2011ರ ಹೊಸ್ತಿಲ ಮೇಲೆ ನಿಂತು ಬೆನ್ನು ನೋಡಿಕೊಂಡಾಗ

2011ರ ಮತ್ತು ಈ ದಶಕದ ಮೊದಲ ಸೂರ್ಯೋದಯ ಆಗಿದೆ. 2010 ಆಗಲೇ ಮಗುಚಿ ಬಿದ್ದಿದೆ. 2011 ರೆಕ್ಕೆಯಗಲಿಸಿದೆ. ಈ 2010ರಲ್ಲಿ ಲೋಕ, ರಾಷ್ಟ್ರ, ರಾಜ್ಯಗಳಲ್ಲಿ ಏನೇನಾಯಿತೆಂದು ನಿಯತಕಾಲಿಕೆಗಳು ವಿಶೇಷ ಸಂಚಿಕೆಗಳನ್ನು ತರುತ್ತಿದ್ದರೆ, ಟಿವಿ ಛಾನೆಲ್ಲುಗಳು ವಿಶೇಷ ಅವಲೋಕನ ಕಾರ್ಯಕ್ರಮಗಳನ್ನು ಮಾಡುತ್ತಿವೆ. 2010 ನನಗೇನಾಗಿತ್ತು? ಅನ್ನುವ ಪ್ರಶ್ನೆಯನ್ನು ನಿನ್ನೆ ರಾತ್ರಿ ಕೇಳಿಕೊಂಡೆ, 2010ರ ಕಡೆಯ ಕ್ಷಣಗಳಲ್ಲಿ. ಏನು ವಿಶೇಷ? ಅಂಥದ್ದೇನೂ ಅನ್ನಿಸಲಿಲ್ಲ, ಕೆಲವುದರ ಹೊರತಾಗಿ. ಎಲ್ಲ ವರ್ಷಗಳಂತೆಯೇ ಇದೂ ಒಂದು ವರ್ಷ. 365 ದಿನ..ಆದರೆ ಅದರಲ್ಲಿ ಕೆಲವು signpost ಗಳು ಕಾಣುತ್ತಿವೆ ನನಗೆ. ಅವುಗಳನ್ನು ನಿಮ್ಮಗಳೊಂದಿಗಲ್ಲದೆ ಮತ್ಯಾರ ಜೊತೆ ಹಂಚಿಕೊಳ್ಳಲಿ..

ಮೊದಲಿಗೆ ನನ್ನ ಕೆಲಸಗಳು. ಎಂದಿನಂತೆ ಈ ವರ್ಷವೂ ತಲೆಯಲ್ಲಿ ನೂರೆಂಟು ತಿಕ್ಕಲು ಯೋಜನೆಗಳು. ಅವುಗಳಲ್ಲಿ ಕೆಲವು ಇನ್ನು ದಶಕ ಕಳೆದ ಮೇಲೆ ಮಾಡುವಂಥವು, ಇನ್ನು ಕೆಲವು ಶುದ್ಧಾನುಶುದ್ಧ ತಿಕ್ಕಲುಗಳು, ಇನ್ನು ಕೆಲವು ಪ್ರಯೋಗಯೋಗ್ಯವೇ ಅಲ್ಲ. ಇಂಥ ನೂರೆಂಟು ಹೊಳಹುಗಳಲ್ಲಿ ತಲೆಮಾಸಿದ ಎರಡು ಮೂರು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇನ್ನೂ ಅದ್ಭುತವಾಗಿ ಜಾರಿ ಮಾಡಬಹುದಾಗಿದ್ದ ಯೋಜನೆಗಳನ್ನು ನನ್ನ ಉಡಾಫೆ ಹಾಳುಗೆಡವಿತು ಎಂದು ಈಗನ್ನಿಸುತ್ತಿದೆ. ಇನ್ನೂ ಶ್ರದ್ಧೆಯಿಟ್ಟು ಕೆಲಸ ಮಾಡಬೇಕು, ಎಂಬ ಎಂದಿನ ನ್ಯೂ ಇಯರ್ ರೆಸಲ್ಯೂಷನ್ನೊಂದಿಗೆ ಒಂದು ಮೆಲುಕು.

ಮೊದಲಿಗೆ ಬರವಣಿಗೆ:
ಇನ್ನು ಈ ಭಾನುವಾರ ಎಂಬ ವಾರಪತ್ರಿಕೆಗೆ ನಾನು ಪ್ರತೀ ವಾರ ಅಂಕಣ ಬರೆಯುತ್ತಿರುವುದು ತಮ್ಮೆಲ್ಲರಿಗೂ ತಿಳಿದಿರುವುದೇ. ಮೊದಮೊದಲು ಆ ವಾರದ ವಿದ್ಯಮಾನಗಳ ಬಗ್ಗೆ ಅಂಕಣ ಬರೆಯುತ್ತಾ ಅತೀ ವರ್ತಮಾನದಲ್ಲಿ ಕಳೆದು ಹೋಗಿದ್ದ ನನ್ನ ಬರವಣಿಗೆಗೆ ಈ ವರ್ಷ ಒಂದು ತಿರುವು ಸಿಕ್ಕಿತು.

ಬಿಬಿಎಂಪಿ ಎಲೆಕ್ಷನ್ಗಳು ಬರುತ್ತಿದ್ದಂತೆಯೇ ದೇವೇಗೌಡರು ಪಂಚೆ ಎತ್ತಿಕಟ್ಟಿ ನೈಸ್ ವಿರುದ್ಧ ಒಂದು ಜನಾಂದೋಲನವನ್ನು ರೂಪಿಸಿದರು. ನೈಸ್ ರಸ್ತೆಯ ವಿವಾದವನ್ನು 3 ತಿಂಗಳ ಕಾಲ ಜೀವಂತವಾಗಿಟ್ಟು ಅದಕ್ಕೆ ಅಖಂಡ ನ್ಯೂಸ್ ವ್ಯಾಲ್ಯೂವನ್ನು ದೊರಕಿಸಿಕೊಟ್ಟರು. ಬಿಬಿಎಂಪಿ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಪಂಚೆ ಇಳಿಸಿ ಗೌಡರು ಪದ್ಮನಾಭನಗರ ಸೇರಿಬಿಟ್ಟರು ಬಿಡಿ. ಅದಿರಲಿ. ಆಗಲೇ ನಾನು ಕೈಗೆತ್ತಿಕೊಂಡದ್ದು ನೈಸ್ ವಿವಾದದ ಅಧ್ಯಯನ. ದಲಿತ ಸಂಘರ್ಷ ಸಮಿತಿಯವರು ಮಾಹಿತಿ ಹಕ್ಕಿನಡಿ ಪಡೆದ ಸುಮಾರು 3-4 ಸಾವಿರ ಪುಟಗಳಷ್ಟು ತತ್ಸಂಬಂಧೀ ಸರಕಾರೀ ದಾಖಲೆಗಳ ಅಧ್ಯಯನ. it was a great eye opener. ಇಡಿಯ ಯೋಜನೆಯ ಪ್ರತಿ ಹೆಜ್ಜೆಯೂ ಮೋಸವೇ! 5 ಸಾವಿರ ಎಕರೆಯಷ್ಟು ರಸ್ತೆಗೆ ಖೇಣಿ ಸಾಹೇಬರು ಇವತ್ತು 29 ಸಾವಿರ ಎಕರೆ ಭೂಮಿ ಪಡೆದಿದ್ದಾರೆ! ಇನ್ನೂ ಪಡೆಯುತ್ತಲೇ ಇದ್ದಾರೆ!! ಎಲ್ಲವೂ ಬಡ ರೈತರ ಜಮೀನುಗಳು, ಅಲ್ಲಿ ಖೇಣಿ ಸಾಹೇಬ ಕಟ್ಟುತ್ತಿರುವುದು ರೆಸಾರ್ಟು ಮತ್ತು ಫಿಲ್ಮ್ ಸಿಟಿ!

ಈ ಕುರಿತು ಒಂದು ಸಮಗ್ರ ಅಧ್ಯಯನ ನಡೆಸಿ ಸತತ 21 ವಾರಗಳ ಕಾಲ ನೈಸ್ ಯೋಜನೆಯ ಶ್ರೀಕಾರದಿಂದಲೂ ನಡೆದ ಪ್ರತಿ ತಪ್ಪು ಹೆಜ್ಜೆ, ಹಗರಣವನ್ನು ದಾಖಲೆ ಸಮೇತ ವಿಶ್ಲೇಷಿಸಿ ಬರೆದೆ. ಇದರಲ್ಲಿ ಯಾವುದೇ bias ಅನ್ನು ಬರಗೊಡಕೂಡದೆಂಬ ಎಚ್ಚರ ವಹಿಸಿದೆ. ದಲಿತ ಸಂಘರ್ಷ ಸಮಿತಿಯವರು ಸಂಗ್ರಹಿಸಿರುವ ದಾಖಲೆಗಳನ್ನು ವಿಶ್ಲೇಷಿಸಿ ಅದಕ್ಕೊಂದು ನಿರೂಪಣೆಯನ್ನು ಕೊಟ್ಟಿದ್ದಷ್ಟೇ ನಾನು ಮಾಡಿದ್ದು. ಆದರೆ 21 ವಾರಗಳ ನಂತರ ನನ್ನ ಕೆಲಸದ ಬಗ್ಗೆ ಒಂದು ಹೆಮ್ಮೆ ಮೂಡಿತ್ತು. ಈ ಸರಣಿ ಲೇಖನಕ್ಕೆ ಬಂದ ಪ್ರತಿಕ್ರಿಯೆ ಅತ್ಯಮೋಘ. ಇಷ್ಟನ್ನು ಮಾತ್ರ ಎದೆತಟ್ಟಿ ಹೇಳಬಲ್ಲೆ, ನೈಸ್ ಬಗ್ಗೆ ಸಾಕಷ್ಟು ಜನ ಸಾಕಷ್ಟು ಬರೆದಿದ್ದಾರೆ. ಆದರೆ ಇಡಿಯ ಚಿತ್ರಣವನ್ನು ಕಟ್ಟಿಕೊಡುವ, ದಾಖಲೆಗಳೊಂದಿಗೆ ಚರ್ಚೆಗಿಳಿಯುವ ಕೃತಿ ನನ್ನದೇ! ಈ ಸರಣಿ ಲೇಖನಗಳ ಸಂಗ್ರಹವನ್ನು ಒಂದು ಸಣ್ಣ ಪುಸ್ತಕವಾಗಿ ಹೊರತರಬೇಕೆನ್ನುವ ಆಸೆ ಇನ್ನೂ ಜೀವಂತ. ಒಟ್ಟಾರೆ ಒಂದು ಸಾಮಾಜಿಕ-ರಾಜಕೀಯ-ಭ್ರಷ್ಟಾಚಾರದ ಇಶ್ಯೂ ಬಗ್ಗೆ ಅತ್ಯಂತ ಸವಿಸ್ತಾರವಾಗಿ ಮತ್ತೂ ಮುಖ್ಯವಾಗಿ ಜನಪರವಾಗಿ ಬರೆದ ಖುಷಿಯಿದೆ.


ಇನ್ನು ತೀರ ಇತ್ತೀಚೆಗೆ ಯಡಿಯೂರಪ್ಪನವರ ಪುತ್ರರತ್ನರು ಜಿ ಕ್ಯಾಟಗರಿ ನಿವೇಶನ ಪಡೆದು ಸಿಕ್ಕುಬಿದ್ದಾಗ ಜಿ ಕ್ಯಾಟಗರಿ ಬಿಡಿಎ ನಿವೇಶನ ಹಂಚಿಕೆಯ ವಿಷಯ ಚರ್ಚೆಗೆ ಬಂತು. ಆಗ ಈ ಜಿ ಕ್ಯಾಟಗರಿ ನಿವೇಶನಗಳ ಮೂಲಕ್ಕೆ ಪಾತಾಳಗರಡಿ ಹಾಕಿ ಕೂತೆ. 1994ರಲ್ಲಿ ಜಿ ಕ್ಯಾಟಗರಿ ನಿವೇಶನ ಹಂಚಿಕೆಯನ್ನು ವೀರಪ್ಪ ಮೊಯಿಲಿ ಸರ್ಕಾರ ಶುರು ಮಾಡಿದಾಗಿನಿಂದಲೂ ಇವತ್ತಿನವರೆಗೆ ಯಾವ ಯಾವ ಮುಖ್ಯಮಂತ್ರಿಗಳು ಯಾರ್ಯಾರಿಗೆ ಜಿ ಕ್ಯಾಟಗರಿ ನಿವೇಶನ ಹಂಚಿದ್ದಾರೆ ಎಂದು ಸಂಪೂರ್ಣ ಮಾಹಿತಿ ತೆಗೆದು, 6 ವಾರಗಳ ಕಾಲ ಒಂದು ಲೇಖನ ಸರಣಿಯನ್ನು ಮಾಡಿದೆ. ಇದಕ್ಕೂ ಬಂದ ಪ್ರತಿಕ್ರಿಯೆ ಅಮೋಘ. 

ಇನ್ನು ಈ ಎರಡೂ ಲೇಖನ ಸರಣಿಗಳಿಂದ ನಾನು ತನಿಖಾ ಪತ್ರಿಕೋದ್ಯಮದ ಮೊದಲ ಮೆಟ್ಟಿಲುಗಳನ್ನು ನಾನು ಹತ್ತಿಳಿದೆ. ಇನ್ನು ಸರ್ಕಾರಿ  ದಾಖಲೆಗಳನ್ನು ವಿಶ್ಲೇಷಿಸುವ ಅದಕ್ಕೊಂದು ಕಥನಾತ್ಮಕ ನಿರೂಪಣೆಯನ್ನು ಕೊಡುವ ಇತ್ತೀಚೆಗೆ ಡಾಟಾ ಜರ್ನಲಿಸಂ ಎಂದು ಕರೆಯಲ್ಪಡುವ ಹೊಸ ಪಟ್ಟೊಂದನ್ನು ಕೂಡ ಅರಿತೆ. ಇನ್ನು ಈ ಎರಡೂ ಲೇಖನ ಸರಣಿಗಳನ್ನು ನನ್ನ ಹಿಂದೆ ನಿಂತು ಬೆನ್ನು ತಟ್ಟಿ ಪ್ರೋತ್ಸಾಹಿಸಿ ಬರೆಸಿದ ನನ್ನ ಸಂಪಾದಕರಾದ ಶ್ರೀ ಮಹದೇವ ಪ್ರಕಾಶರವರಿಗೆ ನನ್ನ ಕೃತಜ್ಞತೆಗಳು. 


ಮಿಕ್ಕ ಕೆಲವು ಹುಚ್ಚು ಯೋಜನೆಗಳು:
ಗದುಗಿನಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಲ್ಲಿಗೇ ಹೋಗಿ 5 ದಿನಗಳ ಕಾಲ ಉಳಿದು ಪ್ರತಿ ನಿಮಿಷದಂತೆ ನೆಟ್ ಲೋಕದಲ್ಲಿ ವರದಿ ಮಾಡುವ ಸಾಹಸ ಮಾಡಿದೆ. ಈ ಸಾಹಸದಲ್ಲಿ ನನ್ನ ಇನ್ನೂ ಮೂವರು ಸ್ನೇಹಿತರು, ಅವಧಿ ಬ್ಲಾಗು, ನಮ್ಮ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗವೂ ಜೊತೆ ನಿಂತಿತ್ತು. ಇದು ಸಾಹಸವೇ ಸರಿ. ಒಂದು live reporting ನ  ನನ್ನ ಮೊದಲ ಅನುಭವವೂ ಹೌದು. ಈ ಬ್ಲಾಗಿನ ಹೆಸರು ನುಡಿನಮನ. ಇನ್ನು ಸಮ್ಮೇಳನಕ್ಕೆ 15 ದಿನಗಳ ಹಿಂದೆಯೇ ಬ್ಲಾಗನ್ನು ಶುರು ಮಾಡಿ ಅದರಲ್ಲಿ ಪ್ರತಿ ದಿನ ಕನ್ನಡ, ಸಾಹಿತ್ಯ, ಸಮ್ಮೇಳನಗಳ ಕುರಿತು ಒಂದು ಆರೋಗ್ಯಪೂರ್ಣ ಚರ್ಚೆಯನ್ನೂ ನಡೆಸಿದ್ದೆ. ಇದರಲ್ಲಿ ಚಂಪಾ, ಬರಗೂರರಿಂದ ಹಿಡಿದು ವಸುಧೇಂಧ್ರ, ವಸ್ತಾರೆಯವರವರೆಗೂ ಎಲ್ಲರೂ ಪಾಲ್ಗೊಂಡಿದ್ದರು. ಇದೇ ಕೆಲಸದ ನಡುವೆ ನನಗೆ ನಮ್ಮ ನಾಡಿನ ಲೇಖಕರನೇಕರ ಪರಿಚಯವೂ ಆಯಿತು. ನನ್ನ ಮೆಚ್ಚುಗೆಯ ಲೇಖಕರೊಂದಿಗೆ ಒಂದು ಸಂವಾದ ಸಾಧ್ಯವಾಯಿತು. ಆದರೆ ಈ ಚರ್ಚೆಗೆ  ನಿರೀಕ್ಷಿತ ಮಟ್ಟದ ಪ್ರತಿಕ್ರಿಯೆಗಳು ಬರದಿದ್ದದ್ದು ನನಗೆ ನಿರಾಸೆಯನ್ನೂ ಉಂಟು ಮಾಡಿತು. ಆದರೆ ಸಮ್ಮೇಳನವನ್ನು 5 ದಿನಗಳ ಕಾಲ ಅಲ್ಲಿಂದ ಲೈವ್ ಕವರ್ ಮಾಡಿದ ಅನುಭವ ಅಪೂರ್ವ. ಇದಕ್ಕೆ ಸಿಕ್ಕ ಪ್ರತಿಕ್ರಿಯೆಯೂ ಅಪೂರ್ವ. ಇದು ನಾನು ನೋಡಿದ ಮೊದಲ ಸಾಹಿತ್ಯ ಸಮ್ಮೇಳನವೂ ಆಗಿದ್ದು, ಅದೇ ಒಂದು ವಿಶಿಷ್ಟ ಅನುಭವ ನೀಡಿತು. ಕಡೆಗೆ ಎಲ್ಲರೂ ಇದೊಂದು ಹುಚ್ಚು ಸಾಹಸ ಎಂದರು ಬಿಡಿ. ನನ್ನ ಮತ್ತು ಸ್ನೇಹಿತರ ಜೇಬಿಗೆ 8 ಸಾವಿರದ ದೊಡ್ಡ ಕಿಂಡಿ! ಇರಲಿ ಬಿಡಿ ಇದು ಈ ವರ್ಷದ ನನ್ನ ಕನ್ನಡ ಸೇವೆ. ತೃಪ್ತಿಯಿದೆ.

ಇನ್ನು ಈ ವರ್ಷದ ಮಧ್ಯದಲ್ಲಿ 125 ವರ್ಷಗಳ ಇತಿಹಾಸವಿರುವ ಆಂಧ್ರದ ಸುರಭಿ ನಾಟಕ ತಂಡ ಬೆಂಗಳೂರಿನ ರಂಗಶಂಕರದಲ್ಲಿ 3 ದಿನಗಳ ಕ್ಯಾಂಪು ಹೂಡಿತ್ತು. ಆಗ ಈ ವಿಶಿಷ್ಠ ರಂಗತಂಡದ ಕುರಿತು ಒಂದು ಸಾಕ್ಷ್ಯಚಿತ್ರ ಮಾಡಲು ಶುರು ಮಾಡಿದೆವು. 3 ದಿನಗಳ ಕಾಲ ಸುರಭಿ ತಂಡದೊಂದಿಗೇ ಉಳಿದು ಒಡನಾಡಿ ಶೂಟ್ ಮಾಡಿದೆವು. ಆ ನಂತರ ಕೂಡ ಇದಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದು, ಈ ಸಾಕ್ಷ್ಯಚಿತ್ರವು ಪೋಸ್ಟ್ ಪ್ರೊಡಕ್ಷನ್ನ ಕೊನೆಯ ಹಂತಗಳಲ್ಲಿದೆ. ಇನ್ನು ಸಾಕ್ಷ್ಯಚಿತ್ರವನ್ನು ಪಕ್ಕಕ್ಕಿಟ್ಟರೂ 3 ದಿನಗಳ ಕಾಲ ಸುರಭಿ ತಂಡದೊಂದಿಗೆ ಒಡನಾಡಿದ್ದು, ಅವರ ಮಾಯಾಜಾಲ ನಾಟಕಗಳನ್ನು ನೋಡಿದ್ದೇ ಒಂದು ವಿಶೇಷ ಅನುಭವ.

ಇವಿಷ್ಟೇ ನಾನು ಈ ವರ್ಷ ಹೇಳಿಕೊಳ್ಳಬಹುದಾದ ನಾನು ಮಾಡಿದ ಕೆಲಸಗಳು. ಇನ್ನೂ ಅನೇಕ ಪ್ರಾಜೆಕ್ಟುಗಳು ತಲೆಯಲ್ಲಿಯೇ ಇವೆ. ಯಾವುದೆದ್ದು ಬಂದು ಯಾವಾಗ ಎಲ್ಲಿ ಅವತರಿಸುತ್ತದೋ ಬಲ್ಲವರಾರು?

ಅಮ್ಮನನ್ನು ಕೊಟ್ಟ ವರ್ಷ: 
ಇನ್ನೇನು ಈ ವರ್ಷದ ವಿಶೇಷ? on a personal note, 2010 was very special to me. ನನ್ನ ಬರವಣಿಗೆ ನೋಡಿ ಮೆಚ್ಚಿ ಹೀಗೆ ಇಂಟರ್ನೆಟ್ಟಿನಲ್ಲಿ ಪರಿಚಯವಾದವರಿವತ್ತು ನನ್ನ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದ್ದಾರೆ. ಆಕೆ ಇವತ್ತು ಆತ್ಮೀಯತೆಯಲ್ಲಿ ಅಕ್ಕ, ಪ್ರೀತಿ ಹೆಚ್ಚಾದರೆ ಅಮ್ಮ! ನಾವು ನಿತ್ಯ ಜೀವನದಲ್ಲಿ ನೂರೆಂಟು ಜನರನ್ನು ಭೇಟಿಯಾಗುತ್ತಲೇ ಇರುತ್ತೇವೆ. ಒಬ್ಬೊಬ್ಬರದು ಒಂದೊಂದು ರೀತಿಯ ಸಂಬಂಧ, ಕೆಲವು ಲೆಕ್ಕಾಚಾರದ ಸಂಬಂಧಗಳಾದರೆ, ಕೆಲವು ಸ್ನೇಹ, ಇನ್ನೂ ಕೆಲವು ವೃತ್ತಿಪರ ಅನಿವಾರ್ಯ. ಎಂಥೆಂತಹ ಸಂಬಂದಗಳೋ ಕಳಚಿ ಬೀಳುತ್ತಿರುವುದನ್ನು ನಾವಿವತ್ತು ನೋಡುತ್ತಿದ್ದೇವೆ. ಅಂಥದರಲ್ಲಿ ಒಂದು ಶುದ್ಧ ಅಂತಃಕರಣದ ಅಕಾರಣ ಪ್ರೀತಿಯ ಸೆಲೆ ನನಗೆ ಸಿಕ್ಕಿದ ವರ್ಷವಿದು. ಅಸಲಿಗೆ ನಿರೀಕ್ಷೆಗಳೇ ಇಲ್ಲದ ಸ್ವಚ್ಛ ಬಿಳಿ ಹಾಳೆ. ನಾನೊಬ್ಬ ಪರಮ introvert. ಅಂಥ ನನ್ನ ಅಂತರಂಗ ಬಿಚ್ಚಿಕೊಳ್ಳುವುದು ಈ ಅಕ್ಕನ ಬಳಿ ಮಾತ್ರ. ನನಗೆ ಅಕ್ಕನನ್ನು ಪದಗಳಲ್ಲಿ ಕಟ್ಟಿಕೊಡಲು ಬರುತ್ತಿಲ್ಲ, ಪದಗಳು ಸೋಲುತ್ತಿವೆ. ಆದರೆ ಒಂದೊಂತೂ ಗೊತ್ತು. ಒಬ್ಬ ಅಮ್ಮನನ್ನು ಪಡೆಯುವುದು ಅಷ್ಟು ಸುಲಭವಲ್ಲ. ನಾನು ತುಂಬಾ ಅದೃಷ್ಟಶಾಲಿ. ನನಗೆ ಈ ವರ್ಷ ಒಬ್ಬ ಅಮ್ಮ ಸಿಕ್ಕಳು. ಇನ್ನು ಅಕ್ಕನಿಗೂ ಈ ವರ್ಷ ಕಡಿಮೆ ವರ್ಷವೇನಲ್ಲ. ಬಹುದಿನಗಳಿಂದ ಆಕೆ ಹೋರಾಡುತ್ತಾ ಬಂದ ಎರಡು ಯುದ್ಧಗಳನ್ನು ಅವುಗಳ logical culmination ಗೆ ತೆಗೆದುಕೊಂಡು ಹೋಗಿ ಎರಡೂ ಯುದ್ಧಗಳನ್ನು ಗೆದ್ದು, ಹೊಸ ಜೀವನವೊಂದನ್ನು ರೂಪಿಸಿಕೊಂಡಿರುವ ಧೀರೆ. ಅಕ್ಕನೊಂದಿಗೆ ನಾನು ನನ್ನ ಬೆನ್ನ ಹಿಂದೆ ಅಕ್ಕ. ಈ ಸಂಬಂಧದ ಬೆಲೆ ನನಗೆ ಗೊತ್ತು. ಹಾಗಾಗಿ ಉಳಿಸಿಕೊಂಡು ಹೋಗುವುದೂ ಗೊತ್ತು. ಅಮ್ಮನನ್ನು ಕೊಟ್ಟ 2010ಕ್ಕೆ ಚಿರಋಣಿ!

2011: 
ಇನ್ನು 2011 ಹೇಗಿರುತ್ತೆ? ಕಾಲಗರ್ಭದಲ್ಲಿ ಏನೇನಿದೆಯೋ ಬಲ್ಲವರಾರು? ಆದರೆ ನಮ್ಮದೂ ಅಂತ ಒಂದು ಸಣ್ಣ ಸಿದ್ಧತೆ, ನಿರೀಕ್ಷೆ, ತಯಾರಿಯಿರುತ್ತವಲ್ಲಾ...ಅದನ್ನೂ ನಿಮ್ಮೊಡನೆ ಹಂಚಿಕೊಳ್ಳುವಾಸೆ...

ಸದ್ಯದಲ್ಲಿ ನನ್ನ ಎಂಎಸ್ಸಿ ಎಲೆಲಕ್ಟ್ರಾನಿಕ್ ಮೀಡಿಯಾ ಸ್ನಾತಕೋತ್ತರ ಪದವಿ ಅಭ್ಯಾಸದ ಕಡೆಯ ಸೆಮಿಸ್ಟರಿನಲ್ಲಿದ್ದು, ನಾವು 15 ನಿಮಿಷಗಳ ಒಂದು ಡಾಕ್ಯುಮೆಂಟರಿ ಮಾಡಬೇಕಿರುತ್ತೆ. ನಾನು ಮತ್ತು ನನ್ನ ಸ್ನೇಹಿತರ ಗ್ಯಾಂಗು ಸೇರಿ ಮಾಡ ಹೊರಟಿರುವುದು 8 ಡಾಕ್ಯುಮೆಂಟರಿಗಳು! ಅವುಗಳಿಗೆ ಆಗಲೇ ಪ್ರೀಪ್ರೊಡಕ್ಷನ್, ಸಕ್ರಿಪ್ಟಿಂಗ್ ಕೆಲಸಗಳು ಶುರುವಾಗಿವೆ. ಅದರಲ್ಲಿ ನಾನು ನಿದರ್ೇಶಿಸಲಿರುವ ಡಾಕ್ಯುಮೆಂಟರಿಗಳು 2. ಅವು ಯಾವುವು? ಸಸ್ಪೆನ್ಸ್! 2011ರ ಮೊದಲಾರ್ಧ ಇದರಲ್ಲೇ ಕಳೆದುಹೋಗುತ್ತದೆ.

ಇನ್ನು ಜೂನ್ ವೇಳೆಗೆ ನನ್ನ ಪದವಿ ಅಭ್ಯಾಸ ಮುಗಿಯುತ್ತದೆ. ಅಲ್ಲಿಗೆ ನನ್ನ ಕಾಲೇಜು ಜೀವನವೂ...! ಇನ್ನೂ ತುಂಬಾ ಓದುವುದಿದೆ, ಓದ್ತೀನಿ, ಆದರೆ ಕಾಲೇಜಿಗೆ ಹೋಗಲ್ಲ. ಅಲ್ಲಿಗೆ ಶಿಕ್ಷಣ ಮುಗಿದು ಕೆಲಸದ ಬೇಟೆ! ನನ್ನ field of passion - broadcast journalism. ರಾಷ್ಟ್ರೀಯ ಇಂಗ್ಲೀಷ್ ಮಾಧ್ಯಮದಲ್ಲಿ ಕೆಲಸ ಮಾಡಬೇಕೆಂಬುದು ಮನದಿಂಗಿತ. ಸಾಧ್ಯವಾಗದಿದ್ದರೆ ಕನ್ನಡ ವಾಹಿನಿಗಳು. ಒಟ್ಟಿನಲ್ಲಿ ನನ್ನ ಕ್ಷೇತ್ರ broadcast journalism. ಶಿಕ್ಷಣ ಮುಗಿಸಿ ಕೆಲಸದ ಬೇಟೆಯಲ್ಲಿ ಸೆಣಸಾಡಿ ಫೀಲ್ಡಿಗಿಳಿಯುವುದಿದೆಯಲ್ಲಾ...2011 ನನ್ನ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲು!! ನಿಮ್ಮೆಲ್ಲರ ಹಾರೈಕೆ ನನ್ನೊಂದಿಗಿರಲಿ.

ನಿಮ್ಮೆಲ್ಲರಿಗೂ 2011 ಸುಖ, ಸಮೃದ್ಧಿಗಳನ್ನಷ್ಟೇ ತರದೆ ನಿಮ್ಮಿಂದ ಗರಿಷ್ಠ ಕೆಲಸವನ್ನು ತೆಗೆಸಲಿ ಎಂದು ಹಾರೈಸುತ್ತೇನೆ.

Proudly powered by Blogger
Theme: Esquire by Matthew Buchanan.
Converted by LiteThemes.com.