2009ಕ್ಕೆ ಬೇರೆ ಜೊತೆಗಾರರು ಸಿಗಲಿಲ್ಲವೇ?

2009 ಮಗುಚಿ ಬಿದ್ದಿದೆ. ಸರಿಯಾಗಿ ಒಂದು ವರ್ಷದ ಹಿಂದೆ 2008ರನ್ನು ಅತ್ಯಂತ ಉತ್ಸಾಹದಲ್ಲಿ ಕಳಿಸಿಕೊಟ್ಟಿದ್ದೆವು. ಎಂಥ ದರಿದ್ರದ ವರ್ಷ ಅದಾಗಿತ್ತು. ಭಾರತದ ಆರ್ಥಿಕ ನಾಗಾಲೋಟಕ್ಕೆ ಲಗಾಮು ಬಿದ್ದಿತ್ತು. ಜಾಗತಿಕ ಆರ್ಥಿಕ ಹಿಂಜರಿತ ಎಲ್ಲರನ್ನೂ ಹಿಪ್ಪಿ ಹಿಂಡು ಮಾಡಿ ಹಾಕಿತ್ತು. ವರ್ಷಾಂತ್ಯದಲ್ಲಿ ಮುಂಬೈ ನರಮೇಧ ನಡೆದು ಒಂದು ಆಕ್ರೋಶ, ಕೆಚ್ಚು, ಯುದ್ಧದ ಭೀತಿ, ಒಂದು ಸೂತಕದ ಛಾಯೆ ಆವರಿಸಿತ್ತು. ಸದ್ಯ ಈ ವರ್ಷ ಮುಗಿದರೆ ಸಾಕು ಎಂಬಂತಿತ್ತು ಎಲ್ಲರ ಮನಸ್ಥಿತಿ. ಆದರೆ 2009 ತಕ್ಕಮಟ್ಟಿಗೆ ಆಹ್ಲಾದಕರವಾಗೇ ಇತ್ತು, ಲೋಕಸಭೆ ಚುನಾವಣೆ ನಡೆದು ಯುಪಿಎ ಮತ್ತೆ ಅಧಿಕಾರ ಹಿಡಿಯಿತು, ಮನಮೋಹನರು ತಮ್ಮ ಸೇವೆ ಮುಂದುವರೆಸಿದರು, ಒಬ್ಬ ನೆರೆಯ ಆಂಧ್ರದ ದೊರೆ ವೈ.ಎಸ್.ಆರ್. ತೀರಿಕೊಂಡು ಬಿಟ್ಟರು. ಆಂಧ್ರ ರಾಜಕೀಯ ಅತಂತ್ರತೆ ಬಿದ್ದು ಬಿಟ್ಟಿತು, ಅದು ಬಿಟ್ಟರೆ ಎಲ್.ಕೆ.ಅದ್ವಾನಿಯವರ ಸುದೀರ್ಘ ರಾಜಕೀಯ ಜೀವನಕ್ಕೆ ಚರಮಗೀತೆ ಹಾಡಲಾಗಿತ್ತು. ಇವು ಬಿಟ್ಟರೆ ಅಂಥ ನಾಟಕೀಯ ಬೆಳವಣಿಗೆಗಳೇನೂ ನಡೆಯಲಿಲ್ಲ. ವರ್ಷದ ಕೊನೆಯಲ್ಲಿ ಎಲ್ಲ ಪತ್ರಕರ್ತರೂ 2009ರ ರಿವ್ಯೂಗೆ ಕೂತಿದ್ದರು ವಿಶೇಷಾಂಕಗಳನ್ನು ಹೊರತಂದರು, ಎಲ್ಲೂ ಸೂತಕ, ವಿಷಾದ ಇರಲಿಲ್ಲ. ಆದರೆ 2009ರ ಸೆರಗಿನಲ್ಲಿ ಇನ್ನು ಏನೋ ಇತ್ತು.
ಅವತ್ತು ಡಿಸೆಂಬರ್ 29. ಎಲ್ಲರೂ ಡಿಸೆಂಬರ್ 31ರ ಪಾರ್ಟಿಗೆ ಪ್ಲಾನು ಮಾಡುತ್ತಾ ಕೂತಿದ್ದರು. ಆಗ ಬರಸಿಡಿಲನಂತೆ ಬಂದೆರಗಿತ್ತು ಆ ಸುದ್ದಿ. ಸಿ.ಅಶ್ವತ್ಥ್ ಇನ್ನಿಲ್ಲ! ತಿಂಗಳ ಹಿಂದೆಯಷ್ಟೇ ದೊಡ್ಡದೊಂದು ಆರ್ಭಾಟದೊಂದಿಗೆ ಒಂದು ಅತ್ಯುತ್ತಮ ಕಾರ್ಯಕ್ರಮ ನೀಡಿ ಯಾಕೋ ಹೊಟ್ಟೆ ನೊವು ಅಂತ ಆಸ್ಪತ್ರೆ ಸೇರಿದವರು ಮತ್ತೆ ಮನೆಗೆ ಬರಲೇ ಇಲ್ಲ. ಅವರಿಗೆ ಲಿವರ್ ಸಿರೊಸಿಸ್ ಆಗಿತ್ತು, ಕಿಡ್ನಿ ಕೈಕೊಟ್ಟಿತ್ತು. ಅವರು ಆಸ್ಪತ್ರೆಯಲ್ಲಿದ್ದಷ್ಟೂ ದಿನ ಒಂದೊಂದು ರೀತಿಯ ಸುದ್ದಿ ಬರುತ್ತಿತ್ತು. ಇನ್ನು ಕಷ್ಟ, ಬರುವುದು ಅನುಮಾನ, ಏ ಇಲ್ಲ ಅಶ್ವತ್ಥ್ ಅದನ್ನೆಲ್ಲಾ ಸುಳ್ಳು ಮಾಡಿ ಅವರ 70 ವರ್ಷದ ಹುಟ್ಟಿದಹಬ್ಬದ ಕಾರ್ಯಕ್ರಮಕ್ಕೆ ಬಂದೇ ಬಿಡುತ್ತಾರೆ, ಏರು ಸ್ವರದಲ್ಲಿ ಹಾಡಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತಾರೆ. ಹೀಗೆ ಸಾಗಿತ್ತು ಮಾತು. ಆದರೆ ಅವರು ತಮ್ಮ 70 ವರ್ಷದ ಹುಟ್ಟಿದ ಹಬ್ಬದ ದಿನವೇ ಇಹಲೋಕದ ಘಡತ್ತಾದ ಭೋಜನ ಮುಗಿಸಿ ಕೈತೊಳೆದೆದ್ದು ಬಿಟ್ಟರು ಅಶ್ವತ್ಥ್! ಅವರ ಭೋಜನ ಪ್ರೀತಿ ಬಲ್ಲವರಿಗೆ ಈ ಉಪಮೆ ಅಶ್ವಥರಿಗೆ ಅನ್ವರ್ಥ ಅನಿಸದಿರದು. ಕನ್ನಡದ ಸಾರಸ್ವತ ಲೋಕ ಒಬ್ಬ ಪ್ರಯೋಗಕರ್ತನನ್ನು, ಒಬ್ಬ perfectionistನ್ನು, ಅಸಾಧ್ಯ ಗಾತ್ರದ ಮಹಾ ಗಾಯಕನನ್ನು ಕಳಕೊಂಡು ಬಡವಾಗಿಬಿಟ್ಟತು. ಸುಗಮ ಸಂಗೀತ ಕ್ಷೇತ್ರವಂತೂ ಒಬ್ಬ ಆದ್ಯ ಪ್ರವರ್ತಕನನ್ನು, ಹಿರಿಯಣ್ಣನನ್ನು ಕಳಕೊಂಡು ಅನಾಥವಾಗಿಬಿಟ್ಟಿತು. ಹೊಸ ವರ್ಷದಲ್ಲೊಂದು ಸೂತಕದ ಕಳೆ ನಿಂತು ಬಿಟ್ಟಿತು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ. ಕನ್ನಡ ಸಾರಸ್ವತ ಲೋಕಕ್ಕೆ ಇನ್ನೊಂದು ಮಹಾಸೂತಕ ಜೊತೆಯಾಗುವುದಿತ್ತು.ಅಶ್ವತ್ಥ್ರಿಗೆ ವಿದಾಯ ಹೇಳಿ ಮಲಗಿದ್ದ ಕನ್ನಡ ಮನಸ್ಸು ಬೆಳಿಗಾಗೇಳುವಷ್ಟರಲ್ಲಿ ಮತ್ತೊಂದು ಸಾವಿನ ಸುದ್ದಿ ಕೇಳಬೇಕಾಯಿತು. ಬರ ಸಿಡಿಲನಂತೆ ಬಂದು ಎರಗಿತ್ತು ಸುದ್ದಿ. ಕನ್ನಡ ಚಿತ್ರರಂಗದ ಯಜಮಾನ ವಿಷ್ಣುವರ್ಧನ್ ಅಶ್ವತ್ಥರನ್ನು ಹಿಂಬಾಲಿಸಿಬಿಟ್ಟಿದ್ದರು! ವಿಷ್ಣು ಯಾರ್ಯಾರಿಗೂ ಸುಳಿವು ನೀಡದೆ ಕೇವಲ 59 ವರ್ಷಕ್ಕೆ ಇಹಲೋಕದ ಯಾತ್ರೆ ಮುಗಿಸಿದ್ದರು! ವಿಷ್ಣು ಅವರ ಸಾವಿನ ಸುದ್ದಿಯನ್ನು ಮೊದಲಿಗೆ ಯಾರ್ಯಾರೂ ನಂಬಲೇ ಇಲ್ಲ. ಛೇ, ಇದೆಂಥ ರೂಮರು, ಅನ್ನೋದೇ ಬಹುತೇಕರ ಪ್ರತಿಕ್ರಿಯೆಯಾಗಿತ್ತು. ಆದರೆ ಅದು ರೂಮರಾಗಿರಲಿಲ್ಲ ಎಂಬುದು ಕನ್ನಡ ನಾಡಿನ ದುರ್ದೈವವಾಗಿತ್ತು. ಹೌದು ಎಂದಿನ ರೂಢಿಯಂತೆ ಮೈಸೂರಿಗೆ heart ಚೆಕಪ್ಗೆಂದು ಹೋಗಿದ್ದ ವಿಷ್ಣು, ರಾತ್ರಿ 2:20ಕ್ಕೆ ಹೃದಯಘಾತವಾಗಿ ತಮ್ಮ ನೆಚ್ಚಿನ kings court ಹೋಟೆಲಿನಲ್ಲಿಯೇ ಉಸಿರು ಚೆಲ್ಲಿಬಿಟ್ಟರು. ಕನ್ನಡ ನಾಡು ವಿಷಾದಕ್ಕೂ ಮೊದಲು ಒಂದು ದಿಗ್ಭ್ರಮೆಯಲ್ಲಿ ಮುಳುಗಿ ಹೋಯಿತು. ಯಾರಿಗೂ ವಿಷ್ಣು ನಮ್ಮನ್ನಗಲಿದ್ದಾರೆಂಬುದು ಸರಿಯಾಗಿ ಮನಸ್ಸಿನಲ್ಲಿ ನಾಟುತ್ತಲೇ ಇರಲಿಲ್ಲ. ಇಂದಿಗೂ ಬಹುತೇಕರಿಗಿದು ನಿಜವೇ ಸರಿ. ಏನು ವಿಷ್ಣು ಹೋಗಿಬಿಟ್ಟರಾ? ಅದು ಹೇಗೆ ಸಾಧ್ಯ? ಆದರೆ ವಿಧಿಯಾಟದ ಮುಂದೆ ಇದೆಲ್ಲವೂ ಯಾವ ಲೆಕ್ಕ. ವಿಷ್ಣು ಪಂಚಭೂತಗಳಲ್ಲಿ ಲೀನವಾಗೇ ಹೋದರು. ರಾಜಕುಮಾರ್ರನ್ನು ಕಳೆದುಕೊಂಡದ್ದನ್ನು ಇನ್ನೂ ಅರಿಗಿಸಿಕೊಳ್ಳುತ್ತಿದ್ದ ಕನ್ನಡ ಚಿತ್ರರಂಗ ಯಜಮಾನನ್ನು ಕಳೆದುಕೊಂಡುಬಿಟ್ಟಿತು. ಇರುವ ಸಂಕಷ್ಟಗಳ ಸರಮಾಲೆಗೆ ಸೂತಕದ ಹಾರ.

ಎರಡೇ ದಿನಗಳ ಅಂತರದಲ್ಲಿ ಕನ್ನಡ ಕಲಾ ರಸಿಕರ ಹೃದಯ ಸಿಂಹಾಸನವೇರಿದ್ದ ಇಬ್ಬರು ಅಪ್ಪಟ ಕಲಾವಿದರನ್ನು ಕಳೆದುಕೊಂಡು ಕನ್ನಡ ಸಾರಸ್ವತ ಲೋಕ ನಿಸ್ತೇಜಗೊಂಡು ಬಿಟ್ಟದೆ. ನಾಡು ಬಡವಾಯಿತು, ಅವರು ಹಾಗಿದ್ದರು ಹೀಗಿದ್ದರು, ಎಂದು ತುತ್ತೂರಿಯೂದುವುದಕ್ಕಿಂತಲೂ ಅವರು ಹಾಕಿಕೊಟ್ಟ ದಾರಿಯಲ್ಲಿ ಮುಂದಿನ ಪೀಳಿಗೆಯವರು ನಡೆದು, ಅವರ ಪರಂಪರೆಯನ್ನು ಮುಂದುವರೆಸುವುದು ಅವರಿಗೆ ನಾವು ಸಲ್ಲಿಸುವ ಸಾರ್ಥಕ ನಿವಾಳಿಯಾಗುತ್ತದೆ.

2009 ಮಗುಚಿ ಬಿದ್ದಿದೆ. 2010ರ ಸೂರ್ಯನಿಗೂ ಸೂತಕದ ಛಾಯೆ. ಅಲ್ಲ 2009ಕ್ಕೆ ಬೇರೆ ಜೊತೆಗಾರರು ಸಿಗಲಿಲ್ಲವೆ?

2 thoughts on “2009ಕ್ಕೆ ಬೇರೆ ಜೊತೆಗಾರರು ಸಿಗಲಿಲ್ಲವೇ?

umesh desai said...

ಆದಿತ್ಯ ಭಾಳ ಆಶಾಹುಟ್ಟಿಸಿದ ವರ್ಷ ಹಿಂಗ ಮುಗೀತದ ಅಂತ ಯಾರೂ ಊಹಿಸಿರಲಿಲ್ಲ
ಸಧ್ಯ ಮುಗೀತಲ್ಲ....!

BK. said...

sogasaagi baredu kanniru tarisidiri.. bandavarella nadeyalebeku nammaya baalina yaatreyali antaaralla haage... aadi naanu ondu major operationge olagaagtidini. . i love ur writing... aditya, PATRAKARTARU, sampaadakaru raajya sarkkaarada trannsfers nalli kai aadisttarante... ivarige bareyo, anno naitika hakku ideya... bariri. nanage surgery ge gd lk heli

Proudly powered by Blogger
Theme: Esquire by Matthew Buchanan.
Converted by LiteThemes.com.