ಸ್ವತಂತ್ರ ಭಾರತದ ಅತಿ ದೊಡ್ಡ ಹಗರಣ - 60 ಸಾವಿರ ಕೋಟಿಗಳ spectrum scam

ಕಳೆದ ಮೂರು ತಿಂಗಳ ಹಿಂದೆ ಹಸ್ತಿನೆಯ ಅಧಿಕಾರದ ಗಲ್ಲಿಗಳಲ್ಲಿ ಹೊಸದೊಂದು ಸಂಚಲನ. ದೇಶದ ಟೆಲಿಕಾಂ ರಂಗದ ಮುಖ್ಯ ಕಛೇರಿ, ಕೇಂದ್ರ ಸರ್ಕಾರದ ಟೆಲಿಕಾಂ ಸಚಿವರ ಕಛೇರಿಯನ್ನೂ ಒಳಗೊಂಡ ಸಂಚಾರ ಭವನ್ ಮತ್ತು ದೇಶಾದ್ಯಂತ 19 BSNL ಕಛೇರಿಗಳ ಮೇಲೆ ಸಿಬಿಐ ದಾಳಿ! ಈ ಮೊಬೈಲ್ ಕಂಪೆನಿಗಳಿಗೆ ಸರ್ಕಾರ ಪರವಾನಗಿ ಮತ್ತು ಮೊಬೈಲ್ ಸೇವೆಗೆ ಬೇಕಾದ Spectrum ಅನ್ನು ಪೂರೈಸುತ್ತದೆ. 2008ರ ಜನವರಿಯಲ್ಲಿ ಟೆಲಿಕಾಂ ಇಲಾಖೆಯು, ಪರವಾನಗಿ ಮತ್ತು Spectrumನ್ನು ಹರಾಜು ಹಾಕುವ ತನ್ನ ಎಂದಿನ ವೈಖರಿಯನ್ನು ಅನುಸರಿಸದೆ, first come first serve, ಅಂದರೆ ಮೊದಲು ಬಂದವರಿಗೆ ಆದ್ಯತೆಯಂತೆ Spectrumನ್ನು ಕೊಟ್ಟುಕಳಿಸಿದೆ, ಅದೂ 2001ರ ಬೆಲೆಗಳಿಗೆ! ಒಂದು ಅಂದಾಜಿನಂತೆ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ-60 ಸಾವಿರ ಕೋಟಿಗಳು! ಬಹುಶಃ ಇದು ಭಾರತದ ಅತಿ ದೊಡ್ಡ ಹಗರಣ. ಆದರೆ ಡಿಎಂಕೆಯ, ಕೇಂದ್ರ ಟೆಲಿಕಾಂ ಸಚಿವ ಅಂದಿಮುತ್ತು ರಾಜಾ ಮತ್ತು ಯುಪಿಎ ಸರ್ಕಾರ ಇದನ್ನು ಅಸಲು ಹಗರಣವೆಂದೇ ಗುರುತಿಸುತ್ತಿಲ್ಲ. ಆದರೆ 2008ರ ಅಕ್ಟೋಬರ್ನಲ್ಲಿ ಕಮ್ಯೂನಿಸ್ಟ್ ಪಕ್ಷಗಳು ಈ ಹಗರಣವನ್ನು ಬಯಲುಗೊಳಿಸಿ ರಾಜಕೀಯವಾಗಿ ಹೋರಾಟಕ್ಕಿಳಿದವು. ಫಲವಾಗಿ ಸೆಂಟ್ರಲ್ ವಿಜಿಲೆನ್ಸ್ ಕಮೀಷನ್ ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತು. ಈ ಕಮಿಟಿಯು ಟೆಲಿಕಾಂ ಇಲಾಖೆ ಪರವಾನಗಿ ಮತ್ತು Spectrum ಅನ್ನು ಮೊದಲು ಬಂದವರಿಗೆ ಆದ್ಯತೆಯಂತೆ 2001ರ ಬೆಲೆಗಲಿಗೆ ಬಿಕರಿ ಮಾಡಿರುವುದರಲ್ಲಿ ಹಗರಣದ ವಾಸನೆಯೊಡೆಯುತ್ತಿದ್ದು, ಈ ವಿಚಾರವಾಗಿ ಸಿಬಿಐ ಕೂಲಂಕುಷ ತನಿಖೆ ನಡೆಸಬೇಕೆಂದು ಶಿಫಾರಸು ಮಾಡಿತ್ತು. ಈ ಶಿಫಾರಸಿನನ್ವಯ ಸಿಬಿಐ ಟೆಲಿಕಾಂ ಇಲಾಖೆಯ  ಅಧಿಕಾರಿಗಳು ಮತ್ತು ಖಾಸಗೀ ಕಂಪೆನಿಗಳ ವಿರುದ್ಧ ಭ್ರಷ್ಟಾಚಾರ ನಿರ್ಮೂಲನಾ  ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿಕೊಂಡು, ಪೂರಕವಾಗಿ ಈ ದಾಳಿಗಳನ್ನು ನಡೆಸಿತ್ತು. 


ಈಗ ಆ ತನಿಖೆಯ ಒಂದೊಂದೇ ಸುದ್ದಿ ಹೊರಬರುತ್ತಿದ್ದಂತೆ ಪಾರ್ಲಿಮೆಂಟ್ ಎಂದಿನಂತೆ ಫಿಶ್ ಮಾರ್ಕೆಟ್ ಆಗತೊಡಗಿದೆ. ಇದರ ಕುರಿತು ಹೆಚ್ಚು ಮಾತನಾಡುತ್ತಿರುವುದೆಂದರೆ ಅದು ಎಡಪಕ್ಷಗಳೇ. ಅವರು ಈ ಹಗರಣದ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ. ಸೀತಾರಾಂ ಯೆಚೂರಿಯವರು, 18-11-2008ರಂದೇ ಪ್ರಧಾನಿಗಳನ್ನುದ್ದೇಶಿಸಿ ಬಹಿರಂಗ ಪತ್ರ ಬರೆದು ಈ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಬೇಕೆಂದು ಮತ್ತು ಈಗ ಕೊಡಮಾಡಿರುವ ಪರವಾನಗಿಗಳನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದರು. ಇನ್ನು ಈ ಕುರಿತು ಅತ್ಯಂತ ದೊಡ್ಡ ದನಿಯೆತ್ತುತ್ತಿರುವವರು, ಪ್ರಧಾನ ಪ್ರತಿಪಕ್ಷವಾದ ಬಿಜೆಪಿ. ತರೂರ್ ರಾಜೀನಾಮೆಯಿಂದ ಉತ್ತೇಜಿತಗೊಂಡಿದ್ದ ಬಿಜೆಪಿಯನ್ನು ಕಾಂಗ್ರೆಸ್ ರೆಡ್ಡಿಗಳ ಹೆಸರು ಹೇಳಿ ಅವರ ಉಬ್ಬಿದ ಬಲೂನಿಗೆ ಸೂಜಿ ಚುಚ್ಚಿತ್ತು. ಹೌದಾ ಹಾಗಾದರೆ ಇನ್ನೊಂದು ಸವಾಲ್ ಎಂದು ಈ ಬಾರಿಯ ಪಾರ್ಲಿಮೆಂಟ್ ಅಧಿವೇಶನದಲ್ಲಿ ಸಿಬಿಐ ಹೊರಗೆಡವಿದ ಸತ್ಯಗಳನ್ನಿಟ್ಟುಕೊಂಡು ಅಂದಿಮುತ್ತು ರಾಜಾನ ರಾಜೀನಾಮೆಗೆ ಆಗ್ರಹಿಸುತ್ತಿದೆ.


ಅಸಲಿಗೆ ಏನಿದು ಹಗರಣ? ಇದರಲ್ಲಿ ಯಾರ್ಯಾರ ಕೈವಾಡವಿದೆ? Spectrum ಅಂದರೇನು? ಹೀಗೆ ನಿಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳೇಳಬಹುದು. ಎಲ್ಲದಕ್ಕೂ ಉತ್ತರವಾಗಿ ಈ ಲೇಖನ. ಇಂದು ಭಾರತದ ಟೆಲಿಕಾಂ ರಂಗದಲ್ಲಿ ಖಾಸಗೀ ಕಂಪೆನಿಗಳ ಪಾಲು ಬಹುದೊಡ್ಡದು. ಸರ್ಕಾರವೇನಿದ್ದರೂ ಕಂಪೆನಿಗಳ ಮಧ್ಯೆ ಆರೊಗ್ಯಕರ ಸ್ಪರ್ಧೆಯನ್ನು ಕಾಪಾಡುವ ರೆಗ್ಯೂಲೇಟರ್ ಅಷ್ಟೇ. ಈ ಟೆಲಿಕಾಂ ಕಂಪೆನಿಗಳು ವ್ಯವಹರಿಸಲು ಬೇಕಾಗಿರುವ ಪರವಾನಗಿ ಮತ್ತು Spectrumನ ಪೂರೈಕೆ ಕೇಂದ್ರ ಸರ್ಕಾರದ ಜವಾಬ್ದಾರಿ. ಮೊಬೈಲೊಂದರ ಕೆಲಸಕ್ಕೆ ಗಾಳಿ ಮತ್ತು electromagnetic ತರಂಗಗಳೇ ಮಾಧ್ಯಮ. ಈ ತರಂಗಗಳು ಅವುಗಳ ಫ್ರೀಕ್ವೆನ್ಸಿಯಾಧಾರದಲ್ಲಿ ವ್ಯವಸ್ಥಿತವಾಗಿ ಜೋಡಣೆಯಾದಾಗ ಅದೇ Spectrum. ಇದು ದೇಶದ ಅತ್ಯಮೂಲ್ಯ ನೈಸರ್ಗಿಕ ಸಂಪತ್ತಾಗಿರುವುದರಿಂದ ಇದರ ಸಂಪೂರ್ಣ ಒಡೆತನ ಸರ್ಕಾರದ್ದು. ಸರ್ಕಾರವು ಕಂಪೆನಿಗಳಿಗೆ ಪರವಾನಗಿ ಮತ್ತು Spectrumನ್ನು ನೀಡುತ್ತದೆ. 1991 ರಿಂದ Spectrum ಅನ್ನು ಹರಾಜು ಹಾಕಲಾಗುತ್ತಿದೆ. ಆದರೆ ಈ ಬಾರಿ Spectrumನ್ನು ಹರಾಜು ಹಾಕದೆ, ಮೊದಲು ಬಂದವರಿಗೆ ಆದ್ಯತೆಯಂತೆ ವಿತರಿಸಲಾಯಿತು, ಅದೂ 2001ರ ಬೆಲೆಗಳಿಗೆ!! 2001ರಲ್ಲಿ 4  ಮಿಲಿಯನ್ ಗ್ರಾಹಕರಿದ್ದರೆ, 2008 ರಲ್ಲಿ 300 ಮಿಲಿಯನ್ ಗ್ರಾಹಕರಿದ್ದರು! ತಿಂಗಳಿಗೆ 8-9 ಮಿಲಿಯನ್ ನೂತನ ಗ್ರಾಹಕರನ್ನು ಸೇರಿಸಿಕೊಳ್ಳುತ್ತಿರುವ ಮಾರುಕಟ್ಟೆಯ ಪರವಾನಗಿಯನ್ನು 7 ವರ್ಷಗಳ ಹಿಂದಿನ ಬೆಲೆಗಳಿಗೆ ಬಿಕರಿ ಮಾಡಲಾಗಿದೆ!


2008ರ ಜನಿವರಿ 10ರಂದು ಸಂಚಾರ್ ಭವನವು ಬೃಹತ್ ನಾಟಕವೊಂದಕ್ಕೆ ವೇದಿಕೆಯಾಯಿತು. ಅಂದು ಮಧ್ಯಾಹ್ನ 2:45ಕ್ಕೆ ಇಲಾಖೆಯು ತನ್ನ ವೆಬ್ಸೈಟಿನಲ್ಲಿ 3:30ರಿಂದ 4:30ರೊಳಗೆ Spectrumನ್ನು ವಿತರಿಸಲಾಗುವುದೆಂದೂ, ಅಷ್ಟರೊಳಗಾಗಿ ಪರವಾನಗಿ ಪಡೆಯಲಿಚ್ಚಿಸುವವರು ಅಗತ್ಯ ಹಣ ಮತ್ತು ದಾಖಲೆಗಳನ್ನು ಪೂರೈಸಬೇಕೆಂದು ಮತ್ತು ಮೊದಲು ಪಾವತಿಸಿದವರಿಗೆ ಆದ್ಯತೆಯೆಂದು ಪ್ರಕಟಿಸಿತು. every second counts! ಆದ ನೂಕುನುಗ್ಗಲನ್ನು ತಡೆಯಲು ಅನೇಕರು ಬೌನ್ಸರ್ಗಳಿಂದ ಹೊರಗೆಸಯಲ್ಪಟ್ಟರು. ಸಾವಿರಾರು ಕೋಟಿಗಳ ವ್ಯವಹಾರದ Spectrum ಅನ್ನು ವಿತರಿಸಲು ಇದಾ ವಿಧಾನ? ಇದರಲ್ಲಿ ಪಾರದರ್ಶಕತೆಯಾದರೂ ಎಲ್ಲಿದೆ? ಮುಕ್ಕಾಲು ಘಂಟೆಯೊಳಗೆ ಒಂದೂವರೆ ಸಾವಿರ ಕೋಟಿಗಳ ಹಣವನ್ನು ಪಾವತಿಸಬೇಕೆಂಬುದು ಎಷ್ಟು ಸರಿ? ಆದರೂ ಕಂಪೆನಿಗಳು ಈ ಸಮಯದೊಳಗೇ ಇಷ್ಟೊಂದು ಹಣವನ್ನು ಕಟ್ಟಿದ್ದಾವೆಂದರೆ ಅವುಗಳಿಗೆ ಪೂರ್ವ ಮಾಹಿತಿಯಿಲ್ಲದೇ ಇತ್ತೇ? ಹೀಗೆ ಪರವಾನಗಿ ಪಡೆದ ಕಂಪೆನಿಗಳ ಸಂಖ್ಯೆ ಹದಿಮೂರು. 
1)Vodafone Essar cellular Ltd., 2)Idea Cellular Ltd., 3)Bharti Airtel Ltd., 4)Datacom Solutions Pvt. Ltd., 5)Reliance Communications Ltd., 6)S Tel Ltd., 7)Tata Teleservices Ltd., 8)Loop Telecom Private Limited.9)Unitech Wireless Pvt. Ltd., 10)Swan Telecom Pvt. Ltd., 11)Spice Communication Ltd., 12)Allianz Infratech (P) Ltd.,13) Azare Properties Ltd. 


ಈ ಕಂಪೆನಿಗಳ ಪಟ್ಟಿಯಲ್ಲಿ ಹಲವಾರು ರಿಯಲ್ ಎಸ್ಟೇಟ್ ಕಂಪೆನಿಗಳಿವೆ. ಇವುಗಳಿಗೆ ಟೆಲಿಕಾಂ ಕ್ಷೇತ್ರದಲ್ಲಿ ಯಾವುದೇ ಅನುಭವ ಇಲ್ಲ. ಈ ಕಂಪೆನಿಗಳಿಗೆ ತಮ್ಮ ಮೊಬೈಲ್ ಸೇವೆ ಪ್ರಾರಂಭಿಸಲು infrastructure ಇಲ್ಲ. ಉದಾ. ಯೂನಿಟೆಕ್ ವೈರ್ಲೆಸ್ ಲಿ., ಅಜಾರೇ ಪ್ರಾಪರ್ಟೀಸ್  ಲಿ.,ಸ್ವಾನ್ ಟೆಲಿಕಾಂ ಲಿ. .ಹಲವರ ಮೂಗಿಗೆ ಹೆಗ್ಗಣ ಸತ್ತ ವಾಸನೆ ಬಡಿಯಲಾರಂಭಿಸಿತ್ತು.


ಈ Spectrumನ ಮಾರುಕಟ್ಟೆ ಬೆಲೆಯ ಅಂದಾಜು ಸಿಗಲು ಅಕ್ಟೋಬರ್ವರೆಗೆ ಕಾಯಬೇಕಾಯಿತು. ಆಗ Spectrumನ್ನು ಪಡೆದಿದ್ದ ಎರಡು ಕಂಪೆನಿಗಳು ಅವುಗಳ ಹಿಡಿತವನ್ನು ವಿದೇಶೀ ಕಂಪೆನಿಗಳಿಗೆ ಮಾರಿದವು. ಯೂನಿಟೆಕ್ ವೈರ್ಲೆಸ್ಗೆ ದೊರೆತಿದ್ದುದು ಪ್ಯಾನ್ ಇಂಡಿಯಾದ ಪರವಾನಗಿ, 1,651 ಕೋಟಿಗಳಿಗೆ. ಈ ಕಂಪೆನಿಯು ನಾರ್ವೆಯ ಟಲೆನಾರ್ಗೆ ಶೇ. 60 ರಷ್ಟು ತನ್ನ ಹಿಡಿತವನ್ನು ಮಾರಿದ್ದು 6120 ಕೋಟಿಗಳಿಗೆ! ಈ ಲೆಕ್ಕದಂತೆ ಇದರ ಒಟ್ಟು ಬೆಲೆಯು 10,200 ಕೋಟಿಗಳಿಗೇರುತ್ತದೆ. ಅಂದರೆ ಈ ಕಂಪೆನಿಯ ನಿವ್ವಳ ಲಾಭ 8,549 ಕೊಟಿಗಳು. ಅಷ್ಟೂ ಬೊಕ್ಕಸಕ್ಕೆ ನಷ್ಟ. ಇದೇ ಇಂದು ಯೂನಿನಾರ್ ಆಗಿ ನಿಮ್ಮ ಮುಂದೆ ನಳನಳಿಸುತ್ತಿದೆ. ಇನ್ನು ಸ್ವಾನ್ ಟೆಲಿಕಾಂ. ಕಂಪೆನಿಯು 13 ಸರ್ಕಲ್ಗಳ ಪರವಾನಗಿಯನ್ನು 1,537 ಕೋಟಿಗಳಿಗೆ ಪಡೆದುಕೊಂಡಿತ್ತುಇದು ಯು.ಎ.ಇದ ಎಟಿಸಲಾಟ್ಗೆ ತನ್ನ ಶೇ.45 ರಷ್ಟು ಹಿಡಿತವನ್ನು ಮಾರಿದೆ- 4,500 ಕೋಟಿಗಳಿಗೆ. ಹಾಗಾದರೆ ಈ ಲೆಕ್ಕದ ಪ್ರಕಾರ Spectrumನ ಒಟ್ಟು ಬೆಲೆ - ಅಂದಾಜು 10,000 ಕೋಟಿಗಳು. ಹೀಗೆ ಲೆಕ್ಕ ಹಾಕಿದರೆ ಬರಿಯ ಯೂನಿಟೆಕ್ ಮತ್ತು ಸ್ವಾನ್ಗಳಿಂದ ಸರ್ಕಾರಕ್ಕಾದ ನಷ್ಟ ಸುಮಾರು 16 ಸಾವಿರ ಕೋಟಿಗಳು. ಇದೇ ಅಂದಾಜನ್ನು ನಾವು ಇತರೆ ಕಂಪೆನಿಗಳ ಪರವಾನಗಿಗಳಿಗೂ ವಿಸ್ತರಿಸಿದರೆ ನಮ್ಮ ಮುಂದೆ ಬಂದು ನಿಲ್ಲುವುದೇ 60 ಸಾವಿರ ಕೋಟಿಗಳ ನಷ್ಟ ಎಂಬ ಮೊತ್ತ. ಈ ಮೊತ್ತ ಅಂದಾಜು ಕರ್ನಾಟಕದ ಬಡ್ಜೆಟ್ನಷ್ಟು! ಈಗ ಅರ್ಥವಾಯಿತಲ್ಲ ಈ ಹಗರಣದ ಆಳ - ಅಗಲ. ಇದು ಖಂಡಿತವಾಗಿಯೂ ಭಾರತ ಇತಿಹಾಸದ ಅತಿ ದೊಡ್ಡ ಹಗರಣ. 


ಈ ಸ್ವಾನ್ ಟೆಲಿಕಾಂ ಕಂಪೆನಿಯದು ಹಗರಣದಲ್ಲೊಂದು ಉಪ ಹಗರಣ. ಈ ಕಂಪೆನಿಯ ಪರ ರಾಜಾ ವಿಶೇಷ ಕಾಳಜಿ ವಹಿಸಿದಂತಿದೆ. ಸ್ವಾನ್ ಟೆಲಿಕಾಂ ಕಂಪೆನಿಯನ್ನು ಮೊದಲು ಪ್ರಾರಂಭಿಸಿದವನು ಅನಿಲ್ ಅಂಬಾನಿ. ನಂತರ ಈ ಕಂಪೆನಿಯನ್ನು ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಡೈನಮಿಕ್ಸ್ ಬಿಲ್ವಾಸ್ ಗ್ರೂಪ್ನವರು ಟೇಕೋವರ್ ಮಾಡಿಕೊಂಡರು. ಇದಕ್ಕೂ ರಾಜಾರವರ ಆಶೀರ್ವಾದವಿತ್ತು ಅಂತ ಸುದ್ದಿ. 13 ಸರ್ಕಲ್ಗಳಲ್ಲಿ 1,537 ಕೋಟಿಗಳಿಗೆ ಪರವಾನಗಿ ಮತ್ತು Spectrumನ್ನು ಪಡೆದ ಸ್ವಾನ್ ಟೆಲಿಕಾಂ ಮತ್ತು ರಾಜಾ ಸಂಬಂಧ ಅಲ್ಲಿಗೇ ನಿಂತಂತೆ ಕಾಣುವುದಿಲ್ಲ. 2008ರ ಸೆಪ್ಟೆಂಬರ್ 13 ರಂದು, ಸ್ವಾನ್ ಟೆಲಿಕಾಂ ಎಟಿಸಲಾಟ್ಗೆ ತನ್ನ ಹಿಡಿತ ಮಾರುವುದಕ್ಕಿಂತಲೂ ಕೇವಲ ಹತ್ತು ದಿನಗಳ ಮೊದಲು, ಸ್ವಾನ್ನೊಂದಿಗೆ BSNL  ಇಂಟ್ರಾ ಸರ್ಕಲ್ ರೋಮಿಂಗ್ ಡೀಲ್ ಎಂಬ ಒಪ್ಪಂದವೊಂದಕ್ಕೆ ಸಹಿ ಹಾಕುತ್ತದೆ. ಇದರನ್ವಯ BSNL ತನ್ನ infrastructure ಮತ್ತು Spectrum ಅನ್ನು ಸ್ವಾನ್ ಟೆಲಿಕಾಂನೊಂದಿಗೆ ಹಂಚಿಕೊಳ್ಳಲಿದೆ. ಇದಕ್ಕಾಗಿ ಸ್ವಾನ್ ಟೆಲಿಕಾಂ ಪ್ರತಿ ಕರೆಗೆ 52 ಪೈಸೆ, ಕೊಡಬೇಕೆಂದು BSNLನ ಹಿರಿಯರು ತೀರ್ಮಾನಿಸಿದ್ದರು. ಆದರೆ ಆಶ್ಚರ್ಯದ ಸಂಗತಿಯೆಂದರೆ ಒಪ್ಪಂದದಲ್ಲಿ ಇದರ ಪ್ರಸ್ತಾಪವೇ ಇಲ್ಲ! BSNL ಸ್ವಾನ್ನೊಂದಿಗೆ ಈ ರೀತಿಯ ಒಪ್ಪಂದಕ್ಕೆ ಸಹಿ ಹಾಕಲು ರಾಜಾ ಕಾರಣವಾಗಿದ್ದರೆಂಬುದು ಗುಸುಗುಸು. ಈ ಒಪ್ಪಂದವಾದ ಹತ್ತೇ ದಿನಗಳಿಗೆ ಸ್ವಾನ್ ಟೆಲಿಕಾಂ ಎಟಿಸಲಾಟ್ಗೆ ತನ್ನ ಶೇ.45ರಷ್ಟು ಹಿಡಿತವನ್ನು 4500 ಕೋಟಿಗಳಿಗೆ ಮಾರಿತು. ಸ್ವಾನ್ಗೆ ಇಂತಹುದೊಂದು ಉತ್ತಮ ಮೊತ್ತ ಸಿಗುವಲ್ಲಿ BSNLನೊಂದಿಗಿನ ಒಪ್ಪಂದ ಪ್ರಮುಖ ಪಾತ್ರ ವಹಿಸಿತ್ತು. ಇದಕ್ಕೆ ಪ್ರತ್ಯುಪಕಾರವಾಗಿ ರಾಜಾ ಅವರಿಗೆ ತೀರ ಆಪ್ತರು ನಿರ್ದೇಶಕರಾಗಿರುವ ಷೆಲ್ ಕಂಪೆನಿಯೊಂದಕ್ಕೆ, ಸ್ವಾನ್ ಟೆಲಿಕಾಂ 380 ಕೋಟಿಗಳ ಬೆಲೆ ಬಾಳುವ ಷೇರ್ಗಳನ್ನು ನಿಯತಗೊಳಿಸಿದೆಯೆಂಬುದು ಅಲ್ಲಲ್ಲಿ ಕೇಳಿಬರುತ್ತಿರುವ ಸುದ್ದಿ. 


ಹೌದು ಈ ಎಲ್ಲಾ ಆರೋಪಗಳನ್ನು ರಾಜಾ ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ರಾಜಾ ಇದನ್ನು ನಾಲ್ಕು ರೀತಿಯಲ್ಲಿ ಸಮರ್ಥಿಸಿಕೊಳ್ಳ ಹೊರಡುತ್ತಾರೆ. ಮೊದಲಿಗೆ ಅವರು ಇದನ್ನು ಒಂದು ಹಗರಣವೆಂದೇ ಗುರುತಿಸುವುದಿಲ್ಲ. ಅವರ ಪ್ರಕಾರ Spectrum ಅನ್ನು ಹರಾಜು ಹಾಕದೆ ಮೊದಲು ಬಂದವರಿಗೆ ಆದ್ಯತೆಯಂತೆ ವಿತರಿಸಿರುವುದು ಆಮ್ ಆದ್ಮಿಯನ್ನು ದೃಷ್ಟಿಯಲ್ಲಿಟ್ಟುಕೊಂಡು! ಟೆಲಿಕಾಂ ಕಂಪೆನಿಗಳಿಗೆ Spectrum ದುಬಾರಿಯಾದರೆ ಅವರು ಅದನ್ನು ಗ್ರಾಹಕರ ಮೇಲೆ ಹೊರಿಸುತ್ತಾರೆ. ಗ್ರಾಹಕರ ಮೇಲಿನ ಈ ಹೊರೆಯನ್ನು ತಪ್ಪಿಸಲು ಈ ಕ್ರಮ! ರಾಜಾರವರು ತಮ್ಮ ಕ್ರಮಗಳ ಮೇಲೆ ಇಂಥದೊಂದು ಸದ್ದುದೇಶವನ್ನು ಆಪಾದಿಸಿಕೊಳ್ಳುತ್ತಾರಲ್ಲ ಅದು ಈಡೇರಿದೆಯೇ ಎಂದು ಪ್ರಶ್ನಿಸಿಕೊಳ್ಳಬೇಕು. ಪರವಾನಗಿ ಪಡೆದ ಯಾವ ಕಂಪೆನಿಗಳೂ ಸೇವೆಯನ್ನೇ ಆರಂಭಿಸದಿರುವಾಗ ಇನ್ನು ಗ್ರಾಹಕರಿಗೆ ಲಾಭವೆಲ್ಲಿಯದು? ಅವರು ಹೇಳುವ ಲಾಭವೆಲ್ಲಾ ಈ ಖಾಸಗೀ ಕಂಪೆನಿಗಳ ಬ್ಯಾಲೆನ್ಸ್ ಷೀಟ್ಗಳಲ್ಲಿ ರರಾಜಿಸ್ತಾ ಇದೆ. ಮತ್ತೊಂದು ರೀತಿಯಲ್ಲಿ ಅವರನ್ನವರು ಸಮರ್ಥಿಸಿಕೊಳ್ಳುತ್ತಾ, ಹೋರಾಟಗಾರನ ವೇಷ ತೊಡುತ್ತಾರೆ. ಭಾರತದ ಟೆಲಿಕಾಂ ರಂಗವನ್ನು ಕೆಲವೇ ಕಂಪೆನಿಗಳು ಆಳುತ್ತಿದ್ದು, ಇವು ಇಂದು ಒಂದು ಕಾರ್ಟೆಲ್ ಆಗಿ ರೂಪುಗೊಂಡಿವೆ. ಈ ರಂಗದಲ್ಲಿ ಸ್ಪರ್ಧಾತ್ಮಕತೆ ತರಲು ತಾನು ಮೊದಲು ಬಂದವರಿಗೆ ಆದ್ಯತೆಯಂತೆ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಇದನ್ನು ಸಹಿಸದ ಈ ಕಾರ್ಟೆಲ್ ಇದನ್ನೇನೋ ಹಗರಣವೆಂಬಂತೆ ಚಿತ್ರಿಸುತ್ತಿವೆ ಅಂತಾರೆ. ಸರಿ ಸ್ವಾಮಿ ನಿಮ್ಮ `ಲೇಪಿತ' ಉದ್ದೇಶವನ್ನು ಒಪ್ಪೋಣ. ಆದರೆ ಅದಕ್ಕಾಗಿ ಟೆಲಿಕಾಂ ಕ್ಷೇತ್ರದಲ್ಲಿ ಯಾವುದೇ ಅನುಭವವಿಲ್ಲದ, ಎಳ್ಳಷ್ಟೂ infrastructure ಇಲ್ಲದ ರಿಯಲ್ ಎಸ್ಟೇಟಿಗರಿಗೆ ಅತ್ಯಮೂಲ್ಯವಾದ Spectrum ಅನ್ನು 2001ರ ಬೆಲೆಗಲಿಗೆ ಬಿಕರಿ ಮಾಡಿಬಿಡುವುದೆ? ಹೋಗಲಿ ಈಗ ನಿಮ್ಮ ಉದ್ದೇಶ ಈಡೇರಿದೆಯೇ? ಅದೆಲ್ಲ ಇರಲಿ ಸ್ವಾಮಿ ನೀವು ಆಪಾದಿಸಿಕೊಳ್ಳುವ ಇದೇ ಸದುದ್ದೇಶಗಳಿಗಾಗಿ ನೀವ್ಯಾಕೆ 3G Spectrum ಅನ್ನು ಮೊದಲು ಬಂದವರಿಗೆ ಆದ್ಯತೆಯಂತೆ ವಿತರಿಸುತ್ತಿಲ್ಲ? ಯಾಕೆ ಹರಾಜಿಗೆ ಮನಸೋತಿದ್ದೀರಾ? 


ಇಂಥ ಯಾವುದೇ ಸಮರ್ಥನೆ ಕೈಗೂಡದಾದಾಗ ರಾಜಾ ಹೇಳುವುದು ಒಂದೇ ಮಾತು. ತಾನು ನಿಯಮಗಳ ಪ್ರಕಾರ ನಡೆದುಕೊಂಡಿರುವುದಾಗಿಯೂ, ಟೆಲಿಕಾಂ ರಂಗದ ವಾಚ್ ಡಾಗ್ ಟ್ರಾಯ್ನ ಶಿಫಾರಸುಗಳನ್ನು ಅಮಲು ಮಾಡಿರುವುದಾಗಿಯೂ ಹೇಳುತ್ತಾರೆ. ಇದೂ ಕೂಡ ದಾರಿ ತಪ್ಪಿಸುವ ಕಾರ್ಯಕ್ರಮವೇ. ಟ್ರಾಯ್ನ ಶಿಫಾರಸುಗಳಲ್ಲಿ ರಾಜಾ ತಮಗನುಕೂಲವೆನಿಸಿದ್ದನ್ನು ಚಿತ್ರಾನ್ನದಲ್ಲಿ ಕಡಲೆಬೀಜ ಆರಿಸಿದಂತೆ ಆರಿಸಿಕೊಂಡಿದ್ದಾರೆ. ಅಂದಿನ ಟ್ರಾಯ್ ಅಧ್ಯಕ್ಷ ನ್ರಿಪೇಂದ್ರ ಮಿಶ್ರಾ Spectrum ಅನ್ನು ಮೊದಲು ಬಂದವರಿಗೆ ಆದ್ಯಂತೆಯಂತೆ ವಿತರಿಸುರುವುದು ಮತ್ತು ಅದನ್ನು ಟ್ರಾಯ್ ಶಿಫಾರಸು ಎಂಬಂತೆ ಚಿತ್ರಿಸಿರುವುದನ್ನು ಪತ್ರ ಬರೆದು ಪ್ರತಿಭಟಿಸಿದ್ದಾರೆ. ಇದಕ್ಕಾಗಿ ಅವರನ್ನು ಕೆಲವೇ ದಿನಗಳಲ್ಲಿ ಅಲ್ಲಿಂದ ಎತ್ತಂಗಡಿ ಮಾಡಲಾಯಿತು. ಇನ್ನು ಮಾತೆತ್ತಿದರೆ ರಾಜಾ ಈ ವಿಚಾರ ಪ್ರಧಾನಿಯೂ ಸೇರಿದಂತೆ ಇಡೀ ಕ್ಯಾಬಿನೆಟ್ಗೇ ಗೊತ್ತಿತ್ತು, ನನ್ನನ್ನೇ ಏಕೆ ಟಾರ್ಗೆಟ್ ಮಾಡುತ್ತೀರಾ ಎಂದು ಮನಮೋಹನರನ್ನೂ ಜೊತೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಇದೂ ಕೂಡ ಶುದ್ಧ ಸುಳ್ಳು. ಪರವಾನಗಿಯ ನಿರ್ಧಾರ ತೆಗೆದುಕೊಂಡಿರುವುದು ಕ್ಯಾಬಿನೆಟ್ ಅಲ್ಲ, ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಟೆಲಿಕಾಂ ಇಲಾಖೆಯ ಹಿರಿಯ ಅಧಿಕಾರಿಗಳನ್ನೊಳಗೊಂಡ ಟೆಲಿಕಾಂ ಕಮೀಷನ್. ಇನ್ನು ವಿತ್ತ ಸಚಿವಾಲಯ ಹರಾಜಿನ ಬದಲಿಗೆ ಮೊದಲು ಬಂದವರಿಗೆ ಆದ್ಯತೆಯಂತೆ Spectrum ಅನ್ನು ಬಿಕರಿ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟವಾಗಿದೆಯೆಂದು, ವಿವರಣೆ ಕೋರಿ ಪತ್ರ ಬರೆದಿದೆ. ಇನ್ನು ಒಪ್ಪಿಗೆಯ ಮಾತೆಲ್ಲಿಂದ ಬಂತು? ಹೀಗೆ ನೋಡಿದರೆ ರಾಜಾ ತನ್ನನ್ನು ಸಮರ್ಥಿಸಿಕೊಳ್ಳಲು ಮುಂದಿಡುವ ಪ್ರತಿ ವಾದ ಸರಣಿಯೂ ಟೊಳ್ಳಾಗಿದ್ದು, ದಾರಿ ತಪ್ಪಿಸುವ ಉದ್ದೇಶದಿಂದಲೇ ಹೇಳಿದ ಅರ್ಧ ಸತ್ಯಗಳೆಂಬುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಹಾಗಾದರೆ ರಾಜಾರ ನಿಲುವು - ಕ್ರಮಗಳ ಹಿಂದಿನ ಉದ್ದೇಶವಾದರೂ ಏನು? ರಾಜಕಾರಣಿಗಳು ಏನು ಮಾಡಿದರೂ ಅದರ ಹಿಂದೆ ವೋಟು ಇಲ್ಲ ನೋಟಿರುತ್ತದೆ. ಇಲ್ಲಿ ವೋಟಿಗೆ ಆಸ್ಪದವಿಲ್ಲ. 


ದೆಹಲಿಯ ಡಾ ಅರವಿಂದ ಗುಪ್ತರವರು  ಈ ವಿಷಯವಾಗಿ ದೆಹಲಿ ಹೈಕೋರ್ಟ್ನಲ್ಲಿ, ಸಾರ್ವಜನಿಕ ಹಿತಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ (ಕೇಸ್ ನಂ. 7815/2008). 1993ರ ಕೇಸೊಂದರಲ್ಲಿ ನ್ಯಾಯಾಲಯವು first come first serve ಪದ್ದತಿಯು ಅವೈಜ್ಞಾನಿಕವಾಗಿದ್ದು, ಪಾರದರ್ಶಕತೆಯ ಕೊರತೆಯೂ ಇದೆಯೆಂದು ಹೇಳಿದೆ. ಈಗ ಹದಿನೈದು ವರ್ಷಗಳ ತರುವಾಯ ಅತ್ಯಮೂಲ್ಯವಾದ Spectrumನ್ನು ಇದೇ ಪದ್ಧತಿಯ ಆಧಾರದ ಮೇಲೆ ವಿತರಿಸಲಾಗಿರುವುದನ್ನು ಗಮನಿಸಿದ ಇವರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ವಿಷಯವಾಗಿ ಸರ್ಕಾರದ ವಿವರಣೆ ಕೋರಿದ ನ್ಯಾಯಾಲಯಕ್ಕೆ ಸರ್ಕಾರವು ಡಿಸೆಂಬರ್ 10 ರಂದು ಈ ರೀತಿ ವಿವರಣೆ ಸಲ್ಲಿಸಿದೆ: 
"ಈ Spectrum ಅನ್ನು ಹರಾಜಿನಲ್ಲಿ highest bidder ಗೆ ನೀಡಿದ್ದೇ ಆದರೆ, ಆ ಬೃಹತ್ ಮೊತ್ತವನ್ನು ಕಂಪೆನಿಯು ಗ್ರಾಹಕರಿಂದ ವಸೂಲು ಮಾಡುತ್ತದೆ. ಆಗ ಗ್ರಾಹಕರ ಮೇಲೆ ಅನಗತ್ಯ ಒತ್ತಡ ಬೀಳುತ್ತದೆ. ಇಲ್ಲ ಕಂಪೆನಿಗಳು ತಮ್ಮ ದರಗಳನ್ನು ಏರಿಸದೇ ಇದ್ದರೆ, ಕಂಪೆನಿಗಳು ದಿವಾಳಿಯಾಗುತ್ತವೆ. ಹೀಗೆ ಕಂಪೆನಿಗಳ ಖರ್ಚುಗಳು ಹೆಚ್ಚಾಗಿ ಪರವಾನಗಿಯನ್ನು ಅಪೇಕ್ಷಿಸುವವರ ಸಂಖ್ಯೆಯೇ ಕಡಿಮೆಯಾಗುತ್ತದೆ. ಮತ್ತು Spectrum fee ಎನ್ನುವುದು ಸರಕಾರೀ ಆಸ್ತಿಯ ಮಾರಾಟವಲ್ಲದಿರುವುದರಿಂದ ಹರಾಜಿನ ಅವಶ್ಯಕತೆಯೇ ಇಲ್ಲ" ಎಂದು ವಾದಿಸಿದೆ. ಈ ಕೇಸಿನಲ್ಲಿ ತೀರ್ಪು ಇನ್ನೂ ಹೊರಬೀಳದಿರುವುದರಿಂದ ಇದರ ತಾರ್ಕಿಕ ಅಂತ್ಯಕ್ಕೆ ನಾವಿನ್ನೂ ಬಂದಿಲ್ಲ. 


ಈ ಮಧ್ಯೆ ಹೊರಬಂದಿರುವ ಹೊಸ ಡೀಟೆಲ್ಸ್ ಎಂದರೆ, ನೀರಾ ರಾಡಿಯಾ ಎಂಬ ಪಿಆರ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿರುವ 4 ಕಂಪೆನಿಗಳಿಗೆ Spectrum ಆಲ್ಮೋಸ್ಟ್ ಉಚಿತವಾಗಿ ಸಿಕ್ಕುಬಿಟ್ಟಿದೆ. ಸಿಬಿಐ ತನಿಖೆಯಲ್ಲಿ ಹೊರಬಿದ್ದಿರುವ ಸತ್ಯವೆಂದರೆ ಈಕೆ ಟೆಲಿಕಾಂ ಸಚಿವ ಅಂದಿಮುತ್ತು ರಾಜಾ ಅವರಿಗೆ ಈತ್ತೀಚೆಗೆ ಹೆಚ್ಚು ಆಪ್ತರಾಗಿದ್ದು, ಅವರೊಂದಿಗೆ ಘಂಟೆಗಟ್ಟಲೆ ಫೋನಿನಲ್ಲಿ ಸಂಭಾಷಿಸಿದ್ದಾರೆ. ಪೂರ್ವನುಮತಿಯೊಂದಿಗೆ ಸಿಬಿಐ ಈ ಫೋನ್ ಕಾಲ್ಗಳನ್ನು ಟ್ಯಾಪ್ ಮಾಡಿದೆ. ಈಕೆ ಇನ್ನೂ ಹಲವರಿಗೆ ಟೆಲಿಕಾಂ ರಂಗದಲ್ಲಿ `ಕೆಲಸ ಮಾಡಿಸಿಕೊಡುವುದಾಗಿ' ಹೇಳಿಕೊಂಡು ತಿರುಗುತ್ತಿದ್ದಳು ಎಂಬ ಅಂಶ ಕೂಡ ಬಯಲಿಗೆ ಬಂದಿದೆ. ಕಳೆದ ಕೆಲವು ದಿನಗಳ ಆಗುಹೋಗುಗಳು ಹೊಸ ನಾಣ್ಣುಡಿಯೊಂದನ್ನು ಹುಟ್ಟುಹಾಕುವಂತಿವೆ. - behind every successful scam there is a lady love!! ಇನ್ನು ಮೀಡಿಯಾದವರಿಗೆ ಇನ್ವೆಸ್ಟಿಗೇಟಿವ್ ರಿಪೋರ್ಟ್ಗಳನ್ನು ಫೈಲ್ ಮಾಡುವುದಕ್ಕೆ ಸುಗ್ರಾಸ ಸುದ್ದಿ.


ಯುಪಿಎ-1ರಲ್ಲಿ ರಾಜಾ ಮೊದಲಿಗೆ ಪರಿಸರ ಮತ್ತು ಅರಣ್ಯ ಮಂತ್ರಿಯಾಗಿದ್ದರು. ಆದರೆ ದಯಾನಿಧಿ ಮಾರನ್ ಮತ್ತು ಕರುಣಾನಿಧಿಯವರ ನಡುವೆ ಭಿನ್ನಾಭಿಪ್ರಯಾಗಳು ತಲೆದೋರಿದಾಗ ಅವರ ಜಾಗಕ್ಕೆ ಅಂದಿಮುತ್ತು ರಾಜಾರನ್ನು ತಂದು ಟೆಲಿಕಾಂ ಸಚಿವನನ್ನಾಗಿ ಮಾಡಲಾಯಿತು. ಅವರು ಬಂದ ಮೊದಲ ದಿನದಿಂದ ಮಾಡಿದ್ದು ಇದೇ Spectrum ಗಲಾಟೆ. ಕಡೆಕಡೆಯಲ್ಲಿ ಅವರು ಸರ್ಕಾರಕ್ಕೆ ದೊಡ್ಡ ಮುಜುಗರವಾಗಿದ್ದರು. ಈ ವರ್ಷ ಯುಪಿಎ ಮತ್ತೆ ಅಧಿಕಾರಕ್ಕೆ ಬಂದು, ಕಾಂಗ್ರೆಸ್ ಮೇಲುಗೈ ಸಾಧಿಸಿದರೂ ಡಿಎಂಕೆ ಬೆಂಬಲ ಅನಿವಾರ್ಯವಾಗಿತ್ತು. ಆದರೂ ಕಳಂಕಿತರು ತನ್ನ ಸಚಿವ ಸಂಪುಟದಲ್ಲಿರಬಾರದೆಂದು ಪಟ್ಟು ಹಿಡಿದ ಮನಮೋಹನರು ಡಿಎಂಕೆಯ ಟಿ.ಆರ್.ಬಾಲು ಮತ್ತು ಅಂದಿಮುತ್ತು ರಾಜಾರವರನ್ನು ಹೊರಗಿಡಬೇಕೆಂದಿದ್ದರಾದರೂ ಕರುಣಾನಿಧಿ ಒಪ್ಪಲಿಲ್ಲ. ಮನಮೋಹನರು ಕಡೆಗೂ ಬಾಲುರನ್ನು ಹೊರಗಿಡುವಲ್ಲಿ ಯಶಸ್ವಿಯಾದರೇ ಹೊರತು, ರಾಜಾರನ್ನಲ್ಲ. ನಂತರ ರಾಜಾಗೆ ಟೆಲಿಕಾಂ ಖಾತೆಯನ್ನು ತಪ್ಪಿಸಲು ನೋಡಿದರಾದರೂ ಅದೂ ಸಾಧ್ಯವಾಗಲಿಲ್ಲ. ಆಗಲೇ ಈ ಸರ್ಕಾರಕ್ಕೆ ಇವತ್ತಲ್ಲ ನಾಳೆ ರಾಜಾ ಮುಜುಗರವಾಗುವುದು ಖಾತ್ರಿಯಾಗಿತ್ತು. ಸೆಂಟ್ರಲ್ ವಿಜಿಲೆನ್ಸ್ ಕಮಿಟಿ ವರದಿ ಬಂದು, ಅದರ ಶಿಫಾರಸಿನಂತೆ ಸಿಬಿಐ ತನಿಖೆ ಕೈಗೆತ್ತಿಕೊಂಡಿತು. ಈಗ ತನಿಖೆಯ ವಿವರಗಳು ಹೊರಬಂದು ಗದ್ದಲ ಮಾಡುತ್ತಿದೆ. ಇಲ್ಲಿ ಕರುಣಾನಿಧಿ ಧಿಗ್ಗನೆ ಎದ್ದು ಕೂತರು. ತಮ್ಮ ಮಗಳು ಕನಿಮೊಳಿಯ ಮೂಲಕ ಪ್ರಧಾನಿಯವರ ಬಳಿ ಪ್ರತಿಭಟಿಸಿದರು. ತಮ್ಮವರದೇನೂ ತಪ್ಪಿಲ್ಲವೆಂದ ಮೇಲೆ ಸಿಬಿಐ ತನಿಖೆಗೆ ಪ್ರತಿಭಟನೆಯೇಕೋ? ಈಗ ತನಿಖೆಯ ಲೀಕ್ಗಳು ಶುರುವಾಗಿವೆ. ಇನ್ನೂ ಕರುಣಾ ಈ ವಿಷಯವಾಗಿ ತುಟಿ ಎರಡು ಮಾಡಿಲ್ಲ. 


ಹಿಂದೆ ಒಂದು ರೈಲು ದುರಂತವಾದಾಗ, ಅದರ ನೈತಿಕ ಹೊಣೆ ಹೊತ್ತು ತಮ್ಮ ರೈಲ್ವೆ ಸಚಿವ ಸ್ಥಾನಕ್ಕೆ ರಾಜೀನಾಮೆಯಿತ್ತವರು ಲಾಲ್ ಬಹದ್ದೂರ್ ಶಾಸ್ತ್ರಿ. ಈಗ ಒಬ್ಬ ಮಂತ್ರಿಯ ಕಛೇರಿಯ ಮೇಲೆ ಭ್ರಷ್ಟಾಚಾರದ ಆರೋಪದ ತನಿಖೆ ನಡೆಸಲು ಸಿಬಿಐ ದಾಳಿ ಮಾಡಿದರೂ, ಮೇಲ್ನೋಟಕ್ಕೆ ಆರೋಪ ಸಾಬೀತಾಗುವಂತಿದ್ದರೂ ತನಗೆ ಯಾವುದೇ ನೈತಿಕ ಹೊಣೆಯಿಲ್ಲ ಎನ್ನುವ ಭಂಡರು ರಾಜಕೀಯಕ್ಕೆ ಬಂದುಬಿಟ್ಟಿದ್ದಾರೆ. ಮನಮೋಹನ ಸಿಂಗರು ಇಂದಿನ ಮಾರುಕಟ್ಟೆ ಕೇಂದ್ರಿತ ಸಮಾಜದಲ್ಲಿಯೂ ಸಚ್ಚಾರಿತ್ರ್ಯದ ಮಹತ್ವವನ್ನು ಸಾರಿದವರು. ಇವರ ಮೂಗಿನಡಿಯಲ್ಲೇ ಇಂತಹುದೊಂದು ದೊಡ್ಡ ಹಗರಣ ನಡೆದಿರುವುದು, ಅವರು ಅದನ್ನು ರಾಜಕೀಯ ಒತ್ತಡಗಳಿಗಾಗಿ ಸಹಿಸುತ್ತಿರುವುದು ಅವರ ಕುರಿತು ಸದಭಿಪ್ರಾಯ ಮೂಡುಸುವುದಿಲ್ಲ. ಸಿಬಿಐನ ತನಿಖೆಗೆ ಅನುವು ಮಾಡಿಕೊಟ್ಟು ಈ ಕೂಡಲೇ ಅಂದಿಮುತ್ತು ರಾಜಾ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ಆ ಕುರ್ಚಿಯಲ್ಲಿ ಕೂರುವ ನೈತಿಕ ಅರ್ಹತೆಯನ್ನು ಕಳೆದುಕೊಂಡಿದ್ದಾರೆ. ಆದರೆ ರಾಜಾ ರಾಜೀನಾಮೆಯ ಮಾತು ಅತ್ತ ಇರಲಿ, ಅಸಲು ಇದನ್ನೊಂದು ಹಗರಣವೆಂದೇ ಗುರುತಿಸುತ್ತಿಲ್ಲ. ಸರ್ಕಾರ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಗಳೇ ನಮ್ಮ ಸರ್ಕಾರದ ಗುರುತುಪತ್ರವೆಂದು ಬೀಗುವ ಪ್ರಧಾನಿಗಳು ರಾಜಕಾರಣದ ಒತ್ತಡಗಳಿಗೆ ಮಣಿಯದೆ ರಾಜಾರವರಿಂದ ರಾಜೀನಾಮೆ ಪಡೆಯಬೇಕು. ಆದರೆ ಪ್ರಧಾನಿಯವರ ಇತ್ತೀಚಿನ ಹೇಳಿಕೆಗಳು ಇದನ್ನು ಪುಷ್ಟೀಕರಿಸದಿರುವುದು ವಿಷಾದನೀಯ.


ಕಳೆದ ಒಂದೂವರೆ ದಶಕಗಳಿಂದ ಭಾರತದ ದೆಹಲೀ ರಾಜಕಾರಣವನ್ನು ಸಮ್ಮಿಶ್ರ ಸರ್ಕಾರಗಳಾಳುತ್ತಿದ್ದು, ಸರ್ಕಾರದ ಪ್ರಮುಖ ಪಕ್ಷಗಳಿಗೆಲ್ಲವಕ್ಕೂ ಟೆಲಿಕಾಂ ಸಚಿವಾಲಯವೇ ಬೇಕು. ಇದನ್ನು `ವೆಟ್ ಮಿನಿಸ್ಟ್ರಿ' ಎಂದು ಬಣ್ಣಿಸುತ್ತಾರೆ. ಅಂದರೆ ಒಳ್ಳೆ ದುಡ್ಡು ಓಡಾಡುವ ಜಾಗ ಅಂತ. ಅದಕ್ಕೇ ಅದಕ್ಕಷ್ಟು ಡಿಮ್ಯಾಂಡು! ಭಾರತ ಮಾಹಿತಿ ಯುಗವನ್ನು ಈಗಷ್ಟೇ ಪ್ರವೇಶಿಸುತ್ತಿದ್ದು, ಭಾರತದ ಸರ್ವತೋಮುಖ ಅಭಿವೃದ್ಧಿಯಲ್ಲಿ ಟೆಲಿಕಾಂ ಕ್ಷೇತ್ರ ಅತ್ಯಂತ ಮಹತ್ವದ ಪಾತ್ರ ವಹಿಸಿದೆ, ವಹಿಸಲಿದೆ. ಇಂತಿಪ್ಪ ಟೆಲಿಕಾಂ ರಂಗವನ್ನು ವೆಟ್ ಮಿನಿಸ್ಟ್ರಿ ಎಂದು ಗುರುತಿಸಿ ಅದರ ಸಾರ-ರಸವನ್ನೆಲ್ಲಾ ಹೀರಿ ಹಾಕಿದ್ದಾರೆ ಇವರು. 1997ರ ಸುಖರಾಮ್ ಹಗರಣ, ಪ್ರಮೋದ್ ಮಹಾಜನ್ರ ವಿಎಸ್ಎನ್ಎಲ್ ಹಗರಣ, ಈಗ ಈ ಹಗರಣ. ಈ ನವ ಭಾರತ ಖಂಡಿತವಾಗಿಯೂ ಇನ್ನೂ ಉತ್ತಮ, ದಕ್ಷ, ಪ್ರಾಮಾಣಿಕ, ಮುತ್ಸದ್ಧಿ ಟೆಲಿಕಾಂ ಸಚಿವನನ್ನು ಪಡೆಯಲು ಅರ್ಹವಾಗಿದೆ. ಇದು ಸದ್ಯದ ತುರ್ತು ಕೂಡ. 2G Spectrum ವಿತರಣೆಯಲ್ಲಿ 60 ಸಾವಿರ ಕೋಟಿಗಳ ಮೊತ್ತದ ಹಗರಣದ ಆರೋಪ ಹೊತ್ತ ಅದೇ ಅಂದಿಮುತ್ತು ರಾಜಾ, 3G Spectrumನ ಹರಾಜು ಮತ್ತು ವಿತರಣೆಯನ್ನು ಪರ್ಯಾವೆಕ್ಷಿಸುವುದು ಸರಿಯಲ್ಲ. 

One thoughts on “ಸ್ವತಂತ್ರ ಭಾರತದ ಅತಿ ದೊಡ್ಡ ಹಗರಣ - 60 ಸಾವಿರ ಕೋಟಿಗಳ spectrum scam

Unknown said...

telecom hagaranada bagge tumbaa apoorva maahitigalannu kottiddiiri.raajakaarana idannu wetlanad aagi balasuvudara bagge vishishta vishlshane ide.congress athavaa bjp athavaa yaavude pasha aagali tappu maadidaaga adannu ,vaichaarikavaagi bayaligeleyuva nimma nishpakshapaata vimarshe indo bahala apoorva.

Proudly powered by Blogger
Theme: Esquire by Matthew Buchanan.
Converted by LiteThemes.com.