ಆಕಾಶವಾಣಿಯ ಕುರಿತು ಅಕ್ಕನೊಂದಿಗೊಂದು ಸಂವಾದ...





ಇವತ್ತಿನ ಜಿ.ವಿ.ಜಯಶ್ರೀ ಅವರ ಕಿಕ್ಕಿಂಗ್ ಕಾಲಮ್ಮಿನಲ್ಲಿ ಅಕ್ಕ! ಹೌದು ಆಕಾಶವಾಣಿಯ ಬಗ್ಗೆ ಎಂದಿನಂತೆ ತುಂಬಾ ಕಳಕಳಿಯಿಂದ ಆಸ್ಥೆಯಿಂದ ಮಾತಾಡಿದಾಳೆ ಅಕ್ಕ. ಜಿ.ವಿ. ಮೇಡಂನೋರೆ ತುಂಬಾನೆ ಥ್ಯಾಂಕ್ಸು. ಒಳ್ಳೆಯ ಅನ್ವರ್ಥ ಬಿರುದು ಕೊಟ್ಟಿದ್ದೀರಿ - ಬಾನುಲಿಯ ಮಧುರ ಕಂಠದ ಒಡತಿ ಬಿ.ಕೆ. ಸುಮತಿ! ಅಕ್ಕ ಖುಷ್ ಹುವಾ..ಇದು ಆದಿಲೋಕ, ಕನ್ನಡ ಬ್ಲಾಗಲೋಕದಲ್ಲಿ ನನ್ನದೇ ಒಂದು ಲೋಕ. ಇಲ್ಲಿ ನಾನು ಬರೆದಿರುವುದನ್ನು ಮಾತ್ರ ಪ್ರಕಟಿಸುತ್ತೇನೆ ಎಂದು ಶಪಥಗೈದಿದ್ದೆ. ಆದರೆ ನನ್ನ ಖುಷಿಯನ್ನು ಮತ್ತು ಒಂದು ಉತ್ತಮ ವಿಚಾರವನ್ನು ಕೂಡ ನನ್ನ ಬ್ಲಾಗಿನಲ್ಲಿ ಹಂಚಿಕೊಳ್ಳಬಹುದಲ್ಲವೇ? ಅದೂ ಕೂಡ ಆದಿಲೋಕದ ಭಾಗವೇ ಅಲ್ಲವೇ ಅನ್ನಿಸಿತು..ಹಾಗಾಗಿ ಇಲ್ಲಿ ಅಕ್ಕನ ಮಾತು, ಜಿ.ವಿ.ಯವರ ಲೇಖನಿಯಲ್ಲಿ..
ಜೊತೆಗೆ ನಾನು ಬಹು ದಿನಗಳಿಂದ ಚರ್ಚಿಸಬೇಕು ಎಂದುಕೊಂಡಿದ್ದ ಆಕಾಶವಾಣಿಯ ಬಗೆಗೆ ಅಕ್ಕನದು ಅತ್ಯಂತ authentic ಮತ್ತು passionate ಆದ ಧ್ವನಿ. ಅದು ಆಕಾಶವಾಣಿಯ ಧ್ವನಿ. ನನ್ನ ಚರ್ಚೆಯನ್ನು ಆಕಾಶವಾಣಿಯ ಒಡಲಾಳದ ಈ ಧ್ವನಿಯಲ್ಲಿ peg ಮಾಡುತ್ತಿದ್ದೇನೆ ಅಷ್ಟೇ.


ಓವರ್ ಟು ಜಿ.ವಿ.ಜಯಶ್ರೀ ಮೇಡಂ...

ಅಪರೂಪಕ್ಕೆ ಆಕಾಶವಾಣಿಯ ಉದ್ಘೋಷಕಿ ಬಿ.ಕೆ. ಸುಮತಿ ಜೊತೆಯಲ್ಲಿ ಮಾತಾಡುವ ಗಳಿಗೆ ಕೂಡಿ ಬಂತು. ಆಕೆ ಆಕಾಶವಾಣಿಯಲ್ಲಿರುವ ಸ್ವೀಟ್ ವಾಯ್ಸ್ ಆರ್ಜೆಗಳಲ್ಲಿ ಒಬ್ಬರು. ಅಪರೂಪಕ್ಕೊಮ್ಮೆ ಮೆಸೇಜ್ ಮಾಡುವ ಪರಿಪಾಟ ಇಟ್ಟು ಕೊಂಡಿದ್ದಾರೆ :-). ಒಟ್ಟಾರೆ ಬಾನುಲಿಯ ಮಧುರಕ೦ಠದ ಒಡತಿ. ಜಾಸ್ತಿ ಹೊಗಳ್ತಾ ಇದ್ದೀನಿ ಎಂದು ತಿಳಿ ಬೇಡಿ. ನನಗೆ ಮುಂಚಿನಿಂದಲೂ ಸುಮತಿಯ ಬಗ್ಗೆ ಇಷ್ಟ ಆಗುವ ಗುಣವೊಂದಿದೆ. ಅದು ನಿಷ್ಠೆ. ನಿಜ ಯಾಕೆ ಅಂದ್ರೆ ನನಗೆ ಪರಿಚಯ ಆದ ದಿನದಿಂದಲೂ ಆಕೆ ಹೇಳುವ ಮಾತು ಒಂದೇ ಮ್ಯಾಡಂ ನಮ್ಮ ಆಕಾಶವಾಣಿ ಬೆಂಗಳೂರು ಕೇಂದ್ರಕ್ಕೆ ಅದರದೇ ಆದ ಸಾಧನೆ ಇದೆ , ಇತಿಹಾಸವಿದೆ. ಆದರೆ ಅದು ಇತ್ತೀಚೆಗೆ ಬೇರೆ ಎಫೆಮ್ ವಾಹಿನಿಗಳ ಅಬ್ಬರಕ್ಕೆ ಮಸುಕಾಗ್ತಾ ಇದೆ. ಅಂದ್ರೆ ಅದರತ್ತ ಶ್ರೋತೃಗಳ ಗಮನ ಕಡಿಮೆ ಆಗ್ತಾ ಇದೆ. ಇದು ತುಂಬಾ ಬೇಸರದ ಸಂಗತಿ ಇದು ಆಕೆಯ ಮನದ ಮಾತು. 

ಮೊನ್ನೆ  ಇದ್ದಕ್ಕಿದ್ದ ಹಾಗೆ ಸುಮತಿ ಫೋನ್ ಬಂತು. ನಿಜ ಹೇಳ ಬೇಕೂಂತ ಅಂದ್ರೆ ನಾನು ಅದನ್ನು ನಿರೀಕ್ಷಿಸಿರಲಿಲ್ಲ. ಆದರೂ ಆಕೆಯೊಂದಿಗೆ  ನಾನು ನಡೆಸಿದ ಸಂಭಾಷಣೆಯನ್ನು ಇಲ್ಲಿ ಯಥಾವತ್ ಬರೆಯುತ್ತಿದ್ದೇನೆ. ಒಟ್ಟಾರೆ ಆಕೆಯ ಹಾಗೂ  ಆಕಾಶವಾಣಿ ಬಳಗದ ಕಳಕಳಿಯು ಆಕೆಯ ಮೂಲಕ ವ್ಯಕ್ತವಾಗಿದೆ ದಯಮಾಡಿ   ಓದಿ...ಸಂಬಂಧಿತರು ಇದರ ಬಗ್ಗೆ ಗಮನ ಹರಿಸಿದರೆ ರೇಡಿಯೋ ಕೇಂದ್ರಗಳ ಪಿತಾಮಹ ಆಕಾಶವಾಣಿಯ ಆರ್ಜೆಗಳ ಈ ಅಳಲಿಗೊಂದು ಉತ್ತರ ದೊರಕಬಹುದು, ದೊರಕಲಿ ಎನ್ನುವ  ಪ್ರಾಂಜಲ ಆಶಯ ಅವಧಿ,ಮೀಡಿಯ ಮೈಂಡ್ ಹಾಗೂ ನನ್ನದಾಗಿದೆ...




ಸಾಮಾನ್ಯವಾಗಿ ನಾನು ಕಂಡಂತೆ ನಮ್ಮ ಹಿರಿಯರು  ಮಾತ್ರವಲ್ಲ ನಾವು ಸಹ  ಪ್ರೀತಿಯಿಂದ ಕೇಳುತ್ತಿದ್ದ ಕೇಂದ್ರ ಆಕಾಶವಾಣಿ ಬೆಂಗಳೂರು. ಈಗಿನ ಎಫೆಮ್ಗಳು ಯಾವುದನ್ನು ಹೊಸದು ಎಂದು ಜನರಿಗೆ ಹೇಳ್ತಾ ಇದೆಯೋ ಅ ಕೆಲಸವು ಆಕಾಶವಾಣಿಯು ಈಗಾಗಲೇ ಬೇಕಾದಷ್ಟು ಸರ್ತಿ ಮಾಡಿದೆ, ಅದಕ್ಕಿಂತಲೂ ಅದು ಈ ವಾಹಿನಿಯ ಅತಿ ಹಳೆಯ ಕಾನ್ಸೆಪ್ಟ್.
ಆದರೆ ಅತ್ಯಂತ ಖೇದಕರ ಸಂಗತಿ ಅಂದ್ರೆ  ಇದು ಮೀಡಿಯಂ ವೇವ್ ನಲ್ಲಿಯೆ ಈಗಲೂ ಪ್ರಸಾರ ಆಗುವುದು. ಪರಿಣಾಮ ಕೇಳುಗ ಬಂಧುಗಳಿಗೆ ಶೀಘ್ರವಾಗಿ  ತಲುಪುತ್ತಿಲ್ಲ. ಇತ್ತೀಚೆಗೆ ಈ ಕೇಂದ್ರವು ಸುವರ್ಣ ಮಹೋತ್ಸವವನ್ನು ಆಚರಿಸಿತು.  ಕೇವಲ ಸಿನಿ ಗೀತೆಗಳು ಮಾತ್ರವಲ್ಲ ಭಕ್ತಿ ಗೀತೆ, ಭಾವಗೀತೆ, ವಾರ್ತೆಗಳು ( ಕನ್ನಡ, ಹಿಂದಿ, ಇಂಗ್ಲೀಷ್, ಸಂಸ್ಕೃತ...)ಪ್ರಸಾರ ಆಗುತ್ತದೆ.
ಕ್ರಿಯೇಟಿವಿಟಿಗೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೂವಿನ ಬಗ್ಗೆ ಅರ್ಧಗಂಟೆ ರೂಪಕ ಮಾಡಿ ಕೇಳುಗರ ಕೈಲಿ ಇಟ್ಟಿದ್ದೇವೆ  . ಅಂದ್ರೆ ವಿಷಯ ಇಂತಹುದೇ ಆಗಿರ ಬೇಕು ಎನ್ನುವ ಅಗತ್ಯವಿಲ್ಲ ಕೊಟ್ಟ ವಿಷಯದಲ್ಲಿ  ಸುಂದರ ಮಾಲೆ ಕಟ್ಟುವ ಬುದ್ಧಿಮತ್ತೆ ಈ ಗ್ರೂಪಿಗಿದೆ.
ಹೆಮ್ಮೆಯಿಂದ ಹೇಳುವ ಸಂಗತಿಗಳೆಂದರೆ  ಈ ಕೇಂದ್ರದಲ್ಲಿ ದ.ರಾ . ಬೇಂದ್ರೆ, ಕುವೆಂಪು,ಧ್ವನಿ ಮುದ್ರಣ ಇದೆ. . ಅಷ್ಟೆ ಅಲ್ಲದೆ  ಶಿವರಾಮ ಕಾರಂತರ ಮಾಲಿಕೆ, ಬೇಂದ್ರೆಯವರು ಕಾವ್ಯವಾಚನ ಮಾಡಿರುವ  ಮುದ್ರಿತ ಮಾಲಿಕೆಯು ಸಹ ಈ ಕೇಂದ್ರದಲ್ಲಿದೆ. ಅಡಿಗರ ಭೂಮಿಗೀತ ಬಂದಿದ್ದೆ ಆಕಾಶವಾಣಿಯಿಂದ. ಮುಖ್ಯವಾಗಿ ಆಕಾಶವಾಣಿಯು ಇಂತಹ ಅನೇಕ ಕಾನ್ಸೆಪ್ಟ್ ಗಳನ್ನು ನೀಡಿ ಕವಿಗಳ, ಲೇಖಕ , ನಾಟಕಕಾರರ ಕೈಲಿ  ಬರಿಸುವ ಪರಿಪಾಟ ಇಲ್ಲಿತ್ತು.
ಗೀತಾರಾಧನ,ಚಿಂತನ,ರೇಡಿಯೋ ಡಾಕ್ಟರ್,ಕನ್ನಡ ಭಾರತಿ, ಯುವವಾಣಿ,ಕೃಷಿರಂಗ, ಬಾಲವಿಹಾರ ...! ಹೀಗೆ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದೆ. ವಿಷಾದ ಅಂದ್ರೆ ಈ ಮೀಡಿಯಂ  ವೇವ್  ನಲ್ಲಿಯೇ ಆಕಾಶವಾಣಿಯ ಉದ್ಘೋಷಕರು  ಕಾರ್ಯಕ್ರಮ ನಡೆಸಿ  ಕೊಡುವುದು . ಆದರೆ ಅವರ ಈ ಪ್ರತಿಭೆ ಕೇಳುಗರ ಮನಕ್ಕೆ ತಲುಪುತ್ತಿಲ್ಲ, ಕಾರಣ ಮೀಡಿಯಂ ವೇವ್!
ಒಂದರ್ಥದಲ್ಲಿ ಅಪರೂಪದ ಆರ್ಜೆಗಳ ಪ್ರತಿಭೆಯು  ಈ ರೀತಿ ಕಳೆಗುಂದುತ್ತಿದೆ. ಇದನ್ನು ಸರಿ ಮಾಡುವ ಶಕ್ತಿ ಇರುವುದು ಕೇಂದ್ರ ಸರ್ಕಾರಕ್ಕೆ. ಎಫೆಮ್ ಜೊತೆ ನಮ್ಮ ಕಾರ್ಯಕ್ರಮಗಳನ್ನು ಮಿಳಿತ ಮಾಡಿದರೆ ಆಗ  ನಮ್ಮ ಶ್ರಮಕ್ಕೊಂದು ಬೆಲೆ ಸಿಗುತ್ತದೆ. ಇದರ ಬಗ್ಗೆ ಸಂಬಂಧಿತರ ಬಳಿ ನಾವು ಕೇಳಿಕೊಳ್ಳುತ್ತಲೇ ಬಂದಿದ್ದೇವೆ, ಆದರೆ ಅವರು ಇದರತ್ತ ಅಷ್ಟೇನೂ ಗಮನ ಹರಿಸಿಲ್ಲ.
ಇನ್ನೊಂದು ಅತಿ ಮುಖ್ಯ ಸಂಗತಿ ಅಂದ್ರೆ ಈಗೇನು ಉತ್ತಮ ಆರ್ಜೆಗಳು ಎನ್ನುವ ಹೆಸರು ಪಡೆದಿದ್ದಾರೋ ಅವರು ಒಮ್ಮೆ ಈ ಮೀಡಿಯಂ ವೇವ್ ನ ಬೆಂಗಳೂರು ಆಕಾಶವಾಣಿ ಯತ್ತ  ಕಿವಿ ಇಟ್ಟರೆ ಕಲಿಯುವ ಸಂಗತಿಗಳು ಸಾಕಷ್ಟಿವೆ. ಇದು ಅಹಂಕಾರದ ಮಾತಲ್ಲ, ಅನುಭವದಿಂದ ಹೇಳುತ್ತಿರುವ ಮಾತು ! ಕನ್ನಡ ಕಾಮನ ಬಿಲ್ಲು  ನಲ್ಲಿ ನಮಗೆ ಸಿಗುವ ಅವಕಾಶ ಅತಿ ವಿರಳ, ಆದ್ರೆ ಅತ್ಯಂತ ಹೆಚ್ಚು ಕಾರ್ಯಕ್ರಮ ಕೊಡುವ ಮೀಡಿಯಂ ವೇವ್ ವಿಷಯದಲ್ಲಿ ಸಂಬಂಧಿತರು ಗಮನ ಹರಿಸಿದರೆ ನಿಜಕ್ಕೂ ಈಗ ಅನೇಕ ಸಂಗತಿಗಳನ್ನು ಮಿಸ್ ಮಾಡಿ ಕೊಳ್ಳುತ್ತಿರುವ ಕೇಳುಗರು ಅದನ್ನು ಈ ಮೂಲಕ ಪಡೆಯ ಬಹುದು.... 
ಇದು ಸುಮತಿ ಸೇರಿದಂದೆ ಆಕೆಯ ಸಹೋದ್ಯೋಗಿಗಳ ಮನದ ಮಾತು. ಅವರ ಆಶಯ ನೆರವೇರಲಿ ಇದು ನಮ್ಮ ಮನದ ಮಾತು.... over and out. 
ಏನನ್ನಿಸಿತು? ಇಲ್ಲಿ ಕಾಣುತ್ತಿರುವುದು marketing ನ ಥಳುಕು ಬಳುಕಿನಲ್ಲಿ ಪ್ರಭೆ ಕಳೆದುಕೊಂಡಿರುವ ಆಕಾಶವಾಣಿ. ಅಲ್ಲಿನ ಉತ್ಕೃಷ್ಟ ಪ್ರತಿಭೆಗಳ creative suffocation! 

ಅಕ್ಕ ಮೇಲೆ ಹೇಳಿರುವ ಆಕಾಶವಾಣಿಯ ಹಿರಿಮೆಗಳ ಹಿನ್ನೆಲೆಯಲ್ಲಿಯೇ ನಮ್ಮ ಸರಕಾರೀ ಒಡೆತನದ ವಾಹಿನಿಗಳಿಗೆ ಬೆಲೆ. ಆದರೆ ಅಲ್ಲಿನ ವ್ಯವಸ್ಥೆ ಆಶಾದಾಯಕವಾಗಿವೆಯೇ? ಇಲ್ಲಿ ಎರಡು ವ್ಯವಸ್ಥೆಗಳಿವೆ. ಒಂದು ಎಫ್ಫೆಮ್ ವಾಹಿನಿಗಳು ಮತ್ತೊಂದು ಮೀಡಿಯಂ ವೇವ್! ಅಕ್ಕ ಮಾತಾಡಿರುವ ನಿನ್ನೆಯ ಆಕಾಶವಾಣಿ, ಆ ಪರಂಪರೆಯಿರುವುದು ಇದೇ ಮೀಡಿಯಂ ವೇವ್ ಬ್ಯಾಂಡ್ನಲ್ಲಿ. ಅದೇ ನಿಜವಾದ ಆಕಾಶವಾಣಿ. ನಿಜ ಹೇಳಿ ಎಷ್ಟು ಜನ ಮೀಡಿಯಂ ವೇವ್ ಅನ್ನು ಕೇಳುತ್ತಿದ್ದೀರಿ? ನನ್ನ ಮ್ಯುಸಿಕ್ ಸಿಸ್ಟಂನಲ್ಲಿ ಮೀಡಿಯಂ ವೇವ್ ಹಾಕಿದರೆ ಘಶ್ ಎಂಬ ಶಬ್ದ ಬಿಟ್ಟರೆ ಬೇರೇನೂ ಬರುವುದಿಲ್ಲ! ಇಂದಿನ ಎಷ್ಟೋ ರೇಡಿಯೋ ಸೆಟ್ಗಳಲ್ಲಿ ಎಫ್ಫೆಮ್ ಬ್ಯಾಂಡ್ ಮಾತ್ರ ಇರುತ್ತದೆ! ಜನರ ನಡುವೆಯೂ ಆಕಾಶವಾಣಿಯಲ್ಲೂ ಈ ಮೀಡಿಯಂ ವೇವ್ ನೆಡೆಗಿರುವುದು ಅಕ್ಷರಶಃ ಮಲತಾಯಿ ಧೋರಣೆ! ಯಾವುದೇ ಕಲಾವಿದನಿಗೆ ಪ್ರೇಕ್ಷಕ ಮುಖ್ಯ. ಹಾಗಾಗಿ ಮೀಡಿಯಂ ವೇವ್ ನಲ್ಲಿ ದುಡಿಯುತ್ತಿರುವ ಅಕ್ಕನಂತಹ ಅದ್ಭುತ ಪ್ರತಿಭೆಗಳಿಗೆ ಕಾರಕೂನಿಕೆ ಮಾಡಿದ ಹಾಗನಿಸುತ್ತದೆ. they are suppressed and deppressed! ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಮೀಡಿಯಂ ವೇವ್ ಏಕೆ ಹೀಗಾಗಿ ಹೋಯಿತು?

ಇವತ್ತಿನ ಈ ಅವಸ್ಥೆಗೆ ಮುಖ್ಯ ಕಾರಣ - commercialisation of the radio broadcast! ಇವತ್ತು ರೇಡಿಯೋ ವಾಹಿನಿಗಳು ಒಂದು business enterprise! ಈವತ್ತು ಈ ಎಲ್ಲ ವಾಹಿನಿಗಳು ವಾಣಿಜ್ಯ ಉದ್ದಿಮೆಗಳಾಗಿದ್ದು ಲಾಭ ಗಳಿಕೆಯೊಂದೇ ಅವುಗಳ ಮೂಲ ಉದ್ದೇಶವಾಗಿರುವುದು ಸ್ಪಷ್ಟ.  ನಿಮಗೆ ಅಚ್ಚರಿಯಾಗಬಹುದು ನಮ್ಮ ಸರಕಾರೀ ವಾಹಿನಿಗಳು ಕೂಡ ಇದಕ್ಕೆ ಹೊರತಾಗಿಲ್ಲ! ಅದಕ್ಕೆ ಒಂದು ಹಿನ್ನೆಲೆಯಿದೆ. 

ಮೊದಲಿಗೆ ಈ ಆಕಾಶವಾಣಿ ಮತ್ತು ದೂರದರ್ಶನಗಳು ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಡಿ ಬರುತ್ತಿದ್ದವು. ಆಗ ಅಸಲಿಗೆ ಪ್ರಸಾರವೆನ್ನುವುದು ಒಂದು ವಾಣಿಜ್ಯ ಕಾರ್ಯಕ್ರಮ ಎಂತಲೇ ಪರಿಗಣಿಸಲಾಗುತ್ತಿರಲಿಲ್ಲ. ಸರ್ಕಾರ ತನ್ನ ಎಲ್ಲ ವಾಹಿನಿಗಳಿಗೂ ಅವುಗಳ ಕಾರ್ಯಕ್ರಮಗಳ ನಿರ್ಮಾಣಕ್ಕೂ ಗ್ರಾಂಟ್ಸ್ ನೀಡುತ್ತಿದ್ದವು. ಹಾಗಾಗಿ ವಾಹಿನಿಗಳು ಜಾಹೀರಾತುದಾರರು, ಆಡ್ ರೆವಿನ್ಯೂ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಕಾರ್ಯಕ್ರಮಗಳಲ್ಲಿ ಲಾವಣ್ಯವಿತ್ತು, ಪ್ರಯೋಗಗಳು ನಡೆಯುತ್ತಿದ್ದವು. It was considered to be social duty. ಅಲ್ಲೊಂದು ಮೋಟೋ ಇತ್ತು. ಹಳ್ಳಗಳ ಕಟ್ಟಕಡೆಯ ಮನುಷ್ಯನಿಗೂ ತಲುಪುವ, ಆತನನ್ನು ರಂಜಿಸುವ ಆ ಮೂಲಕವೇ ಆತನನ್ನು educate ಮಾಡುವ ಗುರಿಯಿತ್ತು. ಪ್ರಸಾರ ಸಾಗುತ್ತಿದ್ದ ಹಾದಿಯದು. ಆದರೆ ಬರಬರುತ್ತ ೮೦ರ ದಶಕದ ಉತ್ತರಾರ್ಧದಲ್ಲಿ ದೂರದರ್ಶನ ನಿಧಾನವಾಗಿ ನಗರ ಕೇಂದ್ರಿತವಾಗುತ್ತಾ ಹೋಯಿತು. commercialisation ನುಸುಳಲಾರಂಭಿಸಿತು. 

ಇದು ಒಂದು ಕಡೆಗಾದರೆ, ೯೦ರ ದಶಕದ ಪ್ರಾರಂಭದಲ್ಲಿ ಈ ದೂರದರ್ಶನ ಮತ್ತು ಆಕಾಶವಾಣಿಗಳ ಮೂಲ ವ್ಯವಸ್ಥೆಯಲ್ಲಿಯೇ ಆಮೂಲಾಗ್ರ ಬದಲಾವಣೆ ಬಂದಿತು. ನಮ್ಮ ದೂರದರ್ಶನ ಆಕಾಶವಾಣಿಗಳು ಸರ್ಕಾರದ ಒಡೆತನ ಮತ್ತು ಸುಪರ್ದಿಯಲ್ಲಿರುವುದರಿಂದ ಅವುಗಳಿಗೆ ಸ್ವಾತಂತ್ರ್ಯವಿಲ್ಲ. ಅವುಗಳನ್ನು ಸತತ ಸರ್ಕಾರಗಳು ತಮ್ಮ propaganda ಗೆ ಬಳಸಿಕೊಳ್ಳುತ್ತಿವೆ, ಹಾಗಾಗಿ ಈ ಸಂಸ್ಥೆಗಳನ್ನು ಒಂದು ಸ್ವತಂತ್ರ ಸಂಸ್ಥೆಯಡಿ ತಂದು ಸರ್ಕಾರಗಳ ಕಪಿಮುಷ್ಟ್ಹಿಯಿಂದ ಈ ಸಂಸ್ಥೆಗಳನ್ನು ಬಿಡಿಸಬೇಕೆಂಬ ಕೂಗು ತಾರಾಸ್ಥಾಯಿಯನ್ನು ಮುಟ್ಟಿತ್ತು. ಇದು ವಾಸ್ತವದಲ್ಲಿ ಕಾಂಗ್ರೆಸ್ ವಿರುದ್ಧ anti congress camp ಮಾಡಿದ ಆರೋಪವಾಗಿತ್ತು. ಇದೇ anti-congress planck ನ ಮೇಲೆ ೯೦ರ ದಶಕದ ಆರಂಭದಲ್ಲಿ ಅಧಿಕಾರ ಹಿಡಿದ, ವಿ.ಪಿ.ಸಿಂಗರ ಸರ್ಕಾರ ಪ್ರಸಾರಭಾರತಿ ಬಿಲ್ಲನ್ನು ತರುವ ಮೂಲಕ ದೂರದರ್ಶನ ಮತ್ತು ಆಕಾಶವಾಣಿಗಳನ್ನು ಪ್ರಸಾರಭಾರತಿ ಎಂಬ autonomous ಸಂಸ್ಥೆಯಡಿ ತಂದರು. ಇದರ ಉದ್ದೇಶ ಒಳ್ಳೆಯದೇ ಇತ್ತು. ಆದರೆ...

ಇದಾದ ಒಂದೆರಡು ವರ್ಷಗಳಲ್ಲಿಯೇ ಭಾರತದ collective social psyche ನಲ್ಲಿಯೇ ಅತ್ಯಂತ ವೇಗವಾಗಿ ಕಂಡು ಕೇಳರಿಯದ ಬದಲಾವಣೆಯಾಗಿ ಹೋಯಿತು. ಭಾರತ ತನ್ನ ದಿಡ್ಡಿ ಬಾಗಿಲುಗಳನ್ನು ತೆರೆದು ಕೂತಿತು. liberalisation changed both the geographical and psychic landscapes of this nation. ಅದೇ ಸಂಧರ್ಭದಲ್ಲಿ ಸರ್ಕಾರ ಈ ಸಂಸ್ಥೆಗಳನ್ನು ಬಿಟ್ಟು ಕೈತೊಳೆದು ಕೊಂಡುಬಿಟ್ಟಿತು. ಅಷ್ಟರಲ್ಲಿ ಬಂದೆರಗಿದ್ದು ಎಫ್ಎಂ ಕಂಪಾನಾಂಕಗಳು. 

1991ರ ಲಿಬರಲೈಸೇಷನ್ನ ನಂತರ ಖಾಸಗೀ ಟಿವಿ ಛಾನೆಲ್ಗಳು ಹಾವಳಿಯಿಟ್ಟ ಮೇಲಂತೂ ರೇಡಿಯೋವನ್ನು ಕೇಳುವವರೇ ಇಲ್ಲದಂತಾಗಿತ್ತು. ಆದರೆ 2000 ದಿಂದೀಚೆಗೆ ಸರ್ಕಾರ ಖಾಸಗೀ ಎಫ್ಎಂ ಛಾನೆಲ್ಗಳಿಗೆ ಅವಕಾಶ ನೀಡತೊಡಗಿದ ಮೇಲೆ ಮತ್ತೆ ರೇಡಿಯೋದ ಕಲರವ ಶುರುವಾಯಿತು ನೋಡಿ. 2000ನಲ್ಲಿ ಭಾರತದ ಐಟಿ ಉದ್ಯಮ ಉಚ್ಛ್ರಾಯದಲ್ಲಿತ್ತು. ಭಾರತ ಪ್ರಕಾಶಿಸುತ್ತಿತ್ತು. ಈ ಐಟಿ ಉದ್ಯಮ ನಮ್ಮ ನಗರಗಳ ಲ್ಯಾಂಡ್ಸ್ಕೇಪ್ಗಳನ್ನು ಗುರುತೇ ಸಿಗಲಾರದಂತೆ ಬದಲಿಸಿಬಿಟ್ಟಿತು. ಭಾರತ ತನ್ನ ಫೋಕಸ್ ಅನ್ನು ಹಳ್ಳಿಗಳಿಂದ ನಗರಗಳಿಗೆ ಬದಲಿಸಿಕೊಂಡಿತ್ತು. ಇದೆಲ್ಲವೂ ಕೂಡಿ ಒಂದು ನವ ವರ್ಗವನ್ನೇ ಹುಟ್ಟುಹಾಕಿತು. ಇದೇ ಕಾಲಘಟ್ಟದಲ್ಲಿ ಭಾರತದಲ್ಲಿ ಒಂದು ಮ್ಯೂಸಿಕ್ ರೆವಲ್ಯೂಷನ್ ಕೂಡ ನಡೆದಿತ್ತು. ಎಲ್ಲವೂ ಕೂಡಿ ಬಂದಿತ್ತು. ಎಫ್ಎಂ ಪ್ರಕಂಪನಗಳನ್ನು ಸೃಷ್ಟಿಸತೊಡಗಿತು. ಹೀಗೆ ನಗರ ಕೇಂದ್ರಿತ ಕೇಳುಗರಿಗೆಂದೇ ಪ್ರಾರಂಭಗೊಂಡದ್ದು ಎಫ್ಎಂ ವಾಹಿನಿಗಳು. ನಗರಗಳ ಗಿಜಿಗುಡುವಿಕೆ, ಟ್ರಾಫಿಕ್ ಜಾಮ್ಗಳು ಕೂಡ ಈ ವಾಹಿನಿಗಳ ಯಶಸ್ಸಿಗೆ ಸಾಕಷ್ಟು ಕಾಣ್ಕೆ ಸಲ್ಲಿಸಿವೆ. ಇಂದು ಬೆಂಗಳೂರೊಂದರಲ್ಲೇ 10 ಎಫ್ಎಂ ವಾಹಿನಿಗಳಿವೆ. ಆಪ್ ಸುನ್ ರಹೀ ಹೈ ವಿವಿಧಭಾರತಿ.., ಆಕಾಶವಾಣಿ ವಾಣಿಜ್ಯ ಪ್ರಸಾರ ಕೇಂದ್ರ...ಈ ಇಂಪಾದ ಧ್ವನಿಗಳ ಕಾಲ ಮುಗಿದಿದೆ. ಈ ಧ್ವನಿಗಳನ್ನು ಖಾಸಗಿ ವಾಹಿನಿಗಳ ಆರ್ಜೆಗಳ ವಟಗುಟ್ಟುವಿಕೆ replace ಮಾಡಿಬಿಟ್ಟಿತು. 

ಮೊನ್ನೆ ಒಂದು ತಿಂಗಳ ಹಿಂದೆ ಇಡಿಯ ಆಕಾಶವಾಣಿ ನೌಕರರ ವರ್ಗ ಸತತ ಎರಡು ದಿನಗಳ ಕಾಲ ಧರಣಿ ಕೂತಿದ್ದರು. ಆಕಾಶವಾಣಿ ಮೂಕವಾಗಿತ್ತು! ಇದು ಐತಿಹಾಸಿಕವೇ ಸರಿ. ಆಕಾಶವಾಣಿಯನ್ನು ವಾರ್ತಾ ಮತ್ತು ಪ್ರಸಾರ ಇಲಾಖೆಗೆ ವರ್ಗಾಯಿಸಿ ಎಂಬುದು ಬೇಡಿಕೆ. ಆದರೆ ಸರ್ಕಾರ ಇತ್ತ ತಿರುಗಿ ಕೂಡ ನೋಡಲಿಲ್ಲ. ಸರ್ಕಾರಕ್ಕೆ ಇವತ್ತು ಆಕಾಶವಾಣಿ ಒಂದು ಹೊರೆ! ಅವರಿಗೆ ನೀವು ಬೇಡವಾಗಿದ್ದೀರಿ. ಇನ್ನು ಜನ. ಇದು ಸಾರ್ವಜನಿಕರ ಗಮನಕ್ಕೆ ಕೂಡ ಬಾರದೆ ಹೋಯಿತೇ? ಎರಡು ದಿನ ಆಕಾಶವಾಣಿ ಮೂಕವಾಗಿದ್ದನ್ನು ಗುರುತಿಸಿದವರೆಷ್ಟು ಜನ? ಅಲ್ಲಿಗೆ ಜನರಲ್ಲಿ ಆಕಾಶವಾಣಿಗಿರುವ ಪ್ರಸ್ತುತ ಸ್ಥಾನಮಾನವೇನು? 

ಅಕ್ಕ ಎಫ್.ಎಂ. ಕಾರ್ಯಕ್ರಮಗಳೊಂದಿಗೆ ನಮ್ಮ ಕಾರ್ಯಕ್ರಮಗಳನ್ನು ಮಿಳಿತಗೊಳಿಸಿದರೆ ನಮ್ಮ ಶ್ರಮಕ್ಕೆ ಒಂದು ಬೆಲೆ ಸಿಗುತ್ತದೆ ಎಂಬ ನಿನ್ನ ಮಾತಿನಲ್ಲಿ ನನಗೆ ಕಾಣಿಸುವುದು ಪ್ರೇಕ್ಷಕರಿಲ್ಲದ ರಂಗದ ಮೇಲಿನ ನಟನೊಬ್ಬನ ಹತಾಶೆ, ಮತ್ತು ಅಲ್ಲೆಲ್ಲೋ ಪ್ರೇಕ್ಷಕರನ್ನು ಪಡೆಯಬಹುದೆಂಬ ಉತ್ಸಾಹ. ಆದರೆ ಇವತ್ತು ಎಫ್.ಎಂ. ಕನ್ನಡ ಕಾಮನಬಿಲ್ಲಿನಲ್ಲಾದರೂ ಉತ್ತಮ ವಾತಾವರಣವಿದೆಯೇ? 

ಈಗ್ಗೆ ಕೆಲವು ವರ್ಷಗಳಿಂದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ತನ್ನ ಎಫ್ಎಂ ವಾಹಿನಿಗಳ ಕಾರ್ಯಕ್ರಮ ನಿರ್ಮಾಣಕ್ಕೆ ಪೂರ್ಣ ಪ್ರಮಾಣದ ಗ್ರಾಂಟ್ಸ್ ಅನ್ನು ಕೊಡುತ್ತಿಲ್ಲ. ಬದಲಿಗೆ ಅರ್ಧದಷ್ಟನ್ನು ಮಾತ್ರ ನೀಡುತ್ತಿದೆ. ಮಿಕ್ಕರ್ಧವನ್ನು ಈ ವಾಹಿನಿಗಳು, ಕಾರ್ಯಕ್ರಮಗಳ ನಿರ್ಮಾಪಕರು ಜಾಹೀರಾತುದಾರರನ್ನು ಹಿಡಿದು ಸಂಪಾದಿಸಿಕೊಡಬೇಕಿದೆ. ಸರಕಾರೀ ವಾಹಿನಿಗಳನ್ನು ಯಾರೂ ಕೇಳುವುದಿಲ್ಲ ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಆಳವಾಗಿ ಬೇರೂರಿರುವುದರಿಂದ ಯಾವುಧೇ ಖಾಸಗೀ ಕಂಪೆನಿಗಳು ಈ ವಾಹಿನಿಗಳಿಗೆ ಜಾಹೀರಾತು ನೀಡುವುದಿಲ್ಲ. ಈಗ ಈ ವಾಹಿನಿಗಳಲ್ಲಿರುವ ಪ್ರತಿಭಾವಂತರಿಗೆ ಇರುವ ಆಯ್ಕೆಗಳು ಎರಡು. ಒಂದು ಖಾಸಗೀ ವಾಹಿನಿಗಳೊಂದಿಗೆ ಸ್ಪರ್ಧಿಸಿ ಗೆಲ್ಲಬೇಕು. ಅದಕ್ಕಾಗಿ ಅವರ ಸಂಸ್ಕೃತಿಯನ್ನು ಅಪ್ಪಿಕೊಳ್ಳಬೇಕು. ಇದನ್ನು ಮಾಡಲಿಚ್ಛಿಸದವರು ಸುಮ್ಮನಿರಬೇಕು. ಹಾಗಾಗಿ ಬರಬರುತ್ತಾ ಸರಕಾರೀ ಒಡೆತನದ ಎಫ್ಎಂ ವಾಹಿನಿಗಳಲ್ಲೂ ಕೂಡ ಪ್ರಯೋಗಗಳು, ಫೀಚರ್ ಕಾರ್ಯಕ್ರಮಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಅಲ್ಲೂ ಮಾತು-ಹಾಡು ಮನೆ ಕಟ್ಟತೊಡಗಿದೆ.

ಇದೆಲ್ಲದರ ನಡುವೆ ಎಲ್ಲಿಯ ಮೀಡಿಯಂ ವೇವ್ ಅಕ್ಕ? ಜಾಗತೀಕರಣದ ಸುಳಿಯಲ್ಲಿ ಕೇಳುಗರಿಗೆ ಹೆಚ್ಚಿನ  choice ಗಳನ್ನು ನೀಡುತ್ತೇವೆ ಎಂದು ಅವರಿಗೆ mediocrity ಯನ್ನು ಉಣಬಡಿಸಿ, ಅವರನ್ನು choiceless ಆಗಿ ಮಾಡಿರುವ ದುರಂತವಿದು. ಇದು ಆಕಾಶವಾಣಿಯೊಂದೇ ಅಲ್ಲ...ಎಲ್ಲ ರಂಗಗಳಲ್ಲೂ ಇದನ್ನು ನಾವು face ಮಾಡುತ್ತಿದ್ದೇವೆ. ಇದು ಈ ಕಾಲಘಟ್ಟದ ತಲೆಮಾರಿನ ಬಹುದೊಡ್ಡ ತಲ್ಲಣ. 

Proudly powered by Blogger
Theme: Esquire by Matthew Buchanan.
Converted by LiteThemes.com.