ಉಪಕುಲಪತಿಗಳ ಸಾಧನಾ ಸಮಾವೇಶ?!


ನಮ್ಮ ವಿಶ್ವವಿದ್ಯಾಲಯಗಳು ಎತ್ತ ನಡೆದಿವೆ? ರಾಜಕೀಯದ ಅಡ್ಡೆ - ಪಡಸಾಲೆಯಾಗಿ ಹೋದವೇ ನಮ್ಮ ವಿವಿಗಳು? ಈಗ ಅಲ್ಲಿರುವುದು ಶುದ್ಧ ಚಮಚಗಳು. ಒಂದು ಕಾಲಕ್ಕೆ ನರಸಿಂಹಯ್ಯನಂತಹವರು ಉಪಕುಳಪತಿಗಳಾಗಿದ್ದಾಗ ಮಂತ್ರಿ ಮಹೋದಯರು ಬಾಗಿಲಲ್ಲಿ ಕಾಯ್ತಾ ಇದ್ರು. ಇಂದು ವಿಸಿ ಗಳು ಸರ್ಕಾರದ ಚಮಚಗಳಾಗಿದ್ದಾರೆ. ಇವತ್ತು ವಿವಿಗಳ ಸ್ವಾಯತ್ತತೆಗೆ ಬೆಲೆಯೇ ಇಲ್ಲ. ದುರ್ದೈವವೆಂದರೆ ಅದನ್ನು ಸ್ವ ಇಚ್ಛೆ ಯಿಂದ ಬಳಿ ಕೊಡುತ್ತಿರುವವರು ನಮ್ಮ ಉಪಕುಳಪತಿಗಳೇ. ಇವು ಇವತ್ತು ಶುದ್ಧ ಪಂಚಾಯಿತಿ ಮಟ್ಟದ ರಾಜಕೀಯದನ್ಗಳಗಳಾಗಿ ಹೋಗುತ್ತಿವೆ.  ಬೆಂಗಳೂರು ವಿವಿಯ ಸದ್ಯದ ಬೆಳವಣಿಗೆಗಳು ಮತ್ತು ಉಪಕುಲಪತಿ ಡಾ.ಎನ್.ಪ್ರಭುದೇವ ಅವರ ಯೋಜನೆ-ಯೋಚನೆಗಳನ್ನು ಗಮನಿಸಿದವರಿಗಾರಿಗಾದರೂ ಈ ಸಂಶಯ ಮೂಡದಿರದು.

ಪ್ರಭುದೇವ ವಿವಿಯಲ್ಲಿ ಮಾಡಿದ್ದು ಈಗ ಮಾಡುತ್ತಿರುವುದು ಶುದ್ಧ ರಾಜಕೀಯ! ಪ್ರಭುದೇವ ಜಾತಿಯಿಂದ ಲಿಂಗಾಯತರು. ಒಂದು ವಿವಿಯ ಉಪಕುಲಪತಿಗಳನ್ನು ಜಾತಿಯಿಂದ ಗುರುತಿಸುವುದು ತಪ್ಪು , ಆದರೆ ಇಲ್ಲಿನ ಅನೇಕ ಸಮಸ್ಯೆಗಳಿಗೆ ಕಾರಣವೇ ಜಾತೀಕರಣಗೊಂಡ ರಾಜಕೀಯ ಮತ್ತು ಕುತ್ಸಿತ ಮನಸ್ಸುಗಳು. ಹಾಗಾಗಿ ಈ ಮಾತು. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದ ಮೇಲೆ ಸಾಧ್ಯವಾದಷ್ಟೂ ಸಂಸ್ಥೆಗಳಿಗೆ ಲಿಂಗ ಕಟ್ಟುತ್ತಿರುವುದು ಹೊಸದೇನೂ ಅಲ್ಲ. ಅದರ ಭಾಗವಾಗಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರಾಗಿದ್ದ, ತಮ್ಮ ಆಪ್ತವಲಯದ ಡಾ.ಎನ್ ಪ್ರಭುದೇವ ಅವರನ್ನು ಬೆಂಗಳೂರು ವಿವಿಯ ಉಪಕುಲಪತಿಯಾಗಿ ನೇಮಿಸಿದರು. ಅಸಲಿಗೆ ಅವತ್ತಿಗೆ ಇವರ ಹೆಸರು ಕೇಳಿಬರುತ್ತಿದ್ದದ್ದು ರಾಜೀವ ಗಾಂಧಿ ಆರೋಗ್ಯ ವವಿ ಉಪಕುಲಪತಿಗಿರಿಗೆ. ಆದರೆ ಅಲ್ಲಿನ ಸ್ಕ್ರೀನಿಂಗ್ ಕಮಿಟಿ ಇವರ ಹೆಸರನ್ನು ಸೂಚಿಸಲೇ ಇಲ್ಲ. ಪ್ರಭುದೇವರಿಗೆ ಅದೊಂದು ಕಾನ್ಸೋಲೇಷನ್ ಪ್ರೈಜ್. ಅಸಲಿಗೆ ಪ್ರಭುದೇಔ ಒಬ್ಬ ಅಕಾಡಮೀಷಿಯನ್ ಅಲ್ಲವೇ ಅಲ್ಲ. ಅವರೊಬ್ಬ ಹೃದಯ ಶಾಸ್ತ್ರಜ್ಞ ವೈದ್ಯ. ಬೆಂಗಳೂರು ವಿವಿಯಂತಹ ಮುಖ್ಯ ವಾಹಿನಿ ಅಕಾಡಮಿಕ್ ವಿವಿಗೆ ಉಪಕುಲಪತಿಗಳಾಗಿ ಹೋದರು ಪ್ರಭುದೇವ.

ಬಂದ ಕೂಡಲೇ ಅವರು ಕೆಲವೊಂದು ಉತ್ತಮ ಸುಧಾರಣೆಗಳನ್ನು ತಂದರು. ಮುಖ್ಯವಾಗಿ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳಿಗೆ ಪ್ರವೇಶವನ್ನು ಒಂದು ಚೌಕಟ್ಟಿಗೆ ತಂದರು. ನಂತರ ಇವರು ಕೈಹಾಕಿದ್ದು ಪರೀಕ್ಷಾ ವಿಭಾಗಕ್ಕೆ. ಅಲ್ಲಿನ ಅನೇಕ ತಿಮಿಂಗಲಗಳಿಗೆ ತಿನ್ನಲು ಆಹಾರ ಸಿಗದಂತೆ ಮಾಡಿ ಹಾಕಿದರು. ಮೂಗು ಮುರಿದವರೆಲ್ಲರೂ ಪರವಾಗಿಲ್ಲವೇ ಈವಯ್ಯ ಏನೋ ಮಾಡ್ತಿದಾನೆ ಎಂಬಂತೆ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಆದರೆ ಇದೆಲ್ಲವೂ ಪ್ರಭುದೇವ ಅವರ ತಲೆಗೆ ಹೋಗಿತ್ತು. ತಲೆ ನಿಲ್ಲದಾಯಿತು. ಬರಬರುತ್ತಾ ಅವರೊಬ್ಬ ಡಿಕ್ಟೇಟರ್ ಅನ್ನಿಸಿಕೊಳ್ಳತೊಡಗಿದರು. ಅವರ ಸುತ್ತಲೂ ಹೊಗಳುಭಟ್ಟರು ಮತ್ತು ಹೌದಪ್ಪಗಳನ್ನು ಸಾಕಿಕೊಂಡರು ಶರಣ ಮಠ ಸ್ಥಾಪನೆಯೂ ಪ್ರಭುದೇವರ ಪೀಠ ಆರೋಹನೆಯೂ ಸಾಂಗೋಪಾಂಗವಾಗಿ ನೆರವೇರಿತು. ಅವರದು ಅಕ್ಷರಶಃ ಹಿತ್ತಾಳೆ ಕಿವಿ. ಹಾಗಾಗಿ ಪ್ರಭುದೇವರಲ್ಲದ ಅಭಿಪ್ರಾಯ ಹೊಂದಿದ ಪ್ರತಿಯೊಬ್ಬರನ್ನೂ ಮೂಲೆಗುಂಪು ಮಾಡುತ್ತಾ ಬಂದರು. ಇವತ್ತು ವಿವಿಯ ಒಂದು ವರ್ಗ ಪ್ರಭುದೇವರನ್ನು ಉಪಕುಲಪತಿಗಳಾಗಿ ತಿರಸ್ಕರಿಸಿದೆ. ಅದು ಅವರ ಹೊರತಾಗಿ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದೆ

ಇದು ಒಂದು ಹಂತ. ಮತ್ತೊಂದು ಕಡೆ ಇವರು ಬೆಂಗಳೂರು ವಿವಿಯಲ್ಲಿ ಇಂದಿಗೂ ಇರುವುದು ಯಡಿಯುರಪ್ಪನವರ ಪ್ರತಿನಿಧಿಯಂತೆಯೇ. ಸರ್ಕಾರದ ಅಡಿಯಾಳು ಅಂದರೆ ಅದು ಅತಿಶಯೋಕ್ತಿಯೇನೂ ಆಗಲಾರದು. ಬರುತ್ತಿದ್ದಂತೆಯೇ ಅಂದಿಗೆ ಉನ್ನತ ಶಿಕ್ಷಣ ಸಚಿವರಾಗಿದ್ದ ಅರವಿಂದ ಲಿಂಬಾವಳಿಯವರನ್ನು ಎದುರು ಹಾಕಿಕೊಂಡರು. ಅವರ ಆದೇಶಗಳನ್ನು ಧಿಕ್ಕರಿಸುತ್ತಾ ಬಂದರು. ಆಗ ತಾನು ಪ್ರೋ-ಆಕ್ಟೀವ್ ವೈಸ್ ಛಾನ್ಸಲರ್ ಎಂಬಂತೆ ಪೋಸು ಕೊಟ್ಟರು. ಲಿಂಬಾವಳಿ ಮತ್ತು ಪ್ರಭುದೇವರ ನಡುವೆ ಬಹುದಿನಗಳವರೆಗೆ ಈ ಹಗ್ಗ ಜಗ್ಗಾಟ ನಡೆದಿತ್ತು. ಇವರ ಬಾಲ ಕತ್ತರಿಸಲು ಲಿಂಬಾವಳಿ ಒಂದು ಏಟು ಕೊಟ್ಟರೆ ಪ್ರಭುದೇವ ಅದನ್ನು ಎದುರಿಸಿ ಎದುರೇಟು ಕೊಡುವುದು. ಹೀಗೆ ನಡೆದಿತ್ತು ಇವರ ಚದುರಂಗ. ಇದರ ಭಾಗವಾಗಿಯೇ ಎಂ.ಜಿ.ಕೃಷ್ಣನ್ ಮತ್ತು ತಳವಾರ್ ಅವರನ್ನು ರಿಜಿಸ್ಟ್ರಾರ್ಗಳಾಗಿ ನೇಮಿಸುವಂತೆ ಮಾಡಿದರು ಲಿಂಬಾವಳಿ. ಕೂಡಲೇ ಕೆರಳಿ ನಿಂತ ಪ್ರಭುದೇವ ಅವರು ಛಾಜ್ ತೆಗೆದುಕೊಳ್ಳಲು ಬಂದರೆ ಕೊಠಡಿಗಳಿಗೆ ಬೀಗ ಜಡಿದು ಒಬ್ಬ ಉಪಕುಲಪತಿಗೆ ತಕ್ಕದಲ್ಲದ ರೀತಿಯಲ್ಲಿ ವರ್ತಿಸಿದ್ದರು. ಅವರನ್ನು ಈ ಕೂಡಲೇ ಬದಲಾಯಿಸುವಂತೆ ಯಡಿಯೂರಪ್ಪನವರಿಗೆ ಗಂಟು ಬಿದ್ದರು. ಅದಾಗಲಿಲ್ಲ. ಸರಿ ರಿಜಿಸ್ಟ್ರಾರ್ಗಳಾಗಿ ಬಂದ ತಳವಾರ್ ಮತ್ತು ಎಂ.ಜಿ.ಕೃಷ್ಣನ್ ಅವರ ಜೊತೆ ಶುರುವಾಯಿತು ಇವರ ಶೀತಲ ಸಮರ. ಅವರಿಗೆ ನಯಾಪೈಸೆ ಬೆಲೆ ಕೊಡಲಿಲ್ಲ. ಅವರನ್ನು ತಂದಿದ್ದದ್ದೂ ಅದಕ್ಕೆ, ಅವರು ಉಪಕುಲಪತಿಗಳಿಗೆ ಎದುರಾಗಿ ಮತ್ತೊಂದು ಪವರ್ ಸೆಂಟರ್ ಅನ್ನು ಹುಟ್ಟುಹಾಕಿದರು. ಇವರಿಬ್ಬರ ಬೀದಿ ಜಗಳಗಳು ರಸ್ತೆ ತಲುಪಿದವು. ರಾಜಭವನ ಮುಟ್ಟಿದವು. ರಿಜಿಸ್ಟ್ರಾರ್ಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿತವಾಯಿತು. ಸರಿ ರಿಜಿಸ್ಟ್ರಾರ್ಗಳು ಬದಲಾದರು. ಇವರಿಗೆ ಬೇಕಾದವರನ್ನೇ ರಿಜಿಸ್ಟ್ರಾರ್ಗಳನ್ನಾಗಿ ಮಾಡಲಾಯಿತು. ನಾನು ಗೆದ್ದೆ ಎಂಬ ಅಹಂಬಾವ ಮೊಳಕೆಯೊಡೆಯಿತು. ಅಷ್ಟರಲ್ಲಿ ರಾಜಕೀಯ ಏಳುಬೀಳಿನ ನಡುವೆ ಲೀಂಬಾವಳಿ ಮಂತ್ರಿ ಸ್ಥಾನ ಕಳೆದುಕೊಂಡರು. ವಿ.ಎಸ್.ಆಚಾರ್ಯ ಉನ್ನತ ಶಿಕ್ಷಣ ಮಂತ್ರಿಯದರು. ಉಪಕುಲಪತಿ ಮತ್ತು ಉನ್ನತ ಶಿಕ್ಷಣ ಸಚಿವಾಲಯದ ನಡುವಿನ ಸಂಬಂಧಗಳು ಅತ್ಯಂತ ಸೌಹಾರ್ದಯುತವಾಗಿದೆ! ಹಾಗಾದರೆ ಏನಿದು ಲಿಂಬಾವಳಿಯವರು ಯಡಿಯೂರಪ್ಪನವರ ವಿರುದ್ಧದ ಬಣಗಾರರೆಂಬ ಕಾರಣಕ್ಕೋ ವಿರೋಧ? ಇದು ಜಿಗುಪ್ಸೆ ಹುಟ್ಟಿಸುತ್ತದೆ ನಿಜ. ಆದರೆ ಇದು ನೈಜ.

ಇನ್ನು ಇತ್ತೀಚೆಗೆ ಡಾ.ಎ.ಎನ್.ಪ್ರಭುದೇವ ಅವರ ಮಗನಿಗೆ ಯಡಿಯೂರಪ್ಪನವರ ಅತ್ಯಾಪ್ತ ಕ್ರಷಿ ಸಚಿವ ಉಮೇಶ ಕತ್ತಿಯವರ ಮಗಳನ್ನು ಮದುವೆ ಮಾಡಿಕೊಂಡು ಅವರು ಬೀಗರಾಗಿದ್ದಾರೆ. ಇದರ ನಂತರವಂತೂ ಪ್ರಭುದೇವ ಅವರ ತಲೆ ತಿರುಗಿದೆ. ಅವರೂ ಒಬ್ಬ ರಾಜಕಾರಣಿಯಂತೆ ಫೋಸು ಕೊಡಲು ಪ್ರಾರಂಭಿಸಿಬಿಟ್ಟಿದ್ದಾರೆ. ಇತ್ತೀಚೆಗೆ ಉಪಕುಲಪತಿಗಳ ಯೋಜನೆಗಳು ಮತ್ತು ಯೋಚನೆಗಳು ಇದನ್ನೇ ಪ್ರತಿಬಿಂಬಿಸುತ್ತಿವೆ. ಅವರು ಇತ್ತೀಚೆಗೆ ಕೈಗೆತ್ತಿಕೊಂಡಿರುವ ಯೋಜನೆಗಳನ್ನೇ ಗಮನಿಸಿ. ಪ್ರತಿಭಾವಂತ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿವಿ ವತಿಯಿಂದ ತಿಂಗಳಿಗೆ 500/- ಸ್ಕಾಲರ್ಷಿಪ್. ಏನು ಇದರ ಹಿಂದಿರುವ ಉದ್ದೇಶ - ಪರಿಸಿಷ್ಠ ಜಾತಿ ಮತ್ತು ಪಂಗಡಗಳಿಗೆ ಈ ರೀತಿಯ ಸ್ಕಾಲರ್ಷಿಪ್ ಅನ್ನು ಸರ್ಕಾರವೇ ಕೊಡಮಾಡುತ್ತಿದೆ. ನಾನು ವಿವಿಯ ವತಿಯಿಂದ ಇದನ್ನು ಹಿಂದುಳಿದ ವರ್ಗಗಳಿಗೂ ವಿಸ್ತರಿಸುತ್ತದ್ದೇನೆ. ಇನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆ. ವಿವಿಯ ಕ್ಯಾಂಪಸ್ಸಿನಲ್ಲಿರುವ ಸ್ನಾತಕೋತ್ತರ ಪದವಿ ವಿದ್ಯಾಥರ್ಿಗಳಿಗೆ ರೂ2ಕ್ಕೆ ಮಧಾಹ್ನ ಬಿಸಿಯೂಟ ಯೋಜನೆ! ಯಾವ ಹುಡುಗರೂ ಸಹ ಊಟಕ್ಕಾಗಿ ವಿವಿಗೆ ಬರುವುದಿಲ್ಲ. ಇದರ ಬದಲಿಗೆ ವಿವಿಯ ಹಾಸ್ಟೆಲ್ಗಳಲ್ಲಿ ನೆಟ್ಟಗೆ ಒಳ್ಳೆಯ ಊಟ ಹಾಕಲಿ ಸಾಕು.

ಮೊನ್ನೆ ಜ್ಞಾನ ಭಾರತಿಯಲ್ಲಿ ನಡೆದ ಸಭೆಯಲ್ಲಿ ಸಭಾಂಗಣದ ದ್ವಾರದಿಂದ ವೇದಿಕೆಯವರೆಗೆ ಶುದ್ಧ ರಾಜಕಾರಣಿಯಂತೆ ಸಭೆಗೆ ನಮಸ್ಕರಿಸುತ್ತಾ ಎಲ್ಲರ ಚಪ್ಪಾಳೆ ಗಿಟ್ಟಿಸುತ್ತಾ ನಡೆದು ಬಂದು ವೇದಿಕೆಯೇರಿ ಮಾಡಿದ ಭಾಷಣ ಇದೇ! ಪ್ರಭುಧೇವರವರ ರಾಜಕೀಯ ಸಾಂಗತ್ಯ ಸ್ನೇಹಗಳು ಅವರನ್ನು ಒಳಗಿಂದಲೇ ರಾಜಕೀಯಕ್ಕೆ ಅಣಿಗೊಳಿಸುತ್ತಿರಬಹುದೇ? ಅವರು ಯಡಿಯೂರಪ್ಪನವರ ಸಾಧನಾ ಸಮಾವೇಶದ ಮತ್ತೊಂದು ಪ್ರಾಪಗಾಂಡಾ ಮಾದರಿಯೇ? ಅವರನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೀಗನ್ನಿಸದೇ ಇರದು. ಒಂದು ವಿವಿಯ ಉಪಕುಲಪತಿಗೆ ಪಾಪ್ಯುಲಿಸ್ಟ್ ಆಗಬೇಕಾದ ಅವಶ್ಯಕತೆಯಿಲ್ಲ. ಏಕೆಂದರೆ ರಾಜಕಾರಣಿಯಂತೆ ಅವರಿಗೆ ಒಂದು ಕ್ಷೇತ್ರವನ್ನು ಕಲ್ಟೀವೇಟ್ ಮಾಡಿಕೊಂಡು ಅಲ್ಲಿನ ಜನರ ಒಪ್ಪಿಗೆ ಪಡೆಯಬೇಕಾದ ಅಗತ್ಯವಿಲ್ಲ. ಅಸಲಿಗೆ ಇಲ್ಲಿ ಕ್ಷೇತ್ರವೂ ಇಲ್ಲ ಚುನಾವಣೆಯೂ ಇಲ್ಲ. ಆದರೂ  ಪ್ರಭುದೇವ ಅವರು ಪಾಪ್ಯುಲಿಸ್ಟ್ ಆಗುವುದರತ್ತಲೇ ತಮ್ಮ ನೋಟ ಬೀರಿದ್ದಾರೆ. ಓಬಿಸಿ ಹುಡುಗರಿಗೆ ಸ್ಕಾಲರ್ಷಿಪ್ ಮಧ್ಯಾಹ್ನ 2ರೂ.ಗೆ ಊಟದಂತಹ ಪ್ಯಾಪುಲಿಸ್ಟ್ ಯೋಜನೆಗಳನ್ನು ವಿರೋಧಿಸುವುದೂ ಸಹ ಕಷ್ಟ. ಹಾಗೆ ಮಾಡಿದ ಕೂಡಲೇ ನಿಮ್ಮನ್ನು ವಿದ್ಯಾರ್ಥಿಗಳು ವಿರೋಧಿಯಾಗಿಯೋ ಓಬಿಸಿ ವಿರೋಧಿಯಾಗಿಯೋ ಚಿತ್ರಿಸಿಬಿಡುತ್ತಾರೆ. ಹಾಗಾಗಿ ಈ ಯೋಜನೆಗಳ ಕುರಿತು ವಿವಿಯ ಆಂತರ್ಯದಲ್ಲಿ ಸಾಕಷ್ಟು ವಿರೋಧ ಬೇಗುದಿಯಿದ್ದರೂ ಅದು ವ್ಯಕ್ತಗೊಳ್ಳುತ್ತಿಲ್ಲ. ಅವರ ಬಾಯನ್ನು ಕಟ್ಟಿಹಾಕಿದಂತಾಗಿದೆ.

ವಿವಿಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಒಂದೇ ಎರಡೇ? ಹಾಸ್ಟೆಲ್ ಸರಿ ಇಲ್ಲ, ನೆಟ್ಟಗೆ ಶೌಚಾಲಯಗಳಿಲ್ಲ. ಲ್ಯಾಬ್ಗಳಿಲ್ಲ. ಜ್ಞಾನಭಾರತಿ ಕ್ಯಾಂಪಸ್ಸಿನೊಳಗೆ ರಸ್ತೆಗಳು ನೆಟ್ಟಗಿಲ್ಲ. ಉಪಕುಲಪತಿಗಳಾಗಿ ಪ್ರಭುದೇವ ಅವರು ಇತ್ತ ಗಮನ ಹರಿಸಿದರೆ ಉತ್ತಮ. ಅದು ಬಿಟ್ಟು ಹೀಗೆ ಯಡಿಯೂರಪ್ಪನವರನ್ನು ಅನುಸರಿಸುವಿದಿದೆಯಲ್ಲ ಇದು ಸರ್ವಥಾ ಖಂಡನೀಯ.

ಪಭುದೇವ ಅವರ ಮುಂದಿನ ಯೋಜನೆಯೇನಿರಬಹುದು? ಮಹಿಳಾ ವಿದ್ಯಾರ್ಥಿಗಳಿಗೆ ಸೈಕಲ್? ಇಲ್ಲ ಸೀರೆ? ಏ ಇಲ್ಲ ಚೂಡೀದಾರ್? ಸೀರೆ ಯಾರು ಉಡುತ್ತಾರೆ ಈಗಿನ ಹುಡುಗೀರು? ಹಾಗಾದರೆ ಜೀನ್ಸ್ ? ಅದು ನಮ್ಮ ಸಂಸ್ಕೃತಿಯ ವಿರೋಧಿ...ಇವರು ಮುಂದಿನ ಭಾಗ್ಯಲಕ್ಷ್ಮಿಯರೋ? ಪ್ರಭುದೇವ ಅವರು ಬೆಂಗಳೂರು ವಿವಿಯ ಉಪಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡು ಸದ್ಯದಲ್ಲಿಯೇ ಎರಡು ವರ್ಷಗಳಾಗುತ್ತಿದೆ. ಸಾಧನಾ ಸಮಾವೇಶ ಸರ್? ಎಲ್ಲಿ ಮಾಡ್ತೀರ ಸರ್ ಆ ಕಾರ್ಯಕ್ರಮವನ್ನ? ಸೆಂಟ್ರಲ್ ಕಾಲೇಜ್ ಮೈದಾನವನ್ನೂ ಬಿಡಿಎಗೆ ಪರಭಾರೆ ಮಾಡ್ತಿದಿರೆ? ಜಾಗ ಎಲ್ಲಿ ಸರ್? 

Proudly powered by Blogger
Theme: Esquire by Matthew Buchanan.
Converted by LiteThemes.com.