ನೈಸ್ ಪುರಾಣ - 8 - ರೈತರ ಭೂಮಿಯ ನುಂಗುತ್ತಿರುವ ಹೆಬ್ಬಾವು ನೈಸ್

ಮೂಲ ಒಪ್ಪಂದದ ಆಧಾರದ ಮೇಲೆ 20-11-1995ರಂದು ಅಂದಿನ ಮುಖ್ಯಮಂತ್ರಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಸೇರಿದ್ದ ಹೈಲೆವೆಲ್ ಕಮಿಟಿಯು 7 ಟೌನ್ಷಿಪ್ಗಳನ್ನು 5ಕ್ಕೆ ಮಿತಿಗೊಳಿಸಿ, ಮಿಕ್ಕಂತೆ ಇನ್ನುಳಿದ ಎಲ್ಲ ಪ್ರಸ್ತಾಪಗಳನ್ನು ಅನುಮೋದಿಸಿ, ಅದಕ್ಕೆ ಸಂಬಂಧ ಪಟ್ಟ ಹಾಗೆ, ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಇಲಾಖೆಗೆ ಆದೇಶಿಸಿದ್ದ, ಜಿ.ಒ. ಪಿಡಬ್ಲ್ಯೂ 32 ಸಿಎಸ್ಆರ್ 95 ರ ಪ್ರಕಾರ ನೈಸ್ ಕಾಮಗಾರಿಗೆ ಅಗತ್ಯ ಬೇಕಾದ ಭೂಮಿಯ ವಿವರಗಳನ್ನು ಕೋರಿ 8-02-1996ರಂದು ಅಂದಿನ ಲೋಕೋಪಯೋಗಿ ಕಾರ್ಯದರ್ಶಿ  ಬಿ.ಪಿ.ನಿತ್ಯಾನಂದ ನೈಸೆಲ್ಗೆ ಒಂದು ಪತ್ರ ಬರೆಯುತ್ತಾರೆ. ಈ ಪತ್ರಕ್ಕುತ್ತರವಾಗಿ ಭಾರತ್ ಫೋರ್ಜ್ ಲೆಟೆರ್ ಹೆಡ್ನ ಮೇಲೆ ಶಿವಕುಮಾರ ಖೇಣಿಯವರು ಒಂದು ಪತ್ರ ಬರೆದು ಬೆಂಗಳೂರು ಅರ್ಬನ್ ಮತ್ತು ರೂರಲ್ ಜಿಲ್ಲೆಗಳಲ್ಲಿ, ನೈಸ್ ಪ್ರಾಜೆಕ್ಟ್ಗೆ ಬೇಕಾದ ಭೂಮಿಯ ವಿವರವನ್ನು ಸರ್ವೇ ನಂ.ಗಳ ಸಹಿತ ಸಲ್ಲಿಸುತ್ತಾರೆ. ಹೀಮದೆಯೇ ಮಾರ್ಚ್ 11, 18, 29, ಏಪ್ರಿಲ್ 24, 1996ರಂದು ಬರೆದ ಸತತ ಪತ್ರಗಳಲ್ಲಿ  ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಟೌನ್ಷಿಪ್, ಇಂಟರ್ಛೇಂಜ್, ಕ್ಲೋವರ್ ಲೀಫ್, ಪೆರಿಫೆರಲ್ ರೋಡ್ ಮತ್ತಿತರ ಎಲ್ಲ ಕಾಮಗಾರಿಗೂ ಅಗತ್ಯ ಬೇಕಾದ ಭೂಮಿಯ ವಿವರವನ್ನು ಸರ್ವೇ ನಂ.ಗಳ ಸಹಿತ ಸಲ್ಲಿಸುತ್ತಾರೆ. ಎಲ್ಲಾ ಶೇರಿ ಈ ಭೂಮಿಯ ವಿವರ ನೈಸೆಲ್ ಸಲ್ಲಿಸಿರುವ 12 ಬುಕ್ಲೆಟ್ಗಳಲ್ಲಿ ಅಡಗಿದೆ.

ಇವತ್ತು ಖೇಣಿ ಸಾಹೇಬರು ನಾವು ಸರ್ಕಾರಕ್ಕೆ ಸಲ್ಲಿಸರುವುದೇ ಒಂದು ಅಲೈನ್ಮೆಂಟು ಅದರಂತೆಯೇ ನಾವು ಒಮ್ಮೆ ಮಾತ್ರ ಅಗತ್ಯ ಭೂಮಿಯ ಸರ್ವೇ ನಂ.ಗಳನ್ನು ಸಲ್ಲಿಸಿದ್ದೇವೆ ಎನ್ನುತ್ತಾರಲ್ಲ? ಅದು ಇದೇ. ಆದರೆ ನೀವು ಇವತ್ತು ನೈಸ್ ರಸ್ತೆ ಹಾದು ಹೋಗುತ್ತಿರುವುದು ಈ ಪ್ರಾಂತ್ಯದಲ್ಲಲ್ಲವೇ ಅಲ್ಲ. ಇರಲಿ, ಅದು ಇನ್ನೊಂದು ದೊಡ್ಡ ಕಥೆ. ಅದಕ್ಕೆ ನಂತರ ಬರೋಣ. ಹೀಗೆ ಖೇಣಿ ಸಾಹೇಬರು ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನಲ್ಲಿರುವ , ಸರ್ಕಾರದಿಂದ ಅನುಮೋದನೆ ಪಡೆದಿರುವ ಅಲೈನ್ಮೆಂಟಿಗೆ ಅನುಗುಣವಾಗಿ ಬಿಎಂಐಸಿಪಿಗೆ ಅಗತ್ಯ ಬೇಕಾದ ಭೂಮಿಯ ವಿವರಗಳನ್ನು ಸಲ್ಲಿಸಿದ್ದಾರೆ. ಅಲ್ಲಿಗೆ ಅವರೇ ಒಪ್ಪಿಕೊಂಡಂತೆ ನೈಸ್ ಯೋಜನೆಗೆ ಬೇಕಾಗಿರುವುದು ಇದೇ ಭೂಮಿ.

ರ್ನಯಸೆಲ್ ಕಂಪೆನಿ ನೀಡಿರುವ ಈ ಮಾಹಿತಿಯ ಆಧಾರದ ಮೇಲೆ ಸರ್ಕಾರದ ಮಟ್ಟದಲ್ಲಿ ಕೆಲಸ ಶುರುವಾಯಿತು. ಲೋಕೋಪಯೋಗಿ ಕಾರ್ಯದರ್ಶಿಗಳು ತಮಗೆ ಸಲ್ಲಿಸಲ್ಪಟ್ಟ ಈ ಮಾಹಿತಿಯ ಆಧಾರದ ಮೇಲೆ ಲೋಕೋಪಯೋಗಿ ಚೀಫ್ ಇಂಜಿನಿಯರ್ ಅವರಿಗೆ 16-03-1996ರಂದು ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ಕೊಡುವಂತೆ ಕೋರಿ ಪತ್ರ ಬರೆಯುತ್ತಾರೆ. ಅವರು ಇನ್ ಟರ್ನ್ ಲೋಕೋಪಯೋಗಿ ಇಲಾಖೆಯ ಡೆಪ್ಯೂಟಿ ಕಮೀಶನರ್ ಅವರಿಗೆ ಪತ್ರ ಬರೆಯುತ್ತಾರೆ. ಇದೇ ವಿಷಯವಾಗಿ ಅಶೋಕ ಖೇಣಿಯವರು 20 ಮೇ, 1996ರಂದು ಕೆಎಸ್ಐಐಡಿಸಿ ಅಧ್ಯಕ್ಷರಿಗೆ ಒಂದು ಪತ್ರ ಬರೆಯುತ್ತಾರೆ. ಕೆಎಸ್ಐಐಡಿಸಿಯಲ್ಲಿ ಮೇ 22ರಂದು ಈ ವಿಷಯವಾಗಿ ಒಮದು ಕೋರ್ ಗ್ರೂಪ್ ಮೀಟಿಂಗ್ ನಡೆಯುತ್ತದೆ. ಅಲ್ಲಿ ಬಿಎಂಐಸಿಪಿ ಯೋಜನೆಯನ್ನು ಕೆಎಸ್ಐಐಡಿಸಿಗಿಂತಲೂ, ಕೆಐಎಡಿಬಿ ಕಾಯ್ದೆಯನ್ವಯ ಜಾರಿ ಮಾಡಿದರೆ ಸುಲಭವಾಗುತ್ತದೆ ಎಂದು ಕೈ ತೊಳೆದುಕೊಳ್ಳುತ್ತದೆ.

ನವೆಂಬರ್ 22 ಮತ್ತು 26ರಂದು ಅಶೋಕ ಖೇಣಿ ಸಾಹೇಬರು ಲೋಕೋಪಯೋಗಿ ಕಾರ್ಯದರ್ಶಿಗಳಾದ ಸಿ.ಆರ್. ರಮೇಶ್ ಅವರಿಗೆ ಮತ್ತೆರಡು ಪತ್ರಗಳನ್ನು ಬರೆದು, ಬಿಎಂಐಸಿಪಿಗೆ ಅಗತ್ಯ ಬೇಕಾದ 6956 ಎಕರೆ ಸರಕಾರೀ ಭೂಮಿಯ ಹಸ್ತಾಂತರ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತಾರೆ. ಇದರ ಜೊತೆಗೆ ಬಿಎಂಐಸಿಪಿಗೆ ಅಗತ್ಯ ಬೇಕಾದ ಸರಕಾರೀ ಭೂಮಿಯ ಸಂಪೂರ್ಣ ವಿವರ ಸರ್ವೇ ನಂ.ಗಳ ಸಹಿತ ಸಲ್ಲಿಸಿರುತ್ತಾರೆ. ಅದೇ ದಿನ ಅಂದರೆ ನವೆಂಬರ್ 26, 1996 ರಂದು ಸಿ.ಆರ್.ರಮೇಶ್ ಅವರು ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಈ ಕೂಡಲೇ ಅಗತ್ಯ ಬೇಕಾದ ಸರಕಾರೀ ಭೂಮಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕಾಗಿ ಬರೆಯುತ್ತಾರೆ. ಈ ಕೂಡಲೇ ಸರ್ಕಾರದ ಮಟ್ಟದಲ್ಲಿ ಈ ಕುರಿತು ಒಂದು ಸಭೆ ನಡೆಯುತ್ತದೆ. ಲೋಕೋಪಯೋಗಿ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ಕೆಎಸ್ಐಐಡಿಸಿ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಈ ಸಭೆಯಲ್ಲಿ ಬಿಎಂಐಸಿಪಿ ಯೋಜನೆಗೆ ಅಗತ್ಯ ಬೇಕಾದ 6956 ಎಕರೆ ಸರಕಾರೀ ಭೂಮಿಯನ್ನು ಕಂಪೆನಿಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು. ಈ ಸಂಬಂಧ ಫೈನಾನ್ಸ್ ಡಿಪಾರ್ಟ್ಮೆಂಟಿನ ಒಪ್ಪಿಗೆಯನ್ನೂ ಪಡೆದು 20-1-1997ರಂದು ಸರಕಾರೀ ಆದೇಶವೊಂದನ್ನು ಕೂಡ ಹೊರಡಿಸಲಾಯಿತು.

ಇದಾದ ಕೆಲವೇ ದನಗಳಲ್ಲಿ, ಅಂದರೆ ಏಪ್ರಿಲ್ 3, 1997 ರಂದು ಸರ್ಕಾರ ನ್ಯಸೆಲ್ ಕಂಪೆನಿಯ ಜೊತೆ ಫ್ರೇಂವರ್ಕ್ ಅಗ್ರೀಮೆಂಟಿಗೆ ಸಹಿ ಹಾಕಿತು. ಬಹುತೇಕ ಬದಲಾವಣೆಗಳು ನಡೆದದ್ದೇ ಆಗ. ನಾವು ಈ ಕುರಿತು ಕೂಲಂಕುಷವಾಗಿ ತಿಳಿದುಕೊಂಡಿದ್ದೇವೆ. ಆದ್ದರಿಂದ ಎಲ್ಲವನ್ನೂ ಮೆಲುಕು ಹಾಕುವುದು ಅನಾವಶ್ಯಕವಾದರೂ, ಭೂಮಿಯ ವಿಷಯದಲ್ಲಿ ಆದ ಬದಲಾವಣೆಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ಮೆಲುಕು ಹಾಕುವುದು ಉತ್ತಮ. ನಿಮಗೆ ನೆನಪಿರುವುದೇ ಆದರೆ ಕಂಪೆನಿ ತನ್ನ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ನ ಟೇಬಲ್ 6.7ರಲ್ಲಿ ಸ್ಪಷ್ಟವಾಗಿ ದಾಖಲಿಸಿತ್ತು, ರಸ್ತೆಗೆ 5119.37 ಎಕರೆಗಳು ಅಗತ್ಯ ಎಂದು. ಇದಲ್ಲದೆ 7 ಟೌನ್ಷಿಪ್ಗಳಿಗೆ 20,092 ಎಕರೆಗಳು ಅಗತ್ಯವೆಂದು ತಿಳಿಸಿತ್ತು. ಆದರೆ ಸರ್ಕಾರ ಟೌನ್ಷಿಪ್ಗಳನ್ನು 7ರಿಂದ 5ಕ್ಕೆ ಇಳಿಸಿದ್ದರಿಂದ ಇದಕ್ಕಾಗಿ 13,194 ಎಕರೆಗಳು ಸಾಕೆಂದು ಹೈಲೆವೆಲ್ ಕಮಿಟಿ ಶಿಫಾರಸಿನ ಹಿನ್ನಲೆಯಲ್ಲಿ ಹೊರಡಿಸಿದ ಆದೇಶದಲ್ಲಿ ಸರ್ಕಾರ ಹೇಳಿಕೊಂಡಿದೆ. ಅಲ್ಲಿಗೆ ರಸ್ತೆ ಮತ್ತು ಟೌನ್ಷಿಪ್ಗಳೆರಡಕ್ಕೂ ಸೇರಿ ಮೂಲದಲ್ಲಿ ಅಗತ್ಯವಿದ್ದದ್ದು ಬರಿಯ 18,313 ಎಕರೆಗಳು.

ಆದರೆ ಫ್ರೇಂವರ್ಕ್ ಅಗ್ರೀಮೆಂಟಿನಲ್ಲಿ ಆಶ್ಚರ್ಯ ಕಾದಿತ್ತು. ಫ್ರೇಂವರ್ಕ್ ಅಗ್ರೀಮೆಂಟಿನ ಷೆಡ್ಯೂಲ್ 1ರಲ್ಲಿ ಪ್ರಾಜೆಕ್ಟಿಗೆ ಅಗತ್ಯ ಬೇಕಾದ ಭೂಮಿಯ ಪ್ರಮಾಣವನ್ನು ನಮೂದಿಸಲಾಗಿದೆ. ಅಲ್ಲಿ ಮಿಕ್ಕೆಲ್ಲವೂ ಮೊದಲಿನಂತೆಯೇ ಇದ್ದರೂ ರಸ್ತೆಗೆ 5119.37 ಎಕರೆಗಳ ಬದಲಿಗೆ 6999 ಎಕರೆಗಳು ಎಂದು ನಮೂದಾಗಿದೆ! ಅಂದರೆ ಕೇವಲ(!) 1880 ಎಕರೆಗಳಷ್ಟು ಹೆಚ್ಚುವರಿ ಭೂಮಿಯನ್ನು ಸರ್ಕಾರ ಕಂಪೆನಿಗೆ ಬಿಟ್ಟುಕೊಟ್ಟಿದೆ. ಆದರೆ ಯಾಕೆ? ಅದು ಉತ್ತರವೇ ಇಲ್ಲದ ಪ್ರಶ್ನೆ. ಹೀಗೆ ಹೆಚ್ಚುವರಿ ಭೂಮಿ ನೀಡುವುದರ ಪ್ರಸ್ತಾಪ ಇಡಿಯ ಫ್ರೇಂವರ್ಕ್ ಅಗ್ರೀಮೆಂಟಿನಲ್ಲಿ ಬೇರೆಲ್ಲೂ ಬರುವುದಿಲ್ಲ. ಷೆಡ್ಯೂಲ್ನಲ್ಲಿ ಕೂಡ ಈ ಹೆಚ್ಚುವರಿ ಭೂಮಿಗೆ ಯಾವುದೇ ವಿವರಣೆಗಳಿಲ್ಲ. ಅದಕ್ಕೊಂದು ಕಾರಣ, ಸರ್ವೇ, ಅನುಮೋದನೆಗಳು....ಊಹುಂ ಅದ್ಯಾವುದೂ ಇಲ್ಲ, ಸುಮ್ಮನೆ ಗಿಫ್ಟ್ ಏನೋ ಅನ್ನುವಂತೆ 1880 ಎಕರೆ ಹೆಚ್ಚುವರಿ ಭೂಮಿಯನ್ನು ಕಂಪೆನಿಗೆ ಕೊಡುವಂತಿರುವ ಒಪ್ಪಂದಕ್ಕೆ ಸರ್ಕಾರ ಸಹಿ ಹಾಕಿದೆ.

ಇಲ್ಲಿಂದ ಶುರುವಾಯಿತು ಸ್ವಾಮಿ ಬಿಎಂಐಸಿಪಿ ಯೋಜನೆಯು ಒಂದು ರಿಯಲ್ ಎಸ್ಟೇಟ್ ದಂಧೆಯಾಗಿ, ಡಿಜೆನರೇಟ್ ಆಗುವುದು. ಇನ್ನು ಮುಂದಕ್ಕೆ, ಬಿಎಂಐಸಿಪಿ ಯೋಜನೆಯ ಈ ನೈಸ್ ಪುರಾಣದಲ್ಲಿ ಕೇಳಿ ಬರುವುದೆಲ್ಲವೂ ಭೂಮಿ ನುಂಗುವ ಹೆಬ್ಬಾವಿನ ಉಪಮೆಯೇ! ಆ ಮಟ್ಟಿಗೆ ಯೋಜನೆ ಅಡ್ಡದಾರಿ ಹಿಡಿದುಬಿಟ್ಟಿತ್ತು.

ಮೇ 15 1997ರಂದು ಲೋಕೋಪಯೋಗಿ ಕಾರ್ಯದರ್ಶಿ ಸಿ.ಆರ್.ರಮೇಶ್ ಅವರು ವಿಶೇಷ ಆಸಕ್ತಿ ವಹಿಸಿ ಕೆಐಎಡಿಬಿಗೆ ಒಂದು ಪತ್ರ ಬರೆದು ಎಕ್ಸ್ಪ್ರೆಸ್ ವೇನ ದಾರಿಯಲ್ಲಿ ಇನ್ನೂ ಅನೇಕರು ತಮ್ಮ ತಮ್ಮ ಪ್ರಾಜೆಕ್ಟ್ಗಳನ್ನು ಸ್ಥಾಪಿಸಲು ಹವಣಿಸುತ್ತಿದ್ದಾರೆ, ಮತ್ತು ಇದೇ ಪರಿಧಿಯಲ್ಲಿ ಅನೇಕ ಒತ್ತುವರಿಗಳಾಗುತ್ತಿವೆ. ಇದನ್ನು ಕೆಐಎಡಿಬಿ ತಡೆಯಬೇಕು ಎಂದು ಮನವಿ ಮಾಡಿಕೋಳ್ಳುತ್ತಾರೆ. ಜೂನ್ 3, 1997ರಂದು ಇದೇ ಕ್ಯಾಪ್ಟನ್ ರಮೇಶ್ ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ, ಮೈಸೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಕಾರ್ಯದರ್ಶಿ ಗಳಿಗೆ ಹೀಗೊಂದು ಪತ್ರ ಬರೆಯುತ್ತಾರೆ.
I am enclosing herewith a copy of the survey nos. covering the Bangalore - Mysore infrastructure Corridor Project alignment. This alignment has been approved by the state government.
In view of the government decision, it is required that the aforementioned survey nos. should not be alienated. It is required that action must be initiated immediately in the matter.

ಇದರ ಜೊತೆಗೆ ಬಿಎಂಐಸಿಪಿ ಯೋಜನೆಗೆ ಅಗತ್ಯ ಬೇಕಾದ ಭೂಮಿಯ ವಿವರವನ್ನೂ ಸರ್ವೇ ನಂ.ಗಳ ಸಹಿತ ಲಗತ್ತಿಸುತ್ತಾರೆ. ಫ್ರೇಂವರ್ಕ್  ಅಗ್ರೀಮೆಂಟ್ ಆದ ಬಳಿಕ ಅದರ ಅನುಷ್ಠಾನಕ್ಕೆಂದು ಒಂದು ಎಂಪವರ್ಡ್ ಕಮಿಟಿಯನ್ನು ರಚಿಸಲಾಗಿತ್ತು. ಅದರ ಮೊದಲ ಸಬೆ ನಡೆದದ್ದು, ಏಪ್ರಿಲ್ 29, 1997ರಂದು. ಈ ಸಬೆಗೆ ಅಂದಿನ ಮೂಖ್ಯ ಕಾರ್ಯದರ್ಶಿ ಬಿ.ಆರ್.ಪ್ರಭಾಕರರವರು ಅಧ್ಯಕ್ಷತೆ ವಹಿಸಿದ್ದರು. ಸಂಬಂಧಪಟ್ಟ ಇಲಾಖೆಗಳ ಎಲ್ಲಾ ಕಾರ್ಯದಶರ್ಿಗಳೂ ಹಾಜರಿದ್ದ ಈ ಸಭೆಗೆ ಅಶೋಕ ಖೇಣಿಯವರು ವಿಶೇಷ ಆಹ್ವಾನಿತರಾಗಿದ್ದರು. ಈ ಸಭೆಯಲ್ಲಿ ಅಶೋಕ ಖೇಣಿಯವರು ಅಗತ್ಯ ಭೂಮಿಯ ಸರ್ವೇ ನಂ.ಗಳ ಹೊಸ ಲಿಸ್ಟ್ ಒಂದನ್ನು ಸಲ್ಲಿಸಿದರಲ್ಲದೆ, ಈ ಲಿಸ್ಟ್ ಅನ್ನು ಮುಖ್ಯ ಕಾರ್ಯದರ್ಶಿ ಗಳು ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ರವಾನಿಸಬೇಕು ಎಂದು ನಿರ್ಧಾರ ಕೈಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದರು. ಸಭೆಯ ನಿರ್ಧಾರದಂತೆ 31-07-1997ರಂದು ಮುಖ್ಯ ಕಾರ್ಯದರ್ಶಿಗಳ ಕಛೇರಿಯಿಂದ ಸರಕಾರೀ ಆದೇಶವೊಂದನ್ನು ಹೊರಡಿಸಲಾಯಿತು. PWD 155 CRM 95. ಇದು ಹೇಗೆ ಹಗರಣವಾದೀತು? ಎಂದು ನೀವು ಕೇಳಬಹುದು. 


ಅಸಲಿಗೆ ಹಗರಣವಿರುವುದೇ ಇಲ್ಲಿ. ಅಶೋಕ ಖೇಣಿಯವರು ಪುನಃ ಸಲ್ಲಿಸಿದ್ದ ಸರ್ವೇ ನಂ.ಗಳ ಲಿಸ್ಟ್ ಏನಿತ್ತು, ಅದು ಖೊಟ್ಟಿಯಾಗಿತ್ತು. ಹೌದು ಈ ಹೊಸ ಲಿಸ್ಟ್ನಲ್ಲಿ ಪ್ರಾಜೆಕ್ಟ್ ಟೆಕ್ನಿಕಲ್ ರಿಪೋರ್ಟ್ ಅಥವಾ ಫ್ರೇಂವರ್ಕ್ ಅಗ್ರೀಮೆಂಟಿನಿಂದ ಹೊರಹೊಮ್ಮುವ ರಸ್ತೆಯ ಅಲೈನ್ಮೆಂಟಿಗಿಂತ ಹೊರತಾದ ಸುಮಾರು 17 ಹಳ್ಳಿಗಳನ್ನು ಬಿಎಂಐಸಿಪಿ ಪರಿಧಿಗೆ ಸೇರಿಸಲಾಗಿತ್ತು. ಅದು ಹೇಗೆ? ಅದಕ್ಕೆ ಖೇಣಿ ಸಾಹೇಬರು ಮಾತ್ರ ಉತ್ತರವಾಗಬಲ್ಲರು. ಈ ಹೊಸ ಲಿಸ್ಟ್ನಲ್ಲಿ 17 ಹೊಸ ಹಳ್ಳಿಗಳನ್ನು ಸೇರಿಸಿರುವುದನ್ನು ನಾವೇ ಹಳೆಯ ಸರ್ವೇ ನಂ.ಗಳು ಮತ್ತು ಈ ಲಿಸ್ಟ್ನಲ್ಲಿರುವ ಸರ್ವೇ ನಂ.ಗಳನ್ನು ತಾಳೆ ಹಾಕಿ ನೋಡಿದಾಗ ತಿಳಿಯುತ್ತದೆ. ಆದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೇಗೆ ಇದನ್ನು ವೆರಿಫೈ ಕೂಡ ಮಾಡಿಸದೇ ಆದೇಶ ಹೊರಡಿಸಿಬಿಟ್ಟರು. ಅದೂ ಕೂಡ ಮಿಸ್ಟರಿಯೇ. ಅದಕ್ಕೂ ಸಹ ಅವರೊಬ್ಬರು ಮಾತ್ರ ಉತ್ತರವಾಗಬಲ್ಲರು. ಮುಖ್ಯ ಕಾರ್ಯದರ್ಶಿಗಳ ಕಛೇರಿಯಿಂದ ಹೊರಬಿದ್ದಿರುವ ಈ ಆದೇಶ ಇವತ್ತಿಗೂ ಜಾರಿಯಲ್ಲಿದೆ. ಈ ಆದೇಶ ಸ್ಪಷ್ಟವಾಗಿ ಸರ್ಕಾರದ ಹಿಂದಿನ ಅನೇಕ ಆದೇಶಗಳ ಉಲ್ಲಂಘನೆಯಾಗಿದೆಯಾದರೂ ಅದನ್ನು ಪ್ರಶ್ನಿಸುವವರಿಲ್ಲ. ಇಂದಿಗೂ ಹೀಗೆ ಅಕ್ರಮವಾಗಿ ವಶಪಡಿಸಿಕೊಂಡಿರುವ 17 ಹಳ್ಳಿಗಳ ಭೂಮಿ ಅಶೋಕ ಖೇಣಿಯವರ ಕಪಿ ಮುಷ್ಠಿಯಲ್ಲಿ ಭಧ್ರವಾಗಿದೆ. 

Proudly powered by Blogger
Theme: Esquire by Matthew Buchanan.
Converted by LiteThemes.com.