ವಿದ್ಯಾದೇಗುಲಗಳು ಹೊಲಸೆದ್ದು ಹೋದಾಗ...

ಇಂದು ಪ್ರತಿ ಹತ್ತು ಭಾರತೀಯ ವಿದ್ಯಾರ್ಥಿಗಳಲಿ ಒಬ್ಬ ಮಾತ್ರ ಯೂನಿವರ್ಸಿಟಿಯ ಮೆಟ್ಟಿಲು ಹತ್ತುತ್ತಿದ್ದಾನೆ. ಆದರೂ ಭಾರತೀಯ ವಿಶ್ವವಿದ್ಯಾಲಯ ವ್ಯವಸ್ಥೆ ಇಡಿಯ ವಿಶ್ವದಲ್ಲೇ ಮೂರನೇ ಅತಿ ದೊಡ್ಡದು. ಮೊದಲಿಗೆ ಚೈನಾ, ನಂತರ ಅಮೆರಿಕಾ, ನಂತರ ಭಾರತವೇ. ಒಂದು ದೇಶ ಕಟ್ಟುವ ಕೆಲಸಕ್ಕೆ ಅಡಿಪಾಯ ಬೀಳುವುದು ಅಲ್ಲಿನ ಯೂನಿವರ್ಸಿಟಿಗಳಲ್ಲಿ. ಯೂನಿವರ್ಸಿಟಿಗಳಿಗೆ ವಿಶ್ವವಿದ್ಯಾಲಯಗಳು ಎಂಬ ಪದ ಬಳಸುತ್ತೇವೆ. ಅದು ವಿಶ್ವದ ವಿದ್ಯಾ ಆಲಯಗಳು - ವಿದ್ಯಾ ದೇಗುಲಗಳು. ಜ್ಞಾನ ಮತ್ತು ವಿದ್ಯೆಯ ವಿಷಯದಲ್ಲಿ ಭಾರತಕ್ಕೆ ಒಂದು ಭವ್ಯ ಪರಂಪರೆಯಿದೆ. ತಕ್ಷಶಿಲಾ ಮತ್ತು ನಳಂದಾ ವಿಶ್ವವಿದ್ಯಾಲಯ ಪ್ರಾಚೀನ ಕಾಲದಲ್ಲೇ ನಿಜಕ್ಕೂ ಜಾಗತಿಕ ವಿಶ್ವವಿದ್ಯಾಲಯಗಳಾಗಿ ಕಾರ್ಯನಿರ್ವಹಿಸಿ ಹೆಸರು ಮಾಡಿದಂಥವು. ಒಂದು ವಿಶ್ವವಿದ್ಯಾಲಯ ಹೇಗಿರಬೇಕೆಂಬುದನ್ನು ಅರಿಯಬೇಕಾದರೆ ನೀವು ಹುಯೆನ್ ತ್ಸಾಂಗ್ನ ಬರಹಗಳನ್ನು ಓದಬೇಕು. ವಿಶೇಷವಾಗಿ ಆತ ನಳಂದಾ ವಿಶ್ವವಿದ್ಯಾಲಯದ ಬಗ್ಗೆ ಬರೆದಿರುವುದನ್ನು. ಆದರೆ ಇಂದೇನಾಗಿದೆ? ನಮ್ಮ ವಿಶ್ವವಿದ್ಯಾಲಯಗಳು ನಿಜಕ್ಕೂ ವಿದ್ಯಾ ದೇಗುಲಗಳಾಗಿ ಉಳಿದಿವೆಯೇ? ಇಲ್ಲ ಖಂಡಿತವಾಗಿಯೂ ಇಲ್ಲ. ಭಾರತ 2020ರೊಳಗೆ ಸೂಪರ್ ಪವರ್ ಆಗಬೇಕೆಂದು, ಆಗೇ ಬಿಡುತ್ತದೆಂದೂ ಬಡಾಯಿ ಕೊಚ್ಚಿಕೊಳ್ಳುವವರು ಮೊದಲು ಇಂದು ನಮ್ಮ ಯೂನಿವರ್ಸಿಟಿ ಶಿಕ್ಷಣದೆಡೆಗೆ ಒಮ್ಮೆಯಾದರೂ ಕಣ್ಣಾಡಿಸಲಿ. ವಿದ್ಯಾ ದೇಗುಲಗಳಾಗಬೇಕಾದವು ಹೇಗೆ ಹೊಲಸೆದ್ದು ನಾರುತ್ತಿವೆ ಎಂಬುದು ಅರ್ಥವಾದೀತು.

ಇಂದು ನಮ್ಮ ಯೂನಿವರ್ಸಿಟಿಗಳಲ್ಲಿ ಪ್ರತಿ ಹಂತದಲ್ಲೂ ಹಲವಾರು ಸಮಸ್ಯೆಗಳಿವೆ, ತಳಮಟ್ಟದಿಂದ ಉಛ್ರಾಯದವರೆಗೆ. ಎಲ್ಲಿಂದ ಶುರುವಿಟ್ಟುಕೊಳ್ಳುವುದೆಂಬುದೇ ಗೊಂದಲ ಅಷ್ಟು ಸಮಸ್ಯೆಗಳು! ಇಂದಿನ ವಿವಿಗಳಲ್ಲಿ ಅಧಿಕೃತವಾಗಿ ರಾಜಕೀಯ ಪಕ್ಷಗಳಿಲ್ಲ ಅಷ್ಟೆ, ಆದರೆ ಭಾರತದ ಪ್ರತಿಯೊಂದು ವಿವಿಯಲ್ಲೂ ರಾಜಕೀಯ ಪಕ್ಷಗಳ ಹಸ್ತಕ್ಷೇಪವಿದೆ. ಅಲ್ಲಿನವರು ಪಕ್ಷನಿಷ್ಠೆಯಂತೆ ಹರಿದು ಹಂಚಿ ಹೋಗಿದ್ದಾರೆ. ಇಂದಿನ ನಮ್ಮ ವಿವಿಗಳನ್ನು ಪಕ್ಷ ರಾಜಕೀಯಕ್ಕಿಂತಲೂ ಕಾಡುತ್ತಿರುವುದು ಅತ್ಯಂತ ಕೆಟ್ಟ ಜಾತಿ ರಾಜಕಾರಣ. ಭವ್ಯ ಭಾರತದ ಎಲ್ಲಾ ವಿವಿಗಳಲ್ಲೂ ವಿದ್ಯಾಥರ್ಿಗಳು, ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿ ಹೀಗೆ ಮೂರು ಹಂತಗಳಲ್ಲಿ ಜಾತೀವಾರು ಗುಂಪುಗಳಿವೆ, ಮತ್ತು ಸಾಧಾರಣವಾಗಿ ಘರ್ಷಣೆಗಳಿವೆ. ಇನ್ನು ವಿವಿಗಳ ಆಡಳಿತ ವರ್ಗ, ಯಾರು ತಮ್ಮ ಜೀವಮಾನದಲ್ಲೇ ನೆಟ್ಟಗೆ ಪಾಠ ಮಾಡಿಲ್ಲವೋ ಅವರೆಲ್ಲರೂ ಕಡೆಗೆ ವಿವಿ ಆಡಳಿತಗಾರರಾಗುತ್ತಿದ್ದಾರೆ! ಅವರಿಗೆ ರಾಜಕೀಯ ಮತ್ತು ಜಾತಿ ಬೆಂಬಲವಿರುತ್ತದೆಯೆಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇನ್ನು ನಮ್ಮ ಯೂನಿವರ್ಸಿಟಿಗಳದ್ದು ಸರಕಾರೀ ಸಂಸ್ಥೆಯೂ ಅಲ್ಲದ ಹಾಗಂತ ಸ್ವಾಯತ್ತತೆಯೂ ಇಲ್ಲದ ಪರಮ ಇಕ್ಕಟ್ಟು ಪರಿಸ್ಥಿತಿ. ಯೂನಿವರ್ಸಿಟಿಯ ಆಡಳಿತ ವ್ಯವಸ್ಥೆಯಲ್ಲಿನ ಪ್ರತಿಯೊಂದು ನೇಮಕವೂ ರಾಜಕೀಯ ನೇಮಕಾತಿಯೇ ಸರಿ. ಅದು ರಿಜಿಸ್ಟ್ರಾರ್ಗಳಿರಬಹುದು, ಉಪಕುಲಪತಿಗಳೇ ಇರಬಹುದು, ಎಲ್ಲರದೂ ರಾಜಕೀಯ ನೇಮಕಾತಿಯೇ, ಎಲ್ಲರೂ ಒಂದಿಲ್ಲೊಂದು ಜಾತಿ ಲಾಬಿಯನ್ನು ಬೆನ್ನಿಗಿಟ್ಟುಕೊಂಡಿರುವವರೇ. ಅತ್ಯುತ್ತಮ ಉದಾಹರಣೆಯೆಂದರೆ ಬೆಂಗಳೂರು ವಿವಿ. ಬೆಂ.ವಿವಿಯ ಕರ್ಮಕಾಂಡಗಳನ್ನು ಬಿಡಿಸಿ ಹೇಳುವ ಅಗತ್ಯವಿಲ್ಲವೆನಿಸುತ್ತದೆ. ಇನ್ನು ಸಿಂಡಿಕೇಟ್ ಎನ್ನುವುದು ಕಳ್ಳರ ಸಂತೆಯೇ ಆಗಿದೆ. ಪರಿಸ್ಥಿತಿ ಇಷ್ಟು ಹೊಲಸೆದ್ದು ಹೋಗಿರುವಾಗ ಬರುವ ಎಲ್ಲ ಸಮಸ್ಯೆಗಳೂ ನಮ್ಮಲ್ಲಿವೆ. ಮೊದಲಿಗೆ ಹೊಣೆಗೇಡಿತನ. ಮೊನ್ನೆ ಕುವೆಂಪು ವಿವಿಯಲ್ಲಿ ವರ್ಷವೆಲ್ಲಾ ಹುಡುಗರು ಕಷ್ಟ ಪಟ್ಟು ಓದಿ, ಪರೀಕ್ಷೆ ಬರೆದರೆ, ಆ ಉತ್ತರ ಪತ್ರಿಕೆಗಳು ಇವ್ಯಾಲ್ಯುಯೇಷನ್ಗೆ ಮುಂಚಿತವಾಗಿಯೇ `ಆಕಸ್ಮಿಕ'ವೊಂದರಲ್ಲಿ ಅಗ್ನಿಗೆ ಆಹುತಿಯಾಗಿದೆ! ಮತ್ತೂ ಆಶ್ಚರ್ಯವೆಂದರೆ ಇದರ ಜವಾಬ್ದಾರಿಯನ್ನು ಇದುವರೆಗೂ ಯಾರೂ ತೆಗೆದುಕೊಂಡಿಲ್ಲ ಮಾತ್ರವಲ್ಲ, ಕೆಳಮಟ್ಟದ ಅಧಿಕಾರಿಗಳ ವಿರುದ್ಧ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ! ಅದು ಸಾಧ್ಯವಿಲ್ಲ ಬಿಡಿ, ಕ್ರಮ ಕೈಗೊಂಡರೆ ಅವರೇ ಅಲ್ಲಿರುವುದಿಲ್ಲ, ಹಾಗಿರುತ್ತದೆ ಅಲ್ಲಿನ ಪರಿಸ್ಥಿತಿ! ಇನ್ನು ನಮ್ಮ ವಿವಿಗಳನ್ನಷ್ಟೇ ಏಕೆ ಇಡೀ ವ್ಯವಸ್ಥೆಯನ್ನು ಪೀಡಿಸುತ್ತಿರುವ ಭ್ರಷ್ಟಾಚಾರದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ. ವಿಶ್ವವಿದ್ಯಾಲಯಗಳೆಂದರೆ ವಿದ್ಯಾದೇಗುಲಗಳು ಜ್ಞಾನಾರ್ಜನೆಯ ಕೇಂದ್ರಗಳು ಎಂದೇ ಜನರು ಭಾವಿಸುತ್ತಾರೆ. ಆದರೆ ಇಂದು ನಮ್ಮ ಯೂನಿವರ್ಸಿಟಿಗಳಲ್ಲಿ ನಡೆಯುತ್ತಿರುವುದು ಅಖಂಡ ಭ್ರಷ್ಟಾಚಾರ. ನಮ್ಮ ಯೂನಿವರ್ಸಿಟಿಗಳ ಪರೀಕ್ಷಾ ವಿಭಾಗವೆಂಬುದು ಶುದ್ಧ ಭ್ರಷ್ಟಾಚಾರದ ಅಡ್ಡೆ. ಇಷ್ಟೇ ಅಲ್ಲ ಕಾಲೇಜುಗಳ ಅಕ್ರೆಡಿಷನ್, ಅಫಿಲಿಯೇಷನ್, ಗ್ರಾಂಟ್ಸು...ಎಲ್ಲದರಲ್ಲೂ ಭ್ರಷ್ಟಾಚಾರ. ಅಸಲಿಗೆ ವಿವಿ ಕುಲಪತಿಗಳ ನೇಮಕಕ್ಕೇ ದುಡ್ಡು ನಡೆಯುತ್ತದೆ ಎಂಬ ಗುಸುಗುಸು ನಡೆಯುತ್ತದೆ ಎಂದರೆ ವಿವಿಗಳಲ್ಲಿರುವ ಭ್ರಷ್ಟಾಚಾರದ ಮಟ್ಟ ಎಂತಹುದೆನ್ನುವುದು ನಿಮಗೆ ಅರ್ಥವಾಗಬೇಕು. ಇದು ನಮ್ಮ ಇಂದಿನ ವಿವಿಗಳ ನೈಜ ಚಿತ್ರಣ.

ವಿವಿಗಳಲ್ಲಿ ಮೊದಲ ಸಮಸ್ಯೆಯೇ ಶಿಕ್ಷಕರು ಮತ್ತು ಪ್ರೊಫೆಸರ್ಗಳದ್ದು, ಇಲ್ಲೂ ಅತ್ಯುತ್ತಮ ಎನ್ನುವಂತಹ ಕಮಿಟೆಡ್ ಪ್ರೊಫೆಸರ್ಗಳಿದ್ದಾರೆ ನಿಜ, ಆದರೆ ಅವರು ಇಂದು ಅಪುರೂಪದ ಅಪವಾದ ಅಷ್ಟೆ! ಇಂದು ಯೂನಿವರ್ಸಿಟಿ ಶಿಕ್ಷಣವೆಂದರೆ ಅತ್ಯಂತ ಯಾಂತ್ರಿಕವಾಗಿಬಿಟ್ಟಿದೆ. ಇರೋದು ಕಮ್ಮಿ ಹುಡುಗರಾದರೂ ಅವರಿಗೂ ಪ್ರೊಫೆಸರ್ಗಳಿಗೂ ನಡುವೆ ಒಂದು ಸೌಹಾರ್ದಯುತ ಸಂಬಂಧವೇ ಇಲ್ಲ. ಈ ವಿಷಯದಲ್ಲಿ ಪ್ರೈಮರಿ ಸ್ಕೂಲ್ ಮೇಷ್ಟ್ರುಗಳೇ ಎಷ್ಟೋ ವಾಸಿ! ಅಂಥದೊಂದು ಸಂಬಂಧವನ್ನು ಈಗ ಹುಡುಗರೂ ಬೆಳೆಸಿಕೊಳ್ಳುವುದಿಲ್ಲ, ಪ್ರೊಫೆಸರ್ಗಳೂ ಬಯಸುವುದಿಲ್ಲ. ವಿಶ್ವವಿದ್ಯಾಲಯಗಳಿಗೆ ಬರುವ ಹುಡುಗರು ತಮ್ಮ ಕನಿಷ್ಠ ಶಿಕ್ಷಣವನ್ನು ಮುಗಿಸಿ, ವಿಷಯಾಧಾರಿತವಾಗಿ ಹೆಚ್ಚು ಜ್ಞಾನ ಸಂಪಾದಿಸಲು ಬಂದಿರುತ್ತಾರೆ. ಜ್ಞಾನಾರ್ಜನೆಯೇ ಮುಖ್ಯವಾಗಬೇಕು. ಆದರೆ ನಮ್ಮಲ್ಲಿ ಲೋವರ್ ಎಜುಕೇಷನ್ ಮಟ್ಟದಿಂದಲೂ ಮಾರ್ಕ್ಸು, ಪರೀಕ್ಷೆ ಈ ದೃಷ್ಟಿಕೋನದಲ್ಲೇ ಹುಡುಗರನ್ನು ರೂಪಿಸುತ್ತಾ ಬಂದು ಬಿಟ್ಟದ್ದೇವಾದ್ದರಿಂದ ಉನ್ನತ ಶಿಕ್ಷಣದಲ್ಲೂ ಇಂದು ಈ ಪಿಡುಗು ಮುಂದುವರೆದಿದೆ. ಹಾಗಾಗಿ ವಿದ್ಯೆ ಎನ್ನುವುದು ಒಂದು ಸರಕಾಗಿ ಬಿಡುತ್ತದೆ. ವಿವಿಗಳು ಅಂಗಡಿಯಂತಾಗಿಬಿಡುತ್ತದೆ. ಇದರಿಂದಾಗಿ ನಮ್ಮಲ್ಲಿ ಒಂದು ಜ್ಞಾನದಾಹ ಕೇಂದ್ರಿತವಾದ ಶಿಕ್ಷಣ ವ್ಯವಸ್ಥೆಯಿಲ್ಲ. ಹಾಗಾಗಿ ಸಂಶೋಧನೆ, ಪೇಟೆಂಟು ಎನ್ನುವ ಪದಗಳೆಲ್ಲ ನಾವರಿಯದ ಭಾಷೆಯ ಪದಗಳಾಗಿವೆ. ನಮ್ಮಲ್ಲಿ ಮತ್ತೊಂದು ಮುಖ್ಯ ಕೊರತೆಯೆಂದರೆ ಅಕಾಡಮಿಕ್ ಡಿಸಿಪ್ಲೀನ್ ಇಲ್ಲದಿರುವುದು. ನಮ್ಮಲ್ಲಿ ಬಹುಪಾಲು ಪ್ರೊಫೆಸರ್ಗಳು ತಿಂಗಳ ಕೊನೆಗೆ ಭರ್ಜರಿ ಸಂಬಳ ಎಣಿಸಿ ಕೊಳ್ಳುತ್ತಾರೆಯೇ ವಿನಃ ಪಾಠ ಮಾಡುವುದಿಲ್ಲ. ಮುಕ್ಕಾಲು ಭಾಗದ ಮಂದಿ ಬೆಳಗ್ಗೆಯೇ ಬಂದು ರಿಜಿಸ್ಟ್ರ್ನಲ್ಲಿ ಒಂದು ಸೈನ್ ಹಾಕಿ, ಒಂದೋ ಎರಡೋ ಕ್ಲಾಸ್ ತೆಗೆದುಕೊಂಡು ನೆಟ್ಟಗೆ ಹೊರನಡೆದು ಬಿಡುತ್ತಾರೆ. ನಂತರ ಅವರು ಯಾರ ಕೈಗೂ ಸಿಗುವುದಿಲ್ಲ. ಈಗ ಈ ತುಟ್ಟಿಭತ್ಯೆಯ ನಂತರ ಯುಜಿಸಿ ಏನೇನೋ ಹೊಸ ಹೊಸ ನಿಯಮಗಳನ್ನು ತಮದಿದೆ ಎನ್ನುವವರಿದ್ದಾರಾದರೂ ಜಡಗೊಮಡ ಈ ವ್ಯವಸ್ಥೆಯನ್ನು ಎಬ್ಬಿಸಬಲ್ಲದು ಎಂಬುದು ಅವರಿಗೇ ಅನುಮಾನ. ಇನ್ನು ಮತ್ತೊಂದು ಸಮಸ್ಯೆಯೆಂದರೆ ವಿಭಾಗಗಳ ಮುಖ್ಯಸ್ಥರನ್ನು ರೊಟೇಷನ್ ಆಧಾರವಾಗಿ ಬದಲಾಯಿಸುತ್ತಿರುವುದು. ಇದರಿಂದ ಡಿಪಾರ್ಟ್ಮೆಂಟುಗಳಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಗೌರವವಿಲ್ಲ, ಅದೂ ಒಬ್ಬರ ಅವಧಿ 2 ವರ್ಷ ಮಾತ್ರವಾಗಿರುವುದರಿಂದ ಇವರು ಅದೇನು ವಿಭಾಗವನ್ನು ಉದ್ಧಾರ ಮಾಡಿಯಾರು? ಈ ವ್ಯವಸ್ಥೆ ಹೋಗುವವರೆಗೂ ವಿಭಾಗಗಳು ನೆಟ್ಟಗೆ ನಡೆಯುವುದು ಅನುಮಾನವೇ ಸರಿ!

ಇನ್ನು ವಿವಿಗಳ ಬಗ್ಗೆ ನಮ್ಮ ರಾಜಕೀಯ ನಾಯಕರು ಮತ್ತು ಸರ್ಕಾರಗಳ ಧೋರಣೆಯಿದೆಯಲ್ಲ, ಅದೂ ಸರ್ವಥಾ ಖಂಡನೀಯವಾದುದು. ನಮ್ಮ ರಾಜಕೀಯ ನೇತಾರರಿಗೆ ದೇವಸ್ಥಾನ ದರ್ಗಾಗಳನ್ನೂ ಅವುಗಳ ಪಾಡಿಗೆ ಅವುಗಳನ್ನು ಬಿಡುವ ಮನಸ್ಸಿಲ್ಲ, ಅವುಗಳನ್ನೂ ತಮ್ಮ ಪ್ಲೇಗ್ರೌಂಡುಗಳಾಗಿ ಮಾಡಿಕೊಂಡಿರುವಾಗ ಇನ್ನು ವಿವಿಗಳಂತಹ ಬೃಹತ್ ಪ್ರತಿಷ್ಠಿತ ಸಂಸ್ಥೆಗಳನ್ನು ಬಿಡುವ ಮಾತೆಲ್ಲಿಯದು? ಇಂದು ನಮ್ಮ ವಿವಿಗಳು ಈ ಹೊಲಸು ರಾಜಕೀಯದ ಅಡ್ಡೆಗಳಾಗಿ ಬಿಟ್ಟಿವೆ. ಇನ್ನು ಸತತ ಸರ್ಕಾರಗಳಿಗೆ ವಿವಿಗಳೆಂದರೆ ಬೆಲೆಯೇ ಇಲ್ಲ. ಒಂದು ವರ್ಷದ ಹಿಂದೆ ಯಡ್ಯೂರಪ್ಪನವರು ಆಪರೇಷನ್ ಕಮಲಿಗರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಕಾಗಿ ಬಂದಾಗ ಅಂದಿನ ತೋಟಗಾರಿಕಾ ಸಚಿವರಾಗಿದ್ದ ಗುಲ್ಬರ್ಗಾದ ಎಸ್.ಕೆ.ಬೆಳ್ಳುಬ್ಬಿಯವರ ರಾಜೀನಾಮೆ ಪಡೆದುಕೊಂಡರು. ಆಗ ಅಲ್ಲಿನ ಜನ ಕೊಂಚ ಬೇಸರದಲ್ಲೇ ಉದ್ವಿಗ್ನರಾಗಿದ್ದರು. ಅವರನ್ನು ತಣಿಸಲು ಆ ಊರಿಗೆ ಏನೋ ಒಮದು ಭಕ್ಷೀಸು ಕೊಡುವುದು ಅನಿವಾರ್ಯವಿತ್ತು. ಕೂಡಲೇ ಯಡ್ಯೂರಪ್ಪನವರು ಘೋಷಿಸಿಬಿಟ್ಟರು, ಅವರು ತೋಟಗಾರಿಕಾ ಸಚುವರಲ್ಲವೇ ಆಗಿದ್ದಿದ್ದು, ಸರಿ ನಿಮ್ಮೂರಿಗೆ ಒಂದು ತೋಟಗಾರಿಕಾ ವಿವಿಯನ್ನು ಮಂಜೂರು ಮಾಡಲಾಗಿದೆ! ಇದು ವಿವಿಗಳಿಗೆ ನಮ್ಮ ಸಕರ್ಾರಗಳು ನೀಡುವ ಬೆಲೆ ಮತ್ತು ಗಾಂಭೀರ್ಯ! ಇನ್ನೂ ತುಮಕೂರು ವಿವಿಗೆ ಕಟ್ಟಡವೇ ಇಲ್ಲ, ಮಹಿಳಾ ವಿವಿ ಅಧೋಗತಿಯಾಗುವುದರಲ್ಲಿ ಇನ್ನು ಏನೂ ಅನುಮಾನ ಉಳಿದಿಲ್ಲ. ಹೀಗಿರುವಾಗ ಸಂಸ್ಕೃತ ವೇದ ವಿವಿ, ಜಾನಪದ ವಿವಿಯೂ ಸೇರಿದಂತೆ ಇನ್ನೂ ಹಲವಾರು ವಿವಿಗಳು ಪೈಪ್ಲೈನ್ನಲ್ಲಿ! ವಿವಿ ಸ್ಥಾಪನೆ, ಲಾಲನೆ, ಪಾಲನೆ ಎಲ್ಲವೂ ಇಂದು ರಾಜಕೀಯವೇ ಆಗಿಬಿಟ್ಟಿರುವುದರಿಂದ ಈ ವಿಷಯವಾಗಿ ಒಂದು ಗಾಂಭೀರ್ಯವನ್ನು ನಿರೀಕ್ಷಿಸುವುದು ನಮ್ಮದೇ ತಪ್ಪೋ ಏನೋ?

ಮೊದಲೇ ಹೇಳಿದಂತೆ ಒಂದು ದೇಶ ಕಟ್ಟುವ ಕೆಲಸಕ್ಕೆ ಅಡಿಪಾಯ ಬೀಳುವುದು ಅಲ್ಲಿನ ಯೂನಿವರ್ಸಿಟಿಗಳಲ್ಲಿ. ನೈಸ್ ನಂತರ ನಿಮ್ಮ ಈ ಭಾನುವಾರ ಈ ವಾರದಿಂದ ಯೂನಿವರ್ಸಿಟಿಗಳು ಮತ್ತು ಅವುಗಳ ರಾಡಿಯನ್ನು ವಾರ ವಾರ ಬಿಚ್ಚಿಡುವ ಕೆಲಸವನ್ನು ಕೈಗೆತ್ತಿಗೊಂಡಿದೆ. ನಮ್ಮ ಪರೀಕ್ಷಕ ದೃಷ್ಟಿಯನ್ನು ಕರ್ನಾಟಕಕ್ಕ್ಕೆ ಸೀಮಿತಗೊಳಿಸಿಕೊಳ್ಳೋಣ. ಇಲ್ಲಿನ ವಿವಿಗಳಲ್ಲಿರುವ ಸಮಸ್ಯೆಗಳೇ ಸಾಕು ಬೇಕಾಗಿರುವಾಗ ಇತರೆ ರಾಜ್ಯಗಳ ವಿವಿಗಳಲ್ಲಿ ಸ್ಟೂಡೆಂಟ್ ಯೂನಿಯನ್ಗಳು, ರಾಜಕಾರಣ ಕೂಡ ಇಲ್ಲಿನ ಎಲ್ಲಾ ನೂರೆಂಟು ಸಮಸ್ಯೆಗಳೊಂದಿಗೆ ಸೇರಿಕೊಂಡು ಪರಿಸ್ಥಿತಿಯನ್ನು ಮತ್ತಷ್ಟು ಕಗ್ಗಂಟಾಗಿಸಿಬಿಟ್ಟಿದೆ. The delicate thing about the university is that it has a mixed character, that it is suspended between its position in the eternal world, with all its corruption and evils and cruelties, and the splendid world of our imagination. ಕರ್ನಾಟಕದಲ್ಲಿ ಒಟ್ಟು 16 ವಿವಿಗಳಿದ್ದು ಇನ್ನು ಮುಂದೆ ಪ್ರತಿ ವಾರ ಒಂದೊಂದು ವಿವಿಗಳ ಜಾತಕಗಳನ್ನು ಬಿಚ್ಚಿಡುವ ಕೆಲಸವನ್ನು ಮಾಡಲಿದೆ.

Proudly powered by Blogger
Theme: Esquire by Matthew Buchanan.
Converted by LiteThemes.com.