹಾಗಾಗಿ ಬಿಜೆಪಿಗೆ ಮತ್ತೊಂದು ಇಶ್ಯೂ ಬೇಕಿದೆ ಈಗ. ಹಳೆ ಗಂಡನ ಪಾದವೇ ಗತಿ ಎಂಬಂತೆ ತನ್ನ ಮೂಲ ಪ್ರಚೋದನಾತ್ಮಕ ರಾಜಕಾರಣಕ್ಕೆ ಮರಳಿದೆ. ಬಿಜೆಪಿಗೆ ಕಾಶ್ಮೀರ ಮೊದಲಿಂದಲೂ ಒಂದು ಉತ್ತಮ ಅಸ್ತ್ರ. ಆರ್ಟಿಕಲ್ 370 ಕಿತ್ತೊಗೆಯಬೇಕು ಎಂಬುದು ಅದರ ಮೂಲ ಅಜೆಂಡಾಗಳಲ್ಲಿ ಒಂದು. ಈಗಲೂ ಅದಕ್ಕೆ ಕಾಶ್ಮೀರದಲ್ಲಿ ಏನಾದರೂ ಅದಕ್ಕೆ ಚಿಂತೆಯಿಲ್ಲ. ಆದರೆ ಕಾಶ್ಮೀರದಲ್ಲಿ ತಿರಂಗಾ ಹಾರಿಸಲು ಕಾಂಗ್ರೆಸ್ ಸರ್ಕಾರ ಬಿಡಲಿಲ್ಲ ಎಂಬುದು ದೇಶದ ಇತರೆಡೆಗಳಲ್ಲಿ ಅನೇಕ ಹುಬ್ಬುಗಳನ್ನು ಮೇಲೇರಿಸುತ್ತದೆ. ಬಿಜೆಪಿಗೆ ಬೇಕಿರುವುದೂ ಅದೇ. ಇದೂ ಸಹ ಶುದ್ಧ ವೋಟ್ ಬ್ಯಾಂಕ್ ರಾಜಕಾರಣವೇ. ಬಿಜೆಪಿ ಇಂತಹ ಪ್ರಚೋದನಾತ್ಮಕ ರಾಜಕಾರಣವನ್ನು ಬಿಟ್ಟು ಎಂದಿಗೆ ಪ್ರಬುದ್ಧತೆಗೆ ಹೊರಳುತ್ತದೋ?

3 thoughts on “ತಿರಂಗಾ ರಾಜಕಾರಣ - ಅಪ್ರಬುದ್ಧತೆಯ ಪರಾಕಾಷ್ಟೆ

umesh desai said...

sir, withdue respects to you hublis idagah matter was completely diffrent. it was never a muslim dominated area. muslims used to offer prayers twice in a year. also the burning question today is not "tirangaa yaatra" but ghastly murder of yashavant sonvane in manmaad, maharastra. it is ironic that so called journalists turn deaf ear to such issues--u included
--umesh desai

ಕೈ. ವೆ. ಆದಿತ್ಯ ಭಾರದ್ವಾಜ said...

yes i agree of the burning issue of yeshwant sonavane. indina ganarajyada eradu chitragalu sonavane mattu tiranga. eradoo mukhyave. eradoo durantagale. hubliya idga muslimara dharmika sthala. alli tiranga harisuvudu kooda nanu mele ullekhisida samskrutika dabbalikeye agide.

Anonymous said...

Sir,

I agree with you. hubballi maidaanadalli iDee viShayavannu muslimaru dEshadrOhigaLu aMtaa biMbisuva hunnaaravoMdE kaaNuttiruvudu. naanobba achcha kannaDiganaagiddoo naaLe yaaraadaroo nimma mane mEle neevu virOdhisidaroo kannaDa baavuTa haarisuttEve eMdare shataaya gataaya virOdhisuttEne. aMtayE idoo...

Anand

Proudly powered by Blogger
Theme: Esquire by Matthew Buchanan.
Converted by LiteThemes.com.