ರಮೇಶ್ ಕುಮಾರ್ - ಒಂದು ಕಿರು ಪರಿಚಯ

ರಮೇಶ್ ಕುಮಾರ್ ಈ ನಾಡು ಕಂಡ ಅಪುರೂಪದ ಸಜ್ಜನ, ಬುದ್ಧಿಜೀವಿ ರಾಜಕಾರಣಿಗಳಲೊಬ್ಬರು. ಅವರಿಗೆ 40 ವರ್ಷಗಳ ರಾಜಕಾರಣದ ಸುಧೀರ್ಘ ಅನುಭವವಿದೆ. ರಾಜಕೀಯದಲ್ಲಿದ್ದೂ ಇನ್ನೂ ಮೌಲ್ಯ ಸಜ್ಜನಿಕೆಗಳನ್ನು ಉಳಿಸಿಕೊಂಡು ಬಂದ ತೀರ ಅಪುರೂಪರಲ್ಲಿ ಒಬ್ಬರು. ಸಜ್ಜನಿಕೆಗಳಿಗಿಂತಲೂ ಹೆಚ್ಚಾಗಿ ಅವರು ಅವರ ರಾಜಕೀಯ ಮುತ್ಸದ್ಧಿತನ ಮತ್ತು ಬುದ್ಧಿಮತ್ತೆಗೆ ಹೆಸರುವಾಸಿ. 1994ರಲ್ಲಿ ವಿಧಾನಸಭೆಯ ಸ್ಪೀಕರ್ ಆದ ನಂತರ ಇವರ ವ್ಯಕ್ತಿತ್ವಕ್ಕೇ ಒಂದು ಮೆರುಗು ಬಂತು. ಇವರನ್ನು ರಾಜ್ಯಾದ್ಯಂತ ಒಬ್ಬ ದಕ್ಷ ನಾಯಕನಾಗಿ ಗುರುತಿಸತೊಡಗಿದ್ದು ಆ ನಂತರವೇ. ಒಂದು ಸಂದರ್ಭದಲ್ಲಿ ನಾಡಿನ ಮುಖ್ಯಮಂತ್ರಿ ಪಟ್ಟಕ್ಕೂ ಇವರ ಹೆಸರು ಕೇಳಿ ಬಂದಿತ್ತಾದರೂ ಅದು ಕೈಗೂಡಲಿಲ್ಲ.


ಇವರು ಮೂಲತಃ ಕೋಲಾರ ಜಿಲ್ಲೆಯ ಶ್ರೀನಿವಾಸಪುರದವರು. ವಿದ್ಯಾರ್ಥಿ ದಿಸೆಯಲ್ಲಿಯೇ ರಾಜಕೀಯದ ನಂಟು ಬೆಳೆಸಿಕೊಂಡ ಇವರು, ಗ್ಯಾಸ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿರುವಾಗಲೇ ಯೂತ್ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರು, ವಿದ್ಯಾರ್ಥಿ ನಾಕರಾಗಿದ್ದರು. ಇವರ ಪ್ರತಿಬೆಯನ್ನು ಗುರುತಿಸಿ ಬೆಳೆ ಸಿವರು ಈ ನಾಡು ಕಂಡ ಮತ್ತೊಬ್ಬ ಅಪುರೂಪದ ರಾಜಕಾರಣಿ ದಿ.ದೇವರಾಜ ಅರಸು. 1969ರ ಐತಿಹಾಸಿಕ ಕಾಂಗ್ರೆಸ್ ಸ್ಪ್ಲಿಟ್ನ ಸಂದರ್ಭದಲ್ಲಿ ಅರಸರ ಜೊತೆ ಗುರುತಿಸಿಕೊಂಡು ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು. ಡಿ.ಬಿ.ಚಂದ್ರೇಗೌಡರು ಯೂತ್ ಕಾಂಗ್ರೆಸ್ ಅಧ್ಯಕ್ಷರಾದಾಗ ಇವರು ಕಾರ್ಯದರ್ಶಿಗಳಾದರು. ಮುಂದೆ ಇಂದಿರಾ ಗಾಂಧಿ ಮತ್ತು ಅರಸರ ನಡುವೆ ಭಿನ್ನಾಭಿಪ್ರಾಯ ತಲೆದೋರಿದಾಗ ಇವರು ಮತ್ತೆ ತಮ್ಮ ರಾಜಕೀಯ ಗುರು ಅರಸರ ಜೊತೆ ಗುರುತಿಸಿಕೊಂಡರು.

ಅರಸರ ಸರ್ಕಾರ ಪತನವಾಗಿ ಗುಂಡೂರಾಯರ ಸರ್ಕಾರ ಬಂದಾಗ, ಬಂಗಾರಪ್ಪನವರು ಅದರ ವಿರುದ್ಧ ಬಂಡಾಯವೆದ್ದು ಕ್ರಾಂತಿರಂಗ ಕಟ್ಟಿದರು. ರಮೇಶ್ ಕುಮಾರ್ ಅದರ ಮುಂಚೂಣಿ ನಾಯಕರೆನಿಸಿಕೊಂಡರು. ನಂತರ 1983ರಲ್ಲಿ ಶ್ರೀನಿವಾಸಪುರದಂತಹ ರೆಡ್ಡಿಗಳ ಪ್ರಾಬಲ್ಯವಿರುವ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬ ಮೈನಾರಿಟಿ ಬ್ರಾಹ್ಮಣನಾಗಿ ಗೆದ್ದು ಬಂದು ಇತಿಹಾಸ ಸೃಷ್ಟಿಸಿದರು. ಅಂದಿನಿಂದ ಅವರು ಹಿಂದುರಿಗಿ ನೋಡಿದ್ದೇ ಇಲ್ಲ. 1994ರಲ್ಲಿ ಮತ್ತೆ ಜನತಾದಳ ಸರ್ಕಾರ ಬಂದಾಗ ಇವರು ಸಭಾಪತಿಯಾದರು. ಈ ನಾಡು ಕಂಡ ಅತ್ಯಂತ ಪ್ರಾಮಾಣಿಕ ಕಾಳಜಿಯುಳ್ಳ, ಸ್ವತಃ ಅತ್ಯುತ್ತಮ ಸಂಸದೀಯ ಪಟುವಾಗಿದ್ದ ರಮೇಶ್ ಕುಮಾರ್ ದಕ್ಷರೆನಿಸಿಕೊಂಡು ಹೆಸರು ಮಾಡಿದರು. ದೇವೇಗೌಡರು ಪ್ರಧಾನಿಯಾದಾಗ ನಾಡಿನ ಮುಂದಿನ ಮುಖ್ಯಮಂತ್ರಿಯಾರು ಎಂಬ ಜಿಗ್ಞಾಸೆ ಶುರುವಾದಾಗ ಕೇಳಿ ಬಂದ ಹಲವರ ಹೆಸರಿನಲ್ಲಿ ರಮೇಶ್ ಕುಮಾರ್ ಅವರದೂ ಪ್ರಮುಖ ಹೆಸರು. ಆದರೆ ಆಗ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾದರು. ನಂತರ ದಳ ಇಬ್ಭಾಗವಾದಾಗ ಹೆಗಡೆಯವರ ಸಂಯುಕ್ತ ಜನತಾದಳದಲ್ಲಿ ಗುರುತಿಸಿಕೊಂಡರು. ನಂತರ ಅಲ್ಲೂ ಕೂಡ ನೆಲೆ ಕಂಡುಕೊಳ್ಳಲಾಗದೇ ಮರಳಿ ಅವರ ರಾಜಕೀಯ ತವರು ಮನೆ ಕಾಂಗ್ರೆಸ್ಗೆ ಮರಳಿದರು. 2004ರಲ್ಲಿ ಶಾಸಕರಾದರೂ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಯಾಗಲಿಲ್ಲ. 2008ರ ಚುನಾವಣೆಗಳಲ್ಲಿ ಸೋಲುಂಡರು. ಸದ್ಯ ಇವರು ಯಾವುದೇ ಸಾರ್ವಜನಿಕ ಪದವಿಗಳನ್ನು ಹೊಂದಿಲ್ಲವಾದರೂ, ಈ ನಾಡು ಕಂಡ ಸಜ್ಜನ ಬುದ್ಧಿಜೀವಿ ರಾಜಕಾರಣಿಗಳಲ್ಲಿ ಒಬ್ಬರಾಗಿ ಅವರ ಬೆಲೆ ಅವರಿಗುಂಟು.

ಈಗ ಕಳೆದು ಹೋಗಿರುವ 70ರ ದಶಕದ ರಾಜಕೀಯ ಗಾಂಭೀರ್ಯವನ್ನು ಇನ್ನೂ ಹಾಗೇ ಉಳಿಸಿಕೊಂಡು ಬಂದಿರುವ ಅಪುರೂಪದ ರಾಜಕಾರಣಿಯಿವರು. ರಾಜಕಾರಣಿಗಳಲ್ಲಿ ಹೆಚ್ಚು ಓದಿಕೊಂಡವರು ಬಹಳ ವಿರಳ, ಅಂತಹ ಓದಿಕೊಂಡ, ಸೈದ್ಧಾಂತಿಕ ಸ್ಪಷ್ಟತೆ ಮತ್ತು ವಾಸ್ತವತೆಯ ಪರಿಜ್ಞಾನವಿರುವ ಇವರ ಶ್ರೀನಿವಾಸಪುರ ಇವರ ವ್ಯಕ್ತಿತ್ವ, ಗುಣವಿಶೇಷಗಳಿಗೆ ತದ್ವಿರುದ್ಧವಾಗಿದೆ. ಶ್ರೀನಿವಾಸಪುರ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು. ಕರ್ನಾಟಕದ ರಾಜಕಾರಣದಲ್ಲಿ ವಿರಳಾತಿವಿರಳ. ಆಂಧ್ರದಲ್ಲಿದ್ದಂತೆ ಕರ್ನಾಟಕದಲ್ಲಿ ನಿಮಗೆ ಕಾಣಸಿಗುವುದು ಎರಡೇ ಕಡೆ. ಒಂದು ಬಳ್ಳಾರಿ, ಎರಡು ಶ್ರೀನಿವಾಸಪುರ. ಈ ಎರಡೂ ಪ್ರಾಂತ್ಯಗಳೂ ಆಂಧ್ರದ ಗಡಿ ಭಾಗದಲ್ಲಿದ್ದು, ಅದರ ಪ್ರಭಾವ ಢಾಳಾಗಿ ಕಾಣಿಸುತ್ತದೆ. ಇಲ್ಲಿ ಕಳೆದ ಸುಮಾರು 35 ವರ್ಷಗಳಿಂದ ಇಬ್ಬರೇ ರಾಜಕೀಯ ನಾಯಕರು, ಒಬ್ಬರು ರಮೇಶ್ ಕುಮಾರ್, ಮತ್ತೊಬ್ಬರು ವೆಂಕಟಶಿವಾ ರೆಡ್ಡಿ. ಪಕ್ಕದ ತಮಿಳುನಾಡಿನಲ್ಲಿದ್ದಂತೆ ಇಲ್ಲಿ ಒಮ್ಮೆ ರಮೇಶ್ ಕುಮಾರ್ ಶಾಸಕರಾದರೆ, ಮತ್ತೊಮ್ಮೆ ವೆಂಕಟಶಿವಾ ರೆಡ್ಡಿ ಶಾಸಕರಾಗುತ್ತಾರೆ. ಇಲ್ಲಿ ಪಕ್ಷಗಳು ನಗಣ್ಯ. ರಮೇಶ್ ಕುಮಾರ್ ಅವರನ್ನು ಇಲ್ಲಿ ಎಲ್ಲರೂ ಸ್ವಾಮಿ ಎಂದೇ ಗುರುತಿಸುತ್ತಾರೆ. ಇಲ್ಲಿ ರೆಡ್ಡಿ ಮತ್ತು ಸ್ವಾಮಿ ಬಣಗಳ ನಡುವಿನ ಕಾಳಗ ನಿತ್ಯ ನೂತನ. ರಮೇಶ್ ಕುಮಾರ್ ಇಂಥದೊಂದು ಡೈಕಾಟಮಿಯ ನಡುವೆಯೇ ಬೆಳೆದು ಬಂದಿರುವ ರಾಜಕಾರಣಿ.

ಅವರು ಇತರೆ ಅನೇಕರಂತೆ 24 ಘಂಟೆಗಳ ರಾಜಕಾರಣಿಯಲ್ಲ. ಅವರಿಗೆ ಸಾಹಿತ್ಯ ಕಲೆಯಲ್ಲಿ ಅಪಾರ ಆಸಕ್ತಿ. ಅವರು ಸೀರಿಯಲ್ಗಳಲ್ಲೂ ನಟಿಸುತ್ತಿದ್ದಾರೆ. ಏನಾದರಾಗಲೀ ಇವರು ಮುಂದಿನ ಚುನಾವಣೆಗಳಲ್ಲಿ ಗೆದ್ದು ಬರುವ ಭರವಸೆ ಅವರಿಗಿದೆ. ಪಾಳಿಯಂತೆ ಈಗ ವೆಂಕಟಶಿವಾ ರೆಡ್ಡಿಗಳು ಶಾಸಕರಾಗಿದ್ದು, ಮೂಂದಿನ ಪಾಳಿ ಇವರದೇ! ಇಂತಿಪ್ಪ ರಮೇಶ್ ಕುಮಾರ್ ಮೊನ್ನೆ ಮಾತಿಗೆ ಸಿಕ್ಕಿದ್ದರು. ಮಲ್ಲೇಶ್ವರದ ಅವರ ಮನೆಯಲ್ಲಿ ಲೋಕಾಭಿರಾಮವಾಗಿ ಮಾತಿಗೆ ಕುಳಿತಾಗ ಮಾತನಾಡಿದ್ದನ್ನು ಈ ಭಾನುವಾರ ಪತ್ರಿಕೆಗೆ ಸಂದರ್ಶನದ ರೂಪದಲ್ಲಿ ಬರೆದಿದ್ದೇನೆ. ತಮಗೆ ಇಷ್ಟವಾದೀತು.

One thoughts on “ರಮೇಶ್ ಕುಮಾರ್ - ಒಂದು ಕಿರು ಪರಿಚಯ

umesh desai said...

ಆದಿತ್ಯ ರಮೇಶಕುಮಾರ್ ಒಂದು ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ರು ಅಂತ ನೆನಪಿದೆ ನಿಮ್ಮ ಲೇಖನದಲ್ಲಿ ಅದರ ಪ್ರಸ್ತಾಪವೆ ಇಲ್ಲ,...!

Proudly powered by Blogger
Theme: Esquire by Matthew Buchanan.
Converted by LiteThemes.com.