ಗಣಿ ರೆಡ್ಡಿ - ಇತ್ತ ನ್ಯಾಯಾಲಯದಲ್ಲಿ ಖುಲಾಸೆ, ಅತ್ತ ಜನತಾ ನ್ಯಾಯಾಲಯದಲ್ಲಿ ಆರೋಪ ದಾಖಲು

ಕಳೆದೊಂದೆರಡು ತಿಂಗಳುಗಳಿಂದ ಸೈಲೆಂಟಾಗಿದ್ದ ಬಳ್ಳಾರಿಯ ಅಕ್ರಮ ಗಣಿಗಾರಿಕೆಯ ವಿಷಯ ಮತ್ತೆ ಗದ್ದಲ ಮಾಡಲು ಶುರುವಿಟ್ಟುಕೊಂಡಿದೆ. ಒಬ್ಬ ಸಾಧಾರಣ ಪೋಲೀಸ್ ಪೇದೆಯ ಮಕ್ಕಳಾದ ರೆಡ್ಡಿ ಸಹೋದರರು ಹೇಗೆ ಕೇವಲ 10 ವರ್ಷಗಳ ಹಿಂದೆ ಬಳ್ಳಾರಿಯ ಬೀದಿಗಳಲ್ಲಿ ದ್ವಿಚಕ್ರ ವಾಹನಗಳ ಮೇಲೆ ಓಡಾಡುತ್ತಿದ್ದರು, ಹೇಗೆ ಈವತ್ತು ಹೆಲಿಕಾಪ್ಟರ್ಗಳಲ್ಲೇ ಹಾರಾಡುತ್ತಾರೆ, ಹೇಗೆ ಎನ್ನೋಬಲ್ ಚಿಟ್ಸ್ ಎಂಬ ಗೋಲ್ಮಾಲ್ ಕಂಪೆನಿಯ ಮೂಲಕ ರೆಡ್ಡಿ 200 ಕೋಟಿಗಳಿಗೆ ಕೈ ಎತ್ತಿದ್ದರು, ಹೇಗೆ ಆ 200 ಕೋಟಿಗಳನ್ನು ಗಣಿಯ ಧೂಳಿನಲ್ಲಿ ತಂದು ಸುರಿದದ್ದು, ಕುಬೇರರಾದದ್ದು, 1999ರ ಸೋನಿಯಾ ಮತ್ತು ಸುಷ್ಮಾ ಮೇಡಂನವರ ಚುನಾವಣೆ, ಅದು ರೆಡ್ಡಿ ರಾಮುಲು ಜೋಡಿಗೆ ರಾಜಕೀಯವಾಗಿ ತಿರುವು ನೀಡಿದ್ದು, ಬಿಜೆಪಿ ಸರ್ಕಾರ ಸ್ಥಾಪನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದು, ಅದನ್ನೇ ಹಿಡಿದು ಯಡಿಯೂರಪ್ಪನವರನ್ನು ಪಪ್ಪೆಟ್ ರೀತಿ ಆಡಿಸುತ್ತಿರುವುದು ಎಲ್ಲವೂ ಎಲ್ಲರೂ ಬಲ್ಲ ವಿಚಾರವೇ.

ಅತ್ತ ಆಂಧ್ರದ ದೊರೆ ವೈ.ಎಸ್.ರಾಜಶೇಖರ ರೆಡ್ಡಿಯವರು ಅಪಘಾತದಲ್ಲಿ ಕಣ್ಮರೆಯಾಗಿ, ಅವರ ಮಗ ಜಗನ್ಮೋಹನ ರೆಡ್ಡಿಯನ್ನು ಮೂಖ್ಯಮಂತ್ರಿ ಮಾಡುವ ಪ್ರಯತ್ನ ಕೈಗೂಡದೇ ಹೋಗುತ್ತಿದ್ದಂತೆಯೇ ರೆಡ್ಡಿಗಳು ಕೊಂಚ ಮೆತುವಾದರು. ಇದೇ ಸರಿಯಾದ ಸಮಯ ಎಂಬಂತೆ ಆತುರಗೆಟ್ಟ ಆಂಜನೇಯನಂತೆ ಇಲ್ಲಿ ಯಡಿಯೂರಪ್ಪನವರು ರೆಡ್ಡಿಗಳನ್ನು ಹಣಿಯಲು ಹೊರಡುತ್ತಿದ್ದಂತೆಯೇ ಅಪಾಯವನ್ನರಿತ ರೆಡ್ಡಿಗಳು ಸೆಟೆದು ನಿಂತು ಯಡಿಯೂರಪ್ಪನವರ ಕೈಲೇ ಮೊಳಕಾಲೂರಿಸಿಬಿಟ್ಟರು.

ನಂತರ ರೆಡ್ಡಿಗಳು ತಮ್ಮ ಅಕ್ರಮ ಗಣಿಗಾರಿಕೆಗಾಗಿ ರಾಜ್ಯದ ಫಲವತ್ತಾದ ಭೂಮಿಯನ್ನೇ ಆಂಧ್ರ ಕರ್ನಾಟಕದ ಗಡಿಗಂಟಿಕೊಂಡಂತಿರುವ ತಮ್ಮ ಗಣಿ ಲೀಸ್ ಏರಿಯಾಗಳೊಂದಿಗೆ ಸೇರಿಸಿಬಿಟ್ಟಿದ್ದಾರೆ, ರಾಜ್ಯದ ಗಡಿಯನ್ನೇ ರೆಡ್ಡಿಗಳು ಬದಲಿಸಿಬಿಟ್ಟಿದ್ದಾರೆ, ಎಂದು ತೀವ್ರತರ ಆರೋಪಗಳು ಕೇಳಿ ಬಂದವು. ಅಂದಿಗೆ ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕರಾಗಿದ್ದ ವಿ.ಎಸ್.ಉಗ್ರಪ್ಪನವರು ಸತ್ಯಶೋಧನಾ ಸಮಿತಿಯೊಂದನ್ನು ಮುನ್ನಡೆಸಿ, ವರದಿ ನೀಡಿದ್ದರು. ಅದರಲ್ಲಿ ರೆಡ್ಡಿಗಳು ಗಡಿಯಲ್ಲಿನ ಬಾಂದಾ ಕಲ್ಲುಗಳು ಮತ್ತು ಟ್ರೈಜಂಕ್ಷನ್ ಪಾಯಿಂಟ್ ಅನ್ನು ಹೊಡೆದು ಹಾಕಿದ್ದಾರೆಂದೂ ಇದರಿಂದ 32 ಕಿಮಿ. ಉದ್ದ ಮತ್ತು ಅರ್ಧ ಕಿಮಿ. ಅಗಲದ ಕರ್ನಾಟಕದ ಖನಿಜ ಸಂಪದ್ಭರಿತ ಭೂಮಿ ಆಂಧ್ರದ ಪಾಲಾಗಿದೆ ಎಂದು ವರದಿ ನೀಡಿತು. ಇದು ಇತರ ಆರೋಪಗಳಂತೆ ಅಲ್ಲ. ಕರ್ನಾಟಕದ ಸರ್ಕಾರದಲ್ಲಿ ಮಂತ್ರಿಯಾದವ ಕರ್ನಾಟಕದ ಸಂಪದ್ಭರಿತ ಭೂಮಿಯನ್ನು ಆಂಧ್ರಕ್ಕೆ ಸೇರಿಸಿಬಿಟ್ಟಿದ್ದಾನೆಂದರೆ ರಾಜಕೀಯವಾಗಿ ಅದೊಂದು ಟೈಂ ಬಾಂಬ್ ಅಲ್ಲದೆ ಮತ್ತೇನು? ಆದರೆ ಇದನ್ನು ಸಮರ್ಥವಾಗಿ ಬಳಸಿಕೋಳ್ಳುವಲ್ಲಿ ವಿರೋಧ ಪಕ್ಷಗಳು ವಿಫಲವಾದವು. ಯಡಿಯೂರಪ್ಪನವರಂತೂ ಎಲ್ಲಿ ತಮ್ಮ ಖುರ್ಚಿಗೆ ಅಪಾಯ ಬಂದೊದಗಬಹುದೆಂಬ ಭೀತಿಯಲ್ಲಿ ಅಸಲಿಗೆ ಇದೊಂದು ಇಶ್ಯೂ ಅಸ್ತಿತ್ವದಲ್ಲೇ ಇಲ್ಲ ಎಂಬಂತೆ ಮುಗುಮ್ಮಾಗಿ ಇದ್ದು ಬಿಟ್ಟರು.

ಅಸಲಿಗೆ ರೆಡ್ಡಿಗಳ ಸಕಲೆಂಟು ವ್ಯವಹಾರಗಳೂ ಇರುವುದು ಆಂಧ್ರದಲ್ಲೇ ಹೊರತು, ಅವರ ಚಿಕ್ಕಾಸು ವ್ಯವಹಾರವೂ ಕರ್ನಾಟಕದಲ್ಲಿಲ್ಲ. ಅವರು 4 ಲೀಸ್ ಲೈಸೆನ್ಸುಗಳಲ್ಲಿ ಗಣಿಗಾರಿಕೆ ನಡೆಸುತ್ತಾರೆ, ಓಬಳಾಪುರಂ ಮೈನಿಂಗ್ ಕಂಪೆನಿಯ ಹೆಸರಿನಲ್ಲಿ. ಈ ಓಬಳಾಠಪುರಂ ಕರ್ನಾಟಕ  ಮತ್ತು ಆಂಧ್ರದ ಗಡಿಯ ಗುಂಟ ಇದೆಯಾದರೂ, ಅದು ಇರುವುದು ಆಂಧ್ರದಲ್ಲಿ. ಆದರೆ ಆಂಧ್ರದಲ್ಲಿ ರಾಜಕೀಯ ಪರಿಸ್ಥಿತಿ ಬದಲಾಗಿ ಹೋಗಿತ್ತು. ರೆಡ್ಡಿಗಳ ಗಾಡ್ಫಾದರ್ನಂತಿದ್ದ ವೈ.ಎಸ್.ಆರ್. ಸಾವಿನೊಂದಿಗೆ ಅವರಿಗೆ ಆಂಧ್ರ ಸರ್ಕಾರದಿಂದ ದೊರಕುತ್ತಿದ್ದ ಬ್ಲಾಂಕೆಟ್ ಕವರ್ ರಕ್ಷಣೆ ತಪ್ಪಿ ಹೋಗಿ ಬಯಲಿನಲ್ಲಿ ನಿಂತು ಬಿಟ್ಟಿದ್ದರು. ಅದರ ಜೊತೆಗೆ ವೈ.ಎಸ್.ಆರ್. ಮಗ ಜಗನ್ಮೋಹನ ರೆಡ್ಡಿಯನ್ನು ಮುಖ್ಯಮಂತ್ರಿ ಮಾಡಿಬಿಡುವ ರೆಡ್ಡಿಗಳ ಪ್ರಯತ್ನವೂ ಕೈಗೂಡದೇ ಹೋಗಿ ರೋಶಯ್ಯ ಮುಖ್ಯಮಂತ್ರಿಯಾಗಿ ಬಂದು ಕೂತರು. ಆಂಧ್ರ ಕಾಂಗ್ರೆಸ್ನ ಮುದೀ ಹುಲಿ ರೋಶಯ್ಯನವರ ಖುರ್ಚಿಗೆ ಅಲ್ಲಿ ಸವಾಲೊಡ್ಡಬಲ್ಲವ ಒಬ್ಬ ಜಗನ್ಮೋಹನ ರೆಡ್ಡಿ ಮಾತ್ರ. ಇದನ್ನರಿತ ರೋಶಯ್ಯಗಾರು ಅತ್ಯಂತ ವ್ಯವಸ್ಥಿತವಾಗಿ ವೈ.ಎಸ್.ಆರ್. ಕುಟುಂಬದ ಸಾಮ್ರಾಜ್ಯವನ್ನು ಭೂಸ್ಥಾಪವಾಗಿಸುವ ಕೆಲಸಕ್ಕೆ ಕೈ ಹಾಕಿ ಕೂತರು. ಅವರ ಮೊದಲ ಟಾರ್ಗೆಟ್ ಆದವರೇ ಜನಾರ್ಧನ ರೆಡ್ಡಿ! ಸೀದಾ ಜನಾರ್ಧನ ರೆಡ್ಡಿಯವರ ಮೇಲಿರುವ ಎಲ್ಲ ಆರೋಪಗಳ ಕುರಿತೂ ತನಿಖೆ ಮಾಡುವಂತೆ ಸಿಬಿಐಗೆ ಒಪ್ಪಿಸಿಬಿಟ್ಟರು ರೋಶಯ್ಯ! ರೆಡ್ಡಿಗಳ ಕಾಲ ಕೆಳಗೆ ಭೂಕಂಪವಾದ ಅನುಭವವಾಗಿತ್ತು. ಆದರೆ ಅವರು ಈ ಸಿಬಿಐ ತನಿಖೆಗೆ ಆಂಧ್ರ ಹೈಕೋರ್ಟ್ನಿಂದ ತಡೆಯಾಜ್ಞೆ ತಂದು, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರು.

ಸುಪ್ರೀಂ ಕೋರ್ಟ್ನಲ್ಲಿ ಟಪಾಲ್ ಗಣೇಶ್ ಸಲ್ಲಿಸಿದ್ದ ಲೀವ್ ಪಿಟೀಷನ್ನ ಆಧಾರದ ಮೇಲೆ, ಕೇಂದ್ರ ಪರಿಸರ ಇಲಾಖೆ ಓಬಳಾಪುರಂ ಮೈನಿಂಗ್ ಕಂಪೆನಿಯ ಅಕ್ರಮಗಳ ತನಿಖೆಗೆ ಅಂತಲೇ ಒಂದು ಕೇಂದ್ರ ಉನ್ನತಾಧಿಕಾರ ಸಮಿತಿಯೊಂದನ್ನು ರಚಿಸಿತು. ನವೆಂಬರ್ 19, 2009ರಂದು ಈ ಸಮಿತಿ ತನ್ನ ವರದಿಯನ್ನು ಸಲ್ಲಿಸಿತು. ಈ ವರದಿ ಒಬಳಾಪುರಂ ಹಳ್ಳಿಯಲ್ಲಿನ ಎಲ್ಲಾ ಮೈನಿಂಗ್ ಲೀಸ್ಗಳ ಸರ್ವೇ ನಡೆಸಿತ್ತು. ರೆಡ್ಡಿಯವರ ಒಬಳಾಪುರಂ ಮೈನಿಂಗ್ ಕಂಪೆನಿ ತನ್ನ ಡಿಫೆನ್ಸಿಗೆ ನೀಡುವ ಮ್ಯಾಪುಗಳು 1896 ಸೇರಿದ್ದವಾಗಿದ್ದು, ಅದರ ಮತ್ತು ಇತ್ತೀಚಿನ ಮ್ಯಾಪುಗಳಲ್ಲಿನ ಗಡಿಗಳು ಒಂದಕ್ಕೊಂದು ತಾಳೆಯೇ ಆಗುವುದಿಲ್ಲ. ಇದಲ್ಲದೆ ಸಂರಕ್ಷಿತ ಅರಣ್ಯ ಪ್ರದೇಶದ ಒತ್ತುವರಿಯ ಗುಮಾನಿಗಳೂ ಇವೆ. ಅದಲ್ಲದೆ ಆಂಧ್ರ ಸರ್ಕಾರದ ಕ್ರಮಗಳು ಸಂದೇಹಾಸ್ಪದವಾಗಿವೆಯೆಂದೂ ಷರಾ ಬರೆಯಿತು. ಇದರ ಆಧಾರದ ಮೇಲೆ ಕೇಂದ್ರ ಪರಿಸರ ಇಲಾಖೆ ಎಲ್ಲಾ ಆರೂ ಮೈನಿಂಗ್ ಲೀಸುಗಳನ್ನೂ ರದ್ದು ಪಡಿಸಿತ್ತು. ಆದರೆ ಇದೆಲ್ಲವನ್ನೂ ಅಲ್ಲಗಳೆದ ವೈ.ಎಸ್.ಆರ್. ಸರ್ಕಾರ ಮೈನಿಂಗ್ಗೆ ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ವರದಿಯ ಮುಂದುವರೆದ ಭಾಗದಂತೆಯೇ ಸುಪ್ರೀಂ ಕೋರ್ಟ್ ಕೇಂದ್ರ ಸರ್ವೇ ಇಲಾಖೆಗೆ ಆರೂ ಮೈನಿಂಗ್ ಲೀಸುಗಳ ಮತ್ತು ವಿವಾದಿತ ಕರ್ನಾಟಕ ಆಂಧ್ರ ಗಡಿಯ ಸರ್ವೇ ಕೈಗೊಂಡು ವರದಿ ನೀಡುವಂತೆ ಆದೇಶಿಸಿತ್ತು.

ತೀರಾ ಇತ್ತೀಚೆಗೆ ಈ ಸರ್ವೇ ತಂಡ ತನ್ನ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ. ಆಶ್ಚರ್ಯ, ಈ ತಂಡ ಅದೆಲ್ಲಿ ಸರ್ವೇ ನಡೆಸಿತೋ? ಅದೇನು ಹಕೀಕತ್ ಮಾಡಿತೋ? ಆ ದೇವರೇ ಬಲ್ಲ! ಸರ್ವೇ ಇಲಾಖೆಯ ವರದಿಯನ್ನು ಓದಿದವರಿಗಾರಿಗಾದರೂ ಹೀಗನ್ನಿಸದೇ ಇರದು. ಈ ವರದಿಯಲ್ಲಿ ಜನಾರ್ಧನ ರೆಡ್ಡಿ ಮತ್ತು ಅವರ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿಯನ್ನು ಖಡಾಖಂಡಿತವಾಗಿ ನಿರ್ದೋಷಿಯೆಂದು  ಘೋಷಿಸಲಾಗಿದೆ. ಇವರು ನಿರ್ವಹಿಸುತ್ತಿರುವ 4 ಮೈನಿಂಗ್ ಲೀಸ್ಗಳಲ್ಲಿ ಒಂದೇ ಒಂದು ಇಂಚಿನಷ್ಟೂ ಒತ್ತುವರಿಯಾಗಿಲ್ಲವೆಂದೂ, ಬದಲಿಗೆ ಇವರಿಗೆ ಲೈಸೆನ್ಸ್ ದೊರಕಿರುವ 39.5 ಹೆಕ್ಟೇರ್ಸ್ ಬದಲಿಗೆ 38.5 ಹೆಕ್ಟೇರ್ಸ್, 6.5 ಹೆಕ್ಟೇರ್ಸ್ ಬದಲಿಗೆ 6.3 ಹೆಕ್ಟೇರ್ಸ್, 68.5 ಹೆಕ್ಟೇರ್ಸ್ ಬದಲಿಗೆ 68.4 ಹೆಕ್ಟೇರ್ಸ್, ಮತ್ತು 25.98 ಹೆಕ್ಟೇರ್ಗಳ ಬದಲಿಗೆ 25 ಹೆಕ್ಟೇರ್ಗಳಲ್ಲಿ ರೆಡ್ಡಿ ಮೈನಿಂಗ್ ನಡೆಸುತ್ತಿದ್ದಾರೆ ಎಂದು ಹೇಳಿ ಎಲ್ಲರನ್ನೂ ದಂಗು ಬಡಿಸಿದೆ. ಈ ವರದಿಯನ್ನು ಅಂಗೀಕರಿಸಿರುವ ಸುಪ್ರೀಂ ಕೋರ್ಟ್, ಲೈಸೆನ್ಸ್ ಇರುವ ಜಾಗದಲ್ಲಿ ಮೈನಿಂಗ್ ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ತೀರ್ಪು ನೀಡಿದೆ.

ಇದು ಒಂದು ಮಧ್ಯಂತರ ಆದೇಶ ಅಷ್ಟೆ. ಆದರೆ ಇದರಿಂದ ಉಲ್ಲಸಿತರಾದ ಜನಾರ್ಧನ ರೆಡ್ಡಿ, ಮೊನ್ನೆ ತಾಜ್ ವೆಸ್ಟ್ ಎಂಡ್ನಲ್ಲಿ ಒಂದು ಮಾಧ್ಯಮ ಸಮಾವೇಶವನ್ನು ನಿರ್ವಹಿಸಿ, ತಮ್ಮ ಖುಷಿ ಹಂಚಿಕೊಂಡರು. ತಾವು ಪುಣ್ಯಕೋಟಿಯ ಹಾಡಿನಂತೆ ಸತ್ಯವೇ ನಮ್ಮ ತಾಯಿ ತಂದೆ, ಸತ್ಯವೇ ನಮ್ಮ ಬಂಧು ಬಳಗ ಎಂದು ಬದಕುತ್ತಿರುವವರೆಂದೂ, ರಾಹುಲ್ ಬಲ್ಡೋಟಾರನ್ನು ಮೈನ್ಸ್ ವೀರಪ್ಪನ್ ಎಂದು ಕರೆದದ್ದೇ ದೇವೇಗೌಡ, ಸಿದ್ಧರಾಮಯ್ಯ ಮತ್ತು ಚಂದ್ರಬಾಬು ನಾಯ್ಡುರನ್ನು ನಿರುದ್ಯೋಗಿ ರಾಜಕಾರಣಿಗಳೆಂದು ಜರೆದದ್ದೇ ಜರೆದದ್ದು. ಆದರೆ ಅನೇಕ ಪ್ರಶ್ನೆಗಳು ಉತ್ತರವಿಲ್ಲದೇ ಹಾಗೆಯೇ ಉಳಿದುಹೋಗಿವೆ ರೆಡ್ಡಿಗಾರೂ...

ಕೇಂದ್ರ ಉನ್ನತಾಧಿಕಾರ ಸಮಿತಿ ಮತ್ತು ಸರ್ವೇ ಇಲಾಖೆ ಒಂದೇ ಜಾಗದ ಸರ್ವೇ ನಡೆಸಿದ್ದು ಅಲ್ಲವೇ? ಹಾಗಾದರೆ 2009ರ ನವೆಂಬರ್ 19 ರಂದು ಕೇಂದ್ರ ಉನ್ನತಾಧಿಕಾರ ಸಮಿತಿ ಒತ್ತುವರಿ ನಡೆದಿರುವ ಬಗ್ಗೆ ಮಾತನಾಡಿದರೆ, ಸರ್ವೇ ಇಲಾಖೆ ತಮ್ಮಷ್ಟು ಲಾ ಅಬೈಡಿಂಗ್ ಸಿಟಿಜನ್ ಮತ್ತೊಬ್ಬರಿಲ್ಲ ಎನ್ನುತ್ತದೆ. ಇದರಲ್ಲಿ ಯಾವುದಾದರೂ ಒಂದು ವರದಿ ಮಾತ್ರ ವಾಸ್ತವಾಂಶಕ್ಕೆ ಹತ್ತಿರವಿರುವ ಸಾಧ್ಯತೆಯಿದೆ. ಅದು ಯಾವುದು? ನೀವು ಈಗಿನ ಸರ್ವೇ ಇಲಾಖೆಯ ವರದಿ ಎನ್ನುವಿರಿ ತಿಳಿದಿದೆ, ಹಾಗಾದರೆ ಕೇಂದ್ರ ಉನ್ನತಾಧಿಕಾರ ಸಮಿತಿಯ ವರದಿ? ಅಲ್ಲಿ ಏನೂ ಇಲ್ಲದಿದ್ದರೆ ಆ ರೀತಿ ವರದಿ ನೀಡಲು ಅವರಿಗೇನು ಹುಚ್ಚೇ? ಇನ್ನು ಸಿಬಿಐ ತನಿಖೆಯ ವಿಚಾರ. ಸತ್ಯವೇ ನಮ್ಮ ತಾಯಿ ತಂದೆ ಎಂದು ಗೊಣಗುವ ನೀವು ಆಂಧ್ರ ಸರ್ಕಾರ ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೊಪ್ಪಿಸಿದ ಕೂಡಲೇ ಅದ್ಯಾಕೆ ದಾವಾಗ್ನಿ ಬಿದ್ದವರಂತೆ ಓಡೋಗಿ ಹೈಕೋರ್ಟ್ನಿಂದ ತಡೆಯಾಜ್ಞೆ ತಂದು ಕೂತಿರುವಿರಿ? ತಮ್ಮ ಸತ್ಯಸಂಧತೆಯ ಬಗ್ಗೆ ತಮಗೆ ಅಷ್ಟು ನಂಬಿಕೆಯಿರುವಾಗ ಅದೂ ನಡೆದು ಹೋಗಲಿ ಬಿಡಿ. ಇನ್ನು ಗಡಿ ಒತ್ತುವರಿಯ ವಿಷಯ. ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ತೀರ್ಪಿನಲ್ಲಿ ಗಣಿ ಲೈಸೆನ್ಸುಗಳ ಬಗ್ಗೆ ಎಲ್ಲವನ್ನೂ ಹೇಳಿಯಾಗಿದೆ. ಇನ್ನು ಅಂತರಾಜ್ಯ ಗಡಿ ಗಲಾಟೆ ನಾನು ಹುಟ್ಟುವ ಮೊದಲಿಂದಲೂ ಇದೆ, ಅದಕ್ಕೂ ನನಗೂ ಸಂಬಂಧವೇ ಇಲ್ಲ ಅನ್ನುವಿರಲ್ಲ, ತಮ್ಮ ಓಬಳಾಪುರಂ ಮೈನಿಂಗ್ ಕಂಪೆನಿಯ ಮಾಜಿ ಮ್ಯಾನೇಜರ್ ಆಂಜನೇಯ ರೆಡ್ಡಿಯ ಹೇಳಿಕೆಗಳನ್ನು ಗಮನಿಸಿಯೇ ಇಲ್ಲವೇ? ತಮ್ಮದೇ ಗಣಿ ಕಂಪೆನಿಯಲ್ಲಿ ಮ್ಯಾನೇಜರ್ ಆಗಿದ್ದ ಆಂಜನೇಯ ರೆಡ್ಡಿಗಾರು, ಸಿಬಿಐ ತನಿಖೆ ನಡೆದಾಗ ಹೆದರಿ ಬೆವರುತ್ತಿದ್ದಾಗ ತಲೆಮರೆಸಿಕೊಂಡವರು, ಈಗ ಬೆಂಗಳೂರಿನ ಅಜ್ಞಾತ ಸ್ಥಳವೊಂದರಲ್ಲಿ ಕೂತು, ಅಪ್ರೂವರ್ ರೀತಿ ತಮ್ಮ ಪೌರುಷದ ಕತೆಗಳ ಪಾರಾಯಣ ಮಾಡುತ್ತಿದ್ದಾರೆ. ಹೇಗೆ ತಮ್ಮ ಅಣತಿಯ ಮೇಲೆ ಅವರೇ ನಿಂತು ಆಂಧ್ರ - ಕರ್ನಾಟಕ ಗಡಿಯ ಬಾಂದಾ ಕಲ್ಲುಗಳು ಮತ್ತು ಟ್ರೈಜಂಕ್ಷನ್ ಪಾಯಿಂಟ್ ಅನ್ನು ನಾಶಪಡಿಸುದುದಾಗಿ ಹೇಳಿಕೊಂಡಿದ್ದಾರೆ. ಉಗ್ರಪ್ಪನವರ ಸತ್ಯ ಶೋಧನಾ ಸಮಿತಿಯ ವರದಿ ಹೇಳುವುದೂ ಇದನ್ನೇ. ಇದಕ್ಕೆ ತಮ್ಮ ಉತ್ತರವೇನು ರೆಡ್ಡಿಗಾರೂ....

ಪೃಥ್ವಿ - ಗಣಿಗಳ ಮೇಲೆ ಪುನೀತ್ ಮಣ್ಣು 

ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಸಂಚಲನ. ಪುನೀತ್ ರಾಜ್ಕುಮಾರ್ ನಾಯಕ ನಟರಾಗಿರುವ `ಪೃಥ್ವಿ' ಸಿನಿಮಾ, ಒಂದು ಸಿನಿಮಾವಾಗಿಯಲ್ಲದೆ ರಾಜಕೀಯವಾಗಿಯೂ ಸುದ್ದಿ ಮಾಡುತ್ತಿದೆ. ಇಡೀ ಸಿನೆಮಾ ಬಳ್ಳಾರಿ ಅಕ್ರಮ ಗಣಿಗಾರಿಕೆಯ ಸುತ್ತಲೂ ಹೆಣೆಯಲ್ಪಟ್ಟಿದೆ. ಸಿನೆಮಾದಲ್ಲಿ ನಾಯಕನಟನಿಗೆ ಐಎಎಸ್ ಪಾಸು ಮಾಡಿ ಸಿವಿಲ್ ಸರ್ವೆಂಟ್ ಆಗಬೇಕೆಂಬುದೇ ಗುರಿ. ಸಿನಿಮಾ ಶುರುವಾಗಿ ಕಾಲು ಘಂಟೆಗೆಲ್ಲಾ ನಾಯಕ ಐಎಎಸ್ ಪಾಸು ಮಾಡಿ, ನಾಯಕಿಯನ್ನು ಮದುವೆಯೂ ಆಗಿ ಬಳ್ಳಾರಿಗೆ ಡಿಸಿ ಆಗಿ ಬರುತ್ತಾನೆ. ಅಲ್ಲಿಂದ ಮಿಕ್ಕ ಸಿನಿಮಾ ಪೂರಾ ಬಳ್ಳಾರಿಯೇ. ಇಂದಿನ ಬಳ್ಳಾರಿಯನ್ನು ವಾಸ್ತವಿಕತೆಗೆ ಅತ್ಯಂತ ಹತ್ತಿರವಾಗಿರುವಂತೆ ಚಿತ್ರಿಸಲಾಗಿದೆ. ಬಳ್ಳಾರಿಯ ಧೂಳು, ಅಲ್ಲಿನ ಗಣಿಗಳು ಮತ್ತು ಕಾರ್ಖಾನೆಗಳು ಕಲುಷಿತಗೊಳಿಸುತ್ತಿರುವ ಕುಡಿಯುವ ನೀರು, ಅದರಿಂದ ಬಳಲುತ್ತಿರುವ ಜನ, ಅಲ್ಲಿ ಸ್ಥಾಪಿತವಾಗಿರುವ ರೌಡಿ ರಾಜ್, ಗಡಿ ಒತ್ತುವರಿ, ಎಲ್ಲವನ್ನೂ ಸೂಚ್ಯವಾಗಿಯಲ್ಲದೇ ನೇರವಾಗಿಯೇ ತೋರಿಸಿದ್ದಾರೆ. ಕಡೆಯಲ್ಲಿ ಗಣಿ ಉದ್ಯಮಿಯನ್ನು ನಾಯಕನಟ ಗಣಿ ಮಣ್ಣಿನಲ್ಲೇ ಹೂತುಬಿಡುವಂತೆ ತೊರಿಸಿರುವುದು ಕೂಡ, ಗಣಿ ಉದ್ಯಮಿಗಳನ್ನು ಗಣಿಗಳಲ್ಲೇ ಭೂ ಸ್ಥಾಪಿತಗೊಳಿಸಿಬಿಡಬೇಕೆಂಬಂತೆ ಸೂಚ್ಯವಾಗಿ ಹೇಳಲಾಗಿದೆ.

ಒಟ್ಟಾರೆಯಾಗಿ ದಿನಬೆಳಗಾದರೆ ಮಾಧ್ಯಮಗಳಲ್ಲಿ ಅಕ್ರಮ ಗಣಿಗಾರಿಕೆ, ಗಡಿ ಒತ್ತುವರಿ ಅಂತ ಏನೇ ರೀಮುಗಟ್ಟಲೆ ಬರೆದರೂ, ಒಂದು ಸಿನೆಮಾ ಮೂಡಿಸುವ ಜಾಗೃತಿ ಮತ್ತು ಅದರ ಇಂಪ್ಯಾಕ್ಟ್ ಮುಂದೆ ಮಂಕೇ! ಪೃಥ್ವಿ ಸಿನೆಮಾದ ಬಗ್ಗೆ ಮೊದಲ ವಾರಗಳಲ್ಲಿ ಸಿನೆಮಾ ಒಂದು ಚೂರೂ ಚೆನ್ನಾಗಿಲ್ಲ ಎಂಬುದಾಗಿ ಅಪಪ್ರಚಾರ ಮಾಡಲಾಯಿತು. ಆದರೆ ನಿಜ ಹೇಳಬೇಕು, ಇತ್ತೀಚೆಗೆ ಕನ್ನಡದಲ್ಲಿ ಬಂದ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದು. ಇಶ್ಯೂವನ್ನು ಪಕ್ಕಕ್ಕೆ ಸರಿಸಿ ನೋಡಿದರೂ ಸಹ, ಒಂದು ಸ್ವತಂತ್ರ ಸಿನೆಮಾ ಆಗಿ ಕೂಡ `ಪೃಥ್ವಿ' ಒಂದು ಅತ್ಯುತ್ತಮ ಸಿನೆಮಾನೇ ಸರಿ. ಈಗೀಗ ಬಾಯಿ ಮಾತಿನಿಂದಲೇ ಚಿತ್ರ ಕುದುರಿಕೊಳ್ಳುತ್ತಿದೆ. ಇಡೀ ಚಿತ್ರಮಂದಿರ ಹೌಸ್ಫುಲ್. ಗಾಂಧೀ ಕ್ಲಾಸು ಪಡೆದು ಬಂದ ಪಡ್ಡೆ ಹುಡುಗರಿಗೂ ಸಹ, ನಮ್ಮ ರಾಜ್ಯವನ್ನು ಪೀಡಿಸುತ್ತಿರುವ ಒಂದು ಪ್ರಮುಖ ಇಶ್ಯೂ ಬಗ್ಗೆ ರಾಜಕೀಯವಾಗಿ ಎಜುಕೇಟ್ ಮಾಡುವಂತಿದೆ. ಈ ಸಿನೆಮಾ ಮಣಿರತ್ನಂ ಸಿನೆಮಾಗಳ ಶೈಲಿಯನ್ನು ನೆನಪಿಸುತ್ತದೆ. ಮಣಿರತ್ನಂ ತಮ್ಮ ರೋಜಾ, ಬಾಂಬೆ, ಕಣ್ಣತ್ತಿಲ್ ಮುತ್ತುಮಿಟ್ಟಾಳ್, ದಿಲ್ ಸೇ, ಯುವ ಮುಂತಾದ ಚಿತ್ರಗಳಲ್ಲಿ ಯಾವುದೋ ತೊಳಲಾಟದಲ್ಲಿ ಸಿಕ್ಕು ನಲುಗುತ್ತಿರುವ ನಾಯಕ, ನಾಯಕಿಯ ಕಥೆಯನ್ನೇ ಹೇಳುತ್ತಾ ಹೋಗುತ್ತಾರಾದರೂ ಹಿಂದೆ ಬ್ಯಾಕ್ಡ್ರಾಪ್ನಲ್ಲಿ ಅಂದಿನ ಪ್ರಮುಖ ರಾಷ್ಟ್ರೀಯ ಇಶ್ಯೂವೊಂದನ್ನು ಬಿಂಬಿಸಿರುತ್ತಾರೆ. ಅದೇ ಟೆಕ್ನಿಕ್ ಅನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಸಿನೆಮಾದ ಕಥೆ ಪೃಥ್ವಿ ಎಂಬ ಐಎಎಸ್ ಅಧಿಕಾರಿಯ ಕುರಿತೇ ಆಗಿದ್ದರೂ ಬ್ಯಾಪ್ಡ್ರಾಪ್ನಲ್ಲಿ ಅತ್ಯಂತ ಸಮರ್ಥವಾಗಿ ಮೂಡಿ ಬಂದಿರುವುದು ಬಳ್ಳಾರಿಯ ಅಕ್ರಮ ಗಣಿಗಾರಿಕೆ. ಹಿಂದೆ ರಾಜಕುಮಾರ್ ಇಂತಹ ಸಿನೆಮಾಗಳನ್ನು ಮಾಡುತ್ತಿದ್ದರು. ಅದಕ್ಕೆ ಅವರು ಇಂದಿಗೂ ಕನ್ನಡದ ಜನಮಾನಸದಲ್ಲಿ ಉಳಿದುಕೊಂಡಿರುವುದು. ಅಂತಹ ಕೆಲಸಕ್ಕೆ ಈಗ ಪುನೀತ್ ರಾಜ್ಕುಮಾರ್ ಕೈ ಹಾಕಿರುವುದು ಶ್ಲಾಘನೀಯವೇ ಸರಿ.

ಅತ್ತ ಸರ್ವೋಚ್ಚ ನ್ಯಾಯಾಲಯದಲ್ಲಿ ರೆಡ್ಡಿಗಳನ್ನು ಕೊಂಚ ಮಟ್ಟಿಗೆ ಖುಲಾಸೆಗೊಳಿಸಿದ್ದರೆ, ಇತ್ತ ಪೃಥ್ವಿ ಸಿನೆಮಾ ಅವರನ್ನು ಮತ್ತೆ ಜನತಾ ನ್ಯಾಯಾಲಯದಲ್ಲಿ ತಂದು ನಿಲ್ಲಿಸಿ ಆರೋಪ ಪಟ್ಟಿ ದಾಖಲಿಸಿದೆ.

Proudly powered by Blogger
Theme: Esquire by Matthew Buchanan.
Converted by LiteThemes.com.