ಒಂಟಿ ಸಲಗ ಜಾರ್ಜ್ ಫರ್ನಾಂಡೀಸ್ ನಿಜಕ್ಕೂ ಒಂಟಿ


ಜಾರ್ಜ್ ಫರ್ನಾಂಡೀಸ್! ಆ ಹೆಸರೇ ಒಂದು ಕಾಲಕ್ಕೆ ಮೈನವಿರೇಳಿಸುವ ರೋಮಾಂಚನ. ಆದರೆ ಇಂದು ಇದೇ ಜಾರ್ಜ್ ಹಿಂದಿನ ತನ್ನದೇ ಪೇಲವ ನೆರಳು ಅಷ್ಟೆ. ಜಾರ್ಜ್ ಫರ್ನಾಂಡೀಸ್ ಮತ್ತು ವಿವಾದ ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳು. ಇದು ಅವರ ಜೀವನ ಸಂಧ್ಯಾಕಾಲದಲ್ಲೂ ಮುಂದುವರೆದಿದೆ. ಇಂದು ಅವರ ಆರೋಗ್ಯ ಹದಗೆಟ್ಟು ಹೋಗಿದೆ. ಅದು ದೈಹಿಕಕ್ಕಿಂತಲೂ ಮಾನಸಿಕ. ಭಾರತ ಕಂಡ ಅತಿ ಎತ್ತರದ ದೈತ್ಯ ಕಾರ್ಮಿಕ ನಾಯಕ, ಸಮಾಜವಾದಿ ಜಾರ್ಜ್ ಫರ್ನಾಂಡೀಸ್ ಇಂದು parkinsons ಮತ್ತು alzheimers ಇಂದ ಬಳಲುತ್ತಿದ್ದಾರೆ. ಇದು ಸಾಧಾರಣವಾಗಿ ವಯೋವೃದ್ಧರಿಗೆ ಬರುವ ಖಾಯಿಲೆಗಳು. ಇದರಿಂದ ಬಳಲುತ್ತುರಿವ ಮನುಷ್ಯ ಮೊದಲು ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ, ಆತನ ಮಾತಿಗೂ ಚಟುವಟಿಕೆಗಳಿಗೂ ಸಂಬಂಧವಿರುವುದಿಲ್ಲ, ಆತ ಯಾರನ್ನೂ ಗುರುತಿಸಲಾರದವನಾಗುತ್ತಾನೆ. ಒಟ್ಟಿನಲ್ಲಿ ಆತನಿಗೆ ಹೊರಜಗತ್ತಿನೊಂದಿಗೆ ಸಂಬಂಧವೇ ಇಲ್ಲವೇನೋ ಎನ್ನುವಂತೆ ತನ್ನದೇ ಆದ ಜಗತ್ತಿನಲ್ಲಿ ಆತ ಮುಳುಗಿಹೋಗಿರುತ್ತಾನೆ. ಸದ್ಯ ಜಾರ್ಜ್ ಫರ್ನಾಂಡೀಸ್ ಇಂಥದೇ ದಾರುಣ ಸ್ಥಿತಿಯಲ್ಲಿದ್ದಾರೆ. ಜಾರ್ಜ್ ಫರ್ನಾಂಡೀಸ್ರ ದೀರ್ಘ ಕಾಲದ ಗೆಳೆಯ ಅಟಲ್ ಬಿಹಾರೀ ವಾಜಪೇಯಿಯವರು ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿರುವ ಸುದ್ದಿಗಳಿವೆಯಾದರೂ ಅದನ್ನು ಬಿಜೆಪಿ ವಲಯ ಗುಟ್ಟಾಗಿರಿಸಿದೆ. ಸದ್ಯ ಜಾರ್ಜ್ ಮತ್ತು ವಾಜಪೇಯಿ ಒಂದು ಮಗುವಿನಂತೆ. ಅವರನ್ನು ಅದೇ ಆಸ್ಥೆಯಿಂದ ನೋಡಿಕೊಳ್ಳಬೇಕಿದೆ. ಬ್ರಹ್ಮಚಾರಿಯಾದರೂ ವಾಜಪೇಯಿ ಈ ವಿಷಯದಲ್ಲಿ ಅದೃಷ್ಟವಂತರು, ಅವರ ಸಾಕು ಮಗಳು ಮತ್ತು ಕುಟುಂಬ ಅವರನ್ನು ಇದೇ ಆಸ್ಥೆಯಿಂದ ನೋಡಿಕೊಳ್ಳುತ್ತಿದೆ. ಆದರೆ ಜೀವನದಲ್ಲಿ ಇಬ್ಬರು ಸಂಗಾತಿಗಳನ್ನು ಕಂಡ ಜಾರ್ಜ್ ಇವರೀರ್ವರ ನಡುವಿನ ಮುಸುಕಿನ ಗುದ್ದಾಟಕ್ಕೆ ಇಂದು ಬಲಿಯಾಗಿದ್ದಾರೆ. ಎರಡು ಬೆಕ್ಕುಗಳ ನಡುವಿನ ಇಲಿಯಂತಾಗಿದ್ದಾರೆ!


ಹೌದು ಜಾರ್ಜ್ ಫರ್ನಾಂಡೀಸ್ ಸುತ್ತಲೂ ಒಂದು ಅನಾರೋಗ್ಯಕರ ಹೈಡ್ರಾಮಾ ಮತ್ತು ವಿವಾದ ಹುಟ್ಟಿಕೊಂಡಿದೆ. ಎಲ್ಲರೂ ಬಲ್ಲಂತೆ ಜಯಾ ಜೇಟ್ಲಿ, ಜಾರ್ಜ್ ಫರ್ನಾಂಡೀಸ್ರ ದೀರ್ಘ ಕಾಲದ ರಾಜಕೀಯ ಮತ್ತು ವೈಯಕ್ತಿಕ ಸಂಗಾತಿ. ಇದು ಸುಮಾರು 25-30 ವರ್ಷಗಳ ಗೆಳೆತನ. ಜಾರ್ಜ್ ಫರ್ನಾಂಡೀಸ್ರ ಆರೋಗ್ಯ ಕ್ಷೀಣಿಸುತ್ತಾ ಹೋದಂತೆಲ್ಲಾ ಅವರನ್ನು ಕಾಳಜಿಯಿಟ್ಟು ನೋಡಿಕೊಂಡಾಕೆ ಇದೇ ಜಯಾ ಜೇಟ್ಲಿ. ಅವರ ಡಯಾಪರ್ಗಳನ್ನು ಬದಲಾಯಿಸುವುದರಿಂದ ಹಿಡಿದು ಅವರ ಸಂಪೂರ್ಣ ಆರೈಕೆ ಮಾಡುತ್ತಿರುವುದೇ ಜಯಾ. ಆದರೆ ಜಯಾ ಜೇಟ್ಲಿ ಜಾರ್ಜ್ ಫರ್ನಾಂಡೀಸ್ರ ಅಧಿಕೃತ ಪತ್ನಿಯಲ್ಲ. ಆಕೆಯ ಹೆಸರು ಲೀಲಾ ಕಬೀರ್! ಜಾರ್ಜ್ ಫರ್ನಾಂಡೀಸ್ರ ಪತ್ನಿ. ದೆಹಲಿಯ ಹುಮಾಯುನ್ ಕಬೀರ್ ಎಂಬ ಗತಕಾಲದ ದೈತ್ಯ ರಾಜಕಾರಣಿಯ ಪುತ್ರಿ. ಆ ಕಾಲಕ್ಕೇ ಹಾರ್ವರ್ಡ್ ವಿವಿಯಲ್ಲಿ ಓದಿ, ಸಮಾಜವಾದದ ಗುಂಗಿ ಹುಳ ತಲೆಗತ್ತಿಸಿಕೊಂಡು, ಕೇವಲ 150ರೂ.ಗಳ ಸಂಬಳಕ್ಕೆ ದಾದಿಯಾಗಿ ಕೆಲಸ ಮಾಡುತ್ತಿದ್ದ ಲೀಲಾ ಕಬೀರ್! ಹೌದು ಈಕೆ ಜಾರ್ಜ್ ಫರ್ನಾಂಡೀಸ್ರ ಪತ್ನಿ. ಆದರೆ 1986ರಲ್ಲೇ ಈಕೆ 13 ವರ್ಷಗಳ ಸಹಜೀವನದ ನಂತರ ಜಾರ್ಜ್ರಿಂದ ಹೊರನಡೆದರು. ಇವರಿಬ್ಬರಿಗೆ ಒಬ್ಬ ಮಗನಿದ್ದಾನೆ. ಆತನೇ ಸೀನ್. ನಂತರದ ಈ 25 ವರ್ಷಗಳಲ್ಲಿ ಲೀಲಾ ಕಬೀರ್ ಎಂದಿಗೂ ಜಾರ್ಜ್ರ ಜೀವನದಲ್ಲಿ ಮತ್ತೆ ಕಾಣಿಸಿಕೊಂಡಿಲ್ಲ. ಒಂದು ದಿನಕ್ಕೂ ಬಂದು ಅವರ ಆರೋಗ್ಯ ವಿಚಾರಿಸಿದವರಲ್ಲ, ಅವರು ವಿವಾದಗಳಲ್ಲಿ ಸಿಲುಕಿಕೊಂಡಾಗ ಜೊತೆ ನಿಂತವರಲ್ಲ. ಆದರೆ ಇವರಿಬ್ಬರೂ ಕಾನೂನು ರೀತ್ಯಾ ವಿಚ್ಛೇದನ ಪಡೆದಿಲ್ಲ. ಆದ್ದರಿಂದ ಕಾನೂನಿನ ಪ್ರಕಾರ ಇಂದಿಗೂ ಲೀಲಾ ಕಬೀರ್ ಅವರೇ ಜಾರ್ಜ್ ಅವರ ಪತ್ನಿ, ಅವರೇ ಅವರ ಕುಟುಂಬ.

ಇಂತಿಪ್ಪ ಲೀಲಾ ಹುಮಾಯುನ್ ಕಬೀರ್ ಫರ್ನಾಂಡೀಸ್ ಜಾರ್ಜ್ರ ಜೀವನದಲ್ಲಿ ಮತ್ತೊಮ್ಮೆ ಎಂಟ್ರಿ ಪಡೆದುಕೊಂಡಿದ್ದಾರೆ! ಅದೇ ಈ ಎಲ್ಲ ವಿವಾದಕ್ಕೂ ಕೇಂದ್ರ ಬಿಂದು. ನ್ಯೂಯಾರ್ಕ್ನಲ್ಲಿ ಇನ್ವೆಸ್ಟ್ಮೆಂಟ್ ಬ್ಯಾಂಕರ್ ಆಗಿರುವ ಇವರ ಮಗ ಸೀನ್ ಮೊನ್ನೆ ಭಾರತಕ್ಕೆ ಬಂದು ದೆಹಲಿಯ ಪೋಲೀಸರಿಗೆ ಒಂದು ದೂರು ನೀಡಿದ್ದಾನೆ. ತಾನು ಮತ್ತು ತನ್ನ ತಾಯಿ ಬಯಸುವವರನ್ನು ಮಾತ್ರ ಜಾರ್ಜ್ರನ್ನು ಭೇಟಿಯಾಗಲು ಬಿಡಬೇಕೆಂದೂ, ಮಿಕ್ಕ್ಯಾರನ್ನು ಒಳಬಿಡಕೂಡದೆಂದೂ ವಿನಂತಿಸಿ ಸೆಕ್ಯೂರಿಟಿ ಪಡಕೊಂಡಿದ್ದಾನೆ. ಅವರ ಆಪಾದನೆ ಜಾರ್ಜ್ರ ಸುತ್ತಲೂ ಇದ್ದವರು ಅವರ ಅಳಿದುಳಿದ ಆಸ್ತಿಯನ್ನು ಲೂಟಿ ಮಾಡುತ್ತಿದ್ದಾರೆ. ಜಯಾ ಜೇಟ್ಲಿ ಜಾರ್ಜ್ ಕೈಯಲ್ಲಿ Power Of Attorney ಬರೆಸಿಕೊಂಡು, ಬೆಂಗಳೂರಿನ ನೆಲಮಂಗಲದಲ್ಲಿ ಜಾರ್ಜ್ ಹೆಸರಲ್ಲಿರುವ ಅನೇಕ ಕೋಟಿಗಳ ಆಸ್ತಿಯನ್ನು ಮಾರಿಬಿಟ್ಟಿದ್ದಾರೆ. ಈ ಭೂವ್ಯವಹಾರ ನಡೆದಿರುವುದು 13 ಕೋಟಿಗಳಿಗೆ ಎಂದು ಹೇಳಲಾಗುತ್ತಿದೆಯಾದರೂ ಇದರ ನಿಜವಾದ ಮೌಲ್ಯ 23ಕೋಟಿಗಳಿಗೂ ಹೆಚ್ಚು ಎಂದು ಹೇಳಲಾಗುತ್ತಿದೆ. ಜಯಾ ಜೇಟ್ಲಿ ಮತ್ತು ಜಾರ್ಜ್ ಫರ್ನಾಂಡೀಸ್ರ ಮುಂಬೈ ಸ್ನೇಹಿತ ಫ್ರೆಡ್ರಿಕ್ ಇಬ್ಬರ ಹೆಸರಿಗೂ ಜಾರ್ಜ್ ತಮ್ಮ ಮನೋಸ್ಥಿಮಿತ ಸರಿಯಿದ್ದಾಗಲೇ Power Of Attorney ಬರೆದುಕೊಟ್ಟದ್ದರು, ಅವರ ಋಜು ಅತ್ತಿತ್ತ ಹರಿದಾಡುತ್ತಿದ್ದರಿಂದ ಬ್ಯಾಂಕ್ನವರು ಚೆಕ್ಗಳನ್ನು ಹಾನರ್ ಮಾಡುತ್ತಿರಲಿಲ್ಲ. ಆದ್ದರಿಂದ ಈ ವ್ಯವಸ್ಥೆಯನ್ನು ಮಾಡಲಾಗಿತ್ತು. ಇನ್ನು ಬೆಂಗಳೂರಿನ ಆಸ್ತಿ ಮಾರಿರುವುದು ನಿಜವೇ. ಆದರೆ ಈ ಆಸ್ತಿಯನ್ನು ಮಾರಿ ಬಂದ ಹಣದಲ್ಲಿ 9 ಕೋಟಿಗಳನ್ನು ಜಾರ್ಜ್ ಫರ್ನಾಂಡೀಸ್ ಟ್ರಸ್ಟ್ ಅಂತ ಮಾಡಿ ಬಡಬಗ್ಗರಿಗೆ ಹಂಚಲಾಗುತ್ತಿದ್ದು, ಮಿಕ್ಕ 4 ಕೋಟಿಗಳನ್ನು ಜಾರ್ಜ್ರ medical expenesesಗೆಂದು ತೆಗದಿರಿಸುವ ನಿರ್ಣಯವಾಗಿತ್ತು. ಇದಕ್ಕೆ ಜಾರ್ಜ್ ಸಹೋದರರಾದ ಮೈಖೇಲ್, ಪಾಲ್, ರಿಚರ್ಡ್ ಅವರೂ ಒಪ್ಪಿದ್ದರು.

ಆದರೆ ಅಷ್ಟರಲ್ಲಿ ಧುತ್ತನೆ ಎದುರಾದವರು ಲೀಲಾ ಕಬೀರ್. ಈ 25 ವರ್ಷಗಳಲ್ಲಿ ಒಮ್ಮೆಯೂ ಬಂದು ನೋಡಿಕೊಂಡು ಹೋಗದವರು ಈಗೇಕೆ ಪ್ರತ್ಯಕ್ಷರಾಗಿದ್ದಾರೆ? ಅದು ಉತ್ತರವಿಲ್ಲದ ಪ್ರಶ್ನೆ. ಅವರು ಜಾರ್ಜ್ ಆಸ್ತಿ ಅರಸಿ ಬಂದಿದ್ದಾರೆ ಎಂದು ಜಯಾ ಮತ್ತು ಸೋದರರು ಆಪಾದಿಸಿದರೆ, ಇಲ್ಲ ಅವರು ಆಸ್ತಿಯನ್ನು ಲೂಟಿ ಹೊಡೆಯುತ್ತಿದ್ದರು, ಜಾರ್ಜ್ ಫರ್ನಾಂಡೀಸ್ರನ್ನು ಸರಿಯಾಗಿ ನೋಡಿಕೋಳ್ಳುತ್ತಿರಲಿಲ್ಲ, ಅದಕ್ಕಾಗಿ ಅನಿವಾರ್ಯವಾಗಿ ನಾನು ಮಧ್ಯ ಪ್ರವೇಶಿಸಬೇಕಾಯಿತು ಎನ್ನುತ್ತಾರೆ ಲೀಲಾ ಕಬೀರ್. ಲೀಲಾ ಕಬೀರ್ ಅತಿ ಶ್ರೀಮಂತರ ಮನೆಯ ಹೆಣ್ಣು ಮಗಳು, ಆಕೆಗೆ ಜಾರ್ಜ್ರ ಆಸ್ತಿಯ ಬೆನ್ನತ್ತಿ ಬರುವ ಅವಶ್ಯಕತೆಯಿಲ್ಲ, ಇನ್ನು ಮಗನೋ ನ್ಯೂಯಾರ್ಕ್ನಲ್ಲಿ ಇನ್ವೆಸ್ಟ್ಮೆಂಟ್ ಬ್ಯಾಂಕರ್, ಆತನೂ ಶ್ರೀಮಂತನೇ. ಆದರೆ ಲೀಲಾ ಕೂಡ ಅನುಮಾನಗಳೆಳಿಸುವಂತಹ ಕೆಲ ನಡವಳಿಕೆಗಳನ್ನು ತೋರಿದ್ದಾರೆ. ಮಧ್ಯರಾತ್ರಿ ಎರಡು ಘಂಟೆಯಲ್ಲಿ ಜಾರ್ಜ್ ಫರ್ನಾಂಡೀಸ್ರ ಮನೆಗೆ ನುಗ್ಗಿ, ಆಳು ಕಾಳುಗಳನ್ನೆಲ್ಲಾ ಹೊರಹಾಕಿ, Power Of Attorneyಯನ್ನು ರಿವೋಕ್ ಮಾಡುವ ಕಾಗದ ಪತ್ರಗಳಿಗೆ ಜಾರ್ಜ್ರ ಹೆಬ್ಬೆಟ್ಟೊತ್ತಿಸಿಕೊಳ್ಳುವ ಜರೂರತ್ತಾದರೂ ಏನಿತ್ತು? ಜಾರ್ಜ್ ಫರ್ನಾಂಡೀಸ್ ಎಷ್ಟೋ ದಿನಗಳವರೆಗೂ ನೀಲಿಯಾಗಿದ್ದ ಅದೇ ಹೆಬ್ಬೆಟ್ಟನ್ನು ದಿಟ್ಟಿಸುತ್ತಾ ಕೂತುಬಿಟ್ಟಿದ್ದರಂತೆ. ಯಾಕೆ ಹೀಗೆ?

ಒಂದು ಗುಸುಗುಸು ಸುದ್ದಿಯೇನಪ್ಪಾ ಎಂದರೆ, ಇದು ಜಾರ್ಜ್ ಫರ್ನಾಂಡೀಸ್ರ ಅಪಾರ ಆಸ್ತಿಯ ಒಂದು speck ಅಷ್ಟೆ. ಜಾರ್ಜ್ ಫರ್ನಾಂಡೀಸ್ರಿಗೆ ಬಹುಕೋಟಿ ರೂ.ಗಳ ಮೌಲ್ಯದ ಅಪಾರ ಆಸ್ತಿಯಿದ್ದು, ಅವರು ಬದುಕಿದ್ದಾಗಲೇ ಇದಕ್ಕಾಗಿ ಕಚ್ಚಾಟ ಆರಂಭವಾಗಿದೆ. there's more big money involved. ಈಗ ಜಾರ್ಜ್ರ ಸೋದರರನ್ನಾಗಲೀ, ಜಯಾ ಜೇಟ್ಲಿಯವರನ್ನಾಗಲೀ ಅವರನ್ನು ಭೇಟಿಯಾಗಲು ಲೀಲಾ ಮತ್ತವರ ಮಗ ಅನುಮತಿಸುತ್ತಿಲ್ಲ. ಅವರು ಆಸ್ಪತ್ರೆಗೆ ಸೇರಿದ್ದಾರಾದರೂ, ಅಲ್ಲೂ ಸಹ ಅವರನ್ನು ಇವರು ಹೋಗಿ ಕಾಣುವಂತಿಲ್ಲ, ವೈದ್ಯರು ಕೂಡ, ಲೀಲಾ ಅವರು ಏನನ್ನೂ ಹೇಳಬಾರದೆಂದು ತಾಕೀತು ಮಾಡಿರುವುದರಿಂದ ನಾವು ಅದನ್ನು ಗೌರವಿಸಿ, ಎನನ್ನೂ ಹೇಳಲಿಚ್ಛಿಸುವುದಿಲ್ಲ ಎನ್ನುತ್ತಿದ್ದಾರೆ.ಜಾರ್ಜ್ ಫರ್ನಾಂಡೀಸ್ ಈಗ ಒಂದು ಸಣ್ಣ ಮಗುವಿದ್ದಂತೆ. ಯಾವ ವೈದ್ಯರಾದರೂ ಹೇಳುತ್ತಾರೆ, ಈಗ ಅವರಿಗೆ ಪರಿಚಿತ ಮುಖಗಳು ಸುತ್ತಲಿರಬೇಕು, ಒಂದು ಆಪ್ಯಾಯಮಾನ ಪರಿಸರದಲ್ಲಿ ಅವರನ್ನು ನೋಡಿಕೊಳ್ಳಬೇಕೆಂದು. ಆದರೆ ಇಂದು ಜಾರ್ಜ್ ಅದರಿಂದ ವಂಚಿತರಾಗಿದ್ದಾರೆ. ಲೀಲಾ ಎಷ್ಟೇ ಪತ್ನಿಯಾಗಿದ್ದರೂ ಅವರಿಬ್ಬರ ಸಂಬಂಧ ಕಡಿದು ಹೋಗಿ 25 ವರ್ಷಗಳಾಗಿವೆ. ಇನ್ನು ಮಗ, ಸೊಸೆ, ಮೊಮ್ಮಗ ಎಲ್ಲರೂ ಅವರಿಗೆ ಅಪರಿಚಿತರು. ಆದರೆ ಇಷ್ಟು ದಿನ ಅವರನ್ನು ಮಗುವಿನಂತೆ ನೋಡಿಕೊಂಡ ಜಯಾ ಜೇಟ್ಲಿ ಮತ್ತವರ ಸೋದರರು ಈಗ ಹೊರಗಿನವರು ಎನ್ನುತ್ತದೆ ಕಾನೂನು.


ಜಾರ್ಜ್ ಫರ್ನಾಂಡೀಸ್ರಿಗೆ ಭಾರತದ ರಾಜಕಾರಣದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಮಂಗಳೂರಿನವರಾದ ಇವರು ಬಾಂಬೆಯ ಬೀದಿಗಳಲ್ಲಿ ದೇಶ ಕಂಡರಿಯದ ದೈತ್ಯ ಕಾರ್ಮಿಕ ನಾಯಕರಾಗಿ ಬೆಳೆದದ್ದು, ಜಯಂಟ್ ಕಿಲ್ಲರ್ ಎನಿಸಿ ಲೋಕಸಬೆ ಪ್ರವೇಶಿಸಿದ್ದು, ಎಮರ್ಜೆನ್ಸಿಯ ಕಾಲದಲ್ಲಿ ಡೈನಮೈಟ್ ಒಡನೆ ಸರಸವಾಡಿದ್ದು, ಐತಿಹಾಸಿಕ ರೈಲ್ ಸ್ಟ್ರೈಕ್ ಅನ್ನು ಸಂಘಟಿಸಿದ್ದು ಇದು ಜಾರ್ಜ್ ಫರ್ನಾಂಡೀಸ್ರ ರಾಜಕೀಯ ಬದುಕಿನ ಉತ್ತುಂಗ ಮತ್ತು ಒಂದು ಮುಖ ಅಷ್ಟೆ. ಜಾರ್ಜ್ ಲೋಹಿಯಾ, ಜೆಪಿ. ಲಿಮಯೆ ನಂತರ ಈ ದೇಶ ಕಂಡ ಅತ್ಯುನ್ನತ ಸಮಾಜವಾದಿ ನಾಯಕರು ಅನ್ನುವವರಿದ್ದಾರೆ. ಜಾರ್ಜ್ ಎಲ್ಲೂ ಸಹ ಹೆಸರು ಕೆಡಿಸಿಕೊಳ್ಳಲಿಲ್ಲ. ಇವತ್ತಿಗೂ ಅವರು ಒಂದು ರೂಪಾಯಿ ತಿಂದರು ಎಂದರೆ ನಂಬುವವರು ಬಹಳ ವಿರಳ. ಹಾಗಿದೆ ಅವರ ಇಮೇಜ್. ಆದರೆ ಎಮರ್ಜೆನ್ಸಿಯ ನಂತರ ಜಾರ್ಜ್ ಫರ್ನಾಂಡೀಸ್ ರಾಜಕೀಯವಾಗಿ ಅಧಿಕಾರವನ್ನು ಪಡೆದರಾದರೂ ಒಂದೊಂದೇ ಮೆಟ್ಟಿಲನ್ನು ಇಳಿಯುತ್ತಾ ಸಾಗಿದರು. ಮುರಾರ್ಜಿಯವರ ಕ್ಯಾಬಿನೆಟ್ನಲ್ಲಿ ಇಂಡಸ್ಟ್ರೀಸ್ ಮನಿಸ್ಟರಾದವರು ಕೋಕಾ ಕೋಲಾ ಮತ್ತು ಐಬಿಎಂ ಅನ್ನು ದೇಶದಿಂದ ಓಡಿಸಿದರು, ಮುರಾರ್ಜಿಯವರ ಸರ್ಕಾರ ಪತನದಂಚಿಗೆ ಬಂದಾಗ, ಲೋಕಸಭೆಯಲ್ಲಿ ಮುರಾರ್ಜಿಯವರ ಪರವಾಗಿ ಅಮೋಘವಾದ ಭಾಷಣ ಮಾಡಿ ಮರುದಿನವೇ ಚರಣ್ಸಿಂಗರ ಕ್ಯಾಂಪಿಗೆ ಹಾರಿಬಿಟ್ಟರು. ಇದು ಶಾಶ್ವತವಾಗಿ ಜಾರ್ಜ್ರನ್ನು ರಾಜಕೀಯ ವಲಯದಲ್ಲಿ ನಂಬಿಕೆಗರ್ಹವಲ್ಲದವರೆಂದು ಮುದ್ರೆ ಬೀಳುವಂತಾಯಿತು. ನಂತರ ವಿಪಿ ಸಿಂಗರ ಸರ್ಕಾರದಲ್ಲೂ ಮಂತ್ರಿಯಾದರು. ನಂತರ ಸಮಾಜವಾದಿ ಜಾರ್ಜ್ ಫರ್ನಾಂಡೀಸ್ ಬಿಜೆಪಿಯನ್ನು ಕೂಡಿಕೊಂಡರು! ಇದು ಅವರನ್ನು ಒಬ್ಬ ರಾಜಕೀಯ ಅವಕಾಶವಾದಿಯಾಗಿ ನಗ್ನಗೊಳಿಸಿತ್ತು. ನಂತರ ವಾಜಪೇಯಿ ಸರ್ಕಾರದಲ್ಲಿ ರಕ್ಷಣಾ ಸಚಿವರಾದರು. ಅಲ್ಲಿಯೂ ಅನೇಕ ವಿವಾದಗಳಿಗೆ ಗ್ರಾಸವಾದರು. ತೆಹೆಲ್ಕಾ ಹಗರಣ, ಕಾರ್ಗಿಲ್ ಶವಪೆಟ್ಟಿಗೆ ಹಗರಣ, ಬರಾಕ್ ಮಿಸೈಲ್ ಹಗರಣ ಹೀಗೆ ಸಾಲು ಸಾಲು ಹಗರಣಗಳಲ್ಲಿ ಇವರ ಹೆಸರು ಕೇಳಿ ಬಂತು. ಆದರೆ ಯಾವ ಆಪಾದನೆಗಳೂ ನಿಲ್ಲಲಿಲ್ಲ, ಹಾಕಲ್ಪಟ್ಟ ಪ್ರತಿ ಕಮಿಟಿಯೂ ಅವರನ್ನು ನಿರ್ದೋಷಿಯೆಂದು ಘೋಷಿಸಿತಾದರೂ, ಅವರು ಮೊದಲಿನ ಗತ್ತನ್ನು ಕಳೆದುಕೊಂಡಿದ್ದರು. 2009ರಲ್ಲಿ ಎಷ್ಟೇ ಬೇಡವೆಂದರೂ, ಯಾರ ಮಾತೂ ಕೇಳದೆ, ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತರು. ಆಗ ಅವರ ಸುತ್ತಲಿದ್ದವರು ಅವರನ್ನು ದುರಪಯೋಗ ಪಡಿಸಿಕೊಂಡದ್ದು ವಾಸ್ತವವೇ. ಆ ಚುನಾವಣೆಯಲ್ಲಿ ದಯನೀಯವಾಗಿ ಸೋತರು. ನಂತರ ಪಕ್ಷದೊಂದಿಗೆ ರಾಜಿಯಾಗಿ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಜಾರ್ಜ್ ಫರ್ನಾಂಡೀಸ್ ಭ್ರಷ್ಟರಾಗಿದ್ದರಾ? ಇಲ್ಲವೆನ್ನುವುದು ಬಹುತೇಕರ ಉತ್ತರ. ಹಾಗಿದ್ದರೆ ಅಷ್ಟು ಆಸ್ತಿ ಎಲ್ಲಿಂದ ಬಂತು? ಜಾರ್ಜ್ ಬೆಂಗಳೂರಿನ ಆಸ್ತಿ ಅವರ ತಾಯಿಯಿಂದ ಬಂದ ಕೌಟುಂಬಿಕ ಆಸ್ತಿ, ಇನ್ನು ದೆಹಲಿಯಲ್ಲಿರುವ ಅವರ ಎರಡು ಮನೆಗಳು ಅವರವಲ್ಲ, ಮುಂಬೈ ಟ್ರೇಡ್ ಯೂನಿಯನ್ಗಳು ತಮ್ಮ ನಾಯಕನಿಗೆ ಕೊಡಮಾಡಿದ ಉಡುಗೊರೆಗಳವು. ಇನ್ನು ಮಂಗಳುರಿನ ಮನೆ ಅವರ ತಂದೆಯದ್ದು. ಹಾಗಾದರೆ ಜಾರ್ಜ್ ಫರ್ನಾಂಡೀಸ್ ಬಿಂಬಿತವಾಗಿರುವಂತೆ ಬರಿಗೈಯ ಫಕೀರರಾ? ಹೌದು ಎನ್ನುವುದೇ ನಿಜವಾದರೆ ಅಪಾರ ಆಸ್ತಿಯ ಗುಮಾನಿ, ಈ ಕಚ್ಚಾಟ, ಇವೆಲ್ಲಕ್ಕೂ ಉತ್ತರ. ಬಹುಶಃ ಈ ಪ್ರಶ್ನೆಗಳಿಗೆ ಉತ್ತರಗಳು ಸಿಗಲಾರವು.
ಜಾರ್ಜ್ ಫರ್ನಾಂಡೀಸ್ ಹಣಕಾಸಿನ ವಿಷಯವಾಗಿ ಭ್ರಷ್ಟರಾಗದೇ ಇದ್ದಿರಬಹುದು, ಆಗಿರಬಹುದು. ಆದರೆ ಒಂದಂತೂ ನಿಜ ಅವರು ಬರಬರುತ್ತಾ ತಮ್ಮ past gloryಯ ಪ್ರಭಾವಳಿಯಲ್ಲಿ ಬದುಕುತ್ತಿದ್ದರು. ಸೈದ್ಧಾಂತಿಕವಾಗಿ ಅನೇಕ ರಾಜಿಗಳನ್ನು ಮಾಡಿಕೊಂಡಿದ್ದರು. ಅಡ್ವಾಣಿ ವಾಜಪೇಯಿಯವರ ದ್ವಿಸದಸ್ಯತ್ವವನ್ನು ಪ್ರಶ್ನಿಸಿದ ಅದೇ ಜಾರ್ಜ್ ಬಿಜೆಪಿಯಂಗಳದ troubleshooter ಆದರು. ಸಮಾಜವಾದಿಯಾಗಿ coco cola ಮತ್ತು IBMಗಳನ್ನು, ಭಾರತದಿಂದ ಓಡಿಸಿದ್ದ ಅದೇ ಜಾರ್ಜ್, ಎನ್ದಿಎ ಸರ್ಕಾರದ ಅತಿ ಉದಾರ ಆರ್ಥಿಕ ನೀತಿಯನ್ನು ಬೆಂಬಲಿಸಿದರು. nuclear disarmament ಬಗ್ಗೆ ಅರಚಾಡುತ್ತಿದ್ದ ಅದೇ ಜಾರ್ಜ್ ೧೯೯೮ರ ಪೋಖ್ರಾನ್ ಅಣು ಪರೀಕ್ಷೆಗೆ ಅಂದಿನ ರಕ್ಷಣಾ ಸಚಿವರಾಗಿ ನಾಯಕತ್ವ ವಹಿಸಿದ್ದರು. ಮಾತೆತ್ತಿದರೆ ೧೯೮೪ ಸಿಖ್ ನರಮೇಧವನ್ನು ಮುಂದುಮಾಡಿ ಕಾಂಗ್ರೆಸ್ ಅನ್ನು ಹೀಯಾಳಿಸುತ್ತಿದ್ದ ಅದೇ ಸಮಾಜವಾದಿ ಜಾರ್ಜ್ ಗೋಧ್ರ ನರಮೇಧವನ್ನು ಅದೇ ರೀತಿ ಸಂಸತ್ತಿನಲ್ಲಿ ತೀರ in-sensitive ಆಗಿ ಸಮರ್ಥಿಸಿದ್ದರು.ಒಬ್ಬ ಮನುಷ್ಯ ಮಾಗಿದಂತೆಲ್ಲ ವಿವೇಕ ಬೆಳೆಯುತ್ತದೆ. ಈ ವಿವೇಕ ಆತನ ಅನೇಕ ಅಭಿಪ್ರಾಯಗಳನ್ನು ಬದಲಿಸಬಹುದು. ಅದು ಒಳ್ಳೆಯ ಚಿಹ್ನೆಯೇ. ಆದರೆ ಜಾರ್ಜ್ ಫರ್ನಾಂಡೀಸ್ರ ವಿಷಯದಲ್ಲಿ ಎಲ್ಲೂ ಇದು ಅನುಭವ, ವಿವೇಕ ಆಗಿರಲಿಲ್ಲ, atleast ಹಾಗೆ ಕಾಣಲಿಲ್ಲ. ಬರಬರುತ್ತ ಅವರೊಬ್ಬ ಸಂಪೂರ್ಣ amoral ಅವಕಾಶವಾದಿ ರಾಜಕಾರಣಿಯಾಗಿದ್ದರು. ಎಲ್ಲದರ ವಿಚಾರದಲ್ಲೂ ಅವರು ರಾಜಿಯಾಗಿದ್ದರು. ನಂತರದ ಜಾರ್ಜ್ ಫರ್ನಾಂಡೀಸ್ ಅವರ ದೈತ್ಯಾಕಾರದ ಒಂದು ಪೇಲವ ನೆರಳಷ್ಟೆ.

ಜಾರ್ಜ್ರ ರಾಜಕೀಯ ಜೀವನ ನಮ್ಮ ದೇಶದ ಸಮಾಜವಾದಿ ಚಳುವಳಿಯ ಚರಮಗೀತೆಯಾಗಿದ್ದು, ಸ್ವಾತಂತ್ರೋತ್ತರ ರಾಜಕಾರಣದ ಅಧಃಪತನದ ದ್ಯೋತಕ. ಮೀಡಿಯಾ ಈಗಲಾದರೂ ಇವೆಲ್ಲವುಗಳ ಬಗ್ಗೆ ಒಂದು ನಿಸ್ಪಕ್ಷಪಾತ ಚರ್ಚೆ ನಡೆಸಬೇಕು. ಅದು ಅದರ ಕರ್ತವ್ಯ ಕೂಡ. ಆದರೆ ಇಂದಿನ ಮೀಡಿಯಾ ಅವರನ್ನು safe ಆಗಿ ಕಳಿಸಿಕೊಟ್ಟುಬಿಡುವ ಜರೂರಿನಲ್ಲಿದೆ. ಇದು ನಿಜಕ್ಕೂ ದುರ್ದೈವ.

One thoughts on “ಒಂಟಿ ಸಲಗ ಜಾರ್ಜ್ ಫರ್ನಾಂಡೀಸ್ ನಿಜಕ್ಕೂ ಒಂಟಿ

umesh desai said...

ಆದಿತ್ಯ ನಿವು ಹೇಳೋಹಾಗೆ ಜಾರ್ಜ ತಮ್ಮದೇ ಬಲೆಯಲ್ಲಿ ಸಿಲುಕಿ ನೇತಾಡುತ್ತಿದ್ದಾರೆ ಸಮಾಜವಾದ ಎಷ್ಟು ಅಪ್ರಸ್ತುತ ಎಂಬುದಕ್ಕೆ
ನಿದರ್ಶನರಾಗಿದ್ದಾರೆ.ಇವರ ಮೇಲೆ ತನೆ tns "ನಮ್ಮೊಳಗೊಬ್ಬ ನಾಜೂಕಯ್ಯ" ಬರೆದಿದ್ದು....

Proudly powered by Blogger
Theme: Esquire by Matthew Buchanan.
Converted by LiteThemes.com.