ದುಡ್ಡಿದ್ದವರ ದವಲತ್ತು ನಡೆಯೋದಿಲ್ಲ ಯಾವತ್ತೂ..

ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಪ್ರಜಾತಂತ್ರ ಅನ್ನೋದು ಹಾಸ್ಯಾಸ್ಪವೆನಿಸಿಬಿಟ್ಟಿದೆ. ಇವತ್ತು ರಾಜಕೀಯಕ್ಕೆ ಇಲ್ಲ ದುಡ್ಡಿರಬೇಕು, ಇಲ್ಲ ಒಂದು ಕುಟುಂಬದ ಹೆಸರಿರಬೇಕು ಇಲ್ಲ ಕನಿಷ್ಠ ಜಾತಿ ಬೆಂಬಲವಾದರೂ ಇರಬೇಕು. ಹೀಗಾದರೆ ನೈಜ ತಳಮಟ್ಟದ ರಾಜಕೀಯ ನಶಿಸಿ ಹೋಗುವುದಿಲ್ಲವೇ?
- ಯಾವುದೋ ಕೆಲವು ಘಟನೆಗಳಿಂದ, ಚಳುವಳಿಗಳಿಂದ ಪ್ರಭಾವಿತರಾಗಿ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳಬೇಕೆಂದು ಬಂದರೆ ಅವರ ಆಲೋಚನೆಗಳು ಒಂದು ರೀತಿಯಿರುತ್ತದೆ, ಇಲ್ಲ ಇಲ್ಲಿ ಸಿಗುವ ಸವಲತ್ತು, ಶ್ರಮವಿಲ್ಲದೆ ಜೀವನ ರೂಪಿಸಿಕೊಳ್ಳಲು ಇರುವ ಸುಲಭ ಮಾರ್ಗೋಪಾಯಗಳನ್ನು ನೋಡಿ ಬರುವವರ ಆಲೋಚನೆ ನಡೆನುಡಿಗಳು ಒಂದು ತೆರನಾಗಿರುತ್ತವೆ. ಈ ನಡುವೆ ಸೇವಾ ಮನೋಭಾವವಲ್ಲದೆ ಇಂತಹ ವ್ಯಾಪಾರೀ ಮನೋಭಾವದಿಂದ ರಾಜಕೀಯಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೀಗನ್ನಿಸುತ್ತದೆ. ರಾಜಕೀಯದಲ್ಲಿ ಹೀಗೆ ಒಂದು ಘಟ್ಟ ಬರುತ್ತದೆ, ಬಂದಿದೆ. ಇದರ ಮೂಲ ಅರಸುತ್ತಾ ಹೋದರೆ ಯುಎಸ್ಎಸ್ಆರ್ ಪತನಗೊಂಡು ಜಗತ್ತಿನೆಲ್ಲೆಡೆ ಉದಾರವಾದದ ಹೆಸರಿನಲ್ಲಿ ಕಾಂಚಾಣ ತಾಂಡವವಾಡತೊಡಗಿದ್ದಲ್ಲಿಗೆ ಹೋಗುತ್ತೇವೆ. ಇದೂ ಒಂದು ಘಟ್ಟ ಅಷ್ಟೆ. ಚಕ್ರ ಮತ್ತೆ ಉರುಳೇ ಉರುಳುತ್ತದೆ.
ಕರ್ನಾಟಕ ಮೊದಲಿಂದಲೂ ಸಜ್ಜನ ಮೌಲ್ಯಯುತ ರಾಜಕಾರಣಕ್ಕೆ ಹೆಸರು. ಆದರೆ ಇತ್ತೀಚೆಗೆ ಕರ್ನಾಟಕದ ರಾಜಕಾರಣವನ್ನು `ಕರೋ ನಾಟಕ್' ಎಂದು ಲೇವಡಿ ಮಾಡುತ್ತಾರೆ. ರಾಜ್ಯ ರಾಜಕಾರಣ ಯಾಕೆ ಹೀಗೆ ಪನತವಾಗುತ್ತಾ ಬಂದಿದೆ?
- ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಕನಾಟಕದಲ್ಲೂ ಇದು ಇತ್ತೀಚಿನ ಬೆಳವಣಿಗೆಯೇನಲ್ಲ. 79-80ರಲ್ಲಿ ದೇವರಾಜ ಅರಸರ ಸರ್ಕಾರ ಪತನವಾದ ನಂತರ ಉದ್ಭವಸಿದ ಸರ್ಕಾರ ಜನಮತ ಪಡೆದ ಸರ್ಕಾರವಾಗಿರಲಿಲ್ಲ. ಆಗಲೇ ಕರ್ನಾಟಕದಲ್ಲಿ ಈ ಸ್ಟಾಪ್ ಗ್ಯಾಪ್ ವ್ಯವಸ್ಥೆಗಳು, ಇತರೆ ಲಾಬಿಗಳಿಂದ ಅಥವಾ ಕಾಣದ ಕೈಗಳಿಂದ ನಿರ್ದೇಶಿಸಲ್ಪಟ್ಟ ಸರ್ಕಾರಗಳೂ ಅಸ್ತಿತ್ವಕ್ಕೆ ಬರಲಾರಂಭಿಸಿದವು. ಆ ನಂತರ ಬಂದ ಯಾವುದೇ ಸರ್ಕಾರ ನೀತಿ ನಿರ್ದೇಶನದ ವಿಚಾರದಲ್ಲಾಗಲೀ, ಇಲ್ಲ ಜನರ ವಿಶ್ವಾಸ ಗಳಿಸಿ ಜನರ ಮನಸ್ಸಿನ ಕನ್ನಡಿಯಂತಿರುವುದರಲ್ಲಿ ವಿಫಲವಾಗಿವೆ. ಇದು ಒಬ್ಬ ಸಾಮಾನ್ಯ ಪ್ರಜೆಯಾಗಿ, ರಾಜಕೀಯ ಕಾರ್ಯಕರ್ತನಾಗಿ ನನ್ನ ಅಭಿಪ್ರಾಯ.

ಮೊದಲಿಗೆ ದುಡ್ಡಿದ್ದವರದು ಒಂದು ಲಾಬಿ ಅಂತ ಇತ್ತು ಅಷ್ಟೆ, ಆದರೆ ಈಗ ಅವರೇ ರಾಜಕೀಯ ನಾಯಕರಾಗುತ್ತಿದ್ದಾರೆ. ಮೇಲ್ಮನೆ ಚುನಾವಣೆಗಳಲ್ಲೂ ಈ ಪಾಟಿ ದುಡ್ಡು, resort ರಾಜಕಾರಣ ಕಂಡಿದ್ದು ಇದೇ ಮೊದಲಿರಬೇಕು...
- ಮೊದಲಿಗೆ ದುಡ್ಡಿದ್ದವರು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತಿದ್ದರು. ಇಬ್ಬರೂ ಲೆಕ್ಕ ಬರೆದಿಡುತ್ತಿದ್ರು, ಇಬ್ಬರಿಗೂ ಗೌರವಯುತವಾಗಿರುತ್ತಿತ್ತು. ಕಾಂಗ್ರೆಸ್ ಪಕ್ಷದ ಖಜಾಂಜಿ ಆಗೋಕ್ಕೆ, ಅತ್ಯಂತ ಸಜ್ಜನ, ಪ್ರಾಮಾಣಿನನ್ನು ಹುಡುಕುತ್ತಿದ್ದರು. ಆತ ಬಡವನಾದರೂ ಸರಿ. ಆದರೆ ಬರಬರುತ್ತಾ ಯಾರಿಗೆ ಹಣ ಸಂಗ್ರಹಿಸುವ ತಾಕುತ್ತಿದೆಯೋ ಅವರನ್ನು ಖಜಾಂಚಿಯಾಗಿ ನೇಮಿಸ ತೊಡಗಿದರು. ಲೆಕ್ಕ ಬರೆಯುವ ರೂಢಿಯೇ ತಪ್ಪಿ ಹೋಯಿತು. ಹಲವಾರು ಕನ್ಸಿಡರೇಷನ್ಗಳಿಗಾಗಿ ವ್ಯಾಪಾರವೇತ್ತರನ್ನು ವಿಧಾನ ಮಂಡಲಕ್ಕೋ, ರಾಜ್ಯಸಬೆಗೋ ನೇಮಿಸುವ ಕೆಲಸವಾದಾಗಲೂ ನಾವೆಲ್ಲಾ ಸುಮ್ಮನಿದ್ದೆವು. ಇಂಥ ಸಣ್ಣ ಸಣ್ಣ ತಪ್ಪುಗಳನ್ನು ನಾವು ಆಗ ಪ್ರತಿಭಟಿಸಲಿಲ್ಲ. ಇದು ಕ್ಯಾನ್ಸರ್ ಇದ್ದ ಹಾಗೆ. ಸಣ್ಣದಿದ್ದಾಗ ನಾವು ಗಮನಿಸಲಿಲ್ಲ, ನೀವೀಗ ಇದು ಉಲ್ಬಣಾವಸ್ಥೆ ತಲುಪಿರುವುದನ್ನು ನನಗೆ ತಿಳಿಸುತ್ತಿದ್ದೀರ. ಇಂದು ಇವರೇ ಪಕ್ಷಗಳನ್ನು ನಿಯಂತ್ರಿಸಿ ನಡೆಸುತ್ತಿದ್ದಾರೆ. ಇಂದು ಬಹುತೇಕ ಎಲ್ಲ ರಾಜಕೀಯ ಪಕ್ಷಗಳನ್ನೂ ನಾವು ಎಂಎನ್ಸಿಗಳಂತೆ ನಡೆಸುತ್ತಿದ್ದೇವೆ. ಜನನಾಯಕರ ಕಾಲ ಎಂದೋ ಮುಗಿದು ಹೋಯಿತು. ಅದು ಸ್ವಾತಂತ್ರ್ಯ ಸಂಗ್ರಾಮದ ಸಂತರಂತಹ ನಾಯಕರಿಗೇ ಕೊನೆಗೊಂಡಿತು. ನಂತರ ಬಂದವರಾರೂ ಜನನಾಯಕರಲ್ಲ, ನಾನೂ ಸೇರಿ ಜನಪ್ರತಿನಿಧಿಗಳು ಅಷ್ಟೆ. leaders today are gradually being replaced by gang-leaders. ಗ್ಯಾಂಗ್ನ ಅರ್ಥವನ್ನು ನಾನು ನಿಮಗೇ ಬಿಡುತ್ತೇನೆ.

ರೆಡ್ಡಿಗಳು ಕರ್ನಾಟಕಕ್ಕೆ ತಂದಿರುವ ರಾಜಕೀಯ ಸಂಸ್ಕೃತಿಯ ಬಗ್ಗೆ ನಿಮ್ಮ ಅಭಿಪ್ರಾಯ.
- ಹೆಸರು ಹಿಡಿದು ಆಪಾದನೆಗಳನ್ನು ಮಾಡುವುದು ಈವತ್ತು ಅಭ್ಯಾಸವಾಗಿಬಿಟ್ಟಿದೆ. ಹೀಗೆ ಹಣವಂತರು ರಾಜಕೀಯದಲ್ಲಿ ಮೆರೆಯುತ್ತಿರುವುದು ಇದೇ ಮೊದಲಲ್ಲ. ಹಿಂದೆ ಅನೇಕ ಸಕರ್ಾರಗಳಲ್ಲಿ ಕ್ಯಾಬಿನೆಟ್ ಮೀಟಿಂಗ್ನ ಅಜೆಂಡಾವನ್ನು ಹೀಗೆ ಹಿಂದೆ ನಿಂತು ನಯಂತ್ರಿಸುತ್ತಿದ್ದ ಹಣವಂತರು ನಿರ್ಣಯಿಸುತ್ತಿದ್ದದ್ದನ್ನೂ ನಾನು ಬಲ್ಲೆ. ಈಗ ಇವರನ್ನು ಟಿಕಿಸುತ್ತಿರುವವರೆಲ್ಲಾ ಅವರಿಗೇ ಪ್ರಶ್ನೆ ಹಾಕಿಕೊಳ್ಳಬೇಕು. ಅವರು ಅಧಿಕಾರದಲ್ಲಿದ್ದಾಗ ಇಂಥವರ ಪ್ರಮೇಯವೇ ಇರಲಿಲ್ಲವೇ? ಹಾಗಾದರೆ ಇಷ್ಟು ಖಾಸಗೀ ಕಾಲೇಜುಗಳು ಹೆಗೆ ಬಂದವು, ಈ ಗಣಿಗಳಿಗೆ ಪರವಾನಗಿ ಕೊಟ್ಟವರಾರು? ಈಗ ಇವರು ಚುನಾವಣೆಗಳಿಗೆ ನಿಲ್ಲುತ್ತಿದ್ದಾರೆ, ಪಕ್ಷವನ್ನು ಬಹಿರಂಗವಾಗೇ ನಿಯಂತ್ರಿಸುತ್ತಿದ್ದಾರೆ. ಇವರ ತೋರ್ಪಡಿಕೆ, ಉರವಣಿಗೆ ಜಾಸ್ತಿಯಾಗಿರುವುದರಿಂದ ಎಲ್ಲರಿಗೂ ಹಾಗೆ ಕಾಣಿಸುತ್ತಿದೆ ಅಷ್ಟೆ. I am in no way defending them.ಅವರು ನಡೆಸುತ್ತಿರುವ ವ್ಯಾಪಾರ, ಕೊಳ್ಳೆ ಹೊಡೆಯುತ್ತಿರುವುದು ಎಲ್ಲವೂ ಅನೈತಿಕವೇ ಸರಿ. ನಾನು ಅದನ್ನು ಸರ್ವಥಾ ಖಂಡಿಸುತ್ತೇನೆ. ಸೈದ್ಧಾಂತಿಕ ಅಸ್ಪಷ್ಟತೆಯಿರುವವರು ಮಡುವ ಬಾಲಿಶ ವರ್ತನೆಯಿದು. ನೀತಿ ನಿರೂಪಣೆಯಲ್ಲಿ ಬಿಗುವಿದ್ದರೆ ಇವರು ಹೇಗೆ ಈ ಮಟ್ಟಕ್ಕೆ ಬೆಲೆಯುತ್ತಿದ್ದರು? ಯಾವುದೇ ಪಕ್ಷವನ್ನು ಅಥವಾ ಸರ್ಕಾರವನ್ನು ಕಾಣದ ಕೈಗಳು ಹಿಂದಿನಿಂದ ನಿಯಂತ್ರಿಸುವುದು ಸರ್ವಥಾ ತಪ್ಪು. ಸಾರ್ವಜನಿಕ ಜೀವನದಲ್ಲಿರುವವರಿಗೆ ಜನತೆಯ ಭಯವಿರಬೇಕೇ ಹೊರತು ಮತ್ತೊಬ್ಬರ ಮರ್ಜಿ ಸಲ್ಲದು.

ಕಾಂಗ್ರೆಸ್ನಲ್ಲಿ ಆ ವಿರೋಧ ಪಕ್ಷದ ಕೆಚ್ಚಿಲ್ಲವೇಕೆ? ಕಾಂಗ್ರೆಸ್ ಯಾಕೆ ಹೋರಾಡಿ ಅಧಿಕಾರ ಗಳಿಸಲು ಪ್ರಯತ್ನಿಸುತ್ತಿಲ್ಲ? ಈಗಲೂ ಈ ಸರ್ಕಾರದ ಪಾಪದ ಕೊಡ ತುಂಬಲಿ, ಆಗ ಜನರಿಗೆ ಬೇರೆ ಆಯ್ಕೆಗಳೇ ಇರುವುದಿಲ್ಲ, ನಾವೇ ರಾಜರು ಅನ್ನುವ ರೀತಿಯಿದೆ ಕಾಂಗ್ರೆಸ್ ವರ್ತನೆ...
- ಅಧಿಕಾರ ಮನುಷ್ಯನಿಗೆ ಅರಿವಿಲ್ಲದೆಯೇ ಆತನನ್ನು ಭೋಗ ಜೀವಿಯನ್ನಾಗಿ ಮಾಡಿಬಿಡುತ್ತದೆ. ಸಿಕ್ಕ ಸವಲತ್ತು, ಹಣವನ್ನು ಯಾರೂ ಕಳೆದುಕೊಳ್ಳಲು ಸಿದ್ಧರಿರುವುದಿಲ್ಲ. 1978-79ರ ಹಿಂದೆ ವಿರೋಧ ಪಕ್ಷಗಳ ಗುಣಮಟ್ಟ ಅತ್ಯುತ್ತಮವಾಗಿತ್ತು. ಗೋಪಾಲಗೌಡರು, ಚೆನ್ನಬಸಪ್ಪನೋರು, ಸಿದ್ಧವೀರಪ್ಪನೋರು, ಅಜಿತ್ ಸೇಠರು, ದೇವೇಗೌಡರು ಎಲ್ಲ ಮಹಾನುಭಾವರೂ ಇದ್ದರು. ಆದರೆ ಅರಸು ಸರ್ಕಾರದ ಪತನದ ನಂತರ ಪಕ್ಷಗಳಲ್ಲಿ ಪಕ್ಷಾಂತರದ ಕಲಬೆರೆಕೆ ಪ್ರಾರಂಭವಾಯಿತು. ಜನತಾ ಪಕ್ಷ ಇನ್ನೇನು ತಾವು ಅಧಿಕಾರಕ್ಕೆ ಬಂದೇ ಬಿಟ್ಟಿವಿ ಅನ್ನೋ ರೀತಿ ವರ್ತಿಸಿತೇ ಹೊರತು, ವಿರೋಧ ಪಕ್ಷವಾಗಲ್ಲ. ವಿರೋಧ ಪಕ್ಷಗಳ ಗುಣಮಟ್ಟ ಕುಸಿಯಲು ಪ್ರಾರಂಭಿಸಿದ್ದು ಈ ದಿಸೆಯಲ್ಲಿ. ನಂತರದ ಕಾಲಘಟ್ಟದಲ್ಲಿ ಹೊಸ ರಾಜಕೀಯ ಪೀಳಿಗೆಯೊಮದು ಅಧಿಕಾರದ ರುಚಿ ನೋಡಿತು, ಅವರೂ ಭ್ರಷ್ಟರಾದರು. ಭ್ರಷ್ಟತೆ, ನೈತಿಕತೆ ಮತ್ತು ಹೋರಾಟಗಳು ಒಂದೆಡೆಯಿರುವುದು ದುಸ್ಸಾಧ್ಯ. ಹಾಗಾಗಿ ಈಗ ವಿರೋಧ ಪಕ್ಷಗಳಿಲ್ಲ. ಈಗೇನಿದ್ದರೂ ಇರುವುವು ಹಿಂದಿನ ಆಡಳಿತ ಪಕ್ಷ, ಇಂದಿನ ಆಡಳಿತ ಪಕ್ಷ ಮತ್ತು ಮುಂಬರುವ ಆಡಳಿತ ಪಕ್ಷ ಮಾತ್ರ. ಇನ್ನು ಹೋರಾಟದ ಮಾತೆಲ್ಲಿಂದ ಬರಬೇಕು?

ಇನ್ನು ಕಾಂಗ್ರೆಸ್ ಜೆಡಿಎಸ್ ಮೈತ್ರಿಯ ವಿಷಯ. ಕರ್ನಾಟಕ ಮೊದಲಿಂದಲೂ ಕಾಂಗ್ರೆಸ್ನ ಭಧ್ರ ಕೋಟೆ. ಅಂತಹದರಲ್ಲಿ ಇಲ್ಲಿ ಕಾಂಗ್ರೆಸ್ನ ಪುನರುತ್ಥಾನಕ್ಕೆ ಜೆಡಿಎಸ್ನ ಮೈತ್ರಿ ಅನಿವಾರ್ಯವೇ? ಕಾಂಗ್ರೆಸ್ ತನಗೆ ಸ್ವಂತವಾಗಿ ಅಷ್ಟು ಶಕ್ತಿಯಿಲ್ಲವೆಂದು ಒಪ್ಪಿಕೊಂಡಂತಲ್ಲವೇ?
- ಈ ಮೈತ್ರಿಯ ವಿಷಯ ಹೈಕಮಾಂಡ್ನ ನಿರ್ಧಾರ. ಅನಿವಾರ್ಯವಾ ಅಂತ ಕೇಳಿದರೆ, ಇಲ್ಲಿ ನನ್ನ ಅಭಿಪ್ರಾಯ ಮುಖ್ಯವಾಗುವುದಿಲ್ಲ. ಅನಿವಾರ್ಯ ಅಂತ ಹೈಕಮಾಂಡ್ ತೀರ್ಮಾನಿಸಿದೆ. ಭಧ್ರಕೋಟೆಯಲ್ಲಿ ಅಭಧ್ರತೆಯಿದೆ ಎಂದೇ ಅಲ್ಲವೇ ಮೈತ್ರಿಗೆ ಮುಂದಾಗಿರುವುದು. ಈ ಚುನಾವಣೆಗಳ ಫಲಿತಾಂಶಗಳ ನಂತರ ನಾವು ನಮ್ಮ ಅಭಿಪ್ರಾಯಗಳನ್ನು ಪಕ್ಷದ ವೇದಿಕೆಯಲ್ಲಿ ವ್ಯಕ್ತಪಡಿಸುತ್ತೇವೆ. ಅಂದು ಹೇಳುವುದನ್ನು ಇಂದೇ ಹೇಳಲಿಕ್ಕೆ ಬರುವುದಿಲ್ಲ.

ಇಂದು ರಾಜ್ಯ ಕಾಂಗ್ರೆಸ್ನಲ್ಲಿ ಜನತಾ ಪರಿವಾರದ ಮಾಜಿ ನಾಯಕರೇ ತುಂಬಿ ತುಳುಕುತ್ತಿದ್ದಾರೆ. ಇವರು ಈ ಮೈತ್ರಿಯನ್ನು ಹೇಗೆ ಸ್ವೀಕರಿಸಬೇಕು? ಇವರಿಗೆ ಇರುಸುಮುರುಸಾಗಿ ಫಲಿತಾಂಶಗಳ ಮೇಲೆ ಇದು ಪ್ರಭಾವ ಬೀರುವುದಿಲ್ಲವೇ?
- ಕಾಂಗ್ರೆಸ್ನಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಇದು ಕಾಂಗ್ರೆಸ್ ಸಂಸ್ಕೃತಿ. ನೀವು ಕಾಂಗ್ರೆಸಿಗನಾಗಿದ್ದರೆ, ಆ ನಿರ್ಣಯಕ್ಕೆ ತಲೆಬಾಗಿ ಮುನ್ನಡೆಯಬೇಕು, ಇಲ್ಲವೇ ಕಾಂಗ್ರೆಸ್ನಿಂದ ಗಾಡಿ ಬಿಡಬೇಕು. ಏನೇ ಅಸಮಾಧಾನವಿದ್ದರೂ ಅದು ಪಕ್ಷದ ವೇದಿಕೆಗಳಲ್ಲೇ ಚರ್ಚೆಯಾಗಬೇಕೇ ಹೊರತು, ಪಬ್ಲಿಕ್ ಆಗಿ ಮೀಡಿಯಾಗೆ ಹತ್ತೋದು ಸಮಂಜಸವಲ್ಲ. ರಾಜಕಾರಣದಲ್ಲಿ ಎಂದೆಂದಿಗೂ ತಮಗೆ ಸರಿಹೊಂದುವಂತಹ, ತಮ್ಮ ಮನೋಭಿಷ್ಠೆಯ ನಿರ್ಣಯಗಳೇ ಆಗುತ್ತವೆ ಎಂದು ನಿರೀಕ್ಷಿಸುವುದು ತಪ್ಪು.

ದೇವೇಗೌಡರು ಇತ್ತೀಚೆಗೆ ಮತ್ತೆ ಜನತಾ ಪರಿವಾರವೆಲ್ಲಾ ಒಗ್ಗೂಡಬೇಕೆಂದು ಹೇಳುತ್ತಿದ್ದಾರೆ. ನಿಮ್ಮ ನಿಲುವೇನು? ಅದು ಕಾರ್ಯಸಾಧುವಾ?
- ದೇವೇಗೌಡರು ಹಿರಿಯ ರಾಜಕಾರಣಿಗಳಿದ್ದಾರೆ. ಜನತಾ ಪಕ್ಷವನ್ನು ಕಟ್ಟುವುದರಲ್ಲಿ ಮೊದಲಿಂದಲೂ ಅವರ ಪಾತ್ರ ಬಹಳ ಹಿರಿದು. ಅವರಿಗೆ ತಮ್ಮ ಪಕ್ಷದ ಚೆದುರಿಹೋದ ಅನೇಕ ನಾಯಕರನ್ನು ಒಗ್ಗೂಡಿಸಿ, ಪಕ್ಷವನ್ನು ಬಲವರ್ಧನೆಗೊಳಿಸುವ ಆಕಾಂಕ್ಷೆಯಿರಬಹುದು. ಅದರಲ್ಲಿ ತಪ್ಪೇನಿಲ್ಲ. ಅವರು ಯಾವ ಯಾವ ನಾಯಕರೊಂದಿಗೆ ಮಾತನಾಡಿದ್ದಾರೋ, ಏನು ಆಶ್ವಾಸನೆ ಪಡೆದಿದ್ದಾರೋ ನಾನರಿಯೆ. ನನ್ನಂತೂ ಅವರು ಸಂಪರ್ಕಿಸಿಲ್ಲ. ನನ್ನ ಮಟ್ಟಿಗೆ ಹೇಳುವುದಾದರೆ ನಾನು ಅಪ್ಪಟ ಕಾಂಗ್ರೆಸಿಗ, ನನಗೆ ರಾಜಖೀಯ ಪೂರ್ವಾಶ್ರಮಗಳಿಲ್ಲ.

ತಾವು ವಿಧಾನಸಭಾಧ್ಯಕ್ಷರಾಗಿದ್ದವರು, ಉತ್ತಮ ಸಂಸದೀಯ ಪಟುವೂ ಹೌದು. ಇತ್ತೀಚೆಗೆ ಕಲಾಪಗಳು ತೀರಾ ಸಪ್ಪೆಯಾಗುತ್ತಿದೆಯಲ್ಲಾ, ಅದರಲ್ಲೊಂದು ಗಾಂಭೀರ್ಯವೇ ಇರುವುದಿಲ್ಲ, ಯಾಕೆ ಹೀಗೆ ಕಲಾಪಗಳು ಅವಸಾನಗೊಳ್ಳುತ್ತಿದೆ?

- ನೀವು ಹೇಳಿದ ಹಾಗೆ ಮೊದಲು ಅದರಲ್ಲೊಂದು ಗಾಂಭೀರ್ಯ ಇತ್ತು. ವಿರೋಧ ಪಕ್ಷದ ನಾಯಕರನ್ನು ಸದನದಲ್ಲಿ ಎದುರಿಸುವುದು ತೀರ ಕಷ್ಟಕರವಾಗುತ್ತಿತ್ತು. ಆಗ ಅಂತಹ ನಾಯಕರಿದ್ದರು. ಹಾಗಾಗಿ ಅನನುಭವಿಗಳಿಗೆ ಮಂತ್ರಿಗಿರಿ ಕೊಡುತ್ತಿರಲಿಲ್ಲ. ಸಭೆಗೆ ಒಂದು ಬೆಲೆಯಿತ್ತು. ಎಲ್ಲರೂ ಓದಿಕೊಂಡು ಬರುತ್ತಿದ್ದರು, ಸದನದಲ್ಲಿ ಉತ್ಕೃಷ್ಟ ಮಟ್ಟದ ಚರ್ಚೆಯಾಗುತ್ತಿತ್ತು. ಆದರೆ ಈಗ ಮೊದಲ ಬಾರಿಗೆ ಶಾಸಕನಾದವನು ಕೂಡ ಮಂತ್ರಿಯಾಗುತ್ತಾನೆ. ಮೊದಲೇ ಹೇಳಿದ ಹಾಗೆ ಈಗ ವಿರೋಧ ಪಕ್ಷಗಳೇ ಇಲ್ಲ. ಎಲ್ಲವೂ ಕೂಡಾವಳಿ. ಆಗ ಎಲ್ಲದರಲ್ಲೂ ಒಂದು ಗಾಂಭೀರ್ಯವಿತ್ತು, ಅದು ಒಂದು ಕ್ರಿಕೆಟ್ ಪಂದ್ಯವಿರಬಹುದು, ಸಿನಿಮಾ ಇರಬಹುದು, ರಾಜಕೀಯವಿರಬಹುದು. ಈಗ ಎಲ್ಲೂ ಆ ಗಾಂಭೀರ್ಯವೇ ಇಲ್ಲ. ರಾಜಕಾರಣ ಎನ್ನುವುದು ಸಮಾಜದ ಪ್ರತಿಫಲನ. ಹಾಗಾಗಿ ಇಲ್ಲಿನದೂ ಅದೇ ಕಥೆ.

ತಾವು ನಾಡು ಕಂಡ ಅಪುರೂಪದ ಸಜ್ಜನ, ಬುದ್ಧಿಜೀವಿ ರಾಜಕಾರಣಿಗಳಲೊಬ್ಬರು. ನಿಮಗೆ 40 ವರ್ಷಗಳ ರಾಜಕಾರಣದ ಸುಧೀರ್ಘ ಅನುಭವವಿದೆ. ಈ ನಾಡಿನಲ್ಲಿ ಅರ್ಹರೂ ಹಾಗೆಯೇ ಎಷ್ಟೋ ಅನರ್ಹರೂ ಕೂಡ ಮಂತ್ರಿ, ಮತ್ತೊಂದೂ ಆಗಿದ್ದಾರೆ. ಆದರೆ ತಾವು ಇದುವರೆಗೂ ಕೂಡ ಒಮ್ಮೆಯೂ ಮಂತ್ರಿಯಾಗಿದ್ದಿಲ್ಲವಲ್ಲ ಏಕೆ? ತಮಗೆ ಈ ಕುರಿತು ಬೇಸರವಿಲ್ಲವೇ?

- ನಾನು ಯಾವತ್ತೂ ಮಂತ್ರಿಗಿರಿಗೆ ಅರ್ಜಿ ಹಾಕಿದವನಲ್ಲ. ನಾನು ಶಾಸಕನೋ ಮಂತ್ರಿಯೋ ಆಗಬೇಕೂಂತ ರಾಜಕೀಯಕ್ಕೆ ಬಂದವನಲ್ಲ. ಆ ಆಸೆ ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಅಷ್ಟೆ. ಸ್ವಾತಂತ್ರ್ಯ ಚಳುವಳಿಯ ಎಷ್ಟೋ ಮಹನೀಯರು ವಿದಾನಸೌಧದ ಮೆಟ್ಟಿಲನ್ನೇ ಹತ್ತಲಿಲ್ಲವಲ್ಲ, ಅವರೆಲ್ಲಾ ನಮ್ಮಂಥವರು ಶಾಸಕರಾಗಿದ್ದನ್ನು ನೊಡಿ ಏನಂದುಕೊಂಡಿರಬಹುದು. ಆದ್ದರಿಂದ ನಾನು ತೃಪ್ತ ಮಂತ್ರಿಯಾಗಲಿಲ್ಲವೆಮದು ಯಾವ ಬೆಸರವೂ ಇಲ್ಲ, ಇನ್ನು ಮುಂದೆಯೂ ಅದಕ್ಕಾಗಿ ಅಜರ್ಿ ಹಾಕುವುದಿಲ್ಲ.
(ಈ ಭಾನುವಾರದಲ್ಲಿ ಪ್ರಕಟಿತ )

Proudly powered by Blogger
Theme: Esquire by Matthew Buchanan.
Converted by LiteThemes.com.