ಎಫ್ಫೆಂ 'ಕಂಪನಾಂಕಗಳು'


ಎಫ್ಫೆಂ ವಾಹಿನಿಗಳು ಮತ್ತೆ ಸುದ್ದಿಯಲ್ಲಿವೆ. for all the wrong reasons. ಕನ್ನಡ ಚಿತ್ರರಂಗದ ಬಗ್ಗೆ ಅವಹೇಳನಕಾರಿ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿದ್ದಕ್ಕಾಗಿ ಇಡೀ ಚಿತ್ರರಂಗ ಬಿಗ್ ಎಫ್ಎಂ 92.7 ವಿರುದ್ಧ ಸೆಟೆದು ನಿಂತಿತ್ತು. ಒಂದು ದಿನದ ವಿತ್ರರಂಗದ ಬಂದ್ ಅನ್ನು ಗೋಷಿಸಲಾಯಿತು. ಬಿಗ್ ಎಫ್ಎಂ ವಾಹಿನಿಯಲ್ಲಿ ಬೇಷರತ್ ಕ್ಷಮೆ ಕೇಳಬೇಕು ಎಂಬ ಕರಾರಿನ ಮೇಲೆ ಬಂದನ್ನು ಹಿಂತೆಗೆದುಕೊಳ್ಳಲಾಗಿದೆ. ಛಾನೆಲ್ ವಾರ ಕಳೆದರೂ ಇನ್ನೂ ಕ್ಷಮಾ ಹೇಳಿಕೆಯನ್ನು ಬಿತ್ತರಿಸುತ್ತಲೇ ಇದೆ.

ಇರಲಿ ಇದರ ಹೊರತಾಗಿಯೂ ಕೂಡ ಇವತ್ತು ಎಫ್ಎಂ ಸೃಷ್ಟಿಸುತ್ತಿರುವ `ಕಂಪನಾಂಕ'ಗಳ ಕುರಿತು ಚರ್ಚೆಯಾಗಬೇಕಾದ ಅಗತ್ಯವಿದೆ. ಭಾರತದಲ್ಲಿ ಈವತ್ತಿಗೂ ಇರುವುದು ಶ್ರವಣ ಸಂಸ್ಕೃತಿ. ರೇಡಿಯೋ ಭಾರತದ ಜನಜೀವನದಲ್ಲಿ ಮಿಳಿತಗೊಂಡಷ್ಟು ಇನ್ಯಾವುದೇ ಮಾಧ್ಯಮ ಮಿಳಿತಗೊಂಡಿಲ್ಲ. ಆದರೆ 80ರ ದಶಕದಲ್ಲಿ ಟಿವಿಯ ಆಗಮನದೊಂದಿಗೆ ರೇಡಿಯೋ ಬರಬರುತ್ತಾ  ಮಂಕಾಗತೊಡಗಿತು. 1991ರ ಲಿಬರಲೈಸೇಷನ್ನ ನಂತರ ಖಾಸಗೀ ಟಿವಿ ಛಾನೆಲ್ಗಳು ಹಾವಳಿಯಿಟ್ಟ ಮೇಲಂತೂ ರೇಡಿಯೋವನ್ನು ಕೇಳುವವರೇ ಇಲ್ಲದಂತಾಗಿತ್ತು. ಆದರೆ 2000 ದಿಂದೀಚೆಗೆ ಸರ್ಕಾರ ಖಾಸಗೀ ಎಫ್ಎಂ ಛಾನೆಲ್ಗಳಿಗೆ ಅವಕಾಶ ನೀಡತೊಡಗಿದ ಮೇಲೆ ಮತ್ತೆ ರೇಡಿಯೋದ ಕಲರವ ಶುರುವಾಯಿತು ನೋಡಿ. 2000ನಲ್ಲಿ ಭಾರತದ ಐಟಿ ಉದ್ಯಮ ಉಚ್ಛ್ರಾಯದಲ್ಲಿತ್ತು. ಭಾರತ ಪ್ರಕಾಶಿಸುತ್ತಿತ್ತು. ಈ ಐಟಿ ಉದ್ಯಮ ನಮ್ಮ ನಗರಗಳ ಲ್ಯಾಂಡ್ಸ್ಕೇಪ್ಗಳನ್ನು ಗುರುತೇ ಸಿಗಲಾರದಂತೆ ಬದಲಿಸಿಬಿಟ್ಟಿತು. ಭಾರತ ತನ್ನ ಫೋಕಸ್ ಅನ್ನು ಹಳ್ಳಿಗಳಿಂದ ನಗರಗಳಿಗೆ ಬದಲಿಸಿಕೊಂಡಿತ್ತು. ಇದೆಲ್ಲವೂ ಕೂಡಿ ಒಂದು ನವ ವರ್ಗವನ್ನೇ ಹುಟ್ಟುಹಾಕಿತು. ಇದೇ ಕಾಲಘಟ್ಟದಲ್ಲಿ ಭಾರತದಲ್ಲಿ ಒಂದು ಮ್ಯೂಸಿಕ್ ರೆವಲ್ಯೂಷನ್ ಕೂಡ ನಡೆದಿತ್ತು. ಎಲ್ಲವೂ ಕೂಡಿ ಬಂದಿತ್ತು. ಎಫ್ಎಂ ಪ್ರಕಂಪನಗಳನ್ನು ಸೃಷ್ಟಿಸತೊಡಗಿತು.

ಹೀಗೆ ನಗರ ಕೇಂದ್ರಿತ ಕೇಳುಗರಿಗೆಂದೇ ಜಜಜಛಿಚಿಣಜ ಆಗಿ ಪ್ರಾರಂಭಗೊಂಡದ್ದು ಎಫ್ಎಂ ವಾಹಿನಿಗಳು. ನಗರಗಳ ಗಿಜಿಗುಡುವಿಕೆ, ಟ್ರಾಫಿಕ್ ಜಾಮ್ಗಳು ಕೂಡ ಈ ವಾಹಿನಿಗಳ ಯಶಸ್ಸಿಗೆ ಸಾಕಷ್ಟು ಕಾಣ್ಕೆ ಸಲ್ಲಿಸಿವೆ. ಇಂದು ಬೆಂಗಳೂರೊಂದರಲ್ಲೇ 10 ಎಫ್ಎಂ ವಾಹಿನಿಗಳಿವೆ. ಆಪ್ ಸುನ್ ರಹೀ ಹೈ ವಿವಿಧಭಾರತಿ.., ಆಕಾಶವಾಣಿ ವಾಣಿಜ್ಯ ಪ್ರಸಾರ ಕೇಂದ್ರ...ಈ ಇಂಪಾದ ಧ್ವನಿಗಳ ಕಾಲ ಮುಗಿದಿದೆ. ಈ ಧ್ವನಿಗಳನ್ನು ಖಾಸಗಿ ವಾಹಿನಿಗಳ ಆರ್ಜೆಗಳ ವಟಗುಟ್ಟುವಿಕೆ replace ಮಾಡಿಬಿಟ್ಟಿದೆ. ಹೌದು ಇವತ್ತಿನ ರೇಡಿಯೋ ಪ್ರಸಾರದ ಕಂಟೆಂಟ್ ಆಕಾಶವಾಣಿಯಷ್ಟು enjoyable ಅಲ್ಲ. ಇದ್ದುದರಲ್ಲಿ ಸರಕಾರೀ ಒಡೆತನದ ಎಫ್ಎಂ ರೇನ್ಬೋ ಒಂದೇ ಮೇಲು. ಕೇಳಬಹುದು. ಆದರೆ ಮಿಕ್ಕವರಿಗೇನಾಗಿದೆ? ಒಂದು ಮಿಕ್ಕ ಖಾಸಗೀ ಛಾನೆಲ್ಗಳು ವಾಣಿಜ್ಯ ಉದ್ದಿಮೆಗಳಾಗಿದ್ದು ಲಾಭ ಗಳಿಕೆಯೊಂದೇ ಅವುಗಳ ಉದ್ದೇಶವಾಗಿರುವುದರಿಂದ ನಿಮಗೆ ಈ ವಾಹಿನಿಗಳಲ್ಲಿ ಜಾಹೀರಾತುಗಳು, ಸರೋಗೇಟ್ ಜಾಹೀರಾತುಗಳು, ಸಿನೆಮಾ ಪ್ರಚಾರ, ಆರ್ಜೆಗಳ ನಿರಂತರ ವಟಗುಟ್ಟುವಿಕೆಯ ನಡುವೆ ಎಲ್ಲೋ ಒಂದೆರಡು ಹಾಡುಗಳು!

ಎರಡನೆಯದು ರೇಡಿಯೋ ಪ್ರಸಾರದ ಮೂಲ ಪರಿಕಲ್ಪನೆಗೆ ಸಂಬಂಧಿಸಿದ್ದು. ರೇಡಿಯೋ ಒಂದು ಅಂಧ ಮಾಧ್ಯಮ, ದೃಷ್ಯವಿರುವುದಿಲ್ಲವಾದ್ದರಿಂದ ಇಲ್ಲಿ ಮಾತೇ ಪ್ರಧಾನ. ರೇಡಿಯೋಗೆ ಮತ್ತೊಂದು ಪ್ರತ್ಯೇಕತೆಯಿದೆ. in the strictest terms ರೇಡಿಯೋ  ಒಂದು ಸಮೂಹ ಮಾಧ್ಯಮವೇ ಅಲ್ಲ. ರೇಡಿಯೋ ಒಂದು ವಯಕ್ತಿಕ ಮಾಧ್ಯಮ. ರೇಡಿಯೋ ಪ್ರಸಾರ ಎನ್ನುವುದು ಶ್ರೋತೃ ಮತ್ತು ನಿರೂಪಕನ ನಡುವೆ ಜಾರಿಯಲ್ಲಿರುವ ಒಂದು ಸಂವಾದ. ರೇಡಿಯೋ ಪ್ರಸಾರ ಒಂದು ಕಲೆ. ಅದು ಶ್ರೋತೃಗಳನ್ನು ಹಿಡಿದಿಟ್ಟುಕೊಳ್ಳಬೇಕು. ಅದನ್ನು ಯಾವ ದಾರಿಯಲ್ಲಿ ಸುಲಭವಾಗಿ ಸಾಧಿಸಬಹುದು? ಇದೇ the main bone-of-contention.

ಇಂದಿನ ಎಫ್ಎಂ ವಾಹಿನಿಗಳು ನಗರಕೇಂದ್ರಿತ ಮಧ್ಯಮ ವರ್ಗ, ಯವಕರನ್ನು ಗುರಿಯಾಗಿಸಿಕೊಂಡಿರುವುದರಿಂದ ಅವರಿಗೆ ಹೇಗೇ ಬೇಕೋ ಹಾಗೆ ನಾವು ಕಾರ್ಯಕ್ರಮ ಮಾಡುತ್ತೇವೆ ಎಂಬ ಸಿದ್ದ ಸಮರ್ಥನೆ ಅವರದು. ಆದರೆ ಇದರ ಹೆಸರಿನಲ್ಲಿ ಎಷ್ಟೆಲ್ಲಾ ಅನಿಷ್ಟಗಳು ದಿನಂಪ್ರತಿ ನಮ್ಮ ಕಿವಿ ತುಂಬುತ್ತಿವೆ? ಮೊದಲಿಗೆ ಭಾಷೆ. ಕನ್ನಡ ಅಳಿವಿನಂಚಿನಲ್ಲಿದೆ ಎಂದು ನಾರಾಯಣ ಗೌಡರು ದಿನಬೆಳಗಾದರೆ ಬೊಬ್ಬೆ ಹಾಕುತ್ತಾರೆ. ನಮ್ಮ ಎಫ್ಎಂ ವಾಹಿನಿಗಳ ಪ್ರಸಾರ ಕೇಳಲಿ ಸಾಕು - ಅಲ್ಲಿ ದಿನನಿತ್ಯ ಕನ್ನಡದ ಕೊಲೆಯಾಗುತ್ತಿದೆ. ಎಫ್ ಎಂ ವಾಹಿನಿಗಳ ಕನ್ನಡದ ಬಗ್ಗೆ ಒಂದೇ ಪದದಲ್ಲಿ ಹೇಳಬೇಕೆಂದರೆ - ಅಪಭ್ರಂಶ! ಅದು ಕನ್ನಡವೇ ಅಲ್ಲ - ಅದನ್ನು ಕೆಲವರು ಕಂಗ್ಲೀಷು, ಹಿಂಗ್ಲೀಷು ಅಂತಾರೆ ತಿಳಿದವರು ಬೆಂಗಳೂರು ಕನ್ನಡ ಅಂತಾರೆ. ಮಾತಿನ ಮಧ್ಯೆ ಅನವಶ್ಯಕವಾಗಿ ಇಂಗ್ಲೀಷು ಸೇರಿಸುವುದೊಂದೇ ಅಲ್ಲ, ಈ ವಾಹಿನಿಗಳ ಆರ್ಜೆಗಳಿಗೆ ಅವರು ಮಾತಾಡುವ ಅಲ್ಪ ಸ್ವಲ್ಪ ಕನ್ನಡವನ್ನೂ ಸರಿಯಾಗಿ ಉಚ್ಛರಿಸಲು ಬರುವುದಿಲ್ಲ. ಕನ್ನಡದ ಉಚ್ಛಾರಣೆ ಬರುವುದಿಲ್ಲ, ಇಂಗ್ಲೀಷು ಮಾತನಾಡುತ್ತಾರೆ ಎನ್ನುವುದಕ್ಕಿಂತಲೂ ಅವರಿಗೆ ಕನ್ನಡ, ಕರ್ನಾಟಕದ ಸಂಸ್ಕೃತಿಯ ಬಗ್ಗೆ ಗೊತ್ತಿಲ್ಲ, ಅವರ ಬೇರುಗಳು ಗಟ್ಟಿಯಿಲ್ಲ, ಮತ್ತು ಅವರಿಗೆ ಇದರ ಬಗ್ಗೆ ಅವರಿಗಿರುವ ಒಂದು ದಿವ್ಯ ನಿರ್ಲಕ್ಷ್ಯ ಮತ್ತು ಅವಗಣನೆ ಸಹಿಸಲಸಾಧ್ಯ. 91.9 ಎಫ್ಎಂ ವಾಹಿನಿಯ ಪ್ರಾರಂಭದ ದಿನಗಳಲ್ಲಿ ಕನ್ನಡದ slang ಅನ್ನು ಪರಿಚಯಿಸುವ ನೆವದಲ್ಲಿ ಒಬ್ಬ ಮಳಯಾಳಿ ಕುಟ್ಟಿಯ ಬಾಯಲ್ಲಿ ದಿನಕ್ಕೊಂದು ಕನ್ನಡ ಪದ ಅವಹೇಳನಗೊಳಗಾಗುತ್ತಿತ್ತು. ಇದನ್ನು ಕನ್ನಡಪರ ಸಂಘಟನೆಗಳು ಧರಣಿ ನಡೆಸಿ ನಿಲ್ಲಿಸದರು. ಹೀಗೆ ಭಾಷೆಯ ಅವಹೇಳನ, ಅವಗಣನೆಗೆ ಹತ್ತಾರು ಉದಾಹರಣೆಗಳನ್ನು ನೀಡಬಹುದು. ಇಂದಿನ ಯುವ ಜನಾಂಗ ಮಾತನಾಡುವ ಭಾಷೆಯೇ ಇದು, ಅವರೊಂದಿಗೆ ಒಂದು ಸಂವಾದ ನಡೆಸಬೇಕಾದರೆ ಹೀಗೇ ಮಾತನಾಡಬೇಕೆಂದು ಸಮರ್ಥಿಸಿಕೊಳ್ಳುತ್ತಾರೆ. ಅಲ್ಲ ಸ್ಪಷ್ಟ ಕನ್ನಡ ನಮ್ಮ ಯುವಕರಿಗೆ ಅರ್ಥವಾಗುವುದಿಲ್ಲವೇ?

ಭಾಷೆಯನ್ನಾದರೂ ಮಾಫಿ ಮಾಡಿಬಿಡಬಹುದು. ಆದರೆ ಇತ್ತೀಚೆಗೆ ಈ ಎಫ್ಎಂ ವಾಹಿನಿಗಳಲ್ಲಿ ಉದ್ಧಟತನ, ವಯಕ್ತಿಕ ನಿಂದನೆಗಳು, ಪ್ರಚೋದನಕಾರಿ, ಅಸಭ್ಯ ಮಾತುಗಳು ಹೆಚ್ಚಾಗತೊಡಗಿವೆ. ಇದಂತೂ ಅಕ್ಷಮ್ಯವೇ ಸರಿ. ಉದಾಹರಣೆಗೆ ಹಲವಾರು ಎಫ್ಎಂ ವಾಹಿನಿಗಳಲ್ಲಿ ಕಾರ್ಯಕ್ರಮಗಳ ನಡುವೆ ಜೋಕ್ಸ್ಗಳ ಹೆಸರಿನಲ್ಲಿ ಕೆಲವು ಬಿಟ್ಗಳನ್ನು ಹಾಕಲಾಗುತ್ತಿದ್ದು ಇವು ಹಲವಾರು ಬಾರಿ ಛಜಟಠತಿ ಣಜ ಛಜಟಣ ಆಗಿರುತ್ತವೆಯಲ್ಲದೆ, ಅಪಹಾಸ್ಯವಾಗಿಬಿಟ್ಟಿದೆ. ಒಂದು ಕಾರ್ಯಕ್ರಮ ಮಾಡಬೇಕೆಂದರೆ ಅದಕ್ಕೊಂದು ಗಟ್ಟಿಯಾದ ಥೀಮ್ ಇರಬೇಕಲ್ಲ? ಅದರ ಆಯ್ಕೆಯಲ್ಲೇ ಅನೇಕರು ಎಡವುತ್ತಿದ್ದಾರೆ. ಅಕ್ಕ ಸುಮತಿ ಹೇಳಿದ ಹಾಗೆ ನಿಮ್ಮ ಮನೆಯ ನಾಯಿ ಏನು ಮಾಡಿತು? ನಿಮ್ಮ ಫಸ್ಟ್ ನೈಟ್ ಹೇಗಿತ್ತು? ನಿಮ್ಮ ಲವ್ ಯಾಕೆ ಫೇಲ್ ಆಯಿತು? ಎಂಬ ಪ್ರಶ್ನೆಗಳನ್ನು ಹಿಡಿದು ಕಾರ್ಯಕ್ರಮ ಮಾಡುತ್ತಿದ್ದಾರೆ. ಇವತ್ತಿಗೂ ಅರ್ಧ ಘಂಟೆಯ ಕಾರ್ಯಕ್ರಮವೊಂದಕ್ಕೆ ಕನಿಷ್ಠ ನಾಲ್ಕು ಘಂಟೆಗಳ ತಯಾರಿ ನಡೆಸುವ ಆಕಾಶವಾಣಿ ಉದ್ಘೋಷಕಿಯರಿದ್ದಾರೆ. ಅದೇ ಇವರಿಗೆ ಕಾರ್ಯಕ್ರಮಕ್ಕೆ ಒಂದು ಥೀಮೂ ಬೇಕಾಗಿಲ್ಲ, ಅದಕ್ಕೊಂದು ತಯಾರಿಯೂ ಬೇಕಾಗಿಲ್ಲ. ಕಾರ್ಯಕ್ರಮಗಳು ತಮ್ಮ ಗಾಂಭೀರ್ಯ ಕಳೆದುಕೊಳ್ಳುತ್ತಿವೆ. ಮಾತು ವೃಷಭಾವತಿ ತಲುಪಿದೆ. ಅದೇ ಆಕಾಶವಾಣಿಯ ಇಂಪಾದ ಧ್ವನಿಗಳು, ಸುಸ್ಪಷ್ಟ ಕನ್ನಡ, ಮಾಹಿತಿಪೂರ್ಣ ಎಲ್ಲೆ ಮೀರದ ಮಾತು ಎಷ್ಟು ಹಿತವೆನಿಸುತ್ತದೆ?

ಇಂದಿನ ಎಲ್ಲಾ ಎಫ್ಎಂ ವಾಹಿನಿಗಳಲ್ಲಿ ನೇರ ಪ್ರಸಾರದ ಟಾಕ್ ಷೋಗಳು ಮತ್ತು ಹಾಡುಗಳದೇ ಕಾರುಬಾರು. ಇಂದು ರೇಡಿಯೋ ಎಂಬುದು ಮಾತು ಮತ್ತು ಹಾಡುಗಳಿಗಷ್ಟೇ ಸೀಮಿತವಾಗಿಬಿಟ್ಟಿದೆ. ಈ ಕಾರ್ಯಕ್ರಮಗಳಲ್ಲಿ ಹೊಸತನವೇನೂ ಇರುವುದಿಲ್ಲ. ಯಾವುದೋ ಒಂದು ಸಿಲ್ಲಿ ಪ್ರಶ್ನೆ ಹಿಡಿದು ಶ್ರೋತೃಗಳಿಗೆ ಎಸ್ಎಂಎಸ್ ಕಳಿಸಲೋ ಫೋನು ಮಾಡಲೋ ತಲೆ ತಿನ್ನುತ್ತಾ, ನಿರಂತರ ವಟಗುಟ್ಟುತ್ತಾ, ಜಾಹೀರಾತುಗಳ ನಡುವೆ ಹಾಡು ಹಾಕುತ್ತಾ...ಅಷ್ಟೆ ಸ್ವಾಮಿ ಕಾರ್ಯಕ್ರಮ! ಈ ಕಾರ್ಯಕ್ರಮ ಮುಗಿದ ಮೇಲೆ ಇನ್ನೊಬ್ಬ ಆರ್ಜೆ, ವಿಚಿತ್ರ ಹೆಸರು ಮತ್ತದೇ ಪುನರಾವರ್ತನೆ. ಇದರ ಹೊರತಾಗಿಯೂ ರೇಡಿಯೋಗೆ ಅನಂತ ಸಾಧ್ಯತೆಗಳಿವೆ. ಕಾರ್ಯಕ್ರಮಗಳಲ್ಲಿ ಇನ್ನಿಲ್ಲದಂತೆ ಪ್ರಯೋಗಗಳನ್ನು ಮಾಡಬಹುದು. ಇಂದಿನ ಯಾವ ಖಾಸಗೀ ಎಫ್ಎಂ ವಾಹಿನಿಯಲ್ಲಿ ಬಾನುಲಿ ನಾಟಕಗಳು ಪ್ರಸಾರವಾಗುತ್ತಿವೆ? ಯಾವ ವಾಹಿನಿಯಲ್ಲಿ ಮ್ಯಾಗಜೀನ್ ಕಾರ್ಯಕ್ರಮಗಳನ್ನು, ಸಂದರ್ಶನಗಳನ್ನು ಮಾಡುತ್ತಿದ್ದಾರೆ? ಹೌದಾ ಇದೆಲ್ಲವೂ ರೇಡಿಯೋದಲ್ಲಿ ಮಾಡಲು ಸಾಧ್ಯವಾ ಎಂದು ಕೇಳುವವರಿವರು. ಎ.ಎಸ್.ಮೂರ್ತಿಗಳು ಈರಣ್ಣನಾಗಿ ಕೊಟ್ಟ ಕಾರ್ಯಕ್ರಮಗಳೆಂಥವು? ಮೈಸೂರಿನಿಂದ ನಾರಾಯಣಸ್ವಾಮಿಗಳು ಮಕ್ಕಳಿಗಾಗಿ ಮಾಡುತ್ತಿದ್ದ ವಿಜ್ಞಾನದ ಕಾರ್ಯಕ್ರಮ ಕೇಳಿದ್ದೀರಾ ಯಾರನ್ನ? ಹಿಂದೆ ರೇಡಿಯೋ ರಾಗಿ ಅಂತ ಒಂದು ಕಾರ್ಯಕ್ರಮ ಬರುತ್ತಿತ್ತಂತೆ (ನಾನು ಕೇಳಿಲ್ಲ). ಒಬ್ಬ ರೈತ ಬಂದು ರಾಗಿ ಬೆಳೆಯುವ ವಿಧಾನಗಳು, ಅದಕ್ಕೆ ಪೂರಕವಾದ ನೆಲ, ಮಣ್ಣು, ಹಾಕಬೇಕಾದ ಗೊಬ್ಬರ..ಹೀಗೆ ಅದರ ಬಗ್ಗೆ ಇನ್ನೊಬ್ಬನಿಗೆ ಹೇಳುತ್ತಾ ಹೋಗುತ್ತಾನೆ. ಅದೊಂದು ಅತ್ಯಂತ ಯಶಸ್ವೀ ಫೀಚರ್ ಕಾರ್ಯಕ್ರಮ. ಈ ಕಾರ್ಯಕ್ರಮದ ನಂತರ ಹಳೇ ಮೈಸೂರು ಭಾಗದಲ್ಲಿ ಆ ವರ್ಷ ರಾಗಿಯ ಇಳುವರಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು! ರೇಡಿಯೋದ ಅನಂತ ಸಾಧ್ಯತೆಗಳು ಅಂದರೆ ಇದು. ನಿಜ ಇವತ್ತು ಖಾಸಗೀ ರೇಡಿಯೋ ವಾಹಿನಿಗಳೆನ್ನುವುದು ವಾಣಿಜ್ಯ ಉದ್ದಿಮೆಗಳಾಗಿದ್ದು ಸಮಾಜ ಸೇವಾ ಕೇಂದ್ರಗಳಲ್ಲ. ಅವು ನೀಡುವ ಕಂಟೆಂಟ್ ಅನ್ನು commercially package ಮಾಡಿಯೇ ಕೊಡಬೇಕು. ಆದರೆ ಇಂಥ ಕಾರ್ಯಕ್ರಮಗಳು commercially viable  ಅಲ್ಲ ಎಂದು ಪ್ರಯತ್ನಿಸದಯೇ ಇವರು ಹೇಗೆ ನಿರ್ಧಾರಕ್ಕೆ ಬರುತ್ತಾರೆ? ಅಸಲಿ ಸಮಸ್ಯೆ ಅದಲ್ಲ. ಇಂಥ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ತಯಾರಿ ಬೇಕು, ಸಮಯ ಬೇಕು, ಕೊಂಚ ರಿಸ್ಕ್ ತೆಗೆದುಕೊಳ್ಳಬೇಕು, ನಿಮ್ಮ ಐಡಿಯಾವನ್ನು ಮತ್ತೊಬ್ಬರಿಗೆ ಮಾರಬೇಕು, ಅವರನ್ನು ಒಪ್ಪಿಸಬೇಕು ಇವೆಲ್ಲವಕ್ಕೂ ಶ್ರಮ ಹಾಕಬೇಕು. ಯಾರಿಗೆ ಬೇಕು ಇಲ್ಲದ ಉಸಾಬರಿ? ಆ ಕಡೆ ಮನಸ್ಸಿಗೆ ಬಂದದ್ದು ವಟವಟ ಅಂದರೆ ಆಯಿತಲ್ಲವೇ ಎಂಬ ನಿರ್ಲಕ್ಷ್ಯ. ರೇಡಿಯೋ ಪ್ರಸಾರ ಸೊರಗುತ್ತಿರುವುದು ಇದೇ ಕಾರಣಕ್ಕೆ.

ಇವಿಷ್ಟೂ ಖಾಸಗೀ ಎಫ್ಎಂ ವಾಹಿನಿಗಳ ಗೋಳಾದರೆ, ನಮ್ಮ ಸರಕಾರೀ ಒಡೆತನದ ಎಫ್ಎಂ ವಾಹಿನಿಗಳದು ಮತ್ತೊಂದು ಗೋಳು. ಈ ಮುಂಚೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಪ್ರಸಾರಭಾರತಿಯ ಮೂಲಕ ತನ್ನ ಎಲ್ಲ ವಾಹಿನಿಗಳಿಗೂ ಅವುಗಳ ಕಾರ್ಯಕ್ರಮಗಳ ನಿರ್ಮಾಣಕ್ಕೂ ಗ್ರಾಂಟ್ಸ್ ನೀಡುತ್ತಿದ್ದವು. ಹಾಗಾಗಿ ವಾಹಿನಿಗಳು ಜಾಹೀರಾತುದಾರರು, ಆಡ್ ರೆವಿನ್ಯೂ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಅಸಲಿಗೆ ರೇಡಿಯೋ ಪ್ರಸಾರವನ್ನು ಅವರು ಒಂದು ವಾಣಿಜ್ಯ ಕಾರ್ಯಕ್ರಮ ಎಂತಲೇ ಭಾವಿಸಿರಲಿಲ್ಲ, ಸರ್ಕಾರವೂ  ಹಾಗೆ ಭಾವಿಸಿರಲಿಲ್ಲ. ಕಾರ್ಯಕ್ರಮಗಳಲ್ಲಿ ಲಾವಣ್ಯವಿತ್ತು, ಪ್ರಯೋಗಗಳು ನಡೆಯುತ್ತಿದ್ದವು. ಆದರೆ ಈಗ್ಗೆ ಕೆಲವು ವರ್ಷಗಳಿಂದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ತನ್ನ ಎಫ್ಎಂ ವಾಹಿನಿಗಳ ಕಾರ್ಯಕ್ರಮ ನಿರ್ಮಾಣಕ್ಕೆ ಪೂರ್ಣ ಪ್ರಮಾಣದ ಗ್ರಾಂಟ್ಸ್ ಅನ್ನು ಕೊಡುತ್ತಿಲ್ಲ. ಬದಲಿಗೆ ಅರ್ಧದಷ್ಟನ್ನು ಮಾತ್ರ ನೀಡುತ್ತಿದೆ. ಮಿಕ್ಕರ್ಧವನ್ನು ಈ ವಾಹಿನಿಗಳು, ಕಾರ್ಯಕ್ರಮಗಳ ನಿರ್ಮಾಪಕರು ಜಾಹೀರಾತುದಾರರನ್ನು ಹಿಡಿದು ಸಂಪಾದಿಸಿಕೊಡಬೇಕಿದೆ. ಸರಕಾರೀ ವಾಹಿನಿಗಳನ್ನು ಯಾರೂ ಕೇಳುವುದಿಲ್ಲ ಎಂಬ ತಪ್ಪು ಕಲ್ಪನೆ ನಮ್ಮಲ್ಲಿ ಆಳವಾಗಿ ಬೇರೂರಿರುವುದರಿಂದ ಯಾವುಧೇ ಖಾಸಗೀ ಕಂಪೆನಿಗಳು ಈ ವಾಹಿನಿಗಳಿಗೆ ಜಾಹೀರಾತು ನೀಡುವುದಿಲ್ಲ. ಈಗ ಈ ವಾಹಿನಿಗಳಲ್ಲಿರುವ ಪ್ರತಿಭಾವಂತರಿಗೆ ಇರುವ ಆಯ್ಕೆಗಳು ಎರಡು. ಒಂದು ಖಾಸಗೀ ವಾಹಿನಿಗಳೊಂದಿಗೆ ಸ್ಪರ್ಧಿಸಿ ಗೆಲ್ಲಬೇಕು. ಅದಕ್ಕಾಗಿ ಅವರ ಸಂಸ್ಕೃತಿಯನ್ನು ಅಪ್ಪಿಕೊಳ್ಳಬೇಕು. ಇದನ್ನು ಮಾಡಲಿಚ್ಛಿಸದವರು ಸುಮ್ಮನಿರಬೇಕು. ಹಾಗಾಗಿ ಬರಬರುತ್ತಾ ಸರಕಾರೀ ಒಡೆತನದ ಎಫ್ಎಂ ವಾಹಿನಿಗಳಲ್ಲೂ ಕೂಡ ಪ್ರಯೋಗಗಳು, ಫೀಚರ್ ಕಾರ್ಯಕ್ರಮಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಅಲ್ಲೂ ಮಾತು-ಹಾಡು ಮನೆ ಕಟ್ಟತೊಡಗಿದೆ. ನಮಗೆ ಇನ್ನೊಂದು ಅಪಭ್ರಂಶದ ವಾಹಿನಿ ಬೇಕಾಗಿಲ್ಲ. ಸರ್ಕಾರ ಇತ್ತ ಗಮನ ಹರಿಸಲಿ.

ರೇಡಿಯೋ ಎನ್ನುವುದು ಒಂದು ಅದ್ಭುತ ಮಾಧ್ಯಮ. ಅದರ ಸಾಧ್ಯತೆಗಳು ಅನಂತ. ಜನರ ನೆನಪಿನಿಂದ ಅಳಿಯುತ್ತಿದ್ದ ರೇಡಿಯೋವನ್ನು ಮತ್ತೆ ಚಾಲ್ತಿಗೆ ತಂದದ್ದು ಎಫ್ಎಂ ಕ್ರಾಂತಿಯೇ ಆಗಿದ್ದರೂ ಅವು ಈ ಮಾಧ್ಯಮದ ವಿಸ್ತಾರ ಮತ್ತು ಸಾಮರ್ಥ್ಯವನ್ನು ಅರಿಯದೆ ಸಂಕುಚಿತಗೊಂಡುಬಿಟ್ಟಿರುವುದು ಖೇದಕರ. ಇನ್ನಾದರೂ ಈ ಖಾಸಗೀ ಎಫ್ಎಂ ವಾಹಿನಿಗಳು ಎಚ್ಚೆತ್ತುಕೊಳ್ಳಲಿ, ಅವರಿಗಿರುವ ಪರಿಧಿಗಳಲ್ಲೇ ಉತ್ತಮ ಕಾರ್ಯಕ್ರಮಗಳನ್ನು ನೀಡಲಿ ಎಂಬುದಷ್ಟೇ ನನ್ನ ಕಳಕಳಿಯ ಮನವಿ.

One thoughts on “ಎಫ್ಫೆಂ 'ಕಂಪನಾಂಕಗಳು'

MATHI MAATU said...

chennaagide..content beku.. hege yaaru.. annode nanna prashne.. baredavarige, credit kodo paddhati barabeku.. aaga .. value barabahudu...

Proudly powered by Blogger
Theme: Esquire by Matthew Buchanan.
Converted by LiteThemes.com.