ರಂಗನಾಥ ಮಿಶ್ರಾ ವರದಿ ಎಂಬ ರಾಜಕೀಯ ಟೈಂ ಬಾಂಬ್

ಬಹುನಿರೀಕ್ಷಿತ ಟೈಂ ಬಾಂಬ್ ಲಿಬರ್ಹಾನ್ ವರದಿ ಬಂದ ಹಾಗೆ ಬಂದು ಹೋಯಿತು, ಸಿಡಿಯಲೇ ಇಲ್ಲ. ನಂತರದ ಸರದಿ ಸಾಚಾರ್ ಸಮಿತಿ ವರದಿಯದು. ಅದರ ಟೈಂ ಇನ್ನೂ ಬಂದಿಲ್ಲ, ಬಂದಾಗ ಸಿಡಿಮದ್ದೇ ಅದು. ಇರಲಿ. ಏತನ್ಮಧ್ಯೆ ಹೊಸದೊಂದು ಟೈಂ ಬಾಂಬ್ ರಾಜಕೀಯ ನೀಲಾಕಾಶದಲ್ಲಿ ಕಾಣಿಸುತ್ತಿದೆ - ರಂಗನಾಥ ಮಿಶ್ರಾ ವರದಿ. ಭಾರತದ ಮೈನಾರಿಟಿಗಳು, ಅವರ ಸ್ಥಿತಿಗತಿಗಳು ಮತ್ತು ಅವರನ್ನು ಪ್ರೋತ್ಸಾಹಿಸಲು ಅಗತ್ಯ ಕ್ರಮಗಳನ್ನು ಸೂಚಿಸಲು, ಯುಪಿಎ ಸರ್ಕಾರ ನಿವೃತ್ತ ಸುಪ್ರೀಂ ಕೋರ್ಟ್ ಛೀಫ್ ಜಸ್ಟೀಸ್ ರಂಗನಾಥ ಮಿಶ್ರಾ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ನಿಯಮಿಸಿತು. ಈ ಸಮಿತಿಯು ವರದಿಯನ್ನು ಸಿದ್ಧಪಡಿಸಿ 21 ಮೇ, 2007ರಂದು ಸರ್ಕಾರಕ್ಕೆ  ಸಲ್ಲಿಸಿತು. ಈ ಸುಮಾರು 3 ವರ್ಷಗಳಿಂದ ಅದರ ಕುರಿತು ಚಕಾರವೆತ್ತದ ಕೇಂದ್ರದ ಯುಪಿಎ ಸರ್ಕಾರ ಈಗ ಅದನ್ನು ಜಾರಿಗೊಳಿಸುವ ಇರಾದೆ ವ್ಯಕ್ತಪಡಿಸಿದೆ. ಆದರೆ ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಈ ವರದಿಯ ಅನುಷ್ಠಾನಕ್ಕೆ ಸುತಾರಾಂ ಒಪ್ಪದೆ, ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.


ಇರಲಿ ಬಿಡಿ. ಅಲ್ಲ ಹಿಂದುಳಿದ ವರ್ಗಗಳ ಮತ್ತು ಪರಿಶಿಷ್ಠರ ಮರಣ ಶಾಸನ ಅಂತ ಬಿಜೆಪಿಗರು ಹುಲಿವೇಷ ತೊಟ್ಟು ಕುಣಿಯುವಂಥದ್ದು ಈ ಆಯೋಗದ ವರದಿಯಲ್ಲೇನಿದೆ ಅಂತ ಕೆದಕುತ್ತಾ ಹೋದರೆ ಅಲ್ಲಿ ಬಿಚ್ಚಿಕೊಳ್ಳುತ್ತದೆ ಭಾರತದ ಅತಿ ವಿವಾದಾಸ್ಪದ ವಿಷಯಗಳ ಹುತ್ತ - ಮೀಸಲಾತಿ, ಮತಾಂತರ.....ನ್ಯಾ.ರಂಗನಾಥ ಮಿಶ್ರಾ ಆಯೋಗದ ವರದಿ ಅಲ್ಪಸಂಖ್ಯಾತರ ಸ್ಥಿತಿಗತಿಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಲೇ ಕ್ರಿಶ್ಚಿಯನ್ ಮತ್ತು ಮುಸ್ಲಿಮರಲ್ಲೇ ಜಾತಿ ಪದ್ದತಿಯಂತೆ ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರು ಎಮದು ಗುರುತಿಸಿ ಇವರಿಗೆ ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡುತ್ತದೆ. ನ್ಯಾ.ಮಿಶ್ರಾ ಆಯೋಗದ ಪ್ರಮುಖ ಶಿಫಾರಸುಗಳು ಈ ಕೆಳಕಂಡಂತಿವೆ -

  • ಅಲ್ಪಸಂಖ್ಯಾತರಿಗೆ ಶೇ.15ರಷ್ಟು ಮೀಸಲನ್ನು ಸಂವಿಧಾನದ 15(4)ರಡಿಯಲ್ಲಿ ಸಾಮಾಜಿಕ ಹಾಗೂ ವಿದ್ಯೆಗೆ ಹಾಗೂ ಸಕರ್ಾರಿ ನೌಕರಿಗೆ ಮೀಸಲಿಡುವುದು.  
  • ಈ ಮೀಸಲು ಪ್ರಮಾಣದಲ್ಲಿ ಶೇ.10 ಮುಸಲ್ಮಾನರು ಹಾಗೂ ಶೆ.5ರಷ್ಟು ಕ್ರೈಸ್ತರು ಮತ್ತಿತರ ಅಲ್ಪಸಂಖ್ಯಾತರಿಗೆ
  • ದಲಿತ ಕ್ರಿಶ್ಚಿಯನ್ ಮತ್ತು ದಲಿತ ಮುಸ್ಲಿಂರನ್ನು ಹರಿಜನ ಕೋಟಾದಡಿ ಸೇರಿಸುವುದು. 
  • ಅಲ್ಪಸಂಖ್ಯಾತರ ಮೀಸಲನ್ನು ಶಿಕ್ಷಣದ ಹೊರತಾಗಿ ಸಾಮಾಜಿಕ ವಲಯಕ್ಕೂ - ಗ್ರಾಮೀಣ ಉದ್ಯೋಗ, ರೋಜ್ಗಾರ್, ವಸತಿ ಮತ್ತು ನಿವೇಶನ ಹಂಚಿಕೆ - ವಿಸ್ತರಿಸುವುದು.
  • ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತ ಜನಾಂಗಕ್ಕೆ ಸೇರಿದವರು ಹಲ್ಲೆ ಮಾಡಿದರೆ ಸಂವಿಧಾನದ 46 ವಿಧಿ ಪ್ರಕಾರ ಸಕರ್ಾರ ರಕ್ಷಣೆ ನೀಡಬೇಕು.
  • ದಲಿತರು ಸ್ವಯಂ ಮತಾಂತರಗೊಂಡರೆ ಅವರಿಗೆ ಮತಾಂತರ ಪೂರ್ವದ ಮೀಸಲು ಹಕ್ಕುಗಳನ್ನು ಕಲ್ಪಿಸಬೇಕು.


ಅರ್ಥವಾಯ್ತಲ್ಲ ಯಾಕಿಷ್ಟು ಗದ್ದಲ ಎಂದು. ಅಲ್ಲ ಅವರಿಗೆ ಮೀಸಲು ಕಲ್ಪಿಸಿದರೆ ಅದು ಹೇಗೆ ಹಿಂದುಳಿದ ವರ್ಗದವರಿಗೆ ಮತ್ತು ದಲಿತರಿಗೆ ಮರಣಶಾಸನವಾದೀತು? ಅನ್ನುವುದು ಹಲವರ ಪ್ರಶ್ನೆ. ಅದಕ್ಕೆ ನಾವು ಸುಪ್ರೀಂ ಕೋರ್ಟ್ನೆಡೆಗೆ ಬೊಟ್ಟು ಮಾಡಿ ತೊರಿಸಬೇಕಾಗುತ್ತದೆ. ರಾಜಕೀಯ ಕಾರಣಗಳಿಗೆ ಇವರು ಸಿಕ್ಕಸಿಕ್ಕವರಿಗೆಲ್ಲಾ ಮೀಸಲಾತಿ ಘೋಷಿಸುತ್ತಾ ಹೋದರೆ ಮೆರಿಟಾಕ್ರಸಿ ಅಂದರೆ ವಿದ್ವತ್ಗೆ ಬೆಲೆಯೇ ಇಲ್ಲದಂತಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಒಟ್ಟು ಮೀಸಲು ಪ್ರಮಾಣ ಶೇ.50ರಷ್ಟನ್ನ ಮೀರಬಾರದು ಎಂದು ತನ್ನ ಒಂದು ತೀರ್ಪಿನಲ್ಲಿ ಎಚ್ಚರಿಸಿದೆ. ಈಗ ಜಾರಿಯಲ್ಲಿರುವ ಮೀಸಲಿನ ಒಟ್ಟು ಪ್ರಮಾಣ ಶೇ.49.5! ಅಲ್ಲಿಗೆ ಹೊಸ ಮೀಸಲಾತಿಯೊಂದನ್ನು ಕಲ್ಪಿಸಿದರೆ ಅದು ಈಗಿರುವ ಮೀಸಲಾತಿಯಲ್ಲಿ ಕಡಿತಗೊಳಿಸಿ ಅನುಷ್ಠಾನಗೊಳಿಸದೆ ಬೇರೆ ದಾರಿಯೇ ಇಲ್ಲ. ಹಿಮದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ಮೀಸಲು ಕಲ್ಪಿಸಲು ದೇಶಾದ್ಯಂತ ಮಂಡಲ ವರದಿಯ ಪ್ರಕಾರ ಜಾರಿಯಲ್ಲಿದೆ. ಹಲವು ಮಾನದಂಡಗಳ ಅನುಕರಣೆಯಿಂದಲೇ ವೈಜ್ಞಾನಿಕವಾಗಿ ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ರಾಷ್ಟ್ರೀಯ ಜನಸಂಖ್ಯೆಯ ಶೇ.52ರಷ್ಟಿರಬಹುದೆಂದು ಅಂದಾಜಿಸಲಾಗಿರುವ ಹಿಂದುಳಿದ ವರ್ಗದವರಿಗೆ ಶೇ.27ರಷ್ಟು ಮೀಸಲಾತಿಯನ್ನು ಸಂವಿಧಾನದ ಪರಿಚ್ಛೇದ 16(4)ರಡಿ ಸಕರ್ಾರೀ ನೌಕರಗಾಗಿ ಜಾರಿಯಲ್ಲಿಡಲಾಗಿದೆ. ಇದರಲ್ಲಿ ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರೂ ಸೇರಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ22.5ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ ರಂಗನಾಥ ಮಿಶ್ರಾ ವರದಿಯನ್ನು ಅನುಷ್ಠಾನಗೊಳಿಸಿದರೆ ಇವೆಲ್ಲವೂ ಏರುಪೇರಾಗುತ್ತದೆ. ಇದರ ಪ್ರಕಾರ ಶೇ. 27ರಷ್ಟು ಮೀಸಲು ಹೊಂದಿರುವ ಹಿಂದುಳಿದ ವರ್ಗಗಳ ಮೀಸಲು ಶೇ.12ಕ್ಕೆ ಇಳಿಯುತ್ತದೆ. ಅತಿಮುಖ್ಯವಾಗಿ ಈ ವರದಿ ಪರಿಶಿಷ್ಠ ಜಾತಿ ಹಾಗೂ ವರ್ಗಗಳ ಸ್ಟೇಟಸ್ಅನ್ನು ಹಿಂದೂಗಳಿಗೆ ಮಾತ್ರ ಸೀಮಿತಗೊಳಿಸದೆ ಅದನ್ನು ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರಿಗೂ ವಿಸ್ತರಿಸಿ, ಅವರಲ್ಲೂ ಪರಿಶಿಷ್ಠರ ಗುಂಪೊಂದನ್ನು ಗುರುತಿಸುತ್ತದೆ. ದಲಿತ ಕ್ರಿಶ್ಚಿಯನ್ ಮತ್ತು ದಲಿತ ಮುಸ್ಲಿಂರನ್ನು ಹರಿಜನ ಕೋಟಾದಡಿ ಸೇರಿಸಿರುವುದರಿಂದ ಹರಿಜನರಿಗೂ ಮೀಸಲು ಕಡಿಮೆಯಾಗಲಿದೆ.

ಮುಸ್ಲಿಮರಿಗೆ ಶೇ.10ರಷ್ಟು ಮತ್ತು ಕ್ರಿಶ್ಚಿಯನ್ನರಿಗೆ ಶೆ.5ರಷ್ಟು ಮೀಸಲಾತಿ ವ್ಹಾರೆವ್ಹಾ....ಕಾಂಗ್ರೆಸ್ನ ಕಣ್ಣರಳಿರುವುದೇ ಇಲ್ಲಿ. ಅಲ್ಪಸಂಖ್ಯಾತರ ಮತಬ್ಯಾಂಕ್ ಅನ್ನು ತನ್ನ ಸ್ವಂತ ಆಸ್ತಿಯೆಂಬಂತೆ ಕಾಂಗ್ರೆಸ್ ವರ್ತಿಸುತ್ತಾ ಬಂದಿರುವುದು, ಅಲ್ಪಸಂಖ್ಯಾತರು ಸತತವಾಗಿ ಕಾಂಗ್ರೆಸ್ಗೆ ಒಲಿಯುತ್ತಾ ಬಂದಿರುವುದು ತಿಳಿದಿರುವ ವಿಷಯವೇ. ಈಗ ಮುಸ್ಲಿಮರಿಗೆ ಶೇ.10ರಷ್ಟು ಮತ್ತು ಕ್ರಿಶ್ಚಿಯನ್ನರಿಗೆ ಶೇ.5ರಷ್ಟು ಮೀಸಲಾತಿಯನ್ನು ನೀಡಿದರೆ ಈ ಮತಬ್ಯಾಂಕುಗಳನ್ನು ಬ್ಯಾಂಕಿನಲ್ಲಿಟ್ಟು ಪಿಕ್ಸೆಡ್ ಡೆಪಾಸಿಟ್ನಂತೆ ಕಾಪಿಡಬಹುದೆಂಬ ದುರಾಸೆ ಕಾಂಗ್ರೆಸ್ನದು. ಹೊಸದಾಗಿ ಮೀಸಲಾತಿ ಕಲ್ಪಿಸುವುದರೊಂದಿಗೆ ಮುಸ್ಲಿಮರ ಮತ್ತು ಕ್ರಿಶ್ಚಿಯನ್ನರ ಅಭಿವೃದ್ಧಿ ಸಾಧ್ಯವಾ...ಗೊತ್ತಿಲ್ಲ. ಆದರೆ ಇದು ಅಲ್ಪಸಂಖ್ಯಾತರ ಮತಬ್ಯಾಂಕುಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಕಾಂಗ್ರೆಸ್ ಈ ವರದಿಯನ್ನು ಜಾರಿಗೊಳಿಸಿಯೇ ಸಿದ್ಧ ಎಂದು ತೊಡೆ ತಟ್ಟಿ ನಿಂತಿದೆ.

ಇದಕ್ಕೆ ತದ್ವಿರುದ್ಧ ದಿಕ್ಕಿನ ರಾಜಕೀಯ ಬಿಜೆಪಿ ಮತ್ತಿತರ ಪಕ್ಷಗಳದು. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ದಲಿತ ಕ್ರಿಶ್ಚಿಯನ್ನರು ಎಂಬ ಹೊಸ ಪ್ರಭೇಧವೊಂದನ್ನು ಸೃಷ್ಟಿಸಿ ಅವರಿಗೆ ಈ ಮೊದಲಿನಂತೆ ಮೀಸಲಾತಿ ಸೌಲಭ್ಯವನ್ನು ಮುಂದುವರೆಸುವುದು ಮತಾಂತರವನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂಬುದು ಬಿಜೆಪಿಗರ ವಾದ. ಇದು ತಕ್ಕಮಟ್ಟಿಗೆ ನಿಜವೂ ಹೌದು. ಒಮ್ಮೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಗೆ ಮೀಸಲಾತಿ ನೀಡಿದರೆ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಕಡಿತ ಉಂಟಾಗುತ್ತದೆಯಲ್ಲದೆ ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರನ್ನು ಪರಿಶಿಷ್ಠರ ವರ್ಗಕ್ಕೆ ಸೇರಿಸುವುದರಿಂದ ಎಸ್ಸಿ/ಎಸ್ಟಿ ಗಳ ಮೀಸಲಾತಿಯಲ್ಲೂ ಕಡಿತವುಂಟಾಗುತ್ತದೆ. ಈ ಜಾತಿ ಜನಾಂಗಗಳನ್ನು ಕಾಂಗ್ರೆಸ್ ವಿರುದ್ಧ ಎತ್ತಿ ಕಟ್ಟಿ ಆ ಮತಬ್ಯಾಂಕುಗಳನ್ನು ಭದ್ರ ಮಾಡಿಕೊಳ್ಳುವ ರಾಜಕಾರಣ ಇವರದು. ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಗುಜ್ಜರ್ ಗಲಾಟೆಗೂ ಇದೇ ಹಿನ್ನೆಲೆ. ಗುಜ್ಜರ್ಗಳ ಆಗ್ರಹದಂತೆ ಅವರಿಗೆ ಮಿಸಲಾತಿ ಕಲ್ಪಿಸಿದರೆ ಅಲ್ಲಿನ ರಾಜಕೀಯವಾಗಿ ಬಲಿಷ್ಠರಾಗಿರುವ ಬಿಜೆಪಿ ಬೆಂಬಲಿಸುವ ಮೀನಾಗಳ ಮೀಸಲಾತಿಯಲ್ಲಿ ಕಡಿತವುಂಟಾಗುತ್ತದೆ, ಅವರು ಬಿಜೆಪಿಯ ವಿರುದ್ಧ ತಿರುಗಿ ಬೀಳುತ್ತಾರೆಂಬ ಭೀತಿ, ಆ ವಿವಾದವನ್ನು ಅಷ್ಟು ಸುದೀರ್ಘ ಅವಧಿ ಜೀವಂತವಾಗಿಟ್ಟಿತ್ತು. ಅಷ್ಟು ದೂರ ಯಾಕೆ? ಪಕ್ಕದ ಆಂಧ್ರದ ಉದಾಹರಣೆಯನ್ನೇ ನೋಡಿ. ಆಂಧ್ರದಲ್ಲಿ ಮೊದಲಿಂದಲೂ ನಡೆಯುತ್ತಿರುವುದು ರೆಡ್ಡಿ ನಾಯ್ಡುಗಳ ಕಾಳಗ. ಇವರದೇ ರಾಜ್ಯಭಾರ. ಇವರಿಬ್ಬರನ್ನೂ ಎದುರಿಸಿ ಹಿಂದುಳಿದ ವರ್ಗಗಳ ನಾಯಕನಾಗಿ ರಾಜಕೀಯ ಅರಂಗ್ರೇಟಂ ಮಾಡಿದಾತ ತೆಲುಗಿನ ಪ್ರಸಿದ್ಧ ನಟ ಚಿರಂಜೀವಿ. ಈತ ಮೊದಲಿಗೆ ಅಹಿಂದ ಮತಬ್ಯಾಂಕನ್ನು ಧೃವೀಕರಿಸಿಕೊಳ್ಳುವತ್ತ ಸಾಗಿದ. ಇದು ಕಾಂಗ್ರೆಸ್ ಮತ್ತು ಟಿಡಿಪಿಗಳೆರಡಕ್ಕೂ ಭೀತಿ ಹುಟ್ಟಿಸಿತು. ಆಗ ವೈ.ಎಸ್.ರಾಜಶೇಖರ ರೆಡ್ಡಿ ಬಳಸಿದ್ದು ಇಂತಹ ಮೀಸಲಾತಿಯ ಹಾವನ್ನೇ. ರೆಡ್ಡಿ ನಾಯ್ಡುಗಳ ನಂತರದ ಬಲಿಷ್ಠ ಜಾತಿಯಾದ ಕಾಪುಗಳಿಗೆ ಹಿಂದುಳಿದ ವರ್ಗಗಳ ಕೋಟಾದಡಿ ಮಿಸಲಾತಿ ಕಲ್ಪಿಸುವ ಹಾವನ್ನು ತೇಲಿ ಬಿಟ್ಟರು. ಚಿರಂಜೀವಿ ಮೂಲತಃ ಕಾಪು ಜನಾಂಗದವನು. ಆತನಿಗೆ ಇದನ್ನು ಬೆಂಬಲಿಸದೇ ಬೇರೆ ದಾರಿಯೇ ಇರಲಿಲ್ಲ, ಬೆಂಬಲಿಸಿದ. ಇತರೆ ಹಿಂದುಳಿದ ಜಾತಿಗಳವರು ತಮಗೆ ದೊರೆಯುತ್ತಿರುವ ಮಿಸಲಾತಿಯಲ್ಲಿ ಕಡಿತವುಂಟಾಗುತ್ತದೆ ಎಂದು ಇದನ್ನು ವಿರೋಧಿಸಿದರು. ಚಿರಂಜೀವಿ ಸಮಸ್ತ ಹಿಂದುಳಿದ ವರ್ಗಗಳ ನಾಯಕನಾಗುವ ಬದಲಿಗೆ ಕಾಪುಗಳ ನಾಯಕನಾಗಿ ಸೀಮಿತಗೊಂಡುಬಿಟ್ಟ! ವೈ.ಎಸ್.ಆರ್ ಮತ್ತೆ ಗದ್ದುಗೆ ಏರಿದರು.

ಈಗಿನ ಪರಿಸ್ಥಿತಿಯಲ್ಲಿ ನ್ಯಾ. ರಂಗನಾಥ ಮಿಶ್ರಾ ವರದಿಯನ್ನು ಕೇಂದ್ರದ ಯುಪಿಎ ಸರ್ಕಾರ ಅನುಷ್ಠಾನಗೊಳಿಸಿದ್ಧೇ ಆದರೆ ಕರ್ನಾಟಕದ  ರಾಜಕೀಯ ಈಕ್ವೇಷನ್ಗಳಲ್ಲೂ ಅನೇಕ ಬದಲಾವಣೆಗಳಾಗುವುದು ಶತಸಿದ್ಧ. ಸದ್ಯ ಲಿಂಗಾಯತರು ಬಿಜೆಪಿಯ ಜೊತೆಯೂ ಒಕ್ಕಲಿಗರು ಜೆಡಿಎಸ್ ಜೊತೆಯೂ ನಿಂತಿರುವುದು ವಿದಿತವೇ. ಕಾಂಗ್ರೆಸ್ಗೆ ಈಗ ಉಳಿದಿರುವುದು ತನ್ನ ಪಾರಂಪರಿಕ ಮತಬ್ಯಾಂಕ್ ಮಾತ್ರ. ಆದರೆ ಕಾಂಗ್ರೆಸ್ ರಂಗನಾಥ ಮಿಶ್ರಾ ವರದಿಯನ್ನು ಅನುಷ್ಠಾನಗೊಳಿಸಿದರೆ ಅದರಿಂದ ಕಾಂಗ್ರೆಸ್ ಪಡೆಯುವ ಮತಗಳಿಗಿಂತಲೂ ಕಳೆದುಕೊಳ್ಳುವ ಮತಗಳೇ ಹೆಚ್ಚು. ಇದರಿಂದ ಹೊಟ್ಟೆಯಲ್ಲಿ ದಾವಾನಿಲ ಬಿದ್ದಂತಾಡುತ್ತಿರುವ ಪರಿಶಿಷ್ಠರು, ಹಿಂದುಳಿದವರ್ಗಗಳ ದೊಡ್ಡ ಗುಂಪೊಂದು ಕಾಂಗ್ರೆಸ್ ತೊರೆದು ಬೇರೆ ಪರ್ಯಾಯವಿಲ್ಲದೆ ಬಿಜೆಪಿಯ ಕೈಹಿಡಿಯುತ್ತದೆ. ಬಿಜೆಪಿಯ ಕೈ ಮತ್ತಷ್ಟು ಬಲವಾಗುತ್ತದೆ. ಕಾಂಗ್ರೆಸ್ ಮತ್ತಷ್ಟು ಸೊರಗುತ್ತದೆ.

ಹೀಗೆ ಈ ಮೀಸಲಾತಿಗಳಿಂದ ಆ ಜಾತಿ ಜನಾಂಗಗಳು ಎಷ್ಟರ ಮಟ್ಟಿಗೆ ಅಭಿವೃದ್ಧಿಯಾದವೋ ಬಲ್ಲವರಿಲ್ಲವಾದರೂ ರಾಜಕೀಯ ಚದುರಂಗದಾಟದಲ್ಲಿ ಇದೊಂದು ಟೈಂ ಬಾಂಬ್ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

One thoughts on “ರಂಗನಾಥ ಮಿಶ್ರಾ ವರದಿ ಎಂಬ ರಾಜಕೀಯ ಟೈಂ ಬಾಂಬ್

K Ravikumar said...

bro tavu pragatiparavage barederuvere
ranganath misravaradeyannu sampurnavage face book ge hake
]

Proudly powered by Blogger
Theme: Esquire by Matthew Buchanan.
Converted by LiteThemes.com.