ಅಂತೂ ಇಂತೂ ಹದಿನೇಳು ವರ್ಷಕ್ಕೆ ದಂಟು......!


ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಎರಡು ಮಹಾ ದುರಂತಗಳು. ಒಂದು ಇಂದಿರಾ ಗಾಂಧಿ ಪ್ರಜಾಪ್ರಭುತ್ವವನ್ನು ಕಾಲಡಿಯಲ್ಲಿ ತುಳಿದು ಎಮರ್ಜೆನ್ಸಿ ಹೇರಿದ್ದು. ಮತ್ತೊಂದು ಬಾಬ್ರಿ ಮಸೀದಿ ಧ್ವಂಸ. ಇವೆರಡೂ ಮಹಾದುರಂತಗಳೇ ಆಧಾರವಾಗಿ ಅನೇಕ ನಾಯಕರು ಹುಟ್ಟಿಕೊಂಡರು, ಇಡೀ ದೇಶದ ರಾಜಕೀಯ ಧೃವೀಕರಣಕ್ಕೊಳಗಾಯಿತು. ಎಮರ್ಜೆನ್ಸಿ ದೇಶದಲ್ಲಿ ಕಾಂಗ್ರೆಸ್ ವಿರೋಧಿ ರಾಜಕಾರಣಕ್ಕೆ ನಾಂದಿ ಹಾಡಿ, ಜನತಾ ಉದಯಕ್ಕೆ ಕಾರಣವಾಯಿತು. ಬಾಬ್ರಿ ಮಸೀದಿಯ ಧ್ವಂಸ ಕೂಡ ಅಷ್ಟೆ. ಭಾರತದ ರಾಜಕೀಯದಲ್ಲಿ ಅಪಾರ ಪ್ರಮಾಣದ ಧೃವೀಕರಣಕ್ಕೆ ಕಾರಣವಾಯಿತು. ಕಾಂಗ್ರೆಸ್ ವಿರೋಧಿ ರಾಜಕೀಯ ವೇದಿಕೆಗಳು ಹೋಗಿ, ಬಿಜೆಪಿಯನ್ನು ಕೋಮುವಾದಿಯನ್ನಾಗಿ ಜರಿದು ಅದರ ವಿರುದ್ಧ ಜಾತ್ಯಾತೀತ ಶಕ್ತಿಗಳೆಲ್ಲಾ ಒಂದಾಗತೊಡಗಿದವು. ಜನತಾ ಪಕ್ಷದ ಅನೇಕ ಹೋಳುಗಳು ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳತೊಡಗಿದವು. ಇಂದಿಗೂ ನಮ್ಮ ದೇಶದ ರಾಜಕಾರಣದಲ್ಲಿ ಇದು ತಥ್ಯ. ಎಮರ್ಜೆನ್ಸಿ ಇಂದು ಒಂದು ಕರಾಳ ನೆನಪು ಮಾತ್ರ. ಅದರ aftereffects ಅನ್ನು ನಾವಿಂದು ಅನುಭವಿಸುತ್ತಿಲ್ಲ. ಶಾರದಾ ಪ್ರಸಾದರು ಹೇಳಿದಂತೆ ಇಂದಿರಾ ಹೇರಿದ ಎಮರ್ಜೆನ್ಸಿ, ಮತ್ಯಾರೂ ಅತ್ತ ಯೋಚಿಸದಂತೆ ಮಾಡಿಟ್ಟಿದೆ. ಆದರೆ ಬಾಬ್ರಿ ಮಸೀದಿ ಧ್ವಂಸ ಹಾಗಲ್ಲ. ಅದು ಭಾರತದ ಜಾತ್ಯಾತೀತ ಮನಸ್ಸಿನ ಮೇಲಾಗಿರುವ ಗಾಯ. ಅದು ಇನ್ನೂ ಮಾಗಿಲ್ಲ. ಭಾರತದ ಮನಸ್ಸು ಮೊದಲಿಂದಲೂ ಜಾತ್ಯಾತೀತ ಮತ್ತು ಪರಧರ್ಮ ಸಹಿಷ್ಣು. ದೇವರು ಒಬ್ಬನೆ, ಆತನ ನಾಮ ಹಲವು, ಆತನನ್ನು ತಲುಪುವ ಮಾರ್ಗಗಳೂ ಹಲವು ಎಂಬ ನಂಬಿಕೆಯ ಮೇಲೆ ನಿಂತಿರುವ ಸಮಾಜ ನಮ್ಮದು. ಬಾಬ್ರಿ ಮಸೀದಿ ಧ್ವಂಸ ನಮ್ಮ ಸಮಾಜದ ಈ ತಳಹದಿಯನ್ನೇ ಸಾರಾಸಗಟಾಗಿ ತಿರಸ್ಕರಿಸುತ್ತದೆ. ಇದು ಮಹಾ ದುರಂತ ಅನ್ನಿಸಿಕೊಳ್ಳುವುದೇ ಈ ಕಾರಣಕ್ಕೆ. ಭಾರತದ ಮನಸ್ಸಿಗೆ ಆಗಿರುವ ಈ ಹುಣ್ಣು ಇನ್ನೂ ಮಾಗಿಲ್ಲ ಅಷ್ಟೇ ಅಲ್ಲ, ಈ ಹುಣ್ಣಿನಿಂದ ಇನ್ನೂ ಕೀವು ಸೊರುತ್ತಲೇ ಇದೆ. ಭಾರತದಲ್ಲಿ ಇಸ್ಲಾಮಿಕ್ ಜಿಹಾದ್ನ ಭಯೋತ್ಪಾದನೆ ಕಾಶ್ಮೀರದ ಗಡಿ ದಾಟಿದ್ದೇ ಬಾಬ್ರಿ ಮಸೀದಿ ಧ್ವಂಸಕ್ಕೆ ಉತ್ತರವಾಗಿ. ಅವತ್ತು ದಾವೂದ್ ಇಬ್ರಾಹಿಂ ಪಾಕಿಸ್ತಾನದ ಐಎಸ್ಐನ ಸಹಾಯದೊಂದಿಗೆ 1993ರ ಮಾರ್ಚ್ನಲ್ಲಿ ಬಾಂಬೆಯಲ್ಲಿ ಸರಣಿ ಸ್ಫೋಟ ನಡೆಸುತ್ತಾನೆ. 257 ಮಂದಿ ಬಲಿಯಾಗುತ್ತಾರೆ. ಎಲ್ಲೋ ಕಾಶ್ಮೀರದ ಕೊಳ್ಳಗಳಲ್ಲಿ ನಡೆಯುತ್ತಿದ್ದ ಭಯೋತ್ಪಾದನೆ ನಮ್ಮ ಮನೆಬಾಗಿಲಿಗೆ ಬಂದು ನಿಂತಿದೆ. ಅಂದಿನಿಂದ ಇಂದಿನವರೆಗೂ ಭಾರತದಲ್ಲಿ ನಡೆದ ದಾಳಿಗಳದೆಷ್ಟೋ? ಸತ್ತವರೆಷ್ಟೋ? ಲೆಕ್ಕವಿಟ್ಟವರಿಲ್ಲ.


6 ಡಿಸೆಂಬರ್, 1992. ಅದು ಸ್ವತಂತ್ರ್ಯ ಭಾರತದ ಇತಿಹಾಸದಲ್ಲೇ ಒಂದು ಕರಾಳ ದಿನ. ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿಯತ್ತ ಧಾವಿಸಿ ಬಂದ ಸಾವಿರಾರು ಕಾರಸೇವಕರು, ನೋಡನೋಡುತ್ತಲೇ ಇಡಿಯ ಬಾಬ್ರಿ ಮಸೀದಿಯನ್ನು ನೆಲಕ್ಕೆ ಕೆಡವಿ ಬಿಟ್ಟರು. ಅದ್ವಾನಿಯವರ ರಾಮರಥಯಾತ್ರೆ ಹಾಗೆ ಪರ್ಯಾವಸಾನಗೊಂಡಿತ್ತು. ರಾಮಜನ್ಮಭೂಮಿ ಚಳುವಳಿಯ ನಾಯಕರು, ಪೋಲೀಸರು, ಉತ್ತರ ಪ್ರದೇಶದ ಸರ್ಕಾರ, ಕೇಂದ್ರ ಸರ್ಕಾರ ಎಲ್ಲರೂ ಬೆಪ್ಪರಂತೆ(?) ನೋಡುತ್ತಾ ನಿಂತು ಬಿಟ್ಟಿದ್ದರು. ಮೊದಲ ತಲೆದಂಡ ಇದೆಲ್ಲದಕ್ಕೂ ಸಾಥ್ ಕೊಟ್ಟಿದ್ದ, ನಡೆದ ನಂತರ ವೀರಾವೇಶದ ಭಾಷಣ ಮಾಡಿದ್ದ ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ರದು. ನಂತರ ರಾಮಜನ್ಮಭೂಮಿ ಚಳುವಳಿಯ ಅನೇಕ ನಾಯಕರನ್ನು ಜೈಲಿಗಟ್ಟಲಾಯಿತಾದರೂ, ಕೂಡಲೇ ಅವರೆಲ್ಲ ಹೊರಬಂದರು. ಅದನ್ನೊಂದು ದಿಗ್ವಿಜಯವೆಂದು ಬೀಗಿದರು, ಆಚರಿಸಿದರು. ಅಂದಿನ ಪ್ರಧಾನಿ ಕಾಂಗ್ರೆಸ್ನ ಪಿ.ವಿ.ನರಸಿಂಹಾರಾವ್. ಅವರು ಈ ದುರಂತ ಹತ್ತು ದಿನಗಳ ನಂತರ ಜಸ್ಟೀಸ್ ಲಿಬರ್ಹಾನ್ರ ನೇತೃತ್ವದಲ್ಲಿ ಒಂದು ನ್ಯಾಯಾಂಗ ತನಿಖಾ ಮಂಡಳಿಯನ್ನು ರಚಿಸಿದರು. ಇವರು ಎಲ್ಲದರ ಕುರಿತು ಕೂಲಂಕುಷವಾಗಿ ವಿಚಾರಣೆ ನಡೆಸಿ, ಬಾಬ್ರಿ ಮಸೀದಿ ಧ್ವಂಸಕ್ಕೆ ಯಾರ್ಯಾರು ಕಾರಣಕರ್ತರು? ಅಂತ ತೇಲಿಸಬೇಕಿತ್ತು. ಇದಕ್ಕೆ ಈ ಸಮಿತಿಗೆ ನೀಡಿದ್ದ ಗಡುವು ಮೂರು ತಿಂಗಳು. ಅಂದರೆ ಈ ಲಿಬರ್ಹಾನ್ ವರದಿ ಬರಬೇಕಿದ್ದುದು 1993 ಮಾರ್ಚ್-ಏಪ್ರಿಲ್ನಲ್ಲಿ! ಬಂದಿದ್ದು 2009ರ ಜೂನ್ 30ರಂದು! ಆರಾರು ತಿಂಗಳ 48 ವಿಸ್ತರಣೆಗಳು, 17 ವರ್ಷಗಳು! ಮೂರು ತಿಂಗಳುಗಳಲ್ಲಿ ವರದಿ ನೀಡಬೇಕಿದ್ದ ಈ ಸಮಿತಿ ಮೊದಲ ಸಭೆ ನಡೆಸಿದ್ದೇ 5 ತಿಂಗಳ ನಂತರ! ಹೀಗೆ ಈ ಲಿಬರ್ಹಾನ್ ಕಮೀಷನ್ ಬಗ್ಗೆ ಹೇಳುತ್ತಾ ಹೋದರೆ, ವಾಕ್ಯಕ್ಕೊಂದು ಆಶ್ಚರ್ಯಸೂಚಕ ಹಾಕದೆ ವಿಧಿಯಿಲ್ಲ.


ಹದಿನೇಳು ವರ್ಷಗಳ ಗಜಗರ್ಭದಿಂದ ಹೊರಬಂದಿರುವ ಲಿಬರ್ಹಾನ್ ವರದಿ ಬಾಬ್ರಿ ಮಸೀದಿಯ ಧ್ವಂಸದ ಕುರಿತು ಏನೇನು ಹೇಳಿದೆ? ಯಾರನ್ನು ಈ ದುರಂತಕ್ಕೆ ಜವಾಬ್ದಾರರನ್ನಾಗಿ ಮಡಿದೆ? ಯಾರ್ಯಾರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಿದೆ? ಎಂಬ ಕುತೂಹಲ ಇನ್ನೂ ಉಳಿದಿತ್ತು. ಆದರೆ ಇಲ್ಲೂ ಎಲ್ಲರಿಗೂ ನಿರಾಸೆಯೇ ಕಾದಿತ್ತು. ಬಾಬ್ರಿ ಮಸೀದಿಯ ಧ್ವಂಸ ಕಾರಸೇವಕರು ನಿಯಂತ್ರಣ ತಪ್ಪಿ ಆ ಘಳಿಗೆಯಲ್ಲಿ ಆದ ಅವಘಡವಲ್ಲವೆಂದೂ, ಇದೆಲ್ಲವೂ ಪೂರ್ವನಿಯೋಜಿತವಾಗಿದ್ದು, ಆರ್ಎಸ್ಎಸ್ ಇದರ ಲೇಖಕ ಎಂದು ಅವರನ್ನು ದೂಷಿಸಿದೆ. ಇನ್ನು ಉಮಾಭಾರತಿ, ವಿನಯ್ ಕಟಿಯಾರ್, ಗೋವಿಂದಾಚಾರ್ಯ ತರಹದ ಅಂದಿನ ಬಿಜೆಪಿಯ ಎರಡನೇ ಹಂತದ ನಾಯಕರು ಈ ವಿಧ್ವಂಸಕದಲ್ಲಿ ಸ್ವಯಂ ಪಾಲ್ಗೊಂಡಿದ್ದರೆಂದೂ, ರಾಮಜನ್ಮಭೂಮಿ ಚಳುವಳಿಯ ನಾಯಕಶ್ರೇಷ್ಠರಾದ ಅದ್ವಾನಿ, ವಾಜಪೇಯಿ ಮತ್ತು ಮುರಳಿ ಮನೋಹರ ಜೋಶಿಯವರು ಕೂಡ ಇದಕ್ಕೆ ಬಾಧ್ಯರೆಂದು ಹೇಳಿದೆ. ಅದ್ವಾನಿ, ಜೋಶಿಯವರ ಕುರಿತು ಮಾತನಾಡುತ್ತಾ, ಅವರು ಉದ್ವೇಗಭರಿತ ಭಾಷಣ ಮಾಡಿ ಕಾರಸೇವಕರನ್ನು ಪ್ರಚೋದಿಸಿದರೆಂದೂ, ನಂತರ ಬಾಬ್ರಿ ಮಸೀದಿಯ ಗುಮ್ಮಟಗಳು ನೆಲಕ್ಕುರುಳುತ್ತಿದ್ದಾಗಲೂ ದೂರ ನಿಂತು ದುಃಖ ವ್ಯಕ್ತಪಡಿಸಿದರೇ ಹೊರತು, ಅವರನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ನಂತರ ಕೂಡ ದೇಶವನ್ನು ಕೋಮು ದಳ್ಳುರಿಯ ಹಂತಕ್ಕೆ ತೆಗೆದುಕೊಂಡು ಹೋಗಿದ್ದಕ್ಕೂ ಇವರನ್ನು ಲಿಬರ್ಹಾನ್ ಕಮೀಷನ್ ಬಾಧ್ಯರನ್ನಾಗಿ ಮಾಡಿದೆ. ಇನ್ನು ವಾಜಪೇಯಿಯವರ ವಿಚಾರ. ವಾಜಪೇಯಿ ಅಂದು ಅಯೋಧ್ಯೆಯಲ್ಲಿರಲಿಲ್ಲವೆಂಬುದನ್ನು ಗುರತಿಸುತ್ತಲೇ, ಕೆಲ ನಾಯಕರು ಅವರ ಜಾತ್ಯಾತೀತ ಮುಖವಾಡವನ್ನುಳಿಸಿಕೊಳ್ಳಲು ಅಂದು ಅಯೋಧ್ಯೆಯಿಂದ ದೂರವಿದ್ದರು ಅಂತ ರಾಜಕೀಯ ಚೇಲಾಗಳ ಮಟ್ಟದ ಒಂದು ಕಾಮೆಂಟ್ ಮಾಡುತ್ತಾರೆ ಲಿಬರ್ಹಾನ್. ಅವರು ವಾಜಪೇಯಿಯವರನ್ನೂ ಈ ವಿಧ್ವಂಸಕಕ್ಕೆ ಮತ್ತು ದೇಶವನ್ನು ಕೋಮು ದಳ್ಳುರಿಗೆ ದೂಡಿದ್ದಕ್ಕೆ ಜವಾಬ್ದಾರರನ್ನಾಗಿ ಮಾಡುತ್ತಾರೆ. ಇದು ಸದ್ಯ ವಿವಾದಿತವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಯಾಕೆಂದರೆ ವಾಜಪೇಯಿಯವರನ್ನು ಲಿಬರ್ಹಾನ್ ಕಮೀಷನ್ ಸಮನ್ ಕೂಡ ಮಾಡಿಲ್ಲ! ಇನ್ನು ಇಡಿಯ ವರದಿ ಅತ್ಯಂತ ಕಟು ಶಬ್ಧಗಳಲ್ಲಿ ಟೀಕಿಸುವುದು ಕಲ್ಯಾಣ್ ಸಿಂಗರನ್ನು. ಅವರು ಎಲ್ಲವೂ ಗೊತ್ತಿದ್ದೂ ಕೂಡ, ಒಬ್ಬ ಮುಖ್ಯಮಂತ್ರಿಯಾಗಿ ಈ ವಿಧ್ವಂಸಕಕ್ಕೆ ಅವಕಾಶ ಮಾಡಿಕೊಟ್ಟರು ಎನ್ನುತ್ತದೆ ವರದಿ. ಅವರು ಅಧಿಕಾರಿಗಳ ಸಲಹೆಗೆ ವಿರುದ್ಧವಾಗಿ ಪ್ಯಾರಾಮಿಲಿಟರಿ ತುಕಡಿಗಳನ್ನು ಬಳಸಲು ಅನುಮತಿ ನಿರಾಕರಿಸಿದ್ದು, ನಂತರ ಸ್ಥಳಕ್ಕೆ ಧಾವಿಸಿ ವೀರಾವೇಶದ ಭಾಷಣ ಮಾಡಿದ್ದು, ಎಲ್ಲವನ್ನೂ ವರದಿ ಗುರುತಿಸಿದೆ. ಆದರೆ ಇದೇ ಕೋವಿನಲ್ಲಿ ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಮತ್ತು ಪ್ರಧಾನಿ ಪಿ.ವಿ.ನರಸಿಂಹಾರಾಯರನ್ನು ಟೀಕಿಸುವುದಿಲ್ಲ ಲಿಬರ್ಹಾನ್. ಅವರೊಂದಿಗೆ ಉತ್ತರ ಪ್ರದೇಶ ಸರ್ಕಾರ ಸಹಕರಿಸಲಿಲ್ಲ, ಬಿಜೆಪಿಗರು ಸುಳ್ಳು ಆಶ್ವಾಸನೆ ಕೊಟ್ಟರು, ರಾಜ್ಯಪಾಲರ ಸಲಹೆಗೆ ವಿರುದ್ಧವಾಗಿ ಅವರು ರಾಷ್ಟ್ರಪತಿ ಆಡಳಿತ ಹೇರುವ ಹಾಗಿರಲಿಲ್ಲ, ಪಾಪ ಅವರು ತಾನೇ ಇನ್ನೇನು ಮಾಡಲಿತ್ತು? ಹೀಗೆ ಸಾಗುತ್ತದೆ ಲಿಬರಹಾನ್ರ ರಾಯರ ಪ್ರವರ. ಇಲ್ಲಿ ಸಮಸ್ಯೆಯೆಂದರೆ ರಾಯರು ಅಯೋಧ್ಯೆಯ ಬಗ್ಗೆ ಬರೆದ ಪುಸ್ತಕವನ್ನು ಲಿಬರಹಾನ್ ಓದಿಬಿಟ್ಟಿದ್ದಾರೆ, ಅದರಲ್ಲಿ ರಾಯರು ತಮ್ಮನ್ನು ಡಿಫೆಂಡ್ ಮಾಡಿಕೊಳ್ಳಲು, ಮುಂದಿಡುವ ವಾದ ಸರಣಿಯನ್ನೇ ಲಿಬರಹಾನ್ ಇಲ್ಲೂ ಮಂಡಿಸುತ್ತಾರೆ. ಇದು ನಿವೃತ್ತಿಯ ನಂತರ ತನಗೆ ಹದಿನೇಳು ವರ್ಷಗಳ ಕಾಲ ಪುನರ್ವಸತಿ ಕಲ್ಪಿಸಿದ ರಾಯರ ಬಗೆಗಿನ ಕೃತಜ್ಞತೆಯಂತೆ ಭಾಸವಾಗುತ್ತದೆ.

ಈ ವರದಿ ಮೊನ್ನೆ ಸೋರಿಕೆಯಾಗಿ, ಅದು ಲೋಕಸಭೆಯಲ್ಲಿ ದೊಡ್ಡ ಗಲಾಟೆಯಾದ ನಂತರ ಸರ್ಕಾರ ಈ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಿದೆ, ಜೊತೆಗೆ action taken report ಅನ್ನೂ ಕೂಡ. ಇದರಲ್ಲಿ ಯಾರ ಮೇಲೂ ಕೂಡ, ಕ್ರಿಮಿನಲ್ ಕ್ರಮದ ಬಗ್ಗೆ ಚಕಾರವಿಲ್ಲ. ಬದಲಿಗೆ ಕೋಮು ಹಿಂಸೆಯನ್ನು ತಡೆಗಟ್ಟಲು ಹೊಸದೊಂದು ಕಾನೂನನ್ನು ಜಾರಿಗೆ ತರುವುದು, ಧಾರ್ಮಿಕ ಸಂಘಟನೆಗಳ ಸದಸ್ಯರಿಗೆ ರಾಜಕೀಯದಲ್ಲಿ ಸ್ಥಾನ ಕಲ್ಪಿಸದಿರುವುದು, ಹೀಗೆ ಎಲ್ಲ ಇಂತಹ ಜಾರಿಯೋಗ್ಯ ಆದರೆ ಆಗದ ಉಟೋಪಿಯನ್ ಶಿಫಾರಸುಗಳನ್ನು ಜಾರಿಗೆ ತರುವ ಮಾತನಾಡಿದೆ ಸರ್ಕಾರ. ಹದಿನೇಳು ವರ್ಷಗಳ ನಂತರ ಒಮದು ವಾರದ ರಾಜಕೀಯ ದೊಂಬರಾಟ ಅಷ್ಟೆ! ಈ ವಿಷಯದಲ್ಲಿ ಕಾಂಗ್ರೆಸ್ಸೂ ಕೂಡ ಸಾಚಾ ಅಲ್ಲ, ಪ್ರಾಮಾಣಿಕ ಅಲ್ಲ. ಈಗ ಬಿಜೆಪಿಯ ನಾಯಕರ ಮೇಲೆ ಈ ವಿಷಯವಾಗಿ ಏನೇ ಕ್ರಮ ಕೈಗೊಂಡರೂ ಅವರ, ಪಕ್ಷದ ಮರುಹುಟ್ಟಿಗೆ ಇದೇ ಚಿಮ್ಮುಹಲಗೆಯಾಗುವ ಸಂಭವವೇ ಹೆಚ್ಚು. ಆದ್ದರಿಂದಲೇ ಕಾಂಗ್ರೆಸ್ ಕೂಡ ಹಾಗೆ ಗಪ್ಚುಪ್ ಅಂತ ಕೂತಿರುವುದು. ಈ ವರದಿಯನ್ನಿಟ್ಟುಕೊಂಡು ಅದು ಉತ್ತರ ಪ್ರದೇಶದಲ್ಲಿ ಪುನಃ ತನ್ನ ನೆಲೆಯನ್ನು ಕಂಡುಕೊಳ್ಳುವ ಧಾವಂತದಲ್ಲಿದೆ. ಈಗ ಅಸಲಿ ಸಮಸ್ಯೆ ಬಂದಿರುವುದೇ ಬಿಜೆಪಿಗೆ. ಹಿಂದುತ್ವ ಅಥವಾ ಚುನಾವಣಾ ಸಂದರ್ಭದಲ್ಲಿ ವಾಜಪೇಯಿ ಅದ್ವಾನಿ ತೊಟ್ಟಿದ್ದ ಅಭಿವೃದ್ಧಿ, ದಕ್ಷ ಆಡಳಿತವನ್ನು ಪ್ರತಿಪಾದಿಸುವ ಅರ್ಬನ್ ಓರಿಯೆಂಟೆಡ್ ಬಣ್ಣದ ವೇಷ ಎರಡೂ ಕೂಡ ಕೆಲಸ ಮಾಡದೇ ಬಿಜೆಪಿ ಇಂದು ದೇಶದೆಲ್ಲೆಡೆ ಭೂಸ್ಥಾಪಿತವಾಗಿ ಬಿಟ್ಟಿದೆ. ಇಂದು ಅಲ್ಲಿ ಮುಂದಿನ ಹಾದಿಯ ಕುರಿತಾಗಿ ತರ್ಜನ-ಭರ್ಜನಗಳು ನಡೆಯುತ್ತಿವೆ. ಬಿಜೆಪಿ ಇಂದು ಕವಲು ದಾರಿಯಲ್ಲಿದ್ದು, ಅದು ಯಾವ ದಾರಿಯನ್ನು ಆರಿಸಿಕೊಳ್ಳಬೇಕೋ ಅರ್ಥವಾಗದೇ ಹೈರಾಣಾಗಿ ನಡೆಯುವುದನ್ನೇ ನಿಲ್ಲಿಸಿ ಕುಂತುಬಿಟ್ಟಿದೆ. ಒಬ್ಬೊಬ್ಬರು ಇದನ್ನು ಅವರಿಚ್ಛೆಗನುಗುಣವಾಗಿ ಒಂದೊಂದು ದಿಕ್ಕಿನಲ್ಲಿ ಎಳೆದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ರಾಮಜನ್ಮಭೂಮಿಯ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಇದು ಬಿಜೆಪಿಯನ್ನು ಎಲ್ಲಿಗೆ ಕೊಂಡೊಯ್ಯುತ್ತದೋ ಕಾದು ನೋಡಬೇಕಿದೆ.

ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಮತ್ತು ಲಿಬರಹಾನ್ ಕಮೀಷನ್ ಪ್ರಹಸನದಲ್ಲಿ ನಾವು ಎರಡನ್ನು ಗುರುತಿಸಬಹುದಾಗಿದೆ. ಒಂದು ನಮ್ಮ ದೇಶದಲ್ಲಿ ಏನೇ ಆದರೂ ಕೂಡಲೇ ರಚಿತವಾಗುವ ತನಿಖಾ ಮಂಡಳಿ, ನ್ಯಾಯಾಂಗ ತನಿಖೆಗಳು ತಲುಪಿರುವ ಹಾಸ್ಯಾಸ್ಪದ ಮಟ್ಟ. ಸಾರ್ವಜನಿಕವಾಗಿ ಎಲ್ಲರಿಗೂ ಸುಮಾರು ಹದಿನೇಳು ವರ್ಷಗಳ ಹಿಂದಿನಿಂದಲೇ ತಿಳಿದಿರುವ ವಿಚಾರವನ್ನು ಹೇಳಲು ಲಿಬರ್ಹಾನ್ ಹದಿನೇಳು ವರ್ಷ ತೆಗೆದುಕೊಂಡಿದ್ದಾರೆ. ಅನೇಕ ಪತ್ರಕರ್ತರು ಈ ವಿಷಯವಾಗಿ ಇನ್ನೂ ಹೆಚ್ಚು ವಿವರಗಳನ್ನೊಳಗೊಂಡ ಪುಸ್ತಕಗಳನ್ನೇ ರಚಿಸಿ ಬಿಸುಡಿದ್ದಾರೆ, ಅವು ಅಟ್ಟ ದಾಟಿ, ರದ್ದಿ ಅಂಗಡಿಗಳಲ್ಲಿ ಸಿಗಲು ಶುರುವಾಗಿ ದಶಕ ಸಂದಿದೆ. ಇಂಥದೊಂದು ವರದಿ ನೀಡಲಿಕ್ಕೆ ಹದಿನೇಳು ವರ್ಷ ಸರ್ಕಾರ 8 ಕೋಟಿ ಖರ್ಚು ಮಾಡಿ ಲಿಬರ್ಹಾನ್ರನ್ನು ಸಾಕಿದ್ದೇಕೆ? ಅನ್ನೋದು ಪ್ರಶ್ನೆ. ಮತ್ತೊಂದು ಸ್ವತಂತ್ರ್ಯ ಭಾರತದ ಮಹಾ ದುರಂತವೆನ್ನಿಸಿಕೊಂಡ ಬಾಬ್ರಿ ಮಸೀದಿ ಧ್ವಂಸ, ಮತ್ತು ನಂತರದ ಕೋಮು ದಳ್ಳುರಿಗೆ ಕಾರಣಕರ್ತರು ಎಂದು ಆರೋಪಿಸಲ್ಪಟ್ಟವರ ವಿರುದ್ಧ ಸರ್ಕರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೆಂದರೆ? ಇಲ್ಲಿ ನಾನು ಇದರ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ, 1984ರ ಸಿಖ್ ಗಲಭೆ, 2002ರ ಗೋಧ್ರಾ ಗಲಭೆ, ಇವೆಲ್ಲವಕ್ಕೂ ಮೂಲ ಕಾರಣ ರಾಜಕಾರಣ ಮತ್ತು ರಾಜಕಾರಣಿಗಳು ಅನ್ನೋದರಲ್ಲಿ ಎರಡನೇ ಮಾತಿಲ್ಲ. ಆದರೆ ಇವರೆಲ್ಲರೂ ಆರಾಮವಾಗಿ ಓಡಾಡಿಕೊಂಡಿದ್ದಾರೆ, ಬಹುಪಾಲು ಮಂದಿ ಅಧಿಕಾರದಲ್ಲಿದ್ದಾರೆ. ಒಂದು ಕೊಲೆ ಮಾಡಿದವನಿಗೆ ನೇಣು, ಸಾವಿರಾರು ಮಂದಿಯ ಸಾವಿಗೆ ಕಾರಣನಾದವನಿಗೆ ಅಧಿಕಾರ! ಅದಕ್ಕೆ ನಮ್ಮ ಭಾರತ ಹೀಗಿರುವುದು.

2 thoughts on “ಅಂತೂ ಇಂತೂ ಹದಿನೇಳು ವರ್ಷಕ್ಕೆ ದಂಟು......!

umesh desai said...

ಆದಿತ್ಯ ೧೭ ವರ್ಷ ಬೇಕಾಗಿತ್ತೇ ಈ ಪ್ರಶ್ನೆ ಕಾಡುತ್ತಿದೆ ಇನ್ನು ಕಸಬ್ ಗೆ ಗಲ್ಲು ಏರಿಸಲು ಅದೆಷ್ಟು ದಿನ ತಗೊಳ್ತಾರೊ

Dr. B.R. Satynarayana said...

ಭಾರತದ ಜಾತ್ಯಾತೀತ ಮನಸ್ಸಿನ ಮೇಲಾಗಿರುವ ಗಾಯ..... ಹೌದು, ಅದು ಭಾರತೀಯ ಸಂಸ್ಕೃತಿಯಲ್ಲಿ ಅಂತರಗತವಾಗಿಯೇ ಇದ್ದ ಜಾತ್ಯಾತೀತ ಮನೋಭಾವವನ್ನೇ ಕದಡಿಬಿಟ್ಟಿತು. ಗುಜರಾತ್ ಗಲಭೆ ಅದರ ಮುಂದುವರೆದ ಭಾಗ ಎನ್ನಿಸುವುದಿಲ್ಲವೆ? ಸರಣಿ ಬಾಂಬ್ ಸಿಡಿದರೂ ಮರುದಿನವೇ ಏನೂ ಆಗಿಲ್ಲ ೆನ್ನುವಂತೆ ಬದುಕನ್ನು ಎದುರಿಸುವ ನಮಗೆ ಬಾಬರಿ ಮತ್ತು ಗೋದ್ರಾ ನಂತರ ಸಹಜವಾಗಿ ಎರಡೂ ಧರ್ಮದವರು ಪರಸ್ಪರ ಬೆರೆಯಲು ಸಾಧ್ಯವೇ ಇಲ್ಲ ೆನ್ನುವಂತಹ ಪರಿಸರ ನಿರ್ಮಾಣವಾಗಿದೆ. ಬಹುಶಃ ಇದಕ್ಕೆ ಮುಂದಿನ ನಮ್ಮ ನಮ್ಮ ನಡೆನುಡಿಗಳೇ ಅಥವಾ ಕಾಲವೇ ಉತ್ತರ ಹೇಳಬೇಕೇನೋ!?

Proudly powered by Blogger
Theme: Esquire by Matthew Buchanan.
Converted by LiteThemes.com.