ಟ್ವಿಟರ್ನಲ್ಲಿ ಲಲಿತ್ ಮೋದಿ ಎಬ್ಬಸಿದ ಬಂಡಾಯ, ಶಶಿ ತರೂರ್ ಮನಿಸ್ಟ್ರಿಯ ಕೊರಳಿಗೆ ಸುತ್ತಿಕೊಳ್ಳತೊಡಗಿದಾಗ ಇದನ್ನು ಬಹುತೇಕರು storm in the tea cup ಎಂತಲೇ ಭಾವಿಸಿದ್ದರು. ಆದರೆ ದಿನಗಳುರುಳಿದಂತೆ ಈ ವಿಷಯ ತನ್ನದೇ ಆದಂತಹ momentum ಅನ್ನು ಪಡೆದುಕೊಳ್ಳುತ್ತಾ ಸಾಗಿ ನಿಜವಾದ ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿದೆ. ಈ ಬಿರುಗಾಳಿಗೆ ಮೊದಲ ಬಲಿ ವಿದೇಶಾಂಗ ಖಾತೆಯ ರಾಜ್ಯ ಸಚಿವ ಶಶಿ ತರೂರ್. ಕಡೆಗೂ ಶಶಿ ತರೂರ್ ತಲೆದಂಡವಾಗಿದೆ. ಅದು ಅನಿವಾರ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಬಿಡಿ. ಕಡೆಯ ಪ್ರಯತ್ನೆವೆಂಬಂತೆ ಶಶಿ ತರೂರ್ನ ಮನದನ್ನೆ ಸುನಂದಾ ಪುಷ್ಕರ್ ತನಗೆ ದೊರೆತ ಸ್ವೆಟ್ ಈಕ್ವಿಟಿಯನ್ನು ವಾಪಸು ನೀಡಿ, ನೋಡಿ ತಮ್ಮದೇನೂ ಇಲ್ಲ, ಲಂಚವಾಗಿದ್ದರೆ ವಾಪಸು ನೀಡುತ್ತಿದ್ದವೇ ಎಂದು ಪ್ರಶ್ನಿಸುವಂತೆ ನಿಂತರು. ಇದರಲ್ಲೂ ಶಶಿ ತರೂರ್ನ ರಾಜಕೀಯ ಮೌಢ್ಯತೆ ಎದ್ದು ತೋರುತ್ತಿತ್ತು. ಸುನಂದಾ ತನ್ನ ಸ್ವೆಟ್ ಈಕ್ವಿಟಿಯನ್ನು ವಾಪಸ್ಸು ನೀಡಿದ್ದು ಸುನಂದಾ ಶಶಿಯ ಅಣತಿಯಂತೆ ನಡೆದುಕೊಳ್ಳುತ್ತಿದ್ದಾಳೆ ಎಂಬುದನ್ನು ಜಗಜ್ಜಾಹೀರುಗೊಳಿಸಿಬಿಟ್ಟಿತು. ಅಲ್ಲಿಗೆ ಶಶಿ ತರೂರ್ನ ಡಿಫೆನಸ್ಸಿಗೆ ಬೆಲೆಯಿಲ್ಲದಂತಾಯಿತು. ಸರ್ಕಾರಕ್ಕೆ ಮತ್ತಷ್ಟು ಮುಜುಗರ ತಪ್ಪಿಸಲು ಪ್ರಧಾನಿ ಮನಮೋಹನ ಸಿಂಗರು ಶಶಿ ತರೂರ್ ಅವರ ರಾಜೀನಾಮೆ ಪಡೆದುಕೊಂಡರು.
ಎಲ್ಲರೂ ಇದು ಇಲ್ಲಿಗೆ ಮುಗಿಯುತ್ತದೆ ಎಂದುಕೊಂಡಿದ್ದರು, ಲಲಿತ್ ಮೋದಿಯೂ ಸೇರಿ. ಆದರೆ ಒಬ್ಬ ಕಾಂಗ್ರೆಸ್ ಸಚಿವನ ರಾಜೀನಾಮೆಗೆ ಕಾರಣವಾದ ಇಶ್ಯೂವನ್ನು ಕಾಂಗ್ರೆಸ್ ಅಷ್ಟು ಸುಲಭವಾಗಿ ಬಿಟ್ಟುಕೊಡುತ್ತದೆಯೇ, ಅದೂ ಅದರಲ್ಲಿ ಬಿಜೆಪಿ ಮತ್ತು ಎನ್ಸಿಪಿ ಪಕ್ಷಗಳ ರಾಜಕೀಯ ದಾಳಗಳಾಗಿರುವಾಗ? ಸಾಧ್ಯವೇ ಇಲ್ಲ. ಅದರಲ್ಲೂ ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುತ್ತಿರುವ, ಬಿಜೆಪಿ ಮತ್ತು ಎನ್ಸಿಪಿಯ ಪರವಾಗಿ ಕಾಂಗ್ರೆಸ್ ಅನ್ನು ಮುಜುಗರಕ್ಕೀಡು ಮಾಡುತ್ತಿರುವ ಲಲಿತ್ ಮೋದಿಯನ್ನು ಬಿಡುವುದುಂಟೆ? ಐಪಿಎಲ್ ಕೊಚ್ಚಿ ತಂಡದ ಮೂಲಗಳ ಬಗ್ಗೆ ಮೋದಿ ಎತ್ತಿದ ಪ್ರಶ್ನೆಗಳು ಈಗ ಇಡಿಯ ಐಪಿಎಲ್ನ ಕೊರಳಿಗೆ ಬಂದು ಸುತ್ತುವರೆದಿದೆ. ಐಪಿಎಲ್ನಲ್ಲಿ ಸದ್ಯಕ್ಕಂತೂ ಯಾವ ತಂಡವೂ ದುಡ್ಡು ಮಾಡುತ್ತಿಲ್ಲ, ಆದರೂ ಅದು ಹೇಗೆ ಇಷ್ಟು ಅಗಾಧ ಪ್ರಮಾಣದ ದುಡ್ಡು ಹರಿದು ಬರುತ್ತಿದೆ? ಈ ಐಪಿಎಲ್ ತಂಡಗಳ ನಿಜವಾದ ಒಡೆಯರಾರು? ಅವರ ಆದಾಯ ಮೂಲಗಳೇನು? ಇದರಲ್ಲಿ ಭೂಗತ ಜಗತ್ತಿನ ಪಾತ್ರವೇನು? ಇದರಲ್ಲಿ ಹವಾಲಾ ದುಡ್ಡಿದೆಯಾ? ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ನ ಆರೋಪಗಳು ಎಷ್ಟು ನಿಜ? ಇಂಥ ಹಲವಾರು ಪ್ರಶ್ನೆಗಳೆದ್ದಿವೆ ಈಗ. ಇಡಿಯ ಐಪಿಎಲ್ ಅನ್ನು ತನ್ನ ಫೀಫ್ಡಂ ಏನೋ ಎಂಬಂತೆ ನಡೆಸುತ್ತಿರುವ ಲಲಿತ್ ಮೋದಿ ಈ ಎಲ್ಲ ಪ್ರಶ್ನೆಗಳಿಗೂ ಉತ್ತರವಾಗಬಲ್ಲ! ಈ ಎಲ್ಲ ಆರೋಪಗಳೂ ಆತನ ಮೇಲೂ ಇವೆ.
ಕಾಂಗ್ರೆಸ್ ಸಚಿವನೊಬ್ಬನ ತಲೆದಂಡ ಪಡೆದ ಲಲಿತ್ ಮೋದಿಯ ತಲೆದಂಡವೂ ಆಗಲೇಬೇಕು. ಸದ್ಯ ಅದು ಕಾಂಗ್ರೆಸ್ನ ಸಿಂಗಲ್ ಪಾಯಿಂಟ್ ಅಜೆಂಡಾ ಇದ್ದ ಹಾಗಿದೆ. ಹಿಂದಿನ ವರ್ಷ ಗೃಹ ಮಂತ್ರಿ ಚಿದಂಬರಂ ಅವರನ್ನು ಎದುರು ಹಾಕಿಕೊಂಡ ಲಲಿತ್ ಮೋದಿ, ಸರ್ಕಾರವನ್ನೇ ಕೇರ್ ಮಾಡದೇ ಐಪಿಎಲ್ ಅನ್ನು ದಕ್ಷಿಣಾಫ್ರಿಕಾಗೆ ಸ್ಥಳಾಂತರಿಸಿದಾಗಲೇ ಸರ್ಕಾರದ ಐಟಿ ಮತ್ತು ಇಡಿ ಖಾತೆಗಳು ಲಲಿತ್ ಮೋದಿಯ ಬೆನ್ನ ಹಿಂದೆ ಬಿದ್ದು, ಆತನ ಕರಾಳ ಸಾಮ್ರಾಜ್ಯದ ಒಂದು ವರದಿಯನ್ನು ತಯಾರು ಮಾಡಿಟ್ಟಿದೆ. ಆದರೆ ಅದರ ಮೇಲೆ ಈವರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಇಂಥ ಗಾಜಿನ ಮನೆಯಲ್ಲಿ ನಿಂತು ಕಲ್ಲೆಸೆದು ಕಾಂಗ್ರೆಸ್ಗೆ ಮುಜುಗರ ಮಾಡಿದ್ದಕ್ಕಾಗಿ ಸರ್ಕಾರ ಈ ವರದಿಯನ್ನು ಕೋಲ್ಡ್ ಸ್ಟೋರೇಜ್ನಿಂದ ಹೊರತೆಗೆದಿದೆ! ಮೋದಿ ತರೂರ್ ಪ್ರಕರಣದಲ್ಲಿ ತಾನೇನೋ ವಿಷಲ್ ಬ್ಲೋವರ್ ಎಂಬಂತೆ ಪೋಸು ಕೊಟ್ಟ. ಆದರೆ ಒಬ್ಬ ವಿಷಲ್ ಬ್ಲೋವರ್ ಮೊದಲು ಎದುರಿಸಬೇಕಾದ್ದು ತನ್ನ ಸತ್ಯಾಸತ್ಯತೆಯ ಬಗೆಗಿನ ಅನುಮಾನ, ವಿಚಾರಣೆಗಳನ್ನು ಎಂಬುದು ಲಲಿತ್ ಮೋದಿಗೆ ತಿಳಿದಿರುವ ಹಾಗೆ ಕಾಣೆ! ಈಗ ಅನುಭವಿಸುತ್ತಿದ್ದಾರೆ. ಕೂಡಲೇ ಲಲಿತ್ ಮೋದಿಯ ಕಛೇರಿಯ ಮೇಲೆ ಐಟಿ ದಾಳಿ ನಡೆದಿದೆ. ಜಾರಿ ನಿರ್ದೇಶನಾಲಯ ಲಲಿತ್ ಮೋದಿಯನ್ನು ಪ್ರಶ್ನಿಸಲು ಕಾಯುತ್ತಿದ್ದಾರೆ. ಸರ್ಕಾರ ಎಲ್ಲಾ ಐಪಿಎಲ್ ತಂಡಗಳ ಬಿಡ್ಗಳು, ಫ್ರಾಂಚೈಸಿ ಪೇಪರ್ಗಳು, ಪ್ಲೇಯರ್ ಕಾಂಟೃಆಕ್ಟುಗಳು, ಹೂಡಿಕೆದಾರರ ಸಂಪೂರ್ಣ ವಿವರ, ಬಿಸಿಸಿಐನ ಬ್ಯಾಲೆನ್ಸ್ ಷೀಟು ಎಲ್ಲವನ್ನೂ ವಶಪಡಿಸಿಕೊಂಡಿದೆ. ಇನ್ನುಳಿದಂತೆ ಜಾರಿ ನಿರ್ದೇಶನಾಲಯ ಐಪಿಎಲ್ಗೆ ಹರಿದು ಬರುತ್ತಿರುವ ದುಡ್ಡಿನ ಮೂಲಗಳನ್ನು ಅರಸುತ್ತಾ ಮಾರಿಷಸ್ಗೆ ಹೊರಟು ನೀಂತಿದೆ! ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆಯೆಂದರೆ ಹವಾಲಾ ಮುಖಾಂತರ ಮನಿ ಲಾಂಡ್ರಿಂಗ್ ನಡೆಯುತ್ತಿರುವ ಅನುಮಾನ ಇದೆಯೆಂತಲೇ ಅರ್ಥ!
ಇರಲಿ ಬಿಡಿ ಐಟಿ ಇಲಾಖೆಗಳು ಲಲಿತ್ ಮೋದಿಯ ಕರಾಳ ಸಾಮ್ರಾಜ್ಯದ ಬಗ್ಗೆ ತಯಾರು ಮಾಡಿರುವ ಆ ವರದಿಯಲ್ಲಿ ಇನ್ನೂ ಏನೇನಿದೆ? "ಏನೇ ಈವತ್ತು ಆತನನ್ನು ಬಿಸಿನೆಸ್ ಗುರು ಎಂದು ಕರೆದರೂ ಕಳೆದ ನಾಲ್ಕು ವರ್ಷಗಳವರೆಗೆ ಲಲಿತ್ ಮೋದಿಯದು ಎಲ್ಲ ಚಿತ್ರಾನ್ನದ ವೆಂಚರ್ಗಳೇ. ಆದರೆ ಐಪಿಎಲ್ಗೆ ಕೈಯಿಟ್ಟು ಕೂತ ಮೂರೇ ವರ್ಷಗಳಲ್ಲಿ ಆತನ ಲೈಫ್ಸ್ಟೈಲೇ ಬದಲಾಗಿ ಹೋಗಿದೆ. ಆತನ ಬಳಿ ಒಂದು ಪ್ರೈವೇಟು ಜೆಟ್ ವಿಮಾನ, ಲಕ್ಷುರಿ ಹಡಗು, ಅಸಂಖ್ಯ ಬಿಎಂಡಬ್ಲ್ಯೂ ಕಾರುಗಳು ಎಲ್ಲವೂ ಇವೆ. ಇವೆಲ್ಲವನ್ನೂ ಆತ ಕಳೆದ ಮೂರು ವರ್ಷಗಳಲ್ಲೇ ಕೊಂಡುಕೊಂಡಿದ್ದಾನೆ, ಮೂರು ವರ್ಷಗಳ ಹಿಂದೆ ಕೆಲವೇ ಕೆಲವು ಲಕ್ಷಗಳಷ್ಟು ಐಟಿ ಟ್ಯಾಕ್ಸ್ ಕಟ್ಟುತ್ತಿದ್ದ ಇದೇ ಲಲಿತ್ ಮೋದಿ ಈ ವರ್ಷ 11 ಕೋಟಿಗಳಷ್ಟು ಅಡ್ವಾನ್ಸ್ ಟ್ಯಾಕ್ಸ್ ಚೆಲ್ಲಿಸಿದ್ದಾನೆ." ಐಟಿ ವರದಿ ಶುರುವಾಗುವುದೇ ಈ ಸಾಲುಗಳಿಂದ. ಅಲ್ಲಿಗೆ ಈ ವರದಿಯ ಟೋನ್ ಎಂತಹುದು ಎಂಬುದು ನಿಮಗೆ ಅರ್ಥವಾಗಿರುತ್ತದೆ. ಇನ್ನೂ ಮುಂದುವರೆದು ಲಲಿತ್ ಮೋದಿ ಐಪಿಎಲ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿರುವ ಕುರಿತು ಅನುಮಾನಗಳಿರುವುದಾಗಿ ಹೇಳಿಕೊಳ್ಳುತ್ತದೆ. ಬ್ರಿಟನ್ನಲ್ಲಿ ಬೆಟ್ಟಿಂಗ್ ಕಾನೂನು ಬದ್ಧ. ಅಲ್ಲಿನ ಬೆಟ್ ಫೇರ್ ಎಂಬ ಕಂಪೆನಿಯಲ್ಲಿ ಮೋದಿ ಐಪಿಎಲ್ ಬೆಟ್ಟಿಂಗ್ ರಿಂಗ್ ನಡೆಸುತ್ತಿದ್ದಾರೆ ಎಂದಿದೆ ವರದಿ. ಸಮೀರ್ ತುಕ್ರಾಲ್ ಎಂಬ ಡೆಲ್ಲಿ ಮೂಲದ ಉದ್ಯಮಿ, 30 ವರ್ಷಗಳ ಮೋದಿಯ ಖಾಸಾ ಗೆಳೆಯ ಆತನ ಪರವಾಗಿ ಬೆಟ್ ಫೇರ್ನಲ್ಲಿ ಬೆಟ್ಟಿಂಗ್ ಮಾಡುತ್ತಿರುವದಕ್ಕೆ ಆಧಾರಗಳಿವೆ. ಆದೇನಾದರೂ ನಿಜವಾದಲ್ಲಿ ಲಲಿತ್ ಮೋದಿಗಿಂತಲೂ ಐಪಿಎಲ್ ಬಗ್ಗೆ ಇನ್ಸೈಡರ್ ಇನ್ಫರ್ಮೇಷನ್ ಬಲ್ಲ ಮತ್ತೊಬ್ಬನಿರಲಾರ. ಇದೇ ಕೋವಿನಲ್ಲಿ ಆತನ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪಗಳೂ ಇವೆ. ಇದಲ್ಲದೆ ಆತನಿಗೆ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಇಲೆವೆನ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಫ್ರಾಂಚೈಸುಗಳಲ್ಲಿ ಗುಪ್ತವಾಗಿ ಬೇನಾಮಿ ಹಿಡಿತಗಳಿವೆ ಎನ್ನುತ್ತದೆ ವರದಿ. ಮೋದಿಯ ಆಪ್ತರ ಕಂಪೆನಿಗಳಲ್ಲೊಂದಾದ ಐಎಂಜಿಗೆ ಐಪಿಎಲ್ನ ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಟಿವಿ ರೈಟ್ಸ್ ಅನ್ನು ಬಿಕರಿ ಮಾಡಲಾಗಿದ್ದು, ಕಂಪೆನಿಗೆ ಶೇ.10ರಷ್ಟನ್ನು ಮ್ಯಾನೇಜ್ಮೆಂಟ್ ಫೀ ಎಂದು ನೀಡಲಾಗಿದೆ. ಇದೇ ಸುಮಾರು 80 ಮಿಲಿಯನ್ ಡಾಲರ್ಗಳಷ್ಟಾಗುತ್ತದೆ!
ಈ ಆರೋಪಗಳದು ಒಂದು ತೂಕವಾದರೆ ಮತ್ತೊಂದೆಡೆ ರಾಜಸ್ಥಾನದಲ್ಲೂ ಮೋದಿಗೆ ನೆಮ್ಮದಿಯಿಲ್ಲ. ಲಲಿತ್ ಮೋದಿ ರಾಜಸ್ಥಾನದ ಪದಚ್ಯುತ ಮುಖ್ಯಮಂತ್ರಿ, ಬಿಜೆಪಿಯ ವಸುಂಧರಾ ರಾಜೆ ಸಿಂಧ್ಯಾ ಅವರಿಗೆ ಪರಮಾಪ್ತರು. ಎಷ್ಟರಮಟ್ಟಿಗೆ ಎಂದರೆ ಆ ಅವಧಿಯಲ್ಲಿ ಮೋದಿಯನ್ನು ಬಹುತೇಕರು ಶಾಡೋ ಸಿಎಂ ಎಮದು ಕರೆಯುತ್ತಿದ್ದರು. ಆ ಹಯಾಮಿನಲ್ಲಿ ಆತ ಎಸ್ಇಜೆಡ್, ಇಂಡಸ್ಟ್ರಿ, ಅದೂ ಇದೂ ಅಂತ ಅನೇಕ ಭೂ ಹಗರಣಗಳನ್ನು ಮಾಡಿಕೊಂಡಿದ್ದಾನೆ. ಈಗ ಅಲ್ಲಿರುವುದು ಕಾಂಗ್ರೆಸ್ ಸಕರ್ಾರ. ಹಿರಿಯ ಅನುಭವಿ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿದ್ದಾರೆ. ಅವರು ವಸುಂಧರಾ ಅವರ ಕಾಲದಲ್ಲಿ ನಡೆದಿದೆಯೆನ್ನಲಾದ ಎಲ್ಲ ಭೂ ಗಹರಣಗಳ ತನಿಖೆಗೆ ಮಾಥುರ್ ಕಮೀಷನ್ ಅನ್ನು ನೇಮಿಸಿದೆ. ಈಗ ಅದರ ವರದಿಯಲ್ಲೂ ಮೋದಿ ವಿಲನ್ ನಂ.1 ಆಗಿ ಹೊರಹೊಮ್ಮಿದ್ಧಾರೆ. ಒಟ್ಟಿನಲ್ಲಿ ಹೀಗೆ ಗಾಜಿನ ಮನೆಯಲ್ಲಿದ್ದು ಶಶಿಗೆ ಕಲ್ಲೆಸೆಯ ಹೋಗಿ, ಅದು ತಿರುಗಿ ಬಿದ್ದು ಆತನಿಗೇ ಬಡಿದ ಸ್ಥಿತಿ ಲಲಿತ್ ಮೋದಿಯದು.
ಈಗ ಲಲಿತ್ ಮೋದಿಯ ವಿಚಾರವಾಗಿ ಬಿಸಿಸಿಐನಲ್ಲಿ ರಾಜಕೀಯ ಗರಿಗೆದರಿದೆ. ತಾನು ಐಪಿಎಲ್ನ ಹರಿಕಾರ, ಬಿಸಿಸಿಐ ದುಡ್ಡು ನೋಡಿದ್ದೇ ತಾನು ಬಂದ ಮೇಲೆ, ಐಪಿಎಲ್ ಎನ್ನುವುದು ತನ್ನ ಸಾಮ್ರಾಜ್ಯ ಇಲ್ಲಿ ತನ್ನನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಬೀಗುತ್ತಿದ್ದ ಲಲಿತ್ ಮೋದಿಗೆ ಊರೆಲ್ಲಾ ಶತ್ರುಗಳೇ. ಬಿಸಿಸಿಐನ ಪ್ರಸ್ತುತ ಅಧ್ಯಕ್ಷ ಶಶಾಂಕ್ ಮನೋಹರ್, ನಿರಂಜನ್ ಷಾ, ರಾಜೀವ್ ಶುಕ್ಲಾ, ರತ್ನಾಕರ್ ಶೆಟ್ಟಿ, ಎಂ.ಶ್ರೀನಿವಾಸನ್ ಎಲ್ಲರನ್ನೂ ಮೋದಿ ಒಂದಲ್ಲಾ ಒಂದು ಕಾರಣಕ್ಕೆ ಕೆರಳಿಸಿದವನೇ. ಆದರೆ ಐಪಿಎಲ್ ಗವರ್ನಿಂಗ್ ಕೌನ್ಸಿಲ್ನಲ್ಲಿದ್ದಂತಹ ರಾಜಕಾರಣಿಗಳಾದ ಶರದ್ ಪವಾರ್, ಅರೂಣ್ ಜೇಟ್ಲಿ ಮತ್ತು ಫಾರೂಕ್ ಅಬ್ದುಲ್ಲಾರನ್ನು ತನ್ನ ಬೆನ್ನ ಹಿಂದೆ ನಿಲ್ಲಿಸಿಕೊಂಡಿದ್ದ ಬುದ್ಧಿವಂತ ಲಲಿತ್ ಮೋದಿ. ಆತನಿಗೆ ಅದೇ ಧೈರ್ಯ. ಆದರೆ ರಾಜಕೀಯದ ಚದುರಂಗದಾಟ ಲಲಿತ್ ಮೋದಿಯನ್ನು ಬಹಳ ಸುಲಭವಾಗಿ ಓವರ್ ಟೇಕ್ ಮಾಡಿಬಿಟ್ಟಿದೆ.
ಮೋದಿ ಕಛೇರಿ ಮೇಲೆ ಐಟಿ ದಾಳಿ ನಡೆದಾಗ, ಮಿಕ್ಕೆಲ್ಲಾ ಕಾಗದ ಪತ್ರಗಳು ಸಿಕ್ಕಿವೆಯಾದರೂ ಅನುಮಾನಕರ ರೀತಿಯಲ್ಲಿ ಕೊಚ್ಚಿ ತಂಡದ ಇತರೆ ಬಿಡ್ಡರ್ಗಳ ಅತಿಮುಖ್ಯ ಎರಡು ಫೈಲ್ಗಳು ಮಿಸ್ಸಿಂಗ್! ಸಿಸಿ ಟಿವಿ ಫುಟೇಜ್ನಲ್ಲಿ ಮೋದಿ ಆಫೀಸಿನಿಂದ ಒಬ್ಬ ಮಧ್ಯವಯಸ್ಕ ಹೆಂಗಸು ಐಟಿ ದಾಳಿ ನಡೆಯುವ ಕೆಲವೇ ನಿಮಿಷಗಳ ಹಿಂದೆ ಕೆಲವು ಫೈಲುಗಳನ್ನು ಹೊತ್ತೊಯ್ದಿರುವ ದೃಶ್ಯಗಳಿವೆ. ಆಕೆ ವಿಜಯ ಮಲ್ಯನ ಮಲ ಮಗಳು! ಆಕೆ ಮೋದಿ ಕಂಪೆನಿಯಲ್ಲಿ ಸಿಇಒ! ಈಗ ಬಯಲಾಗುತ್ತಿರುವ ಅಂಶವೆಂದರೆ ಐಪಿಎಲ್ ತಂಡ ಪಡೆಯಲು ವಿಫಲವಾದ ಆ ವಿಡಿಯೋಕಾನ್ ಮುನ್ನಡೆಸಿದ ಬಿಡ್ನಲ್ಲಿ ಶರದ್ ಪವಾರ್ ಅಳಿಯ, ಸುಪ್ರಿಯಾ ಸುಳೆಯ ಗಂಡ ಮತ್ತು ಎನ್ಸಿಪಿಯ ಮತ್ತೊಬ್ಬ ನಾಯಕ ಕೇಂದ್ರದ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಅವರ ಪಾಲೂ ಇತ್ತು! ಇವರು ಅಹಮದಾಬಾದ್ ಇಲ್ಲ ನಾಗಪುರಕ್ಕೆ ಐಪಿಎಲ್ ತಂಡವನ್ನು ಹೊತ್ತೊಯ್ಯಬೇಕೆಂದು ಆಶಿಸಿದ್ದರು. ಲಲಿತ್ ಮೋದಿ ರಾನ್ದೆವೋ ಸ್ಪೋರ್ಟ್ಸ್ಗೆ 300 ಮಿಲಿಯನ್ ಡಾಲರ್ಗಳಿಗೆ ಬಿಡ್ ಮಾಡಿ ಸಾಕು, ಮಿಕ್ಕಿದ್ದು ತಾನು ನೊಡಿಕೊಳ್ಳುತ್ತೇನೆ ಎಂದು ಸಲಹೆ ಮಡಿದನೆನ್ನಲಾಗಿದೆ. ಆದರೆ ರಾನ್ದೆವೋ ಸ್ಪೋರ್ಟ್ಸ್ 333.33 ಮಿಲಿಯನ್ ಡಾಲರ್ಗಲಿಗೆ ಬಿಡ್ ಮಾಡಿತು. ವೀಡಿಯೋಕಾನ್ 319 ಮಿಲಿಯನ್ ಡಾಲರ್ ಕೋಟ್ ಮಾಡಿತ್ತು! ನಂತರ ಶರದ್ ಪವಾರ್ ರಾನ್ದೆವೋ ಸ್ಪೋರ್ಟ್ಸ್ ಅನ್ನು ಕರೆದು ಮಾತನಾಡಿದ್ದಾರೆ ಕೂಡ. ಈಗ ಅರ್ಥವಾಯಿತಲ್ಲ? ಲಲಿತ್ ಮೋದಿಯ ಕಾನ್ಫಿಡೆನ್ಸಿಗೆ ಕಾರಣ.
ಈ ಸೂಕ್ಷ್ಮವನ್ನರಿತ ಕಾಂಗ್ರೆಸ್ ಶರದ್ ಪವಾರ್ ಅವರನ್ನು ಕರೆಸಿ, ಮಾತನಾಡಿಸಿದೆ. ಈ ಮೀಟಿಂಗಿನಲ್ಲಿ ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ ಶರದ್ ಪವಾರ್ ಅವರನ್ನು ತಾವೂ ಸಹ ರಾಜೀನಾಮೆ ನೀಡಬಹುದಲ್ಲವೆ ಎಂದು ಕೇಳಿದೆ. ಅಲ್ಲಿಗೆ ಸಂದೇಶ ಸ್ಪಷ್ಟ - ಲಲಿತ್ ಮೋದಿಯನ್ನು ಕಿತ್ತೊಗೆಯಿರಿ, ಇಲ್ಲದಿದ್ದರೆ ಇದು ತಮ್ಮ ಬುಡಕ್ಕೇ ಬರುತ್ತದೆ. ಶರದ್ ಪವಾರ ಅವರು ಲಲಿತ್ ಮೊದಿಯೊಂದಿಗೆ ನಡೆಸಿದರೆನ್ನಲಾದ ಟೆಲಿಫೋನ್ ಸಂಭಾಷಣೆಯನ್ನು ಸರ್ಕಾರ ಟ್ಯಾಪ್ ಮಾವಿಸಿ ರೆಕಾರ್ಡ್ ಮಾಡಿದ್ದು, ಅದನ್ನು ಬಳಸಿ ಪವಾರ್ ಅವರನ್ನು blackmail ಮಾಡಿದೆಯೆನ್ನುವ ಆರೋಪ ಕೇಳಿ ಬರುತ್ತಿದೆ. ಮೀಟಿಂಗ್ ಒಳಹೊಕ್ಕಾಗಲೂ ಮೋದಿಯನ್ನು ಸಮರ್ಥಿಸುತ್ತಿದ್ದ ಶರದ್ ಪವಾರ್, ಹೊರಬರುವಷ್ಟರಲ್ಲಿ ಮೋದಿ ರಾಜೀನಾಮೆ ನೀಡುವುದೇ ಸೂಕ್ತ ಎಂದು ಉಲಿಯ ತೊಡಗಿದ್ದಾರೆ. ಅಲ್ಲಿಗೆ ಲಲಿತ್ ಮೋದಿಗಿದ್ದ ಕಡೆಯ ಹುಲ್ಲು ಕಡ್ಡಿಯ ಆಸರೆಯೂ ಇಲ್ಲದಂತಾಯಿತು. ನಿನ್ನೆ ಅಂದರೆ ಏಪ್ರಿಲ್ 26ರಂದು ನಡೆದ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಮೀಟಿಂಗಿನಲ್ಲಿ ಲಲಿತ್ ಮೋದಿಯನ್ನು ಐಪಿಎಲ್ ಕಮೀಷನರ್ ಹುದ್ದೆಯಿಂದ ಕಿತ್ತೊಗೆಯಲಾಯಿತು. ಆತನಿಗೆ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಕೂಡ ಅವಕಾಶವಿಲ್ಲದೆ!
ಆದರೆ ಮೋದಿಯನ್ನು ಹೊರಗೆಳೆಯುವುದು ಅಷ್ಟು ಸುಲಭದ ಮಾತಲ್ಲ. he is not going to go without a fight . ಈಗಾಗಲೇ ಮೋದಿ ವರ್ಸೆಸ್ ಥಿ ರೆಸ್ಟ್ ಎಂಬಂತಹ ಯುದ್ಧವೊಂದು ಚಾಲ್ತಿಯಲ್ಲಿದೆ. ಇದು ಬಿಚ್ಚಿಕೊಳ್ಳುತ್ತಿರುವುದು ಮೀಡಿಯಾದಲ್ಲಿ. ಶಶಿ ತರೂರ್ ಒಂದು ಲೀಕ್ ಕೊಟ್ಟರೆ, ಮೊದಿ ಕ್ಯಾಂಪಿನವರು ಎರಡು ಲೀಕ್ ಕೊಡುತ್ತಾರೆ. ಇತ್ತ ಕಾಂಗ್ರೆಸ್ ಮೋದಿ ವಿರುದ್ಧದ ಐಟಿ ವರದಿಯನ್ನು ಸೆಲೆಕ್ಟಿವ್ ಆಗಿ ಮೀಡಿಯಾಗೆ ಲೀಕ್ ಮಡುತ್ತಿದ್ದರೆ, ಅತ್ತ ಲಲಿತ್ ಮೋದಿ ಐಪಿಎಲ್ ಬಗ್ಗೆ ನಾನು ಕೆಲವು ಹಿರಿಯ ರಾಜಕಾರಣಿಗಳ ಜೊತೆ ನಡೆಸಿರುವ ಸಂಭಾಷಣೆಯನ್ನು ಟೇಪ್ ಮಾಡಿಟ್ಟುಕೊಂಡಿದ್ದೇನೆ, ಫೋನ್ ಮಾತುಕತೆ ರೆಕಾರ್ಡ್ ಆಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲಿಗೆ ಅವರು ಕೊಡುತ್ತಿರುವ ಸಂದೇಶ ಸ್ಪಷ್ಟ - ನಾನು ಮೂಳುಗುವುದೇ ನಿಜವಾದರೆ, ನಾನೊಬ್ಬನೇ ಯಾಕೆ, ಎಲ್ಲರನ್ನೂ ಜೊತೆಗೆಳೆದುಕೋಮಡೇ ಮೂಳುಗುತ್ತೇನೆ ಹುಷಾರ್! ಐಪಿಎಲ್ ಗವರ್ನಿಂಗ್ ಕೌನ್ಸಿಲ್ನಲ್ಲಿದ್ದೂ ಕೂಡ ಇದಾವುದನ್ನೂ ಈವರೆಗೂ ಪ್ರಶ್ನಿಸದ ಇವರು ಈಗ ಇದ್ದಕ್ಕಿದ್ದ ಹಾಗೇ ಪತಿವ್ರೆತೆಗಳಾಗ ಹೊರಟರೆ? ಇಷ್ಟು ದಿನ ಪ್ರಶ್ನಿಸದೇ ಉಳಿದರು ಎಂದರೆ ಇವರಿಗೂ ಅದರಿಂದ ಲಾಭವಿತ್ತು ಅಂತಲ್ಲವೇ? ಇದರ ಪುರಾವೆಗಳಿಲ್ಲದಿರುತ್ತವೆಯೇ ಲಲಿತ್ ಮೋದಿಯ ಬಳಿ? ಹಾಗಾಗಿ ಲಲಿತ್ ಮೋದಿಯನ್ನು ಕ್ರಿಕೆಟ್ನಿಂದ ಹೊರಹಾಕುವುದು ಅಷ್ಟು ಸುಲಭವಲ್ಲ. ಈಗಿರುವ ಪರಿಸ್ಥಿತಿಯಲ್ಲಿ ಆತನನ್ನು ಐಪಿಎಲ್ ಕಮೀಷನರ್ ಹುದ್ದೆಯಿಂದ ಕೆಳಗಿಲಿಸಲಾಗಿದೆಯಾದರೂ ಆತನನ್ನು ಬಹುಶಃ ಬಿಸಿಸಿಐನಡಿಯಲ್ಲಿ ಬರುವ ಯಾವುದಾದರೂ ಸಬ್ ಕಮಿಟಿಯನ್ನು ಮೋದಿಗೆ ಕೊಡಬಹುದು. ಆದರೆ ಇದನ್ನು ಲಲಿತ್ ಮೋದಿ ಹೇಗೆ ಸ್ವೀಕರಿಸುತ್ತಾನೋ ನೋಡಬೇಕು.
ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ನ ಅನುಕರಣೆಯಾಗಿ, ಕಪಿಲ್ ದೇವ್ರ ಸಕಾರಣ ಬಂಡಾಯದಿಂದ ಉಗಮವಾದ ಐಸಿಎಲ್ಗೆ ಸೆಡ್ಡು ಹೊಡೆಯಲೋಸುಗ, ಬಿಸಿಸಿಐನ ಲಲಿತ್ ಮೋದಿ ಎಂಬ ಉದ್ಯಮಿಯ ಮಸ್ತಿಷ್ಕದಲ್ಲಿ ಮೂಡಿದ್ದೇ ಐಪಿಎಲ್ನ ಐಡಿಯಾ. ಇದು ಐ.ಸಿ.ಎಲ್ನ ಯಥಾವತ್ ನಕಲು. ಅಪಾರ ಪ್ರಮಾಣದ ಹಣದ ಠಿಠಣಜಟಿಣಚಿಟ ಇರುವ ಮಾರುಕಟ್ಟೆಯಾಗಿ ಕಂಡ ಇದನ್ನು ಬಿಸಿಸಿಐ ಜಾರಿಗೆ ತಂದಿತು ಅಷ್ಟೆ. ಆದರೆ ಮೀಡಿಯಾದ ಹುಚ್ಚು ಹೊಗಳು ಬಟ್ಟತನದಲ್ಲಿ ತೇಲಿ ಹೋದ ಲಲಿತ್ ಮೋದಿ ತಾನೇನೋ ಹೊಸದನ್ನು ಹುಟ್ಟು ಹಾಕಿಬಿಟ್ಟಿದ್ದೇನೆ. ತಾನೊಬ್ಬ ಜೀನಿಯಸ್ ಪಯನಿಯರ್ ಎಂಬುದನ್ನು ತಲೆಗೆ ಹಚ್ಚಿಕೊಂಡು ಬಿಟ್ಟ. ಆತನ ತಲೆ, ಕತ್ತಿನ ಮೇಲೆ ನಿಲ್ಲದಾಯಿತು. ಅದೇ ದುರಹಂಕಾರ, ಹಣದ ಮದ ಇಂದು ಆತನನ್ನು ಬೀದಿಗೆ ತಂದು ನಿಲ್ಲಿಸಿದೆ.
ಇಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಲಲಿತ್ ಮೋದಿಯ ಕರಾಳ ಸಾಮ್ರಾಜ್ಯ, ಶರದ್ ಪವಾರ್ನ ರಾಜಕೀಯ ಚದುರಂಗದಾಟಗಳ ನಡುವೆ ಜಾಗತಿಕ ಕ್ರಿಕೆಟ್ನ ಸಂಚಲನ ಐಪಿಎಲ್ ಮಸಿ ಬಳಿದುಕೊಂಡು ಕೂತಿದೆ. ಅದರ ವಿಶ್ವಾಸಾರ್ಹತೆ ಪಾತಾಳ ಮುಟ್ಟಿದೆ. ಹಿಂದೊಮ್ಮೆ ಮ್ಯಾಚ್ ಫಿಕ್ಸಿಂಗ್ನ ಬಿರುಗಾಳಿ ಬೀಸಿದಾಗ ಕ್ರಿಕೆಟ್ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿತ್ತು. ಕ್ರಿಕೆಟ್ ಮರಳಿ ಒಂದು ರೆಸ್ಪೆಕ್ಟಬಲ್ ಗೇಮ್ ಆಗಲು ವರ್ಷಗಳೇ ಹಿಡಿಯಿತು. ಜಾಗತಿಕ ಕ್ರಿಕೆಟ್ ಮತ್ತೂ ಮುಖ್ಯವಾಗಿ ಐಪಿಎಲ್ ಇಂದು ಮರಳಿ ಅದೇ ಕವಲುದಾರಿಗೆ ಬಂದು ನೀಂತಿರುವುದು ವಿಷಾದನೀಯ.
Post a Comment