ವೈ. ಎಸ್. ರಾಜಶೇಖರ ರೆಡ್ಡಿಯದು ಹತ್ಯೆ! - ಮೀಡಿಯಾ ಮತ್ತು ಆಂಧ್ರದ ಗತಿಕೆಟ್ಟ ರಾಜಕಾರಣ

ನೆರೆಯ ಆಂಧ್ರಪ್ರದೇಶದ ರಾಜಕಾರಣದಲ್ಲಿ ಎದುರಿಲ್ಲದ ಮನುಷ್ಯನಂತೆ ಒಂದು ಬೆಳಗು ಬೆಳಗಿ ಮರೆಯಾಗಿಹೋದ ವೈ.ಎಸ್.ರಾಜಶೇಖರ ರೆಡ್ಡಿಯವರ ದುರಂತ ಅಂತ್ಯಕ್ಕೆ ಸರಿಸುಮಾರು ಎರಡು ತಿಂಗಳುಗಳು ತುಂಬುತ್ತಾ ಬಂದವು. ಈ ಎರಡು ತಿಂಗಳುಗಳಲ್ಲಿ ಆಂಧ್ರದ ರಾಜಕಾರಣದಲ್ಲಿ ಏನೇನೆಲ್ಲಾ ಆಗಿ ಹೋಗಿವೆ? ರಾಜಕಾರಣದ ಮ್ಯಾಪುಗಳೇ ಬದಲಾಗಿ ಹೋಗಿವೆ. ವೈ. ಎಸ್. ಆರ್ ಅವರ ಹೆಣವಿನ್ನೂ ಇರುವಾಗಲೇ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಚರ್ಚೆ ಗೆ ಕಾವು ಬಂದು ಬಿಟ್ಟತು. ಕುಟುಂಬ ರಾಜಕಾರಣದ ಜೀತ ಪದ್ಧತಿಯನ್ನೇ ತಮ್ಮ ಸಂಸ್ಕೃತಿಯೆಂದು ಗರ್ವದಿಂದ ಹೇಳಿಕೊಳ್ಳುವ ಅನೇಕ ಹೊಸ ತಲೆಮಾರಿನ ಕಾಂಗ್ರೆಸಿಗರು ವೈ.ಎಸ್.ಆರ್. ಅವರ ಪುತ್ರ, ಸದ್ಯ ಕಡಪದ ಸಂಸದ ವೈ.ಎಸ್.ಜಗನ್ಮೋಹನ ರೆಡ್ಡಿಯನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಘಂಟಾಘೋಷವಾಗಿ ಮೀಡಿಯಾ ಮುಂದೆ ತಮ್ಮ ವಾದಸರಣಿಯನ್ನು ಮುಂದಿಡಲಾರಂಭಿಸಿದರು. ಇದೇನೂ ಅವರ ಮನಸ್ಸಿನಾಳದಿಂದ ಉದ್ಭವವಾದದ್ದಲ್ಲವೆಂಬುದು ಸೂಕ್ಷ್ಮವಾಗಿ ಗಮನಿಸಿದವರೆಲ್ಲರ ಅರಿವಿಗೂ ಬರುತ್ತಿತ್ತು.

ಸೆಪ್ಟೆಂಬರ್ 3ನೇ ತಾರೀಖು, ಬೆಳಿಗ್ಗೆ ಕರ್ನೂಲ್ ಜಿಲ್ಲೆಯ ರುದ್ರಕೊಡೂರು ಅರಣ್ಯ ಪ್ರದೇಶದ ಪಾವುರಾಲ ಗುಟ್ಟದ ಮೇಲೆ ವೈ.ಎಸ್.ಆರ್ ಪ್ರಯಾಣಿಸುತ್ತಿದ್ದ ಲಘು ವಿಮಾನ ಅಪಘಾತಕ್ಕೀಡಾಗಿರುವ ಸಂಗತಿ ಧೃಢಪಡುತ್ತಿದ್ದಂತೆ, ಇತ್ತ ಹೈದರಾಬಾದಿನಲ್ಲಿ ವೈ.ಎಸ್.ಆರ್ರ ಚಿರಕಾಲದ ಗೆಳೆಯ ಕೆ.ವಿ.ಪಿ ರಾಮಚಂದ್ರರಾವ್ ಬಿಜಿನೆಸ್ಗಿಳಿದುಬಿಟ್ಟರು. ವೈ.ಎಸ್.ಆರ್ ಅವರ ಹೆಣ ಸಂಜೆ ಹೈದರಾಬಾದಿಗೆ ಬರುವಷ್ಟರಲ್ಲಿ, ಅವರು ಸಂಜೆ ಸುಮಾರು 4 ಘಂಟೆಗೆ ಒಂದು ಅನೌಪಚಾರಿಕ ಕ್ಯಾಬಿನೆಟ್ಟು ಮೀಟಿಂಗನ್ನೇ ನಡೆಸಿಬಿಟ್ಟರು. ಇದರಲ್ಲಿ ವೈ.ಎಸ್.ರಾಜಶೇಖರ ರೆಡ್ಡಿಯವರ ಸ್ಥಾನಕ್ಕೆ ಅವರ ಸುಪುತ್ರ ವೈ.ಎಸ್.ಜಗನ್ಮೋಹನ ರೆಡ್ಡಿಯನ್ನು ತರಬೇಕೆಂಬ ನಿರ್ಣಯವನ್ನು ಏಕಕಂಠದಿಂದ ಮಂಡಿಸಿ, ಅಂಗೀಕರಿಸಲಾಯಿತು. ನಂತರದ್ದೆಲ್ಲವೂ ಮೀಡಿಯಾದಲ್ಲಿ ರಿಲೇ ಆದ ದೊಂಬರಾಟ! ಜಗನ್ನನ್ನು ಮುಖ್ಯಂತ್ರಿಯಾಗಿ ಎಲ್ಲರೂ ಪ್ರಪೋಸು ಮಾಡುವವರೇ. ಅದು ನೆರವೇರದಿದ್ದರೆ ತಾನು ಕಾಂಗ್ರೆಸ್ ತ್ಯಜಿಸುವುದಾಗಿ ಒಬ್ಬ, ರಾಜಕಾರಣವನ್ನೇ ತ್ಯಜಿಸುವುದಾಗಿ ಮತ್ತೊಬ್ಬ. ಅಂತೂ ಅವರ ಕೈಲಾದಷ್ಟು ದೊಂಬರಾಟವಾಡಿ ಸೂಕ್ಷ್ಮವಾಗಿದ್ದ ಪರಿಸ್ಥತಿಯಲ್ಲಿ ರಾಡಿಯೆಬ್ಬಿಸಿಬಿಟ್ಟರು. ವೈ.ಎಸ್.ಆರ್ ಅವರ ಹೆಣವನ್ನು ಸಿಎಂ ಕಛೇರಿಯಲ್ಲಿ ಸಾರ್ವಜನಿಕ ದರ್ಶನಕ್ಕಿಟ್ಟಿದ್ದರು. ಅಂತಿಮ ದರ್ಶನ ಪಡೆಯಲು ಬಂದ ಎಲ್ಲ ಕಾಂಗ್ರೆಸ್ ಎಮ್ಮೆಲ್ಲೆಗಳನ್ನೂ ಹಿಂದಿನ ರೂಮೊಂದಕ್ಕೆ ಕಳಿಸಿಕೊಡುತ್ತಿದ್ದರು ಕೆವಿಪಿ. ಅಲ್ಲಿ ಜಗನ್ಮೋಹನ ರೆಡ್ಡಿಯನ್ನು ಮುಖ್ಯಮಂತ್ರಿಯಾಗಿ ಪ್ರಪೋಸ್ ಮಡುವ ಪತ್ರಕ್ಕೆ ಅವರಿಂದ ಸಹಿ ಪಡೆಯಲಾಗುತ್ತಿತ್ತು! ಮುಂದೆ ಹೆಣ, ಹಿಂದೆ ಆತನ ಮಗನೇ ಗದ್ದುಗೆ ಸರಿಮಾಡಿಕೊಳ್ಳತ್ತಿದ್ದ! ಇವೆಲ್ಲವೂ ವೈ.ಎಸ್.ಆರ್ ಕುಟುಂಬ ಒಡೆತನದ ಸಾಕ್ಷಿ ಟಿವಿಯಲ್ಲಿ 24/7 ಬಿತ್ತರಗೊಳ್ಳುತ್ತಿತ್ತು. ಅವರ ಅಂದಾಜು ನಾವು ಜಗನ್ಮೋಹನ ರೆಡ್ಡಿಗೆ ಇರುವ ಇಲ್ಲದಿರುವ ಪ್ರಜಾಭಿಮಾನವನ್ನು ಒಂದು ಹೈಪ್ ಮುಖಾಂತರ ಬಿಲ್ಡಪ್ ಮಾಡುತ್ತಿದ್ದೇವೆ ಎಂದು ಕೊಂಡಿದ್ದರು. ಇದು ಮುಖ್ಯವಾಗಿ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿಗೆ ಜಗನ್ ಬಿಟ್ಟರೆ ಮುಖ್ಯಮಂತ್ರಿ ಪದವಿಗೆ ಬೇರೆಯ ಚಾಯ್ಸ್ ಇಲ್ಲದಂತೆ ಅವರ ಕಣ್ಣು ಕಟ್ಟಿಬಿಡಬೇಕೆಂಬ ಹಪಹಪಿ ಅಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು.


ಆಂಧ್ರದ ಮೀಡಿಯಾ ಬ್ಯಾರನ್ ರಾಮೋಜೀರಾವ್ ಮೊದಲಿಂದಲೂ ಸ್ವಲ್ಪ ತೆಲುಗುದೇಶಂ ಪರ. ಹಾಗಾಗಿ ವೈ.ಎಸ್.ಆರ್ರನ್ನು ಇನ್ನಿಲ್ಲದಂತೆ ಹಣಿದುಬಿಟ್ಟಿದ್ದರು ರಾಮೋಜೀರಾವ್. ರಾವ್ ಅವರನ್ನು ತುಳಿಯಲು ಸಾಕಷ್ಟು ಪ್ರಯತ್ನಿಸಿ ವಿಫಲವಾಗಿದ್ದ ವೈ.ಎಸ್.ಆರ್ ರಾಮೋಜಿಯವರನ್ನು ಮಣಿಸಬೇಕೆಂದರೆ ಅದು ಅವರ ಮೀಡಿಯಾಗೆ ಸೆಡ್ಡು ಹೊಡೆದೇ ಆಗಬೇಕೆಂದು ಛಾಲೆಂಜ್ ಮೇಲೆ, `ಸಾಕ್ಷಿ' ಎಂಬ ಪತ್ರಿಕೆಯನ್ನು ಮತ್ತು ಅದೇ ಹೆಸರಿನ ತೆಲುಗು ನ್ಯೂಸ್ ಛಾನೆಲ್ ಒಂದನ್ನೂ ಪ್ರಾರಂಭಿಸಿದ್ದರು. ಇವೆರಡೂ ಮೀಡಿಯಾ ಸಂಸ್ಥೆಗಳಿಗೂ ವೈ.ಎಸ್.ಜಗನ್ಮೋಹನ ರೆಡ್ಡಿ ಮುಖ್ಯ ಸಂಪಾದಕ. ಅಲ್ಲಿಗೆ ಕೋತಿ ಕೈಗೆ ಮಾಣಿಕ್ಯ ಸಿಕ್ಕಂತಾಗಿತ್ತು. ಅಕ್ಷರಶಃ ಸಾಕ್ಷಿ ಪತ್ರಿಕೆ ಮತ್ತು ಛಾನೆಲ್ನಲ್ಲಿ ಸುಮಾರು 3 ವಾರ ನಡೆದಿದ್ದು ಬರಿಯ `ಜಗನ್ ಭಜನ್'. ಕಾಂಗ್ರೆಸಿಗರ ಎಲ್ಲಾ ದೊಂಬರಾಟಗಳಿಗೂ 24/7 ಕವರೇಜ್ ಸಿಕ್ಕುಬಿಟ್ಟತು. ಕೋತಿಗೆ ಹೆಂಡ ಕುಡಿಸಾಗಿತ್ತು. ಆ ಮೂರ್ನಾಲ್ಕು ದಿನಗಳಲ್ಲಿ ಆಂಧ್ರದಲ್ಲಿ ಸತ್ತವರೆಲ್ಲರೂ ವೈ.ಎಸ್.ಆರ್ ನಿಧನ ವಾರ್ತೆ ಕೇಳಿ ಆಘಾತ ತಡೆಯಲಾರದೆ ಎದೆಯೊಡೆದು ಸತ್ತವರು ಇಲ್ಲ ಆತ್ಮಹತ್ಯೆ ಮಾಡಿಕೊಂಡವರೇ. ಅಂದು ಸತ್ತವರೆಲ್ಲರ ಪಕ್ಕದಲ್ಲಿಯೂ ಒಂದು ವೈ.ಎಸ್.ಆರ್ ಫೋಟೋ, ಅವರ ಸಮೀಪ ಬಂಧುಗಳದೊಂದು ಬ್ಯಟು! ಅದಕ್ಕವರಿಗೆ ಒಂದು ಕಲರ್ ಟಿವಿ ಮತ್ತು 10 ರಿಂದ 15 ಸಾವಿರ ಫ್ರೀ ಬಂದಿತ್ತು ಅಂತ ತಿಳಿಲಿಕ್ಕೆ ಶಾನೆ ಕಾಲ ಬೇಕಾಗಲಿಲ್ಲ.



ತನ್ನ ಅತ್ತೆಯ ಸಾವಿನ ದಿನವೇ ತನ್ನ ಗಂಡ ರಾಜೀವ್ ಗಾಂಧಿ ಪ್ರಧಾನಿಯಾಗಿ ಪ್ರಮಾಣವಚನ ಸ್ವಿಕರಿಸುವುದನ್ನು ತೀವ್ರವಾಗಿ ವಿರೋಧಿಸಿದ್ದ, ತನ್ನ ಗಂಡ ಸತ್ತ ನಂತರ ಅದರಿಂದ ಹೊರಬಂದು ರಾಜಕೀಯ ಸೇರಲು ಸುಮಾರು ಆರೇಳು ವರ್ಷ ತೆಗೆದುಕೊಂಡ ಸೂಕ್ಷ್ಮಮತಿ ಹೆಣ್ಣುಮಗಳು ಸೋನಿಯಾ ಗಾಂಧಿ. ಇಂತಿಪ್ಪ ಸೋನಿಯಾ ಗಾಂಧಿಗೆ ವೈ.ಎಸ್.ಆರ್ ಸಮೀಪವರ್ತಿಗಳು ಆತನ ಹೆಣ ಮುಂದಿಟ್ಟುಕೊಂಡು ವಶೀಲಿಬಾಜಿಗೆ ಇಳಿದದ್ದು (ಅದೂ ಅಷ್ಟು ಬಹಿರಂಗವಾಗಿ) ಅದರ ಮುಂಚೂಣಿಯಲ್ಲಿ ಆತನ ಚಿರಕಾಲ ಮಿತ್ರ ಕೆವಿಪಿ ರಾಮಚಂದ್ರರಾವ್ ಮತ್ತು ಮಗ ಜಗನ್ಮೋಹನರೆಡ್ಡಿಯೇ ಇದ್ದದ್ದು ಒಂದು ರೀತಿಯ ಅಸಹ್ಯ ಹುಟ್ಟಿಸಿರಬೇಕು. ಜನತಾಜನಾರ್ಧನನಿಗೂ ವಾಕರಿಕೆ ತರಿಸಿತ್ತು ಆ ದೃಷ್ಯ. ಇದು ಸೋನಿಯಾರಲ್ಲಿ ಜಗನ್ಮೋಹನ ರೆಡ್ಡಿ ಮತ್ತು ಆತನ ಬಣದ ಬಗ್ಗೆಯೇ ಒಂದು ಅವರ್ಷನ್ ಅನ್ನೇ ಹುಟ್ಟಿ ಹಾಕಿಬಿಟ್ಟಿದೆ. ಮೀಡಿಯಾದಲ್ಲಿನ ದೊಂಬರಾಟಕ್ಕ್ಯಾವುದಕ್ಕೂ ಬೆಲೆ ಕೊಡದ ಸೋನಿಯಾ ಕಾಂಗ್ರೆಸ್ನ ದಶಕಗಳ ನಿಷ್ಠಾವಂತ ಸೈನಿಕನಂತಿದ್ದ, ಆಡಳಿತದಲ್ಲಿ ಪುಟವಿಟ್ಟ ಚಿನ್ನದಂತೆ ಸಾಕಷ್ಟು ಪಳಗಿ ಮಾಗಿರುವ, ಆಂಧ್ರ ಕಾಂಗ್ರೆಸ್ ಮಟ್ಟಿಗೆ ಹೇಳುವುದಾದರೆ ಭೀಷ್ಮನಂತಿರುವ ರೋಶಯ್ಯನವರನ್ನು ಮುಖ್ಯಮಂತ್ರಿ ಮಾಡಿಬಿಟ್ಟರು. ರೋಶಯ್ಯನವರನ್ನು ಅನೇಕರು ತಾತ್ಕಾಲಿಕ ಮೂಖ್ಯಮಂತ್ರಿ ಅಂತ ಕರೀತಿದಾರಾದರೂ ಅವರು ಕೂತ ಖುರ್ಚಿಯಲ್ಲಿ ಬಲಗೊಳ್ಳುತ್ತಿರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಜಗನ್ಮೋಹನರೆಡ್ಡಿಯ ಬಣಕ್ಕೆ, ಸದ್ಯ ಮುಖ್ಯಮಂತ್ರಿಯ ಬದಲಿಕೆಯ ಮಾತು ಬೇಡ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳಿವೆ. ಈಗ ಮತ್ತೆ ಮುಖ್ಯಮಂತ್ರಿಯನ್ನು ಬದಲಿಸಿದರೆ ಜನಕ್ಕೆ ತಪ್ಪು ಸಂದೇಶ ಹೋಗುವ ಸಾಧ್ಯತೆಯಿರುವುದರಿಂದ ಅದರ ಮಾತೇನಿದ್ದರೂ ಮಹಾರಾಷ್ಟ್ರ ಚುನಾವಣೆಗಳ ನಂತರ ಅಂತ ಇಷ್ಟು ದಿನ ಸಾಗ ಹಾಕಿದ್ದರು.


ರೋಶಯ್ಯನವರಿಗೆ ಒಂದು ಚುನಾವಣೆ ಗೆದ್ದು ತರಬಲ್ಲ ಛಾತಿಯೂ, ಛರಿಷ್ಮಾನೂ ಇಲ್ಲದೆ ಇರಬಹುದು. ಅವರು ಇಂದಿಗೂ ಮೇಲ್ಮನೆ ಸದಸ್ಯ. ಆದರೆ ಅವರ ಅನುಭವ, ಸರ್ಕಾರದ ವಿಷಯಗಳಲ್ಲಿ ಅವರಿಗಿರುವ ಜ್ಞಾನ, ಪರಿಜ್ಞಾನ, ಅವರ ಆಡಳಿತ ವೈಖರಿ ಹಾಗೂ ಇವೆಲ್ಲಕ್ಕಿಂತಲೂ ಮಿಗಿಲಾಗಿ ಮಚ್ಚೆಯೇ ಇಲ್ಲದ ಬಿಳಿ ಹಾಳೆಯಂತಹ ಅವರ ರಾಜಕೀಯ ಜೀವನ ಇವೆಲ್ಲವೂ ಇಂದಿನ ಆಂಧ್ರ ಕಾಂಗ್ರೆಸ್ಸಿಗೆ ಬೆಲೆಕಟ್ಟಲಾಗದ ಆಸ್ತಿ. ಮೊನ್ನೆಯ ಆಂಧ್ರದಲ್ಲಿ ನೆರೆ ಬಂತು ನೋಡಿ, ಅದನ್ನು ರೋಶಯ್ಯನವರಲ್ಲದೇ ಬೇರ್ಯಾರೇ ಆಗಿದ್ದರೂ ನಿರ್ವಹಿಸಲಾಗದೇ ಕೈಚೆಲ್ಲಿಬಿಡುತ್ತಿದ್ದರು. ಅದು ವೈ.ಎಸ್.ಆರ್. ಕೈಯಲ್ಲಿ ಕೂಡ ಆಗುತ್ತಿರಲಿಲ್ಲವೇನೋ ಅಂತ ಅನುಮಾನ ವ್ಯಕ್ತಪಡಿಸುತ್ತಾರೆ ರಾಜಕೀಯ ಪಂಡಿತರು. ಮೇಟಿಯಂತೆ ಸತತ 48 ಘಂಟೆಗಳ ಕಾಲ ಸಿಎಂ ಖಚೇರಿಯಲ್ಲೇ ಕುಳಿತು, ಅವರು ಶಾಸಕರು, ಅಧಿಕಾರಗಣ ಮತ್ತು ಮೀಡಿಯಾದ ಮೂಲಕ ಇಡೀ ರಾಜ್ಯವನ್ನು ನಿಯಂತ್ರಿಸಿದ ರೀತಿಯಿದೆಯಲ್ಲ ಅದು ಅದ್ಭುತ. ನೆರೆ ಹಾವಳಿ ಅಷ್ಟು ಭೀಕರವಾಗಿದ್ದರೂ ಕೂಡ ಪ್ರಾಣಹಾನಿಯಾಗಿದ್ದು ಕರ್ನಾಟಕದ ಐದನೇ ಒಂದು ಭಾಗದಷ್ಟು ಮಾತ್ರ ಎಂದರೆ, ಆ ಆಡಳಿತದ ದಕ್ಷತೆಯನ್ನು ನೀವೇ ಊಹಿಸಬಹುದು. ಎಲ್ಲ ವಿರೋಧ ಪಕ್ಷಗಳೂ ಕೂಡ ರೋಶಯ್ಯನವರನ್ನು ಇದಕ್ಕಾಗಿ ಮುಕ್ತ ಕಂಠದಿಂದ ಅಭಿನಂದಿಸಿವೆ. ಈ ಸಂದರ್ಭದಲ್ಲಿ ಜಗನ್ಮೋಹನ ರೆಡ್ಡಿ ಮುಖ್ಯಮಂತ್ರಿಯಾಗಿದ್ದಿದ್ದರೆ? ಅದು ದುರಂತದ ಮೇಲಿನ ಮಹಾ ದುರಂತವಾಗಿರುತ್ತಿತ್ತು.



ಆಂಧ್ರದ ಮುಂದಿನ ಮುಖ್ಯಮಂತ್ರಿಯನ್ನು ಆರಿಸಲು ಪ್ರಣಬ್ ದಾ, ದಿಗ್ವಿಜಯ್ ಸಿಂಗ್ ಮತ್ತು ವೀರಪ್ಪ ಮೊಯಿಲಿಯವರನ್ನೊಳಗೊಂಡ ಸಮಿತಿಯೊಂದನ್ನು ಕಾಂಗ್ರೆಸ್ ರಚಿಸಿದ್ದು, ಅದು ಸದ್ಯ ರೋಶಯ್ಯನವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸುವುದೆಂದೂ ಜಗನ್ಮೋಹನ ರೆಡ್ಡಿಯನ್ನು ಕೇಂದ್ರದಲ್ಲಿ ಮಂತ್ರಿಯನ್ನಾಗಿ ಮಾಡಿದರೆ ಆಡಳಿತದ ಅನುಭವ ಪಡೆದು 2014ಕ್ಕೆ ಆಂಧ್ರ ಕಾಂಗ್ರೆಸ್ಸನ್ನು ಮುನ್ನಡೆಸಲು ಅಣಿಯಾಗಿರುತ್ತಾರೆಂದೂ ಅಭಿಪ್ರಾಯ ಪಟ್ಟಿದೆಯೆಂಬುದು ಸುದ್ದಿ. ಇಲ್ಲ ಆತನನ್ನು ಈಗ ರೋಶಯ್ಯನವರ ಕೆಳಗೆ ಉಪಮುಖ್ಯಮಂತ್ರಿ ಮಾಡಬಹುದೆಂದಿದೆ. ಜಗನ್ಮೋಹನ ರೆಡ್ಡಿಗೆ ಅನುಭವವಿಲ್ಲದ್ದಷ್ಟೇ ಅಲ್ಲ ಆತನ ಮೇಲೆ ಸವಾಲಕ್ಷ ಸ್ಕ್ಯಾಮುಗಳಿವೆ. ಆದ್ದರಿಂದ ಈಗಲೇ ಆತ ಮುಖ್ಯಮಂತ್ರಿಯಾಗುವುದು ಬೇಡ ಎನ್ನುವುದು ಹೈಕಮಾಂಡ್ ಅಭಿಪ್ರಾಯ. ಆದರೆ ಈತ ಕೇಳಬೇಕಲ್ಲ. ವೈ.ಎಸ್.ಆರ್. ಗೆ ಎಷ್ಟೇ ದುಡ್ಡಿದ್ದಿರಬಹುದು, ಜನಪ್ರಿಯತೆ ಇದ್ದಿರಬಹುದು ಆದರೆ ಆತ ಎಂದೂ ಕೂಡ ಕಾಂಗ್ರೆಸ್ ಹೈಕಮಾಂಡ್ ಅನ್ನು ಎದುರು ಹಾಕಿಕೊಂಡವರಲ್ಲ. ಆತ ಏನನ್ನೇ ಮಾಡಿದರೂ ಹೈಕಮಾಂಡ್ ಅನ್ನೂ ಜೊತೆಗೆ ಕರೆದೊಯ್ಯುತ್ತಿದ್ದರೇ ಹೊರತು ಅವರನ್ನು ಎದುರಿಸುತ್ತಿರಲಿಲ್ಲ. ಅದು ವೈ.ಎಸ್.ಆರ್. ಬೆಳವಣಿಗೆಯ ಹಿಂದಿನ ಗುಟ್ಟಾಗಿತ್ತು. ಆದರೆ ಈ ಗುಟ್ಟು ಜಗನ್ಗೆ ಗೊತ್ತಿದ್ದಂತೆ ಕಾಣುತ್ತಿಲ್ಲ.

ರೋಶಯ್ಯನವರು ನಿಧಾನವಾಗಿಯಾದರೂ ಮುಖ್ಯಮಂತ್ರಿಗಿರಿಯಲ್ಲಿ ಸೆಟ್ಲ್ ಆಗುತ್ತಿದ್ದಾರೆ. ಜನರೂ ರೋಶಯ್ಯ ಮತ್ತವರ ಆಡಳಿತ ಶೈಲಿಗೆ ಒಗ್ಗಿಕೊಳ್ಳತೊಡಗಿದ್ದಾರೆ. ಸಾವಧಾನವಾಗಿ ಜನ ಬರಬರುತ್ತಾ ವೈ.ಎಸ್.ಆರ್.ರನ್ನು ಮರೆಯತೊಡಗಿದ್ದಾರೆ. ಲಾವಾಗ್ನಿಯೊಂದು ಧಿಗ್ಗನೆ ಜಗನ್ ಹೊಟ್ಟೆಯಲ್ಲೆದ್ದಿ ಕೂತಿದೆ. ಅರೆರೆ, ವ್ಯ.ಎಸ್.ಆರ್.ರ ನೆನಪು ಇನ್ನೂ ಹಸಿಯಾಗಿರುವಾಗಲೇ ತಾನು ಮುಖ್ಯಮಂತ್ರಿಯಾಗುವುದೋ ಮತ್ತೊಂದೋ ನಡೆದು ಹೋಗಿ ಬಿಡಬೇಕು. ಇಲ್ಲ ಈ ಅವಕಾಶ ತಪ್ಪಿದರೆ ಮತ್ತೆ ಸಿಗದು. ಇದು ಜಗನ್ ಮತ್ತು ಆತನ ಭಜನಾ ಮಂಡಳಿಯ ಆವೇದನೆ. ಸರಿ ಮಹಾರಾಷ್ಟ್ರ ಚುನಾವಣೆಗಳೂ ಮುಗಿದವು. ಇದೇ ಸರಿಯಾದ ಸಮಯವೆಂದು ನಿರ್ಧರಿಸಿದ ಜಗನ್ಮೋಹನ ರೆಡ್ಡಿ ಮತ್ತವರ ಬಣ ಸೋನಿಯಾ ಗಾಂದಿಯೊಂದಿಗೆ ಒಂದು ಅಪಾಯಿಂಟ್ಮೆಂಟ್ ತೆಗೆದುಕೊಂಡಿತು.

ಬರಿ ಅಷ್ಟೆ ಮಾಡಿದಿದ್ದರೆ ಚೆನ್ನಾಗಿತ್ತು. ಆದರೆ ಅವರಿಗೆ ರಾಜ್ಯದಲ್ಲಿ ವೈ.ಎಸ್.ಆರ್ ಮತ್ತೆ ಇಷ್ಯೂ ಆಗುವುದು ಬೇಕಿತ್ತು. ಕೋತಿ ಕಯ್ಯಾಗಿನ ಮಾಣಿಕ್ಯದಂತೆ ಹೇಗಿದ್ದರೂ ಸಾಕ್ಷಿ ಪತ್ರಿಕೆ ಮತ್ತು ಟಿವಿ ಇತ್ತಲ್ಲ? ವೈ.ಎಸ್.ಆರ್.ರ ಸಾವು ಮತ್ತೆ ದೊಡ್ಡ ಇಷ್ಯೂ ಆಗುವಂತೆ ವೈ.ಎಸ್.ಆರ್. ಅವರು ತೀರಿಕೊಂಡದ್ದು ಅಫಘಾತದಿಂದಲ್ಲ, ಅದರ ಹಿಂದೆ ದೊಡ್ಡದೊಂದು ಷಡ್ಯಂತ್ರವೇ ನಡೆದಿದೆ. ಅವರದು ಹತ್ಯೆ ಎಂಬ ಅನುಮಾನಗಳು ಮೂಡುವುದಕ್ಕೆ ಬಲವಾದ ಕಾರಣಗಳಿವೆ ಎಂದು ಪ್ರಕಟಿಸಿ ದೊಡ್ಡ ಸೆನ್ಸೇಷನ್ ಅನ್ನು ಸೃಷ್ಟಿಸಿಬಿಟ್ಟರು. ಆದರೆ ಆ ಸ್ಟೋರಿಯಲ್ಲಿ ಯಾವುದೇ ಹೊಸ ಅಂಶವೂ ಇರಲಿಲ್ಲ, ಹೂರಣವೂ ಇರಲಿಲ್ಲ. ಇದ್ದಕ್ಕಿದ್ದಂತೆಯೇ ಹೆಲಿಕಾಪ್ಟರ್ ಯಾಕೆ ಅಷ್ಟು ಕೆಳಗೆ ಬಂತು? ಅಸಲಿಗೆ ಹೆಲಿಕಾಪ್ಟರ್ ಹೋಗಬೇಕಿದ್ದುದು ಚಿತ್ತೂರಿಗೆ, ಕರ್ನೂಲ್ ಕಡೆ ಡೀವಿಯೇಷನ್ ಯಾಕೆ ತೆಗೆದುಕೊಂಡಿತು? ಹೆಲಿಕಾಪ್ಟರ್ನ ಬ್ಲಾಕ್ ಬಾಕ್ಸ್ನಲ್ಲಿ ವೈ.ಎಸ್.ಆರ್. ಪೈಲೆಟ್ನನ್ನುದ್ದೇಶಿಸಿ ಕಡೆಯದಾಗಿ ಈಡಿಯಟ್ ಅಂತ ಬೈದಿರುವುದು ರೆಕಾರ್ಡ್ ಆಗಿದೆಯಂತೆ, ಹಾಗಾದರೆ ಪೈಲೆಟ್ಗಳೇ ಏನಾದರೂ....? ಎಲ್ಲ ಈ ರೀತಿಯ ಹಳೆಯ ಪ್ರಶ್ನೆಗಳೇ. ಇಲ್ಲಿ ವೈ.ಎಸ್.ಆರ್.ರನ್ನು ಕೊಲ್ಲುವ ಹಂತಕ್ಕೆ ಯಾರು ಹೋಗಿರಬಹುದು, ಷಡ್ಯಂತ್ರ ರೂಪಿಸಿದವರಾರು? ಇಂತಹ ಯಾವುದೇ ಪ್ರಶ್ನೆಗಳನ್ನೂ ಅವರು ಕೈಗೆತ್ತಿಕೊಂಡಿಲ್ಲ. ಈ ಕಥನವನ್ನು ಬೇರ್ಯಾವುದೇ ಪತ್ರಿಕೆ ಪ್ರಕಟಿಸಿದ್ದಿದ್ದರೆ ಅದಕ್ಕೆ ಇಷ್ಟು ಮಾನ್ಯತೆ ಪ್ರಾಪ್ತವಾಗುತ್ತಿರಲಿಲ್ಲ, ಆದರೆ ಜಗನ್ ಒಡೆತನದ ಸಾಕ್ಷಿಯಲ್ಲಿ ಪ್ರಕಟಗೊಂಡಿರುವುದು ಇಷ್ಟು ಚರ್ಚೆಗೆ ಕಾರಣವಾಗಿದೆ. ದೆಹಲಿಯ ಅಪಘಾತ ತನಿಖಾ ತಂಡ ಹತ್ಯೆ, ಸಂಚು, ಷಡ್ಯಂತ್ರಗಳ ಎಲ್ಲಾ ಥಿಯರಿಗಳನ್ನೂ ಸಾರಾಸಗಟಾಗಿ ತಿರಸ್ಕರಿಸಿವೆ. ಅಂದು ವೈ.ಎಸ್.ಆರ್.ರವರವ ನಸೀಬು ಕೆಟ್ಟದಿತ್ತು, ಪ್ರಕೃತಿ ಮುನಿದಿತ್ತು ಅಷ್ಟೆ.

ಹೀಗೆ ಸೋನಿಯಾರನ್ನು ಭೇಟಿಯಾಗಲು ದೆಹಲಿಗೆ ಹೋಗುವ ಮೊದಲು ಇಲ್ಲಿ ವೈ.ಎಸ್.ಆರ್. ಭೂತವನ್ನು ಮೇಲೆಬ್ಬಿಸಿ ದೊಡ್ಡ ರಡಿಯೆಬ್ಬಿಸಿರುವುದು ಮೇಡಂ ಸೋನಿಯಾರ ಕಿವಿಗೆ ಬಿದ್ದು ಮತ್ತಷ್ಟು ಡ್ಯಾಮೇಜಾಗಿ ಹೋಗಿದೆ. ಅಸಲಿಗೆ ಸೋನಿಯಾ ಜಗನ್ರೊಡನೆಯ ಅಪಾಯಿಂಟ್ಮೆಂಟನ್ನು ರದ್ದುಗೊಳಿಸಿಬಿಟ್ಟಿದ್ದರು. ಏನೋ ಮುಖ್ಯಮಂತ್ರಿಯಾಗಿ ಹಿಂದಿರುಗುವೆ, ಕಾಂಗ್ರೆಸ್ ಹೈಕಮಾಂಡ್ಗೆ ಕೂಡ ತನ್ನನ್ನು ಮುಖ್ಯಮಂತ್ರಿ ಮಾಡದೇ ವಿಧಿಯಿಲ್ಲ ಎಂಬಂತೆ ಎದೆಯುಬ್ಬಿಸಿ ದೆಹಲಿಗೆ ಹೋಗಿದ್ದ ಜಗನ್ ಸೋನಿಯಾರೊಂದಿಗೆ ಭೇಟಿಯಾಗಲು ಕೂಡ ವೀರಪ್ಪ ಮೊಯಿಲಿಯವರ ಕೈಕಾಲು ಹಿಡಿಯಬೇಕಾಯಿತು. ಮೇಡಂ ಸೋನಿಯಾ ಅದೇನು ಹೇಳಿದರೋ ಗೊತ್ತಿಲ್ಲ, ಹ್ಯಾಪು ಮೋರೆ ಹಾಕಿಕೊಂಡು ಹೊರಬಂದ ಜಗನ್ಮೋಹನ ರೆಡ್ಡಿ ಇನ್ನು ಮಿಕ್ಕೆಲ್ಲವೂ ಸೋನಿಯಾರಿಗೆ ಬಿಟ್ಟದ್ದು ಅಂತ ವಿನೀತರಾಗಿದ್ದಾರೆ. ಸದ್ಯ ಕೇಂದ್ರ ಮಂತ್ರಿಮಂಡಲ ಸದ್ಯದಲ್ಲೇ ತುಸುಮಟ್ಟಿಗೆ ಪುನಾರಚನೆಯಾಗಲಿದ್ದು ಆಗ ಜಗನ್ಗೆ ಸ್ವತಂತ್ರ್ಯ ನಿರ್ವಹಣೆಯ ರಾಜ್ಯ ಖಾತೆ ಸಚಿವನನ್ನಾಗಿ ಮಡಬಹುದೆಂಬ ಮಾತುಗಳು ಕೇಳಿ ಬರುತ್ತಿವೆ. ಜಿ.ಕೆ.ಮೂಪನಾರ್ರ ಪುತ್ರ ಜಿ.ಕೆ.ವಾಸನ್ ಅವರನ್ನು ತಮಿಳುನಾಡಿನಲ್ಲಿ ಕಾಂಗ್ರೆಸ್ ಅನ್ನು ಪುನರುಜ್ಜೀವನಗೊಳಿಸಲು ರಾಹುಲ್ ಗಾಂಧಿ ಕಳಿಸಲಿದ್ದಾರೆಂದು ಹೇಳಲಾಗುತ್ತಿದೆ. ಆಗ ಅವರು ನಿರ್ವಹಿಸುತ್ತಿರುವ ಷಿಪಿಂಗ್ ಸಚಿವಾಲಯದ ಹೊಣೆಯನ್ನು ಜಗನ್ಮೋಹನ ರೆಡ್ಡಿಗೆ ನೀಡಬಹುದೆಂದು ಹೇಳಲಾಗುತ್ತಿದೆ.

ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದ ಹಾಗಾಗಿದೆ ಜಗನ್ಮೋಹನ ರೆಡ್ಡಿಯ ಕಥೆ. ಮೀಡಿಯಾ ಎನ್ನುವುದು ಎರಡು ಅಂಚಿನ ಕತ್ತಿಯಿದ್ದ ಹಾಗೆ. ಅದು ಕತ್ತಿಯ ಮೇಲಿನ ನಡಿಗೆ. ಅದನ್ನು ಅರ್ಥ ಮಾಡಿಕೊಳ್ಳದೆ ಕೋತಿ ಕಯ್ಯಾಗಿನ ಅದೂ ಏನು, ಹೆಂಡ ಕುಡಿದ ಕೋತಿಯ ಕಯ್ಯಾಗಿನ ಮಾಣಿಕ್ಯದಂತೆ ಮೀಡಿಯಾವನ್ನು ಬಳಸಲು ಹೊರಟರೆ ಹೀಗೇ ಆಗುವುದು. ಆಂಧ್ರದ ರಾಜಕಾರಣ ಸದ್ಯಕ್ಕಂತು ಗತಿಗೆಟ್ಟು ನೀತಿಗೆಟ್ಟು ಹೋಗಿದೆ. ರೋಶಯ್ಯನವರೇ ಇನ್ನುಳಿದ ನಾಲ್ಕೂವರೇ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆದರೆ ಆಂಧ್ರದ ಜನ ಒಳ್ಳೆ ಆಡಳಿತವನ್ನಾದರೂ ನಿರೀಕ್ಷಿಸಬಹುದು. ರೋಶಯ್ಯನವರು ಅದರ ಸೂಚನೆಗಳನ್ನಾಗಲೇ ನೀಡುತ್ತಿದ್ದಾರೆ.

4 thoughts on “ವೈ. ಎಸ್. ರಾಜಶೇಖರ ರೆಡ್ಡಿಯದು ಹತ್ಯೆ! - ಮೀಡಿಯಾ ಮತ್ತು ಆಂಧ್ರದ ಗತಿಕೆಟ್ಟ ರಾಜಕಾರಣ

Me, Myself & I said...

ಆತ್ಮೀಯ,

ಇನ್ನೊಬ್ಬರ ಬ್ಲಾಗಲ್ಲಿ ಬರೆದಿರೋದು ಇಷ್ಟ ಆಗ್ಲಿಲ್ಲ ಅಂದ್ರೆ ಕಾಮೆಂಟ್ ಹಾಕದೆ ಸುಮ್ನೆ ಇಬ್ದಿಡ್ಬೇಕು ಅನ್ಸುತ್ತೆ. ಆದ್ರೆ ನೀವು ಇಲ್ಲಿ ಒಳ್ಳೆ ಮಾಹಿತಿ ಬರೆದಿರೋದರ ಜೊತೆಗೆ ಕೆಲ್ವೊಂದು ದ್ವಂದ್ವಗಳನ್ನು ಸಹ ತಲೆಗೆ ತುಂಬಿದ್ದೀರ. ಉದಾಹರಣೆಗೆ

@ಮೇಟಿಯಂತೆ ಸತತ 48 ಘಂಟೆಗಳ ಕಾಲ ಸಿಎಂ ಖಚೇರಿಯಲ್ಲೇ ಕುಳಿತು...ಕರ್ನಾಟಕದ ಐದನೇ ಒಂದು ಭಾಗದಷ್ಟು ಮಾತ್ರ ಎಂದರೆ, ಆ ಆಡಳಿತದ ದಕ್ಷತೆಯನ್ನು ನೀವೇ ಊಹಿಸಬಹುದು.#

ನೆರೆ ಬಂದಾಗ ಪ್ರಾಣ ಆಯ್ತು ಅಂತ ತಿಳ್ಕಂದಿದ್ದ ನಂಗೆ ನೀವೇಳ್ತಿರೋದು ನೆರೆ ನಿಂತು ಪರಿಹಾರ ಕಾರ್ಯ ನಿರ್ವಹಿಸ್ಬೇಕಾದ ಸಂದರ್ಭದಲ್ಲಿ ಪ್ರಾಣ ಹಾನಿ ಆಗಿದೆ ಅನ್ನೋ ಅರ್ಥದಲ್ಲಿದೆ.

ಕೈ. ವೆ. ಆದಿತ್ಯ ಭಾರದ್ವಾಜ said...

ಸರ ನಮಸ್ಕಾರ,
ನಾನು ಆದಿತ್ಯ ಅಂತ. adiloka.blogspot.com ನ ಬರಹಗಾರ. ಆಂಧ್ರ ರಾಜಕಾರಣದ ಬಗೆಗಿನ ನನ್ನ ಲೇಖನವನ್ನು ತಾವು ಓದಿ ಪ್ರತಿಕ್ರಿಯಿಸಿದ್ದೀರ. ಧನ್ಯವಾದಗಳು. ಪಾಸಿಟಿವ್ ಆಗಿದ್ದರೆ ಮಾತ್ರ ಕಾಮೆಂಟ್ ಮಾಡಬೇಕು ಅನ್ನುವ ತಮ್ಮ ನಿಲುವು, ನನಗೆ ತುಂಬಾ ಇಷ್ಟವಾಯಿತು. ಇನ್ನು ತಾವು ಎತ್ತಿರುವ ದ್ವಂದ್ವದ ವಿಚಾರ. ಆ ಭಾಗವನ್ನು ನಾನು ಮತ್ತೆ ಓದಿ ನೋಡಿದೆ. ಅದು ನನ್ನದೇ ತಪ್ಪು. ಅಲ್ಲಿ ನಾನು ಅಂದುಕೊಂಡಿದ್ದನ್ನು ಅದೇ ಅರ್ಥದಲ್ಲಿ ಓದುಗರಿಗೆ ತಲುಪಿಸಲಾಗಿಲ್ಲ.
ನೆರೆ, ಪರಿಹಾರ ಮತ್ತು ಪ್ರಾಣ ಹಾನಿ ಇವು ಮೂರೂ ಒಟ್ಟೊಟ್ಟಿಗೆ ಆದವು ಆಂಧ್ರದಲ್ಲಿ. ಅಲ್ಲಿ ನೆರೆ flash floods ಆಗಿರಲಿಲ್ಲ. ಅದು ೩ ದಿನಗಳ ಒಂದು ಇವೆಂಟ್ ಆಗಿತ್ತು. ಶ್ರೀಶೈಲಂ ಡ್ಯಾಮ್ ತುಂಬಿ, ಹರಿದಾಗ ಅಲ್ಲಿಂದ ಆ ನೀರನ್ನು ಬಿಡುತ್ತಿದ್ದರು. ಅದು ಎಷ್ಟೊತ್ತಿಗೆ ಎಲ್ಲಿಗೆ ಬಂದು ಯಾವ ಊರುಗಳನ್ನು ಮುಳುಗಿಸುತ್ತವೆ ಎಂಬ ಅಂದಾಜು ಸಿಕ್ಕುತ್ತಿತ್ತು. ಅಷ್ಟೊತ್ತಿಗೆ ಆ ಊರುಗಳಲ್ಲಿ evacuation ಮತ್ತು ಪರಿಹಾರ ಕಾರ್ಯ ಕೈಗೊಳ್ಳುತಿತ್ತು ಸರ್ಕಾರ. ಆದ್ದರಿಂದಲೇ ಆಂಧ್ರದಲ್ಲಿ ಪ್ರಾಣಹಾನಿ ಕಡಿಮೆಯಾಯಿತು. ರೋಶಯ್ಯನವರ crisis-management ಮತ್ತು ದಕ್ಷ ಆಡಳಿತ ಅದರಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ನಾನು ಹೇಳ ಹೊರಟಿದ್ದು ಇದು. ಸ್ಥಳಾಭಾವದಿಂದ ಇಷ್ಟು ವಿವರಣೆ ನೀಡಲಾಗಿಲ್ಲ. ಅಂತು ನನ್ನ ಲೇಖನವನ್ನು ಓದಿ ತಪ್ಪು ಒಪ್ಪುಗಳನ್ನು ತಿಳಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು. ನನ್ನ ಲೇಖನಗಳನ್ನು ಹೀಗೆ ಓದಿ ದಯವಿಟ್ಟು ಪ್ರತಿಕ್ರಿಯಿಸಿ. ನಾನು ತಿದ್ದಿಕೊಳ್ಳಲು ಅವಕಾಶವಾಗುತ್ತದೆ.

lodyashi said...

ಆತ್ಮೀಯ,
ಈ ರೀತಿ ಗೊಂದಲಗಳು ಪ್ರತಿಯೊಬ್ರಿಗೂ ಆಗ್ತಿರುತ್ತೆ.
"ಓಡ್ತಿರೋವ್ನು ಯಡವದೇನೆ ಕುಂತಿರೋವ್ನು ಯಡ್ವತಾನೆಯೇ!" ಈ ಅರ್ಥ ಬರೋ ಒಂದು ಗಾದೆ ಇದೆ ನಿಮಗೆ ಗೊತ್ತ?

ಹಾಗೆ ನನ್ನ ಬ್ಲಾಗಲ್ಲೂ ನೋಡ್ತಾ ಇರಿ. ನಿಮಗೆ ಇಷ್ಟ ಆದ್ರೆ ಒಂದು ಕಾಮೆಂಟ್ ಹಾಕಿ. ನಂಗೂ ನನ್ನ ಬರಹನ ಇನ್ನೊ ಇಂಪ್ರೂವ್ ಮಡ್ಕೊಲ್ಲೋಕ್ಕೆ ಹಾಗುತ್ತೆ.

ದ್ವಂದ್ವಾವನ್ನ ಸರಿ ಪಡಿಸಿದ್ದಕ್ಕೆ ಧನ್ಯವಾದಗಳು.

MATHI MAATU said...

aditya avare, namaste... maadhyama ellede ide gondala srishti maadta ide. tamage bekaaddannu prakata madodu, bedadavarannu iriyodu... ee yugadalli ellarigoo gumpugalu beke horatu manushyaralla.

Proudly powered by Blogger
Theme: Esquire by Matthew Buchanan.
Converted by LiteThemes.com.