ರಾಜ್ಯ ಏನು ಇವರಪ್ಪನ ಮನೆ ಜಹಗೀರಾ......?

ತಮಿಳುನಾಡಿನ ಇತ್ತೀಚಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಸಹಜವಾಗಿ ಎಲ್ಲರ ಮನಸ್ಸಿನಲ್ಲೂ ಮೂಡುವ ಪ್ರಶ್ನೆ ಇದು. ಕರುಣಾನಿಧಿಯ ನಂತರ ಯಾರು? ಅನ್ನುವುದು ಇಡಿಯ ತಮಿಳುನಾಡಿಗೇ ಬೃಹದಾಕಾರವಾಗಿ ಬೆಳೆದು ನಿಂತಿರುವ ಪ್ರಶ್ನೆ. ಆದರೆ ದುರದೃಷ್ಟವಶಾತ್ ಇಲ್ಲಿ ಚರ್ಚೆಯಾಗುತ್ತಿರುವುದು ನಾಯಕತ್ವ ಲಕ್ಷಣಗಳ ಬಗ್ಗೆ ಅಲ್ಲವೇ ಅಲ್ಲ, ಬದಲಿಗೆ ಕರುಣಾನಿಧಿಯ ನಂತರ ಆ ಜಾಗದಲ್ಲಿ ಕೂಡಬೇಕಿರುವುದು ಹಿರಯ ಮಗ ಅಳಗಿರಿಯೋ ಇಲ್ಲ ಕಿರಿಯ ಮಗ ಸ್ಟಾಲಿನ್ನೋ ಅನ್ನೋದು ಅಷ್ಟೆ! ಈ ಇಬ್ಬರು ಅಣ್ಣ ತಮ್ಮಂದಿರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ರಾಷ್ಟರಮಟ್ಟದಲ್ಲಿ ನ್ಯೂಸ್ ವ್ಯಾಲ್ಯೂ!


ಅಂಗೈ ಮೇಲಿನ ರೇಖೆಗಳಂತೆ ಪರಿಚಿತ ತಮಿಳುನಾಡನ್ನು 5ನೇ ಬಾರಿಗೆ ಆಳುತ್ತಿರುವ ಈ ಕರುಣಾನಧಿಗೆ ಸದ್ಯ ಕಾಡುತ್ತಿರುವ ಸಮಸ್ಯೆ ರಾಜ್ಯದ್ದಲ್ಲ, ಬದಲಿಗೆ ತನ್ನವೇ ಕುಟುಂಬಗಳದ್ದು! ಹೌದು ಕರುಣಾನಿಧಿಗೆ ಮೂವರು ಹೆಂಡತಿಯರು. ಮೊದಲ ಹೆಂಡತಿ ಪದ್ಮಾವತಿಯ ಮಗ ಎಂ .ಕೆ.ಮುತ್ತುನನ್ನು ತನ್ನ ಒಂದು ಕಾಲದ ಗೆಳೆಯ ರಾಜಕೀಯ ವೈರಿ ಎಂ.ಜಿ.ಆರ್.ಗೆ ಉತ್ತರವಾಗಿ ಬೆಳೆಸಲು ಪ್ರಯತ್ನಿಸಿದನಾದರೂ ಅದು ಆಗಲಿಲ್ಲ. ನಂತರ ಈತ ಏನಾದನೋ ಕೂಡ ಬಲ್ಲವರಿಲ್ಲ. ಎರಡನೆಯ ಹೆಂಡತಿ ದಯಾಳು ಅಮ್ಮಾಳ್ಗೆ ನಾಲ್ವರು ಮಕ್ಕಳು ಅಳಗಿರಿ, ಸ್ಟಾಲಿನ್, ತಮಿಳರಸು ಮತ್ತು ಸೆಲ್ವಿ. ಮೂರನೆಯ ಹೆಂಡತಿ ರಜತಿ ಅಮ್ಮಾಳ್ಗೆ ಒಬ್ಬಳೇ ಮಗಳು ಕನಿಮೊಳಿ. ತಮಿಳುನಾಡಿನ ದ್ರಾವಿಡ ರಾಜಕಾರಣದ ಆದ್ಯ ಪ್ರವರ್ತಕ ಸಂಸ್ಥಾಪಕರಲ್ಲಿ ಈಗ ಉಳಿದಿರುವುದು `ಕಲೈಗ್ನರ್' ಕರುಣಾನಿಧಿಯೊಬ್ಬರೆ. ಇನ್ನು ಮಿಕ್ಕವರೆಲ್ಲಾ ಎರಡನೇ, ಮೂರನೇ ತಲೆಮಾರಿನವರು, `ಪುರಚ್ಚಿ ತಲೈವಿ' ಜಯಲಲಿತಾ ಕೂಡ ಎರಡನೇ ತಲೆಮಾರಿನವಳು. ಕರುಣಾನಿಧಿಗೂ ವಯಸ್ಸಾಯಿತು, ಆತನಿಗೀಗ 86ರ ಆಸುಪಾಸು. ಈ ಜೀವನ ಸಂಧ್ಯಾಕಾಲದಲ್ಲೂ ಆತ 5ನೇ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾನೆ. ಅರೋಗ್ಯ ಕೈಕೊಟ್ಟು ಶಾನೆ ಕಾಲವಾಗಿದೆ. ಸದ್ಯ ಆತ ವೀಲ್ ಛೇರ್ನಲ್ಲಿ ಬಂಧಿ. ಈಗ ಶುರುವಾಗಿದೆ ಸಮಸ್ಯೆ ಕರುಣಾನಿಧಿಯ ನಂತರ ಯಾರು? ಶುರುವಾಗಿದೆ ಮದಗಜಗಳ ಕಾದಾಟ.


ದ್ರಾವಿಡ ಚಳುವಳಿಯ ಮೂಸೆಯಿಂದ ಸಹಜವಾಗಿ ಒಡಮೂಡಿದ ಪಕ್ಷ ಡಿಎಂಕೆ - ದ್ರಾವಿಡ ಮುನ್ನೇಟ್ರ ಕಚಘಂ. ಸಮಾಜವಾದ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮೂಲಧಾತುವಾಗಿ ಪಕ್ಷವನ್ನು ಕಟ್ಟಿ ಬೆಳೆಸಿದ್ದರು ಅಣ್ಣಾದೊರೈ. ಆದರೆ ಅಣ್ಣಾದೊರೈರ ಸಾವಿನ ನಂತರ ಈಗ ಎದ್ದಿರುವಂಥದ್ದೇ ಪ್ರಶ್ನೆ ಉದ್ಭವಿಸಿತ್ತು. ಅಣ್ಣಾರ ನಂತರ ಯಾರು? ಕರುಣಾನಿಧಿ ಇಲ್ಲ ಎಂ.ಜಿ.ಆರ್? ಆಗ ಗೆದ್ದವರು ಕರುಣಾನಿಧಿ. ಇದಾದ ಕೆಲವೇ ವರ್ಷಗಲಲ್ಲಿ ಕರುಣಾನಿಧಿ ಮತ್ತು ಎಂಜಿಆರ್ ಈರ್ವರ ನಡುವೆಯೂ ಭಿನ್ನಾಭಿಪ್ರಾಯಗಳು ತಲೆದೋರಿದವು. ದ್ರಾವಿಡ ಚಳುವಳಿ ಒಡೆದು ಹೋಯಿತು, ಎಂಜಿಆರ್ ಎಐಎಡಿಎಂಕೆ ಸ್ಥಾಪಿಸಿದರು. ಅಲ್ಲಿಗೆ ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳೂ ವ್ಯಕ್ತಿ ಕೇಂದ್ರಿತ ಪಕ್ಷಗಳಾಗಿ ಹೋದವು. ಇದು ತಮಿಳುನಾಡು ರಾಜಕೀಯದ ಮಹಾ ದುರಂತವೇ ಸರಿ. ಒಮ್ಮೆ ಪಕ್ಷಗಳು ವ್ಯಕ್ತಿ ಕೇಂದ್ರಿತವಾದ ಮೇಲೆ ಇನ್ನು ಅಲ್ಲಿ ಕುಟುಂಬ ರಾಜಕಾರಣ ತಲೆದೋರುವುದು ಎಷ್ಟು ಹೊತ್ತಿನ ಮಾತು?

ಅತ್ತ ಎಐಎಡಿಎಂಕೆಯಲ್ಲಿ ಪುರಚ್ಚಿ ತಲೈವಿ ಸ್ಥಾಪನೆಯಾದಳು. ಇತ್ತ ಕಲೈಗ್ನರ್ ದರ್ಬಾರ್ ಶುರುವಾಯಿತು. ಕರುಣಾರ ಜೊತೆಜೊತೆಗೇ ಹೆಜ್ಜೆ ಹಾಕಿದಾತ ಆತನ ಭಾವಮೈದುನ ಮುರಸೋಳಿ ಮಾರನ್. ನಂತರ ರಾಜಕೀಯದಂಗಳಕ್ಕೆ ಕಾಲಿರಿಸಿದ್ದು ಕರುಣರ ಕಿರಿಯ ಮಗ ಸ್ಟಾಲಿನ್. ಆಗ ಡಿಎಂಕೆ ಪಕ್ಷದಲ್ಲಿ ಎರಡು ಯುವ ತಾರೆಗಳು ಅತ್ತ ವೈಕೋ ಇತ್ತ ಸ್ಟಾಲಿನ್! ಆದರೆ ಎಲ್ಲಿ ವೈಕೋ ತನ್ನ ಮಗ ಸ್ಟಾಲಿನ್ಗೆ ಅಡ್ಡಿಯಾಗುತ್ತಾನೋ ಎಂಬ ಆತಂಕದಲ್ಲಿ ಕರುಣಾನಿಧಿ ಆತನನ್ನು ಪಕ್ಷದಿಂದ ಉಚ್ಛಾಟಿಸಿದರು. ಅದು ರಾಜ್ಯದ ಜನತೆ, ಪಕ್ಷದ ಕಾರ್ಯಕರ್ತರಿಗೆ ಕರುಣಾ ಕೊಟ್ಟ ಮೊದಲ ಸಂದೇಶ - ನನ್ನ ನಂತರ ಕಲೈಗ್ನರ್ - ಸ್ಟಾಲಿನ್! ಆತ ಹಂತ ಹಂತವಾಗಿ ಮೇಲೇರತೊಡಗಿದ. 4 ಬಾರಿ ಎಮೆಲ್ಲೆಯಾದ, ಮದ್ರಾಸಿಗೆ ನೇರ ಚುನಾವಣೆಯಲ್ಲಿ ಸ್ಪರ್ಧಿಸಿ ಮೇಯರ್ ಆದ. ಎಮ್ಮೆಲ್ಲೆಯಾದ 20 ವರ್ಷಕ್ಕೆ ತಂದೆಯ ಕ್ಯಾಬಿನೆಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವನಾದ. ಅಷ್ಟೆ ಆತ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ. ಬಹುಪಾಲು ಎಲ್ಲ ಪ್ರಮುಖ ಖಾತೆಗಳನ್ನೂ ನಿರ್ವಹಿಸಿ ಅನುಭವ ಪಡೆದ. ಈಗ ತಮಿಳ ನಾಡಿನ ಉಪಮುಖ್ಯಮಂತ್ರಿಯಾಗಿದ್ದಾನೆ. ಅದು ಕರುಣಾನಿಧಿ ಸ್ಪಷ್ಟವಾಗಿ ಕೊಟ್ಟ ಎರಡನೆಯ ಸಂದೇಶ - ನನ್ನ ನಂತರ ಕಲೈಗ್ನರ್ ಸ್ಟಾಲಿನ್! ಸ್ಟಾಲಿನ್ ಅನ್ನು ಜನ ಕೂಡ ಹಾಗೆ ಗುರುತಿಸಲಾರಂಭಿಸಿ ದಸಕಗಳೇ ಕಳೆದಿವೆ. ಒಬ್ಬ ಉತ್ತಮ ಆಡಳಿತಗಾರನಾಗಿ ವಿರೋಧ ಪಕ್ಷಗಳು ಮೆಚ್ಚುವಂತೆ ಹೆಸರು ಮಾಡಿದ್ದಾನೀತ. ಎಲ್ಲವೂ ಸರಿಯಾಗೇ ಇತ್ತು, ಮೊನ್ನೆ ಮೊನ್ನೆಯ ತನಕ.

ಆದರೆ ಅಪಸ್ವರ ಮೂಡಲಾರಂಭಿಸಿದೆ. ಕರುಣಾನಿಧಿಯ ಹಿರಯ ಮಗ ಎಂ.ಕೆ.ಅಳಗಿರಿ ತನ್ನ ಗಂಟಲು ದೊಡ್ಡದು ಮಾಡಲಾರಂಭಿಸಿದ್ದಾನೆ. ಆತನಿಗೆ ಮೊದಲಿಂದಲೂ ಒಂದು ಅಸಮಾಧಾನ ಇದ್ದೇ ಇತ್ತು. ತನಗಿಂತ ಕಿರಿಯ ಸ್ಟಾಲಿನ್ನನ್ನು ತಾನು ಕಲೈಗ್ನರ್ ಎಂದು ಒಪ್ಪುವುದಾದರೂ ಹೇಗೆ? ಆಗ ಕರುಣಾನಿಧಿ ಪರಮ ನಾಚಿಗೆಗೇಡು ನ್ಯಾಯ ಪಂಚಾಯಿತಿಯೊಂದನ್ನು ಮಾಡಿದ್ದರು. ಎಂ.ಕೆ.ಅಳಗಿರಿಯನ್ನು ತಮಿಳುನಾಡಿನ ದಕ್ಷಿಣದಲ್ಲಿರುವ ಮಧುರೈ ಪಟ್ಟಣಕ್ಕೆ ಕಳಿಸಿಕೊಟ್ಟು ಅಲ್ಲಿ ಆತನನ್ನು ಮೇಯರ್ ಮಾಡಿದರು. ಸ್ಟಾಲಿನ್ನನ್ನು ಮದ್ರಾಸಿನ ಮೇಯರ್ ಮಾಡಿದರು. ಕರುಣಾ ಸಂದೇಶ ಕೊಡುವುದೇ ಹೀಗೆ - ಸ್ಟಾಲಿನ್ಗೆ ಉತ್ತರ ತಮಿಳುನಾಡು, ಅಳಗಿರಿಗೆ ದಕ್ಷಿಣ ತಮಿಳುನಾಡು! ಅಳಗಿರಿ ಅಲ್ಲಿ ಯಾವ ಮಟ್ಟಕ್ಕೆ  ಬೆರೂರಿದನೆಂದರೆ ಇಡಿಯ ದಕ್ಷಿಣ ತಮಿಳುನಾಡು ಆತನ ಹಿಡಿತದಲ್ಲಿತ್ತು. he was and is an extra constitutional authority. ಆತನನ್ನು ಡಿಎಂಕೆಯ ಕಾರ್ಯಕರ್ತರು `ತೆನ್ಮಾವಟ್ಟ ತಲೈವರ್' ಎಂದು ಕರೆಯುತ್ತಾರೆ ಪ್ರೀತಿಯಿಂದ. ಅಂದರೆ ದಕ್ಷಿಣ ಜಿಲ್ಲೆಗಳ ಮುಖ್ಯಮಂತ್ರಿ ಅಂತ!  ರಾಜ್ಯ ಏನು ಇವರಪ್ಪನ ಮನೆ ಜಹಗೀರಾ? ಈ ಒಪ್ಪಂದ ಕಳೆದ ಕೆಲ ದಿನಗಳವರೆಗೂ ಯಾವುದೇ ತೊಂದರೆಗಳಿಲ್ಲದೆ ಜಾರಿಯಲ್ಲಿತ್ತು. ಅದನ್ನು ಮತ್ತೆ ಹೊತ್ತಿಸಿದವರು ಮುರಸೋಳಿ ಮಾರನ್ರ ಮಕ್ಕಳು, ಸನ್ ನೆಟ್ವರ್ಕ್ ಮತ್ತು ದಿನಕರನ್ ಪತ್ರಿಕೆಯ ಕಲಾನಿಧಿ ಮತ್ತು ದಯಾನಿಧಿ ಸೋದರರು. ದಿನಕರನ್ ಪತ್ರಿಕೆ ರಾಜ್ಯವ್ಯಾಪಿ ಒಂದು ಸರ್ವೇ ನಡೆಸಿ ಕರುನರ ನಂತರ ನಿಮಗೆ ಯಾರು ಮುಖ್ಯಮಂತ್ರಿಯಾಗಬೇಕೆಂಬ ಆಸೆ ಸ್ಟಾಲಿನ್ನೋ, ಅಳಗಿರಿಯೋ? ಎಂದು ಪ್ರಶ್ನಿಸಿತ್ತು. ಸ್ಟಾಲಿನ್ ಜನರ ಮನಸೂರೆಗೊಂಡಿದ್ದಾರೆಂದೂ, ಅಳಗಿರಿಗೆ ಬೆಲೆಯೇ ಇಲ್ಲವೆಂದೂ ಅದು ಪ್ರಕಟಿಸಿತ್ತು. ಆಗ ಹುಟ್ಟಿಕೊಂಡಿತು ಕರುಣರ ಕುಟುಂಬದಲ್ಲಿ ದಾವಾನಿಲ! ಕೂಡಲೇ ದಯಾನಿಧಿಯನ್ನು ಕೇಂದ್ರ ಮಂತ್ರಿಯ ಸ್ಥಾನದಿಂದ ಕಿತ್ತೊಗೆಯಲಾಯಿತು. ಕರುಣ ಈ ಸೋದರರನ್ನು ಇನ್ನೂ ಕ್ಷಮಿಸಿಲ್ಲ. ನಂತರ ಯುಪಿಎ2ರಲ್ಲಿ ಎಂ.ಕೆ.ಅಳಗಿರಿಯನ್ನು ಕೆಮಿಕಲ್ ಅಂಡ್ ಫಟಿಲೈಸರ್ ಮಂತ್ರಿಯನ್ನಾಗಿ ಮಾಡಲಾಯಿತು. ಸ್ಟಾಲಿನ್ನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಅಲ್ಲಿಗೆ ಮತ್ತೊಮ್ಮೆ ಕರುಣರ ಸಂದೇಶ ಸ್ಪಷ್ಟವಿತ್ತು. ನನ್ನ ನಂತರ ಕಲೈಗ್ನರ್ ಸ್ಟಾಲಿನ್, ದೆಹಲೀ ಪ್ರತಿನಿಧಿ ಅಳಗಿರಿ. ಈ ಬಾರಿ ಕರುಣ ತಮ್ಮ ಮಕ್ಕಳಿಗೆ ದೇಶವನ್ನೇ ಹಂಚಿ ಕೊಟ್ಟಿದ್ದರು. ಒಬ್ಬರಿಗೆ ದೆಹಲಿ ಮತ್ತೊಬ್ಬರಿಗೆ ಮದರಾಸು.

ಎಲ್ಲವೂ ಸರಿಯಾಗೇ ನಡೆದಿತ್ತು. ಆದರೆ ಅಳಗಿರಿಯ ಮಸ್ತಿಷ್ಕದೊಳಗೆ ಒಂದು ದೂರಾಲೋಚನೆಯ ಬೀಜಾಂಕುರವಾಗಿದ್ದೇ ತಡ, ಅಳಗಿರಿ ಅಂತಿಮ ಹಣಾಹಣಿಗಿಳಿದುಬಿಟ್ಟರು, ಸಹಜವಾಗಿ ಅವರ ಗಂಟಲು ದೊಡ್ಡದಾಯಿತು. ಏನು ಆ ಯೋಚನೆ ಅಂದಿರಾ? ಸರಳ. ಕರುಣಾನಿಧಿ ಬದುಕಿರುವವರೆಗೆ ತನಗೆ ಈ ಕೇಂದ್ರ ಮಂತ್ರಿಯ ಸ್ಥಾನ ಗ್ಯಾರೆಂಟಿಯೇ, ಆದರೆ ಕರುಣರ ನಂತರ ಪಕ್ಷ ಮತ್ತು ರಾಜ್ಯದ ಚುಕ್ಕಾಣಿ ಹಿಡಯುವವನು ತನ್ನ ತಮ್ಮ ಸ್ಟಾಲಿನ್. ಆತನೊಂದಿಗೆ ತನ್ನ ಸಂಬಂಧ ಅಷ್ಟಕ್ಕಷ್ಟೆ ಎಂಬಂತಿದೆ. ಹೀಗಿರುವಾಗ ಕರುಣರ ನಂತರ ಪಕ್ಷದ ಮಟ್ಟದಲ್ಲಿ ಎಲ್ಲವೂ ಸ್ಟಾಲಿನ್ನೇ ಎಂಬಂತಾದರೆ ತನ್ನ ಗತಿ? ಕೂಡಲೇ ಎಚ್ಚೆತ್ತಿರುವ ಅಳಗಿರಿ ಅಂತಿಮ ಕಾರ್ಯಾಚರಣೆಗಿಳಿದುಬಿಟ್ಟಿದ್ದಾರೆ. ಅದೇನೋ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿದಂತೆ ಅವರು ಸ್ಟಾಲಿನ್ ಮುಖ್ಯಮಂತ್ರಿಯಾಗುವುದಾದರೆ, ಸರಿ ಆಗಲಿ. ಆದರೆ ಡಿಎಂಕೆ ಪಕ್ಷದ ಅಧ್ಯಕ್ಷಗಿರಿ ತನಗೆ ಬಿಟ್ಟುಕೊಡಲಿ. ಕರುಣಾನಿಧಿಯ ಹಿರಯ ಮಗನಿಗೆ ಆ ಸ್ಥಾನವೂ ಬೇಡವೇ? ಅಂತ ಕೇಳುತ್ತಿದ್ದಾರೆ. ಅವರ ದೂ(ದು)ರಾಲೋಚನೆ ಸರಳ. ತಂದೆ ಬದುಕಿರುವಾಗಲೇ ತಾನು ಪಕ್ಷದ ಅಧ್ಯಕ್ಷನಾಗಿಬಿಟ್ಟರೆ, ಪಕ್ಷ ಒಂದು ಹಂತಕ್ಕೆ ತನ್ನ ಹಿಡಿತಕ್ಕೆ ಸಿಕ್ಕುಬಿಡುತ್ತದೆ. ಅಷ್ಟಾದರೆ ಸಾಕು ಸ್ಟಾಲಿನ್ನೇ ಏಕಾಗಬೇಕು ಆಮೇಲೆ? ಇದನ್ನು ಮನಸ್ಸಿನಲ್ಲಿಟ್ಟುಕೊಂಡೇ ಅಳಗಿರಿ ಪಕ್ಷಾಧ್ಯಕ್ಷನ ಸ್ಥಾನಕ್ಕೆ ಚುನಾವಣೆಗಳು ನಡೆಯುವುದೇ ಆದರೆ, ಅದಕ್ಕೆ ತಾನು ಸ್ಪರ್ಧಿಸುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿರುವುದು. ಇದಕ್ಕುತ್ತರವಾಗಿ ಚಾಣಾಕ್ಷ ಕರುಣಾನಿಧಿ ಪಕ್ಷದ ಅಧ್ಯಕ್ಷನನ್ನು ಆಯ್ಕೆ ಮಾಡಿಕೊಳ್ಳುವುದು ಪಕ್ಷ, ತಾನಲ್ಲ ಎಂದುತ್ತರಿಸಿ ಜಾರಿಕೊಂಡಿದ್ದಾರೆ.

ಹೆಣದ ಮುಂದೆ ಮಕ್ಕಳು ಆಸ್ತಿಗಾಗಿ ಕಿತ್ತಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ ತಂದೆ ಎನ್ನುವವನು ಬದುಕಿದ್ದಾಗಲೇ `ಏ ಮುದುಕ, ನೀನೇ ತೀರ್ಮಾನ ಮಾಡಿ ಹೋಗು, ಇಲ್ಲದಿದ್ದರೆ ನೀನು ಹೋದ ಮೇಲೆ ಸುಮ್ಮನೆ ಗಲಾಟೆ' ಎಂಬಂತೆ ಮಕ್ಕಳೇ ಕೇಳುತ್ತಿದ್ದಾರೆ. ಇಲ್ಲಿ ಎರಡು ದುರಂತಗಳಿವೆ. ಒಂದು ಕರುಣಾನಿಧಿಯೆಂಬ ಸತ್ವಯುತ ನಾಯಕನೋರ್ವನ ಸಾವನ್ನು ಎಲ್ಲರೂ ಅಸ್ಯೂಮ್ ಮಾಡಿಕೊಂಡುಬಿಟ್ಟಿದ್ದಾರೆ. ಎರಡನೆಯದು ಮಹಾ ದುರಂತ, ನಮ್ಮ ದೇಶದ್ದು. ಜಾತ್ಯಾತೀತತೆಯ ತಳಹದಿಯ ಮೇಲೆ ನಿಂತಿರುವ ನಮ್ಮ ಸಮಾಜದಲ್ಲಿ ಸ್ವಜನ ಪಕ್ಷಪಾತವೆನ್ನುವುದೇ ಮಹಾ ಪಾಪ. ಆದರೆ ಕನಿಷ್ಠ ಪಕ್ಷ ಅಲ್ಲಿ ಸ್ವಜಾತಿಯ ದೊಡ್ಡ ಸಮೂಹವಾದರೂ ಇರುತ್ತದೆ, ಆದರೆ ಕುಟುಂಬ ರಾಜಕಾರಣ ಅದಕ್ಕಿಂತಲೂ ಹೇಯವಾದದ್ದು. ಕಾಂಗ್ರೆಸ್ ಅನ್ನು ಕುಟುಂಬ ರಾಜಕಾರಣದ ಕಾರಣವಾಗಿ ವಿರೋಧಿಸಿಕೊಂಡುಬಂದ ಅನೇಕ ಪಕ್ಷಗಳು ಇಂದು ಫ್ಯಾಮಿಲೀ ಟ್ರಸ್ಟ್ಗಳಾಗಿರುವುದು ದುರಾದೃಷ್ಟಕರ. ತೀರಾ ಕರುಣಾನಿಧಿಯವರ ಪ್ರಸ್ತುತ ಎಪಿಸೋಡ್ನಲ್ಲಂತೂ ಆತ ಬದುಕಿರುವಾಗಲೇ, ಆತನ ಸಾವನ್ನು ಮಕ್ಕಳು ಅಸ್ಯೂಮ್ ಮಾಡಿಕೊಂಡು ಆಸ್ತಿ ಹಂಚಿಕೆಗಾಗಿ ಕಿತ್ತಾಡುತ್ತಿದ್ದಾರೆ. ಆದರೆ ಅದೇನೂ ಪಿತ್ರಾರ್ಜಿತ  ಆಸ್ತಿಯಲ್ಲ, ಬದಲಿಗೆ ತಮಿಳುನಾಡೆಂಬ ಸಂಪದ್ಭರಿತ ರಾಜ್ಯ. ಅದೇನು ಇವರಪ್ಪನ ಮನೆ ಜಹಗೀರಾ ಹಂಚಿಕೊಳ್ಳೋಕೆ?

Proudly powered by Blogger
Theme: Esquire by Matthew Buchanan.
Converted by LiteThemes.com.