ಐತಿಹಾಸಿಕ ಮೈಸೂರು ವಿವಿಲಿ ಜಾತಿ ಹಣದ ಗಲೀಜು


ವಿವಿ ವಿಶ್ವದರ್ಶನ ಮಾಲಿಕೆಯನ್ನು ಹಿಂದಿನ ವಾರದಿಂದಷ್ಟೇ ಪ್ರಾರಂಭಿಸಿಲಾಗಿದೆ. ಕರ್ನಾಟಕದ ಎಲ್ಲ 16 ವಿವಿಗಳು ಮತ್ತು ಒಟ್ಟಾರೆಯಾಗಿ ಉನ್ನತ ಶಿಕ್ಷಣ ಕ್ಷೇತ್ರದ ಬಗೆಗೆ ಬೆಳಕು ಚೆಲ್ಲುವ ಈ ಲೇಖನಮಾಲೆಯಲ್ಲಿ ಮೊದಲಿಗೆ ಮೈಸೂರು ವಿಶ್ವವಿದ್ಯಾಲಯವನ್ನು ಕೈಗೆತ್ತಿಕೊಳ್ಳುವುದು ಎಲ್ಲ ರೀತಿಯಲ್ಲಿಯೂ ಸೂಕ್ತ.

ಮೈಸೂರು ವಿವಿಗೆ ಒಂದು ದೈತ್ಯ ಇತಿಹಾಸವಿದೆ. ಮೈಸೂರು ವಿಶ್ವವಿದ್ಯಾಲಯ ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ. ಭಾರತದ 6ನೇ ವಿಶ್ವವಿದ್ಯಾಲಯ. ಅದು 1916 ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಳ್ವಿಕೆ ನಡೆಸುತ್ತಿದ್ದ ಕಾಲ. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದ ಸುವರ್ಣಯುಗ. ಅಂದಿನ ಮೈಸೂರು ಸಂಸ್ಥಾನದ ಪ್ರಖ್ಯಾತ ಶಿಕ್ಷಣ ತಜ್ಞರಾದಂಥ ಸಿ.ಆರ್.ರೆಡ್ಡಿ ಮತ್ತು ಡೆನಹ್ಯಾಮ್ ಎಂಬುವವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ವಿಶ್ವದಾದ್ಯಂತ ಉನ್ನತ ಶಿಕ್ಷಣವನ್ನು ಅಭ್ಯಸಿಸಿ ವರದಿ ಸಲ್ಲಿಸಲು ನೇಮಿಸುತ್ತಾರೆ. ಇವರೀರ್ವರೂ 5 ವರ್ಷಗಳ ಕಾಲ ವಿಶ್ವದಾದ್ಯಂತ ಸಂಚರಿಸಿ ಕೇಂಬ್ರಿಡ್ಜ್, ಆಕ್ಸ್ಫಾರ್ಡ್, ವಿಸ್ಕಿನ್ಸನ್, ಚಿಕಾಗೋ ಮತ್ತಿತರ ಯೂನಿವರ್ಸಿಟಿಗಳನ್ನು ಅಭ್ಯಸಿಸಿ ತಮ್ಮ ವರದಿ ಸಲ್ಲಿಸುತ್ತಾರೆ. ಈ ವರದಿಯ ಆಧಾರದ ಮೇಲೆ ಜುಲೈ 16, 1916ರಂದು ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಜುಲೈ 17ರಂದು ಮೈಸೂರಿನ ವಿಧಾನಸಭಾದಲ್ಲಿ ನಿರ್ಣಯವನ್ನು ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಇಡಿಯ ಮೈಸೂರು ಸಂಸ್ಥಾನಕ್ಕೆ ಈ ವಿಶ್ವವಿದ್ಯಾಲಯ. ಇದು ಅಂದಿನ ಭಾರತದಲ್ಲಿ ಬ್ರಿಟಿಷ್ ವ್ಯವಸ್ಥೆಯ ಹೊರಗೆ ನಿಂತ ಮೊದಲ ವಿಶ್ವವಿದ್ಯಾಲಯ. ಈ ವಿಶ್ವವಿದ್ಯಾಲಯದ ಸ್ಥಾಪನೆಯ ಹಿಂದೆ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಕನಸು ಮತ್ತು ಶ್ರಮ ಕೂಡ ಅಡಗಿತ್ತು.

1956ರಲ್ಲಿ ಕರ್ನಾಟಕ ಏಕೀಕರಣದ ನಂತರ ಮೈಸೂರು ವಿವಿಯನ್ನು ಸ್ವಾಯತ್ತ ಸಂಸ್ಥೆಯಾಗಿ ಘೋಷಿಸಲಾಯಿತು. ಇದೇ ವರ್ಷ ರಾಷ್ಟ್ರಕವಿ ಕುವೆಂಪು ಅವರು ವಿವಿಯ ಉಪಕುಲಪತಿಗಳಾಗಿ ಬಂದರು. ಕುಕ್ಕರಳ್ಳಿ ಕೆರೆಯ ಬದಿಯಲ್ಲಿ 739 ಎಕರೆಗಳ ವಿಸ್ತೀರ್ಣದಲ್ಲಿ ಅದ್ಭುತವಾದ ಕ್ಯಾಂಪಸ್ಸನ್ನು ನಿರ್ಮಿಸಲಾಯಿತು. ಅದಕ್ಕೆ ಕುವೆಂಪು ಅವರು ಮಾನಸಗಂಗೋತ್ರಿ ಎಂದು ಹೆಸರಿಟ್ಟರು. 1964ರಲ್ಲಿ ಸೆಂಟ್ರಲ್ ಕಾಲೇಜ್ ಕೇಂದ್ರಿತವಾಗಿ ಬೆಂಗಳೂರು ವಿಶ್ವವಿದ್ಯಾಲಯವನ್ನು, 1980ರಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನೂ 1987ರಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವನ್ನೂ, 1996ರಲ್ಲಿ ಕರ್ನಾಟಕ ಸ್ಟೇಟ್ ಓಪನ್ ಯೂನಿವರ್ಸಿಟಿಯನ್ನೂ carve out ಮಾಡಲಾಯಿತು. ಹಾಗೆ ನೋಡಿದರೆ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಿಗೆ ತಾಯಿಯಂಥದು ಮೈಸೂರು ವಿಶ್ವವಿದ್ಯಾಲಯ. ಮೈಸೂರು ವಿವಿಯ ಇತಿಹಾಸವನ್ನೊಮ್ಮೆ ತಿರುವಿ ಹಾಕಿದರೆ ಅಲ್ಲಿ ಕಾರ್ಯ ನಿರ್ವಹಿಸಿದ ಮಹಾಮಹಿಮರು ಅನೇಕ. ಅತ್ಯುತ್ತಮ ಶಿಕ್ಷಕ ಎಂದೇ ಖ್ಯಾತರಾಗಿದ್ದ ಭಾರತದ ಮೊದಲ ಉಪರಾಷ್ಟ್ರಪತಿ ಸರ್ವೆಪಲ್ಲಿ ರಾಧಾಕೃಷ್ಣನ್, ಆರ್.ಕೆ.ನಾರಾಯಣ್, ಕುವೆಂಪು ಅವರಂಥವರು ಪಾಠ ಮಾಡಿದ ಜಾಗೆಯಿದು. ಇವತ್ತಿನ ಮಟ್ಟಿಗೆ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳು ಬರುತ್ತವೆ. ಸದ್ಯ ಮೈಸುರು ವಿವಿಯಡಿಯಲ್ಲಿ  122 affiliated colleges, 5 Constituent Colleges, (with an aggregate of 53,000 students), 37 post graduate departments, 8 specialised research & training centres and 2 post graduate centres 55 regular academic programs ಬರುತ್ತವೆ ಎಂದು ಸಾರುತ್ತದೆ ಮೈಸೂರು ವಿವಿಯ ವೆಬ್ಸೈಟು. ನ್ಯಾಕ್ ತಂಡದಿಂದ 5 ಸ್ಟಾರ್ ಎಂದು ಅಕ್ರೆಡಿಟ್ ಆಗಿರುವ ಯೂನಿವರ್ಸಿಟಿ ನಮ್ಮದು ಎಂದು ಬಡಾಯಿ ಕೊಚ್ಚಿಕೊಳ್ಳುತ್ತದೆ. ಸದ್ಯ ಮೈಸುರು ವಿವಿಯಲ್ಲಿಯೇ ಲೈಬ್ರರಿ ಸೈನ್ಸಸ್ ಪ್ರೊಫೆಸರ್ ಆಗಿ ಸುದೀರ್ಘ ಸೇವೆ ಸಲ್ಲಿಸಿರುವ ಈ ಹಿಂದೆ ರಿಜಿಸ್ಟ್ರಾರ್ ಕೂಡ ಆಗಿದ್ದ ಪ್ರೊ..ವಿ.ಜಿ.ತಳವಾರ್ ಅವರು ಉಪಕುಲಪತಿಗಳಾಗಿದ್ದು, ಪ್ರೊ.ಪಿ.ಎಸ್.ನಾಯಕ್ ಅವರು ರಿಜಿಸ್ಟ್ರಾರ್ ಆಡಳಿತ ಮತ್ತು ಬಿ.ರಾಮು ರಿಜಿಸ್ಟ್ರಾರ್ ಇವಾಲ್ಯುಏಷನ್ ಆಗಿದ್ದಾರೆ. ಒಂದು ಕಾಲಕ್ಕೆ centre for academic excellence ಎಂದೇ ಖ್ಯಾತವಾಗಿದ್ದದು ಮೈಸೂರು ವಿಶ್ವವಿದ್ಯಾಲಯ. ಇಂದೂ ಕೂಡ ಅದು ಹಾಗೆಯೇ ಉಳಿದಿದೆಯೇ? ಮೈಸೂರಿಗರು ಕೇಳಿದರೆ ನಕ್ಕುಬಿಟ್ಟಾರು. ನೆನಪಿರಲಿ ಅದು ವಿಷಾದದ ನಗು.

ಮೈಸೂರು ವಿವಿಯಲ್ಲಿ ಮೊದಲಿನಿಂದಲೂ ಕೆಟ್ಟ ಜಾತಿ ರಾಜಕಾರಣ. ಯಾವ ಮಟ್ಟದಲ್ಲೆಂದರೆ ಇಲ್ಲಿ ಆಡಳಿತ ವರ್ಗ, ಬೋಧಕ ವರ್ಗ ಮತ್ತು ಬೋಧಕೇತರ ವರ್ಗಗಳಲ್ಲಿ ಪ್ರತಿ ಜಾತಿಗೊಂದು ಗುಂಪಿದೆ. ಸಹಜವಾಗಿಯೇ ತಿಕ್ಕಾಟಗಳು, ಮೇಲಾಟಗಳೂ ಸಹ ಇವೆ. ಕರ್ನಾಟಕದ ಅಷ್ಟೇ ಏಕೆ ಭಾರತದ ಎಲ್ಲ ವಿವಿಗಳ ಗೋಳೂ ಇದೆ. ಆದರೆ ಮೈಸೂರು ವಿವಿಯಲ್ಲಿ ಇದು ತೀರಾ ಕೆಳಮಟ್ಟದವರೆಗೂ ತಲುಪಿ ಬಿಟ್ಟಿದೆ ಮತ್ತು ಇದು ಈಗಿನ ಬೆಳವಣಿಗೆಯಲ್ಲ, ಹಲವಾರು ದಶಕಗಳಿಂದ ಇದು ನಡೆದುಕೊಂಡು ಬಂದಿದೆ. ಒಂದು ಕಾಲಕ್ಕೆ ಮೈಸೂರು ವಿವಿಯನ್ನು ಒಕ್ಕಲಿಗರ ವಿವಿ ಎಂದು ಗುರುತಿಸುತ್ತಿದ್ದರಂತೆ! ವಿವಿ ಉಪಕುಲಪತಿಗಳು ರಿಜಿಸ್ಟ್ರಾರ್ಗಳ ನೇಮಕಾತಿಯಿಂದ ಹಿಡಿದು ಸಿಬ್ಬಂದಿ ನೇಮಕ ಮತ್ತು ವಿವಿಯ ದೈನಂದಿನ ಕಾರ್ಯಚಟುವಟಿಕೆಗಳನ್ನೂ ಕೂಡ ನಿರ್ಧರಿಸುವುದು ಜಾತಿ ಮತ್ತು ಜಾತಿ ಮಾತ್ರ. ಸದ್ಯ ಒಕ್ಕಲಿಗರು ಮತ್ತು ಹಿಂದುಳಿದ ವರ್ಗಗಳ ಗುಂಪುಗಳು ಪ್ರಬಲವಾಗಿವೆ.

ಇದೇ ಕೋವಿನಲ್ಲಿ ಇತ್ತೀಚೆಗೆ ಮೈಸೂರು ವಿವಿಯಲ್ಲಿ ನಡೆದ ಅತ್ಯಂತ ದೊಡ್ಡ ಹಗರಣ ಮತ್ತು ಅದರ ಸುತ್ತ ಹಬ್ಬಿರುವ ವಿವಾದವನ್ನು ಗಮನಿಸಿಬಿಟ್ಟರೆ ಮೈಸೂರು ವಿವಿಯಷ್ಟೇ ಅಲ್ಲ ನಮ್ಮ ಇತರ ವಿವಿಗಳ ಸ್ಥಿತಿಗತಿಗಳ ಬಗ್ಗೆ ನಿಮಗೆ ಒಂದು ಚಿತ್ರ ಮೂಡಿಬಿಡುತ್ತದೆ. ನೀವು ಕೇಳೇ ಇರಬಹುದು. ಪ್ರೊ.ಶಶಿಧರ ಪ್ರಸಾದ್ ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕೆಂದು ಸರ್ಕಾರ ಹೇಳಿದ್ದರೆ, ವಿವಿಗಳ ಕುಲಪತಿ ರಾಜ್ಯಪಾಲ ಭಾರಧ್ವಾಜ್ ಅವರು ಇದನ್ನು ತಳ್ಳಿ ಹಾಕಿ ಶಶಿಧರ ಪ್ರಸಾದ್ ಅವರನ್ನು ರಕ್ಷಿಸುತ್ತಿದ್ದಾರೆ ಎಂದು. ಅಸಲಿಗೆ ಏನಿದು ಗಲಾಟೆ? ಎಂದು ಕೆದಕುತ್ತಾ ಹೋದರೆ ಐತಿಹಾಸಿಕ ಮೈಸೂರು ವಿವಿಯಲ್ಲಿ ಸಿಗುವುದು ಜಾತಿ ಮತ್ತು ಹಣದ ಗಲೀಜು! ಈಗ ಪ್ರೊ.ತಳವಾರ್ ಅವರು ಉಪಕುಲಪತಿಗಳಾಗಿದ್ದಾರಲ್ಲ, ಅವರ ಹಿಂದೆ ಉಪಕುಲಪತಿಗಳಾಗಿದ್ದವರು ಅದೇ ವಿವಿಯ ಫಿಸಿಕ್ಸ್ ವಿಭಾಗದ ಹಿರಿಯ ಪ್ರೊಫೆಸರ್ ಆದ ಪ್ರೊ. ಶಶಿಧರ ಪ್ರಸಾದ್ ಅವರು. ಇವರು ಕನ್ನಡದ ಹಿರಿಯ ಸಾಹಿತಿ ದೇ. ಜವರೇ ಗೌಡ ಅವರ ಮಗ. ನೆನಪಿರಲಿ ದೇಜಗೌ ಅವರು ಕೂಡ ಮೈಸೂರು ವಿವಿಯ ಉಪಕುಲಪತಿಗಳಾಗಿದ್ದವರು. ಅವರ ಕಾಲದಲ್ಲಿ ಅತ್ಯಂತ ಪ್ರೊಲಿಫಿಕ್ ಆಗಿ ಜಾತೀಯತೆ ನಡೆಸಿದವರು, ಒಕ್ಕಲಿಗರನ್ನು ಅನವಶ್ಯಕವಾಗಿ ಪ್ರೋತ್ಸಾಹಿಸಿದವರು ಎಂಬ ಆರೋಪ ಹೊತ್ತವರು. ಅವರ ಕಾಲದಲ್ಲಿ ಅನೇಕ ಒಕ್ಕಲಿಗರನ್ನು ವಿವಿಗೆ ತುಂಬಿದರು ಎಂದೂ ಹೇಳುವವರಿದ್ದಾರೆ. ಅವರೆಲ್ಲರೂ ಈಗ ನಿವೃತ್ತಿಯಂಚಿನಲ್ಲಿರಬಹುದು, ಇಲ್ಲ ಕೆಲವರು ನಿವೃತ್ತಿಯಾಗಿರಬಹುದು. ಅಷ್ಟರಲ್ಲಿ ಅವರ ಮಗ ಪ್ರೊ. ಶಶಿಧರ ಪ್ರಶಾದ್ ಅವರು ವಿವಿ ಉಪಕುಲಪತಿಗಳಾದರು. ಆ ಜಾಗಗಳಿಗೆ ಮತ್ತೆ ಕುಲಬಾಂಧವರನ್ನು ತುಂಬಿದರು!

ಯಾವುದೇ ಸರಕಾರೀ ನೇಮಕಾತಿಯಲ್ಲಿ ನಮಗೆಲ್ಲರಿಗೂ ಅರಿವಿರುವಂತೆ ಮೀಸಲಾತಿಯಿರುತ್ತದೆ. ಅದು ಸಾಂವಿಧಾನಿಕ ಮತ್ತು ಅದನ್ನು ಪಾಲಿಸತಕ್ಕದ್ದು ಎಲ್ಲರ ಕರ್ತವ್ಯ. ಅಕಸ್ಮಾತ್ ಮೀಸಲಾದ ಪಂಗಡದವರು ಆ ಹುದ್ದೆಗೆ ಯಾರೂ ಬರಲಿಲ್ಲವೆಂದರೆ ಅದು ಮತ್ಯಾವ ವರ್ಗಕ್ಕೆ ಹೋಗಬೇಕು ಎಂಬುದೂ ಕೂಡ ಸ್ಪಷ್ಟವಿದೆ. ಇದನ್ನು ರೂಸ್ಟರ್ ಸಿಸ್ಟಮ್ ಎಂದು ಕರೆಯುತ್ತಾರೆ. ಸನ್ಮಾನ್ಯ ಶಶಿಧರ ಪ್ರಶಾದ್ ಅವರು ಉಪಕುಲಪತಿಗಳಾಗಿದ್ದಾಗ 169 ಹುದ್ದೆಗಳಿಗೆ ನೇಮಕಾತಿ ಆಗಿದೆ. ಈ ನೇಮಕಾತಿಯಲ್ಲಿ ಈ ರೂಸ್ಟರ್ ಸಿಸ್ಟಮ್ ಅನ್ನು ಪಾಲಿಸೇ ಇಲ್ಲ. ಹಾಗಾಗಿ ಮೀಸಲಾತಿಗೆ ಸಿಗಬೇಕಿದ್ದ ಹುದ್ದೆಗಳೆಲ್ಲವೂ ಉಪಕುಲಪತಿಗಳು ಕುಲಬಾಂಧವರಿಗೆ ತಾಂಬೂಲವಾಗಿದೆ. ಈ ನೇಮಕಾತಿಯಲ್ಲಿ ಹಣದ ಪ್ರಭಾವ ಕೂಡ ಎಗ್ಗುಸಿಗ್ಗಲ್ಲದೆ ನಡೆದು ಹೋಗಿದೆ. ಮೈಸೂರು ವಿವಿ ಅಧ್ಯಾಪಕರ ಒಕ್ಕೂಟ ಈ ನೇಮಕಾತಿ ಪ್ರಕ್ರಿಯೆಯ ಬಗ್ಗೆ ಹೈಕೋರ್ಟ್ಗೆ ಮೊರೆ ಹೋದರು. ಕೂಡಲೇ ಸರ್ಕಾರ ನ್ಯಾಯಮೂರ್ತಿ ರಂಗವಿಠಲಾಚಾರ್ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಅದೇಶಿಸಿದ್ದರು. ರಂಗವಿಠಲಾಚಾರ್ ಅವರು ವರದಿ ಸಲ್ಲಿಸಿದ್ದು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅಪಾರ ಪ್ರಮಾಣದ irregularity ಗಳಿರುವುದಾಗಿಯೂ ಹೇಳಿದ್ದಾರಲ್ಲದೆ, ಪ್ರೊ.ಶಶಿಧರ ಪ್ರಸಾದ್ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆಯೂ ಈ ನೇಮಕಾತಿಯನ್ನು ಅಸಿಂಧುಗೊಳಿಸಬೇಕೆಂದೂ ಶಿಫಾರಸು ಮಾಡಿದ್ದಾರೆ. ಯಡಿಯೂರಪ್ಪನವರು ಈ ವರದಿಯನ್ನು ಕ್ಯಾಬಿನೆಟ್ಟಿನಲ್ಲಿಟ್ಟು ಒಪ್ಪಿಗೆ ಪಡೆದುಕೊಂಡರು. ಮೈಸೂರು ವಿವಿಯ ಆಡಳಿತ ವರ್ಗಕ್ಕೆ ಪ್ರೊ.ಶಶಿಧರ ಪ್ರಸಾದ್ ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಸೂಚಿಸಲಾಯಿತು. ಆಗ ಶುರುವಾಯಿತು ನೋಡಿ ದೊಡ್ಡ ಸರ್ಕಸ್. ಅಲ್ಲಿ ತಮ್ಮ ಮಗನನ್ನು ಕಾಪಾಡಿಕೋಳ್ಳಲು ಧಿಗ್ಗನೆ ಎದ್ದು ಕೂತರು ವೃದ್ಧ ದೇಜಗೌ. ಎಲ್ಲ ಒಕ್ಕಲಿಗ ನಾಯಕರ ಮನೆ ಬಾಗಿಲು ತಟ್ಟುತ್ತಾ ಹೋದರು. ಎಸ್ಸೆಂ.ಕೃಷ್ಣ, ದೇವೇಗೌಡ ಎಲ್ಲರೂ ಆದರು. ಕಡೆಗೆ ವೀರಪ್ಪ ಮೊಯಿಲಿ ಅವರ ಬಳಿಯೂ ಹೋಗಿದ್ದರು ಎಂಬ ಮಾತಿದೆ. ಅಂತೂ ಮಗನನ್ನು ಉಳಿಸಿಕೊಳ್ಳಲು ಶತಪ್ರಯತ್ನವನ್ನೇ ನಡೆಸುತ್ತಿದ್ದರು.

ಅವರ ಈ ಪ್ರಯತ್ನ ಸಫಲವಾಗುವವರೆಗೆ ಶಶಿಧರ ಪ್ರಸಾದ್ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ತಡೆಯಬೇಕಿತ್ತು. ಅವರಿಗೆ ಆ ಕುರಿತು ಅಷ್ಟಾಗಿ ಯೋಚನೆ ಇರಲಿಲ್ಲ. ವಿವಿಯ ಹಾಲಿ ಉಪಕುಲಪತಿಗಳಾದ ಪ್ರೊ.ವಿ.ಜಿ.ತಳವಾರ್ ಅವರು ಅದನ್ನು ಹೇಳದಯೇ ಶಿರಸಾ ವಹಿಸಿ ನಡೆಸಿಕೊಟ್ಟಿದ್ದರು. ಜೂನ್ 14, 2010ಕ್ಕೆ ನಿಗದಿಯಾಗಿದ್ದ ಸಿಂಡಿಕೇಟ್ ಸಭೆಯನ್ನು ಯಾವುದೇ ಕಾರಣ ಕೂಡ ನೀಡದೇ 18ಕ್ಕೆ ಮುಂದೂಡಿದರು. 18 ಬರುತ್ತಿದ್ದಂತೆಯೇ ಮತ್ತೆ 24ಕ್ಕೆ ಮುಂದೂಡಿಬಿಟ್ಟರು. ಅಷ್ಟರೊಳಗೆ ಆಗಬೇಕಾದ್ದು ಆಗಿ ಹೋಗಿತ್ತು. ಹಾಲಿ ಉಪಕುಲಪತಿಗಳಾದ ಪ್ರೊ.ವಿ.ಜಿ.ತಳವಾರ್ ಅವರು ಯಾಕೆ ಶಶಿಧರ ಪ್ರಸಾದ್ ಅವರನ್ನು ರಕ್ಷಿಸಲು ಆ ಪರಿ ಉತ್ಸುಕತೆ ತೋರಿದರು? ಯಾಕೆಂದರೆ ಶಶಿಧರ ಪ್ರಸಾದ್ ಅವರ ವಿರುದ್ಧ ಕೇಸು ಬಿದ್ದರೆ, ಅವರ ಜೊತೆಯಲ್ಲಿ ತಳವಾರ್ ಅವರೂ ಜೈಲಿಗೆ ಹೋಗಬೇಕಾಗುತ್ತದೆ! ಹೌದು ಪ್ರೊ.ವಿ.ಜಿ.ತಳವಾರ್ ಅವರು ಪ್ರೊ.ಶಶಿಧರ ಪ್ರಸಾದ್ ಅವರ ಕಾಲದಲ್ಲಿ ವಿವಿಯ ರಿಜಿಸ್ಟ್ರಾರ್ ಆಗಿದ್ದರು, ಸಿಂಡಿಕೇಟ್ ಸದಸ್ಯರಾಗಿದ್ದರು ಮತ್ತೂ ಮುಖ್ಯವಾಗಿ ಈ ನೇಮಕಾತಿಯ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು. ಅವರೂ ಏನು ಗಾಂಧಿ ಅಲ್ಲ. ಶಶಿಧರ ಪ್ರಸಾದ್ ಅವರ ಮೇಲೆ ಅದಕ್ಕೇ ಅಷ್ಟು ಕಕ್ಕುಲಾತಿ.

ಈಗಿರುವ ಸುದ್ದಿಯ ಪ್ರಕಾರ ದೇಜಗೌ ಅವರು ಸತ್ಯ ಸಾಯಿಬಾಬಾ ಅವರಿಂದ ರಾಜ್ಯಪಾಲ ಹನ್ಸರಾಜ್ ಭಾರಧ್ವಾಜ್ ಅವರಿಗೆ ಫೋನು ಮಾಡಿಸಿದ್ದಾರೆ. ಅಲ್ಲಿಗೆ ಪ್ರೊ.ಶಶಿಧರ ಪ್ರಸಾದ ಅವರು ಬಚಾವ್! ರಾಜ್ಯಪಾಲರು ಎಲ್ಲ ವಿವಿಗಳ ಕುಲಪತಿಗಳು. ಅವರು ಜೂನ್ 24ರಂದು ಶಶಿಧರ ಪ್ರಸಾದ್ ಅವರ ವಿರುದ್ಧದ ಕ್ರಮಕ್ಕೆ ತಡೆಯಾಜ್ಞೆ ಕೊಟ್ಟಿದ್ದಾರೆ. ಇದೇ ವಿಚಾರವಾಗಿ ಜುಲೈ 14, 2010ರಂದು ಒಮದು ಪತ್ರ ಬರೆದಿದ್ದಾರೆ. ಅದರಲ್ಲಿ ಅವರ ಕ್ರಮವನ್ನು ಈ ರೀತಿ ಸಮಥರ್ಿಸಿಕೊಂಡಿದ್ದಾರೆ. ಕನರ್ಾಟಕ ವಿಶ್ವವಿದ್ಯಾಲಯ ಅಧಿನಿಯಮ 2000, ಸೆಕ್ಷನ್ 8ರ ಪ್ರಕಾರ ಯಾವುದೇ ವಿವಿಯ ವಿಶ್ರಾಂತ ಉಪಕುಲಪತಿಗಳ ವಿರುದ್ಧ ಕ್ರಿಮಿನಲ್ ಕೇಸು ಹೂಡುವಂತಿಲ್ಲ! ಅಷ್ಟೇ ಅಲ್ಲ ಇನ್ನೂ ಮುಂದುವರೆದು ಅವರು ಸೆಕ್ಷನ್ 53(6)ರಡಿಯಲ್ಲಿ ನಡೆದಿರುವ ಎಲ್ಲಾ ನೇಮಕಾತಿಗಳೂ ಸಿಂಧುವಾಗಿದೆ ಎಂದು ಶರಾ ಬರೆದುಬಿಟ್ಟಿದ್ದಾರೆ. ಅಲ್ಲಿಗೆ ನ್ಯಾಯಮೂರ್ತಿ ರಂಗವಿಠಲಾಚಾರ್ ಅವರ ವರದಿ ಕಸದ ಬುಟ್ಟಿ ಸೇರಿದೆ. ಮೈಸೂರು ವಿವಿಯಲ್ಲಿ ನಡೆದ ಅಖಂಡ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕಾನೂನು ಬಾಹಿರ ನೇಮಕಾತಿ, ಹಿಂದುಳಿದ ವರ್ಗಗಳಿಗೆ ನಡೆದ ಅನ್ಯಯ ಎಲ್ಲಕ್ಕೂ ರಾಜ್ಯಪಾಲರ ಮೊಹರು ಬಿದ್ದಾಗಿದೆ.

Proudly powered by Blogger
Theme: Esquire by Matthew Buchanan.
Converted by LiteThemes.com.