ನೈಸ್ ಪುರಾಣ - 7 ನೈಸ್ ಜನನವೂ ಜನಕನೂ ಎಲ್ಲವೂ ಪ್ರಶ್ನಾರ್ಹವೇ!

ಕಳೆದ ಬಾರಿ ನಾವು ಫ್ರೇಂವರ್ಕ್ ಅಗ್ರೀಮೆಂಟಿನ ಅನೇಕ ಉಪ ಹಗರಣಗಳ ಬಗ್ಗೆ ತಿಳಿದುಕೊಂಡೆವು. ಹಾಗೆಯೇ ಇಡಿಯ ಫ್ರೇಂವರ್ಕ್  ಅಗ್ರೀಮೆಂಟಿನ ಪರಮ ನಿರ್ಲಜ್ಜ ಕ್ಲಾಸ್ ಆದ ಆರ್ಬಿಟ್ರೇಷನ್ ಬಗ್ಗೆಯೂ ಕೊಂಚ ತಿಳಿದುಕೊಂಡಿದ್ದೆವು. ಈ ಆರ್ಬಿಟ್ರೇಷನ್ನ ಕ್ಲಾಸ್ ಏನಿದೆ, ಅದೇ ಖೇಣಿ ಸಾಹೇಬರನ್ನು ಯಾವುದೇ ಸರಕಾರೀ ಕ್ರಮಗಳಿಂದ ಬಚಾವು ಮಾಡುತ್ತಿದೆ. ಆರ್ಬಿಟ್ರೇಷನ್ನ ಕ್ಲಾಸ್ ಇಷ್ಟು ಜಟಿಲವಾಗಿಲ್ಲದಿದ್ದರೆ ಯಾವತ್ತಿಗೋ ಈ ಬಿಎಂಐಸಿಪಿ ಪ್ರಾಜೆಕ್ಟ್ ಸರ್ಕಾರದ ವಶವಾಗುತ್ತಿತ್ತು, ಇಲ್ಲ ಇನ್ನೊಂದು ಕಂಪೆನಿಯ ಪಾಲಾಗುತ್ತಿತ್ತು. ಇದರಿಂದ ಆತನನ್ನು ಕಾಪಾಡುತ್ತಿರುವುದೇ ಈ ಕ್ಲಾಸ್.  ಆರ್ಟಿಕಲ್ 18 ಇದನ್ನು ವಿವರಿಸುತ್ತದೆ. ಇದರ ಪ್ರಕಾರ ಏನೇ ಡಿಸ್ಪ್ಯೂಟ್ಗಳು ಎದುರಾದರೂ 30 ದಿನಗಳೊಳಗೆ ಉಭಯ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು, ಅದು ಸಾಧ್ಯವಾಗದಿದ್ದರೆ ಸರ್ಕಾರ ಮತ್ತು ಕಂಪೆನಿ ಇಬ್ಬರಿಗೂ ಒಪ್ಪಿಗೆಯಾಗತಕ್ಕಂತಹ ತಜ್ಞರ ಸಮಿತಿಗೆ ಅದನ್ನು ಒಪ್ಪಿಸಬೇಕು. ಅದಕ್ಕೆ 60 ದಿನಗಳ ಕಾಲಾವಕಾಶ. ಇನ್ನು ಈ ತಜ್ಞರ ಸಮಿತಿಯ ಶಿಫಾರಸನ್ನು ಕಂಪೆನಿ ಒಪ್ಪಬಹುದು ಇಲ್ಲ ತಿರಸ್ಕರಿಸಬಹುದು. ಹಾಗಾದರೆ ತಜ್ಞರ ಸಮಿತಿಯೇಕೋ? ಇಲ್ಲ ಸಮಸ್ಯೆ ಬಗೆಹರಿಯಲಿಲ್ಲವೆಂದರೆ ಆಬರ್ಿಟ್ರೇಶನ್ಗೆ ಹೋಗಬೇಕು. ಸರ್ಕಾರ ಮತ್ತು ಕಂಪೆನಿ ಇಬ್ಬರೂ ತಮ್ಮ ತಮ್ಮ ಪರವಾಗಿ ಒಬ್ಬರನ್ನು ಆರ್ಬಿಟ್ರೇಟರ್ ಆಗಿ ನೇಮಿಸತಕ್ಕದ್ದು. ನಂತರ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಆರ್ಬಿಟ್ರೇಷನ್, ಪ್ಯಾರಿಸ್ ಮೂರನೆಯ ನ್ಯೂಟ್ರಲ್ ಆರ್ಬಿಟ್ರೇಟರ್ ಅನ್ನು ನೇಮಿಸುತ್ತದೆ. ಈ ಆಬಿಟ್ರೇಷನ್ ನ್ಯೂ ಯಾರ್ಕ್ ಕನ್ವೆಂಷನ್ 1958ರಂತೆ ನಡೆಯುತ್ತದೆ. ಈ ಆರ್ಬಿಟ್ರೇಶೇನ್ ಕಮಿಟಿ ನೀಡುವ ತೀರ್ಪೇ ಅಂತಿಮ. ಅದನ್ನು ಭಾರತದ ಯಾವುದೇ ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ! ಈ ಆರ್ಬಿಟ್ರೇಷನ್ ನಡೆಸಬೇಕಾದ ಸ್ಥಳ ಯಾವುದು ಗೊತ್ತಾ - ಲಂಡನ್ ಕೋರ್ಟ್! ಅಂದರೆ ಹೆಮ್ಮಿಗೇಪುರ ಕುಂಬಳಗೋಡಿನ ರೈತ ಲಂಡನ್ ಕೋರ್ಟ್ಗೆ ಹೋಗಿ ನ್ಯಾಯ ಕೇಳಬೇಕು! ಇದಲ್ಲವೇ ಕುಚೋದ್ಯ?

ಇಂಥದೊಂದು ಆರ್ಬಿಟ್ರೇಷನ್ ಕ್ಲಾಸ್ ಯಾಕಾಗಿ ಬೇಕಿತ್ತು? ಮೂಲ ಒಪ್ಪಂದದ ಕಾಲದಲ್ಲೇ ಇದರ ಮಾತಾಗಿತ್ತು. ಹಾಗಾದರೆ ದೇವೇಗೌಡರು ಇದಕ್ಕೆ ಯಾಕೆ ಒಪ್ಪಿಕೊಂಡರು? ಅವರು ಅದಕ್ಕೂ ಒಂದು ಸಮರ್ಥನೆ ತಯಾರಿಟ್ಟುಕೊಂಡಿದ್ದಾರೆ. ಮೂಲ ಒಪ್ಪಂದ ನಡೆದದ್ದು Kalyani Group (Pune), SAB Engineering (Pennsylvania, USA) and Vanasse Hangen Brustlin (VHB) (Boston, USA) ಎಂಬ ಮೂರು ಕಂಪೆನಿಗಳನ್ನೊಳಗೊಂಡ ಒಂದು ಕನ್ಸಾರ್ಶಿಯಂನೊಂದಿಗೆ. ಇಲ್ಲಿ ಎರಡು ವಿದೇಶಿ ಕಂಪೆನಿಗಳಿವೆ. ಹಾಗಾಗಿ ಆರ್ಬಿಟ್ರೇಷನ್ ಅನ್ನು 3ನೇ ದೇಶವೊಂದಕ್ಕೆ ಸ್ಥಳಾಂತರಿಸುವುದರ ಮಾತಾಯಿತು ಎನ್ನುತ್ತಾರೆ ದೇವೇಗೌಡರು. ಇಂತಹ ಪರಿಸ್ಥಿತಿಯಲ್ಲಿ ಇಂತಹ ಆರ್ಬಿಟ್ರೇಷನ್ ಕ್ಲಾಸ್ಗಳ ಕರಾರಾಗುವುದು ಸಹ ಸಹಜ. ಇಂದಿಗೂ ಇದು ನಡೆಯುತ್ತಿದೆ. ಆದರೆ ಪ್ರಶ್ನೆ ಅದಲ್ಲ. ಏಪ್ರಿಲ್ 3 1997ರಂದು ಕರ್ನಾಟಕ ಸರ್ಕಾರ ಫ್ರೇಂವರ್ಕ್ ಅಗ್ರೀಮೆಂಟ್ ಅಂತ ಮಾಡಿಕೊಂಡದ್ದು, ಈ ವಿದೇಶೀ ಕಂಪೆನಿಗಳೊಂದಿಗಲ್ಲ, ಬದಲಿಗೆ ನೈಸೆಲ್ ಲಿಮಿಟೆಡ್ ಎಂಬ ಕಂಪೆನಿಯೊಂದಿಗೆ! ಮೂಲ ಒಪ್ಪಂದದ ಕಾಲದಲ್ಲಿ ನೈಸ್ ಅನ್ನುವ ಕಂಪೆನಿಯೇ ಅಸ್ತಿತ್ವದಲ್ಲಿರಲಿಲ್ಲ. ಅದು ಜನ್ಮ ತಾಳಿದ್ದೇ ಸೆಪ್ಟೆಂಬರ್ 9, 1996ರಂದು! ಅಂದರೆ ಫ್ರೇಂವರ್ಕ್ ಅಗ್ರೀಮೆಂಟ್ ಆಗುವುದಕ್ಕೂ ಕೇವಲ 6 ತಿಂಗಳ ಮುಂಚೆ. ಈ ನೈಸ್ ಕಂಪೆನಿ ಯಾರದು? ಮೂಲ ಒಪ್ಪಂದ ಒಂದು ಕಂಪೆನಿಯೊಂದಿಗಾಗಿ, ಫ್ರೆಂವರ್ಕ್ ಅಗ್ರೀಮೆಂಟ್ ಮತ್ತೊಬ್ಬರೊಟ್ಟಿಗಾಗುತ್ತಾ?! 

ಫೆಬ್ರವರಿ 20, 1995ರಂದು ಮೆಸ್ಸಾಚುಟಸ್ ರಾಜ್ಯದ ಗವರ್ನರ್ರ `ದಿವ್ಯ ಸಾನ್ನಿಧ್ಯ'ದಲ್ಲಿ ಈ ಪ್ರಾಜೆಕ್ಟ್ನ ಕುರಿತಾಗಿ ಮೂಲ ಒಪ್ಪಂದ ಅಂತ ಆಗಿರುವುದು Kalyani Group (Pune), SAB Engineering (Pennsylvania, USA) and Vanasse Hangen Brustlin (VHB) (Boston, USA) ಎಂಬ ಮೂರು ಕಂಪೆನಿಗಳನ್ನೊಳಗೊಂಡ ಕನ್ಸಾರ್ಶಿಯಂನೊಂದಿಗೆ. ಆದರೆ ತದನಂತರ ಸೆಪ್ಟೆಂಬರ್ 9, 1996ರಂದು ಕನ್ಸಾರ್ಶಿಯಂನ ಮೂವರೂ ಸದಸ್ಯರೂ ಒಂದು ಒಪ್ಪಂದಕ್ಕೆ ಬಂದು consent and acknowledgement agreement ಎಂಬ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ. ಅದರಂತೆ ವಿಎಚ್ಬಿ, ಸಬ್ ಇಂಜಿನಿಯರಿಂಗ್ ಮತ್ತು ಬಾಬಾ ಕಲ್ಯಾಣಿ ಸಂಸ್ಥೆಗಳು ಬಿಎಂಐಸಿ ಪ್ರಾಜೆಕ್ಟ್ ಅನ್ನು ಅನುಷ್ಠಾನಗೊಳಿಸಲೆಂದೇ ಒಂದು ಉಪ ಕಂಪೆನಿಯನ್ನು Special Purpose ವೆಹಿಕ್ಲೆ ಎಂದು ಇದಕ್ಕಾಗೇ ಹುಟ್ಟುಹಾಕಿದ್ದಾರೆ. ಈ ಕಂಪೆನಿಯನ್ನು ಅವರು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸ್ ಲಿಮಿಟೆಡ್ ಎಂದು ಕರೆದಿದ್ದಾರೆ. ಇದೇ NICEL. ಇಂತಿಪ್ಪ ಈ ಒಪ್ಪಂದಕ್ಕೆ ವಿಎಚ್ಬಿಯ ಉಪಾಧ್ಯಕ್ಷ, ಸಬ್ ಇಂಜಿನಿಯರಿಂಗ್ನ ಅಧ್ಯಕ್ಷ ಮತ್ತು ಕಲ್ಯಾಣಿ ಗ್ರೂಪ್ ಪರವಾಗಿ ಬಾಬಾ ಕಲ್ಯಾಣಿಯವರು ಸಹಿ ಹಾಕಿದ್ದಾರೆಂದು, ಅಶೋಕ ಖೇಣಿಯವರು ಹೇಳಿಕೊಳ್ಳುತ್ತಾರೆ. the Kalyani Group VHB and SAB shall agree to maintain at all times directly or indirectly a collective 15% beneficial equity interest in the company ಎಂಬ ಕರಾರು ಕೂಡ ಈ ಒಪ್ಪಂದದಲ್ಲಿದೆ. ಏಪ್ರಿಲ್ 27 1997ರ ಸರ್ಕಾರದ ಆದೇಶದಲ್ಲಿ ಸರ್ಕಾರ ಈ ಮೇಲ್ಕಂಡ ಒಪ್ಪಂದವನ್ನು ಅನುಮೋದಿಸಿ, ಆದೇಶ ಹೊರಡಿಸಿದೆ. ಅಂದರೆ, ಏಪ್ರಿಲ್ 27ರಂದು ಸರ್ಕಾರ ಈ ಒಪ್ಪಂದಕ್ಕೆ ತನ್ನ ಅನುಮೋದನೆ ಸೂಚಿಸಿದ್ದು, ಏಪ್ರಿಲ್ 3 1997ರಂದೇ ಇದೇ ನೈಸೆಲ್ ಕಂಪೆನಿಯೊಂದಿಗೆ ಸರ್ಕಾರ ಫ್ರೇಂವರ್ಕ್ ಅಗ್ರೀಮೆಂಟಿಗೆ ಸಹಿ ಹಾಕುತ್ತದೆ!

ಹೀಗೆ ನೈಸೆಲ್ ಎಂಬ ಒಂದು ಹೊಸ ಕಂಪೆನಿಯನ್ನೇ ಹುಟ್ಟುಹಾಕುವ ಅವಶ್ಯಕತೆಯೇನಿತ್ತು? ಅಂತ ಕೇಳಿದರೆ ಖೇಣಿ ಸಾಹೇಬರದು ಸಿದ್ಧ ಉತ್ತರ. ವಿಎಚ್ಬಿ ಕಂಪೆನಿಯ ಕೇಂದ್ರ ಕಛೇರಿಯಿರುವುದು ಬಾಸ್ಟನ್ನಲ್ಲಿ, ಸಬ್ ಇಂಜಿನಿಯರಿಂಗ್ದು ಪೆನ್ಸೆಲ್ವೇನಿಯಾದಲ್ಲಿ, ಕಲ್ಯಾಣಿ ಗ್ರೂಪ್ನದು ಪುಣೆಯಲ್ಲಿ. ಹಾಗಾಗಿ ಬೆಂಗಳೂರಿನಲ್ಲಿ ಕೇಂದ್ರ ಕಛೇರಿ ಹೊಂದಿದ್ದರೆ ಅನುಕೂಲವಾಗುತ್ತದೆಂದು ಮೂವರೂ ಸೇರಿ ಈ ಕಂಪೆನಿಯನ್ನು ಹುಟ್ಟು ಹಾಕಿರುವುದಾಗಿ ಉಲಿಯುತ್ತಾರೆ. ಹೀಗೆ Special Purpose Vehicleಗಳನ್ನು ರಚಿಸುವುದು ಏನು ಅಂಥ ವಿಶೇಷವೇನಲ್ಲ, ಇದು ಸಹಜ ವಾಡಿಕೆ. ಆದರೆ ಪ್ರಶ್ನೆ ಅದಲ್ಲ ಖೇಣಿ ಸಾಹೇಬರು ಹೇಳುವ ಈ "consent and acknowledgement agreement." ಏನಿದೆಯಲ್ಲ, ಅದರ ಸತ್ಯಾಸತ್ಯತೆಯ ಬಗ್ಗೆಯೇ ಹಲವಾರು ಅನುಮಾನಗಳಿವೆ. ದೇವೇಗೌಡರು ಅದನ್ನು ಒಂದು ಫೋಜ್ಡರ್್ ಡಾಕ್ಯುಮೆಂಟ್ ಎಂದು ಅನುಮಾನಿಸುತ್ತಾರೆ. ಅವರ ಮಾತು ಹಾಗೆ ಇರಲಿ ಬಿಡಿ. ಆದರೆ ಮಾರ್ಚ್ 2001ರಲ್ಲಿ ಬಿಎಂಐಸಿಪಿಯಲ್ಲಿ ವಿಎಚ್ಬಿ ಕಂಪೆನಿಯ ಪಾತ್ರದ ಕುರಿತು ಪ್ರಶ್ನಿಸಿದಾಗ ವಿಎಚ್ಬಿ ಕಂಪೆನಿಯ ಬೋರ್ಡ್ ಛೇರ್ಮನ್ ರಿಚರ್ಡ್ ಹ್ಯಾಂಗೆನ್ 1995ರಿಂದೀಚೆಗೆ ವಿಎಚ್ಬಿ ಕಂಪೆನಿಯು ಬಿಎಂಐಸಿ ಪ್ರಾಜೆಕ್ಟಿನಲ್ಲಿ ಯಾವುದೇ ರೀತಿಯಲ್ಲೂ ಭಾಗಿಯಾಗಿರುವುದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಇಷ್ಟೇ ಅಲ್ಲದೆ "We do not know of the existence of any scope defining a future role for [VHB]." ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕೆ ಏನು ಹೇಳುವುದು? 

ಅಲ್ಲಿಗೆ ವಿಎಚ್ಬಿ ಕಂಪೆನಿ ಬಿಎಂಐಸಿ ಪ್ರಾಜೆಕ್ಟಿನಿಂದ 1995ರಷ್ಟು ಹಿಂದೆಯೇ ಹೊರನಡೆದಿದೆಯಾ? ವಿಎಚ್ಬಿಯ ಬೋರ್ಡ್ ಛೇರ್ಮನ್ ರಿಚರ್ಡ್  ಹ್ಯಾಂಗೆನ್ರ ಹೇಳಿಕೆ ನೋಡಿದರೆ ಹಾಗೇ ಅನ್ನಿಸುತ್ತದೆ. ಹಾಗಾದರೆ 1997ರ ಅಗ್ರೀಮೆಂಟು? ಅದೇ ಒಂದು ದೊಡ್ಡ ಮಿಸ್ಟರಿ! ಇವತ್ತಿಗೂ ಇನ್ನೂ ಅದರ ಪರದೆ ಸರಿದಿಲ್ಲ. ಆದರೆ 1999ರ ಪ್ರಾಜೆಕ್ಟ್ ಡಾಕ್ಯುಮೆಂಟ್ಗಳಲ್ಲಿ ಕೂಡ ವಿಎಚ್ಬಿ ಕಂಪೆನಿಯನ್ನು ನೈಸ್ನ ಒಬ್ಬ ಸದಸ್ಯನಾಗಿ ತೋರಿಸಲಾಗಿದೆ. ಇವತ್ತಿಗೂ ಸಹ ನೈಸ್ ಕಂಪೆನಿಯ ಅಫಿಷಿಯಲ್ ವೆಬ್ಸೈಟು ವಿಎಚ್ಬಿಯನ್ನು ಬಿಎಂಐಸಿ ಪ್ರಾಜೆಕ್ಟಿನ ಲೀಡ್ ಇಂಜಿನಿಯರ್ ಎಂದು ತೊರಿಸುತ್ತದೆ! ಇದೊಂದು ದೊಡ್ಡ ಫ್ರಾಡ್. ಸತತ ಬಂದ ಸರ್ಕಾರಗಳು ಇದನ್ನು ತನಿಖೆಗೊಳಪಡಿಸದೆ ಇರುವುದು ನಮ್ಮ ವ್ಯವಸ್ಥೆಯ ಕುಚೋದ್ಯ. ಇನ್ನು ಸಬ್ ಇಂಜಿನಿಯರಿಂಗ್. ಪೆನ್ಸಿಲ್ವೇನಿಯಾದಲ್ಲಿ ರಿಜಿಸ್ಟರ್ ಆಗಿರುವ ಸಬ್ ಇಂಜಿನಿಯರಿಂಗ್ ಎಂಬ ಕಂಪೆನಿಗೆ ನಮ್ಮ ಖೇಣಿ ಸಾಹೇಬರು ಮುಖ್ಯಸ್ಥರು. ಮೂಲ ಒಪ್ಪಂದದಲ್ಲೂ ಸಬ್ ಇಂಜಿನಿಯರಿಂಗ್ ಪರವಾಗಿ ಸಹಿ ಹಾಕಿರುವುದು ಖೇಣಿ ಸಾಹೇಬರೇ. ಇದೊಂದು ಷೆಲ್ ಕಂಪೆನಿ. ಇಂತಿಪ್ಪ ಈ ಪುಡಿಗಾಸು ಕಂಪೆನಿಯ ಮುಖ್ಯಸ್ಥ ಅಶೋಕ ಖೇಣಿ ಇಂದು ನೈಸ್ಗೂ ಸಹ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಸಬ್ ಇಂಜಿನಿಯರಿಂಗ್ ಅನ್ನು ಇಂಡಿಯನ್ ಕಂಪೆನಿ ರಿಜಿಸ್ಟ್ರಾರ್ನಲ್ಲಿ ಡಿಫಾಲ್ಟರ್ ಎಂದು ಗುರತಿಸಲಾಗಿದೆ. ಇಂತಿಪ್ಪ ಈ ಕಂಪೆನಿಗೆ ಹಿಂದೆ ಯಾವುದೇ ಬೃಹತ್ ಪ್ರಾಜೆಕ್ಟ್ ಮಾಡಿದ ಅನುಭವವಿಲ್ಲ. ಆದರೆ ಇಂದು ಇದೇ ಸಬ್ ಇಂಜಿನಿಯರಿಂಗ್ ಎಂಬ ಷೆಲ್ ಕಂಪೆನಿಯ ಮುಖ್ಯಸ್ಥ ಅಶೋಕ ಖೇಣಿ, ಸಹಸ್ರಾರು ಕೋಟಿಗಳ ಮೊತ್ತದ ನೈಸ್ ಸಾಮ್ರಾಜ್ಯಕ್ಕೆ ಅಧಿಪತಿ.

ಅಲ್ಲಿಗೆ ನೈಸ್ ಕಂಪೆನಿಯ ಜನನವೂ ಜನಕನೂ ಎಲ್ಲವೂ ಪ್ರಶ್ನಾರ್ಹವೇ ಆದಂತಾಯಿತು. ನೈಸ್ ಪುರಾಣದ ಮೂಲವೇ ಪ್ರಶ್ನಾರ್ಹ! ಇರಲಿ ನೈಸೆಲ್ ಕಂಪೆನಿಯ ಬಗ್ಗೆ ಇಷ್ಟೆಲ್ಲಾ ಯಾಕೆ ವಿವರಿಸಬೇಕಾಯಿತೆಂದರೆ ಫ್ರೇಂವರ್ಕ್ ಅಗ್ರೀಮೆಂಟಿನ ಆರ್ಟಿಕಲ್ ನಂ. 18 ವಿವರಿಸುವ ಆರ್ಬಿಟ್ರೇಷನ್ ಕ್ಲಾಸ್ನಲ್ಲಿನ ಹಗರಣವನ್ನು ಬಿಡಿಸಿಡುವುದಕ್ಕೆ. ಒಂದು ಹಗರಣದ ಮೂಲ ಹುಡುಕಹೊರಟರೆ ಮತ್ತೊಂದಿಷ್ಟು ಸಿಗುತ್ತವೆ ಈ ನೈಸ್ ಪುರಾಣದಲ್ಲಿ. ಇರಲಿ. ಆರ್ಬಿಟ್ರೇಷನ್ನ ಬಗ್ಗೆ ದೇವೇಗೌಡರೇನು ಹೇಳಿದರು - ಇಲ್ಲಿ ಎರಡು ವಿದೇಶಿ ಕಂಪೆನಿಗಳಿರುವುದರಿಂದ ಆರ್ಬಿಟ್ರೇಷನ್ ಅನ್ನು 3ನೇ ದೇಶವೊಂದಕ್ಕೆ ಸ್ಥಳಾಂತರಿಸುವುದರ ಮಾತಾಯಿತು ಎಂದರು. ಆದರೆ ಫ್ರೇಂವರ್ಕ್ ಅಗ್ರೀಮೆಂಟ್ ಆಗುವ ಹೊತ್ತಿಗೆ ಯಾವುದಿತ್ತು ಸ್ವಾಮಿ ವಿದೇಶೀ ಕಂಪೆನಿ? ಇದ್ದದ್ದು ನೈಸೆಲ್ ಒಂದೇ ಅಲ್ಲವೇ. ಅದರೊಟ್ಟಿಗೆಯೇ ಅಲ್ಲವೇ ಸರ್ಕಾರ ಫ್ರೇಂವರ್ಕ್ ಅಗ್ರೀಮೆಂಟ್ ಮಾಡಿಕೊಂಡದ್ದು? ಮತ್ತೆ ಬೇರೊಂದು ದೇಶದಲ್ಲಿ ಆಬಿಟ್ರೇಷನ್ ಅನ್ನುವ ಕ್ಲಾಸ್ ಯಾಕೆ ಸ್ವಾಮಿ ಬೇಕು? ದುರ್ದೈವ ನಮ್ಮ ಈ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ, ಉತ್ತರ ಯಾರ ಬಳಿಯೂ ಇಲ್ಲ.

Proudly powered by Blogger
Theme: Esquire by Matthew Buchanan.
Converted by LiteThemes.com.