ಹಿಂದಿನ ವಾರಚಷ್ಟೆ ನಾವು ಮೈಸೂರು ವಿಶ್ವವಿದ್ಯಾನಿಲಯದ ಬಗ್ಗೆ ಮಾತನಾಡುತ್ತಾ ಅಲ್ಲಿನ ಶಶಿಧರ ಪ್ರಸಾದ್ ಹಗರಣ, ಹಾಗೂ ಅವರು ಹೇಗೆ ಪೀನಲ್ ಆಕ್ಷನ್ನಿಂದ ಪಾರಾಗಿದ್ದಾರೆ ಎಂದು ವಿಸ್ತೃತವಾಗಿ ಚರ್ಚಿಸಿದ್ದಿವಿ. ಅದರಲ್ಲಿ ನಮ್ಮ ರಾಜ್ಯಪಾಲರ ಪಾತ್ರವೇನು ಅನ್ನುವುದನ್ನು ಬರೆದಿದ್ದೆ. ರಾಜ್ಯಪಾಲರು ಎಲ್ಲ ವಿವಿಗಳ ಕುಲಪತಿಗಳು. ಅವರು ಜೂನ್ 24ರಂದು ಶಶಿಧರ ಪ್ರಸಾದ್ ಅವರ ವಿರುದ್ಧದ ಕ್ರಮಕ್ಕೆ ತಡೆಯಾಜ್ಞೆ ಕೊಟ್ಟಿದ್ದಾರೆ. ಇದೇ ವಿಚಾರವಾಗಿ ಜುಲೈ 14, 2010ರಂದು ಒಮದು ಪತ್ರ ಬರೆದಿದ್ದಾರೆ. ಅದರಲ್ಲಿ ಅವರ ಕ್ರಮವನ್ನು ಈ ರೀತಿ ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಅಧಿನಿಯಮ 2000, ಸೆಕ್ಷನ್ 8ರ ಪ್ರಕಾರ ಯಾವುದೇ ವಿವಿಯ ವಿಶ್ರಾಂತ ಉಪಕುಲಪತಿಗಳ ವಿರುದ್ಧ ಕ್ರಿಮಿನಲ್ ಕೇಸು ಹೂಡುವಂತಿಲ್ಲ! ಅಷ್ಟೇ ಅಲ್ಲ ಇನ್ನೂ ಮುಂದುವರೆದು ಅವರು ಸೆಕ್ಷನ್ 53(6)ರಡಿಯಲ್ಲಿ ನಡೆದಿರುವ ಎಲ್ಲಾ ನೇಮಕಾತಿಗಳೂ ಸಿಂಧುವಾಗಿದೆ ಎಂದು ಶರಾ ಬರೆದುಬಿಟ್ಟಿದ್ದಾರೆ. ಅಲ್ಲಿಗೆ ನ್ಯಾಯಮೂರ್ತಿ ರಂಗವಿಠಲಾಚಾರ್ ಅವರ ವರದಿ ಕಸದ ಬುಟ್ಟಿ ಸೇರಿದೆ. ಮೈಸೂರು ವಿವಿಯಲ್ಲಿ ನಡೆದ ಅಖಂಡ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕಾನೂನು ಬಾಹಿರ ನೇಮಕಾತಿ, ಹಿಂದುಳಿದ ವರ್ಗಗಳಿಗೆ ನಡೆದ ಅನ್ಯಯ ಎಲ್ಲಕ್ಕೂ ರಾಜ್ಯಪಾಲರ ಮೊಹರು ಬಿದ್ದಾಗಿದೆ. ಸಕರ್ಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ರಾಜ್ಯಪಾಲರು ಒಬ್ಬ ಕಳಂಕಿತನನ್ನು ಹೀಗೆ ಬಹಿರಂಗವಾಗಿ ರಕ್ಷಿಸುವುದು ಎಷ್ಟು ಸರಿ? ನ್ಯಾಯಮೂರ್ತಿ ರಂಗವಿಠಲಾಚಾರ್ ನೇತೃತ್ವದ ನ್ಯಾಯಾಂಗ ತನಿಖಾ ಆಯೋಗ ಶಶಿಧರಪ್ರಸಾಧ್ ಅವರನ್ನು ತಪ್ಪಿತಸ್ಥರು ಎಂದು ಸ್ಪಷ್ಟವಾಗಿ ಹೇಳಿದೆ. ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಶಿಫಾರಸು ಮಾಡಿದೆ. ಶಶಿಧರ ಪ್ರಸಾದ್ ಅವರು ನ್ಯಾಯಾಲಯದಲ್ಲಿ ಬಡಿದಾಡಲಿ ಬಿಡಿ. ಮಾಜಿ ಉಪಕುಲಪತಿಗಳು ಹಾಗೆಲ್ಲಾ ಜೈಲಿಗೆ ಹೋಗಬಾರದು ಅಂತಾರಲ್ಲ ನಮ್ಮ ಭಾರಧ್ವಾಜರು. ಉಪಕುಲಪತಿಗಳೇನು ಕಾನೂನಿಗಿಂತ ದೊಡ್ಡವರೇ? ಇದು ಕೇಂದ್ರ ಕಾನೂನು ಸಚಿವರಾಗಿದ್ದ ಭಾರಧ್ವಾಜರಿಗೆ ಗೊತ್ತಿಲ್ಲವೇ?
ರಜ್ಯಪಾಲರ ಈ ನಡೆಯೇ ಖಂಡನೀಯ ಅಂದರೆ ಮೊನ್ನೆ ಮೈಸೂರಿಗೆ ಹೋದಾಗ ಅವರು ನಡೆದುಕೊಂಡ ರೀತಿಯಿದೆಯಲ್ಲ, ಅದನ್ನು ಏನನ್ನಬೇಕೋ ತಿಳಿಯದಾಗಿದೆ. ಬಾಲಿಶವೋ? ಪಾಳೆಗಾರಿಕೆಯೋ? ಅವರೇ ಹೇಳಬೇಕು. ಮೊನ್ನೆ ಅನೇಕ ಕಾರ್ಯಕ್ರಮಗಳ ನಿಮಿತ್ತ ರಾಜ್ಯಪಾಲರು ಮೈಸುರಿಗೆ ಬಂದಿಳಿದರು. ಅವರನ್ನು ಸ್ವಾಗತಿಸಲು ಮೈಸೂರು ವಿವಿಯ ಕುಲಪತಿಗಳಾದ ಪ್ರೊ.ವಿ.ಜಿ.ತಳವಾರ್ ಅವರು ಅತಿಥಿ ಗೃಹಕ್ಕೆ ಹೋಗಿದ್ದಾರೆ. ರಾಜ್ಯಪಾಲರು ಕಾರಿಳಿಯುತ್ತಿದ್ದಂತೆಯೇ ಹಾರ ಹಿಡಿದು ಎದುರುಗೊಂಡಿದ್ದಾರೆ. ಅಷ್ಟೆ ರಾಜ್ಯಪಾಲರು ಸಾರ್ವಜನಿಕರು ಹಾಗೂ ಮಾಧ್ಯಮಗಳ ಮುಂದೆಯೇ ಸ್ಫೋಠಿಸಿದ್ದಾರೆ. There is no sanctity for my order in your university. What do you think of yourselves? You are trying to put up students against me! As soon as I get back to Bangalore I will write about you to the chief minister. Henceforth I will not enter mysore university. Do whatever you want. . I will also talk about this with the prime minister and ask him to stop the funds for the university….ಹೀಗೇ ಸಾಗಿತ್ತು ರಾಜ್ಯಪಾಲರ ಆಟಾಟೋಪ. ಅದಕ್ಕೆ ಪಾಪ ತಳವಾರ್ ಅವರು ಸಾರಿ ಸರ್, ಸರಿಮಾಡಿಕೊಳ್ತೀನಿ ಸರ್...ಸಾರಿ ಸರ್ ಅಂತ ಉಲಿಯುತ್ತಿದ್ದರು ಅಷ್ಟೆ. ರಾಜ್ಯಪಾಲರ ಈ ನಡವಳಿಕೆ ಖಂಡನೀಯವಷ್ಟೇ ಅಲ್ಲ, ಅವರು ಅವತ್ತು ಎಲ್ಲೆ ಮೀರಿ ಪ್ರವರ್ತಿಸಿದ್ದರು. ಅಸಲಿಗೆ ರಾಜ್ಯಪಾಲರ ಕೋಪಾತಾಪಕ್ಕೆ ಕಾರಣವಾದರೂ ಏನು? ಶಶಿಧರ ಪ್ರಸಾದ್ ಅವರ ವಿರುದ್ಧ ಏನೂ ಕ್ರಮ ಕೈಗೊಳ್ಳಬೇಡಿ ಎಂದು ಇವರೇನೋ ತಾಕೀತು ಮಾಡಿಬಿಟ್ಟರು. ಆದರೆ ವಿವಿಯಲ್ಲಿ ಈ ವಿಷಯವಾಗಿ ಮೈಸೂರು ವಿಶ್ವವಿದ್ಯಾಲಯ ಉಳಿಸಿ ಎಂಬ ನಿನಾದದೊಂದಿಗೆ ಒಂದು ಚಳುವಳಿಯೇ ಆರಂಭವಾಗಿದೆ. ಇದರಲ್ಲಿ ವಿವಿಯ ಶಿಕ್ಷಕ ವರ್ಗ, ವಿದ್ಯಾರ್ಥಿಗಳು, ಸಂಘಟನೆಗಳು, ದಲಿತ ಸಂಘಟನೆಗಳು ಎಲ್ಲರೂ ಭಾಗವಹಿಸುತ್ತಿದ್ದಾರೆ. ಶಶಿಧರ ಪ್ರಸಾದ್ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ. ಈ ಪ್ರೆಷರ್ ಅನ್ನು ತಡೆಯದಾದ ಪ್ರೊ. ತಳವಾರ್ ಅವರು ಶಶಿಧರ ಪ್ರಸಾದ್ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ವಿದ್ಯಾರ್ಥಿ ನಾಯಕರಿಗೆ ಆಶ್ವಾಸನೆ ನೀಡಿದ್ದಾರೆ. ಇದೇ ವಿಷಯವನ್ನು ಸಿಂಡಿಕೇಟ್ ಸಭೆಯಲ್ಲೂ ಪ್ರಸ್ತಾಪಿಸಿದ್ದಾರೆ. ರಾಜ್ಯಪಾಲರಿಗೆ ಸುದ್ದಿ ಮುಟ್ಟಿದೆ. ವಿದ್ಯಾರ್ಥಿಗಳ ಮುಂದೆ ತಮ್ಮನ್ನು ದೋಷಿಯಂತೆ ನಿಲ್ಲಿಸುತ್ತಿದ್ದಾರೆ ತಳವಾರ್ ಅವರು ಎಂದು ಕೆಂಡ ಕಾರಿದ್ದಾರೆ. ಇದು ಸರ್ವಥಾ ಖಂಡನೀಯ. Wasn't the governor exceeding his brief in behaving so? ಖಂಡಿತ ಹೌದು. ಹಾಗಾದರೆ ವಿಶ್ವವಿದ್ಯಾಲಯಗಳಲಿ ರಾಜ್ಯಪಾಲರ ಪಾತ್ರವಾದರೂ ಏನು? ಅವರನ್ನು ಛಾನ್ಸೆಲರ್ ಅಂತ ಕರೀತಾರಲ್ಲ, ಆ ಸ್ಥಾನದ ಮಹತ್ವವೇನು? ಅಧಿಕಾರಗಳೇನು? ಒಟ್ಟಾರೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಛಾನ್ಸೆಲರ್ನ ಪಾತ್ರವೇನು ಎಂಬುದರ ಕುರಿತು ಕೂಲಂಕುಷ ಚರ್ಚೆಗೆ ಇದು ಸಕಾಲ.
ವಿಶ್ವವಿದ್ಯಾನಿಲಯಗಳು ಯಾವತ್ತೂ ಸರ್ಕಾರದ ಅಡಿಯಾಳುಗಳಲ್ಲ. ಅವು ಸ್ವಾಯತ್ತ ಸಂಸ್ಥೆಗಳು. ಅವುಗಳಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು. ಹಾಗಾಗಿ ನಮ್ಮ ವಿಶ್ವವವಿದ್ಯಾನಿಲಯಗಳನ್ನು ಸರ್ಕಾರದ ಕೆಳಗಿರಿಸದೆ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರ ಕೆಳಗಿರಿಸಲಾಗಿದೆ. ಇದು ಭಾರತದ ಎಲ್ಲ ವಿವಿಗಳಿಗೂ ಅನ್ವಯಿಸುತ್ತದೆ. ಆ ರಾಜ್ಯದ ರಾಜ್ಯಪಾಲರು, ಅಲ್ಲಿನ ಎಲ್ಲ ವಿವಿಗಳ ಕುಲಪತಿಗಳಾಗಿರುತ್ತಾರೆ. ವಿವಿಗಳು ಮತ್ತು ಅವುಗಳ ಆಡಳಿತದಲ್ಲಿ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರಗಳಿವೆ. ಇಲ್ಲಿ ಅವರು ಬರಿಯ ರಬ್ಬರ್ ಸ್ಟಾಂಪ್ ಅಲ್ಲ. ವಿವಿಯ ಉಪಕುಲಪತಿ, ರಿಜಿಸ್ಟ್ರಾರ್ಗಳ ನೇಮಕದಿಂದ ಹಿಡಿದು ವಿವಿಯ ಆಡಳಿತದಲ್ಲೂ ಅವರಿಗೆ ಅಪಾರ ಅಧಿಕಾರಗಳಿವೆ. ಅದನ್ನು ಈ ಹಿಂದಿನ ಎಲ್ಲ ರಾಜ್ಯಪಾಲರೂ ಕೂಡ ಚಲಾಯಿಸುತ್ತಲೇ ಬಂದಿದ್ದಾರೆ. ಒಂದು ವಿವಿಯಲ್ಲಿ ಏನೇ ವಿವಾದಗಳಾದರೂ ಅವರು ಸರ್ಕಾರದ ಬಳಿ ಹೋಗುವುದಿಲ್ಲ, ಬದಲಿಗೆ ರಾಜ್ಯಪಾಲರ ಬಳಿ ದೂರು ಕೊಂಡೊಯ್ಯುತ್ತಾರೆ. ರಾಜ್ಯಪಾಲರಿಗೆ ವಿವಿಗಳ ಬಗ್ಗೆ ಯಾವುದೇ ತನಿಖೆಗೆ ಆದೇಶಿಸುವ ಅಧಿಕಾರವಿದೆ. ರಿಜಿಸ್ಟ್ರಾರ್ ಮತ್ತಿತರರನ್ನು ವಜಾಗೊಳಿಸುವ ಅಧಿಕಾರವಿದೆ. ವಿವಿ ಸಿಂಡಿಕೇಟ್ಗೆ ರಾಜ್ಯಪಾಲರು ತಮ್ಮ ಇಬ್ಬರು ಪ್ರತಿನಿಧಿಗಳನ್ನು ನೇಮಿಸುತ್ತಾರೆ. ಸಿಂಡಿಕೇಟ್ ಸಭೆ ನಡೆಸಲು ಅವರು ಆದೇಶಿಸಬಹುದು. ರಾಜ್ಯಪಾರು ಸುವೋ ಮೋಟೋ ವಿವಿಯ ಆಡಳಿತ, ಕಾರ್ಯನಿರ್ವಹಣೆ, ಆರ್ಥಿಕ ನಿರ್ವಹಣೆ ಮುಂತಾದ ಎಲ್ಲ ವಿಷಯಗಳ ಕುರಿತಾಗಿ ಡೈರೆಕ್ಷನ್ಗಳನ್ನು ನೀಡಬಹುದು. ಇದಲ್ಲದೆ ಯಾವಾಗ ಬೇಕಾದರೂ ಕಮೀಷನ್ ಆಫ್ ಎನ್ಕ್ವೈರಿಯ ಮೂಲಕ ವಿವಿಯ ಇನ್ಸ್ಪೆಕ್ಷನ್ ನಡೆಸಿ ತಮ್ಮ ಶಿಫಾರಸುಗಳನ್ನು ಸರ್ಕಾರಕ್ಕೆ ಕಳಿಸಕೊಡಬಹುದಾಗಿದೆ. ಇವುಗಳ ಅನುಷ್ಠಾನದ ಹೊರತು ಸರ್ಕಾರಕ್ಕೆ ಬೇರೆ ದಾರಿಯಿಲ್ಲ.
ವಿವಿಗಳ ಸ್ವಾಯತ್ತತೆಯನ್ನು ಕಾಪಾಡುವ ದೃಷ್ಟಿಯಿಂದ ಸೃಷ್ಟಿಯಾದದ್ದು ಕುಲಾಧಿಪತಿಗಳ ಕಾನ್ಸೆಪ್ಟು. ಇದು ಬಹುಮಟ್ಟಿಗೆ ಯಶಸ್ವಿ ಕೂಡ ಆಗಿದೆ. ಸರ್ಕಾರದ ಮರ್ಜಿಗೆ ಕಾಯುವ ಅವಶ್ಯಕತೆ ಇವತ್ತಿಗೂ ವಿವಿಗಳಿಗಿಲ್ಲ. ಈ ಪದವಿ ವಿವಾದಕ್ಕೊಳಗಾಗಿರುವುದು ಕೆಲವೊಮ್ಮೆ ಮಾತ್ರ. ರಾಜ್ಯ ಸರ್ಕಾರದ ರಬ್ಬರ್ ಸ್ಟಾಂಪ್ಗಳಾಗದೇ ತಮ್ಮ ಅಧಿಕಾರಗಳನ್ನು ಚಲಾಯಿಸಿದಾಗ, ಅಂದಿನ ಸರ್ಕಾರಗಳು ಅದನ್ನು ಒಪ್ಪಿಕೊಳ್ಳಬೇಕು. ನಮ್ಮ ರಾಜಕೀಯ ನೇತಾರರಿಗೆ ದೇವಸ್ಥಾನ ದರ್ಗಾಗಳನ್ನೂ ಅವುಗಳ ಪಾಡಿಗೆ ಅವುಗಳನ್ನು ಬಿಡುವ ಮನಸ್ಸಿಲ್ಲ, ಅವುಗಳನ್ನೂ ತಮ್ಮ ಪ್ಲೇಗ್ರೌಂಡುಗಳಾಗಿ ಮಾಡಿಕೊಂಡಿರುವಾಗ ಇನ್ನು ವಿವಿಗಳಂತಹ ಬೃಹತ್ ಪ್ರತಿಷ್ಠಿತ ಸಂಸ್ಥೆಗಳನ್ನು ಬಿಡುವ ಮಾತೆಲ್ಲಿಯದು? ಅಲ್ಲಿ ತಮ್ಮ ಹಸ್ತಕ್ಷೇಪ ಸಲ್ಲದು ಎಂಬುದನ್ನೇ ಅವರು ಅಂಗೀಕಾರ ಯೋಗ್ಯವಲ್ಲ ಎಂದು ತಿರಸ್ಕರಿಸುತ್ತಾರೆ. ಹಿಂದೆ ಹಲಾರು ಬಾರಿ ಇದನ್ನು ಜೀರ್ಣಿಸಿಕೊಳ್ಳದ ರಾಜಕಾರಣಿಗಳು ಮತ್ತು ಅವರ ವೊಡ್ಡೋಲಗಗಳು ಈ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಕೆಲವೊಮ್ಮೆ ಇದು ಸರ್ಕಾರ ಮತ್ತು ರಾಜಭವನದ ನಡುವೆ ತೀವ್ರತಮ ತಿಕ್ಕಾಟಗಳಿಗೂ ಎಡೆ ಮಾಡಿಕೊಟ್ಟಿದೆ.
ಹಿಂದೊಮ್ಮೆ ತಮಿಳುನಾಡಿನಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಸಂದರ್ಭ. ವಿವಿಗಳಲ್ಲಿ ಯಾವುದೂ ತಮಗೆ ಬೇಕಾದಂತೆ ಆಗುತ್ತಿಲ್ಲ. ತಮಗೆ ಬೇಕಾದವರನ್ನು ವಿವಿಗಳ ಉಪಕುಲಪತಿಗಳಾಗಿ ನೇಮಿಸಲಾಗುತ್ತಿಲ್ಲ, ಅವುಗಳ ಆಡಳಿತ ತಮ್ಮ ಹಿಡಿತದಲ್ಲಿಲ್ಲ ಎಂಬ ಅಸಮಾಧಾನವಿತ್ತು ಅವರಿಗೆ. ಯಾವುದೋ ಒಂದು flashpointನಲ್ಲಿ ಸಿಡಿದೆದ್ದೆರು. ಕೂಡಲೇ ಒಂದು ಸುಗ್ರೀವಾಜ್ಞೆಯನ್ನು ತಂದರು. ಈ ಸುಗ್ರೀವಾಜ್ಞೆಯು ವಿವಿಗಳಲ್ಲಿ ರಾಜ್ಯಪಾಲರ ಪಾತ್ರವನ್ನು ಶೂನ್ಯಗೊಳಿಸಿದಲ್ಲದೆ, ಅವರಿಂದ ವಿವಿಗಳ ಛಾನ್ಸೆಲರ್ ಹುದ್ದೆಯನ್ನು ಕಿತ್ತುಕೊಂಡು ಅದನ್ನು ಮುಖ್ಯಮಂತ್ರ್ರಿಗಳ ತಲೆಗೆ ಕಿರೀಟವಾಗಿಟ್ಟಿತ್ತು! ಅಲ್ಲಿಗೆ ವಿವಿಗಳೆಲ್ಲವೂ ರಾಜಕೀಯ ಅಡ್ಡೆಗಳಾಗಿಬಿಡುತ್ತಿದ್ದವು. ಆದರೆ ಅಂದಿನ ತಮಿಳುನಾಡಿನ ರಾಜ್ಯಪಾಲರು ತಮ್ಮ ಅಂಕಿತಕ್ಕೆ ಬಂದ ಈ ಸುಗ್ರೀವಾಜ್ಞೆಯನ್ನು ರಾಷ್ಟ್ರಪತಿಗಳಿಗೆ ವರ್ಗಾಯಿಸಿಬಿಟ್ಟರು. ರಾಷ್ಟ್ರಪತಿಗಳು ಇದು ಅಸಾಂವಿಧಾನಿಕ ಎಂದು ಈ ಸುಗ್ರೀವಾಜ್ಞೆಗೆ ಋಜು ಹಾಕದೆ ಹಿಂತಿರುಗಿಸಿಬಿಟ್ಟರು. ವಿವಿಗಳ ಸ್ವಾಯತ್ತತೆಯನ್ನು ಕಾಪಾಡಿದ್ದರು. ಇದೇ ಪ್ರಯತ್ನ ಹಿಂದೊಮ್ಮೆ ಆಂಧ್ರದಲ್ಲೂ ಆಗಿತ್ತು. ಎನ್.ಟಿ.ರಾಮರಾಯರ ಕಾಲದಲ್ಲಿ ಹೀಗೆ ವಿವಿಗಳಲಿ ತಮ್ಮ ಹಿಡಿತವಿಲ್ಲ ಎಂದು ಯಾರೋ ಕಿವಿ ಕಚ್ಚಿದ್ದನ್ನು ನೆಚ್ಚಿ ಮುಖ್ಯಮಂತ್ರಿಯನ್ನೇ ವಿವಿಗಳ ಕುಲಪತಿಗಳಾಗಿಸುವ ವಿಧೇಯಕವನ್ನು ತರುವ ಉಮ್ಮೇದಿನಲ್ಲಿದ್ದರು ರಾಯರು. ಆದರೆ ಅನೇಕರು ಇದರ ವಿರುದ್ಧ ಸಲಹೆ ನೀಡಿದ್ದರಿಂದ ಈ ಪ್ರಯತ್ನದಿಂದ ಅವರು ವಿರಮಿಸಿಕೊಂಡಿದ್ದರು. ಕರ್ನಾಟಕದಲ್ಲೂ ಇಂಥದೊಂದು ಪ್ರಸಂಗ ನಡೆಯಿತು. ಎಸ್ಸೆಂ. ಕೃಷ್ಣರ ಕಾಲದಲ್ಲಿ ಅವರ ಆಪ್ತೇಷ್ಟರನ್ನು ವಿವಿಯೊಂದರ ಉಪಕುಲಪತಿಗಳಾಗಿ ನೇಮಿಸ ಹೊರಟರು. ಆದರೆ ರಾಜ್ಯಪಾಲರು ಇದನ್ನು ಒಪ್ಪಲಿಲ್ಲ. ಕೆಂಡಾಮಂಡಲರಾದ ಕೃಷ್ಣ ಯೂನಿವಸರ್ಿಟಿ ಆಕ್ಟ್ ಗೆ ಒಂದು ತಿದ್ದುಪಡಿ ತಂದು ಉಪಕುಲಪತಿಗಳ ನೇಮಕವನ್ನು ರಾಜ್ಯಪಾಲರೇ ಮಾಡುತ್ತಾರಾದರೂ But it has to be in concurrence of the state government ಅಂತ ಮಾಡಿಬಿಟ್ಟರು. ಅವತ್ತಿನಿಂದ ಕರ್ನಾಟಕದ ವಿವಿಗಳ ಉಪಕುಲಪತಿಗಳ ನೇಮಕ ರಾಜಕೀಯದಿಂದ ರಾಡಿಯೆದ್ದು ಹೋಗಿದೆ. ಇದು ಬಿಟ್ಟರೆ ವಿವಿಗಳ ಛಾನ್ಸೆಲರ್ ಪದವಿ ವಿವಾದಾಸ್ಪದವಾದದ್ದು ಕಡಿಮೆ. ವಿವಿಯ ಉಪಕುಲಪತಿ, ರಿಜಿಸ್ಟ್ರಾರ್, ಫೈನಾನ್ಸ್ ಆಫೀಸರ್ ಮತ್ತಿತರ ಹುದ್ದೆಗಳಿಗೆ ನಡೆಯುವ ನೇಮಕಾತಿಗಳಲ್ಲಿ ರಾಜಕೀಯ ಹಣ ಎಲ್ಲವೂ ನಡೆಯುತ್ತವೆ ಎಂಬ ಮಾತುಗಳು ಕೇಳಿಬರುತ್ತಲೇ ಇವೆಯಾದರೂ ಅವೆಲ್ಲವೂ ಅಂತೆ ಕಂತೆಗಳು, ಬಜಾರ್ ಗಾಸಿಪ್ ಅಷ್ಟೆ. ಎಲ್ಲೂ ಅಂಥದೊಂದು ಪ್ರಕರಣ ಬೆಳಕಿಗೆ ಬಂದು ರಾಡಿಯಾದ್ದಂತಿಲ್ಲ.
ಒಂದು ಉತ್ತಮ ಆಶಯಕ್ಕಾಗಿ ವಿವಿಗಳನ್ನು ರಾಜ್ಯಪಾಲರ ಮೇಲುಸ್ತುವಾರಡಿಯಲ್ಲಿ ಇರಿಸಲಾಗಿದೆ. ಅದನ್ನು ಅರ್ಥಮಾಡಿಕೊಂಡು ನಮ್ಮ ರಾಜಕಾರಣಿಗಳು ಮತ್ತು ರಾಜ್ಯಪಾಲರೂ ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ ಅವಶ್ಯಕತೆಯಿದೆ. ಈ ಮಧ್ಯೆ ಶಶಿಧರ ಪ್ರಸಾದ್ ಅವರ ಪರವಾಗಿ ಅವರ `ಪೂಜ್ಯ ತಂದೆಯವರಾದ ಕರ್ನಾಟಕ ರತ್ನ' ದೇಜಗೌ ಅವರು ತಮ್ಮ ಕಳಂಕಿತ ಪುತ್ರನ ವಿರುದ್ಧ ಕ್ರಮ ತೆಗೆದು ಕೊಳ್ಳಬಾರದು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಕೂತಿದಾರೆ. ಇದಕ್ಕೆ ಸರಿಯಾದ ಉತ್ತರ ಕೊಟ್ಟವರು ನಮ್ಮ ಚಂಪಾ ಒಬ್ಬರೇ. ದೇಜಗೌ ಅವರು ಒಂದು ಅನೈತಿಕ ಉದ್ದೇಶಕ್ಕಾಗಿ ನೈತಿಕ ಅಸ್ತ್ರವನ್ನು ಪ್ರಯೋಗಿಸಿ ಚಿಕ್ಕವರಾಗಿದ್ದಾರೆ. - ಚಂಪಾ. ಎಷ್ಟು ನಿಜ ಅಲ್ಲವೇ. ದೊಡ್ಡವರ ಸಣ್ಣತನಗಳು
Post a Comment