ನೋಬೆಲ್ ಒಬಾಮಾ, ಶೇಷಪ್ರಶ್ನೆ ಮತ್ತು ಪಂಜರದ ಗಿಳಿ!


ನೋಬೆಲ್ ಒಬಾಮಾ, ಶೇಷಪ್ರಶ್ನೆ ಮತ್ತು ಪಂಜರದ ಗಿಳಿ!

ಜಗತ್ತಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಯಾವುದು? ಚಿಕ್ಕ ಮಗುವನ್ನು ಕೇಳಿದರೂ ಠಕ್ಕಂತ ಹೇಳುತ್ತದೆ - ನೋಬೆಲ್ ಪ್ರಶಸ್ತಿ. ನೋಬೆಲ್ನ ವಿಭಾಗಗಳಲ್ಲೇ ಅತಿ ಪ್ರತಿಷ್ಠಿತವಾದುದೆಂದರೆ ನೋಬೆಲ್ ಶಾಂತಿ ಪುರಸ್ಕಾರ. ಬಹುಜನರ ಒಳಿತಿಗಾಗಿ ದುಡಿದು ಅವರ ಜೀವನದಲ್ಲಿ ಸುಧಾರಣೆ ತಂದ ಮಹನೀಯರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇಂತಿಪ್ಪ ಈ ಬಾರಿಯ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಮೊನ್ನೆ ನೋಬೆಲ್ ಪ್ರತಿಷ್ಠಾನ ಒಬಾಮಾನ ಹೆಸರನ್ನು ಪ್ರಕಟಿಸುತ್ತಿದ್ದಂತೆಯೇ ಜಗತ್ತೇ ನಿಬ್ಬೆರಗಾಗಿ ಬಿಟ್ಟ ಬಾಯಿ ಬಿಟ್ಟಂತೆ ನಿಂತು ಬಿಟ್ಟಿತು. ನನ್ನ ಅಂದಾಜಿನಂತೆ ಒಬಾಮಾನದು ಇದೇ ಪರಿಸ್ಥಿತಿಯಿದ್ದೀತು. ಮರುಕ್ಷಣದಲ್ಲಿಯೇ ಇದು ಟೀಕೆಗೊಳಗಾಯಿತು. ಒಬಾಮಾನಿಗೆ ನೋಬೆಲ್! too early. ಇದು ಬಹುಮಂದಿಯ ಉದ್ಗಾರ. ಕೂಡಲೇ ಪತ್ರಿಕಾಘೋಷ್ಠಿ ನಡೆಸಿದ ಒಬಾಮಾ ತನಗೆ ನೋಬೆಲ್ ಶಾಂತಿ ಪುರಸ್ಕಾರ ಪಡೆದು ಮಂಡೇಲಾ, ಕಿಂಗ್, ದಲೈಲಾಮಾ, ಥೆರೆಸಾರಂಥಾ ಮಹನೀಯರ ನಡುವೆ ನಿಲ್ಲುವ ಅರ್ಹತೆಯಿಲ್ಲವಾದರೂ ಅಮೆರಿಕಾದ ಜನರ
ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುವುದಾಗಿ ಹೇಳಿ ಯಾವುದೇ ಪ್ರಶ್ನೆಗಳಿಗುತ್ತರಿಸದೆ ನೆಟ್ಟಗೆ ವ್ಯಟ್ ಹೌಸ್ ಸೇರಿಬಿಟ್ಟ. ಜಗತ್ತು ಕಾವೇರಿದ ಬಿಸಿ ಚರ್ಚೆಯಲ್ಲಿ ಮುಳುಗಿ ಹೋಯಿತು.

ವಿಶ್ವಶಾಂತಿಗಾಗಿ ದುಡಿದವರಿಗೆ ಕೊಡಮಾಡುವ ನೋಬೆಲ್ ಶಾಂತಿ ಪುರಸ್ಕಾರವನ್ನು ಪಡೆಯುವ ಅರ್ಹತೆಯನ್ನು ಒಬಾಮಾ ಸಂಪಾದಿಸಿದ್ದಾನೆಯೇ? ಒಬಾಮಾನ ನೋಬೆಲ್ ಪ್ರಶ್ನಾರ್ಹವಾಗುವುದೇ ಇಲ್ಲಿ. ಅಸಲಿಗೆ ಅಧ್ಯಕ್ಷ ಒಬಾಮಾ ಬರಿಯ 9 ತಿಂಗಳ ಹಸುಗೂಸು. ಅಮೆರಿಕಾ ಅಧ್ಯಕ್ಷನ ಹೊಣೆಗಾರಿಕೆ ಜವಾಬ್ದಾರಿಗಳನ್ನರಿತು ಆ ಕುರ್ಚಿಯಲ್ಲಿ ಸೆಟ್ಲ್ ಆಗಲೇ ವರ್ಷದ ಮೇಲೆ ಬೇಕು. ಇನ್ನು 9 ತಿಂಗಳುಗಳ ಅಧ್ಯಕ್ಷಗಿರಿಯಲ್ಲಿ ಒಬಾಮಾ ನೋಬೆಲ್ ಪಡೆಯುವಷ್ಟು ಅದೇನು ಕೆಲಸ ಮಾಡಿಬಿಟ್ಟ? ಇದು ಪ್ರಶ್ನೆ, ಅಮೆರಿಕದವರೂ ಸೇರಿದಂತೆ ಜಗತ್ತೇ ಎತ್ತಿರುವ ಪ್ರಶ್ನೆ.

ಇರಾಕ್ ಯುದ್ಧವನ್ನು ಖಂಡಿಸುತ್ತಾ, ನಾಗರೀಕತೆಗಳ ಸಂಘರ್ಷ ಥಿಯರಿಯನ್ನು ತಿರಸ್ಕರಿಸುತ್ತಾ, ವಿಶ್ವ ಭ್ರಾತೃತ್ವದಾಧಾರದ ಮೇಲೆ ನಿಂತ ವಿಶ್ವದ ಕನಸು ಕಟ್ಟಿಕೊಂಡ ಕಿಂದರಜೋಗಿಯಂತೆ ತನ್ನ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ನಡೆಸಿ ವಿಜಯಿಯಾಗಿ ವೈಟ್ಹೌಸ್ ಒಳಹೊಕ್ಕವನು ಒಬಾಮಾ. ಇಡೀ ಜಗತ್ತಿಗೆ ನವ-ಭರವಸೆಯನ್ನು ಮೂಡಿಸಿರುವ ಮುತ್ಸದ್ಧಿ ಒಬಾಮಾ ಎನ್ನುವುದರಲ್ಲಿ ಅನುಮಾನವಿಲ್ಲ. ಒಬಾಮಾ ಅಧಿಕಾರಕ್ಕೆ ಬಂದಾಗಿನಿಂದ ಅಮೆರಿಕಾ ಸರ್ಕಾರದ ಮುಸ್ಲಿಂ ವಿದ್ವೇಷದ ಕಿಚ್ಚು ಆವಿಯಾಗತೊಡಗಿದೆ. ಅಧಿಕಾರ ವಹಿಸಕೊಂಡ ಮೊದಲ ದಿನದಿಂದ ಒಬಾಮಾ ಅಮೆರಿಕಾ ಮತ್ತು ಮುಸ್ಲಿಂ ಜಗತ್ತಿಗಳ
ನಡುವಿನ ಸಂಬಂಧಗಳನ್ನು ವೃದ್ಧಿಸಲು ತನ್ನ ಕೈಲಾದಷ್ಟು ಪ್ರಯತ್ನ ನಡೆಸುತ್ತಲೇ ಬಂದಿದ್ದಾನೆ. ಕೈರೋದ ಆತನ ಭಾಷಣ ಅಮೆರಿಕಾ ಮುಸ್ಲಿಂ ಜಗತ್ತಿನೊಂದಿಗೆ ಮುಖಕ್ಕೆ ಮುಖ ಕೊಟ್ಟು ಆತ್ಮೀಯವಾಗಿ ನಡೆಸಿದ ಸಂಭಾಷಣೆಯಂತಿತ್ತು. ಒಬ್ಬ ಅಮೆರಿಕಾದ ಅಧ್ಯಕ್ಷ ಮುಸ್ಲಿಂ ಜಗತ್ತಿನಲ್ಲಿ ನಿಂತು, re-conciliationನ ಮಾತನಾಡಿದ್ದು ಐತಿಹಾಸಿಕವೂ, ಚೇತೋಹಾರಿಯೂ ಆಗಿತ್ತು.

ಈ ತಲೆಮಾರಿನವರಿಗೆ ಅಮೆರಿಕಾದ ಅದ್ಯಕ್ಷರೆಂದರೆ ಯುದ್ಧ ಪಿಪಾಸುವೊಬ್ಬನ ಚಿತ್ರ ಕಣ್ಣ ಮುಂದೆ ಬರುತ್ತಿತ್ತು. ಅದನ್ನು ಮೊದಲ ಬಾರಿಗೆ ಬದಲಿಸಿದವನೇ ಒಬಾಮಾ. ಮೊದಲೇ ಮಾತು ಕೊಟ್ಟಂತೆ ಪರಮ ಕುಖ್ಯಾತ ಗ್ವಾಂಟನಮೋ ಬೇ ಕೇಂದ್ರವನ್ನು ಬಂದ್ ಮಾಡಿಸಲು ಅಣಿಯಾಗಿದ್ದಾನೆ. ತನ್ನ ಮೊದಲ ನಿಲುವಿಗೆ ಬದ್ಧನಾಗಿ ಇರಾಕಿನಿಂದ ತನ್ನ ಸೈನ್ಯವನ್ನು ಸಂಪೂರ್ಣವಾಗಿ ವಾಪಸು ಕರೆಸಿಕೊಳ್ಳುವ ಹಂತದಲ್ಲಿದ್ದಾನೆ. ಒಸಾಮಾನ ಬೇಟೆಯಾಡುವವರೆಗೂ ಅಫಘಾನಿಸ್ತಾನದಿಂದ ಸೈನ್ಯದ ವಾಪಸಾತಿಯಿಲ್ಲವೆಂದು ಹೇಳಿದ್ದರೂ ಅಲ್ಲಿ 2001ರ ನಂತರ ಮೊದಲ ಬಾರಿಗೆ ಪ್ರಜಾಸತ್ತಾತ್ಮಕವಾಗಿ ಚುನಾವಣೆಗಳು ನಡೆಯುತ್ತಿವೆ. ಸುಮಾರು 4 ದಶಕಗಳ ನಂತರ ಇರಾನ್ನ ಸರ್ಕಾರವನ್ನು ಯಾವುದೇ ಮುಂಗಡ ಶರತ್ತುಗಳನ್ನು ವಿಧಿಸದೆ ಶಾಂತಿ ಮಾತುಕತೆಗೆ ಆಹ್ವಾನಿಸಿದ್ದಾನೆ. ಇರಾನ್ ಮೊಟ್ಟಮೊದಲ ಬಾರಿಗೆ ತನ್ನ ಅಣ್ವಸ್ತ್ರ ವ್ಯವಸ್ಥೆಯನ್ನು ಅಂತರಾಷ್ಟ್ರೀಯ ತನಿಖೆಗೊಳಪಡಿಸಲು ಒಪ್ಪಿದೆ. ಇನ್ನು ಮೊನ್ನೆ ರಷ್ಯಾದೊಂದಿಗೆ ಉದ್ಭವಿಸಬಹುದಾಗಿದ್ದ ಅಸ್ತ್ರಗಳ ಹುಚ್ಚು ಪೈಪೋಟಿಗೆ ಏಕಮುಖವಾಗಿ ಬ್ರೇಕ್ ಹಾಕಿ, ರಷ್ಯಾ ಕೂಡ ಅದನ್ನು ಸಮ್ಮತಿಸುವಂತೆ ಮಾಡಿದ್ದು ಪ್ರಶಂಸನೀಯವೇ ಸರಿ. ಸಂಬಂಧಗಳು ಹಳಸಿದ್ದ ಉತ್ತರ ಕೊರಿಯಾ, ಕ್ಯೂಬಾ ಮತ್ತು ವೆನಿಜುವೆಲಾಗಳೆಡೆ ಸ್ನೇಹದ ಹಸ್ತ ಚಾಚಿದ್ದಾನೆ. ಇನ್ನು ಡೆಮಾಕ್ರಾಟ್ಗಳ ಮೂಲ ನಿನಾದವಾದ ಅಣ್ವಸ್ತ್ರ ಮುಕ್ತ ವಿಶ್ವವನ್ನು ಸಾಧಿಸುವೆಡೆ ತನ್ನ ದೃಷ್ಟಿ ಕೇಂದ್ರೀಕರಿಸಿ ಮುನ್ನಡೆಯುತ್ತಿದ್ದಾನೆ. ಇನ್ನು ಇಸ್ರೇಲ್ ಪ್ಯಾಲೆಸ್ಟೀನ್ ನಡುವಿನ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲೂ ಪ್ರಯತ್ನ ನಡೆಸುತ್ತಿದ್ದಾನೆ.

ನೋಬೆಲ್ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷ ಒಬಾಮಾಗೆ ನೋಬೆಲ್ ಪ್ರಶಸ್ತಿಯನ್ನು ಘೋಷಿಸುತ್ತಾ ಈ ಪ್ರಶಸ್ತಿ ಒಬಾಮಾನ ಅಣ್ವಸ್ತ್ರ ಮುಕ್ತ ವಿಶ್ವ ಸಾಧನೆಡೆಗಿನ ಆತನ ಬದ್ಧತೆ, ಆತನ ರಾಜತಾಂತ್ರಿಕ ಶಾಂತಿಸಂಧಾನಗಳು ಮತ್ತು ಆತನ ಲೋಕದೃಷ್ಟಿಗಾಗಿ ಎಂದು ಹೇಳಿದ್ದಾರೆ. ಇಷ್ಟೆಲ್ಲದರ ಹೊರತಾಗಿಯೂ ನಿಜ ಹೇಳಬೇಕೆಂದರೆ ಒಬಾಮಾ ಇದುವರೆಗೂ ಮಾಡಿರುವುದೆಲ್ಲವೂ ಜಗತ್ತಿಗೆ ಉತ್ತಮ ಪ್ರಗತಿಪರ ನಾಳೆಯೊಂದರ ಕನಸು ಬಿತ್ತಿರುವುದು ಅಷ್ಟೆ. ಒಬಾಮಾನ ಪ್ರಚಂಡ ವಾಕ್ಪಟುತ್ವ ಮತ್ತು ಅತ್ಯುತ್ತಮ ಎನ್ನಬಹುದಾದಂತಹ self-marketing ಜನರನ್ನಷ್ಟೆ ಅಲ್ಲದೇ ನೋಬೆಲ್ ಪ್ರತಿಷ್ಠಾನವನ್ನೂ ಮರಳು ಮಾಡಿರುವುದು ಸೋಜಿಗವೇ ಸರಿ. ಅಸಲಿಗೆ ಗ್ರೌಂಡ್ ರಿಯಾಲಿಟಿ ಎಳ್ಳಷ್ಟೂ ಬದಲಾಗಿಲ್ಲ. ಇರಾಕ್ನಿಂದ ಸೈನ್ಯ ಹಿಂತೆಗೆದುಕೊಳ್ಳುವೆನೆಂದು ಮಾತಿಗೊಮ್ಮೆ ಹೇಳಿದರೂ, ಅದಿನ್ನೂ ಅಸಲಿಗೆ ಶುರುವೇ ಆಗಿಲ್ಲ. ಗ್ವಾಂಟನಮೋ ಬೇ ಕೇಂದ್ರವನ್ನು ಜನವರಿ 2010ರೊಳಗೆ ಮುಚ್ಚಿಸುವ ಮಾತಾಡಿದ್ದಾನಾದರೂ ಆ ಡೆಡ್ಲೈನೊಳಗೆ ಅದು ದುಸ್ಸಾಧ್ಯವೆಂಬ ಮಾತುಗಳಿವೆ. ಇನ್ನು ನೋಬೆಲ್ ಶಾಂತಿ ಪುರಸ್ಕಾರ ಘೋಷಣೆಯಾದ ದಿನ ಒಬಾಮಾ ಮಾಡಿದ ಮೊದಲ ಕೆಲಸ ಅಫಘಾನಿಸ್ತಾನ ಯುದ್ಧದ ಸ್ಟ್ರಾಟಜಿಗಳನ್ನು ತನ್ನ ಮಿಲಿಟರಿ ಸಲಹೆಗಾರರೊಂದಿಗೆ ಚರ್ಚಿಸಿದ್ದು. ಅವತ್ತೇ ಅಮೆರಿಕಾ ಚಂದ್ರನ ಮೇಲೆ ಬಾಂಬ್ ಸಿಡಿಸಿದ್ದಂತೂ ವಿಪರ್ಯಾಸವೇ ಸರಿ. ಇನ್ನು ವಿಶ್ವದ ಭಯೋತ್ಪಾದನೆಯ ಉಗಮ ಸ್ಥಾನವಾಗಿರುವ ಪಾಕಿಸ್ತಾನವನ್ನು ತುಸು ಒರಟಾಗೇ ಕಿವಿ ಹಿಂಡಿದನಾದರೂ ಇನ್ನೂ ಅಮೆರಿಕನ್ ನೆರವು ಆ ದೇಶವನ್ನು ಜೀವಂತವಾಗಿರಿಸಿದೆ.
ಒಬಾಮಾನ ಧ್ಯೇಯೋದ್ದೇಶಗಳನ್ನ ಇಲ್ಲಿ ಯಾರೂ ಅನುಮಾನಿಸುತ್ತಿಲ್ಲ. ಬುಷ್ನ ಕಾಲದಲ್ಲಿ ಅಮೆರಿಕೆಯ ವಿದೇಶಾಂಗ ನೀತಿ ಮುಖ್ಯವಾಗಿ ಮಿಲಿಟರಿ ಶಕ್ತಿಯ ಸುತ್ತ ಹೆಣೆಯಲ್ಪಟ್ಟಿತ್ತು. ಒಬಾಮಾ ಅಧಿಕಾರ ವಹಿಸಕೊಂಡ ಈ ಒಂಬತ್ತು ತಿಂಗಳುಗಳಲ್ಲಿ ಇದನ್ನು ಸದೆಬಡಿದು ಇತರ ದೇಶಗಳೊಂದಿಗೆ ಸಂಧಾನ ಮಾತುಕತೆಗಳಿಗೆ ಚಾಲನೆ ನೀಡಿದ್ದಾನೆ. ಒಬಾಮಾನ ಹೊರತಾಗಿ ಅಮೆರಿಕಾ ಇರಾನ್, ವೆನಿಜುವೆಲಾ, ಉತ್ತರ ಕೊರಿಯಾಗಳೊಂದಿಗೆ ಅಮೆರಿಕಾ ಶಾಂತಿ ಮಾತುಕತೆಗಳನ್ನು ನಡೆಸುವುದನ್ನು ಊಹಿಸಲಾದರೂ ಆಗುತ್ತಿತ್ತೆ? ಇವೆಲ್ಲಕ್ಕಿಂತಲೂ ಒಬ್ಬ ಕರಿಯ ಆಫ್ರಿಕನ್-ಅಮೆರಿಕನ್ ಆಗಿ ಬಿಳಿಯರ ವಿಶ್ವಾಸವನ್ನೂ ಗಳಿಸಿ ಅಮೆರಿಕಾದ ಅಧ್ಯಕ್ಷನಾಗುವುದಿದೆಯಲ್ಲ, ಅದೇ ಒಂದು ಮಹತ್ತರ ಐತಿಹಾಸಿಕ ಸಾಧನೆ. ಇಡೀ ಜಗತ್ತಿಗೆ ಉತ್ತಮ ನಾಳೆಯೊಂದರ ಕನಸು ಬಿತ್ತಿ, ಹೊಸ ಬೆಳಕಿನ ನವ ಭರವಸೆ ಮೂಡಿಸಿ ಜಗತ್ತನ್ನು ಆತನ ಹಿಂದೆ ಕಟ್ಟಿಕೊಂಡು ಮುನ್ನಡೆಯುತ್ತಿರುವ ಕಿಂದರಿಜೋಗಿ ಒಬಾಮಾ.

ಆದರೆ, ನೋಬೆಲ್ನಂತಹ ಅತ್ಯುನ್ನತ ಪ್ರಶಸ್ತಿಗೆ ಒಂದು ಹೋರಾಟ, ಒಂದು ಸಾಧನೆ ಆಧಾರವಾಗಬೇಕಲ್ಲವೇ? ನೋಬೆಲ್ ಶಾಂತಿ ಪುರಸ್ಕಾರ ಬಹುಜನರ ಜೀವನವನ್ನು ಪಾಸಿಟಿವ್ ಆಗಿ ಪರಿವರ್ತಿಸಿದ ಮಹನೀಯನಿಗೆ ಕೊಡಬೇಕು ಅಂತ ಆಲ್ಫ್ರೆಡ್ ನೋಬೆಲ್ ಹೇಳ್ತಾನೆ. ಈಗ ಒಬಾಮಾ ನೋಬೆಲ್ ಶಾಂತಿ ಪುರಸ್ಕಾರ ಪಡೆಯುವಷ್ಟು ಕೆಲಸ ಮಾಡಿದ್ದಾನಾ? ಉದ್ದೇಶ ಪ್ರಯತ್ನ ಎಲ್ಲಾ ಸರಿ, ಏನು ಆತನ ಸಾಧನೆ? ನೋಬೆಲ್ ಶಾಂತಿ ಪುರಸ್ಕಾರವೆನ್ನುವುದು ಸಾಧನೆಗೋ, ಇಲ್ಲ ಸಾಧನೆಯ ಹಾದಿಯಲ್ಲಿ ನಡೆಯುವ ಪ್ರಯತ್ನಕ್ಕೋ? ಈಗ ಒಬಾಮಾ ವಿಶ್ವ ಶಾಂತಿಗಾಗಿ ದುಡಿದು ನೋಬೆಲ್ ಶಾಂತಿ ಪುರಸ್ಕಾರ ಸಂಪಾದಿಸಿದನೆ, ಇಲ್ಲ ಆತನ ಉದ್ದೇಶ ಪ್ರಯತ್ನಗಳಿಗಾಗಿ ನೋಬೆಲ್ ಪಡೆದು ಇನ್ನು ಮುಂದೆ ನೋಬೆಲ್ ಒಬಾಮಾ ಆಗಿ ಹೋರಾಡಲಿದ್ದಾನೆಯೇ? ಎನ್ನುವುದು ಮಹಾಭಾರತದ ದ್ರೌಪದಿಯ ಶೇಷಪ್ರಶ್ನೆಯಾಗಿಯೇ ಉಳಿದುಹೋಗುತ್ತದೆ. ಅಮೆರಿಕಾದ ಅಧ್ಯಕ್ಷ ಅನ್ನೋ ಕಾರಣಕ್ಕೆ ನೋಬೆಲ್ ಪ್ರತಿಷ್ಠಾನ ಒಬಾಮಾನಿಗೆ ಈ ಪ್ರಶಸ್ತಿ ಕೊಟ್ಟಿದೆಯೆನ್ನುವುದು ಸ್ಪಷ್ಟ. A nobel for obama so early, has robbed the nobel of its nobelness. ಇದರಲ್ಲಿ ಸಂಶಯವೇ ಇಲ್ಲ.



ಸರಿ, ಸರಿಯೋ ತಪ್ಪೋ ಒಬಾಮಾ ಇನ್ನು ಮುಂದೆ ನೋಬೆಲ್ ಒಬಾಮಾ. ಒಬಾಮಾ ಮತ್ತು ನೋಬೆಲ್ ಒಬಾಮಾ ಬೇರಯದೇ ವ್ಯಕ್ತಿಗಳಾ? ಇಲ್ಲ ಅಂತ ಆತನೂ ಹೇಳಬಹುದು ಆದರೆ ಅದು ಶುದ್ಧ ಸುಳ್ಳು. ಒಬಾಮಾ ವೈಟ್ಹೌಸ್ ಒಳಹೊಕ್ಕಿದ್ದೇ ಆತನ ಪ್ರಚಂಡ ವಾಕ್ಪಟುತ್ವದ ಮೂಲಕ ಆತನ ಕನಸನ್ನು ಅಮೇರಿಕೆಗೆ ಮತ್ತು ಸ್ಥೂಲವಾಗಿ ಜಗತ್ತಿಗೇ ಮಾರಿ. ಇಂದು ಅಪಾರ ನಿರೀಕ್ಷೆಗಳ ಬೆಟ್ಟವೇ ಆತನ ಭುಜದ ಮೇಲಿದೆ. ಆತನ ಪ್ರತಿ ನಡೆಯನ್ನೂ ಜಗತ್ತು ವಿಶ್ಲೇಷಿಸುತ್ತಿದೆ. ಜಗತ್ತಿಗೆ ತಾಳ್ಮೆ ಅನ್ನುವುದು ಗೊತ್ತಿಲ್ಲ. ಒಬಾಮಾ ಬಂದು ಕೂತ ತಿಂಗಳುಗಳಲ್ಲಿ ರಿಜಲ್ಟುಗಳನ್ನು ಕೇಳುತ್ತದೆ. ಒಬಾಮಾ ಅಧ್ಯಕ್ಷನಾದ ಮೇಲೆ ಆತ ತನ್ನ ಈ marketed ಇಮೇಜ್ನ ಪಂಜರದೊಳಗೆ ಸಿಕ್ಕಿಹಾಕಿಕೊಳ್ಳತೊಡಗಿದ್ದಾನೆ ಎಂಬ ಭಾವನೆ ಹಲವರಿಗೆ ಮೂಡಿತ್ತು. ಆತ ಕೆಲ ಸಂದರ್ಭಗಳಿಗೆ ಪ್ರಾಗ್ಮಾಟಿಕ್ ಆಗಿ ಪ್ರತಿಕ್ರಿಯಿಸದೇ ಆತನನ್ನು ಈ ಪಂಜರ ತಡೆಯುತ್ತಿದೆ ಅನ್ನುವ ಭಾವನೆ ಸಹ ಮೂಡತೊಡಗಿತ್ತು. ಈಗ ನೋಬೆಲ್ ಶಾಂತಿ ಪುರಸ್ಕಾರ ಶಾಶ್ವತವಾಗಿ ಒಬಾಮಾನನ್ನು ಈ ಪಂಜರದ ಗಿಳಿಯನ್ನಾಗಿಸಿದೆ. ಹೌದು ಒಬಾಮಾ ಈಗ ಪಂಜರದ ಗಿಳಿ! ನಾವೀಗ ಒಬಾಮಾನನ್ನು ಫ್ರೇಮ್ ಹಾಕಿಸಿ ಗೋಡೆಗೆ ನೇತು ಹಾಕಿಬಿಟ್ಟಿದ್ದೇವೆ. ಈಗ ಆತ ಒಂದು ಆದರ್ಶ. ಒಬಾಮಾ ಈಗ ಈ ಚೌಕಟ್ಟಿನಲ್ಲಿಯೇ ವ್ಯವಹರಿಸಬೇಕಾಗುತ್ತದೆ. ಹಾಗೆ ನೋಡಿದರೆ ನೋಬೆಲ್ ಸಮಿತಿ ಭಲೇ ಕಿಲಾಡಿ ಇದೆ. ಇಂದು ಜಗತ್ತಿನ ಅತಿಮುಖ್ಯ ವ್ಯಕ್ತಿ ಅಮೆರಿಕಾದ ಅಧ್ಯಕ್ಷ. ಆತನ ನಿಲುವು, ನೀತಿಗಳು ಇಡೀ ಜಗತ್ತನ್ನೇ ಬದಲಾಯಿಸಬಲ್ಲಷ್ಟು ಶಕ್ತ. ಅದು ಸಕಾರಾತ್ಮಕವಾಗಿರಬಹುದು ನಕಾರಾತ್ಮಕವಾಗಿರಬಹುದು. ಈಗ ನೋಬೆಲ್ ಸಮಿತಿ ಇಂತಿಪ್ಪ ಸರ್ವಶಕ್ತ ಅಮೆರಿಕನ್ ಅಧ್ಯಕ್ಷನಿಗೆ ಶಾಂತಿಯ ತಂತಿ ಬೇಲಿ ಸುತ್ತಿ, ಆತನಿಗೊಂದು ಚೌಕಟ್ಟನ್ನು ಹಾಕಿಟ್ಟುಬಿಟ್ಟಿದೆ. ಒಬಾಮಾ ಏನಾದರೂ ಮಾಡಿಯಾನು ಮತ್ತೊಂದು ಯುದ್ಧ? ಊಹ್ಞೂಂ...ಸಾಧ್ಯವೇ ಇಲ್ಲ. ಹೊಸ ಯುದ್ಧದ ಮಾತಲ್ಲ, ಇರಾಕ್ ಮತ್ತು ಅಫಘಾನಿಸ್ತಾನದ ಯುದ್ಧಗಳನ್ನು ಆತ ಆದಷ್ಟು ಬೇಗ ಮುಗಿಸಬೇಕಿದೆ. ಇನ್ನು ಬರಿಯ ಮಾತು ಸಾಕಾಗೋಲ್ಲ. ಕೃತಿ ಬೇಕು. ಒಂದು ಯುದ್ಧವನ್ನು ನಿಲ್ಲಿಸುವುದಕ್ಕಿಂತಲೂ ನಡೆಯಬಹುದಾದ ಯುದ್ಧಗಳನ್ನು ತಪ್ಪಿಸುವುದಿದೆಯಲ್ಲ ಅದು ವಿಶ್ವಶಾಂತಿ. ಈಗ ನೋಬೆಲ್ ಸಮಿತಿ ಆ ಕಾರ್ಯಕ್ಕೆ ಕೈಹಾಕಿ ಕೂತಿದೆ.

(ತಾ. ೧೬ - ೧೦ - ೨೦೦೯ರ ವಿಜಯ ಕರ್ನಾಟಕದಲ್ಲಿ ಪ್ರಕಟಿತ)

2 thoughts on “ನೋಬೆಲ್ ಒಬಾಮಾ, ಶೇಷಪ್ರಶ್ನೆ ಮತ್ತು ಪಂಜರದ ಗಿಳಿ!

ವಿ.ರಾ.ಹೆ. said...

ಆದಿ,

ಬಹಳ ಚೆನ್ನಾಗಿದೆ ವಿಶ್ಲೇಷಣೆ. ಒಬಾಮಾ ಇಷ್ಟೆಲ್ಲಾ ಕೆಲಸ ಮಾಡುತ್ತಿದ್ದಾನೆ ಎಂಬ ಅರಿವಿರಲಿಲ್ಲ.

ಆದರೆ "ಈಗ ನೋಬೆಲ್ ಶಾಂತಿ ಪುರಸ್ಕಾರ ಶಾಶ್ವತವಾಗಿ ಒಬಾಮಾನನ್ನು ಈ ಪಂಜರದ ಗಿಳಿಯನ್ನಾಗಿಸಿದೆ" , "ಈಗ ನೋಬೆಲ್ ಸಮಿತಿ ವಿಶ್ವಶಾಂತಿ ಕಾರ್ಯಕ್ಕೆ ಕೈಹಾಕಿ ಕೂತಿದೆ"
ಎಂಬ conclusion ಸರಿ ಎನಿಸಲಿಲ್ಲ. ವಿಶ್ಲೇಷಣೆಯಲ್ಲಿ ಇದನ್ನು ಪ್ರಶ್ನೆಯನ್ನಾಗಿ ಬಿಡಬೇಕಿತ್ತು ಎಂದು ನನ್ನನಿಸಿಕೆ. ಇಲ್ಲಾಂದರೆ ಇದಕ್ಕೆ ಪುರಾವೆ ಒದಗಿಸಿ ಎಂದು ಕೇಳಬಹುದಾಗುತ್ತದೆ.

thanx.

shruts said...

thumba chenagidhe
i never knew all dis...its vry informative

Proudly powered by Blogger
Theme: Esquire by Matthew Buchanan.
Converted by LiteThemes.com.