ಮೂರ್ತಿಗಳಿಗೆ 80!

ಮೂರ್ತಿಗಳಿಗೆ 80! ಹೌದು ಡಾ. ಯು. ಆರ್. ಅನಂತಮೂರ್ತಿಯವರಿಗೆ ಇವತ್ತಿಗೆ 80 ವಸಂತಗಳು. ಇನ್ನೂ ಸಾಕಷ್ಟು ದಿನ ಅವರು ನಮ್ಮೊಡನಿದ್ದು ನಮ್ಮನ್ನು ಮುನ್ನಡೆಸಲಿ ಎಂಬ ಹಾರೈಕೆ ನನ್ನದು.

ಒಬ್ಬ ಬರಹಗಾರ, ಚಿಂತಕನಿಂದ ನಾವು ನಿರೀಕ್ಷಿಸುವುದೇನು? ಒಳ್ಳೆಯ ಸಾಹಿತ್ಯ, ವಿದ್ಯುತ್ ಪೂರ್ಣ ಲೇಖನಗಳು,..ಇದನ್ನು ಬಹಳಷ್ಟು ಜನ ಮಾಡುತ್ತಲೂ ಇದ್ದಾರೆ. ಆದರೆ ಇವೆಲ್ಲಕ್ಕಿಂತಲೂ ಮಿಗಿಲಾಗಿ ನಮ್ಮ ಸಮಾಜದ ಸ್ಥಿತ್ಯಂತರಗಳು, ನಮ್ಮಲ್ಲಿ ಮೂಡುವ ತಲ್ಲಣಗಳಿಗೆ ಒಬ್ಬ ಚಿಂತಕ-ಬರಹಗಾರ ಧ್ವನಿಯಾಗಬೇಕು. ಆತ ರೆಡಿಮೇಡ್ ಉತ್ತರಗಳನ್ನು ಕೊಡದಿದ್ದರೂ ಪರವಾಗಿಲ್ಲ, ಕೊಡಕೂಡದು ಕೂಡ. ಆದರೆ ಆತ ನಮ್ಮ ತಲ್ಲಣಗಳಿಗೆ ಧ್ವಿನಿಯಾಗಬೇಕು, ಆ ವಿಷಯದಲ್ಲಿ ಹೊಸ ಹೊಳಹುಗಳನ್ನು ಕೊಡಬಲ್ಲವನಾಗಿರಬೇಕು. ನಮ್ಮ ಉತ್ತರಗಳನ್ನು ನಾವು ಕಂಡುಕೊಳ್ಳುವ ಅನ್ವೇಷಣೆಯ ಹಾದಿಯಲ್ಲಿ ಮಿಂಚಿನ ಹುಳುವಿನಂತಿರಬೇಕು! ಒಬ್ಬ ಬರಹಗಾರ ಸಮಾಜದೊಂದಿಗೆ ಒಂದು ನಿರಂತರ ಸಂವಾದದಲ್ಲಿ ತೊಡಗಿರಬೇಕು.

ಈ ಹಿನ್ನೆಲೆಯಲ್ಲಿ ನೋಡಿದಾಗ ಅನಂತಮೂರ್ತಿಗಳು ನಮ್ಮನಡುವಿರುವ ಅತ್ಯಂತ ಮುಖ್ಯ ಚಿಂತಕರೆನಿಸುತ್ತಾರೆ. ಒಂದು ಕಡೆ ಮಾರುಕಟ್ಟೆ, ಮತ್ತೊಂದು ಕಡೆ ಮಾರುಕಟ್ಟೆ ಪ್ರೇರಿತ ಆಡಳಿತವೇ ಇಲ್ಲದ ಆಳ್ವಿಕೆಗಳು, ಹೆಣಗಾಡುತ್ತಿರುವ ಬಡವರು, ಕೋಮುವಾದ, ಭಯೋತ್ಪಾದನೆ, ಹಿಂಸೆ, ಸ್ಟೇಟ್ ಟೆರರಿಸಂ, ಕನ್ನಡದ ಸಂಸ್ಕೃತಿಯ ಮೇಲೆ ಇಂಗ್ಲೀಷಿನ ದಬ್ಬಾಳಿಕೆ, ಯಶಸ್ಸಿನ ಅಪವ್ಯಾಖ್ಯಾನಗಳು, ಅದರಿಂದ ಸಮಾಜದಲ್ಲಿನ ಏರುಪೇರುಗಳು, ಎಸ್.ಇ.ಜೆಡ್.ಗಳು, ಭೂತಾಯಿಯ ಮೇಲೆ ಅವಿರತ ಅತ್ಯಾಚಾರ..ಈ ಎಲ್ಲವೂ ನಮ್ಮಲ್ಲಿನ ಇಂದಿನ ತಲ್ಲಣಗಳು. ನಮ್ಮಲ್ಲಿನ ತಲ್ಲಣಗಳನ್ನು ಮಗುವಿನ ಮನಸ್ಸನ್ನರಿತ ಅಮ್ಮನಂತೆ ಮೂರ್ತಿಗಳು ತಮ್ಮ ವಿಶಿಷ್ಟ ಹೊಳಹುಗಳೊಂದಿಗೆ ಧ್ವನಿಯಾಗುತ್ತಾರೆ. ಸಮಾಜದೊಂದಿಗೆ ಅವರ ಸಂವಾದ-ಜಗಳ ನಿರಂತರ. ಆ ಸಂವಾದದಲ್ಲೂ ಒಂದು ವಿಶಿಷ್ಟತೆಯಿದೆ. ಇಂದಿನ ದಿನಮಾನಸದಲ್ಲಿ ನಮ್ಮ public discourse ತೀರಾ polarised ಆಗಿಬಿಟ್ಟಿದೆ. ಪ್ರತಿಯೊಬ್ಬರೂ ತುದಿಗಳಿಗೆ ಹೋಗಿ ತಮ್ಮ ನಿಲುವನ್ನು ಸಮರ್ಥಿಸಲು ಅಸಲನ್ನು ಉತ್ಪ್ರೇಕ್ಷಿಸಿ extreme ಆದ ಹೇಳಿಕೆಗಳನ್ನು ನೀಡುತ್ತಾರೆ. ನಮ್ಮ ಮಾಧ್ಯಮ, ಮುಖ್ಯವಾಗಿ ವಿದ್ಯುನ್ಮಾನ ಮಾಧ್ಯಮಕ್ಕೆ ಬೇಕಿರುವುದು ಇದೇ - ಡ್ರಾಮಾ - ಹಾಗಾಗಿ ಇದನ್ನು ಮತ್ತಷ್ಟು ಉತ್ಪ್ರೇಕ್ಷಿಸುತ್ತವೆ. ಚರ್ಚೆ ಹೋಗಿ polemics ಆಗಿಬಿಡುತ್ತಿದೆ. ಇದಕ್ಕೆ ಅರುಂಧತಿ ರಾಯ್ ಉತ್ತಮ ಉದಾಹರಣೆಯಾಗಬಲ್ಲಳು. ಇವತ್ತು ನಮಗೆ ಬೇಕಿರುವುದು a sane voice, espousing the golden mean. ಮೂರ್ತಿಗಳು ಆ ಗೋಲ್ಡನ್ ಮೀನ್! ಅವರಲ್ಲಿ thesis ಮತ್ತು anti-thesis ನ ಒಂದು synthesis ಇದೆ. ಅದು ಅಮಾರ್ತ್ಯ ಸೇನ್ ಅವರ argumentative indian ಪರಂಪರೆಯದು. ಅವರಲ್ಲಿ ಗಾಂಧೀ, ಲೋಹಿಯಾ ಮಿಳಿತಗೊಂಡಿದ್ದಾರೆ.  ಗಾಂಧಿಯನ್ನು ಇಂದಿಗೆ relevant ಆಗುವಂತೆ interpret ಮಾಡುವರಲ್ಲಿ ಪ್ರಮುಖರು. ಇಂದಿಗೆ ಬೇಕಿರುವುದು ಗಾಂಧೀ ನೆಹರೂ ಅಲ್ಲ.

ಮೂರ್ತಿಗಳು ಕೊಂಚ enigmatic ಕೂಡ. ಕೆಲವರು ಅವರನ್ನು ದ್ವಂದ್ವ ಮೂರ್ತಿ ಅಂತಾರೆ. ಆದರೆ ಅದು ದ್ವಂದ್ವವಲ್ಲ, ನಮ್ಮಲ್ಲಿನ paradox ಗಳು ಅಷ್ಟೆ. ಇನ್ನು ಅವರ ಕೆಲವು ಇಷ್ಟದ ವಿಷಯಗಳಿವೆ. ಅವುಗಳ ಬಗ್ಗೆ ತುಂಬಾನೇ passionate ಆಗಿ ಮಾತಾಡ್ತಾರೆ ಅವರು. ಅವುಗಳನ್ನೂ ಸಿಕ್ಕ ಪ್ರತಿ ವೇದಿಕೆಯಿಂದಲೂ ಹೇಳ್ತಾರೆ. ಅದು repitative ಅಂತ ಕೆಲವೊಮ್ಮೆ ಅನ್ನಿಸಿದರೂ, ಆ ವಿಚಾರಗಳ ತೂಕದ ದೃಷ್ಟಿಯಿಂದ ನೋಡಿದರೆ, ಅವುಗಳ ಬಗ್ಗೆ ಎಷ್ಟು ಮಾತಾಡಿದರೂ ಸಾಲದು ಎಂಬುದು ನಮಗೆ ಅರಿವಾಗುತ್ತದೆ. ಜಾಗತೀಕರಣದ ಹೆಸರಲ್ಲಿ ನಡೆಯುತ್ತಿರುವ ದಬ್ಬಾಳಿಕೆಗಳು, ಅನಾಚಾರಗಳು, ನಮ್ಮತನಗಳ, ಸಂಸ್ಕೃತಿಯ, ಜೀವನದ ಅಪವ್ಯಾಖ್ಯಾನಗಳು, ಅದರಿಂದ ಸಮಾಜದಲ್ಲಿ ಸೃಷ್ಟಿಯಾಗುತ್ತಿರುವ ಕಂದಕಗಳು, ಇದನ್ನು ಎದುರಿಸಲು ಒಂದರಿಂದ ಹತ್ತನೇ ತರಗತಿಯವರೆಗೆ ಸಮಾನ ಶಿಕ್ಷಣ ಪದ್ಧತಿ ಜಾರಿಗೆ ಬರಬೇಕು, ಅದು ಕನ್ನಡ ಮಾಧ್ಯಮದಲ್ಲಿರಬೇಕು ಅಂತಾರೆ.

ಇನ್ನು ಅವರ ರಾಜಕೀಯ. ಸಮಾಜದೊಂದಿಗೆ ಸಂವಾದದಲ್ಲಿ ನಿರತನಾದವ ರಾಜಕೀಯವನ್ನು ಹೊಲಸೆಂದು ದೂರವಿಡಲಾರ. ನಾಡಿನ ರಾಜಕಾರಣದೊಂದಿಗೂ ಅವರ ಸಂವಾದ ನಿರಂತರ. ಅವರ ರಾಜಕಾರಣದ unwavering ಬಿಂದು ಕೋಮುವಾದಕ್ಕೆ ಬಿಡುವಿಲ್ಲದ ರಾಜಿಯಿಲ್ಲದ ವಿರೋಧ. ಅದಕ್ಕೆ ಅಲ್ಲೆಲ್ಲೋ ಹೋಗಿ ಕಾಂಗ್ರೆಸ್ ಜೆಡಿಎಸ್ ಒಂದಾಗಬೇಕು ಅಂತಾರೆ, ಯಾರ್ರೀ ಅನಂತಮೂರ್ತಿ ಅಂತ ಕೇಳಿದ ಕುಮಾರಸ್ವಾಮಿ ಜೊತೆ ವೇದಿಕೆ ಹಂಚಿಕೊಂಡು ಅವರನ್ನು ಬೆಂಬಲಿಸುತ್ತಾರೆ. ಇದನ್ನು ಅನೇಕರು ಅವರ ರಾಜಕೀಯ ಮಹತ್ವಾಕಾಂಕ್ಷೆ ಅಂತ ಟೀಕಿಸುವುದುಂಟು. ಅವರು ರಾಜ್ಯ ಸಭಾ ಚುನಾವಣೆಯಲ್ಲಿ ನಿಂತದ್ದನ್ನು ಎತ್ತಿ ತೋರಿಸುತ್ತಾರೆ. ಈ ವಿಷಯದಲ್ಲಿ ಮಾತ್ರ ನಾನು ಅವರ ಪರವೇ. ಅಲ್ರೀ ಹೆಂಡದ ದೊರೆ ವಿಜಯ ಮಲ್ಯ, ಗಣಿ ಧಣಿ ಅನಿಲ್ ಲಾಡ್ ರಾಜ್ಯಸಭೆಯಲ್ಲಿ ಕೂರ್ತಾರೆ, ನೀವ್ಯಾರೂ ಮಾತಾಡೋದಿಲ್ಲ. ಅಸಲಿಗೆ ರಾಜ್ಯಸಭೆ a house of elders and thinkers. ಅಲ್ಲಿ ಕೂರಬೇಕಾದ್ದೆ ಮೂರ್ತಿಗಳಂತಹ ಚಿಂತಕರಲ್ಲವೇ? ಇನ್ನು ಮೂರ್ತಿಗಳನ್ನೂ ಸಂಪೂರ್ಣ ಒಪ್ಪಲಾಗುವುದಿಲ್ಲ. ತುಂಬಾನೆ ಎಡವಟ್ಟುಗಳನ್ನು ಮಾಡ್ತಾರೆ ಸ್ವಾಮಿ. ಇದೆಲ್ಲದರ ಹೊರತಾಗಿಯೂ ಮೂರ್ತಿಗಳು ಮೂರ್ತಿಗಳೇ!


ಮೊನ್ನೆ ಮಲ್ಲೇಶ್ವರಂನಲ್ಲಿ ಮಂತ್ರಿ ಮಾಲ್ ಬಂದ ಮೇಲೆ ಸಂಪಿಗೆ ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆಯಾಗ್ತಿದೆ ಅಂತ placard ಹಿಡಿದು ಧರಣಿ ಕೂತಿದ್ದರು. ಸುಪ್ರೀಂ ಕೋರ್ಟ್ನಲ್ಲಿ ಗಣಿಗಾರಿಕೆಯನ್ನು ರಾಷ್ಟ್ರೀಕರಣಗೊಳಿಸಬೇಕೆಂದು ಅರ್ಜಿ ಹಾಕ್ತಾರೆ. ಅನಂತಮೂರ್ತಿಗಳೆಂದರೆ ಅದು. ಈ ವಯಸ್ಸಿನಲ್ಲಿಯೂ ಮೂರ್ತಿಗಳು ವ್ಯವಸ್ಥೆಯ ಬಗೆಗೆ ನಂಬಿಕೆ ಕಳೆದುಕೊಂಡಿಲ್ಲ, ಸಿನಿಕತನ ಇಲ್ಲ. ಅವರ ಸಂವಾದ ನಿರಂತರ. ಇದನ್ನೇ ಅವರ ಇತ್ತೀಚಿನ ಸದ್ಯ ಮತ್ತು ಶಾಶ್ವತ ಪುಸ್ತಕದ ಸಂಕಲನವನ್ನು ಮಾಡಿದ ಇಸ್ಮಾಯಿಲ್ ಅವರು ಅನಂತಮೂರ್ತಿಗಳದು ನೈತಿಕ ಚರಕ ಅಂತ ಕರೆದಿದಾರೆ. ಹೌದು ಅವರದು ನೈತಿಕ  ಚರಕವೇ ಸರಿ. ಅವರು ಇನ್ನೂ ಸಕಷ್ಟು ಕಾಲ ಈ ಚರಕದಿಂದ ನೂಲನ್ನು ತೆಗೆಯುತ್ತಲೇ ಇರಲಿ ಎಂಬುದು ನನ್ನ ಹಾರೈಕೆ. ನಮ್ಮ ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ  ಮೂರ್ತಿಗಳಂತಹ ಧ್ವನಿಗಳು ಅತ್ಯಗತ್ಯ. 


ಇನ್ನು ಅವರ ಜೀವನ್ಮುಖತೆ contagious. ಇವತ್ತಿಗೂ ಕಿರಿಯ ಲೇಖಕರ ಬರವಣಿಗೆಯನ್ನು ಆಸ್ಥೆಯಿಂದ ಓದಿ, ಮೆಚ್ಚುವ ತಿದ್ದುವ ಸಹೃದಯತೆಯನ್ನು ಇರಿಸಿಕೊಂಡವರು. ಟೀಕೆ ಟಿಪ್ಪಣಿಗಳಿಗೆ ಸದಾ ತೆರೆದಿರುವವರು. ಈಗಷ್ಟೇ ಕಣ್ಣು ಬಿಡುತ್ತಿರುವ ನಮ್ಮ ತಲೆಮಾರಿನವರಿಗೂ ಅವರೊಂದಿಗೆ ಒಂದು ಸಂವಾದ ಸಾಧ್ಯ. ಇದೆ ಅವರನ್ನು ಇನ್ನು ಹಸುರಾಗಿರಿಸಿದೆ. ವಯಸ್ಸಾಗುವುದರೊಂದಿಗೆ ಕೆಲವು ಅರೋಗ್ಯ ಸಂಬಂಧಿ ಸಮಸ್ಯೆಗಳಿಂದ ನರಳುತ್ತಿದ್ದರೂ ಅವರ ಕಿರುನಗೆ ಇಂದಿಗೂ ಮಾಸಿಲ್ಲ. ಅವರ ಮನಸ್ಸಿಗೆ ವಯಸ್ಸಾಗಿಲ್ಲ. ಮೊನ್ನೆ ಫೋನು ಮಾಡಿದಾಗ ಅವರ ಶಿಷ್ಯನೊಬ್ಬನ ಮದುವೆಯ ಸಂಭ್ರಮ್ದಲ್ಲಿದ್ದರು.

ಅವರ ಹುಟ್ಟುಹಬ್ಬ ಇವತ್ತು. ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡು, ಇಸ್ತ್ರಿ ಮಾಡಿದ ಅಂಗಿ ತೊಟ್ಟು ಅದನ್ನು ನಾನೂ ಮಾಡದಂತೆ in-shirt ಮಾಡಿಕೊಂಡು, ಎಂದಿನ ತುಂಟ ಕಿರುನಗೆಯೊಂದಿಗೆ ಇಂದು ಸಂಜೆ ಮಂಗಳೂರಿನ ಕಾರ್ಯಕ್ರಮದಲ್ಲಿ ಹಾಜರ್ ಸಾಹೇಬ್ರು! ಹ್ಯಾಪಿ ಬರ್ತಡೇ ಸರ್! ಆರೋಗ್ಯ ಹುಷಾರು... ಇದೇ ಸಲುಗೆಯಲ್ಲಿ ಮತ್ತೊಂದು ಪ್ರೀತಿಪೂರ್ವಕ ಆಗ್ರಹ. ತಮ್ಮ ಲೇಖನಿಯಿಂದ ಈ ವರ್ಷ ಮತ್ತಷ್ಟು ಕಥೆಗಳು ಮೂಡಿಬರಲಿ.

ಇನ್ನು ವೈಯಕ್ತಿಕವಾಗಿ ಹೇಳುವುದಾದರೆ ನನ್ನ ಅತಿಮೆಚ್ಚಿನ ಕನ್ನಡದ ಲೇಖಕರು ಮೂರ್ತಿಗಳು ಮತ್ತು ತೇಜಸ್ವಿಯವರು. ವೈಚಾರಿಕವಾಗಿ ನನ್ನನ್ನು ಬಹುಮಟ್ಟಿಗೆ ಇಂಪ್ರೆಸ್ ಮಾಡಿದ, ನನ್ನ ಆಲೋಚನಾ ಕ್ರಮವನ್ನು ರೂಪಿಸಿ ಬೆಳೆಸಿದಿವರು ಬಹುಮಟ್ಟಿಗೆ ಮೂರ್ತಿಗಳೇ. ನನ್ನ ಮಟ್ಟಿಗೆ ಅವರು ಪ್ರಾತಃಸ್ಮರಣೀಯರು.

2 thoughts on “ಮೂರ್ತಿಗಳಿಗೆ 80!

Ashok Shettar said...

ಪ್ರಿಯ ಆದಿತ್ಯ,
ಡಾ. ಅನಂತಮೂರ್ತಿಯವರ ಕುರಿತ ಈ ನಿಮ್ಮ ಬರಹ ಸ್ವಲ್ಪ ಪ್ರಶಂಸಾತ್ಮಕವಾಗಿದ್ದರೂ ವಿಚಾರಾರ್ಹವಾಗಿದೆ.ಹಲವು ಸಮಕಾಲೀನ ವಿದ್ಯಮಾನಗಳು, ಪ್ರವೃತ್ತಿಗಳ ಬಗ್ಗೆ ಎಷ್ಟೇ ಅಪ್ರಿಯವಾದರೂ ಸರಿಯೇ, ತಮಗೆ ಅನ್ನಿಸಿದ್ದನ್ನು ಸಾರ್ವಜನಿಕವಾಗಿ ವ್ಯಕ್ತಗೊಳಿಸುವ ಅವರ ಸ್ವಭಾವ ಇಂದು ತುಂಬ ಮುಖ್ಯವಾಗಿದೆ. ನೀವು ಹೇಳಿದಂತೆ ಸಾರ್ವಜನಿಕ ಚರ್ಚೆ ಎನ್ನುವದು ಇಂದು ತುಂಬ ಒರಟಾಗುತ್ತ ಸಾಗಿದೆ. ವಿಚಾರಗಳನ್ನು ವಿಚಾರಗಳಿಂದಲೇ ಮುಖಾಮುಖಿಯಾಗಿಸುವದಕ್ಕಿಂತ ದುಂಡಾವರ್ತನೆಯಿಂದ ಜಯಿಸಲು ನೋಡುವವರು ಅನಂತಮೂರ್ತಿಯವರನ್ನು ಓರ್ವ ಖಳನಾಯಕ ಎಂಬಂತೆ ಚಿತ್ರಿಸುವ ಈ ಸಂದರ್ಭದಲ್ಲಿ ನಮ್ಮ ಸಾಂಸ್ಕೃತಿಕ ಸಂದರ್ಭದ ಪ್ರಮುಖರನ್ನು ಹೀಗೆ ನಮ್ಮವರನ್ನಾಗಿಸಿಕೊಳ್ಳುವದು ಅರ್ಥಪೂರ್ಣವಾಗಿದೆ.- ಅಶೋಕ ಶೆಟ್ಟರ್,ಧಾರವಾಡ

ಕೈ. ವೆ. ಆದಿತ್ಯ ಭಾರದ್ವಾಜ said...

ಸರ್ ತಮ್ಮ ಮೆಚ್ಚುಗೆಗೆ ಧನ್ಯವಾದಗಳು. ಇಲ್ಲಿನ ಹೊಗಳಿಕೆ ಹೊಗಳುಭಟ್ಟತನವಲ್ಲ. ಅದನ್ನು ತಾವು ಗುರುತಿಸಿರುವಿರೆಂದು ಭಾವಿಸುತ್ತೇನೆ. ನನ್ನನ್ನು ನಿಜಕ್ಕೂ impress ಮಾಡಿದ, ನನ್ನ ಆಲೋಚನಾಕ್ರಮವನ್ನು ರೂಪಿಸಿದ ಅವರ ವೈಚಾರಿಕ ಬರವಣಿಗೆ ಮತ್ತು ಒಬ್ಬ public intellectual ಆಗಿ ಅವರ ಪ್ರಾಮುಖ್ಯತೆಯನ್ನು celebrate ಮಾಡಬೇಕು ಎಂಬ ದೃಷ್ಟಿಯಿಂದಲೇ ಹಾಗೆ ಬರೆದೆ. ನೀವು ಹೇಳಿದಂತೆ ಅವರನ್ನು ನಮ್ಮವರಾಗಿಸಿಕೊಳ್ಳುವ ಒಂದು ಪ್ರಯತ್ನ. ತಮ್ಮ ಟೀಕೆ ಟಿಪ್ಪಣಿಗಳು ಹೀಗೆ ಬರುತ್ತಿರಲಿ.

Proudly powered by Blogger
Theme: Esquire by Matthew Buchanan.
Converted by LiteThemes.com.