ಡೀಮ್ಡ್ ವಿವಿಗಳು ಡೂಮ್ಡ್ ಆದಾಗ....

ಒಟ್ಟು ದೇಶದಲ್ಲಿರುವ 130 ಡೀಮ್ಡ್ ವಿವಿಗಳ ಪೈಕಿ, ಮೂಲಭೂತ ಸೌಕರ್ಯವಿಲ್ಲದ 44 ವಿವಿಗಳ ಮಾನ್ಯತೆ ರದ್ದು - ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್

ಅಸಲಿಗೆ ದೇಶದಲ್ಲಿ ಡೀಮ್ಡ್ ವಿವಿಗಳ ಅಗತ್ಯವಾದರೂ ಏನು? ಈ ಒಂದು ವ್ಯವಸ್ಥೆಯನ್ನು ಕಿತ್ತೊಗೆಯಬೇಕು. - ಕಪಿಲ್ ಸಿಬಲ್, ಕೇಂದ್ರ ಮಾನವ ಸಂಪನ್ಮೂಲ ಸಚಿವ
ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸದ್ಯ ಇದು ಬಿಸಿಬಿಸಿಯ ಚರ್ಚೆಗೆ ಗ್ರಾಸವಾಗಿದೆ. ಈ ಅಫಿಡವಿಟ್ಟು ಮತ್ತು ಹೇಳಿಕೆಗೆ ಒಂದು ಸಣ್ಣ ಹಿನ್ನಲೆಯಿದೆ. ಈಗ್ಗೆ ಒಂದು ವರ್ಷದ ಕೆಳಗೆ ಟೈಮ್ಸ್ ನೌ ಎಂಬ ಇಂಗ್ಲೀಷ್ ಸುದ್ದಿ ವಾಹಿನಿಯೊಂದು ತಮಿಳುನಾಡಿನ ಬಾಲಾಜಿ ವೈದ್ಯಕೀಯ ಕಾಲೇಜು ಮತ್ತು ಶ್ರೀರಾಮಚಂದ್ರ ವಿವಿ ಎಂಬ ಎರಡು ಸ್ವಾಯತ್ತ ವಿವಿಗಳಿಗೆ ಭೇಟಿ ನೀಡಿ, ಸೀಟು ಕೇಳುವವರಂತೆ ನಟಿಸಿದ್ದರು. ಅಲ್ಲಿನ ಭ್ರಮಾಂಡ ಭ್ರಷ್ಟಾಚಾರವನ್ನು ಹಿಡನ್ ಕ್ಯಾಮೆರಾ ಬಳಸಿ ಹೊರಜಗತ್ತಿಗೆ ಸಾರಿದ್ದರು. ಅದು ಆಗ ದೊಡ್ಡ ಸುದ್ದಿಯಾಗಿ ಗಲಾಟೆಯಾಯಿತು. ಆ ಕೂಡಲೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಕುರಿತು ತನಿಖೆ ನಡೆಸಲು ಪಿ.ಬಿ.ಟಂಡನ್ ಅವರ ನೇತೃತ್ವದ ಸಮಿತಿ ರಚಿಸಿತು. ಯುಜಿಸಿ ಕೂಡ ಒಂದು ಸಮಿತಿ ರಚಿಸಿ ಸ್ವಾಯತ್ತತೆ ಪಡೆದ ಎಲ್ಲ ವಿವಿಗಳ ಮರುಮೌಲ್ಯಮಾಪನಕ್ಕೆ ತೊಡಗಿತು. ಈಗ ಈ ಎರಡೂ ವರದಿಗಳು ಹೊರಬಿದ್ದಿವೆ. ಯುಜಿಸಿ ಮರುಮೌಲ್ಯಮಾಪನ ನಡೆಸಿದಾಗ ಡೀಮ್ಡ್ ವಿವಿಗಳಾಗಿರಲಿಕ್ಕೆ ಅಯೋಗ್ಯವೆನಿಸಿದ 44 ವಿವಿಗಳನ್ನು ಗುರುತಿಸಿ ಅವುಗಳ ಮಾನ್ಯತೆ ರದ್ದತಿಗೆ ಶಿಫಾರಸು ಮಾಡಿದೆ. ಅದರನ್ವಯವೇ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವುದು.


ಇನ್ನು ಪಿ.ಬಿ.ಟಂಡನ್ ವರದಿ ಇಂತಹ ವಿವಿಗಳಲ್ಲಿ ನಡೆಯುತ್ತಿರುವ ಭ್ರಮಾಂಡ ಭ್ರಷ್ಟಾಚಾರ, ಶಿಕ್ಷಣದ ವ್ಯಾಪಾರೀಕರಣ ಮತ್ತು ಈ ಸಂಸ್ಥೆಗಳ ಮೇಲೆ ಸಕರ್ಾರಕ್ಕೆ ಯಾವುದೇ ಹಿಡಿತವಿಲ್ಲದಿರುವುದು ಈ ಎಲ್ಲದರ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದ್ದು, ಅವರು ಡೀಮ್ಡ್ ವಿವಿಗಳ ಪರಿಕಲ್ಪನೆಯನ್ನೇ ವಿರೋಧಿಸಿದ್ದಾರೆನ್ನಲಾಗಿದೆ. ಅದೇ ಕಪಿಲ್ ಸಿಬಲ್ ಬಾಯಲ್ಲಿ ಮುತ್ತಾಗಿ ಹೊರಹೊಮ್ಮಿರಿವುದು. ಅಸಲಿಗೆ ಡೀಮ್ಡ್ ವಿವಿಗಳೆಂದರೆ ಏನು? ಇದು ಏಕೆ, ಯಾವಾಗ ಶುರುವಾಯಿತು ಅಂತ ಕೆದಕುತ್ತಾ ಹೋದರೆ, ನಮಗೆ ಗೋಚರಿಸುವುದಿದು. ಸ್ವಾತಂತ್ರ್ಯಾ ನಂತರ ಭಾರತದ ಉನ್ನತ ಶಿಕ್ಷಣ ರಂಗದ
ಏಳ್ಗೆಗಾಗಿ 1958ರಲ್ಲಿ ಈ ಡೀಮ್ಡ್ ವಿವಿಗಳೆಂಬ ಪರಿಕಲ್ಪನೆಯನ್ನು ಪ್ರಾರಂಭಿಸಲಾಯಿತು. ಭಾರತದ ಮೊಟ್ಟಮೊದಲ ಸ್ವಾಯತ್ತ ವಿವಿ ನಮ್ಮ ಹೆಮ್ಮೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್. ನಂತರ ಹೀಗೆ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಸೇವಾ ಮನೋಭಾವದ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಸ್ವಾಯತ್ತತೆ ನೀಡಲಾಗುತ್ತಿತ್ತು. ಅಂದರೆ In only rare cases deemed university status was given – only to the institutes of excellence. ಆದರೆ ಈಗೇನಾಗಿದೆ? ಕಳೆದ ಯುಪಿಎ-1ರ ಅವಧಿಯೊಂದರಲ್ಲೇ ಅರ್ಜುನ ಸಿಂಗರು 85 ಸಂಸ್ಥೆಗಳಿಗೆ ಡೀಮ್ಡ್ ವಿವಿ ಪಟ್ಟ ಕಟ್ಟಿದ್ದಾರೆ. ಇದಕ್ಕೆ ಒಂದು ಮಾನದಂಡವಿದೆಯೇ? ಬಹುಶಃ ಅರ್ಜುನ ಸಿಂಗರಿಗೂ ತಿಳಿದಿಲ್ಲ ಅಂತ ಕಾಣುತ್ತೆ! ಈ ವಿಷಯವಾಗಿ ಭಾರೀ ಭ್ರಷ್ಟಾಚಾರ ನಡೆದಿರುವ ಆರೋಪವಿದೆ. ಅಷ್ಟೇ ಅಲ್ಲದೆ ರಾಜಕೀಯ ನಾಯಕರ ಅನೇಕ ಶಿಕ್ಷಣ ಸಂಸ್ಥೆಗಳು ಬೆಳಗಾಗುವುದರೊಳಗಾಗಿ ಡೀಮ್ಡ್ ವಿವಿಗಳಾಗಿಬಿಟ್ಟಿವೆ. ಸಮಸ್ಯೆ ಬಂದಿರುವುದೇ ಇಲ್ಲಿ.

ಒಂದು ಶಿಕ್ಷಣ ಸಂಸ್ಥೆಯನ್ನು ಡೀಮ್ಡ್ ವಿವಿ ಎಂದು ಗುರುತಿಸಿದರೆ, ಅದು ಇನ್ನು ಮುಂದೆ ತನ್ನದೇ ಕೋರ್ಸ್ಗಳನ್ನು ನಡೆಸಬಹುದು, ತನ್ನದೇ ಸಿಲಬಸ್ ರೂಪಿಸಿಕೊಳ್ಳಬಹುದು, ಮತ್ತು ತನ್ನದೇ ಡಿಗ್ರಿಗಳನ್ನೂ ಕೂಡ ನೀಡಬಹುದು. ಒಟ್ಟಾಗಿ ಒಂದು ವಿವಿಯಂತೆಯೇ ಇದೂ ಸಹ ಕಾರ್ಯ ನಿರ್ವಹಿಸುತ್ತದೆ. ಆದರೆ ಯುಜಿಸಿಯಿಂದ ಈ ಸಂಸ್ಥೆಗಳಿಗೆ ಯಾವುದೇ ಧನ ಸಹಾಯ ಬರುವುದಿಲ್ಲ. ಆದ್ದರಿಂದ ಇಲ್ಲಿ ಫೀಸ್ ವಿವಿಗಳಿಗಿಂತಲೂ ಎಷ್ಟೋ ಪಟ್ಟು ಹೆಚ್ಚಿರುತ್ತದೆ. ಆದ್ದರಿಂದ ಬಡ ಹುಡುಗರು ಇಲ್ಲಿ ಸೀಟು ಪಡೆಯುವುದು ಕನಸಿನ ಮಾತೇ ಸರಿ. ಸಮಸ್ಯೆಯೆಂದರೆ ಭಾರತದಲ್ಲಿ ಒಂದು ಉನ್ನತ ಉದ್ದೇಶಕ್ಕಾಗಿ ಶುರುವಾದ ಈ ಡೀಮ್ಡ್ ವಿವಿಗಳು ಇಂದು ಪುಡಿ ರಾಜಕಾರಣಿಗಳ ಮತ್ತು ಶಿಕ್ಷಣೋದ್ಯಮಿಗಳ ಕಿಸೆಯಲ್ಲಿವೆ. ಈ ವ್ಯವಸ್ಥೆಯ ಮೂಲ ಸಮಸ್ಯೆಯೆಂದರೆ ಒಂದು ಬಾರಿ ಡೀಮ್ಡ್ ವಿವಿ ಸ್ಥಾನಮಾನವನ್ನು ನೀಡಿದ ಮೇಲೆ ಈ ಸಂಸ್ಥೆಗಳ ಆಡಳಿತಾತ್ಮಕ ವಿಚಾರಗಳಲ್ಲಿ ಸರ್ಕಾರಕ್ಕೆ ನಯಾಪೈಸೆಯಷ್ಟೂ ಹಿಡಿತವಿಲ್ಲದಿರುವುದು. ಡೀಮ್ಡ್ ವಿವಿಗಳನ್ನೇ ಕಿತ್ತೊಗೆಯುವ ಬದಲಿಗೆ ವ್ಯವಸ್ಥೆಯಲ್ಲಿನ ಈ ಲೋಪ್ಹೋಲನ್ನು ಸರಿಪಡಿಸಿದರೂ ಸಾಕು. ಇಂತಹ ಡೀಮ್ಡ್ ವಿವಿಗಳ ಆಡಳಿತ ಮಂಡಳಿಗಳು ಫ್ಯಾಮಿಲಿ ಟ್ರಸ್ಟ್ಗಳಾಗದಂತೆ, ಜಾಗ್ರತೆ ವಹಿಸಬೇಕು. ಈ ಮಂಡಳಿಯಲ್ಲಿ ಶೇ.50ರಷ್ಟು ಮಂದಿ ಸರ್ಕಾರದ ಪ್ರತಿನಿಧಿಗಳಾಗಿರಬೇಕು. ಆಗ ಸರ್ಕಾರಕ್ಕೂ ಒಂದು ಲಂಗು-ಲಗಾಮು ದೊರೆಯುತ್ತದೆ. ಒಟ್ಟಿನಲ್ಲಿ ಡೀಮ್ಡ್ ವಿವಿಗಳ ಹೆಸರಿನಲ್ಲಿ ನಡೆಯುತ್ತಿರುವ ಶಿಕ್ಷಣದ ವ್ಯಾಪಾರೀಕರಣ ನಿಲ್ಲಬೇಕು.

ಇನ್ನು 44 ಡೀಮ್ಡ್ ವಿವಿಗಳ ಮಾನ್ಯತೆ ರದ್ದು. ಅದರಲ್ಲಿ ಜೈನ್ ಮತ್ತು ಕ್ರೈಸ್ಟ್ ಸಂಸ್ಥೆಗಳೂ ಸೇರಿದಂತೆ ನಮ್ಮ ರಾಜ್ಯದ 6 ಸಂಸ್ಥೆಗಳೂ ಸಹ ಇವೆ. ಈಗ ಇವುಗಳ ಮಾನ್ಯತೆ ರದ್ದಾದರೆ ಈ ಸಂಸ್ಥೆಗಳಲ್ಲಿ ಓದುತ್ತಿರುವ ಸುಮಾರು 2 ಲಕ್ಷ ವಿದ್ಯಾರ್ಥಿಗಳ ಗತಿಯೇನು? ಇದು ಮಿಲಿಯನ್ ಡಾಲರ್ ಪ್ರಶ್ನೆ. ಈ ಸಂಸ್ಥೆಗಳ ಡೀಮ್ಡ್ ವಿವಿ ಪಟ್ಟ ರದ್ದಾದ ಕೂಡಲೇ ಈ ಸಂಸ್ಥೆಗಳು ಸ್ಥಳೀಯ ವಿವಿಗಳಡಿಯಲ್ಲಿ ಬರುವುದರಿಂದ ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂಬುದು ಕೇಂದ್ರ ಸರ್ಕಾರದ ಸಮಜಾಯಿಷಿ. ಆದರೆ ಇದು ಅಷ್ಟು ಸುಲಭವೇ?


ಟೈಮ್ಸ್ ನೌ ಸುದ್ದಿ ವಾಹಿನಿಯವರ ಒಂದು ಸ್ಟಿಂಗ್ ಆಪರೇಷನ್ನಿಂದಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಒಂದು ಒಳ್ಳೆಯ ಚರ್ಚೆಗೆ ಮತ್ತು ಅತಿ ವಿರಳ ಎನ್ನಿಸುವಂತೆ ಕ್ರಮಕ್ಕೆ ನಾಂದಿ ಹಾಡಿದೆ. ಒಳ್ಳೆಯದೇ.

Proudly powered by Blogger
Theme: Esquire by Matthew Buchanan.
Converted by LiteThemes.com.