ತಾನೇ ಕಟ್ಟಿದ ಸಾಮ್ರಾಜ್ಯದ ಅವಶೇಷಗಳ ನಡುವೆ ಬೆತ್ತಲಾಗಿ ನಿಂತ ರೆಡ್ಡಿಗಾರು!

ಇಷ್ಟೂ ದಿನ ರೆಡ್ಡಿಗಳು ತಮ್ಮದೇನೂ ತಪ್ಪಿಲ್ಲ, ಎಲ್ಲವೂ ರಾಜಕೀಯ ಷಡ್ಯಂತ್ರ ಎಲ್ಲಿ ಏನಾದರೂ ಇದ್ದರೆ ತೊರಿಸಿ ಎಂಬಂತೆಯೇ ಮಾತಾಡುತ್ತಿದ್ದರು. ಬಿಡಿ ಈಗಲೂ ಅವರು ಅದನ್ನೇ ಮಾತಾಡುತ್ತಿರುವುದು. ರೆಡ್ಡಿಗಾರು ತೋರಿಸಿಕೊಳ್ಳದೆ ಇರಬಹುದು. ಜಟ್ಟಿ ಜಾರಿಬಿದ್ದರೂ ಮೀಸೆ ಮಣ್ಣಾಗದು ಎಂಬಂತಿದೆ ಅವರ ವರ್ತನೆ. ಆದರೆ ವಾಸ್ತವಕ್ಕೆ ರೆಡ್ಡಿಗಾರ ಪಾದದ ಕೆಳಗಿನ ಭೂಮಿ ಸಣ್ಣಗೆ ಅದುರಿದೆ. ಅದು ಬೆಟ್ಟ, ಗಡಿ, ಗುಡಿ ಯಾವುದನ್ನೂ ನೋಡದೆ ಎಲ್ಲವನ್ನೂ ಅಲುಗಾಡಿಸಿದರಲ್ಲ, ಆ ಭೂಕಂಪನದ after tremors! ಸುಪ್ರೀಂ ಕೋರ್ಟ್ನಲ್ಲಿ ಟಪಾಲ್ ಗಣೇಶ್ ಸಲ್ಲಿಸಿದ್ದ ಲೀವ್ ಪಿಟೀಷನ್ನ ಆಧಾರದ ಮೇಲೆ ಸುಪ್ರೀಂ ಕೋರ್ಟ್ನ ಅಂಗ ಸಂಸ್ಥೆಯಾದ ಕೇಂದ್ರ ಉನ್ನತಾಧಿಕಾರ ಸಮಿತಿ ಓಬಳಾಪುರಂ ಮತ್ತಿತರ ಒಟ್ಟು 6 ಗಣಿ ಕಂಪೆನಿಗಳ ಬಗ್ಗೆ ತನಿಖೆ ನಡೆಸಿ, ಒಟ್ಟಾರೆ ರೆಡ್ಡಿಗಳನ್ನು ದೋಷಿಗಳೆಂದು ಹೇಳಿದುದೇ ಅಲ್ಲದೆ, ಓಬಳಾಪುರಂ ಮೈನಿಂಗ್ ಕಾರ್ಪೋರೇಶನ್ ನ ಮೈನಿಂಗ್ ಲೀಸುಗಳನ್ನು ರದ್ದುಗೊಳಿಸಬೇಕಾಗಿಯೂ, ಅಕ್ರಮವಾಗಿ ಈವರೆಗೂ ಈ ಕಂಪೆನಿ ನಡೆಸಿರುವ ಗಣಿಗಾರಿಕೆಗೆ ಅಷ್ಟು ಅದಿರಿನ ಮಾರುಕಟ್ಟೆ ಬೆಲೆಯಂತೆ ದಂಡ ವಸೂಲಿ ಮಾಡುವಂತೆಯೂ ಶಿಫ್ಫಾರಸ್ಸು ಮಾಡಿದೆ. ಒಂದು ಕಣ್ಣಂದಾಜಿನಂತೆ ಈ ದಂಡ ಎಷ್ಟಿರಬಹುದು? 4,400 ಕೋಟಿಗಳು!  ಇಷ್ಟು ದಿನ ಎಲ್ಲವೂ ಗೋಜಲು ಗೋಜಲು. ಅದೇನು ಗಣಿ ಸಾಮ್ರಾಜ್ಯವೋ, ಅದೇನು ರೈಸಿಂಗ್ ಕಾಂಟ್ರಾಕ್ಟೋ? ಅಲ್ಲ ರೆಡ್ಡಿಗಳದು ಒಂದಿಂಚೂ ಮೈನಿಂಗ್ ಇಲ್ಲವಂತೆ ಕರ್ನಾಟಕದಲ್ಲಿ, ಮತ್ಯಾಕ್ರೀ ಇವರೆಲ್ಲಾ ಈ ರೀತಿ ಅರಚಾಡ್ತಾರೆ, ಅನ್ನುವ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಉನ್ನತಾಧಿಕಾರ ಸಮಿತಿ ಉತ್ತರ ನೀಡಿದೆ. ಅದರ ಒಂದು ವಿಸ್ತೃತ ನೋಟ ಈ ಲೇಖನ.

ಒಬ್ಬ ಸಾಧಾರಣ ಪೋಲೀಸ್ ಪೇದೆ ಜಿ. ಚೆಂಗಾರೆಡ್ಡಿಯ ಮಕ್ಕಳಾದ ರೆಡ್ಡಿ ಸಹೋದರರು ಹೇಗೆ ಕೇವಲ 10 ವರ್ಷಗಳ ಹಿಂದೆ ಬಳ್ಳಾರಿಯ ಬೀದಿಗಳಲ್ಲಿ ಲೂನಾಗಳಲ್ಲಿ ಓಡಾಡುತ್ತಿದ್ದರು, ಹೇಗೆ ಈವತ್ತು ಹೆಲಿಕಾಪ್ಟರ್ಗಳಲ್ಲೇ ಹಾರಾಡುತ್ತಾರೆ, ಹೇಗೆ ಎನ್ನೋಬಲ್ ಚಿಟ್ಸ್ ಎಂಬ ಗೋಲ್ಮಾಲ್ ಕಂಪೆನಿಯ ಮೂಲಕ ರೆಡ್ಡಿ 200 ಕೋಟಿಗಳಿಗೆ ಕೈ ಎತ್ತಿದ್ದರು, ಹೇಗೆ ಆ 200 ಕೋಟಿಗಳನ್ನು ಗಣಿಯ ಧೂಳಿನಲ್ಲಿ ತಂದು ಸುರಿದದ್ದು, ಕುಬೇರರಾದದ್ದು, 1999ರ ಸೋನಿಯಾ ಮತ್ತು ಸುಷ್ಮಾ ಮೇಡಂನವರ ಚುನಾವಣೆ, ಅದು ರೆಡ್ಡಿ ರಾಮುಲು ಜೋಡಿಗೆ ರಾಜಕೀಯವಾಗಿ ತಿರುವು ನೀಡಿದ್ದು, ಬಿಜೆಪಿ ಸರ್ಕಾರ ಸ್ಥಾಪನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು, ಅದನ್ನೇ ಹಿಡಿದು ಯಡಿಯೂರಪ್ಪನವರನ್ನು ಪಪ್ಪೆಟ್ ರೀತಿ ಆಡಿಸುತ್ತಿರುವುದು ಎಲ್ಲವೂ ಎಲ್ಲರೂ ಬಲ್ಲ ವಿಚಾರವೇ.

ಬಳ್ಳಾರಿಯಲ್ಲಿ ಒಟ್ಟು 99 ಮೈನಿಂಗ್ ಲೀಸ್ಗಳಿದ್ದು ಅವೆಲ್ಲವೂ ಅಷ್ಟೊತ್ತಿಗೆ ಬಿಕರಿಸಲ್ಪಟ್ಟಿದ್ದವು. ಅಲ್ಲಿ ಸ್ಪೇಸ್ ಇರಲೇ ಇಲ್ಲ. ಆಗ ರೆಡ್ಡಿಗಾರು ಕೈಯಿಟ್ಟದ್ದು ಪಕ್ಕದ ಆಂಧ್ರದ ಹಳ್ಳಿಗಳಿಗೆ. ಬಳ್ಳಾರಿಯ ಗಡಿಗುಂಟ ಇರುವ ಓಬಳಾಪುರಂ ರೆಡ್ಡಿಯ ಕಾರ್ಯಸ್ಥಾನವಾಯಿತು. ಓಬಳಾಪುರಂ ಮೈನಿಂಗ್ ಕಂಪೆನಿಯನ್ನು ಸ್ಥಾಪಿಸಿದ್ದು ಅಸಲಿಗೆ ಜನಾರ್ಧನ ರೆಡ್ಡಿ ಅಲ್ಲ. ಕುಂಟುತ್ತಾ ಸಾಗಿದ್ದ ಈ ಕಂಪೆನಿಗೆ 2002ರಲ್ಲಿ ಡೈರೆಕ್ಟರ್ ಆಗಿ ಎಂಟ್ರಿ ಪಡೆದ ಜನಾರ್ಧನ ರೆಡ್ಡಿ, ಕೆಲವೇ ತಿಂಗಳುಗಳಲ್ಲಿ ಅದರ ಮಾಲೀಕರಾದರು. ಈ ಲೈಸೆನ್ಸ್ನಡಿ ಒಟ್ಟು 25.98 ಹೆಕ್ಟೇರುಗಳು. ಇದಲ್ಲದೆ ಮತ್ತೊಂದಿಷ್ಟು ಮೈನಿಂಗ್ ಲೀಸ್ಗಳನ್ನು ಅವರು ಪಡೆದಿದ್ದಾರೆ. ಒಟ್ಟು 4 -


  • ಓಬಳಾಪುರಂ ಮೈನಿಂಗ್ ಕಂಪೆನಿ ಪ್ರೈವೇಟ್ ಲಿಮಿಟೆಡ್ - 25.98 ಹೆಕ್ಟೇರುಗಳು - 1997 - ೨೦೧೭
ಓಬಳಾಪುರಂ ಮೈನಿಂಗ್ ಕಂಪೆನಿ ಪ್ರೈವೇಟ್ ಲಿಮಿಟೆಡ್ - 39.50 ಹೆಕ್ಟೇರುಗಳು - 2006 - ೨೦೨೬

ಓಬಳಾಪುರಂ ಮೈನಿಂಗ್ ಕಂಪೆನಿ ಪ್ರೈವೇಟ್ ಲಿಮಿಟೆಡ್ - 68.52 ಹೆಕ್ಟೇರುಗಳು - 2007 - ೨೦೨೭

ಅನಂತಪುರ್ ಮೈನಿಂಗ್ ಕಾಪರ್ೋರೇಷನ್ - 6.50 ಹೆಕ್ಟೇರುಗಳು - 2013

ಇನ್ನು ತನಿಖೆಗೊಳಪಟ್ಟ ಮತ್ತೆರಡು ಕಂಪೆನಿಗಳು
ಬಳ್ಳಾರಿ ಐರನ್ ಓರ್ ಪ್ರೈವೇಟ್ ಲಿಮಿಟೆಡ್ - 27.12 ಹೆಕ್ಟೇರುಗಳು - 2018
ವೈ.ಎಂ. & ಸನ್ಸ್ - 20.24 ಹೆಕ್ಟೇರುಗಳು 2019


ಸುಪ್ರೀಂ ಕೋರ್ಟ್ನಲ್ಲಿ ಟಪಾಲ್ ಗಣೇಶ್ ಸಲ್ಲಿಸಿದ್ದ ಲೀವ್ ಪಿಟೀಷನ್ನ ಆಧಾರದ ಮೇಲೆ, ಓಬಳಾಪುರಂ ಮೈನಿಂಗ್ ಕಂಪೆನಿಯ ಅಕ್ರಮಗಳ ತನಿಖೆಗೆ ಅಂತಲೇ ಒಂದು ಕೇಂದ್ರ ಉನ್ನತಾಧಿಕಾರ ಸಮಿತಿಯೊಂದನ್ನು ರಚಿಸಿತು ಸುಪ್ರೀಂ ಕೋರ್ಟ್. ನವೆಂಬರ್ 19, 2009ರಂದು ಈ ಸಮಿತಿ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿತು. ಈ ವರದಿ ಒಬಳಾಪುರಂ ಹಳ್ಳಿಯಲ್ಲಿನ ಎಲ್ಲಾ ಮೈನಿಂಗ್ ಲೀಸ್ಗಳ ಸವರ್ೆ ನಡೆಸಿತ್ತು. ರೆಡ್ಡಿಯವರ ಒಬಳಾಪುರಂ ಮೈನಿಂಗ್ ಕಂಪೆನಿ ತನ್ನ ಡಿಫೆನ್ಸಿಗೆ ನೀಡುವ ಮ್ಯಾಪುಗಳು 1896 ಸೇರಿದ್ದವಾಗಿದ್ದು, ಅದರ ಮತ್ತು ಇತ್ತೀಚಿನ ಮ್ಯಾಪುಗಳಲ್ಲಿನ ಗಡಿಗಳು ಒಂದಕ್ಕೊಂದು ತಾಳೆಯೇ ಆಗುವುದಿಲ್ಲ. ಇದಲ್ಲದೆ ಸಮರಕ್ಷಿತ ಅರಣ್ಯ ಪ್ರದೇಶದ ಒತ್ತುವರಿಯ ಗುಮಾನಿಗಳೂ ಇವೆ. ಅದಲ್ಲದೆ ಆಂಧ್ರದ ಸರ್ಕಾರದ ಕ್ರಮಗಳು ಸಂದೇಹಾಸ್ಪದವಾಗಿವೆಯೆಂದೂ ಷರಾ ಬರೆಯಿತು. ಇದರ ಆಧಾರದ ಮೇಲೆ ಕೇಂದ್ರ ಪರಿಸರ ಇಲಾಖೆ ಎಲ್ಲಾ ಆರೂ ಮೈನಿಂಗ್ ಲೀಸುಗಳನ್ನೂ ರದ್ದು ಪಡಿಸಿತ್ತು. ಆದರೆ ಇದೆಲ್ಲವನ್ನೂ ಅಲ್ಲಗಳೆದ ವೈ.ಎಸ್.ಆರ್. ಸರ್ಕಾರ ಮೈನಿಂಗ್ಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ವರದಿಯ ಮುಂದುವರೆದ ಭಾಗದಂತೆಯೇ ಸುಪ್ರೀಂ ಕೋರ್ಟ್ ಕೇಂದ್ರ ಸರ್ವೇ ಇಲಾಖೆಗೆ ಆರೂ ಮೈನಿಂಗ್ ಲೀಸುಗಳ ಮತ್ತು ವಿವಾದಿತ ಕರ್ನಾಟಕ ಆಂಧ್ರ ಗಡಿಯ ಸರ್ವೇ ಕೈಗೊಂಡು ವರದಿ ನೀಡುವಂತೆ ಆದೇಶಿಸಿತ್ತು.

ತೀರಾ ಇತ್ತೀಚೆಗೆ ಈ ಸರ್ವೇ ತಂಡ ತನ್ನ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ. ಆಶ್ಚರ್ಯ, ಈ ತಂಡ ಅದೆಲ್ಲಿ ಸರ್ವೇ ನಡೆಸಿತೋ? ಅದೇನು ಹಕೀಕತ್ ಮಾಡಿತೋ? ಆ ದೇವರೇ ಬಲ್ಲ! ಸರ್ವೇ ಇಲಾಖೆಯ ವರದಿಯನ್ನು ಓದಿದವರಿಗಾರಿಗಾದರೂ ಹೀಗನ್ನಿಸದೇ ಇರದು. ಈ ವರದಿಯಲ್ಲಿ ಜನಾರ್ಧನ ರೆಡ್ಡಿ ಮತ್ತು ಅವರ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿಯನ್ನು ಖಡಾಖಂಡಿತವಾಗಿ ನಿರ್ದೋಷಿಯೆಂದು ಘೋಷಿಸಲಾಗಿದೆ. ಕೇಂದ್ರ ಉನ್ನತಾಧಿಕಾರ ಸಮಿತಿ ಮತ್ತು ಸರ್ವೇ ಇಲಾಖೆ ಒಂದೇ ಜಾಗದ ಸರ್ವೇ ನಡೆಸಿದ್ದು ಅಲ್ಲವೇ? ಹಾಗಾದರೆ 2009ರ ನವೆಂಬರ್ 19 ರಂದು ಕೇಂದ್ರ ಉನ್ನತಾಧಿಕಾರ ಸಮಿತಿ ಒತ್ತುವರಿ ನಡೆದಿರುವ ಬಗ್ಗೆ ಮಾತನಾಡಿದರೆ, ಸರ್ವೇ ಇಲಾಖೆ ರೆಡ್ಡಿಯಷ್ಟು ಲಾ ಅಬೈಡಿಂಗ್ ಸಿಟಿಜನ್ ಮತ್ತೊಬ್ಬರಿಲ್ಲ ಎನ್ನುತ್ತದೆ. ಇದರಲ್ಲಿ ಯಾವುದಾದರೂ ಒಂದು ವರದಿ ಮಾತ್ರ ವಾಸ್ತವಾಂಶಕ್ಕೆ ಹತ್ತಿರವಿರುವ ಸಾಧ್ಯತೆಯಿದೆ. ಅದು ಯಾವುದು?

ಈ ಗೊಂದಲವಿತ್ತು ಇಷ್ಟು ದಿನ. ಈಗ ಕೇಂದ್ರ ಉನ್ನತಾಧಿಕಾರ ಸಮಿತಿಯು ತನ್ನ ಸಂಪೂರ್ಣ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ. ಈ ವರದಿಯನ್ನು ಒಮ್ಮೆ ಕಣ್ಣಾಡಿಸಿದರೆ ಇಷ್ಟು ದಿನ ಕರ್ನಾಟಕದ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್, ಆಂಧ್ರದ ಟಿಡಿಪಿ, ಪತ್ರಕರ್ತರು, ಲೋಕಾಯುಕ್ತರು ಮಾಡಿದ ಪ್ರತಿ ಆರೋಪವೂ ನಿಜ ಎಂಬುದು ನಮ್ಮ ಅರಿವಿಗೆ ಬರುತ್ತದೆ. ಅವೆಲ್ಲಕ್ಕೂ ಪೂರಕ ದಾಖಲೆಗಳನ್ನೊದಗಿಸುತ್ತಾ ಕ್ರಮಕ್ಕೆ ಶಿಫಾರಸ್ಸು ಮಾಡುತ್ತದೆ ಕೇಂದ್ರ ಉನ್ನತಾಧಿಕಾರ ಸಮಿತಿ. ಈ ಕುರಿತು ಇನ್ನೂ ಸುಪ್ರೀಂ ಕೋರ್ಟ್  ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿದೆ.


- ತಮ್ಮ ಗಣಿಗಳ ಬೌಂಡರಿಗಳನ್ನು ದಾಟಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಗಣಿಗಾರಿಕೆ. 

- ಈ ಕುರಿತು ಸಿಇಸಿ - ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಲೈಸೆನ್ಸ್ ನೀಡುವಾಗ ಅರಣ್ಯ ಇಲಾಖೆಯು ಮೈನಿಂಗ್ ಪ್ರಾಂತ್ಯದ ಸುತ್ತಲೂ ಪ್ರತಿ 20 ಮೀಟರ್ಗೊಂದರಂತೆ ಪಿಲ್ಲರ್ಗಳನ್ನು ಹಾಕತಕ್ಕದ್ದು. ಇದನ್ನೇ ಬೌಂಡರಿ ಎಂದು ಪರಿಗಣಿಸಲ್ಪಡಬೇಕು ಎಂದು ತಿಳಿಸಿದೆ. ಆದರೆ ಈ ಆರೂ ಮೈನಿಂಗ್ ಲೀಸ್ಗಳಲ್ಲಿ ಅಸಲಿಗೆ ಯಾವುದೇ ಪಿಲ್ಲರ್ಗಳೇ ಇಲ್ಲ! ಇಲ್ಲಿ ಎಲ್ಲವೂ ಸಮತಟ್ಟಾಗಿ ಹೋಗಿದೆ. ಹಾಗಾಗಿ ಈ ಆರೂ ಲೈಸೆನ್ಸ್ಗಳನ್ನೂ ಈ ಕೂಡಲೇ ರದ್ದು ಪಡಿಸಬೇಕು. ಇನ್ನು ಬಳ್ಳಾರಿ ಸಂರಕ್ಷಿತ ಅರಣ್ಯ ಪ್ರದೇಶದ ಮ್ಯಾಪಿನಲ್ಲಿರುವ ಅಂತರ್ರಾಜ್ಯ ಗಡಿ ರೇಖೆಗಳಿಗನುಗುಣವಾಗಿ ಓಎಂಸಿಯ ಗಡಿಗಳನ್ನು ಗುರುತಿಸಲಾಗುವುದಿಲ್ಲ. ಮ್ಯಾಪಿಗೂ ವಸ್ತುಸ್ಥಿತಿಗೂ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಇನ್ನು ಓಎಂಸಿಯ 39.5 ಮತ್ತು 68.5 ಹೆಕ್ಟೇರುಗಳ ಮೈನಿಂಗ್ ಲೀಸ್ಗಳ ಲೀಸ್ ಅಗ್ರೀಮೆಂಟಿನಲ್ಲಿರುವ ನಕ್ಷೆಗೂ ಅರಣ್ಯ ಇಲಾಖೆ ಅನುಮೋದಿಸಿರುವ ನಕ್ಷೆಗೂ ಬಹು ವ್ಯತ್ಯಾಸಗಳಿದ್ದು, ಈ ಲೀಸ್ಗಳನ್ನು ಈ ಕೂಡಲೇ ರದ್ದುಗೊಳಿಸಬೇಕು. (ಬಳ್ಳಾರಿ ಐರನ್ ಓರ್ ಕಂಪೆನಿಯೊಂದಿಗೆ ಓಎಂಸಿ ಮಾಡಿಕೊಂಡಿರುವ ಗಡಿ ಒಪ್ಪಂದವನ್ನು ಇದಕ್ಕೆ ಪುರಾವೆಯಾಗೊದಗಿಸುವ ಸಿಇಸಿ ಇದರಲ್ಲಿ ಓಎಂಸಿ ಅತ್ಯಂತ ಸ್ಪಷ್ಟವಾಗಿ ಸಂರಕ್ಷಿತ ಅರಣ್ಯ ಪ್ರಧೇಶದಲ್ಲಿ ಗಣಿಗಾರಿಕೆ ನಡೆಸುತ್ತಿರುವುದನ್ನು ಗುರುತಿಸುತ್ತದೆ. ಇದನ್ನು ಈ ಹಿಂದೆ ಅನಮತಪುರದ ಡಿಎಫ್ಓ ಕಲ್ಲೋಲ ಬಿಸ್ವಾಸ್ ಸ್ಪಷ್ಟವಾಗಿ ಗುರುತಿಸಿದ್ದರಾದರೂ ಅದನ್ನು ಮುಂದುವರೆಸಲಾಗಿರಲಿಲ್ಲ.)


- ಗಣಿಗಾರಿಕೆಯ ಪರವಾನಗಿಯಲ್ಲೇ ಅಕ್ರಮಗಳು 


- ಈ ಕುರಿತು ಸಿಇಸಿ - 25.98 ಹೆಕ್ಟೇರುಗಳ ಲೀಸ್ ಮುಗಿದದ್ದು 2004ರಲ್ಲಿ. ಆದರೆ ಇದನ್ನು ಆಂಧ್ರ ಸರ್ಕಾರ 2017ರವರೆಗೂ ವಿಸ್ತರಿಸುವಂತೆ ನೀಡಿರುವ ಆದೇಶ ಅಕ್ರಮವಾಗಿದ್ದು. ಈ ಕೂಡಲೇ ಇದನ್ನು ತೆರವುಗೊಳಿಸಬೇಕು. ಇದಲ್ಲದೆ ಸುಮಾರು 17 ವರ್ಷಗಳ ನಂತರ ಪರವಾನಗಿಯನ್ನು ನವೀಕರಿಸಲಾಗಿದ್ದು ಇದು ಅಕ್ಷಮ್ಯ. ಹಾಗಾಗಿ ಈ ಕೂಡಲೇ ಈ ಪರವಾನಗಿಯನ್ನು ರದ್ದುಪಡಿಸಬೇಕು. ಜೊತೆಗೆ 2004ರಿಂದೀಚೆಗೆ ಓಎಂಸಿ ನಡೆಸಿರುವ ಗಣಿಗಾರಿಕೆ ಆಗ ಅಕ್ರಮದ್ದಾಗುತ್ತದೆ. ಹಾಗಾಗಿ ಈ ಅವಧಿಯಲ್ಲಿ ಅದು ಉತ್ಖನಿಸಿರಬಹುದಾದ ಖನಿಜವನ್ನು ಸರಿಗಟ್ಟುವ ನಾರ್ಮಟಿವ್ ಮಾರ್ಕೆಟ್ ವ್ಯಾಲ್ಯೂ ಅನ್ನು ಅದರಿಂದ ದಂಡವಾಗಿ ವಸೂಲು ಮಾಡಬೇಕು. (ಈ ಕಂಪೆನಿ ರಾಮಮೋಹನ ರೆಡ್ಡಿಯದು. ಆತನ ತಂದೆಯಿಂದ ಪಡೆದುಕೊಂಡ ಈ ಕಂಪೆನಿಗೆ 1984ರಲ್ಲಿ ಹಲವಾರು ವಿವಾದಗಳ ನಂತರ ಮತ್ತೆ 20 ವರ್ಷಗಳ ಅವಧಿಗೆ ಮೈನಿಂಗ್ ಲೈಸೆನ್ಸ್ ಅನ್ನು ನವೀಕರಿಸಲಾಯಿತು. ಅಂದರೆ 2004ಕ್ಕೆ ಇದು ಮುಗಿಯಬೇಕಿತ್ತು. ಆದರೆ ಸರ್ಕಾರದ  ವ್ಯವಸ್ಥೆಯಲ್ಲಿ ಈ ಮೈನಿಂಗ್ ಲೈಸೆನ್ಸ್ ಜಾರಿಗೆ ಬರುವಷ್ಟರಲ್ಲಿ 1997! ಕಾಯೆದಯ ಪ್ರಕಾರ 20 ವರ್ಷ ಈ ನವೀಕರಣದ ಅವಧಿ. ಹಾಗಾಗಿ 2004ಕ್ಕೆ ಈ ಅವಧಿ ಮುಗಿಯುತ್ತದೆ ಎಂಬುದು ಸಿಇಸಿ ವಾದ. ಆದರೆ 1997ರಲ್ಲಿ ಜಾರಿಗೆ ಬಂದುದನ್ನು ನೆಪವಾಗಿಟ್ಟುಕೊಂಡು, ರೆಡ್ಡಿಗಾರಿ ಗಳಸ್ಯ ಕಂಠಸ್ಯ ವೈ.ಎಸ್.ಆರ್. ಅವರು 1997ರಿಂದ 20 ವರ್ಷಗಳ ಕಾಲ ಲೈಸೆನ್ಸ್ ಅನ್ನು ನವೀಕರಿಸಿ ಆದೇಶ ಹೊರಡಿಸಿದ್ದಾರೆ. ಹಾಗಾಗಿ 2017. ಈಗ ಸಿಇಸಿ ಈ ಆದೇಶವೇ ಕಾನೂನು ಬಾಹಿರ ಎಂದಿದೆ. ಇನ್ನು 2004ಕ್ಕೆ ಮುಗಿಯುತ್ತದೆ ಈ ಗಣಿ ಪರವಾನಗಿ. ಹಾಗಾಗಿ ಮುಂದೆ ನಡೆಸಿದ ಗಣಿಗಾರಿಕೆ ಅಕ್ರಮ, ಹಾಗಾಗಿ ಅದನ್ನು ಸರಿಗಟ್ಟುವ ದಂಡ. ಒಂದು ಅಂದಾಜು ಈ ಮೊತ್ತವನ್ನು 4,400 ಕೋಟಿಗಳೆಂದು ತೋರಿಸುತ್ತದೆ!)

- ಅಕ್ರಮ ಗಣಿಗಾರಿಕೆ. 


- ಈ ಕುರಿತು ಸಿಇಸಿ - ಆಂಧ್ರ ಸರ್ಕಾರದ ಗಣಿ ಇಲಾಖೆ ತಳಮಟ್ಟದಲ್ಲಿ ಯಾವುದೇ ಕ್ರಾಸ್ ಚೆಕಿಂಗ್ ಮೆಖಾನಿಸಂಗಳನ್ನು ಅಳವಡಿಸದೆ, ಪರವಾನಗಿದಾರರ ಹೇಳಿಕೆಗಳನ್ನೇ ನಂಬಿಕೊಂಡು ಅದಿರು ಸಾಗಾಣಿಕೆಗೆ ಪರ್ಮಿಟ್ಟುಗಳನ್ನು ನೀಡಿರುವುದರಿಂದ ಅಕ್ರಮ ಗಣಿಗಾರಿಕೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಓಬಳಾಪುರಂ ಮೈನಿಂಗ್ ಕಂಪೆನಿಯ 68.5 ಹೆಕ್ಟೇರ್ ಲೀಸ್ನಲ್ಲಿ ಕಂಪೆನಿಯು ಅಕ್ರಮವಾಗಿ 5 ಕಚ್ಚಾ ರಸ್ತೆಗಳನ್ನು ನಿರ್ಮಿಸಿದೆ. ಇದು ಅರಣ್ಯ ಕಾಯ್ದೆ 1980 ಮತ್ತು ಲೀಸ್ ಅಗ್ರೀಮೆಂಟಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದಲ್ಲದೆ 68.5 ಹೆಕ್ಟೇರ್ ಮತ್ತು 6.5 ಹೆಕ್ಟೇರ್ ಓಎಂಸಿ ಲೀಸಿನಲ್ಲಿ ಉತ್ಖನನ ಮಾಡಿರುವಂತೆ ತೋರಿಸಲ್ಪಟ್ಟ ಖನಿಜ ಈ ಲೀಸುಗಳಲ್ಲಿನ ಪಿಟ್ಸ್ಗಿಂತಲೂ ಅಗಾಧ ಪ್ರಮಾಣದ್ದಾಗಿದೆ.

ಸಿಇಸಿಯ ಈ ನೋಟ್ನಲ್ಲಿ ರೆಡ್ಡಿಯ ಕರಾಳ ಗಣಿ ಸಾಮ್ರಾಜ್ಯದ ಸಕಲೆಂಟು ವಿವರಗಳೂ ಅಡಗಿವೆ. ಬಳ್ಳಾರಿ ಅನಂತಪುರಗಳಲ್ಲಿದೆ ಗಣಿ ಧಣಿ ಜನಾರ್ಧನ ರೆಡ್ಡಿಯ ಸಾಮ್ರಾಜ್ಯ. ಇಲ್ಲಿ ಕಾನೂನು ಕಟ್ಟಳೆ ಎಲ್ಲವೂ ರೆಡ್ಡಿಯೇ. ಆಂಧ್ರದಲ್ಲಿ ಓಬಳಾಪುರಂ ಮೈನಿಂಗ್ ಕಂಪೆನಿಯ ಮೂಲಕ ತನ್ನ ಹೆಸರಿನಲ್ಲಿ ಮೈನಿಂಗ್ ನಡೆಸುವ ರೆಡ್ಡಿ, ಅಲ್ಲಿ ಅಕ್ರಮವಾಗಿ ಹೆಕ್ಟೇರುಗಟ್ಟಲೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಅಲ್ಲಿ ಗಣಿಗಾರಿಕೆ ನಡೆಸುತ್ತಾರೆ. ರೆಡ್ಡಿಯ ಸಾಮ್ರಾಜ್ಯಕ್ಕೆ ಅದೊಂದು ಫ್ರಂಟ್ ಅಷ್ಟೆ. ಆತನಿಗೆ ದೊರಕಿರುವ ಲೀಸ್ನಲ್ಲಿ ಮಾತ್ರ ಗಣಿಗಾರಿಕೆ ಮಾಡಿಕೊಂಡಿದ್ದರೆ ರೆಡ್ಡಿಯ ಕ್ಷಿಪ್ರ ಬೆಳವಣಿಗೆ ಈ ಮಟ್ಟಕ್ಕೆ ಸಾಧ್ಯವಾಗುತ್ತಿರಲಿಲ್ಲ. ಬಳ್ಳಾರಿಯಲ್ಲಿ ಆತನ ಹೆಸರಿನಲ್ಲಿ ಏನೇನೂ ಇಲ್ಲವಾದರೂ ಬಳ್ಳಾರಿಯ ಗಣಿ ಸಾಮ್ರಾಜ್ಯ ಬಹುಮಟ್ಟಿಗೆ ರೆಡಿಯ ಹಿಡಿತದಲ್ಲಿದೆ. ಇಲ್ಲಿನ ಅನೇಕ ಗಣಿಗಳನ್ನು ರೈಸಿಂಗ್ ಕಾಂಟ್ರಾಕ್ಟ್ನ ಹೆಸರಿನಲ್ಲಿ ನಿಯಂತ್ರಿಸುವುದು ಜನಾರ್ಧನ ರೆಡ್ಡಿ ಅಂಡ್ ಫ್ಯಾಮಿಲಿ. ಆದರೆ ಎಲ್ಲವೂ ಬೇನಾಮಿ. ಇನ್ನು ಇದಲ್ಲದೆ ಬಹುತೇಕ ಗಣಿಗಳಿಂದ ರೆಡ್ಡಿಗೆ ಇಷ್ಟು ಎಂದು ಹಫ್ತಾ ಸಲ್ಲಿತವಾಗುತ್ತದೆ ಎಂಬ ಮಾತೂ ಇದೆ. ಇದು ಉತ್ಖನಿತ ಅದಿರಿನಲ್ಲಿ ಶೇ.40 ಎಂಬುದು ಬಳ್ಳಾರಿಯಲ್ಲಿ ಒಂದು ಜನಜನಿತ ಫಾಮರ್ುಲಾ. ಅದೂ ರೆಡ್ಡಿಗಾರು ಇದನ್ನು ಕ್ಯಾಷ್ ಅಲ್ಲಿ ಸ್ವೀಕರಿಸುವುದಿಲ್ಲ, ಇನ್ ಕೈಂಡ್ ಅದಿರು ಕೊಡಬೇಕು. ಬಳ್ಳಾರಿಯಲ್ಲಿ ರೆಡ್ಡಿಗಾರದು ಒಂದು ಪಯರ್ಾಯ ವ್ಯವಸ್ಥೆಯೇ ಇದೆ - ಅದು ಟ್ರಾನ್ಸ್ಪೋರ್ಟ್ ಮಾಫಿಯಾ. ಇವರು ಅದಿರು ಸಾಗಿಸುವುದೇ ರೆಡ್ಡಿಗಳ ಲಾರಿಗಳಲ್ಲಿ. ಲೋಕಾಯುಕ್ತರ ವರದಿ ಇದನ್ನು ಬಿಡಿಸಿ ಬಿಡಿಸಿ ಹೇಳಿದೆ. ಹೀಗೆ ರೈಸಿಂಗ್ ಕಾಂಟ್ರಾಕ್ಟ್ ಇಲ್ಲವೇ ಹಫ್ತಾ ರೀತಿ ವಸೂಲಾದ ಅದಿರನ್ನು ರೆಡ್ಡಿಗಳು ಕರ್ನಾಟಕದಲ್ಲಿ ಲೆಕ್ಕಕ್ಕೇ ತೊರಿಸುವುದಿಲ್ಲ. ಅವರು ಇದನ್ನು ನೇರ ಆಂಧ್ರಕ್ಕೆ ಸಾಗಿಸುತ್ತಾರೆ. ಅದಕ್ಕೆ ಕರ್ನಾಟಕ ಆಂಧ್ರದ ಗಡಿಗುಂಟ ಇವರದೇ ಪ್ರೈವೇಟು ರಸ್ತೆಗಳು! ಅಲ್ಲಿಂದ ಈ ಅದಿರನ್ನು ಓಬಳಾಪುರಂನಲ್ಲಿ ತೆಗೆದದ್ದು ಎಂದು ಲೆಕ್ಕ ತೋರಿಸಿ ವಿಧೇಶಗಳಿಗೆ ರಫ್ತು ಮಾಡುತ್ತಾರೆ. ಹಾಗಾಗಿ 6 ಮೀಟರ್ ಆಳದ ಪಿಟ್ಗಳಿಂದ ಲಕ್ಷೊಪಲಕ್ಷ ಟನ್ ಅದಿರು ಹೊರಬರುತ್ತದೆ. ಅದಕ್ಕಾಗಿಯೇ ರೆಡ್ಡಿಗಳು ಕರ್ನಾಟಕದಲ್ಲಿ ಯಾವ ತನಿಖೆಗೆ ಬೇಕಾದರೂ ಸಿದ್ಧ, ಅದಿರು ರಫ್ತು ನಿಷೇಧಕ್ಕೂ ಬದ್ಧ.

ಇನ್ನು ಇದಲ್ಲದೆ ರೆಡ್ಡಿಗಳು ತಮ್ಮ ಅಕ್ರಮ ಗಣಿಗಾರಿಕೆಗಾಗಿ ರಾಜ್ಯದ ಫಲವತ್ತಾದ ಭೂಮಿಯನ್ನೇ ಆಂಧ್ರ ಕರ್ನಾಟಕದ  ಗಡಿಗಂಟಿಕೊಂಡಂತಿರುವ ತಮ್ಮ ಗಣಿ ಲೀಸ್ ಏರಿಯಾಗಳೊಂದಿಗೆ ಸೇರಿಸಿಬಿಟ್ಟಿದ್ದಾರೆ, ರಾಜ್ಯದ ಗಡಿಯನ್ನೇ ರೆಡ್ಡಿಗಳು ಬದಲಿಸಿಬಿಟ್ಟಿದ್ದಾರೆ, ಎಂದು ತೀವ್ರತರ ಆರೋಪಗಳಿವೆ. ಅಂದಿಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕರಾಗಿದ್ದ ವಿ.ಎಸ್.ಉಗ್ರಪ್ಪನವರು ಸತ್ಯಶೋಧನಾ ಸಮಿತಿಯೊಂದನ್ನು ಮುನ್ನಡೆಸಿ, ವರದಿ ನೀಡಿದ್ದರು. ಅದರಲ್ಲಿ ರೆಡ್ಡಿಗಳು ಗಡಿಯಲ್ಲಿನ ಬಾಂದಾ ಕಲ್ಲುಗಳು ಮತ್ತು ಟ್ರೈಜಂಕ್ಷನ್ ಪಾಯಿಂಟ್ ಅನ್ನು ಹೊಡೆದು ಹಾಕಿದ್ದಾರೆಂದೂ ಇದರಿಂದ 32 ಕಿಮಿ. ಉದ್ದ ಮತ್ತು ಅರ್ಧ ಕಿಮಿ. ಅಗಲದ ಕರ್ನಾಟಕದ ಖನಿಜ ಸಂಪದ್ಭರಿತ ಭೂಮಿ ಆಂಧ್ರದ ಪಾಲಾಗಿದೆ ಎಂದು ವರದಿ ನೀಡಿತು. ಇದು ಇತರ ಆರೋಪಗಳಂತೆ ಅಲ್ಲ. ಕರ್ನಾಟಕದ ಸರ್ಕಾರದಲ್ಲಿ ಮಂತ್ರಿಯಾದವ ಕರ್ನಾಟಕದ  ಸಂಪದ್ಭರಿತ ಭೂಮಿಯನ್ನು ಆಂಧ್ರಕ್ಕೆ ಸೇರಿಸಿಬಿಟ್ಟಿದ್ದಾನೆಂದರೆ ಅರ್ಥವೇನು? ಸಿಇಸಿ ವರದಿ ಈ ಕುರಿತು ಏನನ್ನೂ ಸ್ಪಷ್ಟವಾಗಿ ಹೇಳುವುದಿಲ್ಲವಾದರೂ ಅದು ಕರ್ನಾಟಕ -ಆಂಧ್ರ-ಕೇಂದ್ರ ಸರ್ಕಾರಗಳ ವ್ಯಾಪ್ತಿಯಲ್ಲಿರುವ ಇನ್ನೂ ಬಗೆಹರಿಯದ ವಿವಾದ. ಆದರೆ ಮತ್ತೊಂದೆಡೆ ಓಬಳಾಪುರಂ ಮೈನಿಂಗ್ ಕಂಪೆನಿಯ ಮಾಜಿ ಮ್ಯಾನೇಜರ್ ಆಂಜನೇಯ ರೆಡ್ಡಿ ಎಂಬುವವರು, ಸಿಬಿಐ ತನಿಖೆ ನಡೆದಾಗ ಹೆದರಿ ಬೆವರುತ್ತಿದ್ದಾಗ ತಲೆಮರೆಸಿಕೊಂಡವರು, ಈಗ ಬೆಂಗಳೂರಿನ ಅಜ್ಞಾತ ಸ್ಥಳವೊಂದರಲ್ಲಿ ಕೂತು, ಅಪ್ರೂವರ್ ರೀತಿ ತಮ್ಮ ಪೌರುಷದ ಕತೆಗಳ ಪಾರಾಯಣ ಮಾಡುತ್ತಿದ್ದಾರೆ. ಹೇಗೆ ರೆಡ್ಡಿಗಳ  ಅಣತಿಯ ಮೆಲೆ ಅವರೇ ನಿಂತು ಆಂಧ್ರ - ಕರ್ನಾಟಕ ಗಡಿಯ ಬಾಂದಾ ಕಲ್ಲುಗಳು ಮತ್ತು ಟ್ರೈಜಂಕ್ಷನ್ ಪಾಯಿಂಟ್ ಅನ್ನು ನಾಶಪಡಿಸುದುದಾಗಿ ಹೇಳಿಕೊಂಡಿದ್ದಾರೆ. ಉಗ್ರಪ್ಪನವರ ಸತ್ಯ ಶೋಧನಾ ಸಮಿತಿಯ ವರದಿ ಹೇಳುವುದೂ ಇದನ್ನೇ.

ಈಗ್ಗೆ ಒಂದು ವರ್ಷದ ಹಿಂದೆ ಆಂಧ್ರ ಸರ್ಕಾರ ಈ 6 ಗಣಿ ಅಕ್ರಮಗಳ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿತ್ತು. ಕೂಡಲೇ ಬೆದರಿ ಹೋದ ರೆಡ್ಡಿ ಆಂಧ್ರ ಹೈಕೋರ್ಟ್ಗೆ ತಾಂತ್ರಿಕ ಆಕ್ಷೇಪಣಾ ಅರ್ಜಿಯೊಂದನ್ನು ಸಲ್ಲಿಸಿ ಸಿಬಿಐ ತನಿಖೆಗೆ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದರ ಸುದೀರ್ಘ ವಿಚಾರಣೆ ನಡೆಸಿದ ಆಂಧ್ರ ಹೈಕೋರ್ಟ್ ಮೊನ್ನೆ ತನ್ನ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಕೂಡಲೇ ಎಚ್ಚೆತ್ತ ಸಿಬಿಐ ಈಗ್ಗೆ ಎರಡು ದಿನಗಳಿಂದ ಬಳ್ಳಾರಿ ಆಂಧ್ರದ ಗಣಿಗಾರಿಕಾ ಪ್ರದೇಶದಲ್ಲಿ ವಿಸತೃತ ಸಂಚಾರ ನಡೆಸಿ ಕೂಲಂಕುಷ ತನಿಖೆ ನಡೆಸುತ್ತಿದೆ. the noose is tightening.

ಇನ್ನು ರೆಡ್ಡಿಗಳ ರಾಜಕೀಯದ ಉದ್ದೇಶ ಅವರ ಸಾಮ್ರಾಜ್ಯ ಸಂರಕ್ಷಣೆ ಮತ್ತು ಅದಕ್ಕಾಗಿ ಅಧಿಕಾರ. ಆದರೆ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಅದರಲ್ಲೂ ಸಹ ರೆಡ್ಡಿಗಳು ಸೋತಿದ್ದಾರೆ. ರೆಡ್ಡಿಗಳ ಉಚ್ಛ್ರಾಯವಿದ್ದದ್ದು ಆಂಧ್ರದಲ್ಲಿ ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದು, ಇಲ್ಲಿ ಆಪರೇಷನ್ ಕಮಲದ ದಿಸೆಯಿಂದ ಯಡಿಯೂರಪ್ಪ ಅಧಿಕಾರ ಹಿಡಿದ ಹೊಸತರಲ್ಲಿ. ಆದರೆ ಇವತ್ತು ಎಲ್ಲವೂ ಬದಲಾಗಿ ಹೋಗಿದೆ. ಯಡಿಯೂರಪ್ಪನವರೊಂದಿಗೆ ಅವರ ಸಂಬಂಧ ಹೇಗಿದೆಯೆಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಹಾಗಂತ ಅವರನ್ನುರುಳಿಸಿ ಪರ್ಯಾಯ ವ್ಯವಸ್ಥೆಗೆ ಚಾಲನೆ ನಿಡುವ ಅವರ ಎಲ್ಲ ಪ್ರಯತ್ನಗಳೂ ಮಣ್ಣುಗೂಡಿ ತಣ್ಣಗಾಗಿರುವುದು ಅವರ ಕುಗ್ಗಿದ ರಾಜಕೀಯ ಬಲದ ವಿಶ್ಲೇಷಣೆಯೆ ಸರಿ. ಇನ್ನು ಮೊನ್ನೆಯ ಬಳ್ಳಾರಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ತಿಣುಕಾಡಿರುವುದೂ ಕೂಡ, ಅವರ ಕೋಟೆಯಲ್ಲಿ ಬಿರುಕುಗಳು ಮೂಡಿರುವ ಸ್ಪಷ್ಟ ಚಿತ್ರಣ ನೀಡುತ್ತದೆ. ಇನ್ನು ರೆಡ್ಡಿಗಳ ಕಾಂಗ್ರೆಸ್ ಸಂಬಂಧ ಹಳಸಿ ಶಾನೆ ಕಾಲವಾಯಿತು ಬಿಡಿ. ವೈ.ಎಸ್.ಆರ್ ಮರಣ ಅವರಿಗೆ ವಜ್ರಾಘಾತವೇ ಸರಿ. ಅದಾದ ಮೇಲೆ ರೆಡ್ಡಿಗಳು ಮೊದಲಿನಂತಾಗಲೇ ಇಲ್ಲ. ಇದರಿಂದ ಹೊರಬರಲು ಅವರ ಸಾಮ್ರಾಜ್ಯದ ಪಾಳೇಪಟ್ಟುಗಳನ್ನು ಉಳಿಸಿಕೊಳ್ಳಲು ವೈ.ಎಸ್.ಆರ್. ಅವರ ಸುಪುತ್ರ ಜಗನ್ಮೋಹನ ರೆಡ್ಡಿಯವರನ್ನು ಆಂಧ್ರದ ಮುಖ್ಯಮಂತ್ರಿ ಮಾಡಲು ಹೆಣಗಾಡಿದ, ಅದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ನೊಂದಿಗೆ ಸಂಘರ್ಷಕ್ಕಿಳಿದ ರೆಡ್ಡಿಗಳೊಂದಿಗೆ ಜಗನ್ಮೋಹನ ರೆಡ್ಡಿಯು ಹೊರದಬ್ಬಲ್ಪಟ್ಟು ಈಗ ಆತನೇ ಅಸ್ತಿತ್ವದ ಹುಡುಕಾಟದಲ್ಲಿದ್ದಾನೆ. ಇನ್ನು ಜಗನ್ಮೋಹನ ರೆಡ್ಡಿಯನ್ನು ಹಣಿಯಲು ಉತ್ಸುಕವಾಗಿ ಮುನ್ನುಗ್ಗುತ್ತಿರುವ ಕಾಂಗ್ರೆಸ್ಗೀಗ ಅತ್ಯಮತ ಸುಲಭದ ಟಾರ್ಗೆಟ್ ಗಾಲಿ ಜನಾರ್ಧನ ರೆಡ್ಡಿ ಮತ್ತು ಆತನ ಸಾಮ್ರಾಜ್ಯ! ಇನ್ನು ಕರ್ನಾಟಕದಲ್ಲಿ ಬಿಜೆಪಿಯ ಉಸಿರುಗಟ್ಟುವ ವಾತಾವರಣದಿಂದ ಹೊರಬಂದು ಜೆಡಿಯು ಅಥವಾ ಎನ್ಸಿಪಿಯನ್ನು ಕಟ್ಟಿ, ಬಿಜೆಪಿಯೊಂದಿಗೆ ಮ್ಯತ್ರಿ ಮಾಡಿಕೊಂಡು ಸ್ವಂತ ರಾಜಕೀಯ ಅಸ್ತಿತ್ವವನ್ನು ರುಪಿಸಿಕೊಲ್ಳುವ ಹವಣಿಕೆಯಲ್ಲಿ ರೆಡ್ಡಿಗಳು ಇದ್ದಾರಾದರೂ ಈ ಪಕ್ಷಗಳು ರೆಡ್ಡಿಗಳಿಗೆ ಬಾಗಿಲು ತೆಗೆಯುವ ಸುದ್ದಿಗಳೇನೂ ಇಲ್ಲ. ರೆಡ್ಡಿ ಇಂದು ಅಕ್ಷರಶಃ ದಿಕ್ಕೆಟ್ಟಿದ್ದಾರೆ.

ಎಷ್ಟೇ ಆದರೂ ಅಕ್ರಮದ ತಳಹದಿಯ ಮೇಲೆ ನಿರ್ಮಿಸಲ್ಪಟ್ಟ ಸಾಮ್ರಾಜ್ಯ ಒಂದಲ್ಲ ಒಂದು ದಿನ ಧರೆಗುರುಳಲೇ ಬೇಕು. ಕೇವಲ ಹತ್ತು ವರ್ಷಗಳಲ್ಲಿ ಇಂಥದೊಂದು ಸಾಮ್ರಾಜ್ಯವನ್ನು ನಿರ್ಮಿಸಿ ಅದರ ಚಕ್ರಾಧಿಪತ್ಯವನ್ನು ಸಾಧಿಸಿದ್ದ ರೆಡ್ಡಿ, ಇಷ್ಟೂ ದಿನ ಜನ ಮತ್ತು ವ್ಯವಸ್ಥೆಯನ್ನು ಕಣ್ಣುತಪ್ಪಿಸಿ ದಿಕ್ಕೆಡಿಸಿದ ರೆಡ್ಡಿ ಇಂದು ಬಯಲಿನಲ್ಲಿ ನಿಂತಿದ್ದಾರೆ. ಸಿಇಸಿ ವರದಿ ಅವರ ಈವರೆಗಿನ ಎಲ್ಲವನ್ನೂ ಬಯಲುಗೊಳಿಸಿ ಅವರನ್ನು ಜನ ಮತ್ತು ವ್ಯವಸ್ಥೆಯ ಮುಂದೆ ನಗ್ನವಾಗಿಸಿದೆ. hope it becomes the last nail. ಅವರು ನಿರ್ಮಿಸಿದ ಸೌಧಗಳೆಲ್ಲವೂ ಉರುಳಿಬಿದ್ದಿವೆ. ಸುತ್ತಲೂ ಅವಶೇಷಗಳೇ. ಆ ಅವಶೇಷಗಳಡಿ ತಾವೂ ಹೂತು ಹೋಗಬಾರದೆಂಬುದೇ ಸದ್ಯ ರೆಡ್ಡಿಗಾರಿ ಪೋರಾಟಮು. ಅದರಲ್ಲಿ ಅವರದೋ ಯಶಸ್ಸು? ವ್ಯವಸ್ಥೆಯದೋ?

One thoughts on “ತಾನೇ ಕಟ್ಟಿದ ಸಾಮ್ರಾಜ್ಯದ ಅವಶೇಷಗಳ ನಡುವೆ ಬೆತ್ತಲಾಗಿ ನಿಂತ ರೆಡ್ಡಿಗಾರು!

Bhaskar Narasimhaiah said...

ಸುಮ್ಮನೆ ಸುಯ್ ಎಂದು ಮೇಲೆ ಹೋದದ್ದು ಕೆಳಗೆ ಬರಲೆಬೇಕೆಂಬ ಪ್ರಕೃತಿಯ ನಿಯಮವಿಲ್ಲವೆ?
ಗಟ್ಟಿತನವಿಲ್ಲದಿದ್ದರೆ ಯಾವ ಬೆಳವಣಿಗೆಯೂ ಉಳಿಯುವುದಿಲ್ಲ.

Proudly powered by Blogger
Theme: Esquire by Matthew Buchanan.
Converted by LiteThemes.com.